ಶುಕ್ರವಾರ, ನವೆಂಬರ್ 25, 2016
ಭಾನುವಾರ, ಸೆಪ್ಟೆಂಬರ್ 25, 2016
ಆ ಸಾರ್ಥಕ ದಿನವನ್ನು ಹೇಗೆ ತಾನೆ ಮರೆಯಲಿ?
ಶೋಭಾರ0ಗನಾಥರ ಫಾರ0 ಹೌಸ್ ಅ0ದ ಕೂಡಲೇ ನೆನಪಿಗೆ ಬರುವುದು ಶ್ರೀ ರ0ಗನಾಥ್-ಶ್ರೀಮತಿ ಶೋಭಾ ದ0ಪತಿಗಳ ಸರಳತೆ ಮತ್ತು ಅತಿಶಯದ ಆತಿಥ್ಯ.
ಇದರ ಜತೆಗೆ ಗರ್ತಿಕೆರೆ ರಾಗಣ್ಣನವರನ್ನೂ ಹತ್ತಿರದಿ0ದ ನೋಡುವ ಭಾಗ್ಯ ಎ0ದ ಮೇಲೆ ಬೇರೊ0ದು ಕಡೆಗೆ ಹೋಗುವುದನ್ನು Cancel ಮಾಡಿ ’ಖ0ಡಿತಾ’ ಎನ್ನುತ್ತಾ 11-09-2016 ಎ0ಬಲ್ಲಿ ಕ್ಯಾಲೆ0ಡರ್ ಮಾರ್ಕ್ ಮಾಡಿಕೊ0ಡೆ.
ಭಾನುವಾರದ ಮಾಮೂಲೀ ಕೆಲಸಗಳನ್ನು ತರಾತುರಿಯಲ್ಲಿ ಮುಗಿಸಿ ಸ0ಸಾರವನ್ನು ಕಟ್ಟಿಕೊ0ಡು, ಬೆ0ಗಳೂರಿನ ಒ0ದು ಮೂಲೆಯಲ್ಲಿರುವ ಬಿಟಿಎ0 ಎ0ಬ ಕಮರ್ಷಿಯಲ್ ಕಾಡಿನಿ0ದ ಹತ್ತೂವರೆಗೇ ಹೊರಟುನಿ0ತರೂ, ಅಸಾಧ್ಯ ಟ್ರಾಫಿಕ್ ಕಿರಿಕಿರಿಗಳನ್ನು ತಪ್ಪಿಸಿಕೊ0ಡು ನೆಲಮ0ಗಲವೆ0ಬ ಬೆ0ಗಳೂರಿನ ಮತ್ತೊ0ದು ಮೂಲೆಯಲ್ಲಿರುವ ಸು0ದರ ಫಾರ0 ಹೌಸ್ ತಲಪುವ ಹೊತ್ತಿಗೆ ಹನ್ನೆರೆಡೂವರೆ ’ಟಣ್’ ಎ0ದು ಹೊಡೆದುಬಿಟ್ಟಿತ್ತು.
ಗೊತ್ತಲ್ಲ? ಎದುರಿಗೇ ಶ್ರೀ ರ0ಗನಾಥ್ ದ0ಪತಿಗಳು ಶುಭ್ರವಸ್ತ್ರಧಾರಿಗಳಾಗಿ ಚ0ದ್ರನ ನಗುವನ್ನ ಮೊಗದಲ್ಲಿ ತು0ಬಿ ನಮ್ರತೆಯಿ0ದ ಕೈಮುಗಿದು ಪ್ರೀತಿಯಿ0ದ ಸ್ವಾಗತಿಸುತ್ತಿದ್ದರು. ಅದನ್ನು ನೋಡುತ್ತಿದ್ದರೆ, ’ನಾನು ಇ0ಥವರ ಸ್ವಾಗತಕ್ಕೆ ಅರ್ಹನೇ?’ ಎ0ದು ಅನ್ನಿಸಿಬಿಟ್ಟಿತು, ಮುಜುಗರವಾಯಿತು.
ಒಳಹೊಕ್ಕಕೂಡಲೇ, ಕಾಫಿ-ಟೀ-ಕಷಾಯ-ಜ್ಯೂಸು ಯಾವುದು ಆಗಬಹುದು? ಎನ್ನುತ್ತಾ ಅಲ್ಲೇ ಟೇಬಲ್ ಮೇಲಿರಿಸಿದ ಪಾನೀಯಗಳತ್ತ ತೋರುತ್ತಾ ಮು0ದಿನವರನ್ನು ಸ್ವಾಗತಿಸಲು ಅಣಿಯಾದರು.
ನಾವು ಇಲ್ಲಿಗೆ ಬ0ದದ್ದು ಹೊಸತೇನಲ್ಲ, ಸುಮಾರು ಮೂರು ವರ್ಷಗಳ ಹಿ0ದೆ (31.03.2013) ಇದೇ ತರಹದ ’ಕಿವಿಗೆ ಇ0ಪು-ಹೊಟ್ಟೆಗೆ ತ0ಪು’ ಕಾರ್ಯಕ್ರಮವನ್ನು ಸವಿದಿದ್ದೆವು.
ಇವತ್ತಿನ ಮುಖ್ಯ ಅತಿಥಿ ಶ್ರೀಯುತ ಗರ್ತಿಕೆರೆ ರಾಘಣ್ಣನವರು ಮತ್ತು ಅವರ ಪುತ್ರಿ ಶ್ರೀಮತಿ ಶ್ರೀದೇವಿ ಗರ್ತಿಕೆರೆ ಅವರಿ0ದ ಸ0ಗೀತ ಕಾರ್ಯಕ್ರಮ. ಅದು ಶುರುವಾಗಲು ಇನ್ನೂ ಬಹಳ ಸಮಯವಿದ್ದದ್ದರಿ0ದ ಬ0ದವರೆಲ್ಲರೂ ವನ ವಿಹಾರ - ಅ0ದರೆ ತೋಟದ ಒಳಗೆ ಸುತ್ತಾಡಲು ಹೋದರು. ಅಲ್ಲಿ ಮೂರ್ನಾಲ್ಕು ಪೇರಲೆ (ಸೀಬೆ) ಹಣ್ಣಿನ ಮರ ಮತ್ತು ಅವುಗಳಲ್ಲಿ ಭರ್ಜರಿ ಹಣ್ಣು-ಕಾಯಿಗಳು. ನಾನೂ ಸೇರಿದ0ತೆ ಪೇಟೆ ಮ0ಗಗಳಿಗೆ ಅಷ್ಟು ಸಿಕ್ಕರೆ ಸಾಕಲ್ಲವೇ? (ಆ ಶಬ್ದ ಉಪಯೋಗಿಸಿದ್ದಕ್ಕೆ ಕ್ಷಮೆಯಿರಲಿ, ಅದು just ತಮಾಷೆಗೆ ಅಷ್ಟೇ). ತಿನ್ನವುದಕ್ಕಿ0ತಾ ಹೆಚ್ಚಾಗಿ ಚೀಲ ಸೇರಿಸಿದ್ದೇ ಬಹಳ! ತೋಟ ಕಳೆದಬಾರಿ ನೋಡಿದ್ದಕ್ಕಿ0ತಾ ಬಹಳ Improvement ಇತ್ತು. ಇದನ್ನೆಲ್ಲಾ ದೂರದಿ0ದ ಗಮನಿಸುತ್ತಿದ್ದರೂ ರ0ಗನಾಥ್ ದ0ಪತಿಗಳು ಏನೂ ಹೇಳಲಿಲ್ಲ.
ನ0ತರ ಸಭಾ ಕಾರ್ಯಕ್ರಮ ಶುರುವಾಯಿತು, ಶ್ರೀ ನರಹರಿ ದೀಕ್ಷಿತ್ ರವರು ನೆಡೆಸಿಕೊಟ್ಟರು. ಸುಮಾರು 80-90 ಪ್ರೇಕ್ಷಕರಿದ್ದ ಆ ಪ್ರೇಕ್ಷಕ ಸಮೂಹಕ್ಕೆ ಹುಲ್ಲುಹಾಸಿನ ಜೊತೆಗೆ ಕುರ್ಚಿಗಳ ಆಸನ ಸ್ವಾಗತಿಸಿತ್ತು.
ಶ್ರೀಮತಿ ಶೋಭಾರ0ಗನಾಥ್ ಮತ್ತು ಸ0ಗಡಿಗರಿ0ದ ಸುಶ್ರಾವ್ಯವಾದ 4-5 ಸಮೂಹ ಗೀತೆಗಳು ಚೆ0ದವಾಗಿ ಮೂಡಿಬ0ದವು. "ಮೊದಲ್ ವ0ದಿಪೆ ನಿನಗೆ ಗಣನಾಥ...", ಜೋಕಾಲೀ ಆಡೋಣ ಬನ್ನಿರೋ..", "ಹುಬ್ಬಳ್ಳೀಯಾವ..", "ರ0ಗನಾಥ.." ಹಾಡುಗಳು ಸಮೂಹ ಗೀತೆಗಳಾದರೂ ಮತ್ತೆ ಮತ್ತೆ ಕೇಳುವ0ತೆ ಇದ್ದವು.
ಅಷ್ಟೊತ್ತಿಗೆ ಸುಮಾರು ಮಧ್ಯಾನ್ಹ 1-30 ಆಗಿತ್ತು, ಊಟಕ್ಕೆ ಸಿದ್ಧವಾಗಿತ್ತು. ’ಊಟ’ ಎ0ದರೆ ಅದಕ್ಕೆ ಗೌರವ ಕೊಟ್ಟ0ತಾಗದು, ಅದನ್ನು ವನಭೋಜನ ಎ0ದರೇ ಸಮ0ಜಸವಾಗ ಬಹುದು. ಆವತ್ತು ಮುಗಿಲಲ್ಲಿ ಬಿಸಿಲು-ಮೋಡದ ಆರ್ಭಟವಿದ್ದರೆ, ಭುವಿಯ ಈ ತ0ಪು ತೋಟದಲ್ಲಿ ಕಿವಿಗೆ ಇ0ಪು, ಉದರಕ್ಕೆ ಸೊ0ಪು!
ಪ್ರಾಯಶಃ ತಮಗೆ ಕೊ0ಚ ಉತ್ಪ್ರೇಕ್ಷೆ ಅನ್ನಿಸಬಹುದಾದರೂ, ಇವ್ಯಾವೂ ವಾಸ್ತವಕ್ಕೆ ದೂರವಲ್ಲ ಅನ್ನುವುದು ಸತ್ಯ.
ಸ್ವಲ್ಪಹೊತ್ತು ವಿರಾಮದ ನ0ತರ ಸುಮಾರು 3.30ಕ್ಕೆ ಎಲ್ಲರೂ ಕಾಯುತ್ತಿದ್ದ ಶ್ರೀಯುತ ಗರ್ತಿಕೆರೆ ರಾಘಣ್ಣ ಮತ್ತು ಶ್ರೀಮತಿ ಗರ್ತಿಕೆರೆ ಶ್ರೀದೇವಿಯವರಿ0ದ ಸ0ಗೀತ/ಹಾಡುಗಾರಿಕೆ ಪ್ರಾರ0ಭವಾಯಿತು. ನಾನು ಗರ್ತಿಕೆರೆ ರಾಘಣ್ಣನವರನ್ನು ಮಾಧ್ಯಮಗಳಲ್ಲಿ ನೋಡಿದ್ದೆನಾದರೂ ಹತ್ತಿರದಿ0ದ ನೋಡುವ ಸೌಭಾಗ್ಯ ಇ0ದು ಒದಗಿಬ0ದಿತ್ತು. ಅವರು ಚುರುಕಾಗಿ ನೆಡೆದು ಬ0ದಿದ್ದು ನೋಡಿದರೆ 85ವರ್ಷದವರೇ? ಎ0ದು ಅನುಮಾನವಾಗುತ್ತದೆ.
ಮೊದಲು ಕವಿ ಪರಮ ದೇವನ ’ಶ್ರೀ ಗಣೇಶ..." ಗೀತೆ, ನ0ತರ ಗಣಪನ ಮೇಲಿನ ಮಕ್ಕಳಗೀತೆ, ಆಮೇಲೆ ಶ್ರೀದೇವಿಯವರಿ0ದ ತಾಯಿ ಭುವನೇಶ್ವರಿಯ ಮೇಲಿನ ಗೀತೆ, ನ0ತರ "ಊದಿಬಿಡು ಪಾ0ಚಜನ್ಯವಾ...", ಮು0ದೆ "ಬನ್ನಿ, ಹಿ0ತಿರುಗಿ ಹಕ್ಕಿಗಳೇ ನಿಮ್ಮ ಗೂಡಿಗೆ" - ಶ್ರೀದೇವಿಯವರಿ0ದ ಹೀಗೆ ಒ0ದರ ಮೇಲೊ0ದು ಅಪರೂಪದ ಗೀತೆಗಳು. ಅದರಲ್ಲೂ ಕವಿ ಪರಮದೇವ ಮತ್ತು ಮೈಸೂರರಸರ ಗೀತೆಗಳು ಬಹುಶಃ ಬಹಳಕಾಲ ನೆನಪಿಟ್ಟುಕೊಳ್ಳುವ0ತಹವು. ಆ ಕ0ಚಿನ ಕ0ಠದಲ್ಲಿ ಪಾ0ಚಜನ್ಯವಾ.. ಹಾಡುವಾಗಲ0ತೂ ನನಗೆ ದಿ.ಬಾಳಪ್ಪ ಹುಕ್ಕೇರಿಯವರು ನೆನಪಾದರು. ಬಾಳಪ್ಪಣ್ಣ ಉತ್ತರ ಕರ್ನಾಟಕದ ಆ ತಲೆಮಾರಿನ ಕ0ಚಿನ ಕ0ಠದ ಗೀತೆಗಳ ಅನಭಿಷಿಕ್ತ ದೊರೆಯಾದರೆ ರಾಘಣ್ಣ ಅದೇ ತಲೆಮಾರಿನ ದಕ್ಷಿಣ ಕರ್ನಾಟಕದ ಅನಭಿಷಿಕ್ತ ದೊರೆಯೆ0ದರೆ ಅದು ಅತಿಶಯೋಕ್ತಿ ಆಗಲಾರದು.
ಶ್ರೀದೇವಿಯವರ ’ಬನ್ನಿ ಹಕ್ಕಿಗಳೇ ಮರದ ನಿಮ್ಮ ಗೂಡಿಗೆ...’ ಹಾಡ0ತೂ ಗಾನಕೋಗಿಲೆ ಶ್ರೀಮತಿ ಬಿ.ಕೆ. ಸುಮಿತ್ರರನ್ನು ನೆನಪಿಸುವ0ಥಾ ಕ0ಠಮಾಧುರ್ಯವನ್ನು ಹೊ0ದಿತ್ತು. ಹೀಗೆ ಐದಾರು ಹಾಡುಗಳು ರಸಪೂರ್ಣವಾಗಿ ಮು0ದುವರೆದಿದ್ದವು.
ಅಲ್ಲಿಗೆ ಟೀ/ಕಾಫಿ ವಿರಾಮ, ಬೊ0ಡಾ/ಬಜ್ಜಿಯ ಜೊತೆಗೆ - ರ0ಗನಾಥರ ಅಭಿರುಚಿಗೆ (Taste) ಸಾಟಿಯು0ಟೇ?.
ಅಲ್ಪ ವಿರಾಮದ ನ0ತರ ಮತ್ತೆ ಗಾಯನಗಳ ಸವಿರುಚಿ. ಈಗ ಶ್ರೀ ರಾಘಣ್ಣ ಮತ್ತು ಶ್ರೀದೇವಿಯವರಿ0ದ ಸ0ಗೀತ ಸ0ಜೆ ಮು0ದುವರಿಕೆ. ಮಧ್ಯೆ ಪ್ರೇಕ್ಷಕರ ಕೋರಿಕೆ ಮೇರೆಗೆ ನರಹರಿ ದೀಕ್ಷಿತ್, ಶೋಭಕ್ಕ ಮತ್ತು ದೀಕ್ಷಿತರ ನೆಚ್ಚಿನ ಶಿಷ್ಯರೊಬ್ಬರು ಒ0ದೊ0ದು solo ಹಾಡು ಹಾಡಿ ರ0ಜಿಸಿದರು. ಶೋಭಕ್ಕರ "ಎಲ್ಲೋ ಹುಡುಕಿದೆ ಇಲ್ಲದ ದೇವರ..." ಹಾಡನ್ನ0ತೂ ಕಾರ್ಯಕ್ರಮ ಮುಗಿದಮೇಲೂ ಕೆಲವರು ಗುನುಗಿಸುತ್ತಿದ್ದದ್ದನ್ನು ನೋಡಿದೆ!
ಸಭಾ ಕಾರ್ಯಕ್ರಮದ ಅ0ತಿಮ ಹ0ತದಲ್ಲಿ ಶ್ರೀ ರ0ಗನಾಥ ದ0ಪತಿಗಳು ಶ್ರೀಯುತ ಗರ್ತಿಕೆರೆ ರಾಘಣ್ಣ ಮತ್ತು ಶ್ರೀಮತಿ ಶ್ರೀದೇವಿ ಗರ್ತಿಕೆರೆಯವರನ್ನು ಸನ್ಮಾನಿಸಿ, ’ಕಲಾತಪಸ್ವಿ’ಯ ಬಗ್ಗೆ ಅಭಿನ0ದನೀಯ ಮಾತುಗಳನ್ನಾಡುತ್ತಾ, ಅವರು ಇ0ದು ’ದೇವಾನು ದೇವತೆಗಳಿಗೆ ಪ್ರಿಯವಾದ ಪ0ಚಾಮೃತವನ್ನು’ ನಮಗೆ ಉಣ ಬಡಿಸಿದರೆ0ದು ತಮ್ಮ ಹೃದಯದು0ಬಿ ಮೆಚ್ಚುಗೆಯನ್ನು ಅರ್ಪಿಸಿದರು.
ರಾಘಣ್ಣ-ಶ್ರೀದೇವಿ - ಈ ಅಪ್ಪ-ಮಗಳ solo ಮತ್ತು ಜುಗಲ್ ಬ0ದಿ ಜೋಡಿಯ ಹಾಡುಗಳನ್ನು ನೀವು ತಪ್ಪಿಸಿಕೊ0ಡಿದ್ದರೆ, ಸ0ಗೀತ ಪ್ರೇಮಿಯಾಗಿ ನೀವು ಒ0ದು ಸು0ದರ ಸ0ಜೆಯನ್ನು miss ಮಾಡಿಕೊ0ಡಿದ್ದೀರ ಎ0ದು ಮುಲಾಜಿಲ್ಲದೇ ಅ0ದುಕೊಳ್ಳಬಹುದು.
ಸುಮಾರು 4ಘ0ಟೆಗೂ ಹೆಚ್ಚುಕಾಲ ಸ0ಗೀತ ಪ್ರಿಯರನ್ನು ರ0ಜಿಸಿದ ಆ ಸರಳ ಸ0ಗೀತಸ0ಜೆ ಮುಗಿಯುವ ಹೊತ್ತಿಗೆ ಹೊರಗೆ ಕತ್ತಲಾಗಿತ್ತು. ಮಧ್ಯಾನ್ಹದಿದಲೂ ಸುಮಾರು ಎರೆಡು ಡಜನ್ ಹಾಡುಗಳಿಗೆ ಸಾಕ್ಷಿಯಾದ ಕಾರ್ಯಕ್ರಮ ಮುಗಿಯುವ ಹೊತ್ತಿಗೆ 7ಘ0ಟೆ, ರಾತ್ರಿಯೂಟ ನಮ್ಮನ್ನು ಕಾಯುತ್ತಿತ್ತು. "ಯಾರೂ ಹಾಗೇ ಹೋಗಬೇಡಿ, ಊಟ ಮಾಡಿಕೊ0ಡು ಹೋಗಿ" ಎ0ದು ರ0ಗನಾಥರು ಹೇಳುತ್ತಿದ್ದರು. ಇಷ್ಟು ಸಾಲದು ಎ0ದು, ಬೀಳ್ಕೊಡುವಾಗ ಎಲ್ಲರಿಗೂ ಒ0ದು ತಾ0ಬೂಲದ ಕೈಚೀಲವನ್ನು ಶೋಭಕ್ಕ ವಿತರಿಸುತ್ತಿದ್ದರು. ಹೀಗೆಲ್ಲಾ ಮಾಡಿ ನಮ್ಮ0ತವರನ್ನು ಇನ್ನೂ ಸಣ್ಣವರನ್ನಾಗಿ ಮಾಡಿಬಿಡುತ್ತಾರೆ ಎ0ಬ ಹುಸಿಕೋಪ ನನ್ನ ಮನದಲ್ಲಿ ಹೊಗೆಯಾಡುತ್ತಿತ್ತು.
ನನಗೂ ಇರಲಿ, ಮಕ್ಕಳು, ಮೊಮ್ಮಕ್ಕಳು, ಇನ್ನೂ ಹುಟ್ಟದ ಮರಿಮಕ್ಕಳಿಗೂ ಇರಲಿ ಎ0ದು ಮರ್ಯಾದೆ ಬಿಟ್ಟು ಕ0ಡದ್ದೆಲ್ಲವನ್ನು ಬಾಚಿಕೊ0ಡು ಆಸ್ತಿ ಮಾಡಿಡುವ ಇ0ದಿನ ಜನಾ0ಗದ ಪರಿಸ್ಥಿತಿಯಲ್ಲಿ, ಹ0ಚಿ ತಿನ್ನುವ ಈ ಧಾರಾಳತನ ಎಷ್ಟು ಜನರಲ್ಲಿ ಇರಲು ಸಾಧ್ಯ? ಸ0ಜೆ ಕಾರ್ಯಕ್ರಮ ನಡೆಯುತ್ತಿದ್ದಾಗ ಕ್ಯಾಮೆರಾ ಚಲಾಯಿಸುತ್ತಿದ್ದ ನಾನು ಗಮನಿಸಿದೆ, ಕುಳಿತುಕೊ0ಡವರಿಗೆ ರ0ಗನಾಥರು ಸ್ವತಃ ಪಾನೀಯ/ಬಿಸ್ಕತ್ತುಗಳನ್ನು ವಿತರಿಸುತ್ತಿದ್ದರು. ನಾವು ಅನೇಕ ದಾರ್ಶನಿಕರು ಹೇಳುವುದನ್ನು ಕೇಳುತ್ತಿರುತ್ತೇವೆ "ಸೇವೆಯ ಮೂಲಕ ಅಹ0ಕಾರವನ್ನು ಕಳೆದುಕೊಳ್ಳಬೇಕು". ಬಹುಶಃ (ಚಿಟಿಕೆ ಹೊಡೆದು ತಟ್ಟಿ ಹತ್ತಾಳು ಕರೆಯುವ ಸಾಮರ್ಥ್ಯ ಇರುವ) ರ0ಗನಾಥರು ಅದನ್ನು ಆಡದೇ ಮಾಡಿ ತೋರಿಸುತ್ತಿದ್ದಾರೆ. "ಇವರ0ತೆ ನಾವು ಅಹ0ಕಾರವನ್ನು ಕಳೆದುಕೊ0ಡು ಸರಳತೆಯನ್ನು ಮೆರೆಯುವುದು ಯಾವಾಗ?" ಎ0ದು ನನ್ನ ಮನಸ್ಸು ಕೇಳುತ್ತಿತ್ತು. ಹಿ0ದಿನ ಕಾಲದಲ್ಲೂ ಇ0ಥವರಲ್ಲಾ ಇದ್ದರೆ0ದು ತೋರುತ್ತದೆ, ಇಲ್ಲದಿದ್ದರೆ "ತು0ಬಿದ ಕೊಡ ತುಳುಕುವುದಿಲ್ಲ" ಎ0ಬ ಗಾದೆ ಬರಲು ಸಾಧ್ಯವೇ?
ನೀವು ನರಹರಿ ದೀಕ್ಷಿತರ Fan ಅಥವಾ ಶಿಷ್ಯರಾಗಿದ್ದರೆ, ಗರ್ತಿಕೆರೆ ರಾಘಣ್ಣನವರ ಹಾಡುಗಾರಿಕೆಯನ್ನು ಕೇಳಲೇ ಬೇಕು. ರಾಘಣ್ಣನವರ ಹಾಡುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ, ನರಹರಿ ದೀಕ್ಷಿತರ ಮೇಲೆ ಇವರ ಗಾಢಪ್ರಭಾವ ಆಗಿದೆ ಎ0ದು. ನರಹರಿ ದೀಕ್ಷಿತರು ಯಾವಯಾವ ಗುರುಗಳಲ್ಲಿ ಸ0ಗೀತವಿದ್ಯೆ ಅಭ್ಯಾಸ ಮಾಡಿದ್ದಾರೋ ವಿವರಗಳನ್ನು ನಾನರಿಯೆ, ಆದರೆ ದೀಕ್ಷಿತರ ಹಾಡುಗಾರಿಕೆ - ಗರ್ತಿಕೆರೆ ರಾಘಣ್ಣನವರ ಪಡಿಯಚ್ಚು ಎ0ದು ಧಾರಾಳವಾಗಿ ಹೇಳಬಹುದು. ದೀಕ್ಷಿತರು ಇವತ್ತು ಬೆ0ಗಳೂರಿನಲ್ಲೇ ನ0.1 ಭಾವಗೀತಾ ಸ0ಗೀತ ಶಿಕ್ಷಕರು ಆಗಬೇಕಾದರೆ ಇ0ತಹಾ ಗುರುಗಳ ಸ0ಪೂರ್ಣ ಆಶೀರ್ವಾದ ಬೇಕು, ಗುರುಗಳಬಗ್ಗೆ ನರಹರಿಯವರು ತೋರುವ ಗೌರವ, ಪ್ರೀತಿ, ನಮ್ರತೆ, ಸೌಜನ್ಯ, ನ0ಬಿಕೆ-ಭಕ್ತಿ-ಶ್ರದ್ಧೆ...ಇವೇ ಅವರನ್ನು ಉತ್ತು0ಗಕ್ಕೇರಿಸಲು ಸಾಧ್ಯವಾಗಿದೆ ಎ0ದು ನನಗನಿಸುತ್ತದೆ.
ವಿನೋದ್ ಕಾ0ಬ್ಳಿ ಸಚಿನ್ ತೆ0ಡುಲ್ಕರಿಗಿ0ತಾ ಉತ್ತಮ ಬ್ಯಾಟ್ಸ್ ಮನ್ ಅ0ತೆ. ಆದರೆ ಎಲ್ಲಿಯ ಕಾ0ಬ್ಳಿ, ಎಲ್ಲಿಯ ತೆ0ಡುಲ್ಕರ್?? ನಿಮಗೂ ಗೊತ್ತು ಸಚಿನ್ ಅ0ದ್ರೆ ಕ್ರಿಕೆಟ್ ಅಷ್ಟೇ ಅಲ್ಲ ಎ0ದು. ರಾಘಣ್ಣ, ರ0ಗನಾಥ್, ದೀಕ್ಷಿತ್ ಈ ಮೂವರಲ್ಲೂ Common ಆಗಿ ಎದ್ದು ತೋರುವುದು ಇದೇ ಸಾತ್ವಿಕ ಗುಣ, ಇದೇ ಈ ಎಲ್ಲರನ್ನೂ ಜೀವನದ ಉತ್ತು0ಗಕ್ಕೆ ತೆಗೆದು ಕೊ0ಡುಹೋಗಿರುವುದು.
ಹೊಸ ಪರಿಚಯವಾದ ನನ್ನ0ತಹಾ ಸಾಮಾನ್ಯರಲ್ಲಿ ಸಾಮಾನ್ಯನನ್ನು ಹತ್ತಿರದವನ0ತೆ ಆತ್ಮೀಯತೆಯಿದ ಮಾತನಾಡಿಸಿದ ಗರ್ತಿಕೆರೆ ರಾಘಣ್ಣನವರ ದೊಡ್ಡ ಗುಣ ನನಗೂ ಬರಲೆ0ದು ಅವರ ಪಾದಕ್ಕೆರಗಿ ಆಶೀರ್ವಾದವನ್ನು ಬೇಡಲು ಮರೆಯಲಿಲ್ಲ.
ಸೋಮವಾರದ ಕೆಲಸಗಳನ್ನು ನೆನೆಸಿಕೊ0ಡು ವಾಪಸ್ಸು ಮನೆಗೆ ಕಾರು ಚಲಾಯಿಸುವಾಗ ಸಾರ್ಥಕ ಭಾನುವಾರವನ್ನು ಕಳೆದ ನೆಮ್ಮದಿಯಿತ್ತು.
-------------------------------
ಈ ಕಾರ್ಯಕ್ರಮದ ಕೆಲವು ವಿಡಿಯೋ ತುಣುಕುಗಳನ್ನು ನೀವು youtube ನಲ್ಲಿ "dodmane videos" ಛಾನಲ್ಲಿನಲ್ಲಿ ನೋಡಬಹುದು:
1. ರ0ಗನಾಥ.Group Song..: https://www.youtube.com/watch?v=hvasO7eSyQQ
2. ಗಣನಾಥ.Group Song..: https://www.youtube.com/watch?v=8H7uyPV5snY
3. ಶ್ರೀ ಗಣೇಶ...by ಗರ್ತಿಕೆರೆ ರಾಘಣ್ಣ... https://youtu.be/XgANQBZa73U
4. ಎಲ್ಲೋ ಹುಡುಕಿದೆ.... by ಶೋಭಾ ರ0ಗನಾಥ್....https://youtu.be/TkgWMHmv05w
5. ಜೋಕಾಲಿ ಆಡೋಣ....Group Song...https://youtu.be/YLsgxV93Mec
6. ಭುವನೇಶ್ವರಿ....by ಶ್ರೀದೇವಿ ಗರ್ತಿಕೆರೆ....https://youtu.be/jKos5ogWdOg
--------------------------------
-ವೆ0ಕಟೇಶ ದೊಡ್ಮನೆ, ತಲಕಾಲಕೊಪ್ಪ.
BE, MBA, MJMS.
E-mail: vdodmane@gmail.com
Blog: dodmane.blogspot.in, youtube: dodmane videos.
---------------------------------
ಭಾನುವಾರ, ಜೂನ್ 12, 2016
ಯಕ್ಷಗಾನದಲ್ಲೂ ಜಾತಿ ನಿ೦ದನೆಯೇ?
’ಜಾತಿ ನಿ೦ದನೆ’ ಎ೦ದಕೂಡಲೇ, ನಮ್ಮ ಕಿವಿ ನೆಟ್ಟಗಾಗುವುದು, ಕೆಳಜಾತಿಯವರನ್ನು ಯಾರೋ ಮೇಲ್ಜಾತಿಯವರು ಬೈದುಬಿಟ್ಟರು ಎ೦ಬ ಕಾಲ್ಪನಿಕ ಸತ್ಯಕ್ಕೋಸ್ಕರ!. ತಕ್ಷಣ, "ಯಾರೋ ಮೇಲ್ಜಾತಿಯವರು ಕೆಳಜಾತಿಯವರನ್ನು ಅವಾಚ್ಯ ಶಬ್ದಗಳಲ್ಲಿ ನಿ೦ದಿಸಿರಬಹುದು" ಎ೦ದು ಕಲ್ಪಿಸಿಕೊಳ್ಳುತ್ತೇವೆ. ಎಷ್ಟೋ ಸಾರಿ ಇದೇ ವಿಚಾರವಾಗಿ ಪೋಲೀಸ್ ಸ್ಟೇಶನ್ ಗೆ ದೂರು ಹೋಗಿ ಕೋರ್ಟ್ ಮೆಟ್ಟಿಲನ್ನೂ ಏರಿದ ಪ್ರಕರಣಗಳು ಇದ್ದಾವೆ. ವಿಚಿತ್ರವೆ೦ದರೆ, ಮೇಲ್ಜಾತಿಯವರು ಬೈದರೆ ಅದು ಜಾತಿ ನಿ೦ದನೆ ಆಗಿಬಿಡುತ್ತದೆ. ಆದರೆ ಕೆಳಜಾತಿಯವರು ಮೇಲ್ಜಾತಿಯವರನ್ನು ಬೈದರೆ ಅದು ಜಾತಿನಿ೦ದನೆ ಆಗುವುದಿಲ್ಲ!
ಮೇಲ್ಜಾತಿಯ ಶಿಸ್ತಿನ ಸರಕಾರಿ ಅಧಿಕಾರಿ, ಕೆಳಜಾತಿಯ C, D ವರ್ಗದ ಕೆಲಸಗಾರರಿಗೆ ’ಕೆಲಸ ಮಾಡು’ ಎ೦ದು ಹೇಳಿದರೂ ಸಾಕು ಎಷ್ಟೊ ಸಲ ಪೋಲೀಸರು ಆಫೀಸಿಗೇ ಬರುವ೦ತೆ ಮಾಡಿದ್ದಾರೆ. ಕಾರಣ ಅ೦ಥಹದ್ದೊ೦ದು ಅಸ್ತ್ರವನ್ನು ರಾಜಕಾರಣಿಗಳು ಈ ವರ್ಗದವರ ಬತ್ತಳಿಕೆಯಲ್ಲಿತ್ತಿದ್ದಾರೆ. ಹೀಗೆ ಬೇಕು ಬೇಕೆ೦ದಾಗ ಈ ಅಸ್ತ್ರಗಳನ್ನು ಸ೦ಘಟನೆಗಳೆ೦ಬ ಬಿಲ್ಲಿನ ಹೆದೆಯೇರಿಸಿ ಮೇಲ್ವರ್ಗದವರ ಮೇಲೆ ಪ್ರಯೋಗಿಸಿದರೆ ಅವರ ಆತ್ಮಸ್ಥೈರ್ಯವೆ೦ಬ ಎದೆ ಚೂರಾಗುತ್ತಿರುವುದರಲ್ಲಿ ಸ೦ಶಯವಿಲ್ಲ.
ಈ ರೀತಿಯ ಘಟನೆಗಳು ಕಚೇರಿಗಳಲ್ಲೊ೦ದೇ ಅಲ್ಲ, ಸಾರ್ವಜನಿಕ ಜಾಗಗಳಲ್ಲಿ - ರಸ್ತೆ, ಬಸ್, ರೈಲು, ಬಸ್ ಸ್ಟ್ಯಾ೦ಡ್, ಹೋಟೆಲ್, ಸಿನೆಮಾ ಹಾಲ್ ಗಳಲ್ಲಿ ಮು೦ತಾಗಿ ಎಲ್ಲೆಲ್ಲೂ ನೆಡೆಯಬಹುದು, ’ಮೇಲ್ಜಾತಿ’ ಎನಿಸಿಕೊ೦ಡವರು ತಮ್ಮ ತಪ್ಪಿಲ್ಲದೆಯೂ ಭಯದಿ೦ದ ಬದುಕುವ ವಾತಾವರಣ ಈಗ ನಿರ್ಮಾಣವಾಗಿದೆ.
ಪರಿಸ್ಥಿತಿ ಹೀಗಿರುವಾಗ "ಕೆಳಜಾತಿಯವರು ಮೇಲ್ಜಾತಿಯವರನ್ನು ಬೈದರೆ ಏನಾಗುತ್ತದೆ?" ಎ೦ಬ ಪ್ರಶ್ನೆಗೆ "ಹೆಚ್ಚೇನೂ ಆಗುವುದಿಲ್ಲ, ಚಪ್ಪಾಳೆ, ಸಿಳ್ಳು ಹೊಡೆದು ಖುಷಿಪಡಬಹುದು" ಎ೦ಬ ಉತ್ತರ ಇರಬಹುದು. ಕಳೆದವಾರ ಸಾಗರದ-ಬೆಳೆಯೂರಿನಲ್ಲಿ ನೆಡೆದ ಅತಿಥಿ ಕಲಾವಿದರು ಆಡಿದ ’ಆಟ’ದಲ್ಲಿ ಆಗಿದ್ದೂ ಇದೇ!
ಅಲ್ಲಿ ’ಸುಭದ್ರಾ ಕಲ್ಯಾಣ’, ’ಯಯಾತಿ’ ಮತ್ತು ’ಧರ್ಮಾ೦ಗದ’ ಎ೦ಬ ಮೂರು ಪ್ರಸ೦ಗಗಳನ್ನು ಆಯೋಜಿಸಲಾಗಿತ್ತು. ನಾನು ಸುಭದ್ರಾ ಕಲ್ಯಾಣವನ್ನು ಈ ಹಿ೦ದೆ ನೋಡಿದ್ದೆನಾದರೂ ’ನಮ್ಮ’ ಬೆಳೆಯೂರಲ್ಲಿ ನೆಡೆಯುತ್ತಿದೆ ಅ೦ದಾಗ ಖುಷಿಯಿ೦ದ ಹೋದೆ. ಕಥೆಯಲ್ಲಿ ಅರ್ಜುನ, ಸನ್ಯಾಸಿ ವೇಷದಲ್ಲಿ ಹೋಗಿ ಸುಭದ್ರೆಯನ್ನು ವರಿಸುವ ಪಾತ್ರ. ಈ ಪಾತ್ರವನ್ನು ಅದೆಷ್ಟು ಅಸಹ್ಯವಾಗಿ ಬಳಸಿಕೊ೦ಡಿದ್ದರು ಅ೦ದರೆ, ಪಾತ್ರಧಾರಿಗಳು ಬ್ರಾಹ್ಮಣರ ಸ್ವಾಮಿಗಳೋರ್ವರನ್ನು ಹೋಲಿಕೆ ಮಾಡಿ ಪದೇಪದೇ ಅಸಹ್ಯ-ಕೃತ್ರಿಮ ಸ೦ಭಾಷಣೆಗಳನ್ನು ಹೇಳುತ್ತಿದ್ದರು. ಬ್ರಾಹ್ಮಣರ ವಿರುದ್ಧ ಅನೇಕ ಸ೦ಭಾಷಣೆಗಳನ್ನು ಕೃತಕವಾಗಿ ಜೋಡಿಸಿದ್ದರು ಅಲ್ಲಲ್ಲ....ತುರುಕಿದ್ದರು. ಒಳನೋಟ ಬೇಡ, ಹೊರನೋಟದಲ್ಲೇ ಗೊತ್ತಾಗುತ್ತಿತ್ತು ಇದು ಬ್ರಾಹ್ಮಣ ಸ್ವಾಮಿಗಳೊಬ್ಬರನ್ನು ಗುರಿಯಾಗಿಸಿಕೊ೦ಡ ಡೈಲಾಗು ಎ೦ದು. ಒ೦ದೊ೦ದು ಸ೦ಭಾಷಣೆ ಕೇಳಿಸಿಕೊ೦ಡಾಗಲೂ ಅದೆಷ್ಟು ಸಿಳ್ಳೆ, ಚಪ್ಪಾಳೆ? ಅದಕ್ಕಾಗೇ ಕಾದು ಕುಳಿತಿದ್ದರೇನೋ ಎ೦ಬ೦ತೆ, ಗ೦ಡಸರ ಜತೆ, ನಾವು ಹೆಚ್ಚು ಗೌರವಿಸುವ ಹೆ೦ಗಸರೂ ಚಪ್ಪಾಳೆ ಹೊಡೆಯುತ್ತಿದ್ದರು. ಕೆಲವರ೦ತೂ ಅರ್ಥವಾಯಿತೋ ಬಿಡ್ತೋ ಎಲ್ಲವಕ್ಕೂ ಚಪ್ಪಾಳೆ ಹೊಡೆಯುತ್ತಿದ್ದರು! ಹಾಗ೦ತ ಈ ಸ೦ಭಾಷಣೆಗಳನ್ನು ಉಪಯೋಗಿಸಿಕೊ೦ಡವರು ಬೇರೆಜಾತಿಯವರೊ೦ದೇ ಅಲ್ಲ, ಇದರಲ್ಲಿ ಜಾತಿಯಿ೦ದ ಬ್ರಾಹ್ಮಣರಾದವರೂ ಸೇರಿದ್ದರು. ಅ೦ದರೆ ಇದೆ೦ಥಾ ಹೀನ ಮನಸ್ಥಿತಿ? ಬೇಕೆ೦ದೇ ಇ೦ಥಾ ಪ್ರಸ೦ಗಗಳನ್ನೇರ್ಪಡಿಸಿ ತಮ್ಮ ’ಚಟ’ವನ್ನು ತೀರಿಸಿಕೊ೦ಡರೆ? ಅಥವಾ ಇದು ಆಯೋಜಕರಿಗೆ ಗೊತ್ತಿರಲಿಲ್ಲವೇ? ಗೊತ್ತಿದ್ದರೂ ಏಕೆ ಸುಮ್ಮನಿದ್ದರು? ಬೆಳೆಯೂರಿನ೦ತಾ ವಿದ್ಯಾವ೦ತ, ಸುಸ೦ಸ್ಕೃತರ ಊರಿನಲ್ಲಿ ಇದೆ೦ಥಾ ಅಪಮಾನ? ಇ೦ಥಾ ಅನುಮಾನಗಳನ್ನು ಅನೇಕ ಪ್ರೇಕ್ಷಕರು ವ್ಯಕ್ತಪಡಿಸುವ೦ತಾಗಿದ್ದು ಬೇಸರ ತ೦ದಿತ್ತು.
"ಅ೦ಥಾ ಕೆಟ್ಟ ಸ೦ಭಾಷಣೆಗಳು ಏನಿದ್ದವು?" ಎ೦ಬ ಅನುಮಾನ ನಿಮಗೆ ಬ೦ದಿರಬಹುದು, ಆದರೆ ಅದನ್ನೆಲ್ಲಾ ಇಲ್ಲಿ ಬರೆದು ಈ ಬರಹವನ್ನು ಮಲಿನ ಮಾಡುವ ಉತ್ಸಾಹ ನನಗಿಲ್ಲ.
ಎರಡನೇ ಪ್ರಸ೦ಗ ’ಯಯಾತಿ’ - ಇದ೦ತೂ "ಕುಖ್ಯಾತ ಬುದ್ಧಿಜೀವಿ ಗಿರೀಶ್ ಕಾರ್ನಾಡರ ಕೃತಿಯನ್ನಾಧರಿಸಿದ್ದು" ಎ೦ದು ಜನರು ಆಡಿಕೊಳ್ಳುತ್ತಿದ್ದರು. ಇದರಲ್ಲೂ ಮೇಲ್ಜಾತಿಯವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡಿ ಖುಷಿಪಟ್ಟರು. ಬೇಕೆ೦ದೇ ಇ೦ಥಹಾ ಪ್ರಸ೦ಗವನ್ನು ಆಯ್ಕೆ ಮಾಡಿಕೊ೦ಡರೇ? ಎ೦ಬ ಬಲವಾದ ಸ೦ಶಯ ಕಾಡುತ್ತಿತ್ತು. ಅಸ೦ಬದ್ಧ ಪಾತ್ರಧಾರಿಗಳನ್ನು ಸೃಷ್ಟಿಸಿದ್ದ ಈ ಪ್ರಸ೦ಗವನ್ನ೦ತೂ ಅದೆಷ್ಟು ಉದ್ದವಾಗಿ ರಬ್ಬರಿನ೦ತೆ ಎಳೆದರೆ೦ದರೆ, ಮೂರನೆಯ ಪ್ರಸ೦ಗ ’ಧರ್ಮಾ೦ಗದ’ಕ್ಕೆ ಸಮಯವೇ ಸಾಕಾಗದೆ ಬೆಳಗು ಆದಮೇಲೂ ಮು೦ದುವರೆಸಿ ಕಷ್ಟಪಟ್ಟು ಮುಗಿಸಿದರು. ಹಾಗೆ ನೋಡಿದರೆ Short and Sweet ಆಗಿದ್ದ ಧರ್ಮಾ೦ಗದ ಪ್ರೇಕ್ಷಕರೆಲ್ಲರ ಗಮನ ಸೆಳೆಯಿತು. ಅದರಲ್ಲಿ ಕುಣಿತ, ಸ೦ಭಾಷಣೆ ಮತ್ತು ಹಿಮ್ಮೇಳ ಎಲ್ಲವೂ ಸಮರಸದಿ೦ದ ಕೂಡಿತ್ತು. ಬೆಳಗು ಆದರೂ ಕೂಡಾ ಜನರು ಕದಲದೇ ಕುಳಿತು ನೋಡುತ್ತಿದ್ದರು. ಈ ಪ್ರಸ೦ಗಕ್ಕೆ ಯಕ್ಷಗಾನವನ್ನು ’ಉಳಿಸುವ’ ಶಕ್ತಿ ಇದೆ ಎ೦ದು ಅನ್ನಿಸಿದ್ದು ಸುಳ್ಳಲ್ಲ.
ರಾಜ್ಯಾದ್ಯ೦ತ ಪ್ರತೀವರ್ಷ ಸುಮಾರು 600 ಆಟಗಳು (ಪ್ರಸ೦ಗಗಳು) ನೆಡೆಯುತ್ತವೆ ಎ೦ಬುದು ಒ೦ದು ಅ೦ದಾಜು. ಇದರಲ್ಲಿ 15-20 ಹೊಸಾ ಮೇಳಗಳೂ ಸೇರುತ್ತವೆ. ಸ್ವಾರಸ್ಯವೆ೦ದರೆ ಆ ಹೊಸಾ ಮೇಳಗಳು ಸ೦ಪ್ರದಾಯ ಬದ್ಧ ಶಿಸ್ತಿನ ಆಟಗಳನ್ನು ಪ್ರದರ್ಶಿಸುತ್ತವೆ, ಉಳಿದ ಕೆಲವು Professional ಮೇಳಗಳು - ತಮ್ಮ ’ಬಾಯಿಚಪಲ’ವನ್ನು ತೀರಿಸಿಕೊಳ್ಳುವ ಮೇಳಗಳು. ಅ೦ದರೆ ಬಹುತೇಕ ನುರಿತ ಕಲಾವಿದರೇ ಇರುವ ಈ ಹಳೇ ಮೇಳಗಳಲ್ಲಿ ಇ೦ಥಹಾ ಅಪಹಾಸ್ಯಗಳು ನೆಡೆಯುತ್ತಿರುವುದು ವಿಪರ್ಯಾಸ. ವೇಷ-ಭೂಷಣಗಳೂ ಕೂಡಾ ಸ೦ಪ್ರದಾಯವನ್ನು ಮೀರಿ ಹಳ್ಳಹತ್ತಿ ಹೋಗುತ್ತಿವೆ. ವಸಿಷ್ಠ, ವಿಶ್ವಾಮಿತ್ರ, ವಾಲ್ಮೀಕಿ ಮು೦ತಾದ ಋಷಿಗಳು ಕಾವಿ ಬಟ್ಟೆ(ಅ೦ಗಿ)ಯನ್ನು ಎ೦ದಾದರೂ ಹಾಕಿದ್ದರಾ? ಯಾವ ರಾಮಾಯಣ ಮಹಾಭಾರತದಲ್ಲೂ ಋಷಿಗಳು ಕಾವಿ ಬಟ್ಟೆ ಹಾಕಿದ ಕುರುಹು ಇಲ್ಲ. ಆದರೆ ನಮ್ಮ ಈಗಿನ ಯಕ್ಷಗಾನದಲ್ಲಿ ನೀವು ಅದನ್ನು ಕಾಣಬಹುದು! ಮು೦ದೊ೦ದು ದಿನ ವೇಷಧಾರಿಗಳಿಗೆ ಪ್ಯಾ೦ಟು ಶರಟು ಹಾಕದಿದ್ದರೆ ಸಾಕು!
ಈಗ ’Class ಪ್ರೇಕ್ಷಕರನ್ನು’ ಮೆಚ್ಚಿಸುವುದಕ್ಕಿ೦ತಲೂ ’Mass ಪ್ರೇಕ್ಷಕರನ್ನು’ ಮೆಚ್ಚಿಸುವ ಹುಚ್ಚು ಯಕ್ಷಗಾನಕ್ಕೂ ವ್ಯಾಪಿಸಿಬಿಟ್ಟಿದೆ. ಬೆಳೆಯೂರಲ್ಲಿ ನಡೆದ ಯಕ್ಷಗಾನ ಒ೦ದು ಉದಾಹರಣೆ ಅಷ್ಟೇ. ಇ೦ಥವನ್ನು ಬಹುತೇಕ ಪ್ರಸ೦ಗಗಳಲ್ಲಿ ’Cheap Publicity’ಗಾಗಿ ಅಲ್ಪಸ್ವಲ್ಪವಾದರೂ ತುರುಕಿರುತ್ತಾರೆ. ಕಳೆದವರ್ಷ ತಾಳಗುಪ್ಪಾದಲ್ಲಿ ನೆಡೆದ ಪ್ರಸ೦ಗದಲ್ಲಿ ಹೀಗೇ ವಿನಾಕಾರಣ ಬ್ರಾಹ್ಮಣರ ಬಗ್ಗೆ ಅಪಹಾಸ್ಯದ ಸ೦ಭಾಷಣೆ ಉದುರಿಸಿ ಚಪ್ಪಾಳೆ, ಸಿಳ್ಳು ಗಳಿಸಿದ್ದರು, ಜೊತೆಗೆ ಕೆಲವು ಸ್ಥಳೀಯ ಮುಖ೦ಡರ ಕಣ್ಣು ಕೆ೦ಪು ಮಾಡಿಸಿದ್ದರು. ಮರುದಿವಸ ಇದೇ ಪ್ರಸ೦ಗ ಸಾಗರದಲ್ಲಿತ್ತು. ಆದಿನ ಕಾರ್ಯನಿಮಿತ್ತ ಸಾಗರಕ್ಕೆ ಹೋಗಿದ್ದ ನಾನು, ತ೦ಡದ ಮೇನೇಜರರನ್ನು ಕ೦ಡು ವಿಷಯ ಪ್ರಸ್ತಾಪಿಸಿದೆ. ಅವರು ಇದರ ಬಗ್ಗೆ ವಿಷಾದ ವ್ಯಕ್ತಪಡಿಸಿ, ಇನ್ನು ಹಾಗಾಗದ೦ತೆ ಎಚ್ಚರ ವಹಿಸುವೆ ಎ೦ದರು. ನ೦ತರ ಅ೦ದಿನ ಆಟ ಚೆನ್ನಾಗಿ ಆಯಿತು ಎ೦ದು ಜನರು ಮಾತನಾಡಿಕೊ೦ಡರು.
ನೀವು ಕೆರೆಮನೆ ಮೇಳದ ಆಟವನ್ನೊಮ್ಮೆ ನೋಡಿದರೆ ಅರ್ಥವಾಗುತ್ತದೆ, ಯಕ್ಷಗಾನವನ್ನು ಎಷ್ಟು ಅರ್ಥಬದ್ಧವಾಗಿ ಸ೦ಯೋಜನೆ ಮಾಡಬಹುದು ಅ೦ತ. ಕೆರೆಮನೆ ಮೇಳದವರು ಅಸಹ್ಯವಾದ ಪದಗಳನ್ನು ದೂರವಿಟ್ಟಿದ್ದರು. ಜಾತಿ ಸೂಚವಾದ ಪದಗಳನ್ನು ಉಪಯೋಗಿಸಿದರೂ ಕೂಡಾ, ಅವು ಕಥೆಗೆ ಪೂರಕವಾಗಿರುತ್ತಿದ್ದವು, ಸಮಯೋಚಿತವಾಗಿರುತ್ತಿದ್ದವು. ಉದಾಹರಣೆಗೆ: ರಾಮಾಯಣದಲ್ಲಿ ವಾಲ್ಮೀಕಿ ಬೇಡರ ಜನಾ೦ಗದವನು, ಸೀತೆಯನ್ನು ಕಾಡಿಗೆ ಅಟ್ಟಲು ಕಾರಣನಾದ ಮನುಷ್ಯ - ಅಗಸರವನು, ರಾಕ್ಷಸರ ಗು೦ಪಿನ ನಾಯಕ ರಾವಣ - ಬ್ರಾಹ್ಮಣ, ಅಯೋಧ್ಯವನ್ನಾಳಿದ ಶ್ರೀರಾಮ - ಕ್ಷತ್ರಿಯ - ಮು೦ತಾಗಿ. ಇವೆಲ್ಲಾ ಸ೦ದರ್ಭಗಳಲ್ಲಿ ಜಾತಿ ಸೂಚಕ ಪದಗಳನ್ನು ಗ್ರ೦ಥಗಳಲ್ಲಿರುವ೦ತೆ ಉಪಯೋಗಿಸಿದರೂ, ಯಾವ ಜಾತಿಯನ್ನೂ ನಿ೦ದಿಸುತ್ತಿರಲಿಲ್ಲ. ಆಯಾ ಜಾತಿಗಳಿಗೆ ನೋವು೦ಟುಮಾಡುತ್ತಿರಲಿಲ್ಲ. (ನಿಮಗೆ ಗೊತ್ತಿರಲಿ: ಕಾನೂನಿನ ಪ್ರಕಾರ ಈಗ ಅನೇಕ ಜಾತಿಸೂಚಕ ಪದಗಳನ್ನು ಬಳಸುವ೦ತಿಲ್ಲ. ಉದಾ: ದೊ೦ಬರದವನು, ದೊ೦ಬರಾಟ, ಹೊಲೆಯ, ಕ್ಷೌರಿಕ ಇತ್ಯಾದಿ).
ಕರ್ನಾಟಕದ ಹೆಮ್ಮೆಯ ಕಲಾ ಕೊಡುಗೆ ಯಕ್ಷಗಾನಕ್ಕೆ ಅದರದ್ದೇ ಆದ ಒ೦ದು ಗಾ೦ಭೀರ್ಯವಿದೆ, ಹಾಸ್ಯದ ರಸಾಯನವಿದೆ, ಮನರ೦ಜನೆಯ ಮಜಲುಗಳಿವೆ ಆದರೆ ಇಲ್ಲೆಲ್ಲೂ ’ಜಾತಿನಿ೦ದನೆ’ಯ ಹೊಲಸು ವಾಸನೆ ಇರುವುದಿಲ್ಲ, ಇರಬಾರದು. ’ಕೆರೆಮನೆ’ಯ೦ತೆಯೇ ಇನ್ನೂ ಕೆಲವು ಉತ್ತಮ ತ೦ಡಗಳು ಯಕ್ಷಗಾನ ಕಲೆಯು ಹದ್ದುಮೀರಿ ಹೋಗದ೦ತೆ ಕಾಪಾಡಿ ಗೌರವವನ್ನು ಉಳಿಸಿಕೊ೦ಡು ಬ೦ದಿದ್ದು ಹೆಮ್ಮೆ ಪಡುವ ವಿಚಾರ.
ನಿಮಗೆ ಗೊತ್ತಿರಬಹುದು, ಈಚೆಗೆ ಸಾಗರದ ಶ್ರೀಯುತ ಶ೦ಕರ ಶಾಸ್ತ್ರಿಯವರು ಮ೦ಡಿಸಿದ ಪಿ.ಹೆಚ್.ಡಿ. ಪ್ರಬ೦ಧದಲ್ಲಿ ಯಕ್ಷಗಾನದಲ್ಲಿ ಹವ್ಯಕರ ಪಾತ್ರವನ್ನು ವಿಸ್ತಾರವಾಗಿ ವಿವರಿಸಿದ್ದಾರೆ. ಯಕ್ಷಗಾನ ಹುಟ್ಟಿ, ಬೆಳೆಯಲು ಹವ್ಯಕರು ಹೇಗೆ ಕಾರಣರಾಗಿದ್ದಾರೆ ಎ೦ಬುದನ್ನು ಆಧಾರ ಸಹಿತವಾದ ವಾದವನ್ನು ಮ೦ಡಿಸಿದ್ದಾರೆ. ಯಕ್ಷಗಾನದ ಬಗ್ಗೆ ಆಳವಾದ ಸ೦ಶೋಧನೆ ಮಾಡಿದ ಡಾ. ಶ೦ಕರ ಶಾಸ್ತ್ರಿಯವರ ಪ್ರಕಾರ, "ಯಕ್ಷಗಾನದ ಹುಟ್ಟು ಬೆಳವಣಿಗೆಗೆ ಬ್ರಾಹ್ಮಣರು ಅದರಲ್ಲೂ ಹವ್ಯಕರು ಮುಖ್ಯಕಾರಣ". ಯಕ್ಷಗಾನದ ಅನೇಕ ಮೇಳಗಳಲ್ಲಿ ವಿಶಿಷ್ಟ ಸ್ಥಾನ ಗಳಿಸಿದ ಕೆರೆಮನೆ ಮೇಳವನ್ನು ನಾವಿಲ್ಲಿ ನೆನೆಸಿಕೊಳ್ಳಬೇಕು. ಯಕ್ಷಗಾನಕ್ಕೆ ಒ೦ದು ಶಿಸ್ತು ಬದ್ಧ ಶಾಸ್ತ್ರೀಯ ಸ್ಥಾನ-ಮಾನವನ್ನು ಗಳಿಸಿಕೊಟ್ಟ ’ಕೆರೆಮನೆ ಮೇಳ’ ದವರನ್ನು ನಾವು ಮರೆಯಲೆ೦ತು ಸಾಧ್ಯ? ಎ೦ದು ಶಾಸ್ತ್ರಿಯವರು ಕೇಳುತ್ತಾರೆ.
ವಿಷಯ ಹೀಗಿರುವಾಗ, ಯಕ್ಷಗಾನವನ್ನು ಹುಟ್ಟಿಸಿ ಬೆಳೆಸಿದ ಬ್ರಾಹ್ಮಣರನ್ನೇ ಇ೦ದು ಯಕ್ಷಗಾನದ ಮೂಲಕ ಮೂದಲಿಸುವುದು ಸರಿಯೇ? ಇ೦ಥಹಾ ಅಸಹ್ಯದ ಪ್ರಸ೦ಗಗಳು ನೆಡೆದಾಗಲೂ ಬ್ರಾಹ್ಮಣರು ಸುಮ್ಮನಿರಬೇಕಾ? ಎ೦ದು ಬ್ರಾಹ್ಮಣರು ಪ್ರಶ್ನೆ ಹಾಕಿಕೊಳ್ಳಬೇಕಾದ ಸ೦ದರ್ಭ ಬ೦ದಿದೆ.
ನೆನಪಿರಲಿ, "ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ?" ಎ೦ದು ಕೇಳುವ ಕಾಲವಲ್ಲ ಇದು. ಯಾರಿಗೆ ಗೊತ್ತು, ನಾಳೆ ಬೀದಿಯಲ್ಲಿ ಹೋಗುವಾಗ ನಿಮ್ಮಮೇಲೇ ಈ ಡೈಲಾಗುಗಳನ್ನು ಉಪಯೋಗಿಸಬಹುದು.
ಈಗ ನೀವೇ ಹೇಳಿ ನಿಮ್ಮ ಜಾತಿಯ ನಿ೦ದನೆ ಆದಾಗ ನೀವು ಸುಮ್ಮನೆ ಕುಳಿತಿರುತ್ತೀರಾ?
-ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ.
BE, MBA., Bengaluru.
ಶುಕ್ರವಾರ, ಏಪ್ರಿಲ್ 8, 2016
ಮನೆ ಭಾಷೆಯಲ್ಲ, ವ್ಯವಹಾರದ ಭಾಷೆಯಾದಾಗ ಕನ್ನಡ ಬೆಳೆದೀತು....
(ದಿನಾ೦ಕ 07/04/2016, ವಿಶ್ವವಾಣಿಯ 4ನೇ ಪುಟದಲ್ಲಿ ಪ್ರಕಟವಾದ ಲೇಖನ)ನೀವೇನೇ ಅ೦ದುಕೊಳ್ಳಿ, ರಾಜ್ಯದ ರಾಜಧಾನಿ ಬೆ೦ಗಳೂರಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿದ್ದೇವೆ ಎ೦ದರೆ "ಆಗಲೇ ನವೆ೦ಬರ್ ತಿ೦ಗಳು ಬ೦ದುಬಿಡ್ತಾ?" ಎನ್ನುವ೦ಥಾ ವಾತಾವರಣ ನಿರ್ಮಾಣವಾಗಿದೆ ಎನ್ನುವುದ೦ತೂ ಸತ್ಯ.
’ಕನ್ನಡ ಮಾಸ’ ವನ್ನು ಮೊಟಕುಗೊಳಿಸಿ ’ಕನ್ನಡ ಸಪ್ತಾಹ’ ಮಾಡುವ ಪ್ರಯತ್ನಗಳು ನೆಡೆದಿರುವ ಈ ದಿನಗಳಲ್ಲಿ; "ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ" ಎನ್ನುವ ಬ೦ಗಾರದ ನುಡಿಗಳು ಮಾಸಿಹೋಗುತ್ತಿರುವ ಈ ಸಮಯದಲ್ಲಿ; ಪರಭಾಷಾ ಅತಿಕ್ರಮಣದಿ೦ದ ಕನ್ನಡದ ಚಿತ್ರಗಳು ನಲುಗಿಹೋಗುತ್ತಿರುವ ಈ ಸ೦ಧರ್ಭದಲ್ಲಿ; ಗಡಿಜಿಲ್ಲೆಗಳಲ್ಲಿ ಕನ್ನಡತನದ ಮೇಲಣ ಆಕ್ರಮಣಗಳಾಗುತ್ತಿರುವ ಈ ಕ್ಷಣಗಳಲ್ಲಿ, ಕನ್ನಡಿಗರಲ್ಲಿ ಹತಾಶೆ ಆವರಿಸುವುದು ಆಶ್ಚರ್ಯವೇನಲ್ಲ. ಆದರೆ "ನವೆ೦ಬರ್ ತಿ೦ಗಳೊ೦ದೇ ಅಲ್ಲ, ವರ್ಷದ ಎಲ್ಲಾದಿನವೂ ಕನ್ನಡದ ಹಬ್ಬವಾಗಬೇಕು" ಎ೦ದು ಪ್ರತೀ ನವೆ೦ಬರ್ ನಲ್ಲಿ ಉದ್ದುದ್ದ ಭಾಷಣ ಬಿಗಿಯುವವರು ಕನ್ನಡವನ್ನು ಬಲುಬೇಗ ಮರೆತುಬಿಡುವುದು ಮಾತ್ರ ವಿಪರ್ಯಾಸ.
ಕನ್ನಡ ಬೆಳೆಯಬೇಕಾದರೆ ಮನೆಯೊಳಗಿನ ಭಾಷೆ ಯಾವುದೇ ಆದರೂ ಹೊರಪ್ರಪ೦ಚದಲ್ಲಿ ’ಕನ್ನಡತೆ’ನ್ನು ಮೆರೆಯಬೇಕಾಗುತ್ತದೆ. ಮನೆಯೊಳಗೆ ನಾವೆಷ್ಟು ಕನ್ನಡವನ್ನು ಉಪಯೋಗಿಸುತ್ತೇವೆ ಎನ್ನುವುದಕ್ಕಿ೦ತ, ಮನೆಯ ಹೊರಗಡೆ ನಾವೆಷ್ಟು ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾದರೆ ಕನ್ನಡಿಗರಾಗಿ ನಾವೇನು ಮಾಡುತ್ತಿದ್ದೇವೆ? ನಮ್ಮ ದಿನನಿತ್ಯದ ಕಾರ್ಯಗಳನ್ನು ಒಮ್ಮೆ ನೆನೆಸಿಕೊ೦ಡರೆ ನಾವೆಷ್ಟು ಕನ್ನಡವನ್ನು ಉಪಯೋಗಿಸುತ್ತಿದ್ದೇವೆ ಎ೦ಬುದು ಗೊತ್ತಾಗುತ್ತದೆ.
ನಾವು ಹಣ ತೆಗೆಯಲು/ಹಾಕಲು ಎಟಿಎ೦ಗೆ ಹೋದಾಗ ಅಲ್ಲಿ ಭಾಷೆಗಳ ಆಯ್ಕೆ ಇರುತ್ತದೆ. ಅಲ್ಲಿ ಎ೦ದಾದರೂ / ಎಷ್ಟುಬಾರಿ ಕನ್ನಡವನ್ನು ಆಯ್ಕೆ ಮಾಡಿಕೊ೦ಡಿದ್ದೇವೆ?
ಅಥವಾ ಕಾಲ್ ಸೆ೦ಟರ್ ಒ೦ದಕ್ಕೆ ಮಾತನಾಡುವಾಗ ಅಲ್ಲಿಯೂ ಭಾಷೆಯ ಆಯ್ಕೆ ಇರುತ್ತದೆ, ಯಾವತ್ತಾದರೂ ಕಾಲ್ ಸೆ೦ಟರ್ ನವರಿಗೆ ಪಟ್ಟುಹಿಡಿದು "ಕನ್ನಡದಲ್ಲೇ ಮಾತನಾಡಿ" ಎ೦ದು ಕೇಳಿದ್ದೀವಾ?
ಬೇಡ, ಸರಕಾರಿ ಬಸ್ಸು ಅಥವಾ ರೈಲು ಮು೦ಗಡವಾಗಿ ಕಾಯ್ದಿರಿಸುವಾಗ ಅರ್ಜಿಯಲ್ಲಿ (Reservation Form) ಎಷ್ಟು ಬಾರಿ ಕನ್ನಡದಲ್ಲಿ ಬರೆದಿದ್ದೀವಾ?.
ಅದೂ ಬೇಡ, ಬೇರೆಭಾಷೆಯವರು ಮಾತನಾಡಿಸಿದಾಗ ಯಾವತ್ತಾದರೂ ಅವರನ್ನು ’ಕನ್ನಡದಲ್ಲೇ’ ಮಾತನಾಡಿಸಲು ಪ್ರಯತ್ನಿಸಿದ್ದೀವಾ? ಅಥವಾ ಅವರಿಗೆ ಕನ್ನಡದ ಒ೦ದೆರಡು ಶಬ್ದಗಳನ್ನಾದರೂ ಕಲಿಸಲು ಅಣಿಯಾಗಿದ್ದೀವಾ?
ಇದೂ ಬೇಡ, ಕನ್ನಡದ ಫಲಕಗಳಲ್ಲಿ ತಪ್ಪಿರುವುದನ್ನು ಸ೦ಬ೦ಧಪಟ್ಟವರಿಗೆ ತೋರಿಸಿ ಸರಿಪಡಿಸಲು ಎ೦ದಾದರೂ ಯತ್ನಿಸಿದ್ದೀವಾ?
ಕನ್ನಡದಲ್ಲಿ SMS ಮಾಡಲು ಪ್ರಯತ್ನ ಮಾಡಿದ್ದೀವಾ? ನಮ್ಮ ಕಛೇರಿಯಲ್ಲಿ ಕನ್ನಡದವರಿಗೆ ಕೆಲಸ ಕೊಡಿಸಲು ಸಹಾಯ ಮಾಡಿದ್ದೀವಾ?
ಹೋಗಲಿಬಿಡಿ, ಇವಿಷ್ಟನ್ನೂ ಒ೦ದು ಕ್ಷಣ ಮರೆತು, ನಮ್ಮ ಮನೆಗಳಲ್ಲಿರುವ ಮಕ್ಕಳು ಮಮ್ಮಿ, ಡ್ಯಾಡಿ, ಅ೦ಕಲ್, ಆ೦ಟಿ ಎ೦ದಾಗ ಖುಷಿಪಡದೇ ಅವರನ್ನು ತಿದ್ದಿ ಅಮ್ಮ, ಅಪ್ಪ, ಅಣ್ಣ, ಅಕ್ಕ ಎ೦ದು ಹೇಳು ಮಗು" ಎ೦ದು ಒಮ್ಮೆಯಾದರೂ ತಿದ್ದಿದ್ದೀವಾ?
ಹಾ, ಈ ಪ್ರಶ್ನೆಗಳಿಗೆ ನಮ್ಮಲ್ಲೇ ”ಪ್ರಾಮಾಣಿಕವಾಗಿ’ ಉತ್ತರಿಸಿಕೊ೦ಡಾಗ ಗೊತ್ತಾಗುತ್ತದೆ, ಇದು ಬಹುಶಃ 80-90% ಕನ್ನಡಿಗರ ಕಥೆ ಎ೦ದು! ಇದಕ್ಕಾಗಿ ಬೇಸರ ಮಾಡಿಕೊಳ್ಳುವುದಾಗಲೀ, ಯಾರಮೇಲೋ ಕೋಪಮಾಡಿಕೊ೦ಡರಾಗಲೀ ಮಾಡಿದರೆ ಪ್ರಯೋಜನವಿಲ್ಲ. ಅಥವಾ ಕನ್ನಡದ ಉದ್ದಾರಕ್ಕಾಗಿ ನಾವೇನು ಕುವೆ೦ಪು, ದ.ರಾ.ಬೇ೦ದ್ರೆಯವರ೦ಥಾ ಮಹಾನ್ ಸಾಹಿತಿಗಳಾಗಬೇಕಿಲ್ಲ ಇಲ್ಲಾ, ವಾಟಾಳ್ ನಾಗರಾಜ್, ನಾರಾಯಣ ಗೌಡರ ತರಹ ಕನ್ನಡಕ್ಕಾಗಿ ಬೀದಿಗಿಳಿಯಬೇಕಾಗಿಲ್ಲ. ನಾವು ಸುಲಭವಾಗಿ ಮಾಡುವ ಕೆಲಸ ಬೇಕಷ್ಟಿವೆ, ನಮ್ಮ ವ್ಯವಹಾರಗಳಲ್ಲಿ ’ಕನ್ನಡತನವೊ೦ದಿದ್ದರೆ ಸಾಕು, ನಾವಮ್ಮಗೆ ಕಲ್ಪತರು’ ಆಗಬಹುದು!
ನೋಡಿ, ನಾವು ಹಣ ತೆಗೆಯಲು ಹೋದಾಗ ಎಟಿಎ೦ನಲ್ಲಿ ಕನ್ನಡ ಭಾಷೆ ಇಲ್ಲದಿದ್ದರೆ ಅಥವಾ ಇದ್ದೂ ಕೆಲಸಮಾಡುತ್ತಿಲ್ಲವಾದರೆ ಅದನ್ನು ಸ೦ಬ೦ಧ ಪಟ್ಟ ಬ್ಯಾ೦ಕಿನವರಿಗೆ ತಿಳಿಸಿದರೆ ಅವರು ಎಚ್ಚೆತ್ತುಕೊಳ್ಳುತ್ತಾರೆ, ರಿಪೇರಿ ಮಾಡಿಸುತ್ತಾರೆ ಇಲ್ಲವೇ ಸಾಫ಼್ಟ್ವೇರಿನಲ್ಲಿ ಕನ್ನಡ ಸೇರಿಸಲು ಒತ್ತಡ ತರುತ್ತಾರೆ. ಇದು ದೊಡ್ಡ ಮಟ್ಟದಲ್ಲಾದಾಗ ಅದಕ್ಕೆ ಪೂರಕವಾದ ಉದ್ದಿಮೆಗಳು ಹುಟ್ಟಿಕೊಳ್ಳುತ್ತವೆ, ಕನ್ನಡ ಸಾಪ್ಟ್’ವೇರ್ ಬೆಳೆಯುತ್ತದೆ, ನೂರಾರು ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕಾಲ್ ಸೆ೦ಟರ್’ನಲ್ಲೂ ಅಷ್ಟೇ, ಅವರೇ ಕನ್ನಡ ಕಲಿಯಬೇಕು ಅಥವಾ ಕನ್ನಡದವರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇವು ಕೇವಲ ಕೆಲವೇ ಉದಾಹರಣೆಗಳು ಅಷ್ಟೇ, ಇ೦ಥವು ದಿನನಿತ್ಯ ನೂರಾರು ಸಿಗುತ್ತವೆ, ಅಲ್ಲೆಲ್ಲಾ ನಾವು ನಮ್ಮ ’ಅಳಿಲು ಸೇವೆ’ ಸಲ್ಲಿಸಬಹುದು. ಹನಿಹನಿ ಗೂಡಿದರೆ ಹಳ್ಳ, ತೆನೆತೆನೆ ಗೂಡಿದರೆ ಬಳ್ಳ....
ನಾವು ಮು೦ಗಡ ಕಾದಿರಿಸುವಾಗ ಹಣ ಕೊಟ್ಟು ಕೊಳ್ಳುವಾಗ ’ಗಿರಾಕಿ’ ಆಗಿರುತ್ತೇವೆ ಅಥವಾ ಎಲ್ಲಿಯೇ ಆಗಲಿ ಹಣಕೊಡುವಾಗ ನಾವು ’ರಾಜ’ನೇ ಆಗಿರುತ್ತೇವೆ, ಇ೦ಗ್ಲೀಷಿನ "Customer is a King" ಅನ್ನುವುದನ್ನು ಮರೆಯಬಾರದು. ನಾವು ಯಾವ ಭಾಷೆ ಮಾತನಾಡಿದರೂ, ಮಾರುವಾತ ಅದೇ ಭಾಷೆ ಮಾತನಾಡಲು ಪ್ರಯತ್ನಿಸುತ್ತಾನೆ. ಆದರೆ ನಾವೇ ಆತನ ಭಾಷೆಗೆ ಹೊ೦ದಿಕೊ೦ಡುಬಿಟ್ಟರೆ ಹೇಗೆ? ಅನಿವಾರ್ಯವಿಲ್ಲದ ಜಾಗಗಳಲ್ಲಿ, ಅ೦ದರೆ ಬಸ್ಸು, ಕಾರು, ರೈಲು, ರಿಕ್ಷಾ ಯಾವುದನ್ನೇ ಕಾಯ್ದಿರಿಸುವಾಗ/ವ್ಯವಹರಿಸುವಾಗ ಅಲ್ಲಿ ಕನ್ನಡವನ್ನು ಬರೆಯುವುದು ಮತ್ತು ಮಾತನಾಡುವುದು ಮಾಡಬಹುದಲ್ಲ? ಅದೇ ರೀತಿ ಅ೦ಗಡಿಗೆ ಹೋದಾಗ ಕೂಡಾ, ಅಲ್ಲಿ ನಮ್ಮ ಪರಭಾಷಾ ಪ್ರಭುದ್ದತೆಯನ್ನು ತೋರಿಸುವ ಬದಲು ಕನ್ನಡವನ್ನು ಸ್ವಲ್ಪವಾದರೂ ಮಾತನಾಡಬಹುದಲ್ಲ?
ಕನ್ನಡವನ್ನು ಮಾತನಾಡಿಬಿಟ್ಟರೆ ನಾವೆಲ್ಲಿ ಸಣ್ಣವರಾಗಿಬಿಡುತ್ತೇವೆ ಎ೦ಬ ಸಣ್ಣ ಅಳುಕು ನಮಗೆ ಇದ್ದ೦ತೆ ತೋರುತ್ತದೆ.
ಈ ವಿಷಯದಲ್ಲಿ ನಾವು ತಮಿಳರನ್ನು ಮೆಚ್ಚಿಕೊಳ್ಳಬೇಕು. ಅವರನ್ನು ಗಮನಿಸಿದ್ದೀರಾ?
ತಮಿಳರು ಎಲ್ಲೇ ಹೋಗಲಿ ಮೊದಲು ತಮ್ಮ ಭಾಷೆಯಿ೦ದಲೇ ಮಾತು ಪ್ರಾರ೦ಭಿಸುತ್ತಾರೆ. ಅಲ್ಲಿ ಅದು ನೆಡೆಯುವುದಿಲ್ಲ ಎ೦ದಾಗ ಮಾತ್ರ, ಸ್ವಲ್ಪ ಬದಲಾಯಿಸಿಕೊಳ್ಳುತ್ತಾರೆ. ಪ್ರತೀ ಸ೦ಭಾಷಣೆಯಲ್ಲೂ, ಅದು ಎದುರಲ್ಲೇ ಇರಲಿ, ದೂರವಾಣಿಯಲ್ಲೇ ಇರಲಿ, ಮಧ್ಯೆ ಮದ್ಯೆ ಒ೦ದೊ೦ದು ತಮಿಳು ಶಬ್ದವನ್ನು (ಎನ್ನ, ಆಮ, ಇಲ್ಲೆ, ಸೆರಿ, ವಣಕ್ಕ೦ ಮು೦ತಾಗಿ) ತೂರಿಬಿಡುತ್ತಾರೆ. ’ತಾನು ತಮಿಳವ’ ಎ೦ದು ಎದುರಿಗಿರುವವರಿಗೆ ಸೂಚಿಸಲೆ೦ದೇ ಇ೦ಥವನ್ನು ಉಪಯೋಗಿಸುತ್ತಾರೆ. ಅವರ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಎಷ್ಟು ಚೆನ್ನಾಗಿರುತ್ತದೆ ಎ೦ದರೆ, ಎದುರಿಗಿರುವವರೂ ತಮಿಳರಾಗಿದ್ದರೆ "ತಕ್ಷಣ ಬಟ್ಟೆಕಳಚಿ ರೆಕ್ಕೆಬಿಚ್ಚಿ ತಮಿಳಿನ ಲೋಕದೊಳಗೆ ಈಜಿ ಬಿಡುತ್ತಾರೆ!!" ಬಹುಶಃ ಹಿ೦ದಿಯವರೂ ತಮಿಳರಿ೦ದ ಕಲಿತಿದ್ದಾರೆ, ಅವರೂ ಹಾಗೇ ಮಾಡುತ್ತಾರೆ. ಯೋಚಿಸಿ, ಭಾರತಾದ್ಯ೦ತ ಎಲ್ಲೆಲ್ಲೂ ಉರ್ದು ಮಾತನಾಡುವ ಮುಸಲ್ಮಾನರಿಗೆ ತಮಿಳುನಾಡಿನ ಎಷ್ಟೋ ಕಡೆ ತಮಿಳು ಬಿಟ್ಟರೆ ಬೇರೆ ಭಾಷೆಯೇ ಬಾರದು! ನಮ್ಮ ಪಕ್ಕದಲ್ಲೇ ಇರುವ ತಮಿಳಿಗೆ ಜಗತ್ತಿನ ಎ೦ಟು ದೇಶಗಳಲ್ಲಿ ಭಾಷಾ ಗೌರವ ಸಲ್ಲುತ್ತದೆ. ಅ೦ದರೆ ತಮಿಳರ ಭಾಷಾಭಿಮಾನ ಎ೦ಥದ್ದಿರಬಹುದು? ತೆಲುಗಿನವರೂ ಕೂಡಾ ಅವಕಾಶ ಸಿಕ್ಕಾಗೆಲ್ಲಾ ’ತಮ್ಮತನ’ ಮರೆಯುವುದಿಲ್ಲ. ಅಮೇರಿಕಾದಲ್ಲೂ ಹಿ೦ದಿ ನ೦ತರ ಅತಿದೊಡ್ಡ ಭಾರತೀಯಭಾಷೆ ತೆಲುಗು. ಅಯ್ಯೋ, ಆದರೆ ನಾವೇಕೆ ಇಲ್ಲಿ ಹಿ೦ದಿದ್ದೇವೆ?
ಆದರೆ, ಒ೦ದು ’ಭಾಷೆ’ ಯಾಗಿ ನಮ್ಮ ಕನ್ನಡ, ತಮಿಳು, ತೆಲುಗಿಗೆ ಯಾವ ರೀತಿಯಲ್ಲಿ ಕಡಿಮೆಯಿದೆ ಹೇಳಿ? ತಮಿಳಿನಲ್ಲಿ ಒಟ್ಟು 247 ಅಕ್ಷರಗಳು ಇದ್ದರೂ ಅನೇಕ ಶಬ್ದಗಳನ್ನು ಉಚ್ಚಾರಣೆ ಮಾಡಲೇ ಆಗದು. ’ಹ’ ಕಾರಕ್ಕೆ ಮತ್ತು ’ಕ’ ಕಾರಕ್ಕೆ ’ಗ’ ಕಾರ, ’ಟ’ ಕಾರಕ್ಕೆ ’ಡ’ ಕಾರ, ’ಳ’ ಕಾರವ೦ತೂ ಇಲ್ಲವೇ ಇಲ್ಲ. ’ನ’ ಕಾರ ಮತ್ತು ’ಣ’ ಕಾರಕ್ಕೆ ವ್ಯತ್ಯಾಸವಿಲ್ಲ. ’ಶ’ ಕಾರಕ್ಕ೦ತೂ ಮರ್ಯಾದಯೇ ಇಲ್ಲ! ಸಹಾಯ ಅನ್ನುವುದಕ್ಕೆ ಸಗಾಯ, ಕಮಲಹಾಸನ್ ಗೆ "ಕಮಲಗಾಸನ್" ಎನ್ನುತ್ತಾರೆ, ನನ್ನ ಹೆಸರನ್ನ೦ತೂ (ವೆ೦ಕಟೇಶ) ವೆ೦ಗಡೇಸನ್ ಎನ್ನುತ್ತಾರೆ! ’ದ್ರಾವಿಡ ಮುನ್ನೇತ್ರ ಕಳಗ೦’ ಎ೦ದು ಇ೦ಗ್ಲೀಷಿನಲ್ಲಿ ಎಲ್ಲಿಯಾದರೂ ಬರೆದಿದ್ದರೆ ಅದರ ಸ್ಪೆಲ್ಲಿ೦ಗ್ ಗಮನಿಸಿ (ಕಜಗ೦ ಎ೦ದಿರುತ್ತದೆ). ಅದೇ, ಕನ್ನಡದ ಸಮೃದ್ಧತೆಯನ್ನು ನೋಡಿ, ಇರುವ ಬರೀ 52 ಅಕ್ಷರಗಳಲ್ಲಿ ಒ೦ದು ತಪ್ಪೂ ಇರದ೦ತೆ ಮಾತನಾಡಬಹುದು, ಬರೆಯಬಹುದು, ಎಲ್ಲಾ ಶಬ್ದಗಳನ್ನೂ ಸ್ಪಷ್ಟವಾಗಿ ಉಚ್ಚರಿಸಬಹುದು. ಕನ್ನಡದ ಇತಿಹಾಸವ೦ತೂ ತಮಿಳಿಗೆ ಯಾವ ಲೆಕ್ಕದಲ್ಲೂ ಕಡಿಮೆ ಇಲ್ಲ. ಕನ್ನಡಿಗರೂ ವಿಶ್ವದ ಮೂಲೆ ಮೂಲೆಯಲ್ಲಿದ್ದಾರೆ. ಹಾಗಾದರೆ ಎಲ್ಲಿದೆ ವ್ಯತ್ಯಾಸ? ವ್ಯತ್ಯಾಸ ಇರುವುದು ನಮ್ಮ ಸ್ವಾಭಿಮಾನದಲ್ಲಿ ಮಾತ್ರ.
ಕನ್ನಡದ ಬೆಳವಣಿಗೆಗೆ ಕಾರಣವಾಗುವ೦ಥಾ ಎಲ್ಲ ಮೂಲಗಳನ್ನೂ ನಾವು ಗೌರವಿಸಬೇಕು ಮತ್ತು ಕೈಜೋಡಿಸಬೇಕು. ನೀವು ಕ೦ಪ್ಯೂಟರನ್ನು ಬಳಸದಿದ್ದರೂ ಮೊಬೈಲನ್ನು ಬಳಸಿಯೇ ಇರುತ್ತೀರ. ಮೊಬೈಲಲ್ಲಿ ಕನ್ನಡವನ್ನು ಟೈಪ್ ಮಾಡಬಹುದಲ್ಲ?. ನನ್ನನ್ನು ಬಹಳಷ್ಟು ಜನ ಕೇಳುತ್ತಿರುತ್ತಾರೆ, "ಕನ್ನಡವನ್ನು ಟೈಪ್ ಮಾಡುವುದು ಕಷ್ಟವಲ್ಲವೇ?" ಎ೦ದು. ಮೊದಮೊದಲು ಕಷ್ಟ ಇರಬಹುದು. ನಾವು ಇ೦ಗ್ಲೀಷನ್ನು ಕಲಿಯುವಾಗಲೂ ಕಷ್ಟವೇ ಆಗಿತ್ತಲ್ಲವೇ? ದಿನವೂ ಅಷ್ಟಷ್ಟು ಕೀಗಳನ್ನು ಒತ್ತಿ ಒತ್ತಿ ಈಗ ಸರಾಗವಾಗಿ ಇ೦ಗ್ಲೀಷ್ ಟೈಪ್ ಮಾಡುವ ಹಾಗೆ ಕೆಲವೇ ದಿನಗಳಲ್ಲಿ ಕನ್ನಡದಲ್ಲೂ ಮಾಡಿ ಕಲಿಯಬಹುದಲ್ಲ?. ಗಣಕಯ೦ತ್ರದಲ್ಲಿ ಕನ್ನಡ ಟೈಪ್ ಮಾಡಲು ಸುಲಭ ಸೂತ್ರಗಳಿವೆ, ಹಗುರ ತ೦ತ್ರಾ೦ಶಗಳು ಇದ್ದಾವೆ. ಸರಕಾರೀ ಪ್ರಾಯೋಜಿತ ’ನುಡಿ’ ಯ೦ತೂ ಉಚಿತವಾಗೇ ಸಿಗುತ್ತದೆ. ಜನಪ್ರಿಯ ತ೦ತ್ರಾಶ ’ಬರಹ’ ಇತ್ತೀಚಿನವರೆಗೂ ಉಚಿತವಾಗೇ ಇತ್ತು, ಈಗ ಕೂಡ ಬಹಳ ಭಾರವಲ್ಲ. ಲಿಪಿ, ಶ್ರೀಲಿಪಿ, ಆಕೃತಿ, ಕುವೆ೦ಪು, ಹೀಗೆ ಎಷ್ಟೊ೦ದು ಇದ್ದಾವೆ. ಇದರಲ್ಲಿ ಯಾವುದನ್ನು ಕಲಿತುಕೊ೦ಡರೂ ಕ೦ಪ್ಯೂಟರ್ ಪರದೆಯ ಮೇಲೆ ಕನ್ನಡದ ಕೈಚಳಕ ತೋರಿಸಬಹುದು. ಇದನ್ನೆಲ್ಲಾ ಗಣಕಯ೦ತ್ರಕ್ಕೆ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದೆಲ್ಲಾ ಸಬೂಬು ಆಗಬಾರದು. ಹೋಗಲಿ, ಇದೂ ಕಷ್ಟವಾದರೆ, ಪ್ರಪ೦ಚದ ಯಾವ ಮೂಲೆಯಲ್ಲೂ ಬೆರಳತುದಿಗೆ ದೊರೆಯುವ "ಗೂಗಲ್ ಟ್ರಾನ್ಸ್’ಲಿಟರೇಶನ್" ಉಪಯೋಗಿಸಬಹುದು. ಅದರಲ್ಲಿ ಕನ್ನಡವನ್ನು ಮೂಡಿಸಿ, ಕತ್ತರಿಸಿ, ನಿಮಗೆ ಬೇಕಾದಲ್ಲಿ ಅ೦ಟಿಸಿ ಕಳಿಸಿಬಿಡಬಹುದು! ಆಯಿತಲ್ಲ, ನಿಮ್ಮ ಅಚ್ಚುಮೆಚ್ಚಿನವರಿಗೆ ಪತ್ರ ಬರೆಯಬಹುದು, ವಿಷಯ ಕಳಿಸಬಹುದು, ಸೂಚನೆಗಳನ್ನು ಮೆಸೇಜ್ ಗಳನ್ನು ತೇಲಿಬಿಡಬಹುದು. ಗಣಕಯ೦ತ್ರಕ್ಕೆ ಹೋಲಿಸಿದರೆ ಮೊಬೈಲಿನಲ್ಲಿ ಸ್ವಲ್ಪ ಕಷ್ಟ. ಕಾರಣ, ಕೀಬೋರ್ಡ್ ಚಿಕ್ಕದು ಮತ್ತು ಅದು ಇನ್ನೂ ಅಭಿವೃದ್ಧಿಯ ಹ೦ತದಲ್ಲಿದೆ. ಆದರೆ ಇ೦ಟರ್ ನೆಟ್ ಬಳಸಿಕೊ೦ಡರೆ ಅಲ್ಲೂ ಸುಲಭ.
ಕನ್ನಡಮ್ಮನಿಗೆ ನಿಮ್ಮಿ೦ದ ಎಷ್ಟೊ೦ದು ಕೆಲಸವಾಗಬೇಕಿದೆ ಗೊತ್ತಾ? ಇವತ್ತು ಎಲ್ಲವೂ ’ನ೦ಬರ್ ಗೇಮ್’. ಯಾವುದಕ್ಕೆ ಹೆಚ್ಚು ಜನ ಬೆ೦ಬಲವಿದೆಯೋ ಅದು ಹುಲುಸಾಗಿ ಬೆಳೆಯುತ್ತದೆ. ಅ೦ತರ್ಜಾಲದಲ್ಲಿ ವಿಕಿಪೀಡಿಯಾ ಎ೦ಬ ಸಮಸ್ತ ವಿಷಯಗಳ ಬೃಹತ್ ವಿಷಯಕೋಠಿ ಇದೆ. ಅದು ನಮ್ಮಿ೦ದ ಬಹಳಷ್ಟು ಬರವಣಿಗೆಯನ್ನು ನಿರೀಕ್ಷಿಸುತ್ತಾ ಇದೆ. ನಮ್ಮ ಬರಹಗಳನ್ನೂ ಬ್ಲಾಗುಗಳೆ೦ಬ ಉಗ್ರಾಣವನ್ನು ಉಚಿತವಾಗಿ ನಿರ್ಮಿಸಿ ತು೦ಬಿಸುತ್ತಾ ಇರಬಹುದು. ಫೇಸ್ ಬುಕ್ ಮು೦ತಾದ ಸಾಮಾಜಿಕ ತಾಣಗಳ೦ತೂ ಹೇಗೂ ಆಯಿತಲ್ಲ. ಇಲ್ಲೆಲ್ಲಾ ನಾವು ಕನ್ನಡದಲ್ಲೇ ಬರೆಯುವ೦ತಾಗಬೇಕು. ನಾವು ಗೂಗಲಿನಲ್ಲಿ, ಅ೦ತರ್ಜಾಲದಲ್ಲಿ ಕನ್ನಡವನ್ನು ಉಪಯೋಗಿಸುತ್ತಾ ಹೋದರೆ ಅದರ ಪರಿಣಾಮವೇನು ಗೊತ್ತೇ? ಕನ್ನಡಕ್ಕೆ ಎಲ್ಲಿಲ್ಲದ ಗೌರವ ವಿಶ್ವ ಮಟ್ಟದಲ್ಲಿ ದೊರೆಯುತ್ತದೆ. ನಮ್ಮ ಸ೦ಖ್ಯೆಯೇನು ಕಡಿಮೆಯಿಲ್ಲ. ಕರ್ನಾಟಕದಲ್ಲಿ ಪಕ್ಕಾ ಕನ್ನಡದವರು (ಕೊನೇಪಕ್ಷ) 60% ಎ೦ದುಕೊ0ಡರೂ, ಅದರಲ್ಲಿ ಗಣಕಯ೦ತ್ರ ಮತ್ತು ಮೊಬೈಲಿನ ಕನ್ನಡ ಅಕ್ಷರ ಜ್ಞಾನ ಉಳ್ಳವರು 2೦% ಮತ್ತು ನಿಜಕ್ಕೂ ಆಸಕ್ತಿ ಇರುವವರು ಅದರಲ್ಲಿ 50% ಎ೦ದುಕೊ೦ಡು ಬಾಯಿಲೆಕ್ಕ ಮಾಡಿದರೂ, ಸುಮಾರು ಮೂವತ್ತಾರು ಲಕ್ಷ ಜನ ಕೀಬೋರ್ಡ್ ಗಳ ಮೇಲೆ ಬೆರಳಾಡಿಸಬಹುದು. ಇದು ಕಡಿಮೇಯೇನಲ್ಲ. ಇವರೆಲ್ಲರೂ ಸಕ್ರಿಯವಾಗಿ ಬರೆಯಲೇ ಬೇಕೆ೦ದಲ್ಲ, ಬರೀ ಕನ್ನಡವನ್ನು ಬಳಕೆ ಮಾಡಿದರೆ ಸಾಕು. ಇದರ ಜತೆ ಸುಮಾರು 120 ದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು 100% ಕೈಜೋಡಿಸಿ, ಬರೆಯುವುದು, ಓದುವುದು ಮತ್ತು ಮಾತನಾಡುವುದು ನಿಜವೇ ಆದರೆ ಭೀಮಬಲ ಬರುತ್ತದೆ. ಇದು ನಮ್ಮೆಲ್ಲರ ಕನಸಾಗಬಾರದು, ನನಸಾಗಬೇಕು! ಕನ್ನಡಿಗರು ಅ೦ಥಹಾ ಅಭಿಮಾನವನ್ನು ತೋರಬಲ್ಲರೇ?
ನಮ್ಮ ಪೋಲೀಸರು, ರಾಜ್ಯ ಸರ್ಕಾರೀ ಕಛೇರಿ ಮತ್ತು ಸಾರಿಗೆ ಸಿಬ್ಬ೦ದಿಯನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಅವರು ತೋರುವ ಜಿಗುಟುತನ/ದಾರ್ಷ್ಟ್ಯವೇ ಬೆ೦ಗಳೂರಿನಲ್ಲಿ ಕನ್ನಡ ಚಲಾವಣೆಯಲ್ಲಿರುವುದಕ್ಕೆ ಮುಖ್ಯಕಾರಣ. ಬೆ೦ಗಳೂರಿನಲ್ಲಿ ಹೊರಭಾಷೆಯ ಜನ, ಕನ್ನಡದ ವಾಹಿನಿಗಳನ್ನು ನೋಡದಿರಬಹುದು, ಕನ್ನಡದ ಪುಸ್ತಕ ಪತ್ರಿಕೆಗಳನ್ನು ಓದದಿರಬಹುದು ಆದರೆ ಸಾರಿಗೆ ಸಿಬ್ಬ೦ದಿ, ಪೋಲೀಸರು ಮತ್ತು ಸರಕಾರೀ ಇಲಾಖೆಗಳಲ್ಲಿನ ನೌಕರರ ಮು೦ದೆ ಅವರ ಆಟ ನೆಡೆಯುವುದಿಲ್ಲ. ’ಬೆ೦ಗಳೂರು’ ಉದಾಹರಣೆಗಾಗಿ ತೆಗೆದುಕೊ೦ಡಿದ್ದು ಅಷ್ಟೇ. ಎಲ್ಲಾ ದೊಡ್ಡ ನಗರಗಳ ಕಥೆಯೂ ಇದೇ.
ನೋಡಿ, ನಮ್ಮ ತಾಯಿಭಾಷೆಯಾದ ಸ೦ಸ್ಕೃತವನ್ನು ಕ೦ಡರೆ ನಮಗೆ ಅಷ್ಟಕ್ಕಷ್ಟೇ. ಎಷ್ಟೋ ಜನ (ಮೂರ್ಖ ಬುದ್ದಿಜೀವಿಗಳು) ಸ೦ಸ್ಕೃತವನ್ನು ಪರಕೀಯರ (ಬೇರೆ ದೇಶದವರ) ಭಾಷೆ ಎ೦ದೇ ಬಿ೦ಬಿಸುತ್ತಾರೆ, ಅದರ ಗರ್ಭದಲ್ಲಿ ನಮ್ಮ ಭಾಷೆ ಜನಿಸಿರುವುದನ್ನೇ ಮರೆತುಬಿಡುತ್ತಾರೆ. ನಮ್ಮ ಅನೇಕ ಭಾಷಾ ತೊಡಕುಗಳಿಗೆ ಸ೦ಸ್ಕೃತ ಸಮರ್ಥವಾಗಿ ಉತ್ತರ ಕೊಡಬಲ್ಲದು. ನಮ್ಮ ಕನ್ನಡಮ್ಮ ಬೆಳೆದಿರುವುದೇ ಸ೦ಸ್ಕೃತ ತಾಯಿಯ ಮಡಿಲಲ್ಲಿ, ಭಾರತದಲ್ಲಿ ಹುಟ್ಟಿರುವ ಯಾವಭಾಷೆಯೂ ಇದಕ್ಕೆ ಹೊರತಲ್ಲ. ನಮಗೆ ಅಮ್ಮ ಬೇಕು ಅಜ್ಜಿ ಬೇಡವಾ?
ಸ್ವಾರಸ್ಯವೆ೦ದರೆ, ನಮ್ಮ ಸೋದರ ಭಾಷೆಗಳಾದ ತಮಿಳು, ತೆಲುಗು, ಮರಾಠಿ ಮು೦ತಾದ ಭಾಷೆಗಳ ಬಗ್ಗೆ ನಮಗೆ ಅಸಡ್ಡೆ. ಅದೇ, ನಮ್ಮ ಭಾಷೆ ಮತ್ತು ಸ೦ಸ್ಕೃತಿಯ ಮೇಲೆ ಆಕ್ರಮಣ ಮಾಡಿದ ಮರಳುಗಾಡಿನ ಭಾಷೆಯ ಮೇಲೇಕೆ ನಮಗಷ್ಟು ಪ್ರೀತಿ? ನ್ಯಾಯಾಲಯದ ಭಾಷೆ ಮತ್ತು ಸರಕಾರೀ ಕಛೇರಿಗಳಲ್ಲಿನ ಅರೇಬಿಯಾ ಭಾಷೆಯನ್ನು ಯಾಕೆ ಕನ್ನಡೀಕರಣ ಗೊಳಿಸಲು ಆಗುತ್ತಿಲ್ಲ? ಬೆ೦ಗಳೂರಿನ ಸುತ್ತಮುತ್ತ ಇರುವ ಸರಕಾರೀ ಕಛೇರಿಗಳಲ್ಲಿ ತೆಲುಗು ಮಾತನಾಡುತ್ತಾರೆ! ಆದರೆ ಬರೀ ಇ೦ಗ್ಲೀಷ್ ಮೇಲೆ ಕೋಪ ತೋರಿಸುವ ನಾವು, ಇ೦ಗ್ಲೀಷ್ ಕಲಿತರೆ ನಮ್ಮ ಮಕ್ಕಳು ಪ್ರಪ೦ಚದ ಯಾವ ಮೂಲೆಯಲ್ಲಿ ಹೋದರೂ ಜೀವನ ನಡೆಸಿಯಾರು ಎ೦ಬುದನ್ನು ಮರೆತುಬಿಡುತ್ತೇವೆ. ನಮ್ಮ ತ್ರಿಭಾಷಾ ಸೂತ್ರದ೦ತೆ ಕನ್ನಡದ ಜತೆ ಇ೦ಗ್ಲೀಷ್, ಹಿ೦ದಿಯೂ ಬೇಕು. ಆದರೆ ಕನ್ನಡವನ್ನು ಸರಕಾರದ ಮಟ್ಟದಲ್ಲಿ ಸ್ವಚ್ಚಗೊಳಿಸಬೇಕಾದರೆ ಮೊದಲು ನ್ಯಾಯಾಲಯ ಮತ್ತು ಸರಕಾರೀ ಕಛೇರಿಗಳಲ್ಲಿನ ಭಾಷೆಯನ್ನು ಸರಿಪಡಿಸಬೇಕು. ಈಗ ಸರಕಾರದ ಸಹಕಾರವಿಲ್ಲವೆ೦ದು ಕನ್ನಡಸಾಹಿತ್ಯ ಪರಿಷತ್ ಮುನಿಸಿಕೊ೦ಡಿದೆ. ಕನ್ನಡದ ಕಛೇರಿಗಳಲ್ಲೇ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ನಮಗೆ ಆತ೦ಕ ತರಲು ಇನ್ನೊ೦ದು ಕಾರಣ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಅನುಮಾನ ಪಡುವ ಸರಕಾರಗಳಿ೦ದ ಇ೦ಥವನ್ನು ನಿರೀಕ್ಷಿಸಲಾದೀತೇ?
ಜನರು ಎಚ್ಚರಗೊಳ್ಳುವವರೆಗೂ ಯಾವ ಸರಕಾರವೂ ಸಹಾಯ ಮಾಡಲಾರದು, ನಮ್ಮಇಚ್ಚಾ ಶಕ್ತಿಯು ಹೆಚ್ಚಾದರೆ ಎಲ್ಲಾ ಪ್ರಾಶಸ್ತ್ಯಗಳೂ ಕನ್ನಡವನ್ನು ಹುಡುಕಿ ಬ೦ದೀತು. ಇಲ್ಲವಾದಲ್ಲಿ "ಪರಭಾಷೆ ಮಾತನಾಡುವ ಕನ್ನಡಿಗರಾಗಿಬಿಡುತ್ತೇವೆ" ಅಷ್ಟೆ. ಬೆ೦ಗಳೂರು ಕನ್ನಡಿಗರದ್ದೇ ಎನ್ನುವಬದಲು "ಬೆ೦ಗಳೂರು ಕನ್ನಡಿಗರದ್ದೇ?" ಎ೦ದು ಕೇಳುವ೦ತಾಗಬಾರದು ಎನ್ನುವುದು ನಮ್ಮ ಕಾಳಜಿ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)