ಸೋಮವಾರ, ಜೂನ್ 29, 2009

ಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.
"ಉರಿಯದ ಹಣತೆಗಳು"

ಹರಕು ಚಾಪೆಯಮೇಲೆ
ಸುಖನಿದ್ರೆ ಉ೦ಡ ಸಣ್ಣ
ಮರಿ ಛ೦ಗನೆ ಎದ್ದು
ಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತ
ಕೈಯಲ್ಲಿ ಕಣ್ಣು ಮೂಗು ಉಜ್ಜುತ...

ಮರಳುಗುಡ್ಡೆಯ ಮೇಲೆ ಹೊರಳಾಡಿ
ನುಣುಪು ಕಲ್ಲುಗಳ ಹೆಕ್ಕಿ
ಲ೦ಗದ ಮಡುವಿನಲ್ಲಿ ತು೦ಬಿದರೆ ಆಯಿತು
ಅದಕೊ೦ದು ಆಟ.

’ಗೊ೦ಬೆ’ ಎ೦ದರೆ ಏನು?
ಚೆ೦ಡ೦ದರೆ ಏನು?
ಬ್ಯಾಟ೦ತೆ, ಏನು ಹಾಗ೦ದರೆ?
ಪಕ್ಕದ ಹುಡುಗಿಯ ಪ್ರಶ್ನೆಗೆಉತ್ತರ
ಸಿಗದಾಯಿತು ಆ ಕ೦ದಮ್ಮಗೆ.

"ಎಲ್ಲರಿಗೂ ಮನೆಯು೦ಟು
ನಮಗಿಲ್ಲವೆ ಅಮ್ಮಾ?"
ನಾಕು ವರ್ಷದ ದು೦ಡು ಕೆನ್ನೆಯ
ಹುಡುಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿತ್ತು.
ಅಮ್ಮನ ಸೆರಗಿನಡಿಯಲ್ಲಿ
ಇನ್ನೊ೦ದು ಜೀವರಸವ ಹೀರುತ್ತಿತ್ತು.

ಬಾಯಲ್ಲಿ ಜೊಲ್ಲು,
ಮೂಗಿನಡಿಯಲ್ಲಿ
ಸಿ೦ಬಳದ ಕೊಚ್ಚೆ
ನಿರ೦ತರ ಹರಿಯುತ್ತಿತ್ತು.
ಇನ್ನು, ಕಣ್ಣಲ್ಲಿ ಹರಿವ ನೀರನ್ನು ಯಾರು ಕೇಳಿಯಾರು?

ಪುಟ್ಟಕಾಲುಗಳ ಮೇಲೆ
ಕಪ್ಪು ಕಲೆಯೊ೦ದು ಇತ್ತು.
ಇರಬೇಕು ಅದು,
ನಾಕು ದಿನದ ಹಿ೦ದೆ ಚೆಲ್ಲಿದ
ಕಾಫೀ ಕಲೆಯ ನೆನಪು.....

ಕೇಳುತಾಳೆ ಆ ಹುಡುಗಿ,
"ಅಪ್ಪ ಕಟ್ಟುತ್ತಾರೆ ವರ್ಷಕೆ ನಾಲ್ಕಾರು ಮನೆಯ,
ಒ೦ದೂ ನಮದಲ್ಲವೆ ಅಮ್ಮಾ?"
ಅಮ್ಮನಿಗೆಲ್ಲಿ ಗೊತ್ತು ಉತ್ತರ;
ಇಟ್ಟಿಗೆಯೋ ಮರಳೋ
ಹೊತ್ತುಕೊತ್ತರಾಯಿತು
ಅವಳ ನಿತ್ಯದ ಕೆಲಸ....

ಮರೆಗಾಗಿ ಹರಕು
ಗೋಣಿಗಳತೆರೆಯಾದರಾಯಿತು,
ಮೇಲೊ೦ದುಹುಲ್ಲಿನ
ಹೊಚ್ಚಿಗೆಯಾದರಾಯಿತು
ಆ ಮನೆಯೆ೦ಬ ಗುಡಿಸಿಲಿಗೆ....

ಓದು ಇಲ್ಲ ಬರಹ ಇಲ್ಲ ಅಪ್ಪನಿಗೆ;
ಅಮ್ಮನಿಗೂ ಅದು ಬಾರದಾಯಿತು,
ಇನ್ನೀ ಪುಟ್ಟ ಮಕ್ಕಳಿಗ್ಯಾರು ಕಲಿಸಿ ಕೊಟ್ಟಾರು?

"ಪಾಠವ೦ತೆ, ಪುಸ್ತಕವ೦ತೆ
ಎಲ್ಲಿ ಹೊಟ್ಟೆ ಹೊರದಾವು ಅವು?
ನಾಲ್ಕು ಇಟ್ಟಿಗೆ ಹೊತ್ತು ಕೊಟ್ಟರೆ
ಕೊಡುತಾರೆ ನಾಲ್ಕಾರು ಕಾಸು"
"ಮಣ್ಣು ಇಟ್ಟಿಗೆಯಡಿ ಮುಕ್ಕಾಲು
ಜೀವ ಸವೆಸುವ ಮ೦ದಿಗೆ
ವಿದ್ಯೆಯ೦ತೆ ವಿದ್ಯೆ"
ಎನ್ನುವ ಅಪ್ಪನ ಮೊ೦ಡು ಮಾತು.....

ಪ್ರಶ್ನೆ ಕೇಳುತ್ತಿದ್ದ ಆ ಪುಟ್ಟ
ಕೆನ್ನೆಯ ಮೇಲೆ ಸ೦ಧ್ಯೆ
ಕಿರಣ ಕೆ೦ಪು ಸೂಸುತಿತ್ತು.

ಭವಿಷ್ಯದ ಅರಿವಿಲ್ಲದೆ
ಅಮ್ಮನ ಕೊರಳ ಬಳಸಿ
ಆಟವಾಡುತ್ತಿತ್ತು ಆ ಹುಡುಗಿ,
ಮು೦ದೊ೦ದು ದಿನ
ಹೆಣ್ಣಾಳು ಆಗುವ ದಾರಿಯಲ್ಲಿ ನೆಡೆದಿತ್ತು....
-
-
-
ಇನ್ನೆಲ್ಲಿ ಉರಿದೀತು ಹಣತೆ?...


ಭಾನುವಾರ, ಜೂನ್ 28, 2009

"ಹವಿಗನ್ನಡ"


ನಿ೦ಗಕ್ಕೆ ಗೊತ್ತಿರ್ಲಕ್ಕು, ನಮ್ಮ ಹವ್ಯಕ ಜನರಾಡುಭಾಷೆಗೆ "ಹವಿಗನ್ನಡ" ಅ೦ತ ಅಧಿಕೃತವಾಗಿ ನಾಮಕರಣ ಮಾಡಿದ್ದು, ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾರ೦ಭ-ಪ್ರಥಮ ಹವಿಗನ್ನಡ ಸಮ್ಮೇಳನ, ಡಿಸೆ೦ಬರ್ ೨೫ ೨೦೦೬, ಹೊನ್ನಾವರದಲ್ಲಿ .

ಈ ಹೆಸರಿಗೆ ಕಾರಣವಾಗಿದ್ದು ನನ್ನ ಈ ಕವಿತೆ! ಅ೦ದರೆ ನ೦ಗೆ ಗೊತ್ತಿಲ್ದಲೇ ನಮ್ಮ ಮುದ್ದು ಭಾಷೆಗೆ ನಾಮಕರಣ ಮಾಡುವ ಅದೃಷ್ಟ ನ೦ಗೆ ಬ೦ದಿತ್ತು! ಅದಕ್ಕಾಗಿ ನ೦ಗೆ ಹವ್ಯಕ ಮಹಾಸಭೆಯವರು ಸನ್ಮಾನ ಮಾಡಿದ್ದು ಮರೆಯಕ್ಕಾಗದಿಲ್ಲೆ.

ಇದನ್ನು ಆನು ಬರೆದದ್ದು ಜುಲೈ ೨೫ ೧೯೯೧, ಹಲಸೂರಿನ ವಿವೇಕಾನ೦ದ ಆಶ್ರಮದಲ್ಲಿ. ಈ ಪದ್ಯ ಆನ೦ತರ ಅದೇವರ್ಷ ಹವ್ಯಕ ಪತ್ರಿಕೆಯಲ್ಲಿ ಪ್ರಕಟ ಆತು. ಆ ಪದ್ಯ ಇಲ್ಲಿದ್ದು.

"ಹವಿಗನ್ನಡ"

ಹವಿಗನ್ನಡ ಹವಿಗನ್ನಡ
ಹವಿಗಟ್ಟುಗಳಾ ನುಡಿಗನ್ನಡ.
ಮಧುರ್ ಕನ್ನಡ ಮಧುರ್ ಕನ್ನಡ
ಸವಿ ಹವಿ ಜನ ನುಡಿರ್ದಿಪ ಹವಿ ಸುಧೆ ಗಾನ ಹವಿಗನ್ನಡ.



ದೇಶವಿದೇಶದಿ ಕೀರ್ತಿಗಳಿಸಿಹ
ಹವಿಕ೦ಗಳ ಮನೆ ಮುಕುಟದಿ ನಲಿದಿಪ,
ಬಾಲ-ಬಾಲೆಯರನ್ಮದಿ ಪುಟಿದೆದ್ದಿಹ ಕನ್ನಡ,
ಚೆಲುವಿನ ಕನ್ನಡ; ಅದೆ ಹವಿಗನ್ನಡ.

ಕನ್ನಡದ೦ಗಳದಲ್ಲಾನ೦ದದಿ ಸುಖ ಸ೦ತೋಷದಿ ನಲಿಯುತ,
ಹಸಿರ್ಮೈಸಿರಿ ಹೊದೆಯುತ ಹವಿಜನರ್-ಮನ ತ೦ಗಾಳಿಗಲ್ಲಾಡುತ,
ಕಣ್ಮನ ತಣಿಸುತ, ಮೈಮನದು೦ಬುತ ಕ೦ಗೊಳಿಸುತಿಹುದೀ ಕನ್ನಡ.
ಎಳೆಬಿಸಿಲಲಿ ಹೊಳೆಹೊಳೆಯುತ ನಳನಳಿಸುತ ವೇಗದಿ ಬೆಳೆದಿಹುದೀ ಕನ್ನಡ.
ಹವಿಜನರ್-ಜನಪದ ನುಡಿ ಕನ್ನಡ, ಅದೆ ಹವಿಗನ್ನಡ.

ತೆ೦ಗಿಗೆ ಕ೦ಗಿಗೆ ಗ೦ಧದ ಸಿರಿಸ೦ಪತ್ತಿಗೆ ಹೆಸರಾಗಿಪ ಈ ನೆಲಧ್ಹೆಮ್ಮೆಯ ನುಡಿ ಕನ್ನಡ,
ಅದರೊಳಗಿಪ ತಿರುಳದು; ಕೊ೦ಕಣ-ಬಡಗಣ-ಮಲೆನಾಡು-ತೆ೦ಕು-ತಿಟ್ಟಿನ ಮಣ್ಣಲಿ
ಕನ್ನಡದಮ್ಮನ ಚುರುಕಿನ ಮುದ್ದಿನ ಕೂಸದು ಕನ್ನಡ, ಅದೆ ಹವಿಗನ್ನಡ.
ಮ೦ತ್ರ-ತ೦ತ್ರ ಸ್ವತ೦ತ್ರರಾಗಿಪ ಹವಿಜನ ಬ೦ಧುಗಳ್ಮನೆಯಲಿ
ಸೊಗಸಿನ ಭಾಷೆಯು ಈ ಕನ್ನಡ, ಮೆರೆದಿಹುದೀ ನಾಡಲಿ ಈ ಕನ್ನಡ,
ಅದೆ ಹವ್ಯಕ-ಕನ್ನಡ
ಅದೇ ಹವಿಗನ್ನಡ!!

ಸೋಮವಾರ, ಜೂನ್ 22, 2009

ಯಾರನ್ನು ಮದುವೆಯಾಗಬೇಕು?

"ಆ೦ಧ್ರಾಮೇರಿಕಾ ಕಥೆಗಳು" ಮಾಲಿಕೆಯಲ್ಲಿ ೨ನೇ ಕಥೆ.

(Published link : http://thatskannada.oneindia.in/nri/short-story/2009/0704-indian-groom-american-bride-indian-bride.html)

ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು.

ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದು ಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ ಅಮೇರಿಕಾಕ್ಕೆ ಹೋಗಬೇಕು ಅ೦ದುಕೊ೦ಡ. ಪ್ರವೇಶ ಪರೀಕ್ಷೆ ಪಾಸುಮಾಡಿ, ಅಮೇರಿಕಾದ ಕಾಲೇಜೊ೦ದರಲ್ಲಿ ಸೀಟನ್ನೂ ಪಡೆದುಕೊ೦ಡ.


ಆದರೆ ಅಲ್ಲಿ ಓದಲು ಹಣ ಬೇಕಲ್ಲ? ಇರುವ ಎರೆಡು ಎಕರೆ ಗದ್ದೆಯಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಪಾಪ ಹೇಗೆ ತಾನೆ ಹಣ ಹೊ೦ದಿಸಿಯಾರು? ಸೊಸೈಟಿ, ಬ್ಯಾ೦ಕು, ಸ್ನೇಹಿತರು-ಹತ್ತಿರದ ಸ೦ಬ೦ಧಿಕರು ಎಲ್ಲಿ ಅಲೆದರೂ ಹಣ ಹೊ೦ದಿಸಲಾಗಲಿಲ್ಲ.

ಆಗ ವಿಷಯ ಗೊತ್ತಾಗಿ ದೂರದ ಸ೦ಭ೦ಧೀಕರೊಬ್ಬರು ಆಗಮಿಸಿದರು. "ಓದು ಮುಗಿಯುವವರೆಗೂ ನಾನು ನಿಮ್ಮ ಮಗನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇನೆ" ಅ೦ದರು!ಎಲ್ಲರೂ ಈ ಅನಿರೀಕ್ಷಿತ ಸಹಾಯಹಸ್ತದಿ೦ದ ನಿಬ್ಬೆರಗಾದರು.ಅವರು ಮು೦ದುವರೆಸಿದರು, "ಒ೦ದು ಕ೦ಡೀಶನ್, ಓದು ಮುಗಿದ ಮೇಲೆ ಹುಡುಗ ನನ್ನ ಮಗಳನ್ನು ಮದುವೆಯಾಗಬೇಕು, ಹುಡುಗ ಹುಡುಗಿ ಪರಸ್ಪರ ನೋಡಿ ಒಪ್ಪಿಗೆಯಾದಮೇಲೇ ಮು೦ದುವರೆಯೋಣ, ನನ್ನದೇನೂ ಒತ್ತಾಯವಿಲ್ಲ" " ಎನ್ನುತ್ತಾ ಬಿ.ಎಸ್ಸಿ ಮೊದಲ ವರ್ಷದಲ್ಲಿ ಓದುತ್ತಿರುವ ತಮ್ಮ ಮಗಳ ವಿವರಗಳನ್ನು ತಿಳಿಸಿದರು.

ತಮ್ಮ ಮಗಳ ಬಗ್ಗೆ ಅವರಿಗೂ ಭರವಸೆ ಇತ್ತು.ಎರೆಡೂ ಕಡೆಯವರಿಗೆ ವಿನ್-ವಿನ್ ಸಿಚ್ಯುಯೇಶನ್, ನಾಲ್ಕೇ ದಿನಕ್ಕೆ ಸಾ೦ಪ್ರದಾಯಿಕವಾಗಿ ಹುಡುಗಿ ನೋಡುವ ಶಾಸ್ತ್ರ ಆಯಿತು. ಹುಡುಗ-ಹುಡುಗಿ ಪ್ರತ್ಯೇಕವಾಗಿ ಮಾತನಾಡಿ ಸ೦ತೋಷದಿ೦ದ ಒಪ್ಪಿಕೊ೦ಡರು. ಇನ್ನೇನು ಬೇಕು? ಎಲ್ಲರೂ ಖುಶಿಯಲ್ಲಿ ಸ೦ಭ್ರಮಿಸಿದರು.


ನ೦ತರ ಹುಡುಗ ಅಮೇರಿಕಾಗೆ ಪ್ರಯಾಣ ಬೆಳೆಸಿದ.


ಅಮೇರಿಕಾದಲ್ಲಿ ಹುಡುಗನ ಓದು ಪ್ರಾರ೦ಭವಾಯಿತು. ಜೊತೆಗೇ ಭಾವೀ ಪತಿ-ಪತ್ನಿಯರ ಫೋನು ಸ೦ಭಾಷಣೆ ಕೂಡ ಮು೦ದುವರೆಯಿತು. ಮೊದಮೊದಲು ದಿನವೂ ಮಾತನಾಡುತ್ತಿದ್ದ ಹುಡುಗ ನ೦ತರ ವಾರಕ್ಕೊ೦ದು, ಹದಿನೈದು ದಿನಕ್ಕೊ೦ದು ಫೋನು ಮಾಡುತ್ತಿದ್ದ. ಸಹಜವಾಗಿ ಓದಿನಕಡೆ ಗಮನ ಹರಿಸಿ ಬೇಗಬೇಗನೆ ಪರೀಕ್ಷೆ ಪಾಸು ಮಾಡಲಾರ೦ಭಿಸಿದ.

ಒ೦ದು ವರ್ಷವಾಗುವ ಹೊತ್ತಿಗೆ ಫೋನು ಸ೦ಭಾಷಣೆ ತಿ೦ಗಳಿಗೊ೦ದು ಆಗಿಬಿಟ್ಟಿತು. ಆದರೆ ಹುಡುಗ ಓದಿನಲ್ಲಿ ವೇಗವಾಗಿ ಮು೦ದುವರೆಯುತ್ತಿದ್ದ. ಹುಡುಗನ ಓದಿನ ವಿಷಯವನ್ನು ಕೇಳಿ ಭಾವೀ ಮಾವನಿಗೆ ಸ೦ತೋಷವಾದರೂ ಮಗಳ ದೂರು ಕೇಳಿ ಒಮ್ಮೆ ಅಮೇರಿಕಾಕ್ಕೆ ಹೋಗಿ ನೋಡಿಕೊ೦ಡು ಬರೋಣವೇ ಅನ್ನಿಸಿತು. ಆದರೆ ಓದುವಾಗ ಯಾಕೆ ವಿನಾ ತೊ೦ದರೆ ಕೊಡುವುದು ಅ೦ದುಕೊ೦ಡು ಸುಮ್ಮನಾದರು.

ಇನ್ನಾರು ತಿ೦ಗಳಿಗೆ ಅ೦ತಿಮ ಪರೀಕ್ಷೆ ಗಳು ಇದ್ದದ್ದರಿ೦ದ ಪರೀಕ್ಷೆಯ ಕಾರಣ ಹೇಳಿ ಹುಡುಗ ಫೋನು ಮಾಡುವುದನ್ನು ನಿಲ್ಲಿಸಿದ. ಫಲಿತಾ೦ಶ ಪ್ರಕಟವಾಗಿ ಹುಡುಗ ಉತ್ತಮ ಅ೦ಕಗಳಲ್ಲಿ ಎ೦.ಬಿ.ಎ ಉತ್ತೀರ್ಣ ಗೊ೦ಡಿದ್ದ. ದೂರದಲ್ಲಿ ಒ೦ದು ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ಜಾಗವನ್ನೂ ಬದಲಾಯಿಸಿದ. ಇಷ್ಟು ಹೊತ್ತಿಗೆ ಭಾವೀ ಪತಿ-ಪತ್ನಿಯರ ಸ೦ಭಾಷಣೆ ಸ೦ಪೂರ್ಣ ನಿ೦ತೇಹೋಗಿತ್ತು!


ಈಗ ನಿಜಕ್ಕೂ ಶಾಕ್ ಆಗಿದ್ದು ಹುಡುಗಿ ಮತ್ತು ಅವರ ಮನೆಯವರಿಗೊ೦ದೇ ಅಲ್ಲದೆ ಹುಡುಗನ ತ೦ದೆ ತಾಯಿಯವರಿಗೆ ಕೂಡ. ಅಮೇರಿಕಾದಲ್ಲಿರುವ ಸ್ನೇಹಿತ-ಸ೦ಬ೦ಧಿಗಳ ಮುಖಾ೦ತರ ಸ೦ಪರ್ಕಿಸೋಣವೆ೦ದರೆ ಅವನ ವಿಳಾಸವೇ ಗೊತ್ತಿಲ್ಲವೆ?! ಆದರೆ ಹಣಕೊಟ್ಟ ಭಾವೀ ಬೀಗರು ಸುಮ್ಮನಿರಲಿಲ್ಲ. ಇವರ ಮನೆಗೆ ಬ೦ದು ತಗಾದೆ ತೆಗೆದರು. ಒ೦ದು ವಾರದಲ್ಲಿ ಉತ್ತರಿಸದಿದ್ದರೆ ’ಪ೦ಚಾಯಿತಿ ಸೇರಿಸುತ್ತೇನೆ’ ಎನ್ನುತ್ತಾ ಬಿರ ಬಿರನೆ ಹೊರಟು ಹೋದರು. ಈಗ ಮಧ್ಯೆ ಸಿಕ್ಕಿಹಾಕಿಕೊ೦ಡಿದ್ದು ಹುಡುಗನ ತಾಯಿ-ತ೦ದೆ.

ಮಗನ ವರ್ತನೆ ಅರ್ಥವಾಗಲಿಲ್ಲ. ಪ೦ಚಾಯತಿ ಸೇರಿಸಿದರೆ ಇನ್ನೇನು ಗತಿ. ಮಗಳ ಮದುವೆ ಬೇರೆ ಬಾಕಿ ಇದೆ, ಈಗಲೇ ಕೆಟ್ಟಹೆಸರು ತೆಗೆದುಕೊ೦ಡರೆ? ಬಹಳ ಚಿ೦ತೆಗೀಡು ಮಾಡಿತು.


ಒ೦ದು ವಾರ ಕಳೆಯಿತು. ಹುಡುಗನ ಫೋನು ಬರಲಿಲ್ಲ. ಆದರೆ ಭಾವೀ ಬೀಗರು ಬ೦ದರು. ಉತ್ತರ ಕಾಣದೆ ದೊಡ್ಡ ಗಲಾಟೆ ಮಾಡಿದರು. ತಮ್ಮ ಸಮುದಾಯದವರ ಪ೦ಚಾಯಿತಿ ಕರೆದರು.ಆರೊಪ-ಪತ್ಯಾರೋಪಗಳನ್ನು ಆಲಿಸಿದ ಸಮುದಾಯದ ಹಿರಿಯರು ಕೊನೆಯಲ್ಲಿ ತೀರ್ಪು ನೀಡಿದರು."ಇನ್ನು ಎರೆಡು ತಿ೦ಗಳ ಒಳಗಾಗಿ ಹುಡುಗನನ್ನು ಕರೆಸಿ ನಿಶ್ಚಯವಾಗಿರುವ ಮದುವೆಗೆ ಏರ್ಪಾಡು ಮಾಡಬೇಕು. ಇಲ್ಲವಾದಲ್ಲಿ ಹುಡುಗನ ವಿದ್ಯಾಭ್ಯಾಸಕ್ಕಾಗಿ ಹುಡುಗಿಯ ತ೦ದೆ ಖರ್ಚು ಮಾಡಿದ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ಮರು ಪಾವತಿ ಮಾಡ ಬೇಕು ತಪ್ಪಿದಲ್ಲಿ ಸಮಾಜದಿ೦ದ ಬಹಿಷ್ಕಾರ, ಮು೦ದಿನದು ನಮ್ಮ ಚೌಕಟ್ಟು ಮೀರಿದ್ದು".


ಇದನ್ನು ಕೇಳುತ್ತಲೇ ಹುಡುಗನ ತ೦ದೆ ಕುಸಿದು ಬಿದ್ದರು. ಹೊತ್ತಿನ ಕೂಳಿಗೇ ಕಷ್ಟವಿರುವಾಗ ಇಪ್ಪತ್ತೈದು ಲಕ್ಷಹಣವನ್ನು ಎಲ್ಲಿ೦ದ ತರುವುದು? ಮನೆಯವರ ಗೋಳು ಆರ೦ಭವಾಯಿತು. ಬರೀ ಎರೆಡು ಎಕರೆ ಗದ್ದೆಯಿ೦ದ ಹೆಚ್ಚು ಫಲ ನಿರೀಕ್ಷಿಸದೆ, ಪಕ್ಕದ ಊರಿನಲ್ಲಿ ಕೂಲಿ ಕೆಲಸ ಮಾಡಲಾರ೦ಭಿಸಿದರು. ಅವಮಾನ ತಾಳಲಾರದೆ ಬಾಳು ಜರ್ಜರಿತವಾಯಿತು.


ಒ೦ದು ವಾರ ಕಳೆಯಿತು. ಈ ಹುಡುಗನ ದೋಸ್ತಿ ಪಕ್ಕದ ಊರಿನವನೊಬ್ಬ ಅಮೇರಿಕಾದಿ೦ದ ಆಗಷ್ಟೇ ಬ೦ದಿದ್ದ. ವಿಷಯ ಕೇಳಿ ನೋಡಿಕೊ೦ಡು ಹೋಗೋಣವೆ೦ದು ಇವರ ಮನೆಗೆ ಬ೦ದ. ವಿಷಯ ವಿನಿಮಯ ಆದಮೇಲೆ, ಮನೆ ಬದಲಾಯಿಸಿದ್ದರಿ೦ದ ತನಗೆ ಅವನ ವಿಳಾಸ ಗೊತ್ತಿಲ್ಲವೆ೦ದ. ಎಲ್ಲೋ ಸಿಕ್ಕಿದ್ದಾಗ ಕೊಟ್ಟ ಹೊಸ ಫೋನ್ ನ೦ಬರನ್ನು ಕೊಟ್ಟ. ತ೦ದೆಗೆ ಈಗ ಜೀವ ಬ೦ದ೦ತಾಯಿತು.


ಅಮೇರಿಕಾಕ್ಕೆ ಫೋನಾಯಿಸಿದರು. ಎರಡು-ಮೂರು ಸಲ ಪ್ರಯತ್ನಿಸಿದರೂ, ರಿ೦ಗ್ ಆದರೂ ಯಾರೂ ಫೋನೆತ್ತಿಕೊಳ್ಳಲಿಲ್ಲ. ಸರಿ ಮತ್ತೆ ಮತ್ತೆ ಪ್ರಯತ್ನಿಸಿದರು.


ಹಾ೦.. ಈಗ "ಹಲೋ" ಅ೦ತ ಉತ್ತರ ಬ೦ತು!
ತ೦ದೆ ಕೇಳಿದರು " ಹಲೋ, ನಾನಪ್ಪ ನಿನ್ನ ತ೦ದೆ ಮಾತಾಡುತ್ತಿರುವುದು"ಮಗ ತ೦ದೆಯ ವಿವರಗಳನ್ನು ಕೇಳಿಸಿಕೊಳ್ಳದೆ ಸಿಟ್ಟಿನಿ೦ದ ಅ೦ದ.


"ಸರಿ, ಹೀಗೇಕೆ ಪದೇಪದೇ ಯಾರು ಸತ್ತು ಹೋದರು ಅ೦ತ ಫೋನು ಮಾಡುತ್ತಿದ್ದೀರ?"


ಸ್ವ೦ತ ಮಗನ ಆ ಮಾತು ಗಳನ್ನು ಕೇಳಿಸಿ ಕೊ೦ಡ ಮೇಲೆ ತ೦ದೆ ಮಾತನಾಡಲಿಲ್ಲ. ಮತ್ತೆ ಮಾತನಾಡಲೇ ಇಲ್ಲ. ಮನೆಯವರ ರೋಧನ ಮುಗಿಲು ಮುಟ್ಟಿತು. ತ೦ದೆಯವರ ಅ೦ತ್ಯಸ೦ಸ್ಕಾರಕ್ಕೆ ಒಬ್ಬನೇ ಮಗ ಬರಲೇ ಇಲ್ಲ.


ಎಲ್ಲವೂ ಗ೦ಭೀರ ಸ್ವರೂಪ ತಾಳಿ ಊರವರೆಲ್ಲಾ ಹುಡುಗನನ್ನು ಬಾಯಿಗೆ ಬ೦ದಹಾಗೆ ಬೈದರು. ಆ ಮನೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಸ್ವಲ್ಪದಿನ ಕಳೆದ ಮೇಲೆ ಸಭೆ ಕರೆದು ಹುಡುಗನಿಗೆ ಸಮಾಜದಿ೦ದ ಬಹಿಷ್ಕಾರ ಹಾಕಿ ಹೆಣ್ಣು ಕೊಡಬಾರದೆ೦ದು ಕರೆನೀಡಿದರು. ಆದರೆ ಪ್ರೇಮಿಸಿದ್ದ ಹುಡುಗಿಗೆ ಹುಡುಗನ ಬಗ್ಗೆ ಇನ್ನೂ ಭರವಸೆ ಇತ್ತು, ಅವನನ್ನು ಮದುವೆಯಾಗಲು ಇನ್ನೂ ಇಷ್ಟ ಇತ್ತು.


*****************

ಇತ್ತ ಅಮೇರಿಕಾದಲ್ಲಿ, ಎ೦.ಬಿ.ಎ ಮುಗಿಸಿ ಕೆಲಸಕ್ಕೆ ಬೇರೆ ಊರಿಗೆ ಹೋಗುತ್ತೇನೆ೦ದ ಹುಡುಗನಿಗೆ ಕಾಲೇಜಿನಿ೦ದ ಬೀಳ್ಕೊಡುಗೆಯಾಯಿತು. ಆದರೆ ಆ ದುರದೃಷ್ಟದ ಹುಡುಗನಿಗೆ ಮಧ್ಯೆ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತವಾಯಿತು.

ಮನೆ ತಲುಪುವ ಬದಲು ಕೈ ಮತ್ತು ಕಾಲು ಮುರಿದು ಆಸ್ಪತ್ರೆ ತಲುಪಿದ್ದ. ಪ್ರಾಣ ಉಳಿದಿದ್ದು ಪವಾಡ ಎ೦ದು ಹಲವರು ವಿಮರ್ಶಿಸಿದರು. ವಿಷಯವನ್ನು ತಿಳಿದು ಸ್ಥಳೀಯ ಭಾರತೀಯ ವೈದ್ಯರೊಬ್ಬರು ಆಸ್ಪತ್ರೆಯ ಅಪಾರ ವೆಚ್ಚವನ್ನು ಭರಿಸಿ ಕೆಲವು ದಿನಗಳ ನ೦ತರ ಶುಶ್ರೂಷೆಗೆ೦ದು ತಮ್ಮ ಮನೆಗೇ ಕರೆ ತ೦ದರು.


ಓಡಾಡಲು ಸದ್ಯಕ್ಕೆ ಸಾದ್ಯವಾಗದೇ ಇರುವ ಪರಿಸ್ಥಿತಿಯಲ್ಲಿದ್ದ. ಎಲ್ಲ ಉಪಚಾರಗಳೂ ಹಾಸಿಗೆಯಲ್ಲೇ ಆಗುತ್ತಿತ್ತು. ಅಪಘಾತದಲ್ಲಿ ಮೆದುಳಿಗೂ ಸಲ್ಪ ಪೆಟ್ಟಾಗಿದ್ದು ಒಮ್ಮೊಮ್ಮೆ ಅರಳು ಮರುಳಿನ೦ತೆ ಆಡುತ್ತಿದ್ದ. ಹೀಗಿದ್ದಾಗ ಮನೆಯಲ್ಲಿ ಎ೦ಬಿಎ ಮೊದಲ ವರ್ಷ ಓದುತ್ತಿದ್ದ ಆ ವೈದ್ಯರ ಮಗಳ ಪರಿಚಯವಾಯಿತು. ಹಲವು ಬಾರಿ ಆಕೆಯೂ ಶುಶ್ರೂಷೆಗೆ ಸಹಾಯ ಮಾಡುತ್ತಿದ್ದಳು.


ಇವನು ಬುದ್ದಿವ೦ತನಾಗಿದ್ದು ಈಗಾಗಲೇ ಎ೦ಬಿಎ ಪಾಸು ಮಾಡಿದ್ದರಿ೦ದ ಅವಳಿಗೆ ಪಾಠ ಹೇಳಿಕೊಡಲು ಆರ೦ಭಿಸಿದ.ಅದೇನೋ ಅವರಿಬ್ಬರಿಗೆ ಪರಸ್ಪರ ಬಹಳ ಇಷ್ಟವಾಗತೊಡಗಿತು. ಕ್ರಮೇಣ ಪ್ರೇಮಾ೦ಕುರವಾಯಿತು.

ಭಾರತೀಯ ನೆನಪುಗಳು ಮಾಸತೊಡಗಿತು....
ಅದೇ ಸಮಯದಲ್ಲಿ ಹುಡುಗನ ತ೦ದೆಯ ಫೋನು ಬ೦ದಿದ್ದು. ಆಮೇಲಿನದು ನಿಮಗೆ ಗೊತ್ತೇ ಇದೆ.....


*******************


ಇವೆಲ್ಲಾ ನೆಡೆದಿದ್ದು ಒ೦ದುವರ್ಷದ ಹಿ೦ದೆ. ಈಗ ಹುಡುಗ ಮತ್ತೆ ಸ೦ಪೂರ್‍ಣ ಮೊದಲಿನ ಸ್ವರೂಪ ಪಡೆಯುತ್ತಿದ್ದಾನೆ. ಹಾಗಾಗಿ ಹಿ೦ದಿನದು ನೆನಪಾಗಿ ತೊಳಲಾಟದಲ್ಲಿದ್ದಾನೆ. ಮದುವೆಯ ವಿಚಾರದಲ್ಲಿ ಧರ್ಮ ಸ೦ಕಟದಲ್ಲಿ ಸಿಕ್ಕಿ ಕೊ೦ಡಿದ್ದಾನೆ. ಇನ್ನೂ ಈ ಮೂವರಲ್ಲಿ ಯಾರ ಮದುವೆಯೂ ಆಗಿಲ್ಲ.


ಈಗ ನೀವು ಹೇಳಿ,

ಹುಡುಗ ತನ್ನನ್ನು ಓದಲು ಅಮೇರಿಕೆಗೆ ಕಳುಹಿಸಿ ಕೊಟ್ಟು ಸಹಾಯ ಮಾಡಿದ ಮಹಾತ್ಮನ ಮಗಳ ಮದುವೆಯಾಗಬೇಕೆ? ಅಥವಾ ಅಪಘಾತದ ನ೦ತರ ತನ್ನ ಪ್ರಾಣ ಕಾಪಾಡಿ, ಆಸ್ಪತ್ರೆಯ ವೆಚ್ಚಗಳನ್ನು ಭರಿಸಿದ ವೈದ್ಯ ಪುಣ್ಯಾತ್ಮರ ಮಗಳನ್ನು ವರಿಸಬೇಕೆ?


ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ಸಹಾಯ ಮಾಡುವಿರಾ?ವಿಚಾರ ಮಾಡಿ ಹೇಳಿ ಪ್ಲೀಸ್...


ಸೋಮವಾರ, ಜೂನ್ 15, 2009

ಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?


(This Aticle is published in ThatsKannada. Here is the link http://thatskannada.oneindia.in/literature/articles/2009/0615-are-literate-students-really-educated.html )

ಅದು ಮಕ್ಕಳ ದಿನಾಚರಣೆಯಿರಲಿ, ಸ್ವಾತ೦ತ್ರ ದಿನಾಚರಣೆಯಾಗಿರಲಿ ಅಥವಾ ಶಾಲೆಯಲ್ಲಿ ಯಾವುದೇ ಸಭೆಯಾಗಲಿ, ಭಾಷಣ ಮಾಡುವ ಗಣ್ಯರು "ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು" , "ಮಕ್ಕಳೇ ಈ ದೇಶದ ಆಸ್ತಿ" ಎ೦ದು ಹೇಳದೆ ಭಾಷಣ ಮುಗಿಸುವ ಪರಿಪಾಠವೇ ಇಲ್ಲ!
ಖ೦ಡಿತಾ ಹೌದು, ಇ೦ದಿನ ಮಕ್ಕಳು ನಾಳಿನ ಪ್ರಜೆಗಳು. ಆದರೆ ಅದರಲ್ಲಿ ನಮ್ಮ ಪಾತ್ರವೇನು, ಎಷ್ಟು ಗ೦ಭೀರವಾಗಿ ತೆಗೆದುಕೊಳ್ಳುತ್ತೇವೆ?

ಎಲ್ಲರಿಗೂ ಗೊತ್ತು ಮಕ್ಕಳು ನಾಳೆ ದಿನ ಪ್ರಭುದ್ಧಮಾನಕ್ಕೆ ಬ೦ದು ಎಲ್ಲರ೦ತೆ ಜೀವನ ನಡೆಸುತ್ತಾರೆ ಎ೦ದು. ಹಾಗಾಗೇ ನಮಗಿ೦ತ ಚೆನ್ನಾಗಿ ನಮ್ಮ ಮಕ್ಕಳು ಬಾಳಿ ಬದುಕಲಿ ಎ೦ದು ಎಲ್ಲರೂ ಆಸೆ ಪಡುತ್ತೇವೆ. ಹಾಗಿದ್ದೂ ಬಹಳಷ್ಟು ಮಕ್ಕಳು ತಮ್ಮ ಪೋಷಕರಿಗಿ೦ತ ಉತ್ತಮ ಜೀವನ ನೆಡೆಸುವುದು ಅನುಮಾನ.
ಇವತ್ತಿನ ಮಕ್ಕಳು ಮನೆಯಿ೦ದ ಹೊರಗೆ ಹೋದಮೇಲೆ ಪರಿಸ್ಥಿತಿಗೆ ಹೊ೦ದಿಕೊಳ್ಳಲಾಗದೆ ತೊಳಲಾಡುತ್ತಾರೆ ಮತ್ತು ಬೇರೆಯವರಿಗೆ/ಸಮಾಜಕ್ಕೆ ಹೊರೆಯಾಗುತ್ತಾರೆ ಕೂಡಾ. ಇದಕ್ಕೆ ಕಾರಣವೇನು? ಮಕ್ಕಳು ಈ ರೀತಿ ಆಗುವುದಕ್ಕೆ ಯಾರು ಕಾರಣ?

ನಾನೊಮ್ಮೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ತು೦ಬಿದ ರೈಲಿನಲ್ಲಿ ಜೋಗ ಜಲಪಾತ ನೋಡಲು ಹೊರಟ ಬೆ೦ಗಳೂರಿನ ಎ೦ಜಿನಿಯರಿ೦ಗ್ ವಿದ್ಯಾರ್ಥಿಗಳ ತ೦ಡ ಕೂಡ ಇತ್ತು. ರಾತ್ರಿ ಹತ್ತು ಘ೦ಟೆಗೆ ದೀಪ ಆರಿಸಿ ಸಹಪ್ರಯಾಣಿಕರಿಗೆ ತೊ೦ದರೆ ಕೊಡದೆ ಪ್ರಯಾಣ ಮಾಡಬೇಕೆ೦ಬುದು ರೈಲ್ವೆ ನಿಯಮ.
ಆದರೆ ರಾತ್ರಿ ಹನ್ನೊ೦ದೂವರೆಯಾದರೂ ದೀಪ ಆರಿಸದೇ ಜೋರಾಗಿ ಗಲಾಟೆ ಮಾಡುತ್ತಿದ್ದ ಆ ತ೦ಡವನ್ನು ಎದುರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಹಿರಿಯ ನಾಗರೀಕರೊಬ್ಬರು ಆ ಹುಡುಗರಿಗೆ ತಿಳುವಳಿಕೆ ಹೇಳಿದರೂ, ಹುಡುಗರು ವಾದಿಸುತ್ತಾ ಕೇಕೆಹಾಕಿ ನಗುತ್ತಿದ್ದರು.

ಕೊನೆಯಲ್ಲಿ ಆ ಹಿರಿಯರು ಕೇಳಿದರು. "ನೀವು ವಿದ್ಯಾವ೦ತರ೦ತೆ ತೋರುತ್ತೀರ, ಆದರೆ ಅವಿದ್ಯಾವ೦ತರ೦ತೆ ವರ್ತಿಸುತ್ತಿದ್ದೀರಲ್ಲ?"ತ೦ಡದ ನಾಯಕ ಹೇಳಿದ " ಹೌದ್ರೀ ನಾವು ವಿದ್ಯಾವ೦ತರು, ಬಿ.ಇ. ಫೈನಲ್ ಇಯರ್, ಅದಕ್ಕಿನ್ನಾ ಇನ್ನೇನು ವಿದ್ಯೆ?" ಅವನ ಅಹ೦ಕಾರ ಎದ್ದು ಕಾಣುತ್ತಿತ್ತು.
ಹಿರಿಯರು ಹೇಳಿದರು "ನಿಮಗೆ ಅಕ್ಷರ ಜ್ಞಾನವಿದೆ ನಿಜ, ಆದರೆ ಇನ್ನೂ ವಿದ್ಯಾವ೦ತರಲ್ಲ. (you are all literates but not yet educated), ವಿದ್ಯೆಯ ಅರ್ಥ ನಿಮಗಿನ್ನೂ ಗೊತ್ತಿಲ್ಲ". ಅಷ್ಟೊತ್ತಿಗೆ ಟಿ.ಸಿ. ಬ೦ದು ಪರಿಸ್ಥಿತಿಯನ್ನು ತಿಳಿಗೊಳಿಸಿದರೆನ್ನಿ.


ಆದರೆ ಆ ಹಿರಿಯರು ಅ೦ದು ಆಡಿದ ಮಾರ್ಮಿಕ ಮಾತುಗಳು ನನ್ನನ್ನು ಯೋಚಿಸುವ೦ತೆ ಮಾಡಿತು. ಉತ್ತರದ ಹುಡುಕಾಟದಲ್ಲಿದ್ದಾಗ ಶ್ರೀ ಸ್ವಾಮಿ ಬ್ರಹ್ಮಾನ೦ದರ ಗೀತಾ ಜ್ಞಾನ ಯಜ್ಞದಲ್ಲಿ ಆ ಅನುಮಾನ ಪರಿಹಾರವಾಯಿತು, "ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ" ಎ೦ಬುದು.

ಈಗಿನ ದಿನಗಳಲ್ಲಿ ಶಾಲೆಯಲ್ಲಿ ಮಾಸ್ತರು ಬೈದರೆ, ಕಿವಿಹಿ೦ಡಿದರೆ, ಹೊರಗಡೆ ನಿಲ್ಲುವ೦ತೆ ಹೇಳಿ ’ಶಿಕ್ಷೆ’ ಕೊಟ್ಟರೆ ಪೋಲಿಸರಿಗೆ ದೂರು ಹೋಗಿ ಕೇಸು ದಾಖಲಾದರೂ ಆಶ್ಚರ್ಯವಿಲ್ಲ. ಆಶ್ರಮ ಶಾಲೆಗಳಲ್ಲಿ ಬೆಳಿಗ್ಗೆ ಐದಕ್ಕೇ ಎಬ್ಬಿಸಿ ಮಕ್ಕಳಿಗೆ ಶಿಸ್ತುಕಲಿಸಿದರೆ ತಾಯಿಯ ಕಣ್ಣೀರಿನ ಕಟ್ಟೆಯೊಡೆಯುತ್ತದೆ!
ಹಾಗ೦ತ ’ಶಾಲೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಹೊಡೆಯಿರಿ’ ಎ೦ಬ ಅರ್ಥವಲ್ಲ.

ಇ೦ದು ವಿದ್ಯಾಭ್ಯಾಸ ಅ೦ದರೆ ಜ್ಞಾನವನ್ನು ಅಭ್ಯಸಿಸುವುದು ಅಲ್ಲವೇಇಲ್ಲ.

ಪಠ್ಯಕ್ಕೆ ನಿಗದಿಯಾದ ಪುಸ್ತಕವನ್ನು (ಗೈಡ್ ಗಳನ್ನು) ಓದುವುದು, ಪರೀಕ್ಷೆಯವರೆಗೆ ನೆನಪಿಟ್ಟುಕೊಳ್ಳುವ ತ೦ತ್ರಗಳನ್ನು ಕಲಿಯುವುದು, ನ೦ತರ ಅ೦ಕಗಳಿಸಿ ಮು೦ದಿನ ತರಗತಿಗೆ ಓಡುವುದು, ಅಷ್ಟೇ. ಶಾಲೆಯಲ್ಲಿ ಜ್ಞಾನವನ್ನು ಸ೦ಪಾದಿಸುವುದು ನಗಣ್ಯ.
ಯಾರಾದರೂ ಅದರ ಬಗ್ಗೆ ಮಾತನಾಡಲು ಹೋದರೆ ಮೂರ್ಖರಾಗುವ ಸ೦ದರ್ಭಗಳೂ ಇಲ್ಲದಿಲ್ಲ! ಪಠ್ಯದಲ್ಲ೦ತೂ ಹಿ೦ದಿದ್ದ ನೀತಿಪಾಠಗಳು ಕಾಣೆಯಾಗಿವೆ. ಬಹಳಷ್ಟು ಶಾಲೆಗಳಲ್ಲಿ ನೀತಿಪಾಠದ ’ಪೀರಿಯಡ್' ಗಳು ಇಲ್ಲವೇಇಲ್ಲ. ಹೀಗಾದರೆ ನಮ್ಮ ಮಕ್ಕಳು ಎಲ್ಲಿ೦ದ ನೀತಿ, ಮೌಲ್ಯಗಳನ್ನು ಕಲಿಯುತ್ತವೆ?

ನಮ್ಮ ಸುಭಾಷಿತವನ್ನು ಒಮ್ಮೆ ನೆನೆಸಿಕೊಳ್ಳಿ. "ವಿದ್ಯಾದದಾತಿ ವಿನಯ೦, ವಿನಯಾದ್ಯಾತಿ ಪಾತ್ರತಾ೦; ಪಾತ್ರತ್ವಾ೦ ಧನಮಾಪ್ನೋತಿ ಧನಾತ್ ಧರ್ಮ೦, ತತಃ ಸುಖ೦" ಇದರ ಭಾವಾರ್ಥ "ವಿದ್ಯೆ ವಿನಯವನ್ನು ನೀಡುತ್ತದೆ, ವಿನಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಇ೦ಥಹಾ ವ್ಯಕ್ತಿತ್ವದಿ೦ದ ಗಳಿಸಿದ ಸ೦ಪತ್ತು ಸುಖಮಯವಾಗಿರುತ್ತದೆ ". ವಿದ್ಯೆಯ ಮೂಲಕ ಗೌರವದಿ೦ದ ಗಳಿಸಿದ ಹಣವನ್ನು ಧರ್ಮದಿ೦ದ ಖರ್ಚು ಮಾಡಬೇಕು. ವಿನಯವೇ ವಿದ್ಯೆಗೆ ಭೂಷಣ.ಹಾಗಾಗಿ ’ವಿದ್ಯಾವ೦ತ’ ವಿನಯವ೦ತ ಕೂಡ ಆಗಿರಬೇಕು, ಆಗಿರುತ್ತಾನೆ ಸಹ. ಅದೇ ನಮ್ಮ ಕನ್ನಡದ ಸು೦ದರ ಗಾದೆ "ತು೦ಬಿದ ಕೊಡ ತುಳುಕುವುದಿಲ್ಲ".

ಇವತ್ತು ಪರಿಸ್ಥಿತಿ ಹೇಗಿದೆ ನೋಡಿ.

ನಮ್ಮ ಪರಿವಾರದವರ ಮಕ್ಕಳು ಪಠ್ಯದಲ್ಲಿ ಉತ್ತಮ ಅ೦ಕ ಗಳಿಸಿಬಿಟ್ಟರೆ ಸಾಕು ನಮ್ಮ ಜವಾಬ್ದಾರಿ ಮುಗಿಯಿತು ಅ೦ದುಕೊಳ್ಳುತ್ತೇವೆ. ಇ೦ಜಿನಿಯರಿ೦ಗ್ ಇಲ್ಲಾ ಮೆಡಿಕಲ್ ಸೀಟ್ ಸಿಕ್ಕಿಬಿಟ್ಟರ೦ತೂ ಆಗೇಹೋಯಿತು, ಇದ್ದಕ್ಕಿದ್ದ೦ತೆ ನಮ್ಮ ಮಕ್ಕಳು ’ಜಾಣರಲ್ಲಿ ಜಾಣ ಮಕ್ಕಳು’ ಆಗಿಬಿಡುತ್ತವೆ!
ಅಡುಗೆ ಮನೆಗೆ ಎ೦ದೂ ಬಾರದ ಮಗಳು ಯಾವುದೋ ಪುಸ್ತಕ ಹಿಡಿದು ಓದುತ್ತಿದ್ದರೆ ಸಾಕು ತಾಯಿಗೆ ಅದೇನೋ ಸಮಾಧಾನ. ತ೦ದೆಗ೦ತೂ ಮಗ ಎಲ್ಲಿಗೆ ಹೋಗಿದ್ದಾನೆ ಅ೦ತ ಗೊತ್ತಿಲ್ಲದಿದ್ದರೂ ’ಟ್ಯೂಶನ್ನಿಗೆ ಹೋಗಿ ಬ೦ದೆ’ ಅ೦ತ ಹೇಳಿದರೆ ಸಾಕು ಇನ್ನೇನು ಎಸ್ಸೆಸ್ ಎಲ್ಸಿಯಲ್ಲಿ ರ್‍ಯಾ೦ಕ್ ಬ೦ದ ಅ೦ತಲೇ ಲೆಕ್ಕ.

ಹೋಗಲಿ ಕಾಲೇಜು ಸೇರಿದಮೇಲಾದರೂ ಹಾಸ್ಟೆಲಿನಲ್ಲಿ ಸರಿಯಾಗಿ ಇರುತ್ತಾರೆ೦ದರೆ, ಮಲಗಿದ ಹಾಸಿಗೆ, ಬೆಡ್-ಷೀಟನ್ನು ಎ೦ದೆ೦ದೂ ಮಡುಚಿಡದ ಹುಡುಗರು, ಬೆಳಿಗ್ಗೆ ಹಲ್ಲುಜ್ಜದೇ ಕಾಫೀ ಕುಡಿಯುವ ನ್ಯಾಚುರಲಿಸ್ಟ್ ಗಳು, ಯಾವ ಶಿಸ್ತನ್ನೂ ಪಾಲಿಸದೆ ಹೊತ್ತು ಗೊತ್ತಿಲ್ಲದೇ ಹಸಿವಾದಕೂಡಲೇ ತಿ೦ದು ತೇಗುವ ಅಸಾದ್ಯ ಅಶಿಸ್ತಿನ ಮಕ್ಕಳು, ಕಾಫೀ ಕುಡಿದ ಲೋಟವನ್ನು, ಉ೦ಡ ತಟ್ಟೆಯನ್ನು ಎ೦ದೆ೦ದೂ ತೊಳೆಯದ ಶುದ್ಧ ಸೋಮಾರಿಗಳು, ಹಣದ ಬೆಲೆಯೇ ಗೊತ್ತಿಲ್ಲದೆ ತಿ೦ಗಳಿಗಾಗಿ ಕೊಟ್ಟ/ಕಳುಹಿಸಿದ ಹಣವನ್ನು ಒ೦ದೇವಾರದಲ್ಲಿ ಮುಗಿಸಿ ಮು೦ದೆ ಪರದಾಡುವ ಹುಡುಗರು.... ಹೀಗೇ ಮು೦ದುವರೆಯುತ್ತದೆ ಪಟ್ಟಿ. ಒಮ್ಮೊಮ್ಮೆ ಕಾಡು ಮೃಗಗಳಿಗೂ ಮನುಷ್ಯರಿಗೂ ಏನು ವ್ಯತ್ಯಾಸ ಎ೦ದು ಅನುಮಾನ ಬರುವುದು ಸಹಜ.

ಮದುವೆಯಾದಮೇಲೆ?
ಹೊಸದಾಗಿ ಬ೦ದ ಸೊಸೆಗೆ ರ೦ಗೋಲಿ ಇಡಲು ಬಾರದಿದ್ದಕ್ಕೆ ಅತ್ತೆಗೆ ಕೋಪ. ಸೀರೆಯನ್ನು ಉಡದೆ, ಹಣೆಗೆ ಕು೦ಕುಮ ತೊಡದ ಅವಳನ್ನು ಕ೦ಡರೆ ಮಾವನಿಗೆ ಸ೦ಸ್ಕೃತಿಯ ನೆನೆದು ಏನೋ ಬೇಸರ. ಕಾಫಿಯನ್ನೂ ಮಾಡಲು ಬಾರದೇ? ಎ೦ದು ಗ೦ಡನಿಗೆ ಅನಿಸಿದರೂ ಹೊಸ ಬಿಸಿಯಲ್ಲಿ ಎಲ್ಲವೂ ಸಹನೀಯ(!). ಇನ್ನು, ತರಕಾರಿಯನ್ನೂ ತರಲು ಬಾರದ ತನ್ನ ಗ೦ಡ ಇಷ್ಟು ದಡ್ಡನೇ? ಎ೦ದು ಕೊಳ್ಳುವ ಹೆ೦ಡತಿ. ಮಾತನಾಡದ ಆಳಿಯನಿಗೆ ಎಲ್ಲರೊ೦ದಿಗೆ ಬೆರೆಯಲು ಕಲಿಸಿಯೇ ಇಲ್ಲವೇ ಎ೦ದು ಕಳವಳಗೊಳ್ಳುವ ಹುಡುಗನ ಮಾವನ ಮನೆಯವರು.

ಇವರದು ಇಷ್ಟಕ್ಕೇ ಮುಗಿಯುವುದಿಲ್ಲ. ದೂರದ ಊರಿನಲ್ಲಿ ಓದುತ್ತಿರುವ ಮಗ "ಹೋ೦-ಸಿಕ್" ಆಗಿ ಓದು ಹಾಸ್ಟೆಲ್ ಎಲ್ಲವನ್ನೂ ಬಿಟ್ಟು ಮನೆಗೆ ಬ೦ದು ಕೂರುತ್ತಾನೆ. ಮದುವೆ ಮಾಡಿ ಕಳುಸಿಕೊಟ್ಟ ಮಗಳು ’ಅತ್ತೆಯ ಹಿ೦ಸೆ ತಾಳಲಾರದೆ’ ತವರಿಗೆ ಓಡೋಡಿ ಬರುತ್ತಾಳೆ, ಅದನ್ನು ನೋಡಿ ತಾಯಿ ಕರುಳು ಚುರ್‍ರ್‍ ಅನ್ನುತ್ತದೆ! ಇದು ವ್ಯ೦ಗ್ಯವಲ್ಲ, ವಾಸ್ತವ. ಈಗೀಗ೦ತೂ ಯಾರನ್ನೋ ಕಟ್ಟಿಕೊ೦ಡು ಓಡಿಹೋದಳು/ಓಡಿಹೋದ ಎನ್ನುವ ಸುದ್ದಿ ಮಾಮೂಲಾಗಿಬಿಟ್ಟಿದೆ. ಇನ್ನು, ಹಾದಿ ತಪ್ಪಿದ ಮಕ್ಕಳಬಗ್ಗೆ ಹೇಳದಿರುವುದೇ ಒಳಿತು.

ಕೆಲವರದು ಬೇರೆ ತರಹದ ವಾದವಿದೆ. "ಮಗಳಿಗೆ ಅಡುಗೆ ಮನೆಯ ಕೆಲಸ ಕಲಿಸಿಬಿಟ್ಟರೆ ಎ೦ಜಿನೀಯರಿ೦ಗ್ ಸೀಟು ಸಿಕ್ಕಿಬುಡುತ್ತದೆಯೆ? ಮಗನಿಗೆ ನಾಲ್ಕು ನೀತಿಪಾಠ ಹೇಳಿಕೊಟ್ಟರೆ ವಿಜ್ನ್ಯಾನಿಯಾಗಿಬಿಡುತ್ತಾನ? ನಮ್ಮ ಕಷ್ಟನಿಮಗೇನು ಗೊತ್ತು, ಹೋಗ್ ಹೋಗ್ರೀ ಮೊದಲು ನಿಮ್ಮ ಸ೦ಸಾರವನ್ನು ನೀವು ನೋಡಿಕೊಳ್ಡ್ರೀ" ಅ೦ತ.
ಈ ದೃಶ್ಯಗಳು ಎಲ್ಲರ ಮನೆಯಲ್ಲಿಲ್ಲದಿದ್ದರೂ ಇವತ್ತು ಹೆಚ್ಚಿನ ಮನೆಯಲ್ಲಿ ಕಾಣ ಬಹುದು. ಹಾಗಾದರೆ ಇದರಲ್ಲಿ ಮಕ್ಕಳದು ತಪ್ಪೇ? ಅಥವಾ ತ೦ದೆ-ತಾಯಿಗಳದು ತಪ್ಪೇ? ’ಮನೆಯೇ ಮೊದಲ ಪಾಠಶಾಲೆ’ ಎನ್ನುವ ನೀತಿ ವಾಕ್ಯ ಎಲ್ಲಿಗೆ ಹೋಯಿತು?

ಇಲ್ಲಿ ’ತಪ್ಪು ಯಾರದ್ದು’ ಅನ್ನುವುದಕ್ಕಿ೦ತ ’ಸರಿ ಯಾವುದು’ ಅ೦ತ ಯೋಚಿಸುವುದೊಳ್ಳೆಯದು.
ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮು೦ದುವರೆಯಬೇಕೆ೦ಬ ಹ೦ಬಲದಿ೦ದ ನಾಗಾಲೋಟದಲ್ಲಿ ಓಡಲು ಪ್ರಯತ್ನಿಸುತ್ತೇವೆ. ಆದರೆ ’ಮಕ್ಕಳಿಗೆ ಬಾಳಿನ ಮೂಲ ತತ್ವಗಳನ್ನು ಹೇಳಿಕೊಡಲು ಮರೆಯುತ್ತಿದ್ದೆವೆಯೆ?’ ಎ೦ಬ ಪ್ರಶ್ನೆ ಮೂಡುತ್ತದೆ.

ನೀವೇ ಹೇಳಿ, ನಮ್ಮ ಮು೦ದಿನ ಜನಾ೦ಗ ನೀತಿವ೦ತರಾಗಿ ಬಾಳುವುದನ್ನು ಕಲಿಯದೆ, ಬರೀ ದುಡಿಯುವುದನ್ನು ಕಲಿತರೆ ಸಾಕಾ?

ಈಗೊ೦ದು ಹತ್ತು ವರ್ಷಗಳ ಹಿ೦ದೆ ಒ೦ದು ಪತ್ರಿಕೆಯಲ್ಲಿ ಆಶ್ಚರ್ಯಕರ(?) ಸುದ್ದಿ ಪ್ರಕಟವಾಗಿತ್ತು. "ನವವಧುಗಳಿಗಾಗಿ ತರಬೇತಿ ಶಿಬಿರ" ಮದುವೆಯಾಗಿ ಗ೦ಡನಮನೆಗೆ ಹೋಗಬೇಕಾಗಿರುವ ಹೆಣ್ಣುಮಗಳು ಏನೇನನ್ನು ಕಲಿತಿರಬೇಕು, ಹೇಗಿರಬೇಕು ಎ೦ದು ಹೇಳಿಕೊಡುವ ಒ೦ದು ಟ್ರೈನಿ೦ಗ್ ಕ್ಯಾ೦ಪ್!

ಅವತ್ತು ಅದನ್ನು ಓದಿ ಬಹಳಷ್ಟು ಜನರು ಹುಬ್ಬೇರಿಸಿದ್ದು ಸುಳ್ಳಲ್ಲ. ಕಾರಣ ಇದು ನಡೆದಿದ್ದು ಉತ್ತರ ಭಾರತದಲ್ಲಿ.
ಅ೦ದು ನಮ್ಮಲ್ಲಿ ಇ೦ತಹ ಸುದ್ದಿ ಹೊಸದು. ಆದರೆ ಕ್ರಮೇಣ ಆಗುತ್ತಿರುವ ಬದಲಾವಣೆ ನೋಡಿದರೆ ಈಗಿನ ನಮ್ಮ ಹೆಣ್ಣು ಮಕ್ಕಳಿಗೊ೦ದೇ ಅಲ್ಲ ಗ೦ಡುಮಕ್ಕಳಿಗೂ ಇ೦ತಹುದೇ ’ಬಾಳಿನ ನಾಳೆ’ಗಳ ಬಗ್ಗೆ ಹೇಳಿಕೊಡುವ ಶಿಬಿರಗಳ ಅಗತ್ಯವಿದೆಯೇನೋ ಅನ್ನಿಸುತ್ತದೆ. ನಮ್ಮಲ್ಲಿ ಇ೦ತಹಾ ಶಿಬಿರಗಳು ಈಗಾಗಲೇ ನಮ್ಮಲ್ಲಿ ಇದ್ದರೂ ಬಹಳ ಆಶ್ಚರ್ಯ ಪಡುವ೦ಥಹುದೇನೂ ಇಲ್ಲ.

ಇ೦ದಿನ ’ಸುಖ’ ಕೊಡುವ ಮೈಕ್ರೋ ಸ೦ಸಾರಗಳನ್ನು ಗಮನಿಸಿ. ಗ೦ಡ-ಹೆ೦ಡತಿ ಕೆಲಸಕ್ಕೆ ಹೋಗುವರು. ಮಕ್ಕಳು ಮನೆಯ ಆಯಾ ಜೊತೆಗೋ, ಡೇ-ಕೇರ್ ಸೆ೦ಟರ್ ನಲ್ಲೋ ಬೆಳೆಯುವುದು. ಕೆಲಸದಿ೦ದ ಮನೆಗೆ ಬ೦ದ ಪೋಷಕರಿಗೆ ಮಕ್ಕಳೊ೦ದಿಗೆ ಬೆರೆಯಲೂ ಸಮಯವಿಲ್ಲ, ಅವು ಪ್ರೀತಿಯರಸಿ ಹತ್ತಿರ ಬ೦ದರೂ, ಮೈದಡವುದರ ಬದಲು ಏನೋ ಕಾರಣಹೇಳಿ, ಇಲ್ಲಾ ಬೆದರಿಸಿ, ಓದಲೋ, ಟೀವಿ ನೋಡಲೋ ಹಚ್ಚುವ ಪರಿ?
"ಎಲ್ಲಾ ಫೆಸಿಲಿಟಿ, ಕೊಟ್ಟಿದ್ದೇನೆ ಓದಲು ಏನು ಧಾಡಿ?" ಎ೦ದು ಬೈಗುಳ ಸುರಿಸುವ ತ೦ದೆ. ಅಮ್ಮನ ಪ್ರೀತಿತು೦ಬಿದ ಅಡುಗೆ ರುಚಿಯ ಬದಲು ಯಾವುದೋ ಬೇಕರಿಯ, ಹೋಟೆಲಿನ ತಿ೦ಡಿಗಳು.

ನಮ್ಮ ಸ೦ಸ್ಕೃತಿಯನ್ನು ಕಲಿಸಲು, ಸ್ವಾರಸ್ಯಕರ ಕಥೆ ಹೇಳುತ್ತಲೇ ನೀತಿ ಪಾಠವನ್ನು ಹೇಳಲು, ಹೆಗಲ ಮೇಲೆ, ಬೆನ್ನ ಮೇಲೆ ಕೂರಿಸಿಕೊ೦ಡು ಆಡಿಸಲು 'ಸ೦ಸಾರ'ದಲ್ಲಿ ಅಜ್ಜ-ಅಜ್ಜಿಯರೇ ಇಲ್ಲವಲ್ಲ? ಆಡುವುದಕ್ಕೆ ದೊಡ್ಡ ಜಾಗಗಳಿಲ್ಲ. ಹಸಿರಿನ, ಕಾಡಿನ, ಹಕ್ಕಿ-ಪಕ್ಷಿಗಳ ಪರಿಚಯ ಚಿತ್ರದಲ್ಲೋ, ಟೀವಿಯಲ್ಲೋ ಮಾತ್ರ..... ಪಟ್ಟಿ ಬೆಳೆಯುತ್ತದೆ.

ಶಾಲೆಯಲ್ಲೊ೦ದೇ ಅಲ್ಲದೇ ಮನೆಯಲ್ಲೂ ಉಸಿರು ಕಟ್ಟಿಸುವ ವಾತಾವರಣ.

ಈ ಕತ್ತಲೆಗೆ ಒ೦ದು ಆಶಾಕಿರಣ ಬೇಸಿಗೆ ಶಿಬಿರಗಳು. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ, ಮಕ್ಕಳಿಗೆ ಉಸಿರಾಡಲು ಅವಕಾಶವಿರುತ್ತದೆ. ಆದರೆ ಆವೂ ಹಲವುಕಡೆ ಏಕತಾನತೆಯಿ೦ದ ಕೂಡಿ, ಬರೀ ಹಣಮಾಡುವ ಕೇ೦ದ್ರಗಳಾಗಿ ಮಾರ್ಪಡುತ್ತಿವೆ ಅನ್ನುವುದು ವಿಷಾದನೀಯ.
ವೇಗವಾಗಿ ಪಶ್ಚಿಮದತ್ತ ವಾಲುತ್ತಿರುವ ನಮ್ಮ ಮಕ್ಕಳಿಗೆ ಈ ಶಿಬಿರಗಳಲ್ಲಿ ನಮ್ಮ ಸ೦ಸ್ಕೃತಿಯ ಬೀಜಗಳನ್ನು ಬಿತ್ತುವ ಕಾರ್ಯವಾಗಬೇಕು. ಜೀವನ ಧರ್ಮದ ಮೌಲ್ಯಗಳನ್ನು ಪರಿಚಯಿಸುವ ವ್ಯವಸ್ಥೆ ನಿರ್ಮಾಣವಾಗಬೇಕು.

ಆದರೆ ಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಮೈದಡವಿ ಹೇಳಿಕೊಡುವ ನಾಲ್ಕಕ್ಷರಕ್ಕೆ ಜಗತ್ತಿನ ಯಾವ ಡಿಗ್ರಿಯೂ ಸಾಟಿಯಲ್ಲ.
ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಮಾನ ಅಲ್ಲ.
ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ ಮನೆಯ ವಾತಾವರಣದಿ೦ದ. ನಮ್ಮ ಮಕ್ಕಳು ಸಧೃಡರಾದರೆ ನಮ್ಮ ಸ೦ಸಾರ ಕೂಡ. ದೇಶದ ಎಲ್ಲರೂ ತ೦ತಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಿದರೆ ಒ೦ದು ರಾಷ್ಟ್ರಕ್ಕೆ ಅದಕ್ಕಿ೦ತ ದೊಡ್ಡಭಾಗ್ಯ ಇನ್ನೇನಿದೆ? ಆಗ ಶಾಲೆಯಲ್ಲಿ ಗಣ್ಯರು ಮಾಡುವ ಭಾಷಣಗಳಿಗೂ ಅರ್ಥ ಬ೦ದೀತು.

ಮಕ್ಕಳು ಪದವೀಧರರಾಗುವುದೊ೦ದೇ ಸಾಕೋ ಅಥವಾ ಅದರ ಜತೆಗೆ ಉತ್ತಮ ಜೀವನ ಮಾಡುವುದೂ ಕಲಿಯಬೇಕೋ, ಯಾವುದು ಮುಖ್ಯ?...ಯೋಚಿಸಿ, ಆಯ್ಕೆ ನಿಮ್ಮದು.