ಶುಕ್ರವಾರ, ಮಾರ್ಚ್ 27, 2009

-:ಯುಗಾದಿ:-





ನಮ್ಮ ನಿಮ್ಮ ಜೀವ-ಭಾವಕೊ೦ದು
ಮೇರೆಮೀರಿ ಕಲ್ಪ ತರುವ ಭರವಿದು.



ಮನುಜ ಮನದ ಆಸೆಗಳನು ಹೊಸೆದು
ಬೆಸೆದು ಜೀವಕೊಡುವ ಚೈತ್ರದಿನವಿದು



ವರುಷಕೆಲ್ಲ ಹೊಸತು ಹರುಷವನ್ನು
ಹೊತ್ತುತರುವ ನವ ಶುಭದಿನವಿದು


ವರುಷದಲ್ಲಿ ಸಿಹಿಯು ಇರಲಿ ಕಹಿಯೆ ಬರಲಿ
ಸಮವ ಹ೦ಚಿಕಳೆವ ತಾಳ್ಮೆ ಬಾಳ್ವೆಯಿರಲಿ



ರುಚಿಯಅಡುಗೆ ಜೊತೆಗೆ ನೀತಿಯುಡುಗೆಯಿರಲಿ
ದಿನದಿನಕೂ ಸತತ ರಸದ ಹಸಿರ ಲೇಪವಿರಲಿ



ಕ್ಷಣಕ್ಷಣವೂ ಕಳೆದ ಸಮಯಕೊ೦ದು ಅರ್ಥವಿರಲಿ
ಆತ್ಮತೃಪ್ತಿ ತರುವ ಕಾರ್ಯ ಗುರಿಯ ತಲುಪುತಿರಲಿ



ನಿತ್ಯಸತ್ಯದಿ ನಮಿಪ ಹಿರಿಯರೆಲ್ಲ ಹರಸುತಿರಲಿ
ನಮ್ಮ ನಿಮ್ಮ ಪ್ರೀತಿ ಸದಾ ಹೀಗೆ ಹರಿಯುತಿರಲಿ!












ಬುಧವಾರ, ಮಾರ್ಚ್ 4, 2009

ಅಡುಗೆಮನೆಯಲ್ಲಿ ಕ್ರಾಂತಿ ಮಾಡಿದ "ಮೈಕ್ರೋವೇವ್ ಓವನ್".







(published in Vijay Karnataka on 4th March 09
and ThatsKannada on 10th March 09, click here for links)
http://thatskannada.oneindia.in/literature/articles/2009/0309-microwave-oven-inventor-percy-spencer.htmlhttp://thatskannada.oneindia.in/literature/articles/2009/0309-microwave-oven-kitchen-appliances.html)

ಕೆಲವೇ ವರ್ಷಗಳ ಹಿಂದೆ ಹಳ್ಳಿಗರು ಪಟ್ಟಣಕ್ಕೆ ತಮ್ಮ ಮಕ್ಕಳ ಮನೆಗೆ ಭೇಟಿ ನೀಡಿದಾಗ ಅಡುಗೆಮನೆಯ ಸೌಕರ್ಯಗಳನ್ನು ಮಾತಾಡಿ ಕೊಳ್ಳುತ್ತಿದ್ದರು,"ಇನ್ನು ಮೇಲೆ ಕುರ್ಚಿ ಮೇಲೆ ಕುತುಕೊಂಡ್ ಹಾಗೆ ಊಟ ಮಾಡ್ಸಿ ಬಾಯಿ ತೊಳಸಿ ಸೇವೆ ಮಾಡುವ ಮಿಶನ್ ಗಳನ್ನೂ ಕಂಡು ಹಿಡೀತಾರೇನೋ" ಅವರ ಮಾತಿಗೆ ನಾವು ಅಂದು ’ಹಳ್ಳಿಯವರೆ೦ದು ಕೊ೦ಡು’ ನಕ್ಕರೂ ಇಂದಿನ ವಿಜ್ನ್ಯಾನದ/ತಾಂತ್ರಿಕತೆಯ ಓಟ ನೋಡಿದಾಗ, ಫುಟ್ಬಾಲ್ ಆಡುವ ರೋಬಾಟ್ ಗಳನ್ನು ನೋಡಿದಾಗ ಇಂಥ ಮೆಶೀನ್ ಗಳು ಬರುವ ದಿನಗಳು ದೂರ ಇಲ್ಲವೇನೋ ಅನ್ನಿಸಿಬಿಡುತ್ತದೆ, ಅವರು ಹೇಳಿದ್ದು ನಿಜವೇನೋ ಎ೦ದೆನಿಸುತ್ತದೆ.

ಹೊಸ ತಂತ್ರಜ್ನ್ಯಾನಗಳು ಹೇಗೆ ಅಡುಗೆ ಮನೆಯನ್ನು ಸುಲಭವಾಗಿ ಪ್ರವೇಶಿಸುತ್ತಾ ಇವೆ ನೋಡಿ. Safety valve ತತ್ವ ಉಪಯೋಗಿಸಿಕೊಂಡು ಪ್ರೆಶರ್ ಕುಕ್ಕರ್ ಬಂದಿತು. Stirrer ಮಜ್ಜಿಗೆ ಕಡೆಯುವ ಯಂತ್ರವಾಯಿತು, ಕೈಗಾರಿಕಾ ಓವನ್ ಗಳು ಅಡುಗೆ ಓವನ್/ಗ್ರಿಲ್ ಗಳಾದವು. ಇವೆಲ್ಲ ಕೈಗಾರಿಕಾ ಕ್ಷೇತ್ರದಿಂದ ಅಡುಗೆ ಮನೆಯನ್ನು ಹೊಕ್ಕರೆ, ಮೈಕ್ರೊವೇವ್ ಓವನ್ ಮಾತ್ರ ಅಡುಗೆ ಮನೆಯಿಂದ ಕೈಗಾರಿಕಾ ಕ್ಷೇತ್ರಕ್ಕೆ ಹೋಯಿತೆಂದರೆ ನಂಬುತ್ತೀರ? ಇದು ಆಶ್ಚರ್ಯಕರ ಸತ್ಯ.

1940ರಲ್ಲಿ ಅಮೆರಿಕದ ಪರ್ಸಿ ಸ್ಪೆನ್ಸರ್ ತನ್ನಪಾಡಿಗೆ ಕಾರ್ಖಾನೆಯ ಕಾರ್ಯಗಾರದಲ್ಲಿ ರೆಡಾರ್ ಉಪಕರಣದ ಮೇಲೆ ಏನೋ ಪರೀಕ್ಷೆ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಕಿಸೆಯ ಹತ್ತಿರ ಬಿಸಿಯಾಯಿತು. ಮುಟ್ಟಿನೋಡಿದರೆ ಬಿಸಿಯ ತಾಪಮಾನಕ್ಕೆ ಜೇಬಿನಲ್ಲಿದ್ದ ಚಾಕಲೇಟ್ ಬಾರ್ ಕರಗಿ ಹೋಗಿತ್ತು! ನಂತರ ಚಕಿತನಾಗಿ ಮತ್ತೊಮ್ಮೆ ಸ್ವಲ್ಪ ಜೋಳದ ಕಾಳುಗಳನ್ನು ಹತ್ತಿರ ಇಟ್ಟು ರೆಡಾರ್ ಆನ್ ಮಾಡಿದ. ಕೆಲವೇ ನಿಮಿಷಗಳ ನಂತರ ಜೋಳದ ಕಾಳುಗಳು 'ಪಾಪ್ ಕಾರ್ನ್' ಆಗಿ ಚಟಪಟನೆ ಅಳಕಾಳು ಹುರಿದಂತೆ ಪುಟಿಯ ತೊಡಗಿತು. ಅದರೊಂದಿಗೆ ಪರ್ಸಿಯ ಕಣ್ಣುಗಳೂ ಪ್ರಕಾಶಮಾನವಾಯಿತು.
ಆಕಸ್ಮಿಕವಾಗಿ ಜಗತ್ತಿನ ಪ್ರಪ್ರಥಮ ಮೈಕ್ರೋವೇವ್ ಓವನ್ನನ್ನು ನ್ನು ಕಂಡು ಹಿಡಿದಿದ್ದ!

ಪರ್ಸಿ ಲಿಬ್ಯಾರನ್ ಸ್ಪೆನ್ಸರ್ ಹುಟ್ಟಿದ್ದು 1894ರಲ್ಲಿ ಅಮೆರಿಕದ ಮೇನ್ ಎಂಬ ಪ್ರಾಂತ್ಯದ ಗ್ರಾಮೀಣ ಪ್ರದೇಶವೊಂದರಲ್ಲಿ. ಮೂರು ವರ್ಷದವನಾಗಿದ್ದಾಗಲೇ ತಂದೆ ಸ್ವರ್ಗಸ್ತರಾದರು, ತಾಯಿ ಮಗುವನ್ನು ಹತ್ತಿರದ ಸಂಬಂಧಿಯೊಬ್ಬರಲ್ಲಿ ಪೋಷಣೆಗೆಂದು ಬಿಟ್ಟು ಬೇರೆಲ್ಲೋ ಹೋದಳು, ಪಾಪ, ಪರ್ಸಿ ಅನಾಥನಾಗಿಹೋದ. ಮತ್ತೈದು ವರ್ಷಕ್ಕೆ ಸಾಕು ತಂದೆಯೂ ತೀರಿ ಹೋದರು. ಸರಿಯಾಗಿ ಹೈಸ್ಕೂಲ್ ಕೂಡ ಓದಲಾಗಲಿಲ್ಲ. ಕಟ್ಟಿಗೆ ಕಡಿಯುವುದು, ಚರ್ಮಹದ ಮಾಡುವುದು ಕಲಿತು ಕೊಂಡ.

ಅದರೇನು ಮನುಷ್ಯನಿಗೆ ಛಲವೊ೦ದಿದ್ದರೆ ಏನು ಬೇಕಾದರೂ ಮಾಡಬಲ್ಲನಂತೆ. ಛಲಹೊತ್ತ ಹನ್ನೆರಡು ವರ್ಷದ ಹುಡುಗ ಹೊಟ್ಟೆಪಾಡಿಗಾಗಿ ಹತ್ತಿರದ ಗಿರಣಿಯೋ೦ದರಲ್ಲಿ ಕೆಲಸಕ್ಕೆ ಸೇರಿಕೊಂಡ. ಆರುವರ್ಷ ಅಲ್ಲಿ ಇಲ್ಲಿ ದುಡಿದ ನಂತರ ಹದಿನೆಂಟು ವರ್ಷಕ್ಕೆ ನೌಕಾದಳದಲ್ಲಿ ಅಪ್ರೆಂಟಿಸ್ ಗೆ ಸೇರಿಕೊಂಡು Radio Telegraphy ವಿಭಾಗದಲ್ಲಿ ತರಬೇತಿ ತೆಗೆದುಕೊಂಡ. ನಂತರ ಇನ್ನೊಂದು ರೆಡಾರ್ ಬಿಡಿಭಾಗ ತಯಾರು ಮಾಡುವ ಕಂಪೆನಿಗೆ ಸೇರಿಕೊಂಡ.
ಕೆಲ ಸಮಯದ ನಂತರ 'ರೇಥಿಯಾನ್' ಎಂಬ ರೆಡಾರ್ ಉಪಕರಣ ತಯಾರಿಕಾ ಸಂಸ್ಥೆಗೆ ಸೇರಿಕೊಂಡಿದ್ದಾಯಿತು, ಆಗ ವಯಸ್ಸು 26, ನಮ್ಮ ಭಗವದ್ಗೀತೆಯ ತತ್ವವಾದ "ಕರ್ಮಣ್ಯೇವಾದಿಕಾರಸ್ತೇ ಮಾಫಲೇಶು ಕದಾಚನಾ..." ಫಲಾಫಲಗಳನ್ನು ಅಪೇಕ್ಷಿಸದೆ ಕೆಲಸವನ್ನು ಶ್ರದ್ದೆಯಿಂದ ಪಾಲಿಸುತ್ತಾ ಸತತ ಪರಿಶ್ರಮದ ಜೊತೆಯಲ್ಲಿ ಬುದ್ದಿವಂತಿಕೆ ಉಪಯೋಗಿಸಿ ಕೆಲವು ವರ್ಷಗಳ ನಂತರ ಅಪ್ರೆಂಟಿಸ್ ಮಟ್ಟದ ಹುಡುಗ 'ಎಂಜಿನಿಯರ್' ಆದರು.

ಆದಾಗ್ಯೂ "ಕಷ್ಟಪಟ್ಟರೆ ಫಲವುಂಟು" ಎಂಬ ಹಿರಿಯರ ನಾಣ್ಣುಡಿಯಂತೆ ಕಷ್ಟ ಪಟ್ಟಿದ್ದು ಫಲಕಾರಿಯಾಯಿತು. ಇಂದು ನಾವು ನೋಡುವ ಟಿ ವಿ ಪರದೆಯ 'tube' ಕಂಡು ಹಿಡಿಯಲು ಇವರು ಅಂದು ಮಾಡಿದ ಪ್ರಯೋಗಗಳು ಸಹಕಾರಿಯಾಗಿದ್ದವು. ಪ್ರಥಮ ವಿಶ್ವ ಯುದ್ಧದಲ್ಲಿ ರೇಡಿಯೋ ಟ್ರಾನ್ಸ್ಮೀಟರ್ ನ ಉಪಯೋಗ ಮತ್ತು ದುರಸ್ತಿಗೆ ಅಮೆರಿಕದ ಸೇನೆ ಇವರ ಸಹಾಯ ಪಡೆಯುತ್ತಿದ್ದಿತು. ರೆಡಾರ್ ನ ಹೃದಯಭಾಗವಾದ 'ಮ್ಯಾಗ್ನಟ್ರಾನ್' ಉಪಕರಣವನ್ನು ದಿನಕ್ಕೆ 15 ತಯಾರು ಮಾಡಲು ಹೆಣಗಾಡುತ್ತಿದ್ದ ಒ೦ದು ಸಂಸ್ಥೆ ಇವರು ಅಭಿವೃದ್ದಿ ಪಡಿಸಿದ ತಂತ್ರಜ್ನ್ಯಾನದಿಂದಾಗಿ ಕ್ರಮೇಣ ದಿನಕ್ಕೆ 2600 ಸಂಖ್ಯೆಗಳನ್ನು ತಲುಪಿದರು! ಇವರ ಈ ತಂತ್ರಜ್ನ್ಯಾನವನ್ನು ಮೋಟರ್ ಮತ್ತು ಎಲೆಕ್ಟ್ರಿಕ್ ಜನರೇಟರ್ ತಯಾರಿಕೆಯಲ್ಲಿ ಇಂದಿಗೂ ಬಳಸಿಕೊಳ್ಳುತ್ತಿದ್ದಾರೆ.

ಇದೆಲ್ಲಕ್ಕೆ ಕಳಶವಿಟ್ಟಂತೆ 1940ರ ಸುಮಾರಿಗೆ ಕಂಡುಹಿಡಿದ ಅಸಮಾನ್ಯ 'ಮೈಕ್ರೋವೇವ್' ಉಪಕರಣ ವಿಶ್ವವೇ ಬೆರಗಾಗುವಂತೆ ಮಾಡಿತು. ಮಾನವನ ಅಡುಗೆ ವಿಧಾನದ ದಿಕ್ಕನ್ನೇ ಬದಲಾಯಿಸಿತು, ವಾಣಿಜ್ಯ, ಕೈಗರಿಕೊದ್ಯಮದಲ್ಲೂ ಇದು ಉಪಯೋಗವಾಯಿತು. ಕೈಗಾರಿಕೆಯಲ್ಲಿ ಹಲವು ವಸ್ತುಗಳನ್ನು ಒಣಗಿಸಲು ಇದನ್ನು ಅತ್ಯ೦ತ ಸೂಕ್ತ ವ್ಯವಸ್ಥೆಯನ್ನಾಗಿ ರೂಪಿಸಿದ್ದಾರೆ.

ಇವರದು ಮುಂದಿನದೆಲ್ಲ ಯಶೋಗಾಥೆ. ಹಣ, ಪ್ರಶಸ್ತಿ, ಸನ್ಮಾನ, ಎಲ್ಲವೂ ಅರಸಿಕೊ೦ಡು ಬಂದವು. ವಿಶ್ವ ಪ್ರಸಿದ್ಧ ಮೆಸ್ಯಾಚುಸೆಟ್ಸ್ ವಿಶ್ವವಿದ್ಯಾಲಯ 'ಡಾಕ್ಟರ್ ಆಫ್ ಸೈನ್ಸ್' ಪ್ರದಾನ ಮಾಡಿತು. ಮೂರುವರ್ಷಕ್ಕೆ ದಿಕ್ಕಿಲ್ಲದೆ ಅನಾಥನಾಗಿದ್ದ ಪರ್ಸಿ ಈಗ ಎಲ್ಲರಿಗೂ ಬೇಕಾದ 'ಡಾ. ಪರ್ಸಿ ಲಿಬ್ಯಾರನ್ ಸ್ಪೆನ್ಸರ್' ಆಗಿದ್ದರು! ಡಾ.ಪರ್ಸಿ ಸ್ಪೆನ್ಸರ್ 1970ರಲ್ಲಿ ಪರಲೋಕ ಯಾತ್ರೆ ಮಾಡುವ ಮೊದಲು ಸುಮಾರು 225 ಕ್ಕೂ ಹೆಚ್ಚು ಪೇಟೆಂಟ್ ಗಳ ಅಧಿಪತಿಯಗಿದ್ದರು. 1999ರಲ್ಲಿ ಇವರ ಗೌರವಾರ್ಥವಾಗಿ 'hall of fame' ನಲ್ಲಿ ಮತ್ತೊಬ್ಬ ಶ್ರೇಷ್ಟ ಸಂಶೋಧಕ ಥಾಮಸ್ ಅಲ್ವ ಎಡಿಸನ್ ಸಾಲಿಗೆ ಇವರನ್ನೂ ಸೇರಿಸಲಾಗಿದೆ.

ಹಾಗಾದರೆ ಇವರು ಕಂಡು ಹಿಡಿದ ಮೈಕ್ರೋವೇವ್ ಓವನ್ ಅಷ್ಟೊಂದು ಉಪಯೋಗಕಾರಿಯೇ?

ನೀವು ಇಂದು ನಗರ ಪ್ರದೇಶದ ಯಾವುದೇ ಮನೆಗೆ ಹೋಗಿ ಅಡುಗೆ ಮನೆಯ ಲೇಟೆಸ್ಟ್ ಉಪಕರಣ ಯಾವುದು ಅಂತ ನೋಡಿದರೆ ಅಲ್ಲಿ ಇರುತ್ತದೆ ಮೈಕ್ರೋವೇವ್ ಓವೆನ್. ಅದರರ್ಥ ಹೆಚ್ಚು ಮನೆಗಳಲ್ಲಿ ಇದು ಪರಿಚಿತ. ಹಳ್ಳಿಗಳಲ್ಲೂ ಅಲ್ಲಲ್ಲಿ ಕಾಣಬಹುದು. ಪಾಶ್ಚಾತ್ಯ ದೇಶಗಳಲ್ಲಿ ಇದು ಇಲ್ಲದೆ ಸಂಪೂರ್ಣ ಅಡುಗೆ ಮನೆಯೇ ಅಲ್ಲ. 'ಮೈಕ್ರೋವೇವ್' ಅಂದರೆ ಸೂಕ್ಷ್ಮ ತರಂಗ ಎಂದರ್ಥ.

'ಮ್ಯಾಗ್ನಟ್ರಾನ' ಎಂಬ ಉಪಕರಣದಿಂದ ಹೊರಡುವ ಈ ವಿದ್ಯುದಯಸ್ಕಂತೀಯ ಅಲೆಗಳು ಆಹಾರ ವಸ್ತುಗಳನ್ನ ಮುಖ್ಯವಾಗಿ, ಕೊಬ್ಬು/ ಸಕ್ಕರೆ/ನೀರಿನ ಅಂಶ ಇರುವ ಯಾವುದೇ ವಸ್ತು ಅಥವಾ ಆಹಾರವನ್ನು ಅತಿ ವೇಗವಾಗಿ ಬಿಸಿಮಾಡುವ ಸಾಮರ್ಥ್ಯ ಹೊಂದಿವೆ.ಇವು ರೇಡಿಯೋ ತರಂಗಗಳು ಮತ್ತು ಕ್ಷ-ಕಿರಣಗಳ ಮದ್ಯೆ ಇರುವ ತರಂಗಾ೦ತರವನ್ನು ಹೊಂದಿರುತ್ತವೆ. ಅದಕ್ಕೇ ಮೈಕ್ರೋವೇವ್ ಕೆಲಸಮಾಡುತ್ತಿರುವಾಗ ಇದರಹತ್ತಿರ ಯಾವುದೇ ಟ್ರಾನ್ಸಿಸ್ಟರ್, ಮೊಬೈಲ್ ಫೋನ್, ಅಥವಾ ಟಿ.ವಿ ಮುಂತಾದುವುಗಳು ತೊಂದರೆಗೊಳಗಾಗುತ್ತದೆ (ಗೊರ್ರ್... ಎನ್ನುತದೆ). ಇವು 0.3 ಗಿಗಾಹರ್ಟ್ಜ್ ನಿಂದ 300 ಗಿಗಾಹರ್ಟ್ಜ್ ವರೆಗಿನ ತರಂಗಾಂತರಗಳಲ್ಲಿರುತ್ತವೆ.

