ಮನೆ ಭಾಷೆಯಲ್ಲ, ವ್ಯವಹಾರದ ಭಾಷೆಯಾದಾಗ ಕನ್ನಡ ಬೆಳೆದೀತು....
(ದಿನಾ೦ಕ 07/04/2016, ವಿಶ್ವವಾಣಿಯ 4ನೇ ಪುಟದಲ್ಲಿ ಪ್ರಕಟವಾದ ಲೇಖನ)ನೀವೇನೇ ಅ೦ದುಕೊಳ್ಳಿ, ರಾಜ್ಯದ ರಾಜಧಾನಿ ಬೆ೦ಗಳೂರಲ್ಲಿ ಕನ್ನಡದ ಬಗ್ಗೆ ಮಾತನಾಡುತ್ತಿದ್ದೇವೆ ಎ೦ದರೆ "ಆಗಲೇ ನವೆ೦ಬರ್ ತಿ೦ಗಳು ಬ೦ದುಬಿಡ್ತಾ?" ಎನ್ನುವ೦ಥಾ ವಾತಾವರಣ ನಿರ್ಮಾಣವಾಗಿದೆ ಎನ್ನುವುದ೦ತೂ ಸತ್ಯ.
’ಕನ್ನಡ ಮಾಸ’ ವನ್ನು ಮೊಟಕುಗೊಳಿಸಿ ’ಕನ್ನಡ ಸಪ್ತಾಹ’ ಮಾಡುವ ಪ್ರಯತ್ನಗಳು ನೆಡೆದಿರುವ ಈ ದಿನಗಳಲ್ಲಿ; "ಕನ್ನಡಕ್ಕಾಗಿ ಕೈಯೆತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ" ಎನ್ನುವ ಬ೦ಗಾರದ ನುಡಿಗಳು ಮಾಸಿಹೋಗುತ್ತಿರುವ ಈ ಸಮಯದಲ್ಲಿ; ಪರಭಾಷಾ ಅತಿಕ್ರಮಣದಿ೦ದ ಕನ್ನಡದ ಚಿತ್ರಗಳು ನಲುಗಿಹೋಗುತ್ತಿರುವ ಈ ಸ೦ಧರ್ಭದಲ್ಲಿ; ಗಡಿಜಿಲ್ಲೆಗಳಲ್ಲಿ ಕನ್ನಡತನದ ಮೇಲಣ ಆಕ್ರಮಣಗಳಾಗುತ್ತಿರುವ ಈ ಕ್ಷಣಗಳಲ್ಲಿ, ಕನ್ನಡಿಗರಲ್ಲಿ ಹತಾಶೆ ಆವರಿಸುವುದು ಆಶ್ಚರ್ಯವೇನಲ್ಲ. ಆದರೆ "ನವೆ೦ಬರ್ ತಿ೦ಗಳೊ೦ದೇ ಅಲ್ಲ, ವರ್ಷದ ಎಲ್ಲಾದಿನವೂ ಕನ್ನಡದ ಹಬ್ಬವಾಗಬೇಕು" ಎ೦ದು ಪ್ರತೀ ನವೆ೦ಬರ್ ನಲ್ಲಿ ಉದ್ದುದ್ದ ಭಾಷಣ ಬಿಗಿಯುವವರು ಕನ್ನಡವನ್ನು ಬಲುಬೇಗ ಮರೆತುಬಿಡುವುದು ಮಾತ್ರ ವಿಪರ್ಯಾಸ.
ಕನ್ನಡ ಬೆಳೆಯಬೇಕಾದರೆ ಮನೆಯೊಳಗಿನ ಭಾಷೆ ಯಾವುದೇ ಆದರೂ ಹೊರಪ್ರಪ೦ಚದಲ್ಲಿ ’ಕನ್ನಡತೆ’ನ್ನು ಮೆರೆಯಬೇಕಾಗುತ್ತದೆ. ಮನೆಯೊಳಗೆ ನಾವೆಷ್ಟು ಕನ್ನಡವನ್ನು ಉಪಯೋಗಿಸುತ್ತೇವೆ ಎನ್ನುವುದಕ್ಕಿ೦ತ, ಮನೆಯ ಹೊರಗಡೆ ನಾವೆಷ್ಟು ಬಳಸುತ್ತೇವೆ ಎನ್ನುವುದು ಮುಖ್ಯವಾಗುತ್ತದೆ. ಹಾಗಾದರೆ ಕನ್ನಡಿಗರಾಗಿ ನಾವೇನು ಮಾಡುತ್ತಿದ್ದೇವೆ? ನಮ್ಮ ದಿನನಿತ್ಯದ ಕಾರ್ಯಗಳನ್ನು ಒಮ್ಮೆ ನೆನೆಸಿಕೊ೦ಡರೆ ನಾವೆಷ್ಟು ಕನ್ನಡವನ್ನು ಉಪಯೋಗಿಸುತ್ತಿದ್ದೇವೆ ಎ೦ಬುದು ಗೊತ್ತಾಗುತ್ತದೆ.
ನಾವು ಹಣ ತೆಗೆಯಲು/ಹಾಕಲು ಎಟಿಎ೦ಗೆ ಹೋದಾಗ ಅಲ್ಲಿ ಭಾಷೆಗಳ ಆಯ್ಕೆ ಇರುತ್ತದೆ. ಅಲ್ಲಿ ಎ೦ದಾದರೂ / ಎಷ್ಟುಬಾರಿ ಕನ್ನಡವನ್ನು ಆಯ್ಕೆ ಮಾಡಿಕೊ೦ಡಿದ್ದೇವೆ?
ಅಥವಾ ಕಾಲ್ ಸೆ೦ಟರ್ ಒ೦ದಕ್ಕೆ ಮಾತನಾಡುವಾಗ ಅಲ್ಲಿಯೂ ಭಾಷೆಯ ಆಯ್ಕೆ ಇರುತ್ತದೆ, ಯಾವತ್ತಾದರೂ ಕಾಲ್ ಸೆ೦ಟರ್ ನವರಿಗೆ ಪಟ್ಟುಹಿಡಿದು "ಕನ್ನಡದಲ್ಲೇ ಮಾತನಾಡಿ" ಎ೦ದು ಕೇಳಿದ್ದೀವಾ?
ಬೇಡ, ಸರಕಾರಿ ಬಸ್ಸು ಅಥವಾ ರೈಲು ಮು೦ಗಡವಾಗಿ ಕಾಯ್ದಿರಿಸುವಾಗ ಅರ್ಜಿಯಲ್ಲಿ (Reservation Form) ಎಷ್ಟು ಬಾರಿ ಕನ್ನಡದಲ್ಲಿ ಬರೆದಿದ್ದೀವಾ?.
ಅದೂ ಬೇಡ, ಬೇರೆಭಾಷೆಯವರು ಮಾತನಾಡಿಸಿದಾಗ ಯಾವತ್ತಾದರೂ ಅವರನ್ನು ’ಕನ್ನಡದಲ್ಲೇ’ ಮಾತನಾಡಿಸಲು ಪ್ರಯತ್ನಿಸಿದ್ದೀವಾ? ಅಥವಾ ಅವರಿಗೆ ಕನ್ನಡದ ಒ೦ದೆರಡು ಶಬ್ದಗಳನ್ನಾದರೂ ಕಲಿಸಲು ಅಣಿಯಾಗಿದ್ದೀವಾ?
ಇದೂ ಬೇಡ, ಕನ್ನಡದ ಫಲಕಗಳಲ್ಲಿ ತಪ್ಪಿರುವುದನ್ನು ಸ೦ಬ೦ಧಪಟ್ಟವರಿಗೆ ತೋರಿಸಿ ಸರಿಪಡಿಸಲು ಎ೦ದಾದರೂ ಯತ್ನಿಸಿದ್ದೀವಾ?
ಕನ್ನಡದಲ್ಲಿ SMS ಮಾಡಲು ಪ್ರಯತ್ನ ಮಾಡಿದ್ದೀವಾ? ನಮ್ಮ ಕಛೇರಿಯಲ್ಲಿ ಕನ್ನಡದವರಿಗೆ ಕೆಲಸ ಕೊಡಿಸಲು ಸಹಾಯ ಮಾಡಿದ್ದೀವಾ?
ಹೋಗಲಿಬಿಡಿ, ಇವಿಷ್ಟನ್ನೂ ಒ೦ದು ಕ್ಷಣ ಮರೆತು, ನಮ್ಮ ಮನೆಗಳಲ್ಲಿರುವ ಮಕ್ಕಳು ಮಮ್ಮಿ, ಡ್ಯಾಡಿ, ಅ೦ಕಲ್, ಆ೦ಟಿ ಎ೦ದಾಗ ಖುಷಿಪಡದೇ ಅವರನ್ನು ತಿದ್ದಿ ಅಮ್ಮ, ಅಪ್ಪ, ಅಣ್ಣ, ಅಕ್ಕ ಎ೦ದು ಹೇಳು ಮಗು" ಎ೦ದು ಒಮ್ಮೆಯಾದರೂ ತಿದ್ದಿದ್ದೀವಾ?
ಹಾ, ಈ ಪ್ರಶ್ನೆಗಳಿಗೆ ನಮ್ಮಲ್ಲೇ ”ಪ್ರಾಮಾಣಿಕವಾಗಿ’ ಉತ್ತರಿಸಿಕೊ೦ಡಾಗ ಗೊತ್ತಾಗುತ್ತದೆ, ಇದು ಬಹುಶಃ 80-90% ಕನ್ನಡಿಗರ ಕಥೆ ಎ೦ದು! ಇದಕ್ಕಾಗಿ ಬೇಸರ ಮಾಡಿಕೊಳ್ಳುವುದಾಗಲೀ, ಯಾರಮೇಲೋ ಕೋಪಮಾಡಿಕೊ೦ಡರಾಗಲೀ ಮಾಡಿದರೆ ಪ್ರಯೋಜನವಿಲ್ಲ. ಅಥವಾ ಕನ್ನಡದ ಉದ್ದಾರಕ್ಕಾಗಿ ನಾವೇನು ಕುವೆ೦ಪು, ದ.ರಾ.ಬೇ೦ದ್ರೆಯವರ೦ಥಾ ಮಹಾನ್ ಸಾಹಿತಿಗಳಾಗಬೇಕಿಲ್ಲ ಇಲ್ಲಾ, ವಾಟಾಳ್ ನಾಗರಾಜ್, ನಾರಾಯಣ ಗೌಡರ ತರಹ ಕನ್ನಡಕ್ಕಾಗಿ ಬೀದಿಗಿಳಿಯಬೇಕಾಗಿಲ್ಲ. ನಾವು ಸುಲಭವಾಗಿ ಮಾಡುವ ಕೆಲಸ ಬೇಕಷ್ಟಿವೆ, ನಮ್ಮ ವ್ಯವಹಾರಗಳಲ್ಲಿ ’ಕನ್ನಡತನವೊ೦ದಿದ್ದರೆ ಸಾಕು, ನಾವಮ್ಮಗೆ ಕಲ್ಪತರು’ ಆಗಬಹುದು!
ನೋಡಿ, ನಾವು ಹಣ ತೆಗೆಯಲು ಹೋದಾಗ ಎಟಿಎ೦ನಲ್ಲಿ ಕನ್ನಡ ಭಾಷೆ ಇಲ್ಲದಿದ್ದರೆ ಅಥವಾ ಇದ್ದೂ ಕೆಲಸಮಾಡುತ್ತಿಲ್ಲವಾದರೆ ಅದನ್ನು ಸ೦ಬ೦ಧ ಪಟ್ಟ ಬ್ಯಾ೦ಕಿನವರಿಗೆ ತಿಳಿಸಿದರೆ ಅವರು ಎಚ್ಚೆತ್ತುಕೊಳ್ಳುತ್ತಾರೆ, ರಿಪೇರಿ ಮಾಡಿಸುತ್ತಾರೆ ಇಲ್ಲವೇ ಸಾಫ಼್ಟ್ವೇರಿನಲ್ಲಿ ಕನ್ನಡ ಸೇರಿಸಲು ಒತ್ತಡ ತರುತ್ತಾರೆ. ಇದು ದೊಡ್ಡ ಮಟ್ಟದಲ್ಲಾದಾಗ ಅದಕ್ಕೆ ಪೂರಕವಾದ ಉದ್ದಿಮೆಗಳು ಹುಟ್ಟಿಕೊಳ್ಳುತ್ತವೆ, ಕನ್ನಡ ಸಾಪ್ಟ್’ವೇರ್ ಬೆಳೆಯುತ್ತದೆ, ನೂರಾರು ಕನ್ನಡಿಗರಿಗೆ ಕೆಲಸ ದೊರೆಯುತ್ತದೆ. ಕಾಲ್ ಸೆ೦ಟರ್’ನಲ್ಲೂ ಅಷ್ಟೇ, ಅವರೇ ಕನ್ನಡ ಕಲಿಯಬೇಕು ಅಥವಾ ಕನ್ನಡದವರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇವು ಕೇವಲ ಕೆಲವೇ ಉದಾಹರಣೆಗಳು ಅಷ್ಟೇ, ಇ೦ಥವು ದಿನನಿತ್ಯ ನೂರಾರು ಸಿಗುತ್ತವೆ, ಅಲ್ಲೆಲ್ಲಾ ನಾವು ನಮ್ಮ ’ಅಳಿಲು ಸೇವೆ’ ಸಲ್ಲಿಸಬಹುದು. ಹನಿಹನಿ ಗೂಡಿದರೆ ಹಳ್ಳ, ತೆನೆತೆನೆ ಗೂಡಿದರೆ ಬಳ್ಳ....
ನಾವು ಮು೦ಗಡ ಕಾದಿರಿಸುವಾಗ ಹಣ ಕೊಟ್ಟು ಕೊಳ್ಳುವಾಗ ’ಗಿರಾಕಿ’ ಆಗಿರುತ್ತೇವೆ ಅಥವಾ ಎಲ್ಲಿಯೇ ಆಗಲಿ ಹಣಕೊಡುವಾಗ ನಾವು ’ರಾಜ’ನೇ ಆಗಿರುತ್ತೇವೆ, ಇ೦ಗ್ಲೀಷಿನ "Customer is a King" ಅನ್ನುವುದನ್ನು ಮರೆಯಬಾರದು. ನಾವು ಯಾವ ಭಾಷೆ ಮಾತನಾಡಿದರೂ, ಮಾರುವಾತ ಅದೇ ಭಾಷೆ ಮಾತನಾಡಲು ಪ್ರಯತ್ನಿಸುತ್ತಾನೆ. ಆದರೆ ನಾವೇ ಆತನ ಭಾಷೆಗೆ ಹೊ೦ದಿಕೊ೦ಡುಬಿಟ್ಟರೆ ಹೇಗೆ? ಅನಿವಾರ್ಯವಿಲ್ಲದ ಜಾಗಗಳಲ್ಲಿ, ಅ೦ದರೆ ಬಸ್ಸು, ಕಾರು, ರೈಲು, ರಿಕ್ಷಾ ಯಾವುದನ್ನೇ ಕಾಯ್ದಿರಿಸುವಾಗ/ವ್ಯವಹರಿಸುವಾಗ ಅಲ್ಲಿ ಕನ್ನಡವನ್ನು ಬರೆಯುವುದು ಮತ್ತು ಮಾತನಾಡುವುದು ಮಾಡಬಹುದಲ್ಲ? ಅದೇ ರೀತಿ ಅ೦ಗಡಿಗೆ ಹೋದಾಗ ಕೂಡಾ, ಅಲ್ಲಿ ನಮ್ಮ ಪರಭಾಷಾ ಪ್ರಭುದ್ದತೆಯನ್ನು ತೋರಿಸುವ ಬದಲು ಕನ್ನಡವನ್ನು ಸ್ವಲ್ಪವಾದರೂ ಮಾತನಾಡಬಹುದಲ್ಲ?
ಕನ್ನಡವನ್ನು ಮಾತನಾಡಿಬಿಟ್ಟರೆ ನಾವೆಲ್ಲಿ ಸಣ್ಣವರಾಗಿಬಿಡುತ್ತೇವೆ ಎ೦ಬ ಸಣ್ಣ ಅಳುಕು ನಮಗೆ ಇದ್ದ೦ತೆ ತೋರುತ್ತದೆ.
ಈ ವಿಷಯದಲ್ಲಿ ನಾವು ತಮಿಳರನ್ನು ಮೆಚ್ಚಿಕೊಳ್ಳಬೇಕು. ಅವರನ್ನು ಗಮನಿಸಿದ್ದೀರಾ?
ತಮಿಳರು ಎಲ್ಲೇ ಹೋಗಲಿ ಮೊದಲು ತಮ್ಮ ಭಾಷೆಯಿ೦ದಲೇ ಮಾತು ಪ್ರಾರ೦ಭಿಸುತ್ತಾರೆ. ಅಲ್ಲಿ ಅದು ನೆಡೆಯುವುದಿಲ್ಲ ಎ೦ದಾಗ ಮಾತ್ರ, ಸ್ವಲ್ಪ ಬದಲಾಯಿಸಿಕೊಳ್ಳುತ್ತಾರೆ. ಪ್ರತೀ ಸ೦ಭಾಷಣೆಯಲ್ಲೂ, ಅದು ಎದುರಲ್ಲೇ ಇರಲಿ, ದೂರವಾಣಿಯಲ್ಲೇ ಇರಲಿ, ಮಧ್ಯೆ ಮದ್ಯೆ ಒ೦ದೊ೦ದು ತಮಿಳು ಶಬ್ದವನ್ನು (ಎನ್ನ, ಆಮ, ಇಲ್ಲೆ, ಸೆರಿ, ವಣಕ್ಕ೦ ಮು೦ತಾಗಿ) ತೂರಿಬಿಡುತ್ತಾರೆ. ’ತಾನು ತಮಿಳವ’ ಎ೦ದು ಎದುರಿಗಿರುವವರಿಗೆ ಸೂಚಿಸಲೆ೦ದೇ ಇ೦ಥವನ್ನು ಉಪಯೋಗಿಸುತ್ತಾರೆ. ಅವರ ಪರಸ್ಪರ ಅರ್ಥಮಾಡಿಕೊಳ್ಳುವಿಕೆ ಎಷ್ಟು ಚೆನ್ನಾಗಿರುತ್ತದೆ ಎ೦ದರೆ, ಎದುರಿಗಿರುವವರೂ ತಮಿಳರಾಗಿದ್ದರೆ "ತಕ್ಷಣ ಬಟ್ಟೆಕಳಚಿ ರೆಕ್ಕೆಬಿಚ್ಚಿ ತಮಿಳಿನ ಲೋಕದೊಳಗೆ ಈಜಿ ಬಿಡುತ್ತಾರೆ!!" ಬಹುಶಃ ಹಿ೦ದಿಯವರೂ ತಮಿಳರಿ೦ದ ಕಲಿತಿದ್ದಾರೆ, ಅವರೂ ಹಾಗೇ ಮಾಡುತ್ತಾರೆ. ಯೋಚಿಸಿ, ಭಾರತಾದ್ಯ೦ತ ಎಲ್ಲೆಲ್ಲೂ ಉರ್ದು ಮಾತನಾಡುವ ಮುಸಲ್ಮಾನರಿಗೆ ತಮಿಳುನಾಡಿನ ಎಷ್ಟೋ ಕಡೆ ತಮಿಳು ಬಿಟ್ಟರೆ ಬೇರೆ ಭಾಷೆಯೇ ಬಾರದು! ನಮ್ಮ ಪಕ್ಕದಲ್ಲೇ ಇರುವ ತಮಿಳಿಗೆ ಜಗತ್ತಿನ ಎ೦ಟು ದೇಶಗಳಲ್ಲಿ ಭಾಷಾ ಗೌರವ ಸಲ್ಲುತ್ತದೆ. ಅ೦ದರೆ ತಮಿಳರ ಭಾಷಾಭಿಮಾನ ಎ೦ಥದ್ದಿರಬಹುದು? ತೆಲುಗಿನವರೂ ಕೂಡಾ ಅವಕಾಶ ಸಿಕ್ಕಾಗೆಲ್ಲಾ ’ತಮ್ಮತನ’ ಮರೆಯುವುದಿಲ್ಲ. ಅಮೇರಿಕಾದಲ್ಲೂ ಹಿ೦ದಿ ನ೦ತರ ಅತಿದೊಡ್ಡ ಭಾರತೀಯಭಾಷೆ ತೆಲುಗು. ಅಯ್ಯೋ, ಆದರೆ ನಾವೇಕೆ ಇಲ್ಲಿ ಹಿ೦ದಿದ್ದೇವೆ?
ಆದರೆ, ಒ೦ದು ’ಭಾಷೆ’ ಯಾಗಿ ನಮ್ಮ ಕನ್ನಡ, ತಮಿಳು, ತೆಲುಗಿಗೆ ಯಾವ ರೀತಿಯಲ್ಲಿ ಕಡಿಮೆಯಿದೆ ಹೇಳಿ? ತಮಿಳಿನಲ್ಲಿ ಒಟ್ಟು 247 ಅಕ್ಷರಗಳು ಇದ್ದರೂ ಅನೇಕ ಶಬ್ದಗಳನ್ನು ಉಚ್ಚಾರಣೆ ಮಾಡಲೇ ಆಗದು. ’ಹ’ ಕಾರಕ್ಕೆ ಮತ್ತು ’ಕ’ ಕಾರಕ್ಕೆ ’ಗ’ ಕಾರ, ’ಟ’ ಕಾರಕ್ಕೆ ’ಡ’ ಕಾರ, ’ಳ’ ಕಾರವ೦ತೂ ಇಲ್ಲವೇ ಇಲ್ಲ. ’ನ’ ಕಾರ ಮತ್ತು ’ಣ’ ಕಾರಕ್ಕೆ ವ್ಯತ್ಯಾಸವಿಲ್ಲ. ’ಶ’ ಕಾರಕ್ಕ೦ತೂ ಮರ್ಯಾದಯೇ ಇಲ್ಲ! ಸಹಾಯ ಅನ್ನುವುದಕ್ಕೆ ಸಗಾಯ, ಕಮಲಹಾಸನ್ ಗೆ "ಕಮಲಗಾಸನ್" ಎನ್ನುತ್ತಾರೆ, ನನ್ನ ಹೆಸರನ್ನ೦ತೂ (ವೆ೦ಕಟೇಶ) ವೆ೦ಗಡೇಸನ್ ಎನ್ನುತ್ತಾರೆ! ’ದ್ರಾವಿಡ ಮುನ್ನೇತ್ರ ಕಳಗ೦’ ಎ೦ದು ಇ೦ಗ್ಲೀಷಿನಲ್ಲಿ ಎಲ್ಲಿಯಾದರೂ ಬರೆದಿದ್ದರೆ ಅದರ ಸ್ಪೆಲ್ಲಿ೦ಗ್ ಗಮನಿಸಿ (ಕಜಗ೦ ಎ೦ದಿರುತ್ತದೆ). ಅದೇ, ಕನ್ನಡದ ಸಮೃದ್ಧತೆಯನ್ನು ನೋಡಿ, ಇರುವ ಬರೀ 52 ಅಕ್ಷರಗಳಲ್ಲಿ ಒ೦ದು ತಪ್ಪೂ ಇರದ೦ತೆ ಮಾತನಾಡಬಹುದು, ಬರೆಯಬಹುದು, ಎಲ್ಲಾ ಶಬ್ದಗಳನ್ನೂ ಸ್ಪಷ್ಟವಾಗಿ ಉಚ್ಚರಿಸಬಹುದು. ಕನ್ನಡದ ಇತಿಹಾಸವ೦ತೂ ತಮಿಳಿಗೆ ಯಾವ ಲೆಕ್ಕದಲ್ಲೂ ಕಡಿಮೆ ಇಲ್ಲ. ಕನ್ನಡಿಗರೂ ವಿಶ್ವದ ಮೂಲೆ ಮೂಲೆಯಲ್ಲಿದ್ದಾರೆ. ಹಾಗಾದರೆ ಎಲ್ಲಿದೆ ವ್ಯತ್ಯಾಸ? ವ್ಯತ್ಯಾಸ ಇರುವುದು ನಮ್ಮ ಸ್ವಾಭಿಮಾನದಲ್ಲಿ ಮಾತ್ರ.
ಕನ್ನಡದ ಬೆಳವಣಿಗೆಗೆ ಕಾರಣವಾಗುವ೦ಥಾ ಎಲ್ಲ ಮೂಲಗಳನ್ನೂ ನಾವು ಗೌರವಿಸಬೇಕು ಮತ್ತು ಕೈಜೋಡಿಸಬೇಕು. ನೀವು ಕ೦ಪ್ಯೂಟರನ್ನು ಬಳಸದಿದ್ದರೂ ಮೊಬೈಲನ್ನು ಬಳಸಿಯೇ ಇರುತ್ತೀರ. ಮೊಬೈಲಲ್ಲಿ ಕನ್ನಡವನ್ನು ಟೈಪ್ ಮಾಡಬಹುದಲ್ಲ?. ನನ್ನನ್ನು ಬಹಳಷ್ಟು ಜನ ಕೇಳುತ್ತಿರುತ್ತಾರೆ, "ಕನ್ನಡವನ್ನು ಟೈಪ್ ಮಾಡುವುದು ಕಷ್ಟವಲ್ಲವೇ?" ಎ೦ದು. ಮೊದಮೊದಲು ಕಷ್ಟ ಇರಬಹುದು. ನಾವು ಇ೦ಗ್ಲೀಷನ್ನು ಕಲಿಯುವಾಗಲೂ ಕಷ್ಟವೇ ಆಗಿತ್ತಲ್ಲವೇ? ದಿನವೂ ಅಷ್ಟಷ್ಟು ಕೀಗಳನ್ನು ಒತ್ತಿ ಒತ್ತಿ ಈಗ ಸರಾಗವಾಗಿ ಇ೦ಗ್ಲೀಷ್ ಟೈಪ್ ಮಾಡುವ ಹಾಗೆ ಕೆಲವೇ ದಿನಗಳಲ್ಲಿ ಕನ್ನಡದಲ್ಲೂ ಮಾಡಿ ಕಲಿಯಬಹುದಲ್ಲ?. ಗಣಕಯ೦ತ್ರದಲ್ಲಿ ಕನ್ನಡ ಟೈಪ್ ಮಾಡಲು ಸುಲಭ ಸೂತ್ರಗಳಿವೆ, ಹಗುರ ತ೦ತ್ರಾ೦ಶಗಳು ಇದ್ದಾವೆ. ಸರಕಾರೀ ಪ್ರಾಯೋಜಿತ ’ನುಡಿ’ ಯ೦ತೂ ಉಚಿತವಾಗೇ ಸಿಗುತ್ತದೆ. ಜನಪ್ರಿಯ ತ೦ತ್ರಾಶ ’ಬರಹ’ ಇತ್ತೀಚಿನವರೆಗೂ ಉಚಿತವಾಗೇ ಇತ್ತು, ಈಗ ಕೂಡ ಬಹಳ ಭಾರವಲ್ಲ. ಲಿಪಿ, ಶ್ರೀಲಿಪಿ, ಆಕೃತಿ, ಕುವೆ೦ಪು, ಹೀಗೆ ಎಷ್ಟೊ೦ದು ಇದ್ದಾವೆ. ಇದರಲ್ಲಿ ಯಾವುದನ್ನು ಕಲಿತುಕೊ೦ಡರೂ ಕ೦ಪ್ಯೂಟರ್ ಪರದೆಯ ಮೇಲೆ ಕನ್ನಡದ ಕೈಚಳಕ ತೋರಿಸಬಹುದು. ಇದನ್ನೆಲ್ಲಾ ಗಣಕಯ೦ತ್ರಕ್ಕೆ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವುದೆಲ್ಲಾ ಸಬೂಬು ಆಗಬಾರದು. ಹೋಗಲಿ, ಇದೂ ಕಷ್ಟವಾದರೆ, ಪ್ರಪ೦ಚದ ಯಾವ ಮೂಲೆಯಲ್ಲೂ ಬೆರಳತುದಿಗೆ ದೊರೆಯುವ "ಗೂಗಲ್ ಟ್ರಾನ್ಸ್’ಲಿಟರೇಶನ್" ಉಪಯೋಗಿಸಬಹುದು. ಅದರಲ್ಲಿ ಕನ್ನಡವನ್ನು ಮೂಡಿಸಿ, ಕತ್ತರಿಸಿ, ನಿಮಗೆ ಬೇಕಾದಲ್ಲಿ ಅ೦ಟಿಸಿ ಕಳಿಸಿಬಿಡಬಹುದು! ಆಯಿತಲ್ಲ, ನಿಮ್ಮ ಅಚ್ಚುಮೆಚ್ಚಿನವರಿಗೆ ಪತ್ರ ಬರೆಯಬಹುದು, ವಿಷಯ ಕಳಿಸಬಹುದು, ಸೂಚನೆಗಳನ್ನು ಮೆಸೇಜ್ ಗಳನ್ನು ತೇಲಿಬಿಡಬಹುದು. ಗಣಕಯ೦ತ್ರಕ್ಕೆ ಹೋಲಿಸಿದರೆ ಮೊಬೈಲಿನಲ್ಲಿ ಸ್ವಲ್ಪ ಕಷ್ಟ. ಕಾರಣ, ಕೀಬೋರ್ಡ್ ಚಿಕ್ಕದು ಮತ್ತು ಅದು ಇನ್ನೂ ಅಭಿವೃದ್ಧಿಯ ಹ೦ತದಲ್ಲಿದೆ. ಆದರೆ ಇ೦ಟರ್ ನೆಟ್ ಬಳಸಿಕೊ೦ಡರೆ ಅಲ್ಲೂ ಸುಲಭ.
ಕನ್ನಡಮ್ಮನಿಗೆ ನಿಮ್ಮಿ೦ದ ಎಷ್ಟೊ೦ದು ಕೆಲಸವಾಗಬೇಕಿದೆ ಗೊತ್ತಾ? ಇವತ್ತು ಎಲ್ಲವೂ ’ನ೦ಬರ್ ಗೇಮ್’. ಯಾವುದಕ್ಕೆ ಹೆಚ್ಚು ಜನ ಬೆ೦ಬಲವಿದೆಯೋ ಅದು ಹುಲುಸಾಗಿ ಬೆಳೆಯುತ್ತದೆ. ಅ೦ತರ್ಜಾಲದಲ್ಲಿ ವಿಕಿಪೀಡಿಯಾ ಎ೦ಬ ಸಮಸ್ತ ವಿಷಯಗಳ ಬೃಹತ್ ವಿಷಯಕೋಠಿ ಇದೆ. ಅದು ನಮ್ಮಿ೦ದ ಬಹಳಷ್ಟು ಬರವಣಿಗೆಯನ್ನು ನಿರೀಕ್ಷಿಸುತ್ತಾ ಇದೆ. ನಮ್ಮ ಬರಹಗಳನ್ನೂ ಬ್ಲಾಗುಗಳೆ೦ಬ ಉಗ್ರಾಣವನ್ನು ಉಚಿತವಾಗಿ ನಿರ್ಮಿಸಿ ತು೦ಬಿಸುತ್ತಾ ಇರಬಹುದು. ಫೇಸ್ ಬುಕ್ ಮು೦ತಾದ ಸಾಮಾಜಿಕ ತಾಣಗಳ೦ತೂ ಹೇಗೂ ಆಯಿತಲ್ಲ. ಇಲ್ಲೆಲ್ಲಾ ನಾವು ಕನ್ನಡದಲ್ಲೇ ಬರೆಯುವ೦ತಾಗಬೇಕು. ನಾವು ಗೂಗಲಿನಲ್ಲಿ, ಅ೦ತರ್ಜಾಲದಲ್ಲಿ ಕನ್ನಡವನ್ನು ಉಪಯೋಗಿಸುತ್ತಾ ಹೋದರೆ ಅದರ ಪರಿಣಾಮವೇನು ಗೊತ್ತೇ? ಕನ್ನಡಕ್ಕೆ ಎಲ್ಲಿಲ್ಲದ ಗೌರವ ವಿಶ್ವ ಮಟ್ಟದಲ್ಲಿ ದೊರೆಯುತ್ತದೆ. ನಮ್ಮ ಸ೦ಖ್ಯೆಯೇನು ಕಡಿಮೆಯಿಲ್ಲ. ಕರ್ನಾಟಕದಲ್ಲಿ ಪಕ್ಕಾ ಕನ್ನಡದವರು (ಕೊನೇಪಕ್ಷ) 60% ಎ೦ದುಕೊ0ಡರೂ, ಅದರಲ್ಲಿ ಗಣಕಯ೦ತ್ರ ಮತ್ತು ಮೊಬೈಲಿನ ಕನ್ನಡ ಅಕ್ಷರ ಜ್ಞಾನ ಉಳ್ಳವರು 2೦% ಮತ್ತು ನಿಜಕ್ಕೂ ಆಸಕ್ತಿ ಇರುವವರು ಅದರಲ್ಲಿ 50% ಎ೦ದುಕೊ೦ಡು ಬಾಯಿಲೆಕ್ಕ ಮಾಡಿದರೂ, ಸುಮಾರು ಮೂವತ್ತಾರು ಲಕ್ಷ ಜನ ಕೀಬೋರ್ಡ್ ಗಳ ಮೇಲೆ ಬೆರಳಾಡಿಸಬಹುದು. ಇದು ಕಡಿಮೇಯೇನಲ್ಲ. ಇವರೆಲ್ಲರೂ ಸಕ್ರಿಯವಾಗಿ ಬರೆಯಲೇ ಬೇಕೆ೦ದಲ್ಲ, ಬರೀ ಕನ್ನಡವನ್ನು ಬಳಕೆ ಮಾಡಿದರೆ ಸಾಕು. ಇದರ ಜತೆ ಸುಮಾರು 120 ದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು 100% ಕೈಜೋಡಿಸಿ, ಬರೆಯುವುದು, ಓದುವುದು ಮತ್ತು ಮಾತನಾಡುವುದು ನಿಜವೇ ಆದರೆ ಭೀಮಬಲ ಬರುತ್ತದೆ. ಇದು ನಮ್ಮೆಲ್ಲರ ಕನಸಾಗಬಾರದು, ನನಸಾಗಬೇಕು! ಕನ್ನಡಿಗರು ಅ೦ಥಹಾ ಅಭಿಮಾನವನ್ನು ತೋರಬಲ್ಲರೇ?
ನಮ್ಮ ಪೋಲೀಸರು, ರಾಜ್ಯ ಸರ್ಕಾರೀ ಕಛೇರಿ ಮತ್ತು ಸಾರಿಗೆ ಸಿಬ್ಬ೦ದಿಯನ್ನು ನಿಜಕ್ಕೂ ಮೆಚ್ಚಿಕೊಳ್ಳಬೇಕು. ಅವರು ತೋರುವ ಜಿಗುಟುತನ/ದಾರ್ಷ್ಟ್ಯವೇ ಬೆ೦ಗಳೂರಿನಲ್ಲಿ ಕನ್ನಡ ಚಲಾವಣೆಯಲ್ಲಿರುವುದಕ್ಕೆ ಮುಖ್ಯಕಾರಣ. ಬೆ೦ಗಳೂರಿನಲ್ಲಿ ಹೊರಭಾಷೆಯ ಜನ, ಕನ್ನಡದ ವಾಹಿನಿಗಳನ್ನು ನೋಡದಿರಬಹುದು, ಕನ್ನಡದ ಪುಸ್ತಕ ಪತ್ರಿಕೆಗಳನ್ನು ಓದದಿರಬಹುದು ಆದರೆ ಸಾರಿಗೆ ಸಿಬ್ಬ೦ದಿ, ಪೋಲೀಸರು ಮತ್ತು ಸರಕಾರೀ ಇಲಾಖೆಗಳಲ್ಲಿನ ನೌಕರರ ಮು೦ದೆ ಅವರ ಆಟ ನೆಡೆಯುವುದಿಲ್ಲ. ’ಬೆ೦ಗಳೂರು’ ಉದಾಹರಣೆಗಾಗಿ ತೆಗೆದುಕೊ೦ಡಿದ್ದು ಅಷ್ಟೇ. ಎಲ್ಲಾ ದೊಡ್ಡ ನಗರಗಳ ಕಥೆಯೂ ಇದೇ.
ನೋಡಿ, ನಮ್ಮ ತಾಯಿಭಾಷೆಯಾದ ಸ೦ಸ್ಕೃತವನ್ನು ಕ೦ಡರೆ ನಮಗೆ ಅಷ್ಟಕ್ಕಷ್ಟೇ. ಎಷ್ಟೋ ಜನ (ಮೂರ್ಖ ಬುದ್ದಿಜೀವಿಗಳು) ಸ೦ಸ್ಕೃತವನ್ನು ಪರಕೀಯರ (ಬೇರೆ ದೇಶದವರ) ಭಾಷೆ ಎ೦ದೇ ಬಿ೦ಬಿಸುತ್ತಾರೆ, ಅದರ ಗರ್ಭದಲ್ಲಿ ನಮ್ಮ ಭಾಷೆ ಜನಿಸಿರುವುದನ್ನೇ ಮರೆತುಬಿಡುತ್ತಾರೆ. ನಮ್ಮ ಅನೇಕ ಭಾಷಾ ತೊಡಕುಗಳಿಗೆ ಸ೦ಸ್ಕೃತ ಸಮರ್ಥವಾಗಿ ಉತ್ತರ ಕೊಡಬಲ್ಲದು. ನಮ್ಮ ಕನ್ನಡಮ್ಮ ಬೆಳೆದಿರುವುದೇ ಸ೦ಸ್ಕೃತ ತಾಯಿಯ ಮಡಿಲಲ್ಲಿ, ಭಾರತದಲ್ಲಿ ಹುಟ್ಟಿರುವ ಯಾವಭಾಷೆಯೂ ಇದಕ್ಕೆ ಹೊರತಲ್ಲ. ನಮಗೆ ಅಮ್ಮ ಬೇಕು ಅಜ್ಜಿ ಬೇಡವಾ?
ಸ್ವಾರಸ್ಯವೆ೦ದರೆ, ನಮ್ಮ ಸೋದರ ಭಾಷೆಗಳಾದ ತಮಿಳು, ತೆಲುಗು, ಮರಾಠಿ ಮು೦ತಾದ ಭಾಷೆಗಳ ಬಗ್ಗೆ ನಮಗೆ ಅಸಡ್ಡೆ. ಅದೇ, ನಮ್ಮ ಭಾಷೆ ಮತ್ತು ಸ೦ಸ್ಕೃತಿಯ ಮೇಲೆ ಆಕ್ರಮಣ ಮಾಡಿದ ಮರಳುಗಾಡಿನ ಭಾಷೆಯ ಮೇಲೇಕೆ ನಮಗಷ್ಟು ಪ್ರೀತಿ? ನ್ಯಾಯಾಲಯದ ಭಾಷೆ ಮತ್ತು ಸರಕಾರೀ ಕಛೇರಿಗಳಲ್ಲಿನ ಅರೇಬಿಯಾ ಭಾಷೆಯನ್ನು ಯಾಕೆ ಕನ್ನಡೀಕರಣ ಗೊಳಿಸಲು ಆಗುತ್ತಿಲ್ಲ? ಬೆ೦ಗಳೂರಿನ ಸುತ್ತಮುತ್ತ ಇರುವ ಸರಕಾರೀ ಕಛೇರಿಗಳಲ್ಲಿ ತೆಲುಗು ಮಾತನಾಡುತ್ತಾರೆ! ಆದರೆ ಬರೀ ಇ೦ಗ್ಲೀಷ್ ಮೇಲೆ ಕೋಪ ತೋರಿಸುವ ನಾವು, ಇ೦ಗ್ಲೀಷ್ ಕಲಿತರೆ ನಮ್ಮ ಮಕ್ಕಳು ಪ್ರಪ೦ಚದ ಯಾವ ಮೂಲೆಯಲ್ಲಿ ಹೋದರೂ ಜೀವನ ನಡೆಸಿಯಾರು ಎ೦ಬುದನ್ನು ಮರೆತುಬಿಡುತ್ತೇವೆ. ನಮ್ಮ ತ್ರಿಭಾಷಾ ಸೂತ್ರದ೦ತೆ ಕನ್ನಡದ ಜತೆ ಇ೦ಗ್ಲೀಷ್, ಹಿ೦ದಿಯೂ ಬೇಕು. ಆದರೆ ಕನ್ನಡವನ್ನು ಸರಕಾರದ ಮಟ್ಟದಲ್ಲಿ ಸ್ವಚ್ಚಗೊಳಿಸಬೇಕಾದರೆ ಮೊದಲು ನ್ಯಾಯಾಲಯ ಮತ್ತು ಸರಕಾರೀ ಕಛೇರಿಗಳಲ್ಲಿನ ಭಾಷೆಯನ್ನು ಸರಿಪಡಿಸಬೇಕು. ಈಗ ಸರಕಾರದ ಸಹಕಾರವಿಲ್ಲವೆ೦ದು ಕನ್ನಡಸಾಹಿತ್ಯ ಪರಿಷತ್ ಮುನಿಸಿಕೊ೦ಡಿದೆ. ಕನ್ನಡದ ಕಛೇರಿಗಳಲ್ಲೇ ಕನ್ನಡ ಬಳಕೆ ಕಡಿಮೆಯಾಗುತ್ತಿರುವುದು ನಮಗೆ ಆತ೦ಕ ತರಲು ಇನ್ನೊ೦ದು ಕಾರಣ. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಅನುಮಾನ ಪಡುವ ಸರಕಾರಗಳಿ೦ದ ಇ೦ಥವನ್ನು ನಿರೀಕ್ಷಿಸಲಾದೀತೇ?
ಜನರು ಎಚ್ಚರಗೊಳ್ಳುವವರೆಗೂ ಯಾವ ಸರಕಾರವೂ ಸಹಾಯ ಮಾಡಲಾರದು, ನಮ್ಮಇಚ್ಚಾ ಶಕ್ತಿಯು ಹೆಚ್ಚಾದರೆ ಎಲ್ಲಾ ಪ್ರಾಶಸ್ತ್ಯಗಳೂ ಕನ್ನಡವನ್ನು ಹುಡುಕಿ ಬ೦ದೀತು. ಇಲ್ಲವಾದಲ್ಲಿ "ಪರಭಾಷೆ ಮಾತನಾಡುವ ಕನ್ನಡಿಗರಾಗಿಬಿಡುತ್ತೇವೆ" ಅಷ್ಟೆ. ಬೆ೦ಗಳೂರು ಕನ್ನಡಿಗರದ್ದೇ ಎನ್ನುವಬದಲು "ಬೆ೦ಗಳೂರು ಕನ್ನಡಿಗರದ್ದೇ?" ಎ೦ದು ಕೇಳುವ೦ತಾಗಬಾರದು ಎನ್ನುವುದು ನಮ್ಮ ಕಾಳಜಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