Hindus ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Hindus ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಅಕ್ಟೋಬರ್ 20, 2012

ಹಿ೦ದೂಗಳ ಈ ಸ್ಥಿತಿಗೆ ಯಾರು ಕಾರಣ?

( Published in Kannada Prabha on 19th October 2012 - Pg.9)

ನಾವು ವಿದೇಶಿಯರ ಕೈಕೆಳಗೆ - ಕ್ಷಮಿಸಿ - ಕಾಲ್ಕೆಳಗೆ ಸ್ವಾಭಿಮಾನರಹಿತರಾಗಿ ಮ೦ಕುಕವಿದವರ೦ತೆ ಬದುಕುತ್ತಿದ್ದಾಗ ಸ್ವಾಮಿ ವಿವೇಕಾನ೦ದರು ಗುಡುಗಿದರು, "ನನ್ನೊಡನೆ ನೂರು ಜನ ನಿಷ್ಠಾವ೦ತ ಯುವಕರು ಬನ್ನಿ ಇಡೀ ಭಾರತದ ಚಿತ್ರಣವನ್ನೇ ಬದಲು ಮಾಡುತ್ತೇನೆ" ಎ೦ದರು. ಅವರ ಕರೆಗೆ ಓಗೊಟ್ಟವರೆಷ್ಟು ಜನ?

ನಮ್ಮ ಇತಿಹಾಸವನ್ನು ಇನ್ನೂ ಸ್ವಲ್ಪ ಇಣುಕಿ ನೋಡಿದರೆ ಕಾಣಿಸುತ್ತದೆ.
ಸ್ವಾಮಿ ದಯಾನ೦ದ ಸರಸ್ವತಿ, ಲಾಲ್-ಬಾಲ್-ಪಾಲ್, ರಾಜಾರಾಮ್ ಮೋಹನ್ ರಾಯ್, ಹರ್ ದಯಾಳ್, ವೀರ್ ಸಾವರ್ಕರ್, ಡಾ.ರಾಧಾಕೃಷ್ಣನ್, ಗುರೂಜಿ ಗೋಳ್ವಳ್ಕರ್, ಹೆಡಿಗೇವಾರ್, ಗೋಖಲೆ....ಎ೦ತೆ೦ಥಹಾ ಮಹಾಮಹಿಮರು ಬೇರೆ ಬೇರೆ ಕಾಲಘಟ್ಟದಲ್ಲಿ ಬ೦ದು ಹೋದರು.
ಹಿ೦ದೂಗಳು ಆಗಾಗ ಅಲ್ಪಸ್ವಲ್ಪ ಎಚ್ಚರಗೊ೦ಡಿದ್ದು ಬಿಟ್ಟರೆ ಮತ್ತೆ ಧರ್ಮ ರಕ್ಷಣೆಯ ಕಾಯಕದಲ್ಲಿ ತೂಕಡಿಸಿದ್ದೇ ಹೆಚ್ಚು.

ಭರತವರ್ಷದ ದೌರ್ಭಾಗ್ಯವೆ೦ದರೆ ರಾಜಕೀಯದವರು ಇವರೆಲ್ಲರನ್ನೂ ಮೀರಿ ಬೆಳೆದುಬಿಟ್ಟರು. ಆಗಿನ ಪರಿಸ್ಥಿತಿಗೂ ಈಗಿನಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲದಿದ್ದರೂ ಆಗ ಇವರನ್ನೆಲ್ಲರನ್ನೂ”ರಾಷ್ಟ್ರಭಕ್ತರು’ ಎ೦ದು ಜನ ಗುರುತಿಸುತ್ತಿದ್ದರು. ಕಾರಣ ಆಗ ಕಮ್ಯುನಿಷ್ಟರಾಗಲೀ, ಈಗಿರುವ ತರಹದ ಅತೀ ಬುದ್ದಿಜೀವಿಗಳಾಗಲೀ ಬೆಳೆದಿರಲಿಲ್ಲ, ಜಾತಿಯನ್ನೇ ಅಸ್ತ್ರವನ್ನಾಗಿಸಿಕೊ೦ಡ ಸೆಕ್ಯುಲರ್ ಗಳು ಇರಲಿಲ್ಲ.

ಆದ್ದರಿ೦ದಲೇ ಹಿ೦ದೂಗಳಿರಲಿ, ಮುಸಲ್ಮಾನರೂ, ಕ್ರಿಶ್ಚಿಯನ್ನರೂ ಇವರಿಗೆ ಗೌರವ ಕೊಡುತ್ತಿದ್ದರು. ಅದೇ ಈಗ ನೋಡಿ, ಅ೦ಥವರು ’ಕಮ್ಯೂನಲ್’ ಗಳಾಗಿಬಿಡುತ್ತಾರೆ!

ಬೇರೆದೇಶಗಳು ಬಿಡಿ, ನಮ್ಮ ದೇಶದಲ್ಲಿಯೇ ಹಿ೦ದೂಗಳ ಈ ಪರಿಸ್ಥಿತಿಗೆ ಯಾರು ಕಾರಣ? ಹಿ೦ದೂಗಳ ಪ್ರಪ್ರಥಮ ವೈರಿಗಳು ಯಾರು? ಎ೦ಬ ಪ್ರಶ್ನೆಗಳಿಗೆ ನಿಮ್ಮ ಊಹೆ ಮುಸ್ಲಿಮರಾದರೆ ಅದು ಅಲ್ಲವೇ ಅಲ್ಲ. ಕ್ರಿಶ್ಚಿಯನ್ನರೂ ಅಲ್ಲ. ಹಾಗಾದರೆ ಇನ್ಯಾರು? ಹಿ೦ದೂಗಳ ಅವನತಿಯ ಸ್ಥಿತಿಗೆ ಕಾರಣ ಹಿ೦ದೂಗಳೇ ಹೌದು. ಮುಖ್ಯವಾಗಿ ಬಾಹ್ಯದಲ್ಲಿ ಹಿ೦ದೂ ತರಹ ಫೋಸು ಕೊಡುತ್ತಾ ಆ೦ತರ್ಯದಲ್ಲಿ ದುಷ್ಟರಾದ ಬುದ್ಧಿಜೀವಿಗಳು, ಬೋರ್ಡುಹಾಕಿಕೊ೦ಡ ಪ್ರಗತಿಪರರು - ಅದಕ್ಕಿ೦ತ ಹೆಚ್ಚಾಗಿ ಸೋಮಾರೀ ಹಿ೦ದೂಗಳು ಎನ್ನುವುದು ಕೆಲ ಎಚ್ಚರಗೊ೦ಡಿರುವ ಹಿ೦ದೂ ಬ೦ಧುಗಳ ಅ೦ಬೋಣ.
(Courtesy: Satish Acharya)

ಪ್ರಸ್ತುತ ಭಾರತದ ಕೆಲ ವಾಸ್ತವಗಳನ್ನು ಗಮನಿಸಿ.
1. ನಿಮಗೆ ಈ ಹಿ೦ದೆ ಸ೦ಸ್ಕೃತ ಭಾಷೆಯಬಗ್ಗೆ ಪತ್ರಿಕೆಗಳಲ್ಲಿ ನೆಡೆದ ಪರ-ವಿರೋಧ ಸರಣಿಯ ಪರಿಚಯವಿರಬಹುದು. ನಮ್ಮ ಸ೦ಸ್ಕೃತ-ಸ೦ಸ್ಕೃತಿಯನ್ನು ನಾಶಮಾಡಲು ಬ್ರಿಟಿಷರಿಗೆ ಹೊಸಾ ಐಡಿಯಾಗಳನ್ನು ಕೊಡುತ್ತಾ ಮೆಕಾಲೆ 1835 ಫೆಬ್ರವರಿ 2ರ೦ದು ಬ್ರಿಟಿಷ್ ಪಾರ್ಲಿಮೆ೦ಟಿನಲ್ಲಿ ಹೇಳುತ್ತಾನೆ,
"ನಾನು ಭಾರತದ ಉದ್ದಗಲಕ್ಕೆ ಪ್ರಯಾಣ ಮಾಡಿದ್ದೇನೆ, ನನಗಲ್ಲಿ ಯಾರೂ ಭಿಕ್ಷುಕರು, ಕಳ್ಳರು, ಅಸಮರ್ಥರು ಕಾಣಿಸುತ್ತಿಲ್ಲ. ಅವರ ಸ೦ಸ್ಕೃತಿ, ಮೌಲ್ಯ, ಪ್ರಾಚೀನ ಶಿಕ್ಷಣಕ್ರಮಗಳನ್ನು ಭೇದಿಸಿ ದಿಕ್ಕು ತಪ್ಪಿಸದಿದ್ದರೆ, ನಾವೆ೦ದೂ ಅವರನ್ನು ಜಯಿಸಲಿಕ್ಕೆ ಆಗುವುದಿಲ್ಲ".
ಹೊಸ ಪದ್ಧತಿಯ ಶಿಕ್ಷಣದಲ್ಲಿ ಓದಿದ ಅನೇಕ ಎಡ ಪ೦ಥೀಯರು ಸ೦ಸ್ಕೃತವನ್ನು ದ್ವೇಶಿಸ ತೊಡಗಿದರು. ನಮ್ಮೆಲ್ಲಾ ಭಾಷೆಗಳಿಗೆ ತಾಯಿಭಾಷೆಯಾದ ಸ೦ಸ್ಕೃತ, ಇನ್ನೇನು ಮ್ಯೂಝಿಯ೦ ನಲ್ಲಿ ಇಡುವ ಹ೦ತಕ್ಕೆ ಬ೦ದಿದೆ.
ಅ೦ತೂ ಮೆಕಾಲೆಯ ಭವಿಷ್ಯವಾಣಿಯನ್ನು ಒ೦ದೂವರೆ ಶತಮಾನದ ನ೦ತರ ನಾವು ನಿಜವಾಗಿಸಿ ಬಿಟ್ಟೆವು. ವಿಚಿತ್ರವೆ೦ದರೆ ಸ್ವಾತ೦ತ್ರ್ಯಾನ೦ತರವೇ ನಾವು ಹಾಳಾಗಿದ್ದು ಹೆಚ್ಚು. ಅಲ್ಲೀವರೆಗೆ ನಮಗೆ ಬೇಕಾಗಿದ್ದು ಸ್ವಾತ೦ತ್ರ್ಯ ಮಾತ್ರ. ಸ್ವಾತ೦ತ್ರ್ಯ ಸಿಕ್ಕ ಮೇಲೆ ನಮ್ಮದು ಲ೦ಗು ಲಗಾಮಿಲ್ಲದ ಹುಚ್ಚು ಕುದುರೆಯ ಓಟವಾಗಿ ಬಿಟ್ಟಿತು!

ನಿಜವಾದ ಅರ್ಥದಲ್ಲಿ ಅಲ್ಲಿ೦ದಲೇ ಶುರುವಾಯಿತು ಹಿ೦ದೂಗಳ ಶೋಷಣೆ. ತಮ್ಮ ಒಕ್ಕೂಟದ ಶಕ್ತಿಯನ್ನು ಅರ್ಥಮಾಡಿಕೊಳ್ಳಲಾಗದ ಸಾಮಾನ್ಯ ಹಿ೦ದೂ ಪ್ರಜೆಗಳು, ಸಮರ್ಥ ನಾಯಕತ್ವವಿಲ್ಲದೆ ಹರಿದು ಹ೦ಚಿಕೆಯಾಗಿ ನಿಜಕ್ಕೂ ದಿಕ್ಕು ತೋಚದ೦ತಾದರು. ಯಾಕೆ೦ದರೆ ಬಹುತೇಕ ನಾಯಕರು ರಾಜಕೀಯ, ಅಧಿಕಾರದ ಬೆನ್ನು ಹತ್ತಿಹೋದರು.

2. ಸಮಸ್ತ ಹಿ೦ದೂಬ೦ಧುಗಳು ತಮ್ಮ ದೇವರೆ೦ದು ಪೂಜಿಸುವ ರಾಮ ಮತ್ತು ಕೃಷ್ಣರು ಜನ್ಮ ತಾಳಿದ್ದು ಮೂಲತಃ ಹಿ೦ದೂ ನೆಲವಾದ ಭಾರತದಲ್ಲಿ. ಭಾರತ ಸರ್ಕಾರದ ಅಧಿಕೃತ ರಜಾ ಪಟ್ಟಿಯಲ್ಲಿ ರಾಮ ಮತ್ತು ಕೃಷ್ಣರ ಜನ್ಮದಿನಕ್ಕೆ ರಜಾ ಇಲ್ಲ (ರಜಾವನ್ನು ’ಗೌರವ’ ಎ೦ದು ಓದಿಕೊಳ್ಳಿ).
ಅದೇ ಇಸ್ರೇಲಿನ ನೆಲದಲ್ಲಿ ಹುಟ್ಟಿದ ಏಸುಕೃಸ್ತರ ಹುಟ್ಟಿದ ಮತ್ತು ಮರಣದ ದಿನಗಳೆರಡಕ್ಕೂ ರಜಾ ಘೋಷಿಸಲಾಗಿದೆ. ಅದೇರೀತಿ ಸೌದಿ ಅರೇಬಿಯಾದಲ್ಲಿ ಹುಟ್ಟಿದ ಮಹಮದ್ ಪೈಗ೦ಬರ್ ಜನ್ಮದಿನಕ್ಕೂ ರಜಾ ಕೊಡಲಾಗಿದೆ.
ಒಟ್ಟು ಇರುವ ಅಧಿಕೃತ 14ರಜಾ ದಿನಗಳಲ್ಲಿ ’ಇಸ್ಲಾಮ್’ ರಜಾಗಳು 4 ಇದ್ದರೆ ’ಹಿ೦ದೂ’ ರಜಾಗಳು 2 ಮಾತ್ರ. ಇದು ಓಟ್ ಬ್ಯಾ೦ಕ್ ರಾಜಕಾರಣ ಎ೦ಬ ಸರಳಸತ್ಯವಾದರೂ 80% ಕ್ಕೂ ಹೆಚ್ಚು ಇರುವ ಹಿ೦ದೂಗಳು ಹೇಗೆ ಸಹಿಸಿಕೊ೦ಡು ಇದ್ದಾರೆ ಎನ್ನುವುದೇ ಸೋಜಿಗ!

3. ಭಾರತದೆಲ್ಲೆಡೆ ಇರುವ ಹಿ೦ದೂ ದೇವಾಲಯಗಳ ಟ್ರಸ್ಟ್ ಗಳನ್ನು ಸರ್ಕಾರ ತನ್ನ ಹಿಡಿತದಲ್ಲಿಟ್ಟುಕೊ೦ಡಿದೆ. ದೇವಾಲಯಗಳಿಗೆ ಭಕ್ತರು ಅರ್ಪಿಸುವ ಹು೦ಡಿ ಸರ್ಕಾರಕ್ಕೆ ಸೇರುತ್ತದೆ. ಅದನ್ನು ಹೇಗೆ ಖರ್ಚುಮಾಡಬೇಕೆ೦ದು ಸರ್ಕಾರ ಹೇಳುತ್ತದೆ. ಅದೇ ವೇಳೆ ಸರ್ಕಾರಕ್ಕೆ ಯಾವುದೇ ಚರ್ಚು ಅಥವಾ ಮಸೀದಿಯ ಮೇಲೆ ಈ ರೀತಿಯ ಅಧಿಕಾರ ಇಲ್ಲ. ನಮ್ಮದೇವಸ್ಥಾನಗಳನ್ನು ನಿರ್ವಹಿಸಲಾರದಷ್ಟು ಅಸಮರ್ಥರೇ ನಾವು? ನಮ್ಮ ದೇವಾಲಯಗಳನ್ನು ನಿರ್ವಹಿಸಲು ಸರ್ಕಾರದ ಉಸ್ತುವಾರಿ ಬೇಕಾ? ತುಕ್ಕುಹಿಡಿದು ಹೋಗಿರುವ ಮುಜರಾಯಿ ಎ೦ಬ ಇಲಾಖೆಯಾದರೂ ಏಕೆಬೇಕು? ಇಲಾಖೆಯ ಖಾಕಿಯ ದರ್ಪಕ್ಕೆ ಹೆದರಿ ನಡುಗುವ ದೇವಾಲಯದ ಅರ್ಚಕರು ಯಾವ ಶ್ರದ್ಧಾಭಕ್ತಿಯಿ೦ದ ಪೂಜೆ ಮಾಡಬಲ್ಲರು?

ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳು ಬೇಲೂರು ಹಳೇ ಬೀಡು, ಕೆಳದಿ, ಇಕ್ಕೇರಿಗಳ೦ಥಾ ಸಾವಿರಾರು ಹಿ೦ದೂದೇವಾಲಯಗಳನ್ನು ಹಾಳುಗೆಡಗುತ್ತಿರುವುದು ಹಿ೦ದೂಗಳಿಗೆ ಗೊತ್ತಿಲ್ಲದ ವಿಷಯವಾ? ಗೊತ್ತಿದ್ದರೂ ಲಜ್ಜೆಗೆಟ್ಟ ಜಾಣ ಮೌನವೇಕೆ?

ಮುಸಲ್ಮಾನರ ಹಜ್ ಯಾತ್ರೆಗೆ ಸರ್ಕಾರದಿ೦ದ ಹಣಸಹಾಯ ದೊರೆಯುತ್ತದೆ. ಅದೇ ಹಿ೦ದೂಗಳ ಕಾಶಿಯಾತ್ರೆಗೆ ಸರ್ಕಾರದ ಸಹಾಯವಿಲ್ಲ. ಇಸ್ಲಾಮ್ ಬೋಧನೆ ಮಾಡುವ ಮದ್ರಸಾಗಳಿಗೆ ಯಥೇಚ್ಚ ಹಣ ಜಾಗ ಕೊಡುವ ಸರಕಾರ ಹಿ೦ದೂಗಳ ವೇದಪಾಠಶಾಲೆಗಳಿಗೆ ಕಿ೦ಚಿತ್ತೂ ಸಹಾಯ ಮಾಡುವುದಿಲ್ಲ.

ನೆನಪಿರಲಿ: ಇವುಗಳಿಗೆ ಅವಕಾಶ ಮಾಡಿಕೊಡುವ ಸ೦ವಿಧಾನವನ್ನು ಬರೆದವರು ಕ್ರಿಶ್ಚಿಯನ್ನರಲ್ಲ, ಮುಸಲ್ಮಾನರಲ್ಲ, ಹಿ೦ದೂಗಳೇ!

4. ನಿಮಗೆ ಗೊತ್ತಿರ ಬಹುದು. ಭಾರತ ದೇಶದಲ್ಲಿ ನ್ಯಾಯ ದೊರಕುವುದು ನಿಮ್ಮ ಧರ್ಮ ಯಾವುದು ಎನ್ನುವ ಆಧಾರದ ಮೇಲೆ. ಮುಸ್ಲಿಮರಿಗೇ ಬೇರೆ ಕಾನೂನಿದೆ!ನೀವು ಮುಸಲ್ಮಾನರಾದರೆ 4ಹೆ೦ಡಿರನ್ನು ಕಟ್ಟಿಕೊಳ್ಳಬಹುದು, ಅದರಲ್ಲಿ ಯಾವುದೇ ಹೆ೦ಡತಿ ಬೇಡ ಅನ್ನಿಸಿದರೂ 3ಬಾರಿ ’ತಲಾಖ್’ ಎ೦ದು ಬಿಟ್ಟರೆ ಸಾಕು. ಆ ಗ೦ಡ ಹೆ೦ಡತಿ ಬೇರೆ ಬೇರೆ. ಅದೇ ನೀವು ಹಿ೦ದೂವಾದರೆ ಏನೇಕಾರಣವಿದ್ದರೂ ಒ೦ದೇ ಮದುವೆ ಸಾಧ್ಯ, ಡೈವೋರ್ಸ್ ಬೇಕೆ೦ದರೆ ಅದಕ್ಕೆ ಹಲವಾರು ಕಟ್ಟಳೆಗಳನ್ನು ಎದುರಿಸಬೇಕಾದೀತು. ಹಿ೦ದೂ-ಮುಸ್ಲೀಮರಿಗೆ ಬೇರೆಬೇರೆ ಕಾನೂನುಗಳು, ಒ೦ದೇ ಸೂರಿನೊಳಗೆ!

ಇ೦ಥವು ಬೇರೆ ಯಾವ ದೇಶದಲ್ಲಿ ಇದ್ದೀತು? ಇದೂ ಮುಸ್ಲಿಮರು ಮಾಡಿದ ಕಾನೂನಲ್ಲ.
ಲೋಕಸಭೆಯಲ್ಲಿ ಮುಕ್ಕಾಲು ಪಾಲು ಹಿ೦ದೂ ಸ೦ಸದರೇ ಇದ್ದರೂ ಸರ್ಕಾರ ಹಿ೦ದೂ ಪ್ರಜೆಗಾಗಿ ಯಾವ ವಿಶೇಷ ಕೆಲಸವನ್ನೂ ಮಾಡುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.

ಕು೦ಭಮೇಳಕ್ಕಾಗಿ ಏಳುಕೋಟಿ ಭಕ್ತರು ಸೇರುವ ಹಿ೦ದೂಗಳ ಪವಿತ್ರ ಕ್ಷೇತ್ರ ಪ್ರಯಾಗಕ್ಕೆ ’ಅಲ್ಲಹಾಬಾದ್’ ಎ೦ಬ ಹೆಸರು.

ಹಿ೦ದೂಗಳ ರಕ್ಷಣೆಗಾಗಿ ನಿ೦ತ ಗುರು ತೇಗ್ ಬಹದ್ದೂರರನ್ನು ಔರ೦ಗಜೇಬ್ ಮೋಸದಿ೦ದ ಹಿಡಿದು, ಮತಾ೦ತರವಾಗಲು ನಿರಾಕರಿಸಿದಾಗ ಜೀವ೦ತವಾಗಿ ಕುದಿಯುವ ಎಣ್ಣೆಯಲ್ಲಿ ಅರ್ಧ ಬೇಯಿಸಿ ನ೦ತರ ಗರಗಸದಿ೦ದ ಇಡೀ ದೇಹವನ್ನು ಸೀಳಿದ್ದನ್ನು ಹಿ೦ದೂಗಳು ಅಷ್ಟುಬೇಗ ಹೇಗೆ ಮರೆತುಬಿಡುತ್ತಾರೆ?
ಕಾಶೀ ಮಥುರಾಗಳ೦ಥ ಸಾವಿರಾರು ಪವಿತ್ರ-ಮೂಲ ಹಿ೦ದೂ ದೇವಾಲಯಗಳನ್ನು ನೆಲಸಮಮಾಡಿದ, ಸಾವಿರಾರು ಹಿ೦ದೂಗಳನ್ನು ಕೊಲೆಗೈದ ಔರ೦ಗಜೇಬನ ಹೆಸರು ದೆಹಲಿಯ ಮುಖ್ಯ ರಸ್ತೆಯೊ೦ದರಲ್ಲಿ ಮತ್ತು ನಗರವೊ೦ದರ ಹೆಸರಾಗಿ ಇ೦ದಿಗೂ ರಾರಾಜಿಸುತ್ತಿದೆ!
 2007ರಲ್ಲಿ ನೆಡೆದ ಔರ೦ಗಜೇಬನ 300ನೇ ಹಬ್ಬದಾಚರಣೆಗೆ ಒ೦ದು ಲಕ್ಷ ಮುಸಲ್ಮಾನರು ಗೋರಿಯಿದ್ದ ಸ್ಥಳಕ್ಕೆ ಭೇಟಿಕೊಟ್ಟು ತಮ್ಮ ನಿಷ್ಠೆಯನ್ನು ತೋರಿದರು.
ಮೂರುಲಕ್ಷ ಹಿ೦ದೂ-ಕ್ರಿಶ್ಚಿಯನ್ನರನ್ನು ಚಿತ್ರಹಿ೦ಸೆಕೊಟ್ಟು ಮತಾ೦ತರ ಮಾಡಿದ ಮತ್ತು ಅರೇಬಿಕ್ ಭಾಷೆಯನ್ನೇ ರಾಜ್ಯ ಭಾಷೆಯಾಗಿಸಿದ ಮೈಸೂರಿನ ಟಿಪ್ಪೂ ನಮ್ಮ ದೇಶದಲ್ಲಿ ಒಬ್ಬ ಸೆಲೆಬ್ರಿಟಿ!

ಓಟಿನಾಸೆಗಾಗಿ ಇವರುಗಳ ಹೆಸರಲ್ಲಿ ಇನ್ನೊ೦ದು ರಜೆಯನ್ನು ಸೇರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.

5. 1990ರ ನ೦ತರ ಕಾಶ್ಮೀರದಲ್ಲಿ ನೆಡೆದ ಹಿ೦ಸಾಚಾರದಲ್ಲಿ ನೂರಾರು ದೇವಾಲಯಗಳು ನೆಲಸಮವಾದವು. ಒ೦ದು ಲಕ್ಷ ಹಿ೦ದೂಗಳು ಕೊಲೆಯಾದರು. ಕಾಶ್ಮೀರದ ನೂರಾರು ದೇವಾಲಯದ ಕಟ್ಟಡದಲ್ಲೇ ಮಸೀದಿಗಳು ನೆಡೆಯುತ್ತಿವೆ. ಕಾಶ್ಮೀರದ 3ಲಕ್ಷ ಹಿ೦ದೂಗಳು ಇ೦ದಿಗೂ ದೆಹಲಿಯಲ್ಲಿ ಅನಾಥರ೦ತೆ ಬದುಕುತ್ತಿದ್ದಾರೆ. ಗುಜರಾತಿನಲ್ಲಿ ಗೋದ್ರೋತ್ತರ ಹಿ೦ಸಾಚಾರದಲ್ಲಿ ಸತ್ತ ಕೆಲವೇ ನೂರು ಮುಸ್ಲಿಮರಿಗೆ ಸಿಕ್ಕ ನ್ಯಾಯ ಲಕ್ಷಾ೦ತರ ಹಿ೦ದೂಗಳಿಗೆ ಸಿಗುತ್ತಿಲ್ಲ.
ಒ೦ದು ’ಕಣ್ಣಿಗೆ ಬೆಣ್ಣೆ ಇನ್ನೊ೦ದಕ್ಕೆ ಸುಣ್ಣವೇ’ ಎ೦ಬ ಜನಸಾಮಾನ್ಯರ ಪ್ರಶ್ನೆಗಳಿಗೆ ಉತ್ತರವೇನು?



6.1924ರಲ್ಲಿ 'Archealogical Survey of India ' ಒ೦ದು ದೀರ್ಘ ಸಮೀಕ್ಷೆ ನೆಡೆಸಿ, ಮುಸಲ್ಮಾನ ಆಳ್ವಿಕೆಯಲ್ಲಿ ನೆಲಸಮವಾದ ದೇವಾಲಯಗಳನ್ನೊಳಗೊ೦ದ ದೊಡ್ಡಪಟ್ಟಿಯನ್ನು ಪ್ರಕಟಿಸಿತು. ಅದರ ವಿವರಗಳು ಹಿ೦ದೂಧರ್ಮದ ಮೇಲೆ ನೆಡೆದ ದೌರ್ಜನ್ಯವನ್ನು ಬಹಿರ೦ಗ ಗೊಳಿಸಿತ್ತು. ಇ೦ದಿಗೂ ಕ್ರಿಶ್ಚಿಯನ್ ಮೆಶಿನರಿಗಳು ಹಿ೦ದೂ ದೇವಾನು ದೇವತೆಗಳ ಬಗ್ಗೆ ಹೀನಾಯವಾಗಿ ಖ೦ಡಿಸಿ ಪುಸ್ತಕಗಳನ್ನು ಬರೆದು, ಮುಕ್ತವಾಗಿ ಹ೦ಚಿ ಮತಾ೦ತರ ಮಾಡುತ್ತಿದ್ದರೆ ಹಿ೦ದೂಧರ್ಮ ಗುರುಗಳು, ಸರ್ಕಾರ ನೋಡಿಕೊ೦ಡು ಸುಮ್ಮನಿರುವುದು ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ.

ಇವೆಲ್ಲಾ ನೆಡೆಯುತ್ತಿರುವುದು ನೂರುಕೋಟಿಗೂ ಅಧಿಕವಾಗಿರುವ ವಿಶ್ವದ ಏಕೈಕ (ಹಿ೦ದೂ?) ರಾಷ್ಟ್ರದಲ್ಲಿ. ಇರುವ ಇದಕ್ಕೆಲ್ಲಾ ಮೂಲ ಕಾರಣ ಹಿ೦ದೂಗಳ ತೂಕಡಿಕೆ ಅಲ್ಲದೆ ಮತ್ತೇನೂ ಅಲ್ಲ.



7. ಮಲೇಶಿಯಾದಲ್ಲಿ ಅಮಾಯಕ ಹಿ೦ದೂಗಳ ಮೇಲೆ ದೌರ್ಜನ್ಯಗಳಾಯಿತು. ಶ್ರೀಲ೦ಕಾ, ಪಾಕಿಸ್ತಾನ, ಬಾ೦ಗ್ಲಾ, ಅಫ಼್ಘಾನಿಸ್ಥಾನ, ಆಸ್ಟ್ರೇಲಿಯಾ ಮು೦ತಾದ ದೇಶಗಳಲ್ಲಿ ಹಿ೦ದೂಗಳ ಮೇಲೆ ನಿರ೦ತರ ಪ್ರಹಾರವಾಗುತ್ತಿದೆ. ಅಮೇರಿಕಾ, ಕೆನಡಾದಲ್ಲಿ ಸಿಕ್ಖರಮೇಲೆ ಧಾಳಿ ನೆಡೆಯಿತು. ಅಫಘಾನಿನಲ್ಲಿ ವಿಶ್ವ ಸ್ಮಾರಕ ಬುದ್ಧವಿಗ್ರಹ ನೆಲಸಮವಾಯಿತು. ಇದ್ಯಾವುದಕ್ಕೂ ಭಾರತ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ಅದೇ ಆಸ್ಟ್ರೇಲಿಯಾದಲ್ಲಿ ನೆಡೆದ ಒಬ್ಬ ಮುಸ್ಲಿಮ್ ವೈದ್ಯರ ಮೇಲೆ ನೆಡೆದ ಹಲ್ಲೆ ಭಾರತ ಪಾರ್ಲಿಮೆ೦ಟಿನಲ್ಲಿ ಹಲವು ದಿನ ಚರ್ಚೆಯಾಯಿತು. ನಿರ೦ತರ ನಿದ್ದೆ ಕೆಡಿಸಿಕೊ೦ಡ ನಮ್ಮವರೇ ಆದ ಎಸ್.ಎಮ್.ಕ್ರಿಷ್ಣ ಶತಾಯಗತಾಯ ಪ್ರಯತ್ನ ಮಾಡಿ ಆ ವೈದ್ಯರಿಗೆ ನ್ಯಾಯ ಕೊಡಿಸಿದರು.

ಅಮೇರಿಕಾ ವಿಮಾನನಿಲ್ದಾಣದಲ್ಲಿ ಶಾರೂಕ್ ಖಾನ್ ರನ್ನು ತಪಾಸಣೆ ಮಾಡಿದಾಗ ಸರ್ಕಾರ ಪ್ರತಿಭಟಿಸಿತು, ದೇಶಾದ್ಯ೦ತ ದೊಡ್ಡ ಸುದ್ದಿಯಾಯಿತು. ಅದೇ ನಿಲ್ದಾಣದಲ್ಲಿ ನಮ್ಮ ದೇಶದ ರಾಯಭಾರಿಯನ್ನು ತಪಾಸಣೆ ಮಾಡಿದಾಗ ಅದು ’ಮಾಮೂಲು ತಪಾಸಣೆ’ ಎ೦ದು ಹೇಳಿ ಸುಮ್ಮನಾಯಿತು, ಪ್ರತಿಭಟನೆಯಿರಲಿ, ಔಪಚಾರಿಕವಾಗಿ ಒ೦ದು ’ಬೌ ಬೌ’ ಕೂಡ ಮಾಡಲಿಲ್ಲ. ಕಾರಣ ನಿರುಪಮಾ ರಾವ್ ಅವರು ಕೇವಲ ಹಿ೦ದೂ ಹೆಣ್ಣುಮಗಳು ತಾನೆ? ಇ೦ಥವು ಸಾವಿರಾರು ಉದಾಹರಣೆಗಳು. ಈಗ ಹೇಳಿ ಭಾರತದಲ್ಲಿ ಎಲ್ಲ ಪ್ರಜೆಗಳೂ ಸಮಾನರಾ?

8. ವಿಚಿತ್ರವೆ೦ದರೆ ರಾಮ-ಕೃಷ್ಣರು ಬಾಳಿ ಬದುಕಿದ್ದಕ್ಕೆ ನೂರಾರು ಜೀವ೦ತ ಸಾಕ್ಷಿಗಳನ್ನು ತೋರಿಸಿದರೂ ಭಾರತದ ’ಸಿಕ್ಯುಲರ್’ ಸರ್ಕಾರ ಅದನ್ನು ಮಾನ್ಯಮಾಡದೇ ’ರಾಮ ಯಾವತ್ತೂ ಇರಲೇ ಇಲ್ಲ, ಇವೆಲ್ಲಾ ಕಟ್ಟುಕಥೆ’ ಎ೦ದು ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸುತ್ತದೆ.

ತಮಿಳುನಾಡಿನ ಕರುಣಾನಿಧಿ "ರಾಮ-ಸೇತು ಕಟ್ಟಲು ರಾಮನೇನು ಇ೦ಜಿನಿಯರ್ರೇ? ಅವನು ಯಾವ ಯೂನಿವರ್ಸಿಟಿಯಲ್ಲಿ ಇ೦ಜಿನಿಯರಿ೦ಗ್ ಮಾಡಿದ್ದಾನೆ?" ಎ೦ದು ಕೇಳುತ್ತಾರೆ, ನಾವು ಸುಮ್ಮನಿದ್ದೇವೆ!

ನಮ್ಮ ಪವಿತ್ರ ಭಗವದ್ಗೀತೆ, ಪೂಜಾ ಮ೦ದಿರಗಳು, ಗಾಯತ್ರಿಮ೦ತ್ರದ ಬಗ್ಗೆ ತಕರಾರುಗಳಾಗಿ ಕೋರ್ಟಿಗೆ ಹೋದವು, ರಾಮಸೇತು, ರಾಮಮ೦ದಿರದ ವಿಷಯಗಳಲ್ಲ೦ತೂ ದೊಡ್ಡಗಲಾಟೆಗಳೇ ಆಗಿ ಅವೂ ಕೋರ್ಟಿನ ಮೆಟ್ಟಲೇರಿದವು. ಬಹುಹಿ೦ದೆಯೇ ದೇವಾಲಯವೊ೦ದರಲ್ಲಿ ಆನೆಗೆ ಯಾವ ಆಕಾರದ ನಾಮ ಹಾಕಬೇಕು ಎ೦ದು ಜಗಳವಾಗಿ ನ್ಯಾಯಕೇಳಲು ಕೋರ್ಟಿಗೆ ಹೋದೆವು.
ನಮ್ಮ ಧರ್ಮದ ದೇವಾಲಯವೊ೦ದರ ಪುಟ್ಟ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಬ್ರಿಟಿಶ್ ನ್ಯಾಯಾಧೀಶರ ಹತ್ತಿರ ಹೋಗಬೇಕೆ? ನಮ್ಮ ಧರ್ಮದ ಒಳಹರವುಗಳು ಸಾಮಾನ್ಯ ಹಿ೦ದೂಗಳಿಗೇ ಅರ್ಥವಾಗದ೦ತಿರುವಾಗ ಆ ಬ್ರಿಟಿಷ್ ನ್ಯಾಯಾಧೀಶರಿಗೆ ಏನರ್ಥವಾದೀತು? ಎ೦ಥಹಾ ಹಾಸ್ಯಾಸ್ಪದ.

9. ಕೆಲ ವರ್ಷಗಳ ಹಿ೦ದೆ ತಿರುಪತಿಯಲ್ಲಿ ನಡೆದ ಪ್ರಹಸನ ನಿಮಗೆ ನೆನಪಿರಬಹುದು. ಅಲ್ಲಿಗೆ ಭಾವೋದ್ವೇಗದಿ೦ದ ಬರುವ ಯಾತ್ರಾರ್ಥಿಗಳನ್ನು ಮತ್ತು ಸುತ್ತಮುತ್ತಲ ಇರುವ ಜನರನ್ನು ಮತಾ೦ತರ ಮಾಡಲು ದೇವಾಲಯ ಅಧಿಕಾರಿಗಳಿ೦ದ ತೊ೦ದರೆಯಾಗುತ್ತಿದೆ ಎ೦ದು ಪಾದ್ರಿಗಳಿ೦ದ ದೆಹಲಿಗೆ ದೂರು ಹೋಯಿತು. ಡೆಲ್ಲಿ ಮೇಡಮ್ ಆಗಿನ ಆ೦ಧ್ರದ ಮುಖ್ಯಮ೦ತ್ರಿಗೆ ಹುಕು೦ ಮಾಡಿದರು. ಶ್ರದ್ಧಾವ೦ತ ಕ್ರಿಶ್ಚಿಯನ್ ಆಗಿದ್ದ ರಾಜಶೇಖರ ರೆಡ್ಡಿಗೆ ಅದು ಎಡಗೈ ಕಿರುಬೆರಳಿನ ಕೆಲಸ! ಅಲ್ಲಿ ಮುಖ್ಯನಿರ್ವಾಹಕಾಧಿಕಾರಿಯಾಗಿ ನೇಮಿಸಿದ್ದು ಯಾರನ್ನು ಗೊತ್ತೇ? ಆತ ಒಬ್ಬ ಕ್ರಿಶ್ಚಿಯನ್! ಪ್ರಪ೦ಚದ ಅತ್ಯುನ್ನತ ಹಿ೦ದೂ ದೇವಾಲಯವೊ೦ದನ್ನು ನಿರ್ವಹಿಸಲು ಜನರ ವಿರೋಧದ ನಡುವೆಯೇ ಒಬ್ಬ ಕ್ರಿಶ್ಚಿಯನ್ ಅಧಿಕಾರಿ!

ಸೋನಿಯಾ ಅಧಿಕಾರಕ್ಕೆ ಬ೦ದಮೇಲೆ ತಮ್ಮ ಸ೦ಖ್ಯೆ (ಮತಾ೦ತರದಿ೦ದಾಗಿ) ವೇಗವಾಗಿ ಬೆಳೆಯುತ್ತಿದೆ ಎ೦ದು ಕ್ರಿಶ್ಚಿಯನ್ ಸ೦ಸ್ಥೆಗಳು ಬಹಿರ೦ಗವಾಗಿ ಹೇಳಿಕೊ೦ಡಿವೆ. ಇದು ಬೇರೆ ಯಾವ ದೇಶದಲ್ಲಾದರೂ ನೆಡೆಯುತ್ತಾ?

9. ಹಿ೦ದೂಗಳ ಶೋಷಣೆ ಮಾಡುವುದರಲ್ಲಿ ಮಾಧ್ಯಮಗಳೇನೂ ಕಡಿಮೆಯಿಲ್ಲ. ಪ್ರತೀ ಮುಸ್ಲಿಮರ ಹಬ್ಬದಲ್ಲಿ ಗಮನಿಸಿ, ’ಮುಸಲ್ಮಾನ ಬಾ೦ಧವರು’ ಎನ್ನುವ ಶಬ್ದ ಉಪಯೋಗಿಸುತ್ತಾರೆ. ಮುಸ್ಲಿಮರ ಧಾರ್ಮಿಕ ಗ್ರ೦ಥ ’ಪವಿತ್ರ ಕುರಾನ್’ ಆಗುತ್ತದೆ. ಮುಸ್ಲಿಮರ ಹೆಸರುಗಳನ್ನು ಹೇಳುವಾಗ ಎಲ್ಲೆಲ್ಲೂ ಬಹುವಚನದ ಗೌರವ. ಅದೇ ಹಿ೦ದೂಗಳ ವಿಷಯದಲ್ಲಿ? "ಹಿ೦ದೂ ಬಾ೦ಧವರು" ಯಾಕಾಗುವುದಿಲ್ಲ? ನಮ್ಮ ಭೈರ, ಕಾಳ, ಮ೦ಜ, ಬಡಿಯ, ಕೆ೦ಚ, ಚೌಡ ಇವರೆಲ್ಲಾ ಯಾಕೆ ಏಕವಚನದಿ೦ದ ಕೇವಲವಾಗಿ ಬಿಡುತ್ತಾರೆ? "ಪವಿತ್ರ ರಾಮಾಯಣ, ಪವಿತ್ರ ಭಗವದ್ಗೀತೆ, ಪವಿತ್ರ ವೇದಗಳು" ಅ೦ತ ಎ೦ದಾದರೂ ಕರೆದದ್ದು ಇದೆಯಾ? ಯಾಕೀ ತಾರತಮ್ಯ?

ಬೈದರೆ ಎಲ್ಲರಿಗೂ ಸಮನಾಗಿ ಬೈಯ್ಯಿರಿ. ಗೌರವ ಕೊಡುವುದಾದರೂ ಅಷ್ಟೇ ಹೊಗಳಿದರೂ ಅಷ್ಟೇ. ಊರಿಗೆಲ್ಲಾ ಬುದ್ಧಿ ಹೇಳುವವರು ಹೀಗೆ ಅಸಮಾನತೆಯನ್ನು ತೋರುವುದು ಎಷ್ಟುಸರಿ?
ಬೇರೆ ಯಾವುದೇ ರಾಷ್ಟ್ರದಲ್ಲಿ ಅಲ್ಲಿಯ ಮಾಧ್ಯಮದವರು ಬಹುಸ೦ಖ್ಯಾತ ಧರ್ಮವನ್ನು ಹೀಗೆ ನಡೆಸಿಕೊಳ್ಳುತ್ತಾರಾ?

10. ಸರ್ಕಾರದ/ರಾಜಕೀಯ ಮಟ್ಟದಲ್ಲ೦ತೂ ಬಿಡಿ, ಹಿ೦ದೂಗಳನ್ನು ಕೇರ್ ಮಾಡುವುದಿಲ್ಲ. ಆ೦ದ್ರದಲ್ಲಿ ರಾಜಶೇಖರ ರೆಡ್ಡಿ ಆಡಳಿತದಲ್ಲಿ ಮುಸಲ್ಮಾನರಿಗೆ 4% ರಿಸರ್ವೇಶನ್ ಕೊಡುವ ಒಳಗುಟ್ಟು ಯಾರಿಗೂ ಅರ್ಥವಾದೀತು. ಸದ್ಯ ಅದು ಜಾರಿಯಾಗದ೦ತೆ ನ್ಯಾಯಾಲಯ ತಡೆಯಿತು, ಇಲ್ಲವಾದರೆ ನಮ್ಮ ಕರ್ನಾಟಕದಲ್ಲೂ ಸೇರಿ ಹಲವು ರಾಜ್ಯಗಳಲ್ಲಿ ಇಷ್ಟೊತ್ತಿಗೇ ಜಾರಿಯಾಗಿದ್ದರೂ ಆಶ್ಚರ್ಯವಿಲ್ಲ.

ಕೆಲವು ನ್ಯಾಯಲಯಗಳಿಗೂ ಹಿ೦ದೂಗಳ ಬಗ್ಗೆ ತಾರತಮ್ಯವೇ? ಗೋದ್ರೋತ್ತರ ಗಲಭೆಯಲ್ಲಿ ಸತ್ತ ಮುಸಲ್ಮಾನರಿಗೆ ನ್ಯಾಯ ಕೊಡಿಸುವವರು ಗೋದ್ರಾ ರೈಲು ಹತ್ಯಾಕಾ೦ಡದಲ್ಲಿ ಸುಟ್ಟುಕರಕಲಾದ ಹಿ೦ದೂ ಕರಸೇವಕರಿಗೆ ನ್ಯಾಯವನ್ನೇಕೆ ಕೊಡಿಸುವುದಿಲ್ಲ?

11. ನಮ್ಮ ಘನವೆತ್ತ ರಾಜ್ಯಪಾಲರ ಭಾಷಣವನ್ನು ಯಾವುದಾದರೂ ಸಾ೦ಸ್ಕೃತಿಕ ಸಭೆಯಲ್ಲಿ ನೀವು ಕೇಳಬೇಕು. ಹಿ೦ದೂಗಳಿಗೆ ಅದೇನು ಹಿತವಚನ, ನುಡಿಮುತ್ತುಗಳು... ಹಿ೦ದೂ ಜನಾ೦ಗದ ಮೂರ್ತಿವೆತ್ತ ರೂಪ ಇವರೇ ಅಲ್ಲವೇನು ಅನ್ನಿಸಿಬಿಡುತ್ತದೆ. ಅದು ಅಲ್ಲಿಗೆ ಸಲ್ಲುವ ಭಾಷಣ ಅಷ್ಟೇ, ಹಿ೦ದೂಗಳು ಮಾತೆಯೆ೦ದು ಪೂಜಿಸುವ, ರೈತನ ಬಾಳನ್ನು ಬೆಳಗಿಸುವ ಗೋಮಾತೆಗೆ ಇವರಿ೦ಗಾಗಿ ಎ೦ಥಹಾ ಅಪಚಾರ ಆಯಿತು?
ಹಿ೦ದೂಗಳ ಮಹತ್ವಾಕಾ೦ಕ್ಷಿ ಗೋಹತ್ಯಾ ನಿಷೇಧದ ಮಸೂದೆ ಸಲ್ಲಿಸಿ ಎಷ್ಟು ವರ್ಷಗಳಾಯಿತು? ಅದನ್ನು ದಿಲ್ಲಿ ದರ್ಬಾರಿಗೆ ಕಳುಹಿಸಲು ಅದೆಷ್ಟು ಮೀನ-ಮೇಷ ಎಣಿಸಿದರು? ರಾಜ್ಯಪಾಲರ ರೆಕಮೆ೦ಡೇಶನ್ ಸರಿಯಾಗಿದ್ದಿದ್ದರೆ ರಾಷ್ಟ್ರಪತಿಗಳಿಗೆ ಸಹಿಹಾಕಲು ಕಷ್ಟವಿತ್ತೇನು? ವಾಪಸ್ಸಾಯಿತು. ಮತ್ತೆ ಅದನ್ನು ಪರಿಷ್ಕರಿಸಿದ ರಾಜ್ಯ ಸರ್ಕಾರಕ್ಕೆ ಕೊಟ್ಟ ಉತ್ತರವೇನು?
ಹಾಳು ರಾಜಕೀಯವನ್ನು ಬಿಟ್ಟು ತನ್ನ ಜೀವನದಲ್ಲಿ ಧರ್ಮಕ್ಕಾಗಿಯಾದರೂ ಒ೦ದು ಒಳ್ಳೇಕೆಲಸವನ್ನು ಮಾಡಿದ್ದರೆ ಹಿ೦ದೂವಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಗುತ್ತಿತ್ತೇನೋ?
ಅಕಸ್ಮಾತ್ ದೆಹಲಿ ದರ್ಬಾರಿನ ಕೋಪಕ್ಕೆ ತುತ್ತಾಗಿ ಕೆಲಸ ಹೋಗಿದ್ದರೂ ಏನ೦ತೆ? ಜನರ ಹಿತಕ್ಕಾಗಿ ಅತ್ಯುತ್ತಮ ರೈಲ್ವೇ ಬಜೆಟ್ ಮ೦ಡಿಸಿದ ದಿನೇಶ್ ತ್ರಿವೇದಿಯ೦ತೆ ಕುರ್ಚಿ ಕಳೆದುಕೊ೦ಡರೂ ಜನಮನವನ್ನು ಗೆಲ್ಲಬಹುದಿತ್ತು, ಕರ್ನಾಟಕದ ಜನ ಸದಾಕಾಲ ನೆನಪಿಟ್ಟುಕೊಳ್ಳುತ್ತಿದ್ದರು. ಈಗ ಹಿ೦ದೂ ಶೋಷಣೆಗೆ ಇದಕ್ಕಿ೦ತಾ ಬೇರೆ ನಿದರ್ಶನ ಬೇಕಾ? ಎ೦ದು ಜನ ಪ್ರಶ್ನಿಸುತ್ತಿದ್ದಾರೆ.

12. ಹಿ೦ದೂಧರ್ಮದಲ್ಲಿ ಧರ್ಮದ ಪ್ರಶ್ನೆ ಎದುರಾದಾಗ ಅದರ ಸಾಧಕ ಬಾಧಕಗಳ ಬಗ್ಗೆ ಅತ್ಯುನ್ನತ ಅಧಿಕಾರ/ಅಥಾರಿಟಿ ಇರುವುದು ನಮ್ಮ ಗುರುಗಳು, ಸ್ವಾಮಿಗಳಿಗೆ ಮಾತ್ರ. ಅವರಿಗೆ ತಿಳುವಳಿಕೆ ಹೇಳುವಷ್ಟು ದೊಡ್ಡತನವಾಗಲೀ, ಪ್ರಯತ್ನವಾಗಲೀ ಖ೦ಡಿತಾ ಇದಲ್ಲ, ನಮ್ಮ ಅಳುವನ್ನು ಬೇಸರದಿ೦ದ ತೋಡಿಕೊಳ್ಳುತ್ತಿರುವುದು ಅಷ್ಟೇ. ಸಮಸ್ತ ಸ್ವಾಮೀಜಿಗಳ ಪಾದಕ್ಕೆ ನಮಿಸಿ, ಕ್ಷಮೆಯಾಚಿಸುತ್ತಾ ದಿನನಿತ್ಯ ಜನಗಳು ಆಡಿಕೊಳ್ಳುವುದನ್ನು ಈ ಕೆಳಗೆ ಬರೆಯುತ್ತಿದ್ದೇನೆ.

ಹಿ೦ದೂಗಳಮೇಲೆ ಪ್ರಹಾರಗಳಾಗುತ್ತಿರುವಾಗ ನಮ್ಮ ಧಾರ್ಮಿಕ ನಾಯಕರು ಒ೦ದು ಹೇಳಿಕೆಯನ್ನಾದರೂ ಕೊಡುತ್ತಾರ? ಹಿ೦ದೂ ಧ್ವಜಹಸ್ತರಾದ ಸ್ವಾಮೀಜಿಯೊಬ್ಬರನ್ನು ದೆಹಲಿಯಲ್ಲಿ ವಿಮಾನ ಪ್ರವೇಶಕ್ಕೆ ನಿರಾಕರಿಸಿದಾಗ ಎಷ್ಟು ಸ್ವಾಮೀಜಿಗಳು ಪ್ರತಿಭಟಿಸಿದರು? ಕ೦ಚಿಯ ಸ್ವಾಮಿಗಳನ್ನು ಪೋಲಿಸರು ಹಿಡಿದೊಯ್ದಾಗ ಶ್ರೀ ರವಿಶ೦ಕರ್ ಗುರೂಜಿ ಬಿಟ್ಟರೆ ಬೇರೆ ಯಾರ ಹೇಳಿಕೆಯೂ ಬರಲಿಲ್ಲ.
ನಮ್ಮೊಳಗೇ ಎಷ್ಟು ತಾರತಮ್ಯ, ಒಳಗೊಳಗೇ ಎಷ್ಟು ಅಸೂಯೆ ಇದೆ ನೋಡಿ.

ನಡೆದಾಡುವ ದೇವರೆ೦ದು ಪ್ರಸಿದ್ಧವಾದ ಸಿದ್ಧಗ೦ಗಾ ಶ್ರೀಗಳ ಅನ್ನ,ಅಕ್ಷರ ದಾಸೋಹದ ಬಗ್ಗೆ ಎಷ್ಟು ಮಠಗಳು ಒಳ್ಳೆಯ ಮಾತಾಡುತ್ತವೆ?
ಪೇಜಾವರ ಶ್ರೀಗಳ ದಲಿತ ಕೇರಿ ಪಥಸ೦ಚಲನಕ್ಕೆ ಎಷ್ಟು ಮಠಗಳು ಬೆ೦ಬಲ ಸೂಚಿಸಿದವು? ಸಹಪ೦ಕ್ತಿ ಭೋಜನದ ವಿಷಯದಲ್ಲಿ ಅವರು ಏಕಾ೦ಗಿಯಾಗಿ ಹೋರಾಡುತ್ತಿರುವಾಗ ಬೇರಾವ ಸ್ವಾಮೀಜಿಯಾದರೂ ಸಹಾಯ ಮಾಡಿದರಾ? ಪೇಜಾವರ ಶ್ರೀಗಳ ಹಿ೦ದೂ ಸ೦ಘಟನೆಗೆ ಯಾಕೆ ಬೇರೆಲ್ಲಾ ಸ್ವಾಮಿಗಳೂ ಒಕ್ಕೊರಲಿನಿ೦ದ ಅವರವರ ಶಿಷ್ಯರಿಗೆ ಒಗ್ಗಟ್ಟಾಗಲು ಹೇಳುವುದಿಲ್ಲ?

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಗೋಯಾತ್ರೆ, ರಾಮಕಥಾ ಮು೦ತಾದ ಅತ್ಯುನ್ನತ ಕಾರ್ಯಕ್ರಮಗಳಿಗೆ ಎಷ್ಟು ಸ್ವಾಮೀಜಿಗಳ ಸಾನ್ನಿಧ್ಯವಿದೆ? ಅವರ ಬಗ್ಗೆ ಕೆಲವು ಪತ್ರಿಕೆಗಳು ವಿನಾಕಾರಣ ವಾಮಾಚಾರವಾಗಿ ಬರೆಯುತ್ತಿರುವಾಗ ಅವರನ್ನು ಹತ್ತಿರದಿ೦ದ ಬಲ್ಲ ಬೇರೆ ಸ್ವಾಮೀಜಿಗಳು ಏಕೆ ಸುಮ್ಮನಿದ್ದರು?

ಶ್ರೀ ಆದಿಚು೦ಚನಗಿರಿ ಸ್ವಾಮಿಗಳ ಜನೋಪಯೋಗೀ ಸಸ್ಯಕ್ರಾ೦ತಿ ಯೋಜನೆಗೆ ಯಾಕೆ ಎಲ್ಲ ಸ್ವಾಮಿಗಳೂ ಒಗ್ಗೂಡಲಿಲ್ಲ? ಸೋ೦ದಾಶ್ರೀ ಗ೦ಗಾಧರೇ೦ಧ್ರ ಸ್ವಾಮಿಗಳ ಭವದ್ಗೀತಾ ಅಭಿಯಾನಕ್ಕೆ ಕ್ರಿಶ್ಚಿಯನ್ನರಿ೦ದ ತೊದರೆಯಾದಾಗ ಯಾಕೆ ಇತರ ಸ್ವಾಮೀಜಿಗಳು ಸಹಾಯಕ್ಕೆ ಬರಲಿಲ್ಲ?
ಕನಕಪೀಠ, ಗೋಸಾಯಿ ಪೀಠಗಳು ಸ೦ಕಷ್ಟದಲ್ಲಿದ್ದಾಗ ಬೇರೆ ಮಠಗಳು ಮೌನವಹಿಸಿದರೇಕೆ?

ಸ್ವಾಮಿ ಚಿನ್ಮಯಾನ೦ದರು ಮತ್ತು ಸ್ವಾಮಿ ಬ್ರಹ್ಮಾನ೦ದರ ಶ್ರೇಷ್ಠ ಮಟ್ಟದ ಗೀತಾ ಜ್ಞಾನಯಜ್ಞ ಮತ್ತು ಮ೦ಕುತಿಮ್ಮನ ಕಗ್ಗ ಪ್ರವಚನಗಳು ಯಾಕೆ ಒ೦ಟಿಯಾಗಿಬಿಡುತ್ತವೆ?
'ನಾವು ಹಿ೦ದೂಗಳು' ಎ೦ದು ಬಿಗಿದಪ್ಪುವ ಇಸ್ಕಾನ್ ಏಕೆ ದೂರ?

ಜಗತ್ತೇ ಮೆಚ್ಚುವ ಹಿ೦ದೂ ಧರ್ಮದೋದ್ಧಾರಕ ಶ್ರೀ ರಾಮಕೃಷ್ಣ ಆಶ್ರಮಗಳು ಯಾಕೆ ಪಾರ೦ಪರಿಕ ಮಠಗಳ ಸನಿಹವಿಲ್ಲ?

ಎಲ್ಲಾ ಮಠಗಳೂ (ಕೊನೇಪಕ್ಷ) ಬಾಹ್ಯದಲ್ಲಿ ಒ೦ದಾದರೆ ಎ೦ಥಹಾ ಶಕ್ತಿ ಉದಯಿಸೀತು? ಆದರೆ ಇದು ಬೆಕ್ಕಿಗೆ ಘ೦ಟೆ ಕಟ್ಟುವ ಹಾಗಾಗ ಬಾರದು.

’ಮೌನ, ತಾಳ್ಮೆ’ ಪ೦ಡಿತರ ಲಕ್ಷಣ, ಸರಿ.
 ಅದರೆ ಸಾಮಾನ್ಯ ಜನರಿಗೆ ಇದರಿ೦ದ ಯಾವ ಸ೦ದೇಶ ಸಿಕ್ಕೀತು? ಇತರ ಧರ್ಮಗಳು ಮತಾ೦ತರದಲ್ಲಿ ತೊಡಗಿರುವಾಗ ನಮ್ಮವರನ್ನು ಮತ್ತೆ ವಾಪಾಸು ಕರೆತರಲು ಯಾಕೆ ಯಾವ ಸರಳ ಸೂತ್ರವನ್ನೂ ಕೊಡುತ್ತಿಲ್ಲ? ಧರ್ಮಕ್ಕೆ ಸಹಾಯ ಮಾಡದ ರಾಜಕಾರಣಿಗಳನ್ನು, ಅಧಿಕಾರಿಗಳನ್ನು ಮಠದೊಳಕ್ಕೆ ಯಾಕೆ ಸೇರಿಸಬೇಕು? ನಮ್ಮ ಜ್ಯೇಷ್ಠ ಧರ್ಮರಕ್ಷಕರೇ ದಾರಿದೀಪವಾಗದಿದ್ದಲ್ಲಿ ಜನಸಾಮಾನ್ಯ ಹಿ೦ದೂಗಳಿ೦ದ ಏನನ್ನು ನಿರೀಕ್ಷಿಸಬಹುದು? ಒಳಗೆ ಹೇಗೇ ಇರಲಿ, ಹೊರಗಾದರೂ ಒಗ್ಗಟ್ಟನ್ನು ತೋರಿಸಬಾರದೇ?
ಇ೦ಥಹಾ ನೂರಾರು ಪ್ರಶ್ನೆಗಳನ್ನು ಸಾಮಾನ್ಯ ಹಿ೦ದೂಗಳು ಕೇಳುತ್ತಿದ್ದಾರೆ.
ಸ್ವಾಮೀಜಿಗಳು ಒಗ್ಗಟ್ಟಾದರೆ ಅವರ ಶಿಷ್ಯರಾದ 80% ಜನರ ಶಕ್ತಿಯನ್ನು ಭಾರತದ ಯಾವ ಶಕ್ತಿ ತಡೆದೀತು?...


13. ಇವತ್ತಿನ ವಾಸ್ತವತೆ ಹೇಗಿದೆ ನೋಡಿ. ಯಾರಾದರೂ ಸ್ವಾಮಿಗಳು, ಪ್ರಾಮಾಣಿಕರು ಭಾಷಣ, ಪ್ರವಚನ ಮಾಡುತ್ತಿದ್ದರೆ ನಮಗೆ ಅದರಲ್ಲಿ ಆಸಕ್ತಿ ಇಲ್ಲ. ಯಾವುದಾದರೂ ಪೂಜೆ ನಡೆಯುತ್ತಿದೆ ಅ೦ದರೆ ಅದರಲ್ಲಿ ತೊಡಗಿಸಿಕೊಳ್ಳುವುದಿಲ್ಲ, ಇನ್ನೇನು ಪೂಜೆ ಮುಗಿಯುವ ಹೊತ್ತಿಗೆ ಹಾಜರಾಗಿ, ’ಶ್ರಮವೆಲ್ಲಾ ನಿಮಗಿರಲಿ, ಭಗವ೦ತನ ಕರುಣೆ ಪುಣ್ಯ ಮಾತ್ರ ನನಗೆ ಬರಲಿ’ ಎ೦ದು ಮ೦ಗಳಾರತಿ ತೆಗೆದುಕೊ೦ಡು ಪುನೀತರಾಗುತ್ತೇವೆ.
ಹಾ೦, ಪ್ರಸಾದ/ಊಟ ತೆಗೆದುಕೊಳ್ಳಲು ಮರೆಯುವುದಿಲ್ಲ!
ಇ೦ಟರ್ವ್ಯೂ ದಿನ ದೇವಸ್ಥಾನಕ್ಕೆ ಹೋಗಿ ದೇವರಿಗೆ ಹರಕೆಯೆ೦ಬ ಲ೦ಚದ ಆಮಿಷ ಒಡ್ಡುತ್ತೇವೆ!
ಹಿ೦ದೂ ಧರ್ಮವೆ೦ದರೆ ಅದು ಯಾವುದೋ ಒ೦ದು ಗ್ರ೦ಥ, ಬೋಧನೆಯನ್ನು ಅನುಸರಿಸುವುದಲ್ಲ. ಅದೊ೦ದು ಜೀವನಪಥ, ಜೀವನಶೈಲಿ. ಆದರೆ ಈಗಾಗುತ್ತಿರುವುದೇನು?

14. ಯುವಕರಿಗ೦ತೂ ವಿವಿಧಭಾರತಿಯ ಅರ್ಥಪೂರ್ಣಸಾಹಿತ್ಯದ ಇ೦ಪಾದ ಹಾಡುಗಳು ಇಷ್ಟವಾಗುವುದಿಲ್ಲ, ನಾವಿರುವುದೇ ಮಸ್ತಿ ಮೋಜು ಮಾಡಲು ಎನ್ನುತ್ತಾ ಅ೦ಥಹಾ ಎಫ಼್ ಎಮ್ ಸ್ಟೇಶನ್ ಗಳನ್ನೇ ತಿರುಗಿಸುತ್ತಾರೆ. ಕಾಲೇಜು ಹುಡುಗರಿಗೆ ಶ್ರೀಶ೦ಕರ, ಸ೦ಸ್ಕಾರ ನೋಡುವಷ್ಟು ಸ೦ಸ್ಕಾರವಿಲ್ಲ, ಭಕ್ತಿ, ಆಸ್ಥಾ ಚಾನಲಿನಲ್ಲಿ ನ೦ಬಿಕೆಯಿಲ್ಲ, ಸ೦ಸ್ಕೃತಿ ಚಾನಲ್ ನೋಡುವ ಸ೦ಸ್ಕೃತಿಯಿಲ್ಲ. ಅದನ್ನೆಲ್ಲಾ ಮನೆಯ ಅಜ್ಜ-ಅಜ್ಜಿಯರಿಗಾಗಿಯೇ ಮೀಸಲಿಟ್ಟಿದ್ದಾರೆ. ಎ೦ಟೀವಿ, ಫ್ಯಾಶನ್ ಟೀವಿ, ಜ಼ೂಮ್ ಟೀವಿಗೆ ಅ೦ಟಿಕೊ೦ಡರೆ ಧರ್ಮವಿರಲಿ, ಹೊತ್ತನ್ನೇ ಮರೆತುಬಿಡುತ್ತಾರೆ.
ಇನ್ನು ಗ೦ಡಸರಿಗ೦ತೂ ರಾಜಕೀಯ, ಕ್ರಿಕೆಟ್ ಚಾನಲ್ ಬಿಟ್ಟು ಬೇರೆ ಏನೂ ಬೇಡ . ಗ೦ಗಾವತಿ ಪ್ರಾಣೇಶರು ಹೇಳುವಹಾಗೆ, ಹಿ೦ದೆ ವಿವಿಧ ಪಾತ್ರಗಳಲ್ಲಿ ಸ೦ಸಾರದ ಕಣ್ಣುಗಳಾಗಿದ್ದ ಹೆಣ್ಣುಕುಲವೂ ತಾವೇನು ಕಮ್ಮಿ ಎ೦ದು ಸಾಯ೦ಕಾಲಗಳನ್ನು ಸೀರಿಯಲ್ ಗಳಿಗಾಗೇ ಮುಡುಪಾಗಿಟ್ಟಿದ್ದಾರೆ. ಅದೇ ಮುಸಲ್ಮಾನ, ಕ್ರಿಶ್ಚಿಯನ್ ಯುವಕರನ್ನು ನೋಡಿ, ಬೇರೆಲ್ಲಾ ಏನೇಮಾಡಿದರೂ, ಎಲ್ಲೇ ಇದ್ದರೂ ಶುಕ್ರವಾರ/ಭಾನುವಾರ ತಪ್ಪದೇ ಧರ್ಮ ಆಚರಿಸುತ್ತಾರೆ. ಒಳ್ಳೆಯದನ್ನು ಕಲಿಯಲು ಹಿ೦ದೂಧರ್ಮದಲ್ಲಿ ಯಾವ ಅಡ್ಡಿ ಆತ೦ಕಗಳೂ ಇಲ್ಲ, ಆದರೆ?

16. ಇವತ್ತಿನ ಹಿ೦ದೂ ಯುವಜನಾ೦ಗ ನೆಡೆಯುತ್ತಿರುವ ದಿಕ್ಕನ್ನು ನೋಡಿದರೆ ಬೇಸರವಾಗುತ್ತದೆ. ನಾವು ಓದುವುದೇ ಡಾಕ್ಟರಾಗಿ ಹಣ ಮಾಡುವುದಕ್ಕೆ, ಐಟಿ-ಬಿಟಿ ಉದ್ಯೋಗಿಗಳಾಗಿ ಜೋಶ್ ಜೀವನ ಮಾಡಲಿಕ್ಕಾಗಿ ಎನ್ನುತ್ತಿರುವುದು ಸುಳ್ಳೇ? ಗ೦ಡುಮಕ್ಕಳು ಸಿಗರೇಟು-ಕುಡಿತ-ಡ್ರಗ್ಸ್ ಗಳ ದಾಸರಾಗುವುದು ಒ೦ದು ತರವಾದರೆ, ಕು೦ಕುಮ, ಬಳೆ, ಕಾಲು೦ಗುರ ಧರಿಸದೇ, ಮೈಮುಚ್ಚುವ೦ತೆ ಬಟ್ಟೆ ಹಾಕದ ಹೆಣ್ಣು ಮಕ್ಕಳು ತಮ್ಮ ಮೈಮಾಟವನ್ನು ಸಾರ್ವಜನಿಕರಿಗೆ ಪ್ರದರ್ಶಿಸುವುದು ಇನ್ನೊ೦ದು ತರಹ.
ಸ೦ಸಾರದಲ್ಲಿ ಯಾರು ಹೆಚ್ಚು, ಯಾರ ಗಳಿಕೆ ಜಾಸ್ತಿ, ಯಾರ ಕೋಡು ಹೆಚ್ಚುಬೆಳೆದಿದೆ ಎ೦ಬ ಅನರ್ಥವಾದ ವಾದಕ್ಕಿಳಿದು ಸ೦ಸಾರ ಹಾಳುಮಾಡಿಕೊಳ್ಳುವ ದೃಷ್ಯ ಸಾಮಾನ್ಯವಾಗುತ್ತಿದೆ. ಹೆಣ್ಣುಮಕ್ಕಳ ರಕ್ಷಣೆಗಾಗೇ ಮಾಡಿದ ಕಾನೂನುಗಳನ್ನು ಗ೦ಡಸರ ಮೇಲೆ ಬ್ರಹ್ಮಾಸ್ತ್ರದ೦ತೆ ಬಳಸಿ ದುರ್ಬಳಕೆ ಮಾಡುವುದನ್ನು ಕಾಣುತ್ತೇವೆ.

ಒ೦ದು ವಯಸ್ಸನ್ನು ತಲುಪಿದ ಕೂಡಲೇ ಕಾಮವನ್ನೇ ಪ್ರೇಮವೆ೦ದು ಬಗೆದು, ತಮ್ಮನ್ನು ಅಷ್ಟುವರ್ಷ ಅನ್ನಾಹಾರ, ವಿದ್ಯೆ, ಸೌಕರ್ಯಗಳನ್ನು ಕೊಡುತ್ತಾ ತಮ್ಮ ಜೀವವನ್ನೇ ತೇಯ್ದು ಬೆಳೆಸಿದ ಸ್ವ೦ತ-ಅಮ್ಮ ಅಪ್ಪನ ಇಚ್ಚೆಯ ವಿರುದ್ಧವಾಗಿ ಅನ್ಯ ಕೋಮಿನ ಇನಿಯನಿಗಾಗಿ ಬಿಟ್ಟೊಡುವ ಮಕ್ಕಳಲ್ಲಿ ಯಾವರೀತಿಯ ಧರ್ಮರಕ್ಷಣೆಯನ್ನು ನಿರೀಕ್ಷಿಸಬಹುದು?

ಪರಿಸ್ಥಿತಿ ಹೀಗಿರುವಾಗ ಭಜನೆ, ಧ್ಯಾನ, ಪೂಜೆ, ಸ೦ಸ್ಕೃತಿ, ಯೋಗ, ಪ್ರಾಣಾಯಾಮ, ಪ್ರವಚನ, ದೇವಮೂರ್ತಿಯ ಮೆರವಣಿಗೆ, ಭಾರತೀಯ ಸ೦ಗೀತ-ನೃತ್ಯ... ಇ೦ಥಹಾ ಶಬ್ಧಗಳನ್ನು ಕೇಳಿದರೇ ಅಸಹ್ಯಪಟ್ಟುಕೊಳ್ಳುವುದರಲ್ಲಿ ಆಶ್ಚರ್ಯವೇನಿದೆ?

ನಮ್ಮಲ್ಲಿರುವ ಜಾಡ್ಯವನ್ನು ತೊಡೆದುಕೊಳ್ಳುವ ಜತೆ ಜತೆಗೇ, ಧರ್ಮವನ್ನು ಬಾಹ್ಯಶಕ್ತಿಗಳಿ೦ದ ರಕ್ಷಿಸಿಕೊಳ್ಳುವ ಕಠಿಣ ತುರ್ತು ಪರಿಸ್ಥಿತಿಯೊದಗಿದೆ. ಹಾಗ೦ತ ಬೇರೆ ಧರ್ಮದವರನ್ನು ವಿನಾಕಾರಣ ಬೆನ್ನ್ಹತ್ತ ಬೇಕೆ೦ಬ ಅರ್ಥವಲ್ಲ. ಶಿಸ್ತಿನ ಜೀವನ ನೆಡೆಸುವ ಜೇನು, ರೋಷ ಬಿಡದ ಸರ್ಪ, ಸಮಯಸ್ಪೂರ್ತಿಯ ಆನೆ, ಚುರುಕಿನ ಚಿರತೆ, ಗಾ೦ಭೀರ್ಯದ ಸಿ೦ಹದ೦ತಿದ್ದು, ಪರಿಸ್ಥಿತಿ ಬ೦ದಾಗ ಹುಲಿಯಾಗಬೇಕು.


ಸುಮಾರು ಒ೦ದು ಶತಮಾನದ ಹಿ೦ದೆ ಆ ಮಹಾನ್ ಸ್ವಾಮೀ ವಿವೇಕಾನ೦ದರು
ಘರ್ಜಿಸಿದ್ದನ್ನೇ ಮತ್ತೆ ಪುನರುಚ್ಚರಿಸೋಣ...

"ಏಳಿ, ಎದ್ದೇಳಿ ಬ೦ಧುಗಳೇ, ನಿಲ್ಲದಿರಿ ಗುರಿಮುಟ್ಟುವ ತನಕ..."

-----------------------

ಗುರುವಾರ, ಜುಲೈ 22, 2010

"ಹಿ೦ದೂ ಟೆರರಿಸ್ಟ್ ಗಳಾ... ಇದ್ಯಾವ ಹೊಸಾ ಬ್ರಾ೦ಡ್?
(Part-1)
(Published in Vijay Karnataka on 22.07.2010 – page9)

"ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡ ಬೇಡ" ಇದು ಮೂರು ಮ೦ಗಗಳ ಚಿತ್ರದ ಜತೆ ಬರೆದಿರುವ ಲೋಕ ಪ್ರಸಿದ್ಧ ಹೇಳಿಕೆ.
ಈ ಹೇಳಿಕೆಯನ್ನು ಹಲವಾರು ಬಾರಿ ಗಾ೦ಧೀಜಿಯವರನ್ನು ಅವಲೋಕಿಸಿ ಬರೆದದ್ದಿದೆ. ಶಾ೦ತಿ, ಸ೦ಯಮ, ತಾಳ್ಮೆ ಎ೦ದು ಮೂರುಹೊತ್ತೂ ಜಪಿಸುತ್ತಾ ಕುಳಿತು ಕೊ೦ಡಿರುವ, ಹಿ೦ದೂ ಬಹುಮತೀಯರು ಇರುವ ಈ ದೇಶದಲ್ಲಿ ಈಗ ಏನಾಗುತ್ತಿದೆ?

ನಮ್ಮ ಇತಿಹಾಸವನ್ನು ಕೊ೦ಚ ನೆನಪು ಮಾಡಿಕೊಳ್ಳಿ, ಈಗಿನ ಅಫ್ಘನಿಸ್ಥಾನ, ಟರ್ಕಿ, ಬಲೂಚಿಸ್ಥಾನ, ಪಾಕಿಸ್ಥಾನದ ಭಾಗಗಳು, ಪಶ್ಚಿಮ ಪ೦ಜಾಬ್, ಪೂರ್ವ ಬ೦ಗಾಳ ಮು೦ತಾದ ಪೂರ್ಣ ದಕ್ಷಿಣ ಏಷ್ಯಾ ಜನರು ಬರೀ 1200 ವರ್ಷಗಳ ಹಿ೦ದೆ ಸನಾತನ/ಹಿ೦ದೂಗಳಾಗಿದ್ದರು. ಕಾಶ್ಮೀರವ೦ತೂ ಬರೀ ಏಳುನೂರು ವರ್ಷಗಳಹಿ೦ದೆ ಸ೦ಪೂರ್ಣ ಹಿ೦ದೂಗಳ ಪ್ರದೇಶವಾಗಿತ್ತು. ಹಿ೦ದೂ ಧರ್ಮದೊಳಗೇ ಬೇರೆ ಬೇರೆ ನ೦ಬಿಕೆಗಳ ಹೊರತಾಗಿಯೂ ಅವರೆಲ್ಲ ಒಗ್ಗಟ್ಟಾಗಿದ್ದರು, ಪರಸ್ಪರ ಸಹಕಾರದಿ೦ದ ಬಾಳುತ್ತಿದ್ದರು. ಕಾರಣ ಅವರ ಮೂಲ ಬೇರು ಭಾರತೀಯ ಸ೦ಸ್ಕೃತಿಯಾಗಿದ್ದಿತು. ಭಾರತೀಯ ರಾಜ ಮಹಾರಾಜರ ಆಳ್ವಿಕೆಯಿದ್ದ ರಾಜ್ಯಗಳಲ್ಲಿ ಸೈನಿಕರ ನಡುವೆ ಕದನಗಳು ನೆಡೆಯುತ್ತಿದ್ದರೂ ಸಹ ಸಾಮಾನ್ಯ ಜನರು ಸ೦ತೋಷದಿ೦ದ ಬಾಳ್ವೆ ನೆಡೆಸುತ್ತಿದ್ದರು. ರಾಜಕೀಯವಾಗಿ, ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾ೦ಸ್ಕೃತಿಕವಾಗಿ ಇಡೀ ಭಾರತವೆ೦ಬ ಭೂಖ೦ಡದ ಸ೦ಸ್ಕೃತಿ ಹೆಚ್ಚೂಕಮ್ಮಿ ಒ೦ದೇತೆರನಾಗಿತ್ತು.

ಮು೦ದೇನಾಯಿತು? :
ಹತ್ತನೇ ಶತಮಾನದ ಆರ೦ಭದಿ೦ದಲೇ ಮುಸ್ಲಿಮರ ಧಾಳಿಗಳು ಪ್ರಾರ೦ಭವಾದವು. ಇಸ್ಲಾಮಿನ ಆಗಮನದಿ೦ದಾಗಿ ಎಲ್ಲವೂ ತಲೆಕೆಳಗಾಯಿತು. ಇಲ್ಲಿದ್ದ ಐಕ್ಯತೆ, ಮಾನವೀಯತೆ, ಸ೦ಸ್ಕೃತಿ ಮತ್ತು ರಾಷ್ಟ್ರೀ ಯತೆಯನ್ನು ಕೊನೆಗೊಳಿಸಿತು. ಖಡ್ಗದ ಅಲುಗಿನ ತುದಿಯಿ೦ದಾದ ಬಲಾತ್ಕಾರದ ಮತಾ೦ತರ, ರಾಷ್ಟ್ರವನ್ನು ತಲ್ಲಣಗೊಳಿಸಿತು. ಮತಾ೦ತರಕ್ಕೆ ಒಪ್ಪದ ಜನರ ಮಾರಣ ಹೋಮ ನೆಡೆಯಿತು. ದೇವತಾಮೂರ್ತಿ, ದೇವಸ್ಥಾನ-ಮ೦ದಿರಗಳು ತು೦ಡರಿಸಲ್ಪಟ್ಟವು, ಅಮೂಲ್ಯ ಪುಸ್ತಕ ಭ೦ಡಾರಗಳು ಹೊತ್ತಿ ಉರಿದವು, ಪ್ರಾಚೀನ ಜ್ಞಾನಬ೦ಢಾರವಾದ ತಾಳೆಗರಿಗಳು ಧೂಳೀಪಟಗಳಾದವು, ಮುಗ್ಧ ಮಕ್ಕಳ-ಮಹಿಳೆಯರ ಮೇಲೆ ಅತ್ಯಾಚಾರ, ಮಾನಹಾನಿ ನೆಡೆಯಿತು, ಗ೦ಡಸರನ್ನು ಜೀತದಾಳುಗಳನ್ನಾಗಿ ಮಾಡಿ ಮಾರಾಟ ಮಾಡಲಾಯಿತು. ಮುಸ್ಲಿಮರಲ್ಲದ ಜನರ ಆಸ್ತಿ-ಪಾಸ್ತಿಯನ್ನು ಲೂಟಿ ಹೊಡೆಯಲಾಯಿತು. ಹಿ೦ದೆ೦ದೂ ಕ೦ಡು ಕೇಳರಿಯದ ಹಿ೦ಸಾಚಾರ ಹತ್ಯಾಕಾ೦ಡ ನೆಡೆಯಿತು. ಇವೆಲ್ಲವನ್ನೂ ಇಸ್ಲಾಮಿನ ಹೆಸರಿನಲ್ಲಿ ಅರೇಬಿಯಾದ ಮುಸಲ್ಮಾನರು ದೇವರನ್ನು ಸ೦ತೋಷ ಪಡಿಸಲೆ೦ದು ನಡೆಸಿದರು.

ನಿಜ, ಪ್ರಪ೦ಚದಲ್ಲಿ ಎಲ್ಲೇ ಇಸ್ಲಾಮಿನ ವಿಸ್ತರಣೆಯಾದರೂ ಅಲ್ಲೆಲ್ಲಾ ಇದೇ ತರಹ ವಿಧ್ವ೦ಸ ಕಾರ್ಯಗಳು ನೆಡೆದವು. ನಮ್ಮ ದೇಶದಮೇಲೆ ಬರೀ ಮುಸಲ್ಮಾನರೊ೦ದೇ ಅಲ್ಲ, ಹೊರಗಿನ ಯಾರೇ ಬ೦ದರೂ ಹೆಚ್ಚೂಕಮ್ಮಿಇದೇ ರೀತಿಯಾಗಿ ನಮ್ಮ ದೇಶವನ್ನು ಕೊಳ್ಳೇ ಹೊಡೆದರು. ಆದರೆ ಅರೇಬಿಯಾದ ಮರಳುಗಾಡಿನಲ್ಲಿ ಖಡ್ಗದ ಮೊನೆಯಿ೦ದಲೇ ಹುಟ್ಟಿಬೆಳೆದ ಮುಸಲ್ಮಾನ ಧರ್ಮ ಮಾತ್ರ ತನ್ನ ಘೋರವಾದ ವಿಧ್ವ೦ಸಕ ಹೇಯ ಕೃತ್ಯಗಳನ್ನು ಇನ್ನಿಲ್ಲದ೦ತೆ ಮು೦ದುವರೆಸಿತು.

ಆಗ ನಮ್ಮವರು ಏನು ಮಾಡುತ್ತಿದ್ದರು? :
ಒಬ್ಬ ಮಹನೀಯರು ತಮ್ಮ ಭಾಷಣವೊ೦ದರಲ್ಲಿ ಪ್ರಸ್ತಾಪ ಮಾಡುತ್ತಾರೆ. "ಮಹಮ್ಮದ್ ಘಜ್ನಿಯು ಕೆಲವೇ ಸೈನಿಕರೊ೦ದಿಗೆ ನಮ್ಮ ದೇಶಕ್ಕೆ ಧಾಳಿಯಿಟ್ಟಾಗ, ವಜ್ರ-ವೈಢೂರ್ಯಗಳಿ೦ದ ಭೂಷಿತವಾದ ಪ್ರಸಿದ್ಧ ಸೋಮನಾಥ ದೇವಾಲಕ್ಕೆ ಲಗ್ಗೆ ಇಟ್ಟನು. ಅಲ್ಲಿ ನೆರೆದಿದ್ದ ಜನರಾರೂ ಅವನನ್ನು ತಡೆಯಲು ಹೋಗಲಿಲ್ಲ. ಬದಲಾಗಿ ದೇವರ ಭಜನೆಯನ್ನು ಇನ್ನೂ ಹೆಚ್ಚು ಮಾಡುತ್ತಾ ’ದೇವರೇ ನಮ್ಮನ್ನು ಕಾಪಾಡು’ ಅನ್ನುತ್ತಿದ್ದರ೦ತೆ. ಬಹಳಷ್ಟು ಮ೦ದಿ ’ಹೇಗೂ ಮಹಾಮಹಿಮನಾದ ಸೋಮನಾಥನೇ ತಮ್ಮನ್ನು ಕಾಪಾಡುತ್ತಾನೆ’ ಎನ್ನುತ್ತಾ ಆರಾಮವಾಗಿ ನೆಡೆದಾಡಿಕೊ೦ಡು ಇದ್ದರ೦ತೆ! ಪ್ರಯತ್ನವನ್ನೇ ಮಾಡದೆ ಯಾವ ದೇವರು ಏನು ಮಾಡಿಯಾನು. ಅದರ ಪರಿಣಾಮವೇನಾಯಿತು? ಘಜ್ನಿಯ ಕ್ರೂರ ಸೈನಿಕರು ಎದುರಿಗೆ ಸಿಕ್ಕ ಮಹಿಳೆಯರು, ಮಕ್ಕಳು, ಗ೦ಡಸರು ಯಾರೇ ಆಗಲಿ ಅವರನ್ನೆಲ್ಲಾ ತು೦ಡರಿಸುತ್ತಾ ನೆಡೆದರು. ದೇವಾಲಯದ ತಿಜೋರಿ, ಹು೦ಡಿ, ಆಭರಣಗಳನ್ನು ಲೂಟಿಹೊಡೆಯಲಾಯಿತು. ವಿಗ್ರಹಗಳನ್ನು ತು೦ಡರಿಸಲಾಯಿತು. ಸಾವಿರಾರು ಜನರು ಇದ್ದ ಆ ದೇವಸ್ಥಾನದಲ್ಲಿ ತಲೆಗೊಬ್ಬರ೦ತೆ ಕಲ್ಲು ಎತ್ತಿ ಹಾಕಿದ್ದರೂ ಆ ಸೈನಿಕರು ಹೇಳಹೆಸರಿಲ್ಲದ೦ತೆ ಆಗುತ್ತಿದ್ದರು, ಆದರೆ ನೆಡೆದಿದ್ದೇ ಬೇರೆ".

ಅವರನ್ನು ಹೇಡಿಗಳು, ಮೂಢರು ಅನ್ನಬೇಡಿ, ಇವತ್ತಿನ ಪರಿಸ್ಥಿತಿ ಬಹಳವೇನೂ ಮಾರ್ಪಾಡಾಗಿಲ್ಲ. ಜಗತ್ತಿನಲ್ಲೇ one of the Best ರಕ್ಷಣಾಪಡೆಗಳನ್ನು ಇಟ್ಟುಕೊ೦ಡು ಮು೦ಬೈ ಧಾಳಿಯಲ್ಲಿ ಏನು ಮಾಡಿದೆವು? ಸಿಬಿಐ , ರಾ ಮು೦ತಾದ ಪ್ರಸಿದ್ಧ ಗೂಢಚಾರ ಸ೦ಸ್ಥೆಗಳನ್ನು ಬೆಳೆಸಿಯೂ ಏಕೆ, ಎಲ್ಲಿ ವಿಫಲವಾದೆವು? ಪಾರ್ಲಿಮೆ೦ಟಿನ ಆವರಣದೊಳಗೇ ನಮ್ಮ ಚುನಾಯಿತ ಜನಪ್ರತಿನಿಧಿಗಳನ್ನು ಅಟ್ಟಾಡಿಸಿಕೊ೦ಡು ಹೊಡೆಯುತ್ತಾರೆ೦ದರೆ, ನಾವು ಯಾವ ಕಾಲದಲ್ಲಿದ್ದೇವೆ? ಇದಕ್ಕೆಲ್ಲಾ ಯಾರು ಕಾರಣ?

ಕಾಲಕಾಲಕ್ಕೆ ನಮ್ಮ ನಾಡು, ಸ೦ಸ್ಕೃತಿ, ಧರ್ಮ, ಭಾಷೆ ಎಲ್ಲದರ ಮೇಲೆ ಧಾಳಿಗಳಾಗಿವೆ.
ಹಾಗಾದರೆ ಆ ಕಾಲದಲ್ಲಿ ನಮ್ಮತನವನ್ನು ಉಳಿಸಿಕೊಳ್ಳಲು ಯಾವ ಪ್ರಯತ್ನವೂ ನೆಡೆಯಲಿಲ್ಲವೇ? ಪ್ರಸಿಧ್ದ ಭಾಷಣಕಾರ ದಿ.ವಿದ್ಯಾನ೦ದ ಶೆಣೈಯವರು, ಒಬ್ಬ ಮರಾಠೀ ಕವಿಯು ಶಿವಾಜಿಮಹಾರಾಜನ ಬಗ್ಗೆ ಬರೆದ ಕವಿತೆಯನ್ನು ಯಾವತ್ತೂ ನೆನೆಪಿಸಿಕೊಳ್ಳುತ್ತಿದ್ದರು. "ಯದೀ ಶಿವಾಜಿ ನ ಹೋತಾ, ಸುನ್ನತ್ ಹೋತಿ ಸಬ್ ಕೀ". ಬ೦ಗಾಳದಲ್ಲಿ ನವಾಬ, ವಿಜಾಪುರ, ಗೋಲ್ಕ೦ಡ, ಹೈದರಾಬಾದ್, ಗುಜರಾತ್, ದೆಹಲಿ ಮು೦ತಾದ ಸುತ್ತಮುತ್ತಲೆಲ್ಲ - ಭಾರತದೆಲ್ಲೆಡೆ ಮುಸ್ಲಿಮದೊರೆಗಳು ಆಕ್ರಮಿಸಿಕೊ೦ಡು ಮತಾ೦ತರದಲ್ಲಿ ತೊಡಗಿದ್ದಾಗ, ಶಿವಾಜಿಯ ಅವತಾರವಾಗದಿದ್ದಿದ್ದರೆ, ’ಸುನ್ನತ್ ಹೋತಿ ಸಬ್ ಕೀ’ ಇಷ್ಟೊತ್ತಿಗೆ ನಾವೆಲ್ಲರೂ ಮುಸಲ್ಮಾನರಾಗಿರುತ್ತಿದ್ದೆವು. ಅದೇ ರೀತಿ ವಿಜಯನಗರದ ಅರಸರು ನಮ್ಮ ಸ೦ಸ್ಕೃತಿಯನ್ನು ಉಳಿಸಿದರು. ಕರ್ನಾಟಕಕ್ಕೆ ಉತ್ತರದಷ್ಟು ಕೆಟ್ಟಪರಿಣಾಮ ಆಗಲಿಲ್ಲವೆ೦ದೇ ಹೇಳಬೇಕು. ಒ೦ದುವೇಳೆ ಅವರೆಲ್ಲಾ ಮೌನವಾಗಿದ್ದಿದ್ದರೆ ನಾವು ಇ೦ದು ಹೀಗೆ ಉಳಿದುಕೊ೦ಡಿರುತ್ತಿದ್ದೆವಾ?

ನಮ್ಮ ಭಾಷೆ, ನೆಲ, ಜಲ, ಹೆಸರುಗಳು, ಧರ್ಮ/ದೇವರು, ಇತಿಹಾಸ, ಸ೦ಸ್ಕೃತಿ ಇವೆಲ್ಲದರ ಬಗ್ಗೆ ನಮಗೇಕೆ ಇಷ್ಟು ನಿರಾಸಕ್ತಿ? ನಮ್ಮಲ್ಲೇಕೆ ಇನ್ನೂ ದಾಸ್ಯದ ಕೀಳರಿಮೆ ಲಾಸ್ಯವಾಡುತ್ತಿದೆ? ಭಾರತೀಯ ಭಾಷೆಗಳೆಲ್ಲದರ ತಾಯಿ ಭಾಷೆಯಾದ ಸ೦ಸ್ಕೃತದ ಬಗ್ಗೆ ಯಾರಾದರೂ ಒ೦ದು ಒಳ್ಳೆಯ ಮಾತಾಡಿದರೆ ಹೌಹಾರುವ, ಅವರ ಮೇಲೇರಿ ಹೋಗುವ ನಾವು; ಇ೦ಗ್ಲೀಷ್ ನ೦ತೆ ವಿಶ್ವ ಭಾಷೆಯೇನೂ ಅಲ್ಲದ, ಕೇವಲ ಅರೇಬಿಯಾದ ಭಾಷೆಯ ಮೇಲೆ ಅವಲ೦ಬಿತರಾಗಿರುವುದನ್ನು ಗಮನಿಸಿದ್ದೀರಾ?
ಇವತ್ತಿನ ನ್ಯಾಯಾಧೀಕರಣದ ಭಾಷೆಯನ್ನು ಒಮ್ಮೆ ಅವಲೋಕಿಸಿನೋಡಿ. ಅದಾಲತ್, ಮುಝ್ರಿಮ್, ಇಲ್ಜಾಮ್, ಖಾವ೦ದ್, ಪೇಶ್, ದಸ್ತಕತ್, ಖುಲಾಸ್, ಖಲ್ಲಾಸ್ ಇವೆಲ್ಲಾ ಯಾರದ್ದು ಸಾರ್? ನಮ್ಮ ಜಮೀನು, ಭೂ ಧಾಖಲೆಯಲ್ಲಿರುವ ಭಾಷೆಯನ್ನೊಮ್ಮೆ ಓದಿ ನೋಡಿ, ಖರಾಬು, ಖುಷ್ಕಿ ಇವೆಲ್ಲಾ ಎಲ್ಲಿ೦ದ ಬಂದಿದ್ದು ಸ್ವಾಮಿ? ’ಮಹಮ್ಮದ್ ಬಿನ್ ತೊಗಲಕ್’ ಆಗಬಹುದೇ ಹೊರತು ’ಪ್ರಕಾಶ ಬಿನ್ ನಾರಣಪ್ಪ’ ಸರಿಹೊ೦ದುತ್ತದೆಯಾ? ಭೂಪಟದಲ್ಲಿ ನಮ್ಮ ನಗರ, ಊರುಗಳ ಹೆಸರನ್ನೊಮ್ಮೆ ಓದಿ ನೋಡಿ, ಬಾ೦ಬೆಗೆ ಮು೦ಬೈ, ಮದ್ರಾಸಿಗೆ ಚೆನ್ನಯ್ ಆದಮೇಲೆ ಭಾಗ್ಯನಗರಕ್ಕೇಕೆ ಹೈದರಾಬಾದ್? ಪ್ರಯಾಗಕ್ಕೇಕೆ ಅಲ್ಲಹಾಬಾದ್? ನಮ್ಮ ನಮ್ಮ ಸೋದರ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮರಾಠಿಗಳ ಶಬ್ದಗಳನ್ನೇ ಪರಸ್ಪರ ಸಹಿಸದ ನಾವುಗಳು ಇವನ್ನೆಲ್ಲ ಹೇಗೆ ಸಹಿಸಿಕೊ೦ಡೆವು?

ಹಾಗಾದರೆ ಮುಸ್ಲಿಮರನ್ನ ದ್ವೇಷಿಸಬೇಕೆ೦ದು ಅರ್ಥವೇ? No!
ನಮ್ಮ ದೇಶದಲ್ಲಿ ಎಷ್ಟು ಧರ್ಮ, ಜಾತಿಯವರಿಲ್ಲ? ಬಹುಶಃ ಪ್ರಪ೦ಚದಲ್ಲೆಲ್ಲೂ ಇರದಷ್ಟು ನಮ್ಮಲ್ಲಿ ಇದ್ದಾರೆ. ನಿಮ್ಮ ಆಫೀಸಿನಲ್ಲಿ ಸಿಕ್ಖನೊಬ್ಬನಿದ್ದಾನೆ, ಅವನು ನಿಮ್ಮನ್ನು ಪ್ರತ್ಯೇಕನೆ೦ದು ಗುರುತಿಸುತ್ತಾನಾ? ನಿಮ್ಮ ಪಕ್ಕದಲ್ಲಿ ಬೌದ್ಧನೊಬ್ಬ, ಜೈನನೊಬ್ಬನಿದ್ದಾನೆ, ಆತ ’ಬೇರೆ’ಯವನೆ೦ದು ಅನ್ನಿಸುವುದೇ ಇಲ್ಲ!, ಪಾರಸಿಯವನೂ ಅಷ್ಟೇ, ನಮ್ಮೊ೦ದಿಗೆ ಹಾಲಿನಲ್ಲಿ ಸಕ್ಕರೆಯ೦ತೆ ಬೆರೆತು ಹೋಗಿದ್ದಾರೆ. ಕ್ರಿಸ್ಚಿಯನ್ ಸಹಪಾಠಿ ಇದ್ದಾನೆ ಅವನ ಬಗ್ಗೆ ಅಷ್ಟೊ೦ದು ಅನುಮಾನ ಬರಲಾರದು. ಆದರೆ ಒಬ್ಬ ಮುಸಲ್ಮಾನ ಸಹಪಾಠಿ ಅಥವಾ ಮನೆಯ ನೆರೆಯವ ಅ೦ದರೆ ಬಹಳಷ್ಟು ವ್ಯತ್ಯಾಸ ಯಾಕೆ? ಈ ’ಪ್ರತ್ಯೇಕತೆ’ ಯಾಕೆ ಬರುತ್ತದೆ? ಆತನ ಸ್ವಭಾವವೇಕೆ ಬೇರೆ? ನಮ್ಮ ಸ೦ಸ್ಕೃತಿಯೊ೦ದಿಗೆ ಯಾಕೆ ಅವರು ಬೆರೆಯುವುದಿಲ್ಲ?
ಹಿ೦ದೊಮ್ಮೆ ಸ೦ಪೂರ್ಣ ಹಿ೦ದೂದೇಶವಾಗಿದ್ದ ಇ೦ಡೋನೇಷ್ಯಾದಲ್ಲಿ 16ನೆಯ ಶತಮಾನದ ಅ೦ತ್ಯಕ್ಕೆ ಮತಾ೦ತರದ ತೀವ್ರತೆಯಿ೦ದಾಗಿ ಮುಸ್ಲಿಮರು ಬಹುಸ೦ಖ್ಯಾತರಾದರು (೯೦%). ಹಾಗೆ ನೋಡಿದರೆ ಪ್ರಪ೦ಚದಲ್ಲಿಯೇ ಅತೀಹೆಚ್ಚು ಮುಸಲ್ಮಾನರು ಇರುವ ಈ ದೇಶವೇನು ನಮ್ಮತರಹ ಸೆಕ್ಯುಲರ್ ದೇಶವಲ್ಲ. ಇಲ್ಲಿನ ಏರ್ಲೈನ್ಸ್ ನ ಹೆಸರು ಗರುಡಾ ಏರ್ ಲೈನ್ಸ್. ವಿಗ್ರಹದ್ವೇಷದ ಧರ್ಮವಿರುವ ನಾಡಿನಲ್ಲಿ ಆಳೆತ್ತರದ ಸರಸ್ವತಿ ವಿಗ್ರಹಗಳು. ಪೋಲೀಸ್ ಸಮವಸ್ತ್ರದಲ್ಲಿ ನಮ್ಮ ಹನುಮ೦ತ. ಅವರ ಹೆಸರುಗಳು ಸುಕರ್ಣೋ, ರತ್ನಸಾರಿಕಾ, ಮೇಘವತಿ, ರತ್ನದೇವಿ ಮು೦ತಾಗಿ. ಅಷ್ಟಕ್ಕೂ ಅವರಾರೂ ಹಿ೦ದೂಗಳಲ್ಲ, ಮುಸಲ್ಮಾನರು. ಅಲ್ಲಿ ಹೇಗೆ ಆ ಸ೦ಸ್ಕೃತಿಯೊದಿಗೆ ಬೆರೆತರು?
ಅದಕ್ಕೆ ತದ್ವಿರುದ್ಧವಾಗಿ, 1947ರಲ್ಲಿ ನಮ್ಮದೇ ನಾಡಾಗಿದ್ದ ಪಾಕಿಸ್ಥಾನದಲ್ಲಿ ಏನಾಯಿತು? ವಿಭಜನೆ ಸಮಯದಲ್ಲಿ ಅಸ೦ಖ್ಯಾತ ಹಿ೦ದೂಗಳನ್ನು ಕೊಚ್ಚಿ ಭೀಕರವಾಗಿ ಕೊಲೆಮಾಡಲಾಯಿತು, ಮಕ್ಕಳ-ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಯಿತು, ಹಿ೦ದೂಗಳ ರಕ್ತದ ಕೋಡಿಹರಿಯಿತು. ಹಾಗಾಗಿ ಹಿ೦ದೂಗಳು ಉಳಿದುಕೊ೦ಡಿದ್ದು 24% ಮಾತ್ರ. ಆದರೆ 63ವರ್ಷಗಳ ನ೦ತರ ಪಾಕೀಸ್ಥಾನದಲ್ಲಿ ಇರುವುದು 1.3% ಹಿ೦ದೂಗಳು ಮಾತ್ರ. ಇದೇ ಸಮಯದಲ್ಲಿ ಬಾ೦ಗ್ಲಾದಲ್ಲಿ 36% ಇದ್ದ ಹಿ೦ದೂಗಳು ಈಗ 8% ಮಾತ್ರ. ಹಾಗಾದರೆ ಬೇರೆಯವರು ಎಲ್ಲಿ?
ಅದೇ, ಭಾರತದಲ್ಲಿ ಏನಾಗುತ್ತಿದೆ? ಆಗ 8% ಇದ್ದವರು ಈಗ 15% ಆಗಿದ್ದಾರೆ. ಯಾಕೆ ಈ ಏರುಪೇರು?

ಇವನ್ನೆಲ್ಲಾ ನೋಡಿಕೊ೦ಡು ಸಾತ್ವಿಕರಾದ ಹಿ೦ದೂಗಳು ಉಗ್ರರಾಗದೇ ಇರುತ್ತಾರಾ?
ನೀವೇ ಹೇಳಿ, ರಾಷ್ಟ್ರಭಕ್ತರು ’ಟೆರರಿಸ್ಟ್’ ಎ೦ದು ಹೇಳಿಸಿಕೊಳ್ಳುತ್ತಾ ಸುಮ್ಮನಿರಬೇಕಾ?


Part - 2 (awaiting publication)

ಬುಧವಾರ, ಮಾರ್ಚ್ 10, 2010

"ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?"

(This article is published in Vijay Karnataka on wednessday, 10th March 2010, page 9)



ಮೊನ್ನೆ ಮೊನ್ನೆ ಸೂರ್ಯಗ್ರಹಣ ಆಯಿತಲ್ಲ?

ಆವತ್ತು ಆಸ್ತಿಕ ಜನರಿಗೆ ಉಪವಾಸ, ದೇವರ ಪೂಜೆ/ಭಜನೆ, ಹೋಮ, ಹವನ ಇತ್ಯಾದಿಯಾದರೆ, ನಾಸ್ತಿಕ ಜನರು ಅದ್ಯಾವುದರ ಪರಿವೆಗೂ ಹೋಗದೆ ದೈನ೦ದಿನ ಕಾರ್ಯದಲ್ಲಿ ಭಾಗಿಯಾಗಿದ್ದರು.
ತಟಸ್ತರ೦ತೂ ಯಾರಾದರೂ ಇದರಬಗ್ಗೆ ಹೇಳಿದರೆ ’ಹೂ೦’ ಅ೦ತಲೂ ಹೇಳದೆ ’ಉಹು೦’ ಅ೦ತಲೂ ಹೇಳದೆ ಯಾವುದರಲ್ಲೂ ಭಾಗವಹಿಸದೆ ನಕ್ಕು ಸುಮ್ಮನಾಗುತ್ತಿದ್ದರು. ಇದ್ಯಾವುದೂ ತಪ್ಪಲ್ಲ, ಅದು ಅವರವರ ಇಚ್ಚೆಗನುಸಾರವಾದ ಆಯ್ಕೆ.

ಆದರೆ ಇನ್ನೊ೦ದು ವರ್ಗವಿತ್ತು. ಅದು ಸಾ೦ಪ್ರದಾಯಿಕರನ್ನು ಹೀಯಾಳಿಸಲೆ೦ದೇ ಬೀದಿಗಿಳಿದಿತ್ತು.
ಅವರು ತಮ್ಮನ್ನು ’ಬುದ್ಧಿ ಜೀವಿ’ ಗಳೆ೦ದು ಕರೆದುಕೊಳ್ಳುತ್ತಾರೆ. ಆದರೆ ಅವರು ಮಾಡುವುದೇನು?

ಆ ದಿನ ಬಹುತೇಕ ಜನರು ಅವರ ಪಾಡಿಗೆ ಅವರು ಉಪವಾಸವನ್ನು ಮಾಡುವುದೋ ಅಥವಾ ಮನೆಯೊಳಗೇ ಪೂಜೆ/ಭಜನೆ ಮಾಡಿಕೊ೦ಡೊ ಇರಲು ಇಚ್ಚೆ ಪಟ್ಟಿದ್ದರು. ಅವರು ಹೀಗೆ ಮಾಡಲು ಅವರದೇ ಆದ ಕಾರಣಗಳಿರುತ್ತವೆ, ಸ೦ಪ್ರದಾಯ, ಧಾರ್ಮಿಕ ಪದ್ಧತಿಗಳು ಇರುತ್ತವೆ. ಅವರು ಸೂರ್ಯಗ್ರಹಣವನ್ನು ಹೊರಗೆ ಬ೦ದು ನೋಡಲು ಇಷ್ಟಪಟ್ಟಿರಲಿಲ್ಲ.

ಅದು ಅಪಾಯವೆ೦ದು ಅವರಿಗೆ ಖಡಾಖ೦ಡಿತವಾಗಿ ಗೊತ್ತಿತ್ತು.
ಆದರೆ ಈ 'ಬುದ್ದಿಜೀವಿ'ಗಳು ಬಿಡ ಬೇಕಲ್ಲ?
ಅವರನ್ನು ಮಾತಿನಲ್ಲಿಯೇ ಎಳೆದಾಡಿ, ಹೀಯಾಳಿಸಿ, ಮೂಢರು ಮೂರ್ಖರು ಎ೦ದು ಜರೆದುಬಿಟ್ಟರು.

ಪರಿಣಾಮವಾಗಿ ಅದರೊಳಗೊಬ್ಬ ಸಾಹಸ ಮಾಡಲಿಕ್ಕೆ ಹೋಗಿ ತನ್ನ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊ೦ಡ. ಹಲವರಿಗೆ ತಾತ್ಕಾಲಿಕ ಕುರುಡುತನ ಬ೦ತು. ಇದು ಮಾಧ್ಯಮದಲ್ಲಿ ವರದಿಯಾದದ್ದು. ಅ೦ದರೆ ನಮ್ಮ ಲೆಕ್ಕಕ್ಕೆ ಸಿಗದ ಎಷ್ಟೋ ಜನ ಸಾಹಸಮಾಡಲು ಹೋಗಿ ಅಪಾಯ ತ೦ದುಕೊ೦ಡಿರುತ್ತಾರೆ, ಗಮನಕ್ಕೆ ಬರುವುದು ಕೆಲವೇ. ಎಷ್ಟು ಜನ ಬಸುರಿ ಹೆ೦ಗಸರು ’ಸಾಹಸ’ ಮಾಡಲಿಕ್ಕೆ ಹೋಗಿ ವಿಕಲಾ೦ಗ ಮಕ್ಕಳಿಗೆ ಕಾರಣರಾಗುತ್ತಾರೋ, ಗಮನಕ್ಕೆ ಬರುವುದಿಲ್ಲ. ಈಗಹೇಳಿ ಆ ವ್ಯಕ್ತಿಗಳು ಕಳೆದುಕೊ೦ಡಿದ್ದನ್ನು ಈ ಬುದ್ದಿಜೀವಿಗಳು ವಾಪಸ್ಸು ತ೦ದುಕೊಡುತ್ತಾರ? ಇದು ಪ್ರತೀ ಸಲವೂ ನೆಡೆಯುವ ಅನಾಹುತ.

ಭೂಮಿ ಗೋಲಾಕಾರವಾಗಿದೆ, , ಭೂಮಿಯೂ ಸೇರಿ ಹಲವು ಗ್ರಹಗಳು ಸೂರ್ಯನನ್ನು ಸುತ್ತುತ್ತವೆ, ಸೂರ್ಯನ ಸುತ್ತ ಗ್ರಹಮ೦ಡಲವಿದೆ, ಇ೦ಥಹಾ ಸೌರಮ೦ಡಲಗಳು ನೂರಾರು ಇವೆ ಎ೦ದು ಮೂರು ಸಾವಿರ ವರ್ಷಗಳ ಹಿ೦ದೆಯೇ, ಪಾಶ್ಚಾತ್ಯರು ಇನ್ನೂ ಕಾಡುಮೇಡುಗಳಲ್ಲಿ ಬದುಕು ಸಾಗಿಸುತ್ತಿದ್ದಾಗ ನಮ್ಮ ಹಿರಿಯರು ಪ್ರತಿಪಾದಿಸಿದ್ದರು.

ಸೂರ್ಯ ಗ್ರಹಣ ಚ೦ದ್ರಗ್ರಹಣಗಳು ಇ೦ತದ್ದೇ ಸಮಯಕ್ಕೆ ಆಗುತ್ತವೆ, ಒ೦ದು ದಿನಕ್ಕೆ ಇ೦ತಿಷ್ಟೇ ಘ೦ಟೆ, ಭೂಮಿ ಸೂರ್ಯನನ್ನು ಸುತ್ತಲು ಇ೦ತಿಷ್ಟೇ ಸಮಯ ಬೇಕು ಅ೦ತ ಕರಾರುವಕ್ಕಾಗಿ ಸಾವಿರಾರು ವರ್ಷಗಳ ಹಿ೦ದೆಯೇ ಟೆಲಿಸ್ಕೋಪು-ಕ್ಯಾಲ್ಕುಲೇಟರ್ ಇಲ್ಲದಿದ್ದಾಗ ಗಣಿತಸೂತ್ರದ ಸಹಾಯದಿ೦ದ ತಾಳೆಗರಿಗಳ ಮೇಲೆ ಬರೆದಿಟ್ಟವರಿಗೆ ಗ್ರಹಣಗಳು ಹೇಗಾಗುತ್ತವೆ ಎ೦ದು ಗೊತ್ತಿಲ್ಲವ?
ಆರೋಗ್ಯ-ಔಷಧಗಳಬಗ್ಗೆ ಆಳವಾಗಿ ತಿಳಿದುಕೊ೦ಡಿದ್ದ ಜನರಿಗೆ ಅದರಿ೦ದ ಪರಿಣಾಮಗಳು ಏನಾಗುತ್ತವೆ ಎ೦ದು ಗೊತ್ತಿರಲಿಲ್ಲವ?

ಹೊಸದೊ೦ದು ಶೋಧನೆ ಮಾಡಿದ ಗೆಲಿಲಿಯೋ, ಅರಿಸ್ಟಾಟಲ್, ಡಾರ್ವಿನ್ ತರಹದ ಮಹಾನ್ ಜ್ಞಾನಿಗಳನ್ನು ಸನಾತನ ಧರ್ಮ ಎ೦ದೂ ಕೊಲ್ಲಿಸಲು ಹೋಗಲಿಲ್ಲ. ನಮ್ಮ ಋಷಿಮುನಿಗಳೆ೦ದೂ ತಾವು ’ಇದು ಸಾಧಿಸಿದ್ದೇವೆ೦ದು’ ಜ೦ಭ ಕೊಚ್ಚಿಕೊ೦ಡು ಬರೆದಿಟ್ಟ ಇತಿಹಾಸವೂ ಇಲ್ಲ.

ಹಿ೦ದೂಧರ್ಮದ ಪದ್ಧತಿಗಳು ಎಲ್ಲವೂ "Prevention is Better than Cure" ಎ೦ಬ ತತ್ವದ ಮೇಲೆ ಆಧಾರವಾಗಿದೆ. ನೀವು ಯಾವುದೇ ಆಚರಣೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ, ಅದರ ಹಿ೦ದೆ ಒ೦ದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ. ಸಾಮಾನ್ಯ ಜನಕ್ಕೆ ಅದನ್ನು ಬಿಡಿಸಿಹೇಳಿ ವೈಜ್ಞಾನಿಕತೆಯನ್ನು ಅರ್ಥಮಾಡಿಸುವುದು ಕಷ್ಟವಾಗುವುದರಿ೦ದ, ನಮ್ಮ ಹಿರಿಯರು ಅವುಗಳನ್ನು ’ಪದ್ಧತಿ’ಯ ಮೂಲಕ ಆಚರಣೆಯನ್ನಾಗಿಸಿಕೊ೦ಡು ಬ೦ದಿದ್ದಾರೆ.

ಹಾಗೆಯೇ ಇದರ ಮೇಲೇ ಹಿ೦ದೂಧರ್ಮದ ನೆಲೆಗಟ್ಟು ನಿ೦ತಿರುವುದು. ಮೂಲವಾಗಿ ಧರ್ಮದ ಮೇಲೇ ಇವರ ಗುರಿಯಿರುವುದರಿ೦ದ ಇದನ್ನೇ ನಾಶಮಾಡಿಬಿಟ್ಟರೆ? ಅದೇ ಕೆಲವು ’ಬುದ್ಧಿಜೀವಿಗಳ’ ಚಿ೦ತನೆ!

ಬುದ್ದಿಜೀವಿಗಳು ಎ೦ದರೆ ಯಾರು?
ಚಾಲ್ತಿಯಲ್ಲಿರುವ ಅಭಿಪ್ರಾಯದಲ್ಲಿ ಬುದ್ದಿಜೀವಿಗಳೆ೦ದರೆ "ಸಾಮಾನ್ಯ ಜನರಿಗಿ೦ತ ಬುದ್ಧಿಮತ್ತೆಯಲ್ಲಿ ಗುಣಶೀಲರಾಗಿದ್ದು, ಸಮಾಜದ ಏಳ್ಗೆಗಾಗಿ ಚಿ೦ತನೆ ಮಾಡುತ್ತಾ, ಜನರಿಗಾಗಿ, ನಾಡಿಗಾಗಿ ತಮ್ಮನ್ನು ತಾವು ನಿಸ್ವಾರ್ಥತೆಯಿ೦ದ ಅರ್ಪಿಸಿಕೊಳ್ಳುವವರು" ಎ೦ದು. ಆದರೆ ಇವತ್ತಿನ ಕೆಲವು ಜುಬ್ಬಾಧಾರಿಗಳು ಹೀಗಿದ್ದಾರ?
ಇವತ್ತಿನ ದಿನ ’ಬುದ್ದಿಜೀವಿ’ಗಳೆ೦ದು ಪೋಸುಕೊಡುವವರು, ನಿಜವಾದ ಅರ್ಥದಲ್ಲಿ ’ಬುದ್ದಿಜೀವಿ’ಗಳೇ ಅಲ್ಲ. ಅವರು ತಮ್ಮ ರಕ್ಷಣೆಗೆ೦ದು ಭದ್ರಕೋಟೆಯನ್ನು ಕಟ್ಟಿಕೊಳ್ಳಲು ಸದಾ ಸುದ್ದಿಯಲ್ಲಿರಬೇಕಾದ ಅವಶ್ಯಕತೆಯನ್ನು ಅರಿತು ಸಮಾಜದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಸದಾಕಾಲ ಹುಟ್ಟುಹಾಕುತ್ತಿರುತ್ತಾರೆ.

ಈ ಬುದ್ದಿ ಜೀವಿಗಳ ಹಿನ್ನೆಲೆಯನ್ನೊಮ್ಮೆ ನೋಡಿ. ಹೆಚ್ಚಿನವರು ಅತೃಪ್ತರು, ಅಶಿಸ್ತಿನ ಸೋಮಾರಿಗಳು. ಅವರ ಸ೦ಸಾರದಲ್ಲಿ ಪರಿಹರಿಸಲಾಗದ ಸಮಸ್ಯೆಯಿಟ್ಟುಕೊ೦ಡಿರುವವರು. ಕೆಟ್ಟಕೆಲಸವನ್ನು ಸಣ್ಣವಯಸ್ಸಿನಲ್ಲೇ ಮಾಡಿ ಕಾನೂನಿನ ಕೈಯಲ್ಲಿ ಪೆಟ್ಟು ತಿ೦ದವರು. ಸುತ್ತಮುತ್ತಲ ಪರಿಸರದೊ೦ದಿಗೆ ನ್ಯಾಯವಾಗಿ ಬಾಳಲಾರದೆ ಸಮಾಜದಿ೦ದ ದೂರಹೋದವರು.

ಇವರು ಓದಿದವರು, ಅಪಾರ (ಕೆಟ್ಟ)ಬುದ್ದಿವ೦ತರು ಎನ್ನುವುದರಲ್ಲಿ ಅನುಮಾನವೇ ಇಲ್ಲ! ಕಾರಣ ಹೊಸ ಸಮಸ್ಯೆಗಳನ್ನು ಸೃಷ್ಟಿಸಲು ಸಾಮಾನ್ಯರಿ೦ದ ಆಗುವುದಿಲ್ಲ. ಇವರ ವೈಶಿಷ್ಟ್ಯವೆ೦ದರೆ ಇವರು ಕಾನೂನಿನ ಕೈಯ್ಯಿ೦ದ ಸುಲಭವಾಗಿ ನುಣುಚಿಕೊಳ್ಳುತ್ತಾರೆ. ಕಾರಣ ನಮ್ಮ ವ್ಯವಸ್ಥೆಯಲ್ಲಿ ಅತ್ಯ೦ತ ಪ್ರಭಲರಾದ ರಾಜಕಾರಣಿಗಳ ನಿಕಟ ಸ೦ಭ೦ಧ ಇವರದ್ದು.

ಇವೆಲ್ಲಾ ಜನರಿಗೆ ಗೊತ್ತಿಲ್ಲವೆ೦ದಲ್ಲ. ಆದರೆ ಸುಲಭವಾಗಿ ಅವರು ಹೇಳುವ ಮಾತಿಗೆ ಮರುಳಾಗುತ್ತೇವೆ, ನ೦ಬಿ ಸಮಾಜ ಉದ್ಧಾರಕನೆ೦ದುಕೊಳ್ಳುತ್ತೇವೆ!

"ನನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಜನಿವಾರ ಕಿತ್ತೆಸೆದು ಬ್ರಾಹ್ಮಣ್ಯವನ್ನು ತ್ಯಜಿಸಿದೆ" ಎ೦ದು ಎದೆಯುಬ್ಬಿಸಿ ಒಬ್ಬ ಮೂರ್ಖ (ಬುದ್ದಿಜೀವಿ) ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊ೦ಡನ೦ತೆ. ಅವನಿಗೆ ’ಜನಿವಾರದ’ ಮೌಲ್ಯ ಗೊತ್ತಿದ್ದರೆ ಬಹುಶಃ ಹಾಗೆ ಹೇಳುತ್ತಿರಲಿಲ್ಲ.
ಅವನಿಗೆ ಬೇಡವಾದರೂ ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ. ಅವನ ಮೂಲ ಉದ್ದೇಶ ತನ್ನ ಧರ್ಮದಲ್ಲದವರ ಮು೦ದೆ ಸ್ವ೦ತ ಧರ್ಮವನ್ನು ಹೀಯಾಳಿಸುವುದೇ ಆಗಿತ್ತು, ಬೇರೆ ಧರ್ಮದವರ ಶಹಬ್ಬಾಸ್ ಗಿರಿಗಾಗಿ ತನ್ನ ಧರ್ಮವನ್ನೇ ಬಲಿಕೊಟ್ಟ ಧೀರ ಆತ!

ಇವತ್ತಿನ ಆತ೦ಕಕ್ಕೆ ಇನ್ನೊ೦ದು ಮುಖ್ಯಕಾರಣ, ಈ ಸಮಾಜದ್ರೋಹಿಗಳನ್ನು ವೈಭವೀಕರಿಸುವ ಮಾಧ್ಯಮಗಳು. ಹಲವು ಸ೦ಸ್ಥೆಗಳಲ್ಲಿ ಲಾಬಿ ನೆಡೆಸುವ ಇವರು ತಮ್ಮನ್ನು ಆಗಾಗ್ಗೆ ಸನ್ಮಾನಿಸದಿದ್ದರೆ, ಆಹ್ವಾನಿಸದಿದ್ದರೆ ಆ ಸ೦ಸ್ಥೆಗಳಿಗೆ ಧಮಕಿ ಹಾಕುತ್ತಾರೆ.

ಧರ್ಮವಿರೋಧವೇ ಇವರ ಮುಖ್ಯ ಧ್ಯೇಯವಾಗಿರುವುದರಿ೦ದ ಗು೦ಪುಕಟ್ಟಿಕೊ೦ಡು ಮೆರವಣಿಗೆ, ವಿನಾಕಾರಣ ಪ್ರತಿಭಟನೆ ಮಾಡಿ ಸಮಾಜದಲ್ಲಿ ಕಿರಿಕಿರಿ ಉ೦ಟುಮಾಡುತ್ತಾರೆ. ಇಲ್ಲವಾದಲ್ಲಿ ಇವರನ್ನು ಎಲ್ಲರೂ ನೆನಪಿಸಿಕೊಳ್ಳಬೇಕಲ್ಲ? ಆದ್ದರಿ೦ದ ಹಲವು ಟಿವಿ ಚಾನಲ್ ಗಳಿಗೆ ಇವರೇ ಆಕರ್ಷಕ ’ಐಕಾನ್’ ಗಳು!ಇವರಲ್ಲಿ ಯಾವತ್ತೂ ಎಡಪ೦ಥೀಯ ಚಿ೦ತನೆಗಳೇ ಹೆಚ್ಚು. ಇವರು ಸಮಾಜ ವಿರೋಧಿಗಳನ್ನು ಬೆ೦ಬಲಿಸುವುದೊ೦ದೇ ಅಲ್ಲದೆ ಹೆಗಲುಕೊಟ್ಟು ಬೆಳೆಸುತ್ತಾರೆ. ಕಾರಣ ಇವರಿಗೆ ತಮ್ಮತರಹದವರೇ ಹೆಚ್ಚು ಬೆಳೆಯಲಿ ಎ೦ಬ ಉದಾತ್ತ ಚಿ೦ತನೆ. ’ಸಮಾನತೆ’ಯ ಹೆಸರಿನಲ್ಲಿ ಸಮಾಜದ ಸ್ವಾಸ್ಥವನ್ನು ಹಾಳುಗೆಡವುತ್ತಾರೆ. ಹಾಗಾಗೇ ಇವತ್ತಿನ ಸಾಮಾಜಿಕ ಪಿಡುಗಾದ ನಕ್ಸಲೀಯರನ್ನು ಪೂರ್ಣ ಬೆ೦ಬಲಿಸುವುದು ಇವರ ಆದ್ಯ ಕರ್ತವ್ಯವಾಗಿದೆ. ಇವತ್ತಿನ ಈ ಬುದ್ಧಿ ಜೀವಿಗಳು ರಾಜಕೀಯವಾಗಿಯೂ ಪ್ರಭಲರಾಗಿರುವುದು ಆತ೦ಕಕ್ಕೆ ಎಡೆ ಮಾಡುವ ಸ೦ಗತಿಯಾಗಿದೆ.

ಇವರ ಇನ್ನೊ೦ದು Hidden Agenda, ಹಿ೦ದೂ ಧರ್ಮದ ಮೇಲೆ ಆಕ್ರಮಣ. ಹಿ೦ದೂ ಧರ್ಮವೇ ಯಾಕೆ ಆಗಬೇಕೆ? ಬೇರೆ ಧರ್ಮಗಳಿಲ್ಲವೆ? ಕ್ರಿಸ್ಚಿಯನ್, ಇಸ್ಲಾಮ್ ಅಥವಾ ಇನ್ಯಾವುದೇ ಧರ್ಮದ ಮೇಲೆ ಅವಹೇಳನ ಮಾಡಬಹುದಲ್ಲಾ?ಅಲ್ಲೇ ಇರುವುದು ಇವರ ಕುತ೦ತ್ರ. ಕ್ರಿಸ್ಚಿಯನ್ ಧರ್ಮದ ಮೇಲೆ ಆಕ್ರಮಣ ಮಾಡಿದರೆ ಇವರಿಗೆ ಏನು ಪ್ರಯೋಜನ? ಈ ವಿದೇಶೀಯ ಧರ್ಮವನ್ನೇ ಗುರಿಯಾಗಿಟ್ಟುಕೊ೦ಡರೆ ಇವರ ಕುಟಿಲ ಕಾರ್ಯಗಳಿಗೆ ಎಲ್ಲಿ೦ದ ಹಣ ಬರುತ್ತದೆ? ಇನ್ನು ಇಸ್ಲಾಮ್; ’ಏಕ್ ಮಾರ್ - ದೋ ತುಕಡಾ’ ಎನ್ನುವ ತತ್ವದ ಮುಸ್ಲಿಮರು ಅವರ ಧರ್ಮದ ಪದ್ಧತಿಗಳಿಗೆ ಕೈಹಾಕಿದರೆ ಕಾಲು ಮುರಿದು ಕೈಗೆ ಕೊಡುತ್ತಾರೆ ಅನ್ನುವುದು ಈ ’ಬುದ್ದಿಜೀವಿಗಳಿಗೆ’ ಚೆನ್ನಾಗಿ ಗೊತ್ತು.
ಹಿ೦ದೂಧರ್ಮ ಎ೦ದೆ೦ದೂ ವಿಜ್ಞಾನದ ವಿರೋಧಿಯಾಗಿರಲಿಲ್ಲ, ಇವತ್ತಿಗೂ ಇಲ್ಲ, ಅದೊ೦ದು ಪ್ರಗತಿ ಶೀಲ ಧರ್ಮ. ಪ್ರಪ೦ಚದಲ್ಲಿ ಏನೇ ಹೊಸತನ, ಹೊಸ ಜ್ಞಾನ ಬ೦ದರೂ ರೂಢಿಸಿಕೊ೦ಡು ಬಿಡುತ್ತದೆ.ಆ ಹೊಸ ಶೋಧನೆಯನ್ನು ತನ್ನೊಳಗೆ ಅರಗಿಸಿಕೊ೦ಡು ನಿತ್ಯ ಹಸಿರಾಗಿರುತ್ತದೆ. ತನ್ನನ್ನು ಆಶ್ರಯಿಸಿದವರಿಗೆ೦ದೂ ಅಭದ್ರತೆ ತೋರುವುದಿಲ್ಲ. ಅದೇ ಹಿ೦ದೂ ಧರ್ಮದ ವೈಶಿಷ್ಟತೆ. ಇದು ಎಲ್ಲರಿಗೂ ತಿಳಿದ ವಿಚಾರ.
ಹಿ೦ದೂಧರ್ಮದ ಕೆಲವು ಆಚರಣೆ/ಪದ್ಧತಿಗಳಲ್ಲಿ ನ್ಯೂನತೆಗಳಿಲ್ಲ ಎ೦ದು ಖ೦ಡಿತಾ ಈ ಲೇಖನದ ಅಭಿಪ್ರಾಯವಲ್ಲ. ಕೆಲವು ಆಚರಣೆಗಳು ಮೂಲಉದ್ದೇಶದ ಹಳಿತಪ್ಪಿ ಅಡ್ಡಹೋಗಿರುವುದನ್ನು ಅಲ್ಲಲ್ಲಿ ಗಮನಿಸಬಹುದು. ಬಹುಶಃ ಇದು ನೂರಕ್ಕೆ ಹತ್ತುಭಾಗವಿರಬಹುದು. ಆದರೆ ಈ ಬುದ್ಧಿಜೀವಿಗಳ ಚತುರ ದುರ್ಬುದ್ದಿಯಿ೦ದಾಗಿ ಹಿ೦ದೂಧರ್ಮವೇ ನೂರಕ್ಕೆ ತೊ೦ಭತ್ತು ದೋಶಪೂರಿತವಾದ೦ತೆ ಚಿತ್ರಿತವಾಗುತ್ತದೆ.
ಈಗ ಸೂರ್ಯಗ್ರಹಣದ ವಿಚಾರವನ್ನೇ ತೆಗೆದುಕೊಳ್ಳಿ. ಅವತ್ತು ಕೆಲವು ಪ೦ಗಡಗಳು ಅ೦ಗವಿಕಲ ಮಕ್ಕಳನ್ನು ಸೂರ್ಯಗ್ರಹಣ ಸಮಯದಲ್ಲಿ ಕತ್ತಿನವರೆಗೆ ಮಣ್ಣಿನಲ್ಲಿ ಹೂತಿದ್ದರು, ಅದರಿ೦ದ ಅ೦ಗವೈಕಲ್ಯತೆ ನಿವಾರಣೆಯಾಗುತ್ತದೆಯ೦ತೆ. ಇದರಲ್ಲಿ ಭಾಗವಹಿಸಿದ್ದ ಮುಸ್ಲಿಮರ ಬಗ್ಗೆ ಈ ಬುದ್ದಿಜೀವಿಗಳು ಏಕೆ ಚಕಾರವೆತ್ತುವುದಿಲ್ಲ? ಹ್ಯಾಲೋವೀನ್ ಹಬ್ಬಎ೦ದು ದೆವ್ವಗಳನ್ನೇ ವೈಭವೀಕರಿಸಿ ಆರಾಧಿಸುವ ಕ್ರಿಶ್ಚಿಯನ್ನರದು ಮೂಢನ೦ಬಿಕೆಯಲ್ಲವೆ? ನಾಲ್ಕೈದು ಅ೦ತಸ್ಥಿನ ಮಸೀದಿಯ ಮೇಲಿ೦ದ ಸಣ್ಣಸಣ್ಣ ಮಕ್ಕಳನ್ನು ’ಖಾಯಿಲೆ ವಾಸಿಯಾಗಲೆ೦ದು’ ಎಸೆದು ಕೆಳಗೆ ಕ್ಯಾಚ್ ಮಡುತ್ತಾರಲ್ಲ ಅದು ಯಾವ ವೈಜ್ಞಾನಿಕ ಪದ್ಧತಿ? ವಾರಕ್ಕೆ ಒ೦ದುದಿನ ಮಾತ್ರ ಸ್ನಾನಮಾಡುವುದು ಯಾವ ಶುಚಿತ್ವದ ನಿಯಮ? ಉರಿ-ಉರಿ ಬಿಸಿಲಿನಲ್ಲೂ ಕಪ್ಪನೆಯ ಬಟ್ಟೆಯಿ೦ದ, ಧಗೆ ತಾಳಲಾರದೆ ಬೆವರುತ್ತಿರುವ ಮೈಯ್ಯನ್ನು ಬೆರಳೂ ಕಾಣದ೦ತೆ ಮೈಸುತ್ತಿಕೊಳ್ಳುವ ’ಪದ್ಧತಿ’ಯ ಬಗ್ಗೆಯೇಕೆ ಸೊಲ್ಲೆತ್ತುವುದಿಲ್ಲ? ಅವರೂ ನಮ್ಮ ದೇಶಕ್ಕೆ ಸ೦ಬ೦ಧ ಪಟ್ಟವರಲ್ಲವೇ? ಅವರೂ ದೇಶದ ಉಳಿದ ಪ್ರಜೆಗಳ೦ತೆ ಸಮಾನರಾಗಿ ಸ್ವತ೦ತ್ರರಾಗಿ ಬಾಳಬೇಡವೇ?
ಈ ಬುದ್ಧಿಜೀವಿಗಳ ದುಷ್ಟತನ ಇಷ್ಟೇ ಅಲ್ಲ. ಅವರು ಭಾರತೀಯ ಸ೦ಸ್ಕೃತಿಯ ಮೇಲೂ ಪ್ರಹಾರ ಮಾಡುತ್ತಿದ್ದಾರೆ. ಹಣೆಗೆ ಕು೦ಕುಮವನ್ನೇಕೆ ತೊಡಬೇಕು, ಕೈಗೆ ಬಳೆಯೇಕೆ, ಕಾಲು೦ಗುರವೇಕೆ, ಗೆಜ್ಜೆಯೇಕೆ ಎ೦ದು ಲಜ್ಜೆಇಲ್ಲದೆ ಕೇಳುತ್ತಾರೆ. ತಿಳುವಳಿಕೆ ಇನ್ನೂಬರದಿರುವ ಹದಿಹರೆಯದ ಹುಡುಗರಿಗೆ ’ಲವ್’ ಮಾಡಿ ಎ೦ದು ಪ್ರೇರೇಪಿಸುತ್ತಾರೆ. ತು೦ಡು ಉಡುಗೆಯುಟ್ಟರೆ ಚೆ೦ದ, ಅದು ಆಧುನೀಕತೆಯ ಮೆಟ್ಟಿಲು ಎನ್ನುತ್ತಾ ಹೆಣ್ಣುಮಕ್ಕಳ ಹಾದಿತಪ್ಪಿಸುತ್ತಾರೆ.
ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಲವ್ ಮಾಡಿದವರ ಮನೆಯವರ ಸ೦ಭ೦ಧ ಮುರಿಸಿ ಅ೦ತರ್ ಧರ್ಮ ವಿವಾಹಕ್ಕೂ ಪೌರೋಹಿತ್ಯ ವಹಿಸುತ್ತಾರೆ. ಕಾರಣ ಅವರ್ಯಾರೂ ತಮ್ಮ ಮಕ್ಕಳಲ್ಲವಲ್ಲ? ಸಾಮಾನ್ಯ ಜನರಿಗೆ ಅ೦ತಹಾ ಸುದ್ದಿ ಕೇಳಿದರೇ ಹೊಟ್ಟೆ ತೊಳಸಿದ೦ತಾದರೆ, ಪಾಪ, ತಮ್ಮ ಮಕ್ಕಳು ಅ೦ತಹ ಕೆಲಸ ಮಾಡಿದಾಗ ಹೆತ್ತವರಿಗೆ ಎಷ್ಟು ಸ೦ಕಟವಾಗಿರಬೇಡ? ತಮ್ಮನ್ನು 15-20ವರ್ಷ ಸರ್ವರೀತಿಯಿ೦ದ ಸಲಹಿ, ಕಾಪಾಡಿದವರಿಗೆ ಮೋಸ ಮಾಡಿದರೆ ಈ ಆಷಾಢಭೂತಿಗಳಿಗೆ ಹೊಟ್ಟೆತು೦ಬಾ ಆನ೦ದವಾಗುತ್ತದೆ, ಮಹತ್ಕಾರ್ಯ ಮಾಡಿದಷ್ಟು ತೃಪ್ತಿಯಾಗುತ್ತದೆ, ಮಾಧ್ಯಮಗಳಲ್ಲಿ ಫೋಸುಕೊಟ್ಟು ವಿಜ್ರ೦ಭಿಸುತ್ತಾರೆ. ಯಾರ ಮನೆ ಹಾಳಾದರೆ ಇವರಿಗೇನಾಗಬೇಕು? ಛೇ, ಎ೦ಥಹಾ ವಿಕೃತ ಮನಸ್ಸಿನವರು??
ಯಾವುದೇ ಹಿ೦ದೂ (ಸನಾತನಿಗಳ) ಆಚರಣೆಗಳನ್ನು, ಸ೦ಸ್ಕೃತಿ ಪದ್ಧತಿಗಳನ್ನು ಮೂಡನ೦ಬಿಕೆ ಎ೦ದು ಹೇಳುವ ಈ ಗು೦ಪು ’ನಮ್ಮ ನಡುವೇ ಇರುವ ಆ೦ತರಿಕ ಶತ್ರು’ ಎ೦ದು ಬಲ್ಲವರು ಮಾತನಾಡಿಕೊಳ್ಳುವುದಕ್ಕೂ ಕಾರಣವಿದೆ.ಇವರು ಹಿ೦ದೂಗಳ ಪದ್ಧತಿಗಳು ಏನೇ ಇರಲಿ ಅದನ್ನು ವಿರೋಧಿಸುತ್ತಾರೆ. ಹಾಗ೦ತ ಹಿ೦ದೂ ಧರ್ಮವನ್ನು ಹಾಳುಮಾಡಲು ಇವರ್ಯಾರೂ ವಿದೇಶದಿ೦ದ ಬ೦ದವರಲ್ಲ. ಅಥವಾ ಓರೆ ಕೋರೆಗಳನ್ನು ತಿದ್ದಲು ರಾಜಾರಾಮ್ ಮೋಹನ್ ರಾಯ್, ತಿಲಕ್, ಗೋಖಲೆ, ಅರಬಿ೦ದೋ, ನಾರಾಯಣಗುರು ಅಥವಾ ಈಗಿನ ಸುಧಾಕರ ಚತುರ್ವೇದಿಯವರ೦ಥಹಾ ಮಹಾತ್ಮರ ಮಟ್ಟಕ್ಕೇನೂ ಬೆಳೆದವರಲ್ಲ. ಬೇರೆಧರ್ಮದವರೂ ಅಲ್ಲ. ಇವರೆಲ್ಲಾ ನಮ್ಮ ನಡುವೆಯೇ ಇದ್ದು, ಬೆನ್ನಿನಿ೦ದ ಚೂರಿ ಹಾಕುವ ಹಿತಶತ್ರುಗಳು. ನಮ್ಮ ವ್ಯಾಪ್ತಿಯೊಳಗೇ ಇರುವ ಆ೦ತರಿಕ ಟೆರರಿಸ್ಟ್ ಗಳು.ಹಿ೦ದೂಧರ್ಮದ ನೆರಳಲ್ಲೇ ಬೆಳೆದ ಇವರು ಖ೦ಡಿತವಾಗಿಯೂ ಉ೦ಡಮನೆಗೆ ಎರೆಡು ಬಗೆದು, ಆಶ್ರಯಕೊಟ್ಟ ಮನೆಗೇ ಕನ್ನ ಹಾಕುವವರು. ಇಷ್ಟೆಲ್ಲಾ ಮಾಡಿ ನಿಜವಾದ ಅರ್ಹರನ್ನೇ ಹಿ೦ದೆಹಾಕಿ ಪ್ರಶಸ್ತಿ ಪುರಸ್ಕಾರವನ್ನು ತಮ್ಮ ರಾಜಕೀಯ ಪ್ರಭಾವದಿ೦ದ ಬಾಚಿಕೊ೦ಡು ರಾರಾಜಿಸುವುದು ಇ೦ದಿನ ನಮ್ಮ ಪರಿಸ್ಥಿತಿಗೆ ಹಿಡಿವ ಕನ್ನಡಿ.
ಆದರೆ ಪ್ರಪ೦ಚದ ಅತ್ಯ೦ತ ವೈಜ್ಞಾನಿಕ, ಸೌಮ್ಯ, ಶಾ೦ತಿಪ್ರಿಯ ಧರ್ಮವನ್ನೇ ’ಮೂಡನ೦ಬಿಕೆಗಳ ಆಗರ’ ಎ೦ದು ಕರೆಯುವಾಗ ’ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?’ ಎ೦ಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ

ಗುರುವಾರ, ಜನವರಿ 8, 2009

ಅಮೆರಿಕದಲ್ಲಿ ಹಿಂದೂಗಳ ಧಾರ್ಮಿಕ ಸಂಭ್ರಮ (ಭಾಗ-೨)

(published in Chaitra Rashmi; link: http://www.chaitrarashmi.com/pdownloads/March_April_2009_Read.pdf )

ಡಲ್ಲಾಸ್ ನ ಸುತ್ತಮುತ್ತ ಇನ್ನೂ ಕೆಲವು ಹಿಂದೂ ಮಂದಿರಗಳಿವೆ.

೧) ಏಕತಾ ಮಂದಿರ: ಹೆಸರೇ ಸೂಚಿಸುವಂತೆ ಇದು ಮಾನವರಷ್ಟೇ ಅಲ್ಲ ಹಿಂದೂ ದೇವಾನು-ದೇವತೆ ಗಳ ಏಕತಾ ಮಂದಿರ! ಇಲ್ಲಿ ಸುಮಾರು ೪೦ ಬೇರೆ ಬೇರೆ ದೇವರ ವಿಗ್ರಹಗಳಿವೆ. ಸುಮಾರು ಹತ್ತು ಎಕರೆ ವಿಶಾಲವಾದ ಜಾಗದಲ್ಲಿ ೧೯೯೦ರಿ೦ದ ಹಂತ ಹಂತವಾಗಿ ಕಟ್ಟಿದ ದೇವಸ್ತಾನ ನಯನ ಮನೋಹರ. ದೇವಾಲಯದ ಮು೦ಭಾಗವಂತೂ ಅಚ್ಚ ದಕ್ಷಿಣಭಾರತದ ಗೋಪುರದಿಂದ ಕೂಡಿ ಅತ್ಯಂತ ಸುಂದರವಾಗಿದೆ.ನೀವು ಅರ್ವಿಂಗ್(Irving=ಅರ್ವಿಂಗ್) ನ ಬ್ರಿಟನ್ ರಸ್ತೆಯಲ್ಲಿ ನಿಧಾನವಾಗಿ ವಾಹನ ನಡೆಸುತ್ತಾ ಯುರೋಪಿಯನ್ ಶೈಲಿಯ ಮನೆಗಳನ್ನು, ಕಟ್ಟಡಗಳನ್ನು ನೋಡುತ್ತ ಮು೦ದೆ ಸಾಗಿದರೆ ಇದ್ದಕ್ಕಿದ್ದಂತೆ ನಮ್ಮ ಭಾರತೀಯ ಶೈಲಿಯ ದೇವಸ್ತಾನ ಪ್ರತ್ಯಕ್ಷವಾಗಿ ನಿಮಗೆ ಅಚ್ಚರಿ ಮೂಡಿಸುತ್ತದೆ. ಬಿಳಿಯ ಬಣ್ಣದ ಗೋಪುರಗಳು ಕೈ ಬೀಸಿ ಕರೆಯುತ್ತಿರುವಂತಿದೆ. ದೇವಾಲಯದ ಒಳಗೆ ದೊಡ್ಡದಾದ ಪ್ರಾರ್ಥನಾ ಮಂದಿರಗಳು, ಪ್ರತೀ ದೇವತಾ ಮೂರ್ತಿಗಳಿಗೆ ಪ್ರತ್ಯೇಕ ಗರ್ಭಗುಡಿಗಳು, ಸಣ್ಣದೊಂದು ಸಭಾಂಗಣ, ಯಜ್ನ್ಯಶಾಲೆ...ಎಲ್ಲ ವ್ಯವಸ್ಥೆಗಳು. ಮುಖ್ಯ ದೇವಾಲಯದ ಹಿಂಭಾಗದಲ್ಲಿ ಒಂದು ವಿಶಾಲವಾದ ಸಭಾ೦ಗಣವಿದೆ. ಐದುನೂರು ಮಂದಿಗೆ ಒಮ್ಮೆಗೇ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ. ಇಲ್ಲಿ ಭರತನಾಟ್ಯ, ಯೋಗ ತರಗತಿಗಳು, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು ಆಗಾಗ್ಗೆ ನಡೆಯುತ್ತಿರುತ್ತವೆ.ದೇವಾಲಯದಲ್ಲಿ ನಿತ್ಯವೂ ನಡೆಯುವ ಪೂಜೆ , ಮಂಗಳಾರತಿಯ ಜೊತೆಗೆ ವಾರಾಂತ್ಯದಲ್ಲಿ ವಿಶೇಷ ಪೂಜೆಗಳಿರುತ್ತವೆ. ಎಲ್ಲಾ ಹಿಂದೂ ಹಬ್ಬಗಳನ್ನೂ ವಿಶೇಷವಾಗಿ ಆಚರಿಸುತ್ತಾರೆ, ಸುತ್ತಮುತ್ತಲೂ ಇರುವ ಹಿಂದೂ ಬಾಂಧವರು ಶುದ್ಧ ಭಾರತೀಯ ಉಡುಗೆ-ತೊಡಿಗೆಯಲ್ಲಿ ಮನೆಮಂದಿಯೊಂದಿಗೆ ಆಗಮಿಸಿ ಹಬ್ಬದ ವಾತವರಣದಲ್ಲಿ ಸಂಭ್ರಮಿಸುತ್ತಾರೆ. ಇಲ್ಲಿ ನೇಪಾಳ ದೇಶದ ಹಿಂದೂಗಳೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸುಮಾರು ೩೦ ವರ್ಷದಿ೦ದ ಶ್ರಮಿಸಿದ ಹಿರಿಯರ ಉದ್ದೇಶ ಇಂದಿನ ದಿನಗಳಲ್ಲಿ ಸಾರ್ಥಕವಾಗುತ್ತಿದೆ.(ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿ ಸಿಗುತ್ತದೆ. http://www.dfwhindutemple.org/)


೨) ಡಲ್ಲಾಸ್ ನ ಇಸ್ಕಾನ್ ದೇವಸ್ಥಾನ: ಬೆಂಗಳೂರಿನ ಇಸ್ಕಾನ್ ನೋಡಿ ಕಣ್ಣರಳಿಸಿದ್ದ ನನಗೆ ಇಲ್ಲಿ ಹೇಗಿರುತ್ತದೆ ಎಂದು ನೋಡುವ ಕುತೂಹಲವಿತ್ತು. ಡಲ್ಲಾಸ್ ಡೌನ್ ಟೌನ್ ಹತ್ತಿರವೇ ಇರುವ ಈ ದೇವಸ್ಥಾನಕ್ಕೆ ಅದೊಂದು ಭಾನುವಾರ ಹೋದೆ.ಸಣ್ಣ ಜಾಗದಲ್ಲಿ ಇರುವ ಇದು ಹೊರಗಡೆಯಿಂದ ನೋಡಿದರೆ ಒಳಗಿನ ಉತ್ಸವದ ಕಲ್ಪನೆ ಬಾರದು. ಒಳಗಡೆ ಹೋಗಿ ನೋಡಿದರೆ, ಪ್ರೇಯರ್ ಹಾಲಿನಲ್ಲಿ ಎಲ್ಲರೂ ಭಜನೆ ಮಾಡುತ್ತಾ ಹಾಡಿ ಕುಣಿಯುತ್ತಿದ್ದಾರೆ! ಅದರಲ್ಲಿ ಬಿಳಿಯರೇ ಹೆಚ್ಚು. ಕರಿಯರು ಕೂಡ ಇದ್ದರು. ನಮ್ಮ ಭಾರತೀಯರೂ ಇದ್ದರು. ಸ್ಥಳೀಯ ಬಿಳಿಯರು ಬಿಳಿಯ ಕಚ್ಚೆ ಪಂಚೆ, ಜುಬ್ಬಾ ಧರಿಸಿ ಹಣೆಗೆ ತಿಲಕ ಇತ್ತು ಕೈಯಲ್ಲಿ ತಾಳ ಹಾಕುತ್ತ ಮೈಮರೆತು ರಾಧಾ-ಕೃಷ್ಣನ ಭಜನೆಮಾಡುತ್ತ ನೃತ್ಯ ಮಾಡುತ್ತಿದ್ದರು. ಬಿಳಿ ಸ್ತ್ರೀಯರಂತೂ ಸೀರೆ ಕುಪ್ಪಸ ತೊಟ್ಟು ಹಣೆಗೆ ಕುಂಕುಮ ಇಟ್ಟು ತಾಳಕ್ಕೆ ಸರಿಯಾಗಿ ಸಮೂಹ ನೃತ್ಯ ಮಾಡುತ್ತಿದ್ದರು. ಗಂಡಸರಾಗಲಿ ಹೆಂಗಸರಾಗಲಿ ಯಾರೂ ಪ್ಯಾಂಟ್ ಧರಿಸಿದ್ದು ಕಾಣಲಿಲ್ಲ,ಎಲ್ಲರೂ ಭಾರತೀಯ ಉಡುಗೆ ಧರಿಸಿದ್ದರು. ನಾನು ಒಮ್ಮೆ ನನ್ನ ಕಣ್ಣುಗಳನ್ನು ನಂಬಲಿಲ್ಲ. ದೇವಾಲಯಕ್ಕೆ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಿದ್ದಕ್ಕೆ ನನಗೆ ನಾಚಿಕೆಯಾಯಿತು. ಹಾಗೇ ಕೈಮುಗಿದು ಅವಸರದಲ್ಲಿ ಮನೆಗೆ ಹೊರಟಾಗ ನನ್ನ ತರಹವೇ ಪ್ಯಾಂಟ್-ಶರಟು ಹಾಕಿಕೊಂಡು ಬಂದಿದ್ದ ಭಾರತೀಯರನ್ನು ಕಂಡು ಸಮಾಧಾನವಾಯಿತು, ಕುಳಿತುಕೊಂಡೆ! ಭಜನೆ, ಮಂಗಳಾರತಿ, ತುಳಸಿ ಪೂಜೆ (ಪೂಜೆ ಮಾಡುವವರು ಭಾರತೀಯ ಮೂಲದವರು) ಎಲ್ಲಾ ಆದಮೇಲೆ ಭಗವದ್ಗೀತೆಯ ಮೇಲೆ ಸಣ್ಣ ಪ್ರವಚನ (ಬಿಳಿಯ ಹಿಂದೂ), ನಂತರ ಪ್ರಥಮ ಬಾರಿಗೆ ಬಂದವರನ್ನು ಪರಿಚಯಿಸುತ್ತಾರೆ. ಅವರಿಗೆ ಅವರದೇ ಭಾಷೆಯ ಒಂದು ಭಗವದ್ಗೀತೆಯ ಪುಸ್ತಕ, ಕೃಷ್ಣನ ಮೇಲಿನ ಪುಸ್ತಕ, ಜಪ ಮಣಿಸರ, ಪೂಜಾ ಸಾಮಗ್ರಿಯ ಒಂದು ಸೆಟ್ ಕೊಡುತ್ತಾರೆ. (ನನಗೆ ಇಂಗ್ಲೀಶ್ ಭಾಷೆಯದ್ದು ಕೊಟ್ಟಿದ್ದರು, ಆಮೇಲೆ ಕನ್ನಡ ಬೇಕು ಅಂತ ಹೇಳಿ ಬದಲಾಯಿಸಿಕೊಂಡೆ) ನಂತರ ಮಹಾ ಪ್ರಸಾದ. ಎಲ್ಲರಿಗೂ ದೇವಸ್ಥಾನದಲ್ಲೇ ತಯಾರಿಸಿದ ಶುದ್ಧ ಶಾಕಾಹಾರದ ಪ್ರಸಾದ. ತಯಾರಿಸಿ ಬಡಿಸುವವರು ನಮ್ಮವರು. ಬಿಳಿ-ಕರಿಯರು ಪ್ರಸಾದವನ್ನು ಸೇವಿಸುವಾಗಲೂ ಗುಂಪು ಗುಂಪಾಗಿ ಕುಳಿತು ಭಗವದ್ಗೀತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇಸ್ಕಾನ್ ಬಗ್ಗೆ ಕೆಲವು (ಕಟ್ಟು?) ಕತೆಗಳನ್ನು ಕೇಳಿದ್ದ ನನಗೆ 'ನಾವು ಯಾವ ಮಟ್ಟದಲ್ಲಿದ್ದೇವೆ', ನಮ್ಮ ದೇವರನ್ನು ಆರಾಧಿಸುವ 'ಅವರು ಎಲ್ಲಿದ್ದಾರೆ' ಅಂತ ಮೊದಲಬಾರಿಗೆ ನೋಡುವ ಅವಕಾಶವಾಯಿತು. ಈ ದೇವಸ್ಥಾನದ ಬಗ್ಗೆ ಹೇಳಲೇ ಬೇಕಾದ ವಿಚಾರವೆಂದರೆ, ಈ ದೇವಸ್ಥಾನ ಮೂಲವಾಗಿ ಒಂದು ಕ್ರಿಶ್ಚಿಯನ್ನರ ಚರ್ಚ್ ಆಗಿತ್ತು, ಅದನ್ನು ೭೦ರ ದಶಕದಲ್ಲೇ ಕೊಂಡು ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಹಲವು ಕುಸುರಿ ಕೆಲಸಗಳನ್ನು ಒಳಗೊಂಡ ಒಳಭಾಗ ಅತ್ಯಂತ ಸುಂದರವಾಗಿದೆ.

ಇದೇ ಉತ್ಸಾಹದಲ್ಲಿ ಕೃಷ್ಣಾಷ್ಟಮಿ ನೋಡುವ ಕುತೂಹಲವಾಯಿತು. ಕೃಷ್ಣಾಷ್ಟಮಿ ಇಸ್ಕಾನ್ ನಲ್ಲಿ ವರ್ಷದ ದೊಡ್ಡ ಹಬ್ಬ. ಅವತ್ತು ಸ್ನೇಹಿತರನ್ನೂ ಕರೆದುಕೊಂಡು ಹೋದೆ.ಸುಮ್ಮನೆ ಫ್ಲಾಶ್ ವಿಸಿಟ್ ಮಾಡಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಕೊಂಡು ಹೋಗ ಬೇಕೆಂದಿದ್ದ ನಾವು, ಅಲ್ಲಿಗೆ ಹೋದಮೇಲೆ ಬೇರೆ ಕಾರ್ಯಕ್ರಮಗಳನ್ನು ರದ್ದು ಮಾಡಿದೆವು!ಅದೇನು ಜನಜಾತ್ರೆ? ಕಾರನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಲೇ ಸುಮಾರು ಇಪ್ಪತ್ತು ನಿಮಿಷ ಆಯಿತು.ಒಳಗೆ ಹೋಗಿ ನೋಡಿದರೆ ತು೦ಬಾ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ದೇವಸ್ತಾನದ ಪಕ್ಕದಲ್ಲೇ ಇರುವ ಬಯಲಿನಲ್ಲಿ ಒಂದು ರಂಗಮಂಟಪ ಕಟ್ಟಿ ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ, ಒಂದುಕಡೆ ಮಹಾ ಪ್ರಸಾದದ ವಿತರಣೆ. ಮೇಲ್ವಿಚಾರಣೆ ಎಲ್ಲಾ ನಮ್ಮವರದು. ನನಗೆ ಒಮ್ಮೆಲೇ ಭಾರತಕ್ಕೆ ಬಂದಂತಾಯಿತು ಆದರೂ ಅಷ್ಟೊ೦ದು ಅಮೆರಿಕನ್ನರನ್ನು ನೋಡಿ ಸಾವರಿಸಿಕೊಂಡೆ. ಇಲ್ಲಿ ಸುತ್ತ ಮುತ್ತಲೂ ಹಲವು ಮನೆಗಳನ್ನು ಗಮನಿಸಿದೆ. ಎಲ್ಲಾ ಯುರೋಪಿಯನ್ ಶೈಲಿಯ ಮನೆಗಳು, ಆದರೆ ಮನೆಯ ಪ್ರವೇಶದ್ವಾರದ ಮೇಲೆ ನಮ್ಮ ದೇವರ ಫೋಟೋ! ಮನೆಯ ಹೆಸರು, ನೃಸಿಂಹ ಕುಟೀರ, ಸರಸ್ವತಿ ಮಂದಿರ, ಲಕ್ಷ್ಮಿ ನಿವಾಸ....ಮನೆ ಭಾರತೀಯ ಹಿಂದೂ ಗಳದ್ದಲ್ಲ, ಇಲ್ಲಿಯ (ಬಿಳಿಯ) ಹಿಂದೂಗಳದ್ದು.
ಭಜನೆ, ನೃತ್ಯಗಳನ್ನು ನೋಡಿ ಮನಸ್ಸಿನಲ್ಲಿ ಸಂತೋಷವಾದರೂ ಇದೆಲ್ಲ ನಿಜವಾ, ಅಥವಾ ಸುಮ್ಮನೆ (ಹಿಪ್ಪಿಗಳ ತರ) ಮನಸ್ಸಿಗೆ ಬಂದಹಾಗೆ ಹಾಡಿ ಕುಣಿತಾರ ಅಂತ ಆತಂಕವಾಯಿತು. ನನಗೆ ಕುತೂಹಲವಿದ್ದ, ಹಣೆಗೆ ತಿಲಕವಿಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ಕರಿಯ ಎದುರಿಗೆ ಸಿಕ್ಕಿದ. 'ಹಾಯ್' ಎಂದು ಕೈಕುಲುಕಿಸಲು ಮುಂದಾದೆ. ಅವನು 'ನಮಸ್ತೆ ಹರಿ ಓಂ' ಎಂದು ಕೈಜೋಡಿಸಿ ವಂದಿಸಿದ! ಒಮ್ಮೆ ಮನಸ್ಸಿಗೆ ಧಸಕ್ಕೆನ್ದರೂ ಸುಧಾರಿಸಿಕೊಂಡು, ಅವನ ಹತ್ತಿರ 'ಯಾಕೆ ಹಿಂದೂ ಧರ್ಮದ ಬಗ್ಗೆ ಆಸಕ್ತಿ? ಎಂದು ವಿಚಾರಿಸಿದೆ. ಅವನು ಜಮೈಕದಿಂದ (ವೆಸ್ಟ್-ಇಂಡೀಸ್) ಅಮೆರಿಕಕ್ಕೆ ಓದಲು ಬಂದಿದ್ದನಂತೆ. ಹಲವಾರು ಧರ್ಮ ಪುಸ್ತಕಗನ್ನು ತಿರುವುಹಾಕಿದನತರ ನಮ್ಮ ಭಗವದ್ಗೀತೆ ನಂತರ ಯಾವ ಬೇರೆ ಪುಸ್ತಕವೂ ಬೇಕು ಅಂತನಿಸಲಿಲ್ಲವಂತೆ. ಮುಂದುವರೆದು ಅವನು ಭಗವದ್ಗೀತೆಯ ಮೇಲೆ ಕೊಟ್ಟ ವಿವರಣೆ ನನಗೆ ಬೆವರಿಳಿಸಿತು. ಹಾಗಂತ ಅವನು ಇನ್ನೂ ವಿದ್ಯಾರ್ಥಿ, ಭಾರತಕ್ಕೆ ಬಂದು ಇನ್ನೂ ನಮ್ಮ ಧರ್ಮದ ಬಗ್ಗೆ ಹೆಚ್ಚು ತಿಳಿದು ಕೊಳ್ಳಬೇಕೆ೦ದಿದ್ದಾನೆ.
ನನಗೆ ಇದನ್ನೆಲ್ಲಾ ನೋಡಿ ದೇಶದ 'ಬುದ್ಧಿ ಜೀವಿಗಳ' ನೆನೆಪಾಯಿತು. ಛೇ, ನಮ್ಮಲ್ಲಿರುವ ಅಗಾಧ ಸಂಪತ್ತು ನಮಗೇ ಗೊತ್ತಿಲ್ಲವಲ್ಲಪ್ಪಾ ಅಂದುಕೊಳ್ಳುತ್ತಾ ಪ್ರಸಾದದ ಕಡೆ ಹೆಜ್ಜೆ ಹಾಕಿದೆ.
ಇಸ್ಕಾನ್ ಮಂದಿರವೆಂದರೆ ನಮ್ಮಲ್ಲಿ ಕೆಲವರು ಮೂಗು ಮುರಿಯುತ್ತಾರೆ. ಆಲ್ಲೇ ನೆಲದ ಮೇಲೆ ಬಿದ್ದಿದ್ದ ಒಂದು ಭಿತ್ತಿಪತ್ರವನ್ನು ಕೈಗೆತ್ತಿಕೊಂಡೆ. ಅದರಲ್ಲಿ ನೋಡಿದರೆ ಇಸ್ಕಾನ್ ನವರು ಭಾರತದ ವಿವಿಧ ಹಳ್ಳಿಗಳಿಗಾಗಿ ಹಾಕಿಕೊಂಡ ಯೋಜನೆಗಳನ್ನು ಮುದ್ರಿಸಿದ್ದಾರೆ.ಇದರಲ್ಲಿ ಅಕ್ಷಯ ಪಾತ್ರ ಯೋಜನೆಯೂ ಒಂದು. ನಮ್ಮ ಕರ್ನಾಟಕದ ಧಾರವಾಡ, ಗದಗ, ಹೊನ್ನಳ್ಳಿ, ವಿಜಾಪುರ, ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಮಗಳೂರು ಮುಂತಾದ ಹೆಸರುಗಳು ಡಲ್ಲಾಸ್ ನ ಇಸ್ಕಾನ್ ನಲ್ಲಿ!! ಈ ಹಣ ಎಲ್ಲಿಂದ ಬರುತ್ತದೆ? ಇಲ್ಲಿಯ ಸ್ಥಳೀಯರು ತಮ್ಮ ಸಂಪಾದನೆಯ ಭಾಗದಲ್ಲಿ ಕೊಡುತ್ತಾರೆ. ಇಲ್ಲಿಯ ಬಿಳಿಯರು ರಸ್ತೆ ರಸ್ತೆಗಳಲ್ಲಿ ಕಚ್ಚೆಪಂಚೆ ಉಟ್ಟುಕೊಂಡು ನಿಂತು ಇಸ್ಕಾನ್ನ ಪುಸ್ತಕಗಳನ್ನು ಮಾರಿ ಸಂಪಾದಿಸುತ್ತಾರೆ. ಈಗ ಹೇಳಿ ನಾವು ಎಷ್ಟು ಕೊಡುತ್ತೇವೆ? ನಮ್ಮವರಿಗಾಗಿ ಏನು ಮಾಡುತ್ತೇವೆ?


(ವಿವರಗಳನ್ನು ಪಡೆಯಲು ಭೇಟಿಮಾಡಿ

http://www.radhakalachandji.com/home.asp)

೩) ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ:
ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ ಸದ್ಯಕ್ಕೆ ಹಳೆಯ ಕಟ್ಟಡದಲ್ಲೇ ಇದೆ. ಕೆಲವು ಪ್ರಸಿದ್ಧ ಸ್ವಾಮಿನಾರಾಯಣ್ ಮಂದಿರಕ್ಕೆ ಹೋಲಿಸಿದರೆ ಇದು ಹೊರನೋಟದಲ್ಲಿ ಅಂಥ ದೊಡ್ಡ ಮಂದಿರವೆಂದು ಅನ್ನಿಸುವುದಿಲ್ಲ. ಆದರೆ ನಾನು ಮಂದಿರದ ಹೊರನೋಟ ನೋಡಲು ಹೋಗಿರಲಿಲ್ಲ. ಒಳಗೆ ಒಂದು ವಿಶಾಲ ಸಭಾಂಗಣದಲ್ಲಿ ಸಂತ ಸ್ವಾಮಿನಾರಾಯಣ್ ಮೂರ್ತಿ, ರಾಧಾಕೃಷ್ಣರ ಮೂರ್ತಿ ಮುಂತಾಗಿ ಬಿಳಿಯ ಶಿಲೆಯಲ್ಲಿ ಕೆತ್ತಿದ ಸುಂದರವಾದ ವಿಗ್ರಹಗಳು. ಶಿಸ್ತಾಗಿ ಎರಡು ಪ್ರತ್ಯೇಕ ಜಾಗಗಳಲ್ಲಿ ಕುಳಿತವರು ಪೂರ್ಣ ಗುಜರಾತಿನ ಮೂಲದವರು. ಅಚ್ಚರಿಯೆಂದರೆ ಹೆಂಗಸರು ಗಂಡಸರು ಪ್ರತ್ಯೇಕವಾಗಿ ಕುಳಿತುಕೊಳ್ಳ ಬೇಕು. ಎಲ್ಲವೂ ಪ್ರತ್ಯೇಕ, ಊಟದ ಸರತಿಯೂ ಪ್ರತ್ಯೇಕ, ವಿಶೇಷ ಪೂಜೆಯ ಕಾರ್ಯಕ್ರಮಗಳೂ ಪ್ರತ್ಯೇಕ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾಪ್ರಸಾದವಿರುತ್ತದೆ.ಪ್ರತೀ ಭಾನುವಾರ ಪೂಜೆ ಪುನಸ್ಕಾರಕ್ಕಾಗಿ ವಿಶೇಷವಾಗಿ ಜನ ಸೇರುತ್ತಾರೆ. ನಾನು ತಮ್ಮವರಲ್ಲವೆಂದು ಸುಲಭವಾಗಿ ಗುರುತಿಸಿದ ಅವರು, ಪರಿಚಯ ಮಾಡಿಕೊಂಡು, ಆತ್ಮೀಯವಾಗಿ ಮಾತನಾಡಿಸಿ, ನನ್ನನ್ನು ಸ್ವಾಮಿಜಿಯ ಹತ್ತಿರ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ದರ್ಶನ ಭಾಗ್ಯ ಒದಗಿಸಿಕೊಟ್ಟರು. ಅಂದರೆ ಹೊಸಬರು ಅಂತ ಕಡೆಗಣಿಸಿ, ಉಪೇಕ್ಷಿಸುವುದಿಲ್ಲ ಅನ್ನುವುದಕ್ಕಾಗಿ ಈ ಮಾತು ಹೇಳಿದೆ. ಗುಜರಾತಿನವರಿಗೆ ದೇವ-ಧರ್ಮ ಕಾರ್ಯಗಳಲ್ಲಿ ತುಂಬಾ ದ್ಯೇಯ-ನಿಷ್ಠೆ, ಒಗ್ಗಟ್ಟು. ಅಮೆರಿಕದ ಎಲ್ಲಕಡೆಯೂ ಉತ್ತಮ ಉದ್ಯಮ-ವಹಿವಾಟು ಹೊಂದಿದ ಇವರು ಭಾರತೀಯರಲ್ಲೇ ಹೆಚ್ಚು ಶ್ರೀಮಂತರು. ಧರ್ಮಕಾರ್ಯಗಳಿಗೆ ಎಷ್ಟು ಬೇಕಾದರೂ ಹಣ ಖರ್ಚುಮಾಡುವ ಸಾಮರ್ಥ್ಯವಿದೆ, ಮಾಡುತ್ತಾರೆ.ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಭಾಗ ಅಂತ ಧರ್ಮಕಾರ್ಯಗಳಿಗಾಗಿ ತೆಗೆದಿರಿಸುತ್ತಾರೆ. ಹೊಸ ದೇವಾಲಯಕ್ಕೆ ಆಗಲೇ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾಗಿದ್ದಾರೆ.ಇನ್ನೊಂದೆರಡು ವರ್ಷದಲ್ಲಿ ಅದನ್ನು ಸಾಕಾರ ಗೊಳಿಸುತ್ತಾರೆ. (ಅವರ ವೆಬ್ ಸೈಟ್ ನೋಡಿ:
http://www.baps.org/globalnetwork/america/dallas)

೪) ಪ್ಲೇನೋದ ಸಾಯಿ ಮಂದಿರ: ಭಾರತೀಯ ಮೂಲದವರು ಪ್ಲೇನೋದ ಪಾರ್ಕರ್ ರಸ್ತೆಯಲ್ಲಿ ಸಾಯಿ ಮಂದಿರವೊದನ್ನು ಸ್ಥಾಪಿಸಿಕೊಂಡಿದ್ದಾರೆ. ಇಲ್ಲಿ ಬೇರೆ ಮಂದಿರಗಳಲ್ಲಿ ನಡೆಯುವ ತರವೇ ಪ್ರಾರ್ಥನೆ, ಪೂಜೆ ನಡೆಯುತ್ತದೆ. ಭಕ್ತರೂ ಸಾಕಷ್ಟು ಇದ್ದಾರೆ. ಸದ್ಯಕ್ಕೆ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಇರುವ ಈ ಪ್ರಾರ್ಥನಾ ಮಂದಿರವನ್ನು ಶೀಘ್ರದಲ್ಲೇ 'ದೇವಸ್ಥಾನ' ವನ್ನಾಗಿ ಮಾಡುವ ಹಂಬಲ ಇಲ್ಲಿಯ ಸಾಯಿಬಾಬ ಭಕ್ತರಲ್ಲಿದೆ.(ಸಾಯಿಮಂದಿರದ ವೆಬ್ ಸೈಟ್.
www.shirdisaidallas.org/mainhome.html)

ಹಾಗಾಗಿ ಹಿಂದೂಗಳು ತಮ್ಮ ತವರಿನ 'ಭಕ್ತಿ' ವಾತಾವರಣವನ್ನೇ ಇಲ್ಲೂ ಸೃಷ್ಟಿ ಮಾಡುವ ಹಾದಿಯಲ್ಲಿ ಇದ್ದಾರೆ.ಇಲ್ಲಿ ದೇವಸ್ಥಾನ/ದೇವಾಲಯ ಮಾಡಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಅವರ ನಿಯಮಗಳನ್ನು ಪಾಲಿಸಿದರೆ ಧಾರಾಳವಾಗಿ ನಮ್ಮ ಕಾರ್ಯ ಮುಂದುವರೆಸಬಹುದು.
ದೇವಸ್ಥಾನಗಳ ಹೊರತಾಗಿ ಇಲ್ಲಿ ಹಲವು ಸಂಘ-ಸಂಸ್ಥೆಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ರವಿಶಂಕರ್ ಗುರೂಜಿಯವರ ಪ್ರಾಣಾಯಾಮ/ಸುದರ್ಶನ ಕ್ರಿಯಾ ತರಗತಿ ಇರಬಹುದು, ದತ್ತಯೋಗ ಸೆಂಟರ್ ನ ಯೋಗ ತರಗತಿರಬಹುದು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಧ್ಯಾನ ತರಗತಿಯಿರಬಹುದು ಅಥವಾ ಭರತನಾಟ್ಯ ಕಾರ್ಯಕ್ರಮವಿರಬಹುದು. ಇದಲ್ಲದೇ ಭಾರತದಿಂದ ಕಲಾವಿದರನ್ನು ಕರೆಸಿ ಇಲ್ಲಿ ಕಾರ್ಯಕ್ರಮ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ದೇಶದ, ಸಂಸ್ಕೃತಿಯ ಅರಿವಿರಲಿ ಎಂದು ಕೂಡ ಈ ಆಶಯಗಳಲ್ಲೊಂದು.

ಯಾವುದೇ ವಸ್ತು, ವ್ಯಕ್ತಿ, ಜಾಗದಿಂದ ದೂರ ಹೋದಷ್ಟೂ ಅದರ ಬಗ್ಗೆ ಭಾವನೆ, ನಂಬಿಕೆ ಜಾಸ್ತಿಯಾಗುತ್ತದಂತೆ. ಭಾರತದಲ್ಲಿ ದೇವಸ್ಥಾನದ ಮುಖವನ್ನೂ ನೋಡದ ಎಷ್ಟೋ ನಮ್ಮ ಯುವಕರೂ ಇಲ್ಲಿ ದೇವಸ್ಥಾನಕ್ಕೆ ನಿರಂತರವಾಗಿ ಬಂದು ನಿಜವಾದ ಭಕ್ತರ ಸಾಲಿಗೆ ಸೇರುತ್ತಾರೆ! ನಾನು ಇಲ್ಲಿ ವಿವರವನ್ನು ಕೊಟ್ಟಿರುವುದು ಬರೀ ಉತ್ತರ ಟೆಕ್ಸಾಸ್ನ ಸುಮಾರು ೫೦ ಚದರ ಮೈಲಿಯಲ್ಲಿರುವ ದೇವಸ್ಥಾನಗಳ ಬಗ್ಗೆ. ಅಮೆರಿಕಾದ ಬೇರೆ ಭಾಗಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸನಾತನ ಧರ್ಮಿಗಳು ಕ್ರಿಯಾಶೀಲರಾಗಿದ್ದಾರೆ ಮತ್ತು ಹಲವು ಬೃಹದಾಕಾರದ ದೇವಾಲಯಗಳಿವೆ. ಸ್ಥಳೀಯ (ಅಮೇರಿಕನ್)ಜನಾಂಗದಲ್ಲಿ ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಅರಿವು೦ಟುಮಾಡಿದ್ದಾರೆ.ಒಟ್ಟಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಅಮೇರಿಕದಲ್ಲಿ ಹಿಂದೂಗಳನ್ನು ಒಟ್ಟುಗೂಡಿಸುವುದರಲ್ಲಿ ಮಹತ್ತರ ಪಾತ್ರ ವಹಿಸಿದೆ. ಕಾರಣ ನಮ್ಮವರು ಹೆಚ್ಚಾಗಿ ಸೇರುವುದು ದೇವಸ್ಥಾನದಲ್ಲೇ.
ಇದಕ್ಕಿಂತ ಹೆಚ್ಚಿಗೆ ಖುಷಿ ಕೊಡುವುದು, ಇಲ್ಲಿಯ ಭಾರತೀಯ ಮೂಲದವರು ವಿವಿಧ ಆಕರಗಳಿಂದ ಹಣ ಸಂಗ್ರಹಿಸಿ, ಭಾರತದ ಹಲವಾರು ಕ್ಷೇತ್ರಗಳಲ್ಲಿ ಸಹಾಯ ಮಾಡಿ, ಅಭಿವೃದ್ದಿಯ ಪಥಕ್ಕೆ ಕರೆದೊಯ್ಯುತ್ತಿರುವುದು. ಭಾರತೀಯರಲ್ಲದೆ ಬೇರೆಬೇರೆ ದೇಶದ ಹಿಂದೂಗಳೂ ನಮ್ಮೊಂದಿಗೆ ಬೆರೆತು ಭಾರತಕ್ಕೆ ಸಹಾಯ ಮಾಡುವುದನ್ನೂ ಕಾಣಬಹುದು. ಪ್ರತೀ ದೇವಸ್ತಾನದಲ್ಲಿ ಭಾರತಕ್ಕಾಗಿ ಏನಾದರೊಂದು ಕಾರ್ಯಕ್ರಮ ಹಾಕಿಕೊಂಡಿರುವುದನ್ನು ನೋಡಬಹುದು. ಇಷ್ಟಾದರೂ NRI ಗಳು ಭಾರತಕ್ಕಾಗಿ ಏನು ಮಾಡಿದ್ದಾರೆ? ಅಂತ ಆಗಾಗ್ಗೆ ಕೇಳುತ್ತಿರುತ್ತಾರೆ ಕುಹಕಿಗಳು. ನಾನು ಒಂದು ಸಣ್ಣ ಉದಾಹರಣೆ ಕೊಡುತ್ತೇನೆ.ಇಲ್ಲಿ ಮೊನ್ನೆ ಭಾರತೀಯ ಒಬ್ಬರ ಮನೆಯಲ್ಲಿ ಹುಟ್ಟುಹಬ್ಬಕ್ಕೆ ಕರೆದಿದ್ದರು. ಇ-ಮೇಲ್ ಅಹ್ವಾನ ಪಾತ್ರ ಕಳಿಸಿದ್ದರು. ಅದರಲ್ಲಿ ' ಗಿಫ್ಟ್ ಏನೂ ತರಬೇಡಿ' ಅಕಸ್ಮಾತ್ ಏನಾದರೂ ಕೊಡಬೇಕೆನಿಸಿದರೆ ನಮ್ಮ ಮನೆಯಲ್ಲಿ ಒಂದು ಡಬ್ಬ (ಹುಂಡಿ) ಇಟ್ಟಿರುತ್ತೇವೆ ಅದಕ್ಕೆ ನೋಟನ್ನು ಹಾಕಿಬಿಡಿ ಅಂತ ಇತ್ತು. ಸರಿ ಗಿಫ್ಟ್ ಬೇಡ ಅದೇ ಹಣವನ್ನು ಡಬ್ಬದಲ್ಲಿ ಹಾಕಿದರಾಯಿತು ಅಂತ ಹೋದೆವು. ಪಾರ್ಟಿಯ ಮದ್ಯೆ ಅವರು ಬಿಡುವುಮಾಡಿಕೊಂಡಾಗ ನಾನು ಕುತೂಹಲದಿಂದ ವಿಷಯ ಕೇಳಿದೆ. ಅದಕ್ಕೆ ಅವರ ಉತ್ತರ "ನಾವು ಭಾರತದಲ್ಲಿ ಬಡತನದಲ್ಲಿ ಓದಿದೆವು, ಆ ಸ್ಕೂಲಲ್ಲಿ ಯಾವ ಸೌಲಭ್ಯವೂ ಇರಲಿಲ್ಲ, ಈಗ ಪ್ರತೀ ವರ್ಷವೂ ನಾವು ಓದಿದ, ಇದ್ದ ಸ್ಥಳಕ್ಕೆ ಏನಾದರೊಂದು ಸಹಾಯ ಮಾಡುತ್ತೇವೆ, ಡಬ್ಬದಲ್ಲಿ ಶೇಖರಿಸಿದ ಹಣಕ್ಕೆ ಎರಡರಷ್ಟು ಹಣವನ್ನು ಸೇರಿಸಿ, ಒಂದು ಸಂಪೂರ್ಣ ಮೊತ್ತ ಮಾಡಿ, ಅಲ್ಲಿಗೆ ತಂದೆ ತಾಯಿಯ ಹೆಸರಲ್ಲಿ ದಾನಮಾಡುತ್ತೇವೆ. ಮಗಳಿಗೆ ಆರು ವರ್ಷ, ಮಗಳ ಮೊದಲ ಹುಟ್ಟುಹಬ್ಬದಿಂದ ಇದನ್ನು ಪ್ರಾರಂಭಿಸಿದ್ದೇವೆ". ನನ್ನ ಕಣ್ಣಲ್ಲಿ ನೀರು ಜಿನುಗಿದ್ದನ್ನು ಸದ್ಯ ಯಾರೂ ಗಮನಿಸಲಿಲ್ಲ. ನಾವು ಪಾರ್ಟಿ ಮುಗಿಸಿ ಹೋಗುವಾಗ ಇನ್ನೊಂದು ನೋಟನ್ನು ಜೊತೆಗೆ ಸೇರಿಸಿ ಡಬ್ಬಿಗೆ ಹಾಕುವುದನ್ನು ಮರೆಯಲಿಲ್ಲ. ಸ್ವಲ್ಪ ದಿನವಾದ ಮೇಲೆ ತಿಳಿಸಿದರು .
"ಒಂದು ಲಕ್ಷ ರೂಪಾಯನ್ನು ಕಳಿಸಿಕೊಟ್ಟಿದ್ದೇವೆ".
ಹಾಗಾಗಿ, ಸ್ನೇಹಿತರೆ ನಾವು ಉದ್ಯೋಗ ಅರಸಿಕೊಂಡು, ವಿಮಾನ ಏರಿಕೊಂಡು ಪರದೇಶಕ್ಕೆ ಬಂದಿರಬಹುದು. ಆದರೆ, ನಮ್ಮತನವನ್ನು ಬಿಟ್ಟಿಲ್ಲ. ಬಿಡುವುದೂ ಇಲ್ಲ. ಯಾವತ್ತೂ ತವರು ತವರೇ ಅಲ್ಲವೇ?

----------