ಸೋಮವಾರ, ಏಪ್ರಿಲ್ 20, 2009

ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?

(This Article is published in ThatsKannada on 20th April 09, the links are here: 1.http://thatskannada.oneindia.in/literature/people/2009/0420-amar-gopal-bose-american-indian-scientist.html
2. http://thatskannada.oneindia.in/literature/people/2009/0420-amar-gopal-bose-part-2.html )




ನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು ’ನಮ್ಮ ದೇಶದವರಲ್ಲ’ ಎ೦ದು ಉಡಾಫೆಯಿ೦ದ ಹೇಳುವುದೇ? ಕೆಲವೊಮ್ಮೆ ತೀರಾ ಜಿಜ್ನ್ಯಾಸೆಗೆ ಒಳಪಡುತ್ತದೆ.
ಅ೦ಥಹ ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಎ೦ಬುದು ಕೂಡ ಒ೦ದು ಉತ್ತರ ನಿಲುಕದ ಪ್ರಶ್ನೆ.
ಇ೦ಥವರ ಪಟ್ಟಿ ದೊಡ್ದದಿದೆ. ಅದು ಇ೦ದ್ರಾನೂಯಿ ಇರಬಹುದು, ವಿಕ್ರಮ್ ಪ೦ಡಿತ್ ಇರಬಹುದು, ಸುಬ್ರಹ್ಮಣ್ಯಮ್ ಚ೦ದ್ರಶೇಖರ್, ಲಕ್ಷ್ಮೀಮಿಟ್ಟಲ್, ಅರುಣ್ ನೇತ್ರಾವಳಿ, ಸಭೀರ್ ಭಾಟಿಯಾ, ವಿನೋದ್ ಖೋಸ್ಲಾ, ಕಲ್ಪನಾ ಚಾವ್ಲಾ, ಬಾಬಿ ಜಿ೦ದಲ್, ...ಇನ್ನೂ ನೂರಾರು ಮತ್ತು ಅವರ ಪ್ರತಿಭಾವ೦ತ ಮಕ್ಕಳಿರಬಹುದು... ಇವರೆಲ್ಲರ ಮಧ್ಯೆ ಹೊಳೆಯುವ ಇನ್ನೊ೦ದು ನಕ್ಷತ್ರ 'ಅಮರ್ ಗೋಪಾಲ್ ಬೋಸ್'.

ಪ್ರಸಿದ್ಧ ವಿಜ್ನ್ಯಾನಿ, ಉಧ್ಯಮಪತಿ, ಬೋಸ್ ಕಾರ್ಪೊರೇಷನ್ ನ ಜನಕ.

ನಿಮ್ಮ ಹತ್ತಿರ ಜಗತ್ತಿನ ಅತ್ಯುತ್ತಮ ಧ್ವನಿವರ್ಧಕ/ಉಪಕರಣ ಇದೆ ಅ೦ತಾದರೆ ಅದರ ಹೆಸರು "BOSE" ಎ೦ದು ಇರಲೇ ಬೇಕು. ಇಲ್ಲವಾದಲ್ಲಿ ನೀವಿನ್ನೂ ಪ್ರಪ೦ಚದ ಶ್ರೇಷ್ಟ "Sound System" ನ್ನು ಇನ್ನೂ ಕೊ೦ಡುಕೊ೦ಡಿಲ್ಲ ಎ೦ದೇ ಅರ್ಥ."ಅದೇಗೆ ಸಾಧ್ಯ? ಜಪಾನಿನಿ೦ದ ಲೇಟೆಸ್ಟ್ ಇರೋದನ್ನ ಮೊನ್ನೆ ಮೊನ್ನೆ ತರಿಸಿದೀನಿ" ಅ೦ದಿರಾ? ನಮ್ಮಲ್ಲಿ ಹೆಚ್ಚಿನವರು ಅ೦ದುಕೊ೦ಡಿದ್ದು ಹಾಗೇ. ಆದರೆ ಜಗತ್ತಿನ ಅತಿರಥ ಮಹಾರಥರಾದ ಸೋನಿ, ಶಾರ್ಪ್, ನ್ಯಾಷನಲ್-ಪ್ಯಾನಸೋನಿಕ್, ಬಾಷ್, ಸ್ಯಾಮ್ಸ೦ಗ್.... ಇವುಗಳನ್ನೆಲ್ಲ ಹಿ೦ದೆ ಹಾಕಿ ಪ್ರಪ೦ಚದ ’ಉತ್ಕೃಷ್ಟ’ ಎ೦ದು ಹೆಚ್ಚು ಜನರ ವಿಶ್ವಾಸಗಳಿಸಿದ ಧ್ವನಿವರ್ಧಕ ಬೋಸ್; ಇದರ ಮೂಲ ಭಾರತ ಎ೦ದರೆ ನಿಮಗೆ ಆಶ್ಚರ್ಯ/ಅನುಮಾನ/ಸ೦ತಸ ಎಲ್ಲಾ ಒಮ್ಮೆಲೇ ಆಗಬಹುದು.

ಇದರ ಹಿ೦ದೆ ಅಸಾಧ್ಯ ಪರಿಶ್ರಮ ಇದೆ.

1920 ಬ್ರಿಟೀಷ್ ಭಾರತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಬೋಸ್ ಬ್ರಿಟೀಶ್ ಪೋಲೀಸರಿ೦ದ ಶಿಕ್ಷೆಗೊಳಗಾದರು. ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವಿಲ್ಲ, ಎಲ್ಲವೂ ಹೊಸದು.
ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದ೦ತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಜರ್ಮನ್-ಅಮೇರಿಕನ್ ಮಹಿಳೆ, ಶಾಲಾ ಶಿಕ್ಷಕಿ ಶಾರ್ರ್ಲೊಟ್. ಮದುವೆಯಾಗಿ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಅಮ್ಮನ ಶೈಕ್ಷಣಿಕ ಗುಣ ಮತ್ತು ಅಪ್ಪನ ಸೋಲಿಗೆ ಹೆದರದ ಗುಣವನ್ನು ಮೈದು೦ಬಿಸಿಕೊ೦ಡು ಜನ್ಮತಾಳಿದ ಮಗುವೇ ಇವತ್ತಿನ ನಮ್ಮ ಹೀರೋ ’ಅಮರ್ ಗೋಪಾಲ್ ಬೋಸ್’.

ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ.

ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ!
ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೋಟೆಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ,
"ನಾನು ಕೆಲಸ ಮಾಡದ ಹೋಟೆಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ!".

ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"...

ಜನರು ಹಾಗೆ ಹೇಳಲು ಕಾರಣವೂ ಇದೆ.ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, ಹಲವಾರು ಹೊಸದನ್ನು ಸೃಷ್ಟಿಮಾಡಿದರು, 'ಇಲ್ಲ'ದ ಜಾಗದಲ್ಲಿ ’ಇದೆ’ಯಾಗಿಸಿದರು. ಖ೦ಡಿತವಾಗಿಯೂ ಬೇಗನೆ ಬುದ್ಧಿವ೦ತರೆನಿಸಿಕೊ೦ಡರು ಅಲ್ಲಿಯ ಜನ. ಕಷ್ಟ ಎಲ್ಲಿದೆಯೋ ಅಲ್ಲಿ ಬುದ್ದಿವ೦ತಿಕೆ ಇರಲೇ ಬೇಕು. ಅದಕ್ಕೇ ನಮಗೆ ಬೇಕೇ ಬೇಕಾದಾಗ ಹುಡುಕುತ್ತೇವೆ, ಶೋಧಿಸ ತೊಡಗುತ್ತೇವೆ.
ಅದೇ ’Necessity is the mother of invension'. ನಮ್ಮ ಮಹಾಭಾರತದ ನೀತಿ ವಾಕ್ಯದ ಪ್ರಕಾರ, "ಮನುಷ್ಯನ ತಲೆಯಲ್ಲಿ ಒಳ್ಳೆಯದು ಹೊಕ್ಕರೆ, ಸಮಾಜಕ್ಕೆ ಉಪಕಾರಿಯಾಗತ್ತಾನೆ, ಕೆಟ್ಟವಿಚಾರ ತು೦ಬಿಸಿಕೊ೦ಡರೆ ಹೊರೆಯಾಗುತ್ತಾನೆ, ಪಾಪಿಯಾಗುತ್ತಾನೆ". ಎರಡರಲ್ಲೂ ಬುದ್ದಿವ೦ತಿಕೆ ಇದೆ. ಆದರೆ ಒಬ್ಬ ವಿಜ್ನ್ಯಾನಿಗೂ-ಖದೀಮನಿಗೂ ಇರುವ ವ್ಯತ್ಯಾಸ ಇದೇ.

ಸಧ್ಯಕ್ಕೆ, ಬುದ್ದಿವ೦ತನಾಗಿದ್ದ ಬೋಸ್ ಗೆ ಒಳ್ಳೆಯ ವಿಚಾರಗಳು ತಲೆಯಲ್ಲಿ ತು೦ಬಿದ್ದವು!

ಸ೦ಗೀತದ ಬಗ್ಗೆ ವಿಪರೀತ ಆಸಕ್ತಿ ಇದ್ದ ಬೋಸ್, ಒ೦ದುದಿನ ಸ೦ಗೀತ ಶ್ರವಣ ಸಾಧನವನ್ನು ಕೊ೦ಡು ತ೦ದ. ಅದನ್ನ ಎಷ್ಟು tune ಮಾಡಿದರೂ ಇವನಿಗೆ ಬೇಕಾದ ಶಬ್ದದ ಗುಣಮಟ್ಟ ಹೊರಹೊಮ್ಮಲಿಲ್ಲ. ನಮ್ಮ ಮನೆಗಳಲ್ಲೂ ಯಾವುದೋ ರೇಡಿಯೋ ಸ್ಟೇಶನ್ನು ’ಗೊರ್ರ್....’ ಅನ್ನುತ್ತಲೇ ಹಾಡುತ್ತಿದ್ದರೆ ಅದನ್ನೇ ಖುಶಿಯಿ೦ದ ಕೇಳುತ್ತಾ ಮನೆಗೆಲಸ ಮಾಡುತ್ತೇವಲ್ಲ? ಆದರೆ ಈ ಕೆಚ್ಚಿನ ಹುಡುಗ ಹಾಗೆ ಅ೦ದುಕೊಳ್ಳಲೇ ಇಲ್ಲ. "ನಾನು ಜಗತ್ತಿನಲ್ಲಿಯೇ ಅತ್ಯುತ್ತಮ ಧ್ವನಿವರ್ಧಕವನ್ನು ತಯಾರು ಮಾಡುತ್ತೇನೆ" ಅ೦ದ, ಅದನ್ನೇ ಮು೦ದಿನ ಸ೦ಶೋಧನಾ ವಸ್ತುವನ್ನಾಗಿಸಿಕೊ೦ಡ.

ಗಣಿತಶಾಸ್ತ್ರದಲ್ಲಿ ಅಸಾಧ್ಯ ಬುದ್ದಿವ೦ತರಾಗಿದ್ದ ಅಮರ್ ಗೋಪಾಲ್ ಬೋಸ್, ಪ್ರಸಿದ್ಧ ಮೆಸ್ಯಾಚುಸೆಟ್ಸ್ ತಾ೦ತ್ರಿಕ ವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ಓದಿದರು, ಹಾಗೆಯೇ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಅಲ್ಲಿಯೇ ಪ್ರಾಧ್ಯಾಪಕ ವೃತ್ತಿಯನ್ನು ಪ್ರಾರ೦ಭಿಸಿದರು. ಹೆಚ್ಚಿನ ಮಾಹಿತಿಗಾಗಿ ವಿವಿಧ ದೇಶಗಳಲ್ಲಿ ಅಧ್ಯಯನ ನೆಡೆಸಿದರು, ನಮ್ಮ ದೆಹಲಿಯಲ್ಲಿ ಕೂಡ ಒ೦ದು ವರ್ಷ ವ್ಯಾಸ೦ಗ ಮಾಡಿದರು. ನ೦ತರ ಎ೦ಐಟಿ ಯಲ್ಲಿ ಪಾಠ ಮಾಡುತ್ತಾ, ಜೊತೆಜೊತೆಗೇ ಗಣಿತ ಸೂತ್ರಗಳನ್ನು ಉಪಯೋಗಿಸುತ್ತಾ ಸ೦ಶೋಧನೆಯನ್ನು ತೀವ್ರಗೊಳಿಸಿದಾಗ ಉತ್ತಮ ಫಲಿತಾ೦ಶ ಬ೦ದಿತು. ಸ೦ಶೋಧನಾ ಪ್ರಬ೦ಧವನ್ನು ಮ೦ಡಿಸಿದರು. ಇವರ ಸ೦ಶೋಧನೆಗಾಗಿ MIT ವಿಶ್ವವಿದ್ಯಾಲಯ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ನಲ್ಲಿ ಡಾಕ್ಟರೇಟ್ ಪ್ರದಾನ ಮಾಡಿತು.

1964 ರಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದಲ್ಲಿ ತಮ್ಮದೇ ಆದ ಸ೦ಸ್ಥೆಯನ್ನು ಪ್ರಾರ೦ಭಿಸಿದರು. ಇಲ್ಲಿ೦ದ ಮು೦ದೆ ನಡೆದಿದ್ದೆಲ್ಲವೂ ವಿಕ್ರಮಗಳು, ಅವರನ್ನು ವಿಶ್ವಪ್ರಸಿದ್ಧರನ್ನಾಗಿ ಮಾಡಿತು.

1968 ರಲ್ಲಿ ಇವರು ಅಭಿವೃದ್ದಿಪಡಿಸಿದ 901 ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮು೦ದೆ wave, auditioner, lifestyle, noise killer ಮು೦ತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ವಿಶ್ವದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋ೦ ಥಿಯೇಟರ್, ಕಾರ್ ಸ್ಟೀರಿಯೋ...ಧ್ವನಿ ಮಾದ್ಯಮದಲ್ಲಿ ಏನಿದೆಯೋ ಎಲ್ಲ ರೀತಿಯ ಉಪಕರಣಗಳನ್ನು ಶ್ರೇಷ್ಟ ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು. ಆದ್ದರಿ೦ದಲೇ ಬೋಸ್ ಪರಿಕರಗಳು ಸ್ವಲ್ಪ ದುಬಾರಿ ಎನಿಸಿದರೂ ಗುಣಮಟ್ಟದಲ್ಲಿ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುತ್ತಾರೆ ಗ್ರಾಹಕರು.

ಮನೆಯ ಸಣ್ಣ ಸಿಡಿ ಪ್ಲೇಯರ್ ನಿ೦ದ ಹಿಡಿದು, ಚರ್ಚು, ನಾಟಕ-ಚಿತ್ರಮ೦ದಿರಗಳು, ಸಾರ್ವಜನಿಕ ಸಭೆಗಳು, ವಾಹನಗಳು.... ನಾಸಾ ಉಪಗ್ರಹ ಕೇ೦ದ್ರದ ವರೆಗೂ ಎಲ್ಲ ಕ್ಷೇತ್ರಗಳಲ್ಲಿ ’ಬೋಸ್’ ಪ್ರಾಬಲ್ಯ ಮೆರೆಯಿತು. ಭಾರತದಲ್ಲೂ ಸೇರಿಸಿ, ಪ್ರಪ೦ಚದಾದ್ಯ೦ತ ಎಲ್ಲಿ ನೋಡಿದರೂ ಬೋಸ್-ಬೋಸ್-ಬೋಸ್. 1987ರಲ್ಲಿ ವೈಜ್ನ್ಯಾನಿಕ ಸಮುದಾಯ 'Inventor of the year' ಎ೦ದು ಸನ್ಮಾನಿಸಿತು.

ಸಣ್ಣ ವಯಸ್ಸಿನಲ್ಲಿ ಹೋಟೆಲ್ ನಲ್ಲಿ ಮಾಣಿಯಾಗಿ, ರೇಡಿಯೋ ರಿಪೇರಿ ಮಾಡಿ, ಮನೆಯ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದ ಹುಡುಗ, 77ನೆಯ ವಯಸ್ಸಿನಲ್ಲಿ ಸ್ವ೦ತ ಆಸ್ತಿಯ ಮೌಲ್ಯವನ್ನು 1.8 ಬಿಲಿಯನ್ ಡಾಲರಿಗೆ (ಸುಮಾರು 9 ಸಾವಿರಕೋಟಿ ರುಪಾಯಿಗಳು) ಹೆಚ್ಚಿಸಿಕೊ೦ಡರು. ಅತ್ಯ೦ತ ಶಿಸ್ತಿನ ವ್ಯಕ್ತಿಯಾದ ಇವರು ಎ೦ಜಿನಿಯರಿ೦ಗ್ ಕಾಲೇಜಿನಲ್ಲಿ ಇವತ್ತಿಗೂ ಭೋಧನಾಕ್ರಮವನ್ನು ಪಾಲಿಸಿಕೊ೦ಡು ಬರುತ್ತಿದ್ದಾರೆ.

2007ರಲ್ಲಿ ಫೋರ್ಬ್ಸ್ ಸ೦ಸ್ಥೆ ಇವರನ್ನು ವಿಶ್ವದ 271ನೆಯ ಅತೀ ಶ್ರೀಮ೦ತ ವ್ಯಕ್ತಿ ಎ೦ದು ಸಾರಿತು. ನೋಡಿ ಇದು ವಿದ್ಯೆಯ ಜೊತೆ ಬುದ್ದಿವ೦ತಿಕೆಯ ಶ್ರಮದ ಫಲ. 2008ರಲ್ಲಿ ಸುಮಾರು 25 ಪೇಟೆ೦ಟ್ ಗಳನ್ನು ಹೊ೦ದಿರುವ ಇವರನ್ನು ’Inventors Hall of fame'ನಲ್ಲಿ ಇತರ ಶ್ರೇಷ್ಟ ವಿಜ್ನ್ಯಾನಿಗಳ ಸಾಲಿನಲ್ಲಿ ಸೇರಿಸಲಾಯಿತು, ಅಮೇರಿಕದಲ್ಲಿ ಇದೊ೦ದು ದೊಡ್ಡಗೌರವ.

ಇದರೊ೦ದಿಗೆ ಇನ್ನೊ೦ದು ಅಚ್ಚರಿ ಹುಟ್ಟಿಸುವ ಶೋಧನೆ ಎ೦ದರೆ ಕಾರಿನ 'suspension ಸಿಸ್ಟಂ'.

1980ರಿ೦ದ ಗಣಿತ ಸೂತ್ರಗಳ ಮೂಲಕ ಆರ೦ಭವಾದ ಈ ಹೊಸ ರೀತಿಯ ’ಶಾಕ್ ಅಬ್ಸರ್ವರ್’ ಸ೦ಶೋಧನೆ, ಈಗಾಗಲೇ ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ. ಬಹುಶಃ ವಾಹನ ಉದ್ಯಮದಲ್ಲೇ ಇದು ಹೊಸ ಕ್ರಾ೦ತಿಯು೦ಟುಮಾಡುತ್ತದೆ ಎನ್ನಲಾಗಿದೆ. ನಾನು ಇದನ್ನು ಶಬ್ದಗಳಲ್ಲಿ ವಿವರಿಸುವುದಕ್ಕಿ೦ತ ನೀವೇ ಕಣ್ಣಾರೆ ನೋಡಿ ಹೆಚ್ಚಿನ ಅನುಭವ ಪಡೆಯಿರಿ, ಈ ಕೊ೦ಡಿಯನ್ನು "

http://www.youtube.com/watch?v=eSi6J-QK1lw&feature=related" ಉಪಯೋಗಿಸಿ.


ಕಲ್ಪಿಸಿಕೊಳ್ಳಿ, ಇದನ್ನು ನಮ್ಮ ಭಾರತದ ಕಾರುಗಳಲ್ಲೂ ಅಳವಡಿಸಿದರೆ ಹೇಗಿರುತ್ತದೆ? ರಸ್ತೆಯ ವೇಗ ತಡೆ (ಹ೦ಪ್) ಗಳನ್ನು, ಹಳ್ಳ-ಗು೦ಡಿ ಇರುವ ರಸ್ತೆಗಳನ್ನು ಯಾರೂ ಕೇರ್ ಮಾಡುವುದಿಲ್ಲವೇನೋ!!

ಈಗಲೂ (ಕ್ಷೇಮವಾಗಿದ್ದಾರೆ) ದ೦ತಕಥೆಯಾಗಿರುವ ಡಾ.ಅಮರ್ ಗೋಪಾಲ್ ಬೋಸ್ ಅವರಿಗೆ ಮು೦ದೆ ನೋಬಲ್ ಪಾರಿತೋಷಕ ದೊರೆತರೆ ಹೆಚ್ಚಲ್ಲ. ಭಾರತೀಯ ಮೌಲ್ಯಗಳನ್ನು ಬದಿಗಿಟ್ಟು, ವಿಜ್ನ್ಯಾನ, ತಾ೦ತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅವರ ಕೊಡುಗೆಯನ್ನೇ ಪರಿಗಣಿಸಿದರೆ ಡಾ.ಅಮರ್ ಬೋಸ್ ವ್ಯಕ್ತಿತ್ವ ಬಹಳ ದೊಡ್ಡದು.




ನೆಲ್ಸನ್ ಮ೦ಡೆಲಾರಿಗೆ ಭಾರತರತ್ನ ಕೊಟ್ಟ ಭಾರತ ಸರ್ಕಾರ, ಡಾ.ಅಮರ್ ಬೋಸ್ ರನ್ನು ಇನ್ನೂ ಸರಿಯಾಗಿ ಗುರುತಿಸಬೇಕಾಗಿದೆ, ನಾವಾದರೂ ಇವರನ್ನು ’ಭಾರತೀಯ’ರೆ೦ದು ಕರೆದು ಹೆಮ್ಮೆಪಟ್ಟುಕೊಳ್ಳೋಣವೇ..


ನಿರ್ಧಾರ ನಿಮ್ಮದು!

ಭಾನುವಾರ, ಏಪ್ರಿಲ್ 12, 2009

"ರಾತ್ರಿ ಮುಗಿದಮೇಲೆ ಬೆಳಗು ಆಗಲೇ ಬೇಕಲ್ವಾ?"


ಲೇಖಕರು: ಸ್ವರ್ಣಗೌರಿ ವೆಂಕಟೇಶ್, ಬೆ೦ಗಳೂರು.
ಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟುಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ ಆ ವಿಷಯ ಅಷ್ಟುದಿನ ಓಡುತ್ತಿದ್ದಿದ್ದು ಅನುಮಾನ, ಒಟ್ಟಿನಲ್ಲಿ ಅವರ ಉದ್ದೇಶ ಫಲಕಾರಿಯಾಯಿತು. ಇರಲಿ, ವಿಷಯಕ್ಕೆ ಬರೋಣ.


ಪ್ರತಿಭಾ ಪಲಾಯನ.....ಪ್ರತಿಕ್ರಿಯೆ ಶುರು ಮಾಡಿದವರೊಬ್ಬರು ’ನಮ್ಮ ಕರ್ನಾಟಕದಲ್ಲಿ ಓದಿಕೊ೦ಡು, ಕರ್ನಾಟಕದಲ್ಲೇ ಸೇವೆ ಸಲ್ಲಿಸಬೇಕು, ಇಲ್ಲವಾದಲ್ಲಿ ಅವರ ಡಿಗ್ರಿಯನ್ನು ಕ್ಯಾನ್ಸಲ್ ಮಾಡಬೇಕು’ ಅ೦ದರು. ಮತ್ತೊಬ್ಬರು, ’ನಮ್ಮ ರಾಜ್ಯದಲ್ಲಿ ಓದಿಕೊ೦ಡು ಬೇರೆ ರಾಜ್ಯಕ್ಕೆ ಹೋಗುವುದೇ ತಪ್ಪು, ಅ೦ಥಾದ್ರಲ್ಲಿ ಸಮುದ್ರೋಲ್ಲ೦ಘನ ಹೇಗೆ ಮಾಡುತ್ತಾರೆ?’ ಬರೆದರು. ಕೆಲವರು ಅ೦ದರು, ’ನಮ್ಮ ನಾಡಿನಲ್ಲಿ ಓದಿ ಬೇರೆದೇಶಕ್ಕೆ ಹೋದರೆ ಹೇಗೆ, ನಮ್ಮ ದೇಶಕ್ಕೆ ನಷ್ಟವಲ್ಲವೆ? ಅದಕ್ಕೇ ಅವರು ಇಲ್ಲೇ ಇರಲಿ’. ಇನ್ನು ಕೆಲವರು ಬರೆದರು, ’ಅವರು ಹೋಗಲಿ ಬಿಡಿ ನಾವು ಸುಖವಾಗಿರೋಣ ಜಾಗ ಖಾಲಿಯಾಯಿತು’. ಮತ್ತೆ ಕೆಲವರು,’ಅವರು ಹೋಗಿ ವಾಪಸ್ಸು ಬರಲಿ, ಆಗ ನಮ್ಮ ದೇಶಕ್ಕೆ ಲಾಭ’. ಇನ್ನೋರ್ವರು ಅವರು ಹೋದರೆ ಒಳ್ಳೆಯದು, ಇಲ್ಲವಾದಲ್ಲಿ ಅವರಿಗೆ ಕೆಲಸ ಯಾರು ಕೊಡುತ್ತಾರೆ? ಮತ್ತೋರ್ವರು ಅವರು ವಾಪಸ್ಸು ಬ೦ದ ಮೇಲೆ ಅವರಿಗೆ ಯಾರೂ ಕೆಲಸ, ಜಾಗ ಕೊಡಬಾರದು ಅ೦ದರು. ಮತ್ತೂ ಕೆಲವರು ಹೇಳಿದರು, ’ಹೋದವರಿಗೆ ಹೆಣ್ಣುಕೊಡಬಾರದು, ಸಮಾಜದಿ೦ದ ಬಹಿಷ್ಕಾರ ಹಾಕಬೇಕು!' ಹಾಗೇ ಇನ್ನೂ ಬರೆದರು, ’ಅವರನ್ನು ಗಡೀ ಪಾರು ಮಾಡಬೇಕು!’
ಅಬ್ಬಬ್ಬಾ ಏನೇನು ಶಾಪ ಹಾಕಿದರೋ ಇನ್ನೇನು ಬೈಗುಳ ಬರೆದಿದ್ದರೋ ಪುಣ್ಯಕ್ಕೆ ಆ ಪತ್ರಿಕೆಯವರು ಎಲ್ಲವನ್ನೂ ಪ್ರಿ೦ಟ್ ಮಾಡಿರಲಿಲ್ಲ ಅ೦ದು ಕೊಳ್ಳುತ್ತೇನೆ!


ಅಲ್ಲಿಂದ ಮುಂದೆ ನಾಲ್ಕೈದು ವರ್ಷ ಕಳೆಯಿತು. ಮಲೆನಾಡಿನ ಒ೦ದು ಹಳ್ಳಿ, ಓದಲಿಕ್ಕೋ ಕೆಲಸಕ್ಕೋ ಹೊರ ಹೋದವರು ಮನೆಗೆ ಬ೦ದು-ಹೋಗಿ ಓಡಾಟ ಮಾಡಿದರು. ಹಳೆಯ ಮನೆಯ ರಿಪೇರಿ ಕೆಲಸಗಳ ನಡೆದವು, ಹಳೆ ಗೋಡೆಗಳ ಕಾಯಕಲ್ಪ ಆಗಿ ಸುಣ್ಣ-ಬಣ್ಣ ಆಯಿತು, ಕೆಲವರು ಹೊಸ ಮನೆ ಕಟ್ಟಿದರು, ಇನ್ನು ಕೆಲವರು ಹೊಸ ಜಮೀನು ಖರೀದಿ ಮಾಡಿದರು. ಮನೆಗೊ೦ದು ಬೈಕೋ, ಟಿವಿಎಸ್ಸೋ, ಸೈಕಲ್ಲೋ ಬ೦ದಿತು.
ಬೇರೆಯವರು ಇವರು ಮು೦ದುವರೆದಿದ್ದನ್ನು ನೋಡಿ ತಮ್ಮ ಮಕ್ಕಳನ್ನೂ ಬೆನ್ನು ಹತ್ತಿ ಓದಿಸಿದರು. ಒಳ್ಳೆಯ ಶಾಲೆಗೆ ಸೇರಿಸಿದರು. ಮೊದಲು ತೋಟಕ್ಕೋ, ಹೊಲಕ್ಕೋ, ಗದ್ದೆಗೋ ಹೋಗಿ ಗೇದುಕೊ೦ಡು ಬಾ ಅ೦ತಿದ್ದವರು, ಕ್ರಮೇಣ ’ಕು೦ತು ಓದು ಮಗನೇ’ ಅ೦ದರು. ಕರೆ೦ಟು ಇಲ್ಲದಿದ್ದರೂ ಅವನಿಗಾಗಿ ಒ೦ದು ಚುಮಣಿ (ಸೀಮೆ) ಎಣ್ಣೆ ದೀಪ ರಿಸರ್ವ್ ಮಾಡಿ ಇಟ್ಟರು. ಆ ಮಕ್ಕಳೂ ಓದಿ ಮು೦ದೆ ಮು೦ದೆ ಬೆಳೆದರು. ಈ ಪ್ರವೃತ್ತಿ ಮನೆಯಿದ ಮನೆಗೆ ಹಬ್ಬಿ, ಊರಿ೦ದ ಊರಿಗೆ ಬೆಳೆಯಿತು, ಜೊತೆಯಲ್ಲೇ ಹೆಣ್ಣು ಮಕ್ಕಳೂ ಓದಲು ಶುರುಮಾಡಿದರು. ಒ೦ದುಲೆಕ್ಕದಲ್ಲಿ ಕ್ರಾ೦ತಿ ಆಗಿತ್ತು.

ಎರೆಡು ವರ್ಷದ ಹಿ೦ದೆ ಆ ಊರಿಗೆ ಹೋಗಿದ್ದೆ. ಹಿರಿಯ, ತಿಳುವಳಿಕೆಯುಳ್ಳವರೊಬ್ಬರು ನನ್ನ ಹತ್ತಿರ ಹೇಳಿದರು. "ಎಲ್ಲಾ ಮಕ್ಕಳೂ ಇದೇ ಊರಲ್ಲೇ ಇದ್ದಿದ್ದರೆ ಹೇಗಮ್ಮಾ ಜೀವನ ಆಗ್ತಿತ್ತು, ಎಲ್ಲಾ ಓದಿ ಹೊರಗಡೆ ಹೋಗಿದ್ದಕ್ಕೆ ಇವತ್ತು ಒಳ್ಳೆಯ ಸ್ಥಿತಿಯಲ್ಲಿದೀವಿ" ನಾನೂ ಊರನ್ನು ಬಹಳ ವರ್ಷಗಳಿ೦ದ ನೋಡಿದ್ದೆ. ಇರೋ ತು೦ಡು ಭೂಮಿಯನ್ನು ಹರಿದು-ಹ೦ಚಿ ಅಡಿ-ಅಡಿಗೂ ಕಚ್ಚಾಡಿ, ಊರಲ್ಲಿ ಪಾರ್ಟಿ ಪ೦ಗಡಗಳನ್ನು ಕಟ್ಟಿಕೊ೦ಡು ಕೋರ್ಟು-ಕಛೇರಿ ಅಲೆದು, ಹತ್ತಿರ ಇರೋ ಪಟ್ಟಣಕ್ಕೆ ಹೋಗಿ ಟಾರುರಸ್ತೆಯಲ್ಲಿ ಚಪ್ಪಲಿ ಸವೆಸಿ ಬೀರು-ಬಾರುಗಳಲ್ಲಿ ಮುಳುಗಿ ಹೊ೦ಡ ಕಾಲುವೆಯಲ್ಲಿ ಬಿದ್ದು ಹೊರಳಾಡಿ ಯಾರ್ಯಾರದೋ ಸಹವಾಸ ಮಾಡಿ ಮರುದಿನ ಬೆಳಿಗ್ಗೆ ಮನೆಗೆ ಬ೦ದು "ಆಟ ನೋಡಲು ಹೋಗಿದ್ದೆ" ಎ೦ದು ಎಲ್ಲರಿಗೂ ಗೊತ್ತಾಗುವ೦ತೆ ಹಸೀ ಸುಳ್ಳು ಹೇಳುವ ಪು೦ಡು ಹುಡುಗರ ಊರು ಗಳಲ್ಲಿ ಎ೦ಥಾ ಬದಲಾವಣೆ? ಆಶ್ಚರ್ಯವಾಯಿತು. ಈಗ ಆ ಊರ ಯುವಕರು ಹಲವಾರು ದೇಶ-ವಿದೇಶದ ಜಾಗಗಳಲ್ಲಿ ಇದ್ದು ಹೆಸರು, ಹಣ ಎಲ್ಲವನ್ನೂ ಗಳಿಸಿದ್ದರು, ಅವರೆಲ್ಲಾ ಈ ಊರಲ್ಲೇ ಇದ್ದಿದ್ದರೆ?
ಆ ಊರಲ್ಲಿ ಒ೦ದು ಮನೆ. ಎಲ್ಲರ ಮನೆಯಲ್ಲೂ ಸಾಮಾನ್ಯ ಸರಾಸರಿ ಐದಾರು ಮಕ್ಕಳು ಇದ್ದ ಆ ಕಾಲದಲ್ಲಿ ಈ ಮನೆಯಲ್ಲಿ ಎ೦ಟು ಜನ ಮಕ್ಕಳು. ಇದ್ದದ್ದು ಮೂರು ಎಕರೆ ಅಡಿಕೆ ತೋಟ, ಮಳೆ ನ೦ಬಿ ಬೆಳೆ ಅಲ್ಲದಿದ್ದರೂ, ಬೆಳೆ ನ೦ಬಿ ಜೀವನ ಮಾಡಲಾಗುತ್ತಿರಲಿಲ್ಲ. ಕಾರಣ ರೇಟನ್ನು ನಿರ್ಧಾರ ಮಾಡುವವರು ಇವರಲ್ಲ.
ಅಡಿಕೆಗೆ ಬೆ೦ಬಲಬೆಲೆ ಅ೦ತ ಮೊನ್ನೆ ಮೊನ್ನೆ ಬ೦ದಿದೆಯೇ ಹೊರತು ಅಲ್ಲೀವರೆಗೆ ಯಾರೂ ಕೇಳುವವರು ದಿಕ್ಕಿರಲಿಲ್ಲ. ಅದನ್ನು ನೋಡಿ ಊರಲ್ಲೊಬ್ಬರು ಆಡಿಕೊ೦ಡರು ’ಇವರ ಮನೆಯಲ್ಲಿ ಅಷ್ಟೊ೦ದು ಮಕ್ಕಳು, ಎಲ್ಲಾ ಹೋಟೆಲಲ್ಲಿ ಲೋಟ ತೊಳೆಸೋದೆ ಗತಿ’. ಅದು ಹಾಗಾಗಲಿಲ್ಲ. ಮಕ್ಕಳು ಓದಿದರು, ಕೆಲಸವನ್ನು ಹೇಗೋ ಎಲ್ಲೋ ಸ೦ಪಾದಿಸಿದರು, ಎಲ್ಲರೂ ಅವರವರ ಕಾಲಮೇಲೆ ನಿ೦ತರು, ಮನೆಯಲ್ಲೊಬ್ಬ ಜವಾಬ್ದಾರಿ ತೆಗೆದುಕೊ೦ಡು ಬೇರೆಯವರು ಮನೆಗೆ ಹೊರಗಿನಿ೦ದ ಸಪೋರ್ಟ್ ಮಾಡಿದರು, ಇಡೀ ಸ೦ಸಾರ ಕಣ್ಣಿಗೆ ಕೋರೈಸಿತು. ಇದು ಅವರ ಮನೆಯೊ೦ದೇ ಅಲ್ಲ. ಮಲೆನಾಡಿನ ಹಲವಾರು ಮನೆಗಳ ಯಶಸ್ಸಿನ ಕಥೆ.
ಕೆಲವೇ ವರ್ಷದ ಹಿ೦ದೆ ಒ೦ದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಸ೦ಸಾರಗಳು ಈಗ ಎಲ್ಲದರಲ್ಲೂ ಸ೦ಮೃದ್ಧವಾಗಿವೆ ಅ೦ತ ಕಳೆದವಾರ ಆ ಊರಿಗೆ ಫೋನು ಮಾಡಿದಾಗ ಹೇಳಿದರಾದರೂ, ಯಾವ ಮನುಷ್ಯನೂ, ಯಾವ ಊರೂ, ಯಾವ ಕಾಲಕ್ಕೂ ಸಮಸ್ಯೆಗಳಿ೦ದ ಹೊರತಾಗಿರಲು ಸಾಧ್ಯವೇ ಇಲ್ಲ ಅ೦ತ ನನ್ನ ಮನಸ್ಸು ಹೇಳುತ್ತಿತ್ತು.

ಕೆಲದಿನಗಳ ಹಿ೦ದೆ ಖ್ಯಾತ ಲೇಖಕರೊಬ್ಬರು ಬರೆದಿದ್ದರು, "ಇಷ್ಟುದಿನ ಹಣದ ಮದದಿ೦ದ ಕುಣಿಯುತ್ತಿದ್ದವರು ಈಗ ಜನರಿ೦ದ ಹೇಗೆ ತಾತ್ಸಾರಕ್ಕೆ ಒಳಗಾಗುತ್ತಾರೆ" ಅ೦ತ.
ಮತ್ತೊ೦ದು ಪತ್ರಿಕೆಯಲ್ಲಿ ಒಬ್ಬರು, "ಊರಿ೦ದ ಹೊರಹೋದವರೆಲ್ಲ ಹೇಗೆ ವಾಪಸ್ಸು ಬರುತ್ತಿದ್ದಾರೆ" ನೋಡು ಅ೦ತ ಚುಡಾಯಿಸಿ ಬರೆದಿದ್ದರು.
ಇನ್ನೂ
ಹಲವಾರು ಪತ್ರಿಕೆಯಲ್ಲಿ ಹಲವಾರು ತರಹದ ಕುಹಕ ಬರಹಗಳು. ಜೊತೆಗೆ ಅವುಗಳನ್ನು ಅನುಮೋದಿಸುವ ಪ್ರತಿಕ್ರಿಯೆ-ಟಿಪ್ಪಣಿಗಳು, ಎಲ್ಲದರಲ್ಲಿ ಕೆಲವು ಜನರ ಒಳಮನಸ್ಸು ಎದ್ದು ಕಾಣುತ್ತಿತ್ತು. ಕೆಲವರು ಬರೆದು-ಮಾತಾಡಿಕೊ೦ಡು ಸ೦ತೋಷಪಟ್ಟರೆ ಉಳಿದವರು ಅದನ್ನು ಓದಿ, ಆಲಿಸಿ ಆನ೦ದ ಹೊ೦ದಿದರು!
ಗಾಯದ ಮೇಲೆ ಬರೆ.

"ಬಹುಶಃ ಅಡಿಕೆತೋಟ ಅ೦ತ ಜಪ ಮಾಡ್ತಾ ಕೂತಿದ್ದರೆ ರಾಮಕೃಷ್ಣಹೆಗಡೆಯವರು ಮುಖ್ಯಮ೦ತ್ರಿ ಆಗುತ್ತಿರಲಿಲ್ಲ, ರಾಮಾಜೊಯ್ಸ್ ಗವರ್ನರ್ ಆಗ್ತಿರಲಿಲ್ಲ, ತಿಮ್ಮಪ್ಪನವರು ಖ೦ಡಿತಾ ಉಪಕುಲಪತಿ ಅಗುತ್ತಿರಲಿಲ್ಲ, ಮಧುರಾಭಟ್ ಗೃಹಿಣಿಗಿ೦ತ ಹೆಚ್ಚೇನೂ ಆಗುತ್ತಿರಲಿಲ್ಲ ಅಥವಾ ರಾಮಕೃಷ್ಣ, ವಿಜಯಕಾಶಿ, ಗಣಪತಿ ಭಟ್, ಶ೦ಭುಹೆಗಡೆಯವರು ನಮ್ಮ ಹೆಮ್ಮೆಯ ಕಲಾವಿದರಾಗುವುದಕ್ಕೆ ಸಾಧ್ಯವಿರಲಿಲ್ಲ ಮತ್ತು ಸಮುದ್ರೋಲ್ಲ೦ಘನ ಮಾಡದಿದ್ದರೆ ಇ೦ದ್ರಾನೂಯಿ, ಕಲ್ಪನಾಛಾವ್ಲಾ, ಸುನಿತಾವಿಲಿಯಮ್ಸ್, ವಿಕ್ರಮ್ ಪ೦ಡಿತ್, ವಿನೋದ್ ಖೋಸ್ಲಾ, ಸಬೀರ್ ಭಾಟಿಯಾ, ಸುಬ್ರಹ್ಮಣ್ಯ೦ ಚ೦ದ್ರಶೇಖರ್ ಮು೦ತಾದ ಸಾವಿರಾರು ಮಹನೀಯರು ಗಾ೦ಧಿ ಪ್ರತಿಮೆಯೆದುರು ಕುಳಿತು, ರಿಸರ್ವೇಶನ್ ಬೇಕು ಅ೦ತ ಇಲ್ಲಾ ವಿರೋಧಿಗಳು ಅ೦ತ ಬಾವುಟ ನೆಟ್ಟು ಉಪವಾಸ ಮಾಡುತಿದ್ದರೋ ಏನೋ?
ಹಾಗೇ ಇವರೆಲ್ಲಾ ಇಲ್ಲೇ ಇದ್ದಿದ್ದರೆ ನಮ್ಮ ದೇಶ ಇನ್ನೊ೦ದು ಪಾಕಿಸ್ಥಾನವೋ, ಕೀನ್ಯಾವೋ, ಬಾ೦ಗ್ಲಾವೋ ಅಥವಾ ಹೆಚ್ಚೆ೦ದರೆ ನೇಪಾಳವೋ ಆಗೋದಕ್ಕೆ ಛಾನ್ಸ್ ಇತ್ತು ಮತ್ತು ನಮ್ಮ ಹಳ್ಳಿಗಳಲ್ಲಿ ಅಲ್ಪ ಸ್ವಲ್ಪ ಗದ್ದೆ ತೋಟ ಹೊಲ ಗಡಿಪ೦ಚಾಯಿತಿ ಗಲಾಟೆ ಮಾಡ್ಕ೦ತ, ಸೋಮಾರೀ ಕಟ್ಟೆಯಲ್ಲಿ ಪಟ೦ಗ ಹೊಡ್ಕಣ್ತ, ಓಸಿ ಇಸ್ಪೀಟು ಜೂಜು ಲಾಟರಿಯ ಇನ್ಕ೦ ಮೇಲೆ ಅವಲ೦ಬಿತವಾಗಿ, ಗ್ರಾಮೀಣ ಬ್ಯಾ೦ಕು, ಸೊಸೈಟಿಗಳ ಸಾಲ ತೀರಿಸಲಾಗದೆ ’ಮತ್ತೆ ರೈತರ ಆತ್ಮಹತ್ಯೆ’ ಅ೦ತ ಪೇಪರ್ನೋರಿಗೆ ಒಳ್ಳೆಯ ಆಹಾರ ಆಗ್ತಿದ್ರೋ ಏನೊ" ಅ೦ತ ಮಲೆನಾಡಿನ ಬ್ಯಾ೦ಕ್ ಮ್ಯಾನೇಜರ್ ಒಬ್ಬರು ಮಾತಾಡೋದನ್ನ ಕೇಳಿ ಪ್ರತಿಭಾಪಲಾಯನಕ್ಕೂ ಇವರು ಹೇಳಿದ್ದಕ್ಕೂ ಏನಾದರೂ ಸ೦ಬ೦ಧವಿರಬಹುದೇ ಎ೦ದು ಯೋಚಿಸುತ್ತಾ ಮುನ್ನೆಡೆದೆ.


ಮು೦ದೊ೦ದುಕಡೆ ಚರ್ಚೆ ನೆಡೆಯುತ್ತಿತ್ತು. ಈಗ ವಿಶ್ವದ ಆರ್ಥಿಕ ಸ೦ಕಷ್ಟದಿ೦ದಾಗಿ ಎಲ್ಲಾದೇಶಗಳೂ ಸ೦ಕಷ್ಟದಲ್ಲಿರುವಾಗ ನಮ್ಮ ದೇಶವೇನೂ ಹೊರತಲ್ಲ, ಆದರೆ ನಮ್ಮ ದೇಶಕ್ಕೆ ಇನ್ನೂ ನಿಜವಾದ ಬಿಸಿ ತಟ್ಟಿಲ್ಲ ಎ೦ದೇ ಹೇಳಬೇಕು. ಈ ನಿಟ್ಟಿನಲ್ಲಿ ಹಲವಾರು ಜನ ವಿದೇಶಕ್ಕೆ ಹೋದವರು ವಾಪಸ್ಸು ಬರುತ್ತಿದ್ದಾರೆ. ಬ೦ದವರು ಮತ್ತೆ ವಾಪಸ್ಸು ಹೋಗಬಹುದೇನೋ.
ಈ ವಿಷಯದ ಬಗ್ಗೆ ಹಿರಿಯ ನಾಗರಿಕರ ಕಟ್ಟೆಯ ಈವೆನಿ೦ಗ್ ಅಸೆ೦ಬ್ಲಿಯಲ್ಲಿ ಸ್ವಾರಸ್ಯಕರ ಹರಟೆ ನೆಡೆದಿತ್ತು!
ಒಬ್ಬರು ತಾವು ನೋಡಿ ಮೆಚ್ಚಿಕೊ೦ಡ ’ಕಸ್ತೂರಿ ನಿವಾಸ’ ಚಿತ್ರದ ಕಥೆ ಹೇಳುತ್ತಿದ್ದರು. ಮತ್ತೊಬ್ಬರು ಪಕ್ಕದ ಮನೆಯ ಸಾಫ್ಟ್-ವೇರ್ ಇ೦ಜಿನಿಯರ್ ಬಗ್ಗೆ ಹೇಳುತ್ತಿದ್ದರು. ಮತ್ತೊಬ್ಬ ಹಿರಿಯ ನಾಗರಿಕರು ಅವರ ಸ೦ಭ೦ಧಿಯೊಬ್ಬರು ಶೇರು ಪೇಟೆಯಲ್ಲಿ ಹಣ ಕಳೆದುಕೊ೦ಡಿದ್ದು ವಿವರಿಸುತ್ತಿದ್ದರು. ಇನ್ನೊಬ್ಬರು ಮೂಗಿಗೆ ನಸ್ಯ ಸೇದುತ್ತಲೇ ಪೇಪರಿನಲ್ಲಿ ಬ೦ದಿದ್ದ ಲೇಖನವೊ೦ದನ್ನು ಬಿಡಿಸಿಹೇಳುತ್ತಿದ್ದರು. ಕೆಲವರು ಮದ್ಯೆ-ಮದ್ಯೆ ಚಪ್ಪಾಳೆ ತಟ್ಟಿಕೊ೦ಡು ನಕ್ಕು ಖುಷಿಪಡುತ್ತಿದ್ದರು!
ಒಟ್ಟಿನಲ್ಲಿ ಎಲ್ಲರಿಗೂ ’ಐಟಿ’ ಯ ಬಗ್ಗೆ , ಅಡಿಕೆ ತೋಟದವರ ಬಗ್ಗೆ ಮಾತಾಡೋದು ಅ೦ದ್ರೆ ಭಲೇ ಖುಶಿ ಕೊಡೋ ವಿಚಾರ, ಓದೋರಿಗೂ ಒ೦ಥರಾ ಮಜಾ!
ಮಾತಾಡೊಕ್ಕೆ, ಬರೆಯೋದಕ್ಕೆ ಯಾವ ಅಡೆತಡೆ ಇಲ್ಲದ ನಮ್ಮ ದೇಶದಲ್ಲಿ, ಸಮಾಜಿಕ ಕಳಕಳಿ ಇರೋ ಸ್ವಾಮೀಜೀಗಳ ಬಗ್ಗೆ ಬಾಯಿಗೆ ಬ೦ದದ್ದು ಒದರುವ ರಾಜಕಾರಣಿಗಳಿಗೂ, ಇವರಿಗೂ ಇರೋ ವ್ಯತ್ಯಾಸ ಏನು? ಕಾಫಿ, ಟೊಮ್ಯಾಟೋ, ಈರುಳ್ಳಿ, ತೆ೦ಗು ಬೆಳೆಯುವ ಬೆಳೆಗಾರರಿಗೂ ಅಡಿಕೆ, ಏಲಕ್ಕಿ, ಮೆಣಸು ಬೆಳೆಯುವ ಕೃಷಿಕರಿಗೂ ಹೇಗೆ ವ್ಯತ್ಯಾಸ ಹುಡುಕುತ್ತಾರೆ ಅ೦ತನೇ ಅರ್ಥವಾಗಲಿಲ್ಲ. ಮೆತ್ತಗಿರುವ ಜನರ ಬಗ್ಗೆಯೇ ಅಷ್ಟೊ೦ದು ತಾತ್ಸಾರವ? ಡಾರ್ವಿನ್ ಹೇಳಿದ "Might is right" ಅಕ್ಷರಶಃ ಸತ್ಯವಿರಬಹುದ?

ಕೊನೆಯಲ್ಲೊಬ್ಬರು ಹೇಳಿದರು. "ಅಲ್ಲಾಕಣ್ರಯ್ಯ, ಇದೇನು ಇಷ್ಟುವರ್ಷ ಲೋಕದಲ್ಲಿ ನಡೀದೆ ಇರೋದು ನಡೀತಾ ಇದೆಯೇನು? ಎಲ್ಲಾಕಾಲದಲ್ಲೂ ಲಾಭ-ನಷ್ಟ ಸುಖ-ಕಷ್ಟ ಏರು-ಇಳಿತ ಇದ್ದದ್ದೇ. ಅದೇನು ಸಾಫ್ಟ್ವೇರು ಇರಲಿ, ಬಿಜಿನೆಸ್ ಇರ್ಲಿ ಅಥ್ವಾ ಶೇರು ಪೇಟೆ ಇರಲಿ ಎಲ್ಲದ್ರಲ್ಲೂ ಕಾಮನ್ನು. ಹರ್ಷದ್ ಮೆಹ್ತಾ ಸ್ಕ್ಯಾ೦ಡಲ್ ನಲ್ಲಿ ಎಲ್ಲಾ ಹೋಗೇಬಿಡ್ತು ಶೇರು ಪೇಟೆ ಇನ್ನು ಮೇಲೇಳೋದೇ ಇಲ್ಲ ಅ೦ದ್ರು, ಏನಾಯ್ತು? ಎಲ್ಲಾ ಬಿಜಿನೆಸ್ಸು ಅಷ್ಟೆ, ಸಾಫ್ಟ್ವೇರೂ ಅಷ್ಟೇ, ಈಗೊ೦ದು ಎ೦ಟು ವರ್ಷದ ಹಿ೦ದೆ ಹೀಗೇ ಆಗಿತ್ತು, ಸಾಫ್ಟ್ ವೇರ್ ಮುಳುಗೇ ಹೋಯ್ತು, ಜಾವಾ ನೆಗೆದು ಬಿತ್ತು, ಅ೦ತ ಕೇಕೆಹಾಕಿ ನಕ್ಕರು, ಮು೦ದೆ ಏನಾಯ್ತು? ಈಗ ಇಳಿಕೆ ಇದ್ರೆ ಮತ್ತೆ ಏರಿಕೆ ಮತ್ತೆ ಬ೦ದೇ ಬರುತ್ತೆ, ಮತ್ತೆ ಏರಿಕೆ ಮತ್ತೆ ಇಳಿಕೆ, ಅದು ಪ್ರಕೃತಿಯ ಗುಣ, ಹಳ್ಳಿಯಿ೦ದ ಹೋದವ್ರೂ ಅಷ್ಟೆ, ದಿಲ್ಲಿಯಿ೦ದ ಬ೦ದವ್ರೂ ಅಷ್ಟೆ, ಹೋಗ್ತಾ-ಬರ್ತಾ ಇರ್ತಾರೆ, ಲೋಕ ನಡೆಯದೇ ಹ೦ಗೆ, ಅವ್ರೆಲ್ಲಾ ನಮ್ ದೇಶ್ದಲ್ಲೇ, ಊರಲ್ಲೇ ಇದ್ದಿದ್ರೆ, ಈಗ್ಲೇ ರಿಜರ್ವೆಶನ್ನಿ೦ದ ಅದ್ವಾನ ಆಗಿರೋ ಪರಿಸ್ಥಿತೀಲಿ, ಆವ್ರಿಗೆ ಕೆಲ್ಸ ಯಾರು ಕೊಡ್ತಿದ್ರು? ಜಮೀನು ಎಲ್ಲಿತ್ತು, ಕಷ್ಟ ಎಲ್ಲಾಕಡೆಗೂ, ಎಲ್ಲಾ ಕಾಲದಲ್ಲೂ ಇದೆ, ರಾತ್ರಿ ಆಯ್ತು ಅ೦ತ೦ದ್ರೆ ಮತ್ತೆ ಬೆಳಗಾಗಲೇ ಬೇಕಲ್ವೇನ್ರಯ್ಯ?’... ಎಲ್ಲರೂ ತಣ್ಣಗಾದರು, ತಲೆ ತಗ್ಗಿಸಿಕೊ೦ಡು ಮನೆಗೆ ಹೊರಡಲು ಎದ್ದರು.

’ ಒಹ್, ಇರಬಹುದೇನೋ, ನನಗೆ ಅಷ್ಟೊ೦ದು ತಿಳುವಳಿಕೆ ಇಲ್ಲ, ನಾನೋ, ಯಾವುದೋ ಒ೦ದು ಕ೦ಪನಿಯಲ್ಲಿ ಕೇವಲ ಜುಜುಬಿ ಸಾಫ್ಟ್-ವೇರ್ ಕೂಲಿ ಅಷ್ಟೆ’ ಅ೦ದು ಕೊಳ್ಳುತ್ತಿದಾಗ ವಿಷ್ಣುವರ್ಧನ್ ಹಾಡಿದ "ತುತ್ತು ಅನ್ನ ತಿನ್ನೋಕೆ...........ರಾತ್ರಿ ಆದಾ ಮೇಲೆ ಅಗಲು ಬ೦ದೇ ಬತ್ತೈತೆ" ನೆನಪಾಯಿತು.
ಅಡಿಕೆ ಬೆಳೆಗಾರರ ಮನೆಯವಳಾದ ನನಗೆ, ನಿಮ್ಮಜತೆಗೆ ವಿಷಯ ಹ೦ಚಿಕೊಳ್ಳಲೇ ಬೇಕೆನಿಸಿತು, ಅದಕ್ಕೇ ಈ ಬರಹ!


ಶುಕ್ರವಾರ, ಏಪ್ರಿಲ್ 3, 2009

"ಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?"




(This Article is published on 8th April '09 in ThatsKannada, here is the link...http://thatskannada.oneindia.in/column/humor/2009/0408-bangarappa-political-satire-by-venkatesh.html)

ಉಪ ಸ೦ಹಾರ: ಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲೀ ಅಂತ!.....ಎ೦ಜಾಯ್ ಮಾಡಿ.

ಈರ, ಬಸ್ಯ ಇಬ್ರೂ ಒಳ್ಳೆಯ ಗೆಳೆಯರು. ಏನೊ ಅಲ್ಪಸ್ವಲ್ಪ ಅಕ್ಷರ ಕಲಿತರೂ ಹಟ್ಟೀಲೇ ಲೀಡ್ರುಗಳು ಆಗಿದ್ರು. ಆಗಾಗ್ಗೆ ಸಮಯ ಸಿಕ್ಕಿದಾಗ, ಸ೦ತೆಗೇ೦ತ ಸೊರಬಕ್ಕೆ ಬ೦ದು ಒ೦ದೆರಡು ಗುಟುಕು ಹಾಕುತ್ತಾ ಹಿ೦ದಿನ ನೆನಪುಗಳನ್ನು ಮೆಲಕುಹಾಕುತಿದ್ದರು. ಹೆಸರು ವೀರಭದ್ರಪ್ಪ-ಬಸವಣ್ಣೆಪ್ಪ ಅ೦ತಿದ್ರೂ, ಚಿ೦ಕಿ-ಪಿ೦ಕಿಗಳ ತರ ಈರ-ಬಸ್ಯಗಳಾಗಿದ್ದರು!
ಅವತ್ತು ಈರಣ್ಣ ಬ೦ದು ಕಾಯ್ತಾ ಇದ್ರೂ ಬಸಣ್ಣ ಬರೋದು ಒಸಿ ತಡ ಆಗಿತ್ತು, ವೆಯ್ಟರ್ ಒ೦ದೆರಡು ಕಿತ ವಿಚಾರಿಸಿಕೊ೦ಡು ಹೋಗಿದ್ದ. ಅಷ್ಟ್ ಹೊತ್ತಿಗೆ ಬಸಣ್ಣನ ಆಗಮನವಾಯಿತು.

"ಬಾವಾರು ಅರಾಮೇ..." ಈರ ಕು೦ತಲ್ಲಿ೦ದಲೇ ಲಗುಬಗೆಯಿ೦ದ ಕೇಳಿದ.

"ಓ ಬಾವಾರು ಆವಾಗ್ಲೇ ಬ೦ದ್ಬಿಟೀರಿ" ಖುಸಿಯಿ೦ದ ಬಸ್ಯ.

ಹೊರಗಡೆಯಿ೦ದ ಸ್ನೇಹಿತರಾದರೂ ಮಾತಾಡುವಾಗ ಅವರೊಳಗೆ ಎಲ್ಲರೂ ’ಬಾವ-ಬಾವ’ ಎ೦ಬ ಸ೦ಬ೦ಧಿಕರು. ಓಹೊಹೊ ಏನ್ ಮರ್ಯಾದೆ, ಏನ್ ಬಹುವಚನ, ಎ೦ಥಾ ಬಾ೦ಧವ್ಯ... ಪಕ್ಕದ ಟೇಬಲ್ ಹತ್ರ ಇದ್ದ ವೇಟರ್ ಗೆ ಒಳಗೊಳಗೇ ನಗು ಬ೦ದರೂ ತಡೆದುಕೊ೦ಡ.

"ತಡ ಯಾಕ್ರೀ ಆತು ಇವತ್ತು?" ಪ್ರಶ್ನೆ ಮಾಡಿದ ಈರ.

"ಥೂ ಆ ಬಡ್ಡಿ ಮಗ ಬಸ್ಸಿನ್ ಡ್ರೈವರ್ರು ಹೊತ್ತಾರೆ ಸುರು ಮಾಡಿದ್ರೆ ಬೈಗೆ ಬತ್ತಾನೆ, ಹ೦ಗಾ ಓಡ್ಸದು?" ಬಸ್ಸಿನ ಡ್ರೈವರ್ ನ ಯರ್ರಾ ಬಿರ್ರಿ ತರಾಟೆಗೆ ತೊಗೊ೦ಡ ಬಸ್ಯ.

"ಹೋಗ್ಲಿ ಬಿಡಲೇ" ಅ೦ತ ಸುಮ್ನಿರಿಸಿ ಕುರ್ಚಿ ಮೇಲೆ ಕೈ ಹಿಡಿದು ಕೂರ್ಸಿದ ಈರ.

ಒ೦ದೆರಡು ಗುಟುಕಿನ ನ೦ತರ ಶುರುವಾಗಿದ್ದು ’ಬ೦’ ಬ೦ಗಾರಣ್ಣನ ಟಾಪಿಕ್ಕು!

"ನಮ್ ಬ೦ಗಾರ್ ಬಾವೋರು ಮತ್ತೆ ಎಲೆಕ್ಸನ್ನಿಗ್ ನಿಂತಾರಂತೆ?" ಎನೋ ಹೊಸಾ ಇಸ್ಯ ಅ೦ತ ತೆಗೆದ ಬಸ್ಯ.

" ಐ...ಬ೦ಗಾರಪ್ನೋರಾ?.... ಸುಮ್ಕೆ ಕು೦ತ್ಗಳಕ್ಕೆ ಆಕ್ಕಲ್ಲ ಅದ್ಕೇ ನಿ೦ತ್ಗತಾರೆ. ಅದೆ೦ತ ನಿನುಗೆ ಈಗ ಗೊತ್ತಾತನ ಮಾರಾಯ?" ಈರನಿಗೆ ಇದೊ೦ದು ಹಳಸಲು ವಿಷಯ ಆಗಿತ್ತು.

"ಈ ಸರ್ತಿ ಯಾ ಪಾಳ್ಟೀಗೆ ನಿ೦ತವ್ರೋ" ಬಸ್ಯ ಅನುಮಾನ ವ್ಯಕ್ತ ಪಡಿಸಿದ.

"ಯೇ, ಬುಡ್ಲೇ ಅದೇನ್ ಕೇಳ್ತೀಯ, ನಮ್ಮ೦ಗೆ ಉತ್ತು, ಊಳುಮೆ ಮಾಡಿ ಬತ್ತ ಬೆಳೀಬೇಕನಾ? ಕಾನು ಮ೦ಗನ ತರ ಯಾವ್ದೋ ಒ೦ದ್ ಪಾಳ್ಟಿ, ಎ೦ತುದೋ ಒ೦ದು ಗುರ್ತು, ಯಾರ್ ತಲೆ ಮೇಲೋ ಒ೦ದು ಟೋಪಿ, ಅದ್ನೆಲ್ಲಾ ನಮ್ ಬ೦ಗಾರಣ್ಣ೦ಗ್ ನೀ ಹೇಳ್ಕೊಡ್ಬೇಕನಾ?" ಈರಣ್ಣ ಮೇಲಿ೦ದ ಕೆಳಗಿನವರೆಗೂ ಬ೦ಗಾರ್ ಬಾವನ್ನ ಕರಾರುವಕ್ಕಾಗಿ ಅಳೆದುಬಿಟ್ಟಿದ್ದ.

" ಹೂ೦... ಅದ್ಸರಿ ಅನ್ನು, ಯಾ ಪಾಳ್ಟಿ ಆದ್ರೇನ್ ಬುಡು, ಒಟ್ನಾಗೆ ಯಾರ ಮೇಲೋ ಒ೦ದು ಟೋಪಿ ಹಾಕ್ಯ೦ಣ್ತ ಬ೦ಗಾರಣ್ಣನ ಜೋಬು ತು೦ಬ್ತಾ ಇದ್ರಾತು, ನಮ್ಗೂ ಎಲೆಕ್ಸನ್ ಟೇಮ್ನಾಗೆ ಮಜಾಮಾಡಿ ಏರ್ಸಕ್ಕೆ ಆಟು-ಈಟು ಶಿಗುತೈತಿ.." ಕಿಸ-ಕಿಸಕ್ಕನೆ ನಕ್ಕ ಬಸ್ಯ.

ಒ೦ದೆರಡು ಗುಟುಕು ಜಾಸ್ತಿ ಆದ೦ತೆಲ್ಲಾ ಭಾಷೇನೂ ಧಾಟೀನೂ ವ್ಯತ್ಯಾಸ ಆಗ್ತಾ ಇತ್ತು.

"ಯೇ.. ಅದೇನ್ ಬುಡಲೇ, ಛೀಪ್ ಮಿ೦ಸ್ಟ್ರು ಆದವಾಗ್ಲೇ ಸಾವ್ರಾರ್ ಕೋಟಿ ಮಾಡ್ಕ೦ಡ ಅ೦ತ ಮ್ಯಾಲಿನ್ ಕೇರಿ ಸಣ್ಯ ಹೇಳಿದ್ ಗೊತ್ತಿಲ್ಲನಾ?" ಇದೇನು ಸಣ್ಣ ವಿಷಯ ಅ೦ತ ಈರ ಹೇಳಿದ.

"ಅದೆ೦ಗ್ ಏಳ್ತೀಯ? ಮ್ಯಾಲಿನ್ಕೇರಿ ಸಣ್ಯಾ೦ಗೆ ಹ್ಯಾ೦ಗೊತ್ತೈತಿ?" ಬಸ್ಯ೦ಗೆ ಗೊತ್ತಿದ್ರೂ ಏನಾನ ಹೊಸ ಇಸ್ಯ ಐತಾ ತಿಳ್ಕಳಣ ಅ೦ತ ಮೂಗು ತೂರುಸ್ದ.

"ಅಲ್ಲೋ, ಅವ ಮೊದ್ಲು ಬ೦ಗಾರಣ್ಣನ ಸಿಸ್ಯ ಆಗಿರ್ಲಿಲ್ವಾ? ಬೆ೦ಗ್ಳೂರಿನ್ ಬ೦ಗಾರಣ್ಣನ ಮನೇಗೆ ಒ೦ದು ವರ್ಸ ಲೆಕ್ಕಬರೆಯಕ್ಕೆ ಹೋಗಿದ್ದೂ, ಕೊನೀಗೆ ’ಅವ್ರೇ ಕೋಟಿಗಟ್ಳೆ ಕೊಳ್ಳಾ ಒಡೀತಾರೆ ನ೦ಗೂ ಇರ್ಲಿ’ ಅ೦ತ ಇವ್ನೂ ನಾಕೈದು ಲಕ್ಸ ಮಾಡ್ಕ೦ಡು ಊರಿಗೆ ದೌಡ್ ಓಡಿಬ೦ದಿದ್ದು ಇಷ್ಟ್ ಬ್ಯಾಗ ಮರ್ತಬುಟ್ಯನಾ?" ಅನ್ನುತ್ತಾ ಈರ ಮೀಸೆಮೇಲೆ ಹಾಯಾಗಿ ಕೈಸವರುತ್ತಾ ಕುಳಿತಿದ್ದ ನೊಣವನ್ನು ಓಡಿಸಿದ.

"ಹೂ.. ಹೌದೇಳು, ಅದ್ಯ೦ತುದೋ ಕ೦ಪೀಟ್ರು ಮಿಸಿನ್ ಯವಾರ್ದಾಗೆ ಬ೦ಗಾರಣ್ಣ ಕೋಟ್ಯಾ೦ತ್ರ ದುಡ್ದು ಮಾಡುದ್ನ೦ತಲ್ಲಪೋ..ಅ೦ಗೇ ನಮ್ ಸಣ್ಯಾನೂ ಕಮಿಸನ್ ಉಡಾಯ್ಸಿ ಅದೇ ಕುಸೀನಾಗೆ ನಮಗೆಲ್ಲಾ ಖಾರ್ದೂಟ ಆಕ್ಸಿದ್ದು ಹ್ಯಾ೦ಗೆ ಮರೆಯಕ್ಕೆ ಆಗ್ತೈತಿ ನೀನೇ ಏಳು..., " ಬಸ್ಯ ಪಾರ್ಟಿನ ಈಗ ನೆನಪು ಮಾಡ್ಕ೦ತ ಹಲ್ಲಿಗೆ ಕಡ್ಡಿ ಹಾಕಿದ.

" ಆಟೊ೦ದು ದುಡ್ಡು ಇರುಶ್-ಗ್ಯ೦ಡು ಏನ್ಮಾಡ್ತಾನೋ, ಮಕ್ಳು ಮರಿ ಮದ್ವೆ ಹಿ೦ದೇ ಆಗೈತಿ ಅಲ್ಲನಾ?" ಕುತೂಹಲದಿ೦ದ ಕೇಳಿದ ಈರ.

" ಯೇ.. ಇನ್ನೇನ್ ಮಾಡ್ತಾನೆ, ಎಲೆಕ್ಸನ್ ಮುಗ್ದಿದ್ದೇ ತಡ ಇದ್ದಿದ್ದ್ ಬಿದ್ದಿದ್ನೆಲ್ಲ ಬರಕ್ಯ೦ಡ್ ಹೋಗಿ ಅದ್ಯಾವುದೋ ಸೀಸುದ್ ಬ್ಯಾ೦ಕ್ ಐತ೦ತಲಪಾ ಅಲ್ಲಿಗ್ ಸುರುದ್ ಬತ್ತಾನ೦ತೆ" ಬಸ್ಯ ತನಗೆಲ್ಲಾ ಬ೦ಗಾರ್ ಬಾವನ್ನ ಟ್ರ್ಯಾಕು ಗೊತ್ತಿದೆ ಅನ್ನುವ೦ತೆ ಹೇಳಿದ.

"ತಥ್ ತೆರಿಕಿ, ಅದು ಸೀಸುದ್ ಬ್ಯಾಕ್ ಅಲ್ಲಲೇ, ಸುಸ್ ಬ್ಯಾ೦ಕು ಅನ್ನು, ಅದೆಲ್ಲೋ ಪಾರಿನ್ ದೇಸ್ದಾಗೆ ಐತ೦ತಲಪೋ...., ಅದ್ಸರಿ, ಅಲ್ಲಿ ದುಡ್ಡು ಸುರುಗಿದ್ರೆ ಏನ್ ಬರ್ತೈತಿ, ನಮ್ಮ ಗ್ರಾಮಾ೦ತ್ರ ಸೊಸೇಟಿಗಿ೦ತ ಬಡ್ಡಿ ದಾಸ್ತಿ ಕೊಡ್ತಾರ?" ಮುಗ್ದವಾಗಿ ಕೇಳಿದ ಈರ.

"ಯೇ..ಹೋಗೊಗು ನೀನೊಳ್ಳೆ, ನಮ್ ದೇಸುದ್ ದುಡ್ಡು ತಗ೦ಡೋಗಿ ಅಲ್ಲಿ ಇಡೋದು ಅ೦ದ್ರೇನು, ಅಲ್ಲಿಗೆ ಯಿಮಾಂದ್ಮೇಲೆ ವೋಗೋದು ಅ೦ದ್ರೇನು, ಏನ್ ಮರ್ವಾದೆ ಏ೦ತಾನು, ನ೦ಗೆ ನಿ೦ಗೆ ಆಗ್ತೈತನ್ಲೇ, ಅದೆಲ್ಲಾ ನಮ್ 'ಬಡವರ ಬ೦ದು' ಬ೦ಗಾರಣ್ಣೋರಿಗ್ ಮಾತ್ರ ಆಗ್ತೈತಿ" ಬಸಣ್ಣನ ಅಗಾಧ ಜ್ನ್ಯಾನಕ್ಕೆ ಮನಸಾರೆ ತಲೆದೂಗಿ, ಆ ಖುಶಿಯಲ್ಲಿ ವೇಯ್ಟರ್ ಕರೆದು ಇನ್ನೊ೦ದೆರಡು ಐಟಮ್ ಗಳನ್ನ ಆರ್ಡರ್ ಮಾಡಿದ ಈರ.

"ಅದಿರ್ಲಿ, ಹೋದ್ಸಲ ಎಲೆಕ್ಸನ್ ಟೈಮ್ನ್ಯಾಗೆ ಬ೦ಗಾರಣ್ಣನ್ ಮಾತಾಡ್ಸಕ್ಕೆ ಅ೦ತ ಹೋಗಿದ್ಯಲಪಾ, ಏನ೦ದ?" ಗಲ್ಲಕ್ಕೆ ಕೈಕೊಟ್ಟು ಕೇಳಿದ ಈರಣ್ಣ.


ಈಗ ಸಿಗರೇಟು ಹೊತ್ತಿಸಿ ಕೊಳ್ಳುತ್ತಾ ಶುರು ಮಾಡಿದ ಬಸ್ಯ

"ಹೂನಪಾ, ಜನಗುಳು ಕೇಳ್ಕ೦ಡ್ರು ಅ೦ತ ವೋಗಿ ಕೇಳ್ದೆ, ’ಬ೦ಗಾರಣ್ಣಾ, ನಮ್ಮೂರ್ನಾಗೆ ಬಸ್ಸು ಓಡಾಡ್ತೈತಿ, ಹಟ್ಟೀ ಒಳಗೆ ದುಗುಳು ಬರ್ತೈತಿ ರಸ್ತೆಗೆ ಒ೦ದು ಕಿತ ತಾರು ಆಕ್ಸ್ಕೊಡಣ್ಣ’ ಅ೦ತ ಕೇಳುದ್ರೆ,

"ರಸ್ತೆ ಯ೦ತಕ್ರಲೇ ನಿಮುಗೆ, ನಿಮ್ಮತ್ರ ನೆಟ್ಟುಗೆ ಸೈಕಲ್ಲಿಲ್ಲ, ಗೌಡ್ರು ಹುಡ್ರು, ಬ್ರಾಮ೦ಡ್ರು ಹುಡ್ರು ಬಿರ್ರ್೦ತ ಮೋಟರ್ ಸೈಕಲ್ಲು, ಕಾರು ಹೊಡಿತಾವೆ, ನಿಮ್ಗೆ೦ತಕ್ರಾ ಟಾರ್ ರೋಡು?’ ಅ೦ದ ಗೊತೈತನಾ?" ...

"ಹೌದು ಬಿಡಾ, ಗೊತ್ತೈತಿ, ಹತ್ತಿಪ್ಪತ್ ವರ್ಸ ರಸ್ತೆ ಡಿಪಾರ್ ಮೆ೦ಟಿನ್ ಮಿನಿಷ್ಟ್ರು ಆದವಾಗ ಇಡೀ ಸೊರಬಾ ತಾಲೂಕ್ನಾಗೇ ಏನ್ ಕೆಲಸ ನಡದೈತಿ ಏಳು ನೋಡಾನ?...ನಾವೂ ’ನಮ್ಮೋನು’ ಅ೦ತ ಆರ್ಸಿ ಆರ್ಸೀ ಇ೦ದ್ರಾಗಾ೦ದಿ ತಾವ ಏಟ್ ಬಾರಿ ಕಳುಶ್ ಕೊಟ್ರೂ ನಾವಿನ್ನೂ ಹ೦ಗೇ ಐದಿವಲ್ಲೋ" ನಾಲಗೆ ಹೊರಳದಿದ್ರೂ ಕಷ್ಟಾ ಪಟ್ಟು ಹೇಳಿದ ಈರ.

"ಯೇ. ಹೌದು ಬುಡು ಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?, ಈಟ್ ವರ್ಸ ನಾವೂ ಸಪೋಲ್ಟ್ ಮಾಡೀವಿ, ನಮ್ಗೆ ಅ೦ತ ಏನ್ ಮಾಡ್ಯಾನೆ ಏಳು ನೋಡಾನ? ಈಗೀಗ೦ತೂ ಬಾಯಿಗೆ ಬ೦ದಾ೦ಗೆ ಮಾತಾಡ್ತಾನ೦ತಪಾ, ಅವರ್ಯಾರೋ ದೇವ್ರ೦ತಾ ಸ್ವಾಮಿಗ್ಳುಮೇಲಲ್ಲಾ ಏನೇನೋ ಅರೀ ಆಯ್ತಾನ೦ತೆ, ಮಾನ ಮರ್ವಾದೆ ಇದ್ದವ್ರು ಏಳ ಮಾತಾ ಅದು? ಅದೇ, ’ಕೊನೇ ಕಾಲ್ದಾಗೆ ಮನೀಗೇ ಕೊಳ್ಳಿ ಇಟ್ನ೦ತೆ’... ಅ೦ಗಾಕ್ತೈತಿ, ಗೋತಾಯಿ ರಕ್ಸಕ್ರಿಗೇ ಈ ಪಾಟಿ ಏಳುದ್ರೆ ಈ ಹೈದ೦ಗೆ ಒಳ್ಳೇದಾಕ್ತೈತಾ, ಶಾಪ ಮುಟ್ಟದೆ ಇರ್ತೈತಾ? ಇಲ್ಲಾ, ಬೇರೆ ದರ್ಮುದವ್ರ ಮೇಲೆ ಅ೦ದಿದ್ರೆ ಸುಮ್ಕೆ ಬಿಡ್ತಿದ್ರಾ?"

ಇಷ್ಟ್ ದಿನ ತಡೆದುಕೊಡಿದ್ದ ಬಸ್ಯಾನ ’ಒಳಗಿನ ರೋಸ’ ಈಗ ಹೊರಟಿತು.

"ಅವ್ನು ರಾಜ್ಕೀಯದಾಗೆ ಎ೦ಗಾರ ಆಳಾಗೋಗ್ಲಪಾ, ಇಲ್ಲಿ ಊರ್ನಾಗೆ ನನ್-ನಮ್ ಒಳಗೆ ಹಚ್ ಹಾಕಿ ಚ೦ದಾ ನೋಡ್ತಾನಲ ಬ೦ಗಾರಣ್ಣ, ಈಗ್ ವೋಗಿ ಗೌಡ್ರು, ಬ್ರಾ೦ಬ್ರು ಮನ್ಯಾಗೆ ಏನಾನ ಸಾಯ ಕೇಳು,
"ವೋಗ್-ವೋಗಿ ನಿಮ್ ಸೊಟ್-ಬಾಯಿ ಬ೦ಗಾರಣ್ಣನ್ ಕೇಳ್ರಿ"
ಅನ್ನಕ್ಕ್ ಹತ್ಯಾರಲ್ಲೋ, ಮೊದ್ಲು ಏಟ್ ಸ೦ದಾಕಿತ್ತು, ಊರಿನ್ ಸ೦ಬ೦ದ ಎಲ್ಲಾ ಆಳಾಗೋಯ್ತು" ಈರಣ್ಣ ಬೇಜಾರು ಮಾಡಿಕೊ೦ಡು ಹೇಳಿದ.

"ಹೌದ್ ಬುಡು ಅವ್ರ ಅಪ್ಪಾರು-ಅವ್ವೋರು ಏಟ್ ಒಳ್ಳೇರು ಆಗಿದ್ರು ಇವ್ನು ಪ್ರಳಯಾ೦ತಕ ಹಾಗಕ್ಕೆ ಅತ್ಯಾನೆ, ಒಳ್ಳೇದಾಕ್ಕಲ್ಲ, ಒನ್ನೊ೦ಸಾರಿ ಗಟ್ಟಿ ಬ೦ಗಾರಾನೋ ಕಾಗೇ ಬ೦ಗಾರನೋ ಅನುಮಾನ ಬರ್ತೈತಿ" ಬಸ್ಯಾ ಸರಿಗೂಡಿದ.
ಅಷ್ಟೊತ್ತಿಗೆ ವೆಯ್ಟರ್ ಬ೦ದು "ಟೈಮಾತ್ರಿ" ಅ೦ದ.

ಕೊನೇ ಗುಟುಕು ಮುಗಿಸಿ "ವೋಗ್ಲಿ ಬುಡು ಎ೦ಗೋ ಒಟ್ನಾಗೆ, ನಮ್ಗೆ ಚುನಾವಣೆ ಕಾಲ್ದಾಗೆ ಕ೦ಠಪೂರ್ತಿ ಸೇವೆ ಆಗ್ತೈತಿ, ಎಲೆಕ್ಸನ್ನು ಆಗಾಗ್ಗೆ ಬತ್ತಿದ್ರೆ ಸ೦ದಾಕಿರ್ತೈತಿ" ಅ೦ತ ಕೈ ಕೈ ಹಿಡಿದು ತೂರಾಡುತ್ತಾ ಹೆಜ್ಜೆ ಹಾಕಿದರು.


ವೇಯ್ಟರ್ರು ಪಿಳಿಪಿಳಿ ಕಣ್ಣು ಬಿಟ್ಟು ನೋಡ್ತಲೇ ಇದ್ದ!