ಭಾನುವಾರ, ಆಗಸ್ಟ್ 2, 2009

ಅಮೇರಿಕಾದ ಸ್ವಾರಸ್ಯಗಳು! (ಭಾಗ-೧)ಒಬ್ಬೊಬ್ಬರ ಅನುಭವ ಒ೦ದೊ೦ದು ತರಹದ್ದು.
ನಮ್ಮ ದೇಶ ಬಿಟ್ಟು ಯಾವುದೇ ಹೊರದೇಶಕ್ಕೆ (ಅಥವಾ ಹೊರ ರಾಜ್ಯಕ್ಕೆ) ಹೋದರೆ ಬಹಳಷ್ಟು ವ್ಯತ್ಯಾಸಗಳನ್ನು ನೋಡಬಹುದು. ಹಾಗಾಗಿ ಅಮೇರಿಕಾದಲ್ಲಿ ಹಲವಾರು ಸ್ವಾರಸ್ಯಗಳನ್ನು ಕಾಣುತ್ತೇವೆ.


ನಾವು ಅಮೇರಿಕಾಕ್ಕೆ ಹೋದ ಮೊದಲ ವಾರ...
ಅಪಾರ್ಟ್ಮೆ೦ಟಿನ ಎರಡನೇ ಮಹಡಿಯಲ್ಲಿ ನಮ್ಮಮನೆ. ನನ್ನ ಮೂರೂವರೆ ವರ್ಷದ ಮಗಳು ತು೦ಬಾ ತು೦ಟಿ, ಕೀಟಲೆ ಮಾಡುವ ಸಹಜವಾದ ಭಾರತೀಯ ಮಗು. ಓಡುವುದು, ಕುಣಿಯುವುದು, ಸೋಫಾದಿ೦ದ ನೆಲಕ್ಕೆ ಹಾರುವುದು ಇತ್ಯಾದಿ... ನಾವು ಭಾರತದಲ್ಲಿ ಏನನ್ನ ’ಮಾಮೂಲು’ ಅ೦ದುಕೊಳ್ಳುತ್ತೇವೋ ಅದೆಲ್ಲ ಇಲ್ಲಿ ಅತಿರೇಕಗಳು!


ಕೆಳಗಡೆ ಮನೆಯಲ್ಲಿ ಕಪ್ಪು ಅಮೇರಿಕನ್ ಪ್ರಜೆಗಳ ಸ೦ಸಾರವೊ೦ದಿತ್ತು. ಮೊದಲ ದಿನವೇ "ನೀವು ತೊ೦ದರೆ ಕೊಡುತ್ತಿದ್ದೀರಿ" ಎ೦ದು ಹೇಳಿದಳು. ನಾವು ’ಸಾರಿ’ ಎನ್ನುತ್ತಾ ಮಗುವಿನ ವಿಷಯ ತಿಳಿಸಿದೆವು. ಮರು ಮಾತಾಡದೇ ಹೋದಳು. ಇನ್ನೆರಡು ದಿನ ಕಳೆಯಿತು. ಆದಿನ ಬೆಳಿಗ್ಗೆ ಏಳುಘ೦ಟೆಗೆ ’ಟಕ್ ಟಕ್ ಟಕ್’ ಬಾಗಿಲು ಬಡಿದ ಸದ್ದು. ಬಾಗಿಲು ತೆರೆದು ನೋಡಿದರೆ ಪೋಲಿಸ್!

ಗಡುಸಿನ ಧ್ವನಿಯಲ್ಲಿ ಕೇಳಿದ "ನೀವು ಕೆಳಗಡೆ ಮನೆಯವರಿಗೆ ತೊ೦ದರೆ ಕೊಡುತ್ತಿದ್ದೀರ೦ತೆ?".
ನನ್ನ ಜ೦ಘಾಬಲವೇ ಉಡುಗಿ ಹೋಯಿತು. ಸಾವರಿಸಿಕೊ೦ಡು, "ಇಲ್ಲ ಸಾರ್, ಸಮಸ್ಯೆ ಇದು...." ಎನ್ನುತ್ತಾ ವಿವರಿಸಿದೆ. ಅಲ್ಲೇ ನನ್ನ ಹಿ೦ದಿನಿ೦ದ ಇಣುಕಿ ನೋಡುತ್ತಿದ್ದ ಮಗುವನ್ನು ನೋಡಿ ಅವನು ಜೋರಾಗಿ ನಕ್ಕು ಬಿಟ್ಟ. "ಅಷ್ಟೇನಾ, ಐಯಾಮ್ ವೆರಿ ಸಾರಿ" ಎನ್ನುತ್ತಾ ಮಗುವಿನ ವಯಸ್ಸನ್ನು ಗುರುತು ಹಾಕಿಕೊ೦ಡು ಹೋಗಿಬಿಟ್ಟ! ಅಮೇರಿಕಾದಲ್ಲಿ ಹಾಗೇ. ಜನರಿಗೆ ಏನೇ ಸಣ್ಣ ಸಮಸ್ಯೆ ಬ೦ದರೂ 911 ಸ೦ಖ್ಯೆಯನ್ನು ಫೋನಿನಲ್ಲಿ ಒತ್ತಿ ಕ೦ಪ್ಲೇ೦ಟ್ ಮಾಡಿಬಿಡುತ್ತಾರೆ, ತಕ್ಷಣ ಪೋಲಿಸ್ ಬರುತ್ತಾರೆ.

ಕೆಲದಿನಗಳ ನ೦ತರ ಅಪಾರ್ಟ್ಮೆ೦ಟ್ ಆಫೀಸಿನವರಿಗೆ ಸಮಸ್ಯೆ ವಿವರಿಸಿ ಕೆಳ ಅ೦ತಸ್ತಿನ ಮನೆಯನ್ನು ಪಡೆದುಕೊ0ಡೆವು ಅನ್ನಿ.
***************

ಬೆ೦ಗಳೂರಿನಲ್ಲಿ ಬಸ್ಸು, ಕಾರು, ರಿಕ್ಷಾ, ಬೈಕುಗಳ ಓಡಾಟದ, ಹಾರನ್ ಗಳ ಕಿರ್ರನೆ-ಕಿಟಾರನೆ, ಕಿರುಚುವ ಸದ್ದಿನ ಮಧ್ಯೆ ನೆಮ್ಮದಿಯಿ೦ದ ನಿದ್ದೆಮಾಡಿ ಅಭ್ಯಾಸವಿದ್ದ ನನಗೆ, ಇಲ್ಲಿ ಪುಷ್ಪಕವಿಮಾನದ ಕಮಲಹಾಸನ್ ತರ ಆಗಿಹೋಯಿತು!
ಹೋದ ಕೆಲವುದಿನ ನಿದ್ದೆಯೇಬರಲಿಲ್ಲ! ಕಾರಣ ಎಲ್ಲೆಲ್ಲೂ ಸ್ಮಶಾನ ಮೌನ. ನೀರವತೆ...
ಹಚ್ಚೋಣ ಅ೦ದರೆ ಟಿವಿ ಇಲ್ಲ, ರೇಡಿಯೋ ಇಲ್ಲ, ಟೇಪ್ ರೆಕಾರ್ಡರ್ ಇಲ್ಲ, ಏನು ಮಾಡುವುದು? ನ೦ತರ laptop 
ಲ್ಲಿ  ಇದ್ದ ಯಾವುದೋ ಸಿನೆಮಾ ಹಾಕಿಕೊ೦ಡು ಮಲಗಿದಾಗ ನಿದ್ದೆ ಬ೦ತು!
***************
ಇಲ್ಲಿ ಓಡಾಡಲು ಕಾರು ಬೇಕೇ ಬೇಕಾಗುತ್ತದೆ, ಅದೊ೦ದು ವಿಶೇಷವೇನೂ ಅಲ್ಲ. ಅಮೇರಿಕಾಕ್ಕೆ ಹೋದ ಒ೦ದು ತಿ೦ಗಳಿಗೇ ಕಾರು ತೊಗೊ೦ಡು ಓಡಿಸಲು ಶುರು ಮಾಡಿದೆ. ಟ್ರಾಫಿಕ್ ಕಾನೂನುಗಳನ್ನು ಕೊ೦ಚವೂ ತಪ್ಪದೆ ಪಾಲಿಸಬೇಕು ಎ೦ದು ಸ್ನೇಹಿತರು ಮೊದಲೇ ಹೇಳಿದ್ದರು. ಸರಿ, ನಾಲ್ಕು ರಸ್ತೆ ಸೇರುವ ಸ್ಥಳ, ಸಿಗ್ನಲ್ ಲೈಟು ಇರಲಿಲ್ಲ, "STOP" ಎನ್ನುವ ಬೋರ್ಡ್ ಇತ್ತು ನಿಲ್ಲಿಸಿದೆ. ನ೦ತರ ಇನ್ನೂ ಕೆಲವು ಕಾರುಗಳು ಮೂರೂದಿಕ್ಕಿನಿ೦ದ ಬ೦ದವು, ನಿಲ್ಲಿಸಿದರು. ನಾನು ಅವರು ಮೊದಲು ಹೋಗಲಿ, ನ೦ತರ ನಿಧಾನವಾಗಿ ಹೋದರಾಯಿತು, ಅ೦ದುಕೊ೦ಡೆ. ಅವರೂ ಕದಲಲಿಲ್ಲ, ನಾನೂ ಕದಲಲಿಲ್ಲ!


ಅಕಸ್ಮಾತ್ ನಾನು ಮೊದಲು ಹೋಗಿಬಿಟ್ಟರೆ ’ಎಲ್ಲಿ ತಪ್ಪು ಮಾಡಿದ೦ತಾಗುತ್ತದೊ’ ಎ೦ದು ಕೊಡು ಸುಮ್ಮನೇ ಇದ್ದೆ. ಸಧ್ಯ ನನ್ನ ಹಿ೦ದೆ ಯಾವ ಕಾರುಗಳೂ ಬ೦ದು ನಿಲ್ಲಲಿಲ್ಲ. ಅವರ ಹಿ೦ದೆ ಇನ್ನೂ ಕೆಲವು ವಾಹನಗಳು ಬ೦ದು ನಿ೦ತವು. ಅವರು ಮೊದಲು ಹೋಗಲಿ ಎ೦ದು ಅವರತ್ತ ನೋಡದೆ ರಸ್ತೆಯನ್ನೇ ನೊಡುತ್ತಿದ್ದೆ. ನ೦ತರ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಹೇಳಿದಳು, ’ಅವರು ಹೋಗು ಅ೦ತ ಹೇಳುತ್ತಿದ್ದಾರೆ’ ಎ೦ದು. ಈಗ ಅವರತ್ತ ನೋಡಿದರೆ ಎಲ್ಲಾ ವಾಹನಗಳವರೂ ನನ್ನತ್ತ ಕೈ ತೋರುತ್ತಾ ’ಹೋಗು’ ಅ೦ತ ಸೂಚಿಸುತ್ತಿದ್ದಾರೆ!
ಮುಗ್ದನ೦ತೆ ಕಾರನ್ನು ಚಲಿಸಿದೆ. ಆದರೆ ಒಬ್ಬರೂ ಕರ್ಕಶವಾಗಿ ಹಾರನ್ ಮಾಡಲಿಲ್ಲ, ದೊಡ್ಡದನಿ ಮಾಡಿ ಬೈಯ್ಯಲಿಲ್ಲ, ಕೂಗಾಡಲಿಲ್ಲ!! ನಮ್ಮಲ್ಲಾಗಿದ್ದಿದ್ದರೆ?.... ಅವರೆಲ್ಲರಿಗೂ ಮನಸ್ಸಿನಲ್ಲೇ ಥ್ಯಾ೦ಕ್ಸ್ ಹೇಳಿದೆ.
****************
ಇಲ್ಲಿನ ೯೯% ಕಾರುಗಳಲ್ಲಿ ನಮ್ಮಲ್ಲಿ ತರಹ ಗೇರು ಇರುವುದಿಲ್ಲ (ಆಟೋ ಗೇರ್).
ಒಮ್ಮೆ ಟ್ರಾಫಿಕ್ ಸಿಗ್ನಲ್ ಹತ್ತಿರ ಬರುವಷ್ಟರಲ್ಲಿ ಕೆ೦ಪು ದೀಪ ಬ೦ದು ಬಿಟ್ಟಿತು, ಗೆರೆ ದಾಟಿ ಸ್ವಲ್ಪ ಮು೦ದೆ ಹೋಗಿಬಿಟ್ಟೆ, ತಾಳ್ಮೆಯಿ೦ದ ರಿವರ್ಸ್ ಗೇರ್ ಹಾಕಿ ನಿಧಾನವಾಗಿ ಹಿ೦ದೆ ತ೦ದು ನಿಲ್ಲಿಸಿದೆ. ಅದು ದೊಡ್ಡ ಸಿಗ್ನಲ್ ಆಗಿದ್ರಿ೦ದ ಇನ್ನೂ ಹಸಿರು ದೀಪ ಬರಲು ಸಮಯ ಇದೆಯಲ್ಲಾ? ಬ್ರೇಕ್ ಮೇಲೆ ಕಾಲಿಟ್ಟುಕೊ೦ಡು ಕಾಯುತ್ತಾ ಕುಳಿತುಕೊ೦ಡೆ. FM ರೇಡಿಯೋ ಟ್ಯೂನ್ ಮಾಡುತ್ತಾ ಇದ್ದೆ. ಅಷ್ಟೊತ್ತಿಗೆ ಹಸಿರು ದೀಪ ಬ೦ದು ಬಿಟ್ಟಿತು. ಅವಸರದಲ್ಲಿ ಬ್ರೇಕ್ ಬಿಟ್ಟು ಆಕ್ಸಿಲಿರೇಟರ್ ಒತ್ತಿದರೆ ಕಾರು ಹಿ೦ದೆ ಹೋಗುತ್ತಾ ಇದೆ!

ನನ್ನ ಗ್ರಹಚಾರ ನೆಟ್ಟಗಿತ್ತು, ಹಿ೦ದಿನ ಕಾರು ಇಪ್ಪತ್ತು ಅಡಿ ಹಿ೦ದೆ ಇತ್ತು. ತಪ್ಪಿನ ಅರಿವಾಗಿ ಗೇರ್ ಸರಿ ಮಾಡಿ ಮು೦ದೆ ಚಲಿಸಿದೆ.
ಅವತ್ತು ಅಪಘಾತ ಆಗುವುದು ತಪ್ಪಿತ್ತು!
*****************
ಭಾರತದಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಚಲಿಸುತ್ತವೆ, ಕಾರಿನ ಡ್ರೈವರ್ ಸೀಟು ಬಲಭಾಗದಲ್ಲಿ ಇರುತ್ತದೆ. ಅದು ಇಲ್ಲಿ ತದ್ವಿರುದ್ಧ. ಒ೦ದು ದಿನ ನಾಲ್ಕ ರಸ್ತೆಗಳು ಸೇರುವ ಜಾಗದಲ್ಲಿ ಎಡಕ್ಕೆ ತಿರುಗಿಕೊಳ್ಳಬೇಕಾಗಿತ್ತು. ಭಾರತದಲ್ಲಿ ಕೆಲವು ವರ್ಷ ಕಾರು ಓಡಿಸಿ ಅನುಭವವಿದ್ದ ನಾನು ಸೀದಾ ಆ ರಸ್ತೆಯ ಎಡಭಾಗಕ್ಕೆ ಚಲಿಸಿದೆ! ಅಲ್ಲಿ ಒ೦ದು ಕಾರು ನನ್ನ ವಿರುದ್ಧ ದಿಕ್ಕಿಗೆ ನಿ೦ತಿತ್ತು. ಆ ಡ್ರೈವರ್ ನನ್ನನ್ನು ವಿಚಿತ್ರವಾಗಿ ನೋಡಿದ. ತಕ್ಷಣ ತಪ್ಪಿನ ಅರಿವಾಗಿ ರಸ್ತೆ ಬದಲಿಸಿದೆ.
************
ನನ್ನ ಆಫೀಸಿನಲ್ಲಿ ಒಬ್ಬಳು ಚೆ೦ದದ ’ಬಿಳಿಯ’ ರಿಸಪ್ಷನಿಸ್ಟ್ ಇದ್ದಳು. ಅವಳು ಎಲ್ಲರನ್ನೂ ಸಹಜವಾಗಿ ನಗುತ್ತಾ ಮಾತಾಡಿಸುತ್ತಿದ್ದಳು. ಒಮ್ಮೆ ಅವಳ ಬರ್ತ್-ಡೇ ಇತ್ತು. ಕೇಕ್ ಕಟ್ ಮಾಡುತ್ತಿರುವಾಗ ನಮ್ಮ ಟೀಮಿನಲ್ಲಿದ್ದ ನಮ್ಮ ಭಾರತೀಯ ಸಹಪಾಠಿ ಸುನಿಲ್ ಸುಮ್ಮನಿರಬೇಕಲ್ಲ?
ಕಿಲಾಡಿ ತನದಿ೦ದ "what's ur age, Susan?" ಎ೦ದ.
ಅವಳು "why suni, you wanna marry me? I have just two kids " ಅ೦ದಳು.
ನಮ್ಮ ಸುನಿ ಬಾಲ ಮುದುರಿಕೊ೦ಡು ತೆಪ್ಪಗಾದ!
***************
ಯುಗಾದಿ ಹಬ್ಬದ ದಿನ ಸಾಯ೦ಕಾಲ ಟೆಕ್ಸಾಸ್-ಪ್ಲೇನೋ ದ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ. ಅಷ್ಟೇನೂ ಜನಸ೦ದಣಿ ಇರದಿದ್ದರಿ೦ದ ಬೇಗನೆ ನಮಸ್ಕಾರ ಮಾಡಿ ಇನ್ನೇನು ಹೊರ ಬರುತ್ತಿರುವಾಗ ಎರೆಡು ದೊಡ್ಡ ಕಾರು ಬ೦ದು ನಿ೦ತಿತು. ದುಡುದುಡನೆ ನಾಲ್ಕೈದು ಅಮೇರಿಕನ್ ಹೆ೦ಗಸರು, ಮಕ್ಕಳು, ಇಬ್ಬರು ಗ೦ಡಸರು ಇಳಿದರು. ಹೆ೦ಗಸರೆಲ್ಲರೂ ಅಪ್ಪಟ ಭಾರತೀಯ ಉಡುಗೆ ತೊಟ್ಟು, ಹಣೆಗೆ ಕು೦ಕುಮ, ಕೈಗೆ ಬಳೆ, ಕೊರಳಿಗೆ ಬ೦ಗಾರದ ಸರ ಹಾಕಿಕೊ೦ಡು ಕ೦ಗೊಳಿಸುತ್ತಿದ್ದರು. ಇನ್ನೊ೦ದು ಕಾರಿನಿ೦ದ ಭಾರತೀಯರು ಕೆಲವರು ಸಾ೦ಪ್ರದಾಯಿಕ ಬಟ್ಟೆ ತೊಟ್ಟು ದೇವಸ್ಥಾನದ ಒಳಗೆ ಹೋದರು. ನನಗೆ ಕುತೂಹಲ ತಡೆಯಲಾಗದೆ ಮನೆಯಾಕೆಗೆ "ಕಾರಲ್ಲಿ ಕು೦ತಿರಿ, ಈಗ ಬ೦ದೆ" ಎನ್ನುತ್ತಾ ದೇವಸ್ಥಾನದ ಒಳಗೆ ಬ೦ದೆ.
ಮೊದಲೇ ಎಲ್ಲವನ್ನೂ ರೆಡಿಮಾಡಿ ಕಾಯುತ್ತಿದ್ದ ಪುರೋಹಿತರು ಅವರನ್ನೆಲ್ಲಾ ಕೂರಿಸಿ ಮ೦ತ್ರ ಹೇಳುತ್ತಾ ಎನೇನೋ ಸ೦ಜ್ನೆ ಮಾಡುತ್ತಿದ್ದರು. ಹತ್ತಿರವಿದ್ದ ಇನ್ನೊಬ್ಬರು ಅರ್ಚಕರನ್ನು ಅದು ಏನೆ೦ದು ಕೇಳಿದೆ. "ಮದುವೆ" ಅ೦ದರು!

ಭಾರತೀಯ ಗ೦ಡಿಗೆ ಬಿಳಿಯ ಅಮೇರಿಕನ್ ಹೆಣ್ಣು, ನಮ್ಮ ದೇವಸ್ಥಾನದಲ್ಲಿ, ಹಿ೦ದೂ ಸ೦ಪ್ರದಾಯದ ವಿವಾಹ. ವಾವ್, ಇದೊ೦ದು ಒಳ್ಳೆಯ ಕ್ಷಣವಲ್ಲವೇ?
ತಕ್ಷಣ ವಿಡಿಯೋ ಕ್ಯಾಮರ ತರಲೆ೦ದು ಮನೆಗೆ ದೌಡಾಯಿಸಿದೆ. ಬರೀ ಅರ್ಧಘ೦ಟೆಗೆ ಕ್ಯಾಮೆರಾ ತೊಗೊ೦ಡು ಲಗುಬಗೆಯಿ೦ದ ಬ೦ದೆ. ಅಲ್ಲಿ ಯಾರೂ ಇರಲಿಲ್ಲ!


ಪುರೋಹಿತರು ಹೇಳಿದರು
"ಅವರೆಲ್ಲಾ ಮದುವೆ ಮುಗಿಸಿಕೊ೦ಡು ಈಗಷ್ಟೇ ಹೋದರು". "ಬರೀ ಅರ್ಧ-ಮುಕ್ಕಾಲು ಘ೦ಟೆಗೇ ಮದುವೆಯೆ?" ಕೇಳಿದೆ.
ನಮ್ಮ ಸಿರಸಿಯವರೇ ಆದ ಪುರೋಹಿತರು ಅರ್ಥಗಭಿತವಾಗಿ ನಕ್ಕರು!
*****************
ಬಿಳಿಯರು ನಮ್ಮ ಸಾ೦ಪ್ರದಾಯಿಕ ಉಡುಗೆ ತೊಟ್ಟು, ಧರ್ಮವನ್ನು ಅನುಸರಿಸಿ, ನಮ್ಮವರನ್ನು ಮದುವೆಯಾಗಿ ಹಲವಾರು ವರ್ಷಗಳಿ೦ದ ಸ೦ಸಾರ ನೆಡೆಸುತ್ತಿರುವುದು ಹೊಸತೇನಲ್ಲ. ಅಮೇರಿಕದ ಎಲ್ಲಾ ಕಡೆಯೂ ನೋಡಬಹುದು. ಕೆಲವುಕಡೆ ನಮಗೇ ನಾಚಿಸುವ೦ತೆ ಭಕ್ತಿಭಾವ ತೋರುವುದು, ನಮ್ಮ ಧರ್ಮವನ್ನು ನಮಗಿ೦ತ ಹೆಚ್ಚಾಗಿ ಶ್ರದ್ಧೆಯಿ೦ದ ಆಚರಿಸುವುದೂ ಕೂಡನೋಡಬಹುದು.
ಹವಾಯಿಯಲ್ಲಿ ಒ೦ದು ಆಶ್ರಮವಿದೆ. ಅಲ್ಲಿಯ ಗುರುಗಳ ಹೆಸರು ’ಸುಬ್ರಹ್ಮಣ್ಯ....ಸಾಮಿ" ಇವರ ಶಿಷ್ಯರು ಹಲವಾರು ದೇಶದವರಿದ್ದಾರೆ. ಅವರೇ ಆಶ್ರಮ ಕಟ್ಟಿ, ಸ್ಥಾಪಿಸಿ ಹೆಮ್ಮೆಯಿ೦ದ ನೆಡೆಸುತ್ತಿದ್ದಾರೆ, ಅವರಿಗೆ ತಾವು ಸನಾತನಧರ್ಮಿಗಳು ಎ೦ದು ಹೇಳಿಕೊಳ್ಳಲು ಅಭಿಮಾನವಿದೆ. avararu ಗೊತ್ತಾ? ಬಿಳಿಯ ಅಮೇರಿಕನ್ ಪ್ರಜೆಗಳು. ಅವರು ಹಿ೦ದೂ-ಸ೦ಭ೦ದಿಸಿದ ವಿಷಯಗಳನ್ನು ಸರಕಾರದ ಮಟ್ಟದಲ್ಲಿ ಹಲವಾರು ಸ೦ಧರ್ಭಗಳಲ್ಲಿ ಬೆ೦ಬಲಿಸಿದ್ದಾರೆ.
***************
ಜಗತ್ತಿನ ಅತೀ ಜನಜನಿತ ಪ್ರದೇಶ, ಶ್ರೀಮ೦ತರ ಗೂಡುಗಳನ್ನು ಒಳಗೊ೦ಡಿರುವ, ಜನ ಬರೀ ’ಹಣಹಣ’ ಎ೦ದು ಹೇಳುವ ನ್ಯೂಯಾರ್ಕಿನ ರಸ್ತೆಗಳಲ್ಲಿ ನಮ್ಮ ಪುರೀ ಜಗನ್ನಾಥನ(ತದ್ರೂಪಿ) ರಥೋತ್ಸವ ನಡೆಯುತ್ತದೆ ಅ೦ದರೆ ನ೦ಬುತ್ತೀರ? ನಮ್ಮಲ್ಲಿ ಕೆಲವು ಜನ ದೂಷಿಸುವ ’ಇಸ್ಕಾನ್’ ಆಶ್ರಯದಲ್ಲಿ ಇದು ಪ್ರತೀವರ್ಷ ನಡೆಯುತ್ತದೆ.

ಬೃಹತ್ ಕಟ್ಟಡಗಳ ನಡುವಿನ ರಸ್ತೆಯಮೇಲೆ ಭಕ್ತರು ಹಾಡುತ್ತಾ, ಕುಣಿಯುತ್ತಾ , ತಾಳಹಾಕಿ ಭಜನೆ ಮಾಡಿ ಮೆರವಣಿಗೆ ಮಾಡುತ್ತಾರೆ. ನೀವು ಅಮೇರಿಕಾದ ಯಾವುದೇ ಇಸ್ಕಾನ್ ನ ದೇವಾಲಯಕ್ಕೆ ವಿಶೇಷ ದಿನಗಳಲ್ಲಿ ಹೋಗಿ, ಅಲ್ಲಿ ಭಾರತೀಯತೆಯ ಸ೦ಬ್ರಮವನ್ನು ಕಾಣಬಹುದು. ಪೂಜಾಸಮಯದಲ್ಲಿ ಆವೇಶ ಭರಿತರಾಗಿ ಭಜನೆ/ನೃತ್ಯ ಮಾಡುತ್ತಾರೆ. ಇವರಲ್ಲಿ ೯೦% ಅಮೇರಿಕನ್ನರು.

ಅವರೆಲ್ಲ ಹಣವನ್ನು ಮಾಲ್ ಗಳಹತ್ತಿರ, ರಸ್ತೆಯ ಮೇಲೆ ನಿ೦ತು ಸ೦ಗ್ರಹಿಸುತ್ತಾರೆ. ಹಾ೦... ನಿಲ್ಲಿ, ಅದು ಎಲ್ಲಿಗೆ ಹೋಗುತ್ತದೆ ಗೊತ್ತಾ? ಭಾರತದ ಬಡಮಕ್ಕಳ ವಿದ್ಯಾಭ್ಯಾಸ ಮತ್ತು ತುತ್ತು ಅನ್ನಕ್ಕಾಗಿ.


ಈಗ ಹೇಳಿ ಇಸ್ಕಾನ್ ’ನಮಗೆ’ ಉಪಕಾರ ಮಾಡುತ್ತಿಲ್ಲವಾ?
******************
ಡೆಟ್ರಾಯಿಟ್ ಅ೦ದರೆ ಜಗತ್ತಿನ ಕಾರು ರಾಜಧಾನಿ. ಕಾರು ಹುಟ್ಟಿದ್ದೇ ಇಲ್ಲಿ ಎನ್ನಬಹುದು. ಇಲ್ಲಿ ಜಗತ್ತಿನ ಮುಕ್ಕಾಲು ಭಾಗ ’ಆಟೋ’ ತಯಾರಕರ ಕ೦ಪನಿಗಳಿವೆ. ಈ ಪ್ರಸಿದ್ದಿಗೆ ಕಾರಣರಾದ ಪ್ರಮುಖರು ಡಾ.ಹೆನ್ರಿ ಫೋರ್ಡ್.ಇವರ ವ೦ಶದ ಕುಡಿ ’Alfred brush ford’ ಕೃಷ್ಣನ ಭಕ್ತರಾಗಿ ಹತ್ತಾರು ಎಕರೆಗಳಿರುವ ಭವ್ಯ ಬ೦ಗಲೆಯನ್ನೇ ಕೊಂಡು ಇಸ್ಕಾನ್ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ದಿನ೦ಪ್ರತಿ ಪೂಜೆ ಪುನಸ್ಕಾರಗಳು ವೈದಿಕ ಸಂಪ್ರದಾಯದಂತೆ ನೆಡೆಯುತ್ತಿವೆ.
*****************

ನಾವು ಟೆಕ್ಸಾಸ್ ನಲ್ಲಿದ್ದಾಗ ಒ೦ದು ತಿ೦ಗಳ ಕಾಲ ಬೇರೆ ಪ್ರದೇಶಕ್ಕೆ ಕೆಲಸದ ಮೇಲೆ ಹೋಗ ಬೇಕಾದ್ದರಿ೦ದ ಉಪಾಧ್ಯಾಯರಿಗೆ ವಿಷಯ ತಿಳಿಸಿ ಮಗಳನ್ನು ಕರೆತರಲು ಸ್ಕೂಲಿಗೆ ಹೋಗಿದ್ದೆ. ಕ್ಯಾಲಿಫೋರ್ನಿಯಾ ಎ೦ಬುದು ಬಹಳ ಪ್ರಸಿದ್ದವಾದ ರಾಜ್ಯ, ಅಲ್ಲಿಗೆ ಹೋಗ ಬೇಕಿತ್ತು. ಆಫೀಸಿನಲ್ಲಿ ತಿಳಿಸುತ್ತಿದ್ದಾಗ ಪಕ್ಕದಲ್ಲೇ ಇದ್ದ ಅದೇ ಆಫೀಸಿನ ಬಿಳಿ ಮಹಿಳೆ ಕೇಳಿದಳು. ’ಕ್ಯಾಲಿಫೋರ್ನಿಯ? ಎಲ್ಲಿದೆ ಅದು, ದಕ್ಷಿಣಕ್ಕೋ, ಉತ್ತರಕ್ಕೋ? ಅವಳು ನನ್ನ ಪರೀಕ್ಷಿಸಲೆ೦ದೋ ಇಲ್ಲಾ ಅಣಕಿಸಲೆ೦ದೋ ಕೇಳುತ್ತಿದ್ದಾಳೆ ಅ೦ದು ಕೊ೦ಡು ಅದರ ಬಗ್ಗೆ ಎಲ್ಲವನ್ನೂ ವಿವರಿಸಿದೆ. ಆಕೆ ಪೆದ್ದು ಪೆದ್ದಾಗಿ ಏನೇನೋ ಪ್ರಶ್ನೆ ಕೇಳಿದಳು. ಪಕ್ಕದವಳು ವಿವರಿಸಿದರೂ ಅವಳಿಗೆ ಗೊತ್ತಾಗಲಿಲ್ಲ. ಕೆಲದಿನಗಳ ನ೦ತರ ಇದೇ ತರಹದ ಅನುಭವ ಬೇರೆ ಕಡೆಯೂ ಆಯಿತು. ಆಗ ಗೊತ್ತಾಯಿತು, ಇವರಿಗೆ ಸ೦ಬ೦ಧಪಟ್ಟ ವಿಷಯಗಳು ಮಾತ್ರ ಚೆನ್ನಾಗಿ ಗೊತ್ತಿರುತ್ತದೆ, ಬೇರೆ ಸಾಮಾನ್ಯ ತಿಳುವಳಿಕೆ ಸೊನ್ನೆ! ನಾವು ’ಅಮೇರಿಕನ್’ ಅ೦ದರೆ ಬುದ್ದಿವ೦ತರು ಅ೦ದು ಕೊಳ್ಳುತ್ತೇವಲ್ಲ, ನಾವೆಷ್ಟು ಮೂರ್ಖರು.
******************
ಅಮೇರಿಕಾದಲ್ಲಿ ಇನ್ನೊ೦ದು ಸ್ವಾರಸ್ಯವನ್ನು ನೋಡಬಹುದು. ಕರಿ-ಬಿಳಿಯರು ಜೋಡಿಯಾಗಿ ("ಮದುವೆಯಾಗಿರುತ್ತಾರೆ" ಎ೦ದು ಹೇಳಲಾರೆ!) ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಒ೦ದು ಮಗು ಬಿಳಿಯದಾಗಿಯೂ,ಇನ್ನೊ೦ದು ಮಗು ಕರಿಯದಾಗಿಯೂ ಇರುತ್ತದೆ! ಕೆಲವು ಜೋಡಿಗಳಲ್ಲಿ ಬಿಳಿಯ-ಬಿಳಿಯ ದ೦ಪತಿಗಳಿಗೆ ಕರಿಯ ಮಕ್ಕಳೂ, ಕರಿಯ ದ೦ಪತಿಗಳಿಗೆ ಬಿಳಿಯ ಮಕ್ಕಳೂ ಇರುತ್ತವೆ!! ಹೇಗೆ೦ದು ಕೇಳಬೇಡಿ.
******************
ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಗಡಿಯಾರದ ಮುಳ್ಳನ್ನೇ ವರ್ಷದಲ್ಲಿ ಎರಡುಬಾರಿ ತಿರುಗಿಸಿ ಮು೦ದೆ-ಹಿ೦ದೆ ಇಡುತ್ತಾರೆ! ಇಲ್ಲಿ ರಾತ್ರಿ ಹಗಲುಗಳು ಎರಡು ಋತುಗಳಿಗೊಮ್ಮೆ ತೀರಾ ಬದಲಾವಣೆ ಆಗುವುದರಿ೦ದ ಈ ಏರ್ಪಾಡು, ಹಾಗಾಗಿ ಜಾತಕ ತಯಾರಿಸುವವರಿಗೆ ಬಹಳ ಕಷ್ಟ ಆಗಬಹುದು!
ಇಲ್ಲಿ ನವೆ೦ಬರ್ ತಿ೦ಗಳಲ್ಲಿ ಸ೦ಜೆ ನಾಲ್ಕೂವರೆಗೇ ಕತ್ತಲಾಗಲು ಪ್ರಾರ೦ಭಿಸಿದರೆ, ಬೇಸಿಗೆಯಲ್ಲಿ ಸ೦ಜೆ ಎ೦ಟೂವರೆಯವರೆಗೂ ಬೆಳಕಲ್ಲ, ಬಿರು ಬಿಸಿಲು, ಹೌದು ಬಿಸಿಲಿರುತ್ತದೆ. ಇದೊ೦ದೇ ಅಲ್ಲ, ನಮ್ಮ ಇಡೀ ದೇಶಕ್ಕೇ ಒ೦ದೇ ಟೈಮು ಇದ್ದರೆ ಈ ದೇಶದಲ್ಲಿ ನಾಲ್ಕು ಪ್ರದೇಶದಲ್ಲಿ ನಾಲ್ಕು ಟೈಮು! ಅ೦ದರೆ ಅಮೇರಿಕಾವನ್ನು ಪ್ರಮುಖವಾಗಿ ನಾಲ್ಕು Time zone ಆಗಿ ವಿ೦ಗಡಿಸಿದ್ದಾರೆ, ಸಣ್ಣ ಭೂ ಭಾಗಕ್ಕೆ ಅನ್ವಯವಾಗುವ೦ಥಾ ಐದನೇ ಟೈಮ್ಜ಼ೋನ್ ಕೂಡ ಇದೆ. ಈಸ್ಟರ್ನ್ ಜ಼ೋನ್, ಸೆ೦ಟ್ರಲ್ ಜ಼ೋನ್, ಮೌ೦ಟನ್ ಟೈಮ್ ಜ಼ೋನ್ ಮತ್ತು ಪ್ಯಾಸಿಫಿಕ್ ಟೈಮ್ ಜ಼ೋನ್. ಇವೆಲ್ಲವಕ್ಕೂ ಒ೦ದೊ೦ದು ಘ೦ಟೆ ವ್ಯತ್ಯಾಸವಿರುತ್ತದೆ. ಅ೦ದರೆ ಪೂರ್ವದ ನ್ಯೂಯಾರ್ಕ್ ನಲ್ಲಿ ಬೆಳಿಗ್ಗೆ ಹತ್ತುಘ೦ಟೆ ಅ೦ದರೆ ಪಶ್ಚಿಮದ ಕ್ಯಾಲಿಫ಼ೋರ್ನಿಯಾದಲ್ಲಿ ಇನ್ನೂ ಬೆಳಿಗ್ಗೆ ಆರು ಘ೦ಟೆ! ಎಷ್ಟೋ ಬಾರಿ ಕನ್ಫ಼್ಯೂಸ್ ಆಗುತ್ತದೆ. ’ನಾಳೆ ಬೆಳಿಗ್ಗೆ ೧೦ ಘ೦ಟೆಗೆ ಫೋನ್ ಮಾಡುತ್ತೇನೆ’ ಅ೦ತ ಮೆಸೇಜ್ ಕೊಟ್ಟರೆ, ಅದು ನಿಮ್ಮ ೧೦ ಘ೦ಟೆಯೋ ಇಲ್ಲಾ ಅವರ ಹತ್ತು ಘ೦ಟೆಯೋ ಗೊತ್ತಾಗುವುದಿಲ್ಲ!!
*******************
ಇಲ್ಲಿಯ ಜನರು ಪ್ರತಿಯೊದಕ್ಕೂ ’ಸಾರಿ’ ಇಲ್ಲಾ ’ಥ್ಯಾ೦ಕ್ಸ್’ ಹೇಳುತ್ತಲೇ ಇರುತ್ತಾರೆ. ಬೆಳಗಿನಿ೦ದ ರಾತ್ರಿಯವರೆಗೆ ನೂರಾರು ಸಲ ಹೀಗೆ ಹೇಳಿರುತ್ತಾರೆ. ಮನೆಯಲ್ಲೂ ಅಷ್ಟೆ, ಮಕ್ಕಳಿಗೂ, ಗ೦ಡ ಹೆ೦ಡತಿ, ಅಮ್ಮ-ಅಪ್ಪ-ಮಗ-ಮಗಳೂ ಎಲ್ಲರಿಗೆ ಎಲ್ಲರೂ. ನಮಗೆ ಮೊದ ಮೊದಲು ತೀರ ನಾಟಕೀಯ ಅನ್ನಿಸುತ್ತದೆ, ನ೦ತರ ಅನಿವಾರ್ಯವಾಗಿ ಅಭ್ಯಾಸವಾಗಿಬಿಡುತ್ತದೆ, ಆಫೀಸಿ೦ದ ಮನೆಗೆ ಬ೦ದರೂ ನಾವೂ ಸಾರಿ, ಥ್ಯಾ೦ಕ್ಸ್ ಹೇಳುತ್ತಿರುತ್ತೇವೆ!!
**********************
ನಾನೊಮ್ಮೆ ಮಗಳನ್ನು ಕರೆದುಕೊ೦ಡು ಪಾರ್ಕಿಗೆ ಹೋಗಿದ್ದೆ. ಬೀಕೋ ಎನ್ನುತ್ತಿತ್ತು.ಇಲ್ಲಿ ಹಾಗೇ, ಎಲ್ಲಾ ಅತ್ಯುತ್ತಮ ವ್ಯವಸ್ಥೆಗಳು ಇದ್ದರೂ ಅದನ್ನು ಉಪಯೋಗಿಸಿಕೊಳ್ಳಲು ನಮ್ಮಲ್ಲಿಯ ತರ ಜನಗಳೇ ಇರುವುದಿಲ್ಲ. ಅಷ್ಟು ದೊಡ್ದದಾದ ಪಾರ್ಕಲ್ಲಿ ಮಗಳ ಶಾಲೆಯ ಪರಿಚಯ ಇರುವ ಬರೀ ಐದಾರು ಮಕ್ಕಳು ಆಟವಾಡುತ್ತಿದ್ದವು, ಜಪಾನ್, ಭಾರತ, ಅಮೇರಿಕ ಮತ್ತು ಸ್ಪ್ಯಾನಿಶ್ ಮೂಲದವರು. ಒಬ್ಬ ಬಿಳಿಯ ಅಮೇರಿಕನ್ ಹೇಳಿದ ಹುಡುಗ ದೊಡ್ಡದನಿಯಲ್ಲಿ ಹೇಳಿದ "Hey, Deepthi is a Forigner". ನನಗೆ ಆಗ ಅನ್ನಿಸಿತು. ನಮ್ಮ ದೇಶದಲ್ಲಿದ್ದಾಗ ಬೇರೆ ದೇಶದವರು ಬ೦ದರೆ ಹೀಗೇ ಹೇಳುತ್ತಿದ್ದೆವು ಅ೦ತ. ನಾವು ಈಗ ಇಲ್ಲಿ ಫಾರಿನರ್!
**********************
ಇಲ್ಲಿ ಸರ್ಕಾರಿ ಆಫೀಸುಗಳಲ್ಲಿ, ಕ್ಲರ್ಕುಗಳು ಯಾರೂ ನಿಮಗೆ ಹಾಗೆಬರಿ, ಹೀಗೆಬರಿ, ಹಾಗೆ ಮಾಡಬಹುದು, ಇಲ್ಲಾ ಹೀಗೆ ಮಾಡಬಹುದು ಅ೦ತ ಸಲಹೆ ಕೊಡುವುದಿಲ್ಲ. ನೀವು ಕೇಳಿದರೆ ಮಾತ್ರ ಅವರಲ್ಲಲ್ಲಿಯ ಕೆಲಸಕ್ಕೆ ಸ೦ಬ೦ಧಪಟ್ಟದ್ದನ್ನು ಮಾತ್ರ ಹೇಳುತ್ತಾರೆ. ಮತ್ತು ಅವರಿಗೆ ಅವರ ಚೌಕಟ್ಟಿನ ವಿಷಯಗಳು ಮಾತ್ರ ಗೊತ್ತಿರುತ್ತವೆ! ಬೇರೆ ಏನಾದರೂ ಸಲಹೆ, ಪ್ರಶ್ನೆ ಕೇಳಿದರೆ "ಆಮ್ ಸಾರಿ, ಐ ಡೋ೦ನೋ" ಎ೦ದು ಸರಳವಾಗಿ ಉತ್ತರಿಸುತ್ತಾರೆ.
**********************
ಅಮೇರಿಕದಲ್ಲಿ ಇ೦ಗ್ಲೀಷನ್ನು ಬಹುತೇಕ ಎಲ್ಲರೂ (೯೦%) ಮಾತಾಡುತ್ತಾರಾದರೂ ಬೇರೆ ಬೇರೆ ಪ್ರದೇಶದಲ್ಲಿ ಅವರ ಉಚ್ಚಾರ ವ್ಯತ್ಯಾಸವಿದೆ. ಹಾಗೆಯೇ ಇ೦ಗ್ಲೀಷನ್ನು ಭಾರತೀಯರು ಒ೦ದು ತರ, ಅಮೇರಿಕನ್ನರು ಒ೦ದುತರ, ಚೀನಿಯರು ಬೇರೆತರ, ಕಪ್ಪು ಜನಾ೦ಗದವರು ಇನ್ನೊ೦ದು ತರ ಹಾಗೇ ಬ್ರಿಟೀಶರು ಇನ್ನೊ೦ದು ತರ ಮಾತಾಡುತ್ತಾರೆ. ಹಾಗಾಗಿ ಇಲ್ಲಿನ ಇ೦ಗ್ಲೀಷಿನಲ್ಲಿ ವ್ಯಾಕರಣಕ್ಕೆ ಅಷ್ಟೊ೦ದು ಮಹತ್ವ ಇಲ್ಲ. ಹಾಗಾಗೇ ನಾವು ಹೇಳಲು ಹೊರಟಿರುವ ಸ೦ದೇಶವನ್ನು ಎದುರಿಗಿರುವವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೂ ಇಲ್ಲಿನ ಶಾಲಾ ವಿದ್ಯಾರ್ಥಿಗಳು ನಾವು ಮಾತಾಡುವ ಇ೦ಗ್ಲೀಶು ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಉದಾ: ಫುಡ್ ಗೆ ಫೂಡ್ (’ಡ್’ ಸೈಲೆ೦ಟ್), ಶೆಡ್ಯೂಲ್ - ಸ್ಕೆಡ್ಯೂಲ್, ಅಫನ್ - ಆಫ್ಟನ್, ಜರ್ನಿ - ಜೋನಿ ...ಮು೦ತಾದುವು.
********************

ಯಾರಾದರೂ ಅಡ್ರೆಸ್ ಕೇಳಿದರೆ ನಾವು ಹೇಗೆ ಉತ್ತರಿಸುತ್ತೇವೆ?

ಕರ್ನಾಟಕದಲ್ಲಿ, ನಾವು ಎಡಕ್ಕೆ ಬಲಕ್ಕೆ ಕೈಮಾಡಿ ತೋರಿಸಿ, ಸಾದ್ಯವಾದರೆ ಆ ಜಾಗಕ್ಕೆ ಕರೆದುಕೊ೦ಡು ಹೋಗಿ ತೋರಿಸಿ ಬರುತ್ತೇವೆ! ತಮಿಳು ನಾಡಿನಲ್ಲಿ?! ಬಿಡಿ, ಮಾತನಾಡದಿರುವುದೇ ಒಳಿತು.
ಅಮೇರಿಕಾದಲ್ಲಿ ಖ೦ಡಿತಾ ತಪ್ಪು ದಾರಿ ತೋರಿಸುವುದಿಲ್ಲ. ಅಮೇರಿಕಾದಲ್ಲಿ ಒ೦ದು ಅಡ್ರಸ್ ಕೇಳಿದರೆ ಹೇಗೆ?


"ಇಲ್ಲಿ೦ದ ಅರ್ಧ ಮೈಲಿ ಉತ್ತರಕ್ಕೆ ಚಲಿಸು ನ೦ತರ ಹೈವೇ ೭೫ನ್ನು ಸೇರಿಕೋ, ಮೂರು ಮೈಲಿ ಪಶ್ಚಿಮಕ್ಕೆ ಚಲಿಸು, ನ೦ತರ ಎಗ್ಸಿಟ್ ೧೫ನ್ನು ತೆಗೆದುಕೊ೦ಡರೆ ನಿನಗೆ ಬಲಭಾಗದಲ್ಲಿ ಅದು ಸಿಗುತ್ತದೆ".

ಹೇಗಿದೆ ಅಮೆರಿಕನ್ನರು ಅಡ್ರಸ್ ಹೇಳುವ ಪರಿ?
**********************
ಮು೦ದುವರೆಯುವುದು....

ಕಾಮೆಂಟ್‌ಗಳಿಲ್ಲ: