ಭಾನುವಾರ, ಸೆಪ್ಟೆಂಬರ್ 23, 2012

ನೆನಪುಗಳ ಮಾಲೆಯಲ್ಲೊ೦ದು ಅದ್ಭುತ ಪ್ರತಿಭೆ: ನರಹರಿ ದೀಕ್ಷಿತ್.


ಹಲವು ಸಲ ನಾವು ಯಾರಿಗಾದರೂ ಸಹಾಯ ಮಾಡೋಣವೆಂದರೆ ಅಂಥಹಾ ಸಮಯದಲ್ಲಿ ನಮಗೆ ಅನುಕೂಲವಿರುವುದಿಲ್ಲ. ನಮಗೆ ಅನುಕೂಲ ಇದ್ದಾಗ ಯೋಗ್ಯರು ಸಿಗುವುದಿಲ್ಲ. ಇನ್ನು, ಕೃಷ್ಣನ ಉಪದೇಶದಂತೆ  ಫಲಿತಾಂಶವನ್ನು ಲೆಕ್ಕಿಸದೇ  ಯಾರಿಗಾದರೂ ಪ್ರೋತ್ಸಾಹ ಮಾಡೋಣವೆಂದರೆ ನಾವು ಅಲ್ಲಿಯೂ ಎಡವಿಬೀಳುವ ಸಂಭವವೇ ಹೆಚ್ಚು. ಇದೆಲ್ಲದರ ಹೊರತಾಗಿ ನಮಗೆ  ಕಷ್ಟವಿದ್ದರೂ ಸಹ  ಅದೇ ಸಮಯಕ್ಕೆ ಯೋಗ್ಯರೂ ದೊರೆತು, ನಾವೂ  ಸಮಯ ಪ್ರಜ್ಞೆ ಮೆರೆದು ಸದ್ವಿನಿಯೋಗ ಆಗುವುದು ಯೋಗಾಯೋಗ. ನನಗಾಗಿದ್ದು ಹೆಚ್ಚು ಕಮ್ಮಿ ಇದೇ, ಸಮಯ ಸ್ಪೂರ್ತಿ ಕೊಟ್ಟಿದ್ದು ಮಾತ್ರ ಆ ಭಗವಂತ.

***************

(ಸೃಜನ ಸಂಗೀತ ಶಾಲೆಯ ಹತ್ತನೇ ವರ್ಷದ 'ವಾರ್ಷಿಕ ಉತ್ಸವದ' ಸ್ಮರಣ ಸಂಚಿಕೆಯಲ್ಲಿ ಈ ಬರಹ ಪ್ರಕಟವಾಗಿದೆ).


ಸುಮಾರು ಹದಿನೇಳು ಹದಿನೆ೦ಟು ವರ್ಷಗಳ ಹಿ೦ದಿನ ಮಾತು.

ಅಂದು ಬೆ೦ಗಳೂರಿನ ಮಲ್ಲೇಶ್ವರದ ಗಾಂಧೀ ಮಂದಿರದಲ್ಲಿ ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ಇತ್ತು. ನಾನು 'ಅಂತರರಾಷ್ಟ್ರೀಯ ಕವಿಗಳ ಒಕ್ಕೂಟ'ದ ನನ್ನ ಕವಿಮಿತ್ರರ ಸ೦ಗಡ ಹೋಗಿದ್ದೆ. ನನಗೆ ಸ೦ಗೀತದ ಗ೦ಧಗಾಳಿ ಇಲ್ಲದಿದ್ದರೂ ನಾನೇ ಬರೆದ ಗೀತೆಗಳನ್ನು ಹಾಡುವ ಚಟವಿತ್ತು!

ಸರಿ, ನಮ್ಮ ಕವಿ ಪು೦ಗವರ ಗು೦ಪಿನಲ್ಲಿ ನಾನೂ ಒಬ್ಬವನು ಅ೦ತ ಭಾಗವಹಿಸಿದ್ದೆ. ಶ್ರೀಯುತ ಶಿವಮೊಗ್ಗ ಸುಬ್ಬಣ್ಣನವರು ನಿರ್ಣಾಯಕರಾಗಿ ಬ೦ದಿದ್ದರು. ನನ್ನ ಸರದಿ ಬ೦ತು, ಹಾಡಿದೆ. ನನ್ನ ಶಾರೀರ ಅಷ್ಟಕ್ಕಷ್ಟೇ ಆಗಿದ್ದರೂ ಸ್ವತಃ ಬರೆದ ಹಾಡಿಗಾದರೂ ಒ೦ದೆರಡು ಅ೦ಕ ಜಾಸ್ತಿ ಬರುತ್ತದೇನೋ ಅನ್ನುವ ದೂರದ ದುರಾಸೆ ಇತ್ತು ಅನ್ನಿ. ಕಾರ್ಯಕ್ರಮದಲ್ಲಿ  ಇನ್ನೇನು ಮೂರ್ನಾಲ್ಕು ಸ್ಪರ್ಧಿಗಳಿದ್ದರು, ಮುಂದುವರೆಯುತ್ತಿತ್ತು..

ಅಷ್ಟೊತ್ತಿಗೆ ಒಬ್ಬ ಸ್ಫುರದ್ರೂಪಿ ಯುವಕ ಒ೦ದು ಬಿಳಿಯ ಜುಬ್ಬಾ ಹಾಕಿಕೊ೦ಡು ಸ್ಟೇಜಿನ ಮೇಲೆ ಬ೦ದು ನಿ೦ತ. ಗ೦ಟಲು ಸರಿಮಾಡಿಕೊ೦ಡು ತಾನು ಸ್ವಾಮಿ ವಿವೇಕಾನ೦ದರ ಗೀತೆಯೊ೦ದನ್ನು ಹಾಡುತ್ತೇನೆ ಅ೦ದ. ಅದೆ೦ಥಾ ಕ೦ಠಾರೀ!,
ಅಲ್ಲಲ್ಲಿ ಗುಸುಗುಸು ಮಾಡುತ್ತಿದ್ದ ಇಡೀ ಸಭಾ೦ಗಣದ ಸದ್ದಡಗಿ ಹೋಗಿತ್ತು. ಮಧುರ ಸ್ವರದ, ಸ್ಪಷ್ಟ ಉಚ್ಚಾರಣೆಯ  ಹಾಡು ಮುಗಿಯುತ್ತಿದ್ದ೦ತೆ, ಆ ಮಹಾನ್ ವಿವೇಕಾನ೦ದರಿಗೆ ಶಿಕ್ಯಾಗೋದಲ್ಲಿ ಚಪ್ಪಾಳೆ ತಟ್ಟಿದ್ರ೦ತಲ್ಲಾ, ಅದೇ ತರ ಕರತಾಡನ  ನಮ್ಮ 45-50 ಜನರ ಪುಟ್ಟ ಗುಂಪಿನಿಂದ, ಜಡ್ಜೂ ಸೇರಿ, ಇಡೀ ಸಭೆಯಿ೦ದ ಮೆಚ್ಚುಗೆ. ಹೌದು ನಿಸ್ಸ೦ಶಯವಾಗಿ ಆತನಿಗೇ ಪ್ರಥಮ ಬಹುಮಾನ ಬ೦ದಿತ್ತು.

ಆ ಮಧುರ ಕ೦ಠದ ಸು೦ದರ ಯುವಕ ಮತ್ಯಾರೂ ಅಲ್ಲ, ಇದೇ ನಮ್ಮ ನರಹರಿ ದೀಕ್ಷಿತ್, ಮ೦ಚಾಲೆ.
(ಮಂಚಾಲೆ ಎನ್ನುವುದು ಶಿವಮೊಗ್ಗ- ಸಾಗರ ಹತ್ತಿರದ ಒಂದು ಹಳ್ಳಿ)

ಸರಿ, ಕಾರ್ಯಕ್ರಮ ಮುಗಿದು ವಾಪಸ್ಸು ಮನೆಗೆ ಹೊರಡುವಾಗ, ಯಕಃಶ್ಚಿತ್ ಸಮಾಧಾನಕರ ಬಹುಮಾನ ಹಿಡಿದು ನಡೆದು ಹೋಗುತ್ತಿದ್ದ ನನ್ನನ್ನು - ಪ್ರಥಮ ಬಹುಮಾನ ಬ೦ದ ನರಹರಿ ದೀಕ್ಷಿತ್ ಬ೦ದು ಮಾತನಾಡಿಸಬೇಕೇ?!
ನನಗೆ ಸ0ತೋಷ ಮತ್ತು ಆಶ್ಚರ್ಯ ಎರೆಡೂ ಒಮ್ಮೆಲೇ ಆದವು. ಹಾ೦, ಅದು ನನ್ನ ಹಾಡಿಗ೦ತೂ ಅಲ್ಲ ಬಿಡಿ. ನನ್ನ ಹೆಸರಿನ ಮು೦ದೆ ಊರಿನ ಹೆಸರಿತ್ತು 'ತಲಕಾಲಕೊಪ್ಪ' ಎಂದು. ನರಹರಿಯವರಿಗೆ ನಮ್ಮ ಊರಿನ ಪರಿಚಯವಿತ್ತು. ಹೀಗೆ ಪರಿಚಯವಾಗಿ ಕೆಲದಿನಗಳಲ್ಲೇ ಆತ್ಮೀಯರಾಗಿ ಬಿಟ್ಟೆವು.



ನಾನು ಬೆಂಗಳೂರಿನ ಎನ್ನಾರ್ ಕಾಲನಿಯಲ್ಲಿ ರೂಮು ಮಾಡಿಕೊಂಡು ಇದ್ದಾಗ ನರಹರಿ ಅಲ್ಲಿಯೇ ಬಸವನಗುಡಿಯಲ್ಲಿದ್ದರು. ಹಾಗಾಗಿ ಆಗಾಗ್ಗೆ ಭೇಟಿಯಾಗುತ್ತಿದ್ದೆವು. ಅಷ್ಟರಲ್ಲೇ ನರಹರಿ ತಮ್ಮ ಪ್ರತಿಭೆಯನ್ನು, ಇರವನ್ನು
ಹೊರಜಗತ್ತಿಗೆ ತೋರಿಸಿದ್ದರು, ಬಹುಮಾನಗಳ ಸುರಿಮಳೆಯಾಗಿತ್ತು.
 

ಒಮ್ಮೆ (1995?) ಅವರ ಮನೆಗೆ ಹೋಗಿದ್ದೆ. ಸ೦ಕೋಚ ಬಿಟ್ಟು ಹೇಳುವುದಾದರೆ ಅದು ಮನೆಯಲ್ಲ ಬಿಡಿ, ಅದೊ೦ದು ಪುಟ್ಟ ರೂಮು ಎನ್ನಬಹುದು. ಉದ್ದಕ್ಕೆ ಕಾಲುಚಾಚಿ ಮಲಗಲೂ ಕಷ್ಟವಾಗುವಾಗ ಬ೦ದ ನೂರಾರು ಪ್ರಶಸ್ತಿಗಳನ್ನು ಫಲಕಗಳನ್ನು ಎಲ್ಲಿ ಇಡುವುದಕ್ಕೆ ಸಾಧ್ಯ?
'ಛೇ ... ಹಣಕಾಸಿನ ಮುಗ್ಗಟ್ಟಿನಿಂದ ಅವುಗಳನ್ನು ಎಲ್ಲಾದರೂ ಮಾರಿಬಿಟ್ಟನೇ?' ಅ೦ತ ಅನುಮಾನವಾಗಿ, ಕುತೂಹಲದಿಂದ  ಕೇಳಿದೆ. ನಿರ್ಭಾವದಿಂದ ಸಜ್ಜಾ ಮೇಲಿದ್ದ ಎರೆಡು ಹಳೆಯ ಗೋಣೀಚೀಲಗಳತ್ತ ಕೈತೋರಿಸಿದರು ನರಹರಿ.
ಹರಿದು ಹರಿದು ಹೋದರೂ ಮೈದುಂಬಿ ಕೊಂಡಿದ್ದ ಆ ಎರೆಡು ದೊಡ್ಡ ಗೋಣೀಚೀಲಗಳಿ೦ದ ಎರೆಡು ಮೂರು ಪಾರಿತೋಷಕಗಳು ಅಣಕಿಸುತ್ತಾ ಇಣುಕಿ ನೋಡುತ್ತಿದ್ದವು.

ಹಲವು ಶ್ರೀಮಂತರ ಐಷಾರಾಮದ ಬ೦ಗಲೆಗಳ ಷೋಕೇಸುಗಳಲ್ಲಿ ಇಡುವುದಕ್ಕೆ ಏನೂ ಇಲ್ಲದೇ ಕೊನೆಗೆ ಯಾವುದೋ ಚೀನಾದ ಪಿಂಗಾಣಿ ಆಟಿಕೆಗಳು, ಟೆಡ್ಡಿಬೇರ್ ಬೊ೦ಬೆಗಳನ್ನು ಇಡುವ ಮನೆಗೂ-ಈ ಪ್ರತಿಭಾವ೦ತನ ಮನೆಗೂ ಇರುವ ವ್ಯತ್ಯಾಸ ನೋಡಿ. ಸರಸ್ವತಿ-ಲಕ್ಷ್ಮಿ ಯಾಕೆ ಹಾಗೆ ದ್ವೇಷಿಸುತ್ತಾರೋ ಹಲವು ಬಾರಿ ಅರ್ಥವಾಗುವುದಿಲ್ಲ. ನನಗೆ ಬಹಳ ದುಖಃವಾಯಿತು. ಕಣ್ಣಿ೦ದ ನನಗರಿವಾಗದೇ ಹನಿಗಳು ಉದುರಿದವು. ಅದನ್ನು ತೋರಿಸಿಕೊಳ್ಳದೇ ನನ್ನ ರೂಮಿಗೆ ಬ೦ದು ಒ೦ದು ಧೃಡ ನಿರ್ಧಾರ ಮಾಡಿದೆ, ನರಹರಿಗೆ ಹೇಗಾದರೂ ಸಹಾಯ ಮಾಡಬೇಕು.

ನರಹರಿ ಆಗಿನ ದಿನಗಳಲ್ಲಿ ನಡೆದೋ, ಸೈಕಲ್ ಹೊಡೆದುಕೊ೦ಡೋ ದೂರದ ಜಾಗಗಳಿಗೆ ಹೋಗಿ ಸ೦ಗೀತದ ಪಾಠ ಹೇಳುತ್ತಿದ್ದರು, ಜತೆಗೆ ಸ೦ಜೆ ಕಾಲೇಜಿನಲ್ಲಿ ಓದನ್ನೂ ಮು೦ದುವರೆಸುತ್ತಿದ್ದರು. ಬಹಳಕಷ್ಟಪಟ್ಟು, ಪ್ರಾಮಾಣಿಕವಾಗಿ ದುಡಿಯುತ್ತಿದ್ದರು. ಹಲವುಬಾರಿ ನನ್ನಿ೦ದ ಹಣ ತೆಗೆದುಕೊ೦ಡು, ಬೇಡವೆ೦ದರೂ ಪ್ರಾಮಾಣಿಕವಾಗಿ ವಾಪಾಸ್ ಕೊಟ್ಟುಬಿಡುತ್ತಿದ್ದ ಶಿಸ್ತಿನ ಮನುಷ್ಯ. ಇ೦ಥವರನ್ನು ಕ೦ಡರೆ ಯಾರಿಗೆ ತಾನೇ ಅಭಿಮಾನವಾಗುವುದಿಲ್ಲ?

ಆಗ ನಾನೇನೂ ಅ೦ಥಾ ಸ್ಥಿತಿವ೦ತನಾಗಿರಲಿಲ್ಲ, ಆದರೆ ದೇವರು ಯಾವತ್ತೂ ಐಡಿಯಾಗಳಿಗೆ ಕಡಿಮೆ ಮಾಡಿರಲಿಲ್ಲ ಬಿಡಿ. ಆ ದಿನಗಳಲ್ಲಿ ಬ್ಯಾ೦ಕ್ ಸಾಲದ ಹಣ ಇಷ್ಟು ಸಲೀಸಾಗಿ ಸಿಗುತ್ತಿರಲಿಲ್ಲ. ಅದೂ ನಮ್ಮಂಥಾ ಸಾಮಾನ್ಯರಲ್ಲಿ ಸಾಮಾನ್ಯ ಜನಕ್ಕೆ ಎಲ್ಲಿಂದ ಬ್ಯಾಂಕ್ ಸಾಲ?

ಅದಿರಲಿ, ಮರುದಿನವೇ ನರಹರಿಯನ್ನು ಭೇಟಿಯಾಗಿ ಮಾತನಾಡಿದೆ.

"ಸೈಕಲ್ ಹೊಡೆಯುವುದರ ಬದಲು ಒ೦ದು ಸಣ್ಣ ದ್ವಿಚಕ್ರವಾಹನವನ್ನು ತೆಗೆದುಕೊ೦ಡರೆ ಸಮಯ,ಶ್ರಮ ಉಳಿತಾಯವಾಗಿ ಅದನ್ನು ಇನ್ನೂ ಹೆಚ್ಚು ದುಡಿಮೆಗೆ ಬಳಸಬಹುದು, ಅದು ಪೆಟ್ರೋಲಿಗೂ, ಕ೦ತು ತು೦ಬುವುದಕ್ಕೂ ಸಾಕಾಗುತ್ತದೆ. ಅದಕ್ಕೆ ಪರಿಚಯವಿರುವ ಬ್ಯಾ೦ಕ್ ಮ್ಯಾನೇಜರರನ್ನು ನೋಡಿದರೆ ಕೆಲಸವಾಗುತ್ತದೆ" ಅ೦ದೆ.ನರಹರಿಗೆ ಇದು ಹಿಡಿಸಿ, ಅವರ ಶಿಷ್ಯರೊಬ್ಬರ ತ೦ದೆ - ಬ್ಯಾ೦ಕ್ ಮ್ಯಾನೇಜರ್ ಆಗಿದ್ದರು, ನರಹರಿ ಬಿನ್ನವಿಸಿಕೊ೦ಡರು.


ಅವರು ಒಳ್ಳೆಯತನ ಮೆರೆದು ಸಹಾಯ ಮಾಡಲು ಒಪ್ಪಿದರು, ಕೆಲಸವಾಯಿತು. ಆವತ್ತು ತೆಗೆದು ಕೊ೦ಡ ಟಿವಿಎಸ್-50, ಬೆ೦ಗಳೂರಿನ ಅದೆಷ್ಟು ರಸ್ತೆಗಳಲ್ಲಿ ಸುತ್ತಾಡಿದೆಯೋ ಆ ಮೋಪೆಡ್ ಗೂ ನರಹರಿಗೂ ಮಾತ್ರ ಗೊತ್ತು!

ಇನ್ನೊಮ್ಮೆ ಹವ್ಯಕಮಹಾಸಭೆಯಲ್ಲಿ ಪ್ರತಿಭಾ (ಸ೦ಗೀತ) ಸ್ಪರ್ಧೆ ಇತ್ತು. ಅಲ್ಲಿಯ ನಿಯಮಾವಳಿಗಳ ಪ್ರಕಾರ ಭಾಗವಹಿಸುವವರು ಹವ್ಯಕರಾಗಿರಬೇಕು. ಮತ್ತು ಅದನ್ನು ಯಾರಾದರೂ ಆಜೀವ ಸದಸ್ಯರು ಧೃಡೀಕರಿಸಬೇಕು. ’ನರಹರಿ ದೀಕ್ಷಿತ್’ ಹವ್ಯಕರು ಹೌದೋ ಅಲ್ಲವೋ ಯಾರಿಗೆ ಗೊತ್ತು? ಬೆ೦ಗಳೂರಿಗೇ ಹೊಸಬರಾಗಿದ್ದ ನರಹರಿಗೆ ಯಾರು ತಾನೇ ಧೃಡೀಕರಿಸಿಯಾರು?

’ಹವ್ಯಕ’ ಕ್ಕೆ ಅ೦ಥಾ ಪ್ರತಿಭೆಯನ್ನು ಪರಿಚಯಿಸುವ ಸ೦ದರ್ಭ ಒದಗಿ  ಬ೦ದಿದ್ದು ನನ್ನ ಭಾಗ್ಯವೆ೦ದೇ ಹೇಳಬೇಕು.
ನ೦ತರ ಸ್ಪರ್ಧೆಯ ರಿಸಲ್ಟ್ ಏನು ಗೊತ್ತೇ? ನರಹರಿಗೆ ಪ್ರಥಮ ಬಹುಮಾನ. ಮತ್ತೆ ಮರುವರ್ಷ ಮತ್ತೆ ಮತ್ತೆ ಪ್ರಥಮಗಳು ನರಹರಿಗೇ ಬ೦ದಾಗ ಅಲ್ಲಿಯ ಸ೦ಘಟಕರು, ಇನ್ನು ಹಾಡಿದ್ದು ಸಾಕು, ನಿರ್ಣಾಯಕರಾಗಿ (Judge)  ಬನ್ನಿ ಎ೦ದರು. ಅಲ್ಲಿ೦ದ ಮು೦ದೆ ನರಹರಿ ಹಿ೦ತಿರುಗಿ ನೋಡಿದ್ದೇ ಇಲ್ಲ. ಇವತ್ತು ಹವ್ಯಕ ಮಹಾಸಭಾ ಸಾಂಸ್ಕೃತಿಕ  ಕಾರ್ಯಕ್ರಮಗಳಲ್ಲಿ 'ನರಹರಿ ದೀಕ್ಷಿತ್' ದೊಡ್ಡ ಪರಿಚಿತ ಹೆಸರು.

ಆಗ ಕರ್ನಾಟಕದ ಹಲವು ಕಡೆ ನಡೆಯುತ್ತಿದ್ದ ಎಷ್ಟೋ ಸ್ಪರ್ಧೆಗಳಲ್ಲಿ ’ನರಹರಿ ದೀಕ್ಷಿತ್ ಭಾಗವಹಿಸಿದ್ದಾರೆ’ ಅ೦ದರೆ ಇವರ೦ತೇ ಕೆಲವು ದೊಡ್ಡ ಪ್ರತಿಭೆಗಳಿಗೆ, ತಮಗೆ ಬರಲೇ ಬೇಕಾದ ಬಹುಮಾನದ ಬಗ್ಗೆ ಅನುಮಾನ ಶುರುವಾಗುತ್ತಿತ್ತು. ಎಲ್ಲೆಲ್ಲೂ ಪ್ರಥಮ ಅಥವಾ  ತೀವ್ರ ಪೈಪೋಟಿಯೊ೦ದಿಗೆ ದ್ವಿತೀಯ ಬಹುಮಾನ ನರಹರಿಗೇ ಮೀಸಲು. ಒ೦ದು ಕಡೆ ಬಹುಮಾನಗಳ ಸುರಿಮಳೆಯಾದರೆ, ಇನ್ನೊ೦ದು ಕಡೆ ದಾರುಣವಾದ ಆರ್ಥಿಕ ಮುಗ್ಗಟ್ಟು.

ತನ್ನನ್ನು ನಂಬಿಕೊಂಡ ಮನೆಯವರಿಗೂ ಸಹಾಯಮಾಡಿ, ಒಡಹುಟ್ಟಿದ ಸಹೋದರಿಯರನ್ನೂ ಜವಾಬ್ದಾರಿಯಿದ ಮದುವೆ ಮಾಡಿಕೊಟ್ಟು ಅವರನ್ನು ದಡಮುಟ್ಟಿಸಿದ ಧೀರ ಈತ ಎನ್ನುವುದು ಹಲವು ಅಭಿಮಾನಿಗಳಿಗೆ ಗೊತ್ತಿರಲಾರದು. ನರಹರಿ ತಮ್ಮ ಹುಡುಗು ಬುದ್ದಿಯ ದಿನಗಳನ್ನು ಸೋಮಾರಿಯಾಗಿ, ’ಮಜಾ’ ಮಾಡುತ್ತಾ ಕಳೆಯದೇ ಅತ್ಯ೦ತ ಜಾಗರೂಕತೆಯಿದ, ಶಿಸ್ತಿನಿ೦ದ, ಶ್ರಮಪಟ್ಟು ಬೆಳೆಸಿದ್ದ ಬೆಳೆ ಇವತ್ತು ಫಲಕೊಡುತ್ತಿದೆ ಎದು ನಾನು ನಿಸ್ಸಂಶಯವಾಗಿ ಹೇಳಬಲ್ಲೆ.

ನರಹರಿಗೆ ಗಾಡ್ ಫಾದರ್ರೋ, ಶಿಫಾರಸು ಮಾಡಿ ಮೇಲೆತ್ತುವವರೋ ಯಾರೂ ಇರಲಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ನರಹರಿಯಲ್ಲಿ ಮತ್ತೊ೦ದು ಉತ್ತಮ ಗುಣವೆ೦ದರೆ ತನ್ನ ಕಷ್ಟದದಿನಗಳನ್ನೂ, ಆಗ ಸಹಾಯಮಾಡಿದವರನ್ನೂ ಮರೆಯದಿರುವುದು. ಮಾತನಾಡಿಸಿದರೆ ಸಾಕು ಆತ್ಮೀಯನ೦ತೆ, ನೆರೆಮನೆಯ-ತೀರ ಪರಿಚಯ ಇರುವವರ೦ತೆ ಹತ್ತಿರವಾಗುವ ನರಹರಿ ಉತ್ತಮ ಮಾತುಗಾರ ಕೂಡ ಹೌದು.

ದಿಗ್ಗಜಗಳಿ೦ದ ಹೊಗಳಿಸಿಕೊಳ್ಳುತ್ತಾ, ಗುಣವ೦ತ ಹೆ೦ಡತಿ, ಲಕ್ಷಣವಾದ ಮಕ್ಕಳೊ೦ದಿಗೆ ಬೆ೦ಗಳೂರಿನಲ್ಲಿ ಸ್ವ೦ತ ಮನೆಯಲ್ಲಿ ಬಾಳುತ್ತಿರುವ ನರಹರಿಯನ್ನು ಇ೦ದು ಯಾರಾದರೂ ನೋಡಿದರೆ ’ಅದೃಷ್ಟವ೦ತ’ ಅನ್ನ ಬಹುದು. ಆದರೆ ಅವರ ಹಿನ್ನೆಲೆ, ಪಟ್ಟ ಶ್ರಮವನ್ನು ಅವಲೋಕಿಸಿದರೆ, ಅದರ ಫಲವೇ ಇದು ಅನ್ನುವುದು ತಿಳಿದೀತು.

ಇವರದ್ದು ಏಕ ಶಿಕ್ಷಕ ಸ೦ಗೀತ ಶಾಲೆ. ಅಂದರೆ ಆ ಸಮಯಕ್ಕೆ ಶಿಷ್ಯರ ಮನೆಗಳೇ ಶಾಲೆಯಾಗುವ ಇವರ ಶಿಕ್ಷಣಕ್ರಮವೇ ಹೊಸರೀತಿಯದ್ದು, ನವ್ಯ ಆಯಾಮದ್ದು. ಮಕ್ಕಳಿಗೆ ಸ೦ಗೀತದ ಜತೆಗೆ ಉತ್ತಮ ಸ೦ಸ್ಕೃತಿಯನ್ನೂ ತಿಳಿಹೇಳುವುದು ಇನ್ನೊ೦ದು ವಿಶೇಷ. ಇವರ ಶಾಲೆಯಲ್ಲಿ ಕಲಿತ ಬಹುತೇಕ ಮಕ್ಕಳು ಹಲವು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಕೊಳ್ಳೆಹೊಡೆಯುತ್ತಿರುವಾಗ ಇದರ ಹಿ೦ದಿರುವ ಆ ಮಹಾನ್ ಶಿಕ್ಷಕ ಪ್ರತಿಭೆ ಎ೦ಥಾದ್ದಿರಬಹುದು.....?

ಇ೦ಥಾ ಪಾಠಕ್ರಮ ಇ೦ದು (ಅಧಿಕೃತ) ಹತ್ತನೇ ವರ್ಷವನ್ನಾಚರಿಸುತ್ತಿದೆ. ಈ ಶಾಲೆ ಇಡೀ ಕರ್ನಾಟಕಕ್ಕೇ - ಅಷ್ಟೇಕೆ  ದೇಶಕ್ಕೇ  ಮಾದರಿಶಾಲೆಯಾಗಲಿ, ನರಹರಿ ದೀಕ್ಷಿತ್, ಸ೦ಗೀತ ದಿಗ್ಗಜರ ಸಾಲಿಗೆ ಸೇರಲಿ ಎ೦ಬುದೇ ನನ್ನ ತು೦ಬುಹೃದಯದ ಹಾರೈಕೆ.

ನಮ್ಮ ಹತ್ತಿರದ ಆತ್ಮೀಯರೊಬ್ಬರು ಹಲವು ಸಸಿ-ಗಿಡ-ಮರಗಳಿಗೆ ಆಶ್ರಯವಾಗಿ ಇ೦ದು ಬೃಹತ್ ವೃಕ್ಷವಾಗಿ ಬೆಳೆದು ನಿ೦ತಿರುವುದು ಮಹಾನ್ ಸಾಧನೆ ಎ೦ಬುದಕ್ಕೆ, ಹಿ೦ದಿನ ದಿನಗಳನ್ನು ನೆನೆಸಿಕೊಳ್ಳುವಾಗ ನನ್ನ ಕಣ್ಣಿನಿಂದ ಹನಿ ಹನಿಯಾಗಿ  ಬರುತ್ತಿರುವ ಈ ನನ್ನ ಆನ೦ದ ಭಾಷ್ಪಗಳೇ ಸಾಕ್ಷಿ.

(ನರಹರಿಯವರ ಬಗ್ಗೆ ಇನ್ನೊ೦ದು ಬರಹ - ಇಲ್ಲಿ ಕ್ಲಿಕ್ಕಿಸಿ

http://oppanna.com/?p=24881 )