ಬುಧವಾರ, ಜನವರಿ 7, 2009

ದೇವೇಗೌಡರ ಹೊಸಾ ಡೀಲು (ಭಾಗ-೧)

(Published in Thatskannada.com on 22nd sept 08
ಲಿಂಕ್ : http://thatskannada.oneindia.in/column/humor/2008/0922-karnataka-political-humor-devegowda-alva-aicc.html)


ಅಷ್ಟೇ ಪತ್ರಿಕಾ ಗೋಷ್ಠಿ ಮುಗಿಸಿ ಪಾರ್ಟಿ ಆಫೀಸಿಗೆ ಬಂದಿದ್ದ ಮ್ಯಾಗಿ ಮೇಡಮ್ಮನ ಸುತ್ತ ನೆರೆದಿದ್ದ ಶಿಲುಬೆ ಸಂಗದವರು, ಹೊಸ ಜೀವನ ಸಂಸ್ಥೆಯವರು ಶಿಸ್ತಾಗಿ ಬೆಂಚ್ ಮೇಲೆ ರಾಜ ಗಾ೦ಭೀರ್ಯದಿ೦ದ ಬೀಗುತ್ತಿದ್ದರು.... ಮತ್ತು ಮೊನ್ನೆ ಮೊನ್ನೆ ಎಸುಕ್ರಿಸ್ತರ ಪಾದಗಳಿಗೆ ಶರಣು ಹೊಡೆದ ನಮ್ಮ ಎಕ್ಸ್ ಹಿಂದೂ ಶಿಖಾಮಣಿಗಳು.....ಮುದುರಿಕೊಂಡು ಗಂಟು ಮೂಟೆ ಪಕ್ಕಕ್ಕಿಟ್ಟು ಕೊಂಡು ಕಣ್ಣರಳಿಸಿ ಕೊಂಡು ನೋಡುತ್ತಾ ಕುಳಿತಿದ್ದರು...... ಮೇಡಮ್ಮನ ಕ್ಯಪಾಸಿಟಿ ಕಂಡು ದಂಗು ಬಡಿದು ಹೋಗಿದ್ದರು. ಆದರೂ ಗುಜು ಗುಜು ಕಡಿಮೆಯಾಗಿರಲಿಲ್ಲ.

ಬೆನೆಡಿಕ್ಟ್ ಬಾಲು ಎಲ್ಲರನ್ನೂ ಉದ್ದೇಶಿಸಿ, ಥೇಟ್ ಏಸುವಿನ ಫೋಸ್ನಲ್ಲಿ ಕೈ ಅಡ್ಡಗಲ ಹರಡಿ, ಸ್ವಚ್ಚ ಕನ್ನಡದಲ್ಲಿ,


"ಡೆಲ್ಲಿ ಮೇಡಂ ಆಸಿರ್ವಾದಂ ಕಡಚ್ಚಿ, ನೀಂಗಲ್ ಎಲ್ಲಾರ್ ವೀಡ್ ಗೆ ಪೋ.......ಏಸು ಎಲ್ಲರ್ಗೂ ಕಾಪಾಡ್ತಾರೆ",

ಎನ್ನುತ್ತಾ ಅಸೆಂಬ್ಲಿಯವರಿಗೂ ಕಣ್ಸನ್ನೆ ಮಾಡಿದರು.
"ಓಕೆ ಫಾದರ್", ಎನ್ನುತ್ತಾ ಗೆದ್ದವರಂತೆ ಮುಖ ಅರಳಿಸಿ ಕೊಂಡು ಅಸೆಂಬ್ಲಿಯವರೆಲ್ಲರೂ ಟೇಕ್ ಆಫ್ ಆದರು. ನಮ್ಮ ಗುಲ್ಬರ್ಗ ಮಂದಿಗೆ ಏನೂ ಅರ್ಥ ಆಗದಿದ್ದರೂ ಹಿಂದೆ..... ಮುಂದೆ ನೋಡುತ್ತಾ ತಲೆ ಕೆರೆಯುತ್ತಾ ಬೇರೆಯವರನ್ನು ಹಿಂಬಾಲಿಸಿದರು.....
ಇತ್ತ ಉತ್ಸಾಹದಿಂದಿದ್ದ ಮ್ಯಾಗಿ ಮತ್ತು ಬೆಂಡಿ ಮಾತುಕತೆ ಶುರುಮಾಡಿದರು.
ಹಣೆಯ ಬೆವರೊರಸಿಕೊಂಡ ಬೆ೦ಡಿ,

"ಎನ್ನಮ್ಮಾ ಮ್ಯಾಗಿ ಸಿಸ್ಟರ್, ನಾವೆಲ್ಲ ಸೀಕ್ರೆಟಾಗಿ ಇದನ್ನೆಲ್ಲ ಮಾತಡ್ಕಂದ್ರೆ, ನೀನು ಪಬ್ಲಿಕ್ಕಾಗಿ ಇದನ್ನೆಲ್ಲಾ ಹೇಳಿದ್ರೆ ಮೇಡಮ್ಮು ಕೊಪಮಾದ್ಕಳಲ್ವ?"
ಬೆಂಡಿಯ ಮೂರ್ಖತನವನ್ನು ಕಂಡು ತೋರಿಸಿಕೊಳ್ಳದೆ ಸಣ್ಣ ದನಿಯಲ್ಲಿ

"ಇಲ್ಲ ಬ್ರದರ್,dont worry, ಮೇಡಮ್ಮೆ ಹೇಳಿದ್ದು, ಸುಮ್ನೆ ಹೇಳ್ಕೆ ಕೊಡು , ಜನ ಏನ್ ಹೇಳ್ತಾರೆ ನೋಡೋಣ ಅಂತ. ಮೀಡಿಯಾಗೆಲ್ಲ ಅರೆಂಜ್ ಆಗಿದೆ, ಫಾರಿನ್ನಲ್ಲೂ ನೀಟಾಗಿ ಸ್ಪ್ರೆಡ್ ಮಾಡ್ತಾರೆ..... "

ಮ್ಯಾಗಿಗೆ ಇನ್ನೂ ಬಹಳ ಮಾತಾಡುವುದು ಉಳಿದಿತ್ತು.......
ಅಷ್ಟೊತ್ತಿಗೆ ನಮ್ಮ ಗೌಡರ ಫೋನು ಟ್ರಿಣಿಕಾಯಿಸುತ್ತೆ. ಬ್ರದರ್ ಗೆ ಕಣ್ಸನ್ನೆ ಮಾಡಿದರು ಸಿಸ್ಟರ್. ಬೆನೆಡಿಕ್ಟ್ ಫೋನ್ ತೆಗೆದು ಕೊಂಡರು.

"ಮಾರ್ಗಿ ಮೇಡಂ ಅವ್ರ...?" ಬೆಂಡಿಗೆ ಅರ್ಥ ಆಗದೆ ಫೋನನ್ನು ಮೇಡಂಗೆ ಕೊಟ್ಟರು.
ಮೇಡಂ ಶರ ವೇಗದಲ್ಲಿ,
"ಕಾಯ್ರೆ, ಕೋಣು?" ಮ್ಯಾಗಿಯ ಕೊಂಕಣಿ ನಮ್ಮ ಗೌಡರಿಗೆ ಎಲ್ಲರ್ಥ ಆಗಬೇಕು....

"ಏನಮ್ಮ, ಅಲ್ಲಿ ಸ್ವಲ್ಪ ಮೇಡಮ್ಮಿಗೆ ಫೋನ್ ಕೊಡ್ತೀಯ?" ಯಾರೋ ಟೈಪಿಸ್ಟು ಅಂದುಕೊಂಡರು ಗೌಡ್ರು.

"ನಾನೇ ಮೇಡಂ, ಯಾರು ನೀವು, ಏನಾಗಬೇಕಿತ್ತು?" ಸ್ವಲ್ಪ ಜೋರಾಗೇ ಕೇಳಿದರು ಮೇಡ೦.

ಗೌಡರು ಹೌಹಾರಿದರು. 'ಮಾಜಿ' ಯಾದ ನನಗೇ ಡೋಸ್ ಕೊಡ್ತಾವ್ಳೆ?.....ಏನು ಖದರು...ಇರಲಿ, ಗಂಟಲು ಸರಿ ಮಾಡಿ ಕೊಳ್ಳುತ್ತಾ ,
"ನಾನಮ್ಮ, ದೇವೇ ಗೌಡರು.....""ಒಹ್ ನೀವಾss....., ಸ್ಸಾರಿ ಗೌಡರೆ, ಯಾಕೆ ಗಂಟಲು ಸರಿ ಇಲ್ವಾ?" ವಯ್ಯಾರದಿಂದ, ಏನೂ ಆಗ್ಲೇ ಇಲ್ಲ ಅನ್ನೋ ಹಾಗೆ.

"ಹೌದಮ್ಮ ಸ್ವಲ್ಪ ಗಂಟಲು ಕೆಟ್ಟೋಗ್ಬುಟೈತೆ.. ನಿನ್ನೆ ನಮ್ಮ ಇಮಾಮ್ ಸಾಬ್ರು ಬಾಡು ಊಟಕ್ಕೆ ಕರೆದಿದ್ರು, ಬಿರ್ಯಾನಿ ಇರ್ತದೆ ಅಂತ ಆಸೆ ಪಟ್ಗೊ೦ಡು ಹೋದ್ರೆ, ಅದ್ಯಾವುದೋ ಟರ್ಕಿ ಕೋಳಿಯಂತೆ.. ತಂದು ಹಾಕ್ಬುಟ್ರು.... ಯಾವ ಎಣ್ಣೇಲಿ ಕರ್ದಿದ್ನೋ....ಒಟ್ನಾಗೆ ಗಂಟ್ಳು ಕೆಟ್ಟೋಗ್ಬುಟೈತೆ"
ಗೌಡರು ಕಷ್ಟ ಪಟ್ಟುಕೊಂಡೇ ಹೇಳಿದರು.
ಮ್ಯಾಗಿಗೆ ಥಟ್ಟನೆ ಸೀಮೆಎಣ್ಣೆಯ ನೆನಪಾದರೂ ನಗು ತಡೆದುಕೊಂಡು,

"ಹೌದಾ ಗೌಡರೆ, ನಮ್ಮಲ್ಲಿಗೆ ಬಂದ್ಬುಡಿ ಮೀನ್ ಊಟ ಹಾಕುಸ್ತೀನಿ, ಎಲ್ಲ ಸರಿ ಹೋಗುತ್ತೆ"
ಗೌಡರಿಗೆ ನೆನಪಾಯಿತು, ಕ್ಷಣಾರ್ಧದಲ್ಲಿ ಟವಲ್ಲು ಸರಿಸಿ ಅಂಗಿಯ ಜೇಬಿನಲ್ಲಿದ್ದ ಡೈರಿ ತೆಗೆದು ನೋಡಿದರು,

"ಹೆಂಗೂ... ಮುಂದಿನವಾರ ನಿಮ್ಮಲ್ಲಿಗೆ ಬರ್ ಬೇಕಲ..... ಬರ್ತೀನ್ ಬಿಡಿ..." ಈಗ ಗಂಟಲು ಮತ್ತೆ ಸರಿ ಮಾಡಿಕೊಂಡರು, ಗೌಡರ ಕಷ್ಟ ನೋಡಲಾರದೆ,

"ಹಾಗೆ ಮಾಡಿ ಗೌಡರೆ, ಅವಾಗ್ಲೇ ಮಾತಾಡಣ, ಏನಾದರೂ ಅರ್ಜೆಂಟ್ ವಿಷ್ಯ ಇತ್ತಾ?" ಆದಷ್ಟು ಬೇಗ ಮುಗಿಸಿ ಬಿಡೋಣ ಅಂತ ಮ್ಯಾಗಿ....
ಗೌಡ್ರು ಬಿಡಬೇಕಲ್ಲ,

"ಇಲ್ಲಮ್ಮಾ, ದೇಶದ ಬಗ್ಗೆ ಚಿಂತೆ ಮಾಡ್ತಾ ಇದ್ದೆ.....ಕಾಲ ಬಹಳ ಕೆಟ್ಟೋಗ್ಬುಟೈತೆ... ನಿಮ್ ಸ್ಟೇಟ್ಮೆಂಟ್ ನೋಡಿದೆ, ನಾವೆಲ್ಲ ಸೇರಿ ಹೋರಾಟ ಮಾಡ್ಬೇಕು, ದೇಶದ ರಕ್ಷಣೆ ಮಾಡ್ಬೇಕು......."

ರಾಜ್ಯ ಅಂದು ಬಿಟ್ರೆ ಲೆವೆಲ್ಲು ಕಡಿಮೆ ಆಗ್ಬಿಡುತ್ತೆ ಅಂತ ಗೌಡರ ಲೆಕ್ಕಾಚಾರ.
ಮ್ಯಾಗಿಗೆ ಒಮ್ಮೆ ಕಸಿವಿಸಿಯಾಯಿತು, ಇದೇನ್ ಇದು ಗೌಡ್ರು ಮತ್ತೆ ರೂಟ್ ಚೇಂಜ್ ಮಾಡ್ತಿದ್ದಾರಲ್ಲ?...... ಆದರೆ ಮ್ಯಾಗಿಯ ರಾಜಕೀಯ ಬುದ್ದಿ ಜಾಗೃತವಾಯ್ತು... ಒಂದು ವೇಳೆ.... ಸೋನಿಯಾ ಮೇಡಂಗೆ ಹೇಳಿ...... ನೋ, ನೋ, ಮನೆಬಾಗಿಲಿಗೆ ಬಂದ ಇಂಥಾ ಚಾನ್ಸು ತಾನು ಬಿಡಬಾರದು..... ಮೇಡಂ ಹತ್ತಿರ ಶಭಾಸ್ ಗಿರಿ ತೊಗೊಂಡ್ ಬಿಡಬಹುದು!
ಆಕಡೆ ಸೈಲೆಂಟ್ ಆಗಿದ್ದನ್ನ ನೋಡಿ , ಗೌಡರೆ ಮುಂದುವರೆಸಿದರು.

"ನಾವು ಗುಳು ಏನನ ಕಾರಿಕ್ರಮ ಆಕ್ಕೊ ಬೇಕು......." ಖರ್ಗೆ ಕಡೆ ರೂಟು ಸರಿ ಇಲ್ಲ ಅಂತ ಗೌಡರಿಗೆ ಮನವರಿಕೆಯಾಗಿತ್ತು.
"ನಾವೊಂದು ಕಾರ್ಯಕ್ರಮ ಅರೆಂಜ್ ಮಾಡಿದೀವಿ"
ಹೆಮ್ಮೆಯಿಂದ ಉಸುರಿದಳು ಮ್ಯಾಗಿ.

"ಹೌದು ಹೌದು, 'ಮಂಗ್ಳೂರಿಂದ ಬೆಂಗ್ಳೂರ್ಗೆ' ಅಂತ ಒಂದು ಯಾತ್ರೆ ಇಟ್ಕೊಂಡಿದೀವಿ, ನೀವು ಬರಬೇಕು, ಜೊತ್ಯಾಗಿ ಕುಮಾರಣ್ಣನ ಕರ್ಕ೦ಡು ಬನ್ನಿ, ಅಲ್ಲೇ ಪಾರ್ಟಿ ವಿಷ್ಯ ಮಾತಾಡೋಣ"

ಆದ ಸಂತೋಷಕ್ಕೆ ಎಲ್ಲವನ್ನೂ ಒಂದೇ ಉಸಿರಿಗೆ ಹೇಳಿಬಿಟ್ಟರು ಮ್ಯಾಗಿ. ಆದ್ರೆ ನಮ್ಮ ಗೌಡರು ಘಟಾನುಘಟಿಗಳು, ಸುಮ್ನೆ ಒಪ್ಕೊತಾರ? ......ಪಾರ್ಟಿ ವಿಷ್ಯ ಅಂದಾಕ್ಷಣ ಗೌಡರ ಗಂಟಲು ಒಮ್ಮೆಗೇ ಸರಿ ಹೋಗಿತ್ತು! ಪಾರ್ಟಿಗೆ ಜೀವ ತರೋದಕ್ಕೆ ಇದೇ ಒಳ್ಳೆ ಸಮಯ.

"ಅದ್ಸರಿಯಮ್ಮ, ಸೋನಿಯಾ ಬರ್ತಾರ?,......ಅವರು ಬಂದ್ರೆ ಕುಮಾರ ಏನು, ರೇವುನೂ ಕರ್ಕ೦ಡು ಬರ್ತೀನಿ ಬುಡು"
ನಿರುದ್ಯೋಗಿ ಕುಮಾರಣ್ಣನ್ನ ಕರ್ಕೊಂಡ್ ಬರೋದು ಸುಲಭ ಅಂತ ಗೊತ್ತಿತ್ತು ಗೌಡರಿಗೆ. ಇರ್ಲಿ, ಏನೇನ್ ಅರೇಂಜ್ ಮಾಡವ್ರೆ ಕೆಳ್ಕಂಡ್ ಬುಡಾಣ ಅಂತ ಗೌಡ್ರು,

" 'ಮಂಗ್ಳೂರಿಂದ ಬೆಂಗ್ಳೂರ್ಗೆ' ಹೆಲಿಕ್ಯಾಪ್ಟರು ಮೇಲೇನಮ್ಮ?" ತಮ್ಮ ದೆಹಲಿಯ ದಿನಗಳನ್ನೇ ಮೆಲಕುಹಾಕುತ್ತಾ....
ಛೇ... ಏನ್ ಗೌಡ್ರೆ, ಅಷ್ಟೊಂದು ಜನರಿಗೆ ಎಲ್ಲಿಂದ ಹೆಲಿಕ್ಯಾಪ್ಟರು ತರೋದು, ಬುದ್ಧಿ ಇದ್ಯಾ.... ಹೇಳನ ಅಂತ ಬಾಯಿ ತೆಗದವಳು, ಸ್ವಲ್ಪ ಒತ್ಕೊಂಡು,

"ಇಲ್ಲಾ ಗೌಡ್ರೆ, ಇದು ಒಂದು ತರಾ ರೈತರ ಜಾಥಾ ಇದ್ದ ಹಾಗೆ....., (ಸಣ್ಣಧ್ವನಿಯಲ್ಲಿ) ...ಪ್ರಚಾರ ಆಗೋದ್ ಬೇಡ್ವ....., ಅದಕ್ಕೆ... ನಡ್ಕೊಂಡು ಹೋಗ್ತೀವಿ..."

ಗೌಡರು ಹೌಹಾರಿದರು..... ಏನ್ ತಮಾಷೆ ಮಾಡ್ತಾವ್ಳ......? ಆದರೂ ಉಮ್ಮಳಿಸಿ ಕೊಂಡು,
"ಆಗ್ಲಿ ಬಿಡಮ್ಮ, ನಾವೂ ಹಾಸನದಿಂದ ಸೇರ್ಕತೀವಿ"....
ಇದೇ ಒಂದು ಅವಕಾಶ ಅಲ್ವ?ಆದ್ರೆ ಕಂಡೀಶನ್ ಇಲ್ದೆ ಯಾಕೆ ಒಪ್ಕಬೇಕು?..... ಅಲ್ಲೇ ತುರುಕಿಬಿಟ್ಟರು..

"ಆದ್ರೆ ನಮ್ಮ ಹೆಸ್ರು ಪೇಪರ್ನಾಗೆ ಹೆಡ್ಲೈನ್ಸ್ ನಲ್ಲಿ ಬರೋಹಂಗೆ ನೋಡ್ಕಬೇಕು"......

ಪೇಪರ್ನಾಗೆ ಹಾಕೋದು ಹಾಕಲಿ, ಹಾಸನದಿಂದ ಬೆಂಗಳೂರಿಗೆ ನಡ್ಕೊಂಡು ಹೋಗಕ್ಕೆ ಆತದ? ಏನೋ ಒಂದು ಆರೋಗ್ಯದ ನೆಪ ಹೇಳಿ ಮೊಮ್ಮಗನ 'ಹಮ್ಮರ್' ಕಾರಲ್ಲಿ ಹೋದ್ರಾಯ್ತು ಅಂತ ಗೌಡರಿಗೆ ಸೀದಾ ಸಾದಾ ಯೋಚನೆ ಇತ್ತು.
"ಆಗ್ಲಿ ಗೌಡ್ರೆ, ಆದ್ರೆ....., ಖರ್ಗೆ ಅವ್ರನ್ನ ಒಂದ್ಸಾರಿ ಕೆಳ್ಕೊಬೇಕಾಗಿತ್ತು, ಯಾವ್ದುಕ್ಕೂ ನಾಳೆ ಫೋನ್ ಮಾಡ್ತೀನಿ"

ಎಲಾ ಇವಳಾ, ಈ ಮಾಜಿಗೆ ಧಮ್ಕಿನೇನು?......, ಎಕ್ಕಡ ತೊಗೊಂಡು ಹೊಡೆಯೋವಷ್ಟು ಸಿಟ್ಟು ಬಂದರೂ, ತಾಳ್ಮೆ, ತಾಳ್ಮೆ, ಎಂದಿತು ಗೌಡರ ಒಳ ಮನಸ್ಸು...... ಅದನ್ನೇ ಲಾಜಿಕ್ಕಾಗಿ,....

"ಅಯ್ಯೋ ಕರ್ಗೆ, ಧರ್ಮಸಿಂಗು ಅಂತ ಸುಮ್ನೆ ಯಾಕಮ್ಮ ಇನ್ನೊಬ್ಬರನ್ನ ಇನ್ವಾಲ್ವು ಮಾಡಬೇಕು.......ಅದೆಲ್ಲ ಮುಂದೆ ಮಾತಾಡಣ.....ಈಗ ಈ ಡೀಲು ನಮ್ಮಲ್ಲೇ ಇರ್ಲಿ"
ಎಲ್ಲಿ ಪೂಜಾರಿಯನ್ನು ಸೇರಿಸಿಬಿಡ್ತಾಳೋ ಅಂತ ಮೊಟಕು ಮಾಡಿದರು ಗೌಡರು.
ಮ್ಯಾಗಿಗೂ ಎನೋಹೊಳೆದಂತಾಗಿ 'ಓಕೆ' ಎನ್ನುತ್ತಾ, ಉತ್ತರಕ್ಕೂ ಕಾಯದೆ ಫೋನು ಕುಕ್ಕಿದಳು.
ಸಧ್ಯ ಡೀಲು ಕುದುರ್ತಲ ಅಂತ ಗೌಡರಿಗೆ ಸಮಾಧಾನವಾದರೂ, ಎಲ್ಲಿ ಕರ್ಗೆ, ಪೂಜಾರಿ ಕಿರಿಕ್ ಮಾಡಿ ಬಿಟ್ರೆ ಅಂತ ಒಂದು ಅನುಮಾನ ಕೊರಿತಾನೇ ಇತ್ತು...........
ತಮಿಳ್ನಾಡಿನ ಜ್ಯೋತಿಷಿಗಳು ಹೇಳಿದ್ದು ಗ್ಯಾಪನ ಮಾಡಿಕೊಂಡು ಕ್ಯಾಲೆಂಡರು ನೋಡಿದರು.
ಒಳಗಿಂದ ಅಮ್ಮಾವ್ರು ಮುದ್ದೆ, ಸಾರು ತಂದಿತ್ತು ಸುಮಾರು ಹೊತ್ತಾಗಿ ತಣ್ಣಗಾಗಿತ್ತು ಆದರೂ ಏನೋ ಗೊಣಗಿಕೊಂಡೇ, 'ಒಂದು ಡೀಲು ಕುದುರ್ತಾ ಐತೆ' ಅಂತ ಸಮಾಧಾನದಿಂದ ಮುದ್ದೆಗೆ ಕೈ ಹಾಕಿದ್ರು.........
ಅಷ್ಟೊತ್ತಿಗೆ ಪರ್ಸನಲ್ ಶೆಕೆಟ್ರಿ ವೈ.ಎಸ್.ವಿ. ದತ್ತಣ್ಣ ನ ಫೋನ್ ಕುರ್ರ್ ಕುರ್ರ್ ಅಂತು.
ಯಾಕಪ್ಪಾ ಮುದ್ದೆ ಉಣ್ಣಕ್ಕೂ ಬಿಡಲ್ವಲ ಇವ್ನು,............... ಅಥವಾ..... ಲಾಲು ಭಯ್ಯ ಎನನ ಮೀಟಿಂಗಿಗೆ ಕರೀತವ್ನ? ಏನೇನೋ ತಲೆಯಲ್ಲಿ ತುಂಬಿಕೊಳ್ಳುತ್ತಾ "ಅಲೋ" ಎಂದರು.

"ಸ್ಸಾರ್, ಮಸೀದಿ ಕಮಿಟಿಯವರು ಕರೀತವ್ರೆ".....!


ಕಾಮೆಂಟ್‌ಗಳಿಲ್ಲ: