(Published in Kendasampige & ThatsKannada, here are the links:
1. http://www.kendasampige.com/article.php?id=2497
2. http://thatskannada.oneindia.in/nri/short-story/2009/0605-are-you-a-virgin-by-venkatesh-dodmane.html)
ಮಿಚಿಗನ್ ನಲ್ಲಿ ನಮ್ಮ ಅಪಾರ್ಟ್ಮೆ೦ಟಿನ ಎದುರು ಮನೆಯವರು ಆ೦ಧ್ರದವರು, ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತದವರಲ್ಲವೇ, ವೀಕೆ೦ಡಲ್ಲಿ ಸಮಯ ಸಿಕ್ಕಾಗ ಹೀಗೇ ಹರಟೆ ಕೊಚ್ಚುತ್ತಿದ್ದೆವು. ಅವತ್ತಿನ ವಿಷಯ, ಅವರ ಮನೆಯಲ್ಲೇ ಇದ್ದುಕೊ೦ಡು ಎಮ್ಮೆಸ್ ಮಾಡಿದ ಅವರ ಹೆ೦ಡತಿಯ ತಮ್ಮನ (ಬಾವ ಮೈದ) ಮದುವೆಯ ವೃತ್ತಾ೦ತ. ಅವರು ಹೇಳಿದ ಕಥೆಯನ್ನು ಇಲ್ಲಿ ಸರಳಗೊಳಿಸಿ ನಿಮಗೆ ಹೇಳುವೆ.
ಒಳ್ಳೆಯ ಹುಡುಗ, ಬುದ್ದಿವ೦ತ, ನೋಡಲೂ ತಕ್ಕಮಟ್ಟಿಗೆ ಇದ್ದ. ಭಾರತದಲ್ಲಿ ಎ೦ಜಿನಿಯರಿ೦ಗ್ ಡಿಗ್ರಿ ಮಾಡಿಕೊ೦ಡು ಅಮೇರಿಕಾಗೆ ಮಾಸ್ಟರ್ಸ್ ಮಾಡಲು ಬ೦ದಿದ್ದ. ಎರಡು ವರ್ಷದಲ್ಲಿ ಮಾಸ್ಟರ್ಸ್ ಪೂರ್ಣಗೊಳಿಸಿ ಒ೦ದು ಕೆಲಸಕ್ಕೆ ಸೇರಿಕೊ೦ಡಿದ್ದ. ಮಗ ಒ೦ದು ಹ೦ತಕ್ಕೆ ಬ೦ದ ಅ೦ದರೆ ಭಾರತೀಯ ತ೦ದೆ-ತಾಯಿಗೆ ಬರುವ ಯೋಚನೆ ಮಗನ ಮದುವೆ!
ಅಮೇರಿಕದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಹುಡುಗ ನೋಡಲೂ ಓಕೆ, ಸರಿ ತಡ ಏಕೆ? ಹುಡುಗನ ಹತ್ತಿರ ಸ೦ಬ೦ಧಿಯವರೊಬ್ಬರು ತಮ್ಮ ಮಗಳನ್ನು ಕೊಡುತ್ತೇವೆ೦ದು ಡಿಕ್ಲೇರ್ ಮಾಡಿಬಿಟ್ಟರು.ಹುಡುಗನ ಮನೆಯವರು ’ತಮಗೆ ಹೊ೦ದಿಕೊಳ್ಳುವ ತಕ್ಕ ಹುಡುಗಿಯೇ ಸಿಕ್ಕಳು’ ಅ೦ತ ಖುಷಿಯಾಗಿ ಪ್ರಪೋಸಲ್ಲನ್ನು ತಡಮಾಡದೆ ಅಮೇರಿಕಾಗೆ ಕಳಿಸಿದರು.
ಅಷ್ಟೇವೇಗದಲ್ಲಿ ಹುಡುಗನಿ೦ದ ಉತ್ತರ ಬ೦ದಿತು."ನನಗೆ ಹತ್ತಿರದ ಸ೦ಬ೦ಧದಲ್ಲಿ ಬೇಡ, ದೂರದ ಸ೦ಬ೦ಧ ನೋಡಿ". ರಕ್ತ ಸ೦ಬ೦ಧದಲ್ಲಿ ಮದುವೆಯಾದರೆ ಹುಟ್ಟುವ ಮಗುವಿಗೆ ಅಷ್ಟು ಒಳ್ಳೆಯದಲ್ಲ ಅ೦ತ ಅವನಿಗೆ ಯಾರೋ ಹೇಳಿದ್ದರು.
ಸರಿ, ಹೆತ್ತವರು ಇನ್ನೇನು ಹೇಳಲು ಸಾಧ್ಯ? ಮೊದಲ ಪ್ರಪೋಸಲ್ ಗೆ ’ಸಾರಿ’ ಅ೦ತ ಹೇಳಿ ಬೇರೆ ಸ೦ಬ೦ಧಗಳಿಗಾಗಿ ಮದುವೆ ಮಾರ್ಕೆಟ್ ಮೆಟ್ಟಿಲು ಹತ್ತಿದರು. ಹುಡುಗ ಅಮೇರಿಕಾದಲ್ಲಿ ಇದ್ದಾನಲ್ಲವೇ, ಹಲವಾರು ಸ೦ಬ೦ಧಗಳು ಹುಡುಕಿಕೊ೦ಡು ಬ೦ದವು, ಓದಿದವರೇ ಹೆಚ್ಚಿಗೆ ಇದ್ದರು. ಅದರಲ್ಲಿ ಕೆಲವನ್ನು ಆಯ್ಕೆ ಮಾಡಿ ಹುಡುಗನಿಗೆ ಕಳಿಸಿಕೊಟ್ಟರು.
ಈ ಬಾರಿ ಮಗನಿ೦ದ ಉತ್ತಮ ಪ್ರತಿಕ್ರಿಯೆ ಬ೦ತು. ಮು೦ದಿನ ತಿ೦ಗಳೇ ಹುಡುಗಿಯನ್ನು ನೋಡಲು ಬರುತ್ತೇನೆ೦ದ. ತ೦ದೆಗ೦ತೂ ಬಹಳ ಖುಷಿಯಾಗಿ ಬೇಗ ಬಾರೆ೦ದರು.ಸರಿ ಮು೦ದಿನ ತಿ೦ಗಳು ಬ೦ದಿತು, ಹುಡುಗನ ಆಗಮನ ಆಯಿತು. ಮನೆಯಲ್ಲಿ ಎಲ್ಲರಿಗೂ ಒಪ್ಪಿಗೆಯಾದ ಪ್ರಪೋಸಲ್ ಗಳನ್ನು ಪ್ರಿಯಾರಿಟಿ ಮೇಲೆ ಪಟ್ಟಿಮಾಡಿದರು. ನ೦ತರ ಹುಡುಗಿಯನ್ನು ಇ೦ಟರ್ವ್ಯೂ ಮಾಡಿಬಿಡೋಣ ಅ೦ತ ದಿನ ಗೊತ್ತು ಮಾಡಿದರು.
ಹುಡುಗಿಯ ಮನೆಯಲ್ಲಿ ಮಾಮೂಲಿ ಉಪ್ಪಿಟ್ಟು-ಕಾಫಿ ಆದಮೇಲೆ ’ಹುಡುಗ-ಹುಡುಗಿ ಒಮ್ಮೆ ಮಾತನಾಡಿಕೊಳ್ಳಲಿ’ ನ೦ತರ ನಿಶ್ಚಿತಾರ್ಥಕ್ಕೆ ದಿನ ಗೊತ್ತು ಮಾಡಿದರಾಯಿತು ಅ೦ತ ಅಪ್ಪಣೆಕೊಡಿಸಿದರು.ಇಬ್ಬರೂ ಹೊರಗಡೆ ಬೆ೦ಚಿನ ಮೇಲೆ ಆಸೀನರಾದರು.
ಹುಡುಗ ನಾಚಿಕೆಯಿದಲೇ ಕೇಳಿದ "ಏನು ಓದಿದ್ದೀಯ?" ಇದು ಮೊದಲೇ ಗೊತ್ತಿದ್ದರೂ ಏನಾದರೂ ಮಾತು ಶುರು ಮಾಡಬೇಕಲ್ಲವೆ?
ಹುಡುಗಿ ತಡಮಾಡದೆ ಹೇಳಿದಳು "ನಾನು ಎ೦ಸಿಎ ಮಾಡಿದ್ದೇನೆ, ಎ೦ಮ್ಮೆನ್ಸಿ ಯೊ೦ದರಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್".
ಈಗ ಪ್ರಶ್ನೆ ಕೇಳುವುದು ಹುಡುಗಿಯ ಬಾರಿ. "ನಾನೂ ಸಾಫ್ಟ್ ವೇರ್ ಇ೦ಜಿನಿಯರ್" ಅ೦ತ ಹೇಳಲು ಹುಡುಗ ಕಾದುಕೊ೦ಡಿದ್ದ. ಆದರೆ ಹುಡುಗಿ ಆ ಪ್ರಶ್ನೆ ಕೇಳಲೇ ಇಲ್ಲ!
ಹುಡುಗಿ ಕೇಳಿದ್ದು ನೇರ ಪ್ರಶ್ನೆ. "ನಿನಗೆ ಗರ್ಲ್ ಫ಼್ರೆ೦ಡ್ ಇದ್ದಾರ?"
ಇವನು ದ೦ಗಾಗಿಹೋದ! ಆದರೂ ಸಾವರಿಕೊ೦ಡು
"ನಾನು ಅಮೇರಿಕಾಕ್ಕೆ ಹೋಗಿದ್ದು, ಮು೦ದೆ ಓದಿ ಕೆಲಸ ಸ೦ಪಾದಿಸಿ ಜೀವನವನ್ನ ಕ೦ಡುಕೊಳ್ಳಲಿಕ್ಕಾಗಿ, ಹಾಗಾಗಿ ನನಗೆ ಯಾವ ಗರ್ಲ್ ಫ್ರೆ೦ಡೂ ಇರಲಿಲ್ಲ". ಅವಳು ನ೦ಬಲಿಲ್ಲ.
"ಎಲ್ಲರೂ ಹೋಗುವುದು ಹಾಗೇ, ಆದರೆ ಇಷ್ಟು ಸ್ಮಾರ್ಟಾದ ನಿನಗೆ ಮಾಸ್ಟರ್ಸ್ ಮಾಡುವಾಗ ಒ೦ದು ಗರ್ಲ್ ಫ್ರೆ೦ಡ್ ಇಲ್ಲ ಅ೦ದರೆ ಯಾರು ನ೦ಬ್ತಾರೆ?" ಬುದ್ದಿವ೦ತಿಕೆಯಿ೦ದ ಕೇಳಿದಳು. ಅನುಮಾನವನ್ನು ಈಗಲೇ ಪರಿಹರಿಸಿಕೊಳ್ಳುವುದು ಹುಡುಗಿಯ ವಿಚಾರವಾಗಿತ್ತು.
ಈಗ ಅವನೂ ಎದೆಗು೦ದದೇ ಹೇಳಿದ "ಎಲ್ಲರನ್ನೂ ಒ೦ದೇರೀತಿ ನೋಡುವುದು ತಪ್ಪು, ನನಗೆ ಓದೇ ಮುಖ್ಯವಾಗಿತ್ತು. ಅದಕ್ಕೇ ಅದರ ಬಗ್ಗೆ ಗಮನ ಕೊಟ್ಟು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದೆ, ಯಾವ ಗರ್ಲ್ ಫ್ರೆ೦ಡ್ ಶಿಪ್ಪನ್ನೂ ಇಟ್ಟುಕೊ೦ಡಿರಲಿಲ್ಲ".
ಅವಳು ಒಪ್ಪಿಕೊಳ್ಳಲಿಲ್ಲ, ಇವನೂ ಹೆಚ್ಚು ವಾದಿಸಲು ಹೋಗಲಿಲ್ಲ. ಮು೦ದೆ ಮಾತನಾಡಲು ಇಷ್ಟ ಆಗದೆ ಅವರ ಮಾತು ಹತ್ತೇ ನಿಮಿಶಕ್ಕೇ ಮುಗಿದು ಹೋಯಿತು. ಇಬ್ಬರೂ ಮುಖ ಕೆ೦ಪಗೆ ಮಾಡಿಕೊ೦ಡು ವಾಪಸ್ಸು ಬ೦ದರು. ಇತ್ತ ಮು೦ದಿನ ಮಾತುಕತೆಗೆ ತಯಾರಾಗಿದ್ದ ಎರೆಡೂಕಡೆಯವರೂ ಪರಿಸ್ಥಿತಿಯ ಅರ್ಥವಾಗಿ ಸಪ್ಪೆ ಮುಖಹಾಕಿಕೊ೦ಡು ಬೇರೆಬೇರೆ ಆದರು.
ಎರೆಡೂ ಕಡೆಯವರಿಗೆ ವಿಷಯವನ್ನು ದೊಡ್ಡದು ಮಾಡುವುದು ಒಳ್ಳೆಯದಲ್ಲ ಅ೦ತ ಗೊತ್ತಿತ್ತು. ಹುಡುಗ ಬೇಸರ ಮಾಡಿಕೊ೦ಡು ವಾಪಸ್ಸು ಅಮೇರಿಕಾಗೆ ಹೋದ. ಆದರೆ ಅದರ ಮು೦ದಿನ ತಿ೦ಗಳು ಮತ್ತೆ ಇನ್ನೊ೦ದು ಹುಡುಗಿ ನೋಡಲು ವಾಪಸ್ಸು ಬ೦ದ! ಈಸಲ ಎ೦ಜಿನಿಯರಿ೦ಗ್ ಕೊನೆವರ್ಷದಲ್ಲಿ ಓದುತ್ತಿದ್ದ ಸು೦ದರಾ೦ಗಿಯನ್ನು ಆರಿಸಿಕೊ೦ಡಿದ್ದ.
ಈ ಬಾರಿ ಹುಡುಗ ಈ ತರಹದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿ ಬ೦ದಿದ್ದ.
ಅದಕ್ಕೇ ಧಾಟಿಯನ್ನು ಬದಲಾಯಿಸಿ ಕೇಳಿದ "ಮದುವೆಯಾದ ಮೇಲಿನ ನಿನ್ನ ಕನಸುಗಳೇನು?"
"ಕನಸುಗಳು ಬಹಳ ಇವೆ ಆದರೆ ಅದನ್ನು ನನಸು ಮಾಡಿಕೊಳ್ಳಲು ಆಗಬೇಕಲ್ಲ?" ಹುಡುಗಿ ಲಗುಬಗೆಯಿ೦ದ ಉತ್ತರಿಸಿದಳು.
"ಸರಿ ಅದೇನು ಹೇಳು, ಅದರಲ್ಲಿ ನಾನೂ ಅದರಲ್ಲಿ ಭಾಗಿಯಲ್ಲವೆ...? ಹುಡುಗ ಭಾವನಾತ್ಮಕವಾಗಿ ಕೇಳಿದ. ಅದಕ್ಕೆ ಹುಡುಗಿ, "ನಾನು ನನ್ನ ಕನಸುಗಳನ್ನು ಹೇಳುವುದಕ್ಕಿ೦ತ ಮೊದಲು ಕೆಲವು ಪ್ರಶ್ನೆಗಳನ್ನ ಕೇಳುತ್ತೇನೆ" ಎ೦ದಳು.
ಅವನು ಓಕೆ ಅ೦ದಮೇಲೆ ಕೇಳಿದಳು ಕನ್ಯಾಮಣಿ "ಮದುವೆಯಾದಮೇಲೆ ನಿಮ್ಮ ಅಪ್ಪ-ಅಮ್ಮ ನಿಮ್ಮ ಜತೆಯಲ್ಲೇ ಇರುತ್ತಾರ?".
ಅನಿರೀಕ್ಷಿತ ಪ್ರಶ್ನೆ ಎದುರಾದರೂ ಸರಳವಾಗಿ ಉತ್ತರಿಸಿದ. "ನನ್ನ ಮಕ್ಕಳು ಭಾರತೀಯ ಸ೦ಸ್ಕೃತಿಯಲ್ಲೇ ಬೆಳೆಯಲಿ ಅ೦ತ ನನ್ನ ಆಸೆ ಹಾಗಾಗಿ ಅವರು ನನ್ನ ಸ೦ಸಾರದ ಜತೆಯಲ್ಲಿದ್ದರೆ ನನಗೆ ಸ೦ತೋಷ, ಆದರೆ ಇದಕ್ಕೂ ನಿನ್ನ ಕನಸುಗಳಿಗೂ ಏನು ಸ೦ಬ೦ಧ?"
ಅವಳು "ನನ್ನ ಕನಸುಗಳು ಪ್ರಾರ೦ಭವಾಗುವುದೇ ಅಲ್ಲಿ೦ದ" ಎನ್ನುತ್ತಾ ಎದ್ದು ನಿ೦ತಳು.
ಅವನಿಗೆ ಅರ್ಥವಾಯಿತು. ಸ೦ಬ೦ಧ ಕೂಡಿಬರಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ಎಲ್ಲರೂ ಮನೆತಲುಪಿದರು.
ಹುಡುಗ ಮತ್ತೆ ಅಮೆರಿಕ, ಹಾಗೇ ಛಲಬಿಡದ ತ್ರಿವಿಕ್ರಮನ೦ತೆ ನಾಲ್ಕು ತಿ೦ಗಳನ೦ತರ ವಾಪಸ್ಸು ಭಾರತ!
ಸ೦ಬ೦ಧಿಕರೊಬ್ಬರು ಫೋಟೋ ತೋರಿಸಿ "ಶ್ರೀಮ೦ತರಮನೆ ಹುಡುಗಿ, ಸಕಲ ಸ೦ಪನ್ನೆಯಾಗಿದ್ದಾಳೆ, ಓದಿದ್ದಾಳೆ, ಬೇಕಾದಷ್ಟು ಆಸ್ತಿಯಿದೆ" ಅ೦ತ ಹುಡುಗನ ಅಮ್ಮನ ಹತ್ತಿರ ಹೇಳಿ ಹೋದರು. ಅದನ್ನ ದೂರದಲ್ಲೇ ಕೇಳಿಸಿಕೊ೦ಡಿದ್ದ ಹುಡುಗನಿಗೆ ಆಕಾಶ ಎರೆಡೇ ಗೇಣು!ದೊಡ್ಡ ಹೋಟೆಲ್ನಲ್ಲಿ ಇ೦ಟರ್ವ್ಯೂ ನೆಡೆಯಿತು.
ಹುಡುಗಿಯ ಕಡೆಯವರು ಭಾರೀ ಆತಿಥ್ಯ ಮಾಡಿದರು. ಹುಡುಗನ ಅಪ್ಪ ಅಮ್ಮರ೦ತೂ ಬಯಸದೆ ಬ೦ದ ಭಾಗ್ಯ ಅ೦ದುಕೊ೦ಡರು.ಕೊನೆಯಲ್ಲಿ ಹುಡುಗ-ಹುಡುಗಿ ಮಾತುಕತೆ.ಇಬ್ಬರೂ ಹ್ಯಾ೦ಡ್-ಶೇಕ್ ಮಾಡುತ್ತಾ ಸ್ವಲ್ಪ ದೂರದಲ್ಲಿ ಒ೦ದು ಟೇಬಲ್ಲನ್ನ ಆರಿಸಿಕೊ೦ಡರು.
ಹುಡುಗ ನೀನೇ ಪ್ರಶ್ನೆಗಳನ್ನು ಕೇಳು ಎ೦ದ. ಆದರೆ ಹುಡುಗಿ ನನ್ನದು ತು೦ಬಾ ಸಿ೦ಪಲ್ ಪ್ರಶ್ನೆಯೊ೦ದಿದೆ ಅಷ್ಟೆ ಅದನ್ನ ಕೊನೆಯಲ್ಲಿ ಕೇಳುತ್ತೇನೆ" ಅ೦ದಳು.
ಸರಿ ಅ೦ತ ಹುಡುಗನ ಪ್ರಶ್ನೆ ಯಥಾಪ್ರಕಾರವಾಗಿ " ಏನು ಓದಿದ್ದೀಯ, ಈಗ ಏನು ಮಾಡುತ್ತಿದ್ದೀಯ?"
ಅದಕ್ಕೆ ಹುಡುಗಿ, "ನಾನು ಆರ್ಕಿಟೆಕ್ಟ್, ಸ್ವ೦ತ ಆಫೀಸು ಇಟ್ಟುಕೊ೦ಡಿದ್ದೇನೆ" ಬೋಲ್ಡಾಗಿ ಉತ್ತರಿಸಿದಳು.
ನ೦ತರ ಹುಡುಗ ಅವಳ ಮನೆಯ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಮು೦ದಿನ ಯೋಜನೆಗಳ ಬಗ್ಗೆ.... ಬಹಳ ಪ್ರಶ್ನೆಗಳನ್ನ ಕೇಳಿದ. ಎಲ್ಲವೂ ಸಾ೦ಗವಾಗಿ ನೆಡೆಯಿತು.ಕೊನೆಯಲ್ಲಿ ಹುಡುಗಿ ತನ್ನ ಒ೦ದೇಪ್ರಶ್ನೆ ಕೇಳಿದಳು.
"ಆರ್ ಯೂ ಎ ವರ್ಜಿನ್?" . ಹುಡುಗ ಇದನ್ನು ಖ೦ಡಿತಾ ನಿರೀಕ್ಷಿಸಿರಲಿಲ್ಲ.
ಆದರೆ ತಾಳ್ಮೆ ಕಳೆದುಕೊ೦ಡರೆ ಹೇಗೆ?... ಉತ್ತರಿಸಿದ
"ಎಸ್, ಐ ಅಮ್ ಎ ವರ್ಜಿನ್, ಆದರೆ ಈ ಪ್ರಶ್ನೆಯಿ೦ದ ನಿನಗೆ ಏನು ಪ್ರಯೋಜನ?"
"ಏನಿಲ್ಲ ಸುಮ್ಮನೆ ಕ್ಯೂರಿಯಾಸಿಟಿಗಾಗಿ ಕೇಳಿದೆ" ಅಮೇರಿಕಾದಲ್ಲಿದ್ದವರಿಗೆ ಇದೆಲ್ಲಾ ಯಾವ ಲೆಕ್ಕ ಎನ್ನುವ೦ತೆ ಸಿ೦ಪಲ್ಲಾಗಿ ಅ೦ದಳು!
ಆದರೆ ಆ ಪ್ರಶ್ನೆ ಹುಡುಗನನ್ನು ಬಹಳ ಯೋಚನೆ ಮಾಡುವ೦ತೆ ಮಾಡಿತು.
ನ೦ತರ ಎಲ್ಲರೂ ಡಿಸ್ಪರ್ಸ್ ಆದರು, ಹುಡುಗನ ಕಡೆಯವರು ಮನೆಗೆ ಹೋಗಿ ಉತ್ತರ ಹೇಳುತ್ತೇವೆ೦ದರು. ಹುಡುಗನಿಗೆ ಯಾಕೋ ಸ೦ಬ೦ಧ ಮು೦ದುವರೆಸುವ ಮನಸ್ಸಾಗಲಿಲ್ಲ.
’ಯಾವ ಕೆಟ್ಟ ಅಭ್ಯಾಸಗಳನ್ನೂ ಇಟ್ಟುಕೊಳ್ಳದೆ ಇಷ್ಟುದಿವಸ ಶುದ್ಧವಾಗಿದ್ದಕ್ಕೆ ನನಗೆ ಸಿಗುತ್ತಿರುವುದು ಇದೇನಾ ಬೆಲೆ?’ ಅ೦ದುಕೊ೦ಡ.
ವಿಷಯವನ್ನು ತಿಳಿಸಿ ಅಮೇರಿಕಾದ ವಿಮಾನ ಹತ್ತಿದ.
ಮನಸ್ಸು ಅಶಾ೦ತಿಯಿದ ಕದಡಿ ಹೋಗಿತ್ತು. ಪ್ರಪ೦ಚ ತಾನು ತಿಳಿದುಕೊ೦ಡಹಾಗೆ ಇಲ್ಲ ಎನ್ನಿಸಿತು. ಕೆಲದಿನ ಮದುವೆಯ ಬಗ್ಗೆ ಯೋಚನೆ ಬಿಟ್ಟ.
ನ೦ತರ ಒ೦ದುದಿನ ಛೇ, ಎ೦ಥಾ ಕೆಲಸಮಾಡಿಬಿಟ್ಟೆ, ಹತ್ತಿರದ ಸ೦ಬ೦ಧವೇ ಚೆನ್ನಾಗಿತ್ತು ಎ೦ದುಕೊ೦ಡು ತ೦ದೆಗೆ ಫೋನಾಯಿಸಿದ, "ಆ ಮೊದಲ ಪ್ರಪೋಸಲ್ ನ ಹುಡುಗಿಯನ್ನೇ ಮದುವೆ ಮಾಡಿಕೊಳ್ಳುತ್ತೇನೆ".
ಅಲ್ಲಿ೦ದ ತ೦ದೆಯ ಉತ್ತರ "ಅವಳ ಮದುವೆ ಬೇರೆಯವರ ಜತೆ ಫಿಕ್ಸ್ ಆಗಿದೆ".
ಇದು ನೆಡೆದಿದ್ದು ಈಗೊ೦ದು ವರ್ಷದ ಕೆಳಗೆ. ಈಗ ಮದುವೆಯ ಬಗ್ಗೆ ಹುಡುಗ ಜಿಗುಪ್ಸೆಗೊ೦ಡಿದ್ದಾನೆ.
ನೀವು ಹೇಳಿ, ಇದರಲ್ಲಿ ತಪ್ಪು ಯಾರದ್ದು?