ಶನಿವಾರ, ಅಕ್ಟೋಬರ್ 6, 2012

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ


(This Write-up is Published in 'Havyaka' Magazine - Oct-2012)

ಕರ್ನಾಟಕ ಸ೦ಗೀತದಲ್ಲಿ ಮತ್ತು ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ಖ್ಯಾತಿ ಗಳಿಸಿದ ಹಲವು ಮೇರು ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟದಲ್ಲಿ ಹೊ೦ದಿರುವ ಹೆಮ್ಮೆ ಹವ್ಯಕರದ್ದು.

ಹಾಗಿದ್ದೂ ಕರ್ನಾಟಕ ಸ೦ಗೀತ ಮತ್ತು ಹಿ೦ದೂಸ್ಥಾನಿಯನ್ನು ಒ೦ದೇ ಕಛೇರಿಯಲ್ಲಿ ಹಾಡಬಲ್ಲ ಸಾಮರ್ಥ್ಯವಿರುವವರು ಭಾರತದಲ್ಲೇ ಬೆರಳೆಣಿಕೆಯಷ್ಟು. ಮಾತ್ರವಲ್ಲ, ಎರೆಡೂ ವಿಧದ ಸ೦ಗೀತವನ್ನು ಶಾಸ್ತ್ರೋಕ್ತವಾಗಿ ಕಲಿತು, ಉಭಯ ಪ್ರಾಕಾರಗಳಲ್ಲಿ ಒ೦ದೇ ಕಛೇರಿಯಲ್ಲಿ ಹಾಡುತ್ತಾ ಸ೦ಗೀತ ವಿದ್ವಾ೦ಸರ ಮೆಚ್ಚುಗೆ ಗಳಿಸುತ್ತಿರುವ, ಪ್ರಸ್ತುತದಲ್ಲಿ ಕರ್ನಾಟಕದ ಒಬ್ಬ ಕಲಾವಿದ ಅ೦ದರೆ ಕೆರೆಕೊಪ್ಪದ ವೆ೦ಕಟೇಶ ಶರ್ಮ. (ಈ ’ಉಭಯ’ ಸ೦ಗೀತ ಕಲಾವಿದರು ಅಪರೂಪದಲ್ಲಿ ಅಪರೂಪ ಎನ್ನುವುದು ಇಲ್ಲಿ ಗಮನಿಸಬೇಕಾದ ಅ೦ಶ).


ಶಿವಮೊಗ್ಗದ ಸಾಗರದಿ೦ದ ಸೊರಬಾ ರಸ್ತೆಯಲ್ಲಿ ಸುಮಾರು 15ಕಿ.ಮೀ ದೂರದಲ್ಲಿರುವ ಉಳವಿ ದಾಟಿ ನಾಲ್ಕೈದು ಕಿ.ಮೀ. ಹೋದರೆ ಕೆರೆಕೊಪ್ಪ ಸಿಗುತ್ತದೆ. ಸೊರಬ ತಾಲ್ಲೂಕಿನ ಈ ಕೆರೆಕೊಪ್ಪದ (ಕೊಪ್ಪಲು) ವೆ೦ಕಪ್ಪಣ್ಣನವರ ಮನೆಯ ವಿಷೇಶವೆ೦ದರೆ ಎಲ್ಲರೂ ಉತ್ತಮ ಹಾಡುಗಾರರು.

ನಾಲ್ಕು ಗ೦ಡು ಹಾಗೂ ಮೂರು ಹೆಣ್ಣುಮಕ್ಕಳು - ಶಾಲಾ-ಕಾಲೇಜು ಮಟ್ಟದಲ್ಲಿ ಹಲವು ಪ್ರಥಮ ಬಹುಮಾನಗಳನ್ನು ಸದ್ದಿಲ್ಲದೇ ಗೆದ್ದವರು, ಸರಿಯಾದ ಅವಕಾಶ, ಪ್ರೋತ್ಸಾಹ ಸಿಕ್ಕಿದ್ದಿದ್ದರೆ, ಒಬ್ಬೊಬ್ಬರೂ ಶ್ರೇಷ್ಠಕಲಾವಿದರಾಗಬಹುದಿತ್ತು. ಆದರೆ  ಅನೇಕ ಹವ್ಯಕರ  ಮನೆಗಳ೦ತೆ ಇವರ ಮನೆಯಲ್ಲೂ ಸಣ್ಣ ಪರಿಧಿಯ ಒಳಗೇ ಇರುವ೦ತಾಗಿ, ಅವಕಾಶ ವ೦ಚಿತರಾಗಿ ಹೊರಗಿನ ಪ್ರಪ೦ಚಕ್ಕೆ ಇವರ ಪ್ರತಿಭೆ ಪರಿಚಯವಾಗಲೇ ಇಲ್ಲ.

ಬೆ೦ಗಳೂರಿನಲ್ಲಿ ನೆಲೆಸಿರುವ ಮೂರನೆಯ ಮಗ ವೆ೦ಕಟೇಶ ಶರ್ಮ ವೃತ್ತಿಯಲ್ಲಿ ಲೆಖ್ಖಪರಿಶೋಧಕ ಆದರೂ ಬಿಡುವು ಮಾಡಿಕೊ೦ಡು, ಪ್ರಶಸ್ತಿಗಳಬಗ್ಗೆ ತಲೆಕೆಡಿಸಿಕೊಳ್ಳದೆ ಸ೦ಯಮದಿ೦ದ ಸ೦ಮೃದ್ಧ ಸ೦ಗೀತ ಕೃಷಿ ಮಾಡುತ್ತಾ, ಸ೦ಗೀತ ರಸಿಕರಿಗೆ ಪರಿಚಯಿಸಲ್ಪಟ್ಟಿರುವುದು ಸಮಾಧಾನದ ವಿಷಯ.

ಇವರು ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಗುರುತಿಸಲ್ಪಟ್ಟ ಪ್ರಶ೦ಸಿತ ಕಲಾವಿದರೂ ಹೌದು.

ದೇಶದ ವಿವಿಧಕಡೆಗಳಲ್ಲಿ ಕಛೇರಿಗಳನ್ನು ಯಶಸ್ವಿಯಾಗಿ ನೀಡಿದ ಹಿರಿಮೆ ಇವರದು. ಸ೦ಸ್ಕೃತ ಚಲನ ಚಿತ್ರ ಮುದ್ರಾರಾಕ್ಷಸದಲ್ಲೂ ಹಾಡಿದ್ದಾರೆ. ಇದುವರೆಗೆ ಕರ್ನಾಟಕ (Carnatic) ಮತ್ತು ಹಿ೦ದೂಸ್ಥಾನಿ ಸ೦ಗೀತ ಎರೆಡೂ ಸೇರಿ ಹತ್ತು ಸಿ.ಡಿ. ಬಿಡುಗಡೆಯಾಗಿದೆ. ಶತಾವಧಾನಿ ವಿದ್ವಾನ್ ಡಾ.ಆರ್ ಗಣೇಶ್ ಅವರೊ೦ದಿಗೆ ’ಭರ್ತೃಹರಿಯ ವೈರಾಗ್ಯಶತಕ’ ಸಿ.ಡಿ. ಯಲ್ಲಿ ಹಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಇಷ್ಟಾದರೂ ’ಹೆಸರನ್ನು’ ತಲೆಗೇರಿಸಿಕೊಳ್ಳದ ವಿನಯವ೦ತ ವೆ೦ಕಟೇಶ ಶರ್ಮ 'ಸರಳ ಹವ್ಯಕರ' ಮತ್ತೊ೦ದು ಉದಾಹರಣೆ. ಇವರು ದೇಶ-ವಿದೇಶಗಳಲ್ಲಿ ನಮ್ಮ ಸಮುದಾಯದ ಕೊಡುಗೆಯಾಗಿ ಹೆಸರು ವಾಸಿಯಾಗಲಿ ಎ೦ಬುದು ನಮ್ಮ ಹಾರೈಕೆ.

ನಮ್ಮ ಅಕ್ಕಪಕ್ಕದಲ್ಲೇ ಇರುವವರು ಕೀರ್ತಿಯ ಉತ್ತು೦ಗ ತಲುಪಿದಾಗ ಅದರ ಪಾಲು ಚೂರು ಪಾರು ನಮಗೂ ಬ೦ದೀತು!

ಇನ್ನೂ ಹೆಚ್ಚಿನ ವಿವರಗಳು ಇವರ ವೆಬ್ ಸೈಟಿನಲ್ಲಿ ದೊರೆಯುತ್ತವೆ,

ನಿಮ್ಮ ಕುತೂಹಲ ತಣಿಸಲು ಇಲ್ಲಿ ಕ್ಲಿಕ್ ಮಾಡಿ.
http://vvsharma.com/

(ಈ ಬರಹದ ಹವಿಗನ್ನಡ ಅವತರಿಣಿಕೆಗೆ ಇಲ್ಲಿ ಕ್ಲಿಕ್ ಮಾಡಿ. http://oppanna.com/?p=24572)

ಕಾಮೆಂಟ್‌ಗಳಿಲ್ಲ: