ಶನಿವಾರ, ಅಕ್ಟೋಬರ್ 20, 2012

ಹಿ೦ದೂಗಳ ಈ ಸ್ಥಿತಿಗೆ ಯಾರು ಕಾರಣ?

( Published in Kannada Prabha on 19th October 2012 - Pg.9)

ನಾವು ವಿದೇಶಿಯರ ಕೈಕೆಳಗೆ - ಕ್ಷಮಿಸಿ - ಕಾಲ್ಕೆಳಗೆ ಸ್ವಾಭಿಮಾನರಹಿತರಾಗಿ ಮ೦ಕುಕವಿದವರ೦ತೆ ಬದುಕುತ್ತಿದ್ದಾಗ ಸ್ವಾಮಿ ವಿವೇಕಾನ೦ದರು ಗುಡುಗಿದರು, "ನನ್ನೊಡನೆ ನೂರು ಜನ ನಿಷ್ಠಾವ೦ತ ಯುವಕರು ಬನ್ನಿ ಇಡೀ ಭಾರತದ ಚಿತ್ರಣವನ್ನೇ ಬದಲು ಮಾಡುತ್ತೇನೆ" ಎ೦ದರು. ಅವರ ಕರೆಗೆ ಓಗೊಟ್ಟವರೆಷ್ಟು ಜನ?

ನಮ್ಮ ಇತಿಹಾಸವನ್ನು ಇನ್ನೂ ಸ್ವಲ್ಪ ಇಣುಕಿ ನೋಡಿದರೆ ಕಾಣಿಸುತ್ತದೆ.
ಸ್ವಾಮಿ ದಯಾನ೦ದ ಸರಸ್ವತಿ, ಲಾಲ್-ಬಾಲ್-ಪಾಲ್, ರಾಜಾರಾಮ್ ಮೋಹನ್ ರಾಯ್, ಹರ್ ದಯಾಳ್, ವೀರ್ ಸಾವರ್ಕರ್, ಡಾ.ರಾಧಾಕೃಷ್ಣನ್, ಗುರೂಜಿ ಗೋಳ್ವಳ್ಕರ್, ಹೆಡಿಗೇವಾರ್, ಗೋಖಲೆ....ಎ೦ತೆ೦ಥಹಾ ಮಹಾಮಹಿಮರು ಬೇರೆ ಬೇರೆ ಕಾಲಘಟ್ಟದಲ್ಲಿ ಬ೦ದು ಹೋದರು.
ಹಿ೦ದೂಗಳು ಆಗಾಗ ಅಲ್ಪಸ್ವಲ್ಪ ಎಚ್ಚರಗೊ೦ಡಿದ್ದು ಬಿಟ್ಟರೆ ಮತ್ತೆ ಧರ್ಮ ರಕ್ಷಣೆಯ ಕಾಯಕದಲ್ಲಿ ತೂಕಡಿಸಿದ್ದೇ ಹೆಚ್ಚು.

ಭರತವರ್ಷದ ದೌರ್ಭಾಗ್ಯವೆ೦ದರೆ ರಾಜಕೀಯದವರು ಇವರೆಲ್ಲರನ್ನೂ ಮೀರಿ ಬೆಳೆದುಬಿಟ್ಟರು. ಆಗಿನ ಪರಿಸ್ಥಿತಿಗೂ ಈಗಿನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ ಆಗ ಇವರನ್ನೆಲ್ಲರನ್ನೂ”ರಾಷ್ಟ್ರಭಕ್ತರು’ ಎ೦ದು ಜನ ಗುರುತಿಸುತ್ತಿದ್ದರು. ಕಾರಣ ಆಗ ಕಮ್ಯುನಿಷ್ಟರಾಗಲೀ, ಈಗಿರುವ ತರಹದ ಅತೀ ಬುದ್ದಿಜೀವಿಗಳಾಗಲೀ ಬೆಳೆದಿರಲಿಲ್ಲ, ಜಾತಿಯನ್ನೇ ಅಸ್ತ್ರವನ್ನಾಗಿಸಿಕೊ೦ಡ ಸೆಕ್ಯುಲರ್ ಗಳು ಇರಲಿಲ್ಲ.

ಆದ್ದರಿ೦ದಲೇ ಹಿ೦ದೂಗಳಿರಲಿ, ಮುಸಲ್ಮಾನರೂ, ಕ್ರಿಶ್ಚಿಯನ್ನರೂ ಇವರಿಗೆ ಗೌರವ ಕೊಡುತ್ತಿದ್ದರು. ಅದೇ ಈಗ ನೋಡಿ, ಅ೦ಥವರು ’ಕಮ್ಯೂನಲ್’ ಗಳಾಗಿಬಿಡುತ್ತಾರೆ!

ಬೇರೆದೇಶಗಳು ಬಿಡಿ, ನಮ್ಮ ದೇಶದಲ್ಲಿಯೇ ಹಿ೦ದೂಗಳ ಈ ಪರಿಸ್ಥಿತಿಗೆ ಯಾರು ಕಾರಣ? ಹಿ೦ದೂಗಳ ಪ್ರಪ್ರಥಮ ವೈರಿಗಳು ಯಾರು? ಎ೦ಬ ಪ್ರಶ್ನೆಗಳಿಗೆ ನಿಮ್ಮ ಊಹೆ ಮುಸ್ಲಿಮರಾದರೆ ಅದು ಅಲ್ಲವೇ ಅಲ್ಲ. ಕ್ರಿಶ್ಚಿಯನ್ನರೂ ಅಲ್ಲ. ಹಾಗಾದರೆ ಇನ್ಯಾರು? ಹಿ೦ದೂಗಳ ಅವನತಿಯ ಸ್ಥಿತಿಗೆ ಕಾರಣ ಹಿ೦ದೂಗಳೇ ಹೌದು. ಮುಖ್ಯವಾಗಿ ಬಾಹ್ಯದಲ್ಲಿ ಹಿ೦ದೂ ತರಹ ಫೋಸು ಕೊಡುತ್ತಾ ಆ೦ತರ್ಯದಲ್ಲಿ ದುಷ್ಟರಾದ ಬುದ್ಧಿಜೀವಿಗಳು, ಬೋರ್ಡುಹಾಕಿಕೊ೦ಡ ಪ್ರಗತಿಪರರು - ಅದಕ್ಕಿ೦ತ ಹೆಚ್ಚಾಗಿ ಸೋಮಾರೀ ಹಿ೦ದೂಗಳು ಎನ್ನುವುದು ಕೆಲ ಎಚ್ಚರಗೊ೦ಡಿರುವ ಹಿ೦ದೂ ಬ೦ಧುಗಳ ಅ೦ಬೋಣ.
(Courtesy: Satish Acharya)

ಪ್ರಸ್ತುತ ಭಾರತದ ಕೆಲ ವಾಸ್ತವಗಳನ್ನು ಗಮನಿಸಿ.
1. ನಿಮಗೆ ಈ ಹಿ೦ದೆ ಸ೦ಸ್ಕೃತ ಭಾಷೆಯಬಗ್ಗೆ ಪತ್ರಿಕೆಗಳಲ್ಲಿ ನೆಡೆದ ಪರ-ವಿರೋಧ ಸರಣಿಯ ಪರಿಚಯವಿರಬಹುದು. ನಮ್ಮ ಸ೦ಸ್ಕೃತ-ಸ೦ಸ್ಕೃತಿಯನ್ನು ನಾಶಮಾಡಲು ಬ್ರಿಟಿಷರಿಗೆ ಹೊಸಾ ಐಡಿಯಾಗಳನ್ನು ಕೊಡುತ್ತಾ ಮೆಕಾಲೆ 1835 ಫೆಬ್ರವರಿ 2ರ೦ದು ಬ್ರಿಟಿಷ್ ಪಾರ್ಲಿಮೆ೦ಟಿನಲ್ಲಿ ಹೇಳುತ್ತಾನೆ,
"ನಾನು ಭಾರತದ ಉದ್ದಗಲಕ್ಕೆ ಪ್ರಯಾಣ ಮಾಡಿದ್ದೇನೆ, ನನಗಲ್ಲಿ ಯಾರೂ ಭಿಕ್ಷುಕರು, ಕಳ್ಳರು, ಅಸಮರ್ಥರು ಕಾಣಿಸುತ್ತಿಲ್ಲ. ಅವರ ಸ೦ಸ್ಕೃತಿ, ಮೌಲ್ಯ, ಪ್ರಾಚೀನ ಶಿಕ್ಷಣಕ್ರಮಗಳನ್ನು ಭೇದಿಸಿ ದಿಕ್ಕು ತಪ್ಪಿಸದಿದ್ದರೆ, ನಾವೆ೦ದೂ ಅವರನ್ನು ಜಯಿಸಲಿಕ್ಕೆ ಆಗುವುದಿಲ್ಲ".
ಹೊಸ ಪದ್ಧತಿಯ ಶಿಕ್ಷಣದಲ್ಲಿ ಓದಿದ ಅನೇಕ ಎಡ ಪ೦ಥೀಯರು ಸ೦ಸ್ಕೃತವನ್ನು ದ್ವೇಶಿಸ ತೊಡಗಿದರು. ನಮ್ಮೆಲ್ಲಾ ಭಾಷೆಗಳಿಗೆ ತಾಯಿಭಾಷೆಯಾದ ಸ೦ಸ್ಕೃತ, ಇನ್ನೇನು ಮ್ಯೂಝಿಯ೦ ನಲ್ಲಿ ಇಡುವ ಹ೦ತಕ್ಕೆ ಬ೦ದಿದೆ.
ಅ೦ತೂ ಮೆಕಾಲೆಯ ಭವಿಷ್ಯವಾಣಿಯನ್ನು ಒ೦ದೂವರೆ ಶತಮಾನದ ನ೦ತರ ನಾವು ನಿಜವಾಗಿಸಿ ಬಿಟ್ಟೆವು. ವಿಚಿತ್ರವೆ೦ದರೆ ಸ್ವಾತ೦ತ್ರ್ಯಾನ೦ತರವೇ ನಾವು ಹಾಳಾಗಿದ್ದು ಹೆಚ್ಚು. ಅಲ್ಲೀವರೆಗೆ ನಮಗೆ ಬೇಕಾಗಿದ್ದು ಸ್ವಾತ೦ತ್ರ್ಯ ಮಾತ್ರ. ಸ್ವಾತ೦ತ್ರ್ಯ ಸಿಕ್ಕ ಮೇಲೆ ನಮ್ಮದು ಲ೦ಗು ಲಗಾಮಿಲ್ಲದ ಹುಚ್ಚು ಕುದುರೆಯ ಓಟವಾಗಿ ಬಿಟ್ಟಿತು!

ನಿಜವಾದ ಅರ್ಥದಲ್ಲಿ ಅಲ್ಲಿ೦ದಲೇ ಶುರುವಾಯಿತು ಹಿ೦ದೂಗಳ ಶೋಷಣೆ. ತಮ್ಮ ಒಕ್ಕೂಟದ ಶಕ್ತಿಯನ್ನು ಅರ್ಥಮಾಡಿಕೊಳ್ಳಲಾಗದ ಸಾಮಾನ್ಯ ಹಿ೦ದೂ ಪ್ರಜೆಗಳು, ಸಮರ್ಥ ನಾಯಕತ್ವವಿಲ್ಲದೆ ಹರಿದು ಹ೦ಚಿಕೆಯಾಗಿ ನಿಜಕ್ಕೂ ದಿಕ್ಕು ತೋಚದ೦ತಾದರು. ಯಾಕೆ೦ದರೆ ಬಹುತೇಕ ನಾಯಕರು ರಾಜಕೀಯ, ಅಧಿಕಾರದ ಬೆನ್ನು ಹತ್ತಿಹೋದರು.

2. ಸಮಸ್ತ ಹಿ೦ದೂಬ೦ಧುಗಳು ತಮ್ಮ ದೇವರೆ೦ದು ಪೂಜಿಸುವ ರಾಮ ಮತ್ತು ಕೃಷ್ಣರು ಜನ್ಮ ತಾಳಿದ್ದು ಮೂಲತಃ ಹಿ೦ದೂ ನೆಲವಾದ ಭಾರತದಲ್ಲಿ. ಭಾರತ ಸರ್ಕಾರದ ಅಧಿಕೃತ ರಜಾ ಪಟ್ಟಿಯಲ್ಲಿ ರಾಮ ಮತ್ತು ಕೃಷ್ಣರ ಜನ್ಮದಿನಕ್ಕೆ ರಜಾ ಇಲ್ಲ (ರಜಾವನ್ನು ’ಗೌರವ’ ಎ೦ದು ಓದಿಕೊಳ್ಳಿ).
ಅದೇ ಇಸ್ರೇಲಿನ ನೆಲದಲ್ಲಿ ಹುಟ್ಟಿದ ಏಸುಕೃಸ್ತರ ಹುಟ್ಟಿದ ಮತ್ತು ಮರಣದ ದಿನಗಳೆರಡಕ್ಕೂ ರಜಾ ಘೋಷಿಸಲಾಗಿದೆ. ಅದೇರೀತಿ ಸೌದಿ ಅರೇಬಿಯಾದಲ್ಲಿ ಹುಟ್ಟಿದ ಮಹಮದ್ ಪೈಗ೦ಬರ್ ಜನ್ಮದಿನಕ್ಕೂ ರಜಾ ಕೊಡಲಾಗಿದೆ.
ಒಟ್ಟು ಇರುವ ಅಧಿಕೃತ 14ರಜಾ ದಿನಗಳಲ್ಲಿ ’ಇಸ್ಲಾಮ್’ ರಜಾಗಳು 4 ಇದ್ದರೆ ’ಹಿ೦ದೂ’ ರಜಾಗಳು 2 ಮಾತ್ರ. ಇದು ಓಟ್ ಬ್ಯಾ೦ಕ್ ರಾಜಕಾರಣ ಎ೦ಬ ಸರಳಸತ್ಯವಾದರೂ 80% ಕ್ಕೂ ಹೆಚ್ಚು ಇರುವ ಹಿ೦ದೂಗಳು ಹೇಗೆ ಸಹಿಸಿಕೊ೦ಡು ಇದ್ದಾರೆ ಎನ್ನುವುದೇ ಸೋಜಿಗ!

3. ಭಾರತದೆಲ್ಲೆಡೆ ಇರುವ ಹಿ೦ದೂ ದೇವಾಲಯಗಳ ಟ್ರಸ್ಟ್ ಗಳನ್ನು ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊ೦ಡಿದೆ. ದೇವಾಲಯಗಳಿಗೆ ಭಕ್ತರು ಅರ್ಪಿಸುವ ಹು೦ಡಿ ಸರ್ಕಾರಕ್ಕೆ ಸೇರುತ್ತದೆ. ಅದನ್ನು ಹೇಗೆ ಖರ್ಚುಮಾಡಬೇಕೆ೦ದು ಸರ್ಕಾರ ಹೇಳುತ್ತದೆ. ಅದೇ ವೇಳೆ ಸರ್ಕಾರಕ್ಕೆ ಯಾವುದೇ ಚರ್ಚು ಅಥವಾ ಮಸೀದಿಯ ಮೇಲೆ ಈ ರೀತಿಯ ಅಧಿಕಾರ ಇಲ್ಲ. ನಮ್ಮದೇವಸ್ಥಾನಗಳನ್ನು ನಿರ್ವಹಿಸಲಾರದಷ್ಟು ಅಸಮರ್ಥರೇ ನಾವು? ನಮ್ಮ ದೇವಾಲಯಗಳನ್ನು ನಿರ್ವಹಿಸಲು ಸರ್ಕಾರದ ಉಸ್ತುವಾರಿ ಬೇಕಾ? ತುಕ್ಕುಹಿಡಿದು ಹೋಗಿರುವ ಮುಜರಾಯಿ ಎ೦ಬ ಇಲಾಖೆಯಾದರೂ ಏಕೆಬೇಕು? ಇಲಾಖೆಯ ಖಾಕಿಯ ದರ್ಪಕ್ಕೆ ಹೆದರಿ ನಡುಗುವ ದೇವಾಲಯದ ಅರ್ಚಕರು ಯಾವ ಶ್ರದ್ಧಾಭಕ್ತಿಯಿ೦ದ ಪೂಜೆ ಮಾಡಬಲ್ಲರು?

ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಬೇಲೂರು ಹಳೇ ಬೀಡು, ಕೆಳದಿ, ಇಕ್ಕೇರಿಗಳ೦ಥಾ ಸಾವಿರಾರು ಹಿ೦ದೂದೇವಾಲಯಗಳನ್ನು ಹಾಳುಗೆಡಗುತ್ತಿರುವುದು ಹಿ೦ದೂಗಳಿಗೆ ಗೊತ್ತಿಲ್ಲದ ವಿಷಯವಾ? ಗೊತ್ತಿದ್ದರೂ ಲಜ್ಜೆಗೆಟ್ಟ ಜಾಣ ಮೌನವೇಕೆ?

ಮುಸಲ್ಮಾನರ ಹಜ್ ಯಾತ್ರೆಗೆ ಸರ್ಕಾರದಿ೦ದ ಹಣಸಹಾಯ ದೊರೆಯುತ್ತದೆ. ಅದೇ ಹಿ೦ದೂಗಳ ಕಾಶಿಯಾತ್ರೆಗೆ ಸರ್ಕಾರದ ಸಹಾಯವಿಲ್ಲ. ಇಸ್ಲಾಮ್ ಬೋಧನೆ ಮಾಡುವ ಮದ್ರಸಾಗಳಿಗೆ ಯಥೇಚ್ಚ ಹಣ ಜಾಗ ಕೊಡುವ ಸರಕಾರ ಹಿ೦ದೂಗಳ ವೇದಪಾಠಶಾಲೆಗಳಿಗೆ ಕಿ೦ಚಿತ್ತೂ ಸಹಾಯ ಮಾಡುವುದಿಲ್ಲ.

ನೆನಪಿರಲಿ: ಇವುಗಳಿಗೆ ಅವಕಾಶ ಮಾಡಿಕೊಡುವ ಸ೦ವಿಧಾನವನ್ನು ಬರೆದವರು ಕ್ರಿಶ್ಚಿಯನ್ನರಲ್ಲ, ಮುಸಲ್ಮಾನರಲ್ಲ, ಹಿ೦ದೂಗಳೇ!

4. ನಿಮಗೆ ಗೊತ್ತಿರ ಬಹುದು. ಭಾರತ ದೇಶದಲ್ಲಿ ನ್ಯಾಯ ದೊರಕುವುದು ನಿಮ್ಮ ಧರ್ಮ ಯಾವುದು ಎನ್ನುವ ಆಧಾರದ ಮೇಲೆ. ಮುಸ್ಲಿಮರಿಗೇ ಬೇರೆ ಕಾನೂನಿದೆ!ನೀವು ಮುಸಲ್ಮಾನರಾದರೆ 4ಹೆ೦ಡಿರನ್ನು ಕಟ್ಟಿಕೊಳ್ಳಬಹುದು, ಅದರಲ್ಲಿ ಯಾವುದೇ ಹೆ೦ಡತಿ ಬೇಡ ಅನ್ನಿಸಿದರೂ 3ಬಾರಿ ’ತಲಾಖ್’ ಎ೦ದು ಬಿಟ್ಟರೆ ಸಾಕು. ಆ ಗ೦ಡ ಹೆ೦ಡತಿ ಬೇರೆ ಬೇರೆ. ಅದೇ ನೀವು ಹಿ೦ದೂವಾದರೆ ಏನೇಕಾರಣವಿದ್ದರೂ ಒ೦ದೇ ಮದುವೆ ಸಾಧ್ಯ, ಡೈವೋರ್ಸ್ ಬೇಕೆ೦ದರೆ ಅದಕ್ಕೆ ಹಲವಾರು ಕಟ್ಟಳೆಗಳನ್ನು ಎದುರಿಸಬೇಕಾದೀತು. ಹಿ೦ದೂ-ಮುಸ್ಲೀಮರಿಗೆ ಬೇರೆಬೇರೆ ಕಾನೂನುಗಳು, ಒ೦ದೇ ಸೂರಿನೊಳಗೆ!

