ಶುಕ್ರವಾರ, ಫೆಬ್ರವರಿ 20, 2009

ಮರೆಯಲಾದೀತೆ ಆ ಅಮ್ಮನ?


ಹೊತ್ತ್ಹೊತ್ತು ಗೊತ್ತಿಲ್ಲದೆ ನಾ ಅರಚಲು
ಮುಜುಗರದ ಮಡಿಲಲ್ಲಿ ಸೆರಗಿಂದ ಮುಚ್ಚಿ
ಹಸಿದ ಹೊಟ್ಟೆಗೆ ನಿಟ್ಟಿಲ್ಲದೆ ಹಾಲುಣಿಸಿದ
ಬಿಸಿಲ ಲೆಕ್ಕಿಸದೆ ನೆಡೆದು ಹೊತ್ತೊಯ್ದು ರಕ್ಷಿಸಿದ
ಮುಗಿಲ ಚಂದ್ರನ ಬಳಿಗೆ ಕರೆದೊಯ್ದು ನಿದ್ರಿಸಿದ
ಜಗದ ಕಾರ್ಯಗಳನು ಮರೆತು ಪೋಷಿಸಿದ
ಗೊತ್ತಿರದ ನೋವ ದಿಕ್ಕೆಟ್ಟು ಬಿತ್ತರಿಸಿದಾಗ
ಬರಸೆಳೆದು ಅಪ್ಪಿ ಮುದ್ದಾಡಿ ತಾನೂ ಮುಕ್ಕಳಿಸಿದ
ಆ ಅಮ್ಮ ನನ್ನ ಬೆರಗು ನೋಟದ ಕಣ್ಗಳಿಗೆ
ಅರ್ಥವಾಗದ ನನ್ನ ಮುದ್ದು ಗೊಂಬೆ.

ಊರಕೇರಿಯ ಅಲೆದು ಕೆರೆಯತೀರದಿ ಕಳೆದು
ಕಾನು ಕುಂಟೆಯ ದಾಟಿ ಮರ ಗಿಡಗಳ ಹತ್ತಿಳಿದು
ಲೆಕ್ಕವಿಲ್ಲದಷ್ಟು ಸಿಹಿ ಕಹಿಯ ಹಣ್ಣು ಕಾಯಿ ತಿಂದು
ಹೊತ್ತು ಗೊತ್ತಿಲ್ಲದೆ ಹಕ್ಕಿ ಪಕ್ಕಿಗಳ ಜೊತೆ ಹಾಡಿ ಕಳೆದು
ನದಿಯ ನೀರಲಿ ಈಜಾಡುತ ಮೀನು ಹಿಡಿವ ಆಟವಾಡಿ
ಸ್ವಲ್ಪವೂ ಇಷ್ಟವಿಲ್ಲದೆ ಧುತ್ತೆಂದು ಮನೆಗೆ ಬಂದಾಗ
ಕಟ್ಟು ನಿಟ್ಟಿನ ಅಪ್ಪನ ಸಿಟ್ಟಿನ ಹೊಡೆತಗಳಿಗೆ ತಡೆಯೊಡ್ಡಿ
ನನ್ನ ಮರೆಮಾಡಿ ಪೆಟ್ಟು ತಿಂದ ನನ್ನಮ್ಮ,
ನೀನು ನನ್ನ ಮತಿಗೆ ಅರ್ಥವಾಗದ ಕರುಣಾಮಯಿ.

ಪುಂಡು ಪೋಕರಿಯೆಂದು ಊರವರು ಕರೆದಾಗ
ಗಿಲ್ಲಿ ದಾಂಡು ಗೋಲಿ ಕವಡೆ ಆಡಿ ಸೋತಾಗ
ಪಾಠ ಪಠ್ಯಗಳು ತಲೆಗೆ ಹತ್ತದೆ ಗೋಳಾಡಿದಾಗ
ಸಮಚಿತ್ತ ತೋರುತ ನನ್ನ ಕಣ್ಣೀರೊರೆಸುತ
ಜಗವ ಧೈರ್ಯದಿ ಎದುರಿಸುವ ಮರ್ಮವ ತಿಳಿಸುತ
ನೀನಂದು ಕಲಿಸಿದ ನಾಲ್ಕು ಅರ್ಥ ತುಂಬಿದ ಪದಗಳ ಮುಂದೆ
ನಾನಿಂದು ಗಳಿಸಿದ ಸಾಲು ಸಾಲು ಪದವಿಗಳು ಅರ್ಥಹೀನ;
ಕಡುಬು ಹೋಳಿಗೆ ಚಕ್ಕುಲಿ ಕಜ್ಜಾಯ ತಿನ್ನಿಸುತ
ಹಬ್ಬಹಬ್ಬಕೂ ಹೊಸ ಬಟ್ಟೆಯುಡಿಸಿ ನಕ್ಕು ನಲಿಸುತ
ಹರಿದ ಸೀರೆಯುಟ್ಟೇ ಅರೆಹೊಟ್ಟೆಯಲ್ಲಿ ಖುಷಿಪಟ್ಟ ಕುಂಕುಮಾಂಕಿತೆ,
ನೀನಲ್ಲ ಬಡವೆ ನೀನು ಆಗರ್ಭ ಮತಿ ಶ್ರೀಮಂತೆ,
ನೀ ನನಗೆಂದೆಂದೂ ಅರ್ಥವಾಗದ ಅಮರ ದೇವತೆ.....



ಕಾಮೆಂಟ್‌ಗಳಿಲ್ಲ: