"ಹರಕು ಬನಿಯನ್" ಕಥೆ
(Published in Havyaka mag)
’ನನ್ನ ಅಪ್ಪ ಇದಾನಲ್ಲ, ತುಂಬಾ ಜಿಪುಣ. ಒಂದೇ ಬನಿಯನ್ನು, ಅದೊಂದೇ ಪಂಚೆ. ಯಾವಾಗ ನೋಡಿದರೂ ಅದನ್ನೇ ಉಟ್ಟುಕೊಂಡಿರುತ್ತಾನೆ. ಬೇರೆ ತೊಟ್ಟುಕೊಳ್ಳೋದಕ್ಕೆ ಏನು ಕಷ್ಟ...?’
ಐದನೇ ಕ್ಲಾಸು ಮೆಟ್ಟಿಲು ಹತ್ತಿದಾಗ ನನಗೆ ಅನಿಸಿದ್ದು ಅದು. ಯಾಕೆಂದರೆ ನಾನು ಮೊದಲ ಬಾರಿಗೆ ಇಸ್ತ್ರಿ ಹೊಡೆದ ಯೂನಿಫಾರಂ ಹಾಕಿಕೊಂಡಿದ್ದೆ. ಅದಕ್ಕೇ ಅಂದೆ, "ಅಪ್ಪಾ ನನ್ನ ತರನೇ ಹೊಸಾ ಬಟ್ಟೆ ಹಾಕಿಕೋ".
ಅಪ್ಪ ಸುಮ್ಮನೆ ನಕ್ಕ.
ಹೈಸ್ಕೂಲು ಮೆಟ್ಟಿಲು ಹತ್ತುವಾಗಲೂ ನನಗೆ ಅದೇ ಅನಿಸಿತ್ತು. ಆಗಲೂ ಅಂದೆ, "ಅಪ್ಪಾ, ಮೊನ್ನೆ ಹಬ್ಬಕ್ಕೆ ತಂದ ಪಂಚೆ ಇದೆಯಲ್ಲ, ಅದನ್ನು ಉಟ್ಟುಕೋ". ಅಪ್ಪನದು ಅದೇ ಮಂದಹಾಸ, ಆದರೆ ನನಗೆ ಅಪ್ಪನ ಸ್ವಭಾವ ಹಿಡಿಸಲಿಲ್ಲ.
ಪ್ರೈಮರಿ ಸ್ಕೂಲಿಗೆ ಹೋದಾಗ ಹಾಗೆ ಅನ್ನಿಸಿದ್ರೂ ಅದನ್ನು ಹೇಳಲು ಹೋಗಿರಲಿಲ್ಲ. ಯಾಕೆಂದರೆ ಆಗ ನನ್ನ ಕಾಲಿನಲ್ಲೇ ಚಪ್ಪಲಿ ಇರಲಿಲ್ಲ. ಆಗ ಯೂನಿಫಾರಂ ಕೂಡಾ ಇರಲಿಲ್ಲ. ಮನೆಯಿಂದ ಯಾವುದೋ ಒಂದು ಬಣ್ಣದ ಬಟ್ಟೆ ಹಾಕಿ ಕಳಿಸುತ್ತಿದ್ದರು.
ಹೈಸ್ಕೂಲು ಮುಟ್ಟಿದಾಗ ಹಾಗಾಗಲಿಲ್ಲ. ಯೂನಿಫಾರಂ ಜೊತೆಗೆ ತಲೆಗೆ ಎಣ್ಣೆ ಹಾಕಿ, ಕ್ರಾಪು ಮಾಡಿ ಬೈಚಲು ತೆಗೆದು, ಅಮ್ಮ ದಿನವೂ ನೀಟು ಮಾಡಿ ಕಳಿಸಿ ತಲೆಯೆತ್ತಿ ನೆಡೆಯುವಂತೆ ಮಾಡಿಬಿಟ್ಟಿದ್ದಳು. ಆಗ ಅಪ್ಪ ಹಾಕಿಕೊಂಡ ಹರಕು ಬನಿಯನ್ನು, ಅಡಿಕೆ ತೊಗರಿನ ಕಲೆಯಿರುವ ಅಸಹ್ಯವಾದ ಹಳೆಪಂಚೆ...ಛೇ, ಅಪ್ಪನಿಗೆ ಅಷ್ಟೂ ಗೊತ್ತಾಗುವುದಿಲ್ಲವಾ? ಹಾಗೆಲ್ಲಾ ಅನಿಸಿದರೂ ಎದುರಿನಲ್ಲಿ ಹೇಳುವುದಕ್ಕೆ ಭಯ!
ಆದ್ದರಿಂದಲೇ, ಅಪ್ಪ ನನ್ನ ಸ್ನೇಹಿತರೆದುರು ಕಂಡಾಗ ಹೇಗೋ ಸಾಗ ಹಾಕಿಬಿಡುತ್ತಿದ್ದೆ. ನನ್ನ ಸ್ನೇಹಿತರು ನನ್ನಪ್ಪನ ಜತೆಯಲ್ಲಿ ನೋಡಿಬಿಟ್ಟರೆ ನನ್ನ ಮರ್ಯಾದೆ?
ಹಾ, ಹೇಗೋ ಮಾಡಿ ಅಪ್ಪ ಹೈಸ್ಕೂಲು ಫೀಸು ಕಟ್ಟಿ ನನ್ನ ಹತ್ತನೇ ಕ್ಲಾಸು ಓದಿಸಿದ. ಅಷ್ಟಕ್ಕೂ ಫೀಸು ಕಟ್ಟುವುದು ಅಷ್ಟೊಂದು ಕಷ್ಟಾನಾ? ನನ್ನ ಸ್ನೇಹಿತರ ಅಪ್ಪಂದಿರೂ ಕಟ್ಟುತ್ತಾರಲ್ಲವಾ? ಈ ಲೆಕ್ಕಾಚಾರವೆಲ್ಲಾ ನನಗೆ ಹೇಗೆ ಗೊತ್ತಾಗಿತ್ತೆಂದರೆ, ನನಗೆ ಗಣಿತದಲ್ಲಿ ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು, ಮತ್ತೆ ನೂರಕ್ಕೆ ಎಷ್ಟು ಸೊನ್ನೆ, ಸಾವಿರಕ್ಕೆ ಎಷ್ಟು ಸೊನ್ನೆ ಇರುತ್ತದೆ ಎಂಬುದೆಲ್ಲಾ ಸುಲಭವಾಗಿ ಗೊತ್ತಾಗಿಬಿಟ್ಟಿತ್ತು!
ನಾನು ಹತ್ತನೇ ಕ್ಲಾಸು ’ಪಾಸು’ ಅಂದ್ರೆ ಸುಮ್ನೇನಾ?
ಮುಂದೆ ನಾನು ಕಾಲೇಜಿಗೆ ಹೊರಟಾಗಲೂ ಹೊಸಬಟ್ಟೆ ಕೊಡಿಸು ಅಂದೆ. ಅಪ್ಪ ಸಂತೋಷದಿಂದಲೇ ಒಪ್ಪಿಕೊಂಡ.
ಅದೇನು ದೊಡ್ಡದು ಬಿಡಿ, ಓದುವುದು ನಾನು, ಬಟ್ಟೆ ಕೊಡಿಸುವುದಕ್ಕೆ ಏನಂತೆ? ಆಗಲೂ ಹೇಳಿದೆ, "ಅಪ್ಪಾ ನೀನೂ ಒಂದು ಹೊಸಾ ಬನಿಯನ್, ಪಂಚೆ ತೆಗೆದುಕೊಂಡು ಬಿಡು, ನನ್ನ ಕಾಲೇಜು ಹಾಸ್ಟೆಲಿಗೆ ಬಂದಾಗ ಬೇಕಾಗುತ್ತದೆ. ಅಲ್ಲೆಲ್ಲಾ, ನನ್ನ ಹೊಸಾ ಸ್ನೇಹಿತರು ಇರುತ್ತಾರೆ, ಅವರೆದುರು ನಿನ್ನ ಹರಕು ಬನಿಯನ್, ಕೊಳಕು ಪಂಚೆ ಹಾಕಿಕೊಳ್ಳುವುದು ಬೇಡ". ಈಗ ಹಿಂದಿಗಿಂತಲೂ ಬೇರೆ ತರ ನನ್ನ ಮುಖ ದುರುಗಟ್ಟಿ ನೋಡಿದರೂ ಮತ್ತೊಮ್ಮೆ ನಕ್ಕು ಸುಮ್ಮನಾದ.
ನಾನು ಡಿಗ್ರಿ ಪಾಸುಮಾಡಿ, ಒಂದು ಕೆಲಸ ಹಿಡಿದು ಮೊದಲ ಸಂಬಳದಲ್ಲಿ ತಂದಿದ್ದೇನು ಗೊತ್ತೇ? ಅಮ್ಮನಿಗೊಂದು ಸೀರೆ, ಅಪ್ಪನಿಗೆ ಒಂದು ಹೊಸಾ ಪಂಚೆ, ಬನಿಯನ್ ಮತ್ತೆ ಒಂದು ಪಟ್ಟಾಪಟ್ಟಿ ನಿಕ್ಕರ್ (ಡ್ರಾಯರ್). ಕಾರಣ, ಅಪ್ಪ ತೊಟ್ಟುಕೊಳ್ಳುವುದು ಅದನ್ನೇ.
ತೆಗೆದುಕೊಂಡು ಹೋದ ಬಟ್ಟೆಯನ್ನು ಅಪ್ಪ ಸಂತೋಷದಿಂದ ನನಗೆ ಶಹಬ್ಬಾಶ್ ಕೊಡುತ್ತಲೇ ಸ್ವೀಕರಿಸಿದ. ಮತ್ತೇ, ನಾನು ದುಡಿದು ಹೊಸಾ ಬಟ್ಟೆಯನ್ನು ತಂದು ಕೊಡುವುದು ಅಂದ್ರೆ ಕಡಿಮೇನಾ?
ಹಬ್ಬದ ದಿನವೇ ತೆಗೆದುಕೊಂಡು ಹೋಗಿದ್ದರಿಂದ, ಬೇರೆಲ್ಲಾ ಹಳೆಯ ಬಟ್ಟೆ ಬಿಟ್ಟು ನಾನು ತೆಗೆದುಕೊಂಡು ಹೋದ ಬಟ್ಟೆಯನ್ನೇ ಹಾಕಿಕೊಳ್ಳುತ್ತಾನೆ ಅಂತ ನನಗೆ ಗ್ಯಾರೆಂಟಿ ಇತ್ತಾದರೂ, ನನ್ನಪ್ಪ ಹಾಗೆ ಮಾಡಲೇ ಇಲ್ಲ! ಆವತ್ತು ಹಳೆಯ ಕೊಳಕು ಬಟ್ಟೆ ಹಾಕಿಕೊಳ್ಳಲಿಲ್ಲವಾದರೂ ಹೋದವರ್ಷ ತಾನೇ ತಂದಿದ್ದ ಬಟ್ಟೆಯನ್ನು ತೊಟ್ಟುಕೊಂಡಿದ್ದ.
ಹಾಂ, ಅಂದಹಾಗೆ ನನ್ನ ಅಣ್ಣಂದಿರೂ, ಅಕ್ಕಂದಿರೂ ಹೊಸಾ ಬಟ್ಟೆಗಳನ್ನು ಉಡುಗೊರೆ ಕೊಟ್ಟಿದ್ದರು.
ಆಗ ನಾನು ಡಿಗ್ರಿ ಹೋಳ್ಡರ್ ಆಗಿ, ಕೆಲಸ ಹಿಡಿದುಬಿಟ್ಟಿದ್ದೆನಲ್ಲ? ಅರ್ಥಾತ್ ಬಹಳ ತಿಳುವಳಿಕೆ ಇರುವವನಾಗಿ, ಆವತ್ತೂ ಹೇಳಿದ್ದೆ, "ಅಪ್ಪಾ, ಪ್ರತೀ ವರ್ಷ ಎಲ್ಲರೂ ಹೊಸಾ ಬಟ್ಟೆ ತಂದು ಕೊಡುತ್ತಿದ್ದಾರಲ್ಲ, ಇನ್ನು ಮೇಲಾದರೂ ಹಳೆಯ ಹರಕು ಬನಿಯನ್, ತೊಗರಿನ ಕಲೆಯ ಪಂಚೆ ಬಿಟ್ಟು ಒಳ್ಳೆಯ ಬಟ್ಟೆ ಹಾಕಿಕೋ, ಬಡತನವೆಲ್ಲಾ ಆಗಿಹೋಯಿತು, ಈಗ ನಮಗೆ ಬೇಕಾದಷ್ಟು ಇದೆ, ಹೊಟ್ಟೆಗೆ ಬಟ್ಟೆಗೆ ಯಾವುದಕ್ಕೂ ಕಡಿಮೆ ಇಲ್ಲ...".
ಅವತ್ತು ಕೂಡಾ ಅಪ್ಪ ಸುಮ್ಮನೆ ನಕ್ಕು, ವಿಷಯಾಂತರ ಮಾಡುತ್ತಾ ನನ್ನ ಕೆಲಸದ ಬಗ್ಗೆ ಕೇಳಿದ್ದ.
ಹೀಗೇ ವರ್ಷಗಳು ಉರುಳಿದವು. ಕಾಲಚಕ್ರ ತಿರುಗಿತು, ಅಪ್ಪನಿಗೆ ವಯಸ್ಸಾಯಿತು. ತನ್ನ ಕೊನೇಕಾಲ ಬಂದಾಗ ನನ್ನನ್ನ ಹತ್ತಿರ ಕರೆದು ಹೇಳಿದ.
"ನೋಡು, ನಾವು ಎಲ್ಲಿಂದ ಬಂದಿದ್ದೇವೆ ಎನ್ನುವುದನ್ನು ಮರೆಯಬಾರದು, ಜೀವನದಲ್ಲಿ ಯಾವುದೂ ಶಾಶ್ವತವಲ್ಲ. ಕೆಳಗಿನಿಂದ ಮೇಲೆ ಹೋಗುವಾಗ ಸುಲಭ, ಆದರೆ ಮೇಲಿನಿಂದ ಕೆಳಗೆ ಬರುವಾಗ ಕಷ್ಟ. ಹಾಗಾಗಿ ಯಾವತ್ತೂ ನಾವು ನಡೆದುಬಂದ ಹಾದಿಯನ್ನು ನೆನಪಿಸಿಕೊಳ್ಳುತ್ತಿರಬೇಕು. ಆದ್ದರಿಂದಲೇ ನಾವು ಇಡುವ ಹೆಜ್ಜೆ, ತೊಡುವ ಬಟ್ಟೆ, ಧರಿಸುವ ಆಭರಣ, ನಮ್ಮ ನಡವಳಿಕೆ ಯಾವುದರಲ್ಲೂ ’ಮೆರೆಯುವ’ ಲಕ್ಷಣ ಇರಬಾರದು..."
ಅಪ್ಪ ಹೇಳಿದ್ದನ್ನು ಅರಗಿಸಿಕೊಳ್ಳಲು ನನ್ನ ಮೊಂಡು ಬುದ್ಧಿಗೆ ಬಹಳ ಸಮಯವೇ ಬೇಕಾಯಿತು.
ಕೆಲದಿನಗಳನಂತರ ಅಪ್ಪ ಕಾಲವಾದ. ಅಂತ್ಯಕ್ರಿಯೆ ಗಳೆಲ್ಲಾ ಆದಮೇಲೆ ಎಲ್ಲರೆದುರಲ್ಲಿ ಅಪ್ಪನ ಅಲ್ಮೆರಾ ಬಾಗಿಲು ತೆಗೆಯಲಾಯಿತು. ಅಲ್ಲಿ ನೋಡಿದರೆ ರಾಶಿ ರಾಶಿ ಹೊಸಾ ಪಂಚೆಗಳು, ಬನಿಯನ್, ಜುಬ್ಬಾ, ಬಟ್ಟೆಗಳು ಯಾರ್ಯಾರೋ ಕೊಟ್ಟ ತರತರದ ಉಡುಗೊರೆಗಳ ಭಂಡಾರ! ಅದ್ಯಾವುದೂ ಅಪ್ಪನ ದೌಲತ್ತನ್ನು ಏರಿಸಿರಲಿಲ್ಲ, ಅವುಗಳಬಗ್ಗೆ ಮೋಹವೇ ಇರಲಿಲ್ಲ.
ಅದನ್ನೆಲ್ಲಾ ನೋಡಿಕೊಂಡು ನನ್ನ ಕಣ್ಣಿನಲ್ಲಿ ನೀರು ಧಳಧಳನೆ ಹರಿಯುತ್ತಿರಲು, ನನ್ನ ಹೆಂಡತಿ ಕೇಳಿದಳು,
"ಯಾಕೆ ಅಳುತ್ತಿದ್ದೀರಾ?".
ಉತ್ತರ ಹೇಳಲು ಏನಿದೆ??
ಅವೆಲ್ಲಾ ಆಗಿ ಕೆಲವು ವರ್ಷಗಳೇ ಕಳೆದು ಹೋಗಿವೆ.
ಮೊನ್ನೆ ನನ್ನ ಪುಟ್ಟ ಮಗಳು ಹೇಳಿದಳು "ಅಪ್ಪಾ, ನಿನ್ನ ಬನಿಯನ್ ಹರಿದುಹೋಗಿದೆ ಬೇರೆ ಹಾಕಿಕೋ...".
😢
----++--------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