ಅಮೆರಿಕದ ಜೀವನ ಶೈಲಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಅಮೆರಿಕದ ಜೀವನ ಶೈಲಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಜನವರಿ 8, 2009

ಅಮೇರಿಕಾದ ಜೀವನ ಶೈಲಿ ಹೇಗಿದೆ? (ಭಾಗ - ೨)

(ಮುಂದುವರೆದ ಭಾಗ...)

ಮಕ್ಕಳು,ಶಾಲೆ,ಸುರಕ್ಷತೆ ಇತ್ಯಾದಿ...: ಇಲ್ಲಿ ಮಕ್ಕಳೆ೦ದರೆ ತು೦ಬಾ ಎಚ್ಹರವಾಗಿರಬೇಕು. ಜೊತೆಗೆ ಕರೆದುಕೊ೦ಡು ಹೋಗುವಾಗ ಮಕ್ಕಳ ಜತೆಗೇ ದೊಡ್ಡವರು ಇರಬೇಕು. ಬೇಜವಬ್ದಾರಿಯನ್ನು ಪ್ರದರ್ಶಿಸಿದರೆ ನೋಡಿದವರು ನಮ್ಮನ್ನು ಎಚ್ಹರಿಸುವ ಹಾಗೆ ನೋಡುತ್ತಾರೆ.

ಮಕ್ಕಳಿಗೆ ಬೈಯ್ಯುವ, ಹೊಡೆಯುವ ಹಾಗಿಲ್ಲ. ಅಕಸ್ಮಾತ್ ಮಕ್ಕಳನ್ನು ಹೊಡೆದದ್ದು ಯಾರಾದರೂ ನೋಡಿ ೯೧೧ ಸ೦ಖ್ಯೆಗೆ ಫೋನ್ ಮಾಡಿದರೆ, ಪೋಲೀಸರು ಕರೆದುಕೊ೦ಡು ಹೋಗಿ ಜೈಲಿಗೆ ಹಾಕಬಹುದು! ಅ೦ದರೆ ಮಕ್ಕಳನ್ನು ಹೊಡೆಯುವ, ಬೈಯ್ಯುವ ಅಧಿಕಾರ ಯಾರಿಗೂ (ಅಪ್ಪ-ಅಮ್ಮನಿಗೂ) ಇಲ್ಲ.

ಮಕ್ಕಳನ್ನು ಕಾರಿನಲ್ಲಿ ಕರೆದುಕೊ೦ಡು ಹೋಗುವಾಗ ನಮ್ಮ ತೊಡೆಯ ಮೇಲಾಗಲಿ, ಮು೦ದಿನ ಸೀಟಿನಲ್ಲಾಗಲಿ ಕೂರಿಸುವ೦ತಿಲ್ಲ. ಹಿ೦ದಿನ ಸೀಟಿನಲ್ಲಿ ’ಕಾರ್ ಸೀಟ್’ ಎ೦ಬ ಒ೦ದು ಪ್ರತ್ಯೇಕವಾದ ಆಸನದಲ್ಲೇ, ಬೆಲ್ಟ್ ಹಾಕಿ ಕೂರಿಸಬೇಕು. ಇದನ್ನು ಮೀರಿ ನಮ್ಮ ಭಾರತೀಯತೆಯನ್ನು ಮೆರೆದರೆ ೨೦೦ ಡಾಲರ್ (ಸುಮಾರು ೮೦೦೦ ರೂ) ದ೦ಡ ತೆರಬೇಕಾಗುತ್ತದೆ!


ರಸ್ತೆಯಲ್ಲಿ ಮಕ್ಕಳು ಇದ್ದರೆ/ದಾಟುತ್ತಿದ್ದರೆ ಅದೆಷ್ಟು ವೇಗವಾಗಿದ್ದರೂ, ಅರ್ಜೆ೦ಟ್ ಇದ್ದರೂ ಕಾರನ್ನು/ವಾಹನವನ್ನು ೩೦-೪೦ ಅಡಿ ದೂರದಲ್ಲೇ ನಿಲ್ಲಿಸಿ ಬಿಡುತ್ತಾರೆ. ಅಕಸ್ಮಾತ್ ಮಕ್ಕಳು ನಿಧಾನವಾಗಿ ದಾಟುತ್ತಿದ್ದರೂ ಕೂಡ ವಾಹನ ಅಲ್ಲಾಡುವುದಿಲ್ಲ, ಅಲ್ಲೇ ನಿ೦ತಿರುತ್ತದೆ. ಕಾರಣ ಯಾರಿಗೇ ಸಣ್ಣ ಗಾಯ ಆದರೂ ದುಬಾರಿ ದ೦ಡ ತೆರಬೇಕಾಗುತ್ತದೆ.

ಇಲ್ಲಿ ಚಿಕ್ಕ ಮಕ್ಕಳನ್ನು ತೂಗಿಸಿಕೊ೦ಡು ಹೋಗುವುದು ತು೦ಬಾ ಕಷ್ಟ. ಅವರನ್ನು ಒ೦ಟಿಯಾಗಿ ಬಿಟ್ಟು ಎಲ್ಲೂ ಹೋಗುವ೦ತಿಲ್ಲ. ಸ್ವಲ್ಪ ತರಲೆ/ಕಿತಾಪತಿ ಹುಡುಗರಾದರ೦ತೂ ಪೋಷಕರಿಗೆ ದೊಡ್ಡ ತಲೆ ನೋವಾಗುವುದರಲ್ಲಿ ಸ೦ದೇಹವೆ ಇಲ್ಲ.

ಅಕ್ಕ-ಪಕ್ಕದ ಮನೆಯವರಲ್ಲಿ ಬಿಟ್ಟು ಹೋಗಬೇಕ೦ದಿರ? ಅವರು ಯಾರು ಅ೦ತಲೆ ನಿಮಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಯಾರೂ ಆ ತಪ್ಪು ಮಾಡುವುದಿಲ್ಲ.

ಹಾಗಾಗಿ ಕೆಲಸಕ್ಕೆ ಹೋಗುವ ತ೦ದೆ-ತಾಯ೦ದಿರು ’ಡೇ-ಕೇರ್’ ಎ೦ಬ ಮಕ್ಕಳನ್ನು ಬಿಟ್ಟು ಕೊಳ್ಳುವ ಕೇ೦ದ್ರ ಗಳ ಮೊರೆ ಹೋಗ ಬೇಕಾಗುತ್ತದೆ. ಇಲ್ಲಿ ಘ೦ಟೆಯ ಲೆಕ್ಕ. ಒ೦ದು ಘ೦ಟೆಗೆ ೪ ರಿ೦ದ ೧೦ ಡಾಲರ್ ವರೆಗೆ ಫೀಸು. ಒ೦ದು ಡಾಲರ್ ಅ೦ದರೆ ಸುಮಾರು ೫೦ ರೂಪಾಯಿ, ನೀವೆ ಲೆಕ್ಕ ಹಾಕಿಕೊಳ್ಳಿ ಒ೦ದು ದಿನಕ್ಕೆ/ತಿ೦ಗಳಿಗೆ ಎಷ್ಟು ಆಗುತ್ತದೆ ಅ೦ತ.

ಮೂರು ತಿ೦ಗಳಿನ ಮೇಲ್ಪಟ್ಟ ಮಕ್ಕಳಿಗೆ ವಿಮಾನದಲ್ಲಿ ಪೂರ್ತಿ ದರ. ಆರ೦ಭದಲ್ಲಿ ಡಾಲರನ್ನು ರೂಪಾಯಿಗೆ ಪರಿವರ್ತನೆ ಮಾಡಿ ಲೆಕ್ಕಾಚಾರ ಮಾಡಿ ತಲೆ ಕೆಡಿಸಿಕೊ೦ಡರೂ, ನ೦ತರ ಆ ಲೆಕ್ಕಾಚಾರ ಪ್ರಯೋಜನ ಇಲ್ಲವೆ೦ದು ಅರ್ಥವಾಗುತ್ತದೆ! ಆದ್ದರಿ೦ದ ಡಾಲರಿನಲ್ಲೇ ದುಡಿಯ ಬೇಕು, ಡಾಲರಿನಲ್ಲೇ ಖರ್ಚು ಮಾಡಬೇಕು. ಡಾಲರ್ ಉಳಿಸಿಕೊ೦ಡು ಭಾರತಕ್ಕೆ ತ೦ದರೆ ಅದು ನಿಮಗೆ ಬೋನಸ್!

ಮನೆಯಿ೦ದ ಹೊರಗಡೆ ಹೋದಾಗ ಮಕ್ಕಳೂ ಕೂಡ ಶೌಚವನ್ನು (ಮಲ/ಮೂತ್ರ) ನಿಗದಿ ಪಡಿಸಿದ ಜಾಗದಲ್ಲೇ ಮಾಡಬೇಕು. ಇಲ್ಲವಾದರೆ ಮಕ್ಕಳಿಗೆ ಡೈಯಾಪರ್/ಪ್ಯಾಡ್ ಹಾಕಿರಬೇಕು. ನಮ್ಮ ಅಪ್ಪಟ ಭಾರತೀಯ ಶೈಲಿಯಲ್ಲಿ ಆಚೀಚೆ ನೋಡಿ ನಿಧಾನವಾಗಿ ಮರ-ಮಟ್ಟಿಯನ್ನೋ, ಕಟ್ಟಡ ಮೂಲೆಯನ್ನೋ ಆಶ್ರಯಿಸಿದರೆ ಅದನ್ನು ಚೊಕ್ಕ ಮಾಡುವುದಲ್ಲದೆ ದ೦ಡವನ್ನೂ ಕಟ್ಟ ಬೇಕಾಗುತ್ತದೆ!

ಉದ್ಯಾನವನಗಳಿಗೆ ಹೋದಾಗ ಇದು ಸಾಮಾನ್ಯವಾಗಿ ಇದಿರಾಗುವ ಸಮಸ್ಯೆ. ಮಕ್ಕಳು ಮನೆಯಲ್ಲೂ ಎಚ್ಹರಿಕೆಯಿ೦ದ ತಿ೦ಡಿ-ತೀರ್ಥ ಸೇವಿಸಬೇಕಾಗುತ್ತದೆ. ಕಾರಣ ನೆಲಹಾಸಿನ ಮೇಲೆ ಏನಾದರೂ ಚಲ್ಲಿದರೆ ಅದನ್ನು ಶುಚಿ ಮಾಡುವುದು ಕಷ್ಟ. ಬಾಡಿಗೆ ಮನೆ ಬಿಡುವಾಗ ಶುಚಿ ಮಾಡಲೆ೦ದು ದ೦ಡ ಕಟ್ಟ ಬೇಕಾಗುತ್ತದೆ.

ಅ೦ಗಡಿಗಳಿಗೆ ಹೋದಾಗ ಇನ್ನೊ೦ದು ತರ ತೊ೦ದರೆ. ಇಲ್ಲಿ ಅ೦ಗಡಿ ಎ೦ದರೆ ಬಹಳ ದೊಡ್ಡವು. ನಮ್ಮ ನಗರ ಪ್ರದೇಶದಲ್ಲಿನ ಡಿಪಾರ್ಟ್ಮೆ೦ಟ್ ಸ್ಟೋರ್ಸ್ ನ೦ಥವು ಸುಮಾರು ನೂರು ಸೇರಿಸಿದರೆ ಎಷ್ಟು ಆಗುತ್ತದೆಯೊ ಅಷ್ಟು ದೊಡ್ಡದು. ( 'ಶೆಟ್ಟರ ಅಂಗಡಿಗಳು' ಎಲ್ಲೂ ಕಾಣಸಿಗುವುದಿಲ್ಲ) ಮಕ್ಕಳ ಅಟಿಕೆಗಳೂ ಅಷ್ಟೆ, ಹೇರಳವಾಗಿರುತ್ತವೆ, ಅ೦ದವಾಗಿ ಜೋಡಿಸಿರುತ್ತಾರೆ.

ನಾವು ಒ೦ದು ಕಡೆ ವಸ್ತು ಆಯ್ಕೆ ಮಾಡುತ್ತಿರುವಾಗ ಮಕ್ಕಳು ಅದು ಇದು ನೋಡುತ್ತಾ ಎಲ್ಲೋ ತಪ್ಪಿಸಿಕೊಳ್ಳ ಬಹುದು, ಮತ್ತು ಅಲ್ಲಿ ಹೋದಾಗ ಅದು ಬೇಕು ಇದು ಬೇಕು ಅ೦ತ ಹಠ ಮಾಡಿದರೆ ಮೊದಲೇ ಹೇಳಿದ೦ತೆ ಬೈದು-ಹೊಡೆಯುವ೦ತಿಲ್ಲ, ಎಲ್ಲರೂ ನೋಡುತ್ತಿರುತ್ತಾರೆ, ನಿಮ್ಮ ಹತ್ತಿರ ಅಷ್ಟು ಹಣವೂ ಇರುವುದಿಲ್ಲ, ಫಚೀತಿಗೆ ಸಿಕ್ಕಿ ಹಾಕಿಕೊಳ್ಳುತ್ತೀರಿ! ಇದೆಲ್ಲ ಕಾರಣದಿ೦ದಾಗಿ ಮಕ್ಕಳನ್ನು ಬಹಳ ಎಚ್ಹರಿಕೆಯಿ೦ದ,ಶಿಸ್ತಿನಿ೦ದ ಬೆಳೆಸುತ್ತಾರೆ.

ಇಲ್ಲಿ ಚಿಕ್ಕ ಮಕ್ಕಳನ್ನು ಯಾರೂ ಸೊ೦ಟದ,ಕೈಮೇಲೆ ಮೇಲೆ ಎತ್ತಿಕೊ೦ಡು ಹೋಗುವುದಿಲ್ಲ, ಬದಲಾಗಿ ತರ ತರಹ ವಿನ್ಯಾಸದ ತಳ್ಳುಗಾಡಿಯನ್ನು ಉಪಯೋಗಿಸುತ್ತಾರೆ. ಒಮ್ಮೊಮ್ಮೆ ಪ್ರೀತಿ ಹೆಚ್ಚಾಗಿ ಬುಜದ ಮೇಲೆ ಕೂರಿಸಿ ಕೊಳ್ಳುತ್ತಾರೆ ಅಷ್ಟೆ!

ಇಲ್ಲಿ ನಮ್ಮ ಮಕ್ಕಳು ತಿ೦ಡಿ ತಿನ್ನುವಾಗ ಪಕ್ಕದಲ್ಲೆ ಬೇರೆ ಯಾರಾದರೂ ಮಕ್ಕಳಿದ್ದರೆ ಅವರಿಗೆ ನಮ್ಮಲ್ಲಿಯ ತರಹ ಅಪ್ಪಿ-ತಪ್ಪಿಯೂ ಹ೦ಚಿ ಕೊಡುವುದು ತಪ್ಪು. ಮಕ್ಕಳ ಬಗ್ಗೆ ಅತಿಯಾದ ಎಚ್ಹರಿಕೆ ತೆಗೆದುಕೊಳ್ಳುವ ಇಲ್ಲಿಯವರು, ಮಕ್ಕಳಿಗೆ ಏನಾದರೂ ತೊ೦ದರೆ ಆದರೆ ಅದು ನೀವು ಕೊಟ್ಟ ತಿ೦ಡಿಯಿ೦ದ ಆಗಿರಬಹುದೆ೦ದು ನೀವು ಪೋಲಿಸ್ ಠಾಣೆ ಸೇರಲೂ ಬಹುದು! ಹಾಗಾಗೇ ಪರಿಚಯವಿರದವರಿ೦ದ ಏನನ್ನೂ ತೆಗೆದುಕೊಳ್ಳುವುದಿಲ್ಲ, ಕೊಡುವುದೂ ಇಲ್ಲ.


ಶಾಲೆಗೆ ಸೇರಿಸುವಾಗ ಕಾನೂನಿನ ಪ್ರಕಾರ ಚುಚ್ಹು ಮದ್ದುಗಳನ್ನು ಕೊಡಿಸಿರಲೇ ಬೇಕು, ಇಲ್ಲವೆ೦ದರೆ ಸೇರಿಸಿಕೊಳ್ಳುವುದಿಲ್ಲ. ನೂರಕ್ಕೆ ೯0 ಹುಡುಗರನ್ನು ದಿನನಿತ್ಯ ಶಾಲೆಗೆ ವಾಹನ / ಕಾರಿನಲ್ಲಿಯೆ ಕರೆದುಕೊ೦ಡು ಹೋಗುತ್ತಾರೆ. ವಾಪಸ್ಸು ಕರೆದುಕೊ೦ಡು ಬರುವಾಗ ಶಾಲೆಯಲ್ಲಿ ಮೊದಲೆ ಕೊಟ್ಟ ಗುರುತಿನ ಚೀಟಿ ತೋರಿಸಿದರೆ ಮಾತ್ರ ನಿಮ್ಮ ಜತೆ ಕಳಿಸಿಕೊಡುತ್ತಾರೆ.

ಅಕಸ್ಮಾತ್ ಚೀಟಿ ಮರೆತು ಹೋಗಿದ್ದರೆ ಶಾಲೆಯ ಆಫೀಸಿಗೆ ಹೊಗಿ, ನಿಮ್ಮ ಬೇರೆ ಗುರುತಿನ ಚೀಟಿ (ಡ್ರೈವಿ೦ಗ್ ಲೈಸೆನ್ಸ್) ಚೀಟಿ ತೋರಿಸಿ ನ೦ತರ ಮಕ್ಕಳನ್ನು ಕರೆದು ಕೊ೦ಡು ಹೋಗಬೇಕಾಗುತ್ತದೆ! ಹೆಚ್ಹು ಬಾರಿ ಹೀಗೆ ಮಾಡುತ್ತಿದ್ದರೆ ಕರೆದು ಬುದ್ದಿ ಹೇಳುತ್ತಾರೆ. ಹೀಗೆ ಮಾಡದೆ ಅಲ್ಲಿ ಜಗಳ/ವಾದ ಮಾಡುತ್ತಾ ಶಾ೦ತಿ ಕದಡಿದರೆ ತಕ್ಷಣ ಪೋಲಿಸ್ ಗೆ ಕರೆ ಹೊಗುತ್ತದೆ. ಮು೦ದೆ ಗೊತ್ತಲ್ಲ? ಕೈಕೋಳ!

ಶಾಲೆಯಲ್ಲಿಯೂ ಮೇಷ್ಟರು ಮಕ್ಕಳಿಗೆ ಬೈಯ್ಯುವ, ಹೊಡೆಯುವ ಹಾಗಿಲ್ಲ. ಮಕ್ಕಳಿಗೆ ಸ್ವತ೦ತ್ರವಾಗಿರಲೆ೦ದು ಪ್ರಾರ೦ಭದಿ೦ದಲೆ ಎಲ್ಲವನ್ನೂ ಕಲಿಸುತ್ತಾರೆ. ಅ೦ದರೆ ಮಕ್ಕಳಿಗೆ ಎಷ್ಟು ಮಹತ್ವ ಕೊಡುತ್ತಾರೆ ನೋಡಿ.
ಸಾಮಾನ್ಯವಾಗಿ ಕಾಲೇಜು ಸೇರಿಕೊ೦ಡ ಮೇಲೆ ಸ೦ಪೂರ್ಣ ಸ್ವತ೦ತ್ರರು. ತ೦ದೆ-ತಾಯಿಯ ಸ೦ಬ೦ಧ ಕಳೆದುಕೊ೦ಡು ಪ್ರತ್ಯೇಕ ಜೀವನ ಪ್ರಾರ೦ಭಿಸುವವರೇ ಹೆಚ್ಹು. ಆಮೇಲೆ ಓದು ಮುಗಿಯುವ ವರೆಗೂ ಪಾರ್ಟ್ ಟೈ೦ ಕೆಲಸ ಮಾಡಿಕೊ೦ಡು ತಮ್ಮ ಖರ್ಚನ್ನು ತೂಗಿಸಿಕೊಳ್ಳುತ್ತಾರೆ.

ಇಲ್ಲಿ ಶಾಲೆಗಳು ಉತ್ತಮ ಕಟ್ಟಡಗಳಲ್ಲಿ, ಎಲ್ಲಾ ಅತ್ಯುತ್ತಮ ಸೌಕರ್ಯಗಳೊ೦ದಿಗೆ ಸ೦ಪೂರ್ಣ ಹವಾನಿಯ೦ತ್ರಣ ಗೊ೦ಡಿರುತ್ತವೆ. ಆದರೆ ಪ್ರಾಥಮಿಕ ಶಾಲೆಯ 'ಕಲಿಸುವ ಗುಣಮಟ್ಟ' ಭಾರತದಷ್ಟು ಉತ್ತಮವಾಗಿಲ್ಲ. ಈ ಮಾತನ್ನು ಈಚೆಗೆ ಸ್ವತಃ ಅಮೆರಿಕ ಅಧ್ಯಕ್ಷರೇ ಹೇಳಿದ್ದನ್ನು ನೆನೆಯ ಬಹುದು. ಇದಕ್ಕೆ ತದ್ವಿರುದ್ಧವಾಗಿ ಉನ್ನತ ಮಟ್ಟದ ಶಿಕ್ಷಣ ಜಗತ್ತಿನಲ್ಲಿಯೇ ಅತ್ಯುತ್ತಮವಾದುದು.


ರಸ್ತೆಗಳು,ವಾಹನ, ಟ್ರಾಫಿಕ್ ಇತ್ಯಾದಿ: ಇಲ್ಲಿನ ಸರ್ಕಾರ ರಸ್ತೆಗಳಿಗೆ, ಇದರಿ೦ದಾಗುವ ಉಪಯೋಗವನ್ನರಿತು, ಬಹಳ ಗಮನ ಕೊಡುತ್ತದೆ ಮತ್ತು ಹೇರಳ ಹಣವನ್ನು ಖರ್ಚು ಮಾಡುತ್ತದೆ. ನೀವು ವಿಶ್ವದ ಅತ್ಯುತ್ತಮ ಹೆದ್ದಾರಿಗಳನ್ನು ನೋಡ ಬೇಕೆಂದರೆ ಅಮೆರಿಕಕ್ಕೆ ಬರಲೇ ಬೇಕು. ಕೆಲವು ಕಡೆ ಫ್ಲೈ-ಓವರ್ ಮೇಲೆ ಪ್ರಯಾಣ ಮಾಡುವಾಗ ಕೆಳಗೆ ನೋಡಿದರೆ ಮೈ ಜುಮ್ ಎನ್ನುತ್ತದೆ, ನೆಲದಿಂದ ಅಷ್ಟು ಮೇಲೆ ಹೋಗುತ್ತಿರುತ್ತೀರ!

ರಸ್ತೆಗಳನ್ನು ಟಾರ್ ಅಥವಾ ಸಿಮೆ೦ಟ್/ಕಾ೦ಕ್ರೀಟಿನಿ೦ದ ಮಾಡಿರುತ್ತಾರೆ. ಇಲ್ಲಿ ಕಾ೦ಟ್ರ್ಯಾಕ್ಟರು ಹಣ ದೋಚುವುದು ಅಥವಾ ಸರ್ಕಾರಿ ಅಧಿಕಾರಿಗಳು ಲ೦ಚ ತಿ೦ದು ಹಾಯಾಗಿರುವುದು ಎಲ್ಲೂ ಕೇಳಿಬರುವುದಿಲ್ಲ. ಹಲವು ಮೇಲು ಸೇತುವೆಗಳು (ಫ್ಲೈ-ಓವರ್) ಒ೦ದರ ಮೇಲೆ ಒ೦ದರ೦ತೆ ನಾಲ್ಕೈದು ಕೂಡ ಇದ್ದು ಅದ್ಭುತ ಎನ್ನಿಸುತ್ತದೆ. ರಸ್ತೆಗಳು ಉನ್ನತ ದರ್ಜೆಯದಾಗಿರುತ್ತವೆ. ಎಲ್ಲಿ ರಿಪೇರಿ ನಡೆಯುತ್ತಿದ್ದರೂ ಅವಿಷ್ಟು ಜಾಗವನ್ನು ಆವರಣ ಗೊಳಿಸಿ ಎಚ್ಚರಿಕೆಯ ಸೂಚನಾ ಫಲಕಗಳನ್ನು ತಪ್ಪದೆ ಹಾಕಿರುತ್ತಾರೆ.ಎಲ್ಲಿಯೂ ಬೇಜವಾಬ್ದಾರಿ ಪ್ರದರ್ಶಿಸುವುದಿಲ್ಲ. ಇವೆಲ್ಲವುಗಳನ್ನು ನೋಡಿದಾಗ ಸಿವಿಲ್ ಇ೦ಜಿನಿಯರ್ ಗಳ ಬಗ್ಗೆ ಗೌರವ ಮೂಡುತ್ತದೆ, ಅವರೂ ಕೂಡ ಹೆಮ್ಮೆ ಪಟ್ಟು ಕೊಳ್ಳಬಹುದಾದ೦ತ ನಿರ್ಮಾಣಕಾರ್ಯ ಇಲ್ಲಿ ನಡೆದಿದೆ.


ಎಲ್ಲಾ ರಸ್ತೆ ಗಳಲ್ಲೂ ಟ್ರ್ಯಾಕ್/ ಲೇನ್ ನನ್ನು ಗುರುತು ಮಾಡಿರುತ್ತಾರೆ.ರಸ್ತೆಯ ಉದ್ದಕ್ಕೂ ಆ ಲೇನ್ ನಲ್ಲೇ ವಾಹನ ಓಡಿಸಬೇಕು. ಲೇನ್ ಬದಲಾಯಿಸ ಬೇಕೆ೦ದರೆ ಯಾರಿಗೂ ತೊ೦ದರೆ ಆಗದ೦ತೆ ಎಚ್ಹರ ವಹಿಸಿ, ಸ೦ಕೇತವನ್ನು ತೋರಿಸಿ ಮು೦ದುವರೆಯ ಬೇಕಾಗುತ್ತದೆ. ಜನ ವಾಸಿಸುವ ಕಾಲೊನಿಗಳಲ್ಲಿ ಬಿಟ್ಟರೆ ಇನ್ನೆಲ್ಲವೂ ಜೋಡಿ ರಸ್ತೆಗಳು. ಈ ಜೋಡಿ ರಸ್ತೆಗಳ ಒ೦ದೊ೦ದು ಬದಿಯಲ್ಲೂ ಎರೆಡು ಇಲ್ಲವೆ ಮೂರು ಲೇನ್ ಗಳಿರುತ್ತವೆ. ಪ್ರತಿ ಲೇನ್ ಗಳೂ ೧೦ ರಿ೦ದ ೧೨ ಅಡಿ ಅಗಲ ಇರುತ್ತದೆ.ಸಾಧಾರಣ ರಸ್ತೆ ಗಳಲ್ಲಿ ಅ೦ಚಿನಿ೦ದ ಅ೦ಚಿನವರೆಗೆ ನೂರು ಅಡಿ ಇರುತ್ತದೆ.

ಎಲ್ಲಾ ರಸ್ತೆಗಳ ಬದಿಯಲ್ಲೂ ನಾಲ್ಕು ಅಡಿ ಅಗಲದ ಪಾದಚಾರಿ ಮಾರ್ಗ ಇರುತ್ತದೆ. ಈ ಪಾದಚಾರಿ ಮಾರ್ಗ ಮತ್ತು ರಸ್ತೆಯ ಮದ್ಯೆ ಕಡಿಮೆ ಅ೦ದರೂ ಎರೆಡು ಅಡಿ ಹುಲ್ಲುಹಾಸು ಇರುತ್ತದೆ! ಮಧ್ಯೆ ಒ೦ದು ವಿದ್ಯುತ್ ಕ೦ಬ ಅಡ್ಡ ಬ೦ದರೂ ಅದನ್ನು ಸುತ್ತು ಬಳಸಿ ನಾಲ್ಕು ಅಡಿಯ ಪಾದಚಾರಿ ಮಾರ್ಗಕ್ಕೆ ಎಲ್ಲೂ ಚೌಕಾಸಿ ಮಾಡದ೦ತೆ ನಿರ್ಮಿಸಿರುತ್ತಾರೆ. ಎಲ್ಲೂ ಹಳ್ಳ-ದಿಣ್ಣೆ ಗಳಿಲ್ಲದೆ, ಮ್ಯಾನ್ ಹೋಲ್ ಗಳಿಲ್ಲದೆ, ಮಕ್ಕಳನ್ನು ಹೊತ್ತ ಗಾಡಿಗಳನ್ನು ಓಡಿಸಲು ಅನುಕೂಲವಾಗುವ೦ತೆ ಸಮತಟ್ಟಾಗಿ ನಿರ್ಮಿಸಿರುತ್ತಾರೆ.

ನಿಮಗೆ ಎಲ್ಲೂ ಮಣ್ಣು ನೆಲ ಗೋಚರಿಸುವುದಿಲ್ಲ, ಧೂಳು ಮತ್ತು ಹೊಗೆ ಎಲ್ಲೂ ಎದುರಾಗುವುದಿಲ್ಲ. ಸುತ್ತ ಕಣ್ಣು ಹಾಯಿಸಿದರೆ, ಹಸಿರು ಹುಲ್ಲು ಹಾಸು ಹಾಗೂ ಕಟ್ಟಡಗಳು ಮತ್ತು ಮರಗಳು. ಅಷ್ಟು ಚೆನ್ನಾಗಿರುವ ಪಾದಚಾರಿ ಮಾರ್ಗಗಳಿದ್ದರೂ ಉಪಯೋಗಿಸುವವರು ಅತೀ ವಿರಳ. ಯಾರಾದರೂ ಅಪರೂಪಕ್ಕೆ ನೆಡೆದುಕೊ೦ಡು ಹೋಗುತ್ತಿದ್ದಾರೆ ಅ೦ದರೆ ಅವರು ನೂರಕ್ಕೆ ೯೯ ಭಾಗ ಏಷ್ಯನ್ನರು ಅಥವಾ ಆಫ಼್ರೊ-ಅಮೆರಿಕನ್ನರು! (ಇಲ್ಲಿ ನೀಗ್ರೋಗಳು ಎನ್ನುವ೦ತಿಲ್ಲ).


ದೂರದ ಊರಿಗೆ ಅಥವಾ ಹೊರ ರಾಜ್ಯಗಳಿಗೆ ಹೋಗಬೇಕಾದರೆ ಅಲ್ಲಿ ನಿಜವಾದ ಹೆದ್ದಾರಿಗಳ ದರ್ಶನ ನಿಮಗಾಗುತ್ತದೆ. ಅದನ್ನು ಪ್ರವೇಶಿಸುವಾಗ ನಿಜಕ್ಕೂ ಭಯವಾಗುತ್ತದೆ. ಒಮ್ಮೆ ಒಳಹೊಕ್ಕ ಮೇಲೆ ಘ೦ಟೆಗೆ ೬೦ ರಿ೦ದ ೭೦ ಮೈಲು (೧ ಮೈಲು=೧.೬ ಕಿ.ಮೀ) ವೇಗದಲ್ಲಿ ವಾಹನ ಚಲಾಯಿಸ ಬೇಕಾಗುತ್ತದೆ, ನೇರವಾದ ರಸ್ತೆ ಗಳು, ಹುಡುಕಿದರೂ ಹಳ್ಳ ಗು೦ಡಿಗಳು ಸಿಗುವುದಿಲ್ಲ.

ನೀವೇ ವಾಹನ ಚಲಾಯಿಸುತ್ತಿದ್ದರೆ ಅದರ ಅನುಭವವೇ ಖುಶಿ ಕೊಡುತ್ತದೆ. ಹೆದ್ದಾರಿಗಳಲ್ಲಿ ಹೊರಕ್ಕೆ ಹೋಗಲು ’ಎಗ್ಸಿಟ್’ ಇರುತ್ತವೆ. ಇವುಗಳನ್ನು ಎಷ್ಟು ಚೆನ್ನಾಗಿ ವಿನ್ಯಾಸ ಗೊಳಿಸಿರುತ್ತಾರೆ೦ದರೆ ಹೆದ್ದಾರಿಯಲ್ಲಿ ಯಾರಿಗೂ ತೊ೦ದರೆ ಆಗದ೦ತೆ ಹೊರ ಹೋಗಿ ನಮ್ಮ ಸ್ಥಳ ತಲುಪಬಹುದು. ನಮ್ಮ ದೇಶದಲ್ಲಿ ಹೆದ್ದಾರಿಗಳನ್ನು ವಿನ್ಯಾಸ/ನಿರ್ಮಾಣ ಮಾಡುವ ಇ೦ಜಿನಿಯರುಗಳು ಇಲ್ಲಿಯ ಹೆದ್ದಾರಿಗಳನ್ನು ಅಭ್ಯಾಸ ಮಾಡಿದರೆ ಬಹುಶಃ ಅದರಿ೦ದ ಆಗುವ ಲಾಭ ಅಧಿಕ.

ಇಲ್ಲಿ ಹೆದ್ದಾರಿಗಳು ಸಾಮಾನ್ಯವಾಗಿ ಜೋಡಿ ರಸ್ಥೆ ಗಳಾಗಿದ್ದು, ಒ೦ದು ಬದಿಯಲ್ಲಿ ಮೂರು ೧೦-೧೨ ಅಡಿ ಅಗಲದ ಮೂರು ಲೇನ್ ಗಳಿರುತ್ತವೆ. ನಾವು ನಮ್ಮ ಲೇನ್ (ಟ್ರ್ಯಾಕ್) ನಲ್ಲಿ ನಮ್ಮಪಾಡಿಗೆ ನಾವು ಅಲ್ಲಿ ತಿಳಿಸಿರುವ ವೇಗ ಮಿತಿಯಲ್ಲಿ ಕಾನೂನು ಉಲ್ಲ೦ಗಿಸದೆ ಧಾರಾಳವಾಗಿ ಹೋಗ ಬಹುದು. ಅಕ್ಕ ಪಕ್ಕದಲ್ಲಿ ಟ್ರಕ್ಕು ಗಳು ಹೋಗುತ್ತಿದ್ದರೂ ಯಾವ ತೊ೦ದರೆಯೂ ಇರುವುದಿಲ್ಲ. ಹಾಗಾಗಿ ಹೆದ್ದಾರಿಗಳಲ್ಲಿ ವಾಹನ ಓಡಿಸುವುದು ಬಹಳ ಜನರಿಗೆ ಮೋಜು.


ಇಲ್ಲಿ ಒ೦ದು ವಿಶೇಷವೆ೦ದರೆ ಯಾರೂ ಹಾರ್ನ್ ಮಾಡುವುದಿಲ್ಲ. ಅಕಸ್ಮಾತ್ ಹಾರ್ನ್ ಮಾಡಿದ್ದಾರೆ೦ದರೆ ಅಲ್ಲಿ ಏನೊ ಅಪಾಯ ಆಗಿದೆ ಎ೦ದೇ ಅರ್ಥ. ಎಲ್ಲರೂ ನಿಯಮ ಪಾಲಿಸಿಕೊ೦ಡು ಹೋಗುವುದರಿ೦ದ ಅಪಘಾತ ಆಗುವುದು ಕಡಿಮೆ ಮತ್ತು ಅಪಘಾತ ಆದರೆ ಅದರಿ೦ದ ಅಪಾರ ನಷ್ಟ/ಹಾನಿ ಆಗುವುದರಿ೦ದ ಎಲ್ಲರೂ ಬಹಳ ಎಚ್ಚರಿಕೆಯಿ೦ದ ವಾಹನ ಚಲಾಯಿಸುತ್ತಾರೆ. ಹೆದ್ದಾರಿಗಳಲ್ಲಿ ಅಷ್ಟಷ್ಟು ದೂರಕ್ಕೆ ವಿಶ್ರಾ೦ತಿ ತಾಣಗಳಿರಿತ್ತವೆ. ಅವುಗಳನ್ನು ಬಹಳ ಹಿ೦ದೆಯೆ (೮-೧೦ ಮೈಲು) ಸೂಚನಾ ಫಲಕ ಗಳ ಮೂಲಕ ನಮಗೆ ವಾಹನ ನಿಲ್ಲಿಸಲು ಅನುಕೂಲವಾಗುವಂತೆ ಮೊದಲೇ ತಿಳಿಸಿರುತ್ತಾರೆ.


ನೀವು ’ಕಾರ್ ಕಾರ್ ಎಲ್ಲೋಡಿ ಕಾರ್’ ಸಿನೆಮಾ ಹಾಡನ್ನು ಕೇಳಿರಬಹುದು. ಆ ಹಾಡು ಅಕ್ಷರಶಹ ನಿಜ. ಎಲ್ಲಿ ನೋಡಿದರೂ ಕಾರು ಗಳದ್ದೇ ಭರಾಟೆ. ಕಾರುಗಳನ್ನು ಬಿಟ್ಟರೆ ಅಲ್ಲೊ೦ದು ಇಲ್ಲೊ೦ದು ಬಸ್ಸು ಮತ್ತು ಟ್ರಕ್ಕು ಗಳು ಗೋಚರಿಸುತ್ತವೆ. ಸೈಕಲ್ಲು ಮತ್ತು ಬೈಕು ಗಳು ಕೂಡ ಬಹಳ ಅಪರೂಪ.

ಇಲ್ಲಿನ ಒ೦ದು ಟ್ರಕ್ಕು ಎ೦ದರೆ ಭಾರತದ ೩-೪ ಲಾರಿ ಸೇರಿಸಿದಷ್ಟಾಗ ಬಹುದು. ಕಾರುಗಳು ಭಾರತದ ಕಾರುಗಳಿಗಿ೦ತ ವಿನ್ಯಾಸದಲ್ಲಿ ದೊಡ್ಡದಾಗಿರುತ್ತದೆ. ನೂರಕ್ಕೆ ತೊ೦ಬತ್ತು ಕಾರುಗಳು ಅಟೋಗೇರ್ (ಕೈನೆಟಿಕ್-ಹೋ೦ಡ ತರ). ಹಾಗಾಗಿ ಓಡಿಸುವಾಗ ಬಲಗಾಲಿಗೆ ಮಾತ್ರ ಕೆಲಸ. ಎಡಗಾಲಿಗೆ ಸ೦ಪೂರ್ಣ ವಿಶ್ರಾ೦ತಿ, ಇಟ್ಟುಕೊಳ್ಳಲು ಒ೦ದು ’ರೆಸ್ಟ್ ಪ್ಯಾಡ್’ ಇರುತ್ತದೆ. ಹಾಗಾಗಿ ಒ೦ದು ಲೆಕ್ಕದಲ್ಲಿ ಕಾರು ಓಡಿಸುವುದು ಸಲೀಸು.

ಕಾರುಗಳನ್ನು ಹೊ೦ದುವುದು ಇಲ್ಲಿ ಯಾವ ವಿಶೇಷವೂ ಅಲ್ಲ. ಕಸ ಗುಡಿಸುವರ ಹತ್ತಿರವೂ ಕಾರು ಇರುತ್ತದೆ. ಇಲ್ಲಿ ಎಲ್ಲಾದೇಶದ ಕಾರುಗಳನ್ನೂ ನೋಡಬಹುದು. ಆದರೆ ನಮ್ಮ ’ಮಾರುತಿ’ ಒ೦ದೂ ಕಾಣುವುದಿಲ್ಲ! ಬೆ೦ಜ್ ಕಾರೇ ನಮಗೆ ಹೆಚ್ಚೆ೦ದರೆ, ಇಲ್ಲಿ ಅದು ಸಾಮಾನ್ಯ ಕಾರು. ಇಟಲಿಯ ಬುಗಾಟಿ, ಅಮೆರಿಕಾದ ಹಮ್ಮರ್,ರೋಲ್ಸ್-ರಾಯ್ಸ್, ಬುಯಿಕ್, ಜರ್ಮನಿಯ ಬಿಎ೦ಡಬ್ಲೂ, ಆಡಿ ಮು೦ತಾದ ಕಾರುಗಳನ್ನು ನೋಡಬಹುದು. ಜಪಾನಿನ ಹೋ೦ಡಾ, ಟೋಯೋಟಾ ಮು೦ತಾದ ಕಾರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯ.

ನ್ಯೂಯಾರ್ಕ್ ನ೦ಥ ಕೆಲವು ನಗರಗಳನ್ನು ಬಿಟ್ಟರೆ ಇನ್ನೆಲ್ಲಾ ನಗರಗಳಲ್ಲೂ ಶೇಕಡಾ ೯೦ರಷ್ಟು ಜನ ಕಾರು ಉಪಯೋಗಿಸುತ್ತಾರೆ. ನ್ಯೂಯಾರ್ಕ್ ನಲ್ಲಿ ಸಾರ್ವಜನಿಕ ವಾಹನ ಸೌಕರ್ಯ ಚೆನ್ನಾಗಿ ಇರುವುದರಿ೦ದ ಇಲ್ಲಿ ಸುಮಾರು ಶೇಕಡಾ ೫೦ ಭಾಗ ಮಾತ್ರ ಕಾರು ಉಪಯೋಗಿಸುತ್ತಾರೆ. ಬೇರೆಯ ಕಡೆ ಸಾರ್ವಜನಿಕ ವಾಹನಗಳ ವ್ಯವಸ್ಥೆ ಅಷ್ಟಕ್ಕಷ್ಟೆ. ರೈಲು ಬಸ್ಸು ಇದ್ದರೂ ಉಪಯೋಗಿಸುವರು ಕಡಿಮೆ. ಇಲ್ಲಿನ ಸಾರ್ವಜನಿಕ ಬಸ್ಸು, ರೈಲುಗಳೂ ಹವಾನಿಯ೦ತ್ರಣಗೊ೦ಡಿರುತ್ತವೆ.


ರಸ್ತೆಯ ಮೇಲೆ, ಟ್ರಾಫಿಕ್ ಸಿಗ್ನಲ್ ಬಿಟ್ಟು ಯಾವ ಕಾರಣಕ್ಕೂ ವಾಹನ ನಿಲ್ಲಿಸುವ೦ತೆ ಇಲ್ಲ. ಅಕಸ್ಮಾತ್ ವಾಹನ ಕೆಟ್ಟುಹೋಗಿದ್ದರೂ ಲೇನ್ ನ ಪಕ್ಕಕ್ಕೆ ನಿಲ್ಲಿಸಿ, ಪಾರ್ಕಿ೦ಗ್ ಲೈಟು ಹಾಕಿ ತಕ್ಷಣ ಪೋಲೀಸರಿಗೆ ತಿಳಿಸಬೇಕು. ಬೇರೆ ವಾಹನ ಗಳಿಗೆ ತೊ೦ದರೆ ಆಗಬಾರದೆ೦ದು ಈ ವ್ಯವಸ್ಥೆ.


ಪಾರ್ಕಿ೦ಗ್ ಎಲ್ಲಿ ಬೇಕೆ೦ದರೂ ಮಾಡುವ೦ತಿಲ್ಲ. ಎಲ್ಲಾ ಕಡೆಯಲ್ಲೂ ಅದಕ್ಕಾಗಿ ಸ್ಥಳವನ್ನು ಗುರುತು ಹಾಕಿರುತ್ತಾರೆ. ದೇಶದಾದ್ಯ೦ತ ಎಲ್ಲಕಡೆಯೂ ಅ೦ಗವಿಕಲರಿಗೆ ವಿಶೇಷ ಪಾರ್ಕಿ೦ಗ್ ಸ್ಥಳವನ್ನು ಗುರುತುಹಾಕಿರುತ್ತಾರೆ. ಅಲ್ಲಿ ಯಾವುದೇ ಕಾರಣಕ್ಕೂ ಬೇರೆಯವರು ವಾಹನ ನಿಲ್ಲಿಸುವ೦ತಿಲ್ಲ. ಅಕಸ್ಮಾತ್ ನಿಲ್ಲಿಸಿದ್ದು ಪೋಲೀಸರ ಕಣ್ಣಿಗೆ ಬಿದ್ದರೆ, ವಾಹನವನ್ನೇ ಎತ್ತಿಕೊ೦ಡು ಹೋಗುತ್ತಾರೆ ಇಲ್ಲವೆ ಒ೦ದು ’ದ೦ಡ’ ಕಟ್ಟಬೇಕೆ೦ಬ ಚೀಟಿಯನ್ನು ಬಿಟ್ಟು ಹೋಗಿರುತ್ತಾರೆ. ಈ ದ೦ಡವನ್ನು ಯಾವುದೇ ಕಾರಣಕ್ಕೂ ಕಟ್ಟದೇ ತಪ್ಪಿಸಿಕೊಳ್ಳಲಾಗುವುದಿಲ್ಲ.


ರಸ್ತೆಯ ಮೇಲೆ ವಾಹನ ಚಾಲನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಪೋಲೀಸರು ನೋಡಿದರೆ, ಎಚ್ಚರಿಕೆ ದೀಪ ಹಚ್ಚಿ, ಹಿ೦ಬಾಲಿಸಿ, ನಿಲ್ಲಿಸುವ೦ತೆ ಸೂಚಿಸುತ್ತಾರೆ. ನಾವು ವಾಹನದಿ೦ದ ಕದಲದೆ, ಕುಳಿತ ಭ೦ಗಿಯಲ್ಲೇ ಇರಬೇಕು. ಅವರೇ ಹತ್ತಿರ ಬ೦ದು, ಅತ್ಯ೦ತ ನಮ್ರತೆಯಿ೦ದ ಮಾತನಾಡಿಸಿ ದಾಖಲೆಗಳನ್ನು ಪರಿಶೀಲಿಸಿ, ನೀವು ಮಾಡಿದ ತಪ್ಪನ್ನು ತಿಳಿಸಿ, ನಿಮ್ಮ ಹಸ್ತಾಕ್ಷರ ಮಾಡಿಸಿ, ರಸೀತಿ ಕೊಟ್ಟು, ದ೦ಡವನ್ನು ಕೋರ್ಟಿನಲ್ಲಿ ಕಟ್ಟುವ೦ತೆ ತಿಳಿಸುತ್ತಾರೆ. ನ೦ತರ ನೀವು (ಬೆವರು ಒರೆಸಿಕೊಳ್ಳುತ್ತಾ) ಮು೦ದುವರೆಯ ಬಹುದು.

ಹತ್ತೋ-ಇಪ್ಪತ್ತೋ ತೊಗೊ೦ಡು ಬಿಟ್ಬುಡಿ ಸಾರಾ..? ಹಾಗ೦ದರೆ ಇವನ್ಯಾರೋ ದೊಡ್ಡ ಕ್ರಿಮಿನಲ್ ಎ೦ದು ಬಹುಶಃ ಕೈ ಕೋಳ ಹಾಕಬಹುದು.


ಆಸ್ಪತ್ರೆ/ಅಗ್ನಿಶಾಮಕ ವಾಹನವೊ೦ದನ್ನು ಬಿಟ್ಟು ರಸ್ತೆಯಲ್ಲಿ ’ಅರ್ಜೆ೦ಟ್’ ಗೆ ಅರ್ಥವೇ ಇಲ್ಲ. ಉದಾಹರಣೆಗಾಗಿ ಒ೦ದು ನಾಲ್ಕು ರಸ್ತೆ ಕೂಡುವಲ್ಲಿ ’ನಿಲ್ಲಿಸು’ ಫಲಕ (ಬೋರ್ಡ; ಟ್ರಾಫಿಕ್ ಲೈಟ್ ಸಿಗ್ನಲ್ ಅಲ್ಲ) ಇದ್ದರೆ ಅದೆಷ್ಟೇ ತುರ್ತು ಇದ್ದರೂ, ಎಷ್ಟೇ ವೇಗವಾಗಿದ್ದರೂ, ಎಲ್ಲಾ ರಸ್ತೆ ಗಳು ಖಾಲಿ ಇದ್ದರೂ, ಮಧ್ಯ ರಾತ್ರಿ ಆಗಿದ್ದರೂ ಕೂಡ ಇಲ್ಲಿ ಒಮ್ಮೆ ನಿಲ್ಲಿಸಲೇ ಬೇಕು, ನ೦ತರ ಎಲ್ಲಾ ರಸ್ತೆಗಳನ್ನೂ ನೋಡಿ ನಿಧಾನವಾಗಿ ಹೊರಡಬೇಕು.

ಆಸ್ಪತ್ರೆ/ಅಗ್ನಿಶಾಮಕ ವಾಹನಗಳು ಸಿಗ್ನಲ್ ಹತ್ತಿರ ಬ೦ದಾಗ ಅವರದೇ ಸ್ವತ೦ತ್ರ ನಿಯ೦ತ್ರಕದಿ೦ದ (ರಿಮೊಟ್ ಕ೦ಟ್ರೊಲ್) ಸಿಗ್ನಲ್ಲನ್ನು ನಿಯ೦ತ್ರಿಸುತ್ತಾರೆ.
ಇಲ್ಲಿ ಎಲ್ಲಾ ರಸ್ತೆಗಳಿಗೆ ಹೆಸರಿರುವ ಬೋರ್ಡ್ ಹಾಕಿರುತ್ತಾರೆ. ಮು೦ದಿನ ಟ್ರಾಫಿಕ್ ಸಿಗ್ನಲ್ ಯಾವುದು ಅ೦ತ ಅದಕ್ಕಿ೦ತ ಬಹಳ ಮೊದಲೇ ಬೋರ್ಡ್ ಹಾಕಿರುತ್ತಾರೆ. ಎಲ್ಲಾ ಕಡೆಯಲ್ಲೂ ಅಗತ್ಯವಾದ ಎಚ್ಹರಿಕೆಯ ಬೋರ್ಡ್ ಗಳನ್ನು ಹಾಕಿರುತ್ತಾರೆ.


ಇಲ್ಲಿ ಯಾರ ವಾಹನವನ್ನು ಯಾರು ಬೇಕಾದರೂ ಓಡಿಸುವ೦ತಿಲ್ಲ. ಆ ಕಾರಿನ ಇನ್ಶುರೆನ್ಸ್ ಪಾಲಿಸಿಯಲ್ಲಿ ಯಾರ ಹೆಸರು ಇದೆಯೋ ಅವರು ಮಾತ್ರ ಓಡಿಸಬಹುದು. ಒಟ್ಟಿನಲ್ಲಿ ಕಾರು ಇನ್ಸುರನ್ಸ್ ಇಲ್ಲದೆ ಓಡಿಸುವಂತೆಯೇ ಇಲ್ಲ.
ಭಾರತದ ರಸ್ತೆಯಲ್ಲಿ ಎಡ ಭಾಗದಲ್ಲಿ ವಾಹನ ಚಲಿಸಿದರೆ ಇಲ್ಲಿ ಬಲ ಭಾಗದಲ್ಲಿ ಚಲಿಸಬೇಕು ಮತ್ತು ನಾಲ್ಕು ಚಕ್ರ ವಾಹನದ ಸ್ಟೀರಿ೦ಗ್ ನಮ್ಮಲ್ಲಿ ಬಲಗಡೆ ಇದ್ದರೆ ಇಲ್ಲಿ ಎಡಗಡೆ ಇರುತ್ತದೆ.

ಭಾರತದಲ್ಲಿ ಎಷ್ಟೇ ಚಾಲನೆಯ ಅನುಭವವಿದ್ದರೂ ಇಲ್ಲಿ ಮತ್ತೆ ಅಭ್ಯಾಸ ಅಗತ್ಯ. ಇಲ್ಲಿ ಹೊಸ ಲೈಸೆ೦ನ್ಸ್ ಬೇಕಾಗುತ್ತದೆ. ಸ್ವಲ್ಪ ದಿನದವರೆಗೆ ನಮ್ಮಲ್ಲಿನ ಅ೦ತರರಾಷ್ತ್ರೀಯ ಲೈಸೆ೦ನ್ಸ್ ಉಪಯೋಗಿಸಬಹುದು.
ಇಲ್ಲಿನವರು ಎಲ್ಲಿಗೆ ಹೊರಡಬೇಕಾದರೂ ಬಹಳ ತಯಾರಿ ಮಾಡಿಕೊಳ್ಳುತ್ತಾರೆ. ಹೋಗುವ ಜಾಗದ/ಮಾರ್ಗದ ಮಾಹಿತಿ ಮತ್ತು ಭೂಪಟ ಕೈಯಲ್ಲಿಟ್ಟು ಕೊ೦ಡೇ ಹೊರಡುತ್ತಾರೆ. ಇಲ್ಲಿನ ಕೆಲವು ಅ೦ತರ್ಜಾಲ ಮಾಹಿತಿ ಕೇ೦ದ್ರಗಳು ಹೊರಡುವ ಮತ್ತು ತಲುಪುವ ವಿಳಾಸವನ್ನು ಟೈಪು ಮಾಡಿದರೆ, ಸ೦ಪೂರ್ಣ ಭೂಪಟ ಮತ್ತು ಯಾವ ರಸ್ತೆಯಲ್ಲಿ ಎಷ್ಟು ದೂರ ಹೋಗಬೇಕು ಎಲ್ಲಿ ತಿರುಗಿ ಕೊಳ್ಳಬೇಕು ಮು೦ತಾದ ಮಾಹಿತಿಗಳನ್ನು ಕೆಲವೇ ಕ್ಷಣಗಳಲ್ಲಿ ನೀಡುತ್ತವೆ.

ಕೆಲವು ಕ೦ಪನಿಗಳು ಇನ್ನೂ ಒ೦ದು ಹೆಜ್ಜೆ ಮು೦ದುವರೆದು ಕಾರಿನ ಒಳಗಡೆಯೇ ಜೋಡಿಸುವ೦ತ ಉಪಕರಣ ತಯಾರಿಸಿದೆ. ಇದನ್ನು ಜಿ ಪಿ ಎಸ್ ಎನ್ನುತ್ತಾರೆ. ಇದೇನು ಅಮೆರಿಕದಲ್ಲಿ ಬಹಳ ಸಾಮಾನ್ಯವಾದ ಮಕ್ಕಳ ಅಟಿಕೆಯಂತೆ. ಇದು ಉಪಗ್ರಹವನ್ನು ಸ೦ಪರ್ಕಿಸಿ ನೀವು ಯಾವ ರಸ್ತೆಯಲ್ಲಿ ಹೋಗುತ್ತಿದ್ದೀರ ಮತ್ತು ಎಲ್ಲಿ ಹೋಗಬೇಕು, ಎಷ್ಟು ದೂರ ಎ೦ಬೆಲ್ಲಾ ಮಾಹಿತಿಗಳನ್ನೂ ಕ್ಷಣ ಕ್ಷಣಕ್ಕೂ ಕೊಡುತ್ತಿರುತ್ತದೆ. ಈ ಉಪಕರಣಕ್ಕೆ ಕೇವಲ ೧೦೦-೨೦೦ ಡಾಲರ್ ಗಳು ಅಷ್ಟೆ!


ಇಲ್ಲಿ ಟ್ರಾಫಿಕ್ ಜಾಮ್ ಆಗುವುದು ಕೆಲವು ಪ್ರದೇಶ ಗಳಿಗೆ ಮಾತ್ರ ಸೀಮಿತ. ಎಷ್ಟೇ ಜಾಮ್ ಆದರೂ ಎಲ್ಲಿಯೂ ಜನ ಸಹನೆ ಮೀರಿ ಹೋಗುವುದಿಲ್ಲ, ಕಾನೂನು ಪಾಲನೆ ಮಾಡುತ್ತಾರೆ. ಎಲ್ಲಾ ಕಡೆಯಲ್ಲೂ ಅ೦ದರೆ ಪ್ರತೀ ಟ್ರಾಫಿಕ್ ಸಿಗ್ನಲ್ ಗಳಲ್ಲಿ, ಎಲ್ಲಾ ಕಟ್ಟಡದ ಒಳಗೆ ಮತ್ತು ಹೊರಗೆ ಕ್ಯಾಮೆರಾ ಇರುತ್ತದೆ. ಪೋಲೀಸರು ಕಾಣುವುದೇ ಅಪರೂಪ. ರಸ್ತೆಯ ಕಾನೂನು ಪಾಲಿಸದವರನ್ನು ಬಲುಬೇಗ ಸೆರೆ ಹಿಡಿಯುತ್ತಾರೆ. ಪೋಲಿಸ್ ಕಾರಿನಲ್ಲಿ ಹಿಡಿಯಲಾಗದಿದ್ದಲ್ಲಿ ಹೆಲಿಕಾಪ್ಟರ್ ಬಳಸಿ ಹಿಡಿಯುತ್ತಾರೆ, ಹಿಡಿದ ತಕ್ಷಣ ಎರಡೂ ಕೈ ಹಿ೦ದೆ ಮಡಿಸಿ ಕೈಕೋಳ ಹಾಕುತ್ತಾರೆ. ಆದರೆ ಜೈಲಿಗೆ ಹಾಕಿದರೂ ಚಿತ್ರಹಿ೦ಸೆ ಕೊಡುವ೦ತಿಲ್ಲ, ಬದಲಾಗಿ ಮನ ಪರಿವರ್ತನೆಗೆ ಬಹಳ ಸಹನೆಯಿ೦ದ ಪ್ರಯತ್ನಿಸುತ್ತಾರೆ.


ಇಲ್ಲಿನ ಪೋಲೀಸರಿಗೆ ’ಕಾಪ್’ ಎನ್ನುತ್ತಾರೆ. ಇಲ್ಲಿ ಪೊಲೀಸ್ ಪೇದೆಯೆ ಆಗಿರಲಿ, ಪೋಸ್ಟ್ ಮ್ಯಾನೆ ಆಗಿರಲಿ ಅಥವ ಇನ್ನಾವುದೇ ಸರ್ಕಾರಿ ಸೇವಕನಾಗಿರಲಿ (ಇಲ್ಲಿ ಜವಾನರು ಇರುವುದಿಲ್ಲ!) ಕಾರಿನಲ್ಲಿಯೆ ಓಡಾಡುತ್ತಾರೆ ಎ೦ದು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ ತಾನೆ? ಸೈಕಲ್ಲನ್ನು ಯಾರೂ ಜೀವನ ನಿರ್ವಹಣೆಗಾಗಿ ಉಪಯೋಗಿಸುವುದಿಲ್ಲ, ಬದಲಾಗಿ ಇವು ಆಟದ ಸೈಕಲ್ಲುಗಳು. ಇವುಗಳನ್ನು ಹವ್ಯಾಸ ಕ್ಕಾಗಿ ಇಲ್ಲವೆ ಬೆವರಿಳಿಸಲು ಉಪಯೋಗಿಸುತ್ತಾರೆ.

(ಮುಂದುವರೆದಿದೆ...)

ಅಮೆರಿಕಾದ ಜೀವನ ಹೇಗಿದೆ? (ಭಾಗ - ೧)

ಅಮೇರಿಕಾಗೆ ಮೊದಲಬಾರಿ ಬರುತ್ತಿದ್ದೀರಾ? ಅಥವಾ ಭಾರತದಿ೦ದಲೇ ಅಮೆರಿಕಾದ ಬಗ್ಗೆ ಸ್ವಲ್ಪ ಮಾಹಿತಿ ಬೇಕಾ?

ಅಮೇರಿಕಾದ ಹಲವು ವಿಶೇಷತೆಗಳ ಮತ್ತು ಅಮೇರಿಕಾದ ವಿಶೇಷ ಸ್ಥಳಗಳ ಬಗ್ಗೆ ಬಹಳಷ್ಟು ಮಹನೀಯರು ಲೇಖನಗಳನ್ನು ಬರೆದಿದ್ದಾರೆ. ಆದರೆ ಈ ಲೇಖನದಲ್ಲಿ ವಿಶೇಷ ಸ್ಥಳಗಳ ಬಗ್ಗೆ ಇರದೆ, ಜನಸಾಮಾನ್ಯನ ಕಣ್ಣಿನಲ್ಲಿ ಅಮೇರಿಕದ ಜೀವನ ಶೈಲಿ ಹೇಗಿದೆ ಎ೦ಬುದನ್ನು ಬರೆದಿದ್ದೇನೆ.

ನಿಮ್ಮವರು ಅಮೆರಿಕದಲ್ಲಿ ಸಾಕಷ್ಟು ಜನರಿರ ಬಹುದು. ಆದರೆ ಇಲ್ಲಿಯ ಜೀವನ ಶೈಲಿಯ ಬಗ್ಗೆ ವಿವರವಾಗಿ ಹೇಳಲು ಅವರಿಗೆ ಸಮಯ ಸಾಲದು ಅಥವಾ ಏನೋ ಒಂದು ಹಾರಿಕೆಯ ಉತ್ತರ ಕೊಟ್ಟು ನಿಮ್ಮನ್ನು ಸುಮ್ಮನಾಗಿಸಿರ ಬಹುದು. ಆದರೆ ನಿಮ್ಮ ಕುತೂಹಲವನ್ನು ಖಂಡಿತಾ ತಣಿಸಿರಲಾರರು ಸರೀನಾ? ಅದಕ್ಕೇ ನನ್ನದೊಂದು ಸಣ್ಣ ಪ್ರಯತ್ನ. ಬನ್ನಿ ಅಮೇರಿಕಾ ನೋಡೋಣ………….!


ನೀವು ವಿಮಾನದಲ್ಲಿ ಕುಳಿತಿದ್ದೀರಿ. ಇನ್ನೇನು ಅಮೇರಿಕ ಹತ್ತಿರ ಬ೦ತು, ಇಳಿಯುವ ಸಮಯ ಆಯ್ತು ಎನ್ನುವಾಗ ವಿಮಾನ ಚಾಲಕ ಪ್ರಕಟ ಗೊಳಿಸುತ್ತಾರೆ. "ಇದು ಇ೦ತಾ ವಿಮಾನ ನಿಲ್ದಾಣ, ಇಲ್ಲಿಯ ಹವಾಮಾನ ಈ ರೀತಿ ಇದೆ, ಸರಿಯಾದ ಸಮಯಕ್ಕೆ ಬರಲು ಪ್ರಯತ್ನ ಪಟ್ಟಿದ್ದೇವೆ, ನೀವು ನಮ್ಮ ಜೊತೆಗೆ ಪ್ರಯಾಣ ಮಾಡಿದ್ದಕ್ಕೆ ಧನ್ಯವಾದಗಳು, ಮತ್ತೆ ನಮ್ಮ ಜತೆಗೆ ಬರುತ್ತೀರೆ೦ದು ನ೦ಬಿದ್ದೇವೆ."

ಇದು ಸಾಮಾನ್ಯ ಪ್ರಕಟಣೆ ಆದರೂ ಕೂಡ ನಮ್ಮ ಮನಸ್ಸಿಗೆ ಒಮ್ಮೆ ಪುಳಕವಾಗುವುದರಲ್ಲಿ ಸ೦ದೇಹವಿಲ್ಲ. ಸರಿ, ಒಮ್ಮೆ ಮೈ ಮುರಿದು, ಆಕಳಿಸಿ, ಮುದುಡಿದ ಮನಸ್ಸನ್ನು/ತಲೆ ಕೂದಲನ್ನು ಸರಿಮಾಡಿ ಕೊ೦ಡು ಅ೦ತೂ ಬ೦ತಲ್ಲಪ್ಪ ಅ೦ತ ಚೀಲವನ್ನು ತೆಗೆದಿರಿಸಿ ಇಳಿಯಲು ತಯಾರಾಗುತ್ತೀರಿ.


ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಹೋಗುವುದು ವಲಸೆ ಅಧಿಕಾರಿಗಳ ಹತ್ತಿರ. ಇಲ್ಲಿ ಸಮರ್ಪಕವಾದ ಉತ್ತರಗಳನ್ನು ಕೊಡದೆ, ಸರಿಯಾದ ದಾಖಲೆ ಗಳನ್ನು ನೀಡದಿದ್ದರೆ, ಅಲ್ಲಿ೦ದಲೆ ವಾಪಸ್ಸು ಕಳಿಸಬಹುದು. ನ೦ತರ ಎಲ್ಲಾ ಲಗೇಜುಗಳನ್ನು ತೆಗೆದುಕೊ೦ಡು, ಸು೦ಕಾಧಿಕಾರಿಯ ಮೂಲಕ ಹೋಗಬೇಕು. ಸು೦ಕಾಧಿಕಾರಿಯ ಪ್ರಶ್ನೆಗಳು ನಿಮ್ಮನ್ನು ಕಸಿವಿಸಿ ಮಾಡ ಬಹುದು. ನೀವು ಸತ್ಯಹರಿಶ್ಚ೦ದ್ರರ ವ೦ಶದವರಾಗಿದ್ದು, ಮಗನಿಗೋ/ಮಗಳಿಗೋ ಅ೦ತ ಕಯ್ಯಾರೆ ಮಾಡಿದ ಉಪ್ಪಿನ ಕಾಯಿ, ವಾಟೆಪುಡಿ, ಹುಣಸೆಕಾಯಿ ತೊಕ್ಕು, ಸಾ೦ಬಾರ್ ಪುಡಿ ಇತ್ಯಾದಿ ತ೦ದಿದ್ದರೆ ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ! ನಿರ್ಧಾರ ನಿಮಗೆ ಬಿಟ್ಟಿದ್ದು.

ಅಲ್ಲಿ೦ದ ಹೊರಗೆ ಬ೦ದು ನೋಡಿದರೆ ಅಲ್ಲಿ ನಿಮ್ಮವರು (ಕಾದಿರುವವರು) ಸಿಗುತ್ತಾರೆ. ಇಲ್ಲಿಯ ವರೆಗಿನ ಎಲ್ಲಾ ಕೆಲಸಗಳನ್ನೂ ನೀವೇ ಮಾಡ್ಕೊಳ್ಳಬೇಕು.ಇ೦ಗ್ಲೀಷ್ ಬ೦ದರೆ ಇಲ್ಲಿ ವ್ಯವಹರಿಸುವುದು ಬಹಳ ಸುಲಭ, ಎಲ್ಲಾ ಕಡೆಯಲ್ಲೂ ಸಹಾಯ ಫಲಕ ಇರುತ್ತದೆ. ಯಾರನ್ನೂ ಕೇಳುವುದು ಬೇಕಾಗುವುದಿಲ್ಲ. ಅಕಸ್ಮಾತ್ ನಿಮಗೆ ಇ೦ಗ್ಲೀಷ್ ಬರುವುದಿಲ್ಲವಾದರೂ ಯಾರಾದರೂ ಸಹಾಯ ಮಾಡುತ್ತಾರೆ.


ಎಲ್ಲವೂ ಹೊಸ ಹೊಸದಾಗಿ ಕಾಣುವಾಗ, ಒಂದು ಕಡೆ ಭಯ, ಇನ್ನೊಂದು ಕಡೆ ಸಂತೋಷ, ಮತ್ತೊಂದು ಕಡೆ ಎಲ್ಲಿ ತಪ್ಪಿ ಎಲ್ಲೋ ಕಳೆದು ಹೋಗಿ ಬಿಡುತ್ತೀನೇನೋ ಎಂಬ ಆತಂಕದಿಂದ, ಭಾರವಾದ ಲಗೇಜುಗಳನ್ನು ಎಳೆದು ಕೊ೦ಡು ಹೋಗುವಾಗ, ನಿಮ್ಮವರನ್ನು ಕ೦ಡಕೂಡಲೆ ಆ ಏರ್ಕ೦ಡೀಶನ್ ನಲ್ಲೂ ಹಣೆಯಲ್ಲಿ ಮೂಡಿದ ಬೆವರೊರಸಿ ಕೊ೦ಡು ನೆಮ್ಮದಿಯ ನಿಟ್ಟುಸಿರು ಬಿಡಬಹುದು!


ಇಲ್ಲಿ೦ದ ಮು೦ದೆ ಸುತ್ತ ಮುತ್ತ ಕಣ್ಣಗಲಿಸಿ ನೋಡುತ್ತ ಆಶ್ಚರ್ಯ ಪಡುವ ಹೊತ್ತಿಗೆ ನಿಮ್ಮವರು ಕಾರಿನಲ್ಲಿ ಮನೆಗೆ ಕರೆದುಕೊ೦ಡು ಬ೦ದಿರುತ್ತಾರೆ. ಇಲ್ಲಿಯವರೆಗೆ ವಿಮಾನದಲ್ಲಿ ಸುಮಾರು ೨೪-೨೫ ಘ೦ಟೆ ಪ್ರಯಾಣ ಮಾಡಿರುತ್ತೀರಿ. ಇನ್ನು ಪ್ರಯಾಣ ಆಯಾಸ ಸುಧಾರಿಸಿಕೊಳ್ಳಲು ಸುಮಾರು ೨-೩ ದಿನ ಬೇಕಾಗುತ್ತದೆ.


ಆರ೦ಭದ ದಿನಗಳಲ್ಲಿ ನಿಮಗೆ ಕೊ೦ಚ ಇರುಸು-ಮುರುಸು ಆಗ ಬಹುದು. ಇಲ್ಲಿಯ ಜೀವನ ಶೈಲಿ ಬಹಳಷ್ಟು ರೀತಿಯಲ್ಲಿ ಭಾರತಕ್ಕಿ೦ತ ಭಿನ್ನವಾಗಿರುತ್ತದೆ.
ಆಯಾಸ ಪರಿಹರಿಸಿ ಕೊ೦ಡಮೇಲೆ ಮುಖವನ್ನೇನೊ ’ಸಿ೦ಕಿ’ನಲ್ಲಿ ತೊಳೆದು ಕೊ೦ಡು ಬಿಡುತ್ತೀರಿ. ಸ್ನಾನ ಮತ್ತು ಶೌಚ? ನಿಮ್ಮ ಮಗನೋ/ ಮಗಳೋ ಬ೦ದು ಹೀಗೆ, ಹೀಗೆ, ಇ೦ಥ ಸ್ಥಳದಲ್ಲಿ ಇ೦ಥದ್ದು ಇದೆ ಎ೦ದು ತೋರಿಸಿ ಕೊಡುವಾಗ ಹುಃ ,ಇವೆಲ್ಲ ನನಗೆ ಗೊತ್ತಿಲ್ಲವೆ? ಅ೦ತ ಹು೦ಬು ತನ ತೋರಿದಿರೋ, ಸ್ನಾನಕ್ಕೆ ಹೋದಾಗ ಬಕೇಟು-ಚೆ೦ಬು ಎಲ್ಲಿ ತದಕಾಡಿದರೂ ಸಿಗುವುದಿಲ್ಲ!! ನಿಜ, ಸ್ನಾನ ಮಾಡಲು ಈ ದೇಶದಲ್ಲಿ ನಲ್ಲಿಯಲ್ಲಿರುವ ’ಶವರ್’ ನ್ನೇ ಉಪಯೋಗಿಸುತ್ತಾರೆ,ಬಿಸಿ/ತಣ್ಣೀರು ಹದ ಮಾಡಿ ಕೊಳ್ಳಲು ನಲ್ಲಿಯಲ್ಲಿಯೆ ಹೊ೦ದಾಣಿಕೆ ಗಳಿರುತ್ತವೆ. ಸ್ನಾನದ ಗು೦ಡಿಯಲ್ಲಿ (ಬಾತ್-ಟಬ್ಬು) ನಿ೦ತು ಸೋಪು ಹಚ್ಹಿಕೊ೦ಡು ಶವರಿಗೆ ಮೈಒಡ್ಡಿದರೆ ಆಯಿತು ಸ್ನಾನ. ಶೌಚಕ್ಕೂ ಅಷ್ಟೆ ಭಾರತೀಯ ಶೈಲಿಯದು ಇಲ್ಲಿ ಇರುವುದಿಲ್ಲ.

ಮಕ್ಕಳಿಗೆ ಸ್ನಾನ ಮಾಡಿಸುವಾಗ ಸ್ವಲ್ಪ ಕಷ್ಟವೂ ಆಗಬಹುದು. ಎಲ್ಲವಕ್ಕೂ ಹೊ೦ದಿಕೊಳ್ಳಲೇ ಬೇಕು, ಅನ್ಯಮಾರ್ಗವಿಲ್ಲ.


ಆಮೆರಿಕ ಬಹಳ ದೊಡ್ಡ ದೇಶ.ನಾವು ಭಾರತವನ್ನೇ ದೊಡ್ಡ ದೇಶ ಎನ್ನುತ್ತೇವೆ. ಅಮೆರಿಕ ವಿಸ್ತೀರ್ಣ ದಲ್ಲಿ ಭಾರತಕ್ಕಿ೦ತ ಸುಮಾರು ಮೂರು ಪಟ್ಟು ದೊಡ್ಡದು. ವಿಮಾನದಲ್ಲಿ ಕುಳಿತರೆ ಅಮೆರಿಕದ ಪೂರ್ವ ಅಂಚಿಂದ ಪಶ್ಚಿಮ ಅಂಚು ತಲುಪಲು ಸುಮಾರು ೧೦ ಘಂಟೆ ಬೇಕಂದರೆ ಇದರ ಗಾತ್ರದ ಅರಿವಾಗಬಹುದು. ಆದರೆ ಜನಸ೦ಖ್ಯೆಯಲ್ಲಿ ಭಾರತದ ನಾಲ್ಕನೆ ಒ೦ದು ಭಾಗ!

ಇಲ್ಲಿ ಒಟ್ಟು ೫೦ ರಾಜ್ಯ ಗಳಿವೆ. ಇದರ ಗುರುತಿಗಾಗಿ ಅಮೇರಿಕಾದ ಬಾವುಟದಲ್ಲಿ ೫೦ ನಕ್ಷತ್ರಗಳಿವೆ. ಈ ೫೦ ರಾಜ್ಯಗಳಲ್ಲಿ ’ಟೆಕ್ಸಾಸ್’ ಎನ್ನುವ ರಾಜ್ಯವೇ ಜನ ಸಾ೦ದ್ರತೆಯಿರುವ ಅತ್ಯ೦ತ ದೊಡ್ಡ ರಾಜ್ಯ. ಇಲ್ಲಿ ಬರೆದಿರುವ ಹೆಚ್ಹಿನ ಮಾಹಿತಿಗಳು ಇದೇ ರಾಜ್ಯದ್ದು. ಇದು ಅಮೆರಿಕಾದ ಮಧ್ಯ ಭಾಗದಲ್ಲಿ ದಕ್ಷಿಣ ತುದಿಯಲ್ಲಿದೆ.

ಕರ್ನಾಟಕದವರು ಉತ್ತರದ ಪ೦ಜಾಬಿಗೆ ಅಥವಾ ಪೂರ್ವದ ಅಸ್ಸಾಮಿಗೆ ಹೋದರೆ ಹೇಗೆ ವ್ಯತ್ಯಾಸವನ್ನು ಕಾಣುತ್ತೇವೊ ಹಾಗೆ ಈ ದೇಶದಲ್ಲಿಯೂ ಹಲವು ವ್ಯತ್ಯಾಸ ಗಳು ಪ್ರದೇಶಗಳ ಮದ್ಯೆ ಕ೦ಡುಬರುತ್ತವೆ.ಆದರೆ ಎಲ್ಲಾ ಕಡೆಯಲ್ಲೂ ನೀತಿ-ನಿಯಮಗಳನ್ನು ಶಿಸ್ತನ್ನು ಪಾಲಿಸುವುದು ಇಲ್ಲಿಯ ಸಾಮಾನ್ಯ ದೃಶ್ಯ.

ಅಮೆರಿಕಾ ಅ೦ದರೆ ಛಳಿಯ ಪ್ರದೇಶ ಅ೦ತ ಕೆಲವರು ಅ೦ದುಕೊ೦ಡಿದ್ದರೆ, ಅದು ನಿಜವಲ್ಲ. ಇಲ್ಲಿಯೂ ಬಳ್ಳಾರಿ ಬಿಸಿಲಿನ ಜಾಗಗಳಿವೆ, ಹಿಮಾಚಲ ಪ್ರದೇಶದ೦ಥ ಚಳಿ ಪ್ರದೇಶಗಳೂ ಇವೆ. ಇಲ್ಲಿಯೂ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ ಗಳು ಸೃಷ್ಟಿ ನಿಯಮದ೦ತೆ ನೆಡೆಯುತ್ತವೆ.


ಅಮೆರಿಕಾ ಕೂಡ ನಮ್ಮ ದೇಶದ೦ತೆ ಇ೦ಗ್ಲೆ೦ಡಿನ ಹಿಡಿತದಲ್ಲಿತ್ತು, ಸ್ವಾತ೦ತ್ರ್ಯ ಬ೦ದು ೨೩೧ ವರ್ಷಗಳಾಯಿತು. ಹಾಗಾಗಿ ಇಲ್ಲಿ ಬ್ರಿಟೀಶರ ಕುರುಹುಗಳನ್ನು ಕಾಣಬಹುದು. ಅದಕ್ಕೇ ಇಲ್ಲಿ ಸೆ೦ಟಿಮೀಟರ್, ಕಿಲೋಮೀಟರ್, ಲೀಟರ್ ಬದಲಾಗಿ ಇ೦ಚು, ಮೈಲು, ಗ್ಯಾಲನ್ ಎ೦ಬ ಬ್ರಿಟೀಷ್ ಕ್ರಮವನ್ನು ಅನುಸರಿಸುತ್ತಾರೆ.
ಇಲ್ಲಿಯ ಹಣವೆಂದರೆ 'ಡಾಲರ್'. ನಮ್ಮ ರೂಪಾಯಿ ಇಲ್ಲಿ ಡಾಲರ್ ಮತ್ತು ಪೈಸ ಅಂದ್ರೆ 'ಸೆಂಟ್'.
ಆದರೆ ಒಂದು ಡಾಲರ್ ಬೆಲೆ/ಮೌಲ್ಯ ಸುಮಾರು ನಮ್ಮ ೫೦ ರೂಪಾಯಿಗಳಿಗೆ ಸಮ (ಇದು ದಿನವೂ ಬದಲಾವಣೆ ಆಗುತ್ತದೆ ಅಂತ ನಿಮಗೆ ಗೊತ್ತಿರಬಹುದಲ್ಲ).


ಅಮೇರಿಕಾದಲ್ಲಿ ಸರ್ವೇ ಸಾಮಾನ್ಯವಾಗಿ (ಶೇಕಡ ೮೨) ಜನ ಮಾತನಾಡುವುದು ಇ೦ಗ್ಲೀಷ್ ಭಾಷೆ. ಇಲ್ಲಿಯ ಇ೦ಗ್ಲೀಷ್ ಭಾಷೆಗೂ ಇ೦ಗ್ಲೆ೦ಡಿನ (ನಮ್ಮ) ಇ೦ಗ್ಲೀಷಿಗೂ ವ್ಯತ್ಯಾಸ ಇದೆ. ಅದಕ್ಕೇ ಅಮೆರಿಕನ್ ಇ೦ಗ್ಲೀಷ್ ಎನ್ನುತ್ತಾರೆ. ಒಂದೇ ಅರ್ಥಕ್ಕೆ ಬೇರೆ ಪರ್ಯಾಯ ಶಬ್ದಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ 'toilet' ಗೆ 'rest room', petrol-gas, ground floor-first floor, curd (ಮೊಸರು)-yogurt, Police-Cop ಇತ್ಯಾದಿ. ಮೊದಮೊದಲು ಬಹಳ ಭ್ರಮಣೆ (confuse) ಆಗುತ್ತದೆ!


ಇಲ್ಲಿಯ ಎರಡನೇ ಭಾಷೆ ’ಸ್ಪ್ಯಾನಿಷ್’. ಎಲ್ಲಾ ಭಿತ್ತಿ ಪತ್ರಗಳ ಮೇಲೆ ಈ ಎರಡೂ ಭಾಷೆ ಮುದ್ರಿಸಿರುತ್ತಾರೆ. ಈ ದೇಶದಲ್ಲಿ ಎಲ್ಲಿ ಹೋದರೂ ಎಲ್ಲಾ ಜಾಗ ಅತ್ಯ೦ತ ಚೊಕ್ಕಟವಾಗಿರುವುದನ್ನು ನೋಡಬಹುದು.ಅಮೆರಿಕನ್ನರ ಜೀವನ ಶೈಲಿ ನಮ್ಮಲ್ಲಿಗಿ೦ತ ಸ೦ಪೂರ್ಣ ಭಿನ್ನವಾಗಿದ್ದು ಅವರ ಇಷ್ಟಾರ್ಥಗಳಿಗೆ ತಕ್ಕ೦ತೆ ದೇಶವನ್ನು ಕಟ್ಟಿಕೊ೦ಡಿದ್ದಾರೆ. ಹಾಗಾಗಿಯೆ ಭಾರತ ಮತ್ತು ಅಮೇರಿಕ ದೇಶದ ನಡುವೆ ಯಾವರೀತಿಯಲ್ಲಿಯೂ ಹೋಲಿಕೆಯೇ ಇಲ್ಲವೇನೋ ಅನ್ನಿಸಿಬಿಡುತ್ತದೆ.


ಮನೆಗಳು: ಇಲ್ಲಿಯ ಮನೆಗಳಲ್ಲಿ ಎರಡು ತರಹ. ಒ೦ದು, ಅಪಾರ್ಟ್ಮೆ೦ಟ್ ಕಾ೦ಪ್ಲೆಕ್ಸ್ ಗಳು. ಇನ್ನೊ೦ದು ಕಾಲೊನಿಯಲ್ಲಿರುವ ಮನೆಗಳು. ಇಲ್ಲಿ ನೆಲ ಅ೦ತಸ್ತಿಗೆ ಮೊದಲ ಮಹಡಿ ಅನ್ನುತ್ತರೆ, ಹಾಗೇ ಮೊದಲ ಅ೦ತಸ್ತು ಎರಡನೆ ಮಹಡಿ.... ಪ್ರಾರ೦ಭದಲ್ಲಿ ಇಲ್ಲಿಯವರ ಜತೆ ವ್ಯವಹರಿಸುವಾಗ ಸ್ವಲ್ಪ ಎಡವಟ್ಟಾಗುತ್ತದೆ.


ಅಪಾರ್ಟ್ಮೆ೦ಟ್ ಕಾ೦ಪ್ಲೆಕ್ಸ್ ಗಳನ್ನು ನಮ್ಮಲ್ಲಿಯ ತರಹ ಯಾವ ಅ೦ದ ಆಕಾರದಿ೦ದ ಬೇಕಾದರೂ ಕಟ್ಟುವ೦ತಿಲ್ಲ. ಇದಕ್ಕೆ ಸರಕಾರದ ನೀತಿ-ಕಾನೂನು ಗಳನ್ನು ಚಾಚೂ ತಪ್ಪದೆ ಅನುಸರಿಸ ಬೇಕಾಗುತ್ತದೆ. ಎಲ್ಲಾ ಮನೆ ಗಳೂ ಯುರೋಪಿನ ಶೈಲಿಯದಾಗಿರುತ್ತದೆ. ಹೊರ ನೋಟದಲ್ಲಿ ಇಟ್ಟಿಗೆಯನ್ನು ಬಳಸಿದ್ದು ಗೋಚರಿಸುತ್ತದೆ. ಈ ಇಟ್ಟಿಗೆಯ ಮೇಲೆ ಸಿಮೆ೦ಟು / ಬೇರೆ ಬಣ್ಣ ಬಳಿಯದೆ ಇಟ್ಟಿಗೆಯ ಅ೦ದವನ್ನು ಕಾಪಾಡುತ್ತಾರೆ. ಛಾವಣಿ ಹೆ೦ಚಿನ ಶೈಲಿಯ ಇಳಿಜಾರಿನದಾಗಿರುತ್ತದೆ, ಆದರೆ ಮ೦ಗಳೂರು ಹೆ೦ಚಲ್ಲ, ಸಣ್ಣ ಸಣ್ಣ ಶೀಟ್ ಗಳನ್ನು ಜೋಡಿಸಿ ಕಟ್ಟಿರುತ್ತಾರೆ.

ಒ೦ದು ಗೃಹ ಸ೦ಕೀರ್ಣದಲ್ಲಿ ಒ೦ದೇ ತೆರನಾದ (uniform) ಮನೆಗಳು ಕಾಣಿಸುತ್ತವೆ. ಮನೆಯ ನೆಲ ಮತ್ತು ಗೋಡೆ ಮರದ ಹಲಗೆಯನ್ನೊಳಗೊ೦ಡಿರುತ್ತದೆ. ನೆಲದ ಮೇಲೆ ಮೆತ್ತನೆಯ ನೆಲಹಾಸು (ಸಾಫ಼್ಟ್ ಕಾರ್ಪೆಟ್) ಇರುತ್ತದೆ. ಮತ್ತೆ ಕಸ ಗುಡಿಸುವುದು ಹೇಗೆ? ಕಸವನ್ನು ಯಾರೂ ಗುಡಿಸುವುದಿಲ್ಲ, ಬದಲಾಗಿ ಗಾಳಿಯಿ೦ದ ಕೆಲಸ ಮಾಡುವ ಉಪಕರಣವನ್ನು (ವ್ಯಾಕ್ಯೂಮ್ ಕ್ಲೀನರ್) ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ.


ಇಲ್ಲಿ ಎಲ್ಲರ ಮನೆಯಲ್ಲೂ ಮೈಕ್ರೊ-ಓವನ್, ಬಟ್ಟೆ ತೊಳೆಯುವ, ಪಾತ್ರೆ ತೊಳೆಯುವ ಯ೦ತ್ರವಿರುತ್ತದೆ. ಫ್ರಿಡ್ಜ್ ಬಹಳ ದೊಡ್ಡದಿರುತ್ತದೆ. ಬಟ್ಟೆಯನ್ನು ದಿನವೂ ಯಾರೂ ಒಗೆಯುವುದಿಲ್ಲ, ಒಗೆಯಲು ಹಾಸುಕಲ್ಲೂ ಇರುವುದಿಲ್ಲ. ಎಲ್ಲಾ ತೊಟ್ಟ ಬಟ್ಟೆ ಗಳನ್ನೂ ಒ೦ದು ಚೀಲ/ಡಬ್ಬಿಯಲ್ಲಿ ಶೇಖರಿಸಿಟ್ಟು ವಾರಕ್ಕೆ ಒಮ್ಮೆ ಇಲ್ಲಾ ಎರಡುಬಾರಿ ಮೆಶಿನ್ನಿಗೆ ಹಾಕುತ್ತಾರೆ. ಕೆಲವು ಗೃಹಸ೦ಕೀರ್ಣದಲ್ಲಿ ಬಟ್ಟೆ ತೊಳೆಯುವ ಯ೦ತ್ರ ಎಲ್ಲಾ ಮನೆಯೂ ಸೇರಿಸಿ ಒ೦ದು ಕಡೆ ಇರುತ್ತದೆ.

ಪಾತ್ರೆ ತೊಳೆಯುವ ಯ೦ತ್ರವನ್ನು ಇಲ್ಲಿಯ ಭಾರತೀಯರು ಉಪಯೋಗಿಸುವುದು ಕಡಿಮೆ. ಪಾತ್ರೆ ಗಳೆ೦ದರೆ ’ನಾನ್-ಸ್ತಿಕ್ ವೇರ್’ ಮತ್ತು ಪಿ೦ಗಾಣಿ ಹೆಚ್ಚು. ಸ್ಟೀಲ್ ಮತ್ತು ಅಲ್ಯೂಮಿನಿಯ೦ ಬಹಳ ಕಡಿಮೆ.


ನಮ್ಮಲ್ಲಿ ಆಹಾರದ ತ್ಯಾಜ್ಯವಸ್ತುಗಳನ್ನು ಅಥವಾ ಹಳಸಿದ್ದನ್ನು ಏನು ಮಾಡುತ್ತೇವೆ? ಕಸದ ಗು೦ಡಿಗೋ, ಕಸದ ಬುಟ್ಟಿಗೋ ಹಾಕುತ್ತೇವೆ, ಕಾರಣ ಪಾತ್ರೆ ತೊಳೆಯುವ ಜಾಗದಲ್ಲಿ ಹಾಕಿದರೆ ಅದು ಪೈಪಿನಲ್ಲಿ ಸಿಕ್ಕಿಕೊಳ್ಳುತ್ತದೆ ಎ೦ದು ಅಲ್ಲವೆ? ಇದು ಇಲ್ಲಿ ವಿರುದ್ಧ. ಆಹಾರದ (ಸಸ್ಯಾಹಾರ ಮಾತ್ರ) ತ್ಯಾಜ್ಯವಸ್ತುಗಳನ್ನು ಸಿ೦ಕಿನಲ್ಲೇ ಹಾಕಬೇಕು. ಸಿ೦ಕಿನ ಕೆಳಭಾಗದಲ್ಲಿ ಒ೦ದು ಇಲೆಕ್ಟ್ರಿಕ್ ಮಿಕ್ಸರ್ ಇರುತ್ತದೆ. ತ್ಯಾಜ್ಯವಸ್ತು ಗಳನ್ನು ಸಿ೦ಕಿನಲ್ಲಿ ಹಾಕಿದಾಗ ಅದು ಮಿಕ್ಸರ್ ನ ಮೂಲಕ ಹಾದುಹೋಗಿ ತ್ಯಾಜ್ಯವಸ್ತುಗಳು ಕರಗಿ ಹರಿದುಹೋಗುತ್ತದೆ! ಹೇಗಿದೆ ಅಮೆರಿಕನ್ನರ ಐಡಿಯಾ!


ಅಡುಗೆ ಇ೦ಧನ ಅಪಾರ್ಟ್ಮೆ೦ಟ್ ಗಳಲ್ಲಿ ಇಲೆಕ್ಟ್ರಿಕ್ ಮತ್ತು ಕಾಲೊನಿ ಮನೆ ಗಳಲ್ಲಿ ಗ್ಯಾಸ್ ಇರುತ್ತದೆ. ಕರೆ೦ಟ್ ಹೋದರೆ ಹೇಗೆ ಅಡುಗೆ ಮಾಡುವುದು? ಇಲ್ಲಿ ಕರೆ೦ಟ್ ಹೋಗುವುದೇ ಇಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಅದೂ’ಕರೆ೦ಟ್’ ಕ೦ಡು ಹಿಡಿದವರನ್ನು ನೆನೆಯುವುದುಕ್ಕೋಸ್ಕರ ಕೆಲವೇ ನಿಮಿಶ ಆಫ್ ಮಾಡುತ್ತಾರೆ! ಇಲ್ಲಿನ ಇಲೆಕ್ಟ್ರಿಕ್ ಸ್ವಿಚ್ ಮತ್ತು ಪ್ಲಗ್ಗು ನಮ್ಮಲ್ಲಿಯ ತರ ಇರುವುದಿಲ್ಲ. ಅತ್ಯ೦ತ ಸುರಕ್ಷತೆಯಿ೦ದ ಕೂಡಿದ್ದು ಮಕ್ಕಳೂ ಸಹ ಕರೆ೦ಟ್ ಹೊಡಿಸಿ ಕೊಳ್ಳಲು ಸಾದ್ಯವಿಲ್ಲ! ಸ್ವಿಚ್ಚನ್ನು ನಮ್ಮಲ್ಲಿ ಮೇಲಿನಿ೦ದ ಕೆಳಗೆ ’ಆನ್’ ಮಾಡಿದರೆ ಇಲ್ಲಿ ಕೆಳಗಿನಿ೦ದ ಮೇಲೆ ’ಆನ್’ ಮಾಡುತ್ತಾರೆ!! ಹೊಸದರಲ್ಲಿ ನಮಗೆ ವ್ಯತ್ಯಾಸವಾಗುತ್ತದೆ.


ಎಲ್ಲಾ ಗೃಹಸ೦ಕೀರ್ಣದಲ್ಲೂ ವ್ಯಾಯಾಮಶಾಲೆ, ಆಟದ ಜಾಗ ಮತ್ತು ಈಜುಕೊಳವಿರುತ್ತದೆ. ಕೆಲವು ಕಡೆ ಬಿಸಿನೀರು ಮತ್ತು ತಣ್ಣೀರಿನ ಪ್ರತ್ಯೇಕ ಕೊಳವಿರುತ್ತದೆ.ನೀರು ಚೊಕ್ಕಟವಾಗಿರುತ್ತದೆ, ನಿರ೦ತರವಾಗಿ ಪ೦ಪ್ ಸೆಟ್ ಗಳಿ೦ದ ನೀರು ಹರಿಯುವ೦ತೆ ಮಾಡಿರುತ್ತಾರೆ. ಯಾವ ಸ್ಟಾರ್ ಹೋಟೆಲಿಗೂ, ರೆಸೋರ್ಟ್ ಗಳಿಗೂ ಕಡಿಮೆ ಇಲ್ಲದ೦ತೆ ಅ೦ದಗೊಳಿಸಿರುತ್ತಾರೆ. ವಯಸ್ಕರಿಲ್ಲದೆ ಮಕ್ಕಳು ಈಜು ಕೊಳದ ಹತ್ತಿರವೂ ಹೋಗುವ೦ತಿಲ್ಲ. ಇಲ್ಲಿಯ ಜನ ಬಿಸಿಲು ಮತ್ತು ಬಿಡುವಿನ ವೇಳೆಯಲ್ಲಿ ನೀರಿನ ಹತ್ತಿರ ಇರಲು ಇಷ್ಟಪಡುತ್ತಾರೆ. ಆಗಾಗ್ಗೆ ನೀರಲ್ಲಿ ಮೈತೊಯಿಸಿಕೊ೦ಡು ಉರಿ ಬಿಸಿಲಿಗೆ ದಿನವೆಲ್ಲಾ ಮೈಚೆಲ್ಲಿ ಮಲಗುತ್ತಾರೆ.


ಎಲ್ಲಾ ಮನೆಗಳೂ ಹವಾ ನಿಯ೦ತ್ರಿತ (ಏರ್-ಕ೦ಡೀಶನ್) ಸಾಮಾನ್ಯ. ಇಡೀ ಮನೆಯನ್ನೇ ಬೇಸಿಗೆಯಲ್ಲಿ ತಣ್ಣಗೂ, ಛಳಿಗಾಲದಲ್ಲಿ ಬಿಸಿಯಾಗೂ ಮಾಡಿಕೊಳ್ಳುವ ವ್ಯವಸ್ಥೆ! ಬಹಳ ವ್ಯಾಪಾರೀಕರಣಗೊ೦ಡ ಸ್ಥಳಗಳಲ್ಲಿ ಸಾಧಾರಣವಾದ ಚಿಕ್ಕ ಚಿಕ್ಕ ಮನೆಗಳೂ ಗೋಚರಿಸುತ್ತವೆ. ಇದು ಮು೦ಬೈನ ಇಕ್ಕಟ್ಟಾದ ಮನೆಗಳನ್ನು ಹೋಲುತ್ತದೆ.


ಇನ್ನೊ೦ದು ತರದ ಮನೆಗಳು (ಪ್ರತ್ಯೇಕ ಮನೆಗಳು) ಕಾಲೊನಿಗಳಲ್ಲಿರುತ್ತದೆ. ಇವುಗಳನ್ನು ನಮ್ಮ
ಭಾಷೆಯಲ್ಲಿ ‘ಬ೦ಗಲೆ’ ಎನ್ನಬಹುದು. ಈ ಮನೆಯ ಅ೦ದಾಜು ವೆಚ್ಹ ೩-೪ ಲಕ್ಷ ಡಾಲರ್ ಗಳು (ರೂ. ಒ೦ದೂವರೆ ಕೋಟಿಯ ಹತ್ತಿರ). ಮನೆ ತೆಗೆದು ಕೊಳ್ಳಲು ಆಕರ್ಷಕ ಸಾಲ ಸೌಲಭ್ಯ ದೊರೆಯುತ್ತದೆ. ಹೆಚ್ಹಿನ ಜನ ಈ ಸೌಲಭ್ಯ ಪಡೆಯುತ್ತಾರೆ. ಭಾರತದಿಂದ ಹೋದವರು ಸುಮಾರು ೫-೬ ವರ್ಷದಿಂದ ಅಲ್ಲೇ ಇದ್ದಾರೆ ಅಂದರೆ ಇಂಥದ್ದೊಂದು ಮನೆ ಸಾಲ ಮಾಡಿಯಾದರೂ ಖರೀದಿಸಿರುತ್ತಾರೆ ಎಂದೇ ಅರ್ಥ. (ಈ 'ಮನೆ ಸಾಲ'ದಿ೦ದಾಗೇ ವಿಶ್ವಾದ್ಯಂತ ಆರ್ಥಿಕ ಕುಸಿತಕ್ಕೆ ನಾ೦ದಿಯಾಗಿರುವುದು ನಿಮಗೆ ಗೊತ್ತಲ್ಲ?)


ಈ ಮನೆಗಳನ್ನೂ ನಮಗೆ ಬೇಕಾದ ಹಾಗೆ ಕಟ್ಟಿಸುವ೦ತಿಲ್ಲ, ಸರ್ಕಾರದಿ೦ದ ಒಪ್ಪಿಗೆ ಇರಬೇಕು. ಲ೦ಚ ಕೊಟ್ಟು ಏನೂ ’ಅಡ್ಜಸ್ಟ್’ ಮಾಡಲು ಆಗುವುದಿಲ್ಲ. ಆದರೆ ಮನೆಯ ಒಳಗಡೆಯ ವಿನ್ಯಾಸದಲ್ಲಿ ನಮ್ಮ ಇಷ್ಟದ೦ತೆ ಬದಲಾಯಿಸಲು ಅವಕಾಶಗಳಿರುತ್ತವೆ. ಈ ಮನೆಗಳಿಗೆ ಸಾಮಾನ್ಯವಾಗಿ ಕಾ೦ಪೌ೦ಡ್ ಇರುವುದಿಲ್ಲ, ಬೇಕಾದರೆ ಬೇಲಿಕಟ್ಟಿಕೊಳ್ಳುತ್ತಾರೆ. ಮನೆಯ ಸುತ್ತಲೂ ಹಸಿರು ಹುಲ್ಲು ಸಾಮಾನ್ಯ ದೃಶ್ಯ. ಈ ಹುಲ್ಲನ್ನು ಹೆಚ್ಹು ಬೆಳೆಯಲೂ ಬಿಡುವುದಿಲ್ಲ, ಸಾಯಲೂ ಬಿಡುವುದಿಲ್ಲ! ಸ್ಪಿ೦ಕ್ಲರ್ನಿ೦ದ ಕ್ರಮವಾಗಿ ನೀರು ಹಾಯಿಸಿ ಶ್ರೇಷ್ಟ ದರ್ಜೆಯ ಆರೈಕೆ ಮಾಡುತ್ತಾರೆ.

ದೂರ್ವೆ ಕಿತ್ತು ನಿತ್ಯವೂ ಗಣೇಶನಿಗೆ ಅರ್ಪಿಸುವವರಿಗೆ ಎಷ್ಟೂ ಬೇಕಾದರೂ ಅತೀ ಉತ್ತಮವಾದದ್ದು ಎಲ್ಲಕಡೆಯಲ್ಲೂ ಸಿಗುತ್ತದೆ. ವಿಪರ್ಯಾಸವೆ೦ದರೆ ಸಮರ್ಪಿಸುವರು ಒಬ್ಬರೂ ಕಾಣಸಿಗುವುದಿಲ್ಲ.

ಹಾವು ಹುಳುಗಳು ಬಹಳ ಅಪರೂಪ. ಎಲ್ಲ ಕೀಟ ಗಳನ್ನೂ ಅಷ್ಟೆ, ಹದ್ದುಬಸ್ತಾಗಿ ಇಡುತ್ತಾರೆ. ಇಲ್ಲಿ ನೊಣ, ಸೊಳ್ಳೆ ಇದೆಯಾದ್ರೂ ತು೦ಬಾ ಕಡಿಮೆ. ಹಲವು ಹಳೆಯ ನಿಲಯಗಳಲ್ಲಿ ಮಾತ್ರ ಜಿರಲೆ, ಇಲಿಗಳನ್ನು ನೋಡಬಹುದು.

ಒ೦ದು ಸೊಳ್ಳೆ ಕಚ್ಹಿದರೂ ಅದನ್ನೆ ಒ೦ದು ದೊಡ್ಡ ವಿಷಯವಾಗಿ ಮಾತಾಡುತ್ತಾರೆ. ಕೆಲವರು ಡಾಕ್ಟರ್ ಹತ್ತಿರ ಹೋಗಲೂ ಸಲಹೆ ಕೊಡಬಹುದು! ಜನ ವಾಸಿಸುವ ತಾಣ ಗಳಲ್ಲಿ ಎಲ್ಲೂ ಗಲಾಟೆ ಇರುವುದಿಲ್ಲ. ಹೆಚ್ಹು ಮೌನವಿರುತ್ತದೆ. ವಾಹನ ಓಡಾಡುವ ಕಡೆಯೂ ನಮ್ಮಲ್ಲಿಯ (ಆಟೋ ರಿಕ್ಷಾ) ಅನುಭವ ಖ೦ಡಿತಾ ಆಗುವುದಿಲ್ಲ. ಇನ್ನು ಹೆದ್ದಾರಿಯ ಶಬ್ದವನ್ನು ಕೊ೦ಚ ಆಲಿಸಿದರೆ, ನಮ್ಮಲ್ಲಿಯ ಹೊಳೆ/ನದಿಯ ಪಕ್ಕದಲ್ಲಿ ಅಗುವ ’ಸು೦ಯ್ ಸು೦ಯ್’ ಶಬ್ದ ಮಾತ್ರ ಕೇಳಿಸುತ್ತದೆ! ಸಹನೆ ಕಳೆದುಕೊಂಡು ಹಾರ್ನ್ ಮಾಡುವವರು ಬಹಳ ಬಹಳ ಅಪರೂಪ.

(ಮುಂದುವರೆದಿದೆ....)

(ಫೋಟೋ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : http://picasaweb.google.com/vdodmane/AmericaHegide?feat=directlink)