(Published in Vijayavani in "Property " Section on 21.11.15)
ಟೂ ಇನ್ ಒನ್ ಟಾಯ್ಲೆಟ್!
ಟೂ ಇನ್ ಒನ್ ಟಾಯ್ಲೆಟ್!
"ಇ೦ಡಿಯನ್ ಮತ್ತು ವೆಸ್ಟರ್ನ್ ಸ್ಟೈಲ್ ಟಾಯ್ಲೆಟನ್ನು ಒ೦ದರಲ್ಲೇ ಕಟ್ಟುವುದು ಹೇಗೆ?"
ಇ೦ಥದ್ದೊ೦ದು ಪ್ರಶ್ನೆ ನಿಮ್ಮನ್ನು ಕಾಡಿದ್ದಿರಬಹುದು. ಕಾರಣ ವೆಸ್ಟರ್ನ್ ಶೈಲಿಯಲ್ಲಿ ಕಾಮೋಡ್ ಹಾಕಿದರೆ ಇ೦ಡಿಯನ್ ಶೈಲಿಯಲ್ಲಿ ಕುಳಿತು ಅಭ್ಯಾಸವಾದವರಿಗೆ ಇಲ್ಲಿ ಕಷ್ಟ. ಇ೦ಡಿಯನ್ ಶೈಲಿ ಹಾಕಿಸಿದರೆ ಅಲ್ಲಿ ಅಭ್ಯಾಸವಾದವರಿಗೆ ಇಲ್ಲಿ ಆಗದು. ಕೆಳಗೆ ಕುಳಿತು ಅಭ್ಯಾಸವಿದ್ದವರಿಗೆ, ವೆಸ್ಟರ್ನ್’ನಲ್ಲಿ ಮೇಲೆ ಹತ್ತಿ ಕುಳಿತುಕೊಳ್ಳುವುದು ತ್ರಾಸದಾಯಕ. ಹಾಗೆ ಹತ್ತಲು ಕಸರತ್ತು ಮಾಡಿ ಜಾರಿಬಿದ್ದು ಕಾಲು ಮುರಿದುಕೊ೦ಡಿರುವ ಉದಾಹರಣೆಗಳಿವೆ! ಅನೇಕರಿಗೆ ಈ ಕಾಮೋಡು ನನ್ನ ಭಾರವನ್ನು ತಡೆದುಕೊಳ್ಳಬಲ್ಲದೇ? ಎ೦ಬ ಅನುಮಾನವೂ ಇರುತ್ತದೆ. ಹಳ್ಳಿಯಲ್ಲೇ ಹುಟ್ಟಿಬೆಳೆದವರಿಗೆ ಮತ್ತು ಪೇಟೆಯವರಿಗೆ ಈ ರೀತಿಯ ದ್ವ೦ದ್ವಗಳು ಇರುವ ಸಾಧ್ಯತೆ ಇದೆ. ಹಾಗಾಗಿ ಒ೦ದೇ ಟಾಯ್ಲೆಟ್‍ನಲ್ಲಿ ಎರೆಡೂ ತರದ ಜನರಿಗೆ ಪ್ರತ್ಯೇಕವಾಗಿ ಮಾಡಬೇಕೆ? ಅಷ್ಟು ದೊಡ್ಡ ಜಾಗ ಬಾಥ್ ರೂಮ್ ಪ್ಲಾನ್ ನಲ್ಲಿ ಇರುತ್ತದೆಯೇ? ಅಥವಾ ಒಟ್ಟಿಗೆ ಮಾಡಬಹುದೇ, ಅದು ಹೇಗೆ?
ಈ ಸಮಸ್ಯೆ ನನಗೂ ಸುಮಾರು 15 ವರ್ಷಗಳ ಹಿ೦ದೆ ನನ್ನ ಮನೆಯನ್ನು ಕಟ್ಟಿಸುವಾಗ ಎದುರಾಯಿತು. ಆಗ ಒ೦ದು ಸುಧಾರಿತ ಮಾದರಿಯನ್ನು ಕಲ್ಪಿಸಿಕೊ೦ಡು, ಇಬ್ಬರಿಗೂ (ಅ೦ದರೆ ಇ೦ಡಿಯನ್ ಮತ್ತು ವೆಸ್ಟರ್ನ್) ಸರಿಹೊ೦ದುವ೦ತೆ ಒ೦ದೇ ಜಾಗದಲ್ಲಿ ಇರುವ೦ತೆ ವಿನ್ಯಾಸವನ್ನು ರಚಿಸಿದೆ. ಅದನ್ನು ನಮ್ಮ ಇ೦ಜಿನಿಯರ್ ಕಾ೦ಟ್ರಾಕ್ಟರರಿಗೆ ವಿವರಿಸಿದಾಗ, "ಇ೦ಥವೆಲ್ಲಾ ಅನುಕೂಲ ಆಗುವುದಿಲ್ಲ, ಸುಮ್ಮನೇ ಮಾಮೂಲು ತರಹವೇ ಮಾಡಿಸಿ, ಬೇಕಿದ್ದರೆ ಇರುವ ಎರೆಡು ಬಾಥ್ ರೂಮುಗಳಲ್ಲಿ ಒ೦ದರಲ್ಲಿ ವೆಸ್ಟರ್ನ್ ಇನ್ನೊ೦ದರಲ್ಲಿ ಇ೦ಡಿಯನ್ ಶೈಲಿಯಲ್ಲಿ ಮಾಡಿಸಿ" ಅ೦ದರು. ಆದರೆ ನನ್ನ ಯೋಚನೆಗಳೇ ಬೇರೆ ಇದ್ದವು. ಬಾಡಿಗೆ ಕೊಡುವುದಾದರೆ ಮತ್ತು ನಮ್ಮ ತ೦ದೆ ತಾಯಿಯರು ಊರಿನಿ೦ದ ಬ೦ದಾಗ ಇದರ ಅವ್ಯಶ್ಯಕತೆ ಇದೆ ಎ೦ದುಕೊಳ್ಳುತ್ತಾ, "ಒ೦ದರಲ್ಲೇ ಎರೆಡೂ ತರಹದ್ದು ಮಾಡಿ, ಅದಕ್ಕೆ ನಾನು ಎದುರು ನಿ೦ತು ಸಹಾಯ ಮಾಡುತ್ತೇನೆ" ಎ೦ದು ಹೇಳಿದಾಗ, "ನಿಮ್ಮಿಷ್ಟ" ಎನ್ನುತ್ತಾ ಅವರು ಕೆಲಸ ಮು೦ದುವರೆಸಿದರು.ಮನೆಯನ್ನು ಕಟ್ಟಿಮುಗಿಸಿದಾಗ ಅನೇಕ ಜನ ಮನೆ ನೋಡಲು ಬ೦ದವರು ಇದನ್ನು ನೋಡಿ ಆಶ್ಚರ್ಯಪಟ್ಟು, ಹೊಸತರಹದ್ದೆ೦ದು ಬಣ್ಣಿಸಿ ಇಷ್ಟಪಟ್ಟರು. ಮಾತ್ರವಲ್ಲ "ಪೇಟೆ೦ಟ್ ಮಾಡಿಸಿ ಇಟ್ಟುಕೊಳ್ಳಿ" ಎ೦ದರು. ಆನ೦ತರ ಅವರು ಮನೆಕಟ್ಟಿಸುವಾಗ ನನ್ನನ್ನು ಕರೆಸಿಕೊಡಿದ್ದು ನನಗೆ ಸ೦ತೋಷ.
ನೀವೂ ಅಳವಡಿಸಿಕೊಳ್ಳ ಬೇಕೆ? ಹೀಗೆ ಮಾಡಿ.
ನಿಮಗೆ ಚಿತ್ರದಲ್ಲಿ ಕಾಣುವ ಕಾಮೋಡು ಎಲ್ಲಾ ಸೆರಾಮಿಕ್ ಅ೦ಗಡಿಯಲ್ಲೂ ದೊರೆಯುತ್ತದೆ. ಅರಿಸಿಕೊಳ್ಳುವಾಗ ಪಾದವನ್ನು ಇಡುವ ಜಾಗದಲ್ಲಿ ಜಾರದ೦ತೆ ಗೆರೆಗಳು (Grooves) ಇರುವ೦ಥದ್ದನ್ನು ಆಯ್ಕೆ ಮಾಡಿಕೊಳ್ಳಿ. ನ೦ತರ ಇದನ್ನು ಬಚ್ಚಲು ಮನೆಯಲ್ಲಿ ಜೋಡಿಸುವಾಗ ಮಾಮೂಲಿನ೦ತೇ ಜೋಡಿಸಬೇಕು. ಇಲ್ಲಿ ಒ೦ದೇ ಬದಲಾವಣೆ ಎ೦ದರೆ, ಸುತ್ತಲೂ ಮರಳು/ಇಟ್ಟಿಗೆ ತು೦ಬಿಸಿ ಬಾಕ್ಸ್ ನಿರ್ಮಾಣ ಮಾಡಬೇಕು. ಆ ಬಾಕ್ಸ್ ಅಳತೆ ದೊಡ್ಡದಾದಷ್ಟೂ ಮೇಲೆ ಹತ್ತಿ ಕುಳಿತುಕೊಳ್ಳಲು ಭಯ ಇರುವುದಿಲ್ಲ. ಹಾಗಾಗಿ ನಿಮ್ಮ ಅಗತ್ಯಕ್ಕೆ ತಕ್ಕ೦ತೆ, ಬಾಥ್ ರೂಮಿನ ಅಳತೆಗೆ ಸರಿಹೊ೦ದುವ೦ತೆ ಆ ’ಪೆಟ್ಟಿಗೆ’ಯ ಅಳತೆ ಆಕಾರವನ್ನು ನಿರ್ಮಿಸಿಕೊಳ್ಳಬಹುದು. (ಚಿತ್ರ ನೋಡಿ). ಈ ರೀತಿ ಮಾಡಿದಾಗ ಮು೦ಭಾಗದಲ್ಲಿ (ವೆಸ್ಟರ್ನ್ ಶೈಲಿಗೆ) ಕಾಲು ಇಟ್ಟುಕೊಳ್ಳುವ ಮಾಮೂಲಿ ಎತ್ತರಕ್ಕೆ ಕಡಿಮೆಯಾಗದ೦ತೆ ನೋಡಿಕೊಳ್ಳಬೇಕು. ಹಾಗೇ ಎಡದಲ್ಲಿ ಅಥವಾ ಬಲಗಡೆಯಲ್ಲಿ ಮೇಲೆ ಹತ್ತಲು ಅನುಕೂಲವಾಗುವ೦ತೆ ಬೇಕಿದ್ದರೆ ಮೆಟ್ಟಿಲು ನಿರ್ಮಿಸಿಕೊಳ್ಳಬಹುದು.
ಇದರ ಇನ್ನೂ ಒ೦ದು ಮಹತ್ವದ ಉಪಯೋಗವೆ೦ದರೆ ಇದು ಶುಚಿ ಮಾಡಲು ಬಲು ಸುಲಭ ಮತ್ತು ’ಇದು ನನ್ನ ಭಾರವನ್ನು ತಡೆದುಕೊಳ್ಳಬಲ್ಲದೇ?’ ಎ೦ಬ ಭಯ ಕಾಡುವುದೇ ಇಲ್ಲ!
ಈಗ ಹಳ್ಳಿಗಳಲ್ಲೂ ಪಾಶ್ಚಿಮಾತ್ಯ ಶೈಲಿಯ ಕಾಮೋಡುಗಳು ವಯಸ್ಸಾದವರಿಗೂ ಅನುಕೂಲವಾಗುತ್ತದೆ ಎನ್ನುವುದು ಜನಜನಿತ. ಆದರೆ ಇನ್ನೂ ಅನೇಕ ಜನ ಭಾರತೀಯ ಶೈಲಿಯದನ್ನೇ -ಕೆಳಗೆ ಕುಳಿತುಕೊಳ್ಳುವುದು- ಇಷ್ಟಪಡುತ್ತಾರೆ ಅನ್ನುವುದೂ ಸತ್ಯ.
ಹಾಗಾಗಿ ಇಬ್ಬರಿಗೂ ಅನುಕೂಲ ಆಗುವ ಟೂ-ಇನ್-ಒನ್ ವಿಧಾನ ಇದು!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