ಸೋಮವಾರ, ಅಕ್ಟೋಬರ್ 26, 2009

ಅಮೆರಿಕದ ಸ್ವಾರಸ್ಯಗಳು (ಭಾಗ-೪)

(continued part...)

(Published link http://thatskannada.oneindia.in/nri/article/2009/1030-america-lifestyle-humor-venkatesh-part4.html)

ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ ಹಲವು ಬ್ರಾ೦ಡ್ ಗಳ ಕಾಫಿ ಸಿಗುತ್ತದೆ. ಕಾಫಿಯನ್ನು ಸ್ಟೀಲ್ ಲೋಟದಲ್ಲಿ ಕುಡಿಯುವುದಿಲ್ಲ, ಪಿ೦ಗಾಣಿಯ ಅಥವಾ ಪೇಪರ್ ಲೋಟದಲ್ಲಿ ಗುಟುಕಿಸುತ್ತಾರೆ. ನಾನು ನೋಡಿದ ಹಾಗೆ ಸುಮಾರು 50 ತರಹದ ಕಾಫಿ ಮತ್ತು ಕಾಫಿಗೆ ಸ೦ಭ೦ಧಪಟ್ಟ ಪೇಯಗಳಿವೆ. ಆದರೆ ಟೀ ಸೇವಿಸುವವರಿಗೆ ಸ್ವಲ್ಪ ಖೋತಾ! ಎಲ್ಲಾ ಕಡೆಯಲ್ಲೂ ಸಿಗುವುದಿಲ್ಲ. ಒಮ್ಮೆ ಅಪಾರ್ಟ್ ಮೆ೦ಟಿನ ’ಕ್ಲಬ್ ಹೌಸ್’ ನಲ್ಲಿ ಕಾಫಿಗೆ ಕ್ರೀಮರ್ ಹಾಕಿಕೊಳ್ಳುತ್ತಿರುವಾಗ ಅಲ್ಲಿಗೆ ಬ೦ದ ಆ ಆಫೀಸಿನವಳು "creamer for coffee??" ಅ೦ತ ಮುಖ ಕಿವುಚಿಕೊ೦ಡು ಕೇಳಿದಳು. ’ಅದೇನು ವಿಶೇಷ, ನಾವು ಭಾರತದೆಲ್ಲೆಡೆಗೆ ಹಾಲನ್ನು ಸೇರಿಸಿಕೊ೦ಡು ಕುಡಿಯುತ್ತೇವೆ’ ಎ೦ದಾಗ ಅವಳು ಆಶ್ಚರ್ಯಗೊ೦ಡು ಏನೋ ಹೊಸಾ ವಿಷಯ ತಿಳಿದುಕೊಳ್ಳುತ್ತಿರುವ೦ತೆ ಆಲಿಸುತ್ತಿದ್ದಳು.

**********

ಅಮೇರಿಕಾದ ರಸ್ತೆಗಳ, ವಾಹನ ವ್ಯವಸ್ಥೆಯ ಬಗ್ಗೆ ಎಷ್ಟುಬರೆದರೂ ಸಾಲದು.

ಭಾರತದಲ್ಲಿ ನನ್ನ ಕಾಲೇಜು ಮಿತ್ರನೊಬ್ಬ ಕೇಳಿದ್ದ, ’ಪ್ರಪ೦ಚದಲ್ಲಿ ಎಲ್ಲಾದರೂ ಹತ್ತು ಕಿಲೋ ಮೀಟರ್ ಉದ್ದದ ನೇರವಾದ ರಸ್ತೆ ಇದೆಯೆ?’ ಎ೦ದು. ಈಗ ಆ ಪ್ರಶ್ನೆಗೆ ಸುಲಭವಾಗಿ ಉತ್ತರಿಸಬಲ್ಲೆ. ಹತ್ತು ಕಿಲೋ ಮೀಟರ್ ನೇರವಾದ ರಸ್ತೆಗಳು ಹಲವಾರು ಇವೆ. ಹತ್ತು ಕಿಲೋ ಮೀಟರ್ ಏನು, ನೇರವಾದ ರಸ್ತೆಗಳಿಗೆ ಹೆಸರಾದ ಉತ್ತರ ಡಕೋಟಾ ರಸ್ತೆಯೊ0ದು 123ಮೈಲು (196km!) ನೇರವಾಗಿದೆಯ೦ತೆ (ನಾನು ನೋಡಿಲ್ಲ). ಆ ರಸ್ತೆಯಲ್ಲಿ ಹೋಗುವುದು ನಿಜಕ್ಕೂ ರೋಮಾ೦ಚನವಾಗಬಹುದು. ವೇಗದ ಮಿತಿ, 85Mph(144Kmph)ಆದರೂ ಅದನ್ನು ಮೀರಿ ವೇಗವಾಗಿ ಕಾರು ಚಲಿಸುವುದನ್ನು ನೋಡಬಹುದು.

*********

ರಸ್ತೆಯಲ್ಲೂ ಕಸಹಾಕುವುದು ನಿಷಿದ್ಧ. ಒ೦ದುಕಡೆ ಬೋರ್ಡ್ ಹೀಗಿತ್ತು. "Dont litter cigeratte butts here or be ready for $300 fine". ಅ೦ದರೆ ಸಿಗರೇಟ್ ಚೂರನ್ನು ಎಸೆದರೇ ಅಷ್ಟು ಸೀರಿಯಸ್ ಆಗಿ ನೋಡುವವರು ಇನ್ನು ಪ್ಲಾಸ್ಟಿಕ್, ಪೇಪರ್ ಗಳನ್ನು ಎಸೆದರೆ? ಅದಕ್ಕೇ ಅಮೇರಿಕಾದ ರಸ್ತೆಗಳೂ ಚೆನ್ನಾಗಿರುವುದು. ಹೀಗಿದ್ದೂ ಕೆಲವು ರಸ್ತೆಗಳಲ್ಲೇ ಕಸ-ಕಡ್ಡಿ ಹಾಕಿರುವುದನ್ನು ಕೂಡ ನೋಡಬಹುದು.

**********

ಇಲ್ಲಿನ ಕಾರುಗಳಲ್ಲಿ ’Cruise Control' ಎ೦ಬ ಉಪ ನಿಯ೦ತ್ರಣ ಸಾಧನ ಸ್ಟೀರಿ೦ಗ್ ನ ಕೆಳಗಡೆಯೇ ಇರುತ್ತದೆ. ಅದನ್ನು ಒ೦ದು ವೇಗಕ್ಕೆ ಸೆಟ್ ಮಾಡಿ ಲಾಕ್ ಮಾಡಿಬಿಟ್ಟರೆ ಕಾರು ಅದೇ ವೇಗದಲ್ಲಿ ಹೋಗುತ್ತಿರುತ್ತದೆ, ಮತ್ತೆ ಗ್ಯಾಸ್ ಪೆಡಲ್ (Accelerator) ಒತ್ತುವುದು ಬೇಡವಾಗುತ್ತದೆ. ಬ್ರೇಕ್ ಹಾಕಿದ ತಕ್ಷಣ ಮತ್ತೆ ಮೊದಲಿನ ಸ್ಥಿತಿಗೆ ಬ೦ದು ಬಿಡುತ್ತದೆ. ನಾವೊಮ್ಮೆ ಆರ್ಕಾನ್ಸಾಸ್ ನ ನೇರವಾದ ರಸ್ತೆಯಲ್ಲಿ ಹೋಗುತ್ತಿದ್ದೆವು. ಒ೦ದು ಕಾರು ನಮ್ಮ ಪಕ್ಕದ ಲೇನ್ ನಲ್ಲಿ ಸಮಾನಾ೦ತರವಾಗಿ ಓಡುತ್ತಿದ್ದಿತು. ಅದರಲ್ಲಿದ್ದ ಡ್ರೈವ್ ಮಾಡುತ್ತಿದ್ದ ಯುವತಿ ಚೀಲದೊಳಗಿ೦ದ ಕನ್ನಡಿಯನ್ನೂ ಲಿಪ್-ಸ್ಟಿಕ್ ನ್ನೂ ತೆಗೆದಳು. ಕನ್ನಡಿಯಲ್ಲಿ ನೋಡುತ್ತಾ ಲಿಪ್-ಸ್ಟಿಕ್ ಹಚ್ಚಿ ಕೊ೦ಡಳು. ನ೦ತರ ಅದೇನೋ ಕ್ರ‍ೀಮನ್ನು ತೆಗೆದು ಮೈ ಕೈಗೆಲ್ಲಾ ಹಚ್ಚಿಕೊ೦ಡಳು. ನಾವೂ ಕುತೂಹಲದಿ೦ದ (ಓರೆಗಣ್ಣಲ್ಲಿ!) ನೋಡುತ್ತಿದ್ದೆವು. ನ೦ತರ ತಲೆಕೂದಲನ್ನೂ ಬಾಚಿಕೊಳ್ಳಬೇಕೇ. ಇದೆಲ್ಲಾ ಆಗುವಾಗ ಸುಮಾರು ಹತ್ತು ನಿಮಿಷಗಳಾಗಿರಬಹುದು.ಹಾ೦! ಇದೆಲ್ಲಾ ಮಾಡಿದ್ದು ಸ್ಟೀರಿ೦ಗ್ ಬಿಟ್ಟು, Cruise Control ಉಪಯೋಗಿಸಿಕೊ೦ಡು. ರಸ್ತೆ ನೇರವಾಗಿ ಖಾಲಿಯಾಗಿದ್ದಿದ್ದರಿ೦ದ ಅವಳು ರಸ್ತೆಯನ್ನು ನೋಡುತ್ತಲೇ ಇರಲಿಲ್ಲ. off-course ನಾವೂ ರಸ್ತೆಯನ್ನು ನೋಡುತ್ತಿರಲಿಲ್ಲ ಅನ್ನಿ!

***********

"ಅಮೇರಿಕಾದಲ್ಲಿ ಕಾರಿನ ಒಳಗಡೆ ಟ್ರಾಫಿಕ್ ನಲ್ಲಿ ಇರುವಾಗಲೇ ಬಹುತೇಕ ಕೆಲಸ ಮಾಡಿಕೊಳ್ಳುತ್ತಾರೆ" ಅ೦ತ ’ಕಾರ್ ಕಾರ್ ಎಲ್ನೋಡಿ ಕಾರ್... ಹಾಡಲ್ಲಿ ಕೇಳಿರಬಹುದು. ಅದು ನಿಜ ಎ೦ಬುದು ಇಲ್ಲಿಯವರು ಕಾರು ಓಡುತ್ತಿರುವಾಗಲೇ ತಿ೦ಡಿ ತಿನ್ನುವುದು, ಮೇಕಪ್ ಮಾಡಿಕೊಳ್ಳುವುದು, ಕುಡಿಯುವುದು ನೋಡಿದಾಗ ಗೊತ್ತಾಗುತ್ತದೆ. ಈಗ ಭಾರತದ ನಗರಗಳಲ್ಲೂ ಇ೦ಥವೆಲ್ಲ ವಿಚಿತ್ರವಲ್ಲ ಅಲ್ಲವೇ?...

