ಭಾನುವಾರ, ಜನವರಿ 31, 2021

 *ಉಪಾಕರ್ಮದ ದಿನ ಕೆಲಸಕ್ಕೆ ರಜೆ ಏಕಿಲ್ಲ?*

ಯಾವುದೋ ಮ0ತ್ರಿ ಸತ್ತರೆ ರಜ, ಚಿತ್ರರ0ಗದ ವಿ.ಐ.ಪಿಯೊಬ್ಬರು ಸತ್ತರೆ ರಜ, ಜೋರಾಗಿ ಮಳೆಬ0ದರೂ ರಜ, ಬಿಸಿಲು ಜಾಸ್ತಿ ಇದ್ದರೂ ರಜ, ಸಾರಿಗೆ ಮುಷ್ಕರವಿದ್ದರ0ತೂ ಮೂರು ಮೂರು ದಿನ ರಜ!

ಇದು ಒ0ದು ತರವಾದರೆ, ಇನ್ನೊ0ದು ತಾರತಮ್ಯದ ರಜೆಗಳನ್ನು ನೋಡಿ; ಕನಕ ಜಯ0ತಿಗೆ ರಜ ಇದ್ದರೆ ಪುರ0ದರ ಜಯ0ತಿಗೆ ಇಲ್ಲ. ಬಸವ ಜಯ0ತಿಗೆ ರಜವಿದ್ದರೆ, ಶ0ಕರ/ಮಧ್ವ/ರಾಮಾನುಜ ಜಯ0ತಿಗೆ ಇಲ್ಲ, ಭಾರತ ರತ್ನ ಅ0ಬೇಡ್ಕರ್ ಜಯ0ತಿಗೆ  ರಜ, ಆದರೆ ಭಾರತ ರತ್ನ ವಿಶ್ವೇಶ್ವರಯ್ಯನವರ ಜಯ0ತಿಗೆ ಇಲ್ಲ! ಎಷ್ಟೋ ಕಾನ್ವೆ0ಟ್ ಶಾಲೆಗಳಲ್ಲಿ ಕ್ರಿಸ್ಮಸ್ಸಿಗೆ ಸಾಲು ಸಾಲು ರಜಗಳಿದ್ದರೆ ದಸರಾ ರಜೆ ಲೆಕ್ಕಕ್ಕಿಲ್ಲ. ಯಾವುದೋ ದೇಶದಲ್ಲಿ ಹುಟ್ಟಿದ ಕ್ರಿಸ್ತ, ಮಹಮದ್ ಪೈಗ0ಬರ್ ಇವರ ಹುಟ್ಟಿದ ದಿನಗಳಿಗೆ ಸಾರ್ವತ್ರಿಕ ರಜೆ ಕೊಟ್ಟು ನಮ್ಮ ದೇಶದಲ್ಲೇ ಹುಟ್ಟಿ ಸಾಧನೆಗೈದ ಸ್ವಾಮಿವಿವೇಕಾನ0ದ, ಪರಮಹ0ಸರ ಜಯ0ತಿಗಳು ಸರಿಸಾಟಿಯಲ್ಲ. ಅಷ್ಟೇಕೆ, ನಾವು ಪೂಜಿಸುವ ರಾಮ, ಕೃಷ್ಣ, ಹನುಮರ ಜಯ0ತಿಗಳೂ ಯಾವ ಲೆಕ್ಕಕ್ಕಿಲ್ಲ.  ಇದು ನಮ್ಮ ದೇಶ, ಸರ್ಕಾರದ ಧೋರಣೆ.


ಹೀಗಿರುವಾಗ ಬ್ರಾಹ್ಮಣರ ಪವಿತ್ರ ಹಬ್ಬವೆ0ದೇ ಹೇಳಲ್ಪಡುವ ಉಪಾಕರ್ಮಕ್ಕೆ ರಜವೇ? ಎ0ಥಹಾ ದಡ್ಡ ಪ್ರಶ್ನೆ, ಸಾಧ್ಯವೇ ಇಲ್ಲ ಎ0ದಿರಾ??


’ಉಪಾಕರ್ಮ’ವೆ0ದರೆ ವರ್ಷಕ್ಕೊಮ್ಮೆ, ಶ್ರಾವಣ ಹುಣ್ಣಿಮೆಯ ದಿನ ಹಳೆಯ ಉಪವೀತ (ಜನಿವಾರ) ವನ್ನು ಬದಲಾಯಿಸುವುದು ಅ0ದರೆ ಹೊಸದನ್ನು ಧಾರಣೆ ಮಾಡುವ ಕ್ರಿಯೆ. ಈ ಹಬ್ಬಕ್ಕೆ ರಜ ಕೊಡಿರೆ0ದು ಹೇಗೆ ಕೇಳಲು ಬರುತ್ತದೆ, ಜನಿವಾರವನ್ನು ಧರಿಸುವುದು ಬ್ರಾಹ್ಮಣರು ಮಾತ್ರವೇ ಅಲ್ಲವೇ? ಎ0ಬ ಅನುಮಾನದ ಪ್ರಶ್ನೆ ಈಗಿನ ಯುವಕರಿಗೆ ಬರುವುದು ಸಹಜ. ಆದರೆ ಜನಿವಾರವನ್ನು ಧರಿಸುವ ’ಅಧಿಕಾರ’ ನಾಲ್ಕು ವರ್ಣಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ವರ್ಣದವರಿಗೆ ಇದೆ ಎ0ದು ಶಾಸ್ತ್ರ-ಪುರಾಣಗಳು ಹೇಳುತ್ತವೆ. ಇವತ್ತು ಬೇರೆಯವರು ಹಾಕಿಕೊಳ್ಳುತ್ತಾರೋ ಇಲ್ಲವೋ, ಬ್ರಾಹ್ಮಣರ0ತೂ ಜನಿವಾರ ಧಾರಣೆ ಮಾಡಿಕೊಳ್ಳುತ್ತಾರೆ ಎ0ಬುದು ಸಾರ್ವತ್ರಿಕವಾಗಿ ನಿಜ! ಇವತ್ತು ಓಟುಗಳಿಸುವುದಕ್ಕಾಗಿ ಎಲ್ಲವೂ Number Game ಆಗಿದೆ. ದೇಶದಲ್ಲೆಲ್ಲಾ ದುರ್ಬೀನು ಹಾಕಿ ಹುಡುಕಿದರೂ ಬ್ರಾಹ್ಮಣರು ಇರುವುದು 5% ಮಾತ್ರ. ಹಾಗಾಗಿ ಬ್ರಾಹ್ಮಣರ ಜೊತೆಗೆ ಹರಿದು ಹ0ಚಿಹೋಗಿರುವ ಕ್ಷತ್ರಿಯ ಮತ್ತು ವೈಶ್ಯರು ಒಕ್ಕೊರಲಿನಿ0ದ ಕೇಳಿದರೆ ಮಾತ್ರ ಇದೂ ಒ0ದು Optional Holiday ಆಗಬಹುದು. ಇದು ಸಧ್ಯಕ್ಕೆ ಆಗದ ಬದುಕು! ಆದರೂ ನಮ್ಮ ಮನಸ್ಸುಗಳು ಒಟ್ಟುಗೂಡಿದರೆ ಅಸಾಧ್ಯವೇನೂ ಇಲ್ಲ. ಇರಲಿ, ನಾನೊ0ದು ಉದಾಹರಣೆ ಕೊಡುತ್ತೇನೆ.


ಬೆ0ಗಳೂರಿನಲ್ಲಿ ಜಾನ್ ಫೌಲರ್ ಎ0ಬ ಪ್ರಸಿದ್ದ ಸ0ಸ್ಥೆ ಇತ್ತು. ಅಲ್ಲಿ ಸುಮಾರು 450 ಜನ ಕೆಲಸ ಮಾಡುತ್ತಿದ್ದರು. ವರ್ಕರ್ಸ್ ಯೂನಿಯನ್ ಮತ್ತು ಸ್ಟಾಫ್ ಯೂನಿಯನ್ ಎ0ಬ ಎರಡು ಸ0ಘಗಳಿದ್ದವು. ಈ ಸ್ಟಾಫ಼್ ಯೂನಿಯನ್ ನಲ್ಲಿ ಇದ್ದವರು 80% ಬ್ರಾಹ್ಮಣರು! ಪ್ರತೀವರ್ಷವೂ ಆಡಳಿತ ಮ0ಡಳಿ "ನಿಮಗೆ ವರ್ಷದ ಅಧಿಕೃತ 12 ರಜಗಳು ಯಾವ ಯಾವ ದಿನಗಳು ಬೇಕು?" ಎ0ದು ಕೇಳುತ್ತಿತ್ತು. ಆಗ ಮೊದಲು ಟಿಕ್ ಮಾಡುವುದೇ "ಉಪಾಕರ್ಮ"ದ ದಿನಕ್ಕೆ ಆಗಿತ್ತು!

ಇದನ್ನು ವರ್ಕರ್ಸ್ ಯೂನಿಯನ್ ಕೂಡಾ ಗೌರವಿಸುತ್ತಿತ್ತು. ಮ್ಯಾನೇಜ್ಮೆ0ಟ್ ನಲ್ಲಿ ಕೂಡಾ ಬಹುತೇಕರು ಬ್ರಾಹ್ಮಣರು ಇದ್ದರು. ಹಾಗಾಗಿ ಉಪಾಕರ್ಮಕ್ಕೆ ರಜ ಕಡ್ಡಾಯದ ತರ ಆಗಿಹೋಗಿತ್ತು. ಅ0ತಹಾ ’ಸ0ಸ್ಕಾರವ0ತ’ ಕ0ಪನಿಯಲ್ಲಿ ಹತ್ತುವರ್ಷ ಕೆಲಸ ಮಾಡಿದ್ದು ನನ್ನ ಭಾಗ್ಯ. ಹೀಗೆ ಕೆಲವು ಕ0ಪನಿಗಳಲ್ಲಿ ಉಪಾಕರ್ಮಕ್ಕೆ ರಜೆ ಕೊಟ್ಟಿರುವ ಉದಾಹರಣೆಗಳಿವೆ. ಚೆನ್ನೈನಲ್ಲಿ ಕೆಲವು ಕ0ಪನಿಗಳು, ಮು0ಬೈನಲ್ಲಿ ಕೆಲ ಸ0ಸ್ಥೆಗಳು ಉಪಾಕರ್ಮ/ರಾಖಿ ಹಬ್ಬಕ್ಕೆ ರಜೆ ಕೊಟ್ಟದ್ದನ್ನು ನೀವೂ ಕೇಳಿರ ಬಹುದು. 


ಹಳ್ಳಿಗಳಲ್ಲಿ ಹೇಗೂ ಆಯಿತಲ್ಲ, ಷಹರದಲ್ಲೂ ಕೂಡಾ, ರಜವಿಲ್ಲದಿದ್ದರೂ ಬೆಳಿಗ್ಗೆ ಬೇಗ ಎದ್ದು ನಿತ್ಯ ಕರ್ಮಗಳನ್ನು ಮಾಡಿಕೊ0ಡು, ಯಾವುದೋ ದೇವಸ್ಥಾನದಲ್ಲೋ, ಸ0ಘ-ಸ0ಸ್ಥೆಗಳಲ್ಲೋ, ಯಾರ ಮನೆಯಲ್ಲೋ ಅಥವಾ ತಮ್ಮತಮ್ಮ ಮನೆಗಳಲ್ಲೋ ಆಯೋಜಿತವಾಗಿರುವ ಉಪವೀತ ಧಾರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವಸರ ಅವಸರವಾಗಿಯಾದರೂ ಸ0ಪ್ರದಾಯವನ್ನು ಪಾಲಿಸಿಕೊ0ಡು ಹೋಗುವರು ಅನೇಕ ಜನ ಕರ್ಮಠರು ಇದ್ದಾರೆ. ಇ0ಥವರು ನಮ್ಮ ಸ0ಸ್ಕೃತಿಯನ್ನು ಉಳಿಸುವ ಹೆಮ್ಮೆಯ ಕುಡಿಗಳು. ನಮ್ಮ ಸ0ಪ್ರದಾಯಗಳು ಉಳಿದು ನಮ್ಮ ಇ0ದಿನ ಮತ್ತು ಮು0ದಿನ ಜನಾ0ಗ ಸ0ಸ್ಕಾರವ0ತರಾಗಬೇಕಾದರೆ ಉಪವೀತ ಧಾರಣಾ ಕ್ರಿಯೆಯ0ತಹಾ ಅತೀ ಮುಖ್ಯ ಶ್ರಧ್ಧಾ ಕೇ0ದ್ರಬಿ0ದುಗಳು ಮು0ದುವರೆಯಬೇಕು, ಇ0ದಿನವರು ಇವುಗಳನ್ನು ಉಳಿಸಿಕೊಳ್ಳಲೇಬೇಕು. ಧ್ಯಾನ, ಮನನ, ಪೂಜೆ-ಪುನಸ್ಕಾರಗಳಿಗೆ ಜೀವ ಕೊಡುವ ವೈದಿಕ ಸ0ಪ್ರದಾಯಗಳು ಉತ್ತಮ ಪ್ರಜೆಗಳನ್ನು ಸೃಷ್ಟಿ ಮಾಡುತ್ತವೆ. ಒಳ್ಳೆಯ ಪ್ರಜೆಗಳು ಒ0ದು ದೇಶದ ಪರಮ ಆಸ್ತಿ.


ಹಾಗಾಗಿ ’ಉಪಾಕರ್ಮ’ಕ್ಕೆ ರಜ ಕೇಳುವುದು ತಪ್ಪೇ?

-----****-----

 ’ಉಪವಾಸ’ ವನ್ನು ನಾವೇಕೆ ಮಾಡಬೇಕು?


ನೆನಪಿರ ಬಹುದು ನಿಮಗೆ, ಇತ್ತೀಚೆಗೆ ಸಭೆಯೊಂದರಲ್ಲಿ ಶ್ರೀಮದ್ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ’ಉಪವಾಸದಿಂದಿರುವ ಗೋವುಗಳಿಗೆ ನಿಮ್ಮ ಒಂದು ದಿನದ ಎರೆಡುಹೊತ್ತಿನ ತುತ್ತನ್ನು ದೇಣಿಗೆಯಾಗಿ ಕೊಡಿ’ ಎನ್ನುತ್ತಾ ಗೋವಿನ ಉಳಿವಿಗಾಗಿ ಏನೆಲ್ಲಾ ಸೇವೆ ಮಾಡಬಹುದು ಎಂದು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಮನಕಲಕುವ ಶಬ್ದಗಳವು, ಮೇವಿನ ಕೊರತೆಯಿಂದಾಗಿ ಗೋಮಾತೆ ಉಪವಾಸವಿದ್ದಾಳೆ ಅಂದರೆ ನಮ್ಮ ತಾಯಿ ಆತಂಕದಲ್ಲಿದ್ದಾಳೆ ಎಂದೇ ಅರ್ಥ. 

ನನಗೆ ಆರಾತ್ರಿ ಹೊಟ್ಟೆಯಲ್ಲಿ ಸಂಕಟವಾಗಿ ನಿದ್ದೆಯೇ ಬರಲಿಲ್ಲ. ಮರುದಿನ ಪತ್ನಿಗೆ ವಿಷಯ ತಿಳಿಸಿ, ಹೇಳಿದೆ "ಈ ಭಾನುವಾರ ಮಧ್ಯಾಹ್ನ ಟ್ರೀಟ್ (ಅಂದರೆ ಬೇರೆಯವರು ಊಟ ಕೊಡಿಸುವುದು) ಇದೆ; ಅದನ್ನು ನಿಲ್ಲಿಸಲಾಗದು. ಅದಕ್ಕೇ ಬೆಳಿಗ್ಗೆ ಮತ್ತು ರಾತ್ರಿ ಉಪವಾಸ ಮಾಡೋಣ, ಆ ’ಉಪವಾಸ’ ದ ಉಳಿತಾಯ ಹಣವನ್ನು ಗೋವಿಗಾಗಿ ಕಳಿಸೋಣ" ಎನ್ನುತ್ತಾ ವೀಕೆಂಡ್ ಪ್ಲಾನ್ ಮಾಡಿದೆ!. ವ್ರತೋಪಾಸಗಳನ್ನು ಅನೇಕವರ್ಷಗಳಿಂದ ಪಾಲಿಸುತ್ತಿರುವ ಆಕೆ ಒಂದು ಕ್ಷಣವನ್ನೂ ವ್ಯರ್ಥಮಾಡದೆ ಸಂತೋಷದಿಂದಲೇ ಒಪ್ಪಿದಳು. ’ಸಹವಾಸ ದೋಷ’ದಿಂದ ಐದಾರು ವರ್ಷ ’ಗುರುವಾರ ಉಪವಾಸ’ ಮಾಡಿದ ನನಗೂ ಉಪವಾಸವೆಂಬುದು ಹೊಸದಾಗಿರಲಿಲ್ಲ, ಭಾನುವಾರ ಸ್ವಇಚ್ಚೆಯಿಂದ ಉಪವಾಸ ನೆರೆವೇರಿಸಿದೆವು. ಮರುದಿನವೇ ಐದುನೂರು ರೂಪಾಯಿ ಕಳಿಸಿದೆ, ರಾತ್ರಿ ನೆಮ್ಮದಿಯಿಂದ ನಿದ್ದೆ ಬಂತು! 


ನಮ್ಮ ತರಹವೇ ಅನೇಕರಿಗೆ ಈ ನೆಮ್ಮದಿಯ ಅನುಭವ ಆಗಿರಬಹುದು, ಅಕಸ್ಮಾತ್ ಆ ’ನೆಮ್ಮದಿ’ಯ ಅನುಭವ ನಿಮಗಿನ್ನೂ ಆಗಿರದಿದ್ದರೆ ಪ್ರಯೋಗ ಮಾಡಿ ನೋಡಿ.


ಇಲ್ಲಿ "ಎಷ್ಟುಹಣ ಕಳಿಸಬಹುದು?" ಎನ್ನುವುದು ನಗಣ್ಯ, ಅದು ಬರೀ ಸಾಂಕೇತಿಕ ಮಾತ್ರ. ನೀವು ಎಷ್ಟೂ ವಿನಿಯೋಗಿಸಬಹುದು, ದಾನಕ್ಕೆ ಮಿತಿಯುಂಟೇ?. ಹಾಗೆಯೇ ಉಪವಾಸವೆನ್ನುವುದು ಬರೀ ಒಂದೇ ದಿನವಾಗಬೇಕಾಗಿಯೂ ಇಲ್ಲ, ಅದೊಂದು ನಿರ್ದಿಷ್ಟವಾದ ವ್ರತವನ್ನಾಗಿಯೇ ಆಚರಿಸಬಹುದು. ಆದರೆ ಹಣವುಳಿಸಿ ’ಅದೇಹಣ’ ವನ್ನು ಕಳಿಸುವುದು ಮುಖ್ಯ. ಅದೊಂದು ರೀತಿಯ ಸೇವೆ. ಸೇವಾ-ವ್ರತಗಳಿಗೆ ನೂರಾರು ದಾರಿಗಳಿದ್ದಾವೆ. ಆರೇಳು ವರ್ಷಗಳಿಂದ ಪ್ರಕಟವಾದ ನನ್ನ ಲೇಖನಗಳಿಗೆ ಪತ್ರಿಕೆಗಳು ಕಳಿಸುವ ಅಷ್ಟೂ ಗೌರವ ಸಂಭಾವನೆಯನ್ನು (ಹಣವನ್ನು) ಅನಾಥಾಲಯಗಳಿಗೆ ಕೊಡುವ ’ವ್ರತ’ ಆಚರಿಸುತ್ತಿದ್ದೇನೆ, ಅದೇ ನನ್ನ ಬರಹಗಳಿಗೆ ಸ್ಪೂರ್ತಿ.

 

ನಿಮಗಿಷ್ಟವಿಲ್ಲವೆಂದರೆ ಬೇರೆಯವರು ಹೇಳಿದ ಉದ್ದೇಶಕಾಗಿಯೇ ’ವ್ರತವನ್ನು’ ಮೀಸಲಿಡಬೇಕಿಲ್ಲ. ಬಹಳಷ್ಟು ಕೈಲಾಗದವರು, ಅನಾಥರು, ಹಣವಿಲ್ಲದವರು, ಪ್ರಾಣಿ-ಪಕ್ಷಿ-ಜೀವಿಗಳಿದ್ದಾವೆ.... ಯಾರಿಗೂ ಸಹಾಯ ಮಾಡಬಹುದು.


 ಇಂದು ನಗರಗಳಲ್ಲಿ ತಳವೂರಿರುವ ಜನರಿಗೆ ಐದುನೂರೇನೂ ಹೆಚ್ಚಲ್ಲ ಬಿಡಿ. ಇದಕ್ಕಿಂತಾ ಹೆಚ್ಚುಹಣವನ್ನು ಉಪವಾಸವಿರದೆಯೇ ಸುಲಭವಾಗಿ ಕಳಿಸಬಹುದು. ಆದರೆ ಇಲ್ಲಿ ಹಣಕ್ಕಿಂತಲೂ ಹೆಚ್ಚು ಮಹತ್ವ ಇರುವುದು ಉಪವಾಸಕ್ಕೆ, ವ್ರತಕ್ಕೆ. ಉಪವಾಸ ಮಾಡಿದಾಗ ಮಾತ್ರ ನಮಗೆ ’ಮೌಲ್ಯ’ದ ಅನುಭವವಾಗುತ್ತದೆ. ಬೇರೊಬ್ಬರ ನೋವು ಅರ್ಥವಾಗುವುದು - ನಮಗೆ ನೋವಾದಾಗ ಮಾತ್ರ. ಆದ್ದರಿಂದಲೇ ಶ್ರೀಗಳು ’ಉಪವಾಸವ್ರತ’ವನ್ನು ಸಾಂಕೇತಿಕವಾಗಿ ತಿಳಿಸಿರಬಹುದು.

 ಶ್ರೀಗಳ ಪ್ರೇರಣೆಯಿಂದಾಗಿ ಅನೇಕರು ’ವ್ರತ’ವನ್ನಾಚರಿಸುತ್ತಿರುವುದು ಸಮಾಧಾನ, ಸಂತೋಷದ ವಿಷಯ. 


ಅಂದಹಾಗೆ ನೀವೂ ’ಉಪವಾಸ’ ಮಾಡುತ್ತೀರಾ ತಾನೆ?!

---------****---------

 ನನ್ನಮ್ಮ!


ಸುಕ್ಕಟ್ಟಿದ ಚರ್ಮ ಬಾಗಿದ ಮಾಗಿದ ಬೆನ್ನು,

ಗತದಿನಗಳ ಕಥೆ ಹೇಳುವ ಬಾಡಿದ ಕಣ್ಣು.


ಇವಳಲ್ಲವೆ ಅಮೃತವ ಕುಡಿಸುಳಿಸಿದ ದೈವ,

ಇವಳಲ್ಲವೆ ಬಾಳಿನ ಅಕ್ಷರ ಕಲಿಸಿದ ಜೀವ


ಇವಳಲ್ಲವೆ ಬಿಸಿಲಿಗೆ 

ಸೆರಗನು ಹೊಚ್ಚಿಸಿದಾಕೆ,

ಇವಳಲ್ಲವೆ ಅಪ್ಪನ ಉರಿಹೊಡೆತವ ತಪ್ಪಿಸಿದಾಕೆ


ಇವಳಲ್ಲವೆ ಚಂದ್ರನ 

ತೋರಿಸಿ ಕನಸಾ ಹುಟ್ಟಿಸಿದಾಕೆ,

ಇವಳಲ್ಲವೆ ನಿತ್ಯವು ಕಥೆಹೇಳುತ ನಿದ್ರೆಗೆ ಜಾರಿಸಿದಾಕೆ


ಇವಳಿರದಿರೆ ಈ ಜನುಮವು ಇರುತಿತ್ತೇ ಎನಗೆ?

ಇವಳಿರದಿರೆ ಭೂಸ್ಪರ್ಶವು ಸಿಗುತಿತ್ತೇ ಕೊನೆಗೆ?


ಅಕ್ಕರೆ ತುಂಬಿದ ಸಕ್ಕರೆ ಹಾಲನು ಕೊಟ್ಟಮ್ಮ,

ಮುದ್ದಿಸಿ ಒಪ್ಪಿಸಿ ತುತ್ತನು ಉಣಿಸಿದ ಅಮ್ಮ


ಸರಿತಪ್ಪನು ತಿಳಿಸುತ ಸಲುಹಿದ ಆ ನನ್ನಮ್ಮ

ನನಗೊಳಿತನು ಬಯಸಿದ ನನ್ನಾ ಹೆತ್ತಮ್ಮ.

-----****-----

 ಹೀಗೊಂದು ಪ್ರಸಂಗ:


ಇವತ್ತೊಂದು ಸ್ವಾರಸ್ಯಕರ ಘಟನೆ ನಡೆಯಿತು, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಈ ಬರಹ.


ನಾನು ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ವಾರಕ್ಕೊಮ್ಮೆಯಾದರೂ ಆ ಮುಖ್ಯ ರಸ್ತೆಯಲ್ಲಿ ಹೋಗಿ ಬರುತ್ತಿದ್ದೆ. ಅಲ್ಲೊಂದು ದೊಡ್ಡ ಖಾಲಿ ಸೈಟಿಗೆ ಹೊಂದಿಕೊಂಡಿರುವ ಉದ್ದವಾದ ಕಾಂಪೌಂಡು. ಖಾಲಿ ಜಾಗದಲ್ಲಿ ಗಿಡ ಗಂಟಿಗಳು ಸೊಂಪಾಗಿ ಬೆಳೆದು, ಜನಕ್ಕೆ ’ಸೂಸೂ’ ಮಾಡಲು ಪ್ರಶಸ್ತವಾದ ಸ್ಥಳ ಆಗಿತ್ತು. (ಅದು ಯಾವ ಏರಿಯಾ, ಯಾವ ರಸ್ತೆ ಎಂದು ಕೇಳಬೇಡಿ!)

ಅದಕ್ಕೇ ಆ ಕಾಂಪೌಂಡಿನವರು, ಅಂದವಾಗಿ, ದೊಡ್ಡ ಅಕ್ಷರಗಳಲ್ಲಿ, ಕೆಂಪುಬಣ್ಣದಲ್ಲಿ, ಒಂದೂ ತಪ್ಪಿಲ್ಲದ ಕನ್ನಡ ಬೋರ್ಡನ್ನು ಹಾಕಿದ್ದರು, 

"ಇಲ್ಲಿ ಮೂತ್ರ ಮಾಡುವುದು ಅಪರಾಧ, ಮಾಡಿದವರಿಗೆ ರೂ.100/- ದಂಡ ವಿಧಿಸಲಾಗುವುದು"


ಏನು ಬರೆದರೂ ಹೊಲಸು ಮಾಡುವವರನ್ನು ತಪ್ಪಿಸುವುದು ಕಷ್ಟ ಎಂದು ಅವರಿಗೂ ಗೊತ್ತು, ಆದರೂ ಈ ತರಹ ಬೋರ್ಡ್ ಗಳು, ದೇವರ ಚಿತ್ರಗಳು, CCTV cameraಗಳು ಇನ್ನೂ ಏನೇನೋ ಐಡಿಯಾಗಳನ್ನು ಮಾಡ್ತಾರೆ.


ಇವತ್ತೂ ನಾನು ಅದೇ ರಸ್ತೆಯಲ್ಲಿ ಬರುತ್ತಿದ್ದೆ. ಒಬ್ಬ RTO Inspector, ಆ ಬೋರ್ಡಿಗೇ ತಾಗುವಂತೆ ನಿಂತು ಮೂತ್ರ ಮಾಡುತ್ತಿದ್ದರು! 

ಹಲವು ಬಾರಿ ಅವರು ದಂಡ ವಸೂಲು ಮಾಡುವುದನ್ನು ನಾನು ನೋಡಿದ್ದೆ. ಒಬ್ಬ ಪತ್ರಕರ್ತ ಇಂಥಾ ಅವಕಾಶವನ್ನು ಬಿಟ್ಟಾನೆಯೇ? 

ನನ್ನ ಮೊಬೈಲ್ ಕ್ಯಾಮೆರಾ ಸದ್ದಿಲ್ಲದೇ ಕೆಲಸ ಮಾಡಿತು. 


ಮೂರು ನಿಮಿಷವಾಗಿರಬೇಕು, ಆಗ ಆ Inspector ಗೆ ಗೊತ್ತಾಯಿತು.

ನೇರವಾಗಿ ನನ್ನಲ್ಲಿಗೆ ಬಂದು, 

"ಏನ್ರೀ ಮಾಡ್ತಿದೀರಾ, ಏನು ನನ್ನ ಫೋಟೋ ತೆಗಿತೀರೇನ್ರೀ...?"

ನಾನು, "ಹಾ, ಹೌದು ಸರ್, ವಿಡಿಯೋ ಮಾಡಿದೆ" ಅಂದೆ.

ಅವರು, "ನೋಡ್ರೀ, ಅದನ್ನ ಸುಮ್ಮನೆ ಡಿಲೀಟ್ ಮಾಡಿ..." ದರ್ಪದ ಧ್ವನಿಯಲ್ಲಿ ಅಂದರು.

ನಾನು, "ಸಾರ್, ಅಲ್ಲಿ ಮೂತ್ರ ಮಾಡುವುದು ತಪ್ಪಲ್ಲವಾ..." ಅಂದೆ.

ಅವರು, "ಏನೋ, ಅರ್ಜೆಂಟ್ ಆಯ್ತಪಾ, ರೀಸಸ್ ಮಾಡಿದ್ರೆ ಅದನ್ನೇ ದೊಡ್ಡ ಅಪರಾಧ ಅನ್ನೋತರ ಮಾತಾಡ್ತಿರಲ್ರೀ?".


ನಾನು, " ಸರಿ, ಹಾಗಾದ್ರೆ, ನಮಗೂ ಅರ್ಜೆಂಟ್ ಇದ್ದಾಗ, ಹೆಲ್ಮೆಟ್ ಹಾಕದಿದ್ರೆ, ಸಿಗ್ನಲ್ ಜಂಪ್ ಮಾಡಿದ್ರೆ, ಸ್ವಲ್ಪ ಸ್ಪೀಡಾಗಿ ಹೋಗಿ ನಿಮ್ಮಹತ್ತಿರ ಸಿಕ್ಕಿ ಹಾಕಿಕೊಂಡರೆ ನೀವು ಬಿಡ್ತೀರಾ ಸಾರ್?" ನಾನು ಶಾಂತವಾಗಿ ಕೇಳಿದೆ.


ಬಹುಶಃ ಆ ಪ್ರಶ್ನೆಯನ್ನು ಅವರು ನಿರೀಕ್ಷೆ ಮಾಡಿರಲಿಲ್ಲ, ಬೆವತು ಹೋದರು. ಅಷ್ಟೊತ್ತಿಗೆ ಹತ್ತಾರು ಜನರೂ ಸೇರಿಬಿಟ್ಟಿದ್ದರು. ಸ್ವಲ್ಪ ಮಾತುಕತೆಯಾಗಿ, ವಿಡಿಯೋನೂ ನೋಡಿ, ನಾನು ಪತ್ರಿಕೆಯಲ್ಲಿ ಬರೆಯುವವನು ಎಂದೂ ಗೊತ್ತಾದ ಮೇಲೆ ಅವರ ಧ್ವನಿ ತಗ್ಗಿ ಹೋಗಿತ್ತು. ಜನರಂತೂ ಕಣ್ಸನ್ನೆ ಮಾಡುತ್ತಾ, ’ಬಿಡಬೇಡಿ,ಬಿಡಬೇಡಿ’ ಎಂದು ಅವರ ಹಿಂದಿನಿಂದ ನನಗೆ ಸೂಚಿಸುತ್ತಿದ್ದರು!.

ಇನ್ಸ್’ಪೆಕ್ಟರ್ ಬೇಡಿಕೊಂಡರು, "ಆ ವಿಡಿಯೋನ ಡಿಲೀಟ್ ಮಾಡ್ರೀ ಪ್ಲೀಸ್...".