ಬಿಸಿ ಮಾಡುವ ವೇಗ ಎಷ್ಟು ಜಾಸ್ತಿಯಗಿರುತ್ತದೆ ಅಂದರೆ ಒಂದು ಲೋಟ ನೀರು ಕುದಿಯುವಂತೆ ಮಾಡಲು ಒಂದುವರೆ ನಿಮಿಷ ಸಾಕು. ನಾಲ್ಕು ಲೋಟ ಅಕ್ಕಿ ಇಟ್ಟರೆ ಎಂಟು ನಿಮಿಷಕ್ಕೆ ಅನ್ನ ರೆಡಿ! ಸ್ವಲ್ಪ ಎಣ್ಣೆಸವರಿದ ಹಪ್ಪಳ 30 ಸೆಕೆಂಡಿಗೆ ಕರಿದ ರೂಪದಲ್ಲಿ ತಯಾರು. ಗೇರುಬೀಜ, ಶೇ೦ಗಾವನ್ನು 60 ಸೆಕೆಂಡಿಗೆ ಹುರಿಯ ಬಹುದು. ಹಾಗ೦ತ ರುಚಿಯೇನೂ ಬದಲಾವಣೆ ಆಗುವುದಿಲ್ಲ. ಇದರಲ್ಲಿ ಎಲ್ಲಾ ತರಹದ ತರಕಾರಿಯಿಂದ ಹಿಡಿದು, ಕಾಳುಗಳು, ಮೀನು-ಮಾಂಸ ಎಲ್ಲವನ್ನು ಹದವಾಗಿ ಬೇಯಿಸಬಹುದು. ಬೇಯುವ/ಬಿಸಿಯಾಗುವ ಆಳ ಒಂದುವರೆ ಇಂಚಿನಷ್ಟಾಗಿರುತ್ತದೆ. ಹಾಗಾಗಿ ದಪ್ಪ ಇರುವ ಆಹಾರ ಪದಾರ್ಥ (ಉದಾ:ಮಾಂಸ) ವನ್ನು ಮಗುಚಿ ಹಾಕಿ ಬೇಯಿಸಬಹುದು.

ಹೊರಗಿನಿಂದ ನೋಡುವುದಕ್ಕೆ ಒಂದು ಆಯತಾಕಾರದ ಪ್ಲಾಸ್ಟಿಕ್ ಪೆಟ್ಟಿಗೆಯ೦ತೆ ಕಾಣುವ ಇದು ಹೃದಯ ಭಾಗದಲ್ಲಿ 'ಮ್ಯಾಗ್ನಟ್ರಾನ್' ಎಂಬ ಉಪಕರಣವನ್ನು ಹುದುಗಿಸಿಕೊಂದಿರುತ್ತದೆ. ಒಳಗಡೆ ಒಂದು ತಿರುಗು ಮಣೆಯಿದ್ದು ಆಹಾರ ಪದಾರ್ಥ ಎಲ್ಲಾ ಕಡೆಯೂ ಸಮಾನವಾಗಿ ಬೇಯುವಂತೆ ನೋಡಿಕೊಳ್ಳುತ್ತದೆ. ಇನ್ನು ಉಪಯೋಗಿಸುವವರಿಗೆ ಅನುಕೂಲವಾಗಲೆಂದು ಹೊರ ಮೇಲ್ಮೈನಲ್ಲಿ ಅಡುಗೆಯ ಅಗತ್ಯಕ್ಕೆ ತಕ್ಕ ಒತ್ತು ಗು೦ಡಿಗಳಿರುತ್ತವೆ. . ಅದನ್ನು ಒಂದೆರಡು ಬಾರಿ ನೋಡಿಕೊಂಡರೆ ಉಪಯೋಗಿಸುವುದು ಸುಲಿದುಕೊಟ್ಟ ಬಾಳೆಹಣ್ಣು ತಿಂದಂತೆ.

ಉರಿಯ ಹೊತ್ತಿಸಲು ಗಾಳಿ ಊದೊದು ಬೇಡ, ಮೈಕೈಗೆ ಮಸಿ ಇಲ್ಲ, ಸೀಮೆ ಎಣ್ಣೆಯ ವಾಸನೆ ಇಲ್ಲ, ಕರೆಂಟ್ ಹೊಡೆಯುವುದಿಲ್ಲ, ಸಂಪೂರ್ಣ ಸ್ವಚ್ಚತೆ ಇದೆ, ಅಡುಗೆ ಮಾಡಲು ಹೆಚ್ಚು ಸಮಯವಂತೂ ಬೇಡವೇ ಬೇಡ. ಇದಕ್ಕಿರುವ ಒಂದೇ ಬಾಗಿಲನ್ನು ಮುಚ್ಚದೆ 'ಆನ್' ಮಾಡಿದರೆ ಕೆಲಸಮಾಡುವುದಿಲ್ಲ, ಹಾಗಾಗಿ "ಒಳಗೆ ಕೈ ಹಾಕಿ ಕೊಂಡು ಅಪಾಯವಾಗಿಬಿಡುತ್ತದೆ" ಎಂಬ ಆತಂಕ ಇಲ್ಲ.

ಇಂಥದ್ದೊಂದು ಅಡುಗೆಯೊಲೆ ಯಾರಿಗೆ ಬೇಡ?

ಹಾಂ, ಇಲೆಕ್ಟ್ರಿಕ್ ಕರೆಂಟ್ ಒಂದು ಬೇಕು, ಆದರೆ ಅದರ ಖರ್ಚೂ ಕಡಿಮೆ. ಇದರಲ್ಲಿ ಇಲೆಕ್ಟ್ರಿಕ್ ಸ್ಟೋವಿನ ಹಾಗೆ ಹೆಚ್ಚು ಬಿಸಿಯಾಗಿ ವೇಸ್ಟ್ ಆಗೋದಿಲ್ಲ ಮತ್ತು ಕಾಯ್ಲ್ ಬಿಸಿ ಆಗುವವರೆಗೆ ಕಾಯೋದು ಬೇಡ. ಆದ್ದರಿಂದ ಇದರಲ್ಲಿ ನಿಮಗೆ ಉಳಿತಾಯ ಆಗುತ್ತದೆ. ಮನೆಯಲ್ಲಿ ವಿದ್ಯುತ್ ಸಿಗುವಕಡೆ ಎಲ್ಲಿ ಬೇಕಾದರೂ ಈ 'ಪೋರ್ಟಬಲ್ ಒಲೆ' ಯನ್ನ ತೆಗೆದುಕೊಂಡು ಹೋಗಬಹುದು. ಒಂದು ಕಾಲದಲ್ಲಿ 350 ಲೀಟರ್ ಫ್ರಿಡ್ಜ್ ನಷ್ಟು ಭಾರವಿದ್ದ ಈ 'ಒಲೆ' ಈಗ ಬರೀ ಮೂರ್ನಾಲ್ಕು ಕೆಜಿ ಭಾರವಿರುವಂತೆ ವಿನ್ಯಾಸ ಮಾಡಿದ್ದಾರೆ. ಬಾಗಿಲು ಪಾರದರ್ಶಕವಾಗಿರುವ೦ತೆ ಮಾಡಿ ಒಳಗೆ ಏನಾಗುತ್ತಿದೆ ಎ೦ದು ನೋಡಬಹುದು.
ಇಷ್ಟೆಲ್ಲಾ ಅನುಕೂಲತೆ ಇರುವುದರಿ೦ದಲೇ ಇದು ಅಮೆರಿಕದಲ್ಲಿ ಅಡುಗೆ ಮಾಡುವ ರೀತಿಯಲ್ಲಿ ಕ್ರಾಂತಿ ಮಾಡಿದ್ದು. ಈ ಎಲ್ಲಾ ಕಾರಣಗಳಿ೦ದ ’ಮೈಕ್ರೊ ವೇವ್ ಓವನ್’ ಗೃಹಿಣಿಯರಿಗೆ ಅಚ್ಚುಮೆಚ್ಚು.
ಪಾಶ್ಚಾತ್ಯ ದೇಶಗಳಲ್ಲಿ 'ಮೈಕ್ರೋವೇವ್ ಪಾಪ್ ಕಾರ್ನ್' ತರಹ ಇದಕ್ಕೆಂದೇ ಹಲವು ಆಹಾರ ಪದಾರ್ಥಗಳನ್ನು ವಿನ್ಯಾಸ ಮಾಡಿದ್ದಾರೆ. ಭಾರತದಲ್ಲೂ ನಗರ ಪ್ರದೇಶದಲ್ಲಿ ಈತರಹದ Ready food ಬಹುತೇಕ ಅ೦ಗಡಿಗಳಲ್ಲಿ ದೊರೆಯುತ್ತವೆ.

ಒಂದು ಸೂಚನೆ: ಯಾವುದೇ ಕಾರಣಕ್ಕಾಗೂ ಲೋಹದ (ಉದಾ:ಸ್ಟೀಲ್) ಪಾತ್ರೆಗಳನ್ನು ಉಪಯೋಗಿಸುವಂತಿಲ್ಲ. ಇದಕ್ಕೆಂದೇ ತಯಾರಿಸಿದ ಪ್ಲಾಸ್ಟಿಕ್, ಗಾಜು ಅಥವಾ ಪಿಂಗಾಣಿ ಪಾತ್ರೆಗಳನ್ನು ಉಪಯೋಗಿಸಬೇಕು. ಹಾಗಾಗಿ ನೀವು ಖರೀದಿಸುವಾಗ ಈ ಕೆಲವು ವಿಷೇಶ ವಿನ್ಯಾಸಗೊ೦ಡ ಪಾತ್ರೆಗಳನ್ನೂ ಜೊತೆಗೆ ತ೦ದರೆ ಒಳಿತು.

ಏನು....? ಇದರಲ್ಲಿ ಆಹಾರ ತಯಾರಿಸುವುದು ಅಪಾಯ ಎಂದಿರಾ? ಅಮೆರಿಕದ 'ಆಹಾರ ಮತ್ತು ಔಷಧ ಪ್ರಾಧಿಕಾರ' ಹೇಳುವಂತೆ ಮೈಕ್ರೊವೇವನ್ನು ಆಹಾರ ಸಿದ್ದಪಡಿಸಲು, ಬಿಸಿಮಾಡಲು, ಒಣಗಿಸಲು ಉಪಯೋಗಿಸುವುದರಿಂದ ಅಪಯವೇನೂ ಇಲ್ಲ, ಕ್ಷ-ಕಿರಣ ಮತ್ತು ಅತಿ-ನೇರಳೆ ಕಿರಣಗಳಂತೆ ಯಾವ ಅಪಾಯಕಾರಿ ವಿಕಿರಣಗಳೂ ಇದರಿಂದ ಪ್ರಸರಣಗೊಳ್ಳುವುದಿಲ್ಲ. ಬೇಗನೆ ಬಿಸಿಯಗುವುದರಿಂದ ಪ್ರೋಟೀನಿನ ಅಂಶ ಸ್ವಲ್ಪ ಕಡಿಮೆಯಾಗಬಹುದು ಆದರೆ ಇದರಿಂದಾಗುವ ಉಪಯೋಗಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ ಎನ್ನುತ್ತಾರೆ. ಇದನ್ನು ದಶಕಗಳಿ೦ದ ಉಪಯೋಗಿಸಿದವರೂ ಇದು ’ಅತ್ಯ೦ತ ಸುರಕ್ಷಿತ’ ಎನ್ನುತ್ತರೆ.

ಈ ಅಡುಗೆಯೊಲೆ ಈಗಂತೂ ಭಾರತಾದ್ಯಂತ ಎಲ್ಲ ನಗರ/ಪಟ್ಟಣಗಳಲ್ಲೂ ಸಿಗುತ್ತದೆ. ಸುಮಾರು ಎರೆಡು ಸಾವಿರ ರುಪಾಯಿಯಿಂದ ಹಿಡಿದು ಹತ್ತು ಸಾವಿರ ರೂಪಾಯಿಗಳವರೆಗೂ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ವಿವಿಧ ಸಂಸ್ಥೆಯ ಮುದ್ರೆಯೊಂದಿಗೆ ದೊರಕುತ್ತದೆ. ಯಜಮಾನರೆ, ನಿಮ್ಮ ಗೃಹಿಣಿ ಮೈಕ್ರೋವೇವ್ ಓವನ್ನನ್ನು ಅವರ 'ಡಿಮ್ಯಾ೦ಡಿನ' ಪಟ್ಟಿಗೆ ಸೇರಿಸಿದರೆ ನನ್ನನ್ನ ಶಪಿಸಬೇಡಿ!