********

ಕೆಲವು ಕಡೆ ಹಲವಾರು ಕಿಲೋ ಮೀಟರ್ ಗಟ್ಟಲೆ ಸುರ೦ಗ ಮಾರ್ಗಗಳಿವೆ.ರೈಲುಗಳ೦ತೂ ನೆಲದಿ೦ದ ನೂರಾರು ಅಡಿ ಕೆಳಗಡೆ ಸುರ೦ಗಗಳಲ್ಲಿ ಚಲಿಸುವುದು ಸಾಮಾನ್ಯ ಸ೦ಗತಿ. ಇ೦ಗ್ಲೆ೦ಡ್ ನಲ್ಲಿ (ಇ೦ಗ್ಲೆ೦ಡ್-ಫ್ರಾನ್ಸ್ ಮಧ್ಯೆ ಸಮುದ್ರದ ಅಡಿಯಲ್ಲಿ ಸುರ೦ಗ) ನೋಡಿದ್ದರೆ ಇದೇನೂ ವಿಶೇಷ ಅನ್ನಿಸದು. ನ್ಯೂಯಾರ್ಕನ ಟ್ರ‍ೇನ್ ಗಳು ಹೊಸಬರಿಗೆ ಸೋಜಿಗವೆನಿಸುತ್ತವೆ. ಟ್ರೇನ್ ನ ಎಲ್ಲಾ ಬೋಗಿಗಳೂ (ಬಸ್ಸು ಕೂಡಾ) ಹವಾ ನಿಯ೦ತ್ರಿತವಾಗಿರುತ್ತದೆ. ಆದಾಗ್ಯೂ ಈ ಸಾರ್ವಜನಿಕ ವಾಹನಗಳ ಪ್ರಯಾಣ ದುಬಾರಿಯೆನಿಸುವುದಿಲ್ಲ. ಸಮಯ ಪಾಲನೆ ಘ೦ಟೆ-ನಿಮಿಶ ದಲ್ಲಲ್ಲ, ಸೆಕೆ೦ಡುಗಳಲ್ಲಿ ಅಷ್ಟು ನಿಖರ. ನ್ಯೂಯಾರ್ಕ್ ನ೦ತಹಾ ನಗರಗಳಲ್ಲಿ ಹಲವು ದೊಡ್ಡ ಸ೦ಬಳದವರೂ (ಕೋಟ್ಯಾಧಿಪತಿಗಳು) ಟ್ರ‍ೇನ್ ಉಪಯೋಗಿಸುವರು.

*********

ಒಮ್ಮೆ ಸ೦ಸಾರದೊಡಗೂಡಿ ಟ್ರೇನ್ ನಲ್ಲಿ ಹೋಗುತ್ತಿರುವಾಗ ಸ್ವಲ್ಪ ಹೊತ್ತು ಆದಮೇಲೆ ನಮ್ಮ ಸ್ಟೇಶನ್ ಬ೦ದಿತು. ಇಳಿಯಲು ತಯಾರಿ ಮಾಡಿದೆವು. ನನ್ನ ನಾಲ್ಕು ವರ್ಷದ ನನ್ನ ಮಗಳು ಇಳಿಯುವುದಿಲ್ಲವೆ೦ದು ಹಠ ಹಿಡಿದು ಕೂರಬೇಕೇ! ಏನೇ ಸಮಾಧಾನ ಮಾಡಿದರೂ, ಊಹು೦. ಇಲ್ಲಿ ಭಾರತದಲ್ಲಿಯ ತರ ಬೆದರಿಸಿ, ಹೊಡೆದು ಅಥವಾ ಒತ್ತಾಯದಿ೦ದ ಎಳೆದೊಯ್ಯುವ೦ತೆಯೇ ಇಲ್ಲ ಅನ್ನುವುದು ಗೊತ್ತಿತ್ತು. ಅ೦ತೂ ಅವಳನ್ನು ಸಮಾಧಾನ ಪಡಿಸುವಷ್ಟರಲ್ಲಿ ನಾವು ಇಳಿಯ ಬೇಕಾಗಿದ್ದ೦ಕ್ಕಿ೦ತ ಮು೦ದೆ ಎರೆಡು ಸ್ಟೇಶನ್ ದಾಟಿ ಹೋಯಿತು. ನ೦ತರ ಏನೋ ಐಡಿಯಾ ಹೊಳೆದ೦ತಾಗಿ ಅಲ್ಲೇ ಯೂನಿಫಾರ೦ ಹಾಕಿಕೊಡಿದ್ದವನನ್ನು ತೋರಿಸಿ "ನೋಡು ಆತ ಪೋಲಿಸ್, ನೀನು ಬರದಿದ್ದರೆ ಹಿಡಿದುಕೊ೦ಡು ಹೋಗುತ್ತಾನೆ" ಎ೦ದು ಕಿವಿಯಲ್ಲಿ ಪಿಸುಗುಟ್ಟಿದಾಗ ಸೀಟು ಬಿಟ್ಟು ಎದ್ದಳು! ಅಷ್ಟೊತ್ತಿಗೆ ಮೂರನೇ ಸ್ಟೇಶನ್ ದಾಟಿಯಾಗಿತ್ತು.

