ಶನಿವಾರ, ಫೆಬ್ರವರಿ 28, 2009

"ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ.....?" (ರಾಜಕೀಯ ಹಾಸ್ಯ ವಿಡ೦ಬನೆ).

(Published in Thatskannada.com on 4th March 09 http://thatskannada.oneindia.in/column/humor/2009/0303-ambarish-meets-hdk-political-satire.html)

"ಓ ಅಡ್ ಬಿದ್ದೆ ಕಣಣ್ಣೋ", ಕುಮಾರಣ್ಣನ್ನ ಕಂಡ್ ಕೂಡ್ಲೆ ಅಂಬಿಗೆ ಎಲ್ಲಿಲ್ಲದ ಚೆಡ್ಡಿದೋಸ್ತಿ ನೆನಪಾಗಿತ್ತು. ಲಗುಬಗೆಯಿಂದಲೇ ಕುಮಾರಣ್ಣನ ಮನೆಯೊಳಗೆ ಕಾಲಿಟ್ಟಿದ್ದರು.
"ಓ ಬರಬೇಕು ಗುರುಗುಳು, ಏನ್ ಇಷ್ಟ್ ದೂರ"
ಕುಮಾರು ಏನ್ ಕಮ್ಮಿನಾ, ದೇಶಾವರಿ ನಗು ತೋರ್ಸ್ಕಂಡೇ ಬರ ಮಾಡಿಕೊಂಡ್ರು.
ಥೇಟ್ ’ಜಾರ್ಜ್ ಬುಷ್ಶು ಸೋನಿಯಾ’ ಕೈಕುಲುಕಿದ ತರ, ಕೈ ಶೇಕ್ ಮಾಡ್ಕಂತಲೇ ಪೂರ್ತಿ ಎರೆಡು ನಿಮಿಷ ಫೋಟೋ ಪೋಸ್ ಕೊಟ್ರು, ಒಹ್... ಪೋಟೋ ತೆಗೆಯೋರಿಲ್ಲ ಅಂತ ಅರಿವಾಗಿ ಈಗ ಕೈಬಿಟ್ರು. ಬರಸೆಳೆದು ಅಪ್ಕೊಳಕ್ಕೆ ಹೋಗಲಿಲ್ಲ, ಹೊಟ್ಟೆ ಮುಂದ್ಬಂದು 'ಎದೆ ಅ೦ಟ್ಕಣಕಿಲ್ಲ' ಅಂತ ಇಬ್ರಿಗೂ ಗೊತ್ತಿತ್ತು!

ಸೋಫಾದ ಮೇಲೆ ಧುಪ್ಪೆಂದು ಕುಳಿತ ಅಂಬಿ ತಟಕ್ಕನೆ ಎದ್ದು ಸೋಫಾ ಮುರಿದು ಹೋಯ್ತಾ ಅಂತ ಒಮ್ಮೆ ಚೆಕ್ ಮಾಡಿದ್ರು.ಅದಕ್ಕೆ ಕುಮಾರು,

" ಏನು ಆಗಕಿಲ್ಲ ಕುಂತ್ಕಳಣೋ, ನೀನೊಳ್ಳೆ, ಮೊನ್ನ್ ಮೊನ್ನೆ ಸಾಬರ ಅಂಗ್ಡಿ೦ದ ಒಸಾದ್ ತರ್ಸಿ ಹಾಕ್ಸಿವ್ನಿ..."

"ಓ ಅಂಗಾ, ನಮ್ಮನ್ಯಾಗೆ ಒಂದಿನ..." ಅಂಬಿ ಕಥೆಯನ್ನ ಮಧ್ಯೆ ತಡೆದು,

"ಯೆ... ಎಂಥೆಂಥ ಕರ್ಗೆ ದರ್ಮ್ಸಿಂಗು ಕುಂತ್ರೇ ಏನು ಆಗ್ಲಿಲ್ವ೦ತೆ.." ಕುಮಾರು 'ಟೈಮ್ ಟೆಸ್ಟೆಡ್' ಅಂತ ಸಮಜಾಯಿಸಿ ಕೊಂಡರು.
ಆಳು ನೀರಿನ ಗ್ಲಾಸು ತ೦ದಿಟ್ಟು ಹೋದ.
ನೀರು ಕುಡಿಯುತ್ತಾ ಅಂಬಿ ಗೋಡೆಯ ಮೇಲಿದ್ದ ತೈಲ ಚಿತ್ರ, ದೇವೇಗೌಡರ ಫೋಟೋ... ಎಲ್ಲ ಕಣ್ಣಾಯಿಸಿ ನೋಡ್ತಿದ್ದಂತೆ, ಕುಮಾರು ಅಂಬಿಯನ್ನೇ ಕುತೂಹಲದಿಂದ ದಿಟ್ಟಿಸಿ, ನೀಡಿದ ಕಾಲು ತೊಡೆ ಕುಣಿಸುತ್ತಾ,
"ಹು.. ಅದಿರ್ಲಿ, ಏನ್ ಸಿವ ಇಟ್ ದೂರ ಈ ಬಡವನ್ ಮನೀಗೆ?"
ಅಂಬಿ ಪಿಕ್ಚಚ್ರ್ ತೆಗೆಯಕ್ಕೆ ಇನ್ವೆಷ್ಟಮೆಂಟು ಎಲ್ಲಿ ಕೇಳ್ಬುಡ್ತಾರೋ ಅಂತ ಚಾಣಾಕ್ಷ ಕುಮಾರು ಮೊದ್ಲೇ 'ಬಡವ' ಅಂದ್ಕೊಂಡ್ ಸೇಫ್ ಅಗ್ಬಿಟ್ರು!
ಇಲ್ದಿದ್ರೆ ಮೊನ್ನೇನಾಗ, ಅಪ್ಪಾಜಿ ಜೊತೆಗಾಗಿ ಕೂರ್ಸ್ಕಂದು ಪಾರ್ಲಿಮೆಂಟ್ ಎಲೆಕ್ಸನ್ ಬಗ್ಗೆ ತಿಳಿ ಏಳಿದ್ದು ಏನ್ ಪ್ರಯೋಜ್ಞ? ರಾಧಿಕಗೊಸ್ಕರ ಅಷ್ಟೊಂದು ದುಡ್ಡು ಸುಮ್ ಸುಮ್ನೆ ಖರ್ಚ್ ಮಾಡ್ಬೇಡ ಅ೦ತ ಹೇಳಿದ್ದು ಸುಮ್ನೆನ?


"ಯೆ..ಏನಿಲ್ ಕಣಣ್ಣೋ, ಇಂಗೇ ಒಂದಪ ನೊಂಡ್ಕಂಡ ಒಗವ ಅಂತ್ ಬಂದೆ, ಏನ್ ಬರಬಾರದ ಏಳು,.. ವೊಂಟೋಯ್ತೀನಿ.." ಅಂಬಿ ಸುಮ್ಮನೆ ಕರಡಿ ಬೆದರು ತೂರ್ಸಿದ್ರು.