ಆಗ ನಾನು ನನ್ನ ಉದ್ದೇಶವನ್ನು ಹೇಳಿದೆ,

"ನೋಡಿ ಸಾರ್, ಇದನ್ನು ಪಬ್ಲಿಕ್ ಮಾಡುವುದು ದೊಡ್ಡಕೆಲಸವಲ್ಲ, ನಾನು ಖಂಡಿತವಾಗಿ ಡಿಲೀಟ್ ಮಾಡ್ತೀನಿ, ಆದರೆ ನೀವು ತಪ್ಪು ಮಾಡಿದಹಾಗೆ, ನಿಮಗೂ ಸಾರ್ವಜನಿಕರ ಕಷ್ಟ ಗೊತ್ತಾಗಲಿ, ಅವರೂ ಕೆಲವೊಮ್ಮೆ ಗಾಡಿ ಓಡಿಸುವಾಗ ತಪ್ಪು ಮಾಡ್ತಾರೆ, ಸರಿಯಾಗಿ ಹೇಳಬೇಕೆಂದರೆ ಬೆಂಗಳೂರಿನಲ್ಲಿ ತಪ್ಪುಮಾಡದೇ ಗಾಡಿ ಓಡಿಸುವುದಕ್ಕೆ ಸಾಧ್ಯವೇ ಇಲ್ಲ, ಆಗೆಲ್ಲಾ ನಿಮಗೆ ಸ್ವಲ್ಪ ಕರುಣೆ ಇರಲಿ" ಎನ್ನುತ್ತಾ ಅವರ ಎದುರೇ ವಿಡಿಯೋನ ಡಿಲೀಟ್ ಮಾಡಿದೆ.

ಅವರು ಶೇಕ್ ಹ್ಯಾಂಡ್ ಮಾಡಿ, ಮತ್ತೊಮ್ಮೆ ಭೇಟಿ ಮಾಡಿರೆಂದು ಬೀಳ್ಕೊಟ್ಟರು.


ಅವರಿಗೂ ಗೊತ್ತಿರಬಹುದು,

ಇವತ್ತಿನ ಡಿಜಿಟಲ್ ಯುಗದಲ್ಲಿ, ಇಂಥಾ ವಿಷಯಗಳನ್ನು ಕ್ಷಣಾರ್ಧದಲ್ಲಿ ಪಬ್ಲಿಕ್ ಮಾಡಿಬಿಡಬಹುದು. ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮೂಲಕ ಮಾನಮರ್ಯಾದೆ ಹರಾಜು ಹಾಕಿಬಿಡಬಹುದು, ಬೇಕೆಂದರೆ ಕಮೀಷನರ್ರಿಗೇ ಕಳಿಸಿಬಿಡಬಹುದು, ಎಂದು. ಆದರೆ ನನ್ನ ಉದ್ದೇಶ ಅದಾಗಿರಲಿಲ್ಲ.


"ಮನುಷ್ಯ ತಪ್ಪುಮಾಡುವುದು ಸಹಜ, ಅದನ್ನು ತಿದ್ದಿಕೊಳ್ಳುವುದು ದೊಡ್ಡತನ" ಎಂದು ಹಿರಿಯರು ಹೇಳಿಲ್ಲವೇ? 

ನೋಡೋಣ, ಇನ್ನೊಮ್ಮೆ ಸಿಕ್ಕಿದಾಗ ಅವರ ರಿಯಾಕ್ಷನ್ ಹೇಗಿರುತ್ತೆ ಅಂತ!

-----***-----

ಅನುಭವ

 *"ಆ ಭಯಾನಕ ರಾತ್ರಿ!!"*

Oh, ಅದೊಂದು ಭಯಾನಕ ರಾತ್ರಿ ಬಿಡಿ. 

ನಾನು ಇದನ್ನು ನಿಮಗೆ ಹೇಳಲಾ ಬೇಡವಾ ಅಂತ ಯೋಚಿಸುತ್ತಿದ್ದೇನೆ. ಅಯ್ಯೋ, ಹೇಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ, ಹೇಳಿದರೆ ನೀವೆಲ್ಲಿ ಹೆದರಿ ಅಪಾಯಕ್ಕೆ ಸಿಲುಕುತ್ತೀರೋ ಎಂಬ ಚಿಂತೆ ನನ್ನನ್ನಾವರಿಸಿದೆ.

ಆದರೂ ನಡೆದಿದ್ದೆಲ್ಲವನ್ನೂ ಹೇಳಿ ಬಿಡುವೆ, ಆಗಲಾದರೂ ನನ್ನ ಮನಸ್ಸು ಸ್ವಲ್ಪ ಹಗುರವಾದೀತು. ಹಾಗಿದ್ದರೂ, ನಿಮ್ಮ ಹಿತ ಕಾಯುವುದುಕ್ಕೋಸ್ಕರ ಈ ಅನುಭವ ಕಥಾನಕವನ್ನು ರಾತ್ರಿಹೊತ್ತು ಒಬ್ಬರೇ ಕುಳಿತು ಓದಬೇಡಿರೆಂದು, ಓದಿ ಏನಾದರೂ ಅನಾಹುತವಾದರೆ ನಾನು ಜವಾಬ್ದಾರನಲ್ಲವೆಂದು ಮೊದಲೇ ಹೇಳಿಬಿಡುತ್ತೇನೆ.

ನಮ್ಮೂರಿನ ತೋಟ ಕಾಯುವ ಆಳು ಗಿಡ್ಡಣ್ಣ ಇದ್ದಾನಲ್ಲಾ, ಅವನು ಯಾವಾಗಲೂ ಏನಾದರೊಂದು ಕಥೆ ಹೇಳುತ್ತಿರುತ್ತಾನೆ. ಅವನು ಕಾಡು-ಮೇಡುಗಳನ್ನು ಸುತ್ತುತ್ತಾ, ಕೆರೆ-ಕುಂಟೆ-ನದಿಗಳ ಕಡೆ ಅಲೆಯುತ್ತಾ, ಬಿಸಿಲು-ಬೆಂಕಿ ಅನ್ನದೆ ತಿರುಗುತ್ತಾ, ರಾತ್ರಿ-ಹಗಲೆನ್ನದೆ ನಡೆಯುತ್ತಾ ಅದೇನೇನು ನೋಡುತ್ತಾನೋ, ಅದೇನೇನನ್ನು ಹೊತ್ತು ತರುತ್ತಾನೋ ಆ ದೇವರೇ ಬಲ್ಲ.  ನನಗೆ ಅವನ ಭೂತ ಪ್ರೇತಗಳ ಕಥೆ ಎಂದರೆ ಬಹಳ ಇಷ್ಟ. 

ಕಾನೊಳಗೆ, ಅವನು ಹೇಳುವ ಸ್ಮಶಾನದ ಮಧ್ಯೆ ಕಾಣುವ ವಿಚಿತ್ರ ಆಕಾರಗಳು ನನಗೆ ರೋಮಾಂಚನ ಗೊಳಿಸುತ್ತಿತ್ತು. ಇವೆಲ್ಲಾ ನನಗೆ ಇಷ್ಟ ಆಗುತ್ತದೆ ಅಂತಲೇ, ಆ ಗಿಡ್ಡಪ್ಪ ಸಮಯವಿದ್ದಾಗಲೆಲ್ಲಾ ಬಂದು ನಮ್ಮನೆಯ ಹೊರಗಡೆ ಕಟ್ಟೆಯಮೇಲೆ ಕುಳಿತು ಬಣ್ಣಬಣ್ಣದ ಕಥೆಗಳನ್ನು ರಸವತ್ತಾಗಿ ಹೇಳುತ್ತಿದ್ದ. 

ಆವತ್ತೊಂದು ರಾತ್ರಿ ಸ್ಮಶಾನದಲ್ಲಿ ನಡೆದಿದ್ದನ್ನು, ಏನೇನು ನಡೆದಿತ್ತು ಎಂಬ ಕಥೆ ಹೇಳಿದ್ದ. ನನಗೆ ಒಂಥರಾ ರೋಮಾಂಚನದ ಜತೆ ಕೆಟ್ಟ ಕುತೂಹಲ. ಅವೆಲ್ಲಾ ನಿಜವಾ? ಗಿಡ್ಡಪ್ಪ ಸುಳ್ಳು ಹೇಳ್ತಿರಬಹುದು ಎಂಬ ಅನುಮಾನ ಒಂದು ಕಡೆ ಇತ್ತು. ಮತ್ತೊಂದು ಕಡೆ ಮೂಢನಂಬಿಕೆ ಮೇಲಿನ ಬುದ್ಧಿಜೀವಿಗಳ ಹೇಳಿಕೆಗಳು. ಮೊದಲಿನಿಂದಲೂ ಸಾಹಸ ಪ್ರವೃತ್ತಿಗೆ, ಧೈರ್ಯದ ಕೆಲಸಗಳಿಗೆ ಎದೆಯೊಡ್ಡುತ್ತಿದ್ದ ನನಗೆ ಇಂತಾ ಕಥೆಗಳಲ್ಲಿ ಪ್ರೇರಣೆ ಸಿಗದೇ ಇರುತ್ತದಾ?  ಸಾಲದ್ದಕ್ಕೆ ಅವತ್ತು ಸಾಯಂಕಾಲ ಟಿವಿಯಲ್ಲಿ ’ಭೂತ ಬಿಡಿಸುವ’ ಹುಲಿಕಲ್ ನಟರಾಜರ ಸಂದರ್ಶನ ಇತ್ತು. ನಟರಾಜು ಭೂತ, ಪ್ರೇತ, ಚೌಡಿ, ಕಿನ್ನರರು, ಗಂಧರ್ವರು, ಯಕ್ಷಿ, ಪಿಶಾಚಿ, ಶಾಕಿಣಿ, ಢಾಕಿಣಿ ಇನ್ನೂ ಏನೇನೋ ಇವೆಯೋ ಎಲ್ಲವೂ ಸುಳ್ಳು, ಅವೆಲ್ಲಾ ಮೂಢ ನಂಬಿಕೆಗಳು ಎಂದು ಹೇಳುತ್ತಿದ್ದರು. ಎಷ್ಟೆಂದರೂ ಬುದ್ಧಿ ಜೀವಿಗಳಲ್ಲವೇ? ನನಗೆ ಹುಲಿಕಲ್ ನಟರಾಜು ’ಹೀರೋ’ ವಾಗಿ ಕಂಡರು. ಇನ್ನಷ್ಟು ಕುತೂಹಲ, ಧೈರ್ಯ ಬಂದಿತು. 

ಮರುದಿನವೇ ಅಮವಾಸ್ಯೆ. ಅವತ್ತು ರಾತ್ರಿ ಸ್ಮಶಾನಕ್ಕೆ ಹೋಗಿ ಬಂದರೆ ಹೇಗೆ? ಗಿಡ್ಡಪ್ಪ ಹೇಳಿದ್ದು ಸುಳ್ಳೋ, ನಟರಾಜು ಹೇಳಿದ್ದು ಸುಳ್ಳೋ ನೋಡಿಯೇ ಬಿಡೋಣ.

 ಯಾರಿಗೂ ಹೇಳದೆ ಎಲ್ಲವನ್ನೂ ತಯಾರಿ ಮಾಡಿಕೊಂಡೆ. ಸ್ಮಶಾನದಲ್ಲಿ ನಡೆಯುವ ಎಲ್ಲವನ್ನೂ ನೋಡಿಕೊಂಡು ಬಂದು ಎಲ್ಲರಿಗೂ ಹೇಳಿಬಿಡಬೇಕು, ಆ ಮರುದಿನ ನನ್ನ ಫೋಟೋ ಪೇಪರಿನಲ್ಲಿ ಬರುತ್ತದೆ, ಎಲ್ಲರೂ ’ಧೈರ್ಯವಾನ್” ಎಂದು ಶಬ್ಬಾಸ್ ಗಿರಿ ಕೊಡುತ್ತಾರೆ, ಊರಿನಲ್ಲಿ ಸನ್ಮಾನವನ್ನೂ ಮಾಡಬಹುದು, ಒಮ್ಮೆಲೇ ನಾನು ಬುದ್ಧಿಜೀವಿಯಂತೆ ಎದೆಯುಬ್ಬಿಸಿ ಓಡಾಡಬಹುದು. ನಾನೂ ಭಗವಾನ್ ’ಭಗವದ್ಗೀತೆ ಸುಡುವ’ ತರಹದ ಡೈಲಾಗ್ ಹೊಡೆಯಬಹುದು. ...ಇನ್ನೂ ಏನೇನೋ ಆಸೆಗಳು.

ರಾತ್ರಿ ಊಟವಾದ ತಕ್ಷಣ ಬೇಗನೇ ಮಲಗಿಕೊಂಡೆ, ಮುಸುಕುಹಾಕಿ ಗೊರಕೆ ಹೊಡೆದೆ. ನಮ್ಮನೆಯ ದೊಡ್ಡ ಗಡಿಯಾರದಲ್ಲಿ ಘಂಟೆ ಹನ್ನೊಂದೂವರೆ ’ಢಣ್’ ಎಂದು ಹೊಡೆಯಿತು. ಮನೆಯಲ್ಲಿ ಎಲ್ಲರೂ ಮಲಗಿದ್ದು ಖಾತರಿ ಮಾಡಿಕೊಂಡು, ನಿಧಾನವಾಗಿ ಹಾಸಿಗೆಯಿಂದ ಎದ್ದೆ. ಹೊರಗೆ ಮೈಕೊರೆಯುವ ಚಳಿ, ಕಿಟಕಿಯಿಂದ ಸುಂಯ್ ಎಂದು ಸುಳಿಗಾಳಿ ಬರುತ್ತಿತ್ತು. ಜರ್ಕಿನ್ ಹೆಗಲಿಗೆ ಸೇರಿಸಿ, ಒಂದು ಸಣ್ಣ ಟಾರ್ಚ್ ತೆಗೆದುಕೊಂಡು, ಮಲಗುವ ಕೋಣೆ, ನಡುಮನೆ, ಹಾಲ್ ಎಲ್ಲವನ್ನೂ ನಿಧಾನವಾಗಿ, ಲೈಟನ್ನು ಹಾಕದೇ ದಾಟಿ, ಮುಖ್ಯದ್ವಾರವನ್ನು ನಿಧಾನವಾಗಿ ತೆಗೆದೆ, ಮುಚ್ಚುವಾಗ "ಕೊಯ್ಯ್ಂ" ಶಬ್ದ ಮಾಡಿತು, ಸಧ್ಯ, ಯಾರಿಗೂ ಗೊತ್ತಾಗಲಿಲ್ಲ. 

ಊರು ದಾಟುತ್ತಿದ್ದಂತೆ ಸ್ಟ್ರೀಟ್ ಲೈಟುಗಳ ಬೆಳಕು ಮಂದವಾಗುತ್ತಾ ಹೋಯಿತು. ಟಾರ್ಚ್ ಆನ್ ಮಾಡಿದೆ. ಮರ, ಮಟ್ಟಿಗಳನ್ನು ದಾಟುತ್ತಾ ಮುಂದೆ ಹೋದೆ. ಸುಮಾರು ಮುಕ್ಕಾಲು ಕಿಲೋಮೀಟರ್ ದೂರದಲ್ಲಿ ಗುಡ್ಡದ ಹತ್ತಿರ ಇರುವ ಸ್ಮಶಾನಕ್ಕೆ ಹೋಗುವುದು ನನ್ನ ಗುರಿ. 

ಸುತ್ತಲೂ ಕತ್ತಲಲ್ಲ, ಕಾರ್ಗತ್ತಲು, ಆ ಘೋರ ಕತ್ತಲನ್ನು ಸೀಳಿಕೊಂಡು ತಣ್ಣನೆಯ ಗಾಳಿ ವಿಚಿತ್ರವಾಗಿ ಶಬ್ದ ಮಾಡುತ್ತಾ ಬೀಸುತ್ತಿತ್ತು. ಮರಗಿಡಗಳು ಬೆಳಗಿನ ಹೊತ್ತು ಸುಂದರವಾಗಿ ಕಂಡರೆ, ಈಗ ಅಮಾವಾಸ್ಯೆಯ ಕತ್ತಲಲ್ಲಿ ಏನೇನೋ ವಿಚಿತ್ರವಾದ ಆಕಾರವನ್ನು ತಾಳಿದ್ದವು. ಕೆಲ ಮರಗಳು ನೃತ್ಯಮಾಡುತ್ತಿರುವಂತೆ ಕಂಡರೆ, ಕೆಲವು ಕೈಮೇಲೆತ್ತಿ ಕರೆಯುತ್ತಿರುವಂತೆ ಭಾಸವಾಗುತ್ತಿತ್ತು. ನಿರ್ಜನ ಪ್ರದೇಶ, ಸುತ್ತಲೂ ನನ್ನನ್ನು ಬಿಟ್ಟರೆ ಒಂದು ಪ್ರಾಣಿಯೂ ಇರಲಾರದು. ನಿಶ್ಶಬ್ಧ, ರೌರವ ಮೌನ. ಸುತ್ತಮುತ್ತ ಮುಳ್ಳು ಗಿಡಗಳ ಪೊದೆ, ಮಟ್ಟಿಗಳು. ಮರಗಳಿಂದ ಎಲೆಗಳೆಲ್ಲಾ ಉದುರಿ ನಡೆಯುವಾಗ ಚರ್-ಪರ್ ಸದ್ದು ಮಾಡುತ್ತಿತ್ತು. ಅಷ್ಟರಲ್ಲಿ ಪಕ್ಕದ ಪೊದೆಯಿಂದ ಏನೋ ಕಪ್ಪನೆಯ ಆಕೃತಿ ಸರಸರ ಓಡಿಹೋಯಿತು. ಒಂದು ಕ್ಷಣ ಎದೆ ಧಸಕ್ಕೆಂದಿತು, ಬೆಚ್ಚಿಬಿದ್ದೆ. ಆದರೂ ಧೈರ್ಯಗುಂದಿದರೆ ಹೇಗೆ? ನಾನೂ ಹುಲಿಕಲ್ ನಟರಾಜು ಆಗಬೇಕಲ್ಲ? ಮಿಣುಕು ಟಾರ್ಚ್ ಲೈಟಲ್ಲೇ ಮುಂದುವರೆದೆ. ಹತ್ತಿರದಲ್ಲೇ ಯಾರೋ "ಗುಂ....ಗುಂ" ಎಂದು ಕೂಗಿದಂತೆ ಕೇಳಿಸಿತು. ಒಮ್ಮೆ ನಿಂತೆ, ನಂತರ ಓ, ಅದು ಗೂಬೆ ಇರಬೇಕು ಅಂದುಕೊಂಡು ಹೆಜ್ಜೆಹಾಕಿದೆ. ಮುಂದಿನ ದಾರಿ ಬಹಳ ದುರ್ಗಮವಾಗಿತ್ತು. ಮೂರ್ನಾಲ್ಕು ತಿಂಗಳಿಂದ ಊರಲ್ಲಿ ಯಾರೂ ಸತ್ತಿರಲಿಲ್ಲ. ಹಾಗಾಗಿ ಸ್ಮಶಾನದ ಆ ಕಾಲುದಾರಿಯಲ್ಲಿ ಹುಲ್ಲು, ಮುಳ್ಳಿನಗಿಡಗಳು ಸೊಂಪಾಗಿ ಬೆಳೆದಿದ್ದವು. ಅವುಗಳನ್ನೆಲ್ಲಾ ಸರಿಸಿಕೊಂಡು ನಡೆಯತೊಡಗಿದೆ. ಅಷ್ಟರಲ್ಲಿ ಯಾರೋ ಹಿಂದಿನಿಂದ ಎಳೆದಂತೆ ಆಯಿತು. ಓ ದೇವಾ, ಹಿಂದೆತಿರುಗಲು ಭಯ, ಆದರೆ ನಾನು ಹುಲಿಕಲ್ ನಟರಾಜು ಆಗಬೇಕಲ್ಲ? ಕೈಯ್ಯನ್ನು ಜೋರಾಗಿ ಎಳೆದುಕೊಂಡೆ, ಏನೋ ಹಿಡಿದುಕೊಂಡಿದ್ದು ಬಿಟ್ಟು ಬಿಟ್ಟಿತು. ಮುಳ್ಳಿನ ಪೊದೆಗೆ ತೋಳಿನ ಬಟ್ಟೆ ಸಿಕ್ಕಿತ್ತು, ಅದು ಪರ್ರ್ ಎಂದು ಹರಿದುಹೋಯಿತು, ಭುಜದ ಮೇಲೆ ರಕ್ತದ ಹನಿ ಚಿಮ್ಮಿತು. ಏನೇನೋ ಗಟ್ಟಿಯದು ಮೆತ್ತನೆಯದು ತುಳಿಯುತ್ತಾ ಮುನ್ನುಗ್ಗಿದೆ. ನಾನು ನಡೆಯುವ ಸದ್ದು ಬಿಟ್ಟರೆ ಇನ್ನೇನೇನೂ ಶಬ್ದವಿರಲಿಲ್ಲ. ಆ ನಿಶ್ಶಬ್ದದ ಮದ್ಯೆ ಅದ್ಯಾವುದ್ಯಾವುದೋ ಪ್ರಾಣಿಗಳ, ಪಕ್ಷಿಗಳು ಒಮ್ಮೊಮ್ಮೆ ಕಿಟಾರನೆ ಕಿರುಚಿದಂತೆ ಕೇಳಿಸುತ್ತಿತ್ತು. ಮುಂದೆ ಹೋಗುತ್ತಿದ್ದಂತೆ ಸಣ್ಣಸಣ್ಣ ಗಿಡಗಳು, ಪೊದೆಗಳು ಸಾಲಾಗಿ ನಿಂತು ನನ್ನ ನೋಡಿ ಗಹಗಹಿಸಿ ಕೇಕೆಹಾಕಿ ನಗುತ್ತಿರುವಂತೆ ಕಂಡಿತು. ಅಯ್ಯೋ, ಏನು ಮಾಡಲಿ, ಹಿಂದೆ ಹೋಗುವಂತಿಲ್ಲ, ಇನ್ನು ಕೆಲವೇ ಮಾರು ದೂರದಲ್ಲಿ ಸ್ಮಶಾನ. 


ಅಷ್ಟೊತ್ತಿಗೆ ಚಳಿ ಬಿಟ್ಟು ಸೆಖೆ ಶುರುವಾಗಿತ್ತು. ಒಮ್ಮೆ ಹಿಂದೆ ತಿರುಗಿ ನೋಡಿದೆ. ಅದೆಷ್ಟು ಕತ್ತಲಿತ್ತು ಅಂದರೆ ಪಕ್ಕದಲ್ಲಿ ಏನಾದರೂ ನಿಂತಿದ್ದರೂ ಕಾಣುತ್ತಿರಲಿಲ್ಲ. ಕಾಲಿಗೆ ಮುಳ್ಳು ಚುಚ್ಚಿ ರಕ್ತ ಚಪ್ಪಲಿಮೇಲೆ ಬಿದ್ದು ಓಡಾಡುವಾಗ ಜಾರುತ್ತಿತ್ತು, ಜೋರಾಗಿ ಓಡುವಂತೆಯೂ ಇಲ್ಲ. ನಿಧಾನವಾಗಿ ಕುಂಟುತ್ತಾ ಮುಂದೆ ಹೆಜ್ಜೆ ಹಾಕಿದೆ. ಮುಂದೆ ಮಿಣುಕು ಮಿಣುಕಾದ ಬೆಳಕು ಕಂಡಿತು. ಇನ್ನೂ ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಯಾರೋ ಒಂದಷ್ಟು ಜನ, ಬೆಂಕಿ ಹಾಕಿಕೊಂಡು, ಸುತ್ತ ನಿಂತು ನೃತ್ಯ ಮಾಡುತ್ತಿರುವಂತೆ ಗೋಚರವಾಯಿತು.

ಇನ್ನೂ ಹತ್ತಿರ ಹೋದೆ. ಓಹ್, ಏನೇನೋ ವಿಕಾರವಾದ ಆಕೃತಿಗಳು ಮಸುಕು ಮಸುಕಾಗಿ ಕಾಣುತ್ತಿದ್ದವು. ಕೈಯ್ಯಲ್ಲಿ ಪ್ರಾಣಿಪಕ್ಷಿಗಳ ತುಂಡುಗಳನ್ನು ಹಿಡಿದುಕೊಂಡು ಮಾಂಸವನ್ನು ಹಿಡಿದೆಳೆದು ತಿನ್ನುತ್ತಿರುವಂತೆ ಕಂಡಿತು, ಮರದ ಲೋಟದಲ್ಲಿ ಏನೋ ಕುಡಿಯುತ್ತಿವೆ. ಏನೇನೋ ವಿಚಿತ್ರವಾಗಿ ಕಿರುಚುತ್ತಾ ನೃತ್ಯ ಮಾಡುತ್ತಿವೆ. ಆ ಕಾಡಿನ ರಣಮೌನದಲ್ಲಿ ಭೀಕರವಾದ ದೃಷ್ಯ ನನ್ನ ಕಣ್ಣ ಮುಂದೆಯೇ ನಡೆಯುತ್ತಿತ್ತು. 

ಅಯ್ಯೋ ದೇವರೇ, ಇವೇ ಇರಬೇಕು ಭೂತ ಪ್ರೇತ, ಶಾಕಿಣಿ, ಢಾಕಿಣಿಗಳು. ಮೈಮೇಲೆ ಬಟ್ಟೆಯೇಇಲ್ಲ, ವಿಚಿತ್ರ ಆಕೃತಿಗಳು, ರಕ್ತಸಿಕ್ತ ಮೈಕೈಕಾಲುಗಳು, ನೃತ್ಯಮಾಡುತ್ತಿವೆ. ಮರೆಯಲ್ಲಿ ನಿಂತು ಅದನ್ನು ನೋಡುತ್ತಿದ್ದಂತೆ ನನ್ನ ಮೈಮೇಲೆ ಹಾಕಿದ ಬಟ್ಟೆಯೆಲ್ಲಾ ಒದ್ದೆಯಾಗಿತ್ತು, ನನ್ನ ಯಾವ್ಯಾವ ರಂಧ್ರಗಳಿಂದ ಏನೇನು ಬಂದಿತೋ ಗೊತ್ತಿಲ್ಲ. ಇವೆಲ್ಲಾದರೂ ನನ್ನನ್ನು ನೋಡಿಬಿಟ್ಟರೆ ಹರಿದು ಮುಕ್ಕಿ ತಿನ್ನುವುದರಲ್ಲಿ ಅನುಮಾನವೇ ಇಲ್ಲ.

ಬೆವರು ಕಿತ್ತುಬರುತ್ತಿರುವಾಗಲೂ ಒಂದು ಕ್ಷಣ ಬುದ್ಧಿಜೀವಿಗಳ ಯೋಚನೆ ಬಂದಿತು, ಒಂದು ಫೋಟೋ ಹೊಡೆದು ನಾಳಿನ ಪೇಪರಲ್ಲಿ ಹಾಕಿದರೆ ಹೇಗೆ? ಮೊಬೈಲ್ ಗೆ ತಡಕಾಡಿದೆ. ಒಹ್, ಗಡಿಬಿಡಿಯಲ್ಲಿ ಮನೆಯಲ್ಲೇ ಬಿಟ್ಟುಬಂದಿದ್ದೆ. ಛೇ, ಎಂಥಾ ಕೆಲಸ ಮಾಡಿಬಿಟ್ಟೆ. ಹುಲಿಕಲ್ ನಟರಾಜುವನ್ನಾದರೂ ಕರೆದುಕೊಂಡು ಬರಬಾರದೇ....?

ಅಷ್ಟೊತ್ತಿಗೆ ಒಂದು ಆಕೃತಿ ನಿಧಾನವಾಗಿ ಗುಂಪಿನಿಂದ ಹೊರಗೆ ಬಂದಿತು. ದೇವಾ, ನನ್ನನ್ನು ನೋಡಿಬಿಟ್ಟಿತೇ? ಈಗ ಬಿರುಸಾಗಿ ಹೆಜ್ಜೆ ಹಾಕುತ್ತಾ ಬಂದಿತು. ಗಿಡ್ಡಪ್ಪ ಹೇಳಿದ್ದ, ’ಭೂತಕ್ಕೆ ಕಾಲು ಹಿಂದೆ ತಿರುಗಿರುತ್ತದೆ’, ನೋಡಿದೆ ಕಾಲು ಕತ್ತಲಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. ಬಹಳ ಕ್ರೂರ ಪ್ರಾಣಿಯಂತೆ ರಕ್ತ ಸಿಕ್ತ ಮೈಯಂತೆ ಭಯಂಕರವಾಗಿ ಕಾಣುತ್ತಿತ್ತು. ನಾನು ಹಿಂದೆ ತಿರುಗಿ ಓಡಬೇಕು ಅನ್ನುವಷ್ಟರಲ್ಲಿ ಅದು ಜೋರಾಗಿ ಹೆಜ್ಜೆ ಹಾಕಿ ನನ್ನುನ್ನು ಗಪ್ಪನೆ ಹಿಡಿದುಬಿಟ್ಟಿತು.

"ಅಯ್ಯೋ, ಕಾಪಾಡಿ, ಕಾಪಾಡಿ..." ಜೋರಾಗಿ ಕೂಗಲು ನೋಡಿದೆ, ಸ್ವರ ಕ್ಷೀಣವಾಗಿ ಹೋಗಿತ್ತು. "ಅಯ್ಯೋ ಸತ್ತೇ, ಸತ್ತೇ, ಕಾಪಾಡಿ, ಭೂತ... ಭೂತ....ಕಾಪಾಡಿ..." ಕೈಕಾಲು ಬಡಿಯುತ್ತಿದ್ದೆ.

ಆದರೂ ನನ್ನ ಕೈಯನ್ನು ಹಿಡಿದೆಳೆದು ದರದರನೆ ಎಳೆದು ಕೊಂಡು ಹೋದಂತೆ ಅನ್ನಿಸಿತು....

ಅಷ್ಟೊತ್ತಿಗೆ ಮುಖದ ಮೇಲೆ ತಣ್ಣನೆಯ ನೀರು ಬಿದ್ದಂತಾಯಿತು, ಕಣ್ಣು ಬಿಟ್ಟು ನೋಡುತ್ತೇನೆ, ನನ್ನ ಅಮ್ಮ ಕೈ ಹಿಡಿದೆಳೆದು "ಹಾಸಿಗೆ ಬಿಟ್ಟು ಏಳೋ, ಬೆಳಿಗ್ಗೆ ಎಂಟು ಗಂಟೆಯಾಯಿತು, ಭಾನುವಾರ ಅಂತ ಮಲಗಿಬಿಟ್ಟಿದ್ದೀಯಲ್ಲ, ಎಷ್ಟೊಂದು ಕೆಲಸವಿದೆ, ಸೋಮಾರೀ..." ಅಂತ ಎಬ್ಬಿಸುತ್ತಿದ್ದಳು.

ಅಮ್ಮ ಜೋರಾಗಿ ಬಯ್ಯುತ್ತಿದ್ದಳು, ನನ್ನನ್ನೊಂದೇ ಅಲ್ಲದೇ, ಗಿಡ್ಡಪ್ಪನನ್ನೂ ಸೇರಿಸಿ!

 "ಆ ಗಿಡ್ಡಪ್ಪನಿಗೆ ಬುದ್ದಿ ಇಲ್ಲ, ಈ ಹುಡುಗನನ್ನು ಕೂರಿಸಿಕೊಂಡು, ಭೂತ ಪಿಶಾಚಿ ಕಥೆ ಹೇಳಬೇಡ ಅಂದರೂ ಕೇಳುವುದಿಲ್ಲ, ಇವತ್ತು ಯಜಮಾನರಿಗೆ ಹೇಳಿ ಅವನಿಗೆ ಗ್ರಹಚಾರ ಬಿಡಿಸುತ್ತೇನೆ...."

(ನನ್ನ ಕಾಲೇಜು ದಿನಗಳಲ್ಲಿ ಬರೆದದ್ದು)

------****-------

ಯುಗಾದಿ

 🌳🌴🌞🌨"ಹೊಸ ಹರುಷ"🌿🌾🌺🌻


ಚಿಗುರ ಚಿಮ್ಮುತ ಜುಮ್ಮನೆ ಬಂದ ವಸಂತ

ಹಗುರ ಮಾಡುತ ಬಿಮ್ಮನೆ ನಮ್ಮ-ನಿಮ್ಮ ಮನಸ.


ಹಸಿರ ಸಿರಿಗೆ ಫಸಲ ಹೊಚ್ಚಿ

ಬೆಚ್ಚಗಿರಿಸಿದ

ಹುಚ್ಚು ಕನಸ ಬಿಚ್ಚಿ ಇರಿಸಿ

ಬದುಕ ಹಚ್ಚಿದ


ಹೂವು-ಮಾವು ಚಿಗುರ ತಳಿರು ತೋರಣ ಕಟ್ಟಿದ

ಬೇವು-ಬೆಲ್ಲ ಹಂಚಲೆಂದು ನಮ್ಮನಿಂದು ಅಟ್ಟಿದ!


ಹೊಸದು ವರುಷ ಇರಲಿ ಹರುಷ ನಿಮ್ಮ ಬಾಳಲಿ.

ಕಷ್ಟ-ಸುಖವ ಹಂಚಿಕೊಂಡು ನೂರು ವರುಷ ಸಾಗಿರಿ!!

------*****-----


ದೀಪಾವಳಿ

 

ದೀಪವ ಹಚ್ಚುತ ಕತ್ತಲೆಯನು ಹೊಡೆದೋಡಿಸುವಾ ಬನ್ನಿ||


ಗಿಡಬಳ್ಳಿಗಳ ನೆಡುತಲಿ ಹಿತ್ತಲನು  ಹಸಿರಾಗಿಸುವಾ ಬನ್ನಿ||


ದೇಶವ ಕಾಯುವ ಸೈನಿಕನಾ 

ಎದೆಯಲಿ ಧೈರ್ಯವ ತುಂಬುವ ಬನ್ನಿ||


ಚಿತ್ತೆ ಮಳೆಯಲಿ ಬರಿದಾಗಿಪ ರೈತನ ಬಾಳಲಿ ಹರುಷವ ತರಿಸುವ ಬನ್ನಿ||



ಕಟುಕರ ಮನೆಗಳ ಸೇರುವ 

ಗೋವ್ಗಗಳ ರಕ್ಷಿಸಿ ಪೂಜಿಸುವಾ ಬನ್ನಿ||


ಹಳೆಬೇರನು ಹರಿಯದೆ 

ಹೊಸಚಿಗುರನು ಚಿವುಟದೆ 

ನಗುನಗುತಲಿ ಹಬ್ಬವ ಆಚರಿಸುವಾ ಬನ್ನಿ||

---------****---------


ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು💐🙏. 

Happy Deepavali.

 "ಹರಕು ಬನಿಯನ್"  ಕಥೆ

(Published in Havyaka mag)



’ನನ್ನ ಅಪ್ಪ ಇದಾನಲ್ಲ, ತುಂಬಾ ಜಿಪುಣ. ಒಂದೇ ಬನಿಯನ್ನು, ಅದೊಂದೇ ಪಂಚೆ. ಯಾವಾಗ ನೋಡಿದರೂ ಅದನ್ನೇ ಉಟ್ಟುಕೊಂಡಿರುತ್ತಾನೆ. ಬೇರೆ ತೊಟ್ಟುಕೊಳ್ಳೋದಕ್ಕೆ ಏನು ಕಷ್ಟ...?’

ಐದನೇ ಕ್ಲಾಸು ಮೆಟ್ಟಿಲು ಹತ್ತಿದಾಗ ನನಗೆ ಅನಿಸಿದ್ದು ಅದು. ಯಾಕೆಂದರೆ ನಾನು ಮೊದಲ ಬಾರಿಗೆ ಇಸ್ತ್ರಿ ಹೊಡೆದ ಯೂನಿಫಾರಂ ಹಾಕಿಕೊಂಡಿದ್ದೆ. ಅದಕ್ಕೇ ಅಂದೆ, "ಅಪ್ಪಾ ನನ್ನ ತರನೇ ಹೊಸಾ ಬಟ್ಟೆ ಹಾಕಿಕೋ".

 ಅಪ್ಪ ಸುಮ್ಮನೆ ನಕ್ಕ.

ಹೈಸ್ಕೂಲು ಮೆಟ್ಟಿಲು ಹತ್ತುವಾಗಲೂ ನನಗೆ ಅದೇ ಅನಿಸಿತ್ತು. ಆಗಲೂ ಅಂದೆ, "ಅಪ್ಪಾ, ಮೊನ್ನೆ ಹಬ್ಬಕ್ಕೆ ತಂದ ಪಂಚೆ ಇದೆಯಲ್ಲ, ಅದನ್ನು ಉಟ್ಟುಕೋ". ಅಪ್ಪನದು ಅದೇ ಮಂದಹಾಸ, ಆದರೆ ನನಗೆ ಅಪ್ಪನ ಸ್ವಭಾವ ಹಿಡಿಸಲಿಲ್ಲ.


ಪ್ರೈಮರಿ ಸ್ಕೂಲಿಗೆ ಹೋದಾಗ ಹಾಗೆ ಅನ್ನಿಸಿದ್ರೂ ಅದನ್ನು ಹೇಳಲು ಹೋಗಿರಲಿಲ್ಲ. ಯಾಕೆಂದರೆ ಆಗ ನನ್ನ ಕಾಲಿನಲ್ಲೇ ಚಪ್ಪಲಿ ಇರಲಿಲ್ಲ. ಆಗ ಯೂನಿಫಾರಂ ಕೂಡಾ ಇರಲಿಲ್ಲ. ಮನೆಯಿಂದ ಯಾವುದೋ ಒಂದು ಬಣ್ಣದ ಬಟ್ಟೆ ಹಾಕಿ ಕಳಿಸುತ್ತಿದ್ದರು. 

ಹೈಸ್ಕೂಲು ಮುಟ್ಟಿದಾಗ ಹಾಗಾಗಲಿಲ್ಲ. ಯೂನಿಫಾರಂ ಜೊತೆಗೆ ತಲೆಗೆ ಎಣ್ಣೆ ಹಾಕಿ, ಕ್ರಾಪು ಮಾಡಿ ಬೈಚಲು ತೆಗೆದು, ಅಮ್ಮ ದಿನವೂ ನೀಟು ಮಾಡಿ ಕಳಿಸಿ ತಲೆಯೆತ್ತಿ ನೆಡೆಯುವಂತೆ ಮಾಡಿಬಿಟ್ಟಿದ್ದಳು. ಆಗ ಅಪ್ಪ ಹಾಕಿಕೊಂಡ ಹರಕು ಬನಿಯನ್ನು, ಅಡಿಕೆ ತೊಗರಿನ ಕಲೆಯಿರುವ ಅಸಹ್ಯವಾದ ಹಳೆಪಂಚೆ...ಛೇ, ಅಪ್ಪನಿಗೆ ಅಷ್ಟೂ ಗೊತ್ತಾಗುವುದಿಲ್ಲವಾ? ಹಾಗೆಲ್ಲಾ ಅನಿಸಿದರೂ ಎದುರಿನಲ್ಲಿ ಹೇಳುವುದಕ್ಕೆ ಭಯ!

ಆದ್ದರಿಂದಲೇ, ಅಪ್ಪ ನನ್ನ ಸ್ನೇಹಿತರೆದುರು ಕಂಡಾಗ ಹೇಗೋ ಸಾಗ ಹಾಕಿಬಿಡುತ್ತಿದ್ದೆ. ನನ್ನ ಸ್ನೇಹಿತರು ನನ್ನಪ್ಪನ ಜತೆಯಲ್ಲಿ ನೋಡಿಬಿಟ್ಟರೆ ನನ್ನ ಮರ್ಯಾದೆ?


ಹಾ, ಹೇಗೋ ಮಾಡಿ ಅಪ್ಪ ಹೈಸ್ಕೂಲು ಫೀಸು ಕಟ್ಟಿ ನನ್ನ ಹತ್ತನೇ ಕ್ಲಾಸು ಓದಿಸಿದ. ಅಷ್ಟಕ್ಕೂ ಫೀಸು ಕಟ್ಟುವುದು ಅಷ್ಟೊಂದು ಕಷ್ಟಾನಾ? ನನ್ನ ಸ್ನೇಹಿತರ ಅಪ್ಪಂದಿರೂ ಕಟ್ಟುತ್ತಾರಲ್ಲವಾ? ಈ ಲೆಕ್ಕಾಚಾರವೆಲ್ಲಾ ನನಗೆ ಹೇಗೆ ಗೊತ್ತಾಗಿತ್ತೆಂದರೆ, ನನಗೆ ಗಣಿತದಲ್ಲಿ ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು, ಮತ್ತೆ ನೂರಕ್ಕೆ ಎಷ್ಟು ಸೊನ್ನೆ, ಸಾವಿರಕ್ಕೆ ಎಷ್ಟು ಸೊನ್ನೆ ಇರುತ್ತದೆ ಎಂಬುದೆಲ್ಲಾ ಸುಲಭವಾಗಿ ಗೊತ್ತಾಗಿಬಿಟ್ಟಿತ್ತು! 

ನಾನು ಹತ್ತನೇ ಕ್ಲಾಸು ’ಪಾಸು’ ಅಂದ್ರೆ ಸುಮ್ನೇನಾ?

ಮುಂದೆ ನಾನು ಕಾಲೇಜಿಗೆ ಹೊರಟಾಗಲೂ ಹೊಸಬಟ್ಟೆ ಕೊಡಿಸು ಅಂದೆ. ಅಪ್ಪ ಸಂತೋಷದಿಂದಲೇ ಒಪ್ಪಿಕೊಂಡ. 

ಅದೇನು ದೊಡ್ಡದು ಬಿಡಿ, ಓದುವುದು ನಾನು, ಬಟ್ಟೆ ಕೊಡಿಸುವುದಕ್ಕೆ ಏನಂತೆ? ಆಗಲೂ ಹೇಳಿದೆ, "ಅಪ್ಪಾ ನೀನೂ ಒಂದು ಹೊಸಾ ಬನಿಯನ್, ಪಂಚೆ ತೆಗೆದುಕೊಂಡು ಬಿಡು, ನನ್ನ ಕಾಲೇಜು ಹಾಸ್ಟೆಲಿಗೆ ಬಂದಾಗ ಬೇಕಾಗುತ್ತದೆ. ಅಲ್ಲೆಲ್ಲಾ, ನನ್ನ ಹೊಸಾ ಸ್ನೇಹಿತರು ಇರುತ್ತಾರೆ, ಅವರೆದುರು ನಿನ್ನ ಹರಕು ಬನಿಯನ್, ಕೊಳಕು ಪಂಚೆ ಹಾಕಿಕೊಳ್ಳುವುದು ಬೇಡ". ಈಗ ಹಿಂದಿಗಿಂತಲೂ ಬೇರೆ ತರ ನನ್ನ ಮುಖ ದುರುಗಟ್ಟಿ ನೋಡಿದರೂ ಮತ್ತೊಮ್ಮೆ ನಕ್ಕು ಸುಮ್ಮನಾದ.


ನಾನು ಡಿಗ್ರಿ ಪಾಸುಮಾಡಿ, ಒಂದು ಕೆಲಸ ಹಿಡಿದು ಮೊದಲ ಸಂಬಳದಲ್ಲಿ ತಂದಿದ್ದೇನು ಗೊತ್ತೇ? ಅಮ್ಮನಿಗೊಂದು ಸೀರೆ, ಅಪ್ಪನಿಗೆ ಒಂದು ಹೊಸಾ ಪಂಚೆ, ಬನಿಯನ್ ಮತ್ತೆ ಒಂದು ಪಟ್ಟಾಪಟ್ಟಿ ನಿಕ್ಕರ್ (ಡ್ರಾಯರ್). ಕಾರಣ, ಅಪ್ಪ ತೊಟ್ಟುಕೊಳ್ಳುವುದು ಅದನ್ನೇ.

ತೆಗೆದುಕೊಂಡು ಹೋದ ಬಟ್ಟೆಯನ್ನು ಅಪ್ಪ ಸಂತೋಷದಿಂದ ನನಗೆ ಶಹಬ್ಬಾಶ್ ಕೊಡುತ್ತಲೇ ಸ್ವೀಕರಿಸಿದ. ಮತ್ತೇ, ನಾನು ದುಡಿದು ಹೊಸಾ ಬಟ್ಟೆಯನ್ನು ತಂದು ಕೊಡುವುದು ಅಂದ್ರೆ ಕಡಿಮೇನಾ?

ಹಬ್ಬದ ದಿನವೇ ತೆಗೆದುಕೊಂಡು ಹೋಗಿದ್ದರಿಂದ, ಬೇರೆಲ್ಲಾ ಹಳೆಯ ಬಟ್ಟೆ ಬಿಟ್ಟು ನಾನು ತೆಗೆದುಕೊಂಡು ಹೋದ ಬಟ್ಟೆಯನ್ನೇ ಹಾಕಿಕೊಳ್ಳುತ್ತಾನೆ ಅಂತ ನನಗೆ ಗ್ಯಾರೆಂಟಿ ಇತ್ತಾದರೂ, ನನ್ನಪ್ಪ ಹಾಗೆ ಮಾಡಲೇ ಇಲ್ಲ! ಆವತ್ತು ಹಳೆಯ ಕೊಳಕು ಬಟ್ಟೆ ಹಾಕಿಕೊಳ್ಳಲಿಲ್ಲವಾದರೂ ಹೋದವರ್ಷ ತಾನೇ ತಂದಿದ್ದ ಬಟ್ಟೆಯನ್ನು ತೊಟ್ಟುಕೊಂಡಿದ್ದ.

ಹಾಂ, ಅಂದಹಾಗೆ ನನ್ನ ಅಣ್ಣಂದಿರೂ, ಅಕ್ಕಂದಿರೂ ಹೊಸಾ ಬಟ್ಟೆಗಳನ್ನು ಉಡುಗೊರೆ ಕೊಟ್ಟಿದ್ದರು.

ಆಗ ನಾನು ಡಿಗ್ರಿ ಹೋಳ್ಡರ್ ಆಗಿ, ಕೆಲಸ ಹಿಡಿದುಬಿಟ್ಟಿದ್ದೆನಲ್ಲ? ಅರ್ಥಾತ್ ಬಹಳ ತಿಳುವಳಿಕೆ ಇರುವವನಾಗಿ, ಆವತ್ತೂ ಹೇಳಿದ್ದೆ, "ಅಪ್ಪಾ, ಪ್ರತೀ ವರ್ಷ ಎಲ್ಲರೂ ಹೊಸಾ ಬಟ್ಟೆ ತಂದು ಕೊಡುತ್ತಿದ್ದಾರಲ್ಲ, ಇನ್ನು ಮೇಲಾದರೂ ಹಳೆಯ ಹರಕು ಬನಿಯನ್, ತೊಗರಿನ ಕಲೆಯ ಪಂಚೆ ಬಿಟ್ಟು ಒಳ್ಳೆಯ ಬಟ್ಟೆ ಹಾಕಿಕೋ, ಬಡತನವೆಲ್ಲಾ ಆಗಿಹೋಯಿತು, ಈಗ ನಮಗೆ ಬೇಕಾದಷ್ಟು ಇದೆ, ಹೊಟ್ಟೆಗೆ ಬಟ್ಟೆಗೆ ಯಾವುದಕ್ಕೂ ಕಡಿಮೆ ಇಲ್ಲ...".

ಅವತ್ತು ಕೂಡಾ ಅಪ್ಪ ಸುಮ್ಮನೆ ನಕ್ಕು, ವಿಷಯಾಂತರ ಮಾಡುತ್ತಾ ನನ್ನ ಕೆಲಸದ ಬಗ್ಗೆ ಕೇಳಿದ್ದ.


ಹೀಗೇ ವರ್ಷಗಳು ಉರುಳಿದವು. ಕಾಲಚಕ್ರ ತಿರುಗಿತು, ಅಪ್ಪನಿಗೆ ವಯಸ್ಸಾಯಿತು. ತನ್ನ ಕೊನೇಕಾಲ ಬಂದಾಗ ನನ್ನನ್ನ ಹತ್ತಿರ ಕರೆದು ಹೇಳಿದ.

"ನೋಡು, ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದನ್ನು ಮರೆಯಬಾರದು, ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಕೆಳಗಿನಿಂದ ಮೇಲೆ ಹೋಗುವಾಗ ಸುಲಭ, ಆದರೆ ಮೇಲಿನಿಂದ ಕೆಳಗೆ ಬರುವಾಗ ಕಷ್ಟ. ಹಾಗಾಗಿ ಯಾವತ್ತೂ ನಾವು ನಡೆದುಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಿರಬೇಕು. ಆದ್ದರಿಂದಲೇ ನಾವು ಇಡುವ ಹೆಜ್ಜೆ, ತೊಡುವ ಬಟ್ಟೆ, ಧರಿಸುವ ಆಭರಣ, ನಮ್ಮ ನಡವಳಿಕೆ ಯಾವುದರಲ್ಲೂ ’ಮೆರೆಯುವ’ ಲಕ್ಷಣ ಇರಬಾರದು..."


ಅಪ್ಪ ಹೇಳಿದ್ದನ್ನು ಅರಗಿಸಿಕೊಳ್ಳಲು ನನ್ನ ಮೊಂಡು ಬುದ್ಧಿಗೆ ಬಹಳ ಸಮಯವೇ ಬೇಕಾಯಿತು. 

ಕೆಲದಿನಗಳನಂತರ ಅಪ್ಪ ಕಾಲವಾದ. ಅಂತ್ಯಕ್ರಿಯೆ ಗಳೆಲ್ಲಾ ಆದಮೇಲೆ ಎಲ್ಲರೆದುರಲ್ಲಿ ಅಪ್ಪನ ಅಲ್ಮೆರಾ ಬಾಗಿಲು ತೆಗೆಯಲಾಯಿತು. ಅಲ್ಲಿ ನೋಡಿದರೆ ರಾಶಿ ರಾಶಿ ಹೊಸಾ ಪಂಚೆಗಳು, ಬನಿಯನ್, ಜುಬ್ಬಾ, ಬಟ್ಟೆಗಳು ಯಾರ್ಯಾರೋ ಕೊಟ್ಟ ತರತರದ ಉಡುಗೊರೆಗಳ ಭಂಡಾರ! ಅದ್ಯಾವುದೂ ಅಪ್ಪನ ದೌಲತ್ತನ್ನು ಏರಿಸಿರಲಿಲ್ಲ, ಅವುಗಳಬಗ್ಗೆ ಮೋಹವೇ ಇರಲಿಲ್ಲ. 

ಅದನ್ನೆಲ್ಲಾ ನೋಡಿಕೊಂಡು ನನ್ನ ಕಣ್ಣಿನಲ್ಲಿ ನೀರು ಧಳಧಳನೆ ಹರಿಯುತ್ತಿರಲು, ನನ್ನ ಹೆಂಡತಿ ಕೇಳಿದಳು, 

"ಯಾಕೆ ಅಳುತ್ತಿದ್ದೀರಾ?". 


ಉತ್ತರ ಹೇಳಲು ಏನಿದೆ??


ಅವೆಲ್ಲಾ ಆಗಿ ಕೆಲವು ವರ್ಷಗಳೇ ಕಳೆದು ಹೋಗಿವೆ. 

ಮೊನ್ನೆ ನನ್ನ ಪುಟ್ಟ ಮಗಳು ಹೇಳಿದಳು "ಅಪ್ಪಾ, ನಿನ್ನ ಬನಿಯನ್ ಹರಿದುಹೋಗಿದೆ ಬೇರೆ ಹಾಕಿಕೋ...".

😢

----++--------

 *ಸಂಕ್ರಮಣ*


ಬದಲಾಯಿತು ಸೂರ್ಯಪಥವು ಉತ್ತರಾಯಣ

ಸಂಭ್ರಮಿಸುವರು ನಾಡಿನೆಲ್ಲೆಡೆ ಮಕರಸಂಕ್ರಮಣ


ಹುಗ್ಗಿಯ ಹಿಗ್ಗು ಬಂದಿಹುದು ಕನ್ನಡದ ಮಡಿಲಲಿ

ತಾಯಿ ಪೊಂಗಲ್ಲೆಂಬ ಹಬ್ಬವು ತಮಿಳುನಾಡಲಿ

ಭೋಗಿಯೆನ್ನುವರು ಆಂಧ್ರ ತೆಲಂಗಾಣದಲಿ

ಸಂಭ್ರಮಿಪರು ಉತ್ತರಾಯಣವೆಂದು ಗುಜರಾತಲಿ

ಬಿಹು-ಬಿಹುವೆಂದು ನಲಿವರು ಅಸ್ಸಾಮಿನಲಿ

ಲೋಹ್ರಿ ಎನ್ನುತ ಕುಣಿದಾಡುವರು ಪಂಜಾಬಲಿ


ಮೈಚೆಲ್ಲಿ ಮನೆಯೆದುರು ಮಲಗಿಹುದು ರಂಗವಲ್ಲಿ

ಹಸಿರು ತೋರಣ ಹೂವು ಕಳೆಗಟ್ಟಿಹುದು ಬಾಗಿಲಲ್ಲಿ

ಆಳೆತ್ತರಕೆ ನಿಂತಿಹುದು ರಸದುಂಬಿ ಕಬ್ಬು  ಗದ್ದೆಯಲಿ

ಹೊಸವಕ್ಕಿ ಪರಿಮಳದ ಘಮಘಮವು ಅಡುಗೆಯಲಿ

ಗೋ-ಸಿಂಗಾರ ಲಗುಬಗೆಯ ಮೆರವಣಿಗೆ ಹಳ್ಳಿಹಳ್ಳಿಯಲಿ


ಹಂಚೋಣ ನಾವು-ನೀವು ಎಳ್ಳು ಬೆಲ್ಲ

ತುಂಬಿರಲಿ ಸುಖ-ಶಾಂತಿ ನಮ್ಮ ಬಾಳೆಲ್ಲ

–----------++----------