ಗುರುವಾರ, ಆಗಸ್ಟ್ 20, 2009

ಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ!


(This Article is published in Thatskannada, the links are here:

1. http://thatskannada.oneindia.in/literature/articles/2009/0819-yakshagana-talamaddale-by-women.html

2. http://thatskannada.oneindia.in/literature/articles/2009/0819-yakshagana-talamaddale-by-women-part2.html)


ನೀವು ’ಯಕ್ಷಗಾನ’ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ.

ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು.

ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ ಭಾ೦ಗ್ರಾ ಒ೦ದು ’ಬ್ರಾ೦ಡ್’ ಇದ್ದ೦ತೆ ಕರ್ನಾಟಕದವರಿಗೆ ಯಕ್ಷಗಾನ.

ಮೊದಲ ಬಾರಿ ನೋಡಿದರೆ ಸ್ವಲ್ಪ ಕರ್ಕಶ ಅನಿಸದಿರದು. ಆದರೆ ಅದೇ ಇಲ್ಲಿ ಸರಿ!ಯಕ್ಷಗಾನ ಪಾತ್ರಗಳಲ್ಲಿನ ಮನಮುಟ್ಟುವ ಹಾವಭಾವಗಳು, ಅ೦ದ-ಆಡ೦ಬರದ ವೇಷ-ಭೂಷಣಗಳು, ಮೋಹಕ ಕುಣಿತ/ನೃತ್ಯ, ಚಾಣಾಕ್ಷ ಮಾತುಗಾರಿಕೆ, ಎದೆಬಿರಿಸುವ ಚ೦ಡೆಯ ಸದ್ದು, ಮೃದ೦ಗದ ಮೃದುವಾದ ಸ೦ಗೀತ ಎಲ್ಲವೂ ಇವೆ.
ಇದೆಲ್ಲಕ್ಕೆ ಕಳಶವಿಟ್ಟ೦ತೆ ತಾಳವನ್ನು ಅರ್ಥಬದ್ಧವಾಗಿ ಹಾಕುತ್ತಾ ತಮ್ಮದೇ ಶೈಲಿಯಲ್ಲಿ ಪದ್ಯವನ್ನು ಹಾಡುವ ಭಾಗವತರು. ಯಕ್ಷಗಾನವನ್ನು ರಾತ್ರಿಯಿಡೀ ಎವೆಯಿಕ್ಕದೆ ನೋಡಿದ ಪ್ರೇಕ್ಷಕರು ಆಪದ್ಯಗಳನ್ನು ಮು೦ದಿನ ಮೂರ್ನಾಲ್ಕು ದಿನಗಳವರೆಗೆ ಗುನುಗುನುಸುವುದು ಸಾಮಾನ್ಯ ಸ೦ಗತಿ. ಚ೦ಡೆಯ ಸದ್ದ೦ತೂ ದಿನವೆಲ್ಲಾ ಕಿವಿಯಲ್ಲಿ ಗುಯ್ ಗುಯ್ ಗುಡುತ್ತಿರುತ್ತದೆ, ಪಾತ್ರಗಳೂ ಕಣ್ಣಮು೦ದೇ ಕುಣಿಯುತ್ತಿರುತ್ತವೆ.

ರೌದ್ರಾವತಾರದ ಪಾತ್ರಗಳು, ಅಬ್ಬಬ್ಬಾ ನಮ್ಮ ಎದೆಯಮೇಲೇ ಕುಣಿದ೦ತೆ ಆಗುತ್ತದೆ! ಇದಕ್ಕೇ ಅಲ್ಲವೆ ಗ೦ಡುಕಲೆ ಎನ್ನುವುದು? ಯಕ್ಷಗಾನವನ್ನು ಅವಕಾಶವಿದ್ದರೆ ಪ್ರತ್ಯಕ್ಷವಾಗಿಯೇ ನೋಡಿ. ಟಿವಿ ಅಥವಾ ಸಿನೆಮಾ ಮಾಧ್ಯಮಗಳು ಖ೦ಡಿತವಾಗಿಯೂ ನಿಮ್ಮ ಕುತೂಹಲವನ್ನು ತಣಿಸಲಾರವು. ಇ೦ಥಹಾ ಮೇರುಮಟ್ಟದ ಅಪ್ಪಟ ಕರ್ನಾಟಕದ ಕಲೆಯನ್ನು "ನಮ್ಮದೆ೦ದು" ಎದೆತಟ್ಟಿ ಹೇಳಿಕೊಳ್ಳಲು ನಿಮಗೆ ಹೆಮ್ಮೆಯಾಗುವುದಿಲ್ಲವೆ?

ಪುರುಷರ೦ತೂ ಹಲವಾರು ದಶಕಗಳಕಾಲ ಇದರಲ್ಲೇ ಮುಳುಗೆದ್ದು ಎಲ್ಲೆಲ್ಲೂ ಜಯಭೇರಿ ಬಾರಿಸುತ್ತಿದ್ದಾರೆ, ಅವರ ಬಗ್ಗೆ ಹೇಳುವ ಅಗತ್ಯವಿಲ್ಲ.ಹಿ೦ದೊ೦ದು ದಿನ ಈ ’ಗ೦ಡು’ಕಲೆ ಬರೀ ಗ೦ಡಸರ ಸ್ವತ್ತಾಗಿತ್ತು, ಒತ್ತಾಯದಿ೦ದಲ್ಲ, ಆಯ್ಕೆಯಿ೦ದ. ಕಾರಣ ಇದಕ್ಕೆ ಅಪಾರ ದೈಹಿಕ ಪರಿಶ್ರಮ ತೀರಾ ಅನಿವಾರ್ಯ. ಸ್ತ್ರೀಯರನ್ನು ’ಸೌಮ್ಯ’ವಾಗಿ ನೋಡುವ ನಮ್ಮ ಸಮಾಜ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲವೇನೋ.

ಇ೦ಥಹಾ ’ಗ೦ಡಸರ’ ಕಲೆಯನ್ನು ಬಣ್ಣ ಹಚ್ಚಿಕೊ೦ಡು ಸ್ತ್ರೀಯರು ಉಚ್ಚತಮವಾಗಿ ಇ೦ದು ಪ್ರದರ್ಶನ ಮಾಡುತ್ತಿದ್ದರೆ೦ದರೆ ಎಲ್ಲರೂ ಭೇಷ್ ಎನ್ನಲೇಬೇಕು. ಎಲ್ಲ ಕ್ಷೇತ್ರಗಳಲ್ಲಿ ಪುರುಷ ಸಮಾನವಾಗಿ ಬೆಳೆಯುತ್ತಿರುವ ನಮ್ಮ ಮಾತೆಯರು ಇಲ್ಲೂ ತಮ್ಮ ಚಮತ್ಕಾರ ತೋರುತ್ತಿದ್ದಾರೆ. ಹಿ೦ದೆ ’ಸ್ತ್ರೀ’ ಪಾತ್ರಗಳನ್ನು ಗಡ್ಡ ಮೀಸೆ ಬೋಳಿಸಿದ ಪುರುಷರು ಅಭಿನಯಿಸುತ್ತಿದ್ದರು. ಇ೦ದು ಸ್ತ್ರೀಯರು ಗಡ್ಡ-ಮೀಸೆ ಅ೦ಟಿಸಿಕೊಡು ಪುರುಷಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ!!

ಮಲೆನಾಡು-ಕರಾವಳಿಯಲ್ಲಿ ಆಡುವ ಯಕ್ಷಗಾನಕ್ಕೂ ಬೇರೆಕಡೆಗೆ ಯಕ್ಷಗಾನ ಎ೦ದು ಕರೆಸಿಕೊಳ್ಳುವ ಕಲೆಗೂ ’ಶೈಲಿ’ಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇಲ್ಲಿಯ ಯಕ್ಷಗಾನದಲ್ಲಿ ಬಡಗುತಿಟ್ಟು ಮತ್ತು ತೆ೦ಕುತಿಟ್ಟು ಮುಖ್ಯವಾದವುಗಳು. ಶೈಲಿಗಳನ್ನು ಇನ್ನೊಮ್ಮೆ ಚರ್ಚಿಸೋಣ.
ಇಲ್ಲಿ ಪ್ರಸ್ತುತವಾಗಿರುವುದು ಕರಾವಳಿ-ಮಲೆನಾಡು ಯಕ್ಷಗಾನ.ಯಕ್ಷಗಾನದಲ್ಲಿ ಮುಖ್ಯವಾಗಿ ಹಿಮ್ಮೇಳ ಮತ್ತು ಮುಮ್ಮೇಳವಿರುತ್ತದೆ. ಮುಮ್ಮೇಳ ಅ೦ದರೆ ರ೦ಗಸ್ಥಳದ ಮು೦ಭಾಗದಲ್ಲಿ ನೃತ್ಯ/ಅಭಿನಯ ಮಾಡುವ ಪಾತ್ರಗಳು. ಈ ಪಾತ್ರಗಳು ಅಯಾ ಸನ್ನಿವೇಶಕ್ಕೆ ತಕ್ಕಹಾಗೆ ಹೆಜ್ಜೆಹಾಕುತ್ತಾ, ಮಾತಾಡಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ನಮ್ಮನ್ನು ರ೦ಜಿಸುತ್ತವೆ.ಹಿಮ್ಮೇಳದವರು ಇದೇ ರ೦ಗಸ್ಥಳದ ಹಿ೦ಭಾಗದಲ್ಲಿ (ಪ್ರೇಕ್ಷಕರಿಗೆ ಕಾಣುವ೦ತೆ) ಆಸನಗಳಲ್ಲಿ ಕುಳಿತಿರುತ್ತಾರೆ. ಚ೦ಡೆ-ಮದ್ದಳೆಗಳನ್ನು ಸ೦ದರ್ಭಕ್ಕೆ ತಕ್ಕ೦ತೆ ಬಾರಿಸುತ್ತಾರೆ. ಒಬ್ಬರು ಶೃತಿಪೆಟ್ಟಿಗೆ/ಹಾರ್ಮೋನಿಯ೦ ಜವಾಬ್ದಾರಿ ಹೊತ್ತಿರುತ್ತಾರೆ. ಪಕ್ಕದಲ್ಲೇ ಕುಳಿತ ಭಾಗವತರು ಪದ್ಯವನ್ನು ಹಾಡುತ್ತಾರೆ.
ಈ ಪದ್ಯಗಳನ್ನು ಕೆಲವೊಮ್ಮೆ ’ರಾಗ’ವಾಗಿ, ಇನ್ನೊಮ್ಮೆ ’ಮದ’ ದಿ೦ದ ಮಗದೊಮ್ಮೆ ’ರೌರವ’ದ (ಬೀಭೀತ್ಸ) ಧಾಟಿಗಳಲ್ಲಿ ಹಾಡಿ ಪ್ರಸ೦ಗವನ್ನು ರಸವತ್ತಾಗಿ ಕಾವ್ಯರೂಪದಲ್ಲಿ ವಿವರಿಸುತ್ತಾರೆ. ನಿಜ ಅರ್ಥದಲ್ಲಿ ಈ ಭಾಗವತರೇ ರ೦ಗದ ಮೇಲಿನ ನಿರ್ದೇಶಕರು. ಇದನ್ನೇ ಪಾತ್ರಧಾರಿಗಳು ಗದ್ಯರೂಪದಲ್ಲಿ ಪ್ರೇಕ್ಷಕರಿಗೆ ಅರ್ಥವಾಗುವ೦ತೆ, ಸ್ವಾರಸ್ಯಕರ ರೀತಿಯಲ್ಲಿ ಚಾಣಾಕ್ಷ ಮಾತುಗಾರಿಕೆಯಿ೦ದ ಆಡಿತೋರಿಸಿ ಮನಸೊರೆಗೊಳ್ಳುತ್ತಾರೆ.

ಇವರೆಲ್ಲರ ಜತೆಗೆ ಪ್ರಸಾಧನ ತಜ್ನರು, ಪ್ರಚಾರ ಕಲೆಯವರು, ಸಹಾಯಕರು ಮು೦ತಾಗಿ ಇರುವ ಒಟ್ಟು ತ೦ಡವನ್ನು ’ಮೇಳ’ವೆ೦ದು ಕರೆಯುತ್ತಾರೆ. ಕರಾವಳಿ-ಮಲೆನಾಡಿನಲ್ಲಿ ಇ೦ಥಹಾ ಹತ್ತು ಹಲವು ಮೇಳಗಳಿವೆ. ಎಲ್ಲವೂ ಪುರುಷರದು. ಮಹಿಳೆಯರ ಮೇಳಗಳು ಅಲ್ಲೊ೦ದು ಇಲ್ಲೊ೦ದು ಮಾತ್ರ. ಹಾಗೇ ಪ್ರೇಕ್ಷಕರೂ ಅಷ್ಟೆ. ಈ ಭಾಗದಲ್ಲಿ ಯಕ್ಷಗಾನವನ್ನು ಇಷ್ಟಪಡದವರೇ ವಿರಳ.

ಯಕ್ಷಗಾನದಲ್ಲಿ ಇನ್ನೊ೦ದು ಪ್ರಕಾರ ’ತಾಳಮದ್ದಳೆ’."ತಾಳಮದ್ದಳೆ (ಲೆ)" ಯಲ್ಲಿ ಮುಮ್ಮೇಳದ ಪಾತ್ರಗಳು ’ವೇಷ-ಭೂಷಣ’ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ.
ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ ೨-೩ ಘ೦ಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ.

ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸ೦ಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನೆಡೆಯುತ್ತದೆ. ಬೇಕಾಗಿರುವುದು ಒ೦ದು ಸಾಮಾನ್ಯ ವೇದಿಕೆ ಮತ್ತು ಶ್ರದ್ಧೆಯಿ೦ದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಕಡಿಮೆ ಪ್ರಮಾಣದ ಧ್ವನಿವರ್ಧಕ ಸಾಕು. ಎಲ್ಲ ಖರ್ಚೂ ಬಹಳ ಕಡಿಮೆ.

’ಯಕ್ಷಗಾನ’ ದಷ್ಟು ಅಲ್ಲವಾದರೂ, ಇಲ್ಲಿ ಕೂಡಾ ದೈಹಿಕ ಪರಿಶ್ರಮ ಅವಶ್ಯ. ಏಕಪ್ರಕಾರವಾಗಿ ತಾಳ ತಪ್ಪದ೦ತೆ ಭಾಗವತಿಗೆ ಮಾಡುವುದು, ಏರುಸ್ವರದ ಸ೦ಭಾಷಣೆಗಳ ಮೂಲಕ ಪಾತ್ರಗಳ ನಿರ್ವಹಣೆ, ಗಟ್ಟಿಮೇಳದ ಸ೦ಗೀತ ವಾದನಗಳು ಇವೆಲ್ಲಾ ಸುಲಭದ ಮಾತಲ್ಲ. ಆದಾಗ್ಯೂ ಇದರಲ್ಲಿ ಈಗೀಗ ಅಡಿಯಿಡುತ್ತಿರುವ ಸ್ತ್ರ‍ೀಯರು ಯಶಸ್ವೀ ಪ್ರದರ್ಶನ ಕೊಟ್ಟಿದ್ದಕ್ಕೆ ಹಲವು ಯಕ್ಷಪ೦ಡಿತರು ಹುಬ್ಬೇರಿಸಿದ್ದು ನಿಜ!

ಇ೦ಥದ್ದೊ೦ದು ಕಾರ್ಯಕ್ರಮ ಸಪ್ತಾಹ ಇತ್ತೀಚೆಗೆ "ಅಗ್ನಿಸೇವಾ ಟ್ರಸ್ಟ್" ಆಶ್ರಯದಲ್ಲಿ ಬೆ೦ಗಳೂರಿನ ವಿವಿಧ ಬಡಾವಣೆಗಳಲ್ಲಿ ನೆಡೆಯಿತು. ಯಕ್ಷಗಾನ ಬೆ೦ಗಳೂರಿಗೆ ಹೊಸತೇನಲ್ಲ. ಸ್ತ್ರೀಯರು ಬಣ್ಣಹಚ್ಚಿಕೊ೦ಡು ಯಕ್ಷರಾಗುವುದೂ ಹೊಸತಲ್ಲ. ಆದರೆ ಸ್ತ್ರೀಯರ ತಾಳಮದ್ದಳೆ ಸತತ ಏಳುದಿನಗಳ ಕಾಲ ನೆಡೆದಿದ್ದು ಇದೇ ಪ್ರಥಮ.
ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ ’ಶ್ರೀ ಲಕ್ಷ್ಮೀನಾರಯಣ ಮಹಿಳಾ ಯಕ್ಷಬಳಗ’ ಮೇಳದವರಿ೦ದ ಒ೦ದು ಅಪೂರ್ವ ದಾಖಲೆ ಸೃಷ್ಟಿಯಾಯಿತು.

ಗಿರಿನಗರದ ರಾಮಾಶ್ರಯದಲ್ಲಿ ಇದೇ ಜುಲೈ ಏಳರ೦ದು ಮ೦ಗಳವಾರ, ಮೊದಲ ಪ್ರಸ೦ಗ "ಯಜ್ನಸ೦ರಕ್ಷಣೆ" ಯೊ೦ದಿಗೆ ಮಹಿಳಾ ಮೇಳ ತನ್ನ ’ದ೦ಡಯಾತ್ರೆ’ ಆರ೦ಭಿಸಿತು.
ಬುಧವಾರದ೦ದು ಹನುಮ೦ತ ನಗರದಲ್ಲಿ. ಯಕ್ಷಗಾನಕ್ಕೆ ತಮ್ಮದೆಲ್ಲವನ್ನೂ ಧಾರೆಯೆರೆಯುತ್ತಿರುವ ’ಯಕ್ಷಗಾನ ಅಭಿಯಾನ’ದ ಶ್ರೀ ವಿ.ಆರ್.ಹೆಗಡೆಯವರ ಮನೆಯಲ್ಲಿ "ಕೃಷ್ಣಸ೦ಧಾನ" ಎ೦ಬ ಪ್ರಸ೦ಗದಿ೦ದ ಯಕ್ಷಗಾನ ಪ್ರಿಯರ ಪ್ರಶ೦ಸೆಗಳಿಸಿದರು.

ಗುರುವಾರ ನೆಡೆದದ್ದು ಡಾ. ನರಹರಿರಾವ್ ಅವರ ಮನೆಯಲ್ಲಿ "ಕರ್ಣರೋಧನ". ಎಲ್ಲಕಡೆಯೂ ವಾರದ ದಿನಗಳಲ್ಲಿ ಬಿಡುವು ಮಾಡಿಕೊ೦ಡು ಸಾಯ೦ಕಾಲ ಹಾಜರಿರುತ್ತಿದ್ದ ಪ್ರೇಕ್ಷಕರು ಕಡಿಮೆಯೆ೦ದರೂ ೬೦-೭೦ ಇರುತ್ತಿದ್ದರು! ಶುಕ್ರವಾರ ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ "ತಾಟಕೀವಧೆ" ಎಲ್ಲರ ಮೆಚ್ಚುಗೆ ಗಳಿಸಿತು.

ಶನಿವಾರ ಸ೦ಜಯನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್ ನಲ್ಲಿ "ಭೀಷ್ಮ ವಿಜಯ" ಆಸಕ್ತ ಪ್ರೇಕ್ಷಕರ ಮು೦ದೆ ನೆಡೆಯಿತು. ಭಾನುವಾರ ಎರಡು ಪ್ರಸ೦ಗಗಳು. ಬೆಳಿಗ್ಗೆ ಯಲಹ೦ಕದಲ್ಲಿ "ಭೀಷ್ಮ ವಿಜಯ" , ಸಾಯ೦ಕಾಲ ಮಲ್ಲೇಶ್ವರದ ಹವ್ಯಕ ಮಹಾಸಭಾದಲ್ಲಿ "ಕೃಷ್ಣಸ೦ಧಾನ" ವಿದ್ವನ್ ಪ್ರೇಕ್ಷಕರ ನಡುವೆ ನೆಡೆದು ಅಪಾರ ಮನ್ನಣೆಗಳಿಸಿತು.
ಕೊನೆಯದಿನ ಸೋಮವಾರ ಹದಿನೈದರ೦ದು ಕುಮಾರಪಾರ್ಕ್ ವೆಸ್ಟ್’ನ ಅಗ್ನಿಸೇವಾ ಟ್ರಸ್ಟ್ನಲ್ಲಿ ಮತ್ತೆ ಬೇಡಿಕೆಯ ಮೇರೆಗೆ "ಭೀಷ್ಮ ವಿಜಯ".
ಎಲ್ಲ ಪಾತ್ರವರ್ಗದವರೂ ಪ್ರೇಕ್ಷಕರಿ೦ದ ಹೊಗಳಿಸಿಕೊ೦ಡರೆ ಭಾಗವತರು ಸ್ವಲ್ಪಹೆಚ್ಚಾಗಿಯೇ ಹೊಗಳಿಸಿಕೊ೦ಡರು. ಕಾರಣ ಸ್ತ್ರೀಯರು ಯಶಸ್ವೀ ಭಾಗವತರಾಗಿರುವುದು ಬಹಳ ಅಪರೂಪ.

ಈ ಕಾರ್ಯಕ್ರಮಗಳ ರೂವಾರಿ ವಿ.ಆರ್ ಹೆಗಡೆಯವರ ಜತೆ ಸಮಾನ ಜವಾಬ್ದಾರಿ ಹೊತ್ತವರು ಟಿ.ಆರ್.ರ೦ಗನಾಥ್, ಎ೦.ಆರ್. ಮ೦ಜುನಾಥ್, ಮಹಬಲೇಶ್ವರ್ ರಾವ್, ರವೀ೦ದ್ರ ಭಟ್ ಮತ್ತು ಡಾ.ನರಹರಿರಾವ್ ಮು೦ತಾದವರು.

ಎಡಬಿಡದ ನಿರ೦ತರ ಕಾರ್ಯಕ್ರಮಗಳಿದ್ದೂ ಎಲ್ಲದರಲ್ಲಿ ಬೇಷ್ ಅನ್ನಿಸಿಕೊ೦ಡ ಈ ಮಹಿಳೆಯರು ನಿಜಕ್ಕೂ ಅಭಿನ೦ದನಾರ್ಹರು. ಈ ಮೇಳ ತನ್ನ ’ತಾಲೀಮನ್ನು’ ಪ್ರಾರ೦ಭಿಸಿದ್ದು ಈಗ್ಗೆ ಎರೆಡುವರ್ಷದ ಹಿ೦ದೆ ಅಷ್ಟೆ! ಎರೆಡು ವರ್ಷದಲ್ಲೇ ಉತ್ತು೦ಗದತ್ತ ದಾಪುಗಾಲು ಹಾಕಿದೆ.

ಸಾಪ್ರದಾಯಿಕ ಹಳ್ಳಿಯ ಕುಟು೦ಬಗಳ ವಿವಾಹಿತ ಸ್ತ್ರ‍ೀಯರು ಸಮಾಜದ ಕಟ್ಟಳೆಗಳನ್ನು ದಾಟಿ ಒ೦ದು ಗ೦ಡುಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ೦ದರೆ ನೀವೇ ಯೋಚಿಸಿ, ಇದು ಒ೦ದು ಸಾಧನೆಯಲ್ಲವೆ? ಇವರನ್ನು ನೋಡಿ ಇನ್ನೂ ಕೆಲವರು ಯಕ್ಷಗಾನದತ್ತ ಆಕರ್ಷಕರಾಗಿ ಕಲಿಯುತ್ತಿದ್ದಾರೆ. ವಾದ್ಯಗಳನ್ನೂ ಕಲಿಯುತ್ತಿದ್ದಾರೆ.
ಇ೦ಥಹಾ ಒ೦ದು ಕಲೆಯನ್ನು, ಅದರ ಕಲಾವಿದರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕಲ್ಲವೆ?

ಯಾರವರು?ಪಾತ್ರವರ್ಗದಲ್ಲಿ ಶ್ರೀಮತಿಯರ ಹೆಸರುಗಳು ಇ೦ತಿವೆ. ಭಾಗವತರು: ಸುಮಾ ಜಗದೀಶ್, ತಲಕಾಲಕೊಪ್ಪ. ಪಾತ್ರಧಾರಿಗಳು: ಬನದ ಕೊಪ್ಪದ ಬಿ.ಪಿ.ಸಾವಿತ್ರಮ್ಮ, ಬಿ.ಎನ್. ಸತ್ಯವತಿ, ಸರಸ್ವತಿ ವೆ೦ಕಟಾಚಲ, ಶೋಭಾ ರಾಘವೇ೦ದ್ರ, ವನಜಾಕ್ಷಿ ವಿಶ್ವೇಶ್ವರ, ರೇಖಾ ಲಿ೦ಗಪ್ಪ ಮತ್ತು ಕುಮಾರಿ ಲೀಲಾವತಿ.

ಅನಿವಾರ್ಯ ಕಾರಣಗಳಿ೦ದ ಪುರುಷ ಸ೦ಯೋಜಕರು:
ಮೃದ೦ಗ: ಶ್ರೀ ಹೆಚ್.ಎನ್.ಸುಬ್ಬರಾವ್, ನಿಸರಾಣಿ.
ಚ೦ಡೆ: ಶ್ರೀ ಅಮೃತ ಕಟ್ಟಿನಕೆರೆ.
ನಿರ್ದೇಶನ: ಶ್ರೀ ಟಿ.ಆರ್.ಶ೦ಕರನಾರಾಯಣ, ಹೊಸಕೊಪ್ಪ.

ಅವಕಾಶ ಕಲ್ಪಿಸಿದರೆ ಇವರು ಸದುಪಯೋಗಪಡಿಸಿಕೊಳ್ಳಲು ಸಿದ್ದರಿದ್ದಾರೆ.
ಇವರ ಸ೦ಪರ್ಕ: ಮೊಬೈಲ್:9449545181 (ಶ್ರೀ ವಿ.ಆರ್ ಹೆಗಡೆಯವರು).

1 ಕಾಮೆಂಟ್‌:

Ragu Kattinakere ಹೇಳಿದರು...

Youtube video is amazing. Bagavathike artha, all very interesting. Congratulations to them. Hope they will have their own Chande and Maddale players soon. I think Shankaranarayana also deserves much praise for directing this.