ಭಾನುವಾರ, ಜನವರಿ 31, 2021

 ಹೀಗೊಂದು ಪ್ರಸಂಗ:


ಇವತ್ತೊಂದು ಸ್ವಾರಸ್ಯಕರ ಘಟನೆ ನಡೆಯಿತು, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆಂದು ಈ ಬರಹ.


ನಾನು ಬೆಂಗಳೂರಿನಲ್ಲಿ ಇದ್ದಾಗಲೆಲ್ಲಾ ವಾರಕ್ಕೊಮ್ಮೆಯಾದರೂ ಆ ಮುಖ್ಯ ರಸ್ತೆಯಲ್ಲಿ ಹೋಗಿ ಬರುತ್ತಿದ್ದೆ. ಅಲ್ಲೊಂದು ದೊಡ್ಡ ಖಾಲಿ ಸೈಟಿಗೆ ಹೊಂದಿಕೊಂಡಿರುವ ಉದ್ದವಾದ ಕಾಂಪೌಂಡು. ಖಾಲಿ ಜಾಗದಲ್ಲಿ ಗಿಡ ಗಂಟಿಗಳು ಸೊಂಪಾಗಿ ಬೆಳೆದು, ಜನಕ್ಕೆ ’ಸೂಸೂ’ ಮಾಡಲು ಪ್ರಶಸ್ತವಾದ ಸ್ಥಳ ಆಗಿತ್ತು. (ಅದು ಯಾವ ಏರಿಯಾ, ಯಾವ ರಸ್ತೆ ಎಂದು ಕೇಳಬೇಡಿ!)

ಅದಕ್ಕೇ ಆ ಕಾಂಪೌಂಡಿನವರು, ಅಂದವಾಗಿ, ದೊಡ್ಡ ಅಕ್ಷರಗಳಲ್ಲಿ, ಕೆಂಪುಬಣ್ಣದಲ್ಲಿ, ಒಂದೂ ತಪ್ಪಿಲ್ಲದ ಕನ್ನಡ ಬೋರ್ಡನ್ನು ಹಾಕಿದ್ದರು, 

"ಇಲ್ಲಿ ಮೂತ್ರ ಮಾಡುವುದು ಅಪರಾಧ, ಮಾಡಿದವರಿಗೆ ರೂ.100/- ದಂಡ ವಿಧಿಸಲಾಗುವುದು"


ಏನು ಬರೆದರೂ ಹೊಲಸು ಮಾಡುವವರನ್ನು ತಪ್ಪಿಸುವುದು ಕಷ್ಟ ಎಂದು ಅವರಿಗೂ ಗೊತ್ತು, ಆದರೂ ಈ ತರಹ ಬೋರ್ಡ್ ಗಳು, ದೇವರ ಚಿತ್ರಗಳು, CCTV cameraಗಳು ಇನ್ನೂ ಏನೇನೋ ಐಡಿಯಾಗಳನ್ನು ಮಾಡ್ತಾರೆ.


ಇವತ್ತೂ ನಾನು ಅದೇ ರಸ್ತೆಯಲ್ಲಿ ಬರುತ್ತಿದ್ದೆ. ಒಬ್ಬ RTO Inspector, ಆ ಬೋರ್ಡಿಗೇ ತಾಗುವಂತೆ ನಿಂತು ಮೂತ್ರ ಮಾಡುತ್ತಿದ್ದರು! 

ಹಲವು ಬಾರಿ ಅವರು ದಂಡ ವಸೂಲು ಮಾಡುವುದನ್ನು ನಾನು ನೋಡಿದ್ದೆ. ಒಬ್ಬ ಪತ್ರಕರ್ತ ಇಂಥಾ ಅವಕಾಶವನ್ನು ಬಿಟ್ಟಾನೆಯೇ? 

ನನ್ನ ಮೊಬೈಲ್ ಕ್ಯಾಮೆರಾ ಸದ್ದಿಲ್ಲದೇ ಕೆಲಸ ಮಾಡಿತು. 


ಮೂರು ನಿಮಿಷವಾಗಿರಬೇಕು, ಆಗ ಆ Inspector ಗೆ ಗೊತ್ತಾಯಿತು.

ನೇರವಾಗಿ ನನ್ನಲ್ಲಿಗೆ ಬಂದು, 

"ಏನ್ರೀ ಮಾಡ್ತಿದೀರಾ, ಏನು ನನ್ನ ಫೋಟೋ ತೆಗಿತೀರೇನ್ರೀ...?"

ನಾನು, "ಹಾ, ಹೌದು ಸರ್, ವಿಡಿಯೋ ಮಾಡಿದೆ" ಅಂದೆ.

ಅವರು, "ನೋಡ್ರೀ, ಅದನ್ನ ಸುಮ್ಮನೆ ಡಿಲೀಟ್ ಮಾಡಿ..." ದರ್ಪದ ಧ್ವನಿಯಲ್ಲಿ ಅಂದರು.

ನಾನು, "ಸಾರ್, ಅಲ್ಲಿ ಮೂತ್ರ ಮಾಡುವುದು ತಪ್ಪಲ್ಲವಾ..." ಅಂದೆ.

ಅವರು, "ಏನೋ, ಅರ್ಜೆಂಟ್ ಆಯ್ತಪಾ, ರೀಸಸ್ ಮಾಡಿದ್ರೆ ಅದನ್ನೇ ದೊಡ್ಡ ಅಪರಾಧ ಅನ್ನೋತರ ಮಾತಾಡ್ತಿರಲ್ರೀ?".


ನಾನು, " ಸರಿ, ಹಾಗಾದ್ರೆ, ನಮಗೂ ಅರ್ಜೆಂಟ್ ಇದ್ದಾಗ, ಹೆಲ್ಮೆಟ್ ಹಾಕದಿದ್ರೆ, ಸಿಗ್ನಲ್ ಜಂಪ್ ಮಾಡಿದ್ರೆ, ಸ್ವಲ್ಪ ಸ್ಪೀಡಾಗಿ ಹೋಗಿ ನಿಮ್ಮಹತ್ತಿರ ಸಿಕ್ಕಿ ಹಾಕಿಕೊಂಡರೆ ನೀವು ಬಿಡ್ತೀರಾ ಸಾರ್?" ನಾನು ಶಾಂತವಾಗಿ ಕೇಳಿದೆ.


ಬಹುಶಃ ಆ ಪ್ರಶ್ನೆಯನ್ನು ಅವರು ನಿರೀಕ್ಷೆ ಮಾಡಿರಲಿಲ್ಲ, ಬೆವತು ಹೋದರು. ಅಷ್ಟೊತ್ತಿಗೆ ಹತ್ತಾರು ಜನರೂ ಸೇರಿಬಿಟ್ಟಿದ್ದರು. ಸ್ವಲ್ಪ ಮಾತುಕತೆಯಾಗಿ, ವಿಡಿಯೋನೂ ನೋಡಿ, ನಾನು ಪತ್ರಿಕೆಯಲ್ಲಿ ಬರೆಯುವವನು ಎಂದೂ ಗೊತ್ತಾದ ಮೇಲೆ ಅವರ ಧ್ವನಿ ತಗ್ಗಿ ಹೋಗಿತ್ತು. ಜನರಂತೂ ಕಣ್ಸನ್ನೆ ಮಾಡುತ್ತಾ, ’ಬಿಡಬೇಡಿ,ಬಿಡಬೇಡಿ’ ಎಂದು ಅವರ ಹಿಂದಿನಿಂದ ನನಗೆ ಸೂಚಿಸುತ್ತಿದ್ದರು!.

ಇನ್ಸ್’ಪೆಕ್ಟರ್ ಬೇಡಿಕೊಂಡರು, "ಆ ವಿಡಿಯೋನ ಡಿಲೀಟ್ ಮಾಡ್ರೀ ಪ್ಲೀಸ್...".


ಆಗ ನಾನು ನನ್ನ ಉದ್ದೇಶವನ್ನು ಹೇಳಿದೆ,

"ನೋಡಿ ಸಾರ್, ಇದನ್ನು ಪಬ್ಲಿಕ್ ಮಾಡುವುದು ದೊಡ್ಡಕೆಲಸವಲ್ಲ, ನಾನು ಖಂಡಿತವಾಗಿ ಡಿಲೀಟ್ ಮಾಡ್ತೀನಿ, ಆದರೆ ನೀವು ತಪ್ಪು ಮಾಡಿದಹಾಗೆ, ನಿಮಗೂ ಸಾರ್ವಜನಿಕರ ಕಷ್ಟ ಗೊತ್ತಾಗಲಿ, ಅವರೂ ಕೆಲವೊಮ್ಮೆ ಗಾಡಿ ಓಡಿಸುವಾಗ ತಪ್ಪು ಮಾಡ್ತಾರೆ, ಸರಿಯಾಗಿ ಹೇಳಬೇಕೆಂದರೆ ಬೆಂಗಳೂರಿನಲ್ಲಿ ತಪ್ಪುಮಾಡದೇ ಗಾಡಿ ಓಡಿಸುವುದಕ್ಕೆ ಸಾಧ್ಯವೇ ಇಲ್ಲ, ಆಗೆಲ್ಲಾ ನಿಮಗೆ ಸ್ವಲ್ಪ ಕರುಣೆ ಇರಲಿ" ಎನ್ನುತ್ತಾ ಅವರ ಎದುರೇ ವಿಡಿಯೋನ ಡಿಲೀಟ್ ಮಾಡಿದೆ.

ಅವರು ಶೇಕ್ ಹ್ಯಾಂಡ್ ಮಾಡಿ, ಮತ್ತೊಮ್ಮೆ ಭೇಟಿ ಮಾಡಿರೆಂದು ಬೀಳ್ಕೊಟ್ಟರು.


ಅವರಿಗೂ ಗೊತ್ತಿರಬಹುದು,

ಇವತ್ತಿನ ಡಿಜಿಟಲ್ ಯುಗದಲ್ಲಿ, ಇಂಥಾ ವಿಷಯಗಳನ್ನು ಕ್ಷಣಾರ್ಧದಲ್ಲಿ ಪಬ್ಲಿಕ್ ಮಾಡಿಬಿಡಬಹುದು. ವಾಟ್ಸಪ್, ಫೇಸ್ ಬುಕ್, ಇನ್ಸ್ಟಾಗ್ರಾಮ್ ಮೂಲಕ ಮಾನಮರ್ಯಾದೆ ಹರಾಜು ಹಾಕಿಬಿಡಬಹುದು, ಬೇಕೆಂದರೆ ಕಮೀಷನರ್ರಿಗೇ ಕಳಿಸಿಬಿಡಬಹುದು, ಎಂದು. ಆದರೆ ನನ್ನ ಉದ್ದೇಶ ಅದಾಗಿರಲಿಲ್ಲ.


"ಮನುಷ್ಯ ತಪ್ಪುಮಾಡುವುದು ಸಹಜ, ಅದನ್ನು ತಿದ್ದಿಕೊಳ್ಳುವುದು ದೊಡ್ಡತನ" ಎಂದು ಹಿರಿಯರು ಹೇಳಿಲ್ಲವೇ? 

ನೋಡೋಣ, ಇನ್ನೊಮ್ಮೆ ಸಿಕ್ಕಿದಾಗ ಅವರ ರಿಯಾಕ್ಷನ್ ಹೇಗಿರುತ್ತೆ ಅಂತ!

-----***-----

ಕಾಮೆಂಟ್‌ಗಳಿಲ್ಲ: