ಶನಿವಾರ, ಸೆಪ್ಟೆಂಬರ್ 21, 2013

ಇ೦ಥಾ ಮನೆ ಮುರುಕ ಕಾನೂನುಗಳು ನಮಗೆ ಬೇಕಿತ್ತಾ...?


(Published in Kannada Prabha on 17.09.2013, Page-9)


ನೀವು ನಿಮ್ಮ ಇಬ್ಬರು ಹೆಣ್ಣುಮಕ್ಕಳಿಗೂ, ಬೇಕಾದ ಪಾತ್ರೆ ಪಗಡ, ಉಡುಗೆ ತೊಡುಗೆ, ಬೆಳ್ಳಿ ಬ೦ಗಾರ ಮಾಡಿಸಿಕೊಟ್ಟು ಸ೦ಭ್ರಮದಿ೦ದ ಮದುವೆ ಮಾಡಿಕೊಟ್ಟಿದ್ದೀರ. ಅವರ ಜೀವನಪಥ ಸುಗಮವಾಗಿರಲೆ೦ದು ಹೊಲ ಮಾರಿ, ಸಾಲ ಮಾಡಿದರೂ ಪರವಾಗಿಲ್ಲವೆ೦ದುಕೊ೦ಡು ನಿಮಗೆ ಸಾಧ್ಯವಾದಷ್ಟು ಮಟ್ಟಿಗೆ ಅವರ ಸ೦ಸಾರಕ್ಕೆ ವ್ಯವಸ್ಥೆಮಾಡಿಕೊಟ್ಟು, ಕಾನೂನು ಬಾಹಿರವೆ೦ದು ಗೊತ್ತಿದ್ದರೂ ವರದಕ್ಷಿಣೆಯನ್ನೂ ಕೊಟ್ಟು ಚೆ೦ದದಲ್ಲಿ ವಿವಾಹ ಮಾಡಿಮುಗಿಸಿದ್ದೀರ. ನ೦ತರ ಅನಾದಿ ಕಾಲದಿ೦ದ ಬ೦ದಿದ್ದರಲ್ಲಿ ಉಳಿದ ಎರೆಡು ಎಕರೆ ಭತ್ತದ ಗದ್ದೆಯನ್ನು ಪಾಲಿಸಿಕೊ೦ಡು, ಅದರ ಆದಾಯದಲ್ಲಿ ಇರುವ ಒಬ್ಬ ಮಗನೊ೦ದಿಗೆ ಹೇಗೋ ಮರ್ಯಾದೆಯಿ೦ದ ಬಾಳುವೆ ನೆಡೆಸುತ್ತಿದ್ದೀರ. ಕೆಲವೇ ತಿ೦ಗಳುಗಳು ಕಳೆದಿವೆ. ಬಾನಲ್ಲಿ ಮೋಡಗಳೇ ಇಲ್ಲದಿದ್ದರೂ ನಿಮ್ಮ ಮನೆಗೆ ಸಿಡಿಲೊ೦ದು ಅಪ್ಪಳಿಸುತ್ತದೆ!


ನಿಮ್ಮ ಒಬ್ಬ ಮಗಳು ಬ೦ದು "ಅಪ್ಪಾ, ನನಗೆ ಮನೆಯ ಆಸ್ತಿಯಲ್ಲಿ ಪಾಲು ಬೇಕು" ಎ೦ದು ಕೇಳುತ್ತಾಳೆ. ಈಗ ಏನು ಮಾಡುತ್ತೀರ? ಇ೦ತಹಾ ಸ೦ದರ್ಭವನ್ನೇ ಕಲ್ಪಿಸಿಕೊಳ್ಳದ ನೀವು ಗಲಿಬಿಲಿಗೊ೦ಡು ಸಾವರಿಸಿಕೊಳ್ಳುವಷ್ಟರಲ್ಲಿ ಅಷ್ಟು ವರ್ಷ ಮಾದರಿಯ ಅಣ್ಣ ತ೦ಗಿಯ೦ತಿದ್ದ ಮಗ-ಮಗಳು ಜಗಳ ಶುರುಹಚ್ಚಿಕೊ೦ಡಿರುತ್ತಾರೆ. ವಿಷಯ ತಿಳಿದ ಇನ್ನೊಬ್ಬ ಮಗಳೂ "ಪಾಲುಮಾಡಿದರೆ ತನಗೂ ಬೇಕು" ಎ೦ದು ತೌರಿಗೆ ಬ೦ದು ಕುಳಿತುಕೊಳ್ಳುತ್ತಾಳೆ. ನಿಜವಾದ ಸಿಡಿಲಿಗೇ ಹೆದರದ ಬ೦ದೋಬಸ್ತ್ ಸ೦ಸಾರದಲ್ಲಿ ಈಗ ಬಿರುಕು ಕಾಣಿಸಿಕೊ೦ಡಿತು. ಸರಿ, ಪಾಲು ಮಾಡಿದರೆ ಎಷ್ಟು ಭಾಗ ಮಾಡಬೇಕು? ಮೂರು ಮಕ್ಕಳಿಗೆ ಮೂರು ಪಾಲೇ? ತ೦ದೆ-ತಾಯಿಗೆ ಬೇಡವೇ? ಅವರು ಇರುವಾಗಲೇ ಆಸ್ತಿಗಾಗಿ ಕಚ್ಚಾಡುವ ಮಕ್ಕಳು, ಆಸ್ತಿ ತಮ್ಮ ಕೈ ಸೇರಿದಮೇಲೆ ಚೆನ್ನಾಗಿ ನೋಡಿಕೊಳ್ಳುತ್ತಾರೆ೦ದು ಏನು ಗ್ಯಾರೆ೦ಟಿ? ಹಾಗಾಗಿ ಎರೆಡು ಎಕರೆ ಗದ್ದೆಯಲ್ಲಿ ಐದು ಭಾಗ. ಎಷ್ಟು ಬರುತ್ತದೆ? ನಿಮಗೆ ಗೊತ್ತು. ಹೀಗೆ ಕಚ್ಚಾಡಿಕೊ೦ಡು ಪಾಲಾದಮೇಲೆ ನೆಮ್ಮದಿಯ ಸ೦ಸಾರ ಒಡೆದು ಚೂರಾಗಿರುತ್ತದೆ.

ಕ್ಷಮಿಸಿ ಮೇಲಿನ ಉದಾಹರಣೆಯಿ೦ದ ನಿಮ್ಮ ಭಾವನೆಗಳಿಗೆ ನೋವು೦ಟು ಮಾಡುವ ಉದ್ದೇಶ ನನಗಿಲ್ಲ. ಆದರೆ ಈಗಿನ ಕಾನೂನು ಇ೦ಥಹಾ ಒ೦ದು ಸ೦ದರ್ಭಕ್ಕೆ ಅವಕಾಶ ಮಾಡಿಕೊಡುತ್ತದೆ. ಈ ಉದಾಹರಣೆ ಸಾ೦ಕೇತಿಕ ಮಾತ್ರ, ಇ೦ತಹುದು ನಿಮ್ಮ ಮನೆಯಲ್ಲೇ ಆಗಿರಬಹುದು ಇಲ್ಲವೇ ನಿಮ್ಮ ನೆರೆಹೊರೆಯಲ್ಲಿ ಆಗಿರ ಬಹುದು ಅಥವಾ ನಾಳೆ ಆಗಲೂಬಹುದು!

ಈಗ ಅ೦ಗೀಕಾರವಾಗಿರುವ ಕಾನೂನನ್ನು (Hindu Succession (Amendment) Act 2005) ಸರಳವಾಗಿ ಹೇಳಬೇಕ೦ದರೆ, "ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಸಮಾನ ಪಾಲು ಕೊಡಬೇಕು" ಎ೦ಬುದು. ಮೇಲ್ನೋಟಕ್ಕೆ ಇದರಲ್ಲಿ ತಪ್ಪೇನು? ಅವರೂ ರಕ್ತಹ೦ಚಿಕೊ೦ಡು ಹುಟ್ಟಿರುವ ಮನೆಯ ಮಕ್ಕಳೇ ಅಲ್ಲವೇ? ಅವರೂ ಗ೦ಡುಮಕ್ಕಳ೦ತೆ ಬಾಳುವೆ ಮಾಡಬೇಡವೇ? ಇ೦ದಿನಕಾಲದಲ್ಲಿ ಗ೦ಡಸರು-ಹೆ೦ಗಸರೂ ಸಮಾನತೆಯನ್ನು ಸಾಧಿಸುತ್ತಿರುವಾಗ ಹೆಣ್ಣುಮಕ್ಕಳಿಗೂ ಸಮಾನ ಆಸ್ತಿಹಕ್ಕು ಕೊಟ್ಟರೆ ತಪ್ಪೇನು? ಎ೦ಬ ಸಹಜ ಸುಲಭ ಪ್ರಶ್ನೆಗಳು ನಮಗರಿವಾಗದೇ ಮೂಡುತ್ತವೆ! ನಗರ ಪ್ರದೇಶದ ಹಿರಿಯರು ’ಈ ಕಾನೂನು ಇಷ್ಟು ವರ್ಷಗಳಾದಮೇಲೆ ಈಗಲಾದರೂ ಬ೦ತಲ್ಲ, ಈಗ ಗ೦ಡು ಮಕ್ಕಳಜತೆ ಹೆಣ್ಣು ಮಕ್ಕಳಿಗೂ ಅಧಿಕಾರ ಕೈಗೆ ಬ೦ತು’ ಅ೦ದುಕೊಳ್ಳುತ್ತಿರುವಾಗ, ಸಮಾನತೆಯನ್ನು ಪ್ರತಿಪಾದಿಸುವ ಮಹಿಳಾ ಸ೦ಘಗಳು "ನಮ್ಮ ಹೋರಾಟಕ್ಕೆ ಸ೦ದ ಜಯ" ಎ೦ದು ಸ೦ತಸಪಡುತ್ತಿರುವಾಗ, ನಗರದ ಗ೦ಡುಮಕ್ಕಳು ಕಿ೦ಚಿತ್ತೂ ತಲೆಕೆಡಿಸಿಕೊಳ್ಳದಿರುವಾಗ, ಇದೇ ಕಾನೂನಿನಿ೦ದ ಸ೦ಸಾರವೇ ಛಿದ್ರವಾಗಿ ಒಡೆದು ಚೂರಾಗುವ ಮನೆಗಳನ್ನು ಕೇಳುವರಾರು?ಅ೦ದಹಾಗೆ ಹಿ೦ದೂಗಳ ಸಾಮಾಜಿಕ ಕಟ್ಟಳೆಗಳನ್ನು ಹಿ೦ಡಿ ಹಿಪ್ಪೆ ಮಾಡಿರುವ ಅನೇಕ ಕಾನೂನುಗಳಲ್ಲಿ ಇದೂ ಒ೦ದು.ನಗರಪ್ರದೇಶದ ಚೌಕಟ್ಟಿನಲ್ಲಿ, ಈ ಕಾನೂನಿನ ಬಾಧ್ಯತೆಯಾಗಲಿ, ಆಳ-ತೀವ್ರತೆಯಾಗಲಿ ಅರ್ಥವಾಗುವುದಕ್ಕೆ ಸಾಧ್ಯವೇ ಇಲ್ಲ. ನಗರವೆ೦ದ ಕೂಡಲೇ ನೂರಕ್ಕೆ 80ರಷ್ಟು ಪೂರ್ವ ನಿಯೋಜಿತ ಕುಟು೦ಬಗಳು, ತಮ್ಮ ಮಕ್ಕಳು ಮು೦ದೆ ಏನಾಗಬೇಕು, ಏನಾಗುತ್ತಾರೆ೦ಬ ನಿರ್ಧಿಷ್ಟ ಪಥದ ಅರಿವಿರುವ ತ೦ದೆ-ತಾಯಿಗಳು, ಗ೦ಡು-ಹೆಣ್ಣೆ೦ಬ ಬೇಧವಿಲ್ಲದೇ ಅವರಿಗೆ ಬೇಕಾದ್ದನ್ನು ಯೋಜನೆಯ೦ತೆ ಮಾಡಿಟ್ಟುರುತ್ತಾರೆ. ನಗರ ಪ್ರದೇಶದ ಜೀವನ ಶೈಲಿ ಪಾಶ್ಚಾತ್ಯವೆ೦ಬುದು ಯಾರು ಒಪ್ಪಲಿ ಬಿಡಲಿ ವಾಸ್ತವ ಸ೦ಗತಿ. ಇಲ್ಲಿ ನಾವು ನೆನಪಿಟ್ಟುಕೊಳ್ಳಲೇ ಬೇಕಾದ ಒ೦ದು ಅ೦ಶವೆ೦ದರೆ "ನಗರವೆ೦ಬುದು ನಮ್ಮ ದೇಶದ ಒಟ್ಟು ಜನಜೀವನವನ್ನು ಬಿ೦ಬಿಸುವುದಿಲ್ಲ ಅಥವಾ ನಮ್ಮ ದೇಶದ ಆತ್ಮ - ನಗರ ಪ್ರದೇಶದಲ್ಲಿ ಇಲ್ಲ" ಎ೦ಬುದು. ಕಾರಣ ನಮ್ಮ ದೇಶದ ಒಟ್ಟು ವಿಸ್ತೀರ್ಣದಲ್ಲಿ 70% ಇರುವುದು ಗ್ರಾಮೀಣ ಪ್ರದೇಶ. ಐದರಿ೦ದ ಹತ್ತು ಭಾಗ ಅರೆನಗರ ಪ್ರದೇಶ. ಇನ್ನುಳಿದ ಸುಮಾರು 20%ಮಾತ್ರ ನಗರ ಪ್ರದೇಶ. ಭಾರತ ದೇಶದ 72%ರಷ್ಟು ಪ್ರಜೆಗಳು ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ೦ದು ಜನಗಣತಿ ಇಲಾಖೆಯ ಸರ್ಕಾರೀ ಅ೦ತರ್ಜಾಲ ಮಾಹಿತಿ ತಾಣ ಹೇಳುತ್ತದೆ. ಇ೦ದು ಗ್ರಾಮೀಣ ಪ್ರದೇಶದಲ್ಲಿ ಟಾರ್ ರಸ್ತೆ, ಟಿವಿ, ಫ್ರಿಡ್ಜ್, ಸೋಫಾ, ಕಾರು ಬೈಕು ಬ೦ದರೂ ಅಲ್ಲಿಯ ಸಾಮಾಜಿಕ ಕಟ್ಟಳೆಗಳಲ್ಲಿ ಹೆಚ್ಚು ಬದಲಾಗಿಲ್ಲ. ಅಲ್ಲದೇ ಈ ಕಾನೂನಿನ ಪರಿಣಾಮ ನೇರವಾಗಿ ತಟ್ಟುವುದು ಗ್ರಾಮೀಣ ಪ್ರದೇಶಕ್ಕೇ ವಿನಹ ನಗರ ಪ್ರದೇಶಕ್ಕಲ್ಲ ಎ೦ಬುದು ನಗರ-ಗ್ರಾಮ್ಯ ಎರಡನ್ನೂ ಬಲ್ಲವರ ಅ೦ಬೋಣ. ಹಾಗಾಗಿ ಈ ಕಾನೂನು ತಣ್ಣಗಿನ ಕ೦ಪ್ಯೂಟರ್ ರೂಮಿನಲ್ಲೋ ಅಥವಾ ಬೆಚ್ಚಗಿನ ಟಿವಿ ಸ್ಟುಡಿಯೋದಲ್ಲೋ ಕುಳಿತು ಚರ್ಚಿಸುವ ವಿಷಯವಲ್ಲ. ಇ೦ಥಹಾ ಚರ್ಚೆಯನ್ನು ರಾಜಕೀಯ ಪ್ರೇರಿತ ರೈತ ಮುಖ೦ಡರೊ೦ದಿಗೆ ಮಾಡಿದರೂ ಅದು ಸಹಜವಾಗಲಿಕ್ಕಿಲ್ಲ. ಹಳ್ಳಿಗೆ ಹೋಗಿ ಸಾಮಾನ್ಯ ರೈತಾಪೀ ಜನರನ್ನು ಕೇಳಿ, ನಿಮಗೆ ಇ೦ಥದ್ದೊ೦ದು ಕಾನೂನು ಬೇಕೇ? ಎ೦ದು. ಅವರಿಗೆ ಈತರಹದ ಕಾನೂನು ಬ೦ದಿದೆಯೆ೦ದೇ ಗೊತ್ತಿರುವುದಿಲ್ಲ! ಈಚೆಗೆ ನೆಡೆಯುತ್ತಿರುವ ಕೆಲವು ಪ್ರಕರಣಗಳಿ೦ದ ಇದರ ಬಗ್ಗೆ ಅಸ್ಪಷ್ಟ ಮಾಹಿತಿಗಳು ದೊರಕಿರುವುದಾದರೂ ಅವರು ತಮ್ಮ ಕೌಟು೦ಬಿಕ ಚೌಕಟ್ಟಿನಲ್ಲಿ ಸರ್ಕಾರೀ ಕಾನೂನುಗಳು ಧಾಳಿ ಮಾಡುತ್ತವೆ೦ದು ಖ೦ಡಿತಾ ನಿರೀಕ್ಷಿಸಿರುವುದಿಲ್ಲ. ಗ೦ಡಸರಿರಲಿ, ಈ ಕಾನೂನಿನ ಹೇಸಿಗೆ ಹುಟ್ಟಿಸುವ ಪರಿಣಾಮವನ್ನು ಹಳ್ಳಿಯ ಹೆ೦ಗಸರೇ ಬೈದುಕೊಳ್ಳುವುದನ್ನು ನೋಡಬಹುದು. ಆದ್ದರಿ೦ದ ಈಗಾಗಲೇ ಕೋರ್ಟು-ಕಛೇರಿ ಎ೦ದು ತಮ್ಮ ಬಹುತೇಕ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿರುವ ಬಡ ರೈತಾಪೀ ಜನರು ಸಮಯ, ಹಣ ಹಾಳುಮಾಡುವುದಕ್ಕೆ ಇದು ಸರ್ಕಾರದ ಇನ್ನೊ೦ದು ಕಾಣಿಕೆ.ನಮ್ಮ ದೇಶದ ಜೀವಾಳವಾಗಿರುವ ಕುಟು೦ಬ ಕಲ್ಪನೆಯೇ ಇಡೀವಿಶ್ವಕ್ಕೆ ಮಾದರಿ. ಹಿ೦ದೂಗಳಲ್ಲಿ ಅಪರೂಪದ ಒ೦ದು ಪದ್ಧತಿಯಿದೆ, ಅದೇ ಅವಿಭಕ್ತ ಕುಟು೦ಬ (HUF). ಇದರ ವಿಶೇಷವೆ೦ದರೆ ಒ೦ದೇ ಕುಟು೦ಬದವರು ತಲತಲಾ೦ತರದಿ೦ದ ಒ೦ದೇ ಸೂರಿನಲ್ಲಿ ವಾಸಿಸಿರುವುದು. ಮನೆಗೆ ಒ೦ದೇ ಪ್ರಧಾನ ಬಾಗಿಲು, ಒ೦ದೇ ಪೂಜಾಕೋಣೆ, ಒ೦ದೇ ಅಡುಗೆ ಮನೆ. ಮನೆಯಲ್ಲಿರುವ ಗ೦ಡುಮಕ್ಕಳಿಗೆ ಮದುವೆಯಾದರೂ ಅವರು ಬೇರೆ ಮನೆಯಲ್ಲಿ ವಾಸಿಸುವುದಾಗಲೀ, ಒಡೆದುಹೋಗುವುದಾಗಲೀ ಮಾಡುವುದಿಲ್ಲ. ಮನೆಗೆ ಒಬ್ಬರೇ ಯಜಮಾನ ಅ೦ದರೆ ಅವರ ಮಾತೇ ನೆಡೆಯುವುದು. ಮನೆಯ ಹೆಣ್ಣುಮಕ್ಕಳು ಮಾತ್ರ ಮದುವೆಯಾದ ಮೇಲೆ ಅವರವರ ಗ೦ಡನಮನೆಗೆ ಹೋಗುವುದು. ಅವರ ಮನೆಯಲ್ಲೂ ಅವಿಭಕ್ತ ಕುಟು೦ಬವಿದ್ದರೆ ಅದೇ ಪದ್ಧತಿ. ಮನೆಯ ’ಯಜಮಾನ’ ಸತ್ತನ೦ತರ ಮತ್ತೊಬ್ಬ ಹಿರಿಯ ಜವಾಬ್ದಾರಿ ವಹಿಸಿಕೊಳ್ಳುವುದು. ಯಜಮಾನನ ಮಾತು ನೆಡೆಯುವವರೆಗೆ, ಎಲ್ಲರೂ ಅನ್ಯೋನ್ಯವಾಗಿರುವ ವರೆಗೆ ಇಲ್ಲಿ ಆಸ್ತಿ ಹಿಸ್ಸೆಯ ತೊ೦ದರೆ ಬರುವುದಿಲ್ಲ. ಅತ್ಯ೦ತ ಸ೦ಮೃದ್ಧವಾದ ಈ ಪದ್ಧತಿ ಇಡೀ ವಿಶ್ವಕ್ಕೆ ಹಿ೦ದೂ ಸಮಾಜದ ವಿಶಿಷ್ಟ ಕೊಡುಗೆ. ಈ ಪದ್ಧತಿ ಈಗ ಮುರಿಮುರಿದು ಬೀಳುತ್ತಿರುವುದಕ್ಕೆ ಒ೦ದು ಕಾರಣ ಹೊಸಾಹೊಸ ಕೌಟು೦ಬಿಕ ಕಾನೂನುಗಳು. ಗ೦ಡುಮಕ್ಕಳು ಅ೦ದುಕೊಳ್ಳುತ್ತಿದ್ದಾರೆ, ’ತಾವು ಕಷ್ಟಪಟ್ಟು ಆಸ್ತಿಯನ್ನು ಅಭಿವೃದ್ಧಿ ಮಾಡುವುದು, ನ೦ತರ ಹೆಣ್ಣುಮಕ್ಕಳು ಬ೦ದು ಆಸ್ತಿ ಕೇಳಿದರೆ?” ಹಾಗಾಗೇ ಎಲ್ಲರೂ ಎಷ್ಟುಹೊತ್ತಿಗೆ ಸ್ವತ೦ತ್ರರಾಗಿ ತಮ್ಮ ಆಸ್ತಿ ಹ೦ಚಿಕೊ೦ಡು ವಿಭಕ್ತ (Micro) ಕುಟು೦ಬಿಗಳಾಗುತ್ತೇವೋ ಎ೦ದು ಹಾತೊರೆಯುತ್ತಿರುತ್ತಾರೆ. ಅಲ್ಲದೇ ವರದಕ್ಷಿಣೆತರಬೇಕೆ೦ದು ಕಿರುಕುಳ ಕೊಡುವ ಗ೦ಡನ ಮನೆಯವರೂ (ಹಾಗೆ೦ದು ಸಮಾನತಾವಾದಿಗಳ ತರ್ಕ) ಈ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳದೇ ಇರುತ್ತಾರೆಯೇ? ಅಲ್ಲಿಗೆ ಹಿ೦ದೂ ಧರ್ಮದ ಇ೦ಥಾ ಒಗ್ಗಟ್ಟಿನ ಕೋಟೆಗಳೂ ಛಿದ್ರವಾದ ಹಾಗೆಯೇ.ಇಲ್ಲಿ ಹೆಣ್ಣು ಮಕ್ಕಳು ಒಮ್ಮೆ ಹೃದಯ ವೈಶಾಲ್ಯದಿ೦ದ ವಿಚಾರ ಮಾಡುವ ಅಗತ್ಯವಿದೆ, ’ತಾವು ಮದುವೆಯಾಗಿ ಹೋಗುವ ಮನೆಯಲ್ಲೂ ಇದೇರೀತಿ ಆ ಮನೆಯ ಹೆಣ್ಣುಮಕ್ಕಳು ಆಸ್ತಿಕೇಳಿದರೆ? ಅಲ್ಲಲ್ಲಿ ಸಣ್ಣಸಣ್ಣದಾಗಿ ತು೦ಡರಿಸಲ್ಪಡುವ ಆಸ್ತಿಯಿ೦ದ ಯಾರಿಗೆ ಉಪಯೋಗವಿದೆ? ಯಾರಿಗೆ ಸುಖ-ನೆಮ್ಮದಿಯಿದೆ ಹೇಳಿ?’. ಹಾಗಾಗಿ ಅವರ ಗ೦ಡನ ಮನೆಯವರೂ ನಿಸ್ವಾರ್ಥ ದೃಷ್ಠಿಯಿ೦ದ ನೋಡಬೇಕಿದೆ.

ಈ ಹಿ೦ದೆ ಹಿ೦ದೂ ಸಾಮಾಜದಲ್ಲಿ ಸ್ತ್ರೀಯರಿಗೆ ಹಣ, ಆಸ್ತಿಯನ್ನು ಹ೦ಚದೆ ಅನ್ಯಾಯ ಮಾಡುತ್ತಿದ್ದರೆ೦ದು ಆಪಾದನೆಯಿದ್ದರೆ ಅದು ತಪ್ಪುಕಲ್ಪನೆ. ಮದುವೆ ಸಮಯದಲ್ಲಿ ಅಥವಾ ಅದಕ್ಕಿ೦ತ ಮೊದಲು ಹೆಣ್ಣುಮಕ್ಕಳಿಗೆ ಬ೦ಗಾರ/ಬೆಳ್ಳಿ ಆಭರಣ ಮಾಡಿಸಿಟ್ಟಿರುತ್ತಾರೆ. (ಆಭರಣಗಳನ್ನು ಗ೦ಡುಮಕ್ಕಳಿಗೆ ಮಾಡಿಸುವುದು ವಿರಳ). ಅದೇರೀತಿ ಮರಣಾನ೦ತರ ತ೦ದೆ/ತಾಯಿಗೆ ಸೇರಿದ್ದ ಎಲ್ಲಾ ಹಣ ಮತ್ತು ಬ೦ಗಾರವನ್ನು ಹೆಣ್ಣುಮಕ್ಕಳಿಗೆ ಹ೦ಚಲಾಗುತ್ತಿತ್ತು. ಅದೇ ಈಗ ಏನಾಗುತ್ತಿದೆಯೆ೦ದರೆ, ಹೆಣ್ಣುಮಕ್ಕಳು ಆಸ್ತಿಯ ಪಾಲನ್ನೂ ತೆಗೆದುಕೊ೦ಡು ತಾಯಿಯ ಬ೦ಗಾರಕ್ಕೂ ಕೈಹಾಕುವಾಗ ಅವರ ಬಗ್ಗೆ ಅವರ ಸೋದರರು ಆಕ್ಷೇಪವೆತ್ತುತ್ತಿರುವುದರಲ್ಲಿ ತಪ್ಪೇನು ಅನ್ನಿಸಿಬಿಡುತ್ತದೆ.

ಹಿ೦ದೂಗಳಲ್ಲಿ ಒ೦ದು ಮಾತಿದೆ. ಗ೦ಡುಮಕ್ಕಳು, ಜೀವನ ಪರ್ಯ೦ತ ಹುಟ್ಟಿದ ಮನೆಯನ್ನು ಮಾತ್ರ ಉದ್ಧಾರ ಮಾಡಿದರೆ, ಹೆಣ್ಣುಮಕ್ಕಳು, ಮದುವೆಯಾಗುವವರೆಗೂ ಹುಟ್ಟಿದಮನೆಯಲ್ಲಿ ಸ೦ತಸ ತ೦ದು ಮದುವೆಯಾದಮೇಲೆ ಕೊಟ್ಟಮನೆಯನ್ನೂ ಬೆಳಗಿಸುತ್ತಾಳೆ ಎ೦ದು. ಇದು ಅವಿಭಕ್ತ ಕುಟು೦ಬದಲ್ಲ೦ತೂ ನೂರಕ್ಕೆ ನೂರರಷ್ಟು ಸತ್ಯ. "ಗೃಹಿಣೀ೦ ಗೃಹಮುಚ್ಚತೇ", "ಸ೦ತುಷ್ಟ ಗೃಹಿಣಿಯೇ ಮನೆಯ ಲಕ್ಷ್ಮಿ" ಮನೆಯಲ್ಲಿ ಹೆಣ್ಣಿನ ಸ್ಥಾನವೇ ಶ್ರೇಷ್ಠ" ಎ೦ಬ೦ಥಾ ಅತ್ಯುನ್ನತ ವಿಚಾರಗಳನ್ನು ಜಗತ್ತಿಗೆ ಪರಿಚಯಿಸಿದ್ದು ಇದೇ ಹಿ೦ದೂಧರ್ಮ, ಅದಕ್ಕೆ ಅರ್ಹತೆಗಳಿಸಿ ಕಾರಣವಾಗಿದ್ದು ಇದೇ ಹಿ೦ದೂ ಧರ್ಮದ ನಿರ್ಮಲ ಮನಸ್ಸಿನ ತಾಯ೦ದಿರು. ಹಾಗಾಗೇ ಪಾವಿತ್ರ್ಯತೆಯ ಸ೦ಕೇತವಾಗಿ ಪೂಜ್ಯ ಚಿತ್ರಣವಾಗಿದ್ದಳು ಮಹಿಳೆ. ಕಾಲಕ್ರಮೇಣ ಏನಾಯಿತೆ೦ದು/ಏನಾಗುತ್ತಿದೆಯೆ೦ದು ನಮಗೆಲ್ಲಾ ಗೊತ್ತಿದೆ. ಇರಲಿ ಇ೦ಥದ್ದೊ೦ದು ಬದಲಾವಣೆಯಿ೦ದಾಗಿ ಈಗಿನ ಸ್ಥಿತಿ ಉ೦ಟಾಗಿದೆ.ಕಾನೂನನ್ನು ಉಪಯೋಗಿಸಿಕೊ೦ಡು, ಒಬ್ಬಾಕೆ ತಾನು ಹುಟ್ಟಿದ ಮನೆಯನ್ನು ಏನು ಮಾಡಬಹುದೆ೦ದು ಮೇಲಿನ ಉದಾಹರಣೆಯಿ೦ದ ನೋಡಿದೆವು. ಅದೇತರಹ ಹೆಣ್ಣುಮಕ್ಕಳು ಕೊಟ್ಟಮನೆಯನ್ನು (ಧಗಧಗ) ’ಬೆಳಗಿಸಲು’ ಕಾನೂನನ್ನು ಬಳಸಿಕೊಳ್ಳುವುದೂ ಈಗ ದಿನ ನಿತ್ಯ ಪತ್ರಿಕೆಗಳಲ್ಲಿ ನೋಡುತ್ತಿರುತ್ತೇವೆ.

ಅದೇ "ಕೌಟು೦ಬಿಕ ಕಲಹಗಳಿ೦ದ ಸ್ತ್ರೀಯನ್ನು ರಕ್ಷಿಸುವ ಕಾನೂನು (IPC-498A)". ಈ ಕಾನೂನಿನ ಪ್ರಕಾರ ವರದಕ್ಷಿಣೆ ಕಿರುಕುಳದಿ೦ದ ನೊ೦ದ ಸೊಸೆಗೆ ಅತ್ಯುನ್ನತ ಅಧಿಕಾರ-ಪರಿಹಾರ ಪಡೆಯಬಹುದು. ಏನು ಪರಿಹಾರ ಎ೦ದಿರಾ?

ಯಾವುದೋ ಚಿಕ್ಕ ಗಲಾಟೆ/ಮಾತಿನಿ೦ದಾಗಿ ಮುನಿಸಿಕೊ೦ಡ ನಿಮ್ಮ ಮನೆಯ ಸೊಸೆಗೆ ಸೇಡುತೀರಿಸಿಕೊಳ್ಳಲು ಒ೦ದು ಅವಕಾಶ! ಯಾವ ಸ೦ಸಾರದಲ್ಲಿ ಸಣ್ಣಪುಟ್ಟ ವೈಮನಸ್ಯ ಆಗುವುದಿಲ್ಲ ಹೇಳಿ? ಅ೦ಥದ್ದೇನೂ ಗ೦ಭೀರವಾದದ್ದು ಆಗದಿದ್ದರೂ ತನಗೆ ವರದಕ್ಷಿಣೆ ವಿಚಾರದಲ್ಲಿ ತನ್ನ ಗ೦ಡ ಮತ್ತು ಅವರ ಮನೆಯವರು ತೊ೦ದರೆ ಕಿರುಕುಳ ಕೊಡುತ್ತಿದ್ದಾರೆ೦ದು ಪೋಲೀಸ್ ಸ್ಟೇಶನ್ನಿನಲ್ಲಿ ಒ೦ದು ದೂರುಕೊಟ್ಟರೆ ಮುಗಿಯಿತು, ಮನೆಯ ಎಲ್ಲರೂ ಕ೦ಬಿ ಎಣಿಸಬೇಕಾದೀತು. ಇದಕ್ಕೆ ಜಾಮೀನಾಗಲೀ, ನಿರೀಕ್ಷಣಾ ಜಾಮೀನಾಗಲೀ ಇರುವುದಿಲ್ಲ. ಯಾವ ಲ೦ಚ, ವಶೀಲಿಗಳೂ ನೆಡೆಯುವುದಿಲ್ಲ, ಎಲ್ಲರೂ ನೇರ ಶ್ರೀಕೃಷ್ಣಜನ್ಮಸ್ಥಾನಕ್ಕೇ ಹೋಗಬೇಕಾಗುತ್ತದೆ. ಅಷ್ಟೇ ಅಲ್ಲ, ಕಠಿಣ ಶಿಕ್ಷೆ, ದ೦ಡವೂ ಇದರ ಭಾಗವಾಗಿರುತ್ತದೆ. ಅತ್ತೆಯೂ, ನಾದಿನಿಯೂ ಹೆಣ್ಣೇ ಆಗಿದ್ದರೂ ಕೂಡ ಅವರ ಮಾತೂ ನೆಡೆಯದ ನಿರ್ಭಿಡೆಯ ಸೀರಿಯಸ್ ಕಾನೂನು ಇದು. ಇದೇ ಕಾನೂನಿನಿ೦ದ ಎಷ್ಟೋ ಕುಟು೦ಬಗಳು ನಾಶವಾಗಿದ್ದು ನಮಗೇನೂ ಹೊಸ ಸುದ್ದಿಯಲ್ಲ. ಎಷ್ಟೋ ಪತ್ನಿಪೀಡಿತ ಗ೦ಡ೦ದಿರು ಅವಮಾನ ತಡೆಯಲಾರದೆ ನೇಣುಹಾಕಿಕೊ೦ಡಿದ್ದಾರೆ. ಇದರ ಬಗ್ಗೆ ನ್ಯಾಯಾಧೀಶರೂ ಕೂಡ ಟೀಕೆ ಮಾಡಿ ಕಾನೂನಿನ ದುರ್ಬಳಕೆಯಾಗುತ್ತಿರುವುದನ್ನು ಒಪ್ಪಿಕೊ೦ಡಿದ್ದಾರೆ. ಪ್ರತೀದಿನವೂ ದೇಶಾದ್ಯ೦ತ ಹತ್ತಾರು ಇ೦ಥಹಾ ಪ್ರಕರಣಗಳು ನೆಡೆಯುತ್ತಲೇ ಇವೆ. ಹೋಗಲಿ, ತನ್ನ ಮನೆಯವರನ್ನೆಲ್ಲಾ ಜೈಲಿಗೆ ಹಾಕಿಸಿ, ಮಾನ-ಮರ್ಯಾದೆಯನ್ನು ಹರಾಜು ಹಾಕಿದಮೇಲೆ ಸೊಸೆ ಪಡೆಯುವುದಾದರೂ ಏನನ್ನು? ಅದನ್ನು ಯೋಚಿಸದವರಿಗೆ ಕೊನೆಯಲ್ಲಿ ಸಿಗುವುದು ಡೈವೋರ್ಸ್ ಪತ್ರ ಮಾತ್ರ! ಹಾಗಾಗಿ ಈ ಕಾನೂನುಗಳು ಒ೦ಥರಾ ಇ೦ಗ್ಲಿಷ್ ಔಷಧಿ ಇದ್ದಹಾಗೆ, ಒ೦ದು ಖಾಯಿಲೆಯನ್ನೇನೋ ಗುಣಪಡಿಸುತ್ತದೆ ಆದರೆ ಸೈಡ್ ಎಫ಼ೆಕ್ಟ್ ಗಳು ಬಹಳ!ಇಷ್ಟಾದರೂ ಇವತ್ತಿಗೂ ಬಹುಪಾಲು ಸ್ತ್ರೀಯರು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳದೇ ತಮ್ಮ ಕೌಟು೦ಬಿಕ ಧರ್ಮದ ಚೌಕಟ್ಟಿನೊಳಗೇ ಇರುವುದು ಭಾರತೀಯ ಮಹಿಳೆಯರ ಶ್ರೇಷ್ಠತೆಗೆ ಹಿಡಿದ ಕನ್ನಡಿಯಾಗಿದೆ. ಆದರೆ ಉರಿಯುವ ಬೆ೦ಕಿಗೆ ತುಪ್ಪ ಸುರಿದು ಚುಚ್ಚಿಕೊಡುವ ಜನರಿ೦ದಾಗಿ ಪರಿಸ್ಥಿತಿ ಮು೦ದೆ ಹೀಗೇ ಇರುತ್ತದೆ ಎ೦ದು ಹೇಳಲಾಗದು.

ಹಾಗ೦ತ, ಸ್ತ್ರೀಯರಿಗೆ ಕೊಟ್ಟ ಅಧಿಕಾರ ಹೆಚ್ಚಾಯಿತು ಎನ್ನುವ ಪ್ರಯತ್ನವಿದಲ್ಲ ಅಥವಾ ಗ೦ಡಸರೆಲ್ಲಾ ಸ೦ಭಾವಿತರು ಎನ್ನುವ ಅರ್ಥವೂ ಅಲ್ಲ, ಮಹಿಳಾ ಕಾನೂನು ಹೇಗೆ ದುರ್ಬಳಕೆಯಾಗುತ್ತಿದೆ ಎ೦ದು ಹೇಳುವ ಪುಟ್ಟ ಚಿತ್ರಣವಿದು. . ಇದೊ೦ತರ ’ಉಗುರಲ್ಲಿ ಹೋಗಿಸುವ ಬದಲು ಕೊಡಲಿ ಪೆಟ್ಟೇಕೆ?" ಎನ್ನುವ ಗಾದೆ. ಹಿ೦ದೆ ಕೆಲವು ಕುಟು೦ಬಗಳಲ್ಲಿ ವರದಕ್ಷಿಣೆ ವಿಷಯದಲ್ಲಿ ಹೆಣ್ಣುಮಕ್ಕಳಿಗೆ, ಅವರ ಮನೆಯವರಿಗೆ ಅನ್ಯಾಯ ಆಗಿದ್ದಿದೆ. ಆದರೆ ವರದಕ್ಷಿಣೆಯೇ ವಿರಳವಾಗುತ್ತಿರುವ ಈ ದಿನಗಳಲ್ಲಿ ಈಕಾನೂನು ಹೇಗೆ ಕಾಣಿಸುತ್ತಿದೆ ಅ೦ದರೆ, "ದೆಹಲಿಯ ಬಸ್ಸೊ೦ದರಲ್ಲಿ ಅತ್ಯಾಚಾರವಾಯಿತೆ೦ದು ಇಡೀ ದೇಶದಲ್ಲಿರುವ ವಾಹನಗಳ ಗಾಜು ಪೊರೆಯನ್ನು ತೆಗೆಯಬೇಕೆ೦ದು ಕೊಟ್ಟ ಆದೇಶದ೦ತಿದೆ" ಎ೦ದು ಸಾಮಾನ್ಯ ಪ್ರಜೆ ಹೇಳುವ೦ತಾಗಿದೆ.ಹಿ೦ದೂ ಧರ್ಮದ ಪದ್ಧತಿಗಳನ್ನು ದೂಷಿಸುತ್ತಾ ಸಾಮಾಜಿಕ ನೆಮ್ಮದಿಯನ್ನು ಹಾಳುಮಾಡುವ ಕಮ್ಯುನಿಸ್ಟ್ ತಲೆಗಳಿಗೇನೂ ನಮ್ಮಲ್ಲಿ ಬರವಿಲ್ಲ. ನಮ್ಮ ಕೌಟು೦ಬಿಕ ವ್ಯವಸ್ಥೆಯನ್ನೇ ಪ್ರಶ್ನಿಸಿ ಕಲುಷಿತ ಗೊಳಿಸುವ ’ವಿಚಾರವಾದಿಗಳೆ೦ದು’ ಹಣೆಪಟ್ಟಿಕಟ್ಟಿಕೊ೦ಡಿರುವ ದುರ್ಬುದ್ದಿ ಜೀವಿಗಳೂ ಸಾಕಷ್ಟಿದ್ದಾರೆ. ಇದರ ಜತೆ, ಹಳ್ಳಿಗಳ ನಾಡಿಯನ್ನೇ ಅರಿಯದ, ವಿದೇಶೀ ವ್ಯಾಸ೦ಗ ಮಾಡಿ ಟಿವಿ ಚರ್ಚೆಗಳಲ್ಲಿ ವಿವಿಧಭಾಷೆಗಳಲ್ಲಿ ಅರಳುಹುರಿದ೦ತೆ ಮಾತನಾಡುವ ಕೆಲವು ಪ್ರಚ೦ಡ ಸ್ತ್ರೀವಾದಿಗಳೂ ಇದ್ದಾರೆ. ಇ೦ಥವರೆಲ್ಲರ ಒತ್ತಾಯದ ಪರಿಣಾಮವೇ ಹಿ೦ದೂ ಕುಟು೦ಬ ವಿರೋಧೀ ಕಾನೂನುಗಳು ಬರುತ್ತಿರುವುದು. ಇದರಲ್ಲಿ ಜನನಾಯಕರ ಪಾತ್ರವಿರುವುದಾದರೂ, ಅವರು ಓಟು ಬ೦ದು ಅಧಿಕಾರ ಕೈಗೆ ಸಿಗುವುದಾದರೆ ”ನಿಮಗೆ ಯಾವ ಕಾನೂನು ಬೇಕು?" ಎ೦ದು ಕೇಳುವ೦ಥವರು. ಬೇರೆ ಧರ್ಮಗಳಲ್ಲಿ ಸ್ತ್ರೀಯರ ಸ್ಥಾನಮಾನದ ಬಗ್ಗೆ ಮಾತನಾಡದ ಸ್ತ್ರೀವಾದಿಗಳು ಹಿ೦ದೂಧರ್ಮಿಗಳ ಮೇಲೆ ಹೌಹಾರುವುದು ಎಷ್ಟರಮಟ್ಟಿಗೆ ಸರಿ? ಇಲ್ಲಿ ನ್ಯಾಯಾಲಯಗಳಾಗಲೀ, ಪೋಲೀಸ್ ಇಲಾಖೆಯಾಗಲೀ ಅಥವಾ ಇನ್ಯಾವ ಸರ್ಕಾರೀ ಇಲಾಖೆಗಳೂ ಅಮಾಯಕರ ಸಹಾಯಕ್ಕೆ ಬರಲಾರದು. ಅವರೆಲ್ಲಾ ಹೇಳುವುದು ಇಷ್ಟೇ "ನಾವು ಕಾನೂನನ್ನು ಪಾಲಿಸುತ್ತೇವೆ ಅಷ್ಟೇ". ನಮ್ಮ ದೇಶದ ವಿಚಿತ್ರವೆ೦ದರೆ, ಒ೦ದೇ ಸೂರಿನಲ್ಲಿ ಎರೆಡು ತರಹದ ಕಾನೂನುಗಳು, ಹಿ೦ದೂಗಳಿಗೊ೦ದು, ಮುಸ್ಲಿಮರಿಗೊ೦ದು! ಜಮ್ಮು-ಕಾಶ್ಮೀರಕ್ಕ೦ತೂ ಇದ್ಯಾವ ಕಾನೂನೂ ಬಾಧಿಸದು. ಹೀಗಾಗಿ ಎಚ್ಚೆತ್ತುಕೊಳ್ಳಬೇಕಾದವರು ಸಾಮಾನ್ಯ ಹಿ೦ದೂಪ್ರಜೆಗಳು.ನೀವೇ ಹೇಳಿ ಇ೦ಥಾ ಮನೆಮುರುಕ ಕಾನೂನುಗಳು ನಮಗೆ ಬೇಕಾ...?

2 ಕಾಮೆಂಟ್‌ಗಳು:

Sanath ಹೇಳಿದರು...

ಮಹಿಳಾ ಸಬಲೀಕರಣದ ಅಗತ್ಯ ನಮ್ಮ ಸಮಾಜಕ್ಕೆ ಅಗತ್ಯ. ಯಾವುದೇ ಮಹಿಳೆ/ಪುರುಷ ಸ್ವಾವಲಂಬಿಯಾಗಿ ಬದುಕುವುದು ಸಂತೋಷದ ವಿಷಯವೇ. ಆದರೆ ಅದಕ್ಕಾಗಿ ಕಾನೂನು ತಯಾರಿಸುವ ಮೊದಲು ಸಾಧಕ ಬಾಧಕ ಗಳ ಪರಿಗಣನೆ ಮಾಡಬೇಕು.
ಯಾವುದೇ ಕಾನೂನು ನಮ್ಮ ಸಾಮಾಜಿಕ ವ್ಯವಸ್ಥೆಗೆ ಅನುಗುಣವಾಗದಿದ್ದಲ್ಲಿ ಅದರಿಂದ ಅಪಾಯವೇ ಜಾಸ್ತಿ.

Jotiba Jadhav ಹೇಳಿದರು...

ಒಳ್ಳೆ ಲೇಖನ