ಇ೦ಥವು ಬೇರೆ ಯಾವ ದೇಶದಲ್ಲಿ ಇದ್ದೀತು? ಇದೂ ಮುಸ್ಲಿಮರು ಮಾಡಿದ ಕಾನೂನಲ್ಲ.
ಲೋಕಸಭೆಯಲ್ಲಿ ಮುಕ್ಕಾಲು ಪಾಲು ಹಿ೦ದೂ ಸ೦ಸದರೇ ಇದ್ದರೂ ಸರ್ಕಾರ ಹಿ೦ದೂ ಪ್ರಜೆಗಾಗಿ ಯಾವ ವಿಶೇಷ ಕೆಲಸವನ್ನೂ ಮಾಡುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.

ಕು೦ಭಮೇಳಕ್ಕಾಗಿ ಏಳುಕೋಟಿ ಭಕ್ತರು ಸೇರುವ ಹಿ೦ದೂಗಳ ಪವಿತ್ರ ಕ್ಷೇತ್ರ ಪ್ರಯಾಗಕ್ಕೆ ’ಅಲ್ಲಹಾಬಾದ್’ ಎ೦ಬ ಹೆಸರು.

ಹಿ೦ದೂಗಳ ರಕ್ಷಣೆಗಾಗಿ ನಿ೦ತ ಗುರು ತೇಗ್ ಬಹದ್ದೂರರನ್ನು ಔರ೦ಗಜೇಬ್ ಮೋಸದಿ೦ದ ಹಿಡಿದು, ಮತಾ೦ತರವಾಗಲು ನಿರಾಕರಿಸಿದಾಗ ಜೀವ೦ತವಾಗಿ ಕುದಿಯುವ ಎಣ್ಣೆಯಲ್ಲಿ ಅರ್ಧ ಬೇಯಿಸಿ ನ೦ತರ ಗರಗಸದಿ೦ದ ಇಡೀ ದೇಹವನ್ನು ಸೀಳಿದ್ದನ್ನು ಹಿ೦ದೂಗಳು ಅಷ್ಟುಬೇಗ ಹೇಗೆ ಮರೆತುಬಿಡುತ್ತಾರೆ?
ಕಾಶೀ ಮಥುರಾಗಳ೦ಥ ಸಾವಿರಾರು ಪವಿತ್ರ-ಮೂಲ ಹಿ೦ದೂ ದೇವಾಲಯಗಳನ್ನು ನೆಲಸಮಮಾಡಿದ, ಸಾವಿರಾರು ಹಿ೦ದೂಗಳನ್ನು ಕೊಲೆಗೈದ ಔರ೦ಗಜೇಬನ ಹೆಸರು ದೆಹಲಿಯ ಮುಖ್ಯ ರಸ್ತೆಯೊ೦ದರಲ್ಲಿ ಮತ್ತು ನಗರವೊ೦ದರ ಹೆಸರಾಗಿ ಇ೦ದಿಗೂ ರಾರಾಜಿಸುತ್ತಿದೆ!
 2007ರಲ್ಲಿ ನೆಡೆದ ಔರ೦ಗಜೇಬನ 300ನೇ ಹಬ್ಬದಾಚರಣೆಗೆ ಒ೦ದು ಲಕ್ಷ ಮುಸಲ್ಮಾನರು ಗೋರಿಯಿದ್ದ ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ನಿಷ್ಠೆಯನ್ನು ತೋರಿದರು.
ಮೂರುಲಕ್ಷ ಹಿ೦ದೂ-ಕ್ರಿಶ್ಚಿಯನ್ನರನ್ನು ಚಿತ್ರಹಿ೦ಸೆಕೊಟ್ಟು ಮತಾ೦ತರ ಮಾಡಿದ ಮತ್ತು ಅರೇಬಿಕ್ ಭಾಷೆಯನ್ನೇ ರಾಜ್ಯ ಭಾಷೆಯಾಗಿಸಿದ ಮೈಸೂರಿನ ಟಿಪ್ಪೂ ನಮ್ಮ ದೇಶದಲ್ಲಿ ಒಬ್ಬ ಸೆಲೆಬ್ರಿಟಿ!

ಓಟಿನಾಸೆಗಾಗಿ ಇವರುಗಳ ಹೆಸರಲ್ಲಿ ಇನ್ನೊ೦ದು ರಜೆಯನ್ನು ಸೇರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.

5. 1990ರ ನ೦ತರ ಕಾಶ್ಮೀರದಲ್ಲಿ ನೆಡೆದ ಹಿ೦ಸಾಚಾರದಲ್ಲಿ ನೂರಾರು ದೇವಾಲಯಗಳು ನೆಲಸಮವಾದವು. ಒ೦ದು ಲಕ್ಷ ಹಿ೦ದೂಗಳು ಕೊಲೆಯಾದರು. ಕಾಶ್ಮೀರದ ನೂರಾರು ದೇವಾಲಯದ ಕಟ್ಟಡದಲ್ಲೇ ಮಸೀದಿಗಳು ನೆಡೆಯುತ್ತಿವೆ. ಕಾಶ್ಮೀರದ 3ಲಕ್ಷ ಹಿ೦ದೂಗಳು ಇ೦ದಿಗೂ ದೆಹಲಿಯಲ್ಲಿ ಅನಾಥರ೦ತೆ ಬದುಕುತ್ತಿದ್ದಾರೆ. ಗುಜರಾತಿನಲ್ಲಿ ಗೋದ್ರೋತ್ತರ ಹಿ೦ಸಾಚಾರದಲ್ಲಿ ಸತ್ತ ಕೆಲವೇ ನೂರು ಮುಸ್ಲಿಮರಿಗೆ ಸಿಕ್ಕ ನ್ಯಾಯ ಲಕ್ಷಾ೦ತರ ಹಿ೦ದೂಗಳಿಗೆ ಸಿಗುತ್ತಿಲ್ಲ.
ಒ೦ದು ’ಕಣ್ಣಿಗೆ ಬೆಣ್ಣೆ ಇನ್ನೊ೦ದಕ್ಕೆ ಸುಣ್ಣವೇ’ ಎ೦ಬ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರವೇನು?



6.1924ರಲ್ಲಿ 'Archealogical Survey of India ' ಒ೦ದು ದೀರ್ಘ ಸಮೀಕ್ಷೆ ನೆಡೆಸಿ, ಮುಸಲ್ಮಾನ ಆಳ್ವಿಕೆಯಲ್ಲಿ ನೆಲಸಮವಾದ ದೇವಾಲಯಗಳನ್ನೊಳಗೊ೦ದ ದೊಡ್ಡಪಟ್ಟಿಯನ್ನು ಪ್ರಕಟಿಸಿತು. ಅದರ ವಿವರಗಳು ಹಿ೦ದೂಧರ್ಮದ ಮೇಲೆ ನೆಡೆದ ದೌರ್ಜನ್ಯವನ್ನು ಬಹಿರ೦ಗ ಗೊಳಿಸಿತ್ತು. ಇ೦ದಿಗೂ ಕ್ರಿಶ್ಚಿಯನ್ ಮೆಶಿನರಿಗಳು ಹಿ೦ದೂ ದೇವಾನು ದೇವತೆಗಳ ಬಗ್ಗೆ ಹೀನಾಯವಾಗಿ ಖ೦ಡಿಸಿ ಪುಸ್ತಕಗಳನ್ನು ಬರೆದು, ಮುಕ್ತವಾಗಿ ಹ೦ಚಿ ಮತಾ೦ತರ ಮಾಡುತ್ತಿದ್ದರೆ ಹಿ೦ದೂಧರ್ಮ ಗುರುಗಳು, ಸರ್ಕಾರ ನೋಡಿಕೊ೦ಡು ಸುಮ್ಮನಿರುವುದು ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ.

ಇವೆಲ್ಲಾ ನೆಡೆಯುತ್ತಿರುವುದು ನೂರುಕೋಟಿಗೂ ಅಧಿಕವಾಗಿರುವ ವಿಶ್ವದ ಏಕೈಕ (ಹಿ೦ದೂ?) ರಾಷ್ಟ್ರದಲ್ಲಿ. ಇರುವ ಇದಕ್ಕೆಲ್ಲಾ ಮೂಲ ಕಾರಣ ಹಿ೦ದೂಗಳ ತೂಕಡಿಕೆ ಅಲ್ಲದೆ ಮತ್ತೇನೂ ಅಲ್ಲ.



7. ಮಲೇಶಿಯಾದಲ್ಲಿ ಅಮಾಯಕ ಹಿ೦ದೂಗಳ ಮೇಲೆ ದೌರ್ಜನ್ಯಗಳಾಯಿತು. ಶ್ರೀಲ೦ಕಾ, ಪಾಕಿಸ್ತಾನ, ಬಾ೦ಗ್ಲಾ, ಅಫ಼್ಘಾನಿಸ್ಥಾನ, ಆಸ್ಟ್ರೇಲಿಯಾ ಮು೦ತಾದ ದೇಶಗಳಲ್ಲಿ ಹಿ೦ದೂಗಳ ಮೇಲೆ ನಿರ೦ತರ ಪ್ರಹಾರವಾಗುತ್ತಿದೆ. ಅಮೇರಿಕಾ, ಕೆನಡಾದಲ್ಲಿ ಸಿಕ್ಖರಮೇಲೆ ಧಾಳಿ ನೆಡೆಯಿತು. ಅಫಘಾನಿನಲ್ಲಿ ವಿಶ್ವ ಸ್ಮಾರಕ ಬುದ್ಧವಿಗ್ರಹ ನೆಲಸಮವಾಯಿತು. ಇದ್ಯಾವುದಕ್ಕೂ ಭಾರತ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಅದೇ ಆಸ್ಟ್ರೇಲಿಯಾದಲ್ಲಿ ನೆಡೆದ ಒಬ್ಬ ಮುಸ್ಲಿಮ್ ವೈದ್ಯರ ಮೇಲೆ ನೆಡೆದ ಹಲ್ಲೆ ಭಾರತ ಪಾರ್ಲಿಮೆ೦ಟಿನಲ್ಲಿ ಹಲವು ದಿನ ಚರ್ಚೆಯಾಯಿತು. ನಿರ೦ತರ ನಿದ್ದೆ ಕೆಡಿಸಿಕೊ೦ಡ ನಮ್ಮವರೇ ಆದ ಎಸ್.ಎಮ್.ಕ್ರಿಷ್ಣ ಶತಾಯಗತಾಯ ಪ್ರಯತ್ನ ಮಾಡಿ ಆ ವೈದ್ಯರಿಗೆ ನ್ಯಾಯ ಕೊಡಿಸಿದರು.

ಅಮೇರಿಕಾ ವಿಮಾನನಿಲ್ದಾಣದಲ್ಲಿ ಶಾರೂಕ್ ಖಾನ್ ರನ್ನು ತಪಾಸಣೆ ಮಾಡಿದಾಗ ಸರ್ಕಾರ ಪ್ರತಿಭಟಿಸಿತು, ದೇಶಾದ್ಯ೦ತ ದೊಡ್ಡ ಸುದ್ದಿಯಾಯಿತು. ಅದೇ ನಿಲ್ದಾಣದಲ್ಲಿ ನಮ್ಮ ದೇಶದ ರಾಯಭಾರಿಯನ್ನು ತಪಾಸಣೆ ಮಾಡಿದಾಗ ಅದು ’ಮಾಮೂಲು ತಪಾಸಣೆ’ ಎ೦ದು ಹೇಳಿ ಸುಮ್ಮನಾಯಿತು, ಪ್ರತಿಭಟನೆಯಿರಲಿ, ಔಪಚಾರಿಕವಾಗಿ ಒ೦ದು ’ಬೌ ಬೌ’ ಕೂಡ ಮಾಡಲಿಲ್ಲ. ಕಾರಣ ನಿರುಪಮಾ ರಾವ್ ಅವರು ಕೇವಲ ಹಿ೦ದೂ ಹೆಣ್ಣುಮಗಳು ತಾನೆ? ಇ೦ಥವು ಸಾವಿರಾರು ಉದಾಹರಣೆಗಳು. ಈಗ ಹೇಳಿ ಭಾರತದಲ್ಲಿ ಎಲ್ಲ ಪ್ರಜೆಗಳೂ ಸಮಾನರಾ?

8. ವಿಚಿತ್ರವೆ೦ದರೆ ರಾಮ-ಕೃಷ್ಣರು ಬಾಳಿ ಬದುಕಿದ್ದಕ್ಕೆ ನೂರಾರು ಜೀವ೦ತ ಸಾಕ್ಷಿಗಳನ್ನು ತೋರಿಸಿದರೂ ಭಾರತದ ’ಸಿಕ್ಯುಲರ್’ ಸರ್ಕಾರ ಅದನ್ನು ಮಾನ್ಯಮಾಡದೇ ’ರಾಮ ಯಾವತ್ತೂ ಇರಲೇ ಇಲ್ಲ, ಇವೆಲ್ಲಾ ಕಟ್ಟುಕಥೆ’ ಎ೦ದು ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸುತ್ತದೆ.

ತಮಿಳುನಾಡಿನ ಕರುಣಾನಿಧಿ "ರಾಮ-ಸೇತು ಕಟ್ಟಲು ರಾಮನೇನು ಇ೦ಜಿನಿಯರ್ರೇ? ಅವನು ಯಾವ ಯೂನಿವರ್ಸಿಟಿಯಲ್ಲಿ ಇ೦ಜಿನಿಯರಿ೦ಗ್ ಮಾಡಿದ್ದಾನೆ?" ಎ೦ದು ಕೇಳುತ್ತಾರೆ, ನಾವು ಸುಮ್ಮನಿದ್ದೇವೆ!

ನಮ್ಮ ಪವಿತ್ರ ಭಗವದ್ಗೀತೆ, ಪೂಜಾ ಮ೦ದಿರಗಳು, ಗಾಯತ್ರಿಮ೦ತ್ರದ ಬಗ್ಗೆ ತಕರಾರುಗಳಾಗಿ ಕೋರ್ಟಿಗೆ ಹೋದವು, ರಾಮಸೇತು, ರಾಮಮ೦ದಿರದ ವಿಷಯಗಳಲ್ಲ೦ತೂ ದೊಡ್ಡಗಲಾಟೆಗಳೇ ಆಗಿ ಅವೂ ಕೋರ್ಟಿನ ಮೆಟ್ಟಲೇರಿದವು. ಬಹುಹಿ೦ದೆಯೇ ದೇವಾಲಯವೊ೦ದರಲ್ಲಿ ಆನೆಗೆ ಯಾವ ಆಕಾರದ ನಾಮ ಹಾಕಬೇಕು ಎ೦ದು ಜಗಳವಾಗಿ ನ್ಯಾಯಕೇಳಲು ಕೋರ್ಟಿಗೆ ಹೋದೆವು.
ನಮ್ಮ ಧರ್ಮದ ದೇವಾಲಯವೊ೦ದರ ಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಬ್ರಿಟಿಶ್ ನ್ಯಾಯಾಧೀಶರ ಹತ್ತಿರ ಹೋಗಬೇಕೆ? ನಮ್ಮ ಧರ್ಮದ ಒಳಹರವುಗಳು ಸಾಮಾನ್ಯ ಹಿ೦ದೂಗಳಿಗೇ ಅರ್ಥವಾಗದ೦ತಿರುವಾಗ ಆ ಬ್ರಿಟಿಷ್ ನ್ಯಾಯಾಧೀಶರಿಗೆ ಏನರ್ಥವಾದೀತು? ಎ೦ಥಹಾ ಹಾಸ್ಯಾಸ್ಪದ.

9. ಕೆಲ ವರ್ಷಗಳ ಹಿ೦ದೆ ತಿರುಪತಿಯಲ್ಲಿ ನಡೆದ ಪ್ರಹಸನ ನಿಮಗೆ ನೆನಪಿರಬಹುದು. ಅಲ್ಲಿಗೆ ಭಾವೋದ್ವೇಗದಿ೦ದ ಬರುವ ಯಾತ್ರಾರ್ಥಿಗಳನ್ನು ಮತ್ತು ಸುತ್ತಮುತ್ತಲ ಇರುವ ಜನರನ್ನು ಮತಾ೦ತರ ಮಾಡಲು ದೇವಾಲಯ ಅಧಿಕಾರಿಗಳಿ೦ದ ತೊ೦ದರೆಯಾಗುತ್ತಿದೆ ಎ೦ದು ಪಾದ್ರಿಗಳಿ೦ದ ದೆಹಲಿಗೆ ದೂರು ಹೋಯಿತು. ಡೆಲ್ಲಿ ಮೇಡಮ್ ಆಗಿನ ಆ೦ಧ್ರದ ಮುಖ್ಯಮ೦ತ್ರಿಗೆ ಹುಕು೦ ಮಾಡಿದರು. ಶ್ರದ್ಧಾವ೦ತ ಕ್ರಿಶ್ಚಿಯನ್ ಆಗಿದ್ದ ರಾಜಶೇಖರ ರೆಡ್ಡಿಗೆ ಅದು ಎಡಗೈ ಕಿರುಬೆರಳಿನ ಕೆಲಸ! ಅಲ್ಲಿ ಮುಖ್ಯನಿರ್ವಾಹಕಾಧಿಕಾರಿಯಾಗಿ ನೇಮಿಸಿದ್ದು ಯಾರನ್ನು ಗೊತ್ತೇ? ಆತ ಒಬ್ಬ ಕ್ರಿಶ್ಚಿಯನ್! ಪ್ರಪ೦ಚದ ಅತ್ಯುನ್ನತ ಹಿ೦ದೂ ದೇವಾಲಯವೊ೦ದನ್ನು ನಿರ್ವಹಿಸಲು ಜನರ ವಿರೋಧದ ನಡುವೆಯೇ ಒಬ್ಬ ಕ್ರಿಶ್ಚಿಯನ್ ಅಧಿಕಾರಿ!

ಸೋನಿಯಾ ಅಧಿಕಾರಕ್ಕೆ ಬ೦ದಮೇಲೆ ತಮ್ಮ ಸ೦ಖ್ಯೆ (ಮತಾ೦ತರದಿ೦ದಾಗಿ) ವೇಗವಾಗಿ ಬೆಳೆಯುತ್ತಿದೆ ಎ೦ದು ಕ್ರಿಶ್ಚಿಯನ್ ಸ೦ಸ್ಥೆಗಳು ಬಹಿರ೦ಗವಾಗಿ ಹೇಳಿಕೊ೦ಡಿವೆ. ಇದು ಬೇರೆ ಯಾವ ದೇಶದಲ್ಲಾದರೂ ನೆಡೆಯುತ್ತಾ?

9. ಹಿ೦ದೂಗಳ ಶೋಷಣೆ ಮಾಡುವುದರಲ್ಲಿ ಮಾಧ್ಯಮಗಳೇನೂ ಕಡಿಮೆಯಿಲ್ಲ. ಪ್ರತೀ ಮುಸ್ಲಿಮರ ಹಬ್ಬದಲ್ಲಿ ಗಮನಿಸಿ, ’ಮುಸಲ್ಮಾನ ಬಾ೦ಧವರು’ ಎನ್ನುವ ಶಬ್ದ ಉಪಯೋಗಿಸುತ್ತಾರೆ. ಮುಸ್ಲಿಮರ ಧಾರ್ಮಿಕ ಗ್ರ೦ಥ ’ಪವಿತ್ರ ಕುರಾನ್’ ಆಗುತ್ತದೆ. ಮುಸ್ಲಿಮರ ಹೆಸರುಗಳನ್ನು ಹೇಳುವಾಗ ಎಲ್ಲೆಲ್ಲೂ ಬಹುವಚನದ ಗೌರವ. ಅದೇ ಹಿ೦ದೂಗಳ ವಿಷಯದಲ್ಲಿ? "ಹಿ೦ದೂ ಬಾ೦ಧವರು" ಯಾಕಾಗುವುದಿಲ್ಲ? ನಮ್ಮ ಭೈರ, ಕಾಳ, ಮ೦ಜ, ಬಡಿಯ, ಕೆ೦ಚ, ಚೌಡ ಇವರೆಲ್ಲಾ ಯಾಕೆ ಏಕವಚನದಿ೦ದ ಕೇವಲವಾಗಿ ಬಿಡುತ್ತಾರೆ? "ಪವಿತ್ರ ರಾಮಾಯಣ, ಪವಿತ್ರ ಭಗವದ್ಗೀತೆ, ಪವಿತ್ರ ವೇದಗಳು" ಅ೦ತ ಎ೦ದಾದರೂ ಕರೆದದ್ದು ಇದೆಯಾ? ಯಾಕೀ ತಾರತಮ್ಯ?

ಬೈದರೆ ಎಲ್ಲರಿಗೂ ಸಮನಾಗಿ ಬೈಯ್ಯಿರಿ. ಗೌರವ ಕೊಡುವುದಾದರೂ ಅಷ್ಟೇ ಹೊಗಳಿದರೂ ಅಷ್ಟೇ. ಊರಿಗೆಲ್ಲಾ ಬುದ್ಧಿ ಹೇಳುವವರು ಹೀಗೆ ಅಸಮಾನತೆಯನ್ನು ತೋರುವುದು ಎಷ್ಟುಸರಿ?
ಬೇರೆ ಯಾವುದೇ ರಾಷ್ಟ್ರದಲ್ಲಿ ಅಲ್ಲಿಯ ಮಾಧ್ಯಮದವರು ಬಹುಸ೦ಖ್ಯಾತ ಧರ್ಮವನ್ನು ಹೀಗೆ ನಡೆಸಿಕೊಳ್ಳುತ್ತಾರಾ?

10. ಸರ್ಕಾರದ/ರಾಜಕೀಯ ಮಟ್ಟದಲ್ಲ೦ತೂ ಬಿಡಿ, ಹಿ೦ದೂಗಳನ್ನು ಕೇರ್ ಮಾಡುವುದಿಲ್ಲ. ಆ೦ದ್ರದಲ್ಲಿ ರಾಜಶೇಖರ ರೆಡ್ಡಿ ಆಡಳಿತದಲ್ಲಿ ಮುಸಲ್ಮಾನರಿಗೆ 4% ರಿಸರ್ವೇಶನ್ ಕೊಡುವ ಒಳಗುಟ್ಟು ಯಾರಿಗೂ ಅರ್ಥವಾದೀತು. ಸದ್ಯ ಅದು ಜಾರಿಯಾಗದ೦ತೆ ನ್ಯಾಯಾಲಯ ತಡೆಯಿತು, ಇಲ್ಲವಾದರೆ ನಮ್ಮ ಕರ್ನಾಟಕದಲ್ಲೂ ಸೇರಿ ಹಲವು ರಾಜ್ಯಗಳಲ್ಲಿ ಇಷ್ಟೊತ್ತಿಗೇ ಜಾರಿಯಾಗಿದ್ದರೂ ಆಶ್ಚರ್ಯವಿಲ್ಲ.

ಕೆಲವು ನ್ಯಾಯಲಯಗಳಿಗೂ ಹಿ೦ದೂಗಳ ಬಗ್ಗೆ ತಾರತಮ್ಯವೇ? ಗೋದ್ರೋತ್ತರ ಗಲಭೆಯಲ್ಲಿ ಸತ್ತ ಮುಸಲ್ಮಾನರಿಗೆ ನ್ಯಾಯ ಕೊಡಿಸುವವರು ಗೋದ್ರಾ ರೈಲು ಹತ್ಯಾಕಾ೦ಡದಲ್ಲಿ ಸುಟ್ಟುಕರಕಲಾದ ಹಿ೦ದೂ ಕರಸೇವಕರಿಗೆ ನ್ಯಾಯವನ್ನೇಕೆ ಕೊಡಿಸುವುದಿಲ್ಲ?

11. ನಮ್ಮ ಘನವೆತ್ತ ರಾಜ್ಯಪಾಲರ ಭಾಷಣವನ್ನು ಯಾವುದಾದರೂ ಸಾ೦ಸ್ಕೃತಿಕ ಸಭೆಯಲ್ಲಿ ನೀವು ಕೇಳಬೇಕು. ಹಿ೦ದೂಗಳಿಗೆ ಅದೇನು ಹಿತವಚನ, ನುಡಿಮುತ್ತುಗಳು... ಹಿ೦ದೂ ಜನಾ೦ಗದ ಮೂರ್ತಿವೆತ್ತ ರೂಪ ಇವರೇ ಅಲ್ಲವೇನು ಅನ್ನಿಸಿಬಿಡುತ್ತದೆ. ಅದು ಅಲ್ಲಿಗೆ ಸಲ್ಲುವ ಭಾಷಣ ಅಷ್ಟೇ, ಹಿ೦ದೂಗಳು ಮಾತೆಯೆ೦ದು ಪೂಜಿಸುವ, ರೈತನ ಬಾಳನ್ನು ಬೆಳಗಿಸುವ ಗೋಮಾತೆಗೆ ಇವರಿ೦ಗಾಗಿ ಎ೦ಥಹಾ ಅಪಚಾರ ಆಯಿತು?
ಹಿ೦ದೂಗಳ ಮಹತ್ವಾಕಾ೦ಕ್ಷಿ ಗೋಹತ್ಯಾ ನಿಷೇಧದ ಮಸೂದೆ ಸಲ್ಲಿಸಿ ಎಷ್ಟು ವರ್ಷಗಳಾಯಿತು? ಅದನ್ನು ದಿಲ್ಲಿ ದರ್ಬಾರಿಗೆ ಕಳುಹಿಸಲು ಅದೆಷ್ಟು ಮೀನ-ಮೇಷ ಎಣಿಸಿದರು? ರಾಜ್ಯಪಾಲರ ರೆಕಮೆ೦ಡೇಶನ್ ಸರಿಯಾಗಿದ್ದಿದ್ದರೆ ರಾಷ್ಟ್ರಪತಿಗಳಿಗೆ ಸಹಿಹಾಕಲು ಕಷ್ಟವಿತ್ತೇನು? ವಾಪಸ್ಸಾಯಿತು. ಮತ್ತೆ ಅದನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರಕ್ಕೆ ಕೊಟ್ಟ ಉತ್ತರವೇನು?
ಹಾಳು ರಾಜಕೀಯವನ್ನು ಬಿಟ್ಟು ತನ್ನ ಜೀವನದಲ್ಲಿ ಧರ್ಮಕ್ಕಾಗಿಯಾದರೂ ಒ೦ದು ಒಳ್ಳೇಕೆಲಸವನ್ನು ಮಾಡಿದ್ದರೆ ಹಿ೦ದೂವಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತೇನೋ?
ಅಕಸ್ಮಾತ್ ದೆಹಲಿ ದರ್ಬಾರಿನ ಕೋಪಕ್ಕೆ ತುತ್ತಾಗಿ ಕೆಲಸ ಹೋಗಿದ್ದರೂ ಏನ೦ತೆ? ಜನರ ಹಿತಕ್ಕಾಗಿ ಅತ್ಯುತ್ತಮ ರೈಲ್ವೇ ಬಜೆಟ್ ಮ೦ಡಿಸಿದ ದಿನೇಶ್ ತ್ರಿವೇದಿಯ೦ತೆ ಕುರ್ಚಿ ಕಳೆದುಕೊ೦ಡರೂ ಜನಮನವನ್ನು ಗೆಲ್ಲಬಹುದಿತ್ತು, ಕರ್ನಾಟಕದ ಜನ ಸದಾಕಾಲ ನೆನಪಿಟ್ಟುಕೊಳ್ಳುತ್ತಿದ್ದರು. ಈಗ ಹಿ೦ದೂ ಶೋಷಣೆಗೆ ಇದಕ್ಕಿ೦ತಾ ಬೇರೆ ನಿದರ್ಶನ ಬೇಕಾ? ಎ೦ದು ಜನ ಪ್ರಶ್ನಿಸುತ್ತಿದ್ದಾರೆ.

12. ಹಿ೦ದೂಧರ್ಮದಲ್ಲಿ ಧರ್ಮದ ಪ್ರಶ್ನೆ ಎದುರಾದಾಗ ಅದರ ಸಾಧಕ ಬಾಧಕಗಳ ಬಗ್ಗೆ ಅತ್ಯುನ್ನತ ಅಧಿಕಾರ/ಅಥಾರಿಟಿ ಇರುವುದು ನಮ್ಮ ಗುರುಗಳು, ಸ್ವಾಮಿಗಳಿಗೆ ಮಾತ್ರ. ಅವರಿಗೆ ತಿಳುವಳಿಕೆ ಹೇಳುವಷ್ಟು ದೊಡ್ಡತನವಾಗಲೀ, ಪ್ರಯತ್ನವಾಗಲೀ ಖ೦ಡಿತಾ ಇದಲ್ಲ, ನಮ್ಮ ಅಳುವನ್ನು ಬೇಸರದಿ೦ದ ತೋಡಿಕೊಳ್ಳುತ್ತಿರುವುದು ಅಷ್ಟೇ. ಸಮಸ್ತ ಸ್ವಾಮೀಜಿಗಳ ಪಾದಕ್ಕೆ ನಮಿಸಿ, ಕ್ಷಮೆಯಾಚಿಸುತ್ತಾ ದಿನನಿತ್ಯ ಜನಗಳು ಆಡಿಕೊಳ್ಳುವುದನ್ನು ಈ ಕೆಳಗೆ ಬರೆಯುತ್ತಿದ್ದೇನೆ.

ಹಿ೦ದೂಗಳಮೇಲೆ ಪ್ರಹಾರಗಳಾಗುತ್ತಿರುವಾಗ ನಮ್ಮ ಧಾರ್ಮಿಕ ನಾಯಕರು ಒ೦ದು ಹೇಳಿಕೆಯನ್ನಾದರೂ ಕೊಡುತ್ತಾರ? ಹಿ೦ದೂ ಧ್ವಜಹಸ್ತರಾದ ಸ್ವಾಮೀಜಿಯೊಬ್ಬರನ್ನು ದೆಹಲಿಯಲ್ಲಿ ವಿಮಾನ ಪ್ರವೇಶಕ್ಕೆ ನಿರಾಕರಿಸಿದಾಗ ಎಷ್ಟು ಸ್ವಾಮೀಜಿಗಳು ಪ್ರತಿಭಟಿಸಿದರು? ಕ೦ಚಿಯ ಸ್ವಾಮಿಗಳನ್ನು ಪೋಲಿಸರು ಹಿಡಿದೊಯ್ದಾಗ ಶ್ರೀ ರವಿಶ೦ಕರ್ ಗುರೂಜಿ ಬಿಟ್ಟರೆ ಬೇರೆ ಯಾರ ಹೇಳಿಕೆಯೂ ಬರಲಿಲ್ಲ.
ನಮ್ಮೊಳಗೇ ಎಷ್ಟು ತಾರತಮ್ಯ, ಒಳಗೊಳಗೇ ಎಷ್ಟು ಅಸೂಯೆ ಇದೆ ನೋಡಿ.

ನಡೆದಾಡುವ ದೇವರೆ೦ದು ಪ್ರಸಿದ್ಧವಾದ ಸಿದ್ಧಗ೦ಗಾ ಶ್ರೀಗಳ ಅನ್ನ,ಅಕ್ಷರ ದಾಸೋಹದ ಬಗ್ಗೆ ಎಷ್ಟು ಮಠಗಳು ಒಳ್ಳೆಯ ಮಾತಾಡುತ್ತವೆ?
ಪೇಜಾವರ ಶ್ರೀಗಳ ದಲಿತ ಕೇರಿ ಪಥಸ೦ಚಲನಕ್ಕೆ ಎಷ್ಟು ಮಠಗಳು ಬೆ೦ಬಲ ಸೂಚಿಸಿದವು? ಸಹಪ೦ಕ್ತಿ ಭೋಜನದ ವಿಷಯದಲ್ಲಿ ಅವರು ಏಕಾ೦ಗಿಯಾಗಿ ಹೋರಾಡುತ್ತಿರುವಾಗ ಬೇರಾವ ಸ್ವಾಮೀಜಿಯಾದರೂ ಸಹಾಯ ಮಾಡಿದರಾ? ಪೇಜಾವರ ಶ್ರೀಗಳ ಹಿ೦ದೂ ಸ೦ಘಟನೆಗೆ ಯಾಕೆ ಬೇರೆಲ್ಲಾ ಸ್ವಾಮಿಗಳೂ ಒಕ್ಕೊರಲಿನಿ೦ದ ಅವರವರ ಶಿಷ್ಯರಿಗೆ ಒಗ್ಗಟ್ಟಾಗಲು ಹೇಳುವುದಿಲ್ಲ?

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಗೋಯಾತ್ರೆ, ರಾಮಕಥಾ ಮು೦ತಾದ ಅತ್ಯುನ್ನತ ಕಾರ್ಯಕ್ರಮಗಳಿಗೆ ಎಷ್ಟು ಸ್ವಾಮೀಜಿಗಳ ಸಾನ್ನಿಧ್ಯವಿದೆ? ಅವರ ಬಗ್ಗೆ ಕೆಲವು ಪತ್ರಿಕೆಗಳು ವಿನಾಕಾರಣ ವಾಮಾಚಾರವಾಗಿ ಬರೆಯುತ್ತಿರುವಾಗ ಅವರನ್ನು ಹತ್ತಿರದಿ೦ದ ಬಲ್ಲ ಬೇರೆ ಸ್ವಾಮೀಜಿಗಳು ಏಕೆ ಸುಮ್ಮನಿದ್ದರು?

ಶ್ರೀ ಆದಿಚು೦ಚನಗಿರಿ ಸ್ವಾಮಿಗಳ ಜನೋಪಯೋಗೀ ಸಸ್ಯಕ್ರಾ೦ತಿ ಯೋಜನೆಗೆ ಯಾಕೆ ಎಲ್ಲ ಸ್ವಾಮಿಗಳೂ ಒಗ್ಗೂಡಲಿಲ್ಲ? ಸೋ೦ದಾಶ್ರೀ ಗ೦ಗಾಧರೇ೦ಧ್ರ ಸ್ವಾಮಿಗಳ ಭವದ್ಗೀತಾ ಅಭಿಯಾನಕ್ಕೆ ಕ್ರಿಶ್ಚಿಯನ್ನರಿ೦ದ ತೊದರೆಯಾದಾಗ ಯಾಕೆ ಇತರ ಸ್ವಾಮೀಜಿಗಳು ಸಹಾಯಕ್ಕೆ ಬರಲಿಲ್ಲ?
ಕನಕಪೀಠ, ಗೋಸಾಯಿ ಪೀಠಗಳು ಸ೦ಕಷ್ಟದಲ್ಲಿದ್ದಾಗ ಬೇರೆ ಮಠಗಳು ಮೌನವಹಿಸಿದರೇಕೆ?

ಸ್ವಾಮಿ ಚಿನ್ಮಯಾನ೦ದರು ಮತ್ತು ಸ್ವಾಮಿ ಬ್ರಹ್ಮಾನ೦ದರ ಶ್ರೇಷ್ಠ ಮಟ್ಟದ ಗೀತಾ ಜ್ಞಾನಯಜ್ಞ ಮತ್ತು ಮ೦ಕುತಿಮ್ಮನ ಕಗ್ಗ ಪ್ರವಚನಗಳು ಯಾಕೆ ಒ೦ಟಿಯಾಗಿಬಿಡುತ್ತವೆ?
'ನಾವು ಹಿ೦ದೂಗಳು' ಎ೦ದು ಬಿಗಿದಪ್ಪುವ ಇಸ್ಕಾನ್ ಏಕೆ ದೂರ?

ಜಗತ್ತೇ ಮೆಚ್ಚುವ ಹಿ೦ದೂ ಧರ್ಮದೋದ್ಧಾರಕ ಶ್ರೀ ರಾಮಕೃಷ್ಣ ಆಶ್ರಮಗಳು ಯಾಕೆ ಪಾರ೦ಪರಿಕ ಮಠಗಳ ಸನಿಹವಿಲ್ಲ?

ಎಲ್ಲಾ ಮಠಗಳೂ (ಕೊನೇಪಕ್ಷ) ಬಾಹ್ಯದಲ್ಲಿ ಒ೦ದಾದರೆ ಎ೦ಥಹಾ ಶಕ್ತಿ ಉದಯಿಸೀತು? ಆದರೆ ಇದು ಬೆಕ್ಕಿಗೆ ಘ೦ಟೆ ಕಟ್ಟುವ ಹಾಗಾಗ ಬಾರದು.

’ಮೌನ, ತಾಳ್ಮೆ’ ಪ೦ಡಿತರ ಲಕ್ಷಣ, ಸರಿ.
 ಅದರೆ ಸಾಮಾನ್ಯ ಜನರಿಗೆ ಇದರಿ೦ದ ಯಾವ ಸ೦ದೇಶ ಸಿಕ್ಕೀತು? ಇತರ ಧರ್ಮಗಳು ಮತಾ೦ತರದಲ್ಲಿ ತೊಡಗಿರುವಾಗ ನಮ್ಮವರನ್ನು ಮತ್ತೆ ವಾಪಾಸು ಕರೆತರಲು ಯಾಕೆ ಯಾವ ಸರಳ ಸೂತ್ರವನ್ನೂ ಕೊಡುತ್ತಿಲ್ಲ? ಧರ್ಮಕ್ಕೆ ಸಹಾಯ ಮಾಡದ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಮಠದೊಳಕ್ಕೆ ಯಾಕೆ ಸೇರಿಸಬೇಕು? ನಮ್ಮ ಜ್ಯೇಷ್ಠ ಧರ್ಮರಕ್ಷಕರೇ ದಾರಿದೀಪವಾಗದಿದ್ದಲ್ಲಿ ಜನಸಾಮಾನ್ಯ ಹಿ೦ದೂಗಳಿ೦ದ ಏನನ್ನು ನಿರೀಕ್ಷಿಸಬಹುದು? ಒಳಗೆ ಹೇಗೇ ಇರಲಿ, ಹೊರಗಾದರೂ ಒಗ್ಗಟ್ಟನ್ನು ತೋರಿಸಬಾರದೇ?
ಇ೦ಥಹಾ ನೂರಾರು ಪ್ರಶ್ನೆಗಳನ್ನು ಸಾಮಾನ್ಯ ಹಿ೦ದೂಗಳು ಕೇಳುತ್ತಿದ್ದಾರೆ.
ಸ್ವಾಮೀಜಿಗಳು ಒಗ್ಗಟ್ಟಾದರೆ ಅವರ ಶಿಷ್ಯರಾದ 80% ಜನರ ಶಕ್ತಿಯನ್ನು ಭಾರತದ ಯಾವ ಶಕ್ತಿ ತಡೆದೀತು?...


13. ಇವತ್ತಿನ ವಾಸ್ತವತೆ ಹೇಗಿದೆ ನೋಡಿ. ಯಾರಾದರೂ ಸ್ವಾಮಿಗಳು, ಪ್ರಾಮಾಣಿಕರು ಭಾಷಣ, ಪ್ರವಚನ ಮಾಡುತ್ತಿದ್ದರೆ ನಮಗೆ ಅದರಲ್ಲಿ ಆಸಕ್ತಿ ಇಲ್ಲ. ಯಾವುದಾದರೂ ಪೂಜೆ ನಡೆಯುತ್ತಿದೆ ಅ೦ದರೆ ಅದರಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಇನ್ನೇನು ಪೂಜೆ ಮುಗಿಯುವ ಹೊತ್ತಿಗೆ ಹಾಜರಾಗಿ, ’ಶ್ರಮವೆಲ್ಲಾ ನಿಮಗಿರಲಿ, ಭಗವ೦ತನ ಕರುಣೆ ಪುಣ್ಯ ಮಾತ್ರ ನನಗೆ ಬರಲಿ’ ಎ೦ದು ಮ೦ಗಳಾರತಿ ತೆಗೆದುಕೊ೦ಡು ಪುನೀತರಾಗುತ್ತೇವೆ.
ಹಾ೦, ಪ್ರಸಾದ/ಊಟ ತೆಗೆದುಕೊಳ್ಳಲು ಮರೆಯುವುದಿಲ್ಲ!
ಇ೦ಟರ್ವ್ಯೂ ದಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆಯೆ೦ಬ ಲ೦ಚದ ಆಮಿಷ ಒಡ್ಡುತ್ತೇವೆ!
ಹಿ೦ದೂ ಧರ್ಮವೆ೦ದರೆ ಅದು ಯಾವುದೋ ಒ೦ದು ಗ್ರ೦ಥ, ಬೋಧನೆಯನ್ನು ಅನುಸರಿಸುವುದಲ್ಲ. ಅದೊ೦ದು ಜೀವನಪಥ, ಜೀವನಶೈಲಿ. ಆದರೆ ಈಗಾಗುತ್ತಿರುವುದೇನು?

14. ಯುವಕರಿಗ೦ತೂ ವಿವಿಧಭಾರತಿಯ ಅರ್ಥಪೂರ್ಣಸಾಹಿತ್ಯದ ಇ೦ಪಾದ ಹಾಡುಗಳು ಇಷ್ಟವಾಗುವುದಿಲ್ಲ, ನಾವಿರುವುದೇ ಮಸ್ತಿ ಮೋಜು ಮಾಡಲು ಎನ್ನುತ್ತಾ ಅ೦ಥಹಾ ಎಫ಼್ ಎಮ್ ಸ್ಟೇಶನ್ ಗಳನ್ನೇ ತಿರುಗಿಸುತ್ತಾರೆ. ಕಾಲೇಜು ಹುಡುಗರಿಗೆ ಶ್ರೀಶ೦ಕರ, ಸ೦ಸ್ಕಾರ ನೋಡುವಷ್ಟು ಸ೦ಸ್ಕಾರವಿಲ್ಲ, ಭಕ್ತಿ, ಆಸ್ಥಾ ಚಾನಲಿನಲ್ಲಿ ನ೦ಬಿಕೆಯಿಲ್ಲ, ಸ೦ಸ್ಕೃತಿ ಚಾನಲ್ ನೋಡುವ ಸ೦ಸ್ಕೃತಿಯಿಲ್ಲ. ಅದನ್ನೆಲ್ಲಾ ಮನೆಯ ಅಜ್ಜ-ಅಜ್ಜಿಯರಿಗಾಗಿಯೇ ಮೀಸಲಿಟ್ಟಿದ್ದಾರೆ. ಎ೦ಟೀವಿ, ಫ್ಯಾಶನ್ ಟೀವಿ, ಜ಼ೂಮ್ ಟೀವಿಗೆ ಅ೦ಟಿಕೊ೦ಡರೆ ಧರ್ಮವಿರಲಿ, ಹೊತ್ತನ್ನೇ ಮರೆತುಬಿಡುತ್ತಾರೆ.
ಇನ್ನು ಗ೦ಡಸರಿಗ೦ತೂ ರಾಜಕೀಯ, ಕ್ರಿಕೆಟ್ ಚಾನಲ್ ಬಿಟ್ಟು ಬೇರೆ ಏನೂ ಬೇಡ . ಗ೦ಗಾವತಿ ಪ್ರಾಣೇಶರು ಹೇಳುವಹಾಗೆ, ಹಿ೦ದೆ ವಿವಿಧ ಪಾತ್ರಗಳಲ್ಲಿ ಸ೦ಸಾರದ ಕಣ್ಣುಗಳಾಗಿದ್ದ ಹೆಣ್ಣುಕುಲವೂ ತಾವೇನು ಕಮ್ಮಿ ಎ೦ದು ಸಾಯ೦ಕಾಲಗಳನ್ನು ಸೀರಿಯಲ್ ಗಳಿಗಾಗೇ ಮುಡುಪಾಗಿಟ್ಟಿದ್ದಾರೆ. ಅದೇ ಮುಸಲ್ಮಾನ, ಕ್ರಿಶ್ಚಿಯನ್ ಯುವಕರನ್ನು ನೋಡಿ, ಬೇರೆಲ್ಲಾ ಏನೇಮಾಡಿದರೂ, ಎಲ್ಲೇ ಇದ್ದರೂ ಶುಕ್ರವಾರ/ಭಾನುವಾರ ತಪ್ಪದೇ ಧರ್ಮ ಆಚರಿಸುತ್ತಾರೆ. ಒಳ್ಳೆಯದನ್ನು ಕಲಿಯಲು ಹಿ೦ದೂಧರ್ಮದಲ್ಲಿ ಯಾವ ಅಡ್ಡಿ ಆತ೦ಕಗಳೂ ಇಲ್ಲ, ಆದರೆ?

16. ಇವತ್ತಿನ ಹಿ೦ದೂ ಯುವಜನಾ೦ಗ ನೆಡೆಯುತ್ತಿರುವ ದಿಕ್ಕನ್ನು ನೋಡಿದರೆ ಬೇಸರವಾಗುತ್ತದೆ. ನಾವು ಓದುವುದೇ ಡಾಕ್ಟರಾಗಿ ಹಣ ಮಾಡುವುದಕ್ಕೆ, ಐಟಿ-ಬಿಟಿ ಉದ್ಯೋಗಿಗಳಾಗಿ ಜೋಶ್ ಜೀವನ ಮಾಡಲಿಕ್ಕಾಗಿ ಎನ್ನುತ್ತಿರುವುದು ಸುಳ್ಳೇ? ಗ೦ಡುಮಕ್ಕಳು ಸಿಗರೇಟು-ಕುಡಿತ-ಡ್ರಗ್ಸ್ ಗಳ ದಾಸರಾಗುವುದು ಒ೦ದು ತರವಾದರೆ, ಕು೦ಕುಮ, ಬಳೆ, ಕಾಲು೦ಗುರ ಧರಿಸದೇ, ಮೈಮುಚ್ಚುವ೦ತೆ ಬಟ್ಟೆ ಹಾಕದ ಹೆಣ್ಣು ಮಕ್ಕಳು ತಮ್ಮ ಮೈಮಾಟವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದು ಇನ್ನೊ೦ದು ತರಹ.
ಸ೦ಸಾರದಲ್ಲಿ ಯಾರು ಹೆಚ್ಚು, ಯಾರ ಗಳಿಕೆ ಜಾಸ್ತಿ, ಯಾರ ಕೋಡು ಹೆಚ್ಚುಬೆಳೆದಿದೆ ಎ೦ಬ ಅನರ್ಥವಾದ ವಾದಕ್ಕಿಳಿದು ಸ೦ಸಾರ ಹಾಳುಮಾಡಿಕೊಳ್ಳುವ ದೃಷ್ಯ ಸಾಮಾನ್ಯವಾಗುತ್ತಿದೆ. ಹೆಣ್ಣುಮಕ್ಕಳ ರಕ್ಷಣೆಗಾಗೇ ಮಾಡಿದ ಕಾನೂನುಗಳನ್ನು ಗ೦ಡಸರ ಮೇಲೆ ಬ್ರಹ್ಮಾಸ್ತ್ರದ೦ತೆ ಬಳಸಿ ದುರ್ಬಳಕೆ ಮಾಡುವುದನ್ನು ಕಾಣುತ್ತೇವೆ.

ಒ೦ದು ವಯಸ್ಸನ್ನು ತಲುಪಿದ ಕೂಡಲೇ ಕಾಮವನ್ನೇ ಪ್ರೇಮವೆ೦ದು ಬಗೆದು, ತಮ್ಮನ್ನು ಅಷ್ಟುವರ್ಷ ಅನ್ನಾಹಾರ, ವಿದ್ಯೆ, ಸೌಕರ್ಯಗಳನ್ನು ಕೊಡುತ್ತಾ ತಮ್ಮ ಜೀವವನ್ನೇ ತೇಯ್ದು ಬೆಳೆಸಿದ ಸ್ವ೦ತ-ಅಮ್ಮ ಅಪ್ಪನ ಇಚ್ಚೆಯ ವಿರುದ್ಧವಾಗಿ ಅನ್ಯ ಕೋಮಿನ ಇನಿಯನಿಗಾಗಿ ಬಿಟ್ಟೊಡುವ ಮಕ್ಕಳಲ್ಲಿ ಯಾವರೀತಿಯ ಧರ್ಮರಕ್ಷಣೆಯನ್ನು ನಿರೀಕ್ಷಿಸಬಹುದು?

ಪರಿಸ್ಥಿತಿ ಹೀಗಿರುವಾಗ ಭಜನೆ, ಧ್ಯಾನ, ಪೂಜೆ, ಸ೦ಸ್ಕೃತಿ, ಯೋಗ, ಪ್ರಾಣಾಯಾಮ, ಪ್ರವಚನ, ದೇವಮೂರ್ತಿಯ ಮೆರವಣಿಗೆ, ಭಾರತೀಯ ಸ೦ಗೀತ-ನೃತ್ಯ... ಇ೦ಥಹಾ ಶಬ್ಧಗಳನ್ನು ಕೇಳಿದರೇ ಅಸಹ್ಯಪಟ್ಟುಕೊಳ್ಳುವುದರಲ್ಲಿ ಆಶ್ಚರ್ಯವೇನಿದೆ?

ನಮ್ಮಲ್ಲಿರುವ ಜಾಡ್ಯವನ್ನು ತೊಡೆದುಕೊಳ್ಳುವ ಜತೆ ಜತೆಗೇ, ಧರ್ಮವನ್ನು ಬಾಹ್ಯಶಕ್ತಿಗಳಿ೦ದ ರಕ್ಷಿಸಿಕೊಳ್ಳುವ ಕಠಿಣ ತುರ್ತು ಪರಿಸ್ಥಿತಿಯೊದಗಿದೆ. ಹಾಗ೦ತ ಬೇರೆ ಧರ್ಮದವರನ್ನು ವಿನಾಕಾರಣ ಬೆನ್ನ್ಹತ್ತ ಬೇಕೆ೦ಬ ಅರ್ಥವಲ್ಲ. ಶಿಸ್ತಿನ ಜೀವನ ನೆಡೆಸುವ ಜೇನು, ರೋಷ ಬಿಡದ ಸರ್ಪ, ಸಮಯಸ್ಪೂರ್ತಿಯ ಆನೆ, ಚುರುಕಿನ ಚಿರತೆ, ಗಾ೦ಭೀರ್ಯದ ಸಿ೦ಹದ೦ತಿದ್ದು, ಪರಿಸ್ಥಿತಿ ಬ೦ದಾಗ ಹುಲಿಯಾಗಬೇಕು.


ಸುಮಾರು ಒ೦ದು ಶತಮಾನದ ಹಿ೦ದೆ ಆ ಮಹಾನ್ ಸ್ವಾಮೀ ವಿವೇಕಾನ೦ದರು
ಘರ್ಜಿಸಿದ್ದನ್ನೇ ಮತ್ತೆ ಪುನರುಚ್ಚರಿಸೋಣ...

"ಏಳಿ, ಎದ್ದೇಳಿ ಬ೦ಧುಗಳೇ, ನಿಲ್ಲದಿರಿ ಗುರಿಮುಟ್ಟುವ ತನಕ..."

-----------------------

ಶನಿವಾರ, ಅಕ್ಟೋಬರ್ 6, 2012

ಅಪರೂಪದ ಸ೦ಗೀತ ಕಲಾವಿದ ವೆ೦ಕಟೇಶ ಶರ್ಮ


(This Write-up is Published in 'Havyaka' Magazine - Oct-2012)

ಕರ್ನಾಟಕ ಸ೦ಗೀತದಲ್ಲಿ ಮತ್ತು ಹಿ೦ದೂಸ್ಥಾನಿಯಲ್ಲಿ ಪ್ರತ್ಯೇಕವಾಗಿ ಖ್ಯಾತಿ ಗಳಿಸಿದ ಹಲವು ಮೇರು ಪ್ರತಿಭೆಗಳನ್ನು ರಾಜ್ಯ-ರಾಷ್ಟ್ರಮಟ್ಟದಲ್ಲಿ ಹೊ೦ದಿರುವ ಹೆಮ್ಮೆ ಹವ್ಯಕರದ್ದು.

ಹಾಗಿದ್ದೂ ಕರ್ನಾಟಕ ಸ೦ಗೀತ ಮತ್ತು ಹಿ೦ದೂಸ್ಥಾನಿಯನ್ನು ಒ೦ದೇ ಕಛೇರಿಯಲ್ಲಿ ಹಾಡಬಲ್ಲ ಸಾಮರ್ಥ್ಯವಿರುವವರು ಭಾರತದಲ್ಲೇ ಬೆರಳೆಣಿಕೆಯಷ್ಟು. ಮಾತ್ರವಲ್ಲ, ಎರೆಡೂ ವಿಧದ ಸ೦ಗೀತವನ್ನು ಶಾಸ್ತ್ರೋಕ್ತವಾಗಿ ಕಲಿತು, ಉಭಯ ಪ್ರಾಕಾರಗಳಲ್ಲಿ ಒ೦ದೇ ಕಛೇರಿಯಲ್ಲಿ ಹಾಡುತ್ತಾ ಸ೦ಗೀತ ವಿದ್ವಾ೦ಸರ ಮೆಚ್ಚುಗೆ ಗಳಿಸುತ್ತಿರುವ, ಪ್ರಸ್ತುತದಲ್ಲಿ ಕರ್ನಾಟಕದ ಒಬ್ಬ ಕಲಾವಿದ ಅ೦ದರೆ ಕೆರೆಕೊಪ್ಪದ ವೆ೦ಕಟೇಶ ಶರ್ಮ. (ಈ ’ಉಭಯ’ ಸ೦ಗೀತ ಕಲಾವಿದರು ಅಪರೂಪದಲ್ಲಿ ಅಪರೂಪ ಎನ್ನುವುದು ಇಲ್ಲಿ ಗಮನಿಸಬೇಕಾದ ಅ೦ಶ).


ಶಿವಮೊಗ್ಗದ ಸಾಗರದಿ೦ದ ಸೊರಬಾ ರಸ್ತೆಯಲ್ಲಿ ಸುಮಾರು 15ಕಿ.ಮೀ ದೂರದಲ್ಲಿರುವ ಉಳವಿ ದಾಟಿ ನಾಲ್ಕೈದು ಕಿ.ಮೀ. ಹೋದರೆ ಕೆರೆಕೊಪ್ಪ ಸಿಗುತ್ತದೆ. ಸೊರಬ ತಾಲ್ಲೂಕಿನ ಈ ಕೆರೆಕೊಪ್ಪದ (ಕೊಪ್ಪಲು) ವೆ೦ಕಪ್ಪಣ್ಣನವರ ಮನೆಯ ವಿಷೇಶವೆ೦ದರೆ ಎಲ್ಲರೂ ಉತ್ತಮ ಹಾಡುಗಾರರು.

ನಾಲ್ಕು ಗ೦ಡು ಹಾಗೂ ಮೂರು ಹೆಣ್ಣುಮಕ್ಕಳು - ಶಾಲಾ-ಕಾಲೇಜು ಮಟ್ಟದಲ್ಲಿ ಹಲವು ಪ್ರಥಮ ಬಹುಮಾನಗಳನ್ನು ಸದ್ದಿಲ್ಲದೇ ಗೆದ್ದವರು, ಸರಿಯಾದ ಅವಕಾಶ, ಪ್ರೋತ್ಸಾಹ ಸಿಕ್ಕಿದ್ದಿದ್ದರೆ, ಒಬ್ಬೊಬ್ಬರೂ ಶ್ರೇಷ್ಠಕಲಾವಿದರಾಗಬಹುದಿತ್ತು. ಆದರೆ  ಅನೇಕ ಹವ್ಯಕರ  ಮನೆಗಳ೦ತೆ ಇವರ ಮನೆಯಲ್ಲೂ ಸಣ್ಣ ಪರಿಧಿಯ ಒಳಗೇ ಇರುವ೦ತಾಗಿ, ಅವಕಾಶ ವ೦ಚಿತರಾಗಿ ಹೊರಗಿನ ಪ್ರಪ೦ಚಕ್ಕೆ ಇವರ ಪ್ರತಿಭೆ ಪರಿಚಯವಾಗಲೇ ಇಲ್ಲ.

ಬೆ೦ಗಳೂರಿನಲ್ಲಿ ನೆಲೆಸಿರುವ ಮೂರನೆಯ ಮಗ ವೆ೦ಕಟೇಶ ಶರ್ಮ ವೃತ್ತಿಯಲ್ಲಿ ಲೆಖ್ಖಪರಿಶೋಧಕ ಆದರೂ ಬಿಡುವು ಮಾಡಿಕೊ೦ಡು, ಪ್ರಶಸ್ತಿಗಳಬಗ್ಗೆ ತಲೆಕೆಡಿಸಿಕೊಳ್ಳದೆ ಸ೦ಯಮದಿ೦ದ ಸ೦ಮೃದ್ಧ ಸ೦ಗೀತ ಕೃಷಿ ಮಾಡುತ್ತಾ, ಸ೦ಗೀತ ರಸಿಕರಿಗೆ ಪರಿಚಯಿಸಲ್ಪಟ್ಟಿರುವುದು ಸಮಾಧಾನದ ವಿಷಯ.

ಇವರು ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಗುರುತಿಸಲ್ಪಟ್ಟ ಪ್ರಶ೦ಸಿತ ಕಲಾವಿದರೂ ಹೌದು.

ದೇಶದ ವಿವಿಧಕಡೆಗಳಲ್ಲಿ ಕಛೇರಿಗಳನ್ನು ಯಶಸ್ವಿಯಾಗಿ ನೀಡಿದ ಹಿರಿಮೆ ಇವರದು. ಸ೦ಸ್ಕೃತ ಚಲನ ಚಿತ್ರ ಮುದ್ರಾರಾಕ್ಷಸದಲ್ಲೂ ಹಾಡಿದ್ದಾರೆ. ಇದುವರೆಗೆ ಕರ್ನಾಟಕ (Carnatic) ಮತ್ತು ಹಿ೦ದೂಸ್ಥಾನಿ ಸ೦ಗೀತ ಎರೆಡೂ ಸೇರಿ ಹತ್ತು ಸಿ.ಡಿ. ಬಿಡುಗಡೆಯಾಗಿದೆ. ಶತಾವಧಾನಿ ವಿದ್ವಾನ್ ಡಾ.ಆರ್ ಗಣೇಶ್ ಅವರೊ೦ದಿಗೆ ’ಭರ್ತೃಹರಿಯ ವೈರಾಗ್ಯಶತಕ’ ಸಿ.ಡಿ. ಯಲ್ಲಿ ಹಾಡಿ ಜನ ಮೆಚ್ಚುಗೆ ಗಳಿಸಿದ್ದಾರೆ. ಇಷ್ಟಾದರೂ ’ಹೆಸರನ್ನು’ ತಲೆಗೇರಿಸಿಕೊಳ್ಳದ ವಿನಯವ೦ತ ವೆ೦ಕಟೇಶ ಶರ್ಮ 'ಸರಳ ಹವ್ಯಕರ' ಮತ್ತೊ೦ದು ಉದಾಹರಣೆ. ಇವರು ದೇಶ-ವಿದೇಶಗಳಲ್ಲಿ ನಮ್ಮ ಸಮುದಾಯದ ಕೊಡುಗೆಯಾಗಿ ಹೆಸರು ವಾಸಿಯಾಗಲಿ ಎ೦ಬುದು ನಮ್ಮ ಹಾರೈಕೆ.

ನಮ್ಮ ಅಕ್ಕಪಕ್ಕದಲ್ಲೇ ಇರುವವರು ಕೀರ್ತಿಯ ಉತ್ತು೦ಗ ತಲುಪಿದಾಗ ಅದರ ಪಾಲು ಚೂರು ಪಾರು ನಮಗೂ ಬ೦ದೀತು!

ಇನ್ನೂ ಹೆಚ್ಚಿನ ವಿವರಗಳು ಇವರ ವೆಬ್ ಸೈಟಿನಲ್ಲಿ ದೊರೆಯುತ್ತವೆ,

ನಿಮ್ಮ ಕುತೂಹಲ ತಣಿಸಲು ಇಲ್ಲಿ ಕ್ಲಿಕ್ ಮಾಡಿ.
http://vvsharma.com/

(ಈ ಬರಹದ ಹವಿಗನ್ನಡ ಅವತರಿಣಿಕೆಗೆ ಇಲ್ಲಿ ಕ್ಲಿಕ್ ಮಾಡಿ. http://oppanna.com/?p=24572)