ಭಾನುವಾರ, ಜನವರಿ 31, 2021

 ’ಉಪವಾಸ’ ವನ್ನು ನಾವೇಕೆ ಮಾಡಬೇಕು?


ನೆನಪಿರ ಬಹುದು ನಿಮಗೆ, ಇತ್ತೀಚೆಗೆ ಸಭೆಯೊಂದರಲ್ಲಿ ಶ್ರೀಮದ್ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ’ಉಪವಾಸದಿಂದಿರುವ ಗೋವುಗಳಿಗೆ ನಿಮ್ಮ ಒಂದು ದಿನದ ಎರೆಡುಹೊತ್ತಿನ ತುತ್ತನ್ನು ದೇಣಿಗೆಯಾಗಿ ಕೊಡಿ’ ಎನ್ನುತ್ತಾ ಗೋವಿನ ಉಳಿವಿಗಾಗಿ ಏನೆಲ್ಲಾ ಸೇವೆ ಮಾಡಬಹುದು ಎಂದು ಸವಿಸ್ತಾರವಾಗಿ ತಿಳಿಸಿಕೊಟ್ಟರು. ಮನಕಲಕುವ ಶಬ್ದಗಳವು, ಮೇವಿನ ಕೊರತೆಯಿಂದಾಗಿ ಗೋಮಾತೆ ಉಪವಾಸವಿದ್ದಾಳೆ ಅಂದರೆ ನಮ್ಮ ತಾಯಿ ಆತಂಕದಲ್ಲಿದ್ದಾಳೆ ಎಂದೇ ಅರ್ಥ. 

ನನಗೆ ಆರಾತ್ರಿ ಹೊಟ್ಟೆಯಲ್ಲಿ ಸಂಕಟವಾಗಿ ನಿದ್ದೆಯೇ ಬರಲಿಲ್ಲ. ಮರುದಿನ ಪತ್ನಿಗೆ ವಿಷಯ ತಿಳಿಸಿ, ಹೇಳಿದೆ "ಈ ಭಾನುವಾರ ಮಧ್ಯಾಹ್ನ ಟ್ರೀಟ್ (ಅಂದರೆ ಬೇರೆಯವರು ಊಟ ಕೊಡಿಸುವುದು) ಇದೆ; ಅದನ್ನು ನಿಲ್ಲಿಸಲಾಗದು. ಅದಕ್ಕೇ ಬೆಳಿಗ್ಗೆ ಮತ್ತು ರಾತ್ರಿ ಉಪವಾಸ ಮಾಡೋಣ, ಆ ’ಉಪವಾಸ’ ದ ಉಳಿತಾಯ ಹಣವನ್ನು ಗೋವಿಗಾಗಿ ಕಳಿಸೋಣ" ಎನ್ನುತ್ತಾ ವೀಕೆಂಡ್ ಪ್ಲಾನ್ ಮಾಡಿದೆ!. ವ್ರತೋಪಾಸಗಳನ್ನು ಅನೇಕವರ್ಷಗಳಿಂದ ಪಾಲಿಸುತ್ತಿರುವ ಆಕೆ ಒಂದು ಕ್ಷಣವನ್ನೂ ವ್ಯರ್ಥಮಾಡದೆ ಸಂತೋಷದಿಂದಲೇ ಒಪ್ಪಿದಳು. ’ಸಹವಾಸ ದೋಷ’ದಿಂದ ಐದಾರು ವರ್ಷ ’ಗುರುವಾರ ಉಪವಾಸ’ ಮಾಡಿದ ನನಗೂ ಉಪವಾಸವೆಂಬುದು ಹೊಸದಾಗಿರಲಿಲ್ಲ, ಭಾನುವಾರ ಸ್ವಇಚ್ಚೆಯಿಂದ ಉಪವಾಸ ನೆರೆವೇರಿಸಿದೆವು. ಮರುದಿನವೇ ಐದುನೂರು ರೂಪಾಯಿ ಕಳಿಸಿದೆ, ರಾತ್ರಿ ನೆಮ್ಮದಿಯಿಂದ ನಿದ್ದೆ ಬಂತು! 


ನಮ್ಮ ತರಹವೇ ಅನೇಕರಿಗೆ ಈ ನೆಮ್ಮದಿಯ ಅನುಭವ ಆಗಿರಬಹುದು, ಅಕಸ್ಮಾತ್ ಆ ’ನೆಮ್ಮದಿ’ಯ ಅನುಭವ ನಿಮಗಿನ್ನೂ ಆಗಿರದಿದ್ದರೆ ಪ್ರಯೋಗ ಮಾಡಿ ನೋಡಿ.


ಇಲ್ಲಿ "ಎಷ್ಟುಹಣ ಕಳಿಸಬಹುದು?" ಎನ್ನುವುದು ನಗಣ್ಯ, ಅದು ಬರೀ ಸಾಂಕೇತಿಕ ಮಾತ್ರ. ನೀವು ಎಷ್ಟೂ ವಿನಿಯೋಗಿಸಬಹುದು, ದಾನಕ್ಕೆ ಮಿತಿಯುಂಟೇ?. ಹಾಗೆಯೇ ಉಪವಾಸವೆನ್ನುವುದು ಬರೀ ಒಂದೇ ದಿನವಾಗಬೇಕಾಗಿಯೂ ಇಲ್ಲ, ಅದೊಂದು ನಿರ್ದಿಷ್ಟವಾದ ವ್ರತವನ್ನಾಗಿಯೇ ಆಚರಿಸಬಹುದು. ಆದರೆ ಹಣವುಳಿಸಿ ’ಅದೇಹಣ’ ವನ್ನು ಕಳಿಸುವುದು ಮುಖ್ಯ. ಅದೊಂದು ರೀತಿಯ ಸೇವೆ. ಸೇವಾ-ವ್ರತಗಳಿಗೆ ನೂರಾರು ದಾರಿಗಳಿದ್ದಾವೆ. ಆರೇಳು ವರ್ಷಗಳಿಂದ ಪ್ರಕಟವಾದ ನನ್ನ ಲೇಖನಗಳಿಗೆ ಪತ್ರಿಕೆಗಳು ಕಳಿಸುವ ಅಷ್ಟೂ ಗೌರವ ಸಂಭಾವನೆಯನ್ನು (ಹಣವನ್ನು) ಅನಾಥಾಲಯಗಳಿಗೆ ಕೊಡುವ ’ವ್ರತ’ ಆಚರಿಸುತ್ತಿದ್ದೇನೆ, ಅದೇ ನನ್ನ ಬರಹಗಳಿಗೆ ಸ್ಪೂರ್ತಿ.

 

ನಿಮಗಿಷ್ಟವಿಲ್ಲವೆಂದರೆ ಬೇರೆಯವರು ಹೇಳಿದ ಉದ್ದೇಶಕಾಗಿಯೇ ’ವ್ರತವನ್ನು’ ಮೀಸಲಿಡಬೇಕಿಲ್ಲ. ಬಹಳಷ್ಟು ಕೈಲಾಗದವರು, ಅನಾಥರು, ಹಣವಿಲ್ಲದವರು, ಪ್ರಾಣಿ-ಪಕ್ಷಿ-ಜೀವಿಗಳಿದ್ದಾವೆ.... ಯಾರಿಗೂ ಸಹಾಯ ಮಾಡಬಹುದು.


 ಇಂದು ನಗರಗಳಲ್ಲಿ ತಳವೂರಿರುವ ಜನರಿಗೆ ಐದುನೂರೇನೂ ಹೆಚ್ಚಲ್ಲ ಬಿಡಿ. ಇದಕ್ಕಿಂತಾ ಹೆಚ್ಚುಹಣವನ್ನು ಉಪವಾಸವಿರದೆಯೇ ಸುಲಭವಾಗಿ ಕಳಿಸಬಹುದು. ಆದರೆ ಇಲ್ಲಿ ಹಣಕ್ಕಿಂತಲೂ ಹೆಚ್ಚು ಮಹತ್ವ ಇರುವುದು ಉಪವಾಸಕ್ಕೆ, ವ್ರತಕ್ಕೆ. ಉಪವಾಸ ಮಾಡಿದಾಗ ಮಾತ್ರ ನಮಗೆ ’ಮೌಲ್ಯ’ದ ಅನುಭವವಾಗುತ್ತದೆ. ಬೇರೊಬ್ಬರ ನೋವು ಅರ್ಥವಾಗುವುದು - ನಮಗೆ ನೋವಾದಾಗ ಮಾತ್ರ. ಆದ್ದರಿಂದಲೇ ಶ್ರೀಗಳು ’ಉಪವಾಸವ್ರತ’ವನ್ನು ಸಾಂಕೇತಿಕವಾಗಿ ತಿಳಿಸಿರಬಹುದು.

 ಶ್ರೀಗಳ ಪ್ರೇರಣೆಯಿಂದಾಗಿ ಅನೇಕರು ’ವ್ರತ’ವನ್ನಾಚರಿಸುತ್ತಿರುವುದು ಸಮಾಧಾನ, ಸಂತೋಷದ ವಿಷಯ. 


ಅಂದಹಾಗೆ ನೀವೂ ’ಉಪವಾಸ’ ಮಾಡುತ್ತೀರಾ ತಾನೆ?!

---------****---------

ಕಾಮೆಂಟ್‌ಗಳಿಲ್ಲ: