ಭಾನುವಾರ, ಜನವರಿ 31, 2021

 ನನ್ನಮ್ಮ!


ಸುಕ್ಕಟ್ಟಿದ ಚರ್ಮ ಬಾಗಿದ ಮಾಗಿದ ಬೆನ್ನು,

ಗತದಿನಗಳ ಕಥೆ ಹೇಳುವ ಬಾಡಿದ ಕಣ್ಣು.


ಇವಳಲ್ಲವೆ ಅಮೃತವ ಕುಡಿಸುಳಿಸಿದ ದೈವ,

ಇವಳಲ್ಲವೆ ಬಾಳಿನ ಅಕ್ಷರ ಕಲಿಸಿದ ಜೀವ


ಇವಳಲ್ಲವೆ ಬಿಸಿಲಿಗೆ 

ಸೆರಗನು ಹೊಚ್ಚಿಸಿದಾಕೆ,

ಇವಳಲ್ಲವೆ ಅಪ್ಪನ ಉರಿಹೊಡೆತವ ತಪ್ಪಿಸಿದಾಕೆ


ಇವಳಲ್ಲವೆ ಚಂದ್ರನ 

ತೋರಿಸಿ ಕನಸಾ ಹುಟ್ಟಿಸಿದಾಕೆ,

ಇವಳಲ್ಲವೆ ನಿತ್ಯವು ಕಥೆಹೇಳುತ ನಿದ್ರೆಗೆ ಜಾರಿಸಿದಾಕೆ


ಇವಳಿರದಿರೆ ಈ ಜನುಮವು ಇರುತಿತ್ತೇ ಎನಗೆ?

ಇವಳಿರದಿರೆ ಭೂಸ್ಪರ್ಶವು ಸಿಗುತಿತ್ತೇ ಕೊನೆಗೆ?


ಅಕ್ಕರೆ ತುಂಬಿದ ಸಕ್ಕರೆ ಹಾಲನು ಕೊಟ್ಟಮ್ಮ,

ಮುದ್ದಿಸಿ ಒಪ್ಪಿಸಿ ತುತ್ತನು ಉಣಿಸಿದ ಅಮ್ಮ


ಸರಿತಪ್ಪನು ತಿಳಿಸುತ ಸಲುಹಿದ ಆ ನನ್ನಮ್ಮ

ನನಗೊಳಿತನು ಬಯಸಿದ ನನ್ನಾ ಹೆತ್ತಮ್ಮ.

-----****-----

ಕಾಮೆಂಟ್‌ಗಳಿಲ್ಲ: