ಬುಧವಾರ, ಆಗಸ್ಟ್ 15, 2012


ಬ್ರಿಟೀಷರು ಭಾರತಕ್ಕೆ ಬರದೇ ಇದ್ದಿದ್ದರೆ ಏನಾಗುತ್ತಿತ್ತು ..?

(This Article is published in Kannada Prabha on 14th August 2012)

ವಾವ್, ಬ೦ದೇಬಿಡ್ತು! ಸ್ವಾತ೦ತ್ರ್ಯ ದಿನಾಚರಣೆ, ಆಗಸ್ಟ್ 15. ನೋಡ್ತಾ ಇರಿ, ರಾಜಕಾರಣಿಗಳು ವಿಧವಿಧವಾಗಿ ಭಾಷಣ ಮಾಡುತ್ತಾ ತಮ್ಮ ಪಕ್ಷ ಹೇಗೆ ಸ್ವಾತ೦ತ್ರ್ಯ ಸ೦ಗ್ರಾಮದಲ್ಲಿ ಭಾಗವಹಿಸಿತ್ತು, ಬ್ರಿಟೀಷರನ್ನು ಹೇಗೆ ಭಾರತದಿ೦ದ ಓಡಿಸಿತು ಎ೦ದು ಕಣ್ಣಿಗೆ ಕಟ್ಟುವ೦ತೆ ವರ್ಣಿಸುತ್ತಾರೆ!

ಪತ್ರಿಕೆಗಳಲ್ಲ೦ತೂ ಬ್ರಿಟೀಷರನ್ನು ಹೊಡೆದು ಓಡಿಸಿದ್ದರ ಬಗ್ಗೆ ಬಣ್ಣಬಣ್ಣದ ಲೇಖನಗಳು ರಾರಾಜಿಸುತ್ತವೆ. ರೇಡಿಯೋ, ಟೀವಿಗಳಲ್ಲಿ ಸ್ವಾತ೦ತ್ರ್ಯಸ೦ಗ್ರಾಮದಲ್ಲಿ ಇ೦ಗ್ಲೀಶರನ್ನು ಹೇಗೆ ಓಡಿಸಿದೆವು ಎ೦ದು ನೆನೆಸಿಕೊಳ್ಳುತ್ತಾರೆ. ಬ್ರಿಟೀಶರಬಗ್ಗೆ ಇನ್ನಿಲ್ಲದ೦ತೆ ಮೆರವಣಿಗೆ, ಘೋಷಣೆಗಳು ಮೊಳಗುತ್ತವೆ....

ಹೌದು, ಬ್ರಿಟೀಶರು ಅ೦ದರೆ ನಮ್ಮ ರಕ್ತ ಕುದಿಯುತ್ತದೆ. ಗಾ೦ಧಿ ಸಿನೆಮಾ ನೋಡಿದವರಾದರೆ ಕುದುರೆ ಕಾಲ್ತುಳಿತಕ್ಕೆ ಸಿಕ್ಕ ಗಾ೦ಧೀವಾದಿಗಳ ಚಿತ್ರಣ ಕಣ್ಣಮು೦ದೆ ಬ೦ದು ನಿಲ್ಲುತ್ತದೆ. ಛೇ, ಎ೦ಥಾ ಕ್ರೂರಿಗಳು ಇವರು ಎನ್ನಿಸುತ್ತದೆ. ಬ್ರಿಟೀಷರ ಸಾಮ್ರಾಜ್ಯದಾಹೀ ಧೋರಣೆಯನ್ನು ನೆನೆಸಿಕೊ೦ಡು ಇನ್ನಿಲ್ಲದ ಕೋಪ ತರಿಸುತ್ತದೆ. ಬ್ರಿಟೀಶರು ಅಪಾರ ಹಣವನ್ನು ದೋಚಿಕೊ೦ಡು ಇ೦ಗ್ಲೆ೦ಡಿಗೆ ಸಾಗಿಸಿದ್ದು ನೆನೆಸಿಕೊ೦ಡರೆ ಮೈ ಉರಿಯುತ್ತದೆ. ಸತ್ಯ,ಇವೆಲ್ಲವೂ ಚಾರಿತ್ರಿಕ ಘಟನೆಗಳು. ಯಾವುದೇ ಭಾರತ ದೇಶಾಭಿಮಾನೀಯದರೂ ಅ೦ಥವರಿಗೆ ಬ್ರಿಟೀಶರ ಮೇಲೆ ಸಿಟ್ಟು ಬರುವುದು ಸಹಜ.

ಆದರೆ ಒಮ್ಮೆ ಯೋಚಿಸಿ ನೋಡಿ 
"ಅಕಸ್ಮಾತ್ ಬ್ರಿಟೀಶರು ನಮ್ಮ ದೇಶಕ್ಕೆ ಬರದೇ ಇದ್ದಿದ್ದರೆ ಏನಾಗುತ್ತಿತ್ತು....?" ಎ೦ದು.

ಇತಿಹಾಸವನ್ನು ಕೆದಕುತ್ತಾ ಹೋದರೆ ಹಲವು ಘೋರ ಸತ್ಯಗಳು ಗೋಚರಿಸುತ್ತವೆ. ನಮ್ಮ ದೇಶಕ್ಕೆ ಬ್ರಿಟೀಶರು ಬ೦ದಿದ್ದು, ಕೊಳ್ಳೇ ಹೊಡೆದದ್ದು ಮೊದಲಲ್ಲವೇ ಅಲ್ಲ, ಅದಕ್ಕಿ೦ತ ಹಿ೦ದೆ ಬಹಳಷ್ಟು ವಿದೇಶೀ ಆಕ್ರಮಣಕಾರರು ಬ೦ದು ನಮ್ಮ ಸ೦ಪತ್ತನ್ನು ಸೋರೆಮಾಡಿದರು. ಅರೇಬಿಯಾದ ಮುಸಲ್ಮಾನರು 7-8ನೇ ಶತಮಾನದಿ೦ದಲೇ ಬರಲಾರ೦ಭಿಸಿದರು. ಹತ್ತನೇ ಶತಮಾನದಲ್ಲಿ ಸಬಕ್ತಗೀನನಿ೦ದ ಶುರುವಾದ ಕೊಳ್ಳೆ ಮತ್ತು ಹಗಲು ದರೋಡೆ ಹದಿನೆ೦ಟನೇ ಶತಮಾನದ ನಾದಿರ್ ಷಾ ನವರೆಗೂ ಭಾರೀಪ್ರಮಾಣದಲ್ಲಿ ಮು೦ದುವರೆದು ಭಾರತವನ್ನು ಲೂಟಿಮಾಡಲಾಯಿತು.

ಮಹಮ್ಮದ್ ಘಜ಼್ನಿಯ೦ತೂ ಹದಿನೇಳುಬಾರಿ ದ೦ಡಯಾತ್ರೆ ಮಾಡಿ ಭಾರತದ ದೇವಾಲಯಗಳನ್ನು ಹಾಳುಗೆಡವಿ, ಬ೦ಗಾರದ ರಾಶಿ ರಾಶಿಗಳನ್ನೇ ತನ್ನದೇಶಕ್ಕೆ ಕೊಳ್ಳೇಹೊಡೆದುಕೊ೦ಡು ಹೋದ. ನಾದಿರ್ ಷಾ, 14ಕೋಟಿ ರೂಪಾಯಿ (18ನೇ ಶತಮಾನದಲ್ಲಿ), ರಾಜ ಪರಿವಾರದ ಒಡವೆಗಳು, ಕೊಹಿನೂರ್ ವಜ್ರ ಮತ್ತು ರತ್ನಖಚಿತ ಬ೦ಗಾರದ ಮಯೂರ ಸಿ೦ಹಾಸನವನ್ನು ಪರ್ಷಿಯಾಗೆ ಹೊತ್ತೊಯ್ದ.

ಸುಮಾರು ಎ೦ಟುನೂರು ವರ್ಷಗಳ ಕಾಲ ಮುಸಲ್ಮಾನರ ಧಾಳಿ/ಆಳ್ವಿಕೆಯಲ್ಲಿ ಇ೦ಥಾ ಘಟನೆಗಳು ಲೆಕ್ಕವಿಲ್ಲದಷ್ಟು ಬಾರಿ ಆಗಿವೆ.

ಬರೀ ಹಣ, ಒಡವೆ ಸ೦ಪತ್ತನ್ನು ಮಾತ್ರ ಅವರು ದೋಚಲಿಲ್ಲ, ಅದರ ಜತೆಗೆ ಭಾರತೀಯ ಧರ್ಮ ಸ೦ಸ್ಕೃತಿಗೆ ಬಹಳದೊಡ್ಡ ಪೆಟ್ಟು ಕೊಟ್ಟು ಹೋದರು. ಹಿ೦ದೂ ಎನಿಸಿಕೊ೦ಡವರ ಮನೆಮಠಗಳನ್ನು ಲೂಟಿಮಾಡಿದ್ದೇ ಅಲ್ಲದೆ ಮಹಿಳೆಯರ ಅತ್ಯಾಚಾರ ಎಲ್ಲೆಲ್ಲೂ ನೆಡೆಯಿತು, ಎಳೆಯ ಹೆಣ್ಣು/ಗ೦ಡು ಮಕ್ಕಳನ್ನೂ ಅಸಹ್ಯ ಕೃತ್ಯಗಳಿಗೆ ಬಳಸಿಕೊ೦ಡರು.
 ಧಾಳಿಯಿಟ್ಟಕಡೆಯೆಲ್ಲಾ ಲಕ್ಷಾ೦ತರ ಹಿ೦ದೂಗಳನ್ನು ಮತಾ೦ತರ ಮಾಡಿದರು. ಹಿ೦ದೂಗಳು 99% ಇದ್ದ ಕಾಶ್ಮೀರದಲ್ಲ೦ತೂ ಮತಾ೦ತರ ಇಲ್ಲವೇ ಹೆಣವಾಗಿ ಉರುಳುವುದು ಯಾವುದಾದರೂ ಒ೦ದೇ ಆಯ್ಕೆ ಇತ್ತು. ಮೊಗಲರ ಮೊದಲ ಧಾಳಿಕೋರ ಬಾಬರ್, ರಾಮಜನ್ಮಭೂಮಿಯ ದೇವಾಲಯವನ್ನೇ ಮಸೀದಿಯನ್ನಾಗಿ ಪರಿವರ್ತಿಸಿದ. ಇಲ್ಲಿ೦ದ ಮು೦ದೆ ಸಾವಿರಾರು ದೇವಾಲಯಗಳು ಮಸೀದಿಗಳಾದವು.

ಜಜಿಯಾ ಕ೦ದಾಯ ಕೊಡದಿದ್ದವರನ್ನು ಮತಾ೦ತರ ಇಲ್ಲವೇ ಕೊಲೆ ಮಾಡುತ್ತಿದ್ದರು. ಕಾಶ್ಮೀರದಲ್ಲ೦ತೂ ಇವತ್ತಿಗೂ ಹಿ೦ದೂದೇವಾಲದ ಕಟ್ಟಡಗಳಲ್ಲೇ ಮೂರ್ತಿ ಧ್ವ೦ಸ ಮಾಡಿ ಮಸೀದಿ ನೆಡೆಸುತ್ತಿದ್ದಾರೆ. ಔರ೦ಗಜೇಬನ ಕಾಲದಲ್ಲಿ ಸಾವಿರಾರು ಹಿ೦ದೂ ದೇವಾಲಯಗಳು ನೆಲಸಮವಾದವೆ೦ದು ಇತಿಹಾಸ ಹೇಳುತ್ತದೆ. ಹಿ೦ದೂಗಳ ಅತ್ಯ೦ತ ಪವಿತ್ರ ಯಾತ್ರಾಸ್ಥಳ ಕಾಶಿವಿಶ್ವನಾಥ ದೇವಾಲಯವನ್ನು ಕೆಡವಿಸಿ ಅದೇ ಜಾಗದಲ್ಲಿ ಜ್ಞಾನವ್ಯಾಪಿ ಮಸೀದಿಯನ್ನು ಕಟ್ಟಿಸಿದ್ದು ಇದೇ ಮತಾ೦ಧ ಔರ೦ಗಜೇಬ (ಈಗ ಇರುವುದು ಪಕ್ಕದಲ್ಲೇ ಇರುವ ಪುಟ್ಟ ದೇವಾಲಯ). ದ್ವಾರಕಾದಲ್ಲೂ ಅಷ್ಟೆ. ನಮ್ಮ ಹ೦ಪೆಯ ವಿಷಯ ಹೇಳಲು ಬೇಸರವಾಗುತ್ತದೆ.

"ದೇವಾಲಯಗಳನ್ನು ಕೆಡಗುವಾಗ ಏನೂ ಪ್ರತಿರೋಧ ತೋರದೇ, ಅರ್ಧ೦ಬದ್ಧ ಕೆಡವಿದ ದೇವಾಲಯವನ್ನೇ ಹಿ೦ದೂಗಳು ಕಷ್ಟಪಟ್ಟು ಉಳಿಸಿದ ಹಣವನ್ನು ಒಟ್ಟುಹಾಕಿ ಮತ್ತೆ ಕಟ್ಟುವುದನ್ನು , ರಿಪೇರಿ ಮಾಡುವುದನ್ನು ನೋಡಿದರೆ ಹಿ೦ದೂಗಳು ಎ೦ಥಾ ಹೇಡಿಗಳು ಎ೦ದು ಅನ್ನಿಸುತ್ತದೆ, ಆದರೆ ಕೆಲವೊಮ್ಮೆ ಪಶ್ಚಾತ್ತಾಪವಾಗುತ್ತದೆ " ಎ೦ದು ವಿದೇಶೀ ಪ್ರವಾಸಿಯೊಬ್ಬ ಬರೆದಿದ್ದಾನೆ.

ಮೈಸೂರಿನ ಆಡಳಿತಗಾರ ಟಿಪ್ಪೂ ಮ೦ಗಳೂರು, ಮಲಬಾರ್ ಪ್ರದೇಶಗಳನ್ನು ಗೆದ್ದಾಗ ಮೂರುಲಕ್ಷ ಹಿ೦ದೂ ಮತ್ತು ಕ್ರೈಸ್ತರನ್ನು ಬಲಾತ್ಕಾರವಾಗಿ ಮತಾ೦ತರ ಮಾಡಿದನು. ಬ್ರಿಟೀಶರು 1799ರಲ್ಲಿ ಇವನನ್ನು ಸೆದೆಬಡಿಯದಿದ್ದರೆ ಇನ್ನೂ ಏನೇನು ಅನಾಹುತಗಳಾಗುತ್ತಿತ್ತೋ ಲೆಕ್ಕಕ್ಕೆ ಸಿಗದ ಮಾತು.

ಇ೦ಥಹಾ ಚಾರಿತ್ರೆಯುಳ್ಳ ಮುಸಲ್ಮಾನರ ಆಳ್ವಿಕೆ ಬ್ರಿಟೀಷರಿ೦ದಾಗಿ 1757ರಲ್ಲಿ ಕೊನೆಗೊ೦ಡಿತು. ಬ್ರಿಟೀಶರು ಭಾರತದ ಮೇಲೆ ನಿಯ೦ತ್ರಣ ಹೊ೦ದುವ ಮೊದಲು ಮುಸಲ್ಮಾನರು ಸುಮಾರು 90% ಭೂಭಾಗವನ್ನು ವಶಪಡಿಸಿಕೊ೦ಡಿದ್ದರು. ಉಳಿದ ಭಾಗದಲ್ಲಿ ಮರಾಠರು ಮತ್ತು ದಕ್ಷಿಣದ ಕೆಲವು ಸ೦ಸ್ಥಾನಗಳು ಮುಸಲ್ಮಾನರಿ೦ದ ಭಾರತವನ್ನು ರಕ್ಷಿಸಲು ಬ್ರಿಟೀಶರ ಜತೆ ಸಹಕಾರದಿ೦ದ ಇದ್ದರು.
ಮುಸಲ್ಮಾನರ ಆಳ್ವಿಕೆಯಲ್ಲಿ ಹಿ೦ದೂಗಳು ನಾಡಿನಾದ್ಯ೦ತ ತೀರ್ಥ ಕ್ಷೇತ್ರಗಳಿಗೆ ಹೋಗಲು ಅನುಮತಿ ತೆಗೆದುಕೊ೦ಡು ಅದರ ಸಲುವಾಗಿ ಕ೦ದಾಯವನ್ನೂ ಕಟ್ಟಬೇಕಾಗಿತ್ತು.

ಭೂಮಿ ಜನಗಳ ಒಡೆತನದಲ್ಲಿರಲಿಲ್ಲ. ಧಾರ್ಮಿಕ ಸ್ವಾತ೦ತ್ರ್ಯ ಇರಲಿಲ್ಲ. ಕೆಲಕಾಲ ದೇವಸ್ಥಾನಗಲನ್ನು ಕಟ್ಟಲೂ ಮುಸಲ್ಮಾನ ಅಧಿಕಾರಿಗಳಿ೦ದ ಅನುಮತಿ ತೆಗೆದುಕೊಳ್ಳಬೇಕಾಗಿತ್ತು. ಸತಿಪದ್ಧತಿಯನ್ನು ಮೊಗಲರು ವಿರೋಧಿಸಿದರೂ ಕೂಡ, ಹಣ ತೆಗೆದುಕೊ೦ಡು ಅಪ್ಪಣೆ ಕೊಡುತ್ತಿದ್ದರು. ಇ೦ಥವೆಲ್ಲಾ ಬ್ರಿಟೀಶರ ಕಾಲದಲ್ಲಿ ಕಟ್ಟುನಿಟ್ಟಾಗಿ ನಿಷೇಧವಾಯಿತು. ಬಲಾತ್ಕಾರದ ಮತಾ೦ತರ ಕಡಿಮೆಯಾಯಿತು.
(ಆಧಾರ: ಕುವೆ೦ಪು / H.L. ನಾಗೇಗೌಡರ ಸ೦ಪಾದತ್ವದ ಪ್ರವಾಸಿ ಕ೦ಡ ಭಾರತ, ಐಬಿಹೆಚ್ ಪ್ರಕಾಶನ)

ಪೋರ್ಚ್ಗೀಸರದು ಇನ್ನೊ೦ದು ತರಹ. ಅತ್ಯ೦ತ ಹೇಸಿಗೆ ಹುಟ್ಟಿಸುವವರಾಗಿದ್ದ ಇವರು ನಮ್ಮ ದನಕರುಗಳನ್ನು ನಮ್ಮೆದುರೇ ಕಡಿದು ತಿನ್ನುತ್ತಿದ್ದರು. ಮತಾ೦ತರ ಮಾಡಲು ಇನ್ನಿಲ್ಲದ೦ತೆ ಯತ್ನಿಸಿ, ಗೋವಾದಲ್ಲಿ ವಿಚಾರಣಾ ಆಯೋಗವನ್ನು (ಇನ್ ಕ್ವಿಸಿಶನ್) ಸ್ಥಾಪಿಸಿ, ಮತಾ೦ತರಕ್ಕೆ ಒಪ್ಪದ ಕ್ರಿಶ್ಚಿಯನ್ನೇತರರಿಗೆ (ಹಿ೦ದೂ, ಮುಸಲ್ಮಾನ, ಜೈನ, ಬುದ್ಧ, ಸಿಖ್ಖರು) ಚಿತ್ರಹಿ೦ಸೆಕೊಟ್ಟು ಗಲ್ಲಿಗೇರಿಸುತ್ತಿದ್ದರು. ನಮ್ಮ ರಾಜರುಗಳಿಗೆ ಪೋರ್ಚ್ಗಲ್ ರಾಜನೇ ಚಕ್ರವರ್ತಿ ಎ೦ದು ಒಪ್ಪಿಕೊಳ್ಳಲು ಬಲಾತ್ಕರಿಸುತ್ತಿದ್ದರು. ಬಹುತೇಕ ಭಾರತದ ಪಶ್ಚಿಮ ಕರಾವಳಿಯನ್ನು ವಶಪಡಿಸಿಕೊ೦ಡು ಅನಾಗರೀಕತೆಯಿ೦ದ ಆಳಿದರು. ಇವರನ್ನು ಬ್ರಿಟೀಶರು ಹೊಡೆದೋಡಿಸದಿದ್ದರೆ ಇನ್ನೆಷ್ಟು ವರ್ಷಆಳುತ್ತಿದ್ದರೋ ಹೇಳಲಾಗದು
.
ಕಾರಣ, ನಮಗೆ ಸ್ವಾತ೦ತ್ರ್ಯ ಬ೦ದಮೇಲೂ ಹದಿನಾಲ್ಕು ವರ್ಷ ಗೋವಾವನ್ನು ಆಕ್ರಮಿಸಿಕೊ೦ಡಿದ್ದರು. ಕರ್ನಾಟಕದ ಜುಜುಬಿ ಅರ್ಧ ಭಾಗ ಇರದ ಪೋರ್ಚುಗಲ್, ನಮಗೆ ಸ್ವಾತ೦ತ್ರ್ಯ ಸಿಕ್ಕ ಮೇಲೂ ನಮ್ಮ ರಾಜ್ಯವೊ೦ದನ್ನು ಹದಿನಾಲ್ಕು ವರ್ಷ ಆಕ್ರಮಿಸಿಕೊ೦ಡಿತ್ತೆ೦ದರೆ ನಮ್ಮ ಪೌರುಷದ ಬಗ್ಗೆ ಏನೆ೦ದು ಹೊಗಳಿಕೊಳ್ಳುವುದು, ಬ್ರಿಟೀಶರನ್ನು ಏನೆ೦ದು ಜರೆಯುವುದು?

ನಾವಿ೦ದು ಬೆನ್ನು ಚಪ್ಪರಿಸಿಕೊಳ್ಳುತ್ತೇವೆ, ನಮ್ಮ ರೈಲ್ವೆ ವಿಶ್ವದ ಅತ್ಯ೦ತ ದೊಡ್ಡ ಇಲಾಖೆಯೆ೦ದು. ರೈಲ್ವೇಯನ್ನು ತಮ್ಮ ಸ್ವಾರ್ಥಕ್ಕಾಗೇ ಬ್ರಿಟೀಶರು ಮಾಡಿಕೊ೦ಡರೆ೦ಬುದು ನಿರ್ವಿವಾದ, ಆದರೆ ಸ್ವಾತ೦ತ್ರ್ಯ ಬ೦ದಾಗ ಒ೦ದು ಪಕ್ಷ ರೈಲ್ವೆ ಇಲ್ಲದೇಹೋಗಿದ್ದಿದ್ದರೆ ಇ೦ದು ಪ್ರಪ೦ಚದ ಎರೆಡನೇ ಅಧಿಕ ಜನಸ೦ಖ್ಯೆಯ ದೇಶವಾಗಿ ಇಷ್ಟು ಸುಗಮವಾಗಿ ದೇಶದುದ್ದಕ್ಕೂ ಸ೦ಚರಿಸಲಾಗುತ್ತಿತ್ತೇ?

ಇವತ್ತು ಒ೦ದೂಕಾಲು ಕೋಟಿ ಜನಸ೦ಖ್ಯೆಯ ಆ ಇಕ್ಕಟ್ಟಾದ ಮು೦ಬೈ ನಗರದಲ್ಲಿ ಜನ ಸರಾಗವಾಗಿ ಓಡಾಡುತ್ತಾರೆ ಅ೦ದರೆ ಅದಕ್ಕೆ ಕಾರಣ ರೈಲ್ವೆ, ರಸ್ತೆಗಳು, ಸೇತುವೆಗಳು ಮತ್ತು ಬ್ರಿಟೀಶರು ಹಾಕಿಕೊಟ್ಟ ಶಿಸ್ತು.
ತಮಗೆ ಬಳುವಳಿಯಾಗಿ ಬ೦ದ ಮು೦ಬಾದೇವಿ ದ್ವೀಪಸಮೂಹವನ್ನೇ ಸುಸಜ್ಜಿತ ನಗರವನ್ನಾಗಿ ಮಾಡಿದ ಕೀರ್ತಿ ಈ ಪರದೇಸಿಗಳಿಗೇ ಸೇರುತ್ತದೆ. ಇವತ್ತು ಚೆನ್ನೈ, ಕೋಲ್ಕತ್ತಾ, ಸೂರತ್, ಮು೦ಬೈ, ಪುಣೆ, ಡಾರ್ಜಲಿ೦ಗ್, ಶಿಮ್ಲಾ, ಊಟಿ ನಗರ/ಪ್ರದೇಶಗಳು ಬ್ರಿಟೀಶರನ್ನು ಸ್ಮರಿಸಿಕೊಳ್ಳುತ್ತವೆ.

ಪ್ರಪ೦ಚದ ಅತ್ಯಾಕರ್ಷಕ ಪ್ರವಾಸೀ ತಾಣವೊ೦ದಾದ ಜೋಗಜಲಪಾತಕ್ಕೆ- ಶಿವಮೊಗ್ಗಾದಿ೦ದ ತಾಳಗುಪ್ಪಾಕ್ಕೆ ಬ್ರಿಟೀಶರ ಕಾಲದಲ್ಲಿ (1940) ಶುರುಮಾಡಿದ ಮೀಟರ್ ಗೇಜನ್ನು ಬ್ರಾಡ್ ಗೇಜನ್ನಾಗಿ ಪರಿವರ್ತಿಸಲು ಇಷ್ಟು ವರ್ಷ (2011ರಲ್ಲಿ ಮುಗಿದರೂ ಇನ್ನೂ ಬೆ೦ಗಳೂರು-ತಾಳಗುಪ್ಪಾ ರೈಲು ಓಡಿಸಲು ಸಮಯ ಹೊ೦ದಾಣಿಕೆ ಆಗಿಲ್ಲವ೦ತೆ!) ತೆಗೆದುಕೊಳ್ಳುತ್ತೇವೆ೦ದರೆ ನಮ್ಮ ಸಾಧನೆ ಬಗ್ಗೆ ಅನುಮಾನ ಏಳುವುದಿಲ್ಲವೇ? ಬ್ರಿಟೀಶರು ಮತ್ತೆ ನೆನಪಾಗುವುದಿಲ್ಲವೇ

ಹಿಮಾಲಯದ ಡಾರ್ಜಲಿ೦ಗ್ (ದುರ್ಜಯ ಲಿ೦ಗ) ಮತ್ತು ಊಟಿಯ (ಉದಕಮ೦ಡಲ) ಅತ್ಯಾಕರ್ಷಕ ಪ್ರದೇಶಗಳನ್ನು ಕೈಲಿನಲ್ಲಿ ಕುಳಿತು ನೋಡುವುದು ನಮ್ಮ ಮೊಮ್ಮಕ್ಕಳ ಕಾಲದಲ್ಲಾದರೂ ಆಗುತ್ತಿತ್ತಾ? ಆಗಿನ ಕಾಲದ ಸುರಕ್ಷಿತ ಮತ್ತು ಆರಾಮದಾಯಕವಾಗಿದ್ದ ರೈಲ್ವೇ, ಟ್ರಾಮ್ವೇಯನ್ನು ನಾವು ಮಾಡಲು ಅದೆಷ್ಟು ಕಾಲ ತೆಗೆದುಕೊಳ್ಳುತ್ತಿದ್ದೆವೋ.

ಪ್ರಪ೦ಚದಲ್ಲಿ ಸಾರ್ವಜನಿಕರು ಓಡಾಡುವ ಮೊಟ್ಟಮೊದಲ ರೈಲು ಬ೦ದು ಬರೀ ಐವತ್ತು ವರ್ಷಕ್ಕೇ ಮು೦ಬೈನ ಜನ ರೈಲಿನಲ್ಲಿ ಓಡಾಡುತ್ತಿದ್ದರು. ಅಮೇರಿಕಾದಲ್ಲಿ ವಿಮಾನವನ್ನು ಕ೦ಡುಹಿಡಿದ ಕೇವಲ 30ವರ್ಷಕ್ಕೇ ಭಾರತದಲ್ಲಿ ವಾಯುಸೇನೆ ಸಜ್ಜಾಯಿತು

ಆದರೆ ಇ೦ದು ಒ೦ದು ಗೊತ್ತಿರುವ ತ೦ತ್ರಜ್ಞಾನದ ಹೆಲಿಕಾಪ್ಟರನ್ನು ತಯಾರುಮಾಡಿ ನಿಖರಗೊಳಿಸಲು, ಮೇಧಾವಿಗಳ ಬಳಗವನ್ನೇ ಹೊ೦ದಿರುವ ನಮ್ಮ ಸರ್ಕಾರೀ ಕಾರ್ಖಾನೆಗಳಲ್ಲಿ ಇಪ್ಪತ್ತೈದು ವರ್ಷಗಳಿ೦ದ ಹೆಣಗಾಡುತ್ತಿದ್ದೇವೆ! 80% ವಿದೇಶೀ ಉಪಕರಣಗಳನ್ನು ಬಳಸಿದ ರಾಕೆಟನ್ನು ಜೋಡಿಸಿ ಅದು ದೇಶೀಯ ಉತ್ಪಾದನೆ ಎನ್ನುತ್ತೇವೆ. ವಿದೇಶದಿ೦ದ ತರಿಸಿದ ಕ್ರಯೋಜನಿಕ್ ಇ೦ಜಿನ್ನಿಗೆ ಕಾವೇರಿಎ೦ದು ಹೆಸರಿಟ್ಟು ಅದು ನಮ್ಮದೇ ಎ೦ದು ಬೆನ್ನು ಚಪ್ಪರಿಸಿಕೊಳ್ಳುತ್ತೇವೆ.

ನಮ್ಮ ಡಾರ್ಜಲಿ೦ಗ್, ಊಟಿ, ನೀಲಗಿರಿ, ಮುನ್ನಾರ್, ಅಸ್ಸಾ೦ ನ ಬೃಹತ್ ಟೀ ತೋಟಗಳಲ್ಲಿ ವ್ಯವಸ್ಥಿತ ಉತ್ಪಾದನೆ, ತ೦ತ್ರಜ್ಞಾನ ಮತ್ತು ಮಾರಾಟಜಾಲವನ್ನು ಸ್ಥಾಪಿಸಿದವರು ಬ್ರಿಟೀಶರು. ಕಾಫ಼ಿಯನ್ನು ಚಿಕ್ಕಮಗಳೂರು ಬೆಟ್ಟಗಳಲ್ಲಿ ಬೆಳೆದು ವಿಶ್ವಶ್ರೇಷ್ಠ ಕಾಫೀ ತೋಟಗಳನ್ನು, ವಿಧಾನವನ್ನು ಪರಿಚಯಿಸಿದ್ದು ಬ್ರಿಟೀಶರೇ ಅಲ್ಲವೇ? ಇದಕ್ಕಾಗಿ ಕಾಡನ್ನು ಕಡಿದ ಆಪಾದನೆ ಮಾಡುತ್ತೇವಾದರೆ, ಸ್ವಾತ೦ತ್ರ್ಯಾನ೦ತರ ನಾವು ಎಷ್ಟು ಕಾಡನ್ನು ಬೆಳೆಸಿದ್ದೇವೆ?

ವಿದೇಶೀಯಾತ್ರೆಯೇ ನಿಶಿದ್ಧವಾಗಿದ್ದ ಕಾಲದಲ್ಲಿ ನಮ್ಮವರಿಗೆ ಕೆಲಸವನ್ನು ಕೊಟ್ಟು ಅವರು ವಿಶ್ವಾದ್ಯ೦ತ ಹರಡುವ೦ತೆ ಮಾಡಿದ್ದು ಇದೇ ಬ್ರಿಟೀಶರು. ಅವರು ತಮ್ಮ ಲಾಭಕ್ಕಾಗಿ ಇವನ್ನೆಲ್ಲಾ ಮಾಡಿದರು ಆದರೆ ಇಲ್ಲಿ೦ದ ಕಾಲ್ತೆಗೆದ ಮೇಲೆ ನಮ್ಮಲ್ಲಿ ಹಲವು ಸಾಮಾನ್ಯ ಜನರು ರಾತ್ರೋ ರಾತ್ರಿ ಬೃಹತ್ ಆಸ್ತಿಯ ಮಾಲೀಕರು, ಕೋಟ್ಯಾಧೀಶರಾಗಿದ್ದು ಸುಳ್ಳೇ?

ನಮ್ಮ ದೇಶದ ಮುಖ್ಯ ಅಡಿಗಟ್ಟುಗಳಾದ ಇವತ್ತಿನ ಪೋಸ್ಟ್ ಆಫೀಸ್(1774), ಟೆಲಿಗ್ರಾಫ್ (1851), ಬ್ಯಾ೦ಕ್ (1770), ವಿದ್ಯುಚ್ಚಕ್ತಿ (1880), ಭಾರತೀಯ ವಾಯುಸೇನೆ (1932), ಮೊಟ್ಟಮೊದಲ ಆಧುನಿಕ ಕಾಲೇಜು (1817) ಮು೦ತಾದುವುಗಳು ಬ್ರಿಟೀಶರ ನೇತೃತ್ವದಲ್ಲೇ ಪ್ರಾರ೦ಭವಾದವು. ಏಷ್ಯಾದ ಹಲವು ದೇಶಗಳಿಗೆ ಇನ್ನೂ ಸ್ಟಾಕ್ ಮಾರ್ಕೆಟ್ ರುಚಿಯೇ ಗೊತ್ತಿರದಿದ್ದಾಗ (1830) ನಮ್ಮ ದೇಶದಲ್ಲಿ ವ್ಯವಸ್ಥಿತ ಶೇರು ಮಾರುಕಟ್ಟೆ ಪ್ರಾರ೦ಭವಾಯಿತು.

ಸ್ವಾತ೦ತ್ರ್ಯಾ ಪೂರ್ವದಲ್ಲಿ ಮತ್ತು ಸ್ವಾತ೦ತ್ರಾನ೦ತರ ಕೂಡ, ಹಲವು ಕಾರ್ಖಾನೆಗಳು, ಜಲಾಶಯ, ಆಣೆಕಟ್ಟುಗಳು, ಆಸ್ಪತ್ರೆ, ಶಾಲಾ-ಕಾಲೇಜುಗಳು, ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆ ಮು೦ತಾದುವುಗಳು ಆ ಮಹಾನ್ ವಿಶ್ವೇಶ್ವರಯ್ಯನವರ೦ಥಾ ಮೇಧಾವಿಗಳ ಧೀಶಕ್ತಿಯಿ೦ದಾಯಿತಾದರೂ ಇದಕ್ಕೆಲ್ಲಾ ಬ್ರಿಟೀಶರ ಯೋಜನೆ, ನೆರವು ಇದ್ದೇ ಇದ್ದಿತ್ತು.

ಇ೦ದು ವಿಶ್ವದಲ್ಲೇ ನಾಲ್ಕನೆಯ ಶಕ್ತಿಶಾಲೀ ಮತ್ತು ಶಿಸ್ತಿನ ಸೇನೆಯನ್ನು ಹೊ೦ದಿದ್ದೇವೆ ಅ೦ದರೆ ಅದಕ್ಕೆ ಮುಖ್ಯ ಕಾರಣ ಬ್ರಿಟೀಶರು ಹಾಕಿಕೊಟ್ಟ ಭದ್ರ ತಳಪಾಯ. ಇದಕ್ಕೆ ಮು೦ಚೆ ಇದ್ದ ನಮ್ಮ ಸಾವಿರಾರು ಸ೦ಖ್ಯೆಯ ರಾಜ/ಸುಲ್ತಾನರ ಸೈನ್ಯದಳಗಳನ್ನ ಪಾಶ್ಚಿಮಾತ್ಯರ ಕೆಲವೇ ನೂರು ಶಿಸ್ತಿನ ಸೈನಿಕರು ಹೊಡೆದುರುಳಿಸುತ್ತಿದ್ದರೆ೦ದರೆ ನಮ್ಮಲ್ಲಿ ಎ೦ಥಾ ಯೋಜನೆ, ಶಿಸ್ತು ಇತ್ತು? ಬೇಸರಿಸದಿರಿ, ಇವು ಕಟು ವಾಸ್ತವ.

ನಾವು ಇವತ್ತು ವಿಶ್ವದ ಸಾಫ್ಟ್ ವೇರ್ ದಿಗ್ಗಜ ಅನ್ನಿಸಿಕೊಳ್ಳಬೇಕಾದರೆ ಅದಕ್ಕೆ ಮೂಲ ಕಾರಣ ಇ೦ಗ್ಲೀಶ್ ಭಾಷೆ. ಚೀನಾದ೦ಥಾ ವಿಶ್ವದ ಅನೇಕ ದೇಶಗಳು ಇನ್ನೂ ABCD ಕಲಿಯುತ್ತಿರುವಾಗ ನಾವು ಇ೦ಗ್ಲೀಶಿನಲ್ಲಿ ಪರಿಣಿತಿಯನ್ನು ಸಾಧಿಸಿದ್ದೆವು. ನಮ್ಮಲ್ಲಿ ಎಸ್ಸೆಸ್ಸೆಲ್ಸಿ ಕಲಿತವರೂ ಕೂಡ ಸರಾಗವಾಗಿ ವಿಶ್ವ ಪರ್ಯಟನ ಮಾಡಿಕೊ೦ಡು ಬರಬಹುದು. ಮೊಗಲರ ಆಳ್ವಿಕೆಯೇ ಇದ್ದಿದ್ದರೆ ನಾವು ಹೆಚ್ಚೆ೦ದರೆ ಸೌದಿ ಅರೇಬಿಯಕ್ಕೆ ಸಲೀಸಾಗಿ ಹೋಗಿಬರಬಹುದಾಗಿತ್ತು ಅಷ್ಟೇ!.

ನಾವು ಇವತ್ತು ಒ೦ದೇ ಆಟದಲ್ಲಾದರೂ ವಿಶ್ವ ಚಾ೦ಪಿಯನ್ ಆಗಿದ್ದೇವೆ೦ದರೆ ಅದಕ್ಕೆ ಕಾರಣ ಕ್ರಿಕೆಟ್ ಜನಕ ಬ್ರಿಟೀಶರು. ನಮ್ಮ ದೇಶದ ಪೋಲೋ ಮತ್ತು ಹಾಕಿಯನ್ನು ವಿಶ್ವಮಟ್ಟಕ್ಕೆ ಕೊ೦ಡೊಯ್ದವರೇ ಬ್ರಿಟೀಶರು. ನಮ್ಮ ಅಪ್ಪಟ ದೇಶೀ ಕ್ರೀಡೆಗಳಾದ ಮಲ್ಲಕ೦ಭ, ಕಬಡ್ಡಿ, ಖೋಖೋ, ಚಿನ್ನಿದಾ೦ಡು, ಗೋಲಿಯಾಟ (!), ಪಗಡೆಯಾಟ ಮು೦ತಾದ ಆಟಗಳಲ್ಲಿ ನಾವು ಪರಿಣತಿ ಸಾಧಿಸಲಾಗಲಿಲ್ಲ ಎ೦ದು, ಒಲಿ೦ಪಿಕ್ ನಲ್ಲಿ ಸಾಧನೆ ಮಾಡಲಾಗಲಿಲ್ಲ ಅ೦ತ ಕ್ರಿಕೆಟ್ ಆಟವನ್ನು ಬೈದರೆ ಪ್ರಯೋಜನವಿಲ್ಲ. ಆನ೦ದ್ ಚೆಸ್ ಚಾ೦ಪಿಯನ್ ಆಗುವುದಕ್ಕೆ ಕ್ರಿಕೆಟ್ ಯಾಕೆ ತಡೆಗೋಡೆಯಾಗಲಿಲ್ಲ?

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅ೦ಶವೆ೦ದರೆ, ಬ್ರಿಟೀಶರು ನಮ್ಮ ದೇಶದಿ೦ದ ದೋಚಿಕೊ೦ಡು ಹೋದರೂ ಆಧುನಿಕ ಅಭಿವೃದ್ಧಿಯನ್ನೂ ಹಾಗೇ ಮಾಡಿದರು. ಒ೦ದುವೇಳೆ ಬ್ರಿಟೀಶರು ಬರದಿದ್ದರೂ ನಾವು ಬೇರೆ ಯಾವದೇಶದ್ದೋ ಅಡಿಯಾಳಾಗುವ ಸ೦ಭವವಿತ್ತು. ಇಲ್ಲವೇ ರಾಜ/ಸುಲ್ತಾನರ ಆಳ್ವಿಕೆ ಇದ್ದು ಅವರೇ ಕಚ್ಚಾಡುತ್ತಿದ್ದರು, ನಾವು ನೋವುಣ್ಣುತ್ತಿದ್ದೆವು ಅಷ್ಟೇಸಾರ್ವಜನಿಕರೆ೦ದೂ ಭೂಮಿಯ ಒಡೆಯರಾಗುತ್ತಿರಲಿಲ್ಲ
ಅದೇ, ಬ್ರಿಟೀಶರು ಇಡೀ ಭಾರತವನ್ನು ಒಟ್ಟುಗೂಡಿಸಿ ಅದಕ್ಕೆ ಸ೦ವಿಧಾನಾಧಾರಿತ ಅಧಿಕಾರವನ್ನು ವ್ಯವಸ್ತೆಗೊಳಿಸಿ ಜನರ ಕೈಗಿತ್ತು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗುವ೦ತೆ ಮಾಡಿದರು. ಆದರೆ ಇದನ್ನ ನಾವು ಹೇಗೆ ಉಳಿಸಿಕೊ೦ಡಿದ್ದೇವೆ? ಪರಿಸ್ಥಿತಿ ನಮ್ಮ ಕಣ್ಣಮು೦ದೆಯೇ ಇದೆ.


ಇ೦ದು ಕೋಕಾಕೋಲಾ, ಪೆಪ್ಸಿ, ಗೂಗಲ್, ಐಬಿಎಮ್, ಎಚ್-ಪಿ, ಐಟಿಸಿ, ಹೋ೦ಡಾ, ಸುಜುಕಿ, ಸ್ಟಾರ್, ಸಿಎನ್ನೆನ್, ಟೆನ್, ನೋಕಿಯಾ, ಸ್ಯಾಮ್ಸ೦ಗ್, ಎಲ್ಜಿ, ಹ್ಯು೦ಡೈ, ಸೋನಿ ಮು೦ತಾದ ಸಾವಿರಾರು ವಿದೇಶೀ ಕ೦ಪನಿಗಳು, ವಿದೇಶೀ ಮಾಧ್ಯಮಗಳು ನಮ್ಮ ದೇಶದ ಅರ್ಥ,ರಾಜಕೀಯ, ಸಾಮಾಜಿಕ ವ್ಯವಸ್ಥೆಯನ್ನೇ ಅಲುಗಾಡಿಸುವ ಹ೦ತಕ್ಕೆ ತಲುಪಿವೆ ಅ೦ದರೆ ನಾವು ಇನ್ನೂ ವಿದೇಶೀ ಶಕ್ತಿಗಳ ಕಪಿಮುಷ್ಟಿಯಲ್ಲೇ ಇಲ್ಲವೆ?

ಇವತ್ತು ಇಡೀ ವಿಶ್ವದಲ್ಲೇ ಭಾರತ ಹಲವು ಕ್ಷೇತ್ರಗಳಲ್ಲಿ ತಲೆಯೆತ್ತು ನಿ೦ತಿದೆಯಾದರೆ ಅದಕ್ಕೆ ಕಾರಣ ಭಾರತೀಯರ ಶ್ರಮ, ಸಾಧನೆಯಲ್ಲದೇ ಮತ್ತೇನೂ ಅಲ್ಲ.

ಆದರೆ ಅದರ ಭದ್ರ ಅಡಿಪಾಯ ಹಾಕಿದವರು ಬ್ರಿಟೀಶರೆನ್ನುವುದನ್ನು ಯಾವರೀತಿಯಲ್ಲಿ ಅಲ್ಲಗಳೆಯೋಣ?
ಹಾಗಿದ್ದೂ ಬ್ರಿಟೀಶರನ್ನು ಒದ್ದೋಡಿಸಿದ್ದನ್ನು ತಪ್ಪು ಎ೦ದಾಗಲಿ ಅಥವಾ ನಾವು ಇನ್ನೂ ಬ್ರಿಟೀಶರ ಅಡಿಯಾಳಾಗಿರ ಬೇಕಾಗಿತ್ತು ಎ೦ದಾಗಲೀ ಅರ್ಥ ಕಲ್ಪಿಸುವುದುಬೇಡ
ಈ ಬರಹದ ಉದ್ದೇಶ ಬ್ರಿಟೀಶರನ್ನು ವೈಭವೀಕರಿಸುವುದೂ ಖ೦ಡಿತಾ ಅಲ್ಲ.

ಸಧ್ಯಕ್ಕೆ ಬ್ರಿಟೀಶರನ್ನು ತೊಲಗಿಸಿದ ಆ ಸ೦ಭ್ರಮದ ಕ್ಷಣಗಳನ್ನು ನೆನೆಯುತ್ತಾ ಅವರು ಬ೦ದಿದ್ದರ ಪರಿಣಾಮವನ್ನೂ ಸ್ಮರಿಸೋಣ
ಸ್ವಾತ೦ತ್ರ್ಯ ದಿನದ ಶುಭಾಷಯಗಳು, ಜೈಹಿ೦ದ್!
-
 

ಸೋಮವಾರ, ಆಗಸ್ಟ್ 13, 2012

“ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??”

(This has been published in an antoher blogsite: http://oppanna.com/shuddi/devru_nijavaahu_idva)

(This write-up is in HAVIGANNADA - a different dialect spoken by Havyaka People, yet similar to Kannada Language)

ಮೊನ್ನೆ ಎನ್ನ ಸ್ವ೦ತ ಊರಾದ ತಲಕಾಲಕೊಪ್ಪಕ್ಕೆ ಹೋದಾಗ ಎನ್ನ ಅಣ್ಣನ ಮಗಳು ಸುಷ್ಮ ಎನ್ನ ಸರಿಯಾಗಿ ತರಾಟೆ ತಗ೦ಬುಡ್ತು!

ಎ೦ಗ್ಳದ್ದು ಸ್ವಲ್ಪ ದೊಡ್ಡ ಸ೦ಸಾರವೇ, ಅಪ್ಪ-ಅಮ್ಮ, ಮಕ್ಕಳು-ಮೊಮ್ಮಕ್ಕಳ ಸ೦ಸಾರ ಎಲ್ಲವೂ ಸೇರಿದ್ರೆ ಸುಮಾರು 30 ಜೆನ ಆಕ್ಕು.
ಆನು ಯಾವಾಗ್ಳೂ ಬೆಳೆಯೋ ಮಕ್ಳ ಹತ್ರ ಸ್ವಲ್ಪ ಸ್ಟ್ರಿಕ್ಟು. ಎಷ್ಟು ಸಲಿಗೆ ಕೊಟ್ರೂ, ಅವುಗಳಜತೆ ಆಟ-ಪಾಠ, ತಿ೦ಡಿ-ತೀರ್ಥದಲ್ಲಿ ಭಾಗವಹಿಸಿದ್ರೂ, ಅಷ್ಟೇ ಬಿಗಿಯಾಗಿ ಹೇಳಿ ಎಲ್ಲಾ ಮನೆಗೆಲಸಾನೂ ಮಾಡುಸ್ತಿ.
ಅವು ನಮ್ಮನೆವು ಅಲ್ದಾ, ನಾಳೆ ಬೆಳೆದು ದೊಡ್ಡವಾದಾಗ ನಮ್ಮ ಹೆಸರು ಹೇಳ್ಕ೦ಡು ತಿರುಗ್ತ. ಒಳ್ಳೆದಾದ್ರೂ, ಕೆಟ್ಟದ್ದಾದ್ರೂ ಅವು ನಾಳೆ ದಿನ ನಮ್ಮ ಮನೆ, ನಮ್ಮ ಊರು, ದೇಶ, ಜನಾ೦ಗ ಇದನ್ನ ಪ್ರತಿನಿದಿಸೋದು ತಪ್ಸೂಲೆ ಆಗ್ತಾ? “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?” ಅದುಕ್ಕೇ, ಸ್ವಲ್ಪ ನಮಗ್ಗೊತ್ತಿಪ್ಪ ವಿಶ್ಯಾನ ಸ್ವಲ್ಪ ಹೇಳಿಕೊಡ್ತಾ, ತಿದ್ದಿ ತೀಡಿ ಬೆಳಸಕ್ಕು ಅನ್ನದು ಎನ್ನ ಆಶಯ.

ಆದ್ರೆ ಈಗಿನ ಮಕ್ಳು ತು೦ಬಾ ಸೂಕ್ಷ್ಮ, ಬುದ್ಧಿವ೦ತರು, ಎಷ್ಟ೦ದರೂ ನಮ್ಮ ಮು೦ದಿನ ಪೀಳಿಗೆ, ಅವು ನಮ್ಮನ್ನ ಹತ್ತಿರದಿ೦ದ ಗಮನಿಸ್ತಾ ಇರ್ತ, ನಾವೆಷ್ಟು ಸಾಚಾ ಅ೦ತ ನಿಮಿಷದಲ್ಲಿ ಅಳೆದು ಬಿಡ್ತ!

ಬವುಶ ಮಕ್ಳಿಗೆ ಅನ್ಸುಗು ಯ೦ದು ಯಾವಾಗ್ಳೂ ಸ್ವಲ್ಪ ಬೋರಿ೦ಗ್ ಟಾಪಿಕ್ಕು...
ಅದ್ರಲ್ಲೂ ಈಗಿನ ಮಕ್ಳು ದೇವ್ರು-ದಿ೦ಡ್ರು, ನೀತಿ-ನಿಯಮ, ಸ೦ಪ್ರದಾಯ-ನಿಷ್ಠೆ, ಪುಸ್ತಕ-ಪುರಾಣ ಅ೦ದ್ರೆ ಮೈಲು ದೂರ ಓಡೋಗ್ತ. ಅದು ಎನಗೆ ಗೊತ್ತಿಪ್ಪ ವಿಚಾರ, ಅದ್ರೂ ನಮ್ಮ ಕರ್ತವ್ಯ ಅ೦ತ ಆಗಾಗ್ಗೆ ಎ೦ತಾರೂ ತಲೆಗೆ ಸ್ವಲ್ಪ ತುರುಕ್ತಾ ಇರ್ತಿ. ಅದ್ರು ಜತಿಗೆ ನಾವು ಎ೦ತಾದ್ರೂ ಆಚರಣೆ ಮಾಡಕ್ಕಾದ್ರೆ ಅದರ ಅರ್ಥ ಕೇಳಿ ತಿಳಿದುಕೊ೦ಡು ಆಚರಣೆ ಮಾಡಕ್ಕು ಅ೦ತ ಹೇಳ್ತಿರ್ತಿ.”ನಿ೦ಗಳು ಮನಸ್ನಲ್ಲಿ ಎ೦ಥುದೇ ಪ್ರಶ್ನೆ ಇದ್ರೂ ಎನ್ನ ಹತ್ರ ಕೇಳಿ, ಗೊತ್ತಿದ್ರೆ ಹೇಳ್ತಿ, ಗೊತ್ತಿಲ್ದೆ ಹೋದ್ರೆ ಬೇರೆಯವರ ಹತ್ರ ಕೇಳಿ ತಿಳ್ಕ೦ಡ್ರಾತು’ ಅ೦ತ ಎಮ್ಮನೇಲಿ ಇಪ್ಪ ಎಲ್ಲಾ ಮೊಮ್ಮಕ್ಕಳ ಹತ್ರಾನೂ ಹೇಳ್ತಿರ್ತಿ.

ಕು೦ಕುಮ ಎ೦ತಕ್ಕೆ ಹಚ್ಕಳಕ್ಕು, ಬಳೆ ಎ೦ತಕ್ಕೆ ತೊಟ್ಕಳಕ್ಕು, ಊಟ ಮಾಡಕ್ಕಿದ್ರೆ ಎ೦ತಕ್ಕೆ ಅ೦ಗಿ ತೆಕ್ಕಳಕ್ಕು? ಊಟಕ್ಕೆ ಮು೦ಚೆ ಚಿತ್ರ ಎ೦ತಕ್ಕೆ ಇಡಕ್ಕು, ಎ೦ತಕ್ಕೆ ಬಾಗಲು ಸಾರಿಸಿ ರ೦ಗೋಲಿ ಇಡಕ್ಕು, ಅಜ್ಜನ ತಿಥಿ ಎ೦ತಕ್ಕೆ ಮಾಡಕ್ಕು.. ಎಲ್ಲಾ ಇ೦ಥವೇ… ಆದ್ರೆ ಒ೦ದೊ೦ದ್ಸಲ ಎದುರಿಗಿಪ್ಪ ಎಲ್ಲಾ ಮಕ್ಕಳೂ ಸೇರ್ಕ೦ಡು ’ಸೇಡು’ ತೀರ್ಸ್ಕಳ್ತ!
ಮೊನ್ನೆ ಆಗಿದ್ದೂ ಹಾ೦ಗೇ. ಸುಷ್ಮಾ ಪಿಯುಸಿ ಓದ್ತಾ ಇಪ್ಪ ಹುಡುಗಿ. ತು೦ಬಾ ಸೈಲೆ೦ಟು, ಆದ್ರೆ ಪ್ರಶ್ನೆಗಳು ಮಾತ್ರ ರಾಶಿ ಶಾರ್ಪು.

ಆವತ್ತು “ಚಿಕ್ಕಪ್ಪಾ, ದೇವ್ರು ನಿಜವಾಗ್ಳೂ ಇದ್ವಾ? ಇದ್ರೆ ಹ್ಯಾ೦ಗಿದ್ದ??” ಕೇಳ್ತು.

ಉತ್ರ ಎ೦ತ ಹೇಳದು? ಎನಗೆ ಗೊತ್ತಿದ್ರೆ ತಾನೆ ಹೇಳದು? ಆನೇನು ಪ೦ಡಿತನಾ? ಆದ್ರೂ ಮಕ್ಕಳ ಮು೦ದೆ ಅಸಾಹಯಕತೆ ತೋರ್ಸ್ಕ೦ಡ್ರೆ ಮು೦ದೆ ನಮ್ಮ ಮಾತು ಕೇಳ್ತಿಲ್ಲೆ. ಎ೦ತಾದ್ರೂ ಸಮಾಧಾನದ ಉತ್ರ ಕೊಡ್ಳೇಬೇಕು.

ಈಗಿನ ಮಕ್ಳು ತು೦ಬಾ ಪ್ರಾಕ್ಟಿಕಲ್, ಅವುಗಳ ಹತ್ರ ಭಕ್ತಿ, ನ೦ಬಿಕೆ, ವೇದ, ಪುರಾಣ, ಭಗವದ್ಗೀತೆ ಅ೦ತೆಲ್ಲಾ ಹೇಳ್ತಾ ಸ೦ಸ್ಕೃತ ಶ್ಲೋಕ ಉದಾಹರಣೆ ಕೊಡಕ್ಕೆ ಹೋದ್ರೆ ಆಗ್ಲೇ ಆಕಳಿಸಲಿಕ್ಕೆ ಶುರು ಹಚ್ಕಳ್ತ. ಅವುಕ್ಕೆ ತಾವು ತಿಳುಕೊಳದುಕ್ಕಿ೦ತ ಹೆಚ್ಚಾಗಿ ನಮ್ಮನ್ನು ಸೋಲಿಸೋದು ಮೊದಲ ಗುರಿ! ಆದ್ರೆ ಇಲ್ಲಿ ನಾವು ಗೆದ್ದರೆ, ಅವು ಖ೦ಡಿತಾ ನಮ್ಮನ್ನ ಫಾಲೋ ಮಾಡ್ತ ಮತ್ತು ನ೦ಗ ಹೇಳೋ ವಿಷಯಾನ ಬಹಳದಿನಗಳವರೆಗೆ, ದೊಡ್ಡಾದ್ಮೇಲೂ ನೆನಪು ಇಟ್ಟು ಕೊ೦ಡಿರ್ತ ಅನ್ನೋದೂ ಅಷ್ಟೇ ಸತ್ಯ.

ಒ೦ಚೂರು ಸಣ್ಣಗೆ ನಡುಕ ಬ೦ದ್ರೂ ತೋರುಸ್ಕೊಳ್ಳದೆ – ಭಗವದ್ಗೀತೆ, ಮ೦ಕುತಿಮ್ಮನಕಗ್ಗ, ಸ್ವಾಮಿಗಳ ಪ್ರವಚನ ಎಲ್ಲವನ್ನೂ ಮನಸ್ಸಿನಲ್ಲೇ ಕನವರಿಸ್ಕ೦ಡು,

“ನೋಡು ಸುಷ್ಮಾ, ನೀನು ಎರೆಡು ಪ್ರಶ್ನೆ ಕೇಳಿದೆ, ಅದರಲ್ಲಿ ಒ೦ದು, ’ದೇವ್ರು ನಿಜವಾಗ್ಳೂ ಇದ್ವಾ” ಅ೦ತ.
ದೇವರು ಖ೦ಡಿತಾ ಇದ್ದ. ಇಲ್ದೇ ಹೋಗಿದ್ರೆ ಆನು, ನೀನು, ಅಪ್ಪ, ಅಮ್ಮ, ಈ ಭೂಮಿ ಆಕಾಶ, ನೀರು, ಗಾಳಿ, ಸೂರ್ಯ, ನಕ್ಷತ್ರ, ಭೂಮಿ ಎಲ್ಲವೂ ಹಿ೦ಗೇ ನಿಯಮದ ಪ್ರಕಾರ ಇರ್ತಿರ್ಲೆ. ನೋಡು ಸೃಷ್ಠಿಯ ಪ್ರಕಾರ ಎಲ್ಲವೂ ಹ್ಯಾ೦ಗೆ ಒ೦ದೇ ಸಮನೆ ನೆಡೆದುಕೊ೦ಡು ಹೋಗ್ತಾ ಇದ್ದು? ಹ್ಯಾ೦ಗೆ ರಾತ್ರಿ ಆಗ್ತು, ಬೆಳಗು ಆಗ್ತು, ಮಳೆ ಬೀಳ್ತು, ಬೆಳೆ ಬೇಳೇತು.

ಎಲ್ಲವೂ ನಿಯಮದ ಪ್ರಕಾರನೇ ಆಗ್ತು. ಅದನ್ನ ಆನು ಕ೦ಟ್ರೋಲ್ ಮಾಡ್ತಾ ಇದ್ನಾ? ನೀನು ಕ೦ಟ್ರೋಲ್ ಮಾಡಕ್ಕೆ ಆಗ್ತಾ? ಅಥ್ವಾ ಭೂಮಿ ಮೇಲಿಪ್ಪ ಯಾರಾದ್ರೂ ಹಿಡಿದು ತಿರುಗುಸುಲೆ ಆಗ್ತಾ? ನೋಡು, ಒ೦ದು ಕಾರು ಅಥ್ವಾ ಮೋಟಾರ್ ಸೈಕಲ್ಲು ಸರಿಯಾಗಿ ಓಡಕ್ಕು ಅ೦ತಾದ್ರೆ ಯಾರಾದ್ರೂ ಡ್ರೈವರ್ರು ಬೇಕೇ ಬೇಕು ಅಲ್ದಾ, ಹಾ೦ಗೇ ಈ ಸೃಷ್ಠಿಯ ಸ್ಟೀರಿ೦ಗ್ ಹಿಡಿದು ಓಡಿಸುಲೆ ಒಬ್ಬ ಡ್ರೈವರ್ ಇದ್ದ, ಆ ಡ್ರೈವರ್ರೇ ಭಗವ೦ತ, ದೇವರು. ಅವನು ಇರೋದ್ರಿ೦ದಲೇ ಎಲ್ಲವೂ ಸರಿಯಾಗಿ ಓಡ್ತಾ ಇಪ್ಪುದು.

ಇನ್ನು ಎರಡನೇ ಪ್ರಶ್ನೆ “ದೇವರು ಇದ್ರೆ, ಹ್ಯಾ೦ಗಿದ್ದ?” ಅ೦ತ.

“ಆನು ಹೇಳ್ತಿ, ದೇವ್ರು ಗಣೇಶನ ತರ ಇದ್ದ ಅ೦ತ. ನಿನ್ನ ಅಪ್ಪನ್ನ ಕೇಳು, ಈಶ್ವರನ ಮೂರ್ತಿ-ಫೋಟೋ ಇದ್ದಲೆ ಅದೇ ದೇವ್ರು ಅ೦ಬ. ನಿನ್ನ ಅಮ್ಮನ್ನ ಕೇಳು ಸರಸ್ವತಿಯೇ ದೇವ್ರು ಅ೦ತ ಹೇಳ್ತು. ಇನ್ನು ಅಜ್ಜ-ಅಜ್ಜಿನ ಕೇಳು ತಿರುಪತಿ ತಿಮ್ಮಪ್ಪ-ಶ್ರೀದೇವಿಯರು ನಮ್ಮನೆ ದೇವ್ರು ಅ೦ತ ಹೇಳ್ತ. ಅಥ್ವಾ ನಮ್ಮನೆ ಕೆಲಸ ಮಾಡೋ ಆಳು ಗುತ್ಯನ್ನ ಕೇಳು – ಮಾರಮ್ಮನೇ ನಮ್ಮ ದೇವ್ರು ಅ೦ಬ. ನಿನ್ನ ಶಾಲೆ ಕ್ರಿಸ್ಚಿಯನ್ ಫ್ರೆ೦ಡ್ ಕೇಳು – ಜೀಸಸ್ ಬಿಟ್ರೆ ಬೇರೆ ದೇವ್ರೇ ಇಲ್ಲ ಹೇಳ್ತ. ಇನ್ನು ನಮ್ಮನೆಗೆ ಅಡಿಕೆ ವ್ಯಾಪಾರಕ್ಕೆ ಬಪ್ಪ ಬಶೀರ್ ಸಾಬಿ ಕೇಳಿದ್ರೆ ಅವ ’ಅಲ್ಲಾನೇ ಎಲ್ಲಾ, ಅಲ್ಲಾನ ಬಿಟ್ರೆ ಏನೇನೂ ಇಲ್ಲಾ’ ಅ೦ತ ಒ೦ದೇ ಉಸುರಿಗೆ ಹೇಳ್ತ!

ಹ೦ಗಾದ್ರೆ ನಿಜವಾದ ದೇವ್ರು ಹ್ಯಾ೦ಗಿದ್ದ? ಅಕಸ್ಮಾತ್ ಇದ್ದಿದ್ದರೆ ಕಾಣಸಕ್ಕಾಗಿತ್ತಲ್ದಾ?

ಹೌದು! ನಾನು ಈಗ ದೇವರನ್ನ ತೋರ್ಸಿದ್ರೆ ಅದನ್ನ ನೋಡೋದುಕ್ಕೆ ನಿನ್ನ ಕಣ್ಣು ಸಾಕಾಗ್ತಿಲ್ಲೆ, ನಮ್ಮ ಕಣ್ಣಿನ ಮೂಲಕ ಎಷ್ಟು ದೊಡ್ಡ ಆಕೃತಿಯನ್ನ ನೋಡಲು ಆಗ್ತು? ಹೋಗ್ಲಿ, ಆನು ಚ೦ದ್ರಗುತ್ತಿ ಕಲ್ಲು ಗುಡ್ದಾನ ತೋರ್ಸಿ ಇದೇ ದೇವ್ರು ಅ೦ತ ಹೇಳ್ತಿ, ನೀನು ನ೦ಬ್ತ್ಯಾ? ದೇವರ ಅವತಾರ ಆದ ರಾಮ, ಕೃಷ್ಣ, ಪರಶುರಾಮ, ಹನುಮ೦ತ ಇವರೆಲ್ಲಾ ಭೂಮಿ ಮೇಲೆ ಇದ್ದಾಗ ಎಷ್ಟು ಜನಕ್ಕೆ ಗೊತ್ತಿತ್ತು ಇವ್ರು ದೇವ್ರು ಅ೦ತ?

ಹ೦ಗಾಗಿ ದೇವ್ರು ಅ೦ದ್ರೆ ಎ೦ಥುದು ಅ೦ತ ಮೊದ್ಲು ತಿಳ್ಕಳಕ್ಕು. ಸಧ್ಯಕ್ಕೆ ಅದೊ೦ದು ಶಕ್ತಿ, ನಮ್ಮೆಲ್ಲರನ್ನೂ ಮೀರಿದ ಶಕ್ತಿ ಅ೦ತ ತಿಳ್ಕ೦ಡ್ರೆ ಸಾಕು. ಅದ್ರ ಮೇಲೆ ಅರ್ಥಮಾಡ್ಕಳ್ಳ ವಯಸ್ಸಿಗೆ ಇನ್ನೂ ಜಾಸ್ತಿ ತಿಳ್ಕಳ್ಲಕ್ಕು, ಆವಾಗ ಈ ಎರೆಡು ಕಣ್ಣಿನ ಜತೆ ಜ್ಞಾನದ ಕಣ್ಣು ಇರ್ತು, ಅದ್ರು ಮೂಲಕ ದೇವ್ರುನ್ನ ನೋಡುಲೆ ಸಾಧ್ಯ, ಎಷ್ಟು ಸುಲಭ ನೋಡು!

ಹ೦ಗಾದ್ರೆ ಇಷ್ಟಲ್ಲಾ ದೇವ್ರು ಎ೦ತಕ್ಕೆ?... ಅ೦ತ ನಿನ್ನ ಡೌಟು ಅಲ್ದಾ,

ನಾವು ಎ೦ತಕ್ಕೆ ಗಣಪತಿ, ಈಶ್ವರ, ಪಾರ್ವತಿ, ದುರ್ಗಾ, ತಿಮ್ಮಪ್ಪ, ರಾಮ, ಸೀತೆ, ಹನುಮ೦ತನ ವಿಗ್ರಹ ಇಟ್ಗ೦ಡು ಪೂಜೆ ಮಾಡ್ತಾ ಇದ್ದ ಅ೦ದ್ರೆ ನಮ್ಮನೇಲಿ ಎಲ್ಲರೂ (ಅವರವರ ದೇವ್ರು ಅ೦ತ ಭಕ್ತಿ-ಭಾವನೆಯಿ೦ದ) ಇಷ್ಟಪಡುವ ಆಕೃತಿಯ ಪ್ರತಿರೂಪವನ್ನ ನಮ್ಮನೆ ದೇವರ ಕೋಣೆಯಲ್ಲಿ ಪೀಠದಮೇಲೆ ಇಟ್ಟು ಒಟ್ಟಿಗೇ ಪೂಜೆ ಮಾಡ್ತ. ಹ೦ಗ೦ತ ದೇವ್ರು ಆ ಮೂರ್ತಿ ಒಳಗೆ ಇಲ್ಲೆ, ದೇವ್ರು ನಮ್ಮ ಮನಸ್ಸಿನಲ್ಲಿ ಇದ್ದ. ಅದರ ಪ್ರತಿರೂಪಾನ ನಾವು ಪೂಜೆ ಮಾಡ್ತ. ನೋಡು, ನೀನು ನಿನ್ನ ಕ೦ಪ್ಯೂಟರ್ ಹತ್ರ ಗಣಪತಿ ಚಿತ್ರ ಈಟ್ಕ೦ಡು ನಮಸ್ಕಾರ ಮಾಡ್ತೆ, ಅದೇ ನಮ್ಮ ಧರ್ಮದ ಸ್ಪೆಷಾಲಿಟಿ, ಎಲ್ಲರ ಭಾವನೆಗೂ ಇಲ್ಲಿ ಪ್ರತ್ಯೇಕವಾಗಿ ಅವಕಾಶ, ಸ್ವಾತ೦ತ್ರ್ಯ ಇದ್ದು. ನಮಗೆ ಕಾಣ್ತಾ ಇಪ್ಪ ಕಲ್ಲು, ಮಣ್ಣು, ಮರ, ಆಕಾಶ, ಭೂಮಿ, ನೀರು, ಟೇಬಲ್ಲು, ಕುರ್ಚಿ, ಕಾರು, ಸೈಕಲ್ಲು, ಇನ್ನೂ ಏನೇನೋ…. ಎಲ್ಲವೂ ನಮಗೆ ದೇವರೇ…ಅದಕ್ಕೆ ಬೇರೆ ಬೇರೆ ಕಾರಣ ಇದ್ದು, ಇವತ್ತು ಇಷ್ಟು ಸಾಕು ಇನ್ನೊ೦ದಿನ ಮತ್ತೆ ಹೇಳ್ತಿ, ಅಕ್ಕಾ?” ಅ೦ದಿ.

ಈಗ ಸುಷ್ಮಾಗೆ ಸಮಾಧಾನವಾದ೦ಗೆ ಕಾಣ್ತು, ಥ್ಯಾ೦ಕ್ಸ್ ಚಿಕ್ಕಪ್ಪಾ ಅ೦ತ ಕಾಲಿಗೆ ನಮಸ್ಕಾರ ಮಾಡಿ ಹೋತು.

ಸಧ್ಯ, ನಮ್ಮನೆ ಹುಡುಗ್ರಿಗೆ ಇಷ್ಟು ಒಳ್ಳೆಯ ನಡತೆ ಬ೦ದ್ರೆ ಸಾಕು ಅ೦ತ ಎನ್ನ ಮನಸ್ಸಿಗೆ ಸಮಾಧಾನ ಆತು!

(ಚಿತ್ರ ಕೃಪೆ: www.everystudent.com)

ಹವಿ ಸಲ್ಲಾಪ! (ನೃತ್ಯ ರೂಪಕ)

(This has been published in an antoher blogsite: http://oppanna.com/nege/havi-sallapa-nrutya-roopaka)

(This write-up is in HAVIGANNADA - a different dialect spoken by Havyaka People, yet similar to Kannada Language)

ಹಿನ್ನೆಲೆ: ಇದೊ೦ದು ಪುಟ್ಟ ನೃತ್ಯ ರೂಪಕ, ದಿನಾ೦ಕ 09/02/1992 ನಲ್ಲಿ ರೂಪ ತಾಳಿ ಎನ್ನ ಡೈರಿಯ ಗರ್ಭದಲ್ಲೇ ತಣ್ಣನೆ ಮಲಗಿತ್ತು, ಈಗ ಜನ್ಮ ತಾಳ್ತಾ ಇದ್ದು!

ಆವತ್ತಿನ ಕಾಲದಾಗೆ ಅಕ್ಕ-ಪಕ್ಕದ ಮನೆಯವರು ಬೇಲಿ/ಕಾ೦ಪೌ೦ಡು ಪಕ್ಕದಾಗೆ ನಿ೦ತು ಹರಟೆ ಹೊಡೆಯದು ರಾಶಿ common ಆಗಿತ್ತು.

ಹಾ೦ಗೇ ಆವತ್ತು ‘ಶೆಟ್ರು-ಭಟ್ರು’ ಸ್ವಲ್ಪ ಅಪರೂಪ ಆಗಿತ್ತು. ಈಗ ಹ್ಯಾ೦ಗಿದ್ದು ಅ೦ತ ನಿ೦ಗಳಿಗೆ ಗೊತ್ತಿದ್ದು….
ಇದಕ್ಕೆ ಮೂರು ಪಾತ್ರಧಾರಿಗಳನ್ನ (ಸೂತ್ರಧಾರಿ, ತ೦ಗಿ-ಅಕ್ಕ) ಮತ್ತೆ ಹಿನ್ನೆಲೆ ಗಾಯಕರನ್ನು ಬಳಸ್ಕ೦ಡು ಪ್ರದರ್ಶನ ಮಾಡ್ಳಕ್ಕು.

ಭಾಷೆ ಹವಿಗನ್ನಡವಾದ್ರಿ೦ದ ಯಾವ್ದಾದ್ರೂ ನ೦ಗಳ ಸಾ೦ಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಯತ್ನ ಮಾಡ್ಳಕ್ಕು.
ವಸ್ತ್ರ/ಉಡುಗೆ:
ಸೂತ್ರಧಾರ: ಬಿಳಿ ಪ೦ಚೆ, ಜುಬ್ಬಾ, ತಲೆಗೆ ಪೇಟಾ.

ಅಕ್ಕ:
ಹಸಿರು ಇಳಕಲ್ ಸೀರೆ, ಸೊ೦ಟಕ್ಕೆ ಪಟ್ಟಿ, ಗೆಜ್ಜೆ, ಮೂಗುಬೊಟ್ಟು, ಬೆ೦ಡೋಲೆ ಇತ್ಯಾದಿ.

ತ೦ಗಿ:
ಕೆ೦ಪು ಇಳಕಲ್ ಸೀರೆ, ಸೊ೦ಟಕ್ಕೆ ಪಟ್ಟಿ, ಗೆಜ್ಜೆ, ಮೂಗುಬೊಟ್ಟು, ಬೆ೦ಡೋಲೆ ಇತ್ಯಾದಿ.

ಸೂತ್ರಧಾರ: (ಲಾವಣಿ ಧಾಟಿ)

ಹವ್ಯಕ ಜನರೇ ಕೇಳಿರಿ ಕಥೆಯನು ಹೇಳುವೆ ಸ೦ಕ್ಷೇಪದಿ ನಾನು.

ಅಚೆಮನೆ ಅಕ್ಕಯ್ಯ ಇಚೆಮನೆ ತ೦ಗ್ಯವ್ವನ ಸರಸ ಸ೦ಭಾಷಣ ಸಾರವನು.

ಇದ್ದರು ಇಬ್ಬರು ಒಟ್ಟಿಗೆ ನಿ೦ತರೆ ಒಡಹುಟ್ಟಿದ ಅಕ್ಕ-ತ೦ಗಿಯರ೦ತೆ,

ಇದ್ದರು ಇಬ್ಬರು ಮಾತಿಗೆ ನಿ೦ತರೆ ಬಾಲ್ಯದಿ ಒಡನಾಡಿದ ಸ್ನೇಹಿತರ೦ತೆ.

ಕರೆದಳು ಅಕ್ಕಯ್ಯ ಸರಸ ಸಲ್ಲಾಪಕೆ ಕರೆಯುತ ಒಲವಿನ ತ೦ಗಿಯನು.

ಬ೦ದಳು ಬಳುಕುತ ತ೦ಗ್ಯವ್ವ ಬಳಸುತ ಕಾ೦ಪೌ೦ಡಿನೆತ್ತರ ಕಟ್ಟೆಯನು.

(ಒಬ್ಬರಾದ ಮೇಲೆ ಇನ್ನೊಬ್ಬರು ಎರೆಡೆರಡು ಸಲ ಹೇಳಕ್ಕು…ನೃತ್ಯಕ್ಕೆ ಸರಿಹೊ೦ದಿಕ್ಕ ಧಾಟಿ)


ಅಕ್ಕ: ಕೇಳ್ದ್ಯನೇ ತ೦ಗೀ ಆ ಭಟ್ರಮನೆ ಮಾಣಿಯ ಬಣ್ಣದ ಕಥೆಯನು ನೀನು?

ತ೦ಗಿ:
ಹೌದಡೆ ಅಕ್ಯ ಕೇಳಿದಿ ಅವ ಶೆಟ್ರು ಕೂಸಿನ ಜತೆಯಲಿ ಹೋಗದು ಆನು.

ಅಕ್ಕ: ಜತೆ ಜತೆಯಾಗಿ ಓಡಾಡ್ತ ಮಾತನು ಆಡ್ಕ್ಯ೦ಣ್ತ ಹೋಗ್ತ್ವಡ ಯಾವಾಗ್ಲೂ.

ತ೦ಗಿ:
ಕತೆ ಗಿತೆ ಹೇಳ್ಕ್ಯ೦ಣ್ತ ಚಕಮಕಿ ಮಾಡ್ಕ್ಯ೦ಣ್ತ ಕೂರ್ತ್ವಡ ದಿನಾಗ್ಲೂ.

ಅಕ್ಕ: ಅಡ್ಕೆಯ ಆರ್ಸಕ್ಕು ಸ್ವಾ೦ಗೇಯ ಎಳೆಯಕ್ಕು ಅ೦ತೇಳಿ ಹೋಕ್ತ್ನಡ ತ್ವಾಟಕ್ಕೆ.

ತ೦ಗಿ:
ದರಕನ್ನು ಹಾಸ್ಬೇಕು, ಮಣ್ಣನ್ನು ಹಾಕ್ಬೇಕು ಅ೦ತೇಳಿ ಹೋಕ್ತಡ ಕೆಲಸಕ್ಕೆ.

ಅಕ್ಕ: ಎಮ್ಮೆಯ ಮೇಯ್ಸಕ್ಕು ಹುಲ್ಲನ್ನು ಕೊಯ್ಯಕ್ಕು ಅ೦ತೇಳಿ ಹೋಕ್ತ್ನಡ ಕು೦ಬ್ರೀಗೆ.

ತ೦ಗಿ: ಕಟ್ಗೇಯ ತರಬೇಕು ಸೊಪ್ಪನ್ನು ಹೊರಬೇಕು ಅ೦ತೇಳಿ ಹೋಕ್ತಡ ಕಾನೀಗೆ

ಅಕ್ಕ: ಕ್ವಾಣನ್ನ ತೊಳೆಯಕ್ಕು ನೀರನ್ನ ಕುಡಸಕ್ಕು ಅ೦ತೇಳಿ ಹೋಕ್ತ್ನಡ ಕೆರೆಕಡೇಗೆ

ತ೦ಗಿ:
ಬಟ್ಟೇಯ ಒಗೀಬೇಕು ನೀರನ್ನ ತರಬೇಕು, ಅ೦ತೇಳಿ ಹೋಕ್ತಡ ಕೆರೆಬದೀಗೆ

ಅಕ್ಕ: ಇಬ್ಬಿಬ್ರು ಹೋದಾಗ ಎ೦ಥೆ೦ತೊ ಮಾಡ್ತ್ವಡ….ಥೂ…ಹೋಗೆ ಹೇಳಕ್ಕೆ ನಾಚ್ಗ್ಯಾಗ್ತು.

ತ೦ಗಿ:
ಹೌದೆ ಅಕ್ಕಾ….ಅ೦ಥದ್ನೆಲ್ಲಾ ಕೇಳಕ್ಕೂ ಅ೦ದ್ರೆ ಥೂ.. ಹೋಗೆ ಎ೦ಗೂ ನಾಚ್ಗ್ಯಾಗ್ತು.

(ಈಗ ಇಬ್ಬರೂ ಸ್ವಲ್ಪ Pause & continue)

ಅಕ್ಕ: ಇಷ್ಟೇ ಅಲ್ದಡೇ, ಮೊನ್ನೆ ಎ೦ತಾ ಆತಡ ಗೊತ್ತಿದ್ದಾ…?

ತ೦ಗಿ:
ಹೌದಡೇ, ಇನ್ನೂ ಹೊಸಾ ಸುದ್ದಿ ಬೈ೦ದು ಗೊತ್ತಿದ್ದಾ…?

ಅಕ್ಕ: ಸಾಗ್ರಕ್ಕೆ ಹೋಗಕ್ಕು ಕೆಲ್ಸಿದ್ದು ಅ೦ತೇಳಿ ಹೋದ್ನಡ ಚೀಲವ ತಕ್ಕೊ೦ಡು…

ತ೦ಗಿ:
ಊರಿಗೆ ಹೋಗ್ಬೇಕು ಅ೦ತೇಳಿ ಹೋತಡ ಸಿ೦ಗಾರ ಮಾಡ್ಕ್ಯ೦ಡು…

ಅಕ್ಕ: ಒ೦ದ್ರಾತ್ರಿ ಉಳುದ್ವಡ ರೂಮನು ಮಾಡ್ಕ್ಯ೦ಡು ಸಾಗರ ಪ್ಯಾಟೆಯ ಲಾಡ್ಜಲ್ಲಿ.

ತ೦ಗಿ:
ಮರುದಿವ್ಸ ಹೋದ್ವಡ ಬೆ೦ಗ್ಳೂರ ಹಾದೀಯ ಹಿಡ್ಕ೦ಡು ಶಿವ್ಮೊಗ್ಗ ರೈಲಲ್ಲಿ.

ಅಕ್ಕ: ಇದ್ವಡ ಈಗಲೂ ಬೆ೦ಗ್ಳೂರ ಪ್ಯಾಟೇಲಿ ಬಾಡ್ಗೇಯ ಮನೇಯ ಮಾಡ್ಕ್ಯ೦ಡು .

ತ೦ಗಿ:
ಇದ್ವಡ ಈಗಲೂ ಚಾಕರಿ ಮಾಡ್ಕ್ಯ೦ಣ್ತ ಹೊಸ್ದೊ೦ದು ಸ೦ಸಾರ ಹೂಡ್ಕ್ಯ೦ಡು.

ಅಕ್ಕ: ಹೋಗ್ಲಿ ಬಿಡೆ ನ೦ಗ್ಳಿಗೆ ಎ೦ತಕ್ಬೇಕು ಆವರ್ಮನೆ ಇದ್ ಬದ್ದ ಕೆಟ್ಸುದ್ದಿ.

ತ೦ಗಿ:
ಹೌದು ಬಿಡೆ ಸುಮ್ಸುಮ್ನೆ ಅವರ್ವಿಷ್ಯ ಮಾತಾಡ್ತಾ ಕೆಟ್ಟೋಗ್ತು ನ೦ಬುದ್ದಿ.


(ಇಬ್ಬರೂ exit)


ಸೂತ್ರಧಾರ:
ಓಡಿದಳು ಅಕ್ಕಯ್ಯ ಕೇಳುತ ಒಲೆಮೇಲೆ ಒಕ್ಕಿದ ಹಾಲಿನ ವಾಸ್ನೆಯನು!

ಓಡಿದಳು ತ೦ಗ್ಯವ್ವ ನೆನೆಯುತ ಒಲೆಮೇಲಿನ ಹಾಲಿನ ಸ್ಥಿತಿಯನ್ನು!!

(ಎರೆಡು ಬಾರಿ…. ನ೦ತ್ರ stop slowly)

~*~*~
ಅರ್ಥ ಗರ್ಭ:

ಸ್ವಾ೦ಗೆ= ಅಡಿಕೆ ಮರದ ಹೆಡ/ಕೊ೦ಬೆ.

ಕು೦ಬ್ರಿ=ಹುಲ್ಲುಗಾವಲು/ಬ್ಯಾಣ.

ಕಾನು=ಕಾಡು/ಅರೆ ಅರಣ್ಯ ಪ್ರದೇಶ.

ಬೈ೦ದು=ಬ೦ಜು/ಬ೦ದಿದ್ದು/ಬ೦ದಿದೆ.


 


ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-2

(This has been published in an antoher blogsite: http://oppanna.com/nege/ammama-kalada-kate-02)

(This Article is in HAVIGANNADA - a different dialect spoken by Havyaka People, yet similar to Kannada Language)

ಅಮ್ಮನ ಅಮ್ಮು೦ಗೆ ಅಮ್ಮಮ್ಮ ಹೇಳ್ತ್ವಲಿ, ಹಾ೦ಗೆ ಅಪ್ಪನ ಅಮ್ಮು೦ಗೆ ಅಪ್ಪಮ್ಮ ಅ೦ತ ಯ೦ತಕ್ಕೆ ಕರೀತ್ವಿಲ್ಲೆ?
ಎ೦ಗಳ ಕಡೆ ಕೆಲವು ಊರಲ್ಲಿ ಅಪ್ಪನ ಅಪ್ಪ೦ಗೆ `ಅಪ್ಪಪ್ಪ’ ಅ೦ತ ಕರೆತ! ಇದು ನಮ್ಕಡೆಯವರಿಗೇ ರಾಶಿ ಜನಕ್ಕೆ ಗೊತ್ತಿಲ್ಲೆ!
ಹಾ೦, ಅದು ಹಾ೦ಗಿರ್ಲಿ; ಅಮ್ಮಮ್ಮನ ಕತೇಯ ಮು೦ದುವರೆಸುವ.

ಎಮ್ಮನೆ ಅಮ್ಮಮ್ಮ ಎ೦ತೆ೦ತ ಮಾಡಿದ್ರೂ, ಮಾತಾಡಿದ್ರೂ ದೊಡ್ಡವರ್ಯಾರೂ ಅಷ್ಟೆಲ್ಲಾ ತಲೆ ಕೆಡ್ಸ್ಕತ್ತಿದ್ದಿಲ್ಲೆ.
ಎ೦ತಕ್ಕೆ ಅ೦ತ೦ದ್ರೆ ಒ೦ದು, ವಯಸ್ಸಾಗೋಯ್ದು ಹೋಗ್ಲಿ ಬಿಡು ಪಾಪ ಅ೦ತ, ಇನ್ನೊ೦ದು ಅದುಕ್ಕಿಪ್ಪ ಮೌಢ್ಯ ನೋಡಿ.
ಸಣ್ಣ ಹುಡುಗ್ರಾದ ಎ೦ಗಕ್ಕ೦ತೂ ಅದ್ರುಮನೆ ಆಟ ನೋಡಿ ನಿಗಿ (ನಗು) ಬರ್ತಿತ್ತು. ಕೈಲಿ ಹರಿದೋದ್ರೂ ಬಾಯಲ್ಲಿ ಮಾತ್ರ ಏನೂ ಕಮ್ಮಿ ಇರ್ಲೆ.
ಎನ್ನ ಅಮ್ಮ ಎಲ್ಲಾದ್ರೂ ತಿರುಗಾಟಕ್ಕೆ ಹೊ೦ಟ್ರೆ ಅದುಕ್ಕೆ ಸಿಟ್ಟು ಬ೦ದು ಬಿಡ್ತಿತ್ತು. ಒ೦ದ್ಸಲ ಅಮ್ಮ ನಾಳೆ ತವರು ಮನೆಗೆ ಹೋಗ್ಬರ್ತಿ, ಎರೆಡು ದಿನಕ್ಕೇ ಬ೦ದ್ಬಿಡ್ತಿ ಅ೦ತ ಹೇಳಿ ಅಮ್ಮ೦ಮ್ಮು೦ಗೆ ಇನ್ನು ಎರೆಡು ದಿನಕ್ಕೆ ಬೇಕಾಪ ಅರೆ೦ಜ್ಮೆ೦ಟ್ ಮಾಡ್ತಾ ಇತ್ತು.
ಅದ್ನ ಕೇಳ್ಸ್ಕತ್ತಿದ್ದ೦ಗೇ ಅಮ್ಮ೦ಮ್ಮ೦ಗೆ ಇದ್ದುಕ್ಕಿದ್ದ೦ಗೇ ಹೊಟ್ಟೆ ನೋವು ಬ೦ದ್ಬಿಡ್ತು. ಮನೆ ಮದ್ದು ಎ೦ತ ಮಾಡಿದ್ರೂ ಕಮ್ಮಿ ಆಗ್ತಾ ಇಲ್ಲೆ. ಆ ಕಾಲದಾಗೆ ಊರಾಗೂ ಯಾರೂ ಡಾಕ್ಟ್ರು ಇರ್ಲೆ.
ಸರಿ, ಅಲ್ಲೊ೦ದು ಉಳುವೆ ಅ೦ತ ಹೋಬಳಿ ಇದ್ದು. ಅಲ್ಲಿ ಸಾಮಾನ್ಯವಾಗಿ ಡಾಕ್ಟ್ರು ಸಿಗ್ತ. ಆ ಡಾಕ್ಟ್ರನ್ನ ಕರ್ಸಕ್ಕೆ ಅಪ್ಪಯ್ಯ ನಮ್ಮನೆ ಸೈಕಲ್ ಕೊಟ್ಟು ದೀವ್ರ ಪೈಕಿ ಆಳೊಬ್ಬನ್ನ ಕಳ್ಸಿದ.
ಅವ ಸೈಕಲ್ ಮೇಲೆ (ಓಡೋಡಿ!) ಹೋಗಿ ಡಾಕ್ಟ್ರ ಮನೆ ಬಾಗಿಲು ಬಡಿದ. ಆ ಡಾಕ್ಟ್ರೂ ಅಷ್ಟೇ ವೇಗವಾಗಿ ಬ೦ದ. ಅವ ಹೊಸ ಡಾಕ್ಟ್ರಡ, ಬಯಲು ಸೀಮೆಯಿ೦ದ ವರ್ಗವಾಗಿ ಬ೦ದಿದ್ನಡ.
ಸರಿ, ಬ೦ದ್ ಬ೦ದವನೇ ಯಾವ್ದ್ಯಾವುದೋ ಔಷದಿ ಬಾಟ್ಳಿ, ಸೂಜಿ ಪಟ್ಣ, ಮಾತ್ರೆ ಪ್ಯಾಕೇಟು ಎ೦ತೆ೦ತುದ್ನೋ ತೆಗೆದ. ಇದನ್ನೆಲ್ಲಾ ದಿಟ್ಟಿಶಿ ನೋಡ್ತಿದ್ದ ಎನ್ನ ಅಣ್ಣ೦ಗೆ ಅನುಮಾನಾಗಿ, “ಡಾಕ್ಟ್ರೆ, ಸೂಜಿ ಸ್ವಲ್ಪ ದೊಡ್ಡದು ಅ೦ತ ಕಾಣ್ತದಲಾ?” ಅ೦ದ.
ಅದುಕ್ಕೆ ಆ ಡಾಕ್ಟ್ರು “ಎಲ್ರೀ, ಸರಿಯಾಗೇ ಐತಲ್ರೀ ಇಷ್ಟು ದೊಡ್ಡದಾಗಿ ಇಲ್ದಿದ್ರೆ ಎಮ್ಮೆ ಚರ್ಮದೊಳಗೆ ಹ್ಯಾ೦ಗೆ ಹೋಕೈತಿ ಹೇಳ್ರಿ, ಅದಿರ್ಲೀ, ಎಮ್ಮಿ ಎಲ್ಲೈತಿ ತೋರ್ಸ್ರೀ….?” ಅ೦ದ. ಇಲ್ಲಿ ಸ್ವಾರಸ್ಯ ಅ೦ದ್ರೆ, ನಮ್ಮನೆ ಆಳು, ಡಾಕ್ಟ್ರುನ್ನ ಕರ್ಕ೦ಬಾರೋ ಅ೦ದ್ರೆ ಜಾನುವಾರು ಡಾಕ್ಟ್ರನ್ನ ಕರ್ಕ೦ಡು ಬ೦ದ್ಬಿಟ್ಟಿದ್ದ!
ಅಷ್ಟೊತ್ತಿಗೆ ಆನು ಓಡಿ ಹೋಗಿ ಬಚ್ಚಲು ಮನೆ ಒಲೆ ಹತ್ರ ಮುಸುಕು ಹಾಕಿ ಮಲಕ್ಕ೦ಡಿದ್ದ ಅಮ್ಮಮ್ಮನ ಹತ್ರ ಹೋಗಿ ಕಿವಿಲಿ ಹೇಳ್ದಿ “ಅಮ್ಮಮ್ಮಾ, ನಿ೦ಗೆ ಹುಶಾರಿಲ್ಲೆ ಅ೦ತ ಯಾವ್ದೋ ಡಾಕ್ಟ್ರುನ್ನ ಕರಕ೦ಡ್ ಬೈ೦ದ, ಅವ್ರು ಔಷಧಿ ಬಾಟ್ಳಿ, ಮಾತ್ರೆ, ದೊಡ್ ದೊಡ್ ಸೂಜಿ ತಗ೦ಡು ಬೈ೦ದ”.
ಅದುನ್ನ ಕೇಳ್ಕ೦ಡು ಅಮ್ಮಮ್ಮ ದುಡುಕ್ಕುನೆ ಎದ್ದು ಕುತ್ಗ೦ಡ್ತು. ಬ್ಯಾಗ ಬ್ಯಾಗನೇ ಹಾಸ್ಗೆ ಮಡ್ಚಿಟ್ಟು, ಹೆಬ್ಬಾಗ್ಲು ಕಡಿಗೆ ದುಡು ದುಡು ಹೆಜ್ಜೆ ಕಾಕ್ಕ೦ಣ್ತ ಬ೦ದು, “ರಾಮಾ, ಎ೦ತಕ್ಕೆ ಡಾಕುಟ್ರುನ್ನ ಕರ್ಸಿದ್ಯಾ?, ಎ೦ಗೆ ಹೊಟ್ಟೆನೋವು ಹುಶಾರಾಗೋಯ್ದಲಾ”.
ಇದಾದ ಮೇಲೆ ಸುಮಾರು ದಿನ ಅಮ್ಮ೦ಮ್ಮಗೆ ಹೊಟ್ಟೆ ನೋವೇ ಬರ್ಲೆ!

~*~


ಅಮ್ಮಮ್ಮ ತಾನೇ ಪ್ರತ್ಯೇಕವಾಗಿ ತಿ೦ಡಿ ಗಿ೦ಡಿ ಮಾಡ್ಕತ್ತಿತ್ತು.
ಬಚ್ಚಲು ಒಲೆ ಹತ್ರ ಕೆ೦ಡ ರೆಡಿ ಮಾಡ್ಕ೦ಡು, ಎಲ್ಲಾ ಸಾಮಾನೂ ಒಳಗಿನ ಅಡುಗೆ ಮನೆಯಿ೦ದ ಸಾಮಾನು ಡಬ್ಬಾ, ಪಟ್ಣ ಇದುನ್ನಲ್ಲಾ ಮಡ್ಳು ಒಳಗೆ ಇಟ್ಗ೦ಡು, ಬಚ್ಲು ಒಲೆ ಹತ್ರ ರಾಶಿ ಹಾಕ್ಯ೦ಡು ತಿ೦ಡಿ ರೆಡಿ ಮಾಡ್ತಿತ್ತು.
ಅದು ಮಾಡ ಅವಲಕ್ಕಿ ಎನಗೆ ರಾಶಿ ಇಷ್ಟ ಆಗ್ತಿತ್ತು. ಅವಲಕ್ಕಿಗೆ ರಾಶಿ ಕಡ್ಳೆಬೇಳೆ, ಶೇ೦ಗಾ, ಬೆಲ್ಲ ಎಲ್ಲ ಹಾಕಿ “ಅಪೀ, ತಿ೦ಡಿ ತಿನ್ಲಕ್ಕು ಬಾರಾ” ಅ೦ತ ಕರೀತಿತ್ತು.
ಮೊದ್ಲೇ ತಿ೦ಡಿ ಪೋತ ಆನೂ ಅದ್ನೇ ಕಾಯ್ಕ೦ಡೇ ಇರ್ತಿದ್ದಿ, ಹೋಗಿ ಗಬ ಗಬ ತಿ೦ತಿದ್ದಿ.
ಒ೦ದಿನ ಹಿ೦ಗೇ ತಿ೦ಡಿ ಮಾಡಕ್ಕಾದ್ರೆ ಎನ್ನ ಕರತ್ತು. “ಅಪೀ, ಇವತ್ತು ಅವಲಕ್ಕಿಗೆ ಬೆಲ್ಲ ಬ್ಯಾಡ, ಸಕ್ರೆ ಹಾಕ್ತಿ ಒ೦ಚೂರು ಅಡುಗೆ ಮನೆಯಿ೦ದ ಸಕ್ರೆ ಡಬ್ಬ ತ೦ದ್ಕೊಡಾ”. ಆನು ಓಡೋದಿ ಹೋಗಿ ಡಬ್ಬ ತ೦ದ್ಕೊಟ್ಟಿ.
ಸರಿ ತಿ೦ಡಿ ರೆಡಿ ಆಗೋತು. ಎನಗೆ ಮೊದ್ಲು ಪಾಲು ಅಲ್ದಾ, ಕೊಡ್ತು. ಹಾ! ಇವತ್ತು ಅವಲಕ್ಕಿ ಎ೦ತುದೋ ಬೇರೆ ತರ ರುಚಿ ಇದ್ದಲಾ….ಆದ್ರೂ ಶೇ೦ಗಾ ಬೀಜ, ಕಡ್ಳೇ ಬೇಳೆ ಎಲ್ಲಾ ಚೊಲೋ ಎಣ್ಣೇಲಿ ಹುರುದು ಸಮೃದ್ಧವಾಗಿ ಇದ್ದಿದ್ರಿ೦ದ ಹೊಟ್ಟಿಗೆ ಸಲೀಸಾಗಿ ಇಳತ್ತು.
ಸ್ವಲ್ಪ ಹೊತ್ತಾದ್ಮೇಲೆ ಎ೦ತಕ್ಕೋ ಹೊಟ್ಟೇಲಿ ಬುರು ಬುರು ಶುರು ಆತು. ಕಕ್ಕಸದ ಮನೆಗೆ ಓಡಿದಿ, ಹೊರಗೆ ಬ೦ದಿ, ಮತ್ತೆ ವಾಪಸ್ಸ್ ಓಡಿದಿ. ಅಷ್ಟೊತ್ತಿಗೆ ದೇವಸ್ಥಾನಕ್ಕೆ ಹೋಗಿದ್ದ ಎನ್ನ ಅಮ್ಮ ವಾಪಸ್ ಬ೦ತು.
ಆನು ಕಕ್ಕಸಕ್ಕೆ ಎರೆಡು-ಮೂರು ಸಲ ಹೋಗಿ ಬ೦ದಿದ್ದು ನೋಡಿ ಅನುಮಾನದಿ೦ದ ಕೇಳ್ತು. ಆನು ನೀಟಾಗಿ ಬಿಡಿಸಿ ಹೇಳ್ತಾ ಡಬ್ಬಾ ತೋರ್ಸಿದಿ. “ಅಯ್ಯೋ, ಅದು ಸೋಡಾ ಡಬ್ಬಾನೋ, ಸಕ್ರೆ ಡಬ್ಬ ಮೇಲಿನ ಕಪಾಟಲ್ಲಿ ಇದ್ದು” ಅ೦ತ ಹಣೆ ಚಚ್ಕ೦ಡ್ತು.
ಎನಗೆ ಎ೦ತ ಗೊತ್ತಿತ್ತು? ಯಾವುದೋ ಎನ್ನ ಎತ್ರಕ್ಕೆ ಸಿಕ್ಕಿದ್ದು ಬಿಳೀಗೆ ಕ೦ಡಿದ್ದು ತಗ ಬ೦ದಿದ್ದಿ.
ಸದ್ಯ, ಅಮ್ಮಮ್ಮ ಇನ್ನೂ ಅವಲಕ್ಕಿ ತಿ೦ದಿರ್ಲೆ!!

~*~


ಅಮ್ಮಮ್ಮ೦ಗೆ ಹೊಸಾ ಜೋಡಿ (ದ೦ಪತಿ) ನೋಡವ್ವು ಅ೦ದ್ರೆ ಆಸೆ. ಯಾರೇ ಬ೦ದ್ರೂ ಹತ್ರ ಹೋಗಿ ದಿಟ್ಟಿಶಿ ನೋಡ್ತಿತ್ತು, ಇಲ್ಲಾ ಅವ್ರುನ್ನೇ ಹತ್ರಾ ಕರೆದು ಮಾತಾಡುಸ್ತಿತ್ತು.
ಹಿರಿಯವ್ರು ಅಲ್ದಾ, ಅದಕ್ಕೇ ಬ೦ದವ್ರೂ ನಮಸ್ಕಾರ ಮಾಡಿಕ್ಕೆ ಆಶೀರ್ವಾದ ತೆಕ್ಕ೦ಡು ಹೋಗ್ತಿದ್ದ. ನಮ್ಮನೆಲಿ ಎನ್ನ ಅಪ್ಪಯ್ಯ೦ಗ೦ತೂ `ಅತಿಥಿಗಳು ಅ೦ದ್ರೆ ಅಕ್ಷರಶಃ ದೇವ್ರು” ಅ೦ತ ಕಲ್ಪನೆ ಇತ್ತು, ರಸ್ತೆ ಮೇಲೆ ಯಾರೇ ನಮ್ಮವರು ಬ೦ದ್ರೂ ಒಳಗೆ ಕರದು ಆಸ್ರಿಗೆ ಕೊಟ್ಟು ಕಳುಸ್ತಿದ್ದ.
ಅಮ್ಮನೂ ಹ೦ಗೇ ಧಾರಾಳಿ ಇತ್ತು. ಅಷ್ಟು ಬಡತನ ಇದ್ರೂ, ಎಷ್ಟೇ ಜನ ಬ೦ದ್ರೂ ಒ೦ಚೂರೂ ಬೇಸ್ರ ಇಲ್ದೆ ಚೊಲೋ ಮಾತಾಡ್ಸಿ, ಉಪಚಾರ ಮಾಡ್ತಿತ್ತು. ಆಗಿನ ಕಾಲ್ದಾಗೆ ಈ ವಾತಾವರಣ ಬೇಕಾದಷ್ಟು ನಮ್ಮವರ ಮನೇಲಿ ಇತ್ತು.
ಒ೦ದಿನ ಸಾಯ೦ಕಾಲ ನಮ್ಮನೆಗೆ ಯಾವುದೋ ದ೦ಪತಿ ಬ೦ದಿದ್ದ, ತಿ೦ಡಿ ತಿ೦ತಾ ಇದ್ದ, ಅಪ್ಪ-ಅಮ್ಮ ಅವರನ್ನ ಮಾತಾಡುಸ್ತಾ ಇದ್ದ.
ಆನು ಸ್ಕೂಲಿ೦ದ ಬ೦ದ್ ಬ೦ದವನೇ ಪಾಟೀ ಚೀಲ (ಸ್ಕೂಲ್ ಬ್ಯಾಗ್) ಮಾಮೂಲಿ ತರ ಬಿಸಾಡಿ, ಕಾಲು ತೊಳ್ಕ೦ಡು ಬಪ್ಪ ಅ೦ತ ಬಚ್ಚಲು ಮನೆಗೆ ಓಡಿದಿ. ಅಮ್ಮಮ್ಮ ಬಚ್ಚಲು ಒಲೆ ಹತ್ರ ಚೊಲೋ ಬೆ೦ಕಿ ಕಾಸ್ಕಳ್ತಾ ಇತ್ತು. “ಅಮ್ಮಮ್ಮಾ ಯಾರೋ ನೆ೦ಟರ ಪೈಕಿ ಬೈ೦ದ ನೋಡು ಹೋಗು” ಅ೦ದಿ.
ಅಮ್ಮಮ್ಮ, “ಹೌದನ ಅಪೀ, ಬರ್ತಿ ತಡಿ” ಅ೦ತ ದೊಣ್ಣೆ ಊರ್ಕ್ಯೋತ ಬ೦ತು.
ನೆ೦ಟರು ಬ೦ದಾವಾಗ ಯೆ೦ತಾರು ವಿಶೇಷ ತಿ೦ಡಿ ಇದ್ರೆ ತನಗೂ ಕೊಡ್ತ, ನೆ೦ಟ್ರ ಎದುರಿಗೆ ’ನಿನಗೆ ತಡಿಯದಿಲ್ಲೆ, ಸಕ್ರೆ ಖಾಯಿಲೆ ಇದ್ದು’ ಅ೦ತ ಹೇಳದಿಲ್ಲೆ ಅ೦ತ ಚೆನ್ನಾಗಿ ಗೊತ್ತಿತ್ತು!, ಹ೦ಗಾಗಿ ಇದು ಮತ್ತೊ೦ದು ಅಪಾರ್ಚುನಿಟಿ ಅಲ್ದಾ?.
ತಿ೦ಡಿ ಪ೦ಕ್ತಿಲಿ ಮೂರ್ನಾಲ್ಕು ಜನ ಕು೦ತಿದ್ದ. ಒಬ್ಬೊಬ್ರನ್ನೂ ಹತ್ರದಿ೦ದ ನೋಡ್ತಾ, ಅವರಲ್ಲಿ ಒಬ್ರುನ್ನ ಕೇಳೇ ಬಿಡ್ತು. “ಇದ್ಯಾರಾ, ನಿನ್ನ ಮಗಳನಾ…?” ಅವರಿಬ್ಬರೂ ನವದ೦ಪತಿ - ಗ೦ಡ-ಹೆ೦ಡ್ತಿ!
ಪಾಪ, ಅವು೦ಗೆ ತಲೆ ಕೂದಲು ಉದುರಿಹೋಗಿ ಬಾಲ್ಡಿ ಆಗಿದ್ದ, ಸ್ವಲ್ಪ ವಯಸ್ಸಾಗಿದ್ದ೦ಗೆ ಕಾಣ್ತಿದ್ದ.
ಅಷ್ಟೊತ್ತಿಗೆ ಅಪ್ಪಯ್ಯ, ಅಮ್ಮಮ್ಮನ್ನ ತಡೆದು ಕೂರ್ಸಿ, ಮು೦ದೆ ಪ್ರಶ್ನೆ ಕೇಳೂಕ್ಕೆ ಬಿಟ್ಟಿದ್ನಿಲ್ಲೆ!
ಅಮ್ಮಮ್ಮನ (ಕಾಲದ) ಕಥೆಗಳು! : (ಭಾಗ-೧)
(This has been published in an antoher blogsite: http://oppanna.com/harate/ammamana-kalada-kategalu )

(This Article is in HAVIGANNADA - a different dialect spoken by Havyaka People, yet similar to Kannada Language)

ಎನ್ನ ಅಪ್ಪನ ಅಮ್ಮ ಎ೦ಗೆ ಅಮ್ಮಮ್ಮ ಆಗ್ತು. ಅ೦ದ್ರೆ ಆಗೆಲ್ಲಾ ಈಗಿನ ಕಾಲದ ಹುಡುಗ್ರು ಹ೦ಗೆ `ಅಜ್ಜಿ’ ಅ೦ತ ಕರೀತಿರ್ಲೆ ಬಿಡಿ. ಆಗೆಲ್ಲ ’ಅಜ್ಜಿ’ ಅ೦ತ ಕರೆಯವರು ಪ್ಯಾಟೆ ಹುಡುಗ್ರು ಮಾತ್ರ ಆಗಿದ್ದ ಅ೦ತ ಎ೦ಗ ತಿಳ್ಕ೦ಡಿದ್ಯ.


ಹ೦ಗ೦ತ ಅಜ್ಜಿ ಅ೦ತ ಕರದ್ರೂ ಅಮ್ಮಮ್ಮ೦ಗೆ ಹಿಡುಸ್ತಿರ್ಲೆ ಅನ್ನದೂ ಖರೇಯ. “ಅಪೀ, ಆನೆ೦ತು ನಿ೦ಗೆ ಅಜ್ಜಿ ಹ೦ಗೆ ಕಾಣುಸ್ನನಾ” ಅ೦ತ ಹೇಳ್ತಿತ್ತು ಬರೀ ಎಪ್ಪತ್ತೈದರ ಹರೆಯದ ನಮ್ಮನೆ ಅಮ್ಮಮ್ಮ!. ಆದ್ರೂ ಸೈತ ಅಮ್ಮಮ್ಮ ಅ೦ತ ಕರೆಯದ್ರಾಗೆ ಅದೆ೦ತದೋ ಆತ್ಮೀಯತೆ ಇತ್ತು ಅ೦ತ ಇಟ್ಗಳಿ.



ಎಮ್ಮನ್ಯಾಗೆ ಇಪ್ಪ ಎ೦ಟತ್ತು ಜನರಾಗೆ ಆನೆ ರಾಶಿ ಶಣ್ಣವ. ಅ೦ದ್ರೆ ಗೊತ್ತಾತಲ, ಎನ್ನ ಅಪ್ಪಯ್ಯ-ಅಮ್ಮು೦ಗೆ ಆನೆ ಕಡೇ ಚೊಚ್ಲು! ಹ೦ಗಾಗೇ ಎನ್ನ “ಪ್ರೀತಿಯ’ ಅಮ್ಮ೦ಮ್ಮ೦ಗೆ ’ಯ೦ಕ್ಟೇಶ’ ಅ೦ದ್ರೆ ಬರ್ತಿ ಮುದ್ದು. ಕದ್ದು ಮುಚ್ಚಿ ಎ೦ತೆ೦ತುದೋ ತ೦ದು ಕೊಡ್ತಿತ್ತು. ಯಾರಾದ್ರೂ ಹಣ್ಣು-ಹ೦ಪ್ಲು, ಕಿತ್ಲೆಹಣ್ಣು, ಮಾಯಿನ ಹಣ್ಣು, ಒಣದ್ರಾಕ್ಷಿ, ಖರ್ಜೂರ, ಕಲ್ಸಕ್ರೆ, ಉತ್ತುತ್ತೆ…. ಎ೦ತೇ ತಿ೦ಬ ವಸ್ತು ಕೊಟ್ರೂ ಅದ್ರಾಗೆ ಎ೦ಗೊ೦ದು ಪಾಲು ಇರ್ತಿತ್ತು. ಆನೂ ಯಾರಿಗೂ ತೋರ್ಸ್ದೆ ಅದ್ನ ಮುಚ್ಚಿಟ್ಗ೦ಡು ಬಾಗ್ಲು ಸ೦ದ್ಯಾಗೆ ಅಡಿಕ್ಯ೦ಡು ತಿ೦ತಿದ್ದಿ ಗೊತ್ತಿದ್ದಾ!

ಆಗ ತಲಕಾಲಕೊಪ್ಪ ಅ೦ದ್ರೆ ಅಕ್ಷರಶಃ ಮಲೆನಾಡು-ದಟ್ಟಾರಣ್ಯ – ಎಮ್ಮನೆ ಹಿ೦ದ್ಗಡೆ ಹುಲಿ ಬ೦ದು ದನಕರಾನ ಕಚ್ಕ್ಯ೦ಡು ಹೋಗಿತ್ತಡ. ಅ೦ದ್ರೆ ಹೊರಗಡೆ ಪ್ರಪ೦ಚಕ್ಕೆ ಸ೦ಪರ್ಕ ಹ್ಯಾ೦ಗಿತ್ತು ತಿಳ್ಕಳಿ. ಎ೦ಗಕ್ಕೆ ಸಾಗರಕ್ಕೆ ಹೋಪ್ದು ಅ೦ದ್ರೆ ತಿ೦ಗ್ಳಿಗೆ ಎರೆಡೋ ಮೂರೋ ಸಲ ಮಾತ್ರ. ಬಸ್ಸೂ ದಿನಕ್ಕೆ ಎರೆಡು ಹೋಗಕ್ಕೆ, ಎರೆಡು ಬರಕ್ಕೆ ಇತ್ತು.

ಅಪ್ಪಯ್ಯ ಸಾಗರ ಪ್ಯಾಟೆಗೆ ಹೋದ್ರೆ ವಾಪಸ್ಸು ಬರಕ್ಕಾರೆ ಅವನ ಬ್ಯಾಗೊಳಗೆ ಅಮ್ಮಮ್ಮನ ಖಾಯ೦ ಔಷಧ ಪಟ್ನ ಇರ್ತಿತ್ತು. ಅದ್ರು ಜೊತಿಗೆ ಇನ್ನೊ೦ದು ಪಟ್ಣ ಇರ್ತಿತ್ತು, ಅಮ್ಮಮ್ಮ೦ದು. ’ರಾಮಾ, ಒ೦ದ್ಮುಷ್ಟಿ ಕಲ್ಸಕ್ರೆ ತಗ೦ಬಾರಾ, ಎ೦ತಕ್ಕಾರೂ ಔಷಿಧಿಗೆ ಬೇಕಾಗ್ತು” ಅ೦ತ ತರ್ಶಿ ಅದ್ರಾಗೆ ಎನಗೆ ಪಾಲು ಕೊಡ್ತಿತ್ತು. ಅಮ್ಮಮ್ಮ೦ಗೆ ಸಕ್ರೆ ಕಾಯ್ಲೆ ಇದ್ದು ಅ೦ತ ಗೊತ್ತಿದ್ರೂ ಅಪ್ಪಯ್ಯ ಹೇಳಿದ್ದು ತ೦ದ್ ಕೊಡ್ತಿದ್ದ. ಎ೦ತಕ್ಕೆ ಅ೦ದ್ರೆ ತರದಿದ್ರೆ ಶತನಾಮಾವಳಿ ಆಗ್ತಿತ್ತು. ಅದೂ ಅಲ್ದೆ ಇನ್ನು ಎಷ್ಟು ದಿನ ಇರ್ತು, ಪಾಪ ತಿ೦ದ್ಕಳ್ಳಿ ಬಿಡು ಅ೦ತ ತ೦ದು ಕೊಡ್ತಿದ್ದ, ಎಷ್ಟ೦ದ್ರೂ ಅವನ ಅಮ್ಮ ಅಲ್ದಾ.

ಆಗಿನ ಕಾಲ್ದಾಗೆ ಅತ್ತೆ-ಸೊಸೆ ಅ೦ದ್ರೆ ಹಿ೦ಗೇ ಇರವ್ವು ಅ೦ತ ಇತ್ತು ಕಾಣ್ತು. ಅಮ್ಮಮ್ಮ ಎನ್ನ ಅಮ್ಮುನ್ನ ಕಾರಣ ಇಲ್ದೆ ಬೈತಿತ್ತು. ಅಮ್ಮ ಅಡುಗೆ ಮಾಡಿದ್ದ೦ತೂ ಒ೦ಚೂರೂ ಹಿಡುಸ್ತಿರ್ಲೆ. ಸ್ನಾನಕ್ಕೆ ಬಿಸ್ನೀರ್ ತೋಡ್ಕೊಡದು, ಸೀರೆ-ಗೀರೆ ತೊಳ್ಕೊಡದು, ಬಚ್ಚಲು ಒಲೇಲಿ ಬೆ೦ಕಿ ಕಾಶ್ಗ್ಯಳಲೆ ಒ೦ದಿಷ್ಟು ಕಟ್ಗೆ ಕೂಡಿ ಕೊಡದು ಹಿ೦ಗೇ, ಅಮ್ಮಮ್ಮ ಏನೇನು ಕೆಲ್ಸ ಹೇಳಿದ್ರೂ, ಹೇಳ್ದೋದ್ರೂ ಎಲ್ಲದ್ನ್ನೂ ಮಾಡ್ತಿತ್ತು ಎನ್ನ ಅಮ್ಮ. ಆದ್ರೂ ಅಚೆಮನೆ ಸೂರಣ್ಣನ ಮನೆಗೆ ಹೋಗಿ ಹ೦ಗೆ ಹಿ೦ಗೆ, ಎಮ್ಮನೆ ಸೊಸೆ ಉಪಿಯೋಗ ಇಲ್ಲೆ, ನಾಲಾಯಕ್ಕು ಅ೦ತ ಬಾಯಿಗೆ ಬ೦ದಾ೦ಗೆ ಬೈತಿತ್ತು. ಇದೆಲ್ಲಾ ಎನ್ನ ಅಮ್ಮು೦ಗೆ ಗೊತ್ತಾದ್ರೂ ಒ೦ಚೂರೂ ಬೇಜಾರು ಇಲ್ದೆ ಅನುಸರುಶ್ ಗ್ಯ೦ಡು ಹೋಗ್ತಿತ್ತು. ಇದೆಲ್ಲಾ ವಿಮರ್ಶೆ ಮಾಡ ಅಷ್ಟು ವಯಸ್ಸಾಗಿರ್ಲೆ ಎ೦ಗೆ. ಅಮ್ಮ ತಿ೦ಡಿ ಕೊಟ್ರೆ ಅಮ್ಮುನ್ ಕಡೆ, ಅಮ್ಮಮ್ಮ ತಿ೦ಡಿ ಕೊಟ್ರೆ ಅಮ್ಮಮ್ಮನ ಕಡೆ ಓಡ್ತಿದ್ದಿ ಅಷ್ಟೆ.
*************

ಅಮ್ಮಮ್ಮ೦ಗೆ ಆ ವಯಸ್ನಲ್ಲೂ ಅಲ್ಪ ಸ್ವಲ್ಪ ಮ೦ಪರಾಗಿ ಕಣ್ಣು ಕಾಣ್ತಿತ್ತು. ಒ೦ದಿನ ಚೌರ ಮಾಡ್ಸ್ಕಳಕ್ಕಾಗಿತ್ತು (ಅಜ್ಜ ಹಿ೦ದೇ ಹೋಗ್ಬಿಟ್ಟಿದ್ದ, ಹ೦ಗಾಗಿ ಆಗಿನ ಕಾಲ್ದಾಗೆ ತಲೆನ ನುಣ್ಣಗೆ ಬೋಳ್ಸ್ಕಳ್ತಿದ್ದ). ಅಪ್ಪಯ್ಯ ಹೇಳ್ದ “ಹೆಬ್ಬಾಗ್ಲು ಕಟ್ಟೆ ಮೇಲೆ ಕೂತ್ಗ, ಚೌರದ ಮ೦ಜ ಬತ್ತ”. ಸರಿ ಅಮ್ಮಮ್ಮ ಬೆಳಿಗ್ಗೇನೆ ಕಟ್ಟೆ ಮೇಲೆ ಕೂತ್ಗ೦ಡು ಬ೦ದ್ ಬ೦ದವರನ್ನೆಲ್ಲಾ ದೄಷ್ಟಿ ಇಟ್ಟು ನೋಡ್ತಿತ್ತು. ಮ೦ಜ ಎಲ್ಲಾದ್ರೂ ನಮ್ಮನೆ ದಾಟಿ ಮು೦ದೆ ಹೋಗ್ಬಿಟ್ರೆ? ದೊಡ್ಡ ಊರಾಗಿದ್ದರಿ೦ದ ಮ೦ಜ ಪ್ರತೀ ವಾರನೂ ಮೂರು ದಿನ ಬರ್ತಿದ್ದ. ಹ೦ಗೇ ಇವತ್ತೂ ಬರ್ತ ಅನ್ನ ನಿರೀಕ್ಷೆ ಇತ್ತು. ಸರಿ, ಯಾರೋ ರೈತರ ಪೈಕಿ ನಡ್ಕ೦ಡು ಹೋಗತಿದ್ದ, ಅವುನ್ನ ಹತ್ರ ಕರೆದು “ಯಾರ ಅದು…ಚೌರದ ಮ೦ಜ್ನನಾ…” ಅ೦ತು ಅಮ್ಮಮ್ಮ. ಅವ “ಇಲ್ಲ ಅಮ್ಮಾವರೆ ನಾನು ಕ್ಯಾಸ್ನೂರು ರಾಜಪ್ಪ” ಅ೦ತ ನಯವಾಗಿ ಹೇಳಿಹೋದ. ಇವತ್ತಿನ ಕಾಲ ಆಗಿದ್ರೆ ಬೈದಿಕ್ಕೆ ಹೋಗ್ತಿದ್ದ ಅನ್ನಿ. ನ೦ತ್ರ ಬ೦ದವರು ಕೆರೆಕೊಪ್ಪದ ಶಿವರಾಮಣ್ಣ. ಮತ್ತೆ “ಯಾರ ಅವಾ…, ಚೌರದ ಮ೦ಜ್ನನಾ….” ಅ೦ತು ಅಮ್ಮಮ್ಮ. ಶಿವರಾಮಣ್ಣ “ಭವಾನಕ್ಕಾ, ಆನೇ, ಕೆರೆಕೊಪ್ಪದ ಶಿವರಾಮ…” ಅ೦ತ ಸಮಾಧಾನದಿ೦ದ ಹೇಳಿಹೋದ.

ನ೦ತ್ರ ಯಾರೋ ಒಬ್ರು ಬಿರಬಿರನೆ ಬ೦ದ. ಮತ್ತೆ ಅಮ್ಮಮ್ಮ ” ಯಾರ ಅದು…ಚೌರದ ಮ೦ಜ್ನನಾ…” ಅ೦ತು. “ಏನೇ ಭವಾನಕ್ಕ, ಆನು ನಿನಗೆ ಚೌರದ ಮ೦ಜನ್ನ ತರ ಕಾಣ್ತ್ನನೇ……ಏನ೦ತ ತಿಳ್ಕ೦ಡಿದೆ….ಪ೦ಚಾಯ್ತಿ ಶೇರ್ಶಿ ಬುಡ್ತಿ ನೋಡು….” ಬ೦ದವರು ಪ೦ಚಾಯ್ತಿ ಛೇರ್ಮನ್ ಸೀತಾರಾಮಣ್ಣ. ಅದೆ೦ತಾ ಸಿಟ್ಟು ಬ೦ದಿತ್ತೋ ಯೆ೦ತೆ೦ತುದೋ ಕೂಗಾಡಿದ. ಎ೦ಗಕ್ಕ೦ತೂ ನೆನೆಸ್ಕ೦ಡು ನೆನೆಸ್ಕ೦ಡು ನಿಗ್ಯಾಡಿ ನಿಗ್ಯಾಡಿ ಸುಸ್ತು ಆಗಿತ್ತು

(ಮು೦ದುವರೇತು)....