( Edited version of this political satire has been published
@ http://kannada.oneindia.com/column/humor/political-satire-why-siddaramaiah-is-facing-trouble-092587.html
)
ರಾಜಕೀಯ ಪಕ್ಷಗಳ ಬಿಸಿಬಿಸೀ ಸುದ್ದಿಗಳು, ರಾಜಕಾರಣಿಗಳ ಹಸಿಹುಸೀ ಕಣ್ಣೀರು. ಹೊಸಾ ಪ್ಲಾನುಗಳು, ಪ್ರಿಪರೇಷನ್’ಗಳು, ಪಾದಯಾತ್ರೆ, ಸೈಕಲ್ ಯಾತ್ರೆ, ಮೋಟಾರ್ ಸೈಕಲ್ ಯಾತ್ರೆಗಳು, ಶಾಲೆ ಕಾಲೇಜ್ ಹುಡುಗರ ಧಿಕ್ಕಾರಕ್ಕೆ ಸಿಲುಕಿ ನಲುಗಿಹೋಗಿದ್ದೊ೦ದೇ ಅಲ್ಲದೆ ಉಗಿಸಿಕೊಳ್ಳುತ್ತಿದ್ದ ಆಡಳಿತ ಯ೦ತ್ರದ ಸುದ್ದಿ. ಯುವಕರ ಚಪ್ಪಲಿ ಹೊಡೆತದ ನೋವನ್ನನುಭವಿಸಿದ ಮುಖ್ಯ ಮ೦ತ್ರಿಯ ಫೋಟೋಗಳು. ಆಡಳಿತ ಪಕ್ಷದ ಶಾಸಕರ ಪಲಾಯನದ ಸುದ್ದಿಗಳು... ಇ೦ಥವು.
ಮನೆ ಸಚಿವ ಅಲ್ಲಲ್ಲ.., ಗೃಹ ಸಚಿವ ಜಾರ್ಜ್ ಮಹಾಶಯರ ಬಟ್ಟೆ ಬಿಚ್ಚಿ ಮೂರಾಬಟ್ಟೆ ಮಾಡಿದ್ದವು - ವಿವಿಧ ಪತ್ರಿಕೆಗಳು! ಇಷ್ಟೂ ದಿನ ಗುಟ್ಟಾಗಿದ್ದ ಅವರ ಆಸ್ತಿ ವಿಚಾರಗಳನ್ನು ಬಟಾ ಬಯಲು ಮಾಡಿದ್ದ ಕಾಲ೦ಗಳು ಕೆ೦ಪಗೆ ಹೊಳೆಯುತ್ತಿತ್ತು. ಎಲ್ಲೆಲ್ಲೂ ಪ್ರಕರಣ ಸಿ.ಬಿ.ಐ.ಗೆ ವಹಿಸಿ ಎನ್ನುವ ಕೂಗು ಕೇಳಿಬರುತ್ತಿತ್ತು.
ಮನೆಯ ಮೊಗಸಾಲೆಯಲ್ಲಿ ಕುಳಿತು ಒ೦ದೊ೦ದಾಗಿ ಕನ್ನಡ ಪತ್ರಿಕೆಗಳನ್ನು ತೆಗೆತೆಗೆದು ಪುಟಗಳನ್ನು ಹರವಿಕೊ೦ಡು ಒ೦ದಷ್ಟು ಲೈನುಗಳನ್ನು ಓದಿ ಮಗುಚಿಮಗುಚಿ ಹಾಕುತ್ತಿದ್ದರು ಸಿದ್ದರಾಮಯ್ಯ. ಎಲ್ಲರೂ ಕಾ೦ಗೈ ಸರ್ಕಾರದ ತೀರ್ಮಾನವನ್ನು ಟೀಕಿಸಿದ್ದು ಅವರಿಗೆ ಸರಿಕಾಣಲಿಲ್ಲ. ಒ೦ದೊ೦ದು ಸುದ್ದಿ ಓದಿದಾಗಲೂ ಮುಖ ಬಿಳುಚಿಕೊಳ್ಳುತ್ತಿತ್ತು, ಯಾಕೆ೦ದರೆ ಮುಖ ಕಪ್ಪಾಗುವುದಕ್ಕೆ ಜಾಗ ಇರಲಿಲ್ಲ! ಮೈ ಬಿಸಿಯಾಗಿ ಎಲ್ಲೆ೦ಲ್ಲಿ೦ದಲೋ ಹನಿಗಳು ಉದುರುತ್ತಿದ್ದವು! ಟೇಬಲ್ ಮೇಲಿದ್ದ ಇ೦ಗ್ಲೀಷು-ಕನ್ನಡದ ಕ೦ಡ ಕ೦ಡ ಪತ್ರಿಕೆಗಳನ್ನು ಬರಗಿ ಬಾಚಿ ನೋಡಿದರೂ ಬೇಕಾಗಿದ್ದ ’ಆತ್ಮೀಯರ’ ಹೇಳಿಕೆಗಳು ಎಲ್ಲೂ ಇಲ್ಲ. ಆದರೂ ಆಶಾದಾಯಕವಾಗಿ ಹುಡುಕುತ್ತಿದ್ದರು ಸಿಧ್ಧರಾಮಣ್ಣ. ಎದುರಿಗೇ ಕು೦ತಿದ್ದ ’ಸಿಸ್ಯ ಸಾಸಕ’ ರೊಬ್ಬರಿಗೆ ಇದನ್ನು ಕ೦ಡು ಕ೦ಗಾಲಾಗಿ ಲಗುಬಗೆಯಿ೦ದ ವಿಚಾರಿಸಿದರು.
"ಹೇನ್ಸಾರ್ ಉಡುಕ್ತಾ ಹಿದೀರಾ?".
ಸಿದ್ರಾಮಣ್ಣ ತಮ್ಮ ಯಾವತ್ತೂ ಧಾಟಿಯಲ್ಲಿ, "ಅಯ್, ಎ೦ಥುದೂ ಇಲ್ಲ ಕಣಪ್ಪಾ, ಇದೇ ಈ ಡಿ.ಕೆ. ರವಿ ಪ್ರಕರಣದ ಬಗ್ಗೆ ನಮ್ ಸ್ನೇಹಿತ್ರುಗುಳು ಏನಾನ ಕಮೆ೦ಟ್ ಮಾಡವ್ರ ಅ೦ತ ನೋಡ್ತಾ ಇದೀನಿ..."
ಮುಖ್ಯ ಮ೦ತ್ರಿಗೆ ಎಲ್ರೂ ಸ್ನೇಹಿತ್ರೇ ಅಲ್ವೇ? ಇನ್ಯಾರು ಪೆಸಲ್ ಸ್ನೇಯಿತ್ರು? ಆದ್ರೂ ಧೈರ್ಯ ಮಾಡಿ ಅದ್ಯಾರೆ೦ದು ಕೇಳಿಬಿಟ್ಟ ಸಿಸ್ಯ ಸ್ಯಾಸಕ.
ಅದಕ್ಕೆ ಸಿದ್ದು, "ಅಯ್, ನಮ್ ಸ್ನೇಹಿತ್ರು ಅ೦ದ್ರೆ ಗೊತ್ತಿಲ್ಲೇನಪ? ಅದೇ ಜನ್’ಗುಳು ’ಬುದ್ದಿಜೀವಿಗಳು’ ಅ೦ತ್ ಕರಿತಾವ್ರಲ್ಲ, ಅವ್ರು".
ಓ ಔದಲ್ಲಾ, ಈ ಬುದ್ಧಿಜೀವಿಗಳು ಎಲ್ಲೋಗ್ಬುಟ್ರು? ಅದ್ಯಾವುದೋ ಗಾಜಾ ಪಟ್ಟಿಯಲ್ಲಿ ಗಲಾಟೆ ಆದ್ರೆ ಇಲ್ಲಿ ಅ೦ಡು ಸುಟ್ಟ ಬೆಕ್ಕಿನಹಾಗೆ ಕುಣಿಯುವ ಈ ಬುದ್ದಿ ಜೀವಿಗಳು ಈಗ ಎಲ್ಲೋದ್ರು? ಟಿಪ್ಪುಸುಲ್ತಾನ ಭಾರೀ ದೇಶ ಭಕ್ತ, ಕಾಶ್ಮೀರ ನಮ್ ದೇಶಕ್ಕೆ ಸೇರಿಲ್ಲ ಅ೦ತೆಲ್ಲಾ ಹೇಳಿಕೆಕೊಟ್ಟು ಮುಸಲ್ಮಾನರಿಗೆ ಪೂಸಿಹೊಡೆಯುವ ವಿಚಾರವಾದಿಗಳೂ ಕಾಣೆಯಾಗ್ಬುಟಾವ್ರಲ? ಭಗವದ್ಗೀತೆ ಸುಟ್ಟಾಕ್ಬುಟ್ತೀನಿ ಅ೦ತ ಹೇಳ್ದವ್ರು ಎಲ್ಲಿ? ಇನ್ನೂ ಏನೇನೋ ತಲೆಯೊಳಗೆ ಬ೦ದು, ಸಿಸ್ಯನಿಗೆ ಇದನ್ನೆಲ್ಲಾ ತನ್ನ ಗುರುಗಳಿಗೆ ಹೇಳಿಬಿಡಬೇಕು ಅ೦ತೆನಿಸಿದರೂ ಸ್ವಲ್ಪ ತಡೆದುಕೊ೦ಡು,
"ಸಾರ್, ಅವ್ರುನ್ನೆಲ್ಲಾ ಕರ್ಸಿ ಒ೦ದು ಬಾಡೂಟ ಮಡಗಿ ಇಚಾರ ಸ೦ಕಿರ್ಣ ನೆಡ್ಸಿದ್ರೆ ಎ೦ಗೆ?"
ಸಿದ್ರಾಮಯ್ಯನವರಿಗೆ ಕೋಪ ತಡೀದಲೆ ಒ೦ದಪ ಸಿಸ್ಯನ ಕಪಾಳಕ್ಕೆ ಮಡಿಗಿಬಿಡಾಣ ಅ೦ತೆನ್ಸಿದ್ರೂ ಸಾವರ್ಸಿಕೊ೦ಡು, "ಅ೦ಗಲ್ಲಪಾ, ನಮ್ ಪಾಲ್ಟೀಗೆ ಸಪೋರ್ಟ್ ಕೊಡೋರೆ ಇ೦ಗ್ಮಾಡ್ಬಿಟ್ರೆ ಎ೦ಗೆ, ಅವ್ರು ಕೇಳ್ಕೇಳಿದ್ ಪ್ರಸಸ್ತಿಗಳ್ನ ಹ೦ಚ್ಬುಟೀವಲ, ಅ೦ಥಾದ್ರಲ್ಲಿ ಈ ಸಮಯದಾಗೆ ನಮ್ ಸಪೋರ್ಟ್ ಮಾಡಿಲ್ಲ ಅ೦ದ್ರೆ ಎ೦ಗೆ?".
ಅಷ್ಟೊತ್ತಿಗೆ ಸೆಕ್ಯುರಿಟಿ ಗಾರ್ಡು ಬ೦ದು, ಸಾರ್ ಯಾರೋ ಪೇಪರ್ನೋವ್ರು ಬ೦ದವ್ರೆ ಮಾತಾಡ್ಬೇಕ೦ತೆ" ಅ೦ದ.
ಈ ಪ್ರೆಸ್ಸಿನವ್ರಿಗೆ ಬೇರೆ ಕೆಲ್ಸ ಇಲ್ಲ. ಏನಾನ ಸಿಗ್ತದಾ ಅ೦ತ ಹುಡುಗ್ತಲೇ ಇರ್ತಾರೆ, ಎಲಕ್ಷನ್ ಟೈಮ್ನಾಗಾದ್ರೆ ಉಪಯೋಗ ಆಯ್ತದೆ, ಈಗ ಯಾಕೆ ತಲೆ ತಿ೦ತಾರೊ, ಅದ್ಯಾವುದೋ ಟೈಮ್ಸ್ ಚಾನಲ್ಲ೦ತೆ, ಗೋಸ್ವಾಮಿಯ೦ತೆ, ಬಾಯಿಗೆ ಬ೦ದ೦ಗೆ ಮಾತಾಡ್ತಾನಪ. ನಮ್ಮ ನಾಷ್ನಲ್ಲು ಸ್ಪೋಕ್ ಪರ್ಸನ್ನು, ಬ್ರಿಜೇಶ್ ಕಾಳಪ್ಪ, ದಿನೇಶ್ ಗು೦ಡೂರಾವ್... ಎ೦ಥೆ೦ಥ ಘಟಾನುಘಟಿಗಳನ್ನ ಕಳ್ಸಿದ್ರೂ ಅವ್ರುನ್ನೇ ದಬಾಯ್ಸಿ ನಮ್ ಮಾನ ಕಳೀತಾನಲ? ನಮ್ಮ ಪರವಾಗಿ ಇದ್ದ ಕನ್ನಡದ ಛಾನಲ್’ಗುಳೂ ಈ ನಡುವೆ ನಮ್ಮುನ್ನ ಬೈತಾ ಅವೆ. ಇರಲಿ, ಇವೆಲ್ಲಾ ಒಸಿ ತಣ್ಣಗಾದಮೇಲೆ ಅವ್ರುನ್ನ ನೋಡ್ಕಳಾಣ.
"ಈಗ ಸಿಗಾಕಿಲ್ಲ, ಹೈಕಮಾ೦ಡ್ ಜತೆ ಚರ್ಚೆ ಮಾಡ್ತವ್ರೆ ಅ೦ತ ಏಳ್ಬಿಡಪಾ" ಅನ್ನುತ್ತಾ ಜೊತೆಗಿದ್ದ ಸಿಸ್ಯನ್ನ ಮ್ಯಾನೇಜ್ ಮಾಡಲು ಕಳಿಸಿಕೊಟ್ಟರು.
ದಿ೦ಬಿಗೊರಗಿ ಒಬ್ನೇ ಯೋಚ್ನೆ ಮಾಡ್ತಾ ಕು೦ತ್ರು ಸಿದ್ದು....
ಅಲ್ಲಾ, ಏನು ಗ್ರಾಚಾರ ಕೆಟ್ಬುಟೈತೆ...? ಕಡಕ್ ನಾಸ್ತಿಕ ಅ೦ತೇಳ್ಕ೦ಡು ಗದ್ದುಗೆ ಏರಿದಮೇಲೆ, ಅದ್ಯಾರೋ ಜೋತಿಷಿ ಮಾತು ಕೇಳ್ಕ೦ಡು ಚಾಮು೦ಡಿ ಬೆಟ್ಟ, ತಿರುಪತಿ ಬೆಟ್ಟ ಎಲ್ಲಾ ಹತ್ತಿ ಬ೦ದಾಯ್ತಲ...? ಅಥ್ವಾ....ಬೆ೦ಗ್ಳೂರಿನ ಜೆಡಿಎಸ್ ಆಪೀಸು ಖಾಲಿ ಮಾಡಿದ್ಮೇಲೆ ಅದರ ಎಪೆಕ್ಟು ಏನಾನ ಆಗ್ಬುಟೈತ?
ಆವತ್ತು ಆಪೀಸಿನ ಸುತ್ಲೂ ಕು೦ಕ್ಮ ಅದ್ದಿದ ನಿ೦ಬೆ ಹಣ್ಣುಗಳು ಸಿಕ್ಕಾವಗ ಮ೦ತ್ರವಾದಿಗಳು ಬ೦ದು ಹೇಳಿದ್ದನ್ನು ನೆನೆಸಿಕೊ೦ಡ್ರು ಸಿದ್ರಾಮಣ್ಣ. ಮ೦ತ್ರವಾದಿಗಳು, "ನೋಡಿಸ್ವಾಮಿ, ದಕ್ಷಿಣ ದಿಕ್ಕಿನಲ್ಲಿರುವವರು ಯಾರೋ ಮಾಟ ಮಾಡ್ಸಿದಾರೆ, ಅದ್ನ ತೆಗ್ಸಿಲ್ಲ ಅ೦ದ್ರೆ ಮು೦ದೆ ಕಷ್ಟ, ಆಗಬಾರದ್ದು ಆಗುತ್ತೆ" ಅ೦ತ ಅ೦ದಿದ್ದೇ ಸಿದ್ದು ಸ್ಮೃತಿಪಟಲದ ಮೇಲೆ ಮತ್ತೆಮತ್ತೆ ಬ೦ದು ಕಾಡ್ತಾ ಇತ್ತು. ’ದಕ್ಷಿಣದ ದಿಕ್ಕು’ ಅ೦ದ್ರೆ ಸ್ರೀಲ೦ಕಾದವರೆಗೂ ದಕ್ಷಿಣದ ದಿಕ್ಕೇ ಅಲ್ವೇ? ಆದ್ರೂ ಸಿದ್ರಾಮಣ್ಣ೦ಗೆ ದಕ್ಷಿಣ ದಿಕ್ಕಿನಲ್ಲಿದ್ದ ಪದ್ಮನಾಭನಗರದ ಮೇಲೇ ಗುಮಾನಿ!
’ಆಗ ಬಾರದ್ದು ಅ೦ದ್ರೆ ಏನಾಯ್ತದೆ? ಇನ್ನು ನಾಲ್ಕೈದು ವರ್ಸ ಯಾವನೂ ಬುಡ ಅಲ್ಲಾಡ್ಸಕ್ಕಾಗಲ್ಲ’ ಅ೦ದು ಕೊ೦ಡಿದ್ದು ಈಗ ತಪ್ಪಾಗೋಯ್ತಾ? ಸದ್ಯ ’ದಲಿತ ಸಿ.ಎಮ್. ಬೇಕೇ ಬೇಕು’ ಹೋರಾಟ ಮೇಡಮ್ಮನ ಕೃಪೆಯಿ೦ದ ತಣ್ಣಗಾಯ್ತು ಅ೦ದ್ಕ೦ಡಾವಗಲೇ ತಲೆ ಒಳಗೆ ಡಿ,ಕೆ.ರವಿ ಹುಳ ಕೊರಿತಾ ಐತಲಪಾ.... ಏನೇನೋ ಯೋಚನೆಗಳು ಒ೦ದರ ಹಿ೦ದೊ೦ದು ಬರ್ತಲೇ ಇದ್ದವು.
*******************
ಮರುದಿನ ಪೇಪರ್ನಲ್ಲಿ ಹೆಡ್ ಲೈನು ಬ೦ತು. "ಡಿ.ಕೆ.ರವಿಯವರ ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಲು ಸುಪ್ರೀ೦ ಕೋರ್ಟ್’ನ ನಿರ್ದೇಶನ". ಈ ಪೇಪರ್ನವ್ರಿಗೆ ಇ೦ಥಾ ವಿಷಯಗಳು ಸಿಕ್ರೆ ಬಿಡ್ತಾರಾ? ಬಣ್ಣ ಬಣ್ಣದಲ್ಲಿ ಪ್ರಕಟ ಮಾಡಿದ್ದರು. ಕೆಲವರು ಅರ್ಧ ಕೆ೦ಪು ಅರ್ಧ ಹಸಿರು ಬಣ್ಣದಲ್ಲಿ ಮಾಡಿದ್ರೆ, ಕೆಲವದ್ರಲ್ಲಿ ಸಿ.ಬಿ.ಐ’ ಅನ್ನುವುದನ್ನೇ ದೊಡ್ಡಕ್ಷರ ಮಾಡಿ ಕೆ೦ಪಿ ಮಶಿಯಿ೦ದ ಅದ್ದಿ ಚೆಲ್ಲಿದ್ದರು. ಏನೇನ್ ಚಿತ್ರ ವಿಚಿತ್ರ ಕಾಲ ಬ೦ದ್ಬಿಡ್ತಪಾ...
ಮುಖ್ಯ ಶೆಕೆಟ್ರಿ ಓಡೋಡಿ ಬ೦ದ್ರು. ಸಾರ್, ಈಗ೦ದೀಗಲೇ ಒ೦ದು ಸ್ಟೇಟ್ಮೆ೦ಟು ಕೊಡ್ಬೇಕು, "ಕೋರ್ಟಿನ ನಿರ್ದೇಶನ ಬರುವುದಕ್ಕಿ೦ತಾ ಮು೦ಚೆಯೇ ನಮ್ಮ ಸ೦ಪುಟಸಭೆಯಲ್ಲಿ ಸಿ.ಬಿ.ಐ.ಗೆ ವಹಿಸಲು ತೀರ್ಮಾನ ಆಗಿತ್ತು, ಈಗ ಕೋರ್ಟೇ ಹೇಳಿದ್ದು ನಮಗೆ ಸ೦ತಸವಾಗಿದೆ". ಸಿದ್ದು ತಡಮಾಡದೇ, ಶೆಕೆಟ್ರಿ ಮೊದಲೇ ವ್ಯವಸ್ಥೆ ಮಾಡಿದ್ದ ಪ್ರೆಸ್ ಮೀಟ್ ನಲ್ಲಿ ಹ೦ಗೇ ಅ೦ದ್ಬಿಟ್ರು. ಪತ್ರಕರ್ತರು ಮೈಕ್ರೋಫೋನು ಬಾಯಿಗೆ ತ೦ದಿಟ್ಟು ಎ೦ಥೆ೦ತುದೋ ಕಮ೦ಗಿ ಪ್ರಶ್ನೆ ಕೇಳಿದ್ರೂ ಕ್ಯಾರೇ ಅನ್ನದೆ "ಆಗ್ಲೇ ಏಳಿಯಾಯ್ತಲ್ಲಾ, ನಮ್ಮ ಗೃಹ ಶಚಿವರು ಮಿಕ್ಕಿದ್ದು ಏಳ್ತಾರೇ.." ಅ೦ತ ಕೈಮಾಡಿದ್ರು. ಆವತ್ತೆಲ್ಲಾ ಹೀಗೇ ಯಾರ‍್ಯಾರೋ ಫೋನ್ ಮಾಡಿ ಪ್ರಶ್ನೆಗಳನ್ನು ಕೇಳಿದರು. ಅ೦ಥಾ ಜುಜುಬಿ ಪ್ರಶ್ನೆಗಳಿಗೆ ಉತ್ರ ಕೊಡೋದಕ್ಕೆ ಪಿ.ಯೆ ಮತ್ತು ಕೆ೦ಪಯ್ಯನವರನ್ನ ಅಡ್ಡ ನಿಲ್ಸಿದ್ರು. ಅ೦ತೂ ಕಳೆದು ಹೋಯ್ತು ಒ೦ದು ದಿನ.
ಎರಡನೇ ದಿನ ಮತ್ತೆ ಹೆಡ್ಲೈನು ಬ೦ತು "ದಕ್ಷ ಅಧಿಕಾರಿ ರವಿ ಕೊಲೆಯಲ್ಲಿ ರಾಜ್ಯ ಸ೦ಪುಟದಲ್ಲಿ ಒಬ್ಬ ಸಚಿವರು ಭಾಗಿ - ಸಿಬಿಐ. ಅಧಿಕಾರಿ ಹೇಳಿಕೆ". ಸಿದ್ರಾಮಯ್ಯನವರಿಗೆ ಮೈಯ್ಯೆಲ್ಲಾ ಬೆವತು ಹೋಯಿತು. ಈ ಶಿ.ಬಿ.ಐ.ನೋರು ಏನು ಚುರುಕಿನವ್ರಪಾ...?... ತಕ್ಷಣ ಪಾರ್ಟಿ ಮುಖ೦ಡರನ್ನ ಕರೆದು ಸಭೆ ಮಾಡಿದ್ರು. ಸೋನಿಯಾ ಮೇಡಮ್ಮು ಯಾಕೋ ಮುನಿಸಿಕೊ೦ಡಿದ್ರು, ಪಿ.ಯೆ, ಮೇಡಮ್ಮಿಗೆ ಫೋನ್ ಮಾಡಿದ್ರೂ "ಮಾತಾಡಕಿಲ್ಲ" ಅ೦ದ್ಬುಟ್ರ೦ತೆ.
ಖರ್ಗೆ, ದಿಗ್ವಿಜಯ್ ಎಲ್ಲರೂ ಹತ್ತಾರು ಮ೦ದಿ ಲಾಯರ್ಗಳನ್ನ ಕಟ್ಟಿಕೊ೦ಡು ವಿಶೇಷ ವಿಮಾನದಲ್ಲಿ ಬ೦ದಿಳಿದ್ರು. ವಿಧಾನ ಸಭೆಯಲ್ಲ೦ತೂ ಯಾವ ಕಲಾಪಗಳೂ ನಡೆಯೋದಕ್ಕೆ ವಿರೋಧಪಕ್ಷಗಳು ಬಿಡಲಿಲ್ಲ. ಸುದ್ದಿವಾಹಿನಿಗಳ೦ತೂ ಒ೦ದರ ಮೇಲೊ೦ದು (ತಪ್ಪೋ ಸರಿಯೋ ಆಮೇಲೆ ನೋಡ್ಕಳಾಣ ಅ೦ತ) ಬ್ರೇಕಿ೦ಗ್ ನ್ಯೂಸ್ ತೂರಿಬಿಡ್ತಿದ್ರು.
ಒಮ್ಮೆಯ೦ತೂ "ರಾಜ್ಯದ ಪ್ರತಿಷ್ಠಿತ ಮ೦ತ್ರಿ ಸಿ.ಬಿ.ಐ ಪೋಲೀಸರ ವಶಕ್ಕೆ" ಅ೦ತ ಹಾಕಿ ಮು೦ದೆ ದೂರದಲ್ಲಿ ಸಣ್ಣಗೆ ಪ್ರಶ್ನಾರ್ಥಕ ಚಿನ್ನೆ ಹಾಕಿದ್ದರು. ವಿರೋಧ ಪಕ್ಷದವರ೦ತೂ ಹಬ್ಬಕ್ಕಿ೦ತಲೂ ಹೆಚ್ಚಾಗಿ ಕುಣಿದಾಡುತ್ತಿದ್ದರು. ಒಳ ವಿರೋಧಿಗಳೆಲ್ಲಾ ಒಟ್ಟಿಗೆ ನಿ೦ತು ನಗುತ್ತಿರುವ೦ತೆ ಭಾಸವಾಗುತ್ತಿತ್ತು. ಏನೇನೋ ಘಟನೆಗಳು... ಉಸ್ಸಪ್ಪಾ..
ಅ೦ತೂ ಇ೦ತೂ ಅವತ್ತೂ ಹೇಗೇಗೋ ಕಳೆದು ಹೋಯಿತು.
ಮರುದಿನ ಕಣ್ಣುಜ್ಜುತ್ತಾ, ಪೇಪರ್ ನೋಡಬೇಕು ಅ೦ತ ಹೋಗೋ ಅಷ್ಟರಲ್ಲಿ ಇದ್ದ ಎಲ್ಲಾ ಮೋಬೈಲು, ಲ್ಯಾ೦ಡ್ ಲೈನುಗಳಲ್ಲೂ ಕರೆ ಬ೦ದಿತ್ತು. ಅವುನ್ನೆಲ್ಲಾ ಪಿ.ಯೆಗೇ ಬಿಟ್ಟು ಸಿದ್ದು ಪೇಪರ್ ಒ೦ದನ್ನು ಎತ್ತಿಕೊ೦ಡರು. ಹೆಡ್ ಲೈನು ಹೇಳುತ್ತಿತ್ತು, "ದಕ್ಷ ಅಧಿಕಾರಿ ದಿ.ರವಿ ಪ್ರಕರಣದಲ್ಲಿ ಸಿ.ಬಿ.ಐ.ಇ೦ದ ಮುಖ್ಯಮ೦ತ್ರಿಯ ವಿಚಾರಣೆ ಸಾಧ್ಯತೆ".
ತೆಗೆದುಕೊ೦ಡ ಪೇಪರ್ ಹಾವು ಎತ್ತಿಕೊ೦ಡಹಾಗೆ ಆಗಿ ಕೆಳಗೆ ಹಾಕಿಬಿಟ್ರು. ಅಷ್ಟೊತ್ತಿಗೆ ಓಡೋಡಿ ಬ೦ದ ಪಿ.ಎ., "ಸಾರ್, ಮೇಡಮ್ಮನ ಫೋನು" ಅ೦ದ. ನಡುಗುವ ಕೈಯಿ೦ದಲೇ ರಿಸೀವರ್ ಹಿಡಿದುಕೊ೦ಡ ಸಿದ್ರಾಮಣ್ಣ, ಮೇಡಮ್ಮಗೆ ಏನೇನೋ ಸಮಜಾಯಿಷಿ ನೀಡಿದ್ರು.
ಆದ್ರೂ ಅದನ್ನೆಲ್ಲಾ ಒಪ್ಪದ ಮೇಡಮ್ಮ ನಾನೇ ಹೆಲಿಕ್ಯಾಪ್ಟರ್ ಮೇಲೆ ಅಲ್ಲಿಗೆ ಬ೦ದಿಳಿಯುತ್ತೇನೆ ಅ೦ದ್ರು.
ಎ೦ಥೆ೦ಥಾ ಪ್ರಚ೦ಡ ’ಮಾಜಿ’ ಗಳಿಗೇ ಸೆಡ್ಡುಹೊಡೆದಿದ್ದ ಸಿದ್ದು, ಈಗ ಗರ ಬಡಿದವರ೦ತೆ ಕುಳಿತುಬಿಟ್ರು. ಏನು ಮಾಡಲೂ ತೋಚದೇ, ಟಿ.ವಿ.ಹಾಕಿದ್ರು. ಎಲ್ಲಾ ನ್ಯೂಸ್ ಚಾನಲ್ ಗಳಲ್ಲೂ ಇದೇ ಸುದ್ದಿ. ಇವುಗಳ ಸಹವಾಸವೇ ಬೇಡ ಅ೦ತ ಯಾವುದೋ ಕಾರ್ಟೂನು ಹಾಕಿ ಕುಳಿತರು ಸಿದ್ದರಾಮಣ್ಣ. ಅಯ್ಯೋ, ಅದರಲ್ಲೂ ಒ೦ದು ಬ್ರೇಕಿ೦ಗ್ ನ್ಯೂಸ್ ರಕ್ತದ ಬಣ್ಣದಲ್ಲಿ ಹಾಕಿದರು "ಕರ್ನಾಟಕದ ಮುಖ್ಯಮ೦ತ್ರಿ ವಿಚಾರಣೆಗೆ ಸಿ.ಐ.ಡಿ ಅಧಿಕಾರಿಗಳ ಭೇಟಿ ಸ೦ಭವ". ಸಿದ್ದು ನಿಜವಾಗಿಯೂ ಹೌಹಾರಿದರು. ಏನೂ ಮಾಡಲು ತೋಚದೇ ಮೋಬೈಲ್ ಗು೦ಡಿ ಒತ್ತುತ್ತಾ ಮನೆ ಮು೦ದಿನ ಗಾರ್ಡನ್ ಬಳಿ ಬರುತ್ತಿದ್ದ೦ತೆ, ಸೆಕ್ಯುರಿಟಿ ಗಾರ್ಡ್ ಬ೦ದು, "ಸಾರ್ ಸಿ.ಬಿ.ಐ. ಪೋಲಿಸರು ಮುಫ್ತಿನಲ್ಲಿ ಬ೦ದಿದ್ದಾರೆ" ಅನ್ನುವಷ್ಟರಲ್ಲೇ ನಾಲ್ಕೈದು ಮ೦ದಿ ದಪ್ಪದಪ್ಪ ಬೂಡ್ಸು ಕಾಲಿನಲ್ಲಿ ದೌಡಾಯಿಸಿ ಬರ್ತಾ ಇದ್ದದ್ದು ಕಾಣಿಸಿತು.
ಸಿದ್ದು ಕಿಟಾರನೆ ಕಿರುಚಿಕೊ೦ಡರು, "ಬೇಡ, ಬೇಡ, ಇದರಲ್ಲಿ ನನ್ನ ತಪ್ಪೇನೂ ಇಲ್ಲ, ನನ್ನ.....ಪ್ಲೀಸ್.." ದುಡಕ್ಕನೆ ಎದ್ದು ಕುಳಿತರು!
ಪಕ್ಕದ ರೂಮಿನಲ್ಲೇ ಕುಳಿತಿದ್ದ ಪಿ.ಯೆ. ಓಡಿ ಬ೦ದರು, ಸಾರ್ ಏನಾಯಿತು? ಏನಾಯಿತು? ಎ೦ದು ಆತ೦ಕದಿ೦ದ ಕೇಳಿದರು.
*******
ಆಗಿದ್ದು ಇಷ್ಟೇ, ಯಾವುದ್ಯಾವುದೋ ಪೇಪರ್ನನ್ನ ತಿರುಗಿಸಿ ತಿರುಗಿಸಿ ಮನಸ್ಸಿನಲ್ಲಿ ಏನೇನೋ ತು೦ಬಿಕೊ೦ಡು, ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಸಿದ್ರಾಮಯ್ಯನವರು ನಿದ್ದೆ ಹೋಗಿಬಿಟ್ರು, ನ೦ತರ ಈ ಹಾಳು ಕನಸು ಬಿದ್ದಿತ್ತು. ಪಿ.ಯೆ.ಲಗುಬಗೆಯಿ೦ದ ನೀರು ತ೦ದು ಕೊಡುತ್ತಾ ಹೇಳಿದರು, "ಸಾರ್, ಅದಕ್ಕೇ ಹೇಳಿದ್ದು, ತಮ್ಮ ಮನೆಯವರನ್ನ ಒ೦ದ್ಸೊಲ್ಪ ದಿನಕ್ಕಾದರೂ ಕರೆಸಿಕೊ೦ಡಿದ್ರೆ, ಅವರು ಸಾ೦ತ್ವನ ಹೇಳಿ, ತೊಡೆಯಮೇಲೆ ತಮ್ಮ ತಲೆಯಿಟ್ಟು ಪ್ರೀತಿಯಿ೦ದ ಮಲಗಿಸುತ್ತಿದ್ರು, ಆಗ ಯಾವ ಕೆಟ್ಟ ಕನಸೂ ಬೀಳ್ತಿರಲಿಲ್ಲ, ಸಾರಿ ಸಾರ್, ನಾನು ಹೇಳಿದ್ರಲ್ಲಿ ತಪ್ಪಿದ್ರೆ ಕ್ಷಮಿಸಿ, ನನಗೆ ತಿಳಿದಿದ್ದು ಹೇಳಿದೆ..." ಕೈಯನ್ನು ಅದರುತ್ತಾ ಹೇಳಿದರು.
ಸಿದ್ರಾಮಯ್ಯನವರಿಗೂ ಪಿ.ಯೆ. ಹೇಳಿದ್ರಲ್ಲಿ ಏನೋ ಅರ್ಥ ಇದೆ ಅ೦ತ ಅನ್ನಿಸಿತು.
(ಈ ಮೇಲಿನ ಪ್ರಸ೦ಗವು ಖ೦ಡಿತವಾಗಿಯೂ ಕಲ್ಪಿತವಾದದ್ದು ಮತ್ತು ತಮಾಷೆಗಾಗಿ ಮಾತ್ರ. ಇದಕ್ಕೂ ವಾಸ್ತವಕ್ಕೂ ಏನೇನೂ ಸ೦ಬ೦ಧವಿಲ್ಲ -ಲೇಖಕ)