ಬುಧವಾರ, ಜನವರಿ 7, 2009

ದೇವೇಗೌಡರ ಹೊಸಾ ಡೀಲು (ಭಾಗ - ೨)

Published in ThatsKannada on 1st April 2009. Here is the link.

http://thatskannada.oneindia.in/column/humor/2009/0401-deve-gowdas-new-political-game.html
http://thatskannada.oneindia.in/column/humor/2009/0401-deve-gowdas-new-political-game-part2.html


ಆಗಲೇ, ದೇಶಪಾಂಡೆ ಕಾಂಗ್ರೆಸ್ ಅದ್ಯಕ್ಷ ಅಂತ ನ್ಯೂಸ್ ಗೊತ್ತಾಗಿ ಕುಣುದಾಡ್ಬುಡೊ ಅಷ್ಟು ಸಂತೋಷ ಆಗಿತ್ತು ಗೌಡ್ರಿಗೆ.

ಕುಮಾರ, ರೇವೂ ಪಾರ್ಟಿ ಆಪೀಸ್ನಾಗೆ ಪಟಾಕಿ ಹಚ್ಚಿ ಕುಸಿ ಮಾಡಿರ್ತಾರೆ ಅಂದ್ಕೊತನೆ ಇದ್ದವಾಗ,
ಪರ್ಸನಲ್ ಶೆಕೆಟ್ರಿ YSV ದತ್ತು,

"ಸಾರ್ ಮಸೀದಿ ಕಮಿಟಿಯವರು ನಿಮ್ಮನ್ನ ಇಫ್ತಾರ್ ಕೂಟಕ್ಕೆ ಕರೆಯೊದಕ್ಕೆ ಬಂದಿದಾರೆ" ಮುಂದಿನ ಡೆಸ್ಕಿಂದ ಫೋನ್ ಮಾಡಿ ಅಂದರು.
ಮಸೀದಿ ಕಮಿಟಿಯವರು ಬಂದವ್ರೆ ಅ೦ದಮೇಲಂತೂ ಅಂತೂ ಗೌಡರ ಮುಖ ಹುಣ್ಣಿಮೆ ಚ೦ದ್ರನ೦ತಾಯಿತು.
'ಎಲ್ಲಾ ಕಾಲ ಕೂಡಿ ಬರ್ತಾ ಐತೆ,... ಇನ್ನು ತಿರುಗಾ ಎಲ್ರೂ ಈ ಗೌಡನ್ನ ಆಶೀರ್ವಾದ ತಗಳಕ್ಕೆ ಎಲ್ಲಾ ಬತ್ತವ್ರೆ ನೋಡು....'

ಮನಸ್ಸಿನಲ್ಲೇ ಅಂದ್ಕಳ್ತಾ ಮುದ್ದೆಯನ್ನು ಅರ್ಧಕ್ಕೇ ಬಿಟ್ಟು ಕೈಯನ್ನು ನೀರಿಗೆ ಮುಟ್ಟಿಸಿ ಹೆಗಲಮೇಲಿದ್ದ ಟವಲ್ಲಿಗೆ ಒರೆಸಿಕೊ೦ಡು ಮನೆಯ ಮು೦ದಿನ ಮೀಟಿ೦ಗ್ ಹಾಲಿಗೆ ದಡಬಡಿಸಿಕೊ೦ಡು ಓಡಿದರು. ಹೋಗುವಾಗ ಅಲ್ಲೇ ಗೂಟದ ಮೇಲೆ ಇಟ್ಟಿದ್ದ ಬಿಳಿಯ (ಮಸೀದಿ) ತೊಪ್ಪಿ ಹಾಕ್ಕೊ೦ಡು ಹೋಗಲು ಮರೆಯಲಿಲ್ಲ.
ಚೆನ್ನಮ್ಮ ಅಡುಗೆ ಮನೆಯಿ೦ದಲೆ ತಾನು ಕೈಯ್ಯಾರೆ ಮಾಡಿದ ಮುದ್ದೆ-ಬಸ್ಸಾರು ಉಣ್ಣಲಿಲ್ಲವಲ್ಲ ಅ೦ತ ಮುನಿಸಿಕೊ೦ಡು ನೋಡ್ತಲೇ ಇದ್ದರು.

"ಸಲಾಂ ಗೌಡ ಸಾಬ್" ಮುಲ್ಲಾ ಸಾಬರು ಕೈ ಎದೆ ಹತ್ರ ಅಡ್ಡಾ ಇಟ್ಟು , ಗೌಡರೂ ಅದೇ ಸ್ಟೈಲಲ್ಲೇ ಕೈ ಅಡ್ಡ ಇಡ್ತಾ,

"ಇದೇನ್ ಮುಲ್ಲಾ ಸಾಬರೇ, ಫೋನ್ ಮಾಡಿದ್ದರೆ ನಮ್ಮ ಸಿಸ್ಯನ್ನ ಕಳುಸ್ತಿದ್ನಲ?" ಸಿಸ್ಯ ಅಂದರೆ 'ಡ್ರೈವರ್ರು' ಅಂತ ಆ ಸಾಬರಿಗೇನು ಗೊತ್ತು.
"ನೀವು ರೆಸ್ಟ್ ತೊಗೊಳ್ತಾ ಇದ್ರಿ ಅಂತ ಕಾಣುಸ್ತೈತೆ, ತೊಂದ್ರೆ ಕೊಟ್ಟೆ ಗೌಡ ಸಾಬ್" ಪಾಪ ಬೆಳಿಗ್ಗೆಯಿ೦ದ ಉಪಾಸ ಮಾಡಿದ್ದ ಅವ್ರಿಗೇನು ಗೊತ್ತು ಗೌಡರು ಏನ್ಮಾಡ್ತಿದ್ರು ಅ೦ತ.
"ಏ ಇಲ್ ಬುಡಿ, ರಂಜಾನ್ ಮಂತ್ ಅಲ್ವರಾ, ಅದಿಕ್ಕೆ ಬೆಳಿಗ್ಗಿಂದ ಉಪಾಸ ಇದ್ಕ್ಕೊ೦ಡು ಅಲ್ಲಾನ ಪ್ರೇಯರ್ ಮಾಡ್ತಿದ್ವಿ" ...
YSV ದತ್ತುಗೆ ಒಳಗೊಳಗೇ ನಗು ಬಂದರೂ ತದೆದುಕೊಂಡ್ರು.

ಸರೋಯ್ತು,.... ಅವರ್ಗೆಲ್ಲ ನಿಜ ಹೇಳಕ್ಕಾಯ್ತದ?

ಮುಲ್ಲಾ, ಗೌಡರ ತಲೆ ಮೇಲಿದ್ದ (ಸೊಳ್ಳೆಪರದೆ) ತೊಪ್ಪಿ ನೋಡಿ ಬಹಳ ಇಂಪ್ರೆಸ್ಸ್ ಆಗೋದ್ರು. ಏನು ತಲೆ, ಏನು ಬಾಡಿ, ಏನು ಲುಕ್ಕೂ...ಎಲ್ಲಾ ಅಲ್ಲಾನ ಮಹಿಮೆ.. ಆದರೆ ಟವಲ್ಲು ಇಷ್ಟ ಆಗಲಿಲ್ಲ!

ಗೌಡರು ಸುಮ್ಮನೆ ನಿಂತೇ ಇದ್ದಿದ್ದು ನೋಡಿ, ಸಾಬರೇ ಅಪ್ಪಿಕೊಳ್ಳೋಕೆ ಕೈ ಚಾಚಿದರು. ಗೌಡ ಲಗುಬಗೆಯಿ೦ದ

"ರಂಜಾನ್ ಮುಬಾರಕ್ ಸಾಬರೆ" ಅಂತ ನಿಂತಿದ್ದ ನಾಲ್ಕೂ ಜನ ಸಾಬರಿಗೆ ಎರೆಡೆರಡು ಕಡೆ ಅಪ್ಪಿ, ಅಪ್ಪಿ, ಮುದ್ದಾಡಿಬಿಟ್ಟರು. ಅವರಿಗಂತೂ ಬೆಳಿಗ್ಗೆಯಿ೦ದ ಕಂಡ ಕಂಡವರಿಗೆ ತಬ್ಬಿ
ಕೊ೦ಡು ಸಾಕ್ ಸಾಕಾಗಿತ್ತು, ಆದರೂ ಗೌಡರು ಅಲ್ವಾ....ಹೆಂಗೂ ಮುಂದಿನ ಜನ್ಮದಲ್ಲಿ ನಮ್ಮೊಳಗೆ ಹುಟ್ತೀನಿ ಅಂತ ಹೇಳವ್ರೆ....

ಅಷ್ಟೊತ್ತಿಗೆ ಆ ಜಾಗವೆಲ್ಲಾ ಸೆ೦ಟ್ ನಿ೦ದ ಘ೦ ಗುಡುತ್ತಿತ್ತು.
ಈ ಸಾಬರುಗುಳು ಎಲ್ಲಿ೦ದ ಈಪಾಟಿ ಒಳ್ಳೆ ಸೆಂಟ್ ತತ್ತಾವ್ರೆ, ಹಿಂದಿನ ಸಲ ಅವರ್ಕೊಟ್ಟಿದ್ದು ಇಷ್ಟು ಘಮ್ ಗುಡ್ತಿರ್ಲಿಲ್ವಲ..... ಇರ್ಲಿ ಬುಡು..... ಈ ಸಲ ಸಿಸ್ಯನಿಗೆ ಹೇಳಿ ದುಬಾಯಿ ಸೆಂಟ್ ತರ್ಸಣ ...

ಎಲ್ಲರೂ ಸುಮ್ನಿದ್ದಿದ್ದು ನೋಡಿ ದತ್ತು,

"ಎಲ್ಲ ಕುಂತ್ಗಳಿ ಯಾಕೆ ನಿ೦ತೇ ಇದೀರಲ"... ಏನರ ಯವಾರ ಇದ್ರೆ ಕುದುರ್ಸನ ಅಂತ ಅವರೂ ಹೊಂಚ್ ಹಾಕ್ತಾ ಇದ್ರು.

ಗೌಡರಿಗೂ ಸೆಂಟ್ ನಿಂದಾಗಿ ಒಂದಪ ಎಲ್ಲ ಮರ್ತೇ ಹೋಗಿತ್ತು.
ಅವರೂ "ಕುಂತ್ಗಳಿ , ಕುಂತ್ಗಳಿ" ಅನ್ನುತ್ತಾ ಕೈಸನ್ನೆ ಮಾಡಿದರು.
ಗೌಡರು ಸೋಫಾದಲ್ಲಿ ಕುಳಿತು, ದೆಹಲಿಯ ಸಿಂಹಾಸನ ದಿನಗಳ ಸ್ಟೈಲಿನಲ್ಲೇ ತಲೆಗೆ ಕೈ ಊರಲು ಹೊರಟರು. ಇದನ್ನು ನೋಡಿದ ಮುಲ್ಲಾ, ಡೆಲ್ಲಿ ದರ್ಬಾರ್ ತರ ಎಲ್ಲಾದ್ರೂ ನಿದ್ದೆ ಹೋಗ್ಬಿಟ್ರೆ ಮುಶ್ಕಿಲ್ ಆಗುತ್ತೆ ಅಂತ,

" ಗೌಡ ಸಾಬ್, ನಾಳೆಗೆ ರಾತ್ರೀಗೆ ಇಫ್ತಾರ್ ಕೂಟ ಮಡಿಕ್ಕೊ೦ಡಿದೀವಿ, ನೀವು ಬರ್ಬೇಕು"

'ಛೆ, ಛೆ..ಎಲ್ಲಾದರೂ ತಪ್ಸೋದು ಉಂಟೆ ಬತ್ತೀವ್ ಬುಡಿ' ಅ೦ತ ಹೇಳಣಾ೦ತ ಬಾಯಿ ತೆಗದವ್ರು...ಏನೋ ನೆನಪು ಮಾಡ್ಕೊಂಡು, ಟವಲ್ ಸರಿಸಿ ಜೇಬಿ೦ದ ಡೈರಿ ತೆಗೆದರು.

ಏನು, ಒಂದು ಸೆಕೆಂಡೂ ಪುರುಸೊತ್ತು ಇಲ್ಲ ಅನ್ನೋ ಹಾಗೆ,

" ಪ್ರೋಗ್ರಾಮು ಭಾಳ ಟೈಟ್ ಆಗ್ ಬುಟೈತೆ ಇಮಾಂ ಸಾಬ್ರೇ" ಎನ್ನುತ್ತಾ ದತ್ತೂನ ಕಡೆ ನೋಡಿದ್ರು.

ದತ್ತು ಅರ್ಥವಾಯಿತು ಬುಡಿ ಅಂದುಕೊಂಡು,
" ನಾಳೆ ಸಾಯಂಕಾಲ ಭೈರವನ್ ಗುಡಿಲಿ ಪೂಜೆ ಇತ್ತಲ ಕ್ಯಾನ್ಸಲ್ ಮಾಡಿಬುಡಾಣ ಬಿಡಿ"
ಗೌಡರೂ ಸುಸ್ತಾಗೋ ಹಾಗೆ ಪಟ್ಟಂತ ಬಿಟ್ರು!

'ಆಹಾ ಎಂಥ ಮುತ್ತಿನ೦ಥ ಮಾತಡಿದ್ಯೋ ಪಟ್ಟ ಸಿಸ್ಯ' ಅಂತ ಅನ್ನೋಣ ಅಂದ್ರೆ ಎದ್ರಿಗೆ ಸಾಬರು ಅವ್ರೆ, ಗೊತ್ತಾಗ್ಬುಡುತ್ತೆ...ತಡೆದುಕೊಂಡರು. ಟವಲ್ ಸರಿ ಮಾಡಿಕೊಂಡು,
"ಯಾವ ಯಾವ ಮುಖಂಡರು ಬತ್ತವ್ರೆ ಇಮಾಂ ಸಾಬ್ರೆ?" ರಾಜಕೀಯದಲ್ಲಿ ಗೌಡರನ್ನ ಮೀರ್ಸಕ್ಕೆ ಆಗುತ್ಯೇ?
ಒಳ ಅರ್ಥ ಆಗದ ಮುಲ್ಲಾ ಸಾಬರು ಖುಷಿಯಿಂದ
"ಗೌಡ ಸಾಬ್, ನಮ್ ದೊಡ್ ಮಸೀದಿ ಕಮಿಟಿಯಿಂದ ಬುಡಾನ್ ಸಾಬ್, ಡೆಲ್ಲಿ ಲಾಲ್ ಮಸ್ಜಿದ್ ನಿಂದ ಮಸ್ತಾನ್ ಸಾಬ್, ಭಟ್ಕಳದ ಮೀರ್ ಸಾಬ್, ಗುಂಟೂರಿನ ಹಮೀದ್ ಸಾಬ್, ಕೊಚ್ಚಿ ಬಡಾ ಮಸ್ಜಿದ್ ನಿಂದ
ಇಬ್ರಾಹಿಮ್ ಸಾಬ್....."
ಬೆರಳು ಮಡಿಸುತ್ತಾ ಮುಲ್ಲಾ ಸಾಬರ ಪಟ್ಟಿ ಬೆಳೆಯುತ್ತಲೇ ಇತ್ತು, ಗೌಡರು ದತ್ತೂ ಮುಖ ನೋಡಿದರು.
ದತ್ತು ಚಕ್ಕನೆ ಅರ್ಥ ಮಾಡಿಕೊಂಡು,
"ಅಲ್ಲ ಇಮಾಂ ಸಾಬ್ರೆ, ನಿಮ್ಮೊರು, ನಮ್ಮ್ ಪಕ್ಷ ಆಯ್ತಲ್ಲ, ಆ ಕಡೆಯಿಂದ ಯಾರೂ ಬರಾಕಿಲ್ವಾ.."
ಮುಲ್ಲಾಗೆ ಈಗ ಅರ್ಥ ಆಯಿತು,
"ಓ ಅವರಾ, ಅವ್ರುನ್ನ ಬುಟ್ಬುಡಕೆ ಆಯ್ತದ... ಖರ್ಗೆ ಸಾಬ್, ಧರಮ್ ಸಿಂಗ್ ಸಾಬ್, ಸಿದ್ರಾಮಯ್ಯ ಸಾಬ್...." ನೆನಪು ಮಾಡ್ ಮಾಡ್ಕೊಂಡು ಬೆಟ್ಟು ಮಾಡಿಸ್ತಾನೆ ಇದ್ರು. ಗೌಡ್ರ ಮುಖ ಸಣ್ಣಕಾಕ್ತ ಇದ್ದಿದ್ದನು ನೋಡಿದ ಜೋತೆಯಲ್ಲಿದ್ದವರೊಬ್ರು
"ಸಿದ್ರಾಮಯ್ಯ ಸಾಬ್ ನಹಿ...ಆತಾ" ಅಂದ್ರು.
ಸದ್ಯ...! ಗೌಡರು ಒಳಗಾದ ಆನಂದ ತೋರ್ಸ್ಲಿಲ್ಲ., ಔರದ್ದು ಒಳರೂಟು ಬೇರೆದೇ ಇತ್ತು,
"ದೇಶಪಾಂಡೆ ಬರಾಕಿಲ್ವಾ?" ಮುಲ್ಲಾ ಕಡೆ ನೋಡಿ.
ಮರಿ ಮುಲ್ಲಾ ತಾವೇನು ಕಮ್ಮಿ ಅಂತ ಬಾಯಿ ಹಾಕಿದರು,
"ಔರದ್ದು ಹೊಸ ಅಪಾಯಿಂಟು ಅಲ್ವ, ಅವ್ರನ್ನ ಕರೆಯಕ್ಕೆ, ಗಂದದ ಮರದ ಹಾರ ಜತೆಗೆ ಇಬ್ರನ್ನ ಕಳ್ಸಿ ಕೊಟ್ಟಿದೀವಿ" ಜುಬ್ಬದ ಕಾಲರ್ ಸರಿ ಮಾಡ್ಕಂಡ್ರು.

"ಜೀ.. ಗಂದದ್ ಮರ ನಹೀಜಿ, ಗಂದದ್ ಪೂಲ್ ಹಾರ" ಬಡಾ ಇಮಾಂ ಸಾಬ್ ವಾಕ್ಯ ಸರಿ ಮಾಡಿದರು.
"ಹೂಂ ಹೂಂ ಅದೇ ಅದೆ... ಪೂಲ್ ಹಾರ." ಮರಿ ತಿದ್ದಿ ಕೊಂಡರು!

ದೇಶಪಾಂಡೆ ಬಂದೇಬರ್ತಾರೆ ಅಂತ ಗೌಡರಿಗೆ ಕರಾರುವಾಕ್ಕಾಗಿ ಗೊತ್ತಿತ್ತು. ಹಾಗಾಗಿ ಇನ್ನೇನು ಕೆಲಸ ಆಯ್ತಲ ಅ೦ತ ಗೌಡರು ಆಕಳಿಸುತ್ತಾ ಗಡಿಯಾರದ ಕಡೆ ನೋಡಿದರು. ಇಮಾಂ ಸಾಬರಿಗೆ ಅರ್ಥವಾಯಿತು.

"ಹಂಗಾದ್ರೆ ನೀವು ಹಾಜುರ್ ಇರ್ತೀರಲ್ಲ ಗೌಡಸಾಬ್" ಮುಲ್ಲಾ ಎದ್ದು ನಿಂತರು.
ಗೌಡರು ದತ್ತೂನ ಕಡೆ ನೋಡಿದ್ರು. ಮುಲ್ಲಾಗೆ ಗೌಡರ ಒಳ ಮನಸ್ಸು ಗೊತ್ತಾಗ್ಬುಡ್ತು.

ಒಹ್ ಬೀಗದ ಕೈ ಇಲ್ಲೈತಾ, "ದತ್ತ ಸಾಬ್ ಆಪ್ ಭೀ ಹಾಜುರ್ ಹೋ ಸ್ಸಾಬ್" ಅವ್ರು ಕರಿದೆಇದ್ರು ಗೌಡರಿಗೆ ಅಸಿಸ್ತೆಂಟು ಒಬ್ರು ಬೇಕೆ ಬೇಕಲ್ಲ...
ಅನಾಯಾಸವಾಗಿ "ಆಗ್ಲಿ ಬಿಡಿ ಹಂ ಆಯೇಂಗೆ" ತಪ್ಪೋ ಸರಿಯೋ ಆ ಟೈಮಿಗೆ ಅವರಾ ಭಾಷೇಲೆ ಉತ್ರ ಕೊಟ್ರು.
ಎಲ್ರುನ್ನು ಮತ್ತೊಮ್ಮೆ ಎರೆಡೆರಡು ಕಡೆ ತಬ್ಬಿ ತಬ್ಬಿ "ಬರ್ತೀವಿ ಬುಡಿ" ಅಂತ ಕಳಿಸಿ ಕೊಟ್ರು.
ಗೌಡರ ಟವಲ್ಲು ಈಗ ಸುಮಾರು ಸೆಂಟ್ ಅ೦ಟ್ಕ೦ಡು 'ಘಮ್' ಅಂತಿತ್ತು.
ಕಾರು ಹತ್ತುವುದನ್ನೇ ನೋಡುತ್ತಾ ಟಾಟಾ ಮಾಡಿದರು ನಮ್ಮ 'ಮಾಜಿ'. ದತ್ತು ಕಾರು ಹತ್ತಿರಾನೆ ಹೋಗಿ ಮುಲ್ಲಾ ಸಾಬರ ಹತ್ತಿರ ಏನೋ ಪಿಸುಗುಟ್ಟಿ ವಾಪಾಸ್ ಬಂದರು.

----------;;------------

"ಅಲ್ಲಾ ದತ್ತು, ದೇಶ್ಪಾಂಡೆಗೆ ಶುಭಾಶಯ ಜೊತೆಗೆ ಎನಾನ ಕಳುಸ್ ಕೊಡಬೇಕಾಗಿತ್ತಲಪ್ಪಾ" , ಎಂದರು ದೈನ್ಯತೆಯಿಂದ.
"ಎಲ್ಲ ವ್ಯವಸ್ಥೆ ಆಗಿದೆ ಸ್ಸಾರ್, ಒಂದು ದೊಡ್ಡ ಹೂಗುಚ್ಛ, ಹಣ್ಣು, ಹಾರ, ಸ್ವೀಟು...ಕಳುಸ್ ಕೊಟ್ಟಿದೀನಿ"
ದತ್ತು ಪೆದ್ದು ಪೆದ್ದಾಗಿ ವರದಿ ಮಾಡಿದರು.
ಅದಕ್ಕೆ ಗೌಡರು,
"ಅಣ್ಣು, ಊವು ಅಲ್ಲಪ್ಪಾ, ರೋಲೆಕ್ಸ್ ವಾಚು ಕೊಡಬೇಕು ಅಂತ ಏಳುದ್ನಲ ಕೊಟ್ಟಿಲ್ವ?"
ತಮ್ಮ ಪ್ರೇಮದ ಕುರುಹಾಗಿ ಅಷ್ಟೂ ಕೊಡ್ದೊರೆ ಹೇಗೆ, ಮುಂದಿನ ಎಲೆಕ್ಷನ್ ಡೀಲ್ ಈಗ್ಲಿಂದಲೇ ಶುರುಹಚ್ಕಳದು ಬೇಡ್ವ?
ಆದರೆ ದತ್ತಣ್ಣ ಪಳಗಿರೋರು ಬುಟ್ಬುಡ್ತಾರ.., ಪತ್ರಕರ್ತರ ಎಂಥೆಂತ ಕಮಂಗಿ ಪ್ರಶ್ನೆಗಳಿಗೆ ಉತ್ರಕೊಟ್ಟವರು, ಬತ್ತಳೆಕೆಲಿ ಯಾವ್ದರ ಒಂದು ಬಾಣ ಇಟ್ಕೊಂಡೇ ಇರ್ತಾರೆ.

"ವಾಚನ್ನ ನೀವೇ ಕೈಯ್ಯಾರ ಕೊಟ್ರೆ ಚಂದಾಕಿರುತ್ತೆ ಅಲ್ವ ಸ್ಸಾ..."
ದತ್ತಣ್ಣನ ಜಾಣತನ ಮೆಚ್ಚಿಕೊಂಡರು ಗೌಡರು.
ಎಷ್ಟಾದರೂ ಪಟ್ಟದ ಸಿಸ್ಯ ಅಲ್ವ............. ಗೌಡರು ಅಂತ ಹೆಗಲು ಮೇಲೆ ಕೈ ಹಾಕಿಕೊಂಡು
"ನಾಳೆ ಇಪ್ತಾರ್ ಕೂಟದಾಗೆ ದೇಶಪಾಂಡೆ ಪಕ್ದಾಗೆ ಸೀಟ್ ಮಾಡ್ಬುಡಪ್ಪ". ಅರ್ಥವಾಗಿ "ಹ್ಞೂ ಸ್ಸಾ....ಅದೇನ್ ಬುಡಿ ಆಯ್ತು.." ಗೋಣು ಅಲ್ಲಾಡಿಸಿದರು ದತ್ತಣ್ಣ."ಲೇಟಗೊಯ್ತು, ನಾನು ಬರ್ತೀನ್ ಸ್ಸಾ, ನಾಳೆ ಹೊತ್ಗೆಲ್ಲ ಬಂಬುಡ್ತೀನಿ" ಕೈ ವಾಚು ನೋಡುತ್ತಾ ದತ್ತು ಬಡ ಬಡ ಹೇಳಿದರು."ಮುದ್ದೆ ಉಂಡ್ಕಂಡು ಹೋಗುವೆಯಂತೆ ಬಾರಪ್ಪ" ಗೌಡರು ಪ್ರೀತಿಯಿಂದ ಕರೆದರು.
ಆದರೆ ದತ್ತೂ ಆಗಲೇ ಮನೆಯಲ್ಲಿ ಹೆಂಡತಿ ಅಡುಗೆಯ ನುಗ್ಗೇಕಾಯಿ ಸಾರು ನೆನೆಸ್ಕೊ೦ಡಾಗಿತ್ತು, ಸರ ಸರ ಹೆಜ್ಜೆ ಹಾಕಿದರು.
ಗೌಡರು ಲೆಕ್ಕಾಚಾರ 'ಎಲ್ಲಾ ಸರಿಯಾಗ್ತಾ ಐತೆ, ಹೊದ್ವರ್ಸ ರುದ್ರ ಚಂಡೀ ಯಾಗ ಮಾಡ್ಸಿದ್ದು ಕೆಲ್ಸುಕ್ಕೆ ಬರ್ತಾ ಐತೆ' ಅಂತ ಮನುಸ್ನಾಗೇ ಅಂದ್ಕೊಳುತ್ತ ಒಳಗ್ ಬಂದ್ರು.

ಚೆನ್ನಮ್ಮ ಇನ್ನೂ ಊಟಮಾಡದೆ ಟಿವಿಲಿ ಕನ್ನಡ ಸೀರಿಯಲ್ ನೋಡ್ತಾ, ಕಾಯ್ತಾನೆ ಇದ್ರು.
ಆಹಾಹ್ ಅದೇನ್ ಘಮ್ ಅಂತ ಐತೆ, ಮುಲ್ಲಾ ಸಾಬರು ಯಾವ್ದೋ ಹೊಸ ಸೆಂಟ್ ಕೊಟ್ ಹೋಗಿರ್ಬೇಕು, ಆಮೇಲ್ ಕೇಳಣ.
"ಬಿಸಿ ಮುದ್ದೆ ತಂದು ಇಕ್ಲ ದೇವ್ರು" ಚೆನ್ನಮ್ಮ ಗೌಡರ ಮುಖವನ್ನೇ ನೋಡುತ್ತಾ.

"ಆಯ್ತಮ್ಮ ಈಗ ತಂದು ಮಡಗು" ಗೌಡರು ತಲೆಯಮೇಲಿದ್ದ ಮಸೀದಿ ತೊಪ್ಪಿಯನ್ನು ಗೂಟದ ಮೇಲೆ ತಗುಲಿ ಹಾಕುತ್ತಾ ಹೇಳಿದ್ರು.
ಯೆಂಗೂ ಒಟ್ಟೆ ಹಸಿತ ಇತೆ ಒ೦ದೆಲ್ಡು ಮುದ್ದೆ ಇಕ್ಕೊಂಡ್ರೆ ಒಟ್ಟೆ ತಣ್ಗಾಯ್ತದೆ.
ತಟ್ಟೆಯನ್ನ ಕೈಯಲ್ಲಿ ತೆಗೆದು ಕೊಳ್ತಾ ಇನ್ನೇನು ಮುದ್ದೆಗೆ ಕೈ ಹಾಕೋ ಹೊತ್ತಿಗೆ ಗೌಡರ ಪರ್ಸನಲ್ ಫೋನು ಮತ್ತೆ ಕುರ್ರ್ ಕುರ್ರ್ ಅಂತು. ಆಗಲೇ ಮುಂಸ್ಕೊಂಡಿದ್ದ ಚೆನ್ನಮ್ಮಂಗೆ ಫೋನು ವೈರು ಕತ್ತರಿಸಿ ಹಾಕುವಷ್ಟು ಸಿಟ್ಟು ಬಂತು.
ಗೌಡರಿಗೆ ಸಂಜ್ಞೆ ಮಾಡಿ ತಾನೆ ತೋಗೊಳ್ತಿನಂತ ಪೋನು ತೊಗೊಂಡ್ರು.

"ಆಲೋ....." ಆಂಗ್ಲೋ ಇಂಡಿಯನ್ ರಿಸಪ್ಶನಿಸ್ಟ್ ತರ ಹೇಳಬೇಕು ಅಂತ ಚ್ನೆನ್ನಮ್ಮಾವ್ರಿಗೂ ಆಸೆ ಆದರೆ ಅದೆಂಗೋ ಆಕಡೆಯವರಿಗೆ ಗೊತ್ತಾಗ್ಬುಡ್ತೈತೆ.
"ದೇವೇ ಗೌಡಾಜಿ ಇದಾರೇನೂ" ಯಾರೋ ಆಕಡೆಯಿಂದ ರಾಗವಾಗಿ ಕೇಳಿದರು. ಚೆನ್ನಮ್ಮಗೆ ಎಲ್ಲೋ ಬಹಳ ಸಾರಿ ಕೇಳಿದೀನಲ ಈ ಧ್ವನೀನ.... ಆದರೂ ತಾವು ಮಾಜಿಯವರ ಹೆಂಡತಿ ಅಲ್ವೇ? ಸುಮ್ಮ ಸುಮ್ಮನೆ 'ಗೌಡರು ಇದ್ದಾರೆ' ಅನ್ನೋಕ್ಕಾಯ್ತದ?
"ನೀವ್ಯಾರಪ್ಪಾ" ಮತ್ತೆ ಆಂಗ್ಲೋ ಇಂಡಿಯನ್ ರಿಸಪ್ಶನಿಸ್ಟ್ ನೆನಪು ಮಾಡಿಕೊಂಡರು."ನಾವು ದೇಶಪಾಂಡೆ, ಚೆನ್ನಮ್ಮಾಜಿ, ಗೊತ್ತಾಗ್ಲಿಲ್ವೇನೂ" ತಾಯಿಯ ಹತ್ತಿರ ಮಗುವಿನ ತರ ಮತ್ತೆ ರಾಗವಾಗಿ.
" ಓ... ದೇಶಪಾಂಡೆಯವರಾ.... ಅನ್ಕೊಂಡೆ....."

ಗೌಡರಿಗೆ ಗೊತ್ತಿತ್ತು, ಸಾಮಾನ್ಯದವರಿಗೆ ತಮ್ಮ ಪರ್ಸನಲ್ ಫೋನ್ ಗೊತ್ತಿಲ್ಲ ಅಂತ. ಮತ್ತೆ ನೀರಿಗೆ
ಕೈ ಅದ್ದಿ ಟವಲ್ ಸರಿ ಮಾಡ್ಕಂಡು ದಡಬಡ ಬಂದರು. ಕಾಂಗ್ರೆಸ್ಸ್ ಅದ್ಯಕ್ಷ ಅಂದ್ರೆ ಸುಮ್ನೆನಾ?

ತಮಿಳ್ನಾಡಿನ ಜ್ಯೋತಿಷಿಗೆ ಈ ಸಲ ಮಾಮೂಲಿನ ಜತೆ ಚಿನ್ನದ ಬ್ರೇಸ್ಲೆಟ್ಟನ್ನೇ ಕಾಣಿಕೆ ಆಕ ಬೇಕು.....!

"ಆಲೋ" ಆ ಕಡೆ ಯಾರು ಅಂತ ಗೊತ್ತಿದ್ರೂ ತೋರಿಸಿ ಕೊಳ್ಳದೆ.
"ನಮಸ್ಕಾರ್ರೀ ಗೌಡಜೀ, ದೇಶ್ಪಾಂಡೆ"

"ಗೊತ್ತಾಯ್ತ ಬಿಡಿ ಕಾಂಗ್ರೆಸ್ಸ್ ಅಧ್ಯಕ್ಷರೂ ಅನ್ನಿ" ಎಷ್ಟೇ ಗೆಳೆಯನಾದ್ರೂ ಪದವಿ ದೊಡ್ಡದು ಅಲ್ವೇ?"ಎಲ್ಲಾ ನಿಮ್ಮ ಆಶೀರ್ವಾದ ಅಲ್ವೇನೂ" ದೈನ್ಯತೆಯಿಂದ. ಗೌಡರಿಗೆ ಒಮ್ಮೆ ರಾಮಕೃಷ್ಣ ಹೆಗಡೆಯವರು ನೆನಪಾದರೂ ತೋರಿಸಿಕೊಳ್ಳದೆ,
"ನಮ್ಮಾಸೀರ್ವಾದ ಏನ್ಬಂತು, ಎಲ್ಲಾ ಡೆಲ್ಲಿ ಮೇಡಂ ಆಶೀರ್ವಾದ ಅನ್ನಿ" ಗೌಡರು ಮನದುಂಬಿ ಹೇಳಿದರು."ನಿಮ್ಮನ್ನ ಭೆಟ್ಟಿ ಮಾಡೋಕ್ಕೆ ಬರಬೇಕು ಯಾವಾಗ ಇಟ್ಕೊಳೂಣೂ",.... 'ಸೌಹಾರ್ದಯುತ ಭೇಟಿ' ಅಂತ ಪೇಪರಿನೋರಿಗೆ ಸ್ಟೇಟ್ಮೆಂಟ್ ಕೊಟ್ಟು ಪಾರ್ಟಿ ವಿಷ್ಯ ಮಾತಾಡೋಣ ಅಂತ ಆಗಲೇ ತೀರ್ಮಾನ ಮಾಡ್ಕೊಂಡು ಹೇಳಿದರು.
ಆದ ಖುಷಿಗೆ 'ಈಗಲೇ ಬಂದ್ಬಿಡಿ' ಅಂತ ಹೇಳನ ಅಂತ ಅನ್ನುಸ್ತು ಗೌಡರಿಗೆ, ಆದರೂ ರಾಜಕೀಯ ಮುತ್ಸದ್ದಿಯಲ್ಲವೇ? ಇನ್ಮೇಲೆ ರೇವೂನ ಹೈಲೈಟು ಮಾಡ್ಬೇಕು, ಕೊನೇಪಕ್ಷ ಮುಂದಿನ ಉಪ ಮುಖ್ಯ ಮಂತ್ರಿ

ಅಲ್ವೇ? ಇನ್ಮುಂದೆ ಎಲ್ಲಾ ಮೀಟಿ೦ಗೀಗೂ ಅವುನ್ನೇ ಇಟ್ಕೊಂಡು ಮಾತಾಡಬೇಕು.
ಆಗಲೇ ಪೆಪರ್ರಿಗೆ ಸ್ಟೇಟ್ಮೆಂಟ್ ಕೊಡಬೇಕು ಅಂತ ಅವರ 'PS' ಕಾಯ್ತಾ ಇದ್ರು. ( ದೇಶ್ ಪಾ೦ಡೆಯವರು ತಮ್ಮ ಸೆಕ್ರೆಟರಿಗೆ 'ಪಿ ಎಸ್' ಅ೦ತಾರೆ)
ಅದಕ್ಕೆ ದೇಶ್ ಪಾ೦ಡೆಯವರೇ ಬೇಗ ಮುಗಿಸಿ ಬಿಡೋಣ ಅಂತ,"ನಾಡಿದ್ದು ಸ೦ಜೇಗೆ ಇಟ್ಕೊಳ್ಳೋಣೂ" ಅಷ್ಟೊತ್ತಿಗೆ ಪೇಪರ್ರಲ್ಲಿ ಬಂದು ಪ್ರಚಾರಾನೂ ಚೆನ್ನಾಗಿ ಆಗುತ್ತದೆ, ಅಲ್ವೇ..
"ಯಾಕೆ ದೇಶ್ಪಾಂಡೆ, ನಾಳೆ ಇಪ್ತಾರ್ ಕೂಟಕ್ಕೆ ಬರಲ್ವ?" ಅಲ್ಲೇ ಮಾತಾಡಣ ಅಂತ ಗೌಡರಿಗೆ.

ಈ ಗೌಡರಿಗೆ ಆತುರದ ಬುದ್ದಿ, ಬಂದರೂ ಅಲ್ಲೇನ್ ಮಾತಾಡಕ್ಕೆ ಆಗುತ್ತೇನೂ? ಆದರೂ
ತೋರಿಸಿಕೊಳ್ಳದೆ,
"ಯಾರೋ ಸಾಬರು ಹುಡುಗ್ರು ಬಂದು ಕರೆದು ಹೋಗಿದಾರೆ, ...ನೋಡೋಣೂ"

ಏ ದೇಶ್ಪಾಂಡೆ ದೊಡ್ದವನಾಗಿಬಿಟ್ಟೆಯ ಈ ದೇವೇಗೌಡನ ಮುಂದೆ, ಒಂದ್ಸಾರಿ ಗುಡುಗಿ ಬಿಡ್ಬೇಕು ಅನ್ನುಸ್ತು. ತಾಳ್ಮೆ, ತಾಳ್ಮೆ ಎಂದಿತು ರಾಜಕೀಯ ಧರ್ಮ.

ಇರಲಿಬಿಡು ಯೆಂಗೂ ನಾಡಿದ್ದು ಬತ್ತೀನಿ ಅಂತ ಅವ್ನೆ ಯೇಳವ್ನೆ...
"ಹೌದು ಬಿಡಿ ಅಲ್ಲೇನೂ ಮಾತಾಡಕ್ಕೆ ಆಗಲ್ಲ, ನಾಡಿದ್ದೇ ಎಲ್ಲಾ ಮಾತಾಡೋಣ" ಹೆಂಗೂ ರೇವೂನ, ಕುಮಾರನ್ನ ಕರ್ಸಕ್ಕೆ ಟೈಮೂ ಸಿಕ್ತು.

"ಸರಿ ಹಂಗಾದ್ರೆ, ಮತ್ತೆ ಸಿಗೋಣೂ, ನಮಸ್ಕಾರ್ರೀ......." ಸದ್ಯ ಅಪಾಯಿಂಟ್ಮೆಂಟ್ ಫಿಕ್ಸ್ ಆಯ್ತಲ್ಲ ಅಂತ ದೇಶ್ಪಾಂಡೆಯವರ 'ಪಿಯಸ್ಸಿ'ಗೂ ಸಮಾಧಾನ ಆಯ್ತು. ''


ದೇವೇಗೌಡರಿಗೆ ಇನ್ನೇನು ಆಕಾಶ ಒಂದೇಗೇಣು..... ಮತ್ತೆ ಒಳ್ಳೆ ದಿನಗಳು ಬತ್ತಾ ಅವೆ, ಇನ್ನೇನು ಆರಾರ್ ಜನ್ಮಕ್ಕೂ ಲಕ್ಸ್ಮಿ ಕಾಲ್ಮುರ್ಕಂಡು ಬಿದ್ದಿರ್ತಾಳ್ಬಿಡು.
ಇನ್ಮೇಲೆ ಮತ್ತೆ ಎಲ್ಲಾ ಓಡಿಹೋದ ಪಾರ್ಟಿ MLA ನನ್ಮಕ್ಕಳು ಕಾಲಿಗ್ ಬಿದ್ ವಾಪಸ್ ಬತ್ತವ್ರೆ ಬುಡು.
ರಾಷ್ಟ್ರಪತಿ ಆಗೊ ಆಸೇನೂ ಅಂಗೇ ಮಡಿಕ್ಕ ಬೋದು.
ಫೋನಿಟ್ಟಿದ್ದೇ, ಡ್ಯಾನ್ಸ್ ಮಾಡ್ಕೋಂತ ಬಂದು ಧಪ್ಪ೦ತ ಕುಂತು ಮುದ್ದೆಗೆ ಕೈ ಹಾಕಿದ್ರು.

ಚೆನ್ನಾಮ್ಮಜಿಗೆ ಗೌಡರ ಡ್ಯಾನ್ಸ್ ನೋಡ್ದಲೇ ಬಹಳೇ ದಿನ ಆಗೋಗಿತ್ತು!


1 ಕಾಮೆಂಟ್‌:

ದತ್ತಾತ್ರಿ ಹೇಳಿದರು...

ಒಂದೊಂದು ಸಾಲನ್ನೂ ವ್ಯಕ್ತಿಗಳ ಸ್ವಭಾವ ಮತ್ತು ಅನೇಕ ಘಟನೆಗಳಿಗೆ ತಳುಕು ಹಾಕುವ ಶೈಲಿ ತುಂಬಾ ಸೊಗಸು! ಮುಂದಿನ ಲೇಖನಗಳಿಗೆ ಕಾಯುತ್ತಿರುತ್ತೇನೆ!

ದತ್ತಾತ್ರಿ