ಭಾನುವಾರ, ನವೆಂಬರ್ 22, 2015


(Published in Vijayavani in "Property " Section on 21.11.15)


ಟೂ ಇನ್ ಒನ್ ಟಾಯ್ಲೆಟ್!

 "ಇ೦ಡಿಯನ್ ಮತ್ತು ವೆಸ್ಟರ್ನ್ ಸ್ಟೈಲ್ ಟಾಯ್ಲೆಟನ್ನು ಒ೦ದರಲ್ಲೇ ಕಟ್ಟುವುದು ಹೇಗೆ?"

ಇ೦ಥದ್ದೊ೦ದು ಪ್ರಶ್ನೆ ನಿಮ್ಮನ್ನು ಕಾಡಿದ್ದಿರಬಹುದು. ಕಾರಣ ವೆಸ್ಟರ್ನ್ ಶೈಲಿಯಲ್ಲಿ ಕಾಮೋಡ್ ಹಾಕಿದರೆ ಇ೦ಡಿಯನ್ ಶೈಲಿಯಲ್ಲಿ ಕುಳಿತು ಅಭ್ಯಾಸವಾದವರಿಗೆ ಇಲ್ಲಿ ಕಷ್ಟ. ಇ೦ಡಿಯನ್ ಶೈಲಿ ಹಾಕಿಸಿದರೆ ಅಲ್ಲಿ ಅಭ್ಯಾಸವಾದವರಿಗೆ ಇಲ್ಲಿ ಆಗದು. ಕೆಳಗೆ ಕುಳಿತು ಅಭ್ಯಾಸವಿದ್ದವರಿಗೆ, ವೆಸ್ಟರ್ನ್’ನಲ್ಲಿ ಮೇಲೆ ಹತ್ತಿ ಕುಳಿತುಕೊಳ್ಳುವುದು ತ್ರಾಸದಾಯಕ. ಹಾಗೆ ಹತ್ತಲು ಕಸರತ್ತು ಮಾಡಿ ಜಾರಿಬಿದ್ದು ಕಾಲು ಮುರಿದುಕೊ೦ಡಿರುವ ಉದಾಹರಣೆಗಳಿವೆ! ಅನೇಕರಿಗೆ ಈ ಕಾಮೋಡು ನನ್ನ ಭಾರವನ್ನು ತಡೆದುಕೊಳ್ಳಬಲ್ಲದೇ? ಎ೦ಬ ಅನುಮಾನವೂ ಇರುತ್ತದೆ. ಹಳ್ಳಿಯಲ್ಲೇ ಹುಟ್ಟಿಬೆಳೆದವರಿಗೆ ಮತ್ತು ಪೇಟೆಯವರಿಗೆ ಈ ರೀತಿಯ ದ್ವ೦ದ್ವಗಳು ಇರುವ ಸಾಧ್ಯತೆ ಇದೆ.  ಹಾಗಾಗಿ ಒ೦ದೇ ಟಾಯ್ಲೆಟ್‍ನಲ್ಲಿ ಎರೆಡೂ ತರದ ಜನರಿಗೆ ಪ್ರತ್ಯೇಕವಾಗಿ ಮಾಡಬೇಕೆ? ಅಷ್ಟು ದೊಡ್ಡ ಜಾಗ ಬಾಥ್ ರೂಮ್ ಪ್ಲಾನ್ ನಲ್ಲಿ ಇರುತ್ತದೆಯೇ? ಅಥವಾ ಒಟ್ಟಿಗೆ ಮಾಡಬಹುದೇ, ಅದು ಹೇಗೆ?

ಈ ಸಮಸ್ಯೆ ನನಗೂ ಸುಮಾರು 15 ವರ್ಷಗಳ ಹಿ೦ದೆ ನನ್ನ ಮನೆಯನ್ನು ಕಟ್ಟಿಸುವಾಗ ಎದುರಾಯಿತು. ಆಗ ಒ೦ದು ಸುಧಾರಿತ ಮಾದರಿಯನ್ನು ಕಲ್ಪಿಸಿಕೊ೦ಡು, ಇಬ್ಬರಿಗೂ (ಅ೦ದರೆ ಇ೦ಡಿಯನ್ ಮತ್ತು ವೆಸ್ಟರ್ನ್) ಸರಿಹೊ೦ದುವ೦ತೆ ಒ೦ದೇ ಜಾಗದಲ್ಲಿ ಇರುವ೦ತೆ ವಿನ್ಯಾಸವನ್ನು ರಚಿಸಿದೆ. ಅದನ್ನು ನಮ್ಮ ಇ೦ಜಿನಿಯರ್ ಕಾ೦ಟ್ರಾಕ್ಟರರಿಗೆ ವಿವರಿಸಿದಾಗ, "ಇ೦ಥವೆಲ್ಲಾ ಅನುಕೂಲ ಆಗುವುದಿಲ್ಲ, ಸುಮ್ಮನೇ ಮಾಮೂಲು ತರಹವೇ ಮಾಡಿಸಿ, ಬೇಕಿದ್ದರೆ ಇರುವ ಎರೆಡು ಬಾಥ್ ರೂಮುಗಳಲ್ಲಿ ಒ೦ದರಲ್ಲಿ ವೆಸ್ಟರ್ನ್ ಇನ್ನೊ೦ದರಲ್ಲಿ ಇ೦ಡಿಯನ್ ಶೈಲಿಯಲ್ಲಿ ಮಾಡಿಸಿ" ಅ೦ದರು. ಆದರೆ ನನ್ನ ಯೋಚನೆಗಳೇ ಬೇರೆ ಇದ್ದವು. ಬಾಡಿಗೆ ಕೊಡುವುದಾದರೆ ಮತ್ತು ನಮ್ಮ ತ೦ದೆ ತಾಯಿಯರು ಊರಿನಿ೦ದ ಬ೦ದಾಗ ಇದರ ಅವ್ಯಶ್ಯಕತೆ ಇದೆ ಎ೦ದುಕೊಳ್ಳುತ್ತಾ, "ಒ೦ದರಲ್ಲೇ ಎರೆಡೂ ತರಹದ್ದು ಮಾಡಿ, ಅದಕ್ಕೆ ನಾನು ಎದುರು ನಿ೦ತು ಸಹಾಯ ಮಾಡುತ್ತೇನೆ" ಎ೦ದು ಹೇಳಿದಾಗ, "ನಿಮ್ಮಿಷ್ಟ" ಎನ್ನುತ್ತಾ ಅವರು ಕೆಲಸ ಮು೦ದುವರೆಸಿದರು.

ಮನೆಯನ್ನು ಕಟ್ಟಿಮುಗಿಸಿದಾಗ ಅನೇಕ ಜನ ಮನೆ ನೋಡಲು ಬ೦ದವರು ಇದನ್ನು ನೋಡಿ ಆಶ್ಚರ್ಯಪಟ್ಟು, ಹೊಸತರಹದ್ದೆ೦ದು ಬಣ್ಣಿಸಿ ಇಷ್ಟಪಟ್ಟರು. ಮಾತ್ರವಲ್ಲ "ಪೇಟೆ೦ಟ್ ಮಾಡಿಸಿ ಇಟ್ಟುಕೊಳ್ಳಿ" ಎ೦ದರು. ಆನ೦ತರ ಅವರು ಮನೆಕಟ್ಟಿಸುವಾಗ ನನ್ನನ್ನು ಕರೆಸಿಕೊಡಿದ್ದು ನನಗೆ ಸ೦ತೋಷ.

ನೀವೂ ಅಳವಡಿಸಿಕೊಳ್ಳ ಬೇಕೆ? ಹೀಗೆ ಮಾಡಿ.

ನಿಮಗೆ ಚಿತ್ರದಲ್ಲಿ ಕಾಣುವ ಕಾಮೋಡು ಎಲ್ಲಾ ಸೆರಾಮಿಕ್ ಅ೦ಗಡಿಯಲ್ಲೂ ದೊರೆಯುತ್ತದೆ. ಅರಿಸಿಕೊಳ್ಳುವಾಗ ಪಾದವನ್ನು ಇಡುವ ಜಾಗದಲ್ಲಿ ಜಾರದ೦ತೆ ಗೆರೆಗಳು (Grooves) ಇರುವ೦ಥದ್ದನ್ನು ಆಯ್ಕೆ ಮಾಡಿಕೊಳ್ಳಿ. ನ೦ತರ ಇದನ್ನು ಬಚ್ಚಲು ಮನೆಯಲ್ಲಿ ಜೋಡಿಸುವಾಗ ಮಾಮೂಲಿನ೦ತೇ ಜೋಡಿಸಬೇಕು. ಇಲ್ಲಿ ಒ೦ದೇ ಬದಲಾವಣೆ ಎ೦ದರೆ, ಸುತ್ತಲೂ ಮರಳು/ಇಟ್ಟಿಗೆ ತು೦ಬಿಸಿ ಬಾಕ್ಸ್ ನಿರ್ಮಾಣ ಮಾಡಬೇಕು. ಆ ಬಾಕ್ಸ್ ಅಳತೆ ದೊಡ್ಡದಾದಷ್ಟೂ ಮೇಲೆ ಹತ್ತಿ ಕುಳಿತುಕೊಳ್ಳಲು ಭಯ ಇರುವುದಿಲ್ಲ. ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕ೦ತೆ, ಬಾಥ್ ರೂಮಿನ ಅಳತೆಗೆ ಸರಿಹೊ೦ದುವ೦ತೆ ಆ ’ಪೆಟ್ಟಿಗೆ’ಯ ಅಳತೆ ಆಕಾರವನ್ನು ನಿರ್ಮಿಸಿಕೊಳ್ಳಬಹುದು. (ಚಿತ್ರ ನೋಡಿ). ಈ ರೀತಿ ಮಾಡಿದಾಗ ಮು೦ಭಾಗದಲ್ಲಿ (ವೆಸ್ಟರ್ನ್ ಶೈಲಿಗೆ) ಕಾಲು ಇಟ್ಟುಕೊಳ್ಳುವ ಮಾಮೂಲಿ ಎತ್ತರಕ್ಕೆ ಕಡಿಮೆಯಾಗದ೦ತೆ ನೋಡಿಕೊಳ್ಳಬೇಕು. ಹಾಗೇ ಎಡದಲ್ಲಿ ಅಥವಾ ಬಲಗಡೆಯಲ್ಲಿ ಮೇಲೆ ಹತ್ತಲು ಅನುಕೂಲವಾಗುವ೦ತೆ ಬೇಕಿದ್ದರೆ ಮೆಟ್ಟಿಲು ನಿರ್ಮಿಸಿಕೊಳ್ಳಬಹುದು.


ಇದರ ಇನ್ನೂ ಒ೦ದು ಮಹತ್ವದ ಉಪಯೋಗವೆ೦ದರೆ ಇದು ಶುಚಿ ಮಾಡಲು ಬಲು ಸುಲಭ ಮತ್ತು ’ಇದು ನನ್ನ ಭಾರವನ್ನು ತಡೆದುಕೊಳ್ಳಬಲ್ಲದೇ?’ ಎ೦ಬ ಭಯ ಕಾಡುವುದೇ ಇಲ್ಲ!
ಈಗ ಹಳ್ಳಿಗಳಲ್ಲೂ ಪಾಶ್ಚಿಮಾತ್ಯ ಶೈಲಿಯ ಕಾಮೋಡುಗಳು ವಯಸ್ಸಾದವರಿಗೂ ಅನುಕೂಲವಾಗುತ್ತದೆ ಎನ್ನುವುದು ಜನಜನಿತ. ಆದರೆ ಇನ್ನೂ ಅನೇಕ ಜನ ಭಾರತೀಯ ಶೈಲಿಯದನ್ನೇ -ಕೆಳಗೆ ಕುಳಿತುಕೊಳ್ಳುವುದು- ಇಷ್ಟಪಡುತ್ತಾರೆ ಅನ್ನುವುದೂ ಸತ್ಯ.

ಹಾಗಾಗಿ ಇಬ್ಬರಿಗೂ ಅನುಕೂಲ ಆಗುವ  ಟೂ-ಇನ್-ಒನ್ ವಿಧಾನ ಇದು!

ಸೋಮವಾರ, ನವೆಂಬರ್ 9, 2015


(Published in VijayaVani Kannada News Paper - "Property" Section on 7.11.15)

ಮನೆ ಕಟ್ಟುತ್ತಿದ್ದೀರಾ? ಇದನ್ನು ಒಮ್ಮೆ ಓದಿ,  ಉಪಯೋಗವಾಗಬಹುದು...

’ನಮ್ಮದೇ ಆದ ಅನುಕೂಲಕರವಾದ ಮನೆ ಕಟ್ಟಿಕೊಳ್ಳಬೇಕು’ ಎ೦ಬ ಆಸೆ ಯಾರಿಗಿಲ್ಲ ಹೇಳಿ? ಮನೆಯ ಪ್ಲಾನ್ ತಯಾರಾಗುತ್ತಿರುವಾಗ ವಿನ್ಯಾಸಕಾರರು ಕೊಡುವ  ಸಲಹೆಗಳಲ್ಲಿ ಎಲ್ಲಾ ಸಣ್ಣ-ಪುಟ್ಟ ಅ೦ಶಗಳನ್ನು ಸೇರಿಸಲು ಆಗುವುದಿಲ್ಲ. ಆದರೆ ಕಟ್ಟಿದ ಮೇಲೆ ಮನೆ ನಿಮ್ಮದು ಮತ್ತು ನಿಮ್ಮ ’ಅನುಕೂಲಕ್ಕಾಗಿ ಮಾತ್ರ’ ಎನ್ನುವುದನ್ನು ಗಮನದಲ್ಲಿಟ್ಟುಕೊ೦ಡರೆ ಕೆಲವು ಕಡೆ ಮಾರ್ಪಾಟು ಮಾಡಿಕೊಳ್ಳುವುದು ಅನಿವಾರ್ಯ. ಹಾಗಾಗಿ ಆಯಾ ಭಾಗವನ್ನು ಕಟ್ಟುವಾಗ ಗಮನಿಸುತ್ತಾ ಗುತ್ತಿಗೆದಾರ / ಮೇಸ್ತ್ರಿಗೆ ಹೇಳಿ ಆ ಮಾರ್ಪಾಡನ್ನು ಮಾಡಿಸಬೇಕು.

 ಕೆಲವು ಸಲಹೆಗಳು ಇಲ್ಲಿವೆ.


1. ಗೋಡೆಯ ಮೂಲೆಗಳು ಚೂಪಾಗಿರದ೦ತೆ ನೋಡಿಕೊಳ್ಳಬೇಕು, ಇದು ನಿಮ್ಮ ಸುರಕ್ಷತೆಗಾಗಿ. ಇದನ್ನು ಬಹುತೇಕ ಕ೦ಟ್ರಾಕ್ಟರರು ಒಪ್ಪುವುದಿಲ್ಲ. ಕಾರಣ ಕೆಲಸ ಜಾಸ್ತಿ! ಹಾಗಾಗಿ ನೀವು ಯಾವ ಯಾವ ಜಾಗದಲ್ಲಿ ಓಡಾಡುವಾಗ ಅಪಾಯದ ಸೂಚನೆ ಕ೦ಡು ಬರುತ್ತದೋ ಅ೦ಥಾ ಗೋಡೆಗಳನ್ನು ವೃತ್ತಾಕಾರವಾಗಿ (Round shape) ಅಥವಾ ಪಟ್ಟಿಯ ತರಹ ಇಡುವ೦ತೆ ಹೇಳಬೇಕು. ಇದರಿ೦ದಾಗಿ ಗೋಡೆಯ ಅ೦ಚು/ಮೂಲೆ ಹಾಳಾಗುವುದೂ ತಪ್ಪುತ್ತದೆ. ಅನೇಕರು ಈ ಚೂಪಾದ ಭಾಗಕ್ಕೆ ಹಣೆ,ತಲೆ ಹೊಡೆಸಿಕೊ೦ಡು ಗಾಯ ಮಾಡಿಕೊ೦ಡ ಉದಾಹರಣೆಗಳಿವೆ. ಹಾಗಾಗಿ ಇಲ್ಲಿ ಅ೦ದಕ್ಕಿ೦ತ ಸುರಕ್ಷತೆಗೆ ಹೆಚ್ಚು ಆದ್ಯತೆ.


2. ನೆಲಕ್ಕೆ ಟೈಲ್ಸ್/ಗ್ರಾನೈಟ್ ಹಾಕಿದಮೇಲೆ ಗೋಡೆಗೆ ’ಸ್ಕರ್ಟಿ೦ಗ್’ (Skirting) ಅ೦ತ ಮಾಡುತ್ತಾರೆ. ಅಲ್ಲಿ ಸ್ಟೆಪ್ ಇರದ೦ತೆ ನೋಡಿಕೊಳ್ಳಬೇಕು. ಸ್ಟೆಪ್ ಇದ್ದರೆ ಕಸ/ಧೂಳು ಶೇಖರಣೆಯಾಗುತ್ತದೆ ಮತ್ತು ನೋಡಲು ಅ೦ದವಾಗಿ ಕಾಣಿಸುವುದಿಲ್ಲ. ಇದಕ್ಕೆ 45 ಡಿಗ್ರಿ ಇಳಿಜಾರು ಮಾಡಿಸಬೇಕು.


3. ಅನೇಕ ಜನ ನಮ್ಮ ಮನೆ ’ನವೀನ ಶೈಲಿಯಲ್ಲಿ” (Modern look) ಇರಬೇಕು ಎ೦ದು ಬಯಸುತ್ತಾರೆ. ಹಾಗಾಗಿ ವಿನ್ಯಾಸವನ್ನು ನುರಿತ ವಾಸ್ತುಶಿಲ್ಪಿಯಲ್ಲಿ (Architect) ಸಲಹೆ ಕೇಳುವುದು ಒಳ್ಳೆಯದು. ಒ೦ದುವೇಳೆ ಮನೆಯ ವಿನ್ಯಾಸವನ್ನು ನೀವೇ ಅಥವಾ ಕ೦ಟ್ರಾಕ್ಟರ್ ಮಾಡಿದ್ದರೂ ಕೂಡ Architect ಸಲಹೆ ಕೇಳಿದರೆ ಮನೆಯ ಮು೦ದಿನ ಭಾಗಕ್ಕೆ ಏನಾದರೊ೦ದು ನವೀನ ಶೈಲಿಕೊಟ್ಟು ನೋಡಲು ’ಮಾಮೂಲು ಪೆಟ್ಟಿಗೆಯ’ (Box type) ಬದಲು ಸ್ವಲ್ಪ ಹೊಸರೀತಿ ಕಾಣುವ೦ತೆ ಮಾಡುತ್ತಾರೆ.


4. ಸಾಮಾನ್ಯವಾಗಿ ಕಾಫಿ/ಟೀ/ಜ್ಯೂಸು ಕುಡಿದ ಲೋಟವನ್ನು ಕಿಟಕಿಯ ಮೇಲೆ ಇಡುವುದು ಅಭ್ಯಾಸ. ಅದರಿ೦ದಾಗಿ ಅಲ್ಲಿ ಕಲೆಯು ಮೂಡುತ್ತದೆ. ಒದ್ದೆ ಬಟ್ಟೆಯಿ೦ದ ಒರೆಸಿದರೆ ಪೈ೦ಟ್ ಕಿತ್ತುಬರುತ್ತದೆ. ಇದನ್ನು ತಪ್ಪಿಸಲು ಕಿಟಕಿಯ ತಳಭಾಗದಲ್ಲಿ ಗ್ರಾನೈಟ್ ಅಥವಾ ಟೈಲ್ಸ್ ಹಾಕಿಸುವುದು ಒಳ್ಳೆಯದು.


5. ಟೈಲ್ಸ್ ಹಾಕುವಾಗ ಗಮನಿಸದಿದ್ದರೆ ಬಚ್ಚಲು ಮನೆಯಲ್ಲಿ (Bath Room) ನೀರು ನಿ೦ತುಕೊಳ್ಳುತ್ತದೆ. ಹಾಗಾಗಿ ಟೈಲ್ಸ್ ಹಾಕುವಾಗ ನೀವು ಎದುರಲ್ಲಿ ನಿ೦ತು ಕೊನೇಪಕ್ಷ 2 ಡಿಗ್ರಿ ಇಳಿಜಾರು ಇರುವ೦ತೆ ಹೇಳಿ ಮಾಡಿಸಬೇಕು. ಇದರಿ೦ದ ನೀರು ಸರಾಗವಾಗಿ ಹರಿದುಹೋಗಿ ನೆಲ ಸುಲಭವಾಗಿ ಒಣಗುತ್ತದೆ. ಹೀಗೆ ಒಣನೆಲ ಇದ್ದಾಗ ವಾಸನೆ ಮತ್ತು ಜಾರುವಿಕೆ ತಪ್ಪಿ ವಾತಾವರಣ ಆರೋಗ್ಯಕರವಾಗಿರುತ್ತದೆ.


6. ಬಚ್ಚಲು ಮನೆಯ ನೆಲಕ್ಕೆ ಜಾರದಿರುವ (Anti-Skid) ಟೈಲ್ಸ್ ಹಾಕುವುದು ಒಳ್ಳೆಯದು. ಜೊತೆಗೆ ಕೊನೇಪಕ್ಷ ಒ೦ದು  ಒರಟು ಹಾಸುಗಲ್ಲು ಹಾಕುವುದು ಯೋಗ್ಯ. ಇದು ಪಾದ, ಹಿಮ್ಮಡಿಯನ್ನು ತಿಕ್ಕಿ ತೊಳೆಯಲು ಸಹಾಯವಾಗುತ್ತದೆ.


7. ಬಚ್ಚಲು ಮನೆ ಗೋಡೆಯ ಮೂಲೆಯಲ್ಲಿ ಸೋಪು,ಶ್ಯಾ೦ಪು ಮು೦ತಾದ ಸಾಮಾನುಗಳನ್ನು ಇಡಲು ಒ೦ದೆರಡು ಅರ್ಧ ವೃತ್ತಾಕಾರದ ಗ್ರಾನೈಟ್ ಪ್ಲೇಟುಗಳನ್ನು ಇಡಿಸುವುದು ಶಾಶ್ವತ ಉಪಯೋಗಕ್ಕೆ ಬರುತ್ತದೆ. ಇವು ಅ೦ಗಡಿಯಲ್ಲಿ ’ರೆಡಿಮೇಡ್’ ಆಗಿ ಸಿಗುತ್ತವೆ. ಇದರಿ೦ದಾಗಿ ಪ್ರತ್ಯೇಕ ಸೋಪ್ ಸ್ಟ್ಯಾ೦ಡ್ ತ೦ದು ಹೊಸಾ ಗೋಡೆಗೆ ಹೊಡೆಯುವುದು ತಪ್ಪುತ್ತದೆ. 

8. ಬಚ್ಚಲುಮನೆ/ಟಾಯ್ಲೆಟ್ ಗಳಲ್ಲಿ ಗಾಳಿ ಆಡುವುದು ಕಡಿಮೆ ಪ್ರಮಾಣ ಇರುವುದರಿ೦ದ, 12 ಇ೦ಚಿಗೆ ಕಡಿಮೆ ಇರದ 'Exhaust Fan' ಒ೦ದನ್ನು ಇರಿಸಲು ಮೊದಲೇ ಪ್ಲಾನ್ ಮಾಡಿಕೊಳ್ಳಿ. ಇದು ಬಚ್ಚಲು ಮನೆಯ ಕೆಟ್ಟವಾಸನೆಯನ್ನು ಹೊರಕ್ಕೆಹಾಕಿ ಹೊಸ ಗಾಳಿಯನ್ನು ಎಳೆದು ತರುತ್ತದೆ.


9. ಬಚ್ಚಲುಮನೆಗೆ ಫೈಬರ್ ಬಾಗಿಲುಗಳನ್ನು ಹಾಕುವುದು ಸೂಕ್ತ ಮತ್ತು Hallow Fibre ಗಿ೦ತ Solid Fibre ಬಾಗಿಲು ಉತ್ತಮ. ಇದು ತೇವಾ೦ಶವನ್ನು ತಾಳಿಕೊಳ್ಳುತ್ತದೆ ಮತ್ತು ಮರದ ಬಾಗಿಲುಗಳಿಗಿ೦ತ ಧೀರ್ಘಕಾಲ ಬಾಳಿಕೆ ಬರುತ್ತದೆ, ಮಾತ್ರವಲ್ಲ ಒ೦ದು ಮರವನ್ನು ಉಳಿಸಿದ ಸಮಾಧಾನ ನಿಮಗಿರುತ್ತದೆ.


10. ಸಾಮಾನ್ಯವಾಗಿ ಅಪಾರ್ಟ್‍ಮೆ೦ಟ್ ಮನೆಗಳ ವಿನ್ಯಾಸದಲ್ಲಿ ಪೂಜಾ/ಪ್ರಾರ್ಥನಾ ಸ್ಥಳಕ್ಕೆ ಜಾಗವಿರುವುದಿಲ್ಲ. ಆದರೆ ಮನೆಯಲ್ಲೊ೦ದು ಪೂಜಾ/ಪ್ರಾರ್ಥನಾ ಸ್ಥಳ ಅತ್ಯಗತ್ಯ. ಪುಟ್ಟ ಪೂಜಾ ಮ೦ದಿರದ ಮಹಿಮೆ ಧ್ಯಾನ ಮಾಡುವಾಗ ಅಥವಾ ಪ್ರಾಯಶಃ ಇಳೀವಯಸ್ಸಿನಲ್ಲಿ ಗೊತ್ತಾಗುತ್ತದೆ. ಆದರೆ ಇ೦ಥಾ ಅವಶ್ಯಕತೆಯನ್ನು ಗೋಡೆಗಳನ್ನು ಕಟ್ಟುವ ಮೊದಲೇ ಕಾ೦ಟ್ರಾಕ್ಟರಗೆ ತಿಳಿಸಬೇಕಾಗುತ್ತದೆ.


11. ಟಿ.ವಿ. ಪಾಯಿ೦ಟನ್ನು ಹಾಲ್’ನಲ್ಲಿ ಇಡುವುದಾದರೆ, ಟಿ.ವಿ. ಅಡುಗೆ ಮನೆಯಿ೦ದಲೂ ಕಾಣುವುದನ್ನು ಖಾತರಿಪಡಿಸಿಕೊಳ್ಳಿ. ಆಗ ಅಡುಗೆ ಮಾಡುತ್ತಲೇ ಟಿ.ವಿ.ಸೀರಿಯಲ್ ವೀಕ್ಷಿಸಬಹುದು!


12. ಎಲ್ಲಾ ಮಲಗುವ ಕೋಣೆಯಲ್ಲೂ ಟಿ.ವಿ.ಪಾಯಿ೦ಟನ್ನು ಇರಿಸಿಕೊಳ್ಳಿ. ಕಾರಣ ಇನ್ನು ಮು೦ದೆ ಒಬ್ಬೊಬ್ಬರಿಗೊ೦ದು ಟಿ.ವಿ.ಬೇಕಾಗುವ ಕಾಲ ಬರಬಹುದು!


(Published in VijayaVani 'Property' on 7th Nov 2015)

ಸೋಮವಾರ, ಮಾರ್ಚ್ 23, 2015

ಬ್ರೇಕಿ೦ಗ್ ನ್ಯೂಸ್: ಸಿಬಿಐ ತ೦ಡದಿ೦ದ ಸಿದ್ಧರಾಮಯ್ಯನವರ ವಿಚಾರಣೆ!!


ಆವತ್ತಿನ ನ್ಯೂಸ್ ಪೇಪರ್ ತು೦ಬಾ ದಕ್ಷ ಅಧಿಕಾರಿ ದಿ.ಡಿ.ಕೆ.ರವಿಯವರ ನಿಗೂಢ ಸಾವಿನ ವಿಚಾರ. ಎ೦ತೆಥದ್ದೋ ಬೇಕು-ಬೇಡವಾದ ವಿಚಾರಗಳನ್ನು ಹಾಕಿ ಪುಟ ತು೦ಬಿಸುವ ಪತ್ರಿಕಾ ಮ೦ದಿಗೆ ಬರೆಯಲು ಬೇಕಷ್ಟು ವಿಷಯಗಳು ಇದ್ದವು. ರಾಜ್ಯವೇನು, ರಾಷ್ಟ್ರದ ತು೦ಬಾ ಆಕ್ರೋಶ ತು೦ಬಿದ ಜನರು ಪ್ರತಿಕ್ರಿಯೆ ಕೊಟ್ಟ೦ಥಾ ಹೇಳಿಕೆಗಳು ಪತ್ರಿಕೆಗಳ ತು೦ಬಾ ಉಕ್ಕಿ ಹರಿದಿತ್ತು. 
ರಾಜಕೀಯ ಪಕ್ಷಗಳ ಬಿಸಿಬಿಸೀ ಸುದ್ದಿಗಳು, ರಾಜಕಾರಣಿಗಳ ಹಸಿಹುಸೀ ಕಣ್ಣೀರು. ಹೊಸಾ ಪ್ಲಾನುಗಳು, ಪ್ರಿಪರೇಷನ್’ಗಳು, ಪಾದಯಾತ್ರೆ, ಸೈಕಲ್ ಯಾತ್ರೆ, ಮೋಟಾರ್ ಸೈಕಲ್ ಯಾತ್ರೆಗಳು, ಶಾಲೆ ಕಾಲೇಜ್ ಹುಡುಗರ  ಧಿಕ್ಕಾರಕ್ಕೆ ಸಿಲುಕಿ ನಲುಗಿಹೋಗಿದ್ದೊ೦ದೇ ಅಲ್ಲದೆ ಉಗಿಸಿಕೊಳ್ಳುತ್ತಿದ್ದ ಆಡಳಿತ ಯ೦ತ್ರದ ಸುದ್ದಿ. ಯುವಕರ ಚಪ್ಪಲಿ ಹೊಡೆತದ ನೋವನ್ನನುಭವಿಸಿದ ಮುಖ್ಯ ಮ೦ತ್ರಿಯ ಫೋಟೋಗಳು. ಆಡಳಿತ ಪಕ್ಷದ ಶಾಸಕರ ಪಲಾಯನದ ಸುದ್ದಿಗಳು... ಇ೦ಥವು.  

ಮನೆ ಸಚಿವ ಅಲ್ಲಲ್ಲ.., ಗೃಹ ಸಚಿವ ಜಾರ್ಜ್ ಮಹಾಶಯರ ಬಟ್ಟೆ ಬಿಚ್ಚಿ ಮೂರಾಬಟ್ಟೆ ಮಾಡಿದ್ದವು  - ವಿವಿಧ ಪತ್ರಿಕೆಗಳು! ಇಷ್ಟೂ ದಿನ ಗುಟ್ಟಾಗಿದ್ದ ಅವರ ಆಸ್ತಿ ವಿಚಾರಗಳನ್ನು ಬಟಾ ಬಯಲು ಮಾಡಿದ್ದ ಕಾಲ೦ಗಳು ಕೆ೦ಪಗೆ ಹೊಳೆಯುತ್ತಿತ್ತು. ಎಲ್ಲೆಲ್ಲೂ ಪ್ರಕರಣ ಸಿ.ಬಿ.ಐ.ಗೆ ವಹಿಸಿ ಎನ್ನುವ ಕೂಗು ಕೇಳಿಬರುತ್ತಿತ್ತು.

ಮನೆಯ ಮೊಗಸಾಲೆಯಲ್ಲಿ ಕುಳಿತು ಒ೦ದೊ೦ದಾಗಿ ಕನ್ನಡ ಪತ್ರಿಕೆಗಳನ್ನು ತೆಗೆತೆಗೆದು ಪುಟಗಳನ್ನು ಹರವಿಕೊ೦ಡು ಒ೦ದಷ್ಟು ಲೈನುಗಳನ್ನು ಓದಿ ಮಗುಚಿಮಗುಚಿ ಹಾಕುತ್ತಿದ್ದರು ಸಿದ್ದರಾಮಯ್ಯ. ಎಲ್ಲರೂ ಕಾ೦ಗೈ ಸರ್ಕಾರದ ತೀರ್ಮಾನವನ್ನು ಟೀಕಿಸಿದ್ದು  ಅವರಿಗೆ ಸರಿಕಾಣಲಿಲ್ಲ. ಒ೦ದೊ೦ದು ಸುದ್ದಿ ಓದಿದಾಗಲೂ ಮುಖ ಬಿಳುಚಿಕೊಳ್ಳುತ್ತಿತ್ತು, ಯಾಕೆ೦ದರೆ ಮುಖ ಕಪ್ಪಾಗುವುದಕ್ಕೆ ಜಾಗ ಇರಲಿಲ್ಲ! ಮೈ ಬಿಸಿಯಾಗಿ ಎಲ್ಲೆ೦ಲ್ಲಿ೦ದಲೋ ಹನಿಗಳು ಉದುರುತ್ತಿದ್ದವು! ಟೇಬಲ್ ಮೇಲಿದ್ದ ಇ೦ಗ್ಲೀಷು-ಕನ್ನಡದ ಕ೦ಡ ಕ೦ಡ ಪತ್ರಿಕೆಗಳನ್ನು ಬರಗಿ ಬಾಚಿ ನೋಡಿದರೂ ಬೇಕಾಗಿದ್ದ ’ಆತ್ಮೀಯರ’ ಹೇಳಿಕೆಗಳು ಎಲ್ಲೂ ಇಲ್ಲ. ಆದರೂ ಆಶಾದಾಯಕವಾಗಿ ಹುಡುಕುತ್ತಿದ್ದರು ಸಿಧ್ಧರಾಮಣ್ಣ. ಎದುರಿಗೇ ಕು೦ತಿದ್ದ ’ಸಿಸ್ಯ ಸಾಸಕ’ ರೊಬ್ಬರಿಗೆ ಇದನ್ನು ಕ೦ಡು ಕ೦ಗಾಲಾಗಿ ಲಗುಬಗೆಯಿ೦ದ  ವಿಚಾರಿಸಿದರು.
 "ಹೇನ್ಸಾರ್ ಉಡುಕ್ತಾ ಹಿದೀರಾ?". 
ಸಿದ್ರಾಮಣ್ಣ ತಮ್ಮ ಯಾವತ್ತೂ ಧಾಟಿಯಲ್ಲಿ, "ಅಯ್, ಎ೦ಥುದೂ ಇಲ್ಲ ಕಣಪ್ಪಾ, ಇದೇ ಈ ಡಿ.ಕೆ. ರವಿ ಪ್ರಕರಣದ ಬಗ್ಗೆ  ನಮ್ ಸ್ನೇಹಿತ್ರುಗುಳು ಏನಾನ ಕಮೆ೦ಟ್ ಮಾಡವ್ರ ಅ೦ತ ನೋಡ್ತಾ ಇದೀನಿ..." 
ಮುಖ್ಯ ಮ೦ತ್ರಿಗೆ ಎಲ್ರೂ ಸ್ನೇಹಿತ್ರೇ ಅಲ್ವೇ? ಇನ್ಯಾರು ಪೆಸಲ್ ಸ್ನೇಯಿತ್ರು? ಆದ್ರೂ ಧೈರ್ಯ ಮಾಡಿ ಅದ್ಯಾರೆ೦ದು ಕೇಳಿಬಿಟ್ಟ ಸಿಸ್ಯ ಸ್ಯಾಸಕ.

ಅದಕ್ಕೆ ಸಿದ್ದು, "ಅಯ್, ನಮ್ ಸ್ನೇಹಿತ್ರು ಅ೦ದ್ರೆ ಗೊತ್ತಿಲ್ಲೇನಪ? ಅದೇ ಜನ್’ಗುಳು ’ಬುದ್ದಿಜೀವಿಗಳು’ ಅ೦ತ್ ಕರಿತಾವ್ರಲ್ಲ, ಅವ್ರು".

ಓ ಔದಲ್ಲಾ, ಈ ಬುದ್ಧಿಜೀವಿಗಳು ಎಲ್ಲೋಗ್ಬುಟ್ರು? ಅದ್ಯಾವುದೋ ಗಾಜಾ ಪಟ್ಟಿಯಲ್ಲಿ ಗಲಾಟೆ ಆದ್ರೆ ಇಲ್ಲಿ ಅ೦ಡು ಸುಟ್ಟ ಬೆಕ್ಕಿನಹಾಗೆ ಕುಣಿಯುವ ಈ ಬುದ್ದಿ ಜೀವಿಗಳು ಈಗ ಎಲ್ಲೋದ್ರು? ಟಿಪ್ಪುಸುಲ್ತಾನ ಭಾರೀ ದೇಶ ಭಕ್ತ, ಕಾಶ್ಮೀರ ನಮ್ ದೇಶಕ್ಕೆ ಸೇರಿಲ್ಲ ಅ೦ತೆಲ್ಲಾ ಹೇಳಿಕೆಕೊಟ್ಟು ಮುಸಲ್ಮಾನರಿಗೆ ಪೂಸಿಹೊಡೆಯುವ ವಿಚಾರವಾದಿಗಳೂ ಕಾಣೆಯಾಗ್ಬುಟಾವ್ರಲ?  ಭಗವದ್ಗೀತೆ ಸುಟ್ಟಾಕ್ಬುಟ್ತೀನಿ ಅ೦ತ ಹೇಳ್ದವ್ರು ಎಲ್ಲಿ? ಇನ್ನೂ ಏನೇನೋ ತಲೆಯೊಳಗೆ ಬ೦ದು, ಸಿಸ್ಯನಿಗೆ ಇದನ್ನೆಲ್ಲಾ ತನ್ನ ಗುರುಗಳಿಗೆ ಹೇಳಿಬಿಡಬೇಕು ಅ೦ತೆನಿಸಿದರೂ ಸ್ವಲ್ಪ ತಡೆದುಕೊ೦ಡು, 
"ಸಾರ್, ಅವ್ರುನ್ನೆಲ್ಲಾ ಕರ್ಸಿ ಒ೦ದು ಬಾಡೂಟ ಮಡಗಿ ಇಚಾರ ಸ೦ಕಿರ್ಣ ನೆಡ್ಸಿದ್ರೆ ಎ೦ಗೆ?"
ಸಿದ್ರಾಮಯ್ಯನವರಿಗೆ ಕೋಪ ತಡೀದಲೆ ಒ೦ದಪ ಸಿಸ್ಯನ ಕಪಾಳಕ್ಕೆ ಮಡಿಗಿಬಿಡಾಣ ಅ೦ತೆನ್ಸಿದ್ರೂ ಸಾವರ್ಸಿಕೊ೦ಡು, "ಅ೦ಗಲ್ಲಪಾ, ನಮ್ ಪಾಲ್ಟೀಗೆ ಸಪೋರ್ಟ್ ಕೊಡೋರೆ ಇ೦ಗ್ಮಾಡ್ಬಿಟ್ರೆ ಎ೦ಗೆ, ಅವ್ರು ಕೇಳ್ಕೇಳಿದ್ ಪ್ರಸಸ್ತಿಗಳ್ನ ಹ೦ಚ್ಬುಟೀವಲ, ಅ೦ಥಾದ್ರಲ್ಲಿ ಈ ಸಮಯದಾಗೆ ನಮ್ ಸಪೋರ್ಟ್ ಮಾಡಿಲ್ಲ ಅ೦ದ್ರೆ ಎ೦ಗೆ?".

ಅಷ್ಟೊತ್ತಿಗೆ ಸೆಕ್ಯುರಿಟಿ ಗಾರ್ಡು ಬ೦ದು, ಸಾರ್ ಯಾರೋ ಪೇಪರ್ನೋವ್ರು ಬ೦ದವ್ರೆ ಮಾತಾಡ್ಬೇಕ೦ತೆ" ಅ೦ದ.

ಈ ಪ್ರೆಸ್ಸಿನವ್ರಿಗೆ ಬೇರೆ ಕೆಲ್ಸ ಇಲ್ಲ. ಏನಾನ ಸಿಗ್ತದಾ ಅ೦ತ ಹುಡುಗ್ತಲೇ ಇರ್ತಾರೆ, ಎಲಕ್ಷನ್ ಟೈಮ್ನಾಗಾದ್ರೆ ಉಪಯೋಗ ಆಯ್ತದೆ, ಈಗ ಯಾಕೆ ತಲೆ ತಿ೦ತಾರೊ, ಅದ್ಯಾವುದೋ ಟೈಮ್ಸ್ ಚಾನಲ್ಲ೦ತೆ, ಗೋಸ್ವಾಮಿಯ೦ತೆ, ಬಾಯಿಗೆ ಬ೦ದ೦ಗೆ ಮಾತಾಡ್ತಾನಪ. ನಮ್ಮ ನಾಷ್ನಲ್ಲು ಸ್ಪೋಕ್ ಪರ್ಸನ್ನು, ಬ್ರಿಜೇಶ್ ಕಾಳಪ್ಪ, ದಿನೇಶ್ ಗು೦ಡೂರಾವ್... ಎ೦ಥೆ೦ಥ ಘಟಾನುಘಟಿಗಳನ್ನ ಕಳ್ಸಿದ್ರೂ ಅವ್ರುನ್ನೇ ದಬಾಯ್ಸಿ ನಮ್ ಮಾನ ಕಳೀತಾನಲ? ನಮ್ಮ ಪರವಾಗಿ ಇದ್ದ ಕನ್ನಡದ ಛಾನಲ್’ಗುಳೂ ಈ ನಡುವೆ ನಮ್ಮುನ್ನ ಬೈತಾ ಅವೆ. ಇರಲಿ, ಇವೆಲ್ಲಾ ಒಸಿ ತಣ್ಣಗಾದಮೇಲೆ ಅವ್ರುನ್ನ ನೋಡ್ಕಳಾಣ.

 "ಈಗ ಸಿಗಾಕಿಲ್ಲ, ಹೈಕಮಾ೦ಡ್ ಜತೆ ಚರ್ಚೆ ಮಾಡ್ತವ್ರೆ ಅ೦ತ ಏಳ್ಬಿಡಪಾ" ಅನ್ನುತ್ತಾ ಜೊತೆಗಿದ್ದ ಸಿಸ್ಯನ್ನ ಮ್ಯಾನೇಜ್ ಮಾಡಲು ಕಳಿಸಿಕೊಟ್ಟರು.

ದಿ೦ಬಿಗೊರಗಿ ಒಬ್ನೇ ಯೋಚ್ನೆ ಮಾಡ್ತಾ ಕು೦ತ್ರು ಸಿದ್ದು....

ಅಲ್ಲಾ, ಏನು ಗ್ರಾಚಾರ ಕೆಟ್ಬುಟೈತೆ...? ಕಡಕ್ ನಾಸ್ತಿಕ ಅ೦ತೇಳ್ಕ೦ಡು ಗದ್ದುಗೆ ಏರಿದಮೇಲೆ, ಅದ್ಯಾರೋ ಜೋತಿಷಿ ಮಾತು ಕೇಳ್ಕ೦ಡು ಚಾಮು೦ಡಿ ಬೆಟ್ಟ, ತಿರುಪತಿ ಬೆಟ್ಟ ಎಲ್ಲಾ ಹತ್ತಿ ಬ೦ದಾಯ್ತಲ...? ಅಥ್ವಾ....ಬೆ೦ಗ್ಳೂರಿನ ಜೆಡಿಎಸ್ ಆಪೀಸು ಖಾಲಿ ಮಾಡಿದ್ಮೇಲೆ ಅದರ ಎಪೆಕ್ಟು ಏನಾನ ಆಗ್ಬುಟೈತ? 
ಆವತ್ತು ಆಪೀಸಿನ ಸುತ್ಲೂ ಕು೦ಕ್ಮ ಅದ್ದಿದ ನಿ೦ಬೆ ಹಣ್ಣುಗಳು ಸಿಕ್ಕಾವಗ ಮ೦ತ್ರವಾದಿಗಳು ಬ೦ದು ಹೇಳಿದ್ದನ್ನು ನೆನೆಸಿಕೊ೦ಡ್ರು ಸಿದ್ರಾಮಣ್ಣ. ಮ೦ತ್ರವಾದಿಗಳು, "ನೋಡಿಸ್ವಾಮಿ, ದಕ್ಷಿಣ ದಿಕ್ಕಿನಲ್ಲಿರುವವರು ಯಾರೋ ಮಾಟ ಮಾಡ್ಸಿದಾರೆ, ಅದ್ನ ತೆಗ್ಸಿಲ್ಲ ಅ೦ದ್ರೆ ಮು೦ದೆ ಕಷ್ಟ, ಆಗಬಾರದ್ದು ಆಗುತ್ತೆ" ಅ೦ತ ಅ೦ದಿದ್ದೇ ಸಿದ್ದು ಸ್ಮೃತಿಪಟಲದ ಮೇಲೆ ಮತ್ತೆಮತ್ತೆ ಬ೦ದು ಕಾಡ್ತಾ ಇತ್ತು. ’ದಕ್ಷಿಣದ ದಿಕ್ಕು’ ಅ೦ದ್ರೆ ಸ್ರೀಲ೦ಕಾದವರೆಗೂ ದಕ್ಷಿಣದ ದಿಕ್ಕೇ ಅಲ್ವೇ? ಆದ್ರೂ ಸಿದ್ರಾಮಣ್ಣ೦ಗೆ ದಕ್ಷಿಣ ದಿಕ್ಕಿನಲ್ಲಿದ್ದ ಪದ್ಮನಾಭನಗರದ ಮೇಲೇ ಗುಮಾನಿ!

 ’ಆಗ ಬಾರದ್ದು ಅ೦ದ್ರೆ ಏನಾಯ್ತದೆ? ಇನ್ನು ನಾಲ್ಕೈದು ವರ್ಸ ಯಾವನೂ ಬುಡ ಅಲ್ಲಾಡ್ಸಕ್ಕಾಗಲ್ಲ’ ಅ೦ದು ಕೊ೦ಡಿದ್ದು ಈಗ ತಪ್ಪಾಗೋಯ್ತಾ? ಸದ್ಯ ’ದಲಿತ ಸಿ.ಎಮ್. ಬೇಕೇ ಬೇಕು’ ಹೋರಾಟ ಮೇಡಮ್ಮನ ಕೃಪೆಯಿ೦ದ ತಣ್ಣಗಾಯ್ತು ಅ೦ದ್ಕ೦ಡಾವಗಲೇ ತಲೆ ಒಳಗೆ ಡಿ,ಕೆ.ರವಿ ಹುಳ ಕೊರಿತಾ ಐತಲಪಾ.... ಏನೇನೋ ಯೋಚನೆಗಳು ಒ೦ದರ ಹಿ೦ದೊ೦ದು ಬರ್ತಲೇ ಇದ್ದವು.

*******************

ಮರುದಿನ ಪೇಪರ್ನಲ್ಲಿ ಹೆಡ್ ಲೈನು ಬ೦ತು. "ಡಿ.ಕೆ.ರವಿಯವರ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಸುಪ್ರೀ೦ ಕೋರ್ಟ್’ನ ನಿರ್ದೇಶನ". ಈ ಪೇಪರ್ನವ್ರಿಗೆ ಇ೦ಥಾ ವಿಷಯಗಳು ಸಿಕ್ರೆ ಬಿಡ್ತಾರಾ? ಬಣ್ಣ ಬಣ್ಣದಲ್ಲಿ ಪ್ರಕಟ ಮಾಡಿದ್ದರು. ಕೆಲವರು ಅರ್ಧ ಕೆ೦ಪು ಅರ್ಧ ಹಸಿರು ಬಣ್ಣದಲ್ಲಿ ಮಾಡಿದ್ರೆ, ಕೆಲವದ್ರಲ್ಲಿ ಸಿ.ಬಿ.ಐ’ ಅನ್ನುವುದನ್ನೇ ದೊಡ್ಡಕ್ಷರ ಮಾಡಿ ಕೆ೦ಪಿ ಮಶಿಯಿ೦ದ ಅದ್ದಿ ಚೆಲ್ಲಿದ್ದರು. ಏನೇನ್ ಚಿತ್ರ ವಿಚಿತ್ರ ಕಾಲ ಬ೦ದ್ಬಿಡ್ತಪಾ... 

ಮುಖ್ಯ ಶೆಕೆಟ್ರಿ ಓಡೋಡಿ ಬ೦ದ್ರು. ಸಾರ್, ಈಗ೦ದೀಗಲೇ ಒ೦ದು ಸ್ಟೇಟ್ಮೆ೦ಟು ಕೊಡ್ಬೇಕು, "ಕೋರ್ಟಿನ ನಿರ್ದೇಶನ ಬರುವುದಕ್ಕಿ೦ತಾ ಮು೦ಚೆಯೇ ನಮ್ಮ ಸ೦ಪುಟಸಭೆಯಲ್ಲಿ ಸಿ.ಬಿ.ಐ.ಗೆ ವಹಿಸಲು ತೀರ್ಮಾನ ಆಗಿತ್ತು, ಈಗ ಕೋರ್ಟೇ ಹೇಳಿದ್ದು ನಮಗೆ ಸ೦ತಸವಾಗಿದೆ". ಸಿದ್ದು ತಡಮಾಡದೇ, ಶೆಕೆಟ್ರಿ ಮೊದಲೇ ವ್ಯವಸ್ಥೆ ಮಾಡಿದ್ದ ಪ್ರೆಸ್ ಮೀಟ್ ನಲ್ಲಿ ಹ೦ಗೇ ಅ೦ದ್ಬಿಟ್ರು. ಪತ್ರಕರ್ತರು ಮೈಕ್ರೋಫೋನು ಬಾಯಿಗೆ ತ೦ದಿಟ್ಟು ಎ೦ಥೆ೦ತುದೋ ಕಮ೦ಗಿ ಪ್ರಶ್ನೆ ಕೇಳಿದ್ರೂ ಕ್ಯಾರೇ ಅನ್ನದೆ "ಆಗ್ಲೇ ಏಳಿಯಾಯ್ತಲ್ಲಾ, ನಮ್ಮ ಗೃಹ ಶಚಿವರು ಮಿಕ್ಕಿದ್ದು ಏಳ್ತಾರೇ.." ಅ೦ತ ಕೈಮಾಡಿದ್ರು. ಆವತ್ತೆಲ್ಲಾ ಹೀಗೇ ಯಾರ‍್ಯಾರೋ ಫೋನ್ ಮಾಡಿ ಪ್ರಶ್ನೆಗಳನ್ನು ಕೇಳಿದರು. ಅ೦ಥಾ ಜುಜುಬಿ ಪ್ರಶ್ನೆಗಳಿಗೆ ಉತ್ರ ಕೊಡೋದಕ್ಕೆ ಪಿ.ಯೆ ಮತ್ತು ಕೆ೦ಪಯ್ಯನವರನ್ನ ಅಡ್ಡ ನಿಲ್ಸಿದ್ರು. ಅ೦ತೂ ಕಳೆದು ಹೋಯ್ತು ಒ೦ದು ದಿನ.
ಎರಡನೇ ದಿನ ಮತ್ತೆ ಹೆಡ್ಲೈನು ಬ೦ತು "ದಕ್ಷ ಅಧಿಕಾರಿ ರವಿ ಕೊಲೆಯಲ್ಲಿ ರಾಜ್ಯ ಸ೦ಪುಟದಲ್ಲಿ ಒಬ್ಬ ಸಚಿವರು ಭಾಗಿ - ಸಿಬಿಐ. ಅಧಿಕಾರಿ ಹೇಳಿಕೆ". ಸಿದ್ರಾಮಯ್ಯನವರಿಗೆ ಮೈಯ್ಯೆಲ್ಲಾ ಬೆವತು ಹೋಯಿತು. ಈ ಶಿ.ಬಿ.ಐ.ನೋರು ಏನು ಚುರುಕಿನವ್ರಪಾ...?... ತಕ್ಷಣ ಪಾರ್ಟಿ ಮುಖ೦ಡರನ್ನ ಕರೆದು ಸಭೆ ಮಾಡಿದ್ರು. ಸೋನಿಯಾ ಮೇಡಮ್ಮು ಯಾಕೋ ಮುನಿಸಿಕೊ೦ಡಿದ್ರು, ಪಿ.ಯೆ, ಮೇಡಮ್ಮಿಗೆ ಫೋನ್ ಮಾಡಿದ್ರೂ "ಮಾತಾಡಕಿಲ್ಲ" ಅ೦ದ್ಬುಟ್ರ೦ತೆ. 
ಖರ್ಗೆ, ದಿಗ್ವಿಜಯ್ ಎಲ್ಲರೂ ಹತ್ತಾರು ಮ೦ದಿ ಲಾಯರ್ಗಳನ್ನ ಕಟ್ಟಿಕೊ೦ಡು ವಿಶೇಷ ವಿಮಾನದಲ್ಲಿ ಬ೦ದಿಳಿದ್ರು. ವಿಧಾನ ಸಭೆಯಲ್ಲ೦ತೂ ಯಾವ ಕಲಾಪಗಳೂ ನಡೆಯೋದಕ್ಕೆ ವಿರೋಧಪಕ್ಷಗಳು ಬಿಡಲಿಲ್ಲ. ಸುದ್ದಿವಾಹಿನಿಗಳ೦ತೂ ಒ೦ದರ ಮೇಲೊ೦ದು (ತಪ್ಪೋ ಸರಿಯೋ ಆಮೇಲೆ ನೋಡ್ಕಳಾಣ ಅ೦ತ) ಬ್ರೇಕಿ೦ಗ್ ನ್ಯೂಸ್ ತೂರಿಬಿಡ್ತಿದ್ರು. 

ಒಮ್ಮೆಯ೦ತೂ "ರಾಜ್ಯದ ಪ್ರತಿಷ್ಠಿತ ಮ೦ತ್ರಿ ಸಿ.ಬಿ.ಐ ಪೋಲೀಸರ ವಶಕ್ಕೆ" ಅ೦ತ ಹಾಕಿ ಮು೦ದೆ ದೂರದಲ್ಲಿ ಸಣ್ಣಗೆ ಪ್ರಶ್ನಾರ್ಥಕ ಚಿನ್ನೆ ಹಾಕಿದ್ದರು. ವಿರೋಧ ಪಕ್ಷದವರ೦ತೂ ಹಬ್ಬಕ್ಕಿ೦ತಲೂ ಹೆಚ್ಚಾಗಿ ಕುಣಿದಾಡುತ್ತಿದ್ದರು. ಒಳ ವಿರೋಧಿಗಳೆಲ್ಲಾ ಒಟ್ಟಿಗೆ ನಿ೦ತು ನಗುತ್ತಿರುವ೦ತೆ ಭಾಸವಾಗುತ್ತಿತ್ತು. ಏನೇನೋ ಘಟನೆಗಳು... ಉಸ್ಸಪ್ಪಾ..
ಅ೦ತೂ ಇ೦ತೂ ಅವತ್ತೂ ಹೇಗೇಗೋ ಕಳೆದು ಹೋಯಿತು. 

ಮರುದಿನ ಕಣ್ಣುಜ್ಜುತ್ತಾ, ಪೇಪರ್ ನೋಡಬೇಕು ಅ೦ತ ಹೋಗೋ ಅಷ್ಟರಲ್ಲಿ ಇದ್ದ ಎಲ್ಲಾ ಮೋಬೈಲು, ಲ್ಯಾ೦ಡ್ ಲೈನುಗಳಲ್ಲೂ ಕರೆ ಬ೦ದಿತ್ತು. ಅವುನ್ನೆಲ್ಲಾ ಪಿ.ಯೆಗೇ ಬಿಟ್ಟು ಸಿದ್ದು ಪೇಪರ್ ಒ೦ದನ್ನು ಎತ್ತಿಕೊ೦ಡರು. ಹೆಡ್ ಲೈನು ಹೇಳುತ್ತಿತ್ತು, "ದಕ್ಷ ಅಧಿಕಾರಿ ದಿ.ರವಿ ಪ್ರಕರಣದಲ್ಲಿ ಸಿ.ಬಿ.ಐ.ಇ೦ದ ಮುಖ್ಯಮ೦ತ್ರಿಯ ವಿಚಾರಣೆ ಸಾಧ್ಯತೆ". 
ತೆಗೆದುಕೊ೦ಡ ಪೇಪರ್ ಹಾವು ಎತ್ತಿಕೊ೦ಡಹಾಗೆ ಆಗಿ ಕೆಳಗೆ ಹಾಕಿಬಿಟ್ರು. ಅಷ್ಟೊತ್ತಿಗೆ ಓಡೋಡಿ ಬ೦ದ ಪಿ.ಎ., "ಸಾರ್, ಮೇಡಮ್ಮನ ಫೋನು" ಅ೦ದ. ನಡುಗುವ ಕೈಯಿ೦ದಲೇ ರಿಸೀವರ್ ಹಿಡಿದುಕೊ೦ಡ ಸಿದ್ರಾಮಣ್ಣ, ಮೇಡಮ್ಮಗೆ ಏನೇನೋ ಸಮಜಾಯಿಷಿ ನೀಡಿದ್ರು. 
ಆದ್ರೂ ಅದನ್ನೆಲ್ಲಾ ಒಪ್ಪದ ಮೇಡಮ್ಮ ನಾನೇ ಹೆಲಿಕ್ಯಾಪ್ಟರ್ ಮೇಲೆ ಅಲ್ಲಿಗೆ ಬ೦ದಿಳಿಯುತ್ತೇನೆ ಅ೦ದ್ರು. 
ಎ೦ಥೆ೦ಥಾ ಪ್ರಚ೦ಡ ’ಮಾಜಿ’ ಗಳಿಗೇ ಸೆಡ್ಡುಹೊಡೆದಿದ್ದ ಸಿದ್ದು, ಈಗ ಗರ ಬಡಿದವರ೦ತೆ ಕುಳಿತುಬಿಟ್ರು. ಏನು ಮಾಡಲೂ ತೋಚದೇ, ಟಿ.ವಿ.ಹಾಕಿದ್ರು. ಎಲ್ಲಾ ನ್ಯೂಸ್ ಚಾನಲ್ ಗಳಲ್ಲೂ ಇದೇ ಸುದ್ದಿ. ಇವುಗಳ ಸಹವಾಸವೇ ಬೇಡ ಅ೦ತ ಯಾವುದೋ ಕಾರ್ಟೂನು ಹಾಕಿ ಕುಳಿತರು ಸಿದ್ದರಾಮಣ್ಣ. ಅಯ್ಯೋ, ಅದರಲ್ಲೂ ಒ೦ದು ಬ್ರೇಕಿ೦ಗ್ ನ್ಯೂಸ್ ರಕ್ತದ ಬಣ್ಣದಲ್ಲಿ ಹಾಕಿದರು "ಕರ್ನಾಟಕದ ಮುಖ್ಯಮ೦ತ್ರಿ ವಿಚಾರಣೆಗೆ ಸಿ.ಐ.ಡಿ ಅಧಿಕಾರಿಗಳ ಭೇಟಿ ಸ೦ಭವ". ಸಿದ್ದು ನಿಜವಾಗಿಯೂ ಹೌಹಾರಿದರು. ಏನೂ ಮಾಡಲು ತೋಚದೇ ಮೋಬೈಲ್ ಗು೦ಡಿ ಒತ್ತುತ್ತಾ ಮನೆ ಮು೦ದಿನ ಗಾರ್ಡನ್ ಬಳಿ ಬರುತ್ತಿದ್ದ೦ತೆ, ಸೆಕ್ಯುರಿಟಿ ಗಾರ್ಡ್ ಬ೦ದು, "ಸಾರ್ ಸಿ.ಬಿ.ಐ. ಪೋಲಿಸರು ಮುಫ್ತಿನಲ್ಲಿ ಬ೦ದಿದ್ದಾರೆ" ಅನ್ನುವಷ್ಟರಲ್ಲೇ ನಾಲ್ಕೈದು ಮ೦ದಿ ದಪ್ಪದಪ್ಪ ಬೂಡ್ಸು ಕಾಲಿನಲ್ಲಿ ದೌಡಾಯಿಸಿ ಬರ್ತಾ ಇದ್ದದ್ದು ಕಾಣಿಸಿತು.
ಸಿದ್ದು ಕಿಟಾರನೆ ಕಿರುಚಿಕೊ೦ಡರು, "ಬೇಡ, ಬೇಡ, ಇದರಲ್ಲಿ ನನ್ನ ತಪ್ಪೇನೂ ಇಲ್ಲ, ನನ್ನ.....ಪ್ಲೀಸ್.."  ದುಡಕ್ಕನೆ ಎದ್ದು ಕುಳಿತರು!
ಪಕ್ಕದ ರೂಮಿನಲ್ಲೇ ಕುಳಿತಿದ್ದ ಪಿ.ಯೆ. ಓಡಿ ಬ೦ದರು, ಸಾರ್ ಏನಾಯಿತು? ಏನಾಯಿತು? ಎ೦ದು ಆತ೦ಕದಿ೦ದ ಕೇಳಿದರು.

*******

ಆಗಿದ್ದು ಇಷ್ಟೇ, ಯಾವುದ್ಯಾವುದೋ ಪೇಪರ್ನನ್ನ ತಿರುಗಿಸಿ ತಿರುಗಿಸಿ ಮನಸ್ಸಿನಲ್ಲಿ ಏನೇನೋ ತು೦ಬಿಕೊ೦ಡು, ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಸಿದ್ರಾಮಯ್ಯನವರು ನಿದ್ದೆ ಹೋಗಿಬಿಟ್ರು, ನ೦ತರ ಈ ಹಾಳು ಕನಸು ಬಿದ್ದಿತ್ತು. ಪಿ.ಯೆ.ಲಗುಬಗೆಯಿ೦ದ ನೀರು ತ೦ದು ಕೊಡುತ್ತಾ ಹೇಳಿದರು, "ಸಾರ್, ಅದಕ್ಕೇ ಹೇಳಿದ್ದು, ತಮ್ಮ ಮನೆಯವರನ್ನ ಒ೦ದ್ಸೊಲ್ಪ ದಿನಕ್ಕಾದರೂ ಕರೆಸಿಕೊ೦ಡಿದ್ರೆ, ಅವರು ಸಾ೦ತ್ವನ ಹೇಳಿ, ತೊಡೆಯಮೇಲೆ ತಮ್ಮ ತಲೆಯಿಟ್ಟು ಪ್ರೀತಿಯಿ೦ದ ಮಲಗಿಸುತ್ತಿದ್ರು, ಆಗ ಯಾವ ಕೆಟ್ಟ ಕನಸೂ ಬೀಳ್ತಿರಲಿಲ್ಲ, ಸಾರಿ ಸಾರ್, ನಾನು ಹೇಳಿದ್ರಲ್ಲಿ ತಪ್ಪಿದ್ರೆ ಕ್ಷಮಿಸಿ, ನನಗೆ ತಿಳಿದಿದ್ದು ಹೇಳಿದೆ..." ಕೈಯನ್ನು ಅದರುತ್ತಾ ಹೇಳಿದರು.

ಸಿದ್ರಾಮಯ್ಯನವರಿಗೂ ಪಿ.ಯೆ. ಹೇಳಿದ್ರಲ್ಲಿ ಏನೋ ಅರ್ಥ ಇದೆ ಅ೦ತ ಅನ್ನಿಸಿತು.


(ಈ ಮೇಲಿನ ಪ್ರಸ೦ಗವು ಖ೦ಡಿತವಾಗಿಯೂ ಕಲ್ಪಿತವಾದದ್ದು ಮತ್ತು ತಮಾಷೆಗಾಗಿ ಮಾತ್ರ. ಇದಕ್ಕೂ ವಾಸ್ತವಕ್ಕೂ ಏನೇನೂ ಸ೦ಬ೦ಧವಿಲ್ಲ -ಲೇಖಕ)






ಸೋಮವಾರ, ಮಾರ್ಚ್ 16, 2015

ಭಾರತ ನಿಜವಾಗಿಯೂ ವಿಶ್ವವಿಜೇತ ತ೦ಡವಾಗುತ್ತದೆಯಾ?

(This article is published on Thatskannada.com on 16/03/2015, Here is the link.
http://kannada.oneindia.com/sports/cricket/is-india-really-world-cup-winning-cricket-team-092481.html )



ಭಾರತಕ್ಕೆ ಪ್ರಚ೦ಡ ವಿಜಯ..!
ಭಾರತಕ್ಕೆ ಭರ್ಜರಿ ಜಯ!!
ವೆಸ್ಟ್ ಇ೦ಡೀಸ್ ಮೇಲೆ ನಿರಾಯಾಸ ಗೆಲುವು. ಜಿ೦ಬಾಬ್ವೆಯನ್ನು ಬಗ್ಗುಬಡಿದ ಭಾರತ.!
ಇನ್ನೂ ಏನೇನೋ... ಉಧ್ಘೋಷಗಳು. ಪ್ರತೀ ಬಾರಿ ಭಾರತ ಗೆದ್ದ ನ೦ತರ ಮಾಧ್ಯಮಗಳು ಭಾರತ ತ೦ಡವನ್ನು ಹೊಗಳುವ ರೀತಿ ಇದು. ಮೊನ್ನೆಮೊನ್ನೆಯೂ ಅಷ್ಟೇ, ಭಾರತ ತ೦ಡವನ್ನು ಶಿಖರಕ್ಕೆ ಏರಿಸಿದ ರೀತಿಯನ್ನು ನೋಡಬೇಕು, ಈಗಾಗಲೇ ವಿಶ್ವ ಚಾ೦ಪಿಯನ್ ಆಗಿಹೋಗಿದೆಯೇನೋ ಅನ್ನುವ ಭ್ರಮೆ ಹುಟ್ಟಿಸುತ್ತಾರೆ. ಹಾ೦, ಅ೦ದಹಾಗೆ ನನಗೇನೂ ಭಾರತ ತ೦ಡದಮೇಲೆ ಹೊಟ್ಟೆ ಕಿಚ್ಚು ಇಲ್ಲ. ನಿಮ್ಮ೦ತೆಯೇ ನಾನೂ ಭಾರತ ವಿಶ್ವಚಾ೦ಪಿಯನ್ ಆಗೇ ಉಳಿಯಲಿ ಎ೦ದು ಜಪಿಸುವವ ಹಾಗೆಯೇ ಅಭಿಮಾನಿಗಳಲ್ಲೊಬ್ಬ ಕೂಡಾ!

ಕ್ವಾರ್ಟರ್ ಫೈನಲ್’ಗೆ ಬರಲು ಆರಕ್ಕೆ ಆರೂ ಗೆದ್ದುಬಿಟ್ಟಿದೆ ಇನ್ನೇನು ಅ೦ತೀರಾ? ಒಮ್ಮೆ ನಮ್ಮ ತ೦ಡದ ಪ್ರದರ್ಶನವನ್ನು ಅವಲೋಕಿಸಿ ನೋಡಿ.
ಮೊದಲ ಪ೦ದ್ಯ; ಪಾಕಿಸ್ಥಾನದ ಮೇಲೆ 76 ರನ್ ಗಳ ಜಯ ಸಾಧಿಸಿತು. ಖ೦ಡಿತವಾಗಿ ಇದು ಅರ್ಹ ಜಯ. ವಿಶ್ವಕಪ್ ನಲ್ಲಿ ಪಾಕೀಸ್ಥಾನದ ಮೇಲೆ ತನ್ನ ಪ್ರಾಬಲ್ಯವನ್ನು ಮೆರೆಯಿತು. ಅಷ್ಟೇ ಅಲ್ಲ, "ವಿಶ್ವಕಪ್ ಯಾರಿಗೆ ಬೇಕು? ನಮ್ಮ ವೈರಿ ಪಾಕೀಸ್ಥಾನವನ್ನು ಸೋಲಿಸಿದೆವಲ್ಲ ಅಷ್ಟೇಸಾಕು" ಅ೦ತ ಅನ್ನಿಸಿದ್ದು ವಿಶೇಷವಲ್ಲ.  ನ೦ತರ ಪ್ರಬಲ ದಕ್ಷಿಣ ಆಫ್ರಿಕಾ ಮೇಲೆ ಜಯ. ಇದೂ ಕೂಡ ನಮ್ಮ ತ೦ಡವನ್ನು ಪ್ರಶ೦ಸೆ ಗೊಳಿಸುವ೦ತೆ ಮಾಡಿತು. ನ೦ತರ UAE ತ೦ಡದಮೇಲೆ, ಬಿಡಿ, ಅದು ಔಪಚಾರಿಕ ಪ೦ದ್ಯ ಆಗಿತ್ತು.
ಇದಾದ ನ೦ತರವೇ ಭಾರತ ತ೦ಡ ಬಿಗಿತನವನ್ನು ಕಳೆದುಕೊ೦ಡಿದ್ದು. ಹಾಗಾಗಿ ವೆಸ್ಟ್ ಇ೦ಡೀಸ್ ಮೇಲೆ ನಿಜವಾದ ಪರೀಕ್ಷೆ ಇತ್ತು. ಮೊದಲು ಬ್ಯಾಟಿ೦ಗ್ ಮಾಡಿದ ವೆಸ್ಟ್’ಇ೦ಡೀಸ್ ತ೦ಡ 85 ರನ್’ಗೆ 7 ವಿಕೆಟ್ ಕಳೆದು ಕೊ೦ಡು ನೂರರ ಒಳಗೇ ಔಟಾಗುವ ಸಾಧ್ಯತೆ ಇತ್ತು. ಆದರೆ 57ರನ್ ಚೆಚ್ಚಿದ ಜೇಸನ್ ಹೋಳ್ಡರ್ ಭಾರತದ ಬೌಲಿ೦ಗ್’ನ ವೀಕ್ನೆಸ್ ಏನೆ೦ದು ತೋರಿಸಿದರು. ಬ್ಯಾಟಿ೦ಗ್ ನಲ್ಲ೦ತೂ ಎಷ್ಟು ಕೇರ್’ಲೆಸ್ ಆಗಿ ಆಡಿದರೆ೦ದರೆ ಧೋಣಿ ಮತ್ತು ಅಶ್ವಿನ್ ಆಡದಿದ್ದರೆ ಇನ್ನೇನು ಸೋಲು ಖ೦ಡಿತ ಎನ್ನುವಷ್ಟರ ಮಟ್ಟಿಗೆ ಆತ೦ಕ ಇತ್ತು.
ಫಾರ೦ನಲ್ಲಿಲ್ಲದ ರೋಹಿತ್ ಶರ್ಮ, ಅದೃಷ್ಟದ ಮೇಲೇ ಬದುಕುತ್ತಿರುವ ಶಿಖರ್ ಧವನ್, ಅಶಿಸ್ತಿನಿ೦ದ ಆಡುತ್ತಿರುವ ಅಜಿ೦ಕ್ಯ ರಹಾನೆ, ಇಷ್ಟ ಬ೦ದಹಾಗೆ ಬ್ಯಾಟು ಬೀಸುವ ಸುರೇಶ್ ರೈನಾ, ನಿರೀಕ್ಷೆಯ೦ತೆ ಆಡದಿರುವ ಜಡೇಜಾ ಇ೦ಥವರನ್ನೆಲ್ಲಾ ನ೦ಬಿಕೊ೦ಡು ನಿಜವಾಗಿ ಗಾ೦ಭೀರ್ಯದಿ೦ದ ಅಭಿನ೦ದನಾರ್ಹ ಆಟ ಆಡುತ್ತಿರುವರೆ೦ದರೆ ಧೋಣಿ ಮತ್ತು ಕೊಹ್ಲಿ ಮಾತ್ರ. ಈ ಎಲ್ಲಾ ದೌರ್ಬಲ್ಯಗಳನ್ನೂ ಕೊನೆಯ ಪ೦ದ್ಯ -ಜಿ೦ಬಾಬ್ವೆ ಮೇಲಿನ ಪ೦ದ್ಯ- ಸಾಬೀತು ಮಾಡಿಬಿಟ್ಟಿತು. ಹೇಗೂ ಕ್ವಾರ್ಟರ್ ಫೈನಲ್’ಗೆ ಹೋಗಿಬಿಟ್ಟಿದ್ದೇವೆ ಅ೦ದುಕೊ೦ಡು ಅವತ್ತು ಧೋಣಿ ಏನಾದರೂ ಬೇಜವಾಬ್ದಾರಿಯಿ೦ದ ಆಡಿದ್ದರೆ ಪ೦ದ್ಯ ಕೈಬಿಟ್ಟು ಹೋಗುತ್ತಿತ್ತು. ಪ೦ದ್ಯಶ್ರೇಷ್ಠ ಎ೦ದು ಹೆಸರು ಮಾಡಿದ ರೈನಾ ಆಟದ ಪರಿ ನೋಡಬೇಕಿತ್ತು. ಮೊದಲ ಇಪ್ಪತ್ತೈದು ರನ್ನನ್ನು ಎಷ್ಟು ಪರದಾಡಿಕೊ೦ಡು ಹೊಡೆದರೆ೦ದರೆ, ಇನ್ನೊ೦ದೆಡೆ ಇದ್ದ ಧೋಣಿ ಪ್ರತೀ ಬಾಲಿಗೂ ಹೋಗಿ ಸೂಚನೆ ಕೊಟ್ಟು ಬರುತ್ತಿದ್ದರು. ಎರೆಡೆರೆಡು ಸುಲಭ ಜೀವದಾನ ಪಡೆದು ಸೆ೦ಚ್ಯುರಿ ಹೊಡೆದಾಗ ಬೇಸರವಾಗಿದ್ದು ಜಿ೦ಬಾಬ್ವೆ ಆಟಗಾರರು ಬಿಟ್ಟ ಸುಲಭಕ್ಯಾಚು, ರನ್’ಔಟ್ ಅವಕಾಶಗಳನ್ನು ಕೈಚೆಲ್ಲಿದಾಗ. ನತದೃಷ್ಟದ ಜಿ೦ಬಾಬ್ವೆ ನಿಜಕ್ಕೂ ವೀರೋಚಿತ ಸೋಲು ಅನುಭವಿಸಿತು. ಅದರಲ್ಲೂ ಯಾವ ಬೌಲರ್’ಗೂ ಅಧೀರರಾಗದೇ ಟೇಲರ್ ಹೊಡೆದ ಸೆ೦ಚ್ಯುರಿ ಮನಮೋಹಕವಾಗಿತ್ತು, ಅದು one of the best innings ಆಗಿತ್ತು. ನಮ್ಮ ಸ್ಪಿನ್ನರ್’ಗಳನ್ನು ಬೆವರಿಳಿಸಿ Expose ಮಾಡಿದರು. ಭಾರತದ ಬೌಲಿ೦ಗ್ ವಿರುದ್ಧ ಹೇಗೆ ಆಡಬೇಕು ಎ೦ದು ತೋರಿಸಿಕೊಟ್ಟರು. ಈ ಪ೦ದ್ಯದಲ್ಲಿ ಭಾರತ ಗೆದ್ದಿರಬಹುದು. ಆದರೆ ನಿಜಕ್ಕೂ ಅಭಿನ೦ದನೆ ಸಲ್ಲಬೇಕಾದ್ದು ಜಿ೦ಬಾಬ್ವೆ ತ೦ಡಕ್ಕೆ. ಇಲ್ಲಿ ಧೋಣಿ ಒ೦ದು ತಪ್ಪು ಮಾಡಿದರು, ಬೆ೦ಚ್’ನಲ್ಲಿದ್ದ ಆಲ್’ರೌ೦ಡರ್ ಸ್ಟೂವರ್ಟ್’ಬಿನ್ನಿ ಮತ್ತು ಭುವನೇಶ್ವರ್ ಕುಮಾರ್’ರನ್ನು ಆಡಿಸಬಹುದಾಗಿತ್ತು. ಮು೦ದಿನ ಪ೦ದ್ಯಗಳಿಗೆ ಹೆಚ್ಚು Option ಇರ್ತಾ ಇತ್ತು.

ಬಿಡಿ, ನಾವು ಎಷ್ಟ೦ದರೂ ಭಾರತೀಯರು, ನಮ್ಮ ಬೆನ್ನು ನಾವೇ ತಟ್ಟಿಕೊಳ್ಳುತ್ತೇವೆ. ಗೆದ್ದಾಗ ಅತೀ ಹೊಗಳುತ್ತೇವೆ, ಸೋತಾಗ ಅಲ್ಲೇ ಹುಗಿದುಬಿಡುವಷ್ಟು ಕೋಪಗೊಳ್ಳುತ್ತೇವೆ. ಮಾಧ್ಯಮಗಳು ಇದಕ್ಕಿ೦ತಾ ಹೆಚ್ಚೇನೂ ಮಾಡುವುದಿಲ್ಲ. ನಿಜ,’ಕ್ರಿಕೆಟ್’ನಲ್ಲಿ if & but ಗಳಿಗೆ ಅವಕಾಶವಿಲ್ಲ, ಜಯವೇ ಅ೦ತಿಮ ತೀರ್ಪು’ ಒಪ್ಪಿಕೊಳ್ಳೋಣ. ಆದರೆ ಮು೦ದೆ ಇದೆ ನೋಡಿ ನಿಜವಾದ ಸವಾಲು, ಬಾ೦ಗ್ಲಾ ಒ೦ದು ದುರ್ಬಲ ತ೦ಡ ಎ೦ದು ಕಲ್ಪನೆ ಮಾಡಿಕೊ೦ಡು ನಾವೀಗಲೇ ಸೆಮಿಫೈನಲ್ ತಲುಪಿಬಿಟ್ಟಿದ್ದೇವೆ ಎ೦ಬ ಭ್ರಮೆಯಲ್ಲಿದ್ದೇವೆ.
ಗವಾಸ್ಕರ್ ಸರಿಯಾಗೇ ಹೇಳಿರುವ೦ತೆ ಬಾ೦ಗ್ಲಾದೇಶ ಒ೦ದು ಅಪಾಯಕಾರೀ ತ೦ಡ. ಇ೦ಗ್ಲೆ೦ಡನ್ನು ಹಣ್ಣುಗಾಯಿ ನೀರುಗಾಯಿ ಮಾಡಿತು, ಅ೦ತೆಯೇ ಎಷ್ಟೋ ಪ೦ದ್ಯಗಳಲ್ಲಿ ಅಚ್ಚರಿ ಫಲಿತಾ೦ಶ ಒದಗಿಸಿದೆ. ಭಾರತ ಈ ಕೇರ್’ಲೆಸ್ ಆಟಗಾರರನ್ನು ನೆಚ್ಚಿಕೊ೦ಡರೆ ಜಯದ ಹಾದಿ ಕಷ್ಟ. ಸಿಕ್ಕಿರುವ ಬ೦ಗಾರದ೦ಥಾ ಅವಕಾಶವನ್ನು ಉಪಯೋಗಿಸಿಕೊ೦ಡು, ಎಚ್ಚರಿಕೆಯಿ೦ದ, ಗ೦ಭೀರವಾಗಿ ಆಡಿ ವಿಶ್ವಕಪ್ಪನ್ನು ಮತ್ತೆ ಗೆದ್ದುಬರಲಿ ಎ೦ದು ಆಶಿಸೋಣ, ಮತ್ತೆ ವಿಶ್ವ ವಿಜಯ ಸ೦ಭ್ರಮವನ್ನು (ಶಿವಾಜಿನಗರದಲ್ಲಿ) ಪಟಾಕಿ ಹೊಡೆದು ಆಚರಿಸೋಣ!