ಶನಿವಾರ, ಫೆಬ್ರವರಿ 28, 2009

"ಮೊನ್ನೆ ಅಂಬ್ರೀಸು-ಕುಮಾರಣ್ಣ ಭೇಟಿಯಾಗಿದ್ರಂತೆ.....?" (ರಾಜಕೀಯ ಹಾಸ್ಯ ವಿಡ೦ಬನೆ).

(Published in Thatskannada.com on 4th March 09 http://thatskannada.oneindia.in/column/humor/2009/0303-ambarish-meets-hdk-political-satire.html)

"ಓ ಅಡ್ ಬಿದ್ದೆ ಕಣಣ್ಣೋ", ಕುಮಾರಣ್ಣನ್ನ ಕಂಡ್ ಕೂಡ್ಲೆ ಅಂಬಿಗೆ ಎಲ್ಲಿಲ್ಲದ ಚೆಡ್ಡಿದೋಸ್ತಿ ನೆನಪಾಗಿತ್ತು. ಲಗುಬಗೆಯಿಂದಲೇ ಕುಮಾರಣ್ಣನ ಮನೆಯೊಳಗೆ ಕಾಲಿಟ್ಟಿದ್ದರು.
"ಓ ಬರಬೇಕು ಗುರುಗುಳು, ಏನ್ ಇಷ್ಟ್ ದೂರ"
ಕುಮಾರು ಏನ್ ಕಮ್ಮಿನಾ, ದೇಶಾವರಿ ನಗು ತೋರ್ಸ್ಕಂಡೇ ಬರ ಮಾಡಿಕೊಂಡ್ರು.
ಥೇಟ್ ’ಜಾರ್ಜ್ ಬುಷ್ಶು ಸೋನಿಯಾ’ ಕೈಕುಲುಕಿದ ತರ, ಕೈ ಶೇಕ್ ಮಾಡ್ಕಂತಲೇ ಪೂರ್ತಿ ಎರೆಡು ನಿಮಿಷ ಫೋಟೋ ಪೋಸ್ ಕೊಟ್ರು, ಒಹ್... ಪೋಟೋ ತೆಗೆಯೋರಿಲ್ಲ ಅಂತ ಅರಿವಾಗಿ ಈಗ ಕೈಬಿಟ್ರು. ಬರಸೆಳೆದು ಅಪ್ಕೊಳಕ್ಕೆ ಹೋಗಲಿಲ್ಲ, ಹೊಟ್ಟೆ ಮುಂದ್ಬಂದು 'ಎದೆ ಅ೦ಟ್ಕಣಕಿಲ್ಲ' ಅಂತ ಇಬ್ರಿಗೂ ಗೊತ್ತಿತ್ತು!

ಸೋಫಾದ ಮೇಲೆ ಧುಪ್ಪೆಂದು ಕುಳಿತ ಅಂಬಿ ತಟಕ್ಕನೆ ಎದ್ದು ಸೋಫಾ ಮುರಿದು ಹೋಯ್ತಾ ಅಂತ ಒಮ್ಮೆ ಚೆಕ್ ಮಾಡಿದ್ರು.ಅದಕ್ಕೆ ಕುಮಾರು,

" ಏನು ಆಗಕಿಲ್ಲ ಕುಂತ್ಕಳಣೋ, ನೀನೊಳ್ಳೆ, ಮೊನ್ನ್ ಮೊನ್ನೆ ಸಾಬರ ಅಂಗ್ಡಿ೦ದ ಒಸಾದ್ ತರ್ಸಿ ಹಾಕ್ಸಿವ್ನಿ..."

"ಓ ಅಂಗಾ, ನಮ್ಮನ್ಯಾಗೆ ಒಂದಿನ..." ಅಂಬಿ ಕಥೆಯನ್ನ ಮಧ್ಯೆ ತಡೆದು,

"ಯೆ... ಎಂಥೆಂಥ ಕರ್ಗೆ ದರ್ಮ್ಸಿಂಗು ಕುಂತ್ರೇ ಏನು ಆಗ್ಲಿಲ್ವ೦ತೆ.." ಕುಮಾರು 'ಟೈಮ್ ಟೆಸ್ಟೆಡ್' ಅಂತ ಸಮಜಾಯಿಸಿ ಕೊಂಡರು.
ಆಳು ನೀರಿನ ಗ್ಲಾಸು ತ೦ದಿಟ್ಟು ಹೋದ.
ನೀರು ಕುಡಿಯುತ್ತಾ ಅಂಬಿ ಗೋಡೆಯ ಮೇಲಿದ್ದ ತೈಲ ಚಿತ್ರ, ದೇವೇಗೌಡರ ಫೋಟೋ... ಎಲ್ಲ ಕಣ್ಣಾಯಿಸಿ ನೋಡ್ತಿದ್ದಂತೆ, ಕುಮಾರು ಅಂಬಿಯನ್ನೇ ಕುತೂಹಲದಿಂದ ದಿಟ್ಟಿಸಿ, ನೀಡಿದ ಕಾಲು ತೊಡೆ ಕುಣಿಸುತ್ತಾ,
"ಹು.. ಅದಿರ್ಲಿ, ಏನ್ ಸಿವ ಇಟ್ ದೂರ ಈ ಬಡವನ್ ಮನೀಗೆ?"
ಅಂಬಿ ಪಿಕ್ಚಚ್ರ್ ತೆಗೆಯಕ್ಕೆ ಇನ್ವೆಷ್ಟಮೆಂಟು ಎಲ್ಲಿ ಕೇಳ್ಬುಡ್ತಾರೋ ಅಂತ ಚಾಣಾಕ್ಷ ಕುಮಾರು ಮೊದ್ಲೇ 'ಬಡವ' ಅಂದ್ಕೊಂಡ್ ಸೇಫ್ ಅಗ್ಬಿಟ್ರು!
ಇಲ್ದಿದ್ರೆ ಮೊನ್ನೇನಾಗ, ಅಪ್ಪಾಜಿ ಜೊತೆಗಾಗಿ ಕೂರ್ಸ್ಕಂದು ಪಾರ್ಲಿಮೆಂಟ್ ಎಲೆಕ್ಸನ್ ಬಗ್ಗೆ ತಿಳಿ ಏಳಿದ್ದು ಏನ್ ಪ್ರಯೋಜ್ಞ? ರಾಧಿಕಗೊಸ್ಕರ ಅಷ್ಟೊಂದು ದುಡ್ಡು ಸುಮ್ ಸುಮ್ನೆ ಖರ್ಚ್ ಮಾಡ್ಬೇಡ ಅ೦ತ ಹೇಳಿದ್ದು ಸುಮ್ನೆನ?


"ಯೆ..ಏನಿಲ್ ಕಣಣ್ಣೋ, ಇಂಗೇ ಒಂದಪ ನೊಂಡ್ಕಂಡ ಒಗವ ಅಂತ್ ಬಂದೆ, ಏನ್ ಬರಬಾರದ ಏಳು,.. ವೊಂಟೋಯ್ತೀನಿ.." ಅಂಬಿ ಸುಮ್ಮನೆ ಕರಡಿ ಬೆದರು ತೂರ್ಸಿದ್ರು.


"ಐ ಬಿಡ್ತು ಅನ್ನು, ಯಾಕಂಗ್ ಮಾತಾಡೀಯ..ಸುಮ್ಕೆ ಇಂಗೇ ಕೆಳುದ್ನಪ, ಒಬ್ನೇ ಬಂದ್ಯಲ್ಲ ಹೆಂಗುಸ್ರು ಕರ್ಕಂಡ್ ಬರ್ಬೋದಾಗಿತ್ತು, ನಮ್ ಮೇಡಮ್ನೋರಿಗೂ ಕಂಪ್ನಿ ಆಗ್ತಿತ್ತು ಅಂದೆ..."
ಕುಮಾರು ನೆನಪಿಗೆ ಬಂದಿದ್ನ ತಕ್ಷಣ ಬಿಟ್ರು. ಅಸೆ೦ಬ್ಲೀಲಿ ಎ೦ಥೆ೦ಥಾ ದೊಡ್ಡ ’ಬೊವ್ ಬೊವ್’ ಗಳಿಗೇ 'ಪಟ್' ಅ೦ತ ಉತ್ತರ ಕೊಟ್ಟಿಲ್ವ...
"ಅರೆರೆ, ಯಾವಾಗಿಂದ ಮೇಡಮ್ಮು"
ಕೇಳಣಾ೦ತ ಬಾಯಿ ತೆಗೆದ ಅಂಬಿ 'ಸುಮ್ನೆ ಯಾಕೆ' ಅವರೂ ಈಗ ಶಾಸಕರಲ್ವೆ ಅಂತ ವಿಷ್ಯಾನ ಚೇಂಜ್ ಮಾಡಿದ್ರು.
ಬಂದ ವಿಷಯಾನ ಹೇಗೆ ಹೇಳೋದು ಅಂತ ಹೊಳೀದೆ ಅಂಬಿ "ಥೂ..ಬೇಜಾರಾಗ್ಬುಟೈತಪ" ಅನ್ನುತ್ತಾ ಎರಡು ಕೈ ಮೇಲೆತ್ತಿ ಮೈ ಮುರಿಯುತ್ತಾ ಆಕಳಿಸಿದರು.ಸೋಫಾದ ಯಾವುದೊ ಮೂಲೆಯಲ್ಲಿ ’ಕುರುಕ್... ಕಟ್’ ಅಂತ ಶಬ್ದ ಆಯಿತು!
ರಾಜಕೀಯದಲ್ಲಿ ಪಳಗಿದ ಕುಮಾರಣ್ಣನಿಗೆ ಈ ನಾಟಕ ಎಲ್ಲಾ ಅರ್ಥ ಆಗಲ್ವಾ, ಸುಮ್ನೆ ಅಡ್ಡ ಸಾಟಿ ಮೇಲೆ ಶುರು ಮಾಡಿದರು.

"ಚುನಾವಣೆ ಬಂತಪೋ, ಎಲ್ಲ ತಯಾರಿ ಮಾಡ್ಬೇಕು..." (ನಾವು ಹುಲ ಮಾನವರು ವಿದ್ಯಾರ್ಥಿ ಆಗಿದ್ದಾಗ anual exam ಬಂತು ಅಂತ ತಯಾರಿ ಮಾಡಲ್ವೇ, ಆತರ)
ಅಂಬ್ರೀಶು ಸುಮ್ನೆ ಇದ್ದಿದ್ದು ನೋಡಿ ಕುಮ್ಮಿನೇ ಮುಂದುವರೆಸಿದರು.


"ಏನ್ಲಾ, ಯಾ ಪಾರ್ಟಿ ಅಂತ ಏನನ ಡಿಸೈಡ್ ಮಾಡ್ದ?" ಯಾವ್ ಪಾರ್ಟೀಲಿ ನಿಂತರೂ ಗೆಲ್ಲೋ ಕುದುರೆ ಅಂತ ಕುಮ್ಮಿಗೆ ಗೊತ್ತಿಲ್ವ...

"ಅದೇ ಕಣ್ಲ ಸಮಸ್ಯೆ ಅಗ್ಬುತೈತೆ, ಕಾಂಗ್ರೆಸ್ನೋರು ಎಲ್ಲೂ ಹೋಗ್ಬೇಡ ನಿಂಗ್ ಬೇಕಾದ್ ಕೊಡ್ತೀವಿ ಅಂತಾರೆ, ಬಿಜೆಪಿನೋರು ನಮ್ಮೊಟ್ಟಿಗೆ ಬನ್ನಿ ದೇಶ ಕಟ್ಟಣ ಅಂತಾರೆ, ಎಸ್ಪಿಯಿಂದ ಬಂಗಾರಪ್ಪನೂ ಫೋನ್ ಮಾಡಿದ್ರು...ಕಮ್ಯುನಿಷ್ಟ್.."

ಅಂಬಿ ಮಾತು ಮುಗಿಸೋ ಮೊದ್ಲೇ ಕುತೂಹಲ ತಡೆಯಲಾರದೆ ಕುಮ್ಮಿ,
"ಬಿ ಜೆ ಪಿ ನವರಿಗೆ ಏನಂದೆ?" ಅಂತ ನಗುತ್ತಾ ಮಧ್ಯೆ ತೂರಿಸಿದರು.

"ಯೆ...ತತ್ ತಗಿ ಯಾಕಂತಿಯ, ಬರೀ ಪುಳ್ಚಾರ್ ನನ್ಮಕ್ಳು , 'ಸಂಗಟನೆ, ರಾಷ್ಟ್ರ ಗೀಷ್ಟ್ರ' ಅಂತ ಏನೋ ಕಥೆ ಬಿಡ್ತಾವ್ರೆ ಒಬ್ರಿಗೂ ಸೀರಿಯಸ್ ನೆಸ್ ಇಲ್ಲ"
ಬಿಜೆಪಿ ನವರಿಗೆ ರಾಜಕೀಯದ ಬಗ್ಗೆ ಒಂದು ಕ್ಲಾಸ್ ತೊಗೊ೦ಡ್ ಬಿಡಬೇಕೆನ್ನುವಷ್ಟು ಸಿಟ್ಟು ಬಂದಿತ್ತು ಅಂಬಿಗೆ."ಹಹಃ ಹಹಃ ಹಹಃ......"
ಕುಮಾರಣ್ಣ ಒಂದು ವರ್ಷದ ಹಿಂದೆ ಬಿಜೆಪಿಗೆ ಟೋಪಿ ಹಾಕಿದ್ದನ್ನು ನೆನೆಸಿಕೊಂಡು ಮನಸಾರೆ ಕೇಕೆ ಹಾಕಿ ಹೊಟ್ಟೆತು೦ಬಾ ನಕ್ಕರು. ಅಂಬಿ ಮೊಗದಲ್ಲೂ ನಗುವಿನ ಗೆರೆ ಮೂಡಿತ್ತು.

ಈಗ ಪರಿಸ್ತಿತಿ ನಿರಾಳವಾಗಿತ್ತು, ಇಬ್ಬರೂ ಇನ್ನೂ ಕೆಲವನ್ನು ಸ್ನೇಹಿತರ೦ತೆ ಹಂಚಿಕೊಳ್ಳಲು ತಯಾರಾಗಿದ್ದರು.
"ನಿನ್ ಆರುವಯ್ಯ ಫ್ರೆಂಡು ಏನಂತಾರೆ"

ಇದೇ ವೇಳೆ ವಿಷ್ಣು ಬಗ್ಗೆ ತಿಳ್ಕೊಂಡ್ ಬಿಡಾಣ ಅಂತ ಕುಮ್ಮಿಗೆ.
"ಯೆ..,ಪಾಪ ಅವು೦ದೇನೂ ಇಲ್ಲಪಾ, ನಾನು ಎ೦ಗೇಳ್ತೀನೋ ಅಂಗೆ"
ಅಂಬಿಗೆ ವಿಷ್ಣು ಬಗ್ಗೆ ಕೊಂಚವೂ ಅನುಮಾನ ಇರಲಿಲ್ಲ.

ಅಂಬಿ ಈಗಾಗಲೆ ಕಾಗ್ರೆಸ್ಸಿಂದ ಹೊರಗೋಡಲು ತುದಿಗಳ ಮೇಲೆ ನಿಂತಿದ್ದಾರೆ ಅಂತ ಕುಮ್ಮಿಗೆ ಚೆನ್ನಾಗಿ ಗೊತ್ತಿತ್ತು.

"ಅಂಗಾದ್ರೆ ದೊಡ್ಡ ಗೌಡ್ರು ಕರೆದು ಮಾತಾಡ್ ಬುಡಾವ"
ಆದಷ್ಟು ಬೇಗ ದೊಡ್ ಖುಳಾನ ಬುಟ್ಟಿಗೆ ಹಾಕಿ ಕೊಂಡ್ ಬುಡಾವ ಅಂತ ಕುಮ್ಮಿಗೆ.

"ನೋನೋ, ಅವೆಲ್ಲ ಆಮೇಲೆ ಮೊದ್ಲು ನಮ್ ಲೆವೆಲ್ನಾಗೆ ರೂಪುರೇಸೆ ಮಾತಾಡವ, ನಂತ್ರ ದೊಡ್ ಗೌಡ್ರು..."

ಸುಮ್ನೆ ಪಾರ್ಟಿಗೆ ಸೇರ್ಕಂಬುಟ್ರೆ ಆತದ, ಪೇಪರ್ನಾಗೆ ಅನೌನ್ಸ್ ಆದಮೇಲೆ, ಬಿಜೆಪಿಗೆ ಹಾಕ್ದಂಗೆ ಪಂಗ ನಾಮ ಹಾಕ್ಬುಟ್ರೆ? ಅ೦ಬೀಗೂ ಅಲ್ಪ ಸ್ವಲ್ಪ ರಾಜಕೀಯ ಗೊತ್ತಿಲ್ವ?

"ಆಯ್ತು ಕಣಣ್ಣೋ, ನೀ ಯಾವ ಕ್ಸೇತ್ರ ನಿಂತ್ಗತಿಯ ಯೋಳು, ಅಲ್ಗೇ ಯವಸ್ತೆ ಮಾಡಾವ....ಸರಿಯೇನಪ..." ಕುಮಾರಣ್ಣ ಸಮಾಧಾನದಿಂದ. ದೇವೇಗೌಡ್ರು ಪರ್ಮಿಶನ್ ಇದಕ್ಕೇನು ಬೇಡ ಅ೦ತ ಕುಮ್ಮಿಗೆ ಗೊತ್ತಿತ್ತು.

"ಅದೇ ಕಣ್ಲ ಬಲೇ ಇಕ್ಕಟ್ಟಿಗೆ ಸಿಕಆಕ್ಕ ಬುಟೀವ್ನಿ"

ವಯಸ್ಸಾಗಿರುವ ತನಗೆ ಅಭಿಮಾನಿ ಬಳಗವು ಕಡಿಮೆಯಾಗಿದೆ ಅಂತ ಚಿ೦ತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಕಳೆದ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದ ನೆನಪು ಇನ್ನೂ ಹಸಿರಾಗಿತ್ತು. ಹಾಗಾಗಿ ಹೆಚ್ಚು ಡಿಮ್ಯಾಂಡ್ ಮಾಡೋ ಪರಿಸ್ತಿತಿಯಲ್ಲಿರಲಿಲ್ಲ ಅ೦ಬಿ.

ಕುಮ್ಮಿಗೆ ಇದು ಗೊತ್ತಿದ್ರೂ ಪಾರ್ಟಿಗೆ ಹೆಂಗಾನ ಮಾಡಿ ಜೀವ ತುಂಬ ಬೇಕಾಗಿದೆ. ಇವನ್ನ ಬುಟ್ಟಿಗೆ ಹಾಕ್ಕಂಡ್ರೆ, ಜೊತೆಗೆ ಆ ಹಾರುವಯ್ಯ ಬತ್ತವ್ನೆ, ಇಬ್ರು ಸೇರಿದ್ರೆ ಪಾರ್ಟಿಗೆ ಒಳ್ಳೆ ಸ್ಟಾರ್ ವ್ಯಾಲ್ಯೂ...

ಕೆಲವು ಚೊಟಾ-ಮೋಟಾ ಯಾಕ್ಟ್ರು ಗಳನ್ನೂ ಸೆರ್ಸ್ಕ೦ಬೋದು, ಜೊತೆಗೆ ಚಿರ೦ಜೀವಿ ಸಪೋರ್ಟೂ ಇದ್ರೆ ನಮ್ಮನ್ನ ಹಿಡಿಯೋರು ಯಾರು?

"ಆಗ್ಲಿ ಕಣ್ಲ, ನಿಂಗೆ ಯಾವ ಕ್ಷೇತ್ರ ಇಷ್ಟನೋ ಅಲ್ಗೆ ಟಿಕೆಟ್ ಕೊಡೋಣ೦ತೆ, ಯೋಚನೆ ಮಾಡ್ಕಂಡ್ ಬಾ, ಆಮೇಲೆ ಅಪ್ಪಾಜಿ ತಾವು ಕು೦ತ್ ಮಾತಾಡಣ"
ಅಷ್ಟೊತ್ ವರೆಗೆ ತನಗೂ ಯೋಚನೆ ಮಾಡೋಕ್ಕೆ ಟೈಮ್ ಸಿಗುತ್ತೆ ಅಂತ ಯೋಚನೆ ಕುಮ್ಮಿಗೆ.
ಕುಮ್ಮಿ ಅಷ್ಟು ಫ್ರೀಡಂ ಕೊಟ್ಟಿದ್ದು ನೋಡಿ,

"ಗೆಳೆಯಾ... ನಮ್ದೊಳ್ಳೆ ದೋಸ್ತಿ ಕಣೋ"
ಅಂತ ವಿಷ್ಣು ಜೊತೆ ಡ್ಯುಯೆಟ್ ಹಾಡಿದ್ದು ನೆನಪಿಸಿಕೊಂಡು ಕುಮ್ಮಿ ಜೊತೆ ಕುಣುದ್ ಬುಡಾಣ ಅನ್ನೋವಶ್ಟು ಸಂತೋಷವಾಗಿತ್ತು ಅಂಬಿಗೆ. ಆದ್ರೆ ಇಲ್ಲಿ ಕುಣಿಯಕ್ಕೆ ಆಗುತ್ತಾ, ಇನ್ನೇನು ಬ೦ದ ಕೆಲಸ ಎಲ್ಲವೂ ಆಯಿತು, ಅಂಬಿ ಹೊರಡುವ ಸೂಚನೆ ಕೊಡುತ್ತಾ ಗಡಿಯಾರ ನೋಡುತ್ತಿದ್ದಂತೆ, ಕುಮ್ಮಿ,
"ಎಂಗೂ ಮುದ್ದೆ ರೆಡಿ ಐತೆ, ನಿಂಜೊತೆ ಊಟ ಮಾಡಿ ಶಾನೇ ದಿನಗಳಾಯ್ತು, ಅಂಗೇ ಮುದ್ದೆ ಮೆಲ್ಕ೦ಣ್ತ ಮಾತಾಡವ ಬಾ"
ಎನ್ನುತ್ತಾ ಅಂಬಿ ಬೇಡವೆಂದರೂ ಒತ್ತಾಯ ಮಾಡಿ ಕೈ ಹಿಡಿದು ಕೊಂಡು ಟೇಬಲ್ಲಿನ ಕುರ್ಚಿಗೆ ಕುಳ್ಳರಿಸಿದರು ಕುಮಾರಣ್ಣ. ಅಂಬೀಗೂ ಸುಮಾರು ದಿನ ಆಗಿತ್ತು ಮುದ್ದೆ ಬಸ್ಸಾರು ಉಣ್ಣದೆ, ಚಿಕನ್ ಮಸಾಲೆ ವಾಸನೆ ಬೇರೆ ಆಗಲೆ ಮೂಗಿಗೆ ಬಡಿದಿತ್ತು!
ಮುದ್ದೆ ಬಡಿಸುತ್ತ ಕುಮ್ಮಿ

"ಮನ್ಯಾಗೆ ಎ೦ಗುಸ್ರು ಮುದ್ದೆ ಮಾಡ್ತವ್ರ?"
ಕುಮಾರು ಸುಮ್ಮನೆ ಎನ್ ಕ್ವಯಿರಿ ಮಾಡಿದ್ರು.
"ಯೆ..ಇಲ್ಕಣಣ್ಣೋ, ಆಸೆ ಪಟ್ಕ೦ಡು ದಿನಾ ಅಯ್ಯಂಗಾರ್ ಊಟ ಮಾಡಿ ಮಾಡಿ ಬಾಯಿ ಕೆಟ್ಟೊಗ್ಬುಟೈತೆ.." ಎನ್ನುತ್ತಾ ಒಂದೆರಡು ಚಿಕನ್ ಪೀಸ್ ಗಳನ್ನ ಹೆಚ್ಚಾಗೇ ಬಡಿಸಿಕೊಂಡರು ಅಂಬಿ.

"ಅದಿರ್ಲಿ, ಎ೦ಗೈತೆ ಮಂಗ್ಳುರಿನ್ ವೊಸಾ ಅಕ್ಕಿ"

ಹುಣುಸೆ ಮರಕ್ಕೆ ಮುಪ್ಪುಂಟೆ ಅನ್ನುವ ಧಾಟಿಯಲ್ಲಿ ಮು೦ದುವರೆಸಿದರು ಅಂಬಿ.

" ಮೆಲ್ಲುಕ್ಕೆ, ಮೆಲ್ಲುಕ್ಕೆ ಮಾತಾಡ್ ಗುರು ಅಮ್ಮಾವ್ರು ವೊರಗೆ ವೋದವರು ಇನ್ನೇನ್ ಬರೋ ವೊತ್ತಾಯ್ತು"
ಪಿಸು ಮಾತಿನಲ್ಲಂದರು ಕುಮ್ಮಿ.
ಆದರೆ ಅವೆಲ್ಲ ಮಾಮೂಲಿ ಅನ್ನೋ ಸ್ವರದಲ್ಲಿ,
"ಅಲ್ಕಣಯ್ಯ, ಅವಳ ಜೊತೆ ವೋಗೋದ್ ಹೋಯ್ತಿಯ ಸ್ವಲ್ಪ ಜನಗಳ ಕಣ್ತಪ್ಸಿ ವೋಗೋದ್ ಅಲ್ವ?"
ಅನುಭವೀ ಅಂಬಿಯ ಅಡ್ವೈಸ್.
ಈ ನನ್ಮಕ್ಳು ಸಿನೆಮಾ ಆಕ್ಟ್ರುಗಳಿಗೆ ನಮ್ಕಷ್ಟ ಎಲ್ಲಿ ಅರ್ಥ ಆಗುತ್ತೆ.... ತಡವರಿಸಿಕೊ೦ಡು,

"ಊ ಕಣಪ್ಪ, ಎಲ್ಲಾ ನೀಟಾಗಿ ಅರೆಂಜ್ ಮಾಡಿದ್ದ ನಮ್ ಏಜೆಂಟು, ಎಲ್ಲೋ ಹೆಡವಟ್ ಆಗ್ಬುಡ್ತು, ಎಲ್ಲಾ ಯಡ್ಡೀದೆ ಕಿತಾಪತಿ ಇರ್ಬೇಕು, ಅದ್ಕೆ ’ಯಡ್ಡಿ-ಸೋಭಕ್ಕನ್’ ಫೋಟೋ ವೊಡೆಯಾಕ್ಕೆ ನಮ್ಮೋರು ಕ್ಯಾಮ್ರ ಮಡಿಕ್ಕೊ೦ಡ್ ರಾತ್ರಿ -ಅಗಲು ಕಾಯ್ತಾವ್ರೆ"
ಮುಂದಿನ ರಾಜಕೀಯದ ಸುಳಿವು ಕೊಟ್ಟರು ಕುಮ್ಮಿ.
"ಅಯ್, ಅದಕ್ಕ್ಯಾಕೆ ಅಷ್ಟು ಸೀರಿಯಸ್ ಆಯ್ತೀಯ, ಹೋಗ್ಲಿ ಬುಡು, ಹೊಳ್ಳೆ ಅಕ್ಕೀನೆ ಆರ್ಸ್ಕಂಡಿದೀಯ, ಆದ್ರೆ ಇಷ್ಟ್ ಬಯಿರಂಗ ಆದ್ಮೇಲೆ ಅನಿತಕ್ಕ ಏನೂ ಅನ್ಲಿಲ್ವ?"
'ಪತ್ನಿವ್ರತಾ' ಶಿರೋಮಣಿ ಅಂಬಿಯ ಕಿರುನಗೆಯ ನೋಟ!
ಅಷ್ಟೊತ್ತಿಗೆ ಮುಂದಿನ ಬಾಗಿಲಿನ ಕಾಲಿ೦ಗ್ ಬೆಲ್ ಆಯಿತು. ಕೆಲಸದ ಆಳು ಬಾಗಿಲು ತೆಗೆಯಲು ಓಡಿದ. ಕುಮಾರಣ್ಣ ಇನ್ನು ಮಾತು ಮು೦ದುವರೆಸಕ್ಕೆ ?!....


ಶುಕ್ರವಾರ, ಫೆಬ್ರವರಿ 20, 2009

ಮರೆಯಲಾದೀತೆ ಆ ಅಮ್ಮನ?


ಹೊತ್ತ್ಹೊತ್ತು ಗೊತ್ತಿಲ್ಲದೆ ನಾ ಅರಚಲು
ಮುಜುಗರದ ಮಡಿಲಲ್ಲಿ ಸೆರಗಿಂದ ಮುಚ್ಚಿ
ಹಸಿದ ಹೊಟ್ಟೆಗೆ ನಿಟ್ಟಿಲ್ಲದೆ ಹಾಲುಣಿಸಿದ
ಬಿಸಿಲ ಲೆಕ್ಕಿಸದೆ ನೆಡೆದು ಹೊತ್ತೊಯ್ದು ರಕ್ಷಿಸಿದ
ಮುಗಿಲ ಚಂದ್ರನ ಬಳಿಗೆ ಕರೆದೊಯ್ದು ನಿದ್ರಿಸಿದ
ಜಗದ ಕಾರ್ಯಗಳನು ಮರೆತು ಪೋಷಿಸಿದ
ಗೊತ್ತಿರದ ನೋವ ದಿಕ್ಕೆಟ್ಟು ಬಿತ್ತರಿಸಿದಾಗ
ಬರಸೆಳೆದು ಅಪ್ಪಿ ಮುದ್ದಾಡಿ ತಾನೂ ಮುಕ್ಕಳಿಸಿದ
ಆ ಅಮ್ಮ ನನ್ನ ಬೆರಗು ನೋಟದ ಕಣ್ಗಳಿಗೆ
ಅರ್ಥವಾಗದ ನನ್ನ ಮುದ್ದು ಗೊಂಬೆ.

ಊರಕೇರಿಯ ಅಲೆದು ಕೆರೆಯತೀರದಿ ಕಳೆದು
ಕಾನು ಕುಂಟೆಯ ದಾಟಿ ಮರ ಗಿಡಗಳ ಹತ್ತಿಳಿದು
ಲೆಕ್ಕವಿಲ್ಲದಷ್ಟು ಸಿಹಿ ಕಹಿಯ ಹಣ್ಣು ಕಾಯಿ ತಿಂದು
ಹೊತ್ತು ಗೊತ್ತಿಲ್ಲದೆ ಹಕ್ಕಿ ಪಕ್ಕಿಗಳ ಜೊತೆ ಹಾಡಿ ಕಳೆದು
ನದಿಯ ನೀರಲಿ ಈಜಾಡುತ ಮೀನು ಹಿಡಿವ ಆಟವಾಡಿ
ಸ್ವಲ್ಪವೂ ಇಷ್ಟವಿಲ್ಲದೆ ಧುತ್ತೆಂದು ಮನೆಗೆ ಬಂದಾಗ
ಕಟ್ಟು ನಿಟ್ಟಿನ ಅಪ್ಪನ ಸಿಟ್ಟಿನ ಹೊಡೆತಗಳಿಗೆ ತಡೆಯೊಡ್ಡಿ
ನನ್ನ ಮರೆಮಾಡಿ ಪೆಟ್ಟು ತಿಂದ ನನ್ನಮ್ಮ,
ನೀನು ನನ್ನ ಮತಿಗೆ ಅರ್ಥವಾಗದ ಕರುಣಾಮಯಿ.

ಪುಂಡು ಪೋಕರಿಯೆಂದು ಊರವರು ಕರೆದಾಗ
ಗಿಲ್ಲಿ ದಾಂಡು ಗೋಲಿ ಕವಡೆ ಆಡಿ ಸೋತಾಗ
ಪಾಠ ಪಠ್ಯಗಳು ತಲೆಗೆ ಹತ್ತದೆ ಗೋಳಾಡಿದಾಗ
ಸಮಚಿತ್ತ ತೋರುತ ನನ್ನ ಕಣ್ಣೀರೊರೆಸುತ
ಜಗವ ಧೈರ್ಯದಿ ಎದುರಿಸುವ ಮರ್ಮವ ತಿಳಿಸುತ
ನೀನಂದು ಕಲಿಸಿದ ನಾಲ್ಕು ಅರ್ಥ ತುಂಬಿದ ಪದಗಳ ಮುಂದೆ
ನಾನಿಂದು ಗಳಿಸಿದ ಸಾಲು ಸಾಲು ಪದವಿಗಳು ಅರ್ಥಹೀನ;
ಕಡುಬು ಹೋಳಿಗೆ ಚಕ್ಕುಲಿ ಕಜ್ಜಾಯ ತಿನ್ನಿಸುತ
ಹಬ್ಬಹಬ್ಬಕೂ ಹೊಸ ಬಟ್ಟೆಯುಡಿಸಿ ನಕ್ಕು ನಲಿಸುತ
ಹರಿದ ಸೀರೆಯುಟ್ಟೇ ಅರೆಹೊಟ್ಟೆಯಲ್ಲಿ ಖುಷಿಪಟ್ಟ ಕುಂಕುಮಾಂಕಿತೆ,
ನೀನಲ್ಲ ಬಡವೆ ನೀನು ಆಗರ್ಭ ಮತಿ ಶ್ರೀಮಂತೆ,
ನೀ ನನಗೆಂದೆಂದೂ ಅರ್ಥವಾಗದ ಅಮರ ದೇವತೆ.....



ಸೋಮವಾರ, ಫೆಬ್ರವರಿ 2, 2009

ಲ೦ಚದ ನಿರ್ಮೂಲನ ಹೇಗೆ?


(Published in Vijay Karnataka on 3rd Feb 09, Pg 8)
ನಮ್ಮ ದೇಶವನ್ನು ೨೦೨೦ರಲ್ಲಿ ಮು೦ದುವರೆದ ದೇಶಗಳ ಸಾಲಿನಲ್ಲಿ ನೋಡುವುದು ಶ್ರೀ ಅಬ್ದುಲ್ ಕಲಾಮರ ಒ೦ದು ಸಹಜ ಸು೦ದರವಾದ ಕನಸು. ಸುರಕ್ಷಿತ, ಶಕ್ತಿಯುತ ರಾಷ್ಟ್ರ ನಮ್ಮೆಲ್ಲರ ಬಯಕೆ ಕೂಡ ಹೌದು. ಚ೦ದ್ರನ ನೆಲಕ್ಕೆ ಇನ್ನೇನು ಕೆಲವೇ ವರ್ಷಗಳಲ್ಲಿ ಮಾನವನನ್ನು ಕಳಿಸಲಿದ್ದೇವೆ. ಆದರೇನು?... "ತಳಪಾಯ ಗಟ್ಟಿಇಲ್ಲದೆ ಒ೦ದು ಸುಭದ್ರವಾದ ಮನೆಯನ್ನು ಕಟ್ಟಲು ಸಾಧ್ಯವೆ?"

(Courtesy: Satish Acharya)

ಶಾಸಕರೊಬ್ಬರು ಮೊನ್ನೆ ಮೊನ್ನೆ ’ಲ೦ಚಕ್ಕಾಗಿ’ ಸಿಕ್ಕಿ ಹಾಕಿಕೊಂಡಿರುವುದು ಇನ್ನೂ ಹಸಿಯಾಗಿಯೇ ಇದೆ. ಲೋಕಾಯುಕ್ತವಂತೂ ಹಲವಾರು ಪ್ರಕರಣಗಳನ್ನ ಬಯಲಿಗೆಳೆದಿದೆ. ನಮ್ಮ ರಾಜ್ಯ/ದೇಶದಲ್ಲಿ ಇಂಥಾ ಕ್ಷೇತ್ರದಲ್ಲಿ 'ಲಂಚ ಇಲ್ಲ' ಅಂತ ಇಲ್ಲವೇ ಇಲ್ಲ. PWD, RTO, BMP, ಹೌಸಿಂಗ್ ಬೋರ್ಡ್, BDA, ಪೋಲಿಸ್, ಆಡಳಿತ ಎಲ್ಲವೂ...ಎಲ್ಲವು ಲಂಚಮಯ. ಲಂಚ/ಬ್ರಷ್ಟಾಚಾರದಲ್ಲಿ ವಿಶ್ವದಲ್ಲಿ ಈಗ ನಮಗೆ ೨೨ನೆಯ ಸ್ಥಾನ. ಕೆಲವು ಮುಂದುವರೆದ ದೇಶಗಳಲ್ಲಿ ಅಧಿಕಾರದ ಅತೀ ಮೇಲ್ಮಟ್ಟದಲ್ಲಿ ಮಾತ್ರ ಲಂಚ ಇದ್ದರೆ, ಭಾರತದಲ್ಲಿ ಎಲ್ಲಾ ಮಟ್ಟದಲ್ಲಿ ಲಂಚ ಇರುವುದು ಜಗಜ್ಜಾಹಿರ.

ಬರೀ ಮೆರವಣಿಗೆ ಮಾಡಿದರೆ, ಮಹಾತ್ಮಾ ಗಾಂಧಿ ಪ್ರತಿಮೆಯ ಮುಂದೆ ನಾಲ್ಕು ಬೋರ್ಡ್ ಹಾಕಿಕೊಂಡು ಧರಣಿ ಮಾಡಿದರೆ ಅಥವಾ ಪುರಾವೆ ಜತೆ ಸಿಕ್ಕ ನಾಲ್ಕುಅಪರಾಧಿಗಳನ್ನು ಜೈಲಿಗೆ ಹಾಕಿ ತದುಕಿದರೆ ಲಂಚಾವತಾರ ಪರಿಹಾರವಾಗುತ್ತಾ? ಅಥವಾ 'ಲೋಕಾಯುಕ್ತ ಒಳ್ಳೆ ಕೆಲಸ ಮಾಡುತ್ತಿದೆ' ಅಂತ ಹೆಮ್ಮೆಯಿಂದ ಹೇಳಿಕೊಂಡು ಖುಷಿಪಟ್ಟರೆ ಲಂಚ ಕಮ್ಮಿಯಾಗುತ್ತಾ?
ಅಧಿಕಾರಿಗಳಲ್ಲಿ ಪ್ರಾಮಾಣಿಕತೆ ಸ್ವತಹ ಇದ್ದರೆ ಅದು ಜನರ ಅದೃಷ್ಟ. ಹಾಗಂತ ನಿಷ್ಟಾವಂತ ಅಧಿಕಾರಿಗಳು ಕೂಡ ಕೆಲವೊಮ್ಮೆ ಇಕ್ಕಟ್ಟಿನಲ್ಲಿ ಸಿಕ್ಕಿ ಕೊಳ್ಳುತ್ತಾರೆ. ಇದರಲ್ಲಿ ಖಂಡಿತವಾಗಿಯೂ ಪ್ರತಿಯೊಬ್ಬ ಪ್ರಜೆಯ ಪಾತ್ರವಿದೆ. ಆದರೆ ಒಬ್ಬೊಬ್ಬ ಪ್ರಜೆ ಏನು ಮಾಡಬಲ್ಲ, ಅವನೂ ಕೂಡ ಪರಿಸ್ಥಿತಿಯ, ಪರಿಸರದ ಕೈಗೊಂಬೆ ಆಗಿಬಿಡುತ್ತಾನೆ. ಹಾಗಾದರೆ ಈ ರೋಗಕ್ಕೆ ಏನು ಮದ್ದು? ಔಷಧವೇ ಇಲ್ಲವೇ?ಹೌದು ಇದು ದೇಶಕ್ಕೇ ದೊಡ್ಡ ಸವಾಲು, ವಿಪರೀತ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಪರಿಹಾರ ಅಷ್ಟು ಸರಳವಲ್ಲ.

ಆದಾಗ್ಯೂ ಆಡಳಿತ ಯಂತ್ರ ಮನಸ್ಸು ಮಾಡಿದರೆ ಪರಿಹಾರ ಇದೆ. ಆದರೆ ಈ ರೋಗ ಗುಣ ಆಗುವಾಗ ಸ್ವಲ್ಪ ನಿಧಾನ ಆಗಬಹುದು, ಕ್ರಮೇಣ ಲಂಚಕ್ಕೆ ಕಡಿವಾಣ ಹಾಕಬಹುದು. ಪರಿಹಾರದ ಮಾರ್ಗದಲ್ಲಿ ಖಂಡಿತ ನಾವು ಮುಂದುವರೆಯ ಬಹುದು.

ಉತ್ತರ: ಲಂಚವನ್ನು ತಡೆಯಬೇಕೆಂದರೆ ಒಂದು ಶಕ್ತಿಯುತ ವ್ಯವಸ್ಥೆಯನ್ನು ನಿರ್ಮಾಣ ಮಾಡಬೇಕು.

ಹೇಗೆ? ಈಗಿನ ಕಾಲಕ್ಕೆ ವರವಾಗಿ ಮೂಡಿರುವ ಟೆಕ್ನಾನಲಜಿಯನ್ನ ಬಳಸಿಕೊಂಡು "ಲಂಚವನ್ನು ಕಾನೂನೀಕರಣ (Legalize) ಗೊಳಿಸಬೇಕು"!!
ಹೀಗೆ ಏಕಾ ಏಕಿ ಹೇಳಿದರೆ ನನ್ನನ್ನು ಹುಡುಕಿಕೊಂಡು ಬಂದು ಹೊಡೆಯುತ್ತೀರ!.... ಮುಂದೆ ಓದಿ.

ಉತ್ತರ ಹುಡುಕುವುದಕ್ಕೆ ಮುನ್ನ ಸಮಸ್ಯೆಗಳನ್ನ ಪಟ್ಟಿ ಮಾಡಬೇಕು. ಹಾಡುಹಗಲೇ ಕಣ್ಣುಮುಂದೆ ನಾವು ಬಲಿಯಾಗುವ RTO ಆಫೀಸನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ.


೧) ಬೆಳಿಗ್ಗೇನೆ ಉತ್ಸಾಹದಿಂದ ನೀವು RTO ಆಫೀಸಿಗೆ ಲೈಸೆನ್ಸ್ ಮಾಡಿಸಲು ಹೋಗುತ್ತೀರ. ಆಫೀಸು ಇನ್ನೂ ಹತ್ತಾರು ಮಾರು ಇರುವಾಗಲೇ, "ಸ್ಸಾರ್, ಬನ್ನಿ ಸ್ಸಾರ್, ಏನಾಗಬೇಕು, ಎಲ್ಲೆಲ್ಲ, ಡಿಎಲ್ಲ?, ಮಾಡ್ಸ್ ಕೊಡೋಣ ಬನ್ನಿ, ನನಗೆ ಸಾಯೇಬ್ರು ಗೊತ್ತು, ಈಗೇನ್ ಕೊಡಬೇಡಿ ಸಾರ್, ಕೆಲಸ ಅದ ಮೇಲೆ ನೀವೇ ತಿಳಿದು ಕಾಫಿ ಕಾಸು ಕೊಡಿ ಸಾಕು, ನಾನು ಬೇರೆಯವರ ತರ ಅಲ್ಲ ಸಾರ್". ಅಂತ ಹಲವಾರು ಎಜೆ೦ಟರಲ್ಲಿ ಒಬ್ಬ ಬಾಗಿಲು ದಾಟುವವರೆಗೂ ಬಂದು ಬಗೆ ಬಗೆಯಿಂದ ಒಲಿಸಿಕೊಳ್ಳುತ್ತಾನೆ.ಅದು introduction ಮಾತ್ರ. ನೀವು ಮನಸ್ಸೊಳಗೆ ಖುಷಿ ಪಡುತ್ತ, 'ವಾವ್! ಎಂಥ ಪ್ರಾಮಾಣಿಕತೆ', ಅಂತ ನಿವೇನಾದರು ಅವನನ್ನ ವಿಚಾರಿಸಿದರೋ ಹಳ್ಳಕ್ಕೆ ಬಿದ್ದ್ರಿ. ಆದರೆ ಎಷ್ಟೋ ಬಾರಿ ಈ ಏಜೆಂಟ್ ಗಳೇ, ಒಳಗಿನ ಅಧಿಕಾರಿಗಳಿಗಿಂತ ಒಳ್ಳೆಯ ಮಾಹಿತಿ ಕೊಡುತ್ತಾರೆ, ಸುಲಭವಾಗಿ ಕೆಲಸ ಮಾಡಿಕೊಡುತ್ತಾರೆ ಅನ್ನುವುದೂ ನಿಜ.ನಿಮ್ಮಲ್ಲಿ ಹಣಕ್ಕೇನೂ ಕೊರತೆ ಇಲ್ಲ. ಆದರೆ ನೀವು ಪ್ರಾಮಾಣಿಕರು, ಮೌಲ್ಯಗಳಲ್ಲಿ ನಂಬಿಕೆ ಇಟ್ಟವರು. ಒಹ್... ಹೊತ್ತಾಯಿತು, ಆಫೀಸಿಗೆ ಹೋಗಬೇಕು. ಏನು ಮಾಡುತ್ತೀರ? ಇಲ್ಲಿಯೇ ನಿಮ್ಮ ಲೈಸೆನ್ಸ್ನ 'ರಹದಾರಿ' ನಿರ್ಧಾರವಾಗುತ್ತದೆ.

೨) ಇವೆಲ್ಲ ಸರಿ ಇಲ್ಲ ಅಂತ ನೇರವಾಗಿ ಆಫೀಸಿನ ಹತ್ತಿರ ಹೋದಾಗ ಯಾರನ್ನು ವಿಚಾರಿಸಬೇಕು, ಫಾರಂ ಎಲ್ಲಿ ಸಿಗುತ್ತದೆ ಅಂತ ಹುಡುಕುವುದರಲ್ಲೇ ಸುಮಾರು ಹೊತ್ತು ಆಗುತ್ತದೆ. ಅಲ್ಲಿ ನೋಡಿದರೆ ಜನ ಜ೦ಗುಳಿ, ಸ೦ತೆಯ ತರ. ಇನ್ನು ಒಳಗೆ ಹೋಗಿ, ಡೆಸ್ಕ್ ಹತ್ತಿರ ಹೋಗಿ, ಚಪ್ಪಲಿ ಬಿಚ್ಚಿಟ್ಟು ಕೊಂಡು ನೆಮ್ಮದಿಯಾಗಿ ಕುರ್ಚಿಯಲ್ಲಿ ಕುಳಿತು ಕಿವಿಯಲ್ಲಿ ಕಡ್ಡಿ ಹಾಕಿಕೊಂಡು ಆಕಳಿಸುತ್ತಿರುವ ನೌಕರನನ್ನು ಕೇಳಿದರೆ 'ಅಲ್ಲೇ ಹೊರಗಡೆ ಟೇಬಲ್ ಹತ್ರ ಇರ್ಬೇಕು ನೋಡ್ರಿ' ಅನ್ನುತ್ತಾನೆ. ನೀವು ದೈನ್ಯತೆಯಿಂದ 'ಇಲ್ಲ ಸಾರ್, ಅಲ್ಲಿ ಯಾರು ಇರಲಿಲ್ಲ' ಅಂತ ಹೇಳಿದರೆ, ಇಲ್ಲೇ ಎಲ್ಲೋ ಕಾಫಿಗೆ ಹೋಗಿರ ಬೇಕು, ಅರ್ಧಘಂಟೆ ವೇಟ್ ಮಾಡ್ರಿ' ಅಂತ ಒರಟು ಉತ್ತರ. ನಿಮ್ಮ 'ಎಜುಕೇಟೆಡ್' ಎಂಬ ಹೆಮ್ಮೆಯ ಸ್ಟೇಟಸ್ ಇಲ್ಲೇ ಹಾರಿ ಹೋಗಿರುತ್ತದೆ!

೩) ನಂತರ ಹೇಗೋ ಒಂದು ಫಾರಮ್ಮನ್ನು "ಗಳಿಸಿ" ಭರ್ತಿ ಮಾಡಿ, ಫೀಸು ಕಟ್ಟಿದರೆ, "ಇದನ್ನ ಒಳಗೆ ಹೋಗಿ ಕೊಡ್ರಿ" ಎನ್ನುತ್ತಾನೆ ಆ ಕ್ಲರ್ಕ್. ನಂತರ ನೀವು ಎಲ್ಲೆಲ್ಲೊ ತಡಕಾಡಿಕೊಂಡು ಯಾವುದೊ ಅಷ್ಟುದ್ದ ಕ್ಯೂನಲ್ಲಿ ನಿಂತು ಕೊಳ್ಳುತ್ತಿರ, ಆ ಕ್ಯುನೇ ಸರಿಯಾಗಿದ್ದರೆ ನೀವು ಬಚಾವ್, ಇಲ್ಲ ಅಂದರೆ ಯಾವ ಕ್ಯೂ ಅಂತ ಹುಡುಕೋ ಅಷ್ಟೊತ್ತಿಗೆ ಆ ಕ್ಯೂ ಇನ್ನಷ್ಟು ಬೆಳೆದಿರುತ್ತದೆ. ಇದರ ಮದ್ಯೆ, ಜಾಗವಿಲ್ಲದೆ ಅಲ್ಲಲ್ಲಿ ನಿಂತುಕೊಂಡು ಫಾರಮ್ಮನ್ನು ಭರ್ತಿ ಮಾಡುವ ಜನರನ್ನು ನೋಡ ಬಹುದು. ನೀವೂ ಹಾಗೇ ಮಾಡಿದ್ದರೆ ಹೆಚ್ಚಲ್ಲ.

೪) ಕ್ಯುನ ಕೊನೆಯಲ್ಲಿ ನೀವು ತಲುಪುವುದು ಒಬ್ಬ ಅಧಿಕಾರಿಯನ್ನ, ಅವರು ನಿಮ್ಮ ಎಲ್ಲಾ ದಾಖಲೆಯನ್ನ ಪರಿಶೀಲಿಸುತ್ತ "ಎಲ್ಲಾ ಗೆಜೆಟೆಡ್ ಆಫಿಸರ್ ಸೈನ್ ಆಗಿದೆನ್ರಿ?" ಎನ್ನುತ್ತಾ, ಒಳಗಿನ ಇನ್ನೊಬ್ಬ ಆಫಿಸರ್ ಸೈನ್ ಹಾಕಿಸಿಕೊಂಡು ಬನ್ನಿ ಅಂತ ಹೇಳುತ್ತಾರೆ. ನೀವು ಮರು ಮಾತನಾಡದೆ, ಮತ್ತೊಂದು ಕ್ಯೂನಲ್ಲಿ ನಿಲ್ಲುತ್ತೀರ.

೫) ಈ ಕ್ಯೂನಲ್ಲಿ ಜಾಸ್ತಿ ಜನ ಇಲ್ಲದಿದ್ರೂ, ಆ ದೊಡ್ಡ ಅಧಿಕಾರಿ, ಯಾರ ಹತ್ತಿರವೋ ಹರಟೆ (ಸ್ಸಾರಿ..), ಮಾತಾಡುತ್ತಿದ್ದರೆ, ಅವರು ಕೃಪೆ ತೋರುವವರೆಗೆ ಕಾಯಬೇಕು. ಅವರ ಹಸ್ತಾಕ್ಷರ ಹಾಕಿಸಿಕೊಂಡು ಅಲ್ಲಿ ಮತ್ತೊಂದು ಕ್ಯೂನಲ್ಲಿ ನಿಂತು ಕೊಂಡು, ನಿಮ್ಮ ಹತ್ತಿರ ಇರುವ ದಾಖಲೆ ಗಳನ್ನು ಕೊಟ್ಟು, ಚೀಟಿ ತೆಗೆದುಕೊ೦ಡು ಮತ್ತೆ ಫೋಟೋ ತೆಗೆಸಿಕೊಳ್ಳಲು ಇನ್ನೊಂದು ಕ್ಯೂನಲ್ಲಿ ನಿಲ್ಲುತ್ತೀರ.

೬) ಫೋಟೋ ತೆಗೆಸಿಕೊಂಡು, ಇನ್ನೊಂದು ಕ್ಯೂನಲ್ಲಿ ನಿಂತು 'ನಿಮ್ಮ ಡ್ರೈವಿಂಗ್ ಟೆಸ್ಟ್ ಎಷ್ಟೊತ್ತಿಗೆ ಅಂತ' ಚೀಟಿ ತೊಗೊಳ್ಳೋ ಹೊತ್ತಿಗೆ ಹಣ್ಣಣ್ಣು ಆಗಿರುತ್ತೀರ!

೭) ಹೊರಗಡೆ ನಿಗದಿತ ಜಾಗದಲ್ಲಿ ಸುಮಾರು ಹೊತ್ತು ಕಾದನ೦ತರ ಡ್ರೈವಿಂಗ್ ಟೆಸ್ಟ್. ಇಲ್ಲಿ ನಿಮ್ಮ ಚಾಲನಾ ನೈಪುಣ್ಯತೆ ತೋರಿಸುವುದು ಬಿಟ್ಟರೆ ಹೆಚ್ಚೇನೂ ಕಾಗದ-ಪತ್ರದ ತೊಂದರೆ ಇಲ್ಲ. ಆದರೆ ಇಲ್ಲೂ ಅಧಿಕಾರಿಗಳ ಮಟ್ಟದಲ್ಲಿ 'ಲಂಚ' ಕೆಲವು ಪ್ರಕರಣಗಳಿವೆ. ಅದನ್ನು ನಂತರ ವಿಚಾರ ಮಾಡೋಣ.

ಈ ಟೆಸ್ಟನ್ನು ಪಾಸು ಮಾಡುತ್ತೀರೆಂದು ಇಟ್ಟು ಕೊಳ್ಳೋಣ.
೮) ನಂತರ ಇನ್ಸ್ಪೆಕ್ಟರ್ ಕೊಟ್ಟ ಆ ದಾಖಲೆಯನ್ನ ಮತ್ತೆ RTO ಆಫಿಸಿಗೆ ಹೋಗಿ ಕೊಟ್ಟು, ಅವರು ಯಾವಾಗ ಬರ ಬೇಕೆಂದು ಚೀಟಿ ಕೊಡುತ್ತಾರೋ ಅವಾಗ ಬಂದು ನಿಮ ಲೈಸೆನ್ಸನ್ನು ತೆಗೆದುಕೊಂಡು ಹೋಗಬೇಕು. ನಗರದ ಹೊರವಲಯದಲ್ಲಿರುವ ನಿಮ್ಮ ಆಫಿಸಿಗೆ ಅವತ್ತು ಖಂಡಿತ ತಲುಪಲಾಗುವುದಿಲ್ಲ. ಇಷ್ಟೊತ್ತಿಗೆ ನಿಮ್ಮ ಅತ್ಯಮೂಲ್ಯ ಒಂದು ದಿನ ಕಳೆದಿರುತ್ತದೆ.

೯) ಅವರು ಚೀಟಿಯಲ್ಲಿ ಬರೆದುಕೊಟ್ಟ ಸಮಯ ನೋಡಿದರೆ ಅದು ಎರಡು ದಿನ ಬಿಟ್ಟು ಸಾಯಂಕಾಲ ನಾಲ್ಕರಿಂದ ೬ ಘಂಟೆಯ ಒಳಗಿರುತ್ತದೆ. ಅವತ್ತು ಕೊನೇಪಕ್ಷ ಅರ್ಧದಿನ ರಜ ಹಾಕಬೇಕಾಗುತ್ತದೆ. ಕೆಲವರು ಪೂರ್ತಿ ದಿನ ಹಾಕಿದರೂ ಆಶ್ಚರ್ಯ ಇಲ್ಲ. ಕೊನೆಗೂ ಲೈಸೆನ್ಸ್ ನೋಡಿದಾಗ ಖುಷಿಯೇನೋ ಆಗುತ್ತದೆ.
ಲೈಸೆನ್ಸ್ ತೊಗೊಂಡ ಮೇಲೆ ಕುಳಿತು ಯೋಚನೆ ಮಾಡುತ್ತೀರ, 'ಅರೆ, ಇಷ್ಟೇನಾ? ಛೆ, ಇದಕ್ಕಾಗಿ ಎಷ್ಟು ಕಷ್ಟ ಪಟ್ಟೆ.
ಆದರೆ ನೀವು ಹಾಗೆಂದುಕೊಂಡ ಹತ್ತರಲ್ಲಿ ಮತ್ತೊಬ್ಬ ಆಗಿರುತ್ತೀರ. ಇಲ್ಲಿ ಲಂಚ ಕೊಟ್ಟರೂ ನೀವು ರಜಾ ಹಾಕುವುದು ತಪ್ಪುವುದಿಲ್ಲ. ಕ್ಯೂ ನಲ್ಲಿ ನಿಲ್ಲುವುದು ತಪ್ಪುವುದಿಲ್ಲ.


ಇದೆಲ್ಲಕ್ಕಿಂತ ಮುಂಚೆ, ನಿಮ್ಮ ದಾಖಲೆಗಳನ್ನ ಗೆಜೆಟೆಡ್ ಆಫಿಸರ್ ಹತ್ರ ಸಹಿ ಹಾಕಿಸಿಕೊಂದು ಬರಬೇಕು. ಅಲ್ಲಿ ಮತ್ತೆ ಲಂಚ!
ಹಾಗೇ, ನೀವು ಯಾವ RTO ಆಫೀಸಿನ ಆವರಣಕ್ಕೆ ಒಳಪಡುತ್ತೀರ ಅಂತ ತಿಳಿದುಕೊಂಡಿರಬೇಕು. ಇಲ್ಲದಿದ್ದರೆ ಅಷ್ಟು ದೂರ ಹೋಗಿ ವೇಸ್ಟ್!

ಈಗ ಉತ್ತರ ಹುಡುಕೋಣ.
ಮೊದಲನೇದಾಗಿ 'ಓಬಿ ರಾಯನ' ಕಾಲದ ಕಾನೂನಾದ ಗೆಜೆಟೆಡ್ ಆಫಿಸರ್ ಸಹಿ. ನಿಮ್ಮ ಹತ್ತಿರ ಮೂಲ ದಾಖಲೆ(original) ಇದೆ. ಅದರ ಪ್ರತಿಯನ್ನು ನೀವು ಯಾಕೆ ತೆಗೆದುಕೊಂಡು ಹೋಗಬೇಕು? ಪ್ರತಿ ಬೇಕಾಗಿರುವುದು RTO ಆಫಿಸವರಿಗೆ, ಅವರು ಅಲ್ಲೇ ನಿಮ್ಮ ಮೂಲ ದಾಖಲೆಯನ್ನು ತೆಗೆದು ಕೊಂಡು ಪ್ರತಿ ಮಾಡಿಕೊಳ್ಳಲಿ? ಅದಕ್ಯಾಕೆ ನೀವು ಗೆಜೆಟೆಡ್ ಅಫಿಸರನ್ನ ಹುಡುಕಿಕೊಂಡು ಹೋಗಬೇಕು? ಜೆರಾಕ್ಸ ಗೆ ಯಾರು ಹಣ ಕೊಡುತ್ತಾರೆ ಅಂದ್ರ? ನಿಮ್ಮ ಟೋಟಲ್ ಫೀಸ್ ನಲ್ಲೆ ಅದನ್ನು ಸೇರಿಸಿಕೊಳ್ಳಲಿ, ಯಾರು ಬೇಡ ಅನ್ನುತ್ತಾರೆ?

ಎರಡನೇದಾಗಿ, ನಿಮ್ಮ RTO ಆಫೀಸು ಯಾವುದು ಅಂತ?ಅದನ್ನು ನೀವು ಮನೆಯಲ್ಲೇ ಕುಳಿತು ಇಂಟರ್ನೆಟ್ ನಲ್ಲಿ RTO ವೆಬ್ಸೈಟ್ ನಲ್ಲಿ ಮಾಹಿತಿ ದೊರೆಯಬೇಕು. ನಿಮ್ಮ ವಿಳಾಸವನ್ನು ಕೊಟ್ಟರೆ ಅಥವಾ ನಿಮ್ಮ ಏರಿಯ ಪೋಸ್ಟಲ್ ಕೋಡ್ ಕೊಟ್ಟರೆ ಅದು ಯಾವ ಆಫೀಸು ಅಂತ ಹೇಳುವ ಹಾಗಿರಬೇಕು. ಇದಕ್ಕೂ ಇನ್ನೂ ಉತ್ತಮ ಅಭಿವೃದ್ದಿ ಎಂದರೆ, ಎಲ್ಲ RTO ಗಳನ್ನೂ ಪರಸ್ಪರ ಸಂಪರ್ಕ (ಲಿಂಕ್) ಇರಬೇಕು. ಇದು ನಿಮ್ಮ ಕೆಲಸವಲ್ಲ. ರಾಜ್ಯದಲ್ಲಿರುವ ಎಲ್ಲಾ RTO ಆಫೀಸ್ ಗಳನ್ನ 'ಲಿಂಕ್' ಮಾಡುವುದು, ಕ್ರಮೇಣ ದೇಶದಲ್ಲಿರುವ ಎಲ್ಲಾ RTO ಅಫಿಸ್ಗಳನ್ನ ಲಿಂಕ್ ಮಾಡುವುದು ಆಡಳಿತ ಯಂತ್ರದ ಕೆಲಸ.ಗಣಕೀಕರಣದಿಂದ ಇದು ಸಾಧ್ಯ. ಈ ಕ೦ಪ್ಯೂಟರೀಕರಣದ ಕಾಲದಲ್ಲಿ ಇವೆಲ್ಲ 'ಆಗುವುದಿಲ್ಲ' ಅನ್ನುವುದಕ್ಕೆ ಅರ್ಥವೇ ಇಲ್ಲ. ಹಾಗಾದರೆ ನೀವು ಯಾವ RTO ಆಫೀಸಿಗೆ ಬೇಕಾದರೂ ಹೋಗಬಹುದು. ಸರ್ಕಾರಕ್ಕೆ ಮೊದಲಿಗೆ ಸ್ವಲ್ಪ ಹಣ ಖರ್ಚಾಗ ಬಹುದು. ಅದನ್ನು ಫೀಸ್ ಸ್ವಲ್ಪ ಹೆಚ್ಚಿಗೆ ಮಾಡಿ ಸರಿಪಡಿಸಿಕೊಳ್ಳಬಹುದು. ಜನ, ಅನುಕುಲವಾಗುತ್ತೆ ಅಂತಾದರೆ ಹೆಚ್ಚಿಗೆ ಹಣ ನೀಡಲು ತಯಾರಿದ್ದಾರೆ.

ಈಗ ಆಫೀಸಿನ ಸಮಸ್ಯೆಯನ್ನ ನೋಡೋಣ. ಇಲ್ಲಿ 'ಲಂಚ' ವನ್ನು ಜನ ಯಾಕೆ ಕೊಡುತ್ತಾರೆಂದರೆ, ಸಮಯದ ಅಭಾವ, ಮಾಹಿತಿಯ ಅಭಾವ ಮತ್ತು ಆಫೀಸಿನಲ್ಲಿ ಅಧಿಕಾರಿಗಳ ಮುಂದೆ ಉದ್ದುದ್ದ ಕ್ಯೂ ನಿಂತು ಕೊಳ್ಳ ಬೇಕೆಂಬ ತೊಂದರೆ, ರಗಳೆ.
ಹಾಗೇ ಲಂಚವನ್ನು ಯಾಕೆ ತೊಗೊಳುತ್ತಾರೆಂದರೆ ತಾವು ಮಾಡಿದ ಕೆಲಸಕ್ಕೆ 'ಸ್ವಲ್ಪ' ಸೈಡ್ ಇನ್ಕಂ ಅಂತ ಕೆಲವರಂದು ಕೊಂಡರೆ, ಕೆಲವರು ತಾವು ಈ ಹುದ್ದೆಗಾಗಿ ಕೊಟ್ಟು ಬಂದ ಹಣವನ್ನು ಮರು ಸಂಪಾದಿಸಲೋಸುಗ, ಇನ್ನು ಕೆಲವರು ಇದು ತಮ್ಮ ಜನ್ಮಸಿದ್ಧ ಹಕ್ಕು ಅಂದು ಕೊಂಡಿರುತ್ತಾರೆ. ಇದೆಲ್ಲವೂ ತಪ್ಪೇ.

ಆದರೆ ಬೆಕ್ಕಿಗೆ ಘಂಟೆ ಕಟ್ಟುವುದು ಹೇಗೆ?

ಮಧ್ಯವರ್ತಿಯ ನಿವಾರಣೆ: RTO ಆಫೀಸು ಹೇಗಿರಬೇಕೆಂದರೆ, ಸಂಪೂರ್ಣವಾಗಿ ಕಂಪ್ಯೂಟರೀಕರಣ ಗೊಂಡಿರಬೇಕು. ಇದು ಸದ್ಯಕ್ಕೆ ಅಸಾಧ್ಯ ಅನಿಸಿದರೆ, ಕೊನೇಪಕ್ಷ ಹೊಸ ದಾಖಲೆಗಳನ್ನ ನಮೂದಿಸಲು ಕಂಪ್ಯೂಟರೀಕರಣ ಗೊಳಿಸಬೇಕು. ನೀವು ಮನೆಯಿದ ಹೊರಡುವಾಗಲೇ ಈ RTO ನ ವೆಬ್ ಸೈಟನ್ನು ಓಪನ್ ಮಾಡಿ (ಈಗ ಲರ್ನಿಂಗ್ ಲೈಸೆನ್ಸ್ ಗೆ ಇರುವ ಸೌಲಭ್ಯದ ತರ), ವಿವರಗಳನ್ನು ಅಲ್ಲೇ ಆನ್ ಲೈನ್ ಫಾರಂ ನಲ್ಲಿ ಭರ್ತಿ ಮಾಡಿ, ನಿಮ್ಮ ಹೆಸರು ಮತ್ತು ಪಾಸ್ ಕೋಡನ್ನು ಜನರೇಟ್ ಮಾಡಬೇಕು. ನಂತರ ಆ ಪಾಸ್ ಕೋಡನ್ನು ಬರೆದುಕೊಂಡು ಅಥವಾ ಪ್ರಿಂಟ್ ಔಟ್ ತೆಗೆದುಕೊಂಡು ಆಫೀಸಿಗೆ ಬಂದಾಗ ನಿಮ್ಮ ಕೈಲಿ ಎಲ್ಲಾ ಮೂಲದಾಖಲೆ ಗಳು (originals) ಇರಬೇಕು. ಏನೇನು ದಾಖಲಾತಿ ಬೇಕು ಅಂತ ವೆಬ್-ಸೈಟಿನಲ್ಲಿ ನೋಡಿರುತ್ತೀರ.

ಅಲ್ಲಿ ಸ್ವಾಗತಕಾರರ ಜಾಗದಲ್ಲಿ ಕುಳಿತಿರುವ ವ್ಯಕ್ತಿಗೆ ನೀವು ರಿಜಿಸ್ಟರ್ ಮಾಡಿ ತೆಗೆದು ಕೊಂಡ 'ಹೆಸರನ್ನು' ಕೊಡಬೇಕು ಮತ್ತು ನಾಲ್ಕು ಅಂಕೆಯ ಪಾಸ್ ಕೋಡನ್ನು ನೀವು ಗುಂಡಿಯೊತ್ತಿ 'ಎಂಟರ್' ಮಾಡಬೇಕು, ಅಂಥ ಸೌಲಭ್ಯವನ್ನು ಕಲ್ಪಿಸಿರಬೇಕು. ನೀವು ಏನು ಪಾಸು ಕೋಡ್ ಒತ್ತುತ್ತೀರ ಅಂತ ನಿಮಗೆ ಮಾತ್ರ ಗೊತ್ತಾಗ ಬೇಕು. ಹಾಗಾಗಿ ನಿಮ್ಮ ಖಾಸಗಿ ಮಾಹಿತಿಗಳನ್ನ ಯಾರೂ ಕದಿಯಲು/ಬದಲಾವಣೆ ಮಾಡಲು ಅಗುವುದಿಲ್ಲ. ಯಾಕೆಂದರೆ ಇದು PDF ಫಾರ್ಮ್ಯಾಟ್ ನಲ್ಲಿರುತ್ತದೆ. ಆ ವ್ಯಕ್ತಿ ನಿಮ್ಮ ದಾಖಲೆಗಳನ್ನು ತೆಗೆದುಕೊಂಡು, ನೀವು ಮೊದಲೇ ಆನ್ ಲೈನಿನಲ್ಲಿ ಭರ್ತಿ ಮಾಡಿದ ಫಾರಂ ನ ಇದಿರು ಹಿಡಿದು ಪರಿಶೀಲಿಸಬೇಕು. ಎಲ್ಲಾ ಸರಿ ಇದ್ದರೆ ಅಲ್ಲೇ ಹಿಂದೆ ಇರುವ ಫೋಟೋ ಕಾಪಿ ಯಂತ್ರದಿಂದ ಎಲ್ಲವೂ ಪೇಪರ್ಲೆಸ್ ಇರಲಿ ಅಂತಾದರೆ ಸ್ಕ್ಯಾನ್ ಮಾಡಿ, ಮೂಲ ದಾಖಲೆಯನ್ನು (ವಿಳಾಸದ ದಾಖಲೆ, ನಿಮ್ಮ ಗುರುತಿನ ಚೀಟಿ ಮುಂತಾದುವು), ಆಗಲೇ ವಾಪಾಸ್ ಕೊಡಬೇಕು. ನಂತರ ಫೀಸನ್ನು ಕ್ಯಾಶ್ ಇಲ್ಲಾ ಕಾರ್ಡ್ ಮೂಲಕ ಪಾವತಿಸ ಬೇಕು. ಒಬ್ಬರು ಇಲ್ಲಿ ಸಾಕಾಗುವುದಿಲ್ಲ, ಬೇಕಿದ್ದರೆ ಜನಸಂದಣಿ ಇರುವ ಜಾಗದಲ್ಲಿ ಹತ್ತು ಜನರನ್ನು ನೇಮಿಸಿಕೊಳ್ಳಲಿ. ಈ ಕೆಲಸವನ್ನು ಖಾಸಗಿಯವರಿಗೆ ಒದಗಿಸಿಕೊಡುವುದು ಒಳಿತು. ಈ ಹತ್ತೂ ಜನರ ವ್ಯವಹಾರವನ್ನು ಕ್ಯಾಮರ ಕಣ್ಣಿಂದ ರೆಕಾರ್ಡ್ ಮಾಡುತ್ತಿರಬೇಕು ಹಾಗೂ ಇದಕ್ಕಾಗಿ ಒಬ್ಬ ಸರ್ಕಾರೀ ಅಧಿಕಾರಿ ಮೇಲ್ನಿಗ ನೋಡುತ್ತಿರಬೇಕು.
ಈ ಕೌ೦ಟರಿನಲ್ಲಿ ಲೈಸೆನ್ಸ್ ಬಗ್ಗೆ ಒ೦ದೇ ಅಲ್ಲದೆ, ಬೇರೆ RTOಗೆ ಸ೦ಭ೦ಧ ಪಟ್ಟ ಎಲ್ಲಾ ಸೌಲಭ್ಯಗಳೂ (ರಿಜಿಶ್ಟ್ರೇಶನ್, ಟ್ರಾನ್ಸ್ಫ಼ರ್, ದ೦ಡ ಕಟ್ಟುವುದು ಮು೦ತಾದುವುಗಳು) ಇರಬೇಕು. ಈ ತರಹದ ’ಸಿ೦ಗಲ್ ವಿ೦ಡೋ’ ಸೌಲಭ್ಯ ಹಲವು ಭಾರತೀಯ ಬ್ಯಾ೦ಕ್ ಗಳಲ್ಲಿವೆ. RTOನ ವೆಬ್ ಸೈಟ್ ಇದಕ್ಕೆಲ್ಲಾ ಸುಸಜ್ಜಿತವಾಗಿರುವುದು ಮುಖ್ಯ.
ಈ ಹತ್ತೂ ಜನರಿಗೆ ಪ್ರತ್ಯೇಕ ಮೇಜು, ಕಂಪ್ಯೂಟರ್, ಫೋಟೋ ತೆಗೆಯಲು ಕಂಪ್ಯೂಟರ್ಗೆ ಲಗತ್ತಿಸಿದ ಕ್ಯಾಮೆರ ಮತ್ತು ಫೋಟೋ ಕಾಪಿ ಮೆಶಿನ್ನನ್ನು ಒದಗಿಸಿರ ಬೇಕು.ಹಣ ಪಾವತಿಯ ನಂತರ ಫೋಟೋವನ್ನು ಅಲ್ಲಿಯೇ ತೆಗೆಯಬೇಕು. ಆದರೆ ಈ ಎಲ್ಲಾ ಹತ್ತು (ಸಾ೦ಕೇತಿಕ ಸ೦ಖ್ಯೆ) ಡೆಸ್ಕಿಗೂ ಸೇರಿಸಿ ಒ೦ದೇ ಕ್ಯೂ ಇರಬೇಕು. ಈ ಹತ್ತರಲ್ಲಿ ಯಾರ ಡೆಸ್ಕ್ ಖಾಲಿಯಾಗುತ್ತದೋ ಅಲ್ಲಿಗೆ ಈ ಕ್ಯೂ ನಿ೦ದ ಒಬ್ಬೊಬ್ಬರು ಹೋಗಬೇಕು. ಈ ವ್ಯವಸ್ಥೆ ರೈಲು ಸ್ಥಳ ಕಾದಿರಿಸುವ ಕೇ೦ದ್ರದಲ್ಲಿದೆ.ಈ ಎಲ್ಲಾ ವಿದ್ಯಮಾನಗಳನ್ನು ಗಮನಿಸಲು ’ಕ್ಯಾಮೆರಾ ಕಣ್ಣು’ ಇರಬೇಕು. ಹೀಗಾಗಿ ಇಲ್ಲಿ ಸ್ವಜನ ಪಕ್ಷಪಾತ ನಡೆಯಲು ಸಾಧ್ಯವಿಲ್ಲ ಮತ್ತು ಗಲಾಟೆಯಾಗುವುದಕ್ಕೆ ಅವಕಾಶವಿಲ್ಲ. ಸಿಬ್ಬ೦ದಿ ಕಾಫಿ ಅಥವಾ ಊಟಕ್ಕೆ ಹೋಗುವ ಸಮಯವನ್ನು ಹತ್ತೂ ಡೆಸ್ಕ್ ಗಳಲ್ಲಿ ಸೂಚಿಸಿರಬೇಕು. ಹಾಗಾಗಿ ಇಲ್ಲಿಯೂ ಕಾರ್ಯ ಕ್ಷಮತೆ ಹೆಚ್ಚುತ್ತದೆ.

ನಿಮ್ಮ ಎಲ್ಲಾಕೆಲಸವೂ ಅರ್ಧ ಘ೦ಟೆಯಲ್ಲಿ ಮುಗಿದು ಹೋಯಿತು!

ಇಲ್ಲಿ ನೀವೇ ಸ್ವತಹ ಹೋಗ ಬೇಕಾಗುವುದರಿಂದ ಯಾವ ಮಧ್ಯವರ್ತಿಯ ತೊಂದರೆಯೂ ಇರುವುದಿಲ್ಲ. ಒಮ್ಮೆ ಇಲ್ಲಿ ಸ್ವೀಕೃತಿಯಾಯಿತೆಂದರೆ ಮತ್ತೆ ಇನ್ನಾವ ಕ್ಯುನಲ್ಲು ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಇದರೊಂದಿಗೆ ಮೇಲೆ ಸೂಚಿಸಿದ ೧ ರಿಂದ ೬ರ ವರೆಗಿನ ಸಮಸ್ಯೆ ಮುಗಿದೇ ಹೋಯಿತು. ಇಲ್ಲಿ ಒಂದು ಕಾನೂನು ಮಾಡುವುದು ಮುಖ್ಯ. ಅದೇನೆಂದರೆ, "ಯಾವುದೇ ಕಾರಣಕ್ಕೂ ಅಪ್ಲಿಕೇಶನ್ ನನ್ನು ಬೇರೆಯವರ ಹತ್ತಿರ ಕಳಿಸಿಕೊಡುವಂತಿಲ್ಲ" ಎಂದು. ವ್ಯಕ್ತಿ ಎಷ್ಟೇ ದೊಡ್ದವನಾಗಿರಲಿ, ಸಣ್ಣವನಾಗಿರಲಿ, ಕುರುಡ ಕುಂಟನಾಗಿರಲಿ, ಬೇಕಾದರೆ ಅವರಿಗೆ ವಿಶೇಷ ಸೌಲಭ್ಯ ಮಾಡೋಣ, ಆದರೆ ವ್ಯವಸ್ಥೆಯ ಮುಂದೆ ಎಲ್ಲರೂ ಸಮಾನರು.
ಸ್ವೀಕೄತಿ ಬೆಳಿಗ್ಗೆಯಿ೦ದ ಮಧ್ಯಾನ್ನದ ವರೆಗೂ ನಡೆಯಲಿ. ನ೦ತರ ಸಾಯ೦ಕಾಲ ವಿತರಿಸುವ ಕೆಲಸ.

ಇದು ಸರಿ, ಕಚೇರಿಯ ಒಳಗೆ ಏನಾಗುತ್ತಿರುತ್ತದೆ? ನಿಮ್ಮ ದಾಖಲೆಗಳು ಒಮ್ಮೆ ಗಣಕ ಯ೦ತ್ರಕ್ಕೆ ಹೊಕ್ಕ ಕೂಡಲೆ ಅದು ನ೦ತರದ ಮೇಲಾಧಿಕಾರಿಗೆ (ಆನ್ ಲೈನ್) ದೊರೆಯುತ್ತದೆ. ಅದನ್ನು ಅವರು ಪರಿಶೀಲಿಸಿ, ಇನ್ನೇನಾದರೂ ಪರಿಶೀಲನೆ ಬೇಕಾದರೆ ಮತ್ತು ಅನುಮಾನ ಬ೦ದರೆ ಸ೦ಬ೦ಧ ಪಟ್ಟ ಇಲಾಖೆಯನ್ನು ಸ೦ಪರ್ಕಿಸಬಹುದು. ಎಲ್ಲಾ ಸರಿಯಾಗಿದ್ದರೆ ತಮ್ಮ ಒಪ್ಪಿಗೆ ನೀಡಿ ದಾಖಲಾತಿ ವಿಭಾಗಕ್ಕೆ ವರ್ಗಾಯಿಸಬಹುದು. ಇದೆಲ್ಲಾ ಕುಳಿತಲ್ಲಿ೦ದಲೆ ಮಾಡಬಹುದು. ಎಲ್ಲಾಕಡೆಯೂ ಅವರವರ ಪಾಸ್ ಕೋಡ್ ಇರುವುದರಿ೦ದ ಮೂರನೆಯವರ್ಯಾರೂ ಕೈಹಾಕಲು ಆಗುವುದಿಲ್ಲ. ಹೆಚ್ಚಿನದೆಲ್ಲವೂ ’ಪೇಪರ್ ಲೆಸ್’ ಇರುವುದರಿ೦ದ ಕಚೇರಿಯನ್ನು ಸ್ವಚ್ಚವಾಗಿಟ್ಟುಕೊಳ್ಳಬಹುದು. ಬೇಕಾದಷ್ಟು ಜಾಗ ಉಳಿತಾಯವಾಗುತ್ತದೆ.

ಇನ್ನು ೭ನೆಯದು ಡ್ರೈವಿಂಗ್ ಟೆಸ್ಟ್. ಇಲ್ಲಿ ಕೂಡ ಇನ್ಸ್ಪೆಕ್ಟರ್ ಲಂಚ ಕೇಳುವ ಸಂದರ್ಭ ಇರುತ್ತದೆ. ಅದನ್ನು ನಿಮ್ಮ ಜಾಣ್ಮೆಯಿಂದ ತಡೆಯಬೇಕು. ಹಾಗೇ ಕೊನೆಯಲ್ಲಿ ನೀವು ಕೊಡುವ 'ಫೀಡ್ ಬ್ಯಾಕ್ ಫಾರಂ' ನಲ್ಲಿ ಅವರ 'ಗುಣಗಳನ್ನು' ಪಟ್ಟಿ ಮಾಡ ಬಹುದು. ಮತ್ತು ಈ ಫೀಡ್ ಬ್ಯಾಕ್ ಫಾರಮ್ಮನ್ನು ಮೇಲಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಚಾಲನಾ ಪರೀಕ್ಷೆಗೆ ಒಂದು 'ಟೆಸ್ಟ್-ಪೇಪರ್' ಇರಬೇಕು. ಪರೀಕ್ಷೆಯ ಫಲಿತಾಂಶವನ್ನು ಅಲ್ಲೇ ಹೇಳಬೇಕು. ಅಕಸ್ಮಾತ್ ಫೇಲಾಗಿದ್ದರೆ ಯಾಕೆ ಅಂತ ಅದೇ ಪಟ್ಟಿಯಲ್ಲಿ ನಮೂದಿಸಬೇಕು. ಪಾಸಾಗಿದ್ದಾರೆ ಆದಾಖಲೆಯನ್ನು ಇನ್ಸ ಪೆಕ್ಟರೇ ಇಟ್ಟುಕೊಂಡು ನಂತರ ವೆಬ್ಸೈಟಿನಲ್ಲಿ ನವಿಕರಿಸಬೇಕು. ಇದನ್ನು ನೀವು ವೆಬ್-ಸೈಟ್ ತೆಗೆದು ನೋಡಿದಾಗ ಅದರಲ್ಲಿ ಯಾವಾಗ ನಿಮ್ಮ ಲೈಸೆನ್ಸ್ ಸಿಗುತ್ತದೆ ಅಂತ ಗೊತ್ತಾಗಬೇಕು. ಅಕಸ್ಮಾತ್ ನೀವು ಸ್ವತಹ ಹೋಗಲಿಕ್ಕೆ ಆಗದಿದ್ದರೆ ಅದನ್ನು ಪೋಸ್ಟ್ ಅಥವಾ ಕೊರಿಯರ್ ಮೂಲಕ ಮನೆಗೆ ತಲುಪಿಸುವಂತಿರಬೇಕು. ಅಥವಾ ಶನಿವಾರ/ಭಾನುವಾರ ಕಛೇರಿಯಲ್ಲಿ ನಿಗದಿತ ಸ್ಥಳದಲ್ಲಿ (ಯಾರಾದರು ಒಬ್ಬಿಬರಿದ್ದು) ಸ್ವೀಕೃತಿ ಮತ್ತು ವಿತರಣೆಯ ವ್ಯವಸ್ಥೆ ಇರಬೇಕು. ಶನಿವಾರ/ಭಾನುವಾರದಂದು ಡ್ರೈವಿಂಗ್ ಟೆಸ್ಟ್ ಗಳನ್ನು ತೆಗೆದುಕೊಳ್ಳುವ ಅವಕಾಶ ಇರಬೇಕು. ಈ ವ್ಯವಸ್ಥೆಗೆ ಹೆಚ್ಚು ಹಣ ಪಾವತಿ ಮಾಡುವ೦ತಿರಬೇಕು. ಈ ಹೆಚ್ಚಿಗೆ ಹಣವನ್ನು ಅಂದು ಕೆಲಸಕ್ಕೆ ಹಾಜರಾಗುವ ಸಿಬ್ಬಂದಿಗೆ ಉತ್ತೇಜನ ಕಾರಿಯಾಗಿ ಕೊಡಬೇಕು. ಇದರಿಂದ ಜನರಿಗೆ ಅನುಕೂಲ ಆಗುತ್ತೆ ಮತ್ತು ಪ್ರಾಮಾಣಿಕವಾಗಿ ಹೆಚ್ಚು ದುಡಿಯಲು ಸಿಬ್ಬಂದಿಯವರಿಗೂ ಅನುಕೂಲ ಆಗುತ್ತದೆ
ಡ್ರೈವಿ೦ಗ್ ಲೈಸೆನ್ಸನ್ನು ಒ೦ದು ಪಾಸ್ ಬುಕ್ ತರಹದ ಪುಸ್ತಕದಲ್ಲಿ ಕೊಡುವ ಬದಲು, ಒ೦ದು ಸುಲಭವಾಗಿ ಕಿಸೆಯಲ್ಲಿ ಇಟ್ಟುಕೊ೦ಡು ಹೋಗುವ೦ಥಾ ಕಾರ್ಡಿನಲ್ಲಿ ಕೊಡಬಾರದೇಕೆ? ಹೇಗೂ ಎಲ್ಲ ದಾಖಲೆಗಲೂ ಎಲ್ಲಾಸಮಯದಲ್ಲೂ ಕ೦ಪ್ಯೂಟರ್ನಲ್ಲಿ ದೊರೆಯುತ್ತದೆ. ಈ ಬಗ್ಗೆ ಅಧಿಕಾರಿಗಳು ಯೋಚಿಸಿದರೆ ಒಳ್ಳೆಯದು.

ಅದೆಲ್ಲ ಸರಿ,
ಇಷ್ಟೆಲ್ಲಾ 'ಒಳ್ಳೆಯ' ಪರಿಸರ ನಿರ್ಮಾಣ ಮಾಡಿದರೆ ಸಿಬ್ಬಂದಿಗೆ ಏನು ಸಿಗುತ್ತದೆ? "ಏನು ಸಿಗಬೇಕು, ಅವರಿಗೆ ಸರಕಾರ ಸ೦ಬಳ ಕೊಡುತ್ತದೆ, ಸರಕಾರೀ ನೌಕರರು ಸಾರ್ವಜನಿಕ ಸೇವಕರು" ಎ೦ದು ನೀವು ವಾದಿಸಬಹುದು. ಆದರೆ ಎಲ್ಲಾ ಕೆಲಸಗಾರರೂ ಒ೦ದೇ ಸಮಾನರಲ್ಲ. ಇಲ್ಲಿ ನಾವು ಬೆಲೆ ಕೊಡಬೇಕಾಗಿದ್ದು ಬರೀ ಕೆಲಸಕ್ಕಲ್ಲ, ಅವರ ಉತ್ತಮ ನಡವಳಿಕೆಗೆ, ಪ್ರಾಮಾಣಿಕತೆಗೆ.

ನೀವು ಸಾರ್ವಜನಿಕ ಜೀವನದಲ್ಲಿ ಎಲ್ಲೆಲ್ಲೂ ನೋಡಬಹುದು. ದಿನವೂ ಹೋಟೆಲಿನಲ್ಲಿ ನಿಮಗೆ ಕಾಫಿ ತ೦ದುಕೊಡುವ ಮಾಣಿ, ಸೌಜನ್ಯವನ್ನು ಪ್ರದರ್ಶಿಸಿದರೆ, ನೀವು ಖುಷಿಯಿ೦ದ ’ಟಿಪ್ಸ್’ ಎ೦ಬ ಹೆಸರಿನ ನಿಮ್ಮ ಖುಶಿಯನ್ನು ಕೊಡುತ್ತೀರ. ಪ್ರಾಮಾಣಿಕನಾದ ಅಟೊ ಡ್ರೈವರ್ ಗೂ ಅಷ್ಟೆ, ದೇವಸ್ಥಾನದಲ್ಲಿ ಅರ್ಚಕರಿಗೂ ಅಷ್ಟೆ, ಅವರು ಮಾಡಿದ ಕೆಲಸ ಮೆಚ್ಚುಗೆಯಾದಲ್ಲಿ ನಿಮ್ಮ ’ಧನ್ಯವಾದ’ ವನ್ನು ಹಣದ ಮೂಲಕ ತಿಳಿಸುತ್ತೀರ. ಇದೇನೋ ಒ೦ದು ಅಥವಾ ಎರಡು ಹೆಚ್ಚೆ೦ದರೆ ೫-೧೦ ರೂಪಾಯಿ ಆಗಿರುತ್ತೆ. ಯಾಕೆ೦ದರೆ, ಅದರ ಅವಧಿ, ಮೌಲ್ಯ ಅಷ್ಟೇ ಇರಬಹುದು.

ಸ್ವಲ್ಪ ಇನ್ನೂ ಮೇಲ್ಮಟ್ಟದಲ್ಲಿ ಯೋಚಿಸಿ. ನೀವು ಸ೦ಸಾರದ ಜತೆ ನಾಲ್ಕೈದು ದಿನ ಪ್ರವಾಸ ಹೋಗಿ ಬರುತ್ತೀರ. ಬಾಡಿಗೆ ಕಾರಿನ ಚಾಲಕ ಮಧ್ಯೆ ಏನೂ ಕಿರಿಕಿರಿ ಮಾಡದೆ ನಿಮ್ಮನ್ನು ಸುರಕ್ಷಿತವಾಗಿ ಮನೆಗೆ ತ೦ದು ಬಿಟ್ಟಾಗ ನೀವು ನೆಮ್ಮದಿಯ ನಿಟ್ಟುಸಿರು ಬಿಡುತ್ತ ಸ೦ತೋಷ ಗೊಳ್ಳುತ್ತೀರ. ಇದೇ ಸ೦ತೋಷದಲ್ಲೇ ಕಾರು ಚಾಲಕನಿಗೆ ಹಾಗೇ ಟಾ-ಟಾ ಅ೦ದುಬಿಡುತ್ತೀರ? ಅಥವಾ ಸುಮ್ಮನೆ ೧-೨ ರೂಪಾಯಿ ಕೊಡುತ್ತೀರ? ಆತನನ್ನು ಹಾಗೇ ಕಳಿಸಿಕೊಡಲು ನಿಮ್ಮ ಮನಸ್ಸು ಒಪ್ಪದು. ಆತನಿಗೆ ಐವತ್ತೊ, ನೂರೋ, ನಿಮ್ಮ ಸಾಮರ್ಥ್ಯಕ್ಕೆ ತಕ್ಕಷ್ಟು ಕೊಡುತ್ತೀರ. ಇದನ್ನ "ಲ೦ಚ" ಅ೦ತ ಕರೆಯಲಾಗುತ್ತದೆಯೆ? ಆ ಚಾಲಕನಿಗೆ ಸ೦ಬಳವನ್ನು ಅವರ ಸ೦ಸ್ಥೆ ಕೊಡುತ್ತದೆ, ಆದರೂ ನೀವೇಕೆ ಕೊಟ್ಟಿರಿ?
ಅಕಸ್ಮಾತ್ ಅವನು ಅಷ್ತೇ ಕೊಡಬೇಕು, ಇಷ್ಟೇ ಕೊಡಬೇಕು ಅ೦ತ ನಿಮ್ಮನ್ನ ಪೀಡಿಸಿ ವಸೂಲಿ ಮಾಡಿದರೆ, ಆಗ ಅದು "ಲ೦ಚ"ವಾಗುತ್ತದೆ.

ಹೀಗೇ ಪ್ರಾಮಾಣಿಕ, ಸೌಜನ್ಯಯುತ ನೌಕರನಿಗೆ ಯಾಕೆ ಕೊಡಬಾರದು?RTO ದಲ್ಲೂ ಹಲವರು ಒಳ್ಳೆಯವರಿದ್ದಾರೆ.
ಇದನ್ನೇ ಖಾಸಗಿ ಸ೦ಸ್ಥೆ ಗಳಲ್ಲಿ "ಪ್ರಾಜೆಕ್ಟ್ ಇನ್ಸೆ೦ಟಿವ್" ಅ೦ತ ಕೊಡುತ್ತಾರೆ.
ಅದೇ ಲಂಚದ 'ಕಾನೂನೀಕರಣ'! ಆದರೆ ಇದನ್ನು "ಲಂಚ" ಎಂದು ಕರೆಯ ಬೇಕಾಗಿಲ್ಲ.

ಹಾಗ ನೋಡಿದರೆ, ಒಂದು ಲೈಸೆನ್ಸ್ ಪಡೆಯ ಬೇಕಾದುದು ಸ್ವತಹ ಒಬ್ಬ ನಾಗರಿಕನ ಒಂದು ಕರ್ತವ್ಯ. ಇದು ನಾಗರಿಕನಿಗೆ ಒಂದು ಪ್ರಾಜೆಕ್ಟ್ (ಯೋಜನೆ) ಇದ್ದ೦ತೆ. ಈ 'ಲೈಸೆನ್ಸ್' ಪ್ರಾಜೆಕ್ಟ್ ನ ಮಾಲಿಕ (ಓನರ್) ಸ್ವತಹ ನಾಗರಿಕನೆ. ಅದನ್ನು ನಡೆಸಿಕೊಡುವವರು RTO ನವರು. ಅದಕ್ಕೆ ತಗಲುವ ವೆಚ್ಚವನ್ನು ಪ್ರತ್ಯಕ್ಷವಾಗಿ ನಾಗರಿಕ ಹಾಗೂ ಪರೋಕ್ಷವಾಗಿ ಸರಕಾರ ಕೊಡುತ್ತದೆ.
ಆದರೆ ಪ್ರಾಜೆಕ್ಟ್ ನಲ್ಲಿ ಹುರುಪಿನಿಂದ ಕೆಲಸ ಮಾಡಿದವರಿಗೆ ಏನು? ಎಂಬ ಪ್ರಶ್ನೆ ಬರುತ್ತದೆ.
ಕೆಲಸದ ಬಗ್ಗೆ ನಿಮ್ಮ ಮೆಚ್ಚುಗೆ ತಿಳಿಸಬೇಕು ಅ೦ತ ಮನಸ್ಸಾದರೂ ಅದಕ್ಕೆ ’ಸರಿಯಾದ’ ಅವಕಾಶ/ಮಾರ್ಗ ಈಗ ಇಲ್ಲ. ಸುಮ್ಮನೆ ’ದೂರು-ಪೆಟ್ಟಿಗೆ’ ಅ೦ತ ಎಲ್ಲೋ ಮೂಲೆಯಲ್ಲಿ ಧೂಳು ತಿನ್ನುತ್ತಿರುತ್ತದೆ, ಅಷ್ಟೆ. ಹಾಗದರೆ ಇದಕ್ಕೆ ಏನು ಉತ್ತರ? ಅದೇ, ’Feed Back form'.

Feed back form ಹೇಗಿರಬೆಕು?
೧) ಗ್ರಾಹಕನಿಗೆ ತೄಪ್ತಿಯಾದಲ್ಲಿ ಅಥವಾ ಬೇಸರವಾದಲ್ಲಿ ಅದನ್ನು ವ್ಯಕ್ತ ಪಡಿಸಲು ಮುಕ್ತ ಅವಕಾಶ ಇರಬೇಕು. ಅ೦ದರೆ ಟಿಪ್ಪಣಿಗೆ ಜಾಗ ಇರಬೇಕು.
೨) ತನ್ನ ಹೆಸರನ್ನು ತಿಳಿಸಲು ಅಥವಾ ಗೌಪ್ಯವಾಗಿರಿಸಲು ಆಯ್ಕೆ ಇರಬೇಕು.
೩) ಸೇವೆಯಿ೦ದ ನಾಗರಿಕನಿಗೆ ಖುಷಿಯಾಗಿದ್ದರೆ, ಇಡೀ ಸ೦ಸ್ಥೆಗೆ ಅಥವಾ ಒಬ್ಬ ಕೆಲಸಗಾರನಿಗೆ ’ಇನ್ಸೆನ್ ಟಿವ್’ ಆಗಿ ಪ್ರತ್ಯೇಕ ಹಣ ಕೊಡ ಬಹುದು.
೪) ಅದಕ್ಕೆ 'ಫೀಡ್ ಬ್ಯಾಕ್ ಫಾರಂ' ನಲ್ಲಿ ನಿಮ್ಮ ಹಣವನ್ನು ಡಿಕ್ಲೇರ್ ಮಾಡಬೇಕು.
೫) ಯಾವುದೇ ಹಣವನ್ನು ಆಫೀಸಿನಲ್ಲೇ (ಭರ್ತಿ ಮಾಡಿದ ಫ಼ಾರ೦ ಜತೆ) ಕಟ್ಟಿ ರಸೀತಿ ಪಡೆಯಬೇಕು.
೬) ಈ ಫ಼ಾರ೦ನಲ್ಲಿ ಕೆಲಸದ ಬಗ್ಗೆ ಮೆಚ್ಚುಗೆಯ ಮಾನದ೦ಡ (ರೇಟಿ೦ಗ್ ಪಾಯಿ೦ಟ್ಸ್) ಇರಬೇಕು ಮತ್ತು ಇದನ್ನು ಸಿಬ್ಬ೦ದಿಯ ವೇತನ ಹೆಚ್ಚಿಸಲು, ಬಡ್ತಿ ಕೊಡಲು ಮಾನದ೦ಡವಾಗಿ ಉಪಯೋಗಿಸಬೇಕು.
೭) ಈ ಹಣದಲ್ಲಿ ಸರಕಾರದ ಬೊಕ್ಕಸಕ್ಕೆ ನಿಗದಿಯಾದ ಟ್ಯಾಕ್ಸ್ ಮೂಲಕ (೮.೫%) ಸೇರಬೇಕು.
೮) ಒ೦ದುವೇಳೆ ಗ್ರಾಹಕನಿಗೆ ಹಣಕಟ್ಟಲು ಇಷ್ಟವಿಲ್ಲ ಅ೦ತಾದರೆ ಅದಕ್ಕೆ ಯಾವುದೇ ಒತ್ತಡ ಇರಬಾರದು. ಹಣ ಕೊಡುವುದು ಬಿಡುವುದು ಅವರಿಷ್ಟ.
೯) ಈ ಫ಼ಾರ೦ ನ್ನು ಮನೆಯಿ೦ದಲೇ ವೆಬ್ ಸೈಟಿನ ಮುಖಾ೦ತರ ಭರ್ತಿ ಮಾಡುವ ಆಯ್ಕೆ ಗ್ರಾಹಕನಿಗೆ ಇರಬೇಕು, ಹಾಗೂ ಒ೦ದು ಫ಼ಾರ೦ನ್ನು ಪ್ರತೀ ’ಸೇವೆ’ ತೆಗೆದು ಕೊ೦ಡ ಗ್ರಾಹಕನಿಗೆ ಮಾತ್ರ ಕೊಡಬೇಕು. 'Feed Back Form' ಅ೦ದರೆ ಚುನಾವಣಾ ಕಾಲದ ’ಹ್ಯಾ೦ಡ್ ಬಿಲ್’ ಅಲ್ಲ ಎ೦ದು ಕಚೇರಿಯಲ್ಲಿ ಮನವರಿಕೆಯಾಗಬೇಕು.
೧೦) ಪ್ರತಿಯೊಬ್ಬ ಗ್ರಾಹಕನ ಅಭಿಪ್ರಾಯವನ್ನು ಶೇಖರಿಸಿ, ನೌಕರನ ನಡವಳಿಕೆಯನ್ನು ತಿದ್ದಲು ಕಚೇರಿಯಲ್ಲಿಯೇ ಅಧಿಕಾರಿಗಳನ್ನೋಳಗೊ೦ಡ ಒ೦ದು ಸಮಿತಿ ಇರಬೇಕು.

ಗ್ರಾಹಕ ಮೆಚ್ಚುಗೆಯಿ೦ದ ನೀಡಿದ ಹಣವನ್ನು ಶ್ರಮದ ಅನುಸಾರ, ಆಯಾ 'ಕೇಸ್' ನಲ್ಲಿ ಭಾಗಿಯಾದವರಿಗೆ ಅನುಪಾತದಲ್ಲಿ ಪ್ರತ್ಯೇಕವಾಗಿ ತಿಂಗಳಿಗೊಮ್ಮೆ ಹಂಚಿಕೆಯಾಗಬೇಕು.ಇದು ಮೇಲಾಧಿಕಾರಿಗಳ ಜವಾಬ್ದಾರಿ.ಈಗ ಸ೦ಸ್ಥೆಗೂ ಹಣ ಸ೦ದಾಯವಾಯಿತು, ಸರ್ಕಾರದ ಬೊಕ್ಕಸಕ್ಕೂ ಸ್ವಲ್ಪ ಪ್ರಮಾಣ ಸೇರಿತು. ಹಾಗಾಗಿ ಇಲ್ಲಿ ಎಲ್ಲರೂ ವಿನ್ನರ್ಸ್, ಎಲ್ಲರಿಗೂ ಲಾಭವಾಯಿತು! ಕೆಲಸವೂ ಬೇಗನೆ ಆಯಿತು. ಗ್ರಾಹಕನೂ ಸ೦ತೊಷ ಗೊ೦ಡಿದ್ದಾನೆ. ತ್ವರಿತವಾಗಿ , ಸೋಮಾರಿತನ ಬಿಟ್ಟು ಕೆಲಸ ಮಾಡಿದ್ದರಿಂದ ಬಿಳಿಹಣವೇ ಎಲ್ಲರಿಗೂ ಸಿಕ್ಕಿತು. ಎಲ್ಲರು ಖುಷ್! ಯಾಕಾಗಬಾರದು?

ಈ ರೀತಿಯ ವ್ಯವಸ್ಥೆ ಇರುವುದರಿ೦ದ ಸರ್ಕಾರದ ನೌಕರರಲ್ಲಿ ಕಾರ್ಯ ಕ್ಷಮತೆ ತಾನಾಗಿಯೇ ಹೆಚ್ಚಾಗುತ್ತದೆ.

ಇದೆ ರೀತಿ ಎಲ್ಲಾ ಸರ್ಕಾರಿ ಅಫೀಸಲ್ಲೂ, ಎಲ್ಲಾ ಕೆಲಸಕ್ಕೂ ಕಾರ್ಯಗತ ಮಾಡ ಬಹುದು. ಈ ರೀತಿಯ ವ್ಯವಸ್ಥೆ ಬೇರೆ ಬೇರೆ ಕಚೇರಿಗೆ ಬೇರೆ ಬೇರೆ ತರಹವಿರುತ್ತದೆ. ಅದನ್ನು ಪ್ರತ್ಯೇಕವಾಗಿ ವಿನ್ಯಾಸ ಗೊಳಿಸ ಬಹುದು. ಪ್ರತಿಯೊ೦ದು ಹೊಸಾ ವಿಚಾರ ಚರ್ಚೆಗೆ ಬ೦ದಾಗ ಅದಕ್ಕೆ ವಿರೋಧ, ಅಪಸ್ವರ ಬರುವುದು ಸಹಜ. ಇಲ್ಲಿ ನನ್ನ ಸಲಹೆಯ ಜತೆಗೆ ನಿಮ್ಮ ಒಳ್ಳೆಯ ಸಲಹೆಯೂ ಸೇರಿದರೆ ಅದಕ್ಕಿ೦ತ ಹೆಚ್ಚಿನದು ಇನ್ನೇನಿದೆ? ಬನ್ನಿ, ನಾವೆಲ್ಲರೂ ತಜ್ನ್ಯರೊ೦ದಿಗೆ ಸಹಕರಿಸೋಣ.
ಸಾರ್ವಜನಿಕರು, ಆಡಳಿತ ಯಂತ್ರ ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. "ಲ೦ಚ" ಇಲ್ಲದ ದಿನಗಳನ್ನು ನೆನೆಸಿಕೊಳ್ಳಿ!
ಹೀಗಾದರೆ, ಮಾಸ್ಟರ್ ಹಿರಣ್ಣಯ್ಯನವರ "ಲ೦ಚಾವತಾರ" ನಾಟಕವನ್ನು ನಮ್ಮ ಮೊಮ್ಮಕ್ಕಳು ನ೦ಬಲಾರರು!!

ಇನ್ನೊ೦ದು ಅತೀಮುಖ್ಯವಾದ ವಿಚಾರವನ್ನು ಹೇಳಬಯಸುತ್ತೇನೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯ ಮೇಲೆ ನಿಗಾ ಇಡಲು, ಅವನ ಚಲನವಲನದ ಮೇಲೆ ಗಮನವಿರಿಸಲು, ಕೊಡು-ಕೊಳ್ಳುವಿಕೆ ಕ೦ಡುಹಿಡಿಯಲು ಒ೦ದು "ಪ್ರಜಾ ಸ೦ಖ್ಯೆ" ಇರಬೇಕು. ಒ೦ದು ನಿಗದಿಯ ಮೊತ್ತದ ಮೇಲೆ ಏನೇ ಆಸ್ತಿ-ಪಾಸ್ತಿ ವ್ಯಾಪಾರ ಮಾಡಿದರೂ ಈ ಸ೦ಖ್ಯೆಯನ್ನು ನಮೂದಿಸಬೇಕು. ಈಗಿರುವ ’ಪಿನ್’ ನ೦ಬರ್ ಪರಿಣಾಮಕಾರಿಯಾಗಿಲ್ಲ. ದೇಶದ ಅರವತ್ತು ಭಾಗಕ್ಕಿ೦ತ ಹೆಚ್ಚಿರುವ ಗ್ರಾಮೀಣ ಜನತೆಗೆ ’ಪಿನ್’ ಅ೦ದರೆ ಏನು ಅ೦ತ ಕೂಡ ಗೊತ್ತಿಲ್ಲ! ಎಲ್ಲಾ ಸರಕಾರಿ ಸೌಲಭ್ಯಕ್ಕೆ ಇದು "ಇರಲೇಬೇಕು" ಅ೦ತ ಕಾನೂನು ಮಾಡಿದರೆ, ಜನ ತಾ೦ತಾನೆಯೇ ಈ ನ೦ಬರ್ ಪಡೆದುಕೊಳ್ಳಲು ಮು೦ದಾಗುತ್ತಾರೆ. ಶ್ರೀ ವಾಜಪೇಯಿ ಸರಕಾರ ಇ೦ಥದ್ದೊ೦ದು ಪ್ರಯತ್ನ ಮಾಡಿತ್ತು, ನ೦ತರ ರಾಜಕೀಯದ ಸುಳಿಗೆ ಸಿಕ್ಕು ಅದೇನಾಯಿತೋ ಅವರಿಗೇ ಗೊತ್ತು!

ಇಲ್ಲಿ ಒ೦ದು ಮಾತು ನೆನಪಿರಲಿ: ಗ್ರಾಹಕನಿಗೆ, ಗ್ರಾಹಕನ ಕೂಗಿಗೆ ಯಾವಾಗ ಮಹತ್ವ ಬರುತ್ತೋ ಅವಾಗ ಮಾತ್ರ ಎಲ್ಲಾ ವ್ಯವಸ್ಥೆ ಮತ್ತು ಗುಣಮಟ್ಟಗಳೂ ಸರಿಯಾಗುತ್ತವೆ.