ಶುಕ್ರವಾರ, ನವೆಂಬರ್ 20, 2009

ಅಮೇರಿಕಾದ ಸ್ವಾರಸ್ಯಗಳು - ಭಾಗ 5

(Published link: http://thatskannada.oneindia.in/nri/article/2009/1120-america-musings-part-5-by-venkatesh.html)

ವಲಸಿಗರಲ್ಲಿ ಹೆಚ್ಚಿನ ಅಮೇರಿಕನ್ನರು ಮೂಲತಃ ಬ್ರಿಟಿಶ್ ರಕ್ತದವರೇ ಆದರೂ ಅವರಿಗೆ ಇ೦ಗ್ಲೆ೦ಡಿನ ಬ್ರಿಟೀಷರನ್ನು ಕ೦ಡೆರೆ ಆಗದು. ಅದಕ್ಕೇ ಇವರು ಬ್ರಿಟೀಷರ ಬಹುತೇಕ ವಿಧಾನಗಳಿಗೆ ಪ್ರತಿವಿಧಾನವನ್ನು ಬಳಸುತ್ತಾರೆ. ಇಲೆಕ್ಟ್ರಿಕ್ ಸ್ವಿಚ್ ಆನ್ ಮಾಡುವುದು ಮೇಲಿನಿ೦ದ ಕೆಳಗಾದರೆ, ಇಲ್ಲಿ ಕೆಳಗಿನಿ೦ದ ಮೇಲೆ. ಮನೆಗಳಿಗೆ, ಬಹುತೇಕ ಕಟ್ಟಡಗಳಿಗೆ ಬೇಲಿ, ಕಾ೦ಪೌ೦ಡೇ ಇರುವುದಿಲ್ಲ. ಡ್ರೈವಿ೦ಗ್ ಅಲ್ಲಿ ರಸ್ತೆಯ ಎಡಭಾಗದಲ್ಲಾದರೆ ಇಲ್ಲಿ ಬಲಭಾಗ, ಇ೦ಗ್ಲೀಷ್ ಭಾಷೆಯಲ್ಲ೦ತೂ ಬೇರೆ ಸಮಾನ ಅರ್ಥ ಕೊಡುವ ಬೇರೆ ಪದಗಳನ್ನು ಬಳಸುತ್ತಾರೆ. ಅಮೇರಿಕನ್ನರು ಟೀ ಯಾಕೆ ಕುಡಿಯುವುದಿಲ್ಲ ಅನ್ನುವುದಕ್ಕೆ ಇತಿಹಾಸವೇ ಇದೆ. ಸರಕಾರವೂ ಬೇರೆ ತರಹದ್ದು. ಬ್ರಿಟೀಷರು ಏನು ಮಾಡುತ್ತಿದ್ದರೂ ಅದರ ವಿರುದ್ಧವಾಗೇ ಏನಾದರೂ ಕ೦ಡುಹಿಡಿಯುತ್ತಾರೆ. ದ್ವೇಷವೆ೦ದರೆ ಹೀಗಿರಬೇಕು ಅಲ್ವಾ? ಆದರೂ ಇನ್ನೂ ಕೆಲವು ಪದ್ಧತಿಗಳು ಹಾಗೇ ಇವೆ. ನನ್ನ ಅಮೇರಿಕನ್ ದೋಸ್ತ್ ಒಬ್ಬನಿಗೆ ಕೇಳಿದೆ. "ಏಲ್ಲಾ ಸರಿ, ಆದರೆ ಇನ್ನೂ ಮೈಲು, ಇ೦ಚು, ಪೌ೦ಡು.... ಇವುಗಳನ್ನು ಬಳಸುತ್ತೀರಲ್ಲ, ಕಿಮೀ, ಸೆ೦ಟಿಮೀ, ಕೆಜಿ.. ಇವುಗಳು ಇವೆಯಲ್ಲ?". ಅವನು ಇ೦ಜಿನಿಯರ್, "ಅದು ನಿಜ, ಅದೇಕೆ ಮೆಟ್ರಿಕ್ ಬಳಸುತ್ತಿಲ್ಲ ಎ೦ದು ನನಗೂ ಅರ್ಥವಾಗುತ್ತಿಲ್ಲ" ಎ೦ದ.


***

ಭಾರತದಲ್ಲಿ ಎಲೆಕ್ಟ್ರಿಕ್ ಪ್ಲಗ್ ಹಾಕುವಾಗ, ಸ್ವಿಚ್ ಹಾಕುವಾಗ ಕರೆ೦ಟ್ ಹೊಡೆಸಿಕೊ೦ಡರೆ, ಇಲ್ಲಿ ಕಾರು ಓಡಿಸಿಕೊ೦ಡು ಬ೦ದು ಇಳಿಯಬೇಕೆ೦ದು ಬಾಗಿಲು ತೆಗೆಯುವಾಗ ಕರೆ೦ಟ್ ಹೊಡೆಸಿಕೊಳ್ಳಬೇಕು! ಹೌದು, ಇದು ಸ್ಟ್ಯಾಟಿಕ್ ಕರೆ೦ಟು (ಛಾರ್ಜ್). ಈ ರೀತಿಯ ’ಕರೆ೦ಟ್ ಹೊಡೆಸಿಕೊಳ್ಳುವುದು’ ಕೆಲವು ಪ್ರದೇಶಗಳಿಗೆ ಸೀಮಿತವಾದರೂ, ನಾನ೦ತೂ ಟೆಕ್ಸಾಸ್ ರಾಜ್ಯದಲ್ಲಿ ಎಲ್ಲಾಕಡೆಯೂ ಕಾರು ಮುಟ್ಟಿ ಚಟ್ ಚಟ್ ಅ೦ತ ಕರೆ೦ಟ್ ಹೊಡೆಸಿಕೊ೦ಡಿದ್ದೇನೆ. ಕೆಲವರು ಇದು ಮೋಡ ಇದ್ದಾಗ ಆಗುತ್ತದೆ ಅ೦ತಾರೆ. ಇನ್ನೂ ಕೆಲವರು ಅವರವರ ದೇಹ ಸ್ಥಿತಿಯ ಮೇಲೆ ಅವಲ೦ಬಿತವಾಗಿರುತ್ತದೆ ಅ೦ತಾರೆ, ನನಗ೦ತೂ ಹೊಸ ಅನುಭವ. ಯಾರಿಗಾದರೂ ಅನುಮಾನವಿದ್ದರೆ ದಯಮಾಡಿ ಟೆಕ್ಸಾಸಿಗೆ ಬನ್ನಿ, ಕರೆ೦ಟು ಹೊಡೆಸಿಕೊ೦ಡು ಹೋಗುವಿರ೦ತೆ!

***

ಒಬ್ಬ ಓದುಗರು ಕೇಳಿದರು, ಅಲ್ಲಿ ಓದಲು ಬ೦ದ ನಮ್ಮ ಹುಡುಗರು ಹೇಗಿರುತ್ತಾರೆ? ಎ೦ದು. ಇದು ’ಸ್ವಾರಸ್ಯ’ದ ಸಾಲಿಗೆ ಸೇರುವುದಿಲ್ಲವಾದರೂ ಅವರ ಕುತೂಹಲಕ್ಕಾಗಿ ಹೇಳುತ್ತೇನೆ.ನನಗೆ ತಿಳಿದಮಟ್ಟಿಗೆ ಇದು ಅಮೇರಿಕಾಕ್ಕೆ ಸಣ್ಣವಯಸ್ಸಿನಲ್ಲೇ ಮುಕ್ತ ಪ್ರವೇಶಕ್ಕೆ ಇರುವ ಅತ್ಯುತ್ತಮ ದಾರಿ. ಇದರಲ್ಲಿ ಮು೦ಚೂಣಿಯಲ್ಲಿರುವವರು ಆ೦ಧ್ರದವರು. ಅವರಿಗೆ ಅವರ ಹಿ೦ದಿನ ತಲೆಮಾರಿನವರಿ೦ದ ಸ೦ಪೂರ್ಣ ಮಾಹಿತಿ, ಎಲ್ಲ ರೀತಿಯ ಬೆ೦ಬಲ ಇದೆ. ಹೀಗಾಗಿ ಅವರಲ್ಲಿ ’ಸಾಮಾನ್ಯ’ ಇರುವವರೂ ಕೂಡ ಸುಲಭವಾಗಿ ಅಮೇರಿಕಾದ ಪ್ರವೇಶ ಪಡೆಯುತ್ತಾರೆ. ವಿಶ್ವವಿದ್ಯಾಲದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅದೇ ಕ್ಯಾ೦ಪಸ್ ನಲ್ಲೆ ರೂಮು ಹಿಡಿದು ಮೂರು- ನಾಲ್ಕು ಹುಡುಗರು ಒಟ್ಟಿಗಿರುತ್ತಾರೆ. ಭಾರತೀಯ ಹುಡುಗರು-ಹುಡುಗಿಯರು ಒ೦ದೇ ರೂಮಿನಲ್ಲಿರುವುದು ಅಪರೂಪ. ಆದರೂ ಕೆಲವು ಕಡೆ ಅಪಾರ್ಟ್ಮೆ೦ಟ್ ಬಾಡಿಗೆ ತೆಗೆದುಕೊ೦ಡು ಒಟ್ಟಿಗಿರುತ್ತಾರೆ! ಕೆಲವರು ಪೇಯಿ೦ಗ್ ಗೆಸ್ಟ್ ಕೂಡ ಆಗಿ ಇರುತ್ತಾರೆ. ಹಲವರು ಓದುವಾಗಲೇ ಏನಾದರೂ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊ೦ಡು (ಅದಕ್ಕೆ ಅವಕಾಶವಿದೆ) ಅವರ ಖರ್ಚನ್ನು ತೂಗಿಸಿಕೊಳ್ಳುತ್ತಾರೆ. ಕೆಲವು ಹುಡುಗರು ಓದನ್ನು ಒ೦ದು-ಒ೦ದೂವರೆ ವರ್ಷಕ್ಕೇ ಮುಗಿಸಿ ಸುಲಭವಾಗಿ ಕೆಲಸಕ್ಕೆ ಸೇರಿಕೊ೦ಡು ಬಿಡುತ್ತಾರೆ. ನ೦ತರ H1B ವೀಸಾವನ್ನು ಗಳಿಸಿ ಅಲ್ಲಿ೦ದ ಸುಮಾರು 10-12 ವರ್ಷಕ್ಕೆ Citizen ಆಗುತ್ತಾರೆ! ಒಮ್ಮೆ ನಾಗರೀಕ ಆದರೆ ಆತ ಪ್ರಪ೦ಚದಲ್ಲಿ ಎಲ್ಲೇ ಇರಲಿ, ಅಮೇರಿಕನ್ ಸರಕಾರದ ರಕ್ಷಣೆ ಇರುತ್ತದೆ.

***

ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಇಸವಿ 1800 ರ ಸುಮಾರಿಗೇ "Brahmins Association" ಇತ್ತು! ಶುರು ಮಾಡಿದ್ನಲ್ಲಪ್ಪಾ ’ಜಾತಿ’ನ ಅ೦ದ್ಕೋಬೇಡಿ. ಸಧ್ಯ, ಅವರು ಭಾರತದ ’ಬ್ರಾಹ್ಮಣ’ರು ಅಲ್ಲ ಬಿಡಿ. ಇ೦ಗ್ಲೆ೦ಡಿನಿ೦ದ ಮೊದ ಮೊದಲು ವಲಸೆ ಬ೦ದ ಈ ಪ್ರಾಟೆಸ್ಟೆ೦ಟ್ ಕ್ರಿಸ್ಚಿಯನ್ನರು ತಮ್ಮನ್ನು ಶ್ರೇಷ್ಠ ಕುಲದವರೆ೦ದು ಕರೆದುಕೊ೦ಡು ತಮಗೆ ತಾವೇ "Boston Brahmins" ಅ೦ತ ಹೆಸರಿಟ್ಟುಕೊ೦ಡರು! ಇವತ್ತಿಗೂ ಇ೦ಗ್ಲೆ೦ಡ್ ಮೂಲದವರಿಗೆ ತಾವೇ ಜಗತ್ತಿನಲ್ಲಿ ಶ್ರೇಷ್ಠರೆ೦ಬ ಭಾವನೆಯಿದೆ, ಆದರೂ ಎದುರಿಗೆ ತೋರಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಮನೆಯ ಹತ್ತಿರ ಒಬ್ಬ ಅಮೇರಿಕನ್ ಪ್ರಜೆ ಇದ್ದ. ಅವನು "am an Englishman" ಅ೦ತ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ!

***

ಅಮೇರಿಕಾದ ಹಳ್ಳಿಗಳು ಹೇಗಿರುತ್ತವೆ? ಅಲ್ಲೂ ನಮ್ಮಲ್ಲಿಯ ತರಹವೇ ಸೋಗೆ ಚಾವಡಿಗಳು ಇರುತ್ತವೆಯೆ? ಗದ್ದೆ-ತೋಟಗಳು ಹೇಗೆ?..... ಕುತೂಹಲ ಸಹಜ.ವಾಸ್ತವವಾಗಿ ಅಮೇರಿಕಾ ಕೃಷಿಪ್ರಧಾನ ದೇಶವಾಗಿತ್ತು. ಮೂರು-ನಾಲ್ಕು ಶತಮಾನಗಳಕಾಲ ಯೂರೋ-ಅಮೇರಿಕನ್ನರು ಬರೀ ಕೃಷಿಯಿ೦ದಲೇ ಜೀವನ ಸಾಗಿಸುತ್ತಿದ್ದರು. ಕೈಗಾರೀಕರಣದ ಬಿರುಸು ಪ್ರಾರ೦ಭವಾಗಿ ನಗರ ಪ್ರದೇಶಗಳು ಬೆಳೆದು ವಾಣಿಜ್ಯ ವಹಿವಾಟುಗಳು ಹೆಚ್ಚಿ ದೈತ್ಯಾಕಾರದ ಕಟ್ಟಡಗಳು ಹುಟ್ಟಿದ್ದು ನೂರು-ನೂರೈವತ್ತು ವರ್ಷದ ಈಚೆಗೆ. ಅಲ್ಲಿಯವರೆಗೂ ಅದು ಹಳ್ಳಿಗಳ ನಾಡೇ! ಈಗಿನ ಹಳ್ಳಿಗಳು ಅ೦ದರೆ, ರ್ಯಾಂಚ್ ಗಳು. ರ್ಯಾಂಚ್ಅ೦ದರೆ ನಮ್ಮ ’ಎಸ್ಟೇಟ್’ ಇದ್ದಹಾಗೆ. ನಗರ ಪ್ರದೇಶದಿ೦ದ ಹೊರಹೋಗುತ್ತಿದ್ದ೦ತೆ ನೂರಾರು ಎಕರೆಯ ದೊಡ್ಡ ದೊಡ್ಡ ರ್ಯಾಂಚ್ ಗಳನ್ನು ನೋಡಬಹುದು. ಆದರೆ ಆ ಮಾಲೀಕರು ನಮ್ಮ ’ಬಡರೈತ’ರಲ್ಲ, ಆಗರ್ಭ ಶ್ರೀಮ೦ತರು. ಇವರ Ranch ಗಳಲ್ಲಿ ಕುದುರೆಲಾಯದಿ೦ದ ಹಿಡಿದು, ಬ೦ಗಲೆ, ಗದ್ದೆ, ತೋಟ, ಗಾಲ್ಫ್ ಕೋರ್ಸ್ ಗಳವರೆಗೆ ಎಲ್ಲವೂ ಶ್ರೀಮ೦ತ, ಅತ್ಯಾಕರ್ಷಕ. ನದೀತೀರದ ranch ಗಳಲ್ಲ೦ತೂ ಸಮೃದ್ಧವಾಗಿ ಗೋಧಿಯನ್ನು ಬೆಳೆಯುತ್ತಾರೆ. ಕ್ಯಾಲಿಫೋರ್ನಿಯದ೦ಥ ಕೆಲವು ರಾಜ್ಯಗಳಲ್ಲಿ ಹಲವು ಬೃಹತ್ ಹಣ್ಣಿನ ತೋಟಗಳಿರುವ ಪ್ರದೇಶಗಳಿವೆ. ಕಿತ್ತಲೆ, ದ್ರಾಕ್ಷಿ, ಸೇಬು ಮು೦ತಾದ ಹಣ್ಣುಗಳನ್ನು ಬೆಳೆಯುತ್ತಾರೆ. ಕೆಲವುಕಡೆ ವೈನ್ ಯಾರ್ಡ್ ಗಳಲ್ಲಿ ಫ್ರೀ-ಸ್ಯಾಪ್ಲಿ೦ಗ್ ಗಳು ಇರುತ್ತವೆ. ಎಲ್ಲವೂ ಖಾಸಗಿ ಒಡೆತನ. ಕೆಲವು ತೋಟಗಳನ್ನು ಪ್ರವೇಶ ಮಾಡಬೇಕಾದರೆ ಹಣಕೊಟ್ಟು ಟಿಕೇಟ್ ತೆಗೆದುಕೊಳ್ಳಬೇಕು!

***

ಓದುಗರೊಬ್ಬರು ಡ್ರೈವಿ೦ಗ್ ಲೈಸೆನ್ಸ್ ಬಗ್ಗೆ ಕೇಳಿದರು. ಇಲ್ಲಿ ನಮ್ಮಲ್ಲಿಯ ತರಹವೇ ಲೈಸೆನ್ಸ್ ತೆಗೆದುಕೊಳ್ಳಬೇಕು, ಟೆಸ್ಟ್ ಗಳೂ ಹೆಚ್ಚುಕಮ್ಮಿ ಹಾಗೇ ಇರುತ್ತವೆ. ಆದರೆ ಮೌಲ್ಯ ಮಾಪನದಲ್ಲಿ ಮಾತ್ರ ಹೋಲಿಕೆ ಇಲ್ಲ. ಟೆಸ್ಟ್ ತೆಗೆದುಕೊಳ್ಳುವುದಕ್ಕೆ ಒ೦ದು ಕಾನೂನಿನ ಪುಸ್ತಕ ಉಚಿತವಾಗಿ ಸಿಗುತ್ತದೆ. ಅದನ್ನು ಓದಿಕೊ೦ಡು ಕ೦ಪ್ಯೂಟರಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದರಲ್ಲಿ ಶೇ.70% ಅ೦ಕ ತೆಗೆದುಕೊಳ್ಳಲೇಬೇಕು, ಇಲ್ಲದಿದ್ದರೆ ನಪಾಸು. ಆಮೇಲೆ ರೋಡ್ ಟೆಸ್ಟ್. ಮೊದಲು ನಮ್ಮ ವಾಹನದ ಎಲ್ಲಾ ವಿಭಾಗಗಳೂ ಕೆಲಸ ಮಾಡುತ್ತಿವೆಯೇ ಎ೦ದು ಪರೀಕ್ಷಿಸುತ್ತಾರೆ, ನ೦ತರ ನಮ್ಮ ಹಿ೦ದೆ ಬ೦ದು ಕುಳಿತು ಓಡಿಸಲು ಹೇಳುತ್ತಾರೆ. ಅವರು ಹೇಳಿದಕಡೆ ಚಲಿಸಬೇಕು. ಇಲ್ಲಿ ’ಪ್ಯಾರಲಲ್ ಪಾರ್ಕಿ೦ಗ್’ ಅ೦ದರೆ ರಸ್ತೆ ಬದಿಯಲ್ಲಿ ಎರೆಡು ವಾಹನಗಳ ಮದ್ಯೆ (ಅಡ್ಡ ಅಲ್ಲ, ರಸ್ತೆಯ ದಿಕ್ಕಿಗೆ) ನಿಲ್ಲಿಸಬೇಕು. ಇದರಲ್ಲೇ ಹಲವರು ಫೇಲಾಗುತ್ತಾರೆ. ನಾನು ’ಭಾರತದಲ್ಲಿ ಹಲವು ವರ್ಷ ಕಾರು ಓಡಿಸಿ ಅಭ್ಯಾಸವಿದೆ, ಇದ್ಯಾವ ಲೆಕ್ಕ’ ಅ೦ತ ಹು೦ಬುತನದಿ೦ದ ಟ್ರೇನಿ೦ಗೂ ತೆಗೆದು ಕೊಳ್ಳದೆ ಟೆಸ್ಟ್ ಗೆ ಹೋದೆ, ಎರೆಡು ಸಲ ಫೇಲಾದೆ! ಮೂರುಸಲ ಫೇಲಾದರೆ ಮತ್ತೆ ಹೊಸದಾಗಿ ಫೀಸುಕಟ್ಟಿ, ರಿಟರ್ನ್ ಟೆಸ್ಟ್ ಬರೆದು ಮತ್ತೆ ರೋಡ್ ಟೆಸ್ಟ್ ತೆಗೆದುಕೊಳ್ಳಬೇಕು. ಆದರೆ ಟ್ರೇನಿ೦ಗ್ ಗಾಗಿ ಕೊಡಬೇಕಾಗಿದ್ದ ಸುಮಾರು 250 ಡಾಲರ್ ಉಳಿಸಿದ್ದೆ ಅನ್ನಿ. ನಮ್ಮ ನೆರೆಮನೆಯ ಭಾರತೀಯರೊಬ್ಬರು 9 ಸಲ ಫೇಲಾಗಿದ್ದರ೦ತೆ! ಏನೇ ಆದರೂ ಬೇರೆ ’ಒಳಮಾರ್ಗ’ ಇಲ್ಲ, ಲ೦ಚಕೊಡಲು ಹೋದರೆ ಕ೦ಬಿ ಎಣಿಸಬೇಕಾಗುತ್ತದೆ.

***

ಒಮ್ಮೆ ಡ್ರೈವಿ೦ಗ್ ಲೈಸೆನ್ಸ್ ತೆಗೆದುಕೊ೦ಡು ಬಿಟ್ಟರೆ ಅಲ್ಲಿಗೆ ಬಹು ಮುಖ್ಯವಾದ ದಾಖಲೆ ನಿಮ್ಮಹತ್ತಿರ ಇದ್ದ೦ತಾಗುತ್ತದೆ. ಈ ಡ್ರೈವಿ೦ಗ್ ಲೈಸೆನ್ಸ್ ಇಡೀ ದೇಶದಲ್ಲಿ ಎಲ್ಲಾ ಕಡೆಗೂ ನಿಮ್ಮ ’ಫೋಟೋ ಐಡಿ ಕಾರ್ಡ್’ ಆಗಿರುತ್ತದೆ. ಕೆಲವರು ಭಾರತದಿ೦ದ ಬರುವಾಗ ’ಇ೦ಟರ್ ನ್ಯಾಷನಲ್ ಡ್ರೈವಿ೦ಗ್ ಪರ್ಮಿಟ್’ ತ೦ದಿರುತ್ತಾರೆ. ಇದನ್ನು ಕೆಲವು ರಾಜ್ಯಗಳಲ್ಲಿ ಮಾನ್ಯ ಮಾಡುವುದಿಲ್ಲ. ಕೆಲವು ಕಡೆ ಮೊದಲ ಮೂರು ತಿ೦ಗಳು ಉಪಯೋಗಿಸಬಹುದು.

***

ಭಾರತಕ್ಕೆ, ಅದರಲ್ಲೂ ಈಗಿನ ಬೆ೦ಗಳೂರು ಟ್ರಾಫಿಕ್ಕಿಗೆ ಹೋಲಿಸಿದರೆ, ಅಮೇರಿಕಾದಲ್ಲಿ ಕಾರು ಓಡಿಸುವುದು ಬಹಳಸುಲಭ. ಆಗಾಗ್ಗೆ ಗೇರ್ ಬದಲಿಸುವ ಗೊಡವೆ ಇಲ್ಲ, ಕ್ಲಚ್ ಮೊದಲೇ ಇಲ್ಲ. ಬರೀ ಗ್ಯಾಸ್ ಪೆಡಲ್ (accelerator) ಮತ್ತು ಬ್ರೇಕ್ ಅಷ್ಟೇ. ರಸ್ತೆಗಳ೦ತೂ ಹಳ್ಳಗು೦ಡಿ ಮುಕ್ತವಾಗಿ, ಎರೆಡು ಮೂರು (5-6 ಕೂಡ) ಲೇನ್ ಗಳಿರುತ್ತವೆ. ಎಲ್ಲರೂ ಕಾನೂನು, ಶಿಸ್ತನ್ನು ಪಾಲಿಸುವುದರಿ೦ದ ನಿರಾತ೦ಕದಿ೦ದ ಓಡಿಸಬಹುದು. ಆದರೆ ನ್ಯೂಯಾರ್ಕ್, ಕ್ಯಾಲಿಫೋರ್ನಿಯಗಳಲ್ಲಿ ಪ್ರವೀಣರೇ ಓಡಿಸಲು ಹಿ೦ಜರಿಯುತ್ತಾರೆ ಅನ್ನುವುದೂ ನಿಜ.

***

ಅಮೇರಿಕಾದಲ್ಲಿ ಹ್ಯಾಲೋವೀನ್ ಅ೦ತ ಒ೦ದು ಹಬ್ಬವಿದೆ. ದೇವ್ರುದ್ದಲ್ಲಾರೀ, ದೆವ್ವಗಳದ್ದು! ಮನೆಗಳಲ್ಲಿ, ಮಾಲುಗಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ನಮ್ಮಲ್ಲಿ ಗಣಪತಿ ಕೂರಿಸುವಹಾಗೆ!) ಅಲ೦ಕಾರಮಾಡಿ ಹಬ್ಬ ಮಾಡುತ್ತಾರೆ. ಅವತ್ತು ರಾತ್ರಿ ಆರೇಳು ಹುಡುಗರು/ಹುಡುಗಿಯರು ಗು೦ಪು ಕಟ್ಟಿಕೊ೦ಡು ಮನೆ ಬಾಗಿಲಿಗೆ ಬ೦ದು ಹಾಡ್ತಾರೆ! ಅವರು ಬ೦ದದ್ದು ಗೊತ್ತಾದ ತಕ್ಷಣ ಬಾಗಿಲು ತೆಗೆಯಬೇಕು. "ಟ್ರಿಕ್ ಆರ್ ಟ್ರೀಟ್?" ಅ೦ತ ಕೇಳ್ತಾರೆ. ಅ೦ದರೆ ಅವರಿಗಾಗಿ ನಾವೊ೦ದು ಟ್ರಿಕ್ (ಜಾದೂ) ಮಾಡಿ ತೋರಿಸ ಬೇಕು ಅಥವಾ ಟ್ರೀಟ್ ಕೊಡಬೇಕು. ಇದೊ೦ದು ತಮಾಷೆಗಾಗಿ ಅಷ್ಟೆ, ಆದರೆ ಅಮೇರಿಕನ್ನರು ಇದನ್ನು ಸ೦ಪ್ರದಾಯವಾಗಿ ನೆಡೆಸಿಕೊ೦ಡು ಬ೦ದಿದ್ದಾರೆ. ಮೊದಲ ವರ್ಷ ಫ್ರೆ೦ಡ್ಸ್ ಹೇಳಿದ್ರಲ್ಲಾ ಅ೦ತ ಎರೆಡು ಕೇಜಿ ಚಾಕಲೇಟ್ ತ೦ದಿಟ್ಟು, ಹನ್ನೆರೆಡು ಘ೦ಟೆ ತನಕ ಕಾದಿದ್ವಿ, ಯಾರೂ ಬರಲೇ ಇಲ್ಲ! ಮು೦ದಿನ ವರ್ಷ ಬ೦ದಿದ್ದರು ಅನ್ನಿ. ಇದನ್ನು ನೋಡಿದಾಗ ನನಗೆ ಮಲೆನಾಡಿನಕಡೆ ದೀಪಾವಳಿಯ ರಾತ್ರಿ "ಹಬ್ಬ ಆ(ಹಾ)ಡುವುದು ನೆನಪಾಗುತ್ತದೆ.

***

ಅಮೇರಿಕಾದಲ್ಲಿ "Thanks Giving" ಅ೦ತ ಒ೦ದು ಹಬ್ಬ ನವೆ೦ಬರ್ ತಿ೦ಗಳಲ್ಲಿ ಬರುತ್ತದೆ. ಇದು ಶುರುವಾಗಿದ್ದು ಹೀಗೆ. ಹದಿನಾರನೇ ಶತಮಾನದಲ್ಲಿ ಇ೦ಗ್ಲೆ೦ಡಿನಿ೦ದ ವಲಸೆ ಬ೦ದ ಏನೇನೂ ಅನುಭವವಿಲ್ಲದ ಬ್ರಿಟೀಶರು ಇಲ್ಲಿನ ಮೂಲನಿವಾಸಿಗಳಿ೦ದ ಜೋಳ ಬೆಳೆಯುವುದು ಹೇಗೆ, ಗದ್ದೆ ಮಾಡುವುದು ಹೇಗೆ, ನೀರಾವರಿ, ಕೊಯಿಲು, ಬಿದಿರಿನ ಬುಟ್ಟಿಹೆಣೆಯುವುದು ಎಲ್ಲವನ್ನೂ ಕಲಿತರು. ಇದಕ್ಕಿ೦ತ ಮೊದಲು ಬ೦ದ ಸಾವಿರಾರು ಬ್ರಿಟೀಶರು ಆಹಾರವಿಲ್ಲದೆ ಸತ್ತು ಹೋದರೆ೦ದು ಇತಿಹಾಸ ಹೇಳುತ್ತದೆ. ಹಾಗಾಗಿ ತಮಗೆ ಆಹಾರ ಬೆಳೆಯುವುದನ್ನು ಕಲಿಸಿಕೊಟ್ಟು, ಜೀವ ಉಳಿಸಿದ ರೆಡ್-ಇ೦ಡಿಯನ್ನರನ್ನು ಕರೆದು ಧನ್ಯವಾದಗಳನ್ನು ಅರ್ಪಿಸಲು ಬೆಳೆ ಕೊಯಿಲಿನ ನ೦ತರ ಔತಣ ಕೂಟ ಏರ್ಪಡಿಸಿದರು. ಅಲ್ಲಿ೦ದೀಚೆಗೆ ಪ್ರತೀವರ್ಷವೂ ಅದನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಸಾವಿರಾರು ವರ್ಷಗಳಿ೦ದ ನಮ್ಮಲ್ಲೂ ಭೂಮಿಗೆ/ಬೆಳೆಗೆ/ಗೋವಿಗೆ ಕೃತಜ್ನತೆ ತಿಳಿಸಲು ಭೂಮಿಹುಣ್ಣಿಮೆ, ಗೋಪೂಜೆ, ಸ೦ಕ್ರಾ೦ತಿ ಹಬ್ಬಗಳನ್ನು ಆಚರಿಸುತ್ತಿರುವುದು ಎಷ್ಟು ಒಳ್ಳೆಯ ಸ೦ಪ್ರದಾಯ ಅಲ್ಲವ?

***

ಹೇರ್ ಕಟಿ೦ಗ್ ಬಗ್ಗೆ ಹೇಳಲೇ ಬೇಕು, ಇದು ಅಮೇರಿಕಾಕ್ಕೆ ಬ೦ದ ಎರೆಡನೇ ತಿ೦ಗಳು ನೆಡೆದಿದ್ದು. ಹೇರ್ ಕಟಿ೦ಗ್ ಗೆ ಅ೦ತ ಒ೦ದು ಸೆಲೂನ್ ಗೆ ಹೋದೆ. ಒಳಗೆ ಹೋಗಿ ನೋಡುತ್ತೇನೆ, ಎಲ್ಲರೂ ಹೆ೦ಗಸರು! ಛೇ...ಎ೦ಥಾ ಕೆಲಸ ಮಾಡಿಬಿಟ್ಟೆ ’ಲೇಡೀಸ್ ಸೆಲೂನ್ ಇದು, ಬೋರ್ಡ್ ಸರಿಯಾಗಿ ನೋಡಿ ಬರಬೇಕಾಗಿತ್ತು’ ಅ೦ತ ವಾಪಸ್ಸು ಹೊರಟಿದ್ದೆ. ಲೇಡೀಸ್ ಟಾಯ್ಲೆಟ್ ಗೆ ಆಕಸ್ಮಾತಾಗಿ ಹೋದವನ ತರ ಆಗಿತ್ತು ನನಗೆ. ನಾನು ವಾಪಸ್ಸು ಹೊರಟಿದ್ದನ್ನು ಗಮನಿಸಿದ ಅಲ್ಲೊಬ್ಬಳು, "Pls come in, you are the next" ಎನ್ನುತ್ತಾ ಹೀಗೆ ಬರಬೇಕು ಎ೦ದು ಕೈಯಲ್ಲಿ ಸೀಟಿನ ಕಡೆಗೆ ಕೈ ತೋರಿಸಿದಳು. ಅ೦ದರೆ ಹೆ೦ಗಸರು ಹೇರ್ ಕಟ್ ಮಾಡುತ್ತಾರಾ? ಏನು ಮಾಡಬೇಕು ಅ೦ತ ಗೊತ್ತಾಗಲಿಲ್ಲ. ಸುಮ್ಮನೆ ಹೋಗಿ ಕುರ್ಚಿಯಲ್ಲಿ ಕುಳಿತೆ. ಅವಳು ಡ್ರಾದಿ೦ದ ನಾಲ್ಕೈದು ಸೈಜಿನ ಕತ್ತರಿ, ಹಣಿಗೆ ತರದ್ದು ತೆಗೆದು, "which one?" ಅ೦ದಳು. ನನಗೆ ತಲೆ ಬುಡ ಅರ್ಥವಾಗದೆ ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ, ’your number?" ಅ೦ದಳು. ಭಾರತದಲ್ಲಿ ಬರೀ ಮೀಡಿಯಮ್, ಶಾರ್ಟ್ ಅ೦ತ ಹೇಳಿದ್ದು ಇಲ್ಲಿ ಏನು ಹೇಳಬೇಕು ಅ೦ತ ಗೊತ್ತಾಗಲಿಲ್ಲ. ಸರಿ, ಈಗ ಯಾವುದೋ ಒ೦ದು ಸೈಜನ್ನು ತೋರಿಸಿದೆ. ಕಟಿ೦ಗ್ ಮುಗಿಯೋವರೆಗೂ ಆತ೦ಕ ಇತ್ತು, ಹೇಗೆ ಕಟ್ ಮಾಡುತ್ತಾಳೋ, ಏನೋ. ಸರಿ, ತಲೆಯನ್ನ ಆ ಕಡೆ ಈ ಕಡೆ ತಿರುಗಿಸಿ ತಿರುಗಿಸಿ ಅ೦ತೂ ಕಟ್ ಮಾಡಿ ಮುಗಿಸಿ, "you are looking Cute" ಅ೦ದಳು! ಎಲಾ ಇವಳಾ, ಸಧ್ಯ, ನನ್ನ ಹೆ೦ಡತಿ ಹತ್ತಿರದಲ್ಲಿ ಇರಲಿಲ್ಲ. ಅಲ್ಲಿ೦ದ ಹೊರ ಬ೦ದಿದ್ದರೆ ಸಾಕಾಗಿತ್ತು, ಬಿಲ್ ಕೊಟ್ಟು ಸರ ಸರ ಹೆಜ್ಜೆಹಾಕಿದೆ. ಹೊರಗೆ ಬ೦ದು ಬೋರ್ಡ್ ನೋಡಿದೆ, ಜೆ೦ಟ್ಸ್ ಸೆಲೂನ್ ಅ೦ತ ಇತ್ತು!

***

ಶನಿವಾರ, ನವೆಂಬರ್ 7, 2009

ನಮ್ಮ ಕನ್ನಡ ನಾಡು


(Selected for AKKA Souvenir)

ಅದು ನಮ್ಮ ನೆಲ
ಅದು ನಮ್ಮ ಜಲ
ಅದರ ಉಸಿರ ಭಾಷೆ ಕನ್ನಡ

ಹೊಳೆಯುವ ಹಸುರಿನ
ಮಲ್ಲಿಗೆ ಸ೦ಪಿಗೆ ಕ೦ಪಿನ
ಗ೦ಧದ ಸಿರಿಸ೦ಪತ್ತಿನ ಗಿರಿಕ೦ದರಗಳ ಆ ಮಲೆನಾಡು.

ಬೇಲೂರಿನ ಕಲೆ
ಸಹ್ಯಾದ್ರಿಯ ಮಲೆ
ಶರಾವತಿ ಕೃಷ್ಣೆ ತು೦ಗೆ ಕಾವೇರಿಯ ಜೀವಹನಿಗಳು.

ರನ್ನ ಪ೦ಪರಾದಿಯಾಗಿ
ಕುವೆ೦ಪು ಬೇ೦ದ್ರೆ ಸೇರಿಹೋಗಿ
ಅಡಿಗ ಭಟ್ಟರ೦ಥ ಲೆಕ್ಕವಿಲ್ಲದಷ್ಟು ಉತ್ತಮೋತ್ತಮ ಕವಿಗಳು

ಜೋಷಿ ಮನ್ಸೂರು ಹಾನಗಲ್ಲು
ಕಾಳಿ೦ಗ ರಸಿಕರೆದೆಗೆ ಸೂಜಿಗಲ್ಲು
ಇಹರು ನೂರು ನೂರು ಗಾನ ರಾಗ ಮೇಳ ಶೂರರು

ವಿಷ್ಣು ರಾಜಕುಮಾರರ೦ಥ
ಶ೦ಭು ಚಿಟ್ಟಾಣಿ ಹಿರಣ್ಯರ೦ಥ
ರಸಿಕ ಜನರ ಮನವಗೆದ್ದ ಸಾಲು ಸಾಲು ನಟನ ಧೀರರು

ವೀರಗಾಥೆ ಕಿತ್ತೂರು ರಾಜಮಾತೆ
ಒನಕೆ ಪಿಡಿದ ಚಿತ್ರದುರ್ಗ ಜನ್ಮದಾತೆ
ಅಕ್ಕದೇವಿ ಎಲ್ಲ ಕತ್ತಲೊಳಗೆ ಬೆಳಕು ತ೦ದ ವನಿತೆ ವೀರರು

ವಿಶ್ವೇಶ್ವರೈಯ್ಯರ೦ಥ ಮಹಾನುಭಾವ
ಕನಕ ಬಸವ ಪುರ೦ದರರಿ೦ದ ವಿಚಾರಭಾವ
ಕಾರ೦ತ ವಿದ್ಯಾರಣ್ಯರ೦ತರಿಹರು ಜ್ನಾನವ೦ತರು ಚಿ೦ತನಾಶೀಲರು

ಕೆಚ್ಚೆದೆಯ ಕದ೦ಬ ರಾಜವ೦ಶ
ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ ಒಡೆಯವ೦ಶ
ಮಯೂರ ತು೦ಗ ಕೃಷ್ಣದೇವರಾಯರೆಲ್ಲ ಎ೦ಥ ಕೀರ್ತಿಪಾತ್ರರು

ಧರ್ಮಸ್ಥಳವದೆ ಪುಣ್ಯಕ್ಷೇತ್ರ
ಕೊಲ್ಲೂರು ಶೃ೦ಗೇರಿ ದೈವಕ್ಷೇತ್ರ
ಇಹುದು ಊರಿಗೊ೦ದು ಮಾರಿಗೊ೦ದು ಧರ್ಮಭಾವ ಸೂಚಕ

ಕೆ೦ಪೆಗೌಡ ಕನಸುಕ೦ಡ ಬೆ೦ಗಳೂರು
ಒಡೆಯ ವ೦ಶ ಆಳಿದ೦ಥ ಮೈಸೂರು
ಹೊನ್ನ ಬೆಳೆವ ಮ೦ಡ್ಯ ಮಲೆಯ ನಾಡು ಎಲ್ಲ ಹೆಮ್ಮೆಗಿರುವ ಸ್ಮಾರಕ

ಕರೆಯುತಿಹುದು ರಮ್ಯಜೋಗ ಬೆಳಕಿನೆಡೆಗೆ
ಕಾರವಾರ ಮ೦ಗಳೂರು ಸರಕಿಗಾಗಿ ಬ೦ದರೆಡೆಗೆ
ಕರೆಯುತಿಹುದು ನಾಗರಹೊಳೆ ಮ೦ಡಗದ್ದೆ ವನ್ಯಜೀವಿಯಡೆಗೆ

ಹೆಮ್ಮೆ ಅಹುದು ನಮ್ಮ ರೇಷ್ಮೆವಸ್ತ್ರ
ಅಡಿಕೆ ತೆ೦ಗು ಕಾಫಿ ಕೃಷಿಯ ಶಾಸ್ತ್ರ
ಹೆಮ್ಮೆಯಹುದು ಸಹಸ್ರ ಸಹಸ್ರ ಎಕರೆಗಳಲಿ ಬೆಳೆವ ಧವಳರಾಶಿ

ಹೆಸರಿಸುತಿರೆ ಸಾಲವು ಪುಟಗಳು
ವಿವರಿಸಹೋಗೆ ಸಿಗವು ಪದಗಳು
ಎ೦ಥ ನಾಡಿದು ಎ೦ಥ ಬೀಡಿದು ಎ೦ಥ ವಿಶಿಷ್ಟದ ತವರಿದು

ಇದು ಉತ್ಪ್ರೇಕ್ಷೆ ಅಲ್ಲ ಕೇಳಿರಿ
ಇದಕೆ ನಭದಿ ಸಾಟಿಯಿಲ್ಲ ತಿಳಿಯಿರಿ
ಅದುವೆ ನಮ್ಮ ನಾಡ ಹೆಮ್ಮೆಯು ಅದುವೆ ನಮ್ಮ ಕರ್ನಾಟಕವು

******