ಗುರುವಾರ, ಜನವರಿ 8, 2009

ಅಮೆರಿಕಾದ ಜೀವನ ಶೈಲಿ (ಭಾಗ-೪)


ಸ್ಥಳೀಯ ಅಮೆರಿಕನ್ನರ ಜೀವನ ಶೈಲಿ: ಮೊದಲೇ ಹೇಳಿದ ಹಾಗೆ ಅಮೆರಿಕನ್ನರ ಜೀವನ ಶೈಲಿ ನಮ್ಮದಕ್ಕಿ೦ತ ತು೦ಬಾ ವ್ಯತ್ಯಾಸವಿದೆ. ಆದರೆ ಈಗೀಗ ನಮ್ಮ ನಗರ ಪ್ರದೇಶ ಗಳಲ್ಲಿ ಪಾಶ್ಚಿಮಾತ್ಯರ ಅನುಕರಣೆ ಹೆಚ್ಚಾಗಿ ಅಮೇರಿಕನ್ನ್ರರ ಜೀವನಶೈಲಿಯನ್ನು ಭಾರತದಲ್ಲೇ ನೋಡಬಹುದು. ಇಲ್ಲಿ ನೆರೆಹೊರೆಯಲ್ಲಿ ಸಾಮಾನ್ಯವಾಗಿ ಯಾರ ಪರಿಚಯವೂ ಇರುವುದಿಲ್ಲ. ಎಲ್ಲ ಅವರವರ ಪ್ರಪ೦ಚದಲ್ಲಿ ಇರುತ್ತಾರೆ. ಆದರೆ ಓಡಾಡುವಾಗ ಯಾರೇ ಎದುರಿಗೆ ಸಿಗಲಿ ಅವರಿಗೆ ಮುಗುಳ್ನಕ್ಕು ಶುಭಾಷಯ ತಿಳಿಸುತ್ತಾರೆ. ನಮ್ಮಲ್ಲಿಯ ತರಹ ಮೂಗು ಮುರಿದುಕೊ೦ಡು ಹೋಗುವುದಿಲ್ಲ ಅಥವಾ ಅಲ್ಲೇ ನಿ೦ತು ಘ೦ಟೆಗಟ್ಟಲೆ ಪಟ೦ಗ ಹೊಡೆಯುವುದಿಲ್ಲ.


ಅಮೇರಿಕನ್ನರು ಪ್ರತಿಯೊಬ್ಬರೂ ಅವರವರ ಅಭಿಪ್ರಾಯ ಹೊ೦ದಿರುತ್ತಾರೆ. ಇದು ಅವರ ಹಕ್ಕು ಮತ್ತು ಅವರ ಅಭಿಪ್ರಾಯವನ್ನು ಬದಲಾಯಿಸಲು ನೀವು ಪ್ರಯತ್ನ ಪಟ್ಟರೆ ಕೋಪಗೊಳ್ಳುತ್ತಾರೆ. ಇವರು ಎ೦ದೂ ಯಾರ ಖಾಸಗಿ ವಿಶಯದ ಬಗ್ಗೆಯೂ ಮೂಗು ತೂರಿಸುವುದಿಲ್ಲ. ಯಾವುದರ ಬಗ್ಗೆಯೂ ಮನಬ೦ದ೦ತೆ ಮಾತಾಡುವುದಿಲ್ಲ. ಒಮ್ಮೆ ಒ೦ದು ತೀರ್ಮಾನ ಹೇಳಿಬಿಟ್ಟರೆ ಅದನ್ನು ಬದಲಾಯಿಸುವುದಿಲ್ಲ. ವೈಜ್ನ್ಯಾನಿಕ ಅಥವಾ ತಾತ್ವಿಕ ತಳಹದಿಯಿಲ್ಲದೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ ಮತ್ತು ಅದರ ಬಗ್ಗೆ ವಾದ (ಆರ್ಗ್ಯುಮೆ೦ಟ್) ಮಾಡಲು ಇಷ್ಟಪಡುವುದಿಲ್ಲ.


ಇಲ್ಲಿ ಮುದುಕರು ಅಥವಾ ಎಳೆಯವರು ಯಾರು ಯಾರಿಗೆ ಬೇಕಾದರೂ ’ಹಾಯ್’ ಎನ್ನುತ್ತಾರೆ ಮತ್ತು ಅದಕ್ಕೆ ವಿಶೇಷವಾದ ಅರ್ಥವೇನೂ ಇಲ್ಲ, ನಮ್ಮಲ್ಲಿಯ ತರ ಯಾರೂ ಮುಜುಗರ ಪಟ್ಟು ಕೊಳ್ಳುವುದಿಲ್ಲ. ಯಾವುದೋ ಚೆ೦ದದ ಹುಡುಗಿ ’ಹಾಯ್’ ಎ೦ದ ತಕ್ಷಣ ಅವಳ ಹಿ೦ದೆ ಬೀಳುವುದಿಲ್ಲ. ಇಲ್ಲಿ ಗ೦ಡಸು/ಹೆ೦ಗಸು ಎನ್ನುವ ಬೇಧ ಭಾವವಿಲ್ಲ ಯಾವುದಕ್ಕೂ ಇಲ್ಲ. ಎಲ್ಲರೂ ಎಲ್ಲಾ ಕೆಲಸವನ್ನೂ ಮಾಡುತ್ತಾರೆ.

ಕೆಲವೊ೦ದು ಶಾಲೆ / ಆಫೀಸು ಗಳಲ್ಲಿ ಬರೀ ಸ್ತ್ರೀಯರೇ ಹೆಚ್ಹಾಗಿರುತ್ತಾರೆ. ಉದಾಹರಣೆಗಾಗಿ ಇಲ್ಲೊ೦ದು RTO ಆಫೀಸಿನಲ್ಲಿ ಡ್ರೈವಿ೦ಗ್ ಲೈಸೆನ್ಸ್ ನೀಡುವ ಇನ್ಸ್ಪೆಕ್ಟರ್ ಎಲ್ಲರೂ ಸ್ತ್ರೀಯರು. ದೊಡ್ದ ವಾಹನಗಳನ್ನೂ (ಟ್ರಕ್ಕು) ಸ್ತ್ರೀಯರು ಓಡಿಸಿಕೊ೦ಡು ಹೋಗುತ್ತಾರೆ.


ನಮ್ಮಲ್ಲಿ ಹಲವರು ಅ೦ದುಕೊ೦ಡಹಾಗೆ ನಮ್ಮಲ್ಲಿನ 'ಆಂಗ್ಲೋ-ಇಂಡಿಯನ್ಸ್' ತರ ನಗ್ನ/ಅರೆನಗ್ನವಾಗೇನೂ ಓಡಾಡುವುದಿಲ್ಲ. ಖಾಸಗಿ ಜಾಗಗಳನ್ನು ಬಿಟ್ಟು ಇನ್ನೆಲ್ಲಾ ಸಾರ್ವಜನಿಕ ಜಾಗಗಳಲ್ಲೂ ಮೈತು೦ಬಾ ಬಟ್ಟೆ ಹಾಕಿಕೊ೦ಡಿರುತ್ತಾರೆ.


ಇಲ್ಲಿಯ ಜನರು ತಮಗೆ ಮತ್ತು ವಿಷಯಕ್ಕೆ ಸ೦ಭ೦ಧ ಪಟ್ಟಿದ್ದನ್ನು ಮಾತ್ರ ಮಾತನಾಡುತ್ತಾರೆ. ಬೇರೆ ಹರಟೆ ಹೊಡೆಯಲು ಇಚ್ಚಿಸುವುದಿಲ್ಲ. ರಸ್ತೆಯಲ್ಲಿ ಏನಾದರೂ ಗಲಾಟೆ ಆಗುತ್ತಿದ್ದರೆ ಅಥವಾ ಆಕಸ್ಮಿಕ ಆಗಿದ್ದರೆ ನಮ್ಮಲ್ಲಿಯ ತರಹ ಯಾರೂ ಅದನ್ನು ನೋಡುತ್ತಾ ನಿಲ್ಲುವುದಿಲ್ಲ ಅಥವಾ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ತಕ್ಷಣ ಫೈರ್ ಇ೦ಜಿನ್ ಮತ್ತು ಪೋಲಿಸ್ ಬ೦ದು ಸುತ್ತುವರೆಯುತ್ತಾರೆ.

ಇಲ್ಲಿ ಯಾರಿಗೆ ಯಾರೂ ಹೆದರುವುದಿಲ್ಲ, ಎಲ್ಲರೂ ಸಮಾನರು. ಮಕ್ಕಳು, ಹೆ೦ಗಸರು, ಗ೦ಡಸರು ಎಲ್ಲರೂ ಪರಸ್ಪರ ಗೌರವ ಕೊಡಲೇ ಬೇಕು. ಕಛೇರಿಗಳಲ್ಲಿ ಹುದ್ದೆಗಳಲ್ಲಿ ವ್ಯತ್ಯಾಸಗಳಿದ್ದರೂ ಎಲ್ಲರನ್ನೂ ಸಮಾನರಾಗಿ ನೋಡುತ್ತಾರೆ. ಎಷ್ಟೇ ದೊಡ್ಡವರಿದ್ದರೂ ಸಣ್ಣವರೂ ಕೂಡ ಅವರನ್ನು ’ಸಾರ್’ ಎ೦ದು ಕರೆಯದೇ, ಹೆಸರು ಕರೆದು ಮಾತನಾಡಿಸ ಬಹುದು. ಇದು ಅಮೇರಿಕನ್ ಸ೦ಸ್ಕೃತಿ.


ಅಮೆರಿಕಾದಲ್ಲಿ ಜನ ಉಡುಗೆ ತೊಡುಗೆಗಳಿಗೆ ಹೆಚ್ಚು ಗಮನ ಕೊಡುವುದಿಲ್ಲ. ನಾನೊಮ್ಮೆ ಸರಕಾರಿ ಕಛೇರಿಗೆ ಭೇಟಿ ನೀಡಿದ್ದೆ. ಅಲ್ಲಿ ಒಬ್ಬ ವಯಸ್ಕ ಒ೦ದು ಚಡ್ಡಿ ತೊಟ್ಟು ಸ್ಯಾ೦ಡೊ ಬನಿಯನ್ ಹಾಕಿಕೊ೦ಡು ಬ೦ದಿದ್ದ. ಅದೇ ಜಾಗದಲ್ಲಿ ಕೆಲವರು ಟ್ರಿಮ್ಮಾಗಿ ಕೋಟು ಟೈ ಹಾಕಿಕೊ೦ಡೂ ಇದ್ದರು. ಆದರೆ ಈ ಬನಿಯನ್ ಮನುಷ್ಯನಲ್ಲಿ ಯಾವ ಮುಜುಗರವಾಗಲಿ, ನಾಚಿಕೆಯಾಗಲಿ ಇರಲಿಲ್ಲ. ಹಾಗೆಯೇ ಜನರಾಗಲಿ, ಅಲ್ಲಿನ ಅಧಿಕಾರಿಗಳಾಗಲಿ ಅವನನ್ನು ವಿಶೇಷವಾಗಿ ನೋಡಲಿಲ್ಲ. ಆದರೆ ನನಗೇ ನನ್ನ ಅಭಿಪ್ರಾಯದ ಬಗ್ಗೆ ನಾಚಿಕೆಯಾಯಿತು.


ಅಮೇರಿಕಾದಲ್ಲಿ ಎಲ್ಲಿ ಹೋದರೂ ಏಷ್ಯನ್ನರನ್ನು ಸುಲಭವಾಗಿ ಗುರುತಿಸ ಬಹುದು. ಮೆಕ್ಸಿಕನ್ನರು ಮಾತ್ರ ಏಷ್ಯನ್ನರನ್ನು ಹೋಲುತ್ತಾರೆ. ಆದರೆ ಅಮೇರಿಕನ್ನರು ನಮ್ಮನ್ನು ಹೊರದೇಶದವರ ತರ ನೋಡುವುದಿಲ್ಲ, ಅದರ ಬಗ್ಗೆ ಅನಾವಶ್ಯವಾಗಿ ಯಾರೂ ’ನೀವು ಎಲ್ಲಿಯವರು?’ ಎ೦ದು ಕೇಳುವುದೂ ಇಲ್ಲ.ನಮ್ಮನ್ನು ಇನ್ನೊಬ್ಬ ಮನುಷ್ಯನ ತರಹ ಮಾತ್ರ ನೋಡುತ್ತಾರೆ. ನಾವು ನಮ್ಮದೇಶದಲ್ಲಿ ವಿದೇಶದ ಬಿಳಿಯರನ್ನು ಹೇಗೆ ನೋಡುತ್ತೇವೆ ನೆನೆಸಿಕೊಳ್ಳಿ.


ಧಾರ್ಮಿಕ ಸ್ವಾತ೦ತ್ರ.: ಅಮೇರಿಕಾದಲ್ಲಿ ಧಾರ್ಮಿಕ ಸ್ವಾತ೦ತ್ರ ಅತಿಯಾಗಿರದೆ ಮಿತಿಯಾಗಿ ಉತ್ತಮವಾಗಿದೆ. ಇಲ್ಲಿ ಯಾರು ಬೇಕಾದರೂ ಯಾವ ಧರ್ಮವನ್ನೂ ಆಚರಿಸಬಹುದು. ಸರ್ಕಾರದ ಅನುಮತಿ ಪಡೆದು ಧಾರ್ಮಿಕ ಆಲಯಗಳನ್ನು ನಿರ್ಮಿಸಿಕೊಳ್ಳಬಹುದು. ಆದರೆ ಯಾವುದೇ ಕಾರಣಕ್ಕೂ ಮೈಕುಗಳಲ್ಲಾಗಲಿ, ಅಥವಾ ಸಾರ್ವಜನಿಕರಿಗೆ ತೊ೦ದರೆ ಆಗುವ೦ತಾಗಲಿ ಯಾವ ಧರ್ಮದವರೂ ಏನನ್ನೂ ಆಚರಿಸುವ೦ತಿಲ್ಲ.

ಇಲ್ಲಿ ಸಾಕಷ್ಟು ಹಿ೦ದೂ ದೇವಸ್ಥಾನಗಳೂ, ಮುಸ್ಲಿಮರ ಮಸೀದಿಗಳೂ ಇವೆ. ಕ್ರಿಶ್ಚಿಯನ್ನರ ಚರ್ಚುಗಳ೦ತೂ ಎಲ್ಲಾ ರಸ್ತೆಗಳಿಗೊದರ೦ತಿದೆ. ಇವೆಲ್ಲವನ್ನೂ ಬಹಳ ವಿಶಾಲವಾಗಿ ಅ೦ದವಾಗಿ ಕಟ್ಟಿ, ಉತ್ತಮವಾಗಿ, ಅತ್ಯ೦ತ ಶುಚಿಯಾಗಿಟ್ಟು ಕೊ೦ಡಿದ್ದಾರೆ.

ಉದ್ಯೋಗಕ್ಕಾಗಿ ಬ೦ದು ಈ ರೀತಿ ನಮ್ಮ ಸ೦ಪ್ರದಾಯವನ್ನು ಬೆಳೆಸುತ್ತಿದ್ದಾರೆ೦ದರೆ ನಮ್ಮವರ ಈ ಸಾಹಸವನ್ನು ಮೆಚ್ಚಲೇ ಬೇಕು. ನಮ್ಮವರು ಹಲವಾರು ಧಾರ್ಮಿಕ ಸ೦ಘಟನೆ ಗಳನ್ನು ಬಿತ್ತಿ ಬೆಳೆಸಿದ್ದಾರೆ. ಆದರೆ ಎಲ್ಲೂ ಧಾರ್ಮಿಕ ಸ೦ಘರ್ಷಗಳು ಇಲ್ಲ.


ಅಮೇರಿಕಾದಲ್ಲಿ ’ಯೋಗ’ದ ಬಗ್ಗೆ ಬಹಳ ಉತ್ಸಾಹ ಇದೆ. ಹಲವು ಯೋಗ ಕೇ೦ದ್ರಗಳಿವೆ. ಹಲವು ಅಮೇರಿಕನ್ನರು ಯೋಗ, ಗೀತ, ಧರ್ಮ,ವೇದಾ೦ತ ಗಳನ್ನು ಅಬ್ಯಾಸ ಮಾಡುತ್ತಾ ಸ್ವಇಚ್ಹೆಯಿ೦ದ ಹಿ೦ದೂಗಳಾಗಿದ್ದಾರೆ. ’ಇಸ್ಕಾನ್’ ಕ್ರಿಷ್ಣ ದೇವಾಲಯಕ್ಕೆ ಹೋದರೆ, ಇಲ್ಲಿಯ ಪ್ರಜೆಗಳು ಬಿಳಿಯ ಕಚ್ಚೆ-ಪ೦ಚೆ ಉಟ್ಟು,ತಿಲಕ, ವಿಭೂತಿ ಹಚ್ಚಿಕೊ೦ಡು ನಮ್ಮಲ್ಲಿಯ ಮ೦ತ್ರ/ಶ್ಲೋಕಗಳನ್ನು ಹಾಡುತ್ತಾ ನ್ರುತ್ಯ ಮಾಡುವುದನ್ನು ನೋಡಬಹುದು. ಇಲ್ಲಿಯವರು ಇದನ್ನೆಲ್ಲಾ ಸ್ವಯಿಚ್ಚೆಯಿ೦ದ, ಶ್ರದ್ದೆಯಿ೦ದ, ಪ್ರೀತಿಯಿ೦ದ ಮಾಡುತ್ತಾರೆ. ಇವರನ್ಯಾರನ್ನೂ ನಮ್ಮಲ್ಲಿಯ ಹಿ೦ದೂ ನಾಯಕರು/ಜ್ನ್ನಾನಿಗಳು ಮತಾ೦ತರ ಮಾಡಿಲ್ಲ.


ಕ್ರೀಡೆಯ ಬಗ್ಗೆ ಹೇಳದಿದ್ದರೆ ಹೇಗೆ?: ಇಲ್ಲಿ ಹೆಚ್ಚಿನ ಜನರಿಗೆ ಕ್ರಿಕೆಟ್ ಆಟದ ಪರಿಚಯ ಕೂಡ ಇಲ್ಲ. ಇಲ್ಲಿನ ಜನಪ್ರಿಯ ಕ್ರೀಡೆ ಬೇಸ್-ಬಾಲ್. ನ೦ತರದ ಕ್ರೀಡೆಗಳೆ೦ದರೆ ಅಮೆರಿಕನ್ ಫುಟ್ಬಾಲ್ ಮತ್ತು ಬ್ಯಾಸ್ಕೆಟ್ ಬಾಲ್. ನ೦ತರದ ಆಟಗಳೆ೦ದರೆ ಟೆನಿಸ್, ಗಾಲ್ಫ್, ಬಿಲಿಯರ್ಡ್ಸ್ ಮು೦ತಾದುವುಗಳು.

ಆದರೆ ಭಾರತೀಯ ಮತ್ತು ಪಾಕಿಸ್ತಾನ ಮೂಲದವರು ಮಾತ್ರ ಟೀಮ್ ಕಟ್ಟಿಕೊ೦ಡು ಕ್ರಿಕೆಟ್ ಪ೦ದ್ಯಗಳನ್ನು ಆಡುವುದನ್ನು ನೋಡಬಹುದು. ಅಮೇರಿಕನ್ನರು ಕ್ರಿಕೆಟ್ಟನ್ನು ಇಷ್ಟ ಪಡುವುದಿಲ್ಲ. ಕ್ರೀಡೆಯ ಚಾನಲ್ ಗಳು ಟಿ.ವಿ.ಯಲ್ಲಿ ಬರುತ್ತವೆಯಾದರೂ ಕ್ರಿಕೆಟ್ ಬರುವುದಿಲ್ಲ. ಆದರೆ ನಮ್ಮವರು ಬಿಡಬೇಕಲ್ಲ? ಡಿಶ್ ಹಾಕಿಕೊ೦ಡು, ಟಿ.ವಿ. ಪ್ಯಾಕೇಜ್ ಗಳನ್ನು ಕೊ೦ಡು ಬಿಡುವು ಮಾಡಿಕೊ೦ಡು ಕ್ರಿಕೆಟ್ ನೋಡುತ್ತಾರೆ!


ಸಾ೦ಸಾರಿಕ ಜೀವನ: ’ಅಮೇರಿಕಾದಲ್ಲಿ ಎಲ್ಲವೂ ಇದೆ ಆದರೆ ಸಾ೦ಸಾರಿಕ ಸುಖವೊ೦ದು ಬಿಟ್ಟು’ ಎ೦ದು ಹಲವಾರು ಜನ ಹೇಳುವುದನ್ನು ನೀವು ಕೇಳಿರ ಬಹುದು. ಇದು ನಿಜವೆ? ಒ೦ದು ಕೋನದಲ್ಲಿ ನೋಡಿದರೆ ಇದು ನಿಜ. ಆದರೆ ಅದೇ ಇಲ್ಲಿ ಅವರ ಇಷ್ಟ. ಇಲ್ಲಿ ಸಾ೦ಸಾರಿಕ ಜೀವನಕ್ಕೆ ಹೆಚ್ಚು ಅರ್ಥ ಇಲ್ಲ. ಗ೦ಡ, ಹೆ೦ಡತಿ, ಮಕ್ಕಳು ಎಲ್ಲರಿಗೂ ಸಮಾನ ಹಕ್ಕು ಇರುವುದರಿ೦ದ ಯಾರನ್ನೂ ಯಾರೂ ಯಾವುದಕ್ಕೂ ಪ್ರಶ್ನೆ ಮಾಡುವ೦ತಿಲ್ಲ.

ಮದುವೆ ಮತ್ತು ಡೈವೋರ್ಸ್ ಸಾಮಾನ್ಯ ವಿಷಯ. ಈಚಿನ ವರ್ಷಗಳಲ್ಲಿ ಇವುಗಳ ಸಹವಾಸವೇ ಬೇಡ ಎ೦ದು ಮದುವೆ ಆಗುವುದೇ ಇಲ್ಲ, ಆದರೆ ಗ೦ಡ-ಹೆ೦ಡತಿಯ ತರ ಒಟ್ಟಿಗೇ ಬಾಳುತ್ತಾರೆ! ಮಕ್ಕಳನ್ನೂ ಮಾಡಿಕೊಳ್ಳುತ್ತಾರೆ. ಕೊನೆಗೆ ಯಾವುದೋ ಘಳಿಗೆಯಲ್ಲಿ ಏನೋ ಹೊಳೆದು ಮದುವೆಯಾಗಿಬಿಡುತ್ತಾರೆ! ಆ ಮದುವೆಗೆ ಅವರ ಮಕ್ಕಳೂ ಸಾಕ್ಷಿಯಾಗುತ್ತಾರೆ!!

ಇನ್ನೊ೦ದು ಸ್ವಾರಸ್ಯವೆ೦ದರೆ ಇತ್ತೀಚೆಗೆ ಒ೦ದೇ ಲಿ೦ಗದವರೂ ಅ೦ದರೆ ಗ೦ಡು-ಗ೦ಡು ಅಥವಾ ಹೆಣ್ಣು-ಹೆಣ್ಣು ಮದುವೆ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ಇದಕ್ಕೆ ಅಮೇರಿಕಾದ ಕಾನೂನಿನಲ್ಲಿ ಅನುಮತಿಯಿದೆ. ಒಟ್ಟಿನಲ್ಲಿ ಲೈಂಗಿಕ ಸ್ವೇಚ್ಚಾಚಾರಕ್ಕೆ ಅವಕಾಶವಿದೆ.


ಮಕ್ಕಳು ರೆಕ್ಕೆ ಬ೦ದಮೇಲೆ ಹಾರಿಹೋಗುತ್ತಾರೆ ಅ೦ತ ಮೊದಲೇ ಹೇಳಿದ್ದೇನಲ್ಲ, ಮಕ್ಕಳು ಹೋದನ೦ತರ ಮತ್ತೆ ಜೋಡಿ (ಗ೦ಡ-ಹೆ೦ಡತಿ) ಒ೦ಟಿ ಆಗುತ್ತಾರೆ. ಆದರೆ ಯಾರ ಮೇಲೂ ಅವಲ೦ಬಿತರಾಗುವುದಿಲ್ಲ. ಅದಕ್ಕಾಗೇ ಇಳೀ ವಯಸ್ಸಿನಲ್ಲಿ ಬಹಳ ಕಷ್ಟಪಡುತ್ತಾರೆ. ಇಳೀವಯಸ್ಸಿನ ದ೦ಪತಿಗಳು ಒಟ್ಟಿಗೇ ಹೋಗುವುದನ್ನು ಎಲ್ಲೆಲ್ಲೂ ನೋಡಬಹುದು. ಆದರೆ ಜೊತೆಗೆ ಸ್ವ೦ತ ಮಕ್ಕಳು ಇರುವುದಿಲ್ಲ. ಈಗ ಭಾರತದಲ್ಲೂ ನಗರ ಪ್ರದೇಶಗಳಲ್ಲಿ ಈ ದೃಶ್ಯವನ್ನು ನೋಡಬಹುದು, ಏನ೦ತೀರ?


ನಾವು ಇ೦ದು ದುಡಿದ ಹಣ ನಾಳೆಯೊ ನಾಡಿದ್ದೋ ಖರ್ಚು ಮಾಡಿದರೆ, ಇಲ್ಲಿಯ ಜನ ನಾಳೆ ದುಡಿಯುವುದನ್ನು ನಿನ್ನೆಯೊ ಇ೦ದೊ ಖರ್ಚು ಮಾಡಿರುತ್ತಾರೆ! ಅರ್ಥವಾಗಲಿಲ್ಲವೆ? ಮುಂದಿನ ತಿಂಗಳ ಸಂಬಳವನ್ನು ಈ ತಿಂಗಳೇ ಖರ್ಚು ಮಾಡಿರುತ್ತಾರೆ! ಇಲ್ಲಿಯವರು ಎಲ್ಲವನ್ನೂ ಕ್ರೆಡಿಟ್ ಕಾರ್ಡಿನಲ್ಲಿ (ಸಾಲದ ಚೀಟಿ) ಖರೀದಿಸುತ್ತಾರೆ.


ನಾಳೆಗಾಗಿ ಉಳಿಸುವುದು ಭಾರತೀಯ ತತ್ವವಾದರೆ, ಇವರು ಭಾರತೀಯರ ತರ ಚೌಕಾಸಿ ಮಾಡಿಕೊ೦ಡು ಮಕ್ಕಳಿಗಾಗಿ ಕಷ್ಟಪಟ್ಟು, ಮು೦ದಿನ ಜನಾ೦ಗಕ್ಕಾಗಿ ಅ೦ತ ಹೆಚ್ಚು ಉಳಿಸುವುದಿಲ್ಲ. ಇವತ್ತಿನ ಸ೦ತೋಷವನ್ನು ಹಾಳುಮಾಡಿಕೊ೦ಡು ನಾಳೆಯ ಸುಖಕ್ಕಾಗಿ ಕಾಯುವುದಿಲ್ಲ.


ನಾವು ಅಂದು ಕೊಳ್ಳುವ ಹಾಗೆ ಅಮೆರಿಕನ್ನರೆಲ್ಲರೂ ಬುದ್ದಿವಂತರು, ಶ್ರೀಮಂತರು ಅಲ್ಲವೇ ಅಲ್ಲ.
ಇಲ್ಲೂ ದಡ್ಡರು, ಬಡವರು ಬೇಕಾದಷ್ಟು ಇದ್ದಾರೆ. ಒಂದು ಅಂದಾಜಿನಲ್ಲಿ ಹೇಳಬೇಕಂದರೆ, ಸುಮಾರು ೫೦ ಭಾಗ ಜನರು ಸಾಮನ್ಯ ಬುದ್ದಿವಂತರು, ಅವರಿಗೆ ಅವರ ಕೆಲಸ ಮಾತ್ರ ಚೆನ್ನಾಗಿ ಗೊತ್ತು, ಬೇರೆ ಜ್ನ್ಯಾನ ಅಷ್ಟಕ್ಕಷ್ಟೇ. ಸುಮಾರು ೧೦ ಭಾಗ ಜನರು ದಡ್ಡರು. ಸುಮಾರು ೨೦ ಭಾಗ ಜನರು ಬರೀ ಮಜಾ ಮಾಡಿಕೊಂಡು 'ಹೇಗೋ' ಜೀವನ ಸಾಗಿಸಿಕೊಂಡು ಹೋಗುವವರು.

ಇನ್ನು ಉಳಿದ ೨೦ ಭಾಗ ಜನರು ವಿಶ್ವವನ್ನೇ ಆಳುವಂಥ ಪ್ರಚಂಡರು. ಉಳಿದ ೮೦ ಭಾಗ ಜನರು 'ತಲೆ ಹರಟೆ' ಮಾಡದೇ ಇವರು ಹೇಳಿದ ಹಾಗೆ ಕೇಳುವುದೇ' ಅಮೆರಿಕದ ಯಶಸ್ಸಿನ ಗುಟ್ಟು.


ನಾವು ಹೆಮ್ಮೆ ಪಟ್ಟುಕೊಳ್ಳ ಬಹುದಾದ೦ಥ ವಿಚಾರವೆ೦ದರೆ ಇಲ್ಲಿನ ಭಾರತೀಯ ವರ್ಗ ಅತ್ಯ೦ತ ಶ್ರೀಮ೦ತ ವರ್ಗಗಳೊಲ್ಲೊ೦ದು. ಇಲ್ಲಿನ ಸಾಮಾನ್ಯ ಅಮೆರಿಕನ್ನರಿಗೆ ಹೋಲಿಸಿದರೆ ನಮ್ಮವರ ವರಮಾನ ಹೆಚ್ಚಾಗಿಯೇ ಇದೆ. ಹಾಗೂ ಈಚಿನ ದಿನಗಳಲ್ಲಿ ನಮ್ಮವರು ವೇಗದಿ೦ದ ಬೆಳೆಯುತ್ತಿದ್ದಾರೆ.

ನಮ್ಮ ಡಾಕ್ಟರುಗಳು ಈಗಾಗಲೆ ಉತ್ತಮ ಹೆಸರು ಮಾಡಿದ್ದಾರೆ. ಈ ದೇಶದ ಅರ್ಧಕ್ಕಿ೦ತ ಹೆಚ್ಚು ಎಕಾನಮಿ ಹೋಟೆಲುಗಳು (lodge) ನಮ್ಮವರದ್ದು. ಇಲ್ಲಿರುವ ಬೇರೆ ಎಲ್ಲಾ ದೇಶದವರಿಗೂ ಹೋಲಿಸಿದರೆ ನಮ್ಮವರು ಅತ್ಯ೦ತ ಹೆಚ್ಚು ವಿದ್ಯಾವ೦ತರು. ಸಾಫ್ಟ್ ವೇರ್ ನಲ್ಲಿ ಬಹಳ ಹೆಸರುಗಳಿಸಿದ್ದಾರೆ. ಹಲವು ಹೆಸರುವಾಸಿ ಸ೦ಸ್ಥೆಗಳಲ್ಲಿ ನಮ್ಮವರು ಮೇಲಿನ ಹುದ್ದೆಗಳಲ್ಲಿದ್ದಾರೆ. ಹಲವಾರು ಲಾಭದಾಯಕ ಸ೦ಸ್ಥೆ ಕಟ್ಟಿ ಬೆಳೆಸುತ್ತಿದ್ದಾರೆ.


ಇಲ್ಲಿ ಎಲ್ಲಾ ಭಾರತೀಯ ಭಾಷೆಯವರು, ಗು೦ಪಿನವರು ಅವರವರದೇ ಪ್ರತ್ಯೇಕ ಸ೦ಘಟಣೆಗಳನ್ನೂ ಕೂಡ ಬೆಳೆಸುತ್ತಿದ್ದಾರೆ. ಕನ್ನಡದವರು ಹಿ೦ದೆ ಬೀಳದೆ ಹಲವು ಸಾ೦ಸ್ಕೃತಿಕ ಸ೦ಘಟನೆಗಳನ್ನು ಕಟ್ಟಿ ಪೋಷಿಸುತ್ತಿದ್ದಾರೆ. ’ಅಕ್ಕ’ ಎ೦ಬ ಕನ್ನಡ ಕೂಟಗಳ ಒಕ್ಕೂಟ ಸ೦ಘಟಿಸಿದ್ದಾರೆ.ಇದರ ಅಡಿಯಲ್ಲಿ ಸಾಕಷ್ಟು ಕನ್ನಡ ಕೂಟಗಳು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿವೆ.

ಭಾರತದಿ೦ದ ಬ೦ದ ಸಾದು ಸ೦ತ ಮಹನೀಯರು ಯೋಗ, ವೇದ, ಧರ್ಮ ಸ೦ಸ್ಕೃತಿ ಗಳನ್ನು ಇಲ್ಲಿ ಪ್ರಚುರಪಡಿಸುತ್ತಿದ್ದಾರೆ. ಯಾವುದನ್ನೂ ವಿಜ್ನ್ಯಾನದ ಕೋನದಲ್ಲಿ ನೋಡುವ ಅಮೇರಿಕನ್ನರು ಇವುಗಳನ್ನು ಅನುಸರಿಸುತ್ತಿದ್ದಾರೆ೦ದರೆ ಭಾರತ ಹೆಮ್ಮೆ ಪಟ್ಟುಕೊಳ್ಳಲೇ ಬೇಕು. ಭಾರತವನ್ನು ಪ್ರತಿನಿಧಿಸುವ ಹಲವು ಬೃಹತ್ ದೇವಾಲಯಗಳನ್ನು ಇಲ್ಲಿ ಕಾಣಬಹುದು.

ಹಬ್ಬ-ಹರಿದಿನ ಗಳಲ್ಲಿ ನಮ್ಮ ಗ೦ಡಸರು ಜುಬ್ಬಾ, ಪ೦ಚೆ, ಪೈಜಾಮ, ಹಣೆಗೆ ತಿಲಕ, ವಿಭೂತಿಯನ್ನೂ, ಮಹಿಳೆಯರು ಅ೦ದವಾದ ಸೀರೆ, ಚೂಡಿದರವನ್ನೂ ಉಟ್ಟು, ಹಣೆಗೆ ಕು೦ಕುಮ, ಸಿ೦ಧೂರವನ್ನೂ ಇಟ್ಟು, ಭಾರತೀಯ ಸ೦ಸ್ಕ್ರುತಿ ಮೆರೆದು, ಸ೦ತೋಷದಿ೦ದ ಸ೦ಭ್ರಮಿಸುತ್ತಾರೆ. ನಮ್ಮ ಸ೦ಸ್ಕೃತಿಯನ್ನು ಉಳಿಸಿ ಕೊ೦ಡು, ಎಲ್ಲಾ ದೊಡ್ಡ ಹಬ್ಬಗಳನ್ನೂ ಭಾರತೀಯ ಮೂಲದವರು ಒಟ್ಟಿಗೆ ಸೇರಿ ಆಚರಿಸುವಾಗ ಇಲ್ಲಿಗೆ ಭೇಟಿಕೊಡುವ ಹಿರಿಯರ ಕಣ್ಣಲ್ಲಿ ಆನ೦ದ ಭಾಷ್ಪ ಉದುರಿದರೆ ಹೆಚ್ಚಲ್ಲ.


ಇಲ್ಲಿಯವರಿಗೆ ನಮ್ಮ ಸಂಸ್ಕೃತಿಯ, ಉಡುಗೆ ತೊಡುಗೆ ಗಳ ಬಗ್ಗೆ ಬಹಳ ಕುತೂಹಲ ಇದೆ. ನನ್ನ ಅತ್ತೆಯವರು ಇಲ್ಲಿಗೆ ಭೇಟಿಯಿತ್ತಾಗ, ಅವರ ಶುದ್ದ ದಕ್ಷಿಣ ಭಾರತೀಯ ಸೀರೆ, ಕು೦ಕುಮ, ತಾಳಿ ಎಲ್ಲವನ್ನೂ, ಹೋದಕಡೆಯೆಲ್ಲಾ ಇಲ್ಲಿಯ ಕೆಲವು ಸ್ತ್ರೀಯರು ಕುತೂಹಲದಿ೦ದ ಹತ್ತಿರಬ೦ದು, ಇಷ್ಟಪಟ್ಟು ಮಾತನಾಡಿಸಿ, ಸೀರೆಯನ್ನು ಮುಟ್ಟಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿ, ’ನಮಸ್ತೆ’ ಎ೦ದು ಕೈ ಮುಗಿಯುತ್ತಿದ್ದರು.


ನಮ್ಮ ಸ೦ಸ್ಕ್ರುತಿಯ ತುಣುಕಿಗೆ ಇಷ್ಟೊ೦ದು ಬೆಲೆ ಇದೆಯೆ??? ಇದು ನಮ್ಮ್ ಈಗಿನ/ಮು೦ದಿನ ಪೀಳಿಗೆಗೆ ಅರ್ಥವಾದರೆ ಸಾಕು.

ನಾವು ಈ ದೇಶಕ್ಕೆ ಬ೦ದಾಗ ಪ್ರಪ೦ಚದ ಒ೦ದು ಅತ್ಯ೦ತ ಶಕ್ತಿಶಾಲಿ, ಶ್ರೀಮ೦ತ ಮತ್ತು ಅಭಿವೃದ್ಧಿ ಹೊ೦ದಿದ ರಾಷ್ಟ್ರಕ್ಕೆ ಬ೦ದಿದ್ದೇವೆ೦ದು ಮರೆಯಬಾರದು. ಭಾರತೀಯರು ಈ ದೇಶಕ್ಕೆ ವಿದೇಶಿಯರು. ಭಾರತಕ್ಕೆ ವಿದೇಶಿಯರು ಬ೦ದು ಅಲ್ಲಿ ತಳಊರಲು ಪ್ರಯತ್ನಿಸಿದಾಗ ನಮಗೆ ಹೇಗೆ ಅನ್ನಿಸುವುದೋ ಹಾಗೇ ಇಲ್ಲಿಯವರಿಗೂ ಅದೇ ಭಾವನೆ ಬರಬಹುದಲ್ಲವೆ? ಆದರೂ ಇಲ್ಲಿಯವರು ಆ ಭಾವನೆಯನ್ನು ಮೇಲೆ ತೋರಿಸಿಕೊಳ್ಳುವುದಿಲ್ಲ ಮತ್ತು ಅನಾವಶ್ಯಕವಾಗಿ ಕಿರಿಕಿರಿ ಮಾಡುವುದಿಲ್ಲ.

ನಮಗೆ ಅವರ ಕಾನೂನು ವ್ಯವಸ್ಥೆಯಲ್ಲಿ ರಕ್ಷಣೆ ಮತ್ತು ಅವಕಾಶ ಕಲ್ಪಿಸುತ್ತಾರೆ. ಈ ದೇಶದಲ್ಲಿ ಎಲ್ಲರೂ ಕಾನೂನಿಗೆ ತಲೆಬಾಗುತ್ತಾರೆ. ಇದಕ್ಕೆ ಪ್ರಪ೦ಚದ ಅತ್ಯ೦ತ ಶಕ್ತಿಶಾಲಿ ಮನುಷ್ಯನೂ ಹೊರತಲ್ಲ. ಅ೦ದರೆ ಅದ್ಯಕ್ಷ ಬಿಲ್ ಕ್ಲಿ೦ಟನ್ ಅಧಿಕಾರವಧಿಯಲ್ಲಿದ್ದಾಗಲೆ ಕಾನೂನಿಗೆ ತಲೆಬಾಗಿ ತಮ್ಮ ತಪ್ಪನ್ನು ತಿದ್ದಿಕೊಳ್ಳಲಿಲ್ಲವೆ? ನಮ್ಮಲ್ಲಿಯ ನಾಯಕರಲ್ಲಿ ಈರೀತಿಯ ಉದಾಹರಣೆಗಳು ಕೆಲವೇ ಸಿಕ್ಕರೂ ನಮ್ಮದೇಶ ಬಹಳ ಬೇಗ ಅಮೇರಿಕಾ ಆಗುವುದರಲ್ಲಿ ಸ೦ಶಯವಿಲ್ಲ.


ಕೊನೆಯಲ್ಲಿ ಒ೦ದು ಮಾತು ಹೇಳುವುದಾದರೆ, ಎಲ್ಲಾ ಅನುಕೂಲ ಇದೆ ಎ೦ದಮಾತ್ರಕ್ಕೆ ಅಮೇರಿಕವೇನೂ ಸ್ವರ್ಗವಲ್ಲ ಅಥವಾ ಅನುಕೂಲಗಳಿಲ್ಲ ಎ೦ದ ಮಾತ್ರಕ್ಕೆ ಭಾರತವೇನೂ ನರಕವಲ್ಲ. ನಮ್ಮ ದೌರ್ಬಲ್ಲ್ಯ ಏನೆ೦ದರೆ, ಇರುವುದನ್ನು ಬಿಟ್ಟು ಇಲ್ಲದಿರುವುದರ ಬಗ್ಗೆ ತಲೆ ಕೆಡಿಸಿಕೊ೦ಡು ಇವತ್ತಿನ ನೆಮ್ಮದಿ ಹಾಳು ಮಾಡಿಕೊಳ್ಳುತ್ತೇವೆ! ಇದನ್ನು ಅರ್ಥ ಮಾಡಿಕೊ೦ಡುಬಿಟ್ಟರೆ ಭಾರತದಲ್ಲೇ ಅಮೆರಿಕವಿದೆ, ಅಮೆರಿಕದಲ್ಲೇ ಭಾರತವಿದೆ.

ನಮ್ಮಲ್ಲೇ ನೋಡಿದರೆ, ಹಳ್ಳಿಯವರನ್ನು ನೋಡಿ ಪಟ್ಟಣದವರೂ, ಪಟ್ಟಣದವರನ್ನು ನೋಡಿ ಹಳ್ಳಿಯವರೂ ಅಸೂಯೆ ಪಟ್ಟುಕೊಳ್ಳುವುದಿಲ್ಲವೆ? ಆದರೆ ಅಲ್ಲಲ್ಲಿಯ ಕಷ್ಟ-ಸುಖ ಅವರವರಿಗೇ ಗೊತ್ತು. ಅದೆ, ’ದೂರದ ಬೆಟ್ಟ ನುಣ್ಣಗೆ’. ಇದನ್ನೆ ಅಡಿಗರು ಅತ್ಯುತ್ತಮವಾಗಿ ಕವನಿಸಿದ್ದಾರೆ, "ಯಾವ ಮೋಹನ ಮುರಳಿ ಕರೆಯಿತು ದೂರತೀರಕೆ ನಿನ್ನನು...."


ಈ ಬರಹ ಓದುವಾಗ ನಿಮಗೆ ಮುದ ನೀಡಿ, ಉಪಯೋಗವಾದರೆ ಸಾಕು, ನಾನು ಅಮೇರಿಕಾಕ್ಕೆ ಹೋದಮೇಲೆ ಕನ್ನಡ ಟೈಪಿ೦ಗ್ ಕಲಿತು, ಬಿಡುವು ಮಾಡಿಕೊ೦ಡು ಬರೆದದ್ದು ಸಾರ್ಥಕ ಎ೦ದುಕೊಳ್ಳುತ್ತೇನೆ.

Dont forget to write your comments pls... :)

1 ಕಾಮೆಂಟ್‌:

ajjappa ingalagi ಹೇಳಿದರು...

ಬಹಳ. ಚೆನ್ನಾಗಿ ಬರೆದಿರಿ.