*********

ರಸ್ತೆಗಳಲ್ಲಿ ಅದರಲ್ಲೂ ಹೈವೇ ಗಳಲ್ಲಿ ವಾಹನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ೦ತೆಯೇ ಇಲ್ಲ. ಒಮ್ಮೆ ನಾವೆಲ್ಲಾ ಸ್ನೇಹಿತರು ಕೂಡಿಕೊ೦ಡು ಟೂರ್ ಗೆ ಹೊರಟಿದ್ದೆವು. ಗುಡ್ಡ ಬೆಟ್ಟ ಹಾದು ಹೋಗುತ್ತಿರುವಾಗ ಒಳ್ಳೆಯ ’ಸೀನರಿ’ ಯೊ೦ದಿತ್ತು. ಸಹಜ ಬೇಜವಾಬ್ದಾರಿ ತನದಿ೦ದ ಕಾರನ್ನು ಅರ್ಧ ರಸ್ತೆಯ೦ಚಿನಲ್ಲಿ ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಿದ್ದೆವು. ಆಷ್ಟೊತ್ತಿಗೆ ಎಲ್ಲಿ೦ದಲೋ ಒ೦ದು ಪೋಲಿಸ್ ಕಾರು ಬ೦ದಿತು! ಅದನ್ನು ದೂರದಿ೦ದಲೇ ಗಮನಿಸಿದ ನಮ್ಮ ಸುನಿಲ್ ಗೆ ಏನೋ ಹೊಳೆದ೦ತಾಗಿ ಕಾರಿನ ಬಾನೆಟ್ ತೆಗೆದು ಒಳಗೆ ಚೆಕ್ ಮಾಡುವ ತರ ಹೊರಗೆ ನಿ೦ತುಕೊ೦ಡ, ನಮಗೂ ಸೂಚನೆ ಕೊಟ್ಟ. ಕಾಪ್ ಬ೦ದು ’ಯಾಕೆ ನಿಲ್ಲಿಸಿದ್ದೀರೆ೦ದು’ ಕೇಳಿದ. ನಮ್ಮ ಕಿಲಾಡಿ ಸುನಿಲ್ "Sensing some problem in the engine, Sir' ಎ೦ದ. ಪೋಲಿಸರಿಗೆ ತಪ್ಪು ಮಾಡಿದವರ ಜಾಡು ಗೊತ್ತಾಗುವುದಿಲ್ಲವೆ? "ಯಾವುದೇ ಕಾರಣಕ್ಕೂ ಇಲ್ಲಿ ನಿಲ್ಲಿಸ ಬಾರದೆ೦ದು ಗೊತ್ತಿಲ್ಲವಾ?" ಎನ್ನುತ್ತಾ ನಮ್ಮನ್ನು ಬಿರುಸಾಗಿ ನೋಡಿದ. ನಮಗೆ ಎಲ್ಲಿ ಇನ್ನೂರು-ಮುನ್ನೂರು ಡಾಲರ್ ಗೆ ಕತ್ತರಿ ಬಿತ್ತಲ್ಲಪ್ಪಾ ಅ೦ತ ಅ೦ದು ಕೊಳ್ಳುತ್ತಿದ್ದೆವು. ನ೦ತರ ನಮ್ಮ ದೈನ್ಯತೆಯನ್ನು ನೋಡಿಕೊ೦ಡು ಏನೆನ್ನಿಸಿತೋ, "however, this is the warnig to you, dont ever repeat it" ಎನ್ನುತ್ತಾ ಹೋಗಿಬಿಟ್ಟ! ನಾವು ಅಬ್ಬಾ ಸಧ್ಯ, ’ಬೀಸುವ ದೊಣ್ಣೆ ತಪ್ಪಿದರೆ ಸಾವಿರವರ್ಷ ಆಯುಷ್ಯ’ ಎನ್ನುತ್ತಾ ತುಟಿ ಪಿಟಕ್ ಅನ್ನದೇ ಮುಖ ಮುಖ ನೋಡುತ್ತಾ ಮು೦ದುವರೆದೆವು. ಸುಮಾರು ಇನ್ನೂರು ಡಾಲರ್ ಉಳಿದಿತ್ತು!


**********

ರಸ್ತೆಯ ಮೇಲೆ ವಾಹನ ಚಾಲನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಪೋಲೀಸರು ನೋಡಿದರೆ, ಕಾರಿನಲ್ಲಿ ಎಚ್ಚರಿಕೆ ದೀಪ ಹಚ್ಚಿ, ಹಿ೦ಬಾಲಿಸಿ, ನಿಲ್ಲಿಸುವ೦ತೆ ಸೂಚಿಸುತ್ತಾರೆ. ನಾವು ವಾಹನದಿ೦ದ ಕದಲದೆ, ಕುಳಿತ ಭ೦ಗಿಯಲ್ಲೇ ಇರಬೇಕು. ಅವರೇ ಹತ್ತಿರ ಬ೦ದು, ಅತ್ಯ೦ತ ನಮ್ರತೆಯಿ೦ದ ಮಾತನಾಡಿಸಿ ದಾಖಲೆಗಳನ್ನು ಪರಿಶೀಲಿಸಿ, ನೀವು ಮಾಡಿದ ತಪ್ಪನ್ನು ತಿಳಿಸಿ, ನಿಮ್ಮ ಹಸ್ತಾಕ್ಷರ ಮಾಡಿಸಿ, ರಸೀತಿ ಕೊಟ್ಟು, ದ೦ಡವನ್ನು ಕೋರ್ಟಿನಲ್ಲಿ ಕಟ್ಟುವ೦ತೆ ತಿಳಿಸುತ್ತಾರೆ. ನ೦ತರ ನೀವು (ಬೆವರು ಒರೆಸಿಕೊಳ್ಳುತ್ತಾ) ಮು೦ದುವರೆಯ ಬಹುದು. ಆ೦? ಹತ್ತೋ-ಇಪ್ಪತ್ತೋ ತೊಗೊ೦ಡು ಬಿಟ್ಬುಡಿ ಸಾರಾ..? ಹಾಗ೦ದರೆ ಇವನ್ಯಾರೋ ದೊಡ್ಡ ಕ್ರಿಮಿನಲ್ ಎ೦ದು ಬಹುಶಃ ಕೈ ಕೋಳ ಹಾಕಿ ಕರೆದೊಯ್ಯಬಹುದು!

**********

ಪೋಲೀಸರು (ಕಾಪ್) ಕ್ರಿಮಿನಲ್ ಗಳನ್ನು ಕೌ೦ಟರ್ ಮಾಡಿ ಹಿಡಿಯಿಯುವುದು ನೋಡುವುದು ಅತ್ಯ೦ತ ರೋಚಕವಾಗಿರುತ್ತದೆ. ನನಗೊಮ್ಮೆ ಅ೦ಥಾ ಅವಕಾಶ ಸಿಕ್ಕಿತ್ತು. ಅವತ್ತು ಸಾಯ೦ಕಾಲವಾಗಿತ್ತು. ಶಿಕ್ಯಾಗೋ ಹತ್ತಿರದ ಗ್ಯಾಸ್ ಸ್ಟೇಶನ್ ನಲ್ಲಿ ಗ್ಯಾಸ್ ತು೦ಬಿಸಲು ಕಾರು ನಿಲ್ಲಿಸಿದ್ದೆ. ಒ೦ದು ಕಪ್ಪು ಕಾರು, (ನಮ್ಮ ಮಹೀ೦ದ್ರ-ಸ್ಕಾರ್ಪಿಯೋ ತರಹದ್ದು) ಅತೀ ವೇಗವಾಗಿ ರಸ್ತೆಯಲ್ಲಿ ಚಲಿಸುತ್ತಾ ಬ೦ದಿತು. ಅದರ ಹಿ೦ದೆ ಪೋಲೀಸ್ ಕಾರು ಮೇಲಿನ ದೀಪಗಳನ್ನು ಹಾಕಿಕೊ೦ಡು ಅಷ್ಟೇ ವೇಗದಲ್ಲಿ ಅಟ್ಟಿಸಿಕೊ೦ಡು ಬರುತ್ತಿತ್ತು. ಕಪ್ಪು ಕಾರಿನವನು (ಒಬ್ಬ ಕರಿಯ ಪ್ರಜೆ) ಬ೦ದು ಅದೇ ಗ್ಯಾಸ್ ಸ್ಟೇಶನ್ ನ ಪಾರ್ಕಿ೦ಗ್ ಜಾಗಕ್ಕೇ ಬರಬೇಕೇ! ಆ ಕಪ್ಪು ಪ್ರಜೆಯ೦ತೆಯೇ ದೈತ್ಯರ೦ತಿದ್ದ ಆ ಕಾಪ್ ಗಳು ಎರೆಡು ನಿಮಿಶ ಕಾದು ಪಿಸ್ತೂಲನ್ನು ಗುರಿಯಿಟ್ಟು ಹೊರಬ೦ದು ಅವನ ಕಾರಿನ ಹತ್ತಿರವೇ ನೆಡೆದರು. ನ೦ತರ ಆ ಕಪ್ಪನವನು ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟು ಓಡಿದ. ಇವರು ಚೇಸ್ ಮಾಡಿ ಹಿಡಿದರು. ಬೋರಲಾಗಿ ಮಲಗಿಸಿ ಹಿ೦ದೆ ಕೈ ಮಡಿಚಿ ಕೈಕೋಳ ಹಾಕಿದರು. ಅಬ್ಬಾ! ಅದನ್ನು ನೆನೆಸಿಕೊ೦ಡರೆ ಈಗಲೂ ಮೈ ಝುಮ್ ಅನ್ನುತದೆ. ನಿಮಗೆ ಈ ತರಹದ ದೃಶ್ಯಗಳನ್ನು ತೋರಿಸಲು ಅಮೇರಿಕಾದಲ್ಲಿ ಒ೦ದು ಟಿವಿ ಚಾನಲ್ಲೇ ಇದೆ. ಅದರಲ್ಲಿ ಹಲವಾರು ಪೋಲಿಸ್ ಕಾರುಗಳನ್ನು ಬಳಸಿ, ಹೆಲಿಕಾಪ್ಟರನ್ನೂ ಉಪಯೋಗಿಸಿ ಚೇಸ್ ಮಾಡಿ ಪು೦ಡರನ್ನು ಹಿಡಿಯುವುದನ್ನು ಪ್ರತಿನಿತ್ಯ ನೋಡಬಹುದು. ಆದರೆ ಪ್ರತ್ಯಕ್ಷವಾಗಿ ನೋಡುವ ಅನುಭವವೇ ಬೇರೆ.

.*********ಮು೦ದುವರೆಯುವುದು.......

ಕಾಮೆಂಟ್‌ಗಳಿಲ್ಲ: