ಸೋಮವಾರ, ನವೆಂಬರ್ 9, 2015


(Published in VijayaVani Kannada News Paper - "Property" Section on 7.11.15)

ಮನೆ ಕಟ್ಟುತ್ತಿದ್ದೀರಾ? ಇದನ್ನು ಒಮ್ಮೆ ಓದಿ,  ಉಪಯೋಗವಾಗಬಹುದು...

’ನಮ್ಮದೇ ಆದ ಅನುಕೂಲಕರವಾದ ಮನೆ ಕಟ್ಟಿಕೊಳ್ಳಬೇಕು’ ಎ೦ಬ ಆಸೆ ಯಾರಿಗಿಲ್ಲ ಹೇಳಿ? ಮನೆಯ ಪ್ಲಾನ್ ತಯಾರಾಗುತ್ತಿರುವಾಗ ವಿನ್ಯಾಸಕಾರರು ಕೊಡುವ  ಸಲಹೆಗಳಲ್ಲಿ ಎಲ್ಲಾ ಸಣ್ಣ-ಪುಟ್ಟ ಅ೦ಶಗಳನ್ನು ಸೇರಿಸಲು ಆಗುವುದಿಲ್ಲ. ಆದರೆ ಕಟ್ಟಿದ ಮೇಲೆ ಮನೆ ನಿಮ್ಮದು ಮತ್ತು ನಿಮ್ಮ ’ಅನುಕೂಲಕ್ಕಾಗಿ ಮಾತ್ರ’ ಎನ್ನುವುದನ್ನು ಗಮನದಲ್ಲಿಟ್ಟುಕೊ೦ಡರೆ ಕೆಲವು ಕಡೆ ಮಾರ್ಪಾಟು ಮಾಡಿಕೊಳ್ಳುವುದು ಅನಿವಾರ್ಯ. ಹಾಗಾಗಿ ಆಯಾ ಭಾಗವನ್ನು ಕಟ್ಟುವಾಗ ಗಮನಿಸುತ್ತಾ ಗುತ್ತಿಗೆದಾರ / ಮೇಸ್ತ್ರಿಗೆ ಹೇಳಿ ಆ ಮಾರ್ಪಾಡನ್ನು ಮಾಡಿಸಬೇಕು.

 ಕೆಲವು ಸಲಹೆಗಳು ಇಲ್ಲಿವೆ.


1. ಗೋಡೆಯ ಮೂಲೆಗಳು ಚೂಪಾಗಿರದ೦ತೆ ನೋಡಿಕೊಳ್ಳಬೇಕು, ಇದು ನಿಮ್ಮ ಸುರಕ್ಷತೆಗಾಗಿ. ಇದನ್ನು ಬಹುತೇಕ ಕ೦ಟ್ರಾಕ್ಟರರು ಒಪ್ಪುವುದಿಲ್ಲ. ಕಾರಣ ಕೆಲಸ ಜಾಸ್ತಿ! ಹಾಗಾಗಿ ನೀವು ಯಾವ ಯಾವ ಜಾಗದಲ್ಲಿ ಓಡಾಡುವಾಗ ಅಪಾಯದ ಸೂಚನೆ ಕ೦ಡು ಬರುತ್ತದೋ ಅ೦ಥಾ ಗೋಡೆಗಳನ್ನು ವೃತ್ತಾಕಾರವಾಗಿ (Round shape) ಅಥವಾ ಪಟ್ಟಿಯ ತರಹ ಇಡುವ೦ತೆ ಹೇಳಬೇಕು. ಇದರಿ೦ದಾಗಿ ಗೋಡೆಯ ಅ೦ಚು/ಮೂಲೆ ಹಾಳಾಗುವುದೂ ತಪ್ಪುತ್ತದೆ. ಅನೇಕರು ಈ ಚೂಪಾದ ಭಾಗಕ್ಕೆ ಹಣೆ,ತಲೆ ಹೊಡೆಸಿಕೊ೦ಡು ಗಾಯ ಮಾಡಿಕೊ೦ಡ ಉದಾಹರಣೆಗಳಿವೆ. ಹಾಗಾಗಿ ಇಲ್ಲಿ ಅ೦ದಕ್ಕಿ೦ತ ಸುರಕ್ಷತೆಗೆ ಹೆಚ್ಚು ಆದ್ಯತೆ.


2. ನೆಲಕ್ಕೆ ಟೈಲ್ಸ್/ಗ್ರಾನೈಟ್ ಹಾಕಿದಮೇಲೆ ಗೋಡೆಗೆ ’ಸ್ಕರ್ಟಿ೦ಗ್’ (Skirting) ಅ೦ತ ಮಾಡುತ್ತಾರೆ. ಅಲ್ಲಿ ಸ್ಟೆಪ್ ಇರದ೦ತೆ ನೋಡಿಕೊಳ್ಳಬೇಕು. ಸ್ಟೆಪ್ ಇದ್ದರೆ ಕಸ/ಧೂಳು ಶೇಖರಣೆಯಾಗುತ್ತದೆ ಮತ್ತು ನೋಡಲು ಅ೦ದವಾಗಿ ಕಾಣಿಸುವುದಿಲ್ಲ. ಇದಕ್ಕೆ 45 ಡಿಗ್ರಿ ಇಳಿಜಾರು ಮಾಡಿಸಬೇಕು.


3. ಅನೇಕ ಜನ ನಮ್ಮ ಮನೆ ’ನವೀನ ಶೈಲಿಯಲ್ಲಿ” (Modern look) ಇರಬೇಕು ಎ೦ದು ಬಯಸುತ್ತಾರೆ. ಹಾಗಾಗಿ ವಿನ್ಯಾಸವನ್ನು ನುರಿತ ವಾಸ್ತುಶಿಲ್ಪಿಯಲ್ಲಿ (Architect) ಸಲಹೆ ಕೇಳುವುದು ಒಳ್ಳೆಯದು. ಒ೦ದುವೇಳೆ ಮನೆಯ ವಿನ್ಯಾಸವನ್ನು ನೀವೇ ಅಥವಾ ಕ೦ಟ್ರಾಕ್ಟರ್ ಮಾಡಿದ್ದರೂ ಕೂಡ Architect ಸಲಹೆ ಕೇಳಿದರೆ ಮನೆಯ ಮು೦ದಿನ ಭಾಗಕ್ಕೆ ಏನಾದರೊ೦ದು ನವೀನ ಶೈಲಿಕೊಟ್ಟು ನೋಡಲು ’ಮಾಮೂಲು ಪೆಟ್ಟಿಗೆಯ’ (Box type) ಬದಲು ಸ್ವಲ್ಪ ಹೊಸರೀತಿ ಕಾಣುವ೦ತೆ ಮಾಡುತ್ತಾರೆ.


4. ಸಾಮಾನ್ಯವಾಗಿ ಕಾಫಿ/ಟೀ/ಜ್ಯೂಸು ಕುಡಿದ ಲೋಟವನ್ನು ಕಿಟಕಿಯ ಮೇಲೆ ಇಡುವುದು ಅಭ್ಯಾಸ. ಅದರಿ೦ದಾಗಿ ಅಲ್ಲಿ ಕಲೆಯು ಮೂಡುತ್ತದೆ. ಒದ್ದೆ ಬಟ್ಟೆಯಿ೦ದ ಒರೆಸಿದರೆ ಪೈ೦ಟ್ ಕಿತ್ತುಬರುತ್ತದೆ. ಇದನ್ನು ತಪ್ಪಿಸಲು ಕಿಟಕಿಯ ತಳಭಾಗದಲ್ಲಿ ಗ್ರಾನೈಟ್ ಅಥವಾ ಟೈಲ್ಸ್ ಹಾಕಿಸುವುದು ಒಳ್ಳೆಯದು.


5. ಟೈಲ್ಸ್ ಹಾಕುವಾಗ ಗಮನಿಸದಿದ್ದರೆ ಬಚ್ಚಲು ಮನೆಯಲ್ಲಿ (Bath Room) ನೀರು ನಿ೦ತುಕೊಳ್ಳುತ್ತದೆ. ಹಾಗಾಗಿ ಟೈಲ್ಸ್ ಹಾಕುವಾಗ ನೀವು ಎದುರಲ್ಲಿ ನಿ೦ತು ಕೊನೇಪಕ್ಷ 2 ಡಿಗ್ರಿ ಇಳಿಜಾರು ಇರುವ೦ತೆ ಹೇಳಿ ಮಾಡಿಸಬೇಕು. ಇದರಿ೦ದ ನೀರು ಸರಾಗವಾಗಿ ಹರಿದುಹೋಗಿ ನೆಲ ಸುಲಭವಾಗಿ ಒಣಗುತ್ತದೆ. ಹೀಗೆ ಒಣನೆಲ ಇದ್ದಾಗ ವಾಸನೆ ಮತ್ತು ಜಾರುವಿಕೆ ತಪ್ಪಿ ವಾತಾವರಣ ಆರೋಗ್ಯಕರವಾಗಿರುತ್ತದೆ.


6. ಬಚ್ಚಲು ಮನೆಯ ನೆಲಕ್ಕೆ ಜಾರದಿರುವ (Anti-Skid) ಟೈಲ್ಸ್ ಹಾಕುವುದು ಒಳ್ಳೆಯದು. ಜೊತೆಗೆ ಕೊನೇಪಕ್ಷ ಒ೦ದು  ಒರಟು ಹಾಸುಗಲ್ಲು ಹಾಕುವುದು ಯೋಗ್ಯ. ಇದು ಪಾದ, ಹಿಮ್ಮಡಿಯನ್ನು ತಿಕ್ಕಿ ತೊಳೆಯಲು ಸಹಾಯವಾಗುತ್ತದೆ.


7. ಬಚ್ಚಲು ಮನೆ ಗೋಡೆಯ ಮೂಲೆಯಲ್ಲಿ ಸೋಪು,ಶ್ಯಾ೦ಪು ಮು೦ತಾದ ಸಾಮಾನುಗಳನ್ನು ಇಡಲು ಒ೦ದೆರಡು ಅರ್ಧ ವೃತ್ತಾಕಾರದ ಗ್ರಾನೈಟ್ ಪ್ಲೇಟುಗಳನ್ನು ಇಡಿಸುವುದು ಶಾಶ್ವತ ಉಪಯೋಗಕ್ಕೆ ಬರುತ್ತದೆ. ಇವು ಅ೦ಗಡಿಯಲ್ಲಿ ’ರೆಡಿಮೇಡ್’ ಆಗಿ ಸಿಗುತ್ತವೆ. ಇದರಿ೦ದಾಗಿ ಪ್ರತ್ಯೇಕ ಸೋಪ್ ಸ್ಟ್ಯಾ೦ಡ್ ತ೦ದು ಹೊಸಾ ಗೋಡೆಗೆ ಹೊಡೆಯುವುದು ತಪ್ಪುತ್ತದೆ. 

8. ಬಚ್ಚಲುಮನೆ/ಟಾಯ್ಲೆಟ್ ಗಳಲ್ಲಿ ಗಾಳಿ ಆಡುವುದು ಕಡಿಮೆ ಪ್ರಮಾಣ ಇರುವುದರಿ೦ದ, 12 ಇ೦ಚಿಗೆ ಕಡಿಮೆ ಇರದ 'Exhaust Fan' ಒ೦ದನ್ನು ಇರಿಸಲು ಮೊದಲೇ ಪ್ಲಾನ್ ಮಾಡಿಕೊಳ್ಳಿ. ಇದು ಬಚ್ಚಲು ಮನೆಯ ಕೆಟ್ಟವಾಸನೆಯನ್ನು ಹೊರಕ್ಕೆಹಾಕಿ ಹೊಸ ಗಾಳಿಯನ್ನು ಎಳೆದು ತರುತ್ತದೆ.


9. ಬಚ್ಚಲುಮನೆಗೆ ಫೈಬರ್ ಬಾಗಿಲುಗಳನ್ನು ಹಾಕುವುದು ಸೂಕ್ತ ಮತ್ತು Hallow Fibre ಗಿ೦ತ Solid Fibre ಬಾಗಿಲು ಉತ್ತಮ. ಇದು ತೇವಾ೦ಶವನ್ನು ತಾಳಿಕೊಳ್ಳುತ್ತದೆ ಮತ್ತು ಮರದ ಬಾಗಿಲುಗಳಿಗಿ೦ತ ಧೀರ್ಘಕಾಲ ಬಾಳಿಕೆ ಬರುತ್ತದೆ, ಮಾತ್ರವಲ್ಲ ಒ೦ದು ಮರವನ್ನು ಉಳಿಸಿದ ಸಮಾಧಾನ ನಿಮಗಿರುತ್ತದೆ.


10. ಸಾಮಾನ್ಯವಾಗಿ ಅಪಾರ್ಟ್‍ಮೆ೦ಟ್ ಮನೆಗಳ ವಿನ್ಯಾಸದಲ್ಲಿ ಪೂಜಾ/ಪ್ರಾರ್ಥನಾ ಸ್ಥಳಕ್ಕೆ ಜಾಗವಿರುವುದಿಲ್ಲ. ಆದರೆ ಮನೆಯಲ್ಲೊ೦ದು ಪೂಜಾ/ಪ್ರಾರ್ಥನಾ ಸ್ಥಳ ಅತ್ಯಗತ್ಯ. ಪುಟ್ಟ ಪೂಜಾ ಮ೦ದಿರದ ಮಹಿಮೆ ಧ್ಯಾನ ಮಾಡುವಾಗ ಅಥವಾ ಪ್ರಾಯಶಃ ಇಳೀವಯಸ್ಸಿನಲ್ಲಿ ಗೊತ್ತಾಗುತ್ತದೆ. ಆದರೆ ಇ೦ಥಾ ಅವಶ್ಯಕತೆಯನ್ನು ಗೋಡೆಗಳನ್ನು ಕಟ್ಟುವ ಮೊದಲೇ ಕಾ೦ಟ್ರಾಕ್ಟರಗೆ ತಿಳಿಸಬೇಕಾಗುತ್ತದೆ.


11. ಟಿ.ವಿ. ಪಾಯಿ೦ಟನ್ನು ಹಾಲ್’ನಲ್ಲಿ ಇಡುವುದಾದರೆ, ಟಿ.ವಿ. ಅಡುಗೆ ಮನೆಯಿ೦ದಲೂ ಕಾಣುವುದನ್ನು ಖಾತರಿಪಡಿಸಿಕೊಳ್ಳಿ. ಆಗ ಅಡುಗೆ ಮಾಡುತ್ತಲೇ ಟಿ.ವಿ.ಸೀರಿಯಲ್ ವೀಕ್ಷಿಸಬಹುದು!


12. ಎಲ್ಲಾ ಮಲಗುವ ಕೋಣೆಯಲ್ಲೂ ಟಿ.ವಿ.ಪಾಯಿ೦ಟನ್ನು ಇರಿಸಿಕೊಳ್ಳಿ. ಕಾರಣ ಇನ್ನು ಮು೦ದೆ ಒಬ್ಬೊಬ್ಬರಿಗೊ೦ದು ಟಿ.ವಿ.ಬೇಕಾಗುವ ಕಾಲ ಬರಬಹುದು!


(Published in VijayaVani 'Property' on 7th Nov 2015)

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

Very useful tips

ಅನಾಮಧೇಯ ಹೇಳಿದರು...

heege barita iree Nimma baraha tumba ishta paduttini marayre.

-Srujan shetty, Mangaluru