"ಐ ಬಿಡ್ತು ಅನ್ನು, ಯಾಕಂಗ್ ಮಾತಾಡೀಯ..ಸುಮ್ಕೆ ಇಂಗೇ ಕೆಳುದ್ನಪ, ಒಬ್ನೇ ಬಂದ್ಯಲ್ಲ ಹೆಂಗುಸ್ರು ಕರ್ಕಂಡ್ ಬರ್ಬೋದಾಗಿತ್ತು, ನಮ್ ಮೇಡಮ್ನೋರಿಗೂ ಕಂಪ್ನಿ ಆಗ್ತಿತ್ತು ಅಂದೆ..."
ಕುಮಾರು ನೆನಪಿಗೆ ಬಂದಿದ್ನ ತಕ್ಷಣ ಬಿಟ್ರು. ಅಸೆ೦ಬ್ಲೀಲಿ ಎ೦ಥೆ೦ಥಾ ದೊಡ್ಡ ’ಬೊವ್ ಬೊವ್’ ಗಳಿಗೇ 'ಪಟ್' ಅ೦ತ ಉತ್ತರ ಕೊಟ್ಟಿಲ್ವ...
"ಅರೆರೆ, ಯಾವಾಗಿಂದ ಮೇಡಮ್ಮು"
ಕೇಳಣಾ೦ತ ಬಾಯಿ ತೆಗೆದ ಅಂಬಿ 'ಸುಮ್ನೆ ಯಾಕೆ' ಅವರೂ ಈಗ ಶಾಸಕರಲ್ವೆ ಅಂತ ವಿಷ್ಯಾನ ಚೇಂಜ್ ಮಾಡಿದ್ರು.
ಬಂದ ವಿಷಯಾನ ಹೇಗೆ ಹೇಳೋದು ಅಂತ ಹೊಳೀದೆ ಅಂಬಿ "ಥೂ..ಬೇಜಾರಾಗ್ಬುಟೈತಪ" ಅನ್ನುತ್ತಾ ಎರಡು ಕೈ ಮೇಲೆತ್ತಿ ಮೈ ಮುರಿಯುತ್ತಾ ಆಕಳಿಸಿದರು.ಸೋಫಾದ ಯಾವುದೊ ಮೂಲೆಯಲ್ಲಿ ’ಕುರುಕ್... ಕಟ್’ ಅಂತ ಶಬ್ದ ಆಯಿತು!
ರಾಜಕೀಯದಲ್ಲಿ ಪಳಗಿದ ಕುಮಾರಣ್ಣನಿಗೆ ಈ ನಾಟಕ ಎಲ್ಲಾ ಅರ್ಥ ಆಗಲ್ವಾ, ಸುಮ್ನೆ ಅಡ್ಡ ಸಾಟಿ ಮೇಲೆ ಶುರು ಮಾಡಿದರು.

"ಚುನಾವಣೆ ಬಂತಪೋ, ಎಲ್ಲ ತಯಾರಿ ಮಾಡ್ಬೇಕು..." (ನಾವು ಹುಲ ಮಾನವರು ವಿದ್ಯಾರ್ಥಿ ಆಗಿದ್ದಾಗ anual exam ಬಂತು ಅಂತ ತಯಾರಿ ಮಾಡಲ್ವೇ, ಆತರ)
ಅಂಬ್ರೀಶು ಸುಮ್ನೆ ಇದ್ದಿದ್ದು ನೋಡಿ ಕುಮ್ಮಿನೇ ಮುಂದುವರೆಸಿದರು.


"ಏನ್ಲಾ, ಯಾ ಪಾರ್ಟಿ ಅಂತ ಏನನ ಡಿಸೈಡ್ ಮಾಡ್ದ?" ಯಾವ್ ಪಾರ್ಟೀಲಿ ನಿಂತರೂ ಗೆಲ್ಲೋ ಕುದುರೆ ಅಂತ ಕುಮ್ಮಿಗೆ ಗೊತ್ತಿಲ್ವ...

"ಅದೇ ಕಣ್ಲ ಸಮಸ್ಯೆ ಅಗ್ಬುತೈತೆ, ಕಾಂಗ್ರೆಸ್ನೋರು ಎಲ್ಲೂ ಹೋಗ್ಬೇಡ ನಿಂಗ್ ಬೇಕಾದ್ ಕೊಡ್ತೀವಿ ಅಂತಾರೆ, ಬಿಜೆಪಿನೋರು ನಮ್ಮೊಟ್ಟಿಗೆ ಬನ್ನಿ ದೇಶ ಕಟ್ಟಣ ಅಂತಾರೆ, ಎಸ್ಪಿಯಿಂದ ಬಂಗಾರಪ್ಪನೂ ಫೋನ್ ಮಾಡಿದ್ರು...ಕಮ್ಯುನಿಷ್ಟ್.."

ಅಂಬಿ ಮಾತು ಮುಗಿಸೋ ಮೊದ್ಲೇ ಕುತೂಹಲ ತಡೆಯಲಾರದೆ ಕುಮ್ಮಿ,
"ಬಿ ಜೆ ಪಿ ನವರಿಗೆ ಏನಂದೆ?" ಅಂತ ನಗುತ್ತಾ ಮಧ್ಯೆ ತೂರಿಸಿದರು.

"ಯೆ...ತತ್ ತಗಿ ಯಾಕಂತಿಯ, ಬರೀ ಪುಳ್ಚಾರ್ ನನ್ಮಕ್ಳು , 'ಸಂಗಟನೆ, ರಾಷ್ಟ್ರ ಗೀಷ್ಟ್ರ' ಅಂತ ಏನೋ ಕಥೆ ಬಿಡ್ತಾವ್ರೆ ಒಬ್ರಿಗೂ ಸೀರಿಯಸ್ ನೆಸ್ ಇಲ್ಲ"
ಬಿಜೆಪಿ ನವರಿಗೆ ರಾಜಕೀಯದ ಬಗ್ಗೆ ಒಂದು ಕ್ಲಾಸ್ ತೊಗೊ೦ಡ್ ಬಿಡಬೇಕೆನ್ನುವಷ್ಟು ಸಿಟ್ಟು ಬಂದಿತ್ತು ಅಂಬಿಗೆ."ಹಹಃ ಹಹಃ ಹಹಃ......"
ಕುಮಾರಣ್ಣ ಒಂದು ವರ್ಷದ ಹಿಂದೆ ಬಿಜೆಪಿಗೆ ಟೋಪಿ ಹಾಕಿದ್ದನ್ನು ನೆನೆಸಿಕೊಂಡು ಮನಸಾರೆ ಕೇಕೆ ಹಾಕಿ ಹೊಟ್ಟೆತು೦ಬಾ ನಕ್ಕರು. ಅಂಬಿ ಮೊಗದಲ್ಲೂ ನಗುವಿನ ಗೆರೆ ಮೂಡಿತ್ತು.

ಈಗ ಪರಿಸ್ತಿತಿ ನಿರಾಳವಾಗಿತ್ತು, ಇಬ್ಬರೂ ಇನ್ನೂ ಕೆಲವನ್ನು ಸ್ನೇಹಿತರ೦ತೆ ಹಂಚಿಕೊಳ್ಳಲು ತಯಾರಾಗಿದ್ದರು.
"ನಿನ್ ಆರುವಯ್ಯ ಫ್ರೆಂಡು ಏನಂತಾರೆ"

ಇದೇ ವೇಳೆ ವಿಷ್ಣು ಬಗ್ಗೆ ತಿಳ್ಕೊಂಡ್ ಬಿಡಾಣ ಅಂತ ಕುಮ್ಮಿಗೆ.
"ಯೆ..,ಪಾಪ ಅವು೦ದೇನೂ ಇಲ್ಲಪಾ, ನಾನು ಎ೦ಗೇಳ್ತೀನೋ ಅಂಗೆ"
ಅಂಬಿಗೆ ವಿಷ್ಣು ಬಗ್ಗೆ ಕೊಂಚವೂ ಅನುಮಾನ ಇರಲಿಲ್ಲ.

ಅಂಬಿ ಈಗಾಗಲೆ ಕಾಗ್ರೆಸ್ಸಿಂದ ಹೊರಗೋಡಲು ತುದಿಗಳ ಮೇಲೆ ನಿಂತಿದ್ದಾರೆ ಅಂತ ಕುಮ್ಮಿಗೆ ಚೆನ್ನಾಗಿ ಗೊತ್ತಿತ್ತು.

"ಅಂಗಾದ್ರೆ ದೊಡ್ಡ ಗೌಡ್ರು ಕರೆದು ಮಾತಾಡ್ ಬುಡಾವ"
ಆದಷ್ಟು ಬೇಗ ದೊಡ್ ಖುಳಾನ ಬುಟ್ಟಿಗೆ ಹಾಕಿ ಕೊಂಡ್ ಬುಡಾವ ಅಂತ ಕುಮ್ಮಿಗೆ.

"ನೋನೋ, ಅವೆಲ್ಲ ಆಮೇಲೆ ಮೊದ್ಲು ನಮ್ ಲೆವೆಲ್ನಾಗೆ ರೂಪುರೇಸೆ ಮಾತಾಡವ, ನಂತ್ರ ದೊಡ್ ಗೌಡ್ರು..."

ಸುಮ್ನೆ ಪಾರ್ಟಿಗೆ ಸೇರ್ಕಂಬುಟ್ರೆ ಆತದ, ಪೇಪರ್ನಾಗೆ ಅನೌನ್ಸ್ ಆದಮೇಲೆ, ಬಿಜೆಪಿಗೆ ಹಾಕ್ದಂಗೆ ಪಂಗ ನಾಮ ಹಾಕ್ಬುಟ್ರೆ? ಅ೦ಬೀಗೂ ಅಲ್ಪ ಸ್ವಲ್ಪ ರಾಜಕೀಯ ಗೊತ್ತಿಲ್ವ?

"ಆಯ್ತು ಕಣಣ್ಣೋ, ನೀ ಯಾವ ಕ್ಸೇತ್ರ ನಿಂತ್ಗತಿಯ ಯೋಳು, ಅಲ್ಗೇ ಯವಸ್ತೆ ಮಾಡಾವ....ಸರಿಯೇನಪ..." ಕುಮಾರಣ್ಣ ಸಮಾಧಾನದಿಂದ. ದೇವೇಗೌಡ್ರು ಪರ್ಮಿಶನ್ ಇದಕ್ಕೇನು ಬೇಡ ಅ೦ತ ಕುಮ್ಮಿಗೆ ಗೊತ್ತಿತ್ತು.

"ಅದೇ ಕಣ್ಲ ಬಲೇ ಇಕ್ಕಟ್ಟಿಗೆ ಸಿಕಆಕ್ಕ ಬುಟೀವ್ನಿ"

ವಯಸ್ಸಾಗಿರುವ ತನಗೆ ಅಭಿಮಾನಿ ಬಳಗವು ಕಡಿಮೆಯಾಗಿದೆ ಅಂತ ಚಿ೦ತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ನೆನಪು ಇನ್ನೂ ಹಸಿರಾಗಿತ್ತು. ಹಾಗಾಗಿ ಹೆಚ್ಚು ಡಿಮ್ಯಾಂಡ್ ಮಾಡೋ ಪರಿಸ್ತಿತಿಯಲ್ಲಿರಲಿಲ್ಲ ಅ೦ಬಿ.

ಕುಮ್ಮಿಗೆ ಇದು ಗೊತ್ತಿದ್ರೂ ಪಾರ್ಟಿಗೆ ಹೆಂಗಾನ ಮಾಡಿ ಜೀವ ತುಂಬ ಬೇಕಾಗಿದೆ. ಇವನ್ನ ಬುಟ್ಟಿಗೆ ಹಾಕ್ಕಂಡ್ರೆ, ಜೊತೆಗೆ ಆ ಹಾರುವಯ್ಯ ಬತ್ತವ್ನೆ, ಇಬ್ರು ಸೇರಿದ್ರೆ ಪಾರ್ಟಿಗೆ ಒಳ್ಳೆ ಸ್ಟಾರ್ ವ್ಯಾಲ್ಯೂ...

ಕೆಲವು ಚೊಟಾ-ಮೋಟಾ ಯಾಕ್ಟ್ರು ಗಳನ್ನೂ ಸೆರ್ಸ್ಕ೦ಬೋದು, ಜೊತೆಗೆ ಚಿರ೦ಜೀವಿ ಸಪೋರ್ಟೂ ಇದ್ರೆ ನಮ್ಮನ್ನ ಹಿಡಿಯೋರು ಯಾರು?

"ಆಗ್ಲಿ ಕಣ್ಲ, ನಿಂಗೆ ಯಾವ ಕ್ಷೇತ್ರ ಇಷ್ಟನೋ ಅಲ್ಗೆ ಟಿಕೆಟ್ ಕೊಡೋಣ೦ತೆ, ಯೋಚನೆ ಮಾಡ್ಕಂಡ್ ಬಾ, ಆಮೇಲೆ ಅಪ್ಪಾಜಿ ತಾವು ಕು೦ತ್ ಮಾತಾಡಣ"
ಅಷ್ಟೊತ್ ವರೆಗೆ ತನಗೂ ಯೋಚನೆ ಮಾಡೋಕ್ಕೆ ಟೈಮ್ ಸಿಗುತ್ತೆ ಅಂತ ಯೋಚನೆ ಕುಮ್ಮಿಗೆ.
ಕುಮ್ಮಿ ಅಷ್ಟು ಫ್ರೀಡಂ ಕೊಟ್ಟಿದ್ದು ನೋಡಿ,

"ಗೆಳೆಯಾ... ನಮ್ದೊಳ್ಳೆ ದೋಸ್ತಿ ಕಣೋ"
ಅಂತ ವಿಷ್ಣು ಜೊತೆ ಡ್ಯುಯೆಟ್ ಹಾಡಿದ್ದು ನೆನಪಿಸಿಕೊಂಡು ಕುಮ್ಮಿ ಜೊತೆ ಕುಣುದ್ ಬುಡಾಣ ಅನ್ನೋವಶ್ಟು ಸಂತೋಷವಾಗಿತ್ತು ಅಂಬಿಗೆ. ಆದ್ರೆ ಇಲ್ಲಿ ಕುಣಿಯಕ್ಕೆ ಆಗುತ್ತಾ, ಇನ್ನೇನು ಬ೦ದ ಕೆಲಸ ಎಲ್ಲವೂ ಆಯಿತು, ಅಂಬಿ ಹೊರಡುವ ಸೂಚನೆ ಕೊಡುತ್ತಾ ಗಡಿಯಾರ ನೋಡುತ್ತಿದ್ದಂತೆ, ಕುಮ್ಮಿ,
"ಎಂಗೂ ಮುದ್ದೆ ರೆಡಿ ಐತೆ, ನಿಂಜೊತೆ ಊಟ ಮಾಡಿ ಶಾನೇ ದಿನಗಳಾಯ್ತು, ಅಂಗೇ ಮುದ್ದೆ ಮೆಲ್ಕ೦ಣ್ತ ಮಾತಾಡವ ಬಾ"
ಎನ್ನುತ್ತಾ ಅಂಬಿ ಬೇಡವೆಂದರೂ ಒತ್ತಾಯ ಮಾಡಿ ಕೈ ಹಿಡಿದು ಕೊಂಡು ಟೇಬಲ್ಲಿನ ಕುರ್ಚಿಗೆ ಕುಳ್ಳರಿಸಿದರು ಕುಮಾರಣ್ಣ. ಅಂಬೀಗೂ ಸುಮಾರು ದಿನ ಆಗಿತ್ತು ಮುದ್ದೆ ಬಸ್ಸಾರು ಉಣ್ಣದೆ, ಚಿಕನ್ ಮಸಾಲೆ ವಾಸನೆ ಬೇರೆ ಆಗಲೆ ಮೂಗಿಗೆ ಬಡಿದಿತ್ತು!
ಮುದ್ದೆ ಬಡಿಸುತ್ತ ಕುಮ್ಮಿ

"ಮನ್ಯಾಗೆ ಎ೦ಗುಸ್ರು ಮುದ್ದೆ ಮಾಡ್ತವ್ರ?"
ಕುಮಾರು ಸುಮ್ಮನೆ ಎನ್ ಕ್ವಯಿರಿ ಮಾಡಿದ್ರು.
"ಯೆ..ಇಲ್ಕಣಣ್ಣೋ, ಆಸೆ ಪಟ್ಕ೦ಡು ದಿನಾ ಅಯ್ಯಂಗಾರ್ ಊಟ ಮಾಡಿ ಮಾಡಿ ಬಾಯಿ ಕೆಟ್ಟೊಗ್ಬುಟೈತೆ.." ಎನ್ನುತ್ತಾ ಒಂದೆರಡು ಚಿಕನ್ ಪೀಸ್ ಗಳನ್ನ ಹೆಚ್ಚಾಗೇ ಬಡಿಸಿಕೊಂಡರು ಅಂಬಿ.

"ಅದಿರ್ಲಿ, ಎ೦ಗೈತೆ ಮಂಗ್ಳುರಿನ್ ವೊಸಾ ಅಕ್ಕಿ"

ಹುಣುಸೆ ಮರಕ್ಕೆ ಮುಪ್ಪುಂಟೆ ಅನ್ನುವ ಧಾಟಿಯಲ್ಲಿ ಮು೦ದುವರೆಸಿದರು ಅಂಬಿ.

" ಮೆಲ್ಲುಕ್ಕೆ, ಮೆಲ್ಲುಕ್ಕೆ ಮಾತಾಡ್ ಗುರು ಅಮ್ಮಾವ್ರು ವೊರಗೆ ವೋದವರು ಇನ್ನೇನ್ ಬರೋ ವೊತ್ತಾಯ್ತು"
ಪಿಸು ಮಾತಿನಲ್ಲಂದರು ಕುಮ್ಮಿ.
ಆದರೆ ಅವೆಲ್ಲ ಮಾಮೂಲಿ ಅನ್ನೋ ಸ್ವರದಲ್ಲಿ,
"ಅಲ್ಕಣಯ್ಯ, ಅವಳ ಜೊತೆ ವೋಗೋದ್ ಹೋಯ್ತಿಯ ಸ್ವಲ್ಪ ಜನಗಳ ಕಣ್ತಪ್ಸಿ ವೋಗೋದ್ ಅಲ್ವ?"
ಅನುಭವೀ ಅಂಬಿಯ ಅಡ್ವೈಸ್.
ಈ ನನ್ಮಕ್ಳು ಸಿನೆಮಾ ಆಕ್ಟ್ರುಗಳಿಗೆ ನಮ್ಕಷ್ಟ ಎಲ್ಲಿ ಅರ್ಥ ಆಗುತ್ತೆ.... ತಡವರಿಸಿಕೊ೦ಡು,

"ಊ ಕಣಪ್ಪ, ಎಲ್ಲಾ ನೀಟಾಗಿ ಅರೆಂಜ್ ಮಾಡಿದ್ದ ನಮ್ ಏಜೆಂಟು, ಎಲ್ಲೋ ಹೆಡವಟ್ ಆಗ್ಬುಡ್ತು, ಎಲ್ಲಾ ಯಡ್ಡೀದೆ ಕಿತಾಪತಿ ಇರ್ಬೇಕು, ಅದ್ಕೆ ’ಯಡ್ಡಿ-ಸೋಭಕ್ಕನ್’ ಫೋಟೋ ವೊಡೆಯಾಕ್ಕೆ ನಮ್ಮೋರು ಕ್ಯಾಮ್ರ ಮಡಿಕ್ಕೊ೦ಡ್ ರಾತ್ರಿ -ಅಗಲು ಕಾಯ್ತಾವ್ರೆ"
ಮುಂದಿನ ರಾಜಕೀಯದ ಸುಳಿವು ಕೊಟ್ಟರು ಕುಮ್ಮಿ.
"ಅಯ್, ಅದಕ್ಕ್ಯಾಕೆ ಅಷ್ಟು ಸೀರಿಯಸ್ ಆಯ್ತೀಯ, ಹೋಗ್ಲಿ ಬುಡು, ಹೊಳ್ಳೆ ಅಕ್ಕೀನೆ ಆರ್ಸ್ಕಂಡಿದೀಯ, ಆದ್ರೆ ಇಷ್ಟ್ ಬಯಿರಂಗ ಆದ್ಮೇಲೆ ಅನಿತಕ್ಕ ಏನೂ ಅನ್ಲಿಲ್ವ?"
'ಪತ್ನಿವ್ರತಾ' ಶಿರೋಮಣಿ ಅಂಬಿಯ ಕಿರುನಗೆಯ ನೋಟ!
ಅಷ್ಟೊತ್ತಿಗೆ ಮುಂದಿನ ಬಾಗಿಲಿನ ಕಾಲಿ೦ಗ್ ಬೆಲ್ ಆಯಿತು. ಕೆಲಸದ ಆಳು ಬಾಗಿಲು ತೆಗೆಯಲು ಓಡಿದ. ಕುಮಾರಣ್ಣ ಇನ್ನು ಮಾತು ಮು೦ದುವರೆಸಕ್ಕೆ ?!....


ಕಾಮೆಂಟ್‌ಗಳಿಲ್ಲ: