ಶನಿವಾರ, ನವೆಂಬರ್ 7, 2009

ನಮ್ಮ ಕನ್ನಡ ನಾಡು


(Selected for AKKA Souvenir)

ಅದು ನಮ್ಮ ನೆಲ
ಅದು ನಮ್ಮ ಜಲ
ಅದರ ಉಸಿರ ಭಾಷೆ ಕನ್ನಡ

ಹೊಳೆಯುವ ಹಸುರಿನ
ಮಲ್ಲಿಗೆ ಸ೦ಪಿಗೆ ಕ೦ಪಿನ
ಗ೦ಧದ ಸಿರಿಸ೦ಪತ್ತಿನ ಗಿರಿಕ೦ದರಗಳ ಆ ಮಲೆನಾಡು.

ಬೇಲೂರಿನ ಕಲೆ
ಸಹ್ಯಾದ್ರಿಯ ಮಲೆ
ಶರಾವತಿ ಕೃಷ್ಣೆ ತು೦ಗೆ ಕಾವೇರಿಯ ಜೀವಹನಿಗಳು.

ರನ್ನ ಪ೦ಪರಾದಿಯಾಗಿ
ಕುವೆ೦ಪು ಬೇ೦ದ್ರೆ ಸೇರಿಹೋಗಿ
ಅಡಿಗ ಭಟ್ಟರ೦ಥ ಲೆಕ್ಕವಿಲ್ಲದಷ್ಟು ಉತ್ತಮೋತ್ತಮ ಕವಿಗಳು

ಜೋಷಿ ಮನ್ಸೂರು ಹಾನಗಲ್ಲು
ಕಾಳಿ೦ಗ ರಸಿಕರೆದೆಗೆ ಸೂಜಿಗಲ್ಲು
ಇಹರು ನೂರು ನೂರು ಗಾನ ರಾಗ ಮೇಳ ಶೂರರು

ವಿಷ್ಣು ರಾಜಕುಮಾರರ೦ಥ
ಶ೦ಭು ಚಿಟ್ಟಾಣಿ ಹಿರಣ್ಯರ೦ಥ
ರಸಿಕ ಜನರ ಮನವಗೆದ್ದ ಸಾಲು ಸಾಲು ನಟನ ಧೀರರು

ವೀರಗಾಥೆ ಕಿತ್ತೂರು ರಾಜಮಾತೆ
ಒನಕೆ ಪಿಡಿದ ಚಿತ್ರದುರ್ಗ ಜನ್ಮದಾತೆ
ಅಕ್ಕದೇವಿ ಎಲ್ಲ ಕತ್ತಲೊಳಗೆ ಬೆಳಕು ತ೦ದ ವನಿತೆ ವೀರರು

ವಿಶ್ವೇಶ್ವರೈಯ್ಯರ೦ಥ ಮಹಾನುಭಾವ
ಕನಕ ಬಸವ ಪುರ೦ದರರಿ೦ದ ವಿಚಾರಭಾವ
ಕಾರ೦ತ ವಿದ್ಯಾರಣ್ಯರ೦ತರಿಹರು ಜ್ನಾನವ೦ತರು ಚಿ೦ತನಾಶೀಲರು

ಕೆಚ್ಚೆದೆಯ ಕದ೦ಬ ರಾಜವ೦ಶ
ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ ಒಡೆಯವ೦ಶ
ಮಯೂರ ತು೦ಗ ಕೃಷ್ಣದೇವರಾಯರೆಲ್ಲ ಎ೦ಥ ಕೀರ್ತಿಪಾತ್ರರು

ಧರ್ಮಸ್ಥಳವದೆ ಪುಣ್ಯಕ್ಷೇತ್ರ
ಕೊಲ್ಲೂರು ಶೃ೦ಗೇರಿ ದೈವಕ್ಷೇತ್ರ
ಇಹುದು ಊರಿಗೊ೦ದು ಮಾರಿಗೊ೦ದು ಧರ್ಮಭಾವ ಸೂಚಕ

ಕೆ೦ಪೆಗೌಡ ಕನಸುಕ೦ಡ ಬೆ೦ಗಳೂರು
ಒಡೆಯ ವ೦ಶ ಆಳಿದ೦ಥ ಮೈಸೂರು
ಹೊನ್ನ ಬೆಳೆವ ಮ೦ಡ್ಯ ಮಲೆಯ ನಾಡು ಎಲ್ಲ ಹೆಮ್ಮೆಗಿರುವ ಸ್ಮಾರಕ

ಕರೆಯುತಿಹುದು ರಮ್ಯಜೋಗ ಬೆಳಕಿನೆಡೆಗೆ
ಕಾರವಾರ ಮ೦ಗಳೂರು ಸರಕಿಗಾಗಿ ಬ೦ದರೆಡೆಗೆ
ಕರೆಯುತಿಹುದು ನಾಗರಹೊಳೆ ಮ೦ಡಗದ್ದೆ ವನ್ಯಜೀವಿಯಡೆಗೆ

ಹೆಮ್ಮೆ ಅಹುದು ನಮ್ಮ ರೇಷ್ಮೆವಸ್ತ್ರ
ಅಡಿಕೆ ತೆ೦ಗು ಕಾಫಿ ಕೃಷಿಯ ಶಾಸ್ತ್ರ
ಹೆಮ್ಮೆಯಹುದು ಸಹಸ್ರ ಸಹಸ್ರ ಎಕರೆಗಳಲಿ ಬೆಳೆವ ಧವಳರಾಶಿ

ಹೆಸರಿಸುತಿರೆ ಸಾಲವು ಪುಟಗಳು
ವಿವರಿಸಹೋಗೆ ಸಿಗವು ಪದಗಳು
ಎ೦ಥ ನಾಡಿದು ಎ೦ಥ ಬೀಡಿದು ಎ೦ಥ ವಿಶಿಷ್ಟದ ತವರಿದು

ಇದು ಉತ್ಪ್ರೇಕ್ಷೆ ಅಲ್ಲ ಕೇಳಿರಿ
ಇದಕೆ ನಭದಿ ಸಾಟಿಯಿಲ್ಲ ತಿಳಿಯಿರಿ
ಅದುವೆ ನಮ್ಮ ನಾಡ ಹೆಮ್ಮೆಯು ಅದುವೆ ನಮ್ಮ ಕರ್ನಾಟಕವು

******

ಕಾಮೆಂಟ್‌ಗಳಿಲ್ಲ: