*"ಆ ಭಯಾನಕ ರಾತ್ರಿ!!"*
Oh, ಅದೊಂದು ಭಯಾನಕ ರಾತ್ರಿ ಬಿಡಿ.
ನಾನು ಇದನ್ನು ನಿಮಗೆ ಹೇಳಲಾ ಬೇಡವಾ ಅಂತ ಯೋಚಿಸುತ್ತಿದ್ದೇನೆ. ಅಯ್ಯೋ, ಹೇಳದಿದ್ದರೆ ನನ್ನ ಮನಸ್ಸಿಗೆ ಸಮಾಧಾನವಿಲ್ಲ, ಹೇಳಿದರೆ ನೀವೆಲ್ಲಿ ಹೆದರಿ ಅಪಾಯಕ್ಕೆ ಸಿಲುಕುತ್ತೀರೋ ಎಂಬ ಚಿಂತೆ ನನ್ನನ್ನಾವರಿಸಿದೆ.
ಆದರೂ ನಡೆದಿದ್ದೆಲ್ಲವನ್ನೂ ಹೇಳಿ ಬಿಡುವೆ, ಆಗಲಾದರೂ ನನ್ನ ಮನಸ್ಸು ಸ್ವಲ್ಪ ಹಗುರವಾದೀತು. ಹಾಗಿದ್ದರೂ, ನಿಮ್ಮ ಹಿತ ಕಾಯುವುದುಕ್ಕೋಸ್ಕರ ಈ ಅನುಭವ ಕಥಾನಕವನ್ನು ರಾತ್ರಿಹೊತ್ತು ಒಬ್ಬರೇ ಕುಳಿತು ಓದಬೇಡಿರೆಂದು, ಓದಿ ಏನಾದರೂ ಅನಾಹುತವಾದರೆ ನಾನು ಜವಾಬ್ದಾರನಲ್ಲವೆಂದು ಮೊದಲೇ ಹೇಳಿಬಿಡುತ್ತೇನೆ.
ನಮ್ಮೂರಿನ ತೋಟ ಕಾಯುವ ಆಳು ಗಿಡ್ಡಣ್ಣ ಇದ್ದಾನಲ್ಲಾ, ಅವನು ಯಾವಾಗಲೂ ಏನಾದರೊಂದು ಕಥೆ ಹೇಳುತ್ತಿರುತ್ತಾನೆ. ಅವನು ಕಾಡು-ಮೇಡುಗಳನ್ನು ಸುತ್ತುತ್ತಾ, ಕೆರೆ-ಕುಂಟೆ-ನದಿಗಳ ಕಡೆ ಅಲೆಯುತ್ತಾ, ಬಿಸಿಲು-ಬೆಂಕಿ ಅನ್ನದೆ ತಿರುಗುತ್ತಾ, ರಾತ್ರಿ-ಹಗಲೆನ್ನದೆ ನಡೆಯುತ್ತಾ ಅದೇನೇನು ನೋಡುತ್ತಾನೋ, ಅದೇನೇನನ್ನು ಹೊತ್ತು ತರುತ್ತಾನೋ ಆ ದೇವರೇ ಬಲ್ಲ. ನನಗೆ ಅವನ ಭೂತ ಪ್ರೇತಗಳ ಕಥೆ ಎಂದರೆ ಬಹಳ ಇಷ್ಟ.
ಕಾನೊಳಗೆ, ಅವನು ಹೇಳುವ ಸ್ಮಶಾನದ ಮಧ್ಯೆ ಕಾಣುವ ವಿಚಿತ್ರ ಆಕಾರಗಳು ನನಗೆ ರೋಮಾಂಚನ ಗೊಳಿಸುತ್ತಿತ್ತು. ಇವೆಲ್ಲಾ ನನಗೆ ಇಷ್ಟ ಆಗುತ್ತದೆ ಅಂತಲೇ, ಆ ಗಿಡ್ಡಪ್ಪ ಸಮಯವಿದ್ದಾಗಲೆಲ್ಲಾ ಬಂದು ನಮ್ಮನೆಯ ಹೊರಗಡೆ ಕಟ್ಟೆಯಮೇಲೆ ಕುಳಿತು ಬಣ್ಣಬಣ್ಣದ ಕಥೆಗಳನ್ನು ರಸವತ್ತಾಗಿ ಹೇಳುತ್ತಿದ್ದ.
ಆವತ್ತೊಂದು ರಾತ್ರಿ ಸ್ಮಶಾನದಲ್ಲಿ ನಡೆದಿದ್ದನ್ನು, ಏನೇನು ನಡೆದಿತ್ತು ಎಂಬ ಕಥೆ ಹೇಳಿದ್ದ. ನನಗೆ ಒಂಥರಾ ರೋಮಾಂಚನದ ಜತೆ ಕೆಟ್ಟ ಕುತೂಹಲ. ಅವೆಲ್ಲಾ ನಿಜವಾ? ಗಿಡ್ಡಪ್ಪ ಸುಳ್ಳು ಹೇಳ್ತಿರಬಹುದು ಎಂಬ ಅನುಮಾನ ಒಂದು ಕಡೆ ಇತ್ತು. ಮತ್ತೊಂದು ಕಡೆ ಮೂಢನಂಬಿಕೆ ಮೇಲಿನ ಬುದ್ಧಿಜೀವಿಗಳ ಹೇಳಿಕೆಗಳು. ಮೊದಲಿನಿಂದಲೂ ಸಾಹಸ ಪ್ರವೃತ್ತಿಗೆ, ಧೈರ್ಯದ ಕೆಲಸಗಳಿಗೆ ಎದೆಯೊಡ್ಡುತ್ತಿದ್ದ ನನಗೆ ಇಂತಾ ಕಥೆಗಳಲ್ಲಿ ಪ್ರೇರಣೆ ಸಿಗದೇ ಇರುತ್ತದಾ? ಸಾಲದ್ದಕ್ಕೆ ಅವತ್ತು ಸಾಯಂಕಾಲ ಟಿವಿಯಲ್ಲಿ ’ಭೂತ ಬಿಡಿಸುವ’ ಹುಲಿಕಲ್ ನಟರಾಜರ ಸಂದರ್ಶನ ಇತ್ತು. ನಟರಾಜು ಭೂತ, ಪ್ರೇತ, ಚೌಡಿ, ಕಿನ್ನರರು, ಗಂಧರ್ವರು, ಯಕ್ಷಿ, ಪಿಶಾಚಿ, ಶಾಕಿಣಿ, ಢಾಕಿಣಿ ಇನ್ನೂ ಏನೇನೋ ಇವೆಯೋ ಎಲ್ಲವೂ ಸುಳ್ಳು, ಅವೆಲ್ಲಾ ಮೂಢ ನಂಬಿಕೆಗಳು ಎಂದು ಹೇಳುತ್ತಿದ್ದರು. ಎಷ್ಟೆಂದರೂ ಬುದ್ಧಿ ಜೀವಿಗಳಲ್ಲವೇ? ನನಗೆ ಹುಲಿಕಲ್ ನಟರಾಜು ’ಹೀರೋ’ ವಾಗಿ ಕಂಡರು. ಇನ್ನಷ್ಟು ಕುತೂಹಲ, ಧೈರ್ಯ ಬಂದಿತು.
ಮರುದಿನವೇ ಅಮವಾಸ್ಯೆ. ಅವತ್ತು ರಾತ್ರಿ ಸ್ಮಶಾನಕ್ಕೆ ಹೋಗಿ ಬಂದರೆ ಹೇಗೆ? ಗಿಡ್ಡಪ್ಪ ಹೇಳಿದ್ದು ಸುಳ್ಳೋ, ನಟರಾಜು ಹೇಳಿದ್ದು ಸುಳ್ಳೋ ನೋಡಿಯೇ ಬಿಡೋಣ.
ಯಾರಿಗೂ ಹೇಳದೆ ಎಲ್ಲವನ್ನೂ ತಯಾರಿ ಮಾಡಿಕೊಂಡೆ. ಸ್ಮಶಾನದಲ್ಲಿ ನಡೆಯುವ ಎಲ್ಲವನ್ನೂ ನೋಡಿಕೊಂಡು ಬಂದು ಎಲ್ಲರಿಗೂ ಹೇಳಿಬಿಡಬೇಕು, ಆ ಮರುದಿನ ನನ್ನ ಫೋಟೋ ಪೇಪರಿನಲ್ಲಿ ಬರುತ್ತದೆ, ಎಲ್ಲರೂ ’ಧೈರ್ಯವಾನ್” ಎಂದು ಶಬ್ಬಾಸ್ ಗಿರಿ ಕೊಡುತ್ತಾರೆ, ಊರಿನಲ್ಲಿ ಸನ್ಮಾನವನ್ನೂ ಮಾಡಬಹುದು, ಒಮ್ಮೆಲೇ ನಾನು ಬುದ್ಧಿಜೀವಿಯಂತೆ ಎದೆಯುಬ್ಬಿಸಿ ಓಡಾಡಬಹುದು. ನಾನೂ ಭಗವಾನ್ ’ಭಗವದ್ಗೀತೆ ಸುಡುವ’ ತರಹದ ಡೈಲಾಗ್ ಹೊಡೆಯಬಹುದು. ...ಇನ್ನೂ ಏನೇನೋ ಆಸೆಗಳು.
ರಾತ್ರಿ ಊಟವಾದ ತಕ್ಷಣ ಬೇಗನೇ ಮಲಗಿಕೊಂಡೆ, ಮುಸುಕುಹಾಕಿ ಗೊರಕೆ ಹೊಡೆದೆ. ನಮ್ಮನೆಯ ದೊಡ್ಡ ಗಡಿಯಾರದಲ್ಲಿ ಘಂಟೆ ಹನ್ನೊಂದೂವರೆ ’ಢಣ್’ ಎಂದು ಹೊಡೆಯಿತು. ಮನೆಯಲ್ಲಿ ಎಲ್ಲರೂ ಮಲಗಿದ್ದು ಖಾತರಿ ಮಾಡಿಕೊಂಡು, ನಿಧಾನವಾಗಿ ಹಾಸಿಗೆಯಿಂದ ಎದ್ದೆ. ಹೊರಗೆ ಮೈಕೊರೆಯುವ ಚಳಿ, ಕಿಟಕಿಯಿಂದ ಸುಂಯ್ ಎಂದು ಸುಳಿಗಾಳಿ ಬರುತ್ತಿತ್ತು. ಜರ್ಕಿನ್ ಹೆಗಲಿಗೆ ಸೇರಿಸಿ, ಒಂದು ಸಣ್ಣ ಟಾರ್ಚ್ ತೆಗೆದುಕೊಂಡು, ಮಲಗುವ ಕೋಣೆ, ನಡುಮನೆ, ಹಾಲ್ ಎಲ್ಲವನ್ನೂ ನಿಧಾನವಾಗಿ, ಲೈಟನ್ನು ಹಾಕದೇ ದಾಟಿ, ಮುಖ್ಯದ್ವಾರವನ್ನು ನಿಧಾನವಾಗಿ ತೆಗೆದೆ, ಮುಚ್ಚುವಾಗ "ಕೊಯ್ಯ್ಂ" ಶಬ್ದ ಮಾಡಿತು, ಸಧ್ಯ, ಯಾರಿಗೂ ಗೊತ್ತಾಗಲಿಲ್ಲ.
ಊರು ದಾಟುತ್ತಿದ್ದಂತೆ ಸ್ಟ್ರೀಟ್ ಲೈಟುಗಳ ಬೆಳಕು ಮಂದವಾಗುತ್ತಾ ಹೋಯಿತು. ಟಾರ್ಚ್ ಆನ್ ಮಾಡಿದೆ. ಮರ, ಮಟ್ಟಿಗಳನ್ನು ದಾಟುತ್ತಾ ಮುಂದೆ ಹೋದೆ. ಸುಮಾರು ಮುಕ್ಕಾಲು ಕಿಲೋಮೀಟರ್ ದೂರದಲ್ಲಿ ಗುಡ್ಡದ ಹತ್ತಿರ ಇರುವ ಸ್ಮಶಾನಕ್ಕೆ ಹೋಗುವುದು ನನ್ನ ಗುರಿ.
ಸುತ್ತಲೂ ಕತ್ತಲಲ್ಲ, ಕಾರ್ಗತ್ತಲು, ಆ ಘೋರ ಕತ್ತಲನ್ನು ಸೀಳಿಕೊಂಡು ತಣ್ಣನೆಯ ಗಾಳಿ ವಿಚಿತ್ರವಾಗಿ ಶಬ್ದ ಮಾಡುತ್ತಾ ಬೀಸುತ್ತಿತ್ತು. ಮರಗಿಡಗಳು ಬೆಳಗಿನ ಹೊತ್ತು ಸುಂದರವಾಗಿ ಕಂಡರೆ, ಈಗ ಅಮಾವಾಸ್ಯೆಯ ಕತ್ತಲಲ್ಲಿ ಏನೇನೋ ವಿಚಿತ್ರವಾದ ಆಕಾರವನ್ನು ತಾಳಿದ್ದವು. ಕೆಲ ಮರಗಳು ನೃತ್ಯಮಾಡುತ್ತಿರುವಂತೆ ಕಂಡರೆ, ಕೆಲವು ಕೈಮೇಲೆತ್ತಿ ಕರೆಯುತ್ತಿರುವಂತೆ ಭಾಸವಾಗುತ್ತಿತ್ತು. ನಿರ್ಜನ ಪ್ರದೇಶ, ಸುತ್ತಲೂ ನನ್ನನ್ನು ಬಿಟ್ಟರೆ ಒಂದು ಪ್ರಾಣಿಯೂ ಇರಲಾರದು. ನಿಶ್ಶಬ್ಧ, ರೌರವ ಮೌನ. ಸುತ್ತಮುತ್ತ ಮುಳ್ಳು ಗಿಡಗಳ ಪೊದೆ, ಮಟ್ಟಿಗಳು. ಮರಗಳಿಂದ ಎಲೆಗಳೆಲ್ಲಾ ಉದುರಿ ನಡೆಯುವಾಗ ಚರ್-ಪರ್ ಸದ್ದು ಮಾಡುತ್ತಿತ್ತು. ಅಷ್ಟರಲ್ಲಿ ಪಕ್ಕದ ಪೊದೆಯಿಂದ ಏನೋ ಕಪ್ಪನೆಯ ಆಕೃತಿ ಸರಸರ ಓಡಿಹೋಯಿತು. ಒಂದು ಕ್ಷಣ ಎದೆ ಧಸಕ್ಕೆಂದಿತು, ಬೆಚ್ಚಿಬಿದ್ದೆ. ಆದರೂ ಧೈರ್ಯಗುಂದಿದರೆ ಹೇಗೆ? ನಾನೂ ಹುಲಿಕಲ್ ನಟರಾಜು ಆಗಬೇಕಲ್ಲ? ಮಿಣುಕು ಟಾರ್ಚ್ ಲೈಟಲ್ಲೇ ಮುಂದುವರೆದೆ. ಹತ್ತಿರದಲ್ಲೇ ಯಾರೋ "ಗುಂ....ಗುಂ" ಎಂದು ಕೂಗಿದಂತೆ ಕೇಳಿಸಿತು. ಒಮ್ಮೆ ನಿಂತೆ, ನಂತರ ಓ, ಅದು ಗೂಬೆ ಇರಬೇಕು ಅಂದುಕೊಂಡು ಹೆಜ್ಜೆಹಾಕಿದೆ. ಮುಂದಿನ ದಾರಿ ಬಹಳ ದುರ್ಗಮವಾಗಿತ್ತು. ಮೂರ್ನಾಲ್ಕು ತಿಂಗಳಿಂದ ಊರಲ್ಲಿ ಯಾರೂ ಸತ್ತಿರಲಿಲ್ಲ. ಹಾಗಾಗಿ ಸ್ಮಶಾನದ ಆ ಕಾಲುದಾರಿಯಲ್ಲಿ ಹುಲ್ಲು, ಮುಳ್ಳಿನಗಿಡಗಳು ಸೊಂಪಾಗಿ ಬೆಳೆದಿದ್ದವು. ಅವುಗಳನ್ನೆಲ್ಲಾ ಸರಿಸಿಕೊಂಡು ನಡೆಯತೊಡಗಿದೆ. ಅಷ್ಟರಲ್ಲಿ ಯಾರೋ ಹಿಂದಿನಿಂದ ಎಳೆದಂತೆ ಆಯಿತು. ಓ ದೇವಾ, ಹಿಂದೆತಿರುಗಲು ಭಯ, ಆದರೆ ನಾನು ಹುಲಿಕಲ್ ನಟರಾಜು ಆಗಬೇಕಲ್ಲ? ಕೈಯ್ಯನ್ನು ಜೋರಾಗಿ ಎಳೆದುಕೊಂಡೆ, ಏನೋ ಹಿಡಿದುಕೊಂಡಿದ್ದು ಬಿಟ್ಟು ಬಿಟ್ಟಿತು. ಮುಳ್ಳಿನ ಪೊದೆಗೆ ತೋಳಿನ ಬಟ್ಟೆ ಸಿಕ್ಕಿತ್ತು, ಅದು ಪರ್ರ್ ಎಂದು ಹರಿದುಹೋಯಿತು, ಭುಜದ ಮೇಲೆ ರಕ್ತದ ಹನಿ ಚಿಮ್ಮಿತು. ಏನೇನೋ ಗಟ್ಟಿಯದು ಮೆತ್ತನೆಯದು ತುಳಿಯುತ್ತಾ ಮುನ್ನುಗ್ಗಿದೆ. ನಾನು ನಡೆಯುವ ಸದ್ದು ಬಿಟ್ಟರೆ ಇನ್ನೇನೇನೂ ಶಬ್ದವಿರಲಿಲ್ಲ. ಆ ನಿಶ್ಶಬ್ದದ ಮದ್ಯೆ ಅದ್ಯಾವುದ್ಯಾವುದೋ ಪ್ರಾಣಿಗಳ, ಪಕ್ಷಿಗಳು ಒಮ್ಮೊಮ್ಮೆ ಕಿಟಾರನೆ ಕಿರುಚಿದಂತೆ ಕೇಳಿಸುತ್ತಿತ್ತು. ಮುಂದೆ ಹೋಗುತ್ತಿದ್ದಂತೆ ಸಣ್ಣಸಣ್ಣ ಗಿಡಗಳು, ಪೊದೆಗಳು ಸಾಲಾಗಿ ನಿಂತು ನನ್ನ ನೋಡಿ ಗಹಗಹಿಸಿ ಕೇಕೆಹಾಕಿ ನಗುತ್ತಿರುವಂತೆ ಕಂಡಿತು. ಅಯ್ಯೋ, ಏನು ಮಾಡಲಿ, ಹಿಂದೆ ಹೋಗುವಂತಿಲ್ಲ, ಇನ್ನು ಕೆಲವೇ ಮಾರು ದೂರದಲ್ಲಿ ಸ್ಮಶಾನ.
ಅಷ್ಟೊತ್ತಿಗೆ ಚಳಿ ಬಿಟ್ಟು ಸೆಖೆ ಶುರುವಾಗಿತ್ತು. ಒಮ್ಮೆ ಹಿಂದೆ ತಿರುಗಿ ನೋಡಿದೆ. ಅದೆಷ್ಟು ಕತ್ತಲಿತ್ತು ಅಂದರೆ ಪಕ್ಕದಲ್ಲಿ ಏನಾದರೂ ನಿಂತಿದ್ದರೂ ಕಾಣುತ್ತಿರಲಿಲ್ಲ. ಕಾಲಿಗೆ ಮುಳ್ಳು ಚುಚ್ಚಿ ರಕ್ತ ಚಪ್ಪಲಿಮೇಲೆ ಬಿದ್ದು ಓಡಾಡುವಾಗ ಜಾರುತ್ತಿತ್ತು, ಜೋರಾಗಿ ಓಡುವಂತೆಯೂ ಇಲ್ಲ. ನಿಧಾನವಾಗಿ ಕುಂಟುತ್ತಾ ಮುಂದೆ ಹೆಜ್ಜೆ ಹಾಕಿದೆ. ಮುಂದೆ ಮಿಣುಕು ಮಿಣುಕಾದ ಬೆಳಕು ಕಂಡಿತು. ಇನ್ನೂ ಸ್ವಲ್ಪ ಹತ್ತಿರ ಹೋಗುತ್ತಿದ್ದಂತೆ ಯಾರೋ ಒಂದಷ್ಟು ಜನ, ಬೆಂಕಿ ಹಾಕಿಕೊಂಡು, ಸುತ್ತ ನಿಂತು ನೃತ್ಯ ಮಾಡುತ್ತಿರುವಂತೆ ಗೋಚರವಾಯಿತು.
ಇನ್ನೂ ಹತ್ತಿರ ಹೋದೆ. ಓಹ್, ಏನೇನೋ ವಿಕಾರವಾದ ಆಕೃತಿಗಳು ಮಸುಕು ಮಸುಕಾಗಿ ಕಾಣುತ್ತಿದ್ದವು. ಕೈಯ್ಯಲ್ಲಿ ಪ್ರಾಣಿಪಕ್ಷಿಗಳ ತುಂಡುಗಳನ್ನು ಹಿಡಿದುಕೊಂಡು ಮಾಂಸವನ್ನು ಹಿಡಿದೆಳೆದು ತಿನ್ನುತ್ತಿರುವಂತೆ ಕಂಡಿತು, ಮರದ ಲೋಟದಲ್ಲಿ ಏನೋ ಕುಡಿಯುತ್ತಿವೆ. ಏನೇನೋ ವಿಚಿತ್ರವಾಗಿ ಕಿರುಚುತ್ತಾ ನೃತ್ಯ ಮಾಡುತ್ತಿವೆ. ಆ ಕಾಡಿನ ರಣಮೌನದಲ್ಲಿ ಭೀಕರವಾದ ದೃಷ್ಯ ನನ್ನ ಕಣ್ಣ ಮುಂದೆಯೇ ನಡೆಯುತ್ತಿತ್ತು.
ಅಯ್ಯೋ ದೇವರೇ, ಇವೇ ಇರಬೇಕು ಭೂತ ಪ್ರೇತ, ಶಾಕಿಣಿ, ಢಾಕಿಣಿಗಳು. ಮೈಮೇಲೆ ಬಟ್ಟೆಯೇಇಲ್ಲ, ವಿಚಿತ್ರ ಆಕೃತಿಗಳು, ರಕ್ತಸಿಕ್ತ ಮೈಕೈಕಾಲುಗಳು, ನೃತ್ಯಮಾಡುತ್ತಿವೆ. ಮರೆಯಲ್ಲಿ ನಿಂತು ಅದನ್ನು ನೋಡುತ್ತಿದ್ದಂತೆ ನನ್ನ ಮೈಮೇಲೆ ಹಾಕಿದ ಬಟ್ಟೆಯೆಲ್ಲಾ ಒದ್ದೆಯಾಗಿತ್ತು, ನನ್ನ ಯಾವ್ಯಾವ ರಂಧ್ರಗಳಿಂದ ಏನೇನು ಬಂದಿತೋ ಗೊತ್ತಿಲ್ಲ. ಇವೆಲ್ಲಾದರೂ ನನ್ನನ್ನು ನೋಡಿಬಿಟ್ಟರೆ ಹರಿದು ಮುಕ್ಕಿ ತಿನ್ನುವುದರಲ್ಲಿ ಅನುಮಾನವೇ ಇಲ್ಲ.
ಬೆವರು ಕಿತ್ತುಬರುತ್ತಿರುವಾಗಲೂ ಒಂದು ಕ್ಷಣ ಬುದ್ಧಿಜೀವಿಗಳ ಯೋಚನೆ ಬಂದಿತು, ಒಂದು ಫೋಟೋ ಹೊಡೆದು ನಾಳಿನ ಪೇಪರಲ್ಲಿ ಹಾಕಿದರೆ ಹೇಗೆ? ಮೊಬೈಲ್ ಗೆ ತಡಕಾಡಿದೆ. ಒಹ್, ಗಡಿಬಿಡಿಯಲ್ಲಿ ಮನೆಯಲ್ಲೇ ಬಿಟ್ಟುಬಂದಿದ್ದೆ. ಛೇ, ಎಂಥಾ ಕೆಲಸ ಮಾಡಿಬಿಟ್ಟೆ. ಹುಲಿಕಲ್ ನಟರಾಜುವನ್ನಾದರೂ ಕರೆದುಕೊಂಡು ಬರಬಾರದೇ....?
ಅಷ್ಟೊತ್ತಿಗೆ ಒಂದು ಆಕೃತಿ ನಿಧಾನವಾಗಿ ಗುಂಪಿನಿಂದ ಹೊರಗೆ ಬಂದಿತು. ದೇವಾ, ನನ್ನನ್ನು ನೋಡಿಬಿಟ್ಟಿತೇ? ಈಗ ಬಿರುಸಾಗಿ ಹೆಜ್ಜೆ ಹಾಕುತ್ತಾ ಬಂದಿತು. ಗಿಡ್ಡಪ್ಪ ಹೇಳಿದ್ದ, ’ಭೂತಕ್ಕೆ ಕಾಲು ಹಿಂದೆ ತಿರುಗಿರುತ್ತದೆ’, ನೋಡಿದೆ ಕಾಲು ಕತ್ತಲಲ್ಲಿ ಸರಿಯಾಗಿ ಕಾಣುತ್ತಿರಲಿಲ್ಲ. ಬಹಳ ಕ್ರೂರ ಪ್ರಾಣಿಯಂತೆ ರಕ್ತ ಸಿಕ್ತ ಮೈಯಂತೆ ಭಯಂಕರವಾಗಿ ಕಾಣುತ್ತಿತ್ತು. ನಾನು ಹಿಂದೆ ತಿರುಗಿ ಓಡಬೇಕು ಅನ್ನುವಷ್ಟರಲ್ಲಿ ಅದು ಜೋರಾಗಿ ಹೆಜ್ಜೆ ಹಾಕಿ ನನ್ನುನ್ನು ಗಪ್ಪನೆ ಹಿಡಿದುಬಿಟ್ಟಿತು.
"ಅಯ್ಯೋ, ಕಾಪಾಡಿ, ಕಾಪಾಡಿ..." ಜೋರಾಗಿ ಕೂಗಲು ನೋಡಿದೆ, ಸ್ವರ ಕ್ಷೀಣವಾಗಿ ಹೋಗಿತ್ತು. "ಅಯ್ಯೋ ಸತ್ತೇ, ಸತ್ತೇ, ಕಾಪಾಡಿ, ಭೂತ... ಭೂತ....ಕಾಪಾಡಿ..." ಕೈಕಾಲು ಬಡಿಯುತ್ತಿದ್ದೆ.
ಆದರೂ ನನ್ನ ಕೈಯನ್ನು ಹಿಡಿದೆಳೆದು ದರದರನೆ ಎಳೆದು ಕೊಂಡು ಹೋದಂತೆ ಅನ್ನಿಸಿತು....
ಅಷ್ಟೊತ್ತಿಗೆ ಮುಖದ ಮೇಲೆ ತಣ್ಣನೆಯ ನೀರು ಬಿದ್ದಂತಾಯಿತು, ಕಣ್ಣು ಬಿಟ್ಟು ನೋಡುತ್ತೇನೆ, ನನ್ನ ಅಮ್ಮ ಕೈ ಹಿಡಿದೆಳೆದು "ಹಾಸಿಗೆ ಬಿಟ್ಟು ಏಳೋ, ಬೆಳಿಗ್ಗೆ ಎಂಟು ಗಂಟೆಯಾಯಿತು, ಭಾನುವಾರ ಅಂತ ಮಲಗಿಬಿಟ್ಟಿದ್ದೀಯಲ್ಲ, ಎಷ್ಟೊಂದು ಕೆಲಸವಿದೆ, ಸೋಮಾರೀ..." ಅಂತ ಎಬ್ಬಿಸುತ್ತಿದ್ದಳು.
ಅಮ್ಮ ಜೋರಾಗಿ ಬಯ್ಯುತ್ತಿದ್ದಳು, ನನ್ನನ್ನೊಂದೇ ಅಲ್ಲದೇ, ಗಿಡ್ಡಪ್ಪನನ್ನೂ ಸೇರಿಸಿ!
"ಆ ಗಿಡ್ಡಪ್ಪನಿಗೆ ಬುದ್ದಿ ಇಲ್ಲ, ಈ ಹುಡುಗನನ್ನು ಕೂರಿಸಿಕೊಂಡು, ಭೂತ ಪಿಶಾಚಿ ಕಥೆ ಹೇಳಬೇಡ ಅಂದರೂ ಕೇಳುವುದಿಲ್ಲ, ಇವತ್ತು ಯಜಮಾನರಿಗೆ ಹೇಳಿ ಅವನಿಗೆ ಗ್ರಹಚಾರ ಬಿಡಿಸುತ್ತೇನೆ...."
(ನನ್ನ ಕಾಲೇಜು ದಿನಗಳಲ್ಲಿ ಬರೆದದ್ದು)
------****-------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