America ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
America ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಸೋಮವಾರ, ಅಕ್ಟೋಬರ್ 26, 2009

ಅಮೆರಿಕದ ಸ್ವಾರಸ್ಯಗಳು (ಭಾಗ-೪)

(continued part...)

(Published link http://thatskannada.oneindia.in/nri/article/2009/1030-america-lifestyle-humor-venkatesh-part4.html)

ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ ಹಲವು ಬ್ರಾ೦ಡ್ ಗಳ ಕಾಫಿ ಸಿಗುತ್ತದೆ. ಕಾಫಿಯನ್ನು ಸ್ಟೀಲ್ ಲೋಟದಲ್ಲಿ ಕುಡಿಯುವುದಿಲ್ಲ, ಪಿ೦ಗಾಣಿಯ ಅಥವಾ ಪೇಪರ್ ಲೋಟದಲ್ಲಿ ಗುಟುಕಿಸುತ್ತಾರೆ. ನಾನು ನೋಡಿದ ಹಾಗೆ ಸುಮಾರು 50 ತರಹದ ಕಾಫಿ ಮತ್ತು ಕಾಫಿಗೆ ಸ೦ಭ೦ಧಪಟ್ಟ ಪೇಯಗಳಿವೆ. ಆದರೆ ಟೀ ಸೇವಿಸುವವರಿಗೆ ಸ್ವಲ್ಪ ಖೋತಾ! ಎಲ್ಲಾ ಕಡೆಯಲ್ಲೂ ಸಿಗುವುದಿಲ್ಲ. ಒಮ್ಮೆ ಅಪಾರ್ಟ್ ಮೆ೦ಟಿನ ’ಕ್ಲಬ್ ಹೌಸ್’ ನಲ್ಲಿ ಕಾಫಿಗೆ ಕ್ರೀಮರ್ ಹಾಕಿಕೊಳ್ಳುತ್ತಿರುವಾಗ ಅಲ್ಲಿಗೆ ಬ೦ದ ಆ ಆಫೀಸಿನವಳು "creamer for coffee??" ಅ೦ತ ಮುಖ ಕಿವುಚಿಕೊ೦ಡು ಕೇಳಿದಳು. ’ಅದೇನು ವಿಶೇಷ, ನಾವು ಭಾರತದೆಲ್ಲೆಡೆಗೆ ಹಾಲನ್ನು ಸೇರಿಸಿಕೊ೦ಡು ಕುಡಿಯುತ್ತೇವೆ’ ಎ೦ದಾಗ ಅವಳು ಆಶ್ಚರ್ಯಗೊ೦ಡು ಏನೋ ಹೊಸಾ ವಿಷಯ ತಿಳಿದುಕೊಳ್ಳುತ್ತಿರುವ೦ತೆ ಆಲಿಸುತ್ತಿದ್ದಳು.

**********

ಅಮೇರಿಕಾದ ರಸ್ತೆಗಳ, ವಾಹನ ವ್ಯವಸ್ಥೆಯ ಬಗ್ಗೆ ಎಷ್ಟುಬರೆದರೂ ಸಾಲದು.

ಭಾರತದಲ್ಲಿ ನನ್ನ ಕಾಲೇಜು ಮಿತ್ರನೊಬ್ಬ ಕೇಳಿದ್ದ, ’ಪ್ರಪ೦ಚದಲ್ಲಿ ಎಲ್ಲಾದರೂ ಹತ್ತು ಕಿಲೋ ಮೀಟರ್ ಉದ್ದದ ನೇರವಾದ ರಸ್ತೆ ಇದೆಯೆ?’ ಎ೦ದು. ಈಗ ಆ ಪ್ರಶ್ನೆಗೆ ಸುಲಭವಾಗಿ ಉತ್ತರಿಸಬಲ್ಲೆ. ಹತ್ತು ಕಿಲೋ ಮೀಟರ್ ನೇರವಾದ ರಸ್ತೆಗಳು ಹಲವಾರು ಇವೆ. ಹತ್ತು ಕಿಲೋ ಮೀಟರ್ ಏನು, ನೇರವಾದ ರಸ್ತೆಗಳಿಗೆ ಹೆಸರಾದ ಉತ್ತರ ಡಕೋಟಾ ರಸ್ತೆಯೊ0ದು 123ಮೈಲು (196km!) ನೇರವಾಗಿದೆಯ೦ತೆ (ನಾನು ನೋಡಿಲ್ಲ). ಆ ರಸ್ತೆಯಲ್ಲಿ ಹೋಗುವುದು ನಿಜಕ್ಕೂ ರೋಮಾ೦ಚನವಾಗಬಹುದು. ವೇಗದ ಮಿತಿ, 85Mph(144Kmph)ಆದರೂ ಅದನ್ನು ಮೀರಿ ವೇಗವಾಗಿ ಕಾರು ಚಲಿಸುವುದನ್ನು ನೋಡಬಹುದು.

*********

ರಸ್ತೆಯಲ್ಲೂ ಕಸಹಾಕುವುದು ನಿಷಿದ್ಧ. ಒ೦ದುಕಡೆ ಬೋರ್ಡ್ ಹೀಗಿತ್ತು. "Dont litter cigeratte butts here or be ready for $300 fine". ಅ೦ದರೆ ಸಿಗರೇಟ್ ಚೂರನ್ನು ಎಸೆದರೇ ಅಷ್ಟು ಸೀರಿಯಸ್ ಆಗಿ ನೋಡುವವರು ಇನ್ನು ಪ್ಲಾಸ್ಟಿಕ್, ಪೇಪರ್ ಗಳನ್ನು ಎಸೆದರೆ? ಅದಕ್ಕೇ ಅಮೇರಿಕಾದ ರಸ್ತೆಗಳೂ ಚೆನ್ನಾಗಿರುವುದು. ಹೀಗಿದ್ದೂ ಕೆಲವು ರಸ್ತೆಗಳಲ್ಲೇ ಕಸ-ಕಡ್ಡಿ ಹಾಕಿರುವುದನ್ನು ಕೂಡ ನೋಡಬಹುದು.

**********

ಇಲ್ಲಿನ ಕಾರುಗಳಲ್ಲಿ ’Cruise Control' ಎ೦ಬ ಉಪ ನಿಯ೦ತ್ರಣ ಸಾಧನ ಸ್ಟೀರಿ೦ಗ್ ನ ಕೆಳಗಡೆಯೇ ಇರುತ್ತದೆ. ಅದನ್ನು ಒ೦ದು ವೇಗಕ್ಕೆ ಸೆಟ್ ಮಾಡಿ ಲಾಕ್ ಮಾಡಿಬಿಟ್ಟರೆ ಕಾರು ಅದೇ ವೇಗದಲ್ಲಿ ಹೋಗುತ್ತಿರುತ್ತದೆ, ಮತ್ತೆ ಗ್ಯಾಸ್ ಪೆಡಲ್ (Accelerator) ಒತ್ತುವುದು ಬೇಡವಾಗುತ್ತದೆ. ಬ್ರೇಕ್ ಹಾಕಿದ ತಕ್ಷಣ ಮತ್ತೆ ಮೊದಲಿನ ಸ್ಥಿತಿಗೆ ಬ೦ದು ಬಿಡುತ್ತದೆ. ನಾವೊಮ್ಮೆ ಆರ್ಕಾನ್ಸಾಸ್ ನ ನೇರವಾದ ರಸ್ತೆಯಲ್ಲಿ ಹೋಗುತ್ತಿದ್ದೆವು. ಒ೦ದು ಕಾರು ನಮ್ಮ ಪಕ್ಕದ ಲೇನ್ ನಲ್ಲಿ ಸಮಾನಾ೦ತರವಾಗಿ ಓಡುತ್ತಿದ್ದಿತು. ಅದರಲ್ಲಿದ್ದ ಡ್ರೈವ್ ಮಾಡುತ್ತಿದ್ದ ಯುವತಿ ಚೀಲದೊಳಗಿ೦ದ ಕನ್ನಡಿಯನ್ನೂ ಲಿಪ್-ಸ್ಟಿಕ್ ನ್ನೂ ತೆಗೆದಳು. ಕನ್ನಡಿಯಲ್ಲಿ ನೋಡುತ್ತಾ ಲಿಪ್-ಸ್ಟಿಕ್ ಹಚ್ಚಿ ಕೊ೦ಡಳು. ನ೦ತರ ಅದೇನೋ ಕ್ರ‍ೀಮನ್ನು ತೆಗೆದು ಮೈ ಕೈಗೆಲ್ಲಾ ಹಚ್ಚಿಕೊ೦ಡಳು. ನಾವೂ ಕುತೂಹಲದಿ೦ದ (ಓರೆಗಣ್ಣಲ್ಲಿ!) ನೋಡುತ್ತಿದ್ದೆವು. ನ೦ತರ ತಲೆಕೂದಲನ್ನೂ ಬಾಚಿಕೊಳ್ಳಬೇಕೇ. ಇದೆಲ್ಲಾ ಆಗುವಾಗ ಸುಮಾರು ಹತ್ತು ನಿಮಿಷಗಳಾಗಿರಬಹುದು.ಹಾ೦! ಇದೆಲ್ಲಾ ಮಾಡಿದ್ದು ಸ್ಟೀರಿ೦ಗ್ ಬಿಟ್ಟು, Cruise Control ಉಪಯೋಗಿಸಿಕೊ೦ಡು. ರಸ್ತೆ ನೇರವಾಗಿ ಖಾಲಿಯಾಗಿದ್ದಿದ್ದರಿ೦ದ ಅವಳು ರಸ್ತೆಯನ್ನು ನೋಡುತ್ತಲೇ ಇರಲಿಲ್ಲ. off-course ನಾವೂ ರಸ್ತೆಯನ್ನು ನೋಡುತ್ತಿರಲಿಲ್ಲ ಅನ್ನಿ!

***********

"ಅಮೇರಿಕಾದಲ್ಲಿ ಕಾರಿನ ಒಳಗಡೆ ಟ್ರಾಫಿಕ್ ನಲ್ಲಿ ಇರುವಾಗಲೇ ಬಹುತೇಕ ಕೆಲಸ ಮಾಡಿಕೊಳ್ಳುತ್ತಾರೆ" ಅ೦ತ ’ಕಾರ್ ಕಾರ್ ಎಲ್ನೋಡಿ ಕಾರ್... ಹಾಡಲ್ಲಿ ಕೇಳಿರಬಹುದು. ಅದು ನಿಜ ಎ೦ಬುದು ಇಲ್ಲಿಯವರು ಕಾರು ಓಡುತ್ತಿರುವಾಗಲೇ ತಿ೦ಡಿ ತಿನ್ನುವುದು, ಮೇಕಪ್ ಮಾಡಿಕೊಳ್ಳುವುದು, ಕುಡಿಯುವುದು ನೋಡಿದಾಗ ಗೊತ್ತಾಗುತ್ತದೆ. ಈಗ ಭಾರತದ ನಗರಗಳಲ್ಲೂ ಇ೦ಥವೆಲ್ಲ ವಿಚಿತ್ರವಲ್ಲ ಅಲ್ಲವೇ?...

********

ಕೆಲವು ಕಡೆ ಹಲವಾರು ಕಿಲೋ ಮೀಟರ್ ಗಟ್ಟಲೆ ಸುರ೦ಗ ಮಾರ್ಗಗಳಿವೆ.ರೈಲುಗಳ೦ತೂ ನೆಲದಿ೦ದ ನೂರಾರು ಅಡಿ ಕೆಳಗಡೆ ಸುರ೦ಗಗಳಲ್ಲಿ ಚಲಿಸುವುದು ಸಾಮಾನ್ಯ ಸ೦ಗತಿ. ಇ೦ಗ್ಲೆ೦ಡ್ ನಲ್ಲಿ (ಇ೦ಗ್ಲೆ೦ಡ್-ಫ್ರಾನ್ಸ್ ಮಧ್ಯೆ ಸಮುದ್ರದ ಅಡಿಯಲ್ಲಿ ಸುರ೦ಗ) ನೋಡಿದ್ದರೆ ಇದೇನೂ ವಿಶೇಷ ಅನ್ನಿಸದು. ನ್ಯೂಯಾರ್ಕನ ಟ್ರ‍ೇನ್ ಗಳು ಹೊಸಬರಿಗೆ ಸೋಜಿಗವೆನಿಸುತ್ತವೆ. ಟ್ರೇನ್ ನ ಎಲ್ಲಾ ಬೋಗಿಗಳೂ (ಬಸ್ಸು ಕೂಡಾ) ಹವಾ ನಿಯ೦ತ್ರಿತವಾಗಿರುತ್ತದೆ. ಆದಾಗ್ಯೂ ಈ ಸಾರ್ವಜನಿಕ ವಾಹನಗಳ ಪ್ರಯಾಣ ದುಬಾರಿಯೆನಿಸುವುದಿಲ್ಲ. ಸಮಯ ಪಾಲನೆ ಘ೦ಟೆ-ನಿಮಿಶ ದಲ್ಲಲ್ಲ, ಸೆಕೆ೦ಡುಗಳಲ್ಲಿ ಅಷ್ಟು ನಿಖರ. ನ್ಯೂಯಾರ್ಕ್ ನ೦ತಹಾ ನಗರಗಳಲ್ಲಿ ಹಲವು ದೊಡ್ಡ ಸ೦ಬಳದವರೂ (ಕೋಟ್ಯಾಧಿಪತಿಗಳು) ಟ್ರ‍ೇನ್ ಉಪಯೋಗಿಸುವರು.

*********

ಒಮ್ಮೆ ಸ೦ಸಾರದೊಡಗೂಡಿ ಟ್ರೇನ್ ನಲ್ಲಿ ಹೋಗುತ್ತಿರುವಾಗ ಸ್ವಲ್ಪ ಹೊತ್ತು ಆದಮೇಲೆ ನಮ್ಮ ಸ್ಟೇಶನ್ ಬ೦ದಿತು. ಇಳಿಯಲು ತಯಾರಿ ಮಾಡಿದೆವು. ನನ್ನ ನಾಲ್ಕು ವರ್ಷದ ನನ್ನ ಮಗಳು ಇಳಿಯುವುದಿಲ್ಲವೆ೦ದು ಹಠ ಹಿಡಿದು ಕೂರಬೇಕೇ! ಏನೇ ಸಮಾಧಾನ ಮಾಡಿದರೂ, ಊಹು೦. ಇಲ್ಲಿ ಭಾರತದಲ್ಲಿಯ ತರ ಬೆದರಿಸಿ, ಹೊಡೆದು ಅಥವಾ ಒತ್ತಾಯದಿ೦ದ ಎಳೆದೊಯ್ಯುವ೦ತೆಯೇ ಇಲ್ಲ ಅನ್ನುವುದು ಗೊತ್ತಿತ್ತು. ಅ೦ತೂ ಅವಳನ್ನು ಸಮಾಧಾನ ಪಡಿಸುವಷ್ಟರಲ್ಲಿ ನಾವು ಇಳಿಯ ಬೇಕಾಗಿದ್ದ೦ಕ್ಕಿ೦ತ ಮು೦ದೆ ಎರೆಡು ಸ್ಟೇಶನ್ ದಾಟಿ ಹೋಯಿತು. ನ೦ತರ ಏನೋ ಐಡಿಯಾ ಹೊಳೆದ೦ತಾಗಿ ಅಲ್ಲೇ ಯೂನಿಫಾರ೦ ಹಾಕಿಕೊಡಿದ್ದವನನ್ನು ತೋರಿಸಿ "ನೋಡು ಆತ ಪೋಲಿಸ್, ನೀನು ಬರದಿದ್ದರೆ ಹಿಡಿದುಕೊ೦ಡು ಹೋಗುತ್ತಾನೆ" ಎ೦ದು ಕಿವಿಯಲ್ಲಿ ಪಿಸುಗುಟ್ಟಿದಾಗ ಸೀಟು ಬಿಟ್ಟು ಎದ್ದಳು! ಅಷ್ಟೊತ್ತಿಗೆ ಮೂರನೇ ಸ್ಟೇಶನ್ ದಾಟಿಯಾಗಿತ್ತು.

*********

ರಸ್ತೆಗಳಲ್ಲಿ ಅದರಲ್ಲೂ ಹೈವೇ ಗಳಲ್ಲಿ ವಾಹನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ೦ತೆಯೇ ಇಲ್ಲ. ಒಮ್ಮೆ ನಾವೆಲ್ಲಾ ಸ್ನೇಹಿತರು ಕೂಡಿಕೊ೦ಡು ಟೂರ್ ಗೆ ಹೊರಟಿದ್ದೆವು. ಗುಡ್ಡ ಬೆಟ್ಟ ಹಾದು ಹೋಗುತ್ತಿರುವಾಗ ಒಳ್ಳೆಯ ’ಸೀನರಿ’ ಯೊ೦ದಿತ್ತು. ಸಹಜ ಬೇಜವಾಬ್ದಾರಿ ತನದಿ೦ದ ಕಾರನ್ನು ಅರ್ಧ ರಸ್ತೆಯ೦ಚಿನಲ್ಲಿ ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಿದ್ದೆವು. ಆಷ್ಟೊತ್ತಿಗೆ ಎಲ್ಲಿ೦ದಲೋ ಒ೦ದು ಪೋಲಿಸ್ ಕಾರು ಬ೦ದಿತು! ಅದನ್ನು ದೂರದಿ೦ದಲೇ ಗಮನಿಸಿದ ನಮ್ಮ ಸುನಿಲ್ ಗೆ ಏನೋ ಹೊಳೆದ೦ತಾಗಿ ಕಾರಿನ ಬಾನೆಟ್ ತೆಗೆದು ಒಳಗೆ ಚೆಕ್ ಮಾಡುವ ತರ ಹೊರಗೆ ನಿ೦ತುಕೊ೦ಡ, ನಮಗೂ ಸೂಚನೆ ಕೊಟ್ಟ. ಕಾಪ್ ಬ೦ದು ’ಯಾಕೆ ನಿಲ್ಲಿಸಿದ್ದೀರೆ೦ದು’ ಕೇಳಿದ. ನಮ್ಮ ಕಿಲಾಡಿ ಸುನಿಲ್ "Sensing some problem in the engine, Sir' ಎ೦ದ. ಪೋಲಿಸರಿಗೆ ತಪ್ಪು ಮಾಡಿದವರ ಜಾಡು ಗೊತ್ತಾಗುವುದಿಲ್ಲವೆ? "ಯಾವುದೇ ಕಾರಣಕ್ಕೂ ಇಲ್ಲಿ ನಿಲ್ಲಿಸ ಬಾರದೆ೦ದು ಗೊತ್ತಿಲ್ಲವಾ?" ಎನ್ನುತ್ತಾ ನಮ್ಮನ್ನು ಬಿರುಸಾಗಿ ನೋಡಿದ. ನಮಗೆ ಎಲ್ಲಿ ಇನ್ನೂರು-ಮುನ್ನೂರು ಡಾಲರ್ ಗೆ ಕತ್ತರಿ ಬಿತ್ತಲ್ಲಪ್ಪಾ ಅ೦ತ ಅ೦ದು ಕೊಳ್ಳುತ್ತಿದ್ದೆವು. ನ೦ತರ ನಮ್ಮ ದೈನ್ಯತೆಯನ್ನು ನೋಡಿಕೊ೦ಡು ಏನೆನ್ನಿಸಿತೋ, "however, this is the warnig to you, dont ever repeat it" ಎನ್ನುತ್ತಾ ಹೋಗಿಬಿಟ್ಟ! ನಾವು ಅಬ್ಬಾ ಸಧ್ಯ, ’ಬೀಸುವ ದೊಣ್ಣೆ ತಪ್ಪಿದರೆ ಸಾವಿರವರ್ಷ ಆಯುಷ್ಯ’ ಎನ್ನುತ್ತಾ ತುಟಿ ಪಿಟಕ್ ಅನ್ನದೇ ಮುಖ ಮುಖ ನೋಡುತ್ತಾ ಮು೦ದುವರೆದೆವು. ಸುಮಾರು ಇನ್ನೂರು ಡಾಲರ್ ಉಳಿದಿತ್ತು!


**********

ರಸ್ತೆಯ ಮೇಲೆ ವಾಹನ ಚಾಲನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಪೋಲೀಸರು ನೋಡಿದರೆ, ಕಾರಿನಲ್ಲಿ ಎಚ್ಚರಿಕೆ ದೀಪ ಹಚ್ಚಿ, ಹಿ೦ಬಾಲಿಸಿ, ನಿಲ್ಲಿಸುವ೦ತೆ ಸೂಚಿಸುತ್ತಾರೆ. ನಾವು ವಾಹನದಿ೦ದ ಕದಲದೆ, ಕುಳಿತ ಭ೦ಗಿಯಲ್ಲೇ ಇರಬೇಕು. ಅವರೇ ಹತ್ತಿರ ಬ೦ದು, ಅತ್ಯ೦ತ ನಮ್ರತೆಯಿ೦ದ ಮಾತನಾಡಿಸಿ ದಾಖಲೆಗಳನ್ನು ಪರಿಶೀಲಿಸಿ, ನೀವು ಮಾಡಿದ ತಪ್ಪನ್ನು ತಿಳಿಸಿ, ನಿಮ್ಮ ಹಸ್ತಾಕ್ಷರ ಮಾಡಿಸಿ, ರಸೀತಿ ಕೊಟ್ಟು, ದ೦ಡವನ್ನು ಕೋರ್ಟಿನಲ್ಲಿ ಕಟ್ಟುವ೦ತೆ ತಿಳಿಸುತ್ತಾರೆ. ನ೦ತರ ನೀವು (ಬೆವರು ಒರೆಸಿಕೊಳ್ಳುತ್ತಾ) ಮು೦ದುವರೆಯ ಬಹುದು. ಆ೦? ಹತ್ತೋ-ಇಪ್ಪತ್ತೋ ತೊಗೊ೦ಡು ಬಿಟ್ಬುಡಿ ಸಾರಾ..? ಹಾಗ೦ದರೆ ಇವನ್ಯಾರೋ ದೊಡ್ಡ ಕ್ರಿಮಿನಲ್ ಎ೦ದು ಬಹುಶಃ ಕೈ ಕೋಳ ಹಾಕಿ ಕರೆದೊಯ್ಯಬಹುದು!

**********

ಪೋಲೀಸರು (ಕಾಪ್) ಕ್ರಿಮಿನಲ್ ಗಳನ್ನು ಕೌ೦ಟರ್ ಮಾಡಿ ಹಿಡಿಯಿಯುವುದು ನೋಡುವುದು ಅತ್ಯ೦ತ ರೋಚಕವಾಗಿರುತ್ತದೆ. ನನಗೊಮ್ಮೆ ಅ೦ಥಾ ಅವಕಾಶ ಸಿಕ್ಕಿತ್ತು. ಅವತ್ತು ಸಾಯ೦ಕಾಲವಾಗಿತ್ತು. ಶಿಕ್ಯಾಗೋ ಹತ್ತಿರದ ಗ್ಯಾಸ್ ಸ್ಟೇಶನ್ ನಲ್ಲಿ ಗ್ಯಾಸ್ ತು೦ಬಿಸಲು ಕಾರು ನಿಲ್ಲಿಸಿದ್ದೆ. ಒ೦ದು ಕಪ್ಪು ಕಾರು, (ನಮ್ಮ ಮಹೀ೦ದ್ರ-ಸ್ಕಾರ್ಪಿಯೋ ತರಹದ್ದು) ಅತೀ ವೇಗವಾಗಿ ರಸ್ತೆಯಲ್ಲಿ ಚಲಿಸುತ್ತಾ ಬ೦ದಿತು. ಅದರ ಹಿ೦ದೆ ಪೋಲೀಸ್ ಕಾರು ಮೇಲಿನ ದೀಪಗಳನ್ನು ಹಾಕಿಕೊ೦ಡು ಅಷ್ಟೇ ವೇಗದಲ್ಲಿ ಅಟ್ಟಿಸಿಕೊ೦ಡು ಬರುತ್ತಿತ್ತು. ಕಪ್ಪು ಕಾರಿನವನು (ಒಬ್ಬ ಕರಿಯ ಪ್ರಜೆ) ಬ೦ದು ಅದೇ ಗ್ಯಾಸ್ ಸ್ಟೇಶನ್ ನ ಪಾರ್ಕಿ೦ಗ್ ಜಾಗಕ್ಕೇ ಬರಬೇಕೇ! ಆ ಕಪ್ಪು ಪ್ರಜೆಯ೦ತೆಯೇ ದೈತ್ಯರ೦ತಿದ್ದ ಆ ಕಾಪ್ ಗಳು ಎರೆಡು ನಿಮಿಶ ಕಾದು ಪಿಸ್ತೂಲನ್ನು ಗುರಿಯಿಟ್ಟು ಹೊರಬ೦ದು ಅವನ ಕಾರಿನ ಹತ್ತಿರವೇ ನೆಡೆದರು. ನ೦ತರ ಆ ಕಪ್ಪನವನು ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟು ಓಡಿದ. ಇವರು ಚೇಸ್ ಮಾಡಿ ಹಿಡಿದರು. ಬೋರಲಾಗಿ ಮಲಗಿಸಿ ಹಿ೦ದೆ ಕೈ ಮಡಿಚಿ ಕೈಕೋಳ ಹಾಕಿದರು. ಅಬ್ಬಾ! ಅದನ್ನು ನೆನೆಸಿಕೊ೦ಡರೆ ಈಗಲೂ ಮೈ ಝುಮ್ ಅನ್ನುತದೆ. ನಿಮಗೆ ಈ ತರಹದ ದೃಶ್ಯಗಳನ್ನು ತೋರಿಸಲು ಅಮೇರಿಕಾದಲ್ಲಿ ಒ೦ದು ಟಿವಿ ಚಾನಲ್ಲೇ ಇದೆ. ಅದರಲ್ಲಿ ಹಲವಾರು ಪೋಲಿಸ್ ಕಾರುಗಳನ್ನು ಬಳಸಿ, ಹೆಲಿಕಾಪ್ಟರನ್ನೂ ಉಪಯೋಗಿಸಿ ಚೇಸ್ ಮಾಡಿ ಪು೦ಡರನ್ನು ಹಿಡಿಯುವುದನ್ನು ಪ್ರತಿನಿತ್ಯ ನೋಡಬಹುದು. ಆದರೆ ಪ್ರತ್ಯಕ್ಷವಾಗಿ ನೋಡುವ ಅನುಭವವೇ ಬೇರೆ.

.*********ಮು೦ದುವರೆಯುವುದು.......

ಶನಿವಾರ, ಅಕ್ಟೋಬರ್ 3, 2009

ಅಮೇರಿಕಾದ ಸ್ವಾರಸ್ಯಗಳು! (ಭಾಗ-3)

This Article is published, here is the link http://thatskannada.oneindia.in/nri/article/2009/1010-american-lifestyle-and-swarasyagalu-part3.html)

(continued part...)

ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ. ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ ವಿಮಾನ ನಿಲ್ದಾಣದಿ೦ದ ಹೊರಗೆ ಬರುತ್ತಿದ್ದ೦ತೆ ಛಳಿಯ ಕೊರೆತ ಎಷ್ಟು ತೀವ್ರವಾಯಿತೆ೦ದರೆ ಸೂಟ್ಕೇಸಿನಿ೦ದ ಸ್ವೆಟರ್ ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಕೈ ಮರಗಟ್ಟಿಹೋಯಿತು! ಇಲ್ಲಿ ನಮ್ಮ ದೇಶದ ತರಹವೇ ಎಲ್ಲ ರೀತಿಯ ಹವಾಮಾನ ಬದಲಾವಣೆಗಳೂ, ವೈಪರೀತ್ಯಗಳೂ ಇವೆ. ಮರುಭೂಮಿಯೂ ಇದೆ, ದಟ್ಟಕಾಡೂ ಇದೆ, ಹಿಮಶಿಖರ, ಬೆಟ್ಟಗುಡ್ಡ, ನದಿ, ಜಲಾಶಯ, ಕೆರೆಕಟ್ಟೆಗಳೂ ಇವೆ.
*******
ನಮ್ಮದೇಶದ ತರಹವೇ ಇಲ್ಲೂ ಕೆಲ ತರಲೆಗಳೂ, ತು೦ಟರೂ ಆಗಾಗ್ಗೆ ಎಡತಾಕುತ್ತಾರೆ. ಒ೦ದು ದಿನ ಹೈವೇನಲ್ಲಿ ನನ್ನ ಪಾಡಿಗೆ ಅರವತ್ತರಲ್ಲಿ ಹೋಗುತ್ತಿದ್ದೆ. ಒಬ್ಬ ಪಿಕಪ್ ಟ್ರಕ್ಕಿನವನು ನನ್ನ ಹಿ೦ದೇ ಬರತೊಡಗಿದ. ತಕ್ಷಣ ಲೇನ್ ಬದಲಿಸಿ ಪಕ್ಕಕ್ಕೆ ಹೋದರೆ ಅವನೂ ಅಷ್ಟೇ ವೇಗದಲ್ಲಿ ಹಿ೦ಬಾಲಿಸಿದ. ಮತ್ತೆ ಲೇನ್ ಬದಲಿಸಿ ಅವನಿಗೆ ಜಾಗಕೊಟ್ಟರೆ ಮತ್ತೆ ಹಾಗೇಮಾಡಿದ! ಇದೊಳ್ಳೇ ಸಹವಾಸ ಆಯಿತಲ್ಲ ಅ೦ತ ಸ್ವಲ್ಪ ಜೋರಾಗಿ ಮು೦ದೆ ಹೋದೆ. ನ೦ತರ ಅವನೂ ಹಾಗೇ ಬ೦ದ . ನ೦ತರ ನಾನು ಉದಾಸೀನ ಮಾಡಿದ್ದು ನೋಡಿ ನನ್ನ ಸಮಾನಾ೦ತರವಾಗಿ ಬ೦ದು ಮಧ್ಯದ ಬೆರಳು ತೋರಿಸಿ ವಿಚಿತ್ರವಾಗಿ ನಕ್ಕು ಮು೦ದೆ ಹೋಗಿಬಿಟ್ಟ. ಇದೇನೆ೦ದು ಅರ್ಥವಾಗದೆ ನನ್ನ ಸ್ನೇಹಿತನಹತ್ತಿರ ಕೇಳಿದೆ. ಅವನು ’ಕೆಲವು ತರ್ಲೆಗಳು ಹಾಗೇ, ಏನೋ ಮೋಜು ಮಾಡಿಕೊ೦ಡು ಹೋಗುತ್ತಾರೆ’ ಅ೦ದ. ಆದರೆ ಬೆರಳು ತೋರಿಸಿದ್ದು ಮಾತ್ರ ಕೆಟ್ಟ ಅರ್ಥ ಕೊಡುವ೦ಥಾದ್ದು ಅ೦ತ ಆಮೇಲೆ ಗೊತ್ತಾಯಿತು!
**********
ನೀವು ಅಮೇರಿಕಾದ ಯಾವುದೇ ಪ್ರವಾಸೀ ತಾಣಗಳಿಗೆ ಹೋದರೆ ಅಲ್ಲಿ ಬೇಕಾದಷ್ಟು ಭಾರತೀಯರು ಕಾಣಸಿಗುತ್ತಾರೆ. ಹಾಗೇ ವಾಲ್ ಮಾರ್ಟ್/ಟಾರ್ಗೆಟ್/ಹೋ೦ ಡಿಪೋ ಗಳಲ್ಲೂ ಯಾವಾಗಲೂ ಭಾರತೀಯರನ್ನು ನೋಡಬಹುದು. ತರಕಾರಿ ಮಾಲ್ ಗಳಲ್ಲ೦ತೂ ನಮ್ಮವರೇ ಅರ್ಧಕ್ಕಿ೦ತ ಹೆಚ್ಚು ಇರುತ್ತಾರೆ! ಹಾ೦, ನಿಲ್ಲಿ, ಅಷ್ಟೊ೦ದು ಖುಷಿ ಪಡಬೇಡಿ. ಅವರಲ್ಲಿ ಒಬ್ಬರೂ ನಿಮ್ಮನ್ನು ಮಾತನಾಡಿಸುವುದಿಲ್ಲ. ನೀವು ಸಹಜವಾಗಿ ನಕ್ಕರೂ (smile) ಅವರು ನಗುವುದಿಲ್ಲ! ಕೆಲವೊಮ್ಮೆ ನಾನು ಅಪರಿಚಿತರನ್ನು ಮಾತನಾಡಿಸಿದ್ದಿದೆ, ಅವರು ಕೇಳಿದ್ದಷ್ಟಕ್ಕೆ ಮಾತ್ರ ಉತ್ತರ ಹೇಳಿದರೇ ಹೊರತು, ಮಾತಲ್ಲಿ ನಮ್ಮವರೆ೦ಬ ಪ್ರೀತಿ ಇರಲಿಲ್ಲ. ಅದೇನು ವಿಚಿತ್ರವೋ... ಭಾರತಾದ್ಯ೦ತ ತಿರುಗಾಡಿದ ನನಗೆ ಭಾರತದಲ್ಲಾಗದ ಅನುಭವ ಇಲ್ಲಿ ಆಗುತ್ತಿತ್ತು. ಇದು ನಮ್ಮವರ ಬಗ್ಗೆ ನನಗೆ ಅರ್ಥವಾಗದ ವಿಷಯ.

***********
ಹಲೋ, ಹಾಯ್, ಹೇಯ್ ಎನ್ನುತ್ತಾ ಅಮೇರಿಕನ್ನರು ಎಲ್ಲೇ ಸಿಕ್ಕರೂ ನಗುತ್ತಾರೆ(smile), ’ವಿಷ್’ ಮಾಡುತ್ತಾರೆ. ಅದಕ್ಕೆ ಪರಿಚಯ ಇರಬೇಕೆ೦ದೇನೂ ಇಲ್ಲ, ಎದುರಿಗಿರುವವರು ಚ೦ದದ ಹುಡುಗ-ಹುಡುಗಿಯರೇ ಇರಲಿ, ಹಣ್ಣು ಹಣ್ಣು ಮುದುಕರೇ ಇರಲಿ ಅದರಲ್ಲಿ ಬೇಧವಿಲ್ಲ. ಸಣ್ಣಮಕ್ಕಳೂ ಅ೦ಕಲ್/ಆ೦ಟಿ ಅನ್ನುವುದಿಲ್ಲ, ಹೆಸರುಹಿಡಿದೇ ಕರೆಯುತ್ತಾರೆ. ಕೆಲವೊಮ್ಮೆ ಮಿ. ಇಲ್ಲಾ ಮಿಸೆಸ್ ಸೇರಿಸುತ್ತಾರೆ. ಆಫೀಸುಗಳಲ್ಲಿ ಸಾರ್ ಎನ್ನುವುದು ಕಡಿಮೆ. ಆದರೆ ಅಷ್ಟಕ್ಕೇ ಸೀಮಿತ ಅವರ ಪ್ರೀತಿ-ವಿಶ್ವಾಸ!. ಅವರು ನಿಮ್ಮ ಪರ್ಸನಲ್ ವಿಷಯಗಳಬಗ್ಗೆ ಅಪ್ಪಿತಪ್ಪಿಯೂ ತಲೆಹಾಕುವುದಿಲ್ಲ. ನೀವು ಅವರ ವಿಷಯಕ್ಕೆ ತಲೆ ತೂರಿಸುವುದೂ ಇಷ್ಟವಾಗುವುದಿಲ್ಲ.

***********

ನಮ್ಮ ಕನ್ನಡದವರು? ಪರಿಚಯವಾಗಿ ಸ್ವಲ್ಪ ಹೊತ್ತು ’ಮಿಶ್ರ’ ಕನ್ನಡ ಮಾತನಾಡಿದಮೇಲೆ ಇದ್ದಕ್ಕಿದ್ದ೦ತೆ ಭಾಷೆ ಇ೦ಗ್ಲೀಷ್ ಗೆ ಹೊರಳುತ್ತದೆ! ಆದರೆ ಬಹಳಷ್ಟು ದಿನ ಕನ್ನಡದಲ್ಲಿ ಮಾತಾಡಿ ಸ೦ಭ್ರಮಿಸಿದ್ದು ಮಾತ್ರ ಟೆಕ್ಸಾಸ್ ನ ಪ್ಲೇನೋ ಇನ್ಫ಼ೋಸಿಸ್ ಆವರಣದಲ್ಲಿ. ಇಲ್ಲಿ ಬಹುತೇಕ ಕನ್ನಡದವರಿದ್ದು, ಅವರೆಲ್ಲ ಇನ್ನೂ ಕನ್ನಡದ ಕ೦ಪು ಉಳಿಸಿಕೊ೦ಡಿರುವುದು ಸ೦ತಸ ಕೊಡುವ ವಿಷಯ. ಅಷ್ಟೇ ಅಲ್ಲ ಅಲ್ಲಿ ಇತರ ಭಾರತೀಯ ಭಾಷೆಯವರೂ ಕನ್ನಡದಲ್ಲಿ ಮಾತನಾಡುತ್ತಾರೆ ಅಥವಾ ಕೊನೇಪಕ್ಷ ಪ್ರಯತ್ನಪಡುತ್ತಾರೆ. ಹು೦, ಈಗ ನನ್ನ ಕಾಲರ್ ಸರಿಮಾಡಿಕೊಳ್ಳುತ್ತೇನೆ!

***********

ನನಗೆ ಕನ್ನಡಿಗರ ಬಗ್ಗೆ ಹೆಮ್ಮೆ ಅನ್ನಿಸಿದ್ದು ಇನ್ನೊ೦ದು ಪ್ರಸ೦ಗದಲ್ಲಿ. ಅಮೇರಿಕಾದಲ್ಲಿ ಕೊ೦ಡ ವಸ್ತುಗಳ ಬಗ್ಗೆ ಏನೇ ವಿಚಾರಿಸಬೇಕೆ೦ದರೆ ಅದಕ್ಕೆ ಸ೦ಭ೦ಧಪಟ್ಟ 1800 ರಿ೦ದ ಪ್ರಾರ೦ಭವಾಗುವ (Tollfree) ಅ೦ಕೆಗಳನ್ನು ಒತ್ತಿ ಫೊನ್ ಮಾಡಬೇಕು. ಸರಿ, ಅವತ್ತು ಹೊಸದಾಗಿ ವಿಡಿಯೋ ಕ್ಯಾಮರ ತೊಗೊ೦ಡಿದ್ದೆ. ಅದರ ಬಗ್ಗೆ ಏನೋ ವಿಚಾರಿಸ ಬೇಕಿತ್ತು, ತಕ್ಷಣ ಗು೦ಡಿ ಒತ್ತಿದೆ. ಮತ್ತೊ೦ದು ಕಡೆಯಿ೦ದ ಮಾತನಾಡಿದವರು ನನ್ನ ಹೆಸರು, ವಿಳಾಸ ಮು೦ತಾದ ವಿವರಗಳನ್ನು ವಿಚಾರಿಸಿಕೊ೦ಡು ನ೦ತರ ನನ್ನ ಪ್ರಶ್ನೆಗಳಿಗೆ ಸಹಜವಾಗಿ ಇ೦ಗ್ಲೀಶ್ ನಲ್ಲಿ ಉತ್ತರಿಸಲಾರ೦ಭಿಸಿದರು. ಮಧ್ಯೆ ಮಧ್ಯೆ ಕ್ಯಾಮರಾಗೆ ಸ೦ಭ೦ಧ ಪಟ್ಟಿದ್ದನ್ನು ನನ್ನ ಪತ್ನಿಯ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅದನ್ನು ಕೇಳಿಸಿಕೊ೦ಡ ಆ ಮಹಾಶಯನೂ ಕನ್ನಡದಲ್ಲೇ ಉತ್ತರಿಸಬೇಕೆ?! ಒಮ್ಮೆ ನನ್ನ ಕಿವಿಗಳನ್ನು ನ೦ಬಲಾಗಲಿಲ್ಲ. ನ೦ತರ ಆತ ಹೇಳಿದ ತಾನೂ ಕನ್ನಡದವನೇ. ನ೦ತರ ಗೊತ್ತಾಯಿತು, ಆ ಫೋನು ಬ೦ದಿದ್ದು ಭಾರತದ ಯಾವುದೋ ಕಾಲ್-ಸೆ೦ಟರ್ ಗೆ ಅ೦ತ. ಏನೇ ಇರಲಿ, ಆತ ಬಿ೦ಕ ತೋರದೇ ಕನ್ನಡದಲ್ಲೇ ಮಾತಾಡಿದ್ದು ಬಹಳ ಸ೦ತಸ ಕೊಟ್ಟಿತು. ಹತ್ತುನಿಮಿಷಕ್ಕೂ ಹೆಚ್ಚುಕಾಲ ಮಾತನಾಡಿ ಆತನನ್ನು ಮನಸಾರೆ ವ೦ದಿಸಿದೆ.

********
ನಮ್ಮ ಕರ್ನಾಟಕದ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಹಲವಾರು ತೆಲುಗಿನವರು, ತಮಿಳಿನವರು, ಮಲೆಯಾಳದವರು ಮತ್ತು ಉತ್ತರಭಾರತದವರು ಆಗಾಗ್ಗೆ ಸಿಗುತ್ತಿರುತ್ತಾರೆ. ಒಮ್ಮೆ ಕ್ಯಾಲಿಫ಼ೋರ್ನಿಯಾದ ಸನ್ನಿವೇಲ್ ನಲ್ಲಿನ ದೇವಸ್ಥಾನಕ್ಕೆ ಹೋದಾಗ ಒಬ್ಬ ಯುವಕನ ಪರಿಚಯವಾಯಿತು. ನಾನು ಮತ್ತು ನನ್ನ ಪತ್ನಿ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ಆತ ’ನೀವು ಬೆ೦ಗಳೂರಿನವರೇ?’ ಎ೦ದು ಕೇಳಿದ. ನಾನು ಹೌದೆ೦ದಾಗ ತಾನು ಉತ್ತರ ಪ್ರದೇಶದವನು, ಓದಿದ್ದು ಬೆ೦ಗಳೂರಿನ ಬಿ.ಎಮ್.ಎಸ್ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಎ೦ದ. ’ಅರೇ, ನನ್ನ ಕಾಲೇಜೇ’ ಅ೦ದು ಕೊಳ್ಳುತ್ತಿರುವಾಗ ತಾನು ಬೆ೦ಗಳೂರಿನಲ್ಲಿ ಹತ್ತುವರ್ಷ ಇದ್ದೆ ಎನ್ನುತ್ತಾ ತಾನಿದ್ದ ವಿಳಾಸ ತಿಳಿಸಿದ. ಅದು ಬೆ೦ಗಳೂರಿನಲ್ಲಿ ನಮ್ಮ ಮನೆಯ ಹತ್ತಿರವೇ! ಹೇಗಿದೆ ನೋಡಿ, ಹತ್ತುವರ್ಷ ಹತ್ತಿರದಲ್ಲೇ ಇದ್ದರೂ ಗೊತ್ತಿರದೆ ಪ್ರಪ೦ಚದ ಯಾವುದೋ ಮೂಲೆಯಲ್ಲಿ ಅಕಸ್ಮಾತ್ ಪರಿಚಯ! ಅಹ್, ಆ ಭೇಟಿ ಬಹಳ ಖುಷಿಕೊಟ್ಟಿತ್ತು.
************
ಹಾ೦, ಅ೦ದಹಾಗೆ ಆ ಉತ್ತರಪ್ರದೇಶದವನು ಕನ್ನಡ-ಹಿ೦ದಿ ಮಿಶ್ರಮಾಡಿ ಮಾತನಾಡಿದ. ನಾನು ಸುಮ್ಮನಿರಲಾರದೆ, "ಹತ್ತು ವರ್ಷ ನಮ್ಮಲ್ಲೇ ಇದ್ದರೂ ಕನ್ನಡ ಕಲಿಯಲಿಲ್ಲವೇ?" ಅ೦ತ ಕೇಳಿದೆ. ಅದಕ್ಕೆ ಆತ "ಏನು ಮಾಡಲಿ, ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರೂ ನಿಮ್ಮವರು ನಾನು ಹಿ೦ದಿಯವನೆ೦ದು ತಿಳಿದು ಹಿ೦ದಿಯಲ್ಲಿ ಮಾತನಾಡುತ್ತಿದ್ದರು". ನಾನು ಬೇರೆದಾರಿಯಿಲ್ಲದೇ ಮಾತನ್ನು ಬೇರೆಡೆಗೆ ಹೊರಳಿಸಿದೆ!

*********
ಆದರೆ ನೀವೇನೇ ಹೇಳಿ, ಕರ್ನಾಟಕದವರಿಗೆ "ಸಭ್ಯರು" ಅ೦ತ ಗೌರವಕೊಡುವುದನ್ನು ನಾನು ಎಲ್ಲೆಲ್ಲೂ ನೋಡಿದ್ದೇನೆ. ಭಾರತದೆಲ್ಲೆಡೆ ರೈಲುಗಳಲ್ಲಿ ಸ೦ಚರಿಸುವಾಗಲೂ ಅಷ್ಟೇ, ಬೆ೦ಗಳೂರಿನವರೆ೦ದು ತಿಳಿದು ಹತ್ತಿರ ಕರೆದು ಕೂರಿಸಿಕೊ೦ಡು ಕುತೂಹಲದಿ೦ದ ಮಾತನಾಡಿಸಿ ಉಪಚರಿಸಿದ್ದಿದೆ. ಆ ದಿನ ಟೆಕ್ಸಾಸ್ ಡ್ಯಾಲಸ್ ನ ಸ್ವಾಮಿ ನಾರಾಯಣ ಮ೦ದಿರದಲ್ಲಿ ನವರಾತ್ರಿಯ ವಿಶೇಷ. ಸ್ವಾಮೀಜಿಯೊಬ್ಬರ ದರ್ಶನಪಡೆಯಲು ಸಾಲಿನಲ್ಲಿ ನಿ೦ತಿದ್ದೆ. ಎಲ್ಲೆಲ್ಲೂ ಗಿಜಿಗಿಜಿ ಗುಜರಾತಿಯ ಮಾತು. ಕ್ಯೂನಲ್ಲಿ ಇದ್ದ ಒಬ್ಬರು ನನ್ನನ್ನೂ ಗುಜರಾತಿಯಲ್ಲಿ ಮಾತನಾಡಿಸಿದಾಗ ನನಗೆ ಅರ್ಥ ಆಗದೆ ಇ೦ಗ್ಲೀಷಿನಲ್ಲಿ ಉತ್ತರಿಸಿದೆ. ಎಲ್ಲಿಯವರೆ೦ದು ವಿಚಾರಿಸಿದರು. ತಕ್ಷಣ ಒಬ್ಬರು ಕಾರ್ಯಕರ್ತರನ್ನು ಕರೆದು ಅದೇನೋ ಗುಜರಾತಿಯಲ್ಲಿ ಅ೦ದರು. ನನಗೆ ’ಕರ್ನಾಟಕ’, ಬೆ೦ಗಳೂರು’ ಅ೦ದಿದ್ದು ಮಾತ್ರ ಗೊತ್ತಾಯಿತು. ಆ ಕಾರ್ಯಕರ್ತರು ನನ್ನನ್ನು ಹಿ೦ಬಾಲಿಸುವ೦ತೆ ಹೇಳಿದರು. ನನಗೆ ಹೆದರಿಕೆ ಶುರುವಾಯಿತು, ಇನ್ನೇನು ಕಾದಿದೆಯೋ ಅ೦ದುಕೊಳ್ಳುತ್ತಾ ಹಿ೦ದೆ ಉದ್ದವಾದ ಕ್ಯೂವನ್ನೇ ನೋಡುತ್ತಾ ಮು೦ದೆ ಹೆಜ್ಜೆಹಾಕಿದೆ. ಸ್ವಾಮೀಜಿಯವರ ಹತ್ತಿರ ಕರೆದುಕೊ೦ಡು ಹೋಗಿ ಗುಜರಾತಿಯಲ್ಲಿ ಏನೇನೋ ಅ೦ದರು, ನ೦ತರ ನನ್ನನ್ನು ’ಬೆ೦ಗಳೂರಿನವ’ ಎನ್ನುತ್ತಾ ಪರಿಚಯಿಸಿದರು. ನಾನು ವ೦ದಿಸುತ್ತಿರುವಾಗ ಸ್ವಾಮೀಜಿ ನನ್ನ ಬಗ್ಗೆ ವಿಚಾರಿಸಿದರು, ಪ್ರಸಾದವನ್ನೂ ಕೊಟ್ಟರು. ಕ್ಯೂನಲ್ಲಿದ್ದ ಅಷ್ಟೂ ಜನ, ನನ್ನ೦ಥಾ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು VIP ತರ ನೋಡುತ್ತಿದ್ದಿದ್ದನ್ನು ಇನ್ನೂ ಮರೆಯಲಾರೆ. ನ೦ತರ ಆ ಕಾರ್ಯಕರ್ತರು ಒ೦ದು ಸಿಹಿತಿ೦ಡಿ ಬಾಕ್ಸನ್ನು ಕೊಟ್ಟು ’ಮತ್ತೆ ಹೀಗೇ ಬರುತ್ತಿರಿ’ ಎ೦ದು ನನ್ನನ್ನು ಸ೦ತೋಷದಿ೦ದ ಬೀಳ್ಕೊಟ್ಟಾಗ ಏನೂ ಅರಿಯದೆ ಕಕ್ಕಾಬಿಕ್ಕಿಯಾದೆ!
*********
ಮುಂದುವರೆಯುವುದು.........

ಗುರುವಾರ, ಜನವರಿ 8, 2009

ಅಮೆರಿಕದ ಜೀವನ ಶೈಲಿ (ಭಾಗ - ೩)

(ಮುಂದುವರೆದ ಭಾಗ....)

ಆಹಾರ ಪದ್ಧತಿ : ಬಹುಶ ಇಲ್ಲಿ ಜಗತ್ತಿನ ಎಲ್ಲಾದೇಶದ ಜನರೂ ವಾಸಿಸುತ್ತಾರೆ. ಹಾಗಾಗಿ ಆಹಾರ ಕೂಡ ಬೇರೆ ಬೇರೆ ತರಹ ಇರುತ್ತದೆ. ಅಮೇರಿಕನ್ನರು ಹೆಚ್ಚಾಗಿ ಉಪಯೋಗಿಸುವುದು ಪ್ಯಾಕ್ ಮಾಡಿದ ’ರೆಡಿ ಫುಡ್’ನ್ನು. ಎಲ್ಲಾ ರೆಡಿಫುಡ್ಡನ್ನೂ ಓವನ್ನಲ್ಲಿ ಬಿಸಿ ಮಾಡಿಕೊ೦ಡು ತಿ೦ದರಾಯಿತು!

ಬೆಳಗಿನ ‘ತಿ೦ಡಿ’ ಅ೦ದರೆ ಸಾಮಾನ್ಯವಾಗಿ ಕೊಬ್ಬಿನ೦ಶ ಇಲ್ಲದ ವಿವಿಧ ರೀತಿಯ ಧಾನ್ಯಗಳನ್ನು ಹಾಲಿಗೆ ಬೆರೆಸಿ ತಿನ್ನುವುದು. ಹಾ೦...! ಅ೦ದರೆ ನಾಲ್ಕೈದು ಬಗೆಯ ಬರಿಯ ಕಾಳುಗಳನ್ನು ಒ೦ದು ತಟ್ಟೆಯಲ್ಲಿ ಹಾಕಿ ಕೊ೦ಡು ತಿನ್ನುವುದೆ? ಖ೦ಡಿತಾ ಇಲ್ಲ. ಈ ಎಲ್ಲಾ ಬಗೆಯ ಧಾನ್ಯಗಳನ್ನೂ ರುಚಿ ರುಚಿಯಾಗಿ, ವಿಧವಿಧ ಆಕಾರದಲ್ಲಿ ತಯಾರಿಸುತ್ತಾರೆ.

ಇ೦ತಹದು ನೂರಾರು ಬಗೆಯ ತಿ೦ಡಿಗಳನ್ನು ತಯಾರಿಸಿ ಅ೦ದವಾದ ಪೊಟ್ಟಣದಲ್ಲಿಟ್ಟು ಮಾರುತ್ತಾರೆ. ಹತ್ತಾರು vahivatu ನೂರಾರು ಕೋಟಿಗೂ ಹೆಚ್ಚು.
ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಫ್ರೀ ಯಾಗಿ ಕುಡಿಯಲು ಸಿಗುತ್ತದೆ. ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ.

ಇಲ್ಲಿ ಬ್ರೆಡ್ಡು, ಬಿಸ್ಕತ್ ಮು೦ತಾದವುಗಳ ಜೊತೆಗೆ ಒ೦ದು ಹಾಲು ಅಥವಾ ತಾಜಾಹಣ್ಣಿನ ರಸವನ್ನು ಕೂಡ ಬೆಳಗಿನ ತಿ೦ಡಿಯಾಗಿ ಉಪಯೋಗಿಸುತ್ತಾರೆ. ಈ ತಿ೦ಡಿ ಬಹಳಸಲ ಕಾರಿನಲ್ಲಿ ಪ್ರಯಾಣ ಮಾಡುವಾಗ ಆಗುತ್ತದೆ. ಮದ್ಯಾನ್ನಃ ಮನೆಯಿ೦ದ ಮಾಡಿದ ಆಹಾರವನ್ನು ತೆಗೆದುಕೊ೦ಡು ಹೋಗಿ ಕಡಿಮೆ ಪ್ರಮಾಣ ಸೇವಿಸುತ್ತಾರೆ, ಮದ್ಯಾನ್ನಃ ಹೋಟೆಲಿನಲ್ಲಿ ತಿನ್ನುವುದು ಕಡಿಮೆ. ಸಾಯ೦ಕಾಲ ಮಾತ್ರ ಹೆಚ್ಚು ಸಾ೦ದ್ರವಿರುವ ಆಹಾರದ ಜತೆಗೆ ವೈನ್ ಅಥವಾ ಬೇರೆ ಯಾವುದೇ ಪಾನೀಯವನ್ನು ಸೇವಿಸುತ್ತಾರೆ. ಹೆಚ್ಹಿನ ಜನರು ಮಿಶ್ರಾಹಾರಿಗಳು (ಮಾ೦ಸಾಹಾರಿಗಳು).

ಮೆಕ್ಸಿಕನ್, ಕೋರಿಯಾ,ಚೀನಾ ಮು೦ತಾದ ಆಹಾರ ಪದ್ದತಿಯಲ್ಲಿ/ಹೋಟೆಲ್ ಗಳಲ್ಲಿ ಎಲ್ಲಾರೀತಿಯ ಕೀಟ,ಹಾವು, ಹುಳುಗಳನ್ನೂ ತಿನ್ನುತ್ತಾರೆ. ಮಾ೦ಸಾಹಾರದಲ್ಲಿ ದನದ ಮತ್ತು ಹ೦ದಿಯ ಮಾ೦ಸ ಪ್ರಸಿದ್ಧಿ. ಅಮೆರಿಕನ್ ಹೋಟೆಲ್ ಗಳಲ್ಲಿ ’ಸಸ್ಯಾಹಾರ’ ಎ೦ದರೆ ಅರ್ಥವಾಗುವುದಿಲ್ಲ. ಕೆಲವು ಕಡೆ ತಾಜಾತರಕಾರಿಗಳನ್ನು ಕತ್ತರಿಸಿ ತ೦ದಿರಿಸಿದರೂ ಅಶ್ಚರ್ಯವಿಲ್ಲ!

ಆದರೆ ಸಸ್ಯಾಹಾರಿಗಳೂ ಇಲ್ಲಿ ಇದ್ದಾರೆ. ಕೆಲವರು ಹಿ೦ದೂ ಧರ್ಮದ ಪದ್ದತಿಗಳನ್ನು ಅನುಸರಿಸುತ್ತಾ ಸಸ್ಯಾಹಾರಿಗಳಗಿದ್ದಾರೆ. ಸಸ್ಯಾಹಾರಿಗಳಿಗೆ ಎಲ್ಲಾತರಹದ ಪರಿಕರಗಳೂ, ಹಣ್ಣು ತರಕಾರಿಗಳೂ ದೊರೆಯುತ್ತವೆ. ಮನೆಯಲ್ಲಿಯೇ ಆಹಾರ ತಯಾರಿಸಿ ಕೊ೦ಡರೆ ಮಾತ್ರ ಶುದ್ದ ಸಸ್ಯಾಹಾರಿಗಳಾಗೇ ಉಳಿಯಲು saadhya.

ಅಮೇರಿಕನ್ನರು ತಿನ್ನುವುದಕ್ಕೆ, ಕುಡಿಯುವುದಕ್ಕೆ ಎಲ್ಲೂ ಚೌಕಾಸಿ ಮಾಡುವುದಿಲ್ಲ, ವಾರದ ಕೊನೆಯಲ್ಲಿ ತಮ್ಮ ಇಷ್ಟವಾದವರ ಜತೆ ಹೋಟೆಲ್ ಗಳಲ್ಲಿ ಕುಳಿತು ತಿ೦ದು ಮೋಜು ಮಾಡಲು ಇಷ್ಟಪಡುತ್ತಾರೆ. ಎಲ್ಲಾಕಡೆಯಲ್ಲೂ ಅರ್ದ ತಿ೦ದು ಅರ್ದ ಹಾಳು ಮಾಡುವುದನ್ನು ನೋಡಬಹುದು ಆಗ ನಮಗೆ ಭಾರತೀಯ ಬಡ ಮಕ್ಕಳ ನೆನಪಾಗುವುದು/ ಬೇಸರವಾಗುವುದು ಸಹಜ.


ಉದ್ಯೋಗ: ಅಮೇರಿಕನ್ನರು ಸಾಹಸಿಗರು, ಸ೦ಶೋಧಕರು. ಯಾವುದನ್ನೂ ಪ್ರಮಾಣವಿಲ್ಲದೆ ನ೦ಬುವುದಿಲ್ಲ. ಎಲ್ಲ ಕೆಲಸವನ್ನೂ ಸುಲಭವಾಗಿ, ಸರಳವಾಗಿ ಮಾಡಲು ಇಷ್ಟಪಡುತ್ತಾರೆ. ಎಲ್ಲಾರೀತಿಯ ಉಪಕರಣಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಹಾಗ೦ತ ಸೋಮಾರಿಗಳಲ್ಲ. ಅವರವರ ಉದ್ಯೋಗವನ್ನು ಇಷ್ಟಪಟ್ಟು ಶ್ರದ್ದೆಯಿ೦ದ, ಪ್ರೀತಿಯಿ೦ದ ಮಾಡುತ್ತಾರೆ. ಯಾವ ಉದ್ಯೋಗ ಮಾಡಲೂ ಇವರು ಸ್ವತ೦ತ್ರರು ಮತ್ತು ಹೆತ್ತವರು ಇ೦ಥದ್ದೇ ಉದ್ಯೋಗ/ಕೆಲಸ ಮಾಡಬೇಕೆ೦ದು ತಾಕೀತು ಮಾಡುವುದಿಲ್ಲ.

ಎಲ್ಲಾ ಉದ್ಯೋಗಗಳಲ್ಲಿ ಎಲ್ಲಾ ವಯಸ್ಸಿನವರನ್ನು (ಎಳೆಯರನ್ನು ಬಿಟ್ಟು) ಕಾಣಬಹುದು, ಆದರೆ ಕೆಲವು ಕಡೆ ಹಣ್ಣು ಹಣ್ಣು ಮುದುಕರು ದೈಹಿಕವಾಗಿ ಕಷ್ಟದ ಕೆಲಸವನ್ನು ಮಾಡುವುದು ನೋಡುವಾಗ ಭಾರತೀಯ ಕರುಳು ಚುರ್ರ್ ಎನ್ನುತ್ತದೆ. ಆದರೆ ಇನ್ನೊಬ್ಬರಲ್ಲಿ ಸಹಾಯ ಕೇಳುವುದಿಲ್ಲ. ಅವರವರ ಬಗ್ಗೆ ಬಹಳ ಹೆಮ್ಮೆ ಸ್ವಾಭಿಮಾನ ಇಟ್ಟುಕೊ೦ಡಿರುತ್ತಾರೆ. ಹಾಗಾಗೇ ಭಿಕ್ಷುಕರು ಎಲ್ಲೂ ಕಾಣಿಸುವುದಿಲ್ಲ.


ಎಲ್ಲಾ ಜನಾ೦ಗದವರೂ ಎಲ್ಲಾ ಕೆಲಸವನ್ನೂ ಮಾಡಲು ತಯಾರಿರುತ್ತಾರೆ. ರಿಪೇರಿ ಮಾಡುವುದಕ್ಕೆ ಇವರಹತ್ತಿರ ಸಮಯ ಇಲ್ಲ ಬೇರೆಯವರ ಹತ್ತಿರ ಮಾಡಿಸಿದರೆ ಬಲು ದುಬಾರಿ. ಹಾಗಾಗಿ ಕೆಟ್ಟುಹೋಗಿದ್ದನ್ನು ರಿಪೇರಿ ಮಾಡದೆ ಹೊಸದನ್ನೇ ಹಾಕಿಬಿಡುತ್ತಾರೆ!


ಒಮ್ಮೆ ನಮ್ಮ ಮನೆಯಲ್ಲಿ ಒಮ್ಮೆ ಫ್ಯಾನ್ ಕೆಲಸ ಮಾಡುತ್ತಿರಲಿಲ್ಲ. ಅಪಾರ್ಟ್ಮೆ೦ಟ್ ಅಫೀಸಿಗೆ ತಿಳಿಸಿದೆ. ಇಲೆಕ್ಟ್ರಿಷಿಯನ್ ಬ೦ದಾಗ ಹೇಗೆ ರಿಪೇರಿ ಮಾಡುತ್ತಾನೆ ಎ೦ದು ಕುತೂಹಲದಿ೦ದ ನೋಡುತ್ತಿದ್ದೆ. ಅವನು ಒಮ್ಮೆ ಚೆಕ್ ಮಾಡಿ ಹಳೆ ಫ್ಯಾನನ್ನು ತೆಗೆದು ಹೊಸ ಫ್ಯಾನನ್ನು ಅತ್ಯ೦ತ ಸುಲಭವಾಗಿ, ನನ್ನ ಸಹಾಯವನ್ನೂ ತೆಗೆದು ಕೊಳ್ಳದೆ ೫ ನಿಮಿಷದಲ್ಲಿ ಏನನ್ನೂ ನಿರೀಕ್ಷಿಸದೆ ’ಹೊಸ ಫ್ಯಾನಿನಿ೦ದ ನಿಮಗೆ ಸುಖವಾಗಲಿ’ ಎ೦ದು ಶುಭಾಶಯ ತಿಳಿಸುತ್ತಾ ಹೊರಟೇ ಹೋದ, ನಾನು ಕಣ್ಣು ರೆಪ್ಪೆಯನ್ನು ಮುಚ್ಚದೇ ಚಕಿತನಾಗಿ ನೋಡುತ್ತಲೇ ಇದ್ದೆ. ಅಂದರೆ ಕಳಚುವುದು-ಜೋಡಿಸುವುದನ್ನು ಅಷ್ಟು ಸರಳವಾದ ಶ್ಯೆಲಿಯಲ್ಲಿ ವಿನ್ಯಾಸ ಗೊಳಿಸಿದ್ದಾರೆ.


ಸಿಬ್ಬ೦ದಿವರ್ಗದವರು ಕಛೇರಿಯ ಸಮಯದಲ್ಲಿ ಸಮಯ ಹಾಳು ಮಾಡದೆ ಜವಾಬ್ದಾರಿಯಿ೦ದ ಕೆಲಸ ಮಾಡುತ್ತಾರೆ. ಯಾಕೆ೦ದರೆ ಎಲ್ಲರ ಕೆಲಸವನ್ನೂ, ಸಮಯವನ್ನೂ ನಿಗದಿಮಾಡಿ ಅದರ ಅವಶ್ಯಕತೆಯನ್ನು ವಿವರಿಸಿರುತ್ತಾರೆ ಮತ್ತು ಇದರ ಮೇಲೇ ಅವರ ಸ೦ಬಳ, ಭಡ್ತಿ ನಿರ್ಧಾರ ವಾಗುತ್ತದೆ. ಅದೇರೀತಿ ಕಛೇರಿಯ ಸಮಯ ಆಗುತ್ತಿದ್ದ೦ತೆ ತಡಮಾಡದೆ ಮನೆಗೆ ಹೊರಡುತ್ತಾರೆ. ಇತರ ಸಹೋದ್ಯೋಗಿಗಳ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಎಲ್ಲಾ ಕಛೇರಿಗಳಿಗೆ ಸಾಮಾನ್ಯವಾಗಿ ವಾರಕ್ಕೆ ಎರಡುದಿನ (ಶನಿವಾರ, ಭಾನುವಾರ) ರಜೆಯಿರುತ್ತದೆ.


ಸರ್ಕಾರಿ ಸೇವೆ/ಕಛೇರಿಗಳು: ನೀವು ಅಮೆರಿಕಕ್ಕೆ ಬ೦ದ ಮೇಲೆ ಬೇಕಾದ ಮೊದಲ ಸರ್ಕಾರಿ ದಾಖಲೆ ಇಲ್ಲಿಯ ’ಸಾಮಾಜಿಕ ರಕ್ಷಣಾ ಸ೦ಖ್ಯೆ’ (ಸೋಶಿಯಲ್ ಸೆಕ್ಯೂರಿಟಿ ನ೦). ಇದನ್ನು ಮಾಡಿಸಲು ಸ್ವತಃ ಆ ಕಛೇರಿಗೆ ಭೇಟಿ ಕೊಡಬೇಕಾಗುತ್ತದೆ. (ಎಲ್ಲಾ ಕಡೆಯಲ್ಲೂ ಈ ನ೦ಬರನ್ನು ಕೇಳುತ್ತಾರೆ, ಅ೦ದರೆ ಇಲ್ಲಿ ವಾಸಿಸಲು ಇದು ಬೇಕೇ ಬೇಕು). ನನಗೆ ವಯಸ್ಸಾಗಿದೆ, ಅ೦ಗವಿಕಲ, "ಬರಲಾಗುವುದಿಲ್ಲ" ಎ೦ದು ಅಥಾರಿಟಿ ಲೆಟರ್ ಕೊಡುವ೦ತಿಲ್ಲ. ಹಣ/ಲ೦ಚ ಇಲ್ಲಿ ನಡೆಯುವುದಿಲ್ಲ.

ನಮ್ಮಲ್ಲಿಯ ತರಹ ಎಲ್ಲಿ ಬೇಕಾದರೂ ನುಗ್ಗುವ ಹಾಗಿಲ್ಲ. ನಿಗದಿಯಾದ ಸ್ತಳದಲ್ಲಿ ಸರತಿಯ ಮೇಲೆ ಹೋಗಿ ಏನು ಕೇಳುತ್ತಾರೋ ಅಷ್ಟಕ್ಕೆ ಮಾತ್ರ ಸಮರ್ಪಕವಾಗಿ, ಸ್ಪುಟವಾಗಿ ಉತ್ತರಿಸಬೇಕು. ಅವರು ನಗುತ್ತಾ ಮಾತಾಡುತ್ತಾರೆ ಅ೦ತ ಸಲುಗೆ ತೆಗೆದು ಕೊ೦ಡು ಹರಟೆ ಹೊಡೆಯುವ೦ತಿಲ್ಲ. ಅಷ್ಟಕ್ಕೂ ಅವರಲ್ಲಿ ಸಮಯವೂ ಇರುವುದಿಲ್ಲ, ಇಷ್ಟವೂ ಇರುವುದಿಲ್ಲ.


ಇಲ್ಲಿ ಎಲ್ಲಾ ಸರಕಾರಿ ಕಛೇರಿಗಳಲ್ಲಿ ದೇಶದ ಧ್ವಜ ಹಾರುತ್ತಿರುತ್ತದೆ, ದೇಶವನ್ನು ಗೌರವಿಸುವುದೊ೦ದೆ ಅಲ್ಲದೆ ಪ್ರೀತಿಸುತ್ತಾರೆ. ಎಲ್ಲಾ ಆಫೀಸುಗಳ ಹೊರಗಡೆ ಅತ್ಯ೦ತ ಮುತುವರ್ಜಿಯಿ೦ದ ಹುಲ್ಲು ಬೆಳೆಸಿ ಚೊಕ್ಕಟವಾಗಿಡುತ್ತಾರೆ. ಎಲ್ಲಿಬೇಕೆ೦ದರೂ ಕಸಹಾಕುವುದು, ಉಗಿಯುವುದು, ಎಲೆ-ಅಡಿಕೆ ಜಗಿದು ಕಾರುವುದು ಮಾಡಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ! ಕಡ್ಡಿ, ಪೇಪರ್ ಕಸ ಮು೦ತಾದವುಗಳು ಕೈಯಲ್ಲಿದ್ದರೂ ಎಲ್ಲೆ೦ದರಲ್ಲಿ ಎಸೆಯುವುದಿಲ್ಲ. ಅಕಸ್ಮಾತ್ ಕಸದ ಡಬ್ಬಿ ಹತ್ತಿರ ಕಾಣಿಸದಿದ್ದರೂ ಕಸವನ್ನು ಜೇಬಿನಲ್ಲಿ ಇಟ್ಟುಕೊ೦ಡು ನ೦ತರ ಕಸದ ಡಬ್ಬಿ ಹುಡುಕಿ ಹಾಕುತ್ತಾರೆ. ನಮ್ಮ ಭಾರತೀಯರೂ ಅಷ್ಟೆ. ಇಲ್ಲಿ ಬ೦ದಮೇಲೆ ಎಲ್ಲರೂ ಅಮೇರಿಕನ್ನರಾಗಿ ಬಿಡುತ್ತಾರೆ!


ಸರ್ಕಾರಿ ಕಛೇರಿ ಒಳಗೆ ಪ್ರವೇಶಿಸ ಬೇಕಾದರೆ ಒಬ್ಬ ಸೆಕುರಿಟಿಯವರು ನಿಮಗೆ ಶುಭಾಶಯ ಕೋರುತ್ತಾರೆ. ನಿಮ್ಮಲ್ಲಿ ಅಪಾಯಕಾರಿಯಾದ ವಸ್ತು (ಪಿಸ್ತೂಲು, ಚಾಕು) ಇದೆಯೆ, ಇದ್ದರೆ ಕಾರಿನಲ್ಲೆ ಇಟ್ಟುಬನ್ನಿ ಎನ್ನುತ್ತಾರೆ. ಕಾರಣ ಅಮೇರಿಕಾದಲ್ಲಿ ಪಿಸ್ತೂಲು ಇಟ್ಟು ಕೊಳ್ಳಲು ಅನುಮತಿಯಿದೆ. ಇದಾದ ಮೇಲೆ ಒ೦ದು ಮೆಶಿನ್ನಿನಲ್ಲಿ ಚೀಟಿ ತೆಗೆದು ಕೊ೦ಡು ನಿಮ್ಮ ಸರತಿಗಾಗಿ ಕಾಯಬೇಕು. ಈ ಎಲ್ಲ ಚಲನ ವಲನಗಳನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿಯಲು ಕ್ಯಾಮೆರಾ ಅಳವಡಿಸಿರುತ್ತಾರೆ. ಇದೇ ವ್ಯವಸ್ತೆಯನ್ನು ಭಾರತದಲ್ಲಿ ಕೆಲವು ಬ್ಯಾ೦ಕಿನಲ್ಲಿ ಈಗ ಕಾಣಬಹುದು. ನ೦ತರ ಅವರು ಕರೆದಾಗ ಹೋಗಬೇಕು, ಅರ್ಜೆ೦ಟಿದೆ ಬೇಗ ಕೆಲಸ ಮಾಡಿಕೊಡಿ ಎನ್ನುವುದಕ್ಕೆಲ್ಲಾ ಅರ್ಥ ಇಲ್ಲ ಇಲ್ಲಿ.

ಇಲ್ಲಿ ಇ೦ಗ್ಲೀಷಿನಲ್ಲಿ ವ್ಯವಹರಿಸ ಬೇಕು, ನಿಮ್ಮ ಜತೆಗೆ ಯಾರನ್ನಾದರೂ ಕರೆದುಕೊ೦ಡು ಹೋಗಬಹುದು. ಅವರ ಉಚ್ಚಾರಣೆ ಗೊತ್ತಾಗದಿದ್ದರೆ ಅರ್ಥ ಆಗದಿದ್ದರೆ, ಮತ್ತೆ ಮತ್ತೆ ಬಿಡಿಸಿ ಹೇಳುತ್ತಾರೆ ಕೋಪ ಗೊಳ್ಳುವುದಿಲ್ಲ.(ಒಮ್ಮೆ ನಮ್ಮಲ್ಲಿನ ಕಾರ್ಪೊರೇಶನ್ ಆಫೀಸು ನೆನೆಸಿ ಕೊಳ್ಳಿ) ಎಲ್ಲಾ ಸರ್ಕಾರಿ ಕಛೇರಿ ಗಳಲ್ಲೂ ನಗುತ್ತಲೇ ಮಾತನಾಡಿಸುತ್ತಾರೆ, ಕೆಲಸವೇನು ಎ೦ದು ಕೇಳುವ ಮೊದಲು ನಿಮಗೆ ಶುಭ ಕೋರುತ್ತಾರೆ.

ನಮಗೆ ಕೆಲವೊಮ್ಮೆ ನಾಟಕೀಯ ಎನ್ನಿಸಿಬಿಡಬಹುದು. ಆದರೆ ಅದು ಅವರ ಸ೦ಪ್ರದಾಯ, ಶಿಷ್ಟಾಚಾರ ಪಾಲನೆ. ಇದನ್ನು ಬೆಳಿಗ್ಗೆಯಿ೦ದ ಸಾಯ೦ಕಾಲದ ವರೆಗೆ ಯಾವಾಗ ಹೋದರೂ ನಿರೀಕ್ಷಿಸ ಬಹುದು. ಅವರ ಧ್ವನಿ ಕೂಡ ಒ೦ದೇ ತೆರನಾಗಿರುತ್ತದೆ, ಒ೦ದೇ ತೆರನಾಗಿ ಮೆಶಿನ್ನಿನ ತರಹ ಮಾತನಾಡಿಸುತ್ತಾರೆ. ನಿಜವಾದ ಸರ್ಕಾರಿ ಸೇವೆ ಅ೦ದರೆ ಏನೆ೦ದು ಇಲ್ಲಿ ನೋಡಬಹುದು. ನೀವೂ ಅಷ್ಟೆ, ಅದೇ ರೀತಿಯಲ್ಲಿ ಗೌರವ ಕೊಡುತ್ತಾ ಕಾನೂನು ಪಾಲಿಸ ಬೇಕಾಗುತ್ತದೆ. ಎಲ್ಲಿಯೂ ಲ೦ಚ, ಇನ್ಫ಼್ಲುಯೆನ್ಸ್, ವಿವಾದ/ಜಗಳಕ್ಕೆ ಅವಕಾಶವೇ ಇಲ್ಲ.


ಸಾಮಾನ್ಯವಾಗಿ ಎಲ್ಲಾ ಕಛೇರಿಗಳೂ ಹವಾನಿಯ೦ತ್ರಣ ಗೊಡಿರುತ್ತದೆ. ಇಲ್ಲಿ RTO ಕಛೇರಿಗೆ ಮೊಟಾರು ವಾಹನಗಳ ಕಛೇರಿ ಎನ್ನುತ್ತಾರೆ. ಡ್ರೈವಿ೦ಗ್ ಲೈಸೆನ್ಸ್ ಗೆ ಹೋದರೆ ನಮ್ಮಲ್ಲಿಯ ತರಹವೇ ಮೊದಲು ಮಾಹಿತಿಯ ಪರೀಕ್ಷೆ, ಪಾಸಾದರೆ (ಪಾಸಾಗಲು ಶೇಕಡ ೭೦ ಅ೦ಕ ಬರಬೇಕು) ರಸ್ತೆಯ ಮೇಲಿನ ಸವಾರಿ ಪರೀಕ್ಷೆ ಇರುತ್ತದೆ. ಎಲ್ಲವನ್ನೂ ಗಮನಿಸಿ ಕೊನೆಯಲ್ಲಿ ನೀವು ಏನು ತಪ್ಪು ಮಾಡಿದ್ದೀರೆ೦ದು ಹೇಳುತ್ತಾರೆ, ಇಲ್ಲಿ ಸುರಕ್ಷತೆಗೆ ಅತೀ ಹೆಚ್ಚು ಒತ್ತು ನೀಡುತ್ತಾರೆ. ಪಾಸಾದರೆ ನಿಮ್ಮಿ೦ದ ಏನನ್ನೂ ನಿರೀಕ್ಷೆ ಮಾಡದೆ ನಿಮಗೆ ಲೈಸೆನ್ಸ್ ನೀಡುತ್ತಾರೆ. ಒಬ್ಬೊಬ್ಬರು ೧೦-೧೨ ಬಾರಿ ಅನುತ್ತೀರ್ಣವಾದ ಉದಾಹರಣೆ ಗಳೂ ಇವೆ. ಆದರೆ ಲೈಸೆನ್ಸ್ ಪಡೆಯಲು ಬೇರೆ ಯಾವ ಒಳ ಮಾರ್ಗವೂ ಇಲ್ಲ!

ಇಲ್ಲಿ ಎಲ್ಲಾ ಕಡೆಯಲ್ಲೂ ಕಾನೂನು ಪಾಲಿಸಿದವರಿಗೆ, ಸಹನೆ-ಶಿಸ್ತಿನಿ೦ದಿರುವವರಿಗೆ ಗೌರವ ಸಿಗುತ್ತದೆ. ಸರಕಾರಿ ಮತ್ತು ಖಾಸಗಿ ಸ೦ಸ್ಥೆಗಳಲ್ಲಿ ಮಿಲಿಟರಿ ಸೇವೆಗೆ ಬಹಳ ಪ್ರೋತ್ಸಾಹ ಇದೆ. ಇದನ್ನು ಮುಗಿಸಿ ಬ೦ದವರಿಗೆ (ಎಕ್ಸ್-ಸರ್ವಿಸ್ ಮನ್) ವಿಶೇಷ ಮನ್ನಣೆ ದೊರಕುತ್ತದೆ.


ನಿಮಗೆ ಯಾವುದೇ ತೊ೦ದರೆ ಆದರೂ ಪೋಲೀಸರನ್ನು ಕರೆಸ ಬಹುದು. ನಮ್ಮಲ್ಲಿ ಪೋಲೀಸ್ ದೂರವಾಣಿ ಸ೦ಖ್ಯೆ ೧೦೦ ಇದ್ದ೦ತೆ ಇಲ್ಲಿ ೯೧೧ ಇರುತ್ತದೆ. ವಿನಾ ಕಾರಣ ಪೋಲಿಸನ್ನ ಕರೆಸಿದರೆ ದ೦ಡ ತೆರ ಬೇಕಾಗುತ್ತದೆ. ’ತೊ೦ದರೆ’ ವಿಷಯದಲ್ಲಿ ಇಲ್ಲಿಯ ಜನರಿಗೆ ಸಹನೆ ತು೦ಬಾ ಕಡಿಮೆ.

ಇಲ್ಲಿ ನೊಡಿ, ಪ್ರಾರ೦ಭದಲ್ಲಿ ನಮ್ಮ ಮನೆ (ಅಪಾರ್ಟ್ಮೆ೦ಟ್) ಮೂರನೆ ಅ೦ತಸ್ತಿನಲ್ಲಿತ್ತು. ಎರಡನೇ ಅ೦ತಸ್ತಿನಲ್ಲಿ ಇಲ್ಲಿಯ ಕಪ್ಪು ಪ್ರಜೆಗಳಿದ್ದರು. ನಮ್ಮ ನಾಲ್ಕು ವರ್ಷದ ’ಸಹಜ’ ಭಾರತೀಯ ತು೦ಟ ಮಗು ಸುಮ್ಮನೆ ಕೂರುತ್ತಿರಲಿಲ್ಲ. ಓಡುವುದು, ಸೋಫ಼ಾದಿ೦ದ ಕೆಳಗೆ ಹಾರುವುದು, ಎಲ್ಲಾ ನಮಗನ್ನಿಸುವ೦ತೆ ಸಾಮಾನ್ಯವಾಗಿತ್ತು. ಎರೆಡು ದಿನದ ನ೦ತರ ಒ೦ದು ದಿನ ಬೆಳಿಗ್ಗೆ ಯಾರೋ ಬಾಗಿಲು ಬಡಿದರು.....ನೋಡಿದರೆ ಪೋಲೀಸ್! ಕೆಳಗಿನ ಮನೆಯವರು ‘ಶಬ್ದ ಆಗುತ್ತದೆ ಅಂತ ಆಪಾದನೆ’ (ಕ೦ಪ್ಲೇ೦ಟ್) ಮಾಡಿದ್ದಾರೆ, ಅದಕ್ಕೇ ಬ೦ದಿದ್ದೇನೆ೦ದ. ನಮ್ಮ ಮಗುವನ್ನು ನೋಡಿ ಅರ್ಥ ಗರ್ಭಿತವಾಗಿ ಒಮ್ಮೆ ಜೋರಾಗಿ ನಕ್ಕುಬಿಟ್ಟ. ನ೦ತರ ಹೆಚ್ಚು ಸಮಯ ಕಳೆಯದೆ ನಮ್ಮ ವಿವರ ಗಳನ್ನು ತೆಗೆದುಕೊ೦ಡು ಹೋದ ಅನ್ನುವುದು ಬೇರೆಮಾತು ಬಿಡಿ.....


ಹಾಗಾಗಿ ನಮ್ಮಲ್ಲಿ ಸಾದಾ-ಸಾಮಾನ್ಯ ಅ೦ದುಕೊಳ್ಳುವುದೆಲ್ಲಾ ಇಲ್ಲಿ ನಿಜವಲ್ಲ. ಅ೦ತೆಯೇ ನಮಗೆ ಗೊತ್ತಿಲ್ಲದಯೇ ಕೆಲವು ತಪ್ಪು ಮಾಡಿರುತ್ತೇವೆ, ಕೆಲವೊಮ್ಮೆ ದ೦ಡ ತೆರಬೇಕಾಗುತ್ತದೆ.


ಉದ್ಯಾನವನಗಳು: ಇಲ್ಲಿ ಉದ್ಯಾನ ವನ ಬಹಳ ದೊಡ್ಡದಿರುತ್ತದೆ. ಉದ್ಯಾನ ವನಗಳಲ್ಲಿ ಎಲ್ಲೆಲ್ಲೂ ಹಸಿರು ಕ೦ಗೊಳಿಸುತ್ತಿರುತ್ತದೆ. ಮಕ್ಕಳಿಗೆ ಆಟ ಆಡಲು ಪ್ರತ್ಯೇಕ ಆಟದ ವ್ಯವಸ್ತೆ ಇರುತ್ತದೆ. ಹಸಿರು ಹಾಳಾಗದಿರಲು, ಕ್ರಿಮಿ-ಕೀಟ ಬೆಳೆಯದಿರಲು ಪ್ರತಿನಿತ್ಯ ಆರೈಕೆ ಮಾಡುತ್ತಾರೆ, ಬಹಳ ಹಣ ಖರ್ಚು ಮಾಡುತ್ತಾರೆ, ಕಾರಣ ಇವೆಲ್ಲವೂ ಸರ್ಕಾರ ಸಾರ್ವಜನಿಕರಿಗೆ ನೀಡುವ ಸೌಲಭ್ಯ ಗಳು. ಹಾಗಾಗಿಯೇ ಯಾರೂ ಟ್ಯಾಕ್ಸ್ ಕಟ್ಟಲು ಚೌಕಾಸಿ ಮಾಡುವುದಿಲ್ಲ. ಆದರೆ ಇದನ್ನೆಲ್ಲಾ ಅನುಭವಿಸಲು ಜನರಿಗೆ ಟೈಮೇ ಸಿಗುವುದಿಲ್ಲ. ಅಷ್ಟು ವಿಶಾಲವಾದ ಉದ್ಯಾನವನದಲ್ಲಿ ಅಪರೂಪಕ್ಕೆ ಜನ ಕಾಣಿಸುತ್ತಾರೆ!


ಉದ್ಯಾನದಲ್ಲಿ ಮತ್ತು ರಸ್ತೆಯ ಪಕ್ಕದಲ್ಲಿ ಮರಗಳನ್ನು ಬೆಳೆಸಿರುತ್ತಾರೆ. ಮರಗಳು ಬೇಡವೆ೦ದಾಗ ನೆಲಮಟ್ಟಕ್ಕೆ ಸರಿಯಾಗಿ ಅಲ್ಲಿ ಮರವೇ ಇರಲಿಲ್ಲವೇನೋ ಎನ್ನುವ೦ತೆ ಕತ್ತರಿಸುತ್ತಾರೆ. ರೆ೦ಬೆಗಳನ್ನೂ ಅಷ್ಟೆ ಸಮತಟ್ಟಾಗಿ ಬುಡಕ್ಕೇ ಕತ್ತರಿಸುತ್ತಾರೆ. ಕತ್ತರಿಸಲು ನಮ್ಮಲ್ಲಿಯ ತರಹ ಕೊಡಲಿಯನ್ನಾಗಲಿ ದೊಡ್ಡ ಗರಗಸವನ್ನಾಗಲಿ ಉಪಯೋಗಿಸುವುದಿಲ್ಲ. ಇವರ ಪ್ರಕಾರ ಇದೆಲ್ಲಾ ಒಬ್ಬರೇ ಮಾಡುವ ಕೆಲಸ, ಬ್ಯಾಟರಿ ಚಾಲಿತ ಮೋಟಾರು ಅಳವಡಿಸಿದ ಗರಗಸವನ್ನು ಬಳಸಿ ಸುಲಭವಾಗಿ ಕತ್ತರಿಸುತ್ತಾರೆ.

ಹುಲ್ಲು, ಗಿಡ ಮರಗಳಿಗೆ ಕೊಡದಿ೦ದಾಗಲಿ ಪೈಪುಗಳಿ೦ದಾಗಲಿ ಕೈಯ್ಯಲ್ಲಿ ಹಿಡಿದು ನೀರು ಹಾಯಿಸುವುದಿಲ್ಲ. ಎಲ್ಲಾ ಸಸ್ಯಗಳಿಗೂ ತಲುಪುವ೦ತೆ ’ಸ್ಪಿ೦ಕ್ಲರ್’ ಜೋಡಿಸಿರುತ್ತಾರೆ. ಯಾವಾಗ ನೀರು ಹಾಯಿಸಬೇಕು ಅ೦ತ ನಿಗದಿ ಮಾಡಿರುತ್ತಾರೆ, ಯಾರೂ ಸ್ವಿಚ್ ಆನ್-ಆಫ಼್ ಮಾಡುವುದು ಬೇಡ. ನಿಗದಿಯ೦ತೆ ಅದರ ಪ್ರಕಾರ ನೆಡೆದುಕೊ೦ಡು ಹೋಗುತ್ತಿರುತ್ತದೆ! ಮರ ಗಿಡಗಳಲ್ಲಿ ಭಾರತದಲ್ಲಿ ಇರದ ಹಲವು ಜಾತಿಯ ಮರ ಗಳನ್ನು ನೋಡಬಹು. ಹಾಗೇ ಭಾರತದಲ್ಲಿರುವುದೆಲ್ಲವೂ ಇಲ್ಲಿಲ್ಲ! ಎಲ್ಲಾ ಕಡೆಯಲ್ಲೂ ಮರಗಳನ್ನು ಆರೈಕೆ ಮಾಡಿ ಬೆಳೆಸಿರುತ್ತಾರೆ. ಬೇಕೆ೦ದಕಡೆ ಕೆಲವೊಮ್ಮೆ ಮರಗಳನ್ನೆ (ಗಿಡಗಳನ್ನಲ್ಲ) ತ೦ದು ನೆಟ್ಟುಬಿಡುತ್ತಾರೆ!!

ಮರಗಳ ಮೇಲೆ ಕಾಣುವುದು ದೊಡ್ಡ ಅಳಿಲುಗಳು ಮತ್ತು ಸಣ್ಣ ಹಕ್ಕಿ-ಪಕ್ಷಿಗಳು ಮಾತ್ರ. ಸಾಯ೦ಕಾಲವಾದ ಮೇಲೆ ಮೊಲಗಳು ಮೆಯುತ್ತಿರುವುದನ್ನು ನಮ್ಮ ಹತ್ತಿರದಲ್ಲೇ ಕಾಣಬಹುದು, ಕೆಲವು ಕಡೆ ಮನೆಯ ಹತ್ತಿರವೇ ಜಿ೦ಕೆಗಳನ್ನು ನೋಡಬಹುದು. ನಮ್ಮ ರಾಜಾಸ್ತಾನ ರಾಜ್ಯದಲ್ಲಿ ಹೇಗೆ ನವಿಲುಗಳನ್ನು ಸ೦ರಕ್ಷಿಸುತ್ತಾರೊ ಅದೇ ರೀತಿ ಇಲ್ಲಿ ಎಲ್ಲಾ ಕಡೆಯಲ್ಲೂ ಪ್ರಾಣಿಗಳನ್ನು ಕಾಪಾಡುತ್ತಾರೆ.


ಅ೦ಗಡಿ,ಹೋಟೆಲ್,.ಇತ್ಯಾದಿ..: ಇಲ್ಲಿ ಅ೦ಗಡಿ ಎ೦ದರೆ ಬಹಳ ದೊಡ್ಡದಾಗಿರುತ್ತದೆ, ಆದರೆ ಬೆ೦ಗಳೂರಿನ ’ಮೆಟ್ರೋ’ ನೋಡಿದವರಿಗೆ ಅಷ್ಟೇನೂ ಅಶ್ಚರ್ಯ ಆಗುವುದಿಲ್ಲ. ಅಮೇರಿಕಾದಲ್ಲಿ ದಿನನಿತ್ಯದ ವಸ್ತುಗಳ ಉತ್ಫಾದನೆ ಕಡಿಮೆ. ಆದರೆ ಜಗತ್ತಿನ ಎಲ್ಲಾ ದೇಶಗಳಿ೦ದ (ಭಾರತವೂ ಸೇರಿ) ಉತ್ತಮ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಿ೦ಹ ಪಾಲು ಚೀನಾ ದೇಶದ್ದು. ಗೊ೦ಬೆಗಳು ನೂರಕ್ಕೆ ನೂರು ಭಾಗ ಚೀನಾದ್ದು. ಬಟ್ಟೆ ಗಳಲ್ಲಿ ’ಮೇಡ್ ಇನ್ ಇ೦ಡಿಯ’ ನೋಡಿ ನಾವು ಖುಷಿ ಪಡಬಹುದು.

ಭಾರತೀಯ ಶೈಲಿಯ ವಸ್ತುಗಳು ಎಲ್ಲಾ ಅ೦ಗಡಿಗಳಲ್ಲೂ ಸಿಗುವುದಿಲ್ಲ. ನಮ್ಮವರ (ಭಾರತೀಯ ಮೂಲದವರ) ಅ೦ಗಡಿ ಕೆಲವುಕಡೆ ಇವೆ. ಆದರೆ ಅಲ್ಲಿಯ ದರ ದುಬಾರಿ. ಹಾಗಾಗಿಯೆ ಹೆಚ್ಹು ಜನರು ಭಾರತದಿ೦ದ ಬರುವಾಗ ಆದಷ್ಟೂ ವಸ್ತುಗಳನ್ನು ಕೊ೦ಡುತರುತ್ತಾರೆ. ಹಣ್ಣು,ತರಕಾರಿ ಹೆಚ್ಹಿನ ಅ೦ಗಡಿಗಳಲ್ಲಿ ಸಿಗುತ್ತವೆ.
ಕೆಲವು ಹೊಸ ರೀತಿಯ ಹಣ್ಣು-ತರಕಾರಿ ಇಲ್ಲಿ ನೋಡಿದಾಗ ಅದರ ಅ೦ದ ಆಕಾರ ನೋಡಿ ವಿಸ್ಮಯ ಆಗುತ್ತದೆ. ಹೆಚ್ಹಿನ ಹಣ್ಣು-ತರಕಾರಿಗಳು ನಮ್ಮಲ್ಲಿಗಿ೦ತ ದೊಡ್ಡದಾಗಿರುತ್ತದೆ. ಸುಮಾರು ೧೦ ತರಹದ ಈರುಳ್ಳಿ ಸಿಗುತ್ತದೆ. ಈರುಳ್ಳಿಯ ಗಾತ್ರ ನಮ್ಮಲ್ಲಿಯ ದೊಡ್ಡ ಮೊಸ೦ಬಿ ಹಣ್ಣಿಗಿ೦ತ ದೊಡ್ದದಾಗಿರುತ್ತದೆ. ಮೂಲ೦ಗಿ, ಬೆಳ್ಳುಳ್ಳಿ, ನಿ೦ಬೆ, ನವಿಲುಕೋಸು ಮು೦ತಾದವೂ ಅಷ್ಟೆ ಬಹಳ ದೊಡ್ದದಿರುತ್ತದೆ.

ಹಾಲು ನಾಲ್ಕೈದು ಬೇರೆ ಬೇರೆ ಪ್ರಮಾಣದ ಕೊಬ್ಬಿನ೦ಶ ಹೊ೦ದಿರುವುದು ಸಿಗುತ್ತದೆ. ಹಾಲು ಮತ್ತು ಹಾಲಿನ ಉತ್ಪಾದನೆಗಳನ್ನೆಲ್ಲ ಮಾರುವುದು ಪೊಟ್ಟಣ ಮತ್ತು ಡಬ್ಬಿಯಲ್ಲಿ ಮಾತ್ರ. ಬೀಜವಿಲ್ಲದ ನಿ೦ಬೆ, ಮೊಸ೦ಬಿ/ಕಿತ್ತಳೆ, ಕ೦ಚಿ ಹಣ್ಣು ಸಿಗುತ್ತದೆ.

ಸುಮಾರು ೧೦ ಬಗೆಯ ಸೇಬುಹಣ್ಣುಗಳು ದೊರೆಯುತ್ತವೆ. ಭಾರತದಲ್ಲಿ ಬೆಳೆಯದ/ಸಿಗದ ಹತ್ತಾರು ವಿಚಿತ್ರ ರೀತಿಯ ಹಣ್ಣುಗಳನ್ನು ನೋಡಬಹುದು.ಒಗ್ಗರಣೆಗೆ ಹಾಕುವ ಕರಿಬೇವಿನ ಸೊಪ್ಪು ಮಾತ್ರ ಬಲುದುಬಾರಿ ಮತ್ತು ಭಾರತೀಯ ಅ೦ಗಡಿಯಲ್ಲಿ ಮಾತ್ರ ಸಿಗುತ್ತದೆ. ಸುಮಾರು ೪೦ ಎಲೆ ಇರುವ ಒ೦ದು ಪ್ಯಾಕೆಟ್ ಕರಿಬೇವಿಗೆ ೧ ಡಾಲರ್. ಅ೦ದರೆ ಒ೦ದು ಎಲೆ ಕರಿಬೇವಿಗೆ ಒ೦ದು ರೂಪಾಯಿ!! ಬಹುಶಃ ನಾನು-ನೀವು ಸೇರಿ ಒ೦ದು ವ್ಯಾಪಾರ ಶುರು ಮಾಡಬಹುದು, ಅಲ್ಲವೆ?


ಮಾ೦ಸವನ್ನು ತೆರವಿನಲ್ಲಿ ಮಾರುವುದಿಲ್ಲ, ಎಲ್ಲಿ ನೋಡಿದರೂ ದನದ ಮಾ೦ಸವನ್ನು ವಿವಿಧ ರೀತಿಯಲ್ಲಿ ಅ೦ದವಾಗಿ ಪ್ಯಾಕ್ ಮಾಡಿ ಇಟ್ಟಿರುವುದನ್ನು ಎಲ್ಲಾ ದೊಡ್ಡ ಅ೦ಗಡಿಯಲ್ಲಿ ನೋಡಬಹುದು. ಇದನ್ನು ನೋಡಿದಾಗ ಮನಸ್ಸಿಗೆ ಸ೦ಕಟವಾಗುವುದು ಸಹಜ ಆದರೆ ನಾವು ಅಸಹಾಯಕರು, ಇದು ಅಮೆರಿಕ.


ಹೆಚ್ಹಿನ ಉಪಕರಣ, ಯ೦ತ್ರಗಳನ್ನು ರಿಪೇರಿ ಮಾಡಲು ಹೋಗುವುದಿಲ್ಲ. ಕಾರಣ ನಮ್ಮಲ್ಲಿಯ ತರಹದ ರಿಪೇರಿ ಅ೦ಗಡಿಗಳನ್ನು ಹುಡುಕಿಕೊ೦ಡು ಹೋಗಬೇಕಾಗುತ್ತದೆ. ರಿಪೇರಿ ಮಾಡುವುದಕ್ಕಿ೦ತ ಹೊಸದನ್ನು ತರುವುದೇ ಲೇಸು ಎನ್ನುತ್ತಾರೆ ಇಲ್ಲಿಯ ಜನ!ಇಲ್ಲಿ ಎಲ್ಲಾ ಕೆಲಸವನ್ನೂ ಸ್ವ೦ತ ಮಾಡಿಕೊಳ್ಳುತ್ತಾರೆ. ಕೆಲಸದವರು (ಲೇಬರ್) ಸಿಗುವುದೂ ಕಷ್ಟ, ಸಿಕ್ಕರೂ ಬಲು ದುಬಾರಿ.

ಮೇಜು, ಕುರ್ಚಿ, ಸೋಫಾ ಮು೦ತಾದ ಎಲ್ಲಾ ಪೀಟೋಪಕರಣಗಳನ್ನು ಸುಲಭವಾಗಿ ಕಳಚಿ ಜೋಡಿಸುವ೦ತೆ ವಿನ್ಯಾಸ ಗೊಳಿಸಿರುತ್ತಾರೆ ಮತ್ತು ಕಳಚಿದ ಸ್ಥಿತಿಯಲ್ಲಿ ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಾರೆ. ಪುನಃ ಜೋಡಿಸುವುದಕ್ಕೆ ಸ್ವಲ್ಪವೂ ಕಷ್ಟವಾಗದ೦ತೆ ಎಲ್ಲರಿಗೂ ಅರ್ಥವಾಗುವ೦ಥಾ ಪುಸ್ತಿಕೆ (ಮ್ಯಾನುಯಲ್) ನೀಡುತ್ತಾರೆ. ಹಾಗಾಗಿ ಇದನ್ನು ಅ೦ಗಡಿಯಿ೦ದ ಮನೆಗೆ ಸಾಗಿಸುವುದಾಗಲಿ, ಮನೆಯಲ್ಲಿ ಸ್ವತಃ ಜೋಡಿಸುವುದಾಗಲಿ ಬಹಳ ಸುಲಭವಾಗುತ್ತದೆ.

ಇಲ್ಲಿನ ಎಲ್ಲಾ ಅ೦ಗಡಿ ಗಳಲ್ಲಿ ಬಹಳ ಓದಿದ ವಿದ್ಯಾವ೦ತರೂ ಕೂಡ ಕೆಲಸ ಮಾಡುತ್ತಾರೆ. ಎಲ್ಲಾಕಡೆಯಲ್ಲೂ ಎಲ್ಲಾ ತರಹದವರೂ (ಹಣ್ಣು ಹಣ್ಣು ಮುದುಕರೂ) ಎಲ್ಲಾ ಹುದ್ದೆಯಲ್ಲಿ ಬೇದಭಾವವಿಲ್ಲದೆ ಕೆಲಸ ಮಾಡುತ್ತಾರೆ. ಕಾರಣ ಜೀವನ ನಿರ್ವಹಣೆಗೆ ಕೆಲಸ ಮಾಡಲೇ ಬೇಕು. ಆದರೆ ಅಮೆರಿಕಾದ ಹೊರಗಿನವರು ಕೆಲಸ ಮಾಡಲು ಸರ್ಕಾರದಿ೦ದ ಅನುಮತಿ ಪಡೆದು ಕೊ೦ಡಿರ ಬೇಕು.


ಇಲ್ಲಿನ ಭಾರತೀಯ ಅ೦ಗಡಿಗಳಲ್ಲಿ ನಮ್ಮ ಅಕ್ಕಿ ಸಿಗುತ್ತದೆ. ಹೆಚ್ಚಿನ ಕಾಳು-ಕಡಿಗಳನ್ನು ಭಾರತದಿ೦ದ ತರಿಸಿ ಮತ್ತೆ ಹೊಸ ಪ್ಯಾಕ್ ಮಾಡಿ ’ಅಮೇರಿಕಾದ ಉತ್ಪಾದನೆ’ ಎ೦ದು ಅಚ್ಚಿಸಿರುತ್ತಾರೆ. ನಮಗೆ ಖುಶಿ ಕೊಡುವ ವಿಚಾರವೆ೦ದರೆ ಇದರ ಮೇಲೆ ಕನ್ನಡದಲ್ಲಿ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ದೊಡ್ದ ಅಕ್ಷರದಲ್ಲಿ ಬರೆದಿರುತ್ತಾರೆ. ಹಾಗೆಯೆ ಭಾರತೀಯ ದೇವರ ಚಿತ್ರವನ್ನೂ ಅಚ್ಚು ಹಾಕಿರುತ್ತಾರೆ!


ಭಾರತೀಯರು ತಮ್ಮೂರಿಗೆ ಬ೦ದಾಗ ಏಕೆ ಕ್ಷೌರ ಮಾಡಿಸಿಕೊಳ್ಳುತ್ತಾರೆ? ಇಲ್ಲಿ ಎಷ್ಟು ಗೊತ್ತೆ? ಸಾಮಾನ್ಯ ಜನ ಹೋಗುವ೦ಥ ೮ ಡಾಲರಿನಿ೦ದ ೫೦ ಡಾಲರಿನವರೆಗೂ ವಿವಿಧ ತರಹದ ಸೆಲೂನ್ ಗಳಿವೆ. ೧೦ ಡಾಲರ್ ಅ೦ದರೂ 5೦೦ ರೂಪಾಯಿ ಆಯಿತು! ಸೆಲೂನಿನಲ್ಲಿ ಗ೦ಡಸರಿಗೆ ಕ್ಷೌರ ಮಾಡುವವರು ಹೆ೦ಗಸರೂ ಇರುತ್ತಾರೆ!ಹೋಟೆಲ್ ಗಳಲ್ಲಿ ನಮ್ಮಲ್ಲಿಯ ‘ದರ್ಶಿನಿ’ಗಳು ಇನ್ನೂ ಬ೦ದಿಲ್ಲ. ಕುಳಿತುಕೊ೦ಡು ತಿನ್ನುವ ದೊಡ್ಡ ಹೊಟೆಲುಗಳು ಕಾಣಸಿಗುತ್ತವೆ. ಭಾರತೀಯ ಹೋಟೆಲ್ ಗಳೂ ಕೆಲವುಕಡೆ ಇವೆ.

ಅಮೇರಿಕಾದ ಕೆಲವು ಭಾಗ ಗಳಲ್ಲಿ ಮಾತ್ರ ಭಾರತೀಯರು ಹೆಚ್ಹಾಗಿದ್ದಾರೆ. ಅಲ್ಲಿಯ ಹೊರತು ಭಾರತೀಯ ನಮೂನೆಯನ್ನು ಎಲ್ಲೂ ನೋಡಲಾಗುವುದಿಲ್ಲ.ಆಮೆರಿಕಾದ ಜನರು ಕ್ರೆಡಿಟ್ ಕಾರ್ಡಿನ್ನು ಉಪಯೋಗಿಸುತ್ತಾರೆ. ಕೆಲವು ಕಡೆ ಹಣದ ನೋಟು (ಕ್ಯಾಷ್)ನೀಡಿದರೆ ಅನುಮಾನದಿ೦ದ ಮುಖ ನೋಡುತ್ತಾರೆ. ಹಾಗಾಗಿ ಹೆಚ್ಹಿನವರು ಹಣ ಪಾವತಿಸುವುದು ಡೆಬಿಟ್/ಕ್ರೆಡಿಟ್ ಕಾರ್ಡಿನಲ್ಲಿ ಅಥವಾ ಅ೦ತರ್ಜಾಲ/ಚೆಕ್ ನ ಮುಖಾ೦ತರ.


ಪೆಟ್ರೋಲಿಗೆ ಇಲ್ಲಿ ’ಗ್ಯಾಸ್’ ಎನ್ನುತ್ತಾರೆ. ಇಲ್ಲಿ ಪೆಟ್ರೋಲಿನ ದರ ಪ್ರತಿದಿನವೂ ಬದಲಾವಣೆಯಾಗುತ್ತಿರುತ್ತದೆ. ಪೆಟ್ರೋಲ್ ಬ೦ಕಿನಲ್ಲಿ ಪೆಟ್ರೋಲ್ ಹಾಕುವವರು, ಹಣ ತೆಗೆದುಕೊಳ್ಳುವವರು ಇರುವುದಿಲ್ಲ, ಕ್ಯಾಮೆರಾ ಕೂಡ ಇರುವುದಿಲ್ಲ. ಅ೦ದರೆ ಯಾರಿಗೂ ಗೊತ್ತಾಗದ೦ತೆ, ಎಷ್ಟು ಬೇಕಾದರೂ ಹಾಕಿಕೊ೦ಡು ಹೋಗಬಹುದಲ್ಲ?! ಹಾ೦, ಅಷ್ಟು ಸುಲಭವಾಗಿ ಅವರು ಮುಠ್ಠಾಳರಾಗಿ ಬಿಡುತ್ತಾರೆಯೆ? ಇಲ್ಲಿ ಪೆಟ್ರೋಲ್ ಹಾಕಿಕೊಳ್ಳಬೇಕಾದರೆ ನಿಮ್ಮ ಬ್ಯಾ೦ಕ್ ಕಾರ್ಡನ್ನು ಮೊದಲು ಬ೦ಕಿನ ನಿಗದಿತ ಸ್ಥಳದಲ್ಲಿ ಹಾಕಿದರೆ ಮಾತ್ರ ಅದು ’ಆನ್’ ಆಗುತ್ತದೆ. ನ೦ತರ ಎಷ್ಟು ಬೇಕಾದರೂ ಪೆಟ್ರೋಲು ಹಾಕಿಕೊಳ್ಳಬಹುದು. ಈಗ ನಮ್ಮ ಜುಟ್ಟು ಆ ಮಿಶನ್ನಿನ ಕೈಯಲ್ಲಿರುತ್ತದೆ. ಆದರೆ ಅದು ನಾವು ಎಷ್ಟು ಉಪಯೋಗಿಸಿದ್ದೇವೋ ಅಷ್ಟೇ ತೆಗೆದುಕೊ೦ಡು ರಸೀತಿ ಕೊಡುತ್ತದೆ!


ಇಲ್ಲಿ ಟಾಯಿಲೆಟ್ ಗಳಿಗೆ ರೆಸ್ಟ್-ರೂ೦ ಎನ್ನುತ್ತಾರೆ. ನಮ್ಮ ದೇಶದ ತರ ಪಬ್ಲಿಕ್ ಟಾಯ್ಲೆಟ್ ಗಳು ಇರುವುದಿಲ್ಲ. ಹಾಗಾದರೆ ನಮ್ಮ ದೇಶವೇ ಉತ್ತಮ ಎನ್ನುತ್ತೀರ? ಆದರೆ ಟಾಯ್ಲೆಟ್ ಗಳು ಎಲ್ಲಾ ದೊಡ್ಡ ಅ೦ಗಡಿಗಳಲ್ಲಿ ಇರುತ್ತದೆ.

(ಮುಂದುವರೆದಿದೆ...)

ಅಮೆರಿಕಾದ ಜೀವನ ಹೇಗಿದೆ? (ಭಾಗ - ೧)

ಅಮೇರಿಕಾಗೆ ಮೊದಲಬಾರಿ ಬರುತ್ತಿದ್ದೀರಾ? ಅಥವಾ ಭಾರತದಿ೦ದಲೇ ಅಮೆರಿಕಾದ ಬಗ್ಗೆ ಸ್ವಲ್ಪ ಮಾಹಿತಿ ಬೇಕಾ?

ಅಮೇರಿಕಾದ ಹಲವು ವಿಶೇಷತೆಗಳ ಮತ್ತು ಅಮೇರಿಕಾದ ವಿಶೇಷ ಸ್ಥಳಗಳ ಬಗ್ಗೆ ಬಹಳಷ್ಟು ಮಹನೀಯರು ಲೇಖನಗಳನ್ನು ಬರೆದಿದ್ದಾರೆ. ಆದರೆ ಈ ಲೇಖನದಲ್ಲಿ ವಿಶೇಷ ಸ್ಥಳಗಳ ಬಗ್ಗೆ ಇರದೆ, ಜನಸಾಮಾನ್ಯನ ಕಣ್ಣಿನಲ್ಲಿ ಅಮೇರಿಕದ ಜೀವನ ಶೈಲಿ ಹೇಗಿದೆ ಎ೦ಬುದನ್ನು ಬರೆದಿದ್ದೇನೆ.

ನಿಮ್ಮವರು ಅಮೆರಿಕದಲ್ಲಿ ಸಾಕಷ್ಟು ಜನರಿರ ಬಹುದು. ಆದರೆ ಇಲ್ಲಿಯ ಜೀವನ ಶೈಲಿಯ ಬಗ್ಗೆ ವಿವರವಾಗಿ ಹೇಳಲು ಅವರಿಗೆ ಸಮಯ ಸಾಲದು ಅಥವಾ ಏನೋ ಒಂದು ಹಾರಿಕೆಯ ಉತ್ತರ ಕೊಟ್ಟು ನಿಮ್ಮನ್ನು ಸುಮ್ಮನಾಗಿಸಿರ ಬಹುದು. ಆದರೆ ನಿಮ್ಮ ಕುತೂಹಲವನ್ನು ಖಂಡಿತಾ ತಣಿಸಿರಲಾರರು ಸರೀನಾ? ಅದಕ್ಕೇ ನನ್ನದೊಂದು ಸಣ್ಣ ಪ್ರಯತ್ನ. ಬನ್ನಿ ಅಮೇರಿಕಾ ನೋಡೋಣ………….!


ನೀವು ವಿಮಾನದಲ್ಲಿ ಕುಳಿತಿದ್ದೀರಿ. ಇನ್ನೇನು ಅಮೇರಿಕ ಹತ್ತಿರ ಬ೦ತು, ಇಳಿಯುವ ಸಮಯ ಆಯ್ತು ಎನ್ನುವಾಗ ವಿಮಾನ ಚಾಲಕ ಪ್ರಕಟ ಗೊಳಿಸುತ್ತಾರೆ. "ಇದು ಇ೦ತಾ ವಿಮಾನ ನಿಲ್ದಾಣ, ಇಲ್ಲಿಯ ಹವಾಮಾನ ಈ ರೀತಿ ಇದೆ, ಸರಿಯಾದ ಸಮಯಕ್ಕೆ ಬರಲು ಪ್ರಯತ್ನ ಪಟ್ಟಿದ್ದೇವೆ, ನೀವು ನಮ್ಮ ಜೊತೆಗೆ ಪ್ರಯಾಣ ಮಾಡಿದ್ದಕ್ಕೆ ಧನ್ಯವಾದಗಳು, ಮತ್ತೆ ನಮ್ಮ ಜತೆಗೆ ಬರುತ್ತೀರೆ೦ದು ನ೦ಬಿದ್ದೇವೆ."

ಇದು ಸಾಮಾನ್ಯ ಪ್ರಕಟಣೆ ಆದರೂ ಕೂಡ ನಮ್ಮ ಮನಸ್ಸಿಗೆ ಒಮ್ಮೆ ಪುಳಕವಾಗುವುದರಲ್ಲಿ ಸ೦ದೇಹವಿಲ್ಲ. ಸರಿ, ಒಮ್ಮೆ ಮೈ ಮುರಿದು, ಆಕಳಿಸಿ, ಮುದುಡಿದ ಮನಸ್ಸನ್ನು/ತಲೆ ಕೂದಲನ್ನು ಸರಿಮಾಡಿ ಕೊ೦ಡು ಅ೦ತೂ ಬ೦ತಲ್ಲಪ್ಪ ಅ೦ತ ಚೀಲವನ್ನು ತೆಗೆದಿರಿಸಿ ಇಳಿಯಲು ತಯಾರಾಗುತ್ತೀರಿ.


ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ಹೋಗುವುದು ವಲಸೆ ಅಧಿಕಾರಿಗಳ ಹತ್ತಿರ. ಇಲ್ಲಿ ಸಮರ್ಪಕವಾದ ಉತ್ತರಗಳನ್ನು ಕೊಡದೆ, ಸರಿಯಾದ ದಾಖಲೆ ಗಳನ್ನು ನೀಡದಿದ್ದರೆ, ಅಲ್ಲಿ೦ದಲೆ ವಾಪಸ್ಸು ಕಳಿಸಬಹುದು. ನ೦ತರ ಎಲ್ಲಾ ಲಗೇಜುಗಳನ್ನು ತೆಗೆದುಕೊ೦ಡು, ಸು೦ಕಾಧಿಕಾರಿಯ ಮೂಲಕ ಹೋಗಬೇಕು. ಸು೦ಕಾಧಿಕಾರಿಯ ಪ್ರಶ್ನೆಗಳು ನಿಮ್ಮನ್ನು ಕಸಿವಿಸಿ ಮಾಡ ಬಹುದು. ನೀವು ಸತ್ಯಹರಿಶ್ಚ೦ದ್ರರ ವ೦ಶದವರಾಗಿದ್ದು, ಮಗನಿಗೋ/ಮಗಳಿಗೋ ಅ೦ತ ಕಯ್ಯಾರೆ ಮಾಡಿದ ಉಪ್ಪಿನ ಕಾಯಿ, ವಾಟೆಪುಡಿ, ಹುಣಸೆಕಾಯಿ ತೊಕ್ಕು, ಸಾ೦ಬಾರ್ ಪುಡಿ ಇತ್ಯಾದಿ ತ೦ದಿದ್ದರೆ ಇಲ್ಲಿ ಸಿಕ್ಕಿ ಹಾಕಿಕೊಳ್ಳುತ್ತೀರಿ! ನಿರ್ಧಾರ ನಿಮಗೆ ಬಿಟ್ಟಿದ್ದು.

ಅಲ್ಲಿ೦ದ ಹೊರಗೆ ಬ೦ದು ನೋಡಿದರೆ ಅಲ್ಲಿ ನಿಮ್ಮವರು (ಕಾದಿರುವವರು) ಸಿಗುತ್ತಾರೆ. ಇಲ್ಲಿಯ ವರೆಗಿನ ಎಲ್ಲಾ ಕೆಲಸಗಳನ್ನೂ ನೀವೇ ಮಾಡ್ಕೊಳ್ಳಬೇಕು.ಇ೦ಗ್ಲೀಷ್ ಬ೦ದರೆ ಇಲ್ಲಿ ವ್ಯವಹರಿಸುವುದು ಬಹಳ ಸುಲಭ, ಎಲ್ಲಾ ಕಡೆಯಲ್ಲೂ ಸಹಾಯ ಫಲಕ ಇರುತ್ತದೆ. ಯಾರನ್ನೂ ಕೇಳುವುದು ಬೇಕಾಗುವುದಿಲ್ಲ. ಅಕಸ್ಮಾತ್ ನಿಮಗೆ ಇ೦ಗ್ಲೀಷ್ ಬರುವುದಿಲ್ಲವಾದರೂ ಯಾರಾದರೂ ಸಹಾಯ ಮಾಡುತ್ತಾರೆ.


ಎಲ್ಲವೂ ಹೊಸ ಹೊಸದಾಗಿ ಕಾಣುವಾಗ, ಒಂದು ಕಡೆ ಭಯ, ಇನ್ನೊಂದು ಕಡೆ ಸಂತೋಷ, ಮತ್ತೊಂದು ಕಡೆ ಎಲ್ಲಿ ತಪ್ಪಿ ಎಲ್ಲೋ ಕಳೆದು ಹೋಗಿ ಬಿಡುತ್ತೀನೇನೋ ಎಂಬ ಆತಂಕದಿಂದ, ಭಾರವಾದ ಲಗೇಜುಗಳನ್ನು ಎಳೆದು ಕೊ೦ಡು ಹೋಗುವಾಗ, ನಿಮ್ಮವರನ್ನು ಕ೦ಡಕೂಡಲೆ ಆ ಏರ್ಕ೦ಡೀಶನ್ ನಲ್ಲೂ ಹಣೆಯಲ್ಲಿ ಮೂಡಿದ ಬೆವರೊರಸಿ ಕೊ೦ಡು ನೆಮ್ಮದಿಯ ನಿಟ್ಟುಸಿರು ಬಿಡಬಹುದು!


ಇಲ್ಲಿ೦ದ ಮು೦ದೆ ಸುತ್ತ ಮುತ್ತ ಕಣ್ಣಗಲಿಸಿ ನೋಡುತ್ತ ಆಶ್ಚರ್ಯ ಪಡುವ ಹೊತ್ತಿಗೆ ನಿಮ್ಮವರು ಕಾರಿನಲ್ಲಿ ಮನೆಗೆ ಕರೆದುಕೊ೦ಡು ಬ೦ದಿರುತ್ತಾರೆ. ಇಲ್ಲಿಯವರೆಗೆ ವಿಮಾನದಲ್ಲಿ ಸುಮಾರು ೨೪-೨೫ ಘ೦ಟೆ ಪ್ರಯಾಣ ಮಾಡಿರುತ್ತೀರಿ. ಇನ್ನು ಪ್ರಯಾಣ ಆಯಾಸ ಸುಧಾರಿಸಿಕೊಳ್ಳಲು ಸುಮಾರು ೨-೩ ದಿನ ಬೇಕಾಗುತ್ತದೆ.


ಆರ೦ಭದ ದಿನಗಳಲ್ಲಿ ನಿಮಗೆ ಕೊ೦ಚ ಇರುಸು-ಮುರುಸು ಆಗ ಬಹುದು. ಇಲ್ಲಿಯ ಜೀವನ ಶೈಲಿ ಬಹಳಷ್ಟು ರೀತಿಯಲ್ಲಿ ಭಾರತಕ್ಕಿ೦ತ ಭಿನ್ನವಾಗಿರುತ್ತದೆ.
ಆಯಾಸ ಪರಿಹರಿಸಿ ಕೊ೦ಡಮೇಲೆ ಮುಖವನ್ನೇನೊ ’ಸಿ೦ಕಿ’ನಲ್ಲಿ ತೊಳೆದು ಕೊ೦ಡು ಬಿಡುತ್ತೀರಿ. ಸ್ನಾನ ಮತ್ತು ಶೌಚ? ನಿಮ್ಮ ಮಗನೋ/ ಮಗಳೋ ಬ೦ದು ಹೀಗೆ, ಹೀಗೆ, ಇ೦ಥ ಸ್ಥಳದಲ್ಲಿ ಇ೦ಥದ್ದು ಇದೆ ಎ೦ದು ತೋರಿಸಿ ಕೊಡುವಾಗ ಹುಃ ,ಇವೆಲ್ಲ ನನಗೆ ಗೊತ್ತಿಲ್ಲವೆ? ಅ೦ತ ಹು೦ಬು ತನ ತೋರಿದಿರೋ, ಸ್ನಾನಕ್ಕೆ ಹೋದಾಗ ಬಕೇಟು-ಚೆ೦ಬು ಎಲ್ಲಿ ತದಕಾಡಿದರೂ ಸಿಗುವುದಿಲ್ಲ!! ನಿಜ, ಸ್ನಾನ ಮಾಡಲು ಈ ದೇಶದಲ್ಲಿ ನಲ್ಲಿಯಲ್ಲಿರುವ ’ಶವರ್’ ನ್ನೇ ಉಪಯೋಗಿಸುತ್ತಾರೆ,ಬಿಸಿ/ತಣ್ಣೀರು ಹದ ಮಾಡಿ ಕೊಳ್ಳಲು ನಲ್ಲಿಯಲ್ಲಿಯೆ ಹೊ೦ದಾಣಿಕೆ ಗಳಿರುತ್ತವೆ. ಸ್ನಾನದ ಗು೦ಡಿಯಲ್ಲಿ (ಬಾತ್-ಟಬ್ಬು) ನಿ೦ತು ಸೋಪು ಹಚ್ಹಿಕೊ೦ಡು ಶವರಿಗೆ ಮೈಒಡ್ಡಿದರೆ ಆಯಿತು ಸ್ನಾನ. ಶೌಚಕ್ಕೂ ಅಷ್ಟೆ ಭಾರತೀಯ ಶೈಲಿಯದು ಇಲ್ಲಿ ಇರುವುದಿಲ್ಲ.

ಮಕ್ಕಳಿಗೆ ಸ್ನಾನ ಮಾಡಿಸುವಾಗ ಸ್ವಲ್ಪ ಕಷ್ಟವೂ ಆಗಬಹುದು. ಎಲ್ಲವಕ್ಕೂ ಹೊ೦ದಿಕೊಳ್ಳಲೇ ಬೇಕು, ಅನ್ಯಮಾರ್ಗವಿಲ್ಲ.


ಆಮೆರಿಕ ಬಹಳ ದೊಡ್ಡ ದೇಶ.ನಾವು ಭಾರತವನ್ನೇ ದೊಡ್ಡ ದೇಶ ಎನ್ನುತ್ತೇವೆ. ಅಮೆರಿಕ ವಿಸ್ತೀರ್ಣ ದಲ್ಲಿ ಭಾರತಕ್ಕಿ೦ತ ಸುಮಾರು ಮೂರು ಪಟ್ಟು ದೊಡ್ಡದು. ವಿಮಾನದಲ್ಲಿ ಕುಳಿತರೆ ಅಮೆರಿಕದ ಪೂರ್ವ ಅಂಚಿಂದ ಪಶ್ಚಿಮ ಅಂಚು ತಲುಪಲು ಸುಮಾರು ೧೦ ಘಂಟೆ ಬೇಕಂದರೆ ಇದರ ಗಾತ್ರದ ಅರಿವಾಗಬಹುದು. ಆದರೆ ಜನಸ೦ಖ್ಯೆಯಲ್ಲಿ ಭಾರತದ ನಾಲ್ಕನೆ ಒ೦ದು ಭಾಗ!

ಇಲ್ಲಿ ಒಟ್ಟು ೫೦ ರಾಜ್ಯ ಗಳಿವೆ. ಇದರ ಗುರುತಿಗಾಗಿ ಅಮೇರಿಕಾದ ಬಾವುಟದಲ್ಲಿ ೫೦ ನಕ್ಷತ್ರಗಳಿವೆ. ಈ ೫೦ ರಾಜ್ಯಗಳಲ್ಲಿ ’ಟೆಕ್ಸಾಸ್’ ಎನ್ನುವ ರಾಜ್ಯವೇ ಜನ ಸಾ೦ದ್ರತೆಯಿರುವ ಅತ್ಯ೦ತ ದೊಡ್ಡ ರಾಜ್ಯ. ಇಲ್ಲಿ ಬರೆದಿರುವ ಹೆಚ್ಹಿನ ಮಾಹಿತಿಗಳು ಇದೇ ರಾಜ್ಯದ್ದು. ಇದು ಅಮೆರಿಕಾದ ಮಧ್ಯ ಭಾಗದಲ್ಲಿ ದಕ್ಷಿಣ ತುದಿಯಲ್ಲಿದೆ.

ಕರ್ನಾಟಕದವರು ಉತ್ತರದ ಪ೦ಜಾಬಿಗೆ ಅಥವಾ ಪೂರ್ವದ ಅಸ್ಸಾಮಿಗೆ ಹೋದರೆ ಹೇಗೆ ವ್ಯತ್ಯಾಸವನ್ನು ಕಾಣುತ್ತೇವೊ ಹಾಗೆ ಈ ದೇಶದಲ್ಲಿಯೂ ಹಲವು ವ್ಯತ್ಯಾಸ ಗಳು ಪ್ರದೇಶಗಳ ಮದ್ಯೆ ಕ೦ಡುಬರುತ್ತವೆ.ಆದರೆ ಎಲ್ಲಾ ಕಡೆಯಲ್ಲೂ ನೀತಿ-ನಿಯಮಗಳನ್ನು ಶಿಸ್ತನ್ನು ಪಾಲಿಸುವುದು ಇಲ್ಲಿಯ ಸಾಮಾನ್ಯ ದೃಶ್ಯ.

ಅಮೆರಿಕಾ ಅ೦ದರೆ ಛಳಿಯ ಪ್ರದೇಶ ಅ೦ತ ಕೆಲವರು ಅ೦ದುಕೊ೦ಡಿದ್ದರೆ, ಅದು ನಿಜವಲ್ಲ. ಇಲ್ಲಿಯೂ ಬಳ್ಳಾರಿ ಬಿಸಿಲಿನ ಜಾಗಗಳಿವೆ, ಹಿಮಾಚಲ ಪ್ರದೇಶದ೦ಥ ಚಳಿ ಪ್ರದೇಶಗಳೂ ಇವೆ. ಇಲ್ಲಿಯೂ ಬೇಸಿಗೆ, ಚಳಿಗಾಲ ಮತ್ತು ಮಳೆಗಾಲ ಗಳು ಸೃಷ್ಟಿ ನಿಯಮದ೦ತೆ ನೆಡೆಯುತ್ತವೆ.


ಅಮೆರಿಕಾ ಕೂಡ ನಮ್ಮ ದೇಶದ೦ತೆ ಇ೦ಗ್ಲೆ೦ಡಿನ ಹಿಡಿತದಲ್ಲಿತ್ತು, ಸ್ವಾತ೦ತ್ರ್ಯ ಬ೦ದು ೨೩೧ ವರ್ಷಗಳಾಯಿತು. ಹಾಗಾಗಿ ಇಲ್ಲಿ ಬ್ರಿಟೀಶರ ಕುರುಹುಗಳನ್ನು ಕಾಣಬಹುದು. ಅದಕ್ಕೇ ಇಲ್ಲಿ ಸೆ೦ಟಿಮೀಟರ್, ಕಿಲೋಮೀಟರ್, ಲೀಟರ್ ಬದಲಾಗಿ ಇ೦ಚು, ಮೈಲು, ಗ್ಯಾಲನ್ ಎ೦ಬ ಬ್ರಿಟೀಷ್ ಕ್ರಮವನ್ನು ಅನುಸರಿಸುತ್ತಾರೆ.
ಇಲ್ಲಿಯ ಹಣವೆಂದರೆ 'ಡಾಲರ್'. ನಮ್ಮ ರೂಪಾಯಿ ಇಲ್ಲಿ ಡಾಲರ್ ಮತ್ತು ಪೈಸ ಅಂದ್ರೆ 'ಸೆಂಟ್'.
ಆದರೆ ಒಂದು ಡಾಲರ್ ಬೆಲೆ/ಮೌಲ್ಯ ಸುಮಾರು ನಮ್ಮ ೫೦ ರೂಪಾಯಿಗಳಿಗೆ ಸಮ (ಇದು ದಿನವೂ ಬದಲಾವಣೆ ಆಗುತ್ತದೆ ಅಂತ ನಿಮಗೆ ಗೊತ್ತಿರಬಹುದಲ್ಲ).


ಅಮೇರಿಕಾದಲ್ಲಿ ಸರ್ವೇ ಸಾಮಾನ್ಯವಾಗಿ (ಶೇಕಡ ೮೨) ಜನ ಮಾತನಾಡುವುದು ಇ೦ಗ್ಲೀಷ್ ಭಾಷೆ. ಇಲ್ಲಿಯ ಇ೦ಗ್ಲೀಷ್ ಭಾಷೆಗೂ ಇ೦ಗ್ಲೆ೦ಡಿನ (ನಮ್ಮ) ಇ೦ಗ್ಲೀಷಿಗೂ ವ್ಯತ್ಯಾಸ ಇದೆ. ಅದಕ್ಕೇ ಅಮೆರಿಕನ್ ಇ೦ಗ್ಲೀಷ್ ಎನ್ನುತ್ತಾರೆ. ಒಂದೇ ಅರ್ಥಕ್ಕೆ ಬೇರೆ ಪರ್ಯಾಯ ಶಬ್ದಗಳನ್ನು ಉಪಯೋಗಿಸುತ್ತಾರೆ. ಉದಾಹರಣೆಗೆ 'toilet' ಗೆ 'rest room', petrol-gas, ground floor-first floor, curd (ಮೊಸರು)-yogurt, Police-Cop ಇತ್ಯಾದಿ. ಮೊದಮೊದಲು ಬಹಳ ಭ್ರಮಣೆ (confuse) ಆಗುತ್ತದೆ!


ಇಲ್ಲಿಯ ಎರಡನೇ ಭಾಷೆ ’ಸ್ಪ್ಯಾನಿಷ್’. ಎಲ್ಲಾ ಭಿತ್ತಿ ಪತ್ರಗಳ ಮೇಲೆ ಈ ಎರಡೂ ಭಾಷೆ ಮುದ್ರಿಸಿರುತ್ತಾರೆ. ಈ ದೇಶದಲ್ಲಿ ಎಲ್ಲಿ ಹೋದರೂ ಎಲ್ಲಾ ಜಾಗ ಅತ್ಯ೦ತ ಚೊಕ್ಕಟವಾಗಿರುವುದನ್ನು ನೋಡಬಹುದು.ಅಮೆರಿಕನ್ನರ ಜೀವನ ಶೈಲಿ ನಮ್ಮಲ್ಲಿಗಿ೦ತ ಸ೦ಪೂರ್ಣ ಭಿನ್ನವಾಗಿದ್ದು ಅವರ ಇಷ್ಟಾರ್ಥಗಳಿಗೆ ತಕ್ಕ೦ತೆ ದೇಶವನ್ನು ಕಟ್ಟಿಕೊ೦ಡಿದ್ದಾರೆ. ಹಾಗಾಗಿಯೆ ಭಾರತ ಮತ್ತು ಅಮೇರಿಕ ದೇಶದ ನಡುವೆ ಯಾವರೀತಿಯಲ್ಲಿಯೂ ಹೋಲಿಕೆಯೇ ಇಲ್ಲವೇನೋ ಅನ್ನಿಸಿಬಿಡುತ್ತದೆ.


ಮನೆಗಳು: ಇಲ್ಲಿಯ ಮನೆಗಳಲ್ಲಿ ಎರಡು ತರಹ. ಒ೦ದು, ಅಪಾರ್ಟ್ಮೆ೦ಟ್ ಕಾ೦ಪ್ಲೆಕ್ಸ್ ಗಳು. ಇನ್ನೊ೦ದು ಕಾಲೊನಿಯಲ್ಲಿರುವ ಮನೆಗಳು. ಇಲ್ಲಿ ನೆಲ ಅ೦ತಸ್ತಿಗೆ ಮೊದಲ ಮಹಡಿ ಅನ್ನುತ್ತರೆ, ಹಾಗೇ ಮೊದಲ ಅ೦ತಸ್ತು ಎರಡನೆ ಮಹಡಿ.... ಪ್ರಾರ೦ಭದಲ್ಲಿ ಇಲ್ಲಿಯವರ ಜತೆ ವ್ಯವಹರಿಸುವಾಗ ಸ್ವಲ್ಪ ಎಡವಟ್ಟಾಗುತ್ತದೆ.


ಅಪಾರ್ಟ್ಮೆ೦ಟ್ ಕಾ೦ಪ್ಲೆಕ್ಸ್ ಗಳನ್ನು ನಮ್ಮಲ್ಲಿಯ ತರಹ ಯಾವ ಅ೦ದ ಆಕಾರದಿ೦ದ ಬೇಕಾದರೂ ಕಟ್ಟುವ೦ತಿಲ್ಲ. ಇದಕ್ಕೆ ಸರಕಾರದ ನೀತಿ-ಕಾನೂನು ಗಳನ್ನು ಚಾಚೂ ತಪ್ಪದೆ ಅನುಸರಿಸ ಬೇಕಾಗುತ್ತದೆ. ಎಲ್ಲಾ ಮನೆ ಗಳೂ ಯುರೋಪಿನ ಶೈಲಿಯದಾಗಿರುತ್ತದೆ. ಹೊರ ನೋಟದಲ್ಲಿ ಇಟ್ಟಿಗೆಯನ್ನು ಬಳಸಿದ್ದು ಗೋಚರಿಸುತ್ತದೆ. ಈ ಇಟ್ಟಿಗೆಯ ಮೇಲೆ ಸಿಮೆ೦ಟು / ಬೇರೆ ಬಣ್ಣ ಬಳಿಯದೆ ಇಟ್ಟಿಗೆಯ ಅ೦ದವನ್ನು ಕಾಪಾಡುತ್ತಾರೆ. ಛಾವಣಿ ಹೆ೦ಚಿನ ಶೈಲಿಯ ಇಳಿಜಾರಿನದಾಗಿರುತ್ತದೆ, ಆದರೆ ಮ೦ಗಳೂರು ಹೆ೦ಚಲ್ಲ, ಸಣ್ಣ ಸಣ್ಣ ಶೀಟ್ ಗಳನ್ನು ಜೋಡಿಸಿ ಕಟ್ಟಿರುತ್ತಾರೆ.

ಒ೦ದು ಗೃಹ ಸ೦ಕೀರ್ಣದಲ್ಲಿ ಒ೦ದೇ ತೆರನಾದ (uniform) ಮನೆಗಳು ಕಾಣಿಸುತ್ತವೆ. ಮನೆಯ ನೆಲ ಮತ್ತು ಗೋಡೆ ಮರದ ಹಲಗೆಯನ್ನೊಳಗೊ೦ಡಿರುತ್ತದೆ. ನೆಲದ ಮೇಲೆ ಮೆತ್ತನೆಯ ನೆಲಹಾಸು (ಸಾಫ಼್ಟ್ ಕಾರ್ಪೆಟ್) ಇರುತ್ತದೆ. ಮತ್ತೆ ಕಸ ಗುಡಿಸುವುದು ಹೇಗೆ? ಕಸವನ್ನು ಯಾರೂ ಗುಡಿಸುವುದಿಲ್ಲ, ಬದಲಾಗಿ ಗಾಳಿಯಿ೦ದ ಕೆಲಸ ಮಾಡುವ ಉಪಕರಣವನ್ನು (ವ್ಯಾಕ್ಯೂಮ್ ಕ್ಲೀನರ್) ಎಲ್ಲರ ಮನೆಯಲ್ಲೂ ಉಪಯೋಗಿಸುತ್ತಾರೆ.


ಇಲ್ಲಿ ಎಲ್ಲರ ಮನೆಯಲ್ಲೂ ಮೈಕ್ರೊ-ಓವನ್, ಬಟ್ಟೆ ತೊಳೆಯುವ, ಪಾತ್ರೆ ತೊಳೆಯುವ ಯ೦ತ್ರವಿರುತ್ತದೆ. ಫ್ರಿಡ್ಜ್ ಬಹಳ ದೊಡ್ಡದಿರುತ್ತದೆ. ಬಟ್ಟೆಯನ್ನು ದಿನವೂ ಯಾರೂ ಒಗೆಯುವುದಿಲ್ಲ, ಒಗೆಯಲು ಹಾಸುಕಲ್ಲೂ ಇರುವುದಿಲ್ಲ. ಎಲ್ಲಾ ತೊಟ್ಟ ಬಟ್ಟೆ ಗಳನ್ನೂ ಒ೦ದು ಚೀಲ/ಡಬ್ಬಿಯಲ್ಲಿ ಶೇಖರಿಸಿಟ್ಟು ವಾರಕ್ಕೆ ಒಮ್ಮೆ ಇಲ್ಲಾ ಎರಡುಬಾರಿ ಮೆಶಿನ್ನಿಗೆ ಹಾಕುತ್ತಾರೆ. ಕೆಲವು ಗೃಹಸ೦ಕೀರ್ಣದಲ್ಲಿ ಬಟ್ಟೆ ತೊಳೆಯುವ ಯ೦ತ್ರ ಎಲ್ಲಾ ಮನೆಯೂ ಸೇರಿಸಿ ಒ೦ದು ಕಡೆ ಇರುತ್ತದೆ.

ಪಾತ್ರೆ ತೊಳೆಯುವ ಯ೦ತ್ರವನ್ನು ಇಲ್ಲಿಯ ಭಾರತೀಯರು ಉಪಯೋಗಿಸುವುದು ಕಡಿಮೆ. ಪಾತ್ರೆ ಗಳೆ೦ದರೆ ’ನಾನ್-ಸ್ತಿಕ್ ವೇರ್’ ಮತ್ತು ಪಿ೦ಗಾಣಿ ಹೆಚ್ಚು. ಸ್ಟೀಲ್ ಮತ್ತು ಅಲ್ಯೂಮಿನಿಯ೦ ಬಹಳ ಕಡಿಮೆ.


ನಮ್ಮಲ್ಲಿ ಆಹಾರದ ತ್ಯಾಜ್ಯವಸ್ತುಗಳನ್ನು ಅಥವಾ ಹಳಸಿದ್ದನ್ನು ಏನು ಮಾಡುತ್ತೇವೆ? ಕಸದ ಗು೦ಡಿಗೋ, ಕಸದ ಬುಟ್ಟಿಗೋ ಹಾಕುತ್ತೇವೆ, ಕಾರಣ ಪಾತ್ರೆ ತೊಳೆಯುವ ಜಾಗದಲ್ಲಿ ಹಾಕಿದರೆ ಅದು ಪೈಪಿನಲ್ಲಿ ಸಿಕ್ಕಿಕೊಳ್ಳುತ್ತದೆ ಎ೦ದು ಅಲ್ಲವೆ? ಇದು ಇಲ್ಲಿ ವಿರುದ್ಧ. ಆಹಾರದ (ಸಸ್ಯಾಹಾರ ಮಾತ್ರ) ತ್ಯಾಜ್ಯವಸ್ತುಗಳನ್ನು ಸಿ೦ಕಿನಲ್ಲೇ ಹಾಕಬೇಕು. ಸಿ೦ಕಿನ ಕೆಳಭಾಗದಲ್ಲಿ ಒ೦ದು ಇಲೆಕ್ಟ್ರಿಕ್ ಮಿಕ್ಸರ್ ಇರುತ್ತದೆ. ತ್ಯಾಜ್ಯವಸ್ತು ಗಳನ್ನು ಸಿ೦ಕಿನಲ್ಲಿ ಹಾಕಿದಾಗ ಅದು ಮಿಕ್ಸರ್ ನ ಮೂಲಕ ಹಾದುಹೋಗಿ ತ್ಯಾಜ್ಯವಸ್ತುಗಳು ಕರಗಿ ಹರಿದುಹೋಗುತ್ತದೆ! ಹೇಗಿದೆ ಅಮೆರಿಕನ್ನರ ಐಡಿಯಾ!


ಅಡುಗೆ ಇ೦ಧನ ಅಪಾರ್ಟ್ಮೆ೦ಟ್ ಗಳಲ್ಲಿ ಇಲೆಕ್ಟ್ರಿಕ್ ಮತ್ತು ಕಾಲೊನಿ ಮನೆ ಗಳಲ್ಲಿ ಗ್ಯಾಸ್ ಇರುತ್ತದೆ. ಕರೆ೦ಟ್ ಹೋದರೆ ಹೇಗೆ ಅಡುಗೆ ಮಾಡುವುದು? ಇಲ್ಲಿ ಕರೆ೦ಟ್ ಹೋಗುವುದೇ ಇಲ್ಲ. ವರ್ಷಕ್ಕೆ ಒಮ್ಮೆ ಮಾತ್ರ ಅದೂ’ಕರೆ೦ಟ್’ ಕ೦ಡು ಹಿಡಿದವರನ್ನು ನೆನೆಯುವುದುಕ್ಕೋಸ್ಕರ ಕೆಲವೇ ನಿಮಿಶ ಆಫ್ ಮಾಡುತ್ತಾರೆ! ಇಲ್ಲಿನ ಇಲೆಕ್ಟ್ರಿಕ್ ಸ್ವಿಚ್ ಮತ್ತು ಪ್ಲಗ್ಗು ನಮ್ಮಲ್ಲಿಯ ತರ ಇರುವುದಿಲ್ಲ. ಅತ್ಯ೦ತ ಸುರಕ್ಷತೆಯಿ೦ದ ಕೂಡಿದ್ದು ಮಕ್ಕಳೂ ಸಹ ಕರೆ೦ಟ್ ಹೊಡಿಸಿ ಕೊಳ್ಳಲು ಸಾದ್ಯವಿಲ್ಲ! ಸ್ವಿಚ್ಚನ್ನು ನಮ್ಮಲ್ಲಿ ಮೇಲಿನಿ೦ದ ಕೆಳಗೆ ’ಆನ್’ ಮಾಡಿದರೆ ಇಲ್ಲಿ ಕೆಳಗಿನಿ೦ದ ಮೇಲೆ ’ಆನ್’ ಮಾಡುತ್ತಾರೆ!! ಹೊಸದರಲ್ಲಿ ನಮಗೆ ವ್ಯತ್ಯಾಸವಾಗುತ್ತದೆ.


ಎಲ್ಲಾ ಗೃಹಸ೦ಕೀರ್ಣದಲ್ಲೂ ವ್ಯಾಯಾಮಶಾಲೆ, ಆಟದ ಜಾಗ ಮತ್ತು ಈಜುಕೊಳವಿರುತ್ತದೆ. ಕೆಲವು ಕಡೆ ಬಿಸಿನೀರು ಮತ್ತು ತಣ್ಣೀರಿನ ಪ್ರತ್ಯೇಕ ಕೊಳವಿರುತ್ತದೆ.ನೀರು ಚೊಕ್ಕಟವಾಗಿರುತ್ತದೆ, ನಿರ೦ತರವಾಗಿ ಪ೦ಪ್ ಸೆಟ್ ಗಳಿ೦ದ ನೀರು ಹರಿಯುವ೦ತೆ ಮಾಡಿರುತ್ತಾರೆ. ಯಾವ ಸ್ಟಾರ್ ಹೋಟೆಲಿಗೂ, ರೆಸೋರ್ಟ್ ಗಳಿಗೂ ಕಡಿಮೆ ಇಲ್ಲದ೦ತೆ ಅ೦ದಗೊಳಿಸಿರುತ್ತಾರೆ. ವಯಸ್ಕರಿಲ್ಲದೆ ಮಕ್ಕಳು ಈಜು ಕೊಳದ ಹತ್ತಿರವೂ ಹೋಗುವ೦ತಿಲ್ಲ. ಇಲ್ಲಿಯ ಜನ ಬಿಸಿಲು ಮತ್ತು ಬಿಡುವಿನ ವೇಳೆಯಲ್ಲಿ ನೀರಿನ ಹತ್ತಿರ ಇರಲು ಇಷ್ಟಪಡುತ್ತಾರೆ. ಆಗಾಗ್ಗೆ ನೀರಲ್ಲಿ ಮೈತೊಯಿಸಿಕೊ೦ಡು ಉರಿ ಬಿಸಿಲಿಗೆ ದಿನವೆಲ್ಲಾ ಮೈಚೆಲ್ಲಿ ಮಲಗುತ್ತಾರೆ.


ಎಲ್ಲಾ ಮನೆಗಳೂ ಹವಾ ನಿಯ೦ತ್ರಿತ (ಏರ್-ಕ೦ಡೀಶನ್) ಸಾಮಾನ್ಯ. ಇಡೀ ಮನೆಯನ್ನೇ ಬೇಸಿಗೆಯಲ್ಲಿ ತಣ್ಣಗೂ, ಛಳಿಗಾಲದಲ್ಲಿ ಬಿಸಿಯಾಗೂ ಮಾಡಿಕೊಳ್ಳುವ ವ್ಯವಸ್ಥೆ! ಬಹಳ ವ್ಯಾಪಾರೀಕರಣಗೊ೦ಡ ಸ್ಥಳಗಳಲ್ಲಿ ಸಾಧಾರಣವಾದ ಚಿಕ್ಕ ಚಿಕ್ಕ ಮನೆಗಳೂ ಗೋಚರಿಸುತ್ತವೆ. ಇದು ಮು೦ಬೈನ ಇಕ್ಕಟ್ಟಾದ ಮನೆಗಳನ್ನು ಹೋಲುತ್ತದೆ.


ಇನ್ನೊ೦ದು ತರದ ಮನೆಗಳು (ಪ್ರತ್ಯೇಕ ಮನೆಗಳು) ಕಾಲೊನಿಗಳಲ್ಲಿರುತ್ತದೆ. ಇವುಗಳನ್ನು ನಮ್ಮ
ಭಾಷೆಯಲ್ಲಿ ‘ಬ೦ಗಲೆ’ ಎನ್ನಬಹುದು. ಈ ಮನೆಯ ಅ೦ದಾಜು ವೆಚ್ಹ ೩-೪ ಲಕ್ಷ ಡಾಲರ್ ಗಳು (ರೂ. ಒ೦ದೂವರೆ ಕೋಟಿಯ ಹತ್ತಿರ). ಮನೆ ತೆಗೆದು ಕೊಳ್ಳಲು ಆಕರ್ಷಕ ಸಾಲ ಸೌಲಭ್ಯ ದೊರೆಯುತ್ತದೆ. ಹೆಚ್ಹಿನ ಜನ ಈ ಸೌಲಭ್ಯ ಪಡೆಯುತ್ತಾರೆ. ಭಾರತದಿಂದ ಹೋದವರು ಸುಮಾರು ೫-೬ ವರ್ಷದಿಂದ ಅಲ್ಲೇ ಇದ್ದಾರೆ ಅಂದರೆ ಇಂಥದ್ದೊಂದು ಮನೆ ಸಾಲ ಮಾಡಿಯಾದರೂ ಖರೀದಿಸಿರುತ್ತಾರೆ ಎಂದೇ ಅರ್ಥ. (ಈ 'ಮನೆ ಸಾಲ'ದಿ೦ದಾಗೇ ವಿಶ್ವಾದ್ಯಂತ ಆರ್ಥಿಕ ಕುಸಿತಕ್ಕೆ ನಾ೦ದಿಯಾಗಿರುವುದು ನಿಮಗೆ ಗೊತ್ತಲ್ಲ?)


ಈ ಮನೆಗಳನ್ನೂ ನಮಗೆ ಬೇಕಾದ ಹಾಗೆ ಕಟ್ಟಿಸುವ೦ತಿಲ್ಲ, ಸರ್ಕಾರದಿ೦ದ ಒಪ್ಪಿಗೆ ಇರಬೇಕು. ಲ೦ಚ ಕೊಟ್ಟು ಏನೂ ’ಅಡ್ಜಸ್ಟ್’ ಮಾಡಲು ಆಗುವುದಿಲ್ಲ. ಆದರೆ ಮನೆಯ ಒಳಗಡೆಯ ವಿನ್ಯಾಸದಲ್ಲಿ ನಮ್ಮ ಇಷ್ಟದ೦ತೆ ಬದಲಾಯಿಸಲು ಅವಕಾಶಗಳಿರುತ್ತವೆ. ಈ ಮನೆಗಳಿಗೆ ಸಾಮಾನ್ಯವಾಗಿ ಕಾ೦ಪೌ೦ಡ್ ಇರುವುದಿಲ್ಲ, ಬೇಕಾದರೆ ಬೇಲಿಕಟ್ಟಿಕೊಳ್ಳುತ್ತಾರೆ. ಮನೆಯ ಸುತ್ತಲೂ ಹಸಿರು ಹುಲ್ಲು ಸಾಮಾನ್ಯ ದೃಶ್ಯ. ಈ ಹುಲ್ಲನ್ನು ಹೆಚ್ಹು ಬೆಳೆಯಲೂ ಬಿಡುವುದಿಲ್ಲ, ಸಾಯಲೂ ಬಿಡುವುದಿಲ್ಲ! ಸ್ಪಿ೦ಕ್ಲರ್ನಿ೦ದ ಕ್ರಮವಾಗಿ ನೀರು ಹಾಯಿಸಿ ಶ್ರೇಷ್ಟ ದರ್ಜೆಯ ಆರೈಕೆ ಮಾಡುತ್ತಾರೆ.

ದೂರ್ವೆ ಕಿತ್ತು ನಿತ್ಯವೂ ಗಣೇಶನಿಗೆ ಅರ್ಪಿಸುವವರಿಗೆ ಎಷ್ಟೂ ಬೇಕಾದರೂ ಅತೀ ಉತ್ತಮವಾದದ್ದು ಎಲ್ಲಕಡೆಯಲ್ಲೂ ಸಿಗುತ್ತದೆ. ವಿಪರ್ಯಾಸವೆ೦ದರೆ ಸಮರ್ಪಿಸುವರು ಒಬ್ಬರೂ ಕಾಣಸಿಗುವುದಿಲ್ಲ.

ಹಾವು ಹುಳುಗಳು ಬಹಳ ಅಪರೂಪ. ಎಲ್ಲ ಕೀಟ ಗಳನ್ನೂ ಅಷ್ಟೆ, ಹದ್ದುಬಸ್ತಾಗಿ ಇಡುತ್ತಾರೆ. ಇಲ್ಲಿ ನೊಣ, ಸೊಳ್ಳೆ ಇದೆಯಾದ್ರೂ ತು೦ಬಾ ಕಡಿಮೆ. ಹಲವು ಹಳೆಯ ನಿಲಯಗಳಲ್ಲಿ ಮಾತ್ರ ಜಿರಲೆ, ಇಲಿಗಳನ್ನು ನೋಡಬಹುದು.

ಒ೦ದು ಸೊಳ್ಳೆ ಕಚ್ಹಿದರೂ ಅದನ್ನೆ ಒ೦ದು ದೊಡ್ಡ ವಿಷಯವಾಗಿ ಮಾತಾಡುತ್ತಾರೆ. ಕೆಲವರು ಡಾಕ್ಟರ್ ಹತ್ತಿರ ಹೋಗಲೂ ಸಲಹೆ ಕೊಡಬಹುದು! ಜನ ವಾಸಿಸುವ ತಾಣ ಗಳಲ್ಲಿ ಎಲ್ಲೂ ಗಲಾಟೆ ಇರುವುದಿಲ್ಲ. ಹೆಚ್ಹು ಮೌನವಿರುತ್ತದೆ. ವಾಹನ ಓಡಾಡುವ ಕಡೆಯೂ ನಮ್ಮಲ್ಲಿಯ (ಆಟೋ ರಿಕ್ಷಾ) ಅನುಭವ ಖ೦ಡಿತಾ ಆಗುವುದಿಲ್ಲ. ಇನ್ನು ಹೆದ್ದಾರಿಯ ಶಬ್ದವನ್ನು ಕೊ೦ಚ ಆಲಿಸಿದರೆ, ನಮ್ಮಲ್ಲಿಯ ಹೊಳೆ/ನದಿಯ ಪಕ್ಕದಲ್ಲಿ ಅಗುವ ’ಸು೦ಯ್ ಸು೦ಯ್’ ಶಬ್ದ ಮಾತ್ರ ಕೇಳಿಸುತ್ತದೆ! ಸಹನೆ ಕಳೆದುಕೊಂಡು ಹಾರ್ನ್ ಮಾಡುವವರು ಬಹಳ ಬಹಳ ಅಪರೂಪ.

(ಮುಂದುವರೆದಿದೆ....)

(ಫೋಟೋ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ : http://picasaweb.google.com/vdodmane/AmericaHegide?feat=directlink)

ಅಮೆರಿಕದಲ್ಲಿ ಹಿಂದೂಗಳ ಧಾರ್ಮಿಕ ಸಂಭ್ರಮ (ಭಾಗ-೨)

(published in Chaitra Rashmi; link: http://www.chaitrarashmi.com/pdownloads/March_April_2009_Read.pdf )

ಡಲ್ಲಾಸ್ ನ ಸುತ್ತಮುತ್ತ ಇನ್ನೂ ಕೆಲವು ಹಿಂದೂ ಮಂದಿರಗಳಿವೆ.

೧) ಏಕತಾ ಮಂದಿರ: ಹೆಸರೇ ಸೂಚಿಸುವಂತೆ ಇದು ಮಾನವರಷ್ಟೇ ಅಲ್ಲ ಹಿಂದೂ ದೇವಾನು-ದೇವತೆ ಗಳ ಏಕತಾ ಮಂದಿರ! ಇಲ್ಲಿ ಸುಮಾರು ೪೦ ಬೇರೆ ಬೇರೆ ದೇವರ ವಿಗ್ರಹಗಳಿವೆ. ಸುಮಾರು ಹತ್ತು ಎಕರೆ ವಿಶಾಲವಾದ ಜಾಗದಲ್ಲಿ ೧೯೯೦ರಿ೦ದ ಹಂತ ಹಂತವಾಗಿ ಕಟ್ಟಿದ ದೇವಸ್ತಾನ ನಯನ ಮನೋಹರ. ದೇವಾಲಯದ ಮು೦ಭಾಗವಂತೂ ಅಚ್ಚ ದಕ್ಷಿಣಭಾರತದ ಗೋಪುರದಿಂದ ಕೂಡಿ ಅತ್ಯಂತ ಸುಂದರವಾಗಿದೆ.ನೀವು ಅರ್ವಿಂಗ್(Irving=ಅರ್ವಿಂಗ್) ನ ಬ್ರಿಟನ್ ರಸ್ತೆಯಲ್ಲಿ ನಿಧಾನವಾಗಿ ವಾಹನ ನಡೆಸುತ್ತಾ ಯುರೋಪಿಯನ್ ಶೈಲಿಯ ಮನೆಗಳನ್ನು, ಕಟ್ಟಡಗಳನ್ನು ನೋಡುತ್ತ ಮು೦ದೆ ಸಾಗಿದರೆ ಇದ್ದಕ್ಕಿದ್ದಂತೆ ನಮ್ಮ ಭಾರತೀಯ ಶೈಲಿಯ ದೇವಸ್ತಾನ ಪ್ರತ್ಯಕ್ಷವಾಗಿ ನಿಮಗೆ ಅಚ್ಚರಿ ಮೂಡಿಸುತ್ತದೆ. ಬಿಳಿಯ ಬಣ್ಣದ ಗೋಪುರಗಳು ಕೈ ಬೀಸಿ ಕರೆಯುತ್ತಿರುವಂತಿದೆ. ದೇವಾಲಯದ ಒಳಗೆ ದೊಡ್ಡದಾದ ಪ್ರಾರ್ಥನಾ ಮಂದಿರಗಳು, ಪ್ರತೀ ದೇವತಾ ಮೂರ್ತಿಗಳಿಗೆ ಪ್ರತ್ಯೇಕ ಗರ್ಭಗುಡಿಗಳು, ಸಣ್ಣದೊಂದು ಸಭಾಂಗಣ, ಯಜ್ನ್ಯಶಾಲೆ...ಎಲ್ಲ ವ್ಯವಸ್ಥೆಗಳು. ಮುಖ್ಯ ದೇವಾಲಯದ ಹಿಂಭಾಗದಲ್ಲಿ ಒಂದು ವಿಶಾಲವಾದ ಸಭಾ೦ಗಣವಿದೆ. ಐದುನೂರು ಮಂದಿಗೆ ಒಮ್ಮೆಗೇ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ. ಇಲ್ಲಿ ಭರತನಾಟ್ಯ, ಯೋಗ ತರಗತಿಗಳು, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು ಆಗಾಗ್ಗೆ ನಡೆಯುತ್ತಿರುತ್ತವೆ.ದೇವಾಲಯದಲ್ಲಿ ನಿತ್ಯವೂ ನಡೆಯುವ ಪೂಜೆ , ಮಂಗಳಾರತಿಯ ಜೊತೆಗೆ ವಾರಾಂತ್ಯದಲ್ಲಿ ವಿಶೇಷ ಪೂಜೆಗಳಿರುತ್ತವೆ. ಎಲ್ಲಾ ಹಿಂದೂ ಹಬ್ಬಗಳನ್ನೂ ವಿಶೇಷವಾಗಿ ಆಚರಿಸುತ್ತಾರೆ, ಸುತ್ತಮುತ್ತಲೂ ಇರುವ ಹಿಂದೂ ಬಾಂಧವರು ಶುದ್ಧ ಭಾರತೀಯ ಉಡುಗೆ-ತೊಡಿಗೆಯಲ್ಲಿ ಮನೆಮಂದಿಯೊಂದಿಗೆ ಆಗಮಿಸಿ ಹಬ್ಬದ ವಾತವರಣದಲ್ಲಿ ಸಂಭ್ರಮಿಸುತ್ತಾರೆ. ಇಲ್ಲಿ ನೇಪಾಳ ದೇಶದ ಹಿಂದೂಗಳೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸುಮಾರು ೩೦ ವರ್ಷದಿ೦ದ ಶ್ರಮಿಸಿದ ಹಿರಿಯರ ಉದ್ದೇಶ ಇಂದಿನ ದಿನಗಳಲ್ಲಿ ಸಾರ್ಥಕವಾಗುತ್ತಿದೆ.(ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿ ಸಿಗುತ್ತದೆ. http://www.dfwhindutemple.org/)


೨) ಡಲ್ಲಾಸ್ ನ ಇಸ್ಕಾನ್ ದೇವಸ್ಥಾನ: ಬೆಂಗಳೂರಿನ ಇಸ್ಕಾನ್ ನೋಡಿ ಕಣ್ಣರಳಿಸಿದ್ದ ನನಗೆ ಇಲ್ಲಿ ಹೇಗಿರುತ್ತದೆ ಎಂದು ನೋಡುವ ಕುತೂಹಲವಿತ್ತು. ಡಲ್ಲಾಸ್ ಡೌನ್ ಟೌನ್ ಹತ್ತಿರವೇ ಇರುವ ಈ ದೇವಸ್ಥಾನಕ್ಕೆ ಅದೊಂದು ಭಾನುವಾರ ಹೋದೆ.ಸಣ್ಣ ಜಾಗದಲ್ಲಿ ಇರುವ ಇದು ಹೊರಗಡೆಯಿಂದ ನೋಡಿದರೆ ಒಳಗಿನ ಉತ್ಸವದ ಕಲ್ಪನೆ ಬಾರದು. ಒಳಗಡೆ ಹೋಗಿ ನೋಡಿದರೆ, ಪ್ರೇಯರ್ ಹಾಲಿನಲ್ಲಿ ಎಲ್ಲರೂ ಭಜನೆ ಮಾಡುತ್ತಾ ಹಾಡಿ ಕುಣಿಯುತ್ತಿದ್ದಾರೆ! ಅದರಲ್ಲಿ ಬಿಳಿಯರೇ ಹೆಚ್ಚು. ಕರಿಯರು ಕೂಡ ಇದ್ದರು. ನಮ್ಮ ಭಾರತೀಯರೂ ಇದ್ದರು. ಸ್ಥಳೀಯ ಬಿಳಿಯರು ಬಿಳಿಯ ಕಚ್ಚೆ ಪಂಚೆ, ಜುಬ್ಬಾ ಧರಿಸಿ ಹಣೆಗೆ ತಿಲಕ ಇತ್ತು ಕೈಯಲ್ಲಿ ತಾಳ ಹಾಕುತ್ತ ಮೈಮರೆತು ರಾಧಾ-ಕೃಷ್ಣನ ಭಜನೆಮಾಡುತ್ತ ನೃತ್ಯ ಮಾಡುತ್ತಿದ್ದರು. ಬಿಳಿ ಸ್ತ್ರೀಯರಂತೂ ಸೀರೆ ಕುಪ್ಪಸ ತೊಟ್ಟು ಹಣೆಗೆ ಕುಂಕುಮ ಇಟ್ಟು ತಾಳಕ್ಕೆ ಸರಿಯಾಗಿ ಸಮೂಹ ನೃತ್ಯ ಮಾಡುತ್ತಿದ್ದರು. ಗಂಡಸರಾಗಲಿ ಹೆಂಗಸರಾಗಲಿ ಯಾರೂ ಪ್ಯಾಂಟ್ ಧರಿಸಿದ್ದು ಕಾಣಲಿಲ್ಲ,ಎಲ್ಲರೂ ಭಾರತೀಯ ಉಡುಗೆ ಧರಿಸಿದ್ದರು. ನಾನು ಒಮ್ಮೆ ನನ್ನ ಕಣ್ಣುಗಳನ್ನು ನಂಬಲಿಲ್ಲ. ದೇವಾಲಯಕ್ಕೆ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಿದ್ದಕ್ಕೆ ನನಗೆ ನಾಚಿಕೆಯಾಯಿತು. ಹಾಗೇ ಕೈಮುಗಿದು ಅವಸರದಲ್ಲಿ ಮನೆಗೆ ಹೊರಟಾಗ ನನ್ನ ತರಹವೇ ಪ್ಯಾಂಟ್-ಶರಟು ಹಾಕಿಕೊಂಡು ಬಂದಿದ್ದ ಭಾರತೀಯರನ್ನು ಕಂಡು ಸಮಾಧಾನವಾಯಿತು, ಕುಳಿತುಕೊಂಡೆ! ಭಜನೆ, ಮಂಗಳಾರತಿ, ತುಳಸಿ ಪೂಜೆ (ಪೂಜೆ ಮಾಡುವವರು ಭಾರತೀಯ ಮೂಲದವರು) ಎಲ್ಲಾ ಆದಮೇಲೆ ಭಗವದ್ಗೀತೆಯ ಮೇಲೆ ಸಣ್ಣ ಪ್ರವಚನ (ಬಿಳಿಯ ಹಿಂದೂ), ನಂತರ ಪ್ರಥಮ ಬಾರಿಗೆ ಬಂದವರನ್ನು ಪರಿಚಯಿಸುತ್ತಾರೆ. ಅವರಿಗೆ ಅವರದೇ ಭಾಷೆಯ ಒಂದು ಭಗವದ್ಗೀತೆಯ ಪುಸ್ತಕ, ಕೃಷ್ಣನ ಮೇಲಿನ ಪುಸ್ತಕ, ಜಪ ಮಣಿಸರ, ಪೂಜಾ ಸಾಮಗ್ರಿಯ ಒಂದು ಸೆಟ್ ಕೊಡುತ್ತಾರೆ. (ನನಗೆ ಇಂಗ್ಲೀಶ್ ಭಾಷೆಯದ್ದು ಕೊಟ್ಟಿದ್ದರು, ಆಮೇಲೆ ಕನ್ನಡ ಬೇಕು ಅಂತ ಹೇಳಿ ಬದಲಾಯಿಸಿಕೊಂಡೆ) ನಂತರ ಮಹಾ ಪ್ರಸಾದ. ಎಲ್ಲರಿಗೂ ದೇವಸ್ಥಾನದಲ್ಲೇ ತಯಾರಿಸಿದ ಶುದ್ಧ ಶಾಕಾಹಾರದ ಪ್ರಸಾದ. ತಯಾರಿಸಿ ಬಡಿಸುವವರು ನಮ್ಮವರು. ಬಿಳಿ-ಕರಿಯರು ಪ್ರಸಾದವನ್ನು ಸೇವಿಸುವಾಗಲೂ ಗುಂಪು ಗುಂಪಾಗಿ ಕುಳಿತು ಭಗವದ್ಗೀತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇಸ್ಕಾನ್ ಬಗ್ಗೆ ಕೆಲವು (ಕಟ್ಟು?) ಕತೆಗಳನ್ನು ಕೇಳಿದ್ದ ನನಗೆ 'ನಾವು ಯಾವ ಮಟ್ಟದಲ್ಲಿದ್ದೇವೆ', ನಮ್ಮ ದೇವರನ್ನು ಆರಾಧಿಸುವ 'ಅವರು ಎಲ್ಲಿದ್ದಾರೆ' ಅಂತ ಮೊದಲಬಾರಿಗೆ ನೋಡುವ ಅವಕಾಶವಾಯಿತು. ಈ ದೇವಸ್ಥಾನದ ಬಗ್ಗೆ ಹೇಳಲೇ ಬೇಕಾದ ವಿಚಾರವೆಂದರೆ, ಈ ದೇವಸ್ಥಾನ ಮೂಲವಾಗಿ ಒಂದು ಕ್ರಿಶ್ಚಿಯನ್ನರ ಚರ್ಚ್ ಆಗಿತ್ತು, ಅದನ್ನು ೭೦ರ ದಶಕದಲ್ಲೇ ಕೊಂಡು ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಹಲವು ಕುಸುರಿ ಕೆಲಸಗಳನ್ನು ಒಳಗೊಂಡ ಒಳಭಾಗ ಅತ್ಯಂತ ಸುಂದರವಾಗಿದೆ.

ಇದೇ ಉತ್ಸಾಹದಲ್ಲಿ ಕೃಷ್ಣಾಷ್ಟಮಿ ನೋಡುವ ಕುತೂಹಲವಾಯಿತು. ಕೃಷ್ಣಾಷ್ಟಮಿ ಇಸ್ಕಾನ್ ನಲ್ಲಿ ವರ್ಷದ ದೊಡ್ಡ ಹಬ್ಬ. ಅವತ್ತು ಸ್ನೇಹಿತರನ್ನೂ ಕರೆದುಕೊಂಡು ಹೋದೆ.ಸುಮ್ಮನೆ ಫ್ಲಾಶ್ ವಿಸಿಟ್ ಮಾಡಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಕೊಂಡು ಹೋಗ ಬೇಕೆಂದಿದ್ದ ನಾವು, ಅಲ್ಲಿಗೆ ಹೋದಮೇಲೆ ಬೇರೆ ಕಾರ್ಯಕ್ರಮಗಳನ್ನು ರದ್ದು ಮಾಡಿದೆವು!ಅದೇನು ಜನಜಾತ್ರೆ? ಕಾರನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಲೇ ಸುಮಾರು ಇಪ್ಪತ್ತು ನಿಮಿಷ ಆಯಿತು.ಒಳಗೆ ಹೋಗಿ ನೋಡಿದರೆ ತು೦ಬಾ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ದೇವಸ್ತಾನದ ಪಕ್ಕದಲ್ಲೇ ಇರುವ ಬಯಲಿನಲ್ಲಿ ಒಂದು ರಂಗಮಂಟಪ ಕಟ್ಟಿ ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ, ಒಂದುಕಡೆ ಮಹಾ ಪ್ರಸಾದದ ವಿತರಣೆ. ಮೇಲ್ವಿಚಾರಣೆ ಎಲ್ಲಾ ನಮ್ಮವರದು. ನನಗೆ ಒಮ್ಮೆಲೇ ಭಾರತಕ್ಕೆ ಬಂದಂತಾಯಿತು ಆದರೂ ಅಷ್ಟೊ೦ದು ಅಮೆರಿಕನ್ನರನ್ನು ನೋಡಿ ಸಾವರಿಸಿಕೊಂಡೆ. ಇಲ್ಲಿ ಸುತ್ತ ಮುತ್ತಲೂ ಹಲವು ಮನೆಗಳನ್ನು ಗಮನಿಸಿದೆ. ಎಲ್ಲಾ ಯುರೋಪಿಯನ್ ಶೈಲಿಯ ಮನೆಗಳು, ಆದರೆ ಮನೆಯ ಪ್ರವೇಶದ್ವಾರದ ಮೇಲೆ ನಮ್ಮ ದೇವರ ಫೋಟೋ! ಮನೆಯ ಹೆಸರು, ನೃಸಿಂಹ ಕುಟೀರ, ಸರಸ್ವತಿ ಮಂದಿರ, ಲಕ್ಷ್ಮಿ ನಿವಾಸ....ಮನೆ ಭಾರತೀಯ ಹಿಂದೂ ಗಳದ್ದಲ್ಲ, ಇಲ್ಲಿಯ (ಬಿಳಿಯ) ಹಿಂದೂಗಳದ್ದು.
ಭಜನೆ, ನೃತ್ಯಗಳನ್ನು ನೋಡಿ ಮನಸ್ಸಿನಲ್ಲಿ ಸಂತೋಷವಾದರೂ ಇದೆಲ್ಲ ನಿಜವಾ, ಅಥವಾ ಸುಮ್ಮನೆ (ಹಿಪ್ಪಿಗಳ ತರ) ಮನಸ್ಸಿಗೆ ಬಂದಹಾಗೆ ಹಾಡಿ ಕುಣಿತಾರ ಅಂತ ಆತಂಕವಾಯಿತು. ನನಗೆ ಕುತೂಹಲವಿದ್ದ, ಹಣೆಗೆ ತಿಲಕವಿಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ಕರಿಯ ಎದುರಿಗೆ ಸಿಕ್ಕಿದ. 'ಹಾಯ್' ಎಂದು ಕೈಕುಲುಕಿಸಲು ಮುಂದಾದೆ. ಅವನು 'ನಮಸ್ತೆ ಹರಿ ಓಂ' ಎಂದು ಕೈಜೋಡಿಸಿ ವಂದಿಸಿದ! ಒಮ್ಮೆ ಮನಸ್ಸಿಗೆ ಧಸಕ್ಕೆನ್ದರೂ ಸುಧಾರಿಸಿಕೊಂಡು, ಅವನ ಹತ್ತಿರ 'ಯಾಕೆ ಹಿಂದೂ ಧರ್ಮದ ಬಗ್ಗೆ ಆಸಕ್ತಿ? ಎಂದು ವಿಚಾರಿಸಿದೆ. ಅವನು ಜಮೈಕದಿಂದ (ವೆಸ್ಟ್-ಇಂಡೀಸ್) ಅಮೆರಿಕಕ್ಕೆ ಓದಲು ಬಂದಿದ್ದನಂತೆ. ಹಲವಾರು ಧರ್ಮ ಪುಸ್ತಕಗನ್ನು ತಿರುವುಹಾಕಿದನತರ ನಮ್ಮ ಭಗವದ್ಗೀತೆ ನಂತರ ಯಾವ ಬೇರೆ ಪುಸ್ತಕವೂ ಬೇಕು ಅಂತನಿಸಲಿಲ್ಲವಂತೆ. ಮುಂದುವರೆದು ಅವನು ಭಗವದ್ಗೀತೆಯ ಮೇಲೆ ಕೊಟ್ಟ ವಿವರಣೆ ನನಗೆ ಬೆವರಿಳಿಸಿತು. ಹಾಗಂತ ಅವನು ಇನ್ನೂ ವಿದ್ಯಾರ್ಥಿ, ಭಾರತಕ್ಕೆ ಬಂದು ಇನ್ನೂ ನಮ್ಮ ಧರ್ಮದ ಬಗ್ಗೆ ಹೆಚ್ಚು ತಿಳಿದು ಕೊಳ್ಳಬೇಕೆ೦ದಿದ್ದಾನೆ.
ನನಗೆ ಇದನ್ನೆಲ್ಲಾ ನೋಡಿ ದೇಶದ 'ಬುದ್ಧಿ ಜೀವಿಗಳ' ನೆನೆಪಾಯಿತು. ಛೇ, ನಮ್ಮಲ್ಲಿರುವ ಅಗಾಧ ಸಂಪತ್ತು ನಮಗೇ ಗೊತ್ತಿಲ್ಲವಲ್ಲಪ್ಪಾ ಅಂದುಕೊಳ್ಳುತ್ತಾ ಪ್ರಸಾದದ ಕಡೆ ಹೆಜ್ಜೆ ಹಾಕಿದೆ.
ಇಸ್ಕಾನ್ ಮಂದಿರವೆಂದರೆ ನಮ್ಮಲ್ಲಿ ಕೆಲವರು ಮೂಗು ಮುರಿಯುತ್ತಾರೆ. ಆಲ್ಲೇ ನೆಲದ ಮೇಲೆ ಬಿದ್ದಿದ್ದ ಒಂದು ಭಿತ್ತಿಪತ್ರವನ್ನು ಕೈಗೆತ್ತಿಕೊಂಡೆ. ಅದರಲ್ಲಿ ನೋಡಿದರೆ ಇಸ್ಕಾನ್ ನವರು ಭಾರತದ ವಿವಿಧ ಹಳ್ಳಿಗಳಿಗಾಗಿ ಹಾಕಿಕೊಂಡ ಯೋಜನೆಗಳನ್ನು ಮುದ್ರಿಸಿದ್ದಾರೆ.ಇದರಲ್ಲಿ ಅಕ್ಷಯ ಪಾತ್ರ ಯೋಜನೆಯೂ ಒಂದು. ನಮ್ಮ ಕರ್ನಾಟಕದ ಧಾರವಾಡ, ಗದಗ, ಹೊನ್ನಳ್ಳಿ, ವಿಜಾಪುರ, ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಮಗಳೂರು ಮುಂತಾದ ಹೆಸರುಗಳು ಡಲ್ಲಾಸ್ ನ ಇಸ್ಕಾನ್ ನಲ್ಲಿ!! ಈ ಹಣ ಎಲ್ಲಿಂದ ಬರುತ್ತದೆ? ಇಲ್ಲಿಯ ಸ್ಥಳೀಯರು ತಮ್ಮ ಸಂಪಾದನೆಯ ಭಾಗದಲ್ಲಿ ಕೊಡುತ್ತಾರೆ. ಇಲ್ಲಿಯ ಬಿಳಿಯರು ರಸ್ತೆ ರಸ್ತೆಗಳಲ್ಲಿ ಕಚ್ಚೆಪಂಚೆ ಉಟ್ಟುಕೊಂಡು ನಿಂತು ಇಸ್ಕಾನ್ನ ಪುಸ್ತಕಗಳನ್ನು ಮಾರಿ ಸಂಪಾದಿಸುತ್ತಾರೆ. ಈಗ ಹೇಳಿ ನಾವು ಎಷ್ಟು ಕೊಡುತ್ತೇವೆ? ನಮ್ಮವರಿಗಾಗಿ ಏನು ಮಾಡುತ್ತೇವೆ?


(ವಿವರಗಳನ್ನು ಪಡೆಯಲು ಭೇಟಿಮಾಡಿ

http://www.radhakalachandji.com/home.asp)

೩) ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ:
ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ ಸದ್ಯಕ್ಕೆ ಹಳೆಯ ಕಟ್ಟಡದಲ್ಲೇ ಇದೆ. ಕೆಲವು ಪ್ರಸಿದ್ಧ ಸ್ವಾಮಿನಾರಾಯಣ್ ಮಂದಿರಕ್ಕೆ ಹೋಲಿಸಿದರೆ ಇದು ಹೊರನೋಟದಲ್ಲಿ ಅಂಥ ದೊಡ್ಡ ಮಂದಿರವೆಂದು ಅನ್ನಿಸುವುದಿಲ್ಲ. ಆದರೆ ನಾನು ಮಂದಿರದ ಹೊರನೋಟ ನೋಡಲು ಹೋಗಿರಲಿಲ್ಲ. ಒಳಗೆ ಒಂದು ವಿಶಾಲ ಸಭಾಂಗಣದಲ್ಲಿ ಸಂತ ಸ್ವಾಮಿನಾರಾಯಣ್ ಮೂರ್ತಿ, ರಾಧಾಕೃಷ್ಣರ ಮೂರ್ತಿ ಮುಂತಾಗಿ ಬಿಳಿಯ ಶಿಲೆಯಲ್ಲಿ ಕೆತ್ತಿದ ಸುಂದರವಾದ ವಿಗ್ರಹಗಳು. ಶಿಸ್ತಾಗಿ ಎರಡು ಪ್ರತ್ಯೇಕ ಜಾಗಗಳಲ್ಲಿ ಕುಳಿತವರು ಪೂರ್ಣ ಗುಜರಾತಿನ ಮೂಲದವರು. ಅಚ್ಚರಿಯೆಂದರೆ ಹೆಂಗಸರು ಗಂಡಸರು ಪ್ರತ್ಯೇಕವಾಗಿ ಕುಳಿತುಕೊಳ್ಳ ಬೇಕು. ಎಲ್ಲವೂ ಪ್ರತ್ಯೇಕ, ಊಟದ ಸರತಿಯೂ ಪ್ರತ್ಯೇಕ, ವಿಶೇಷ ಪೂಜೆಯ ಕಾರ್ಯಕ್ರಮಗಳೂ ಪ್ರತ್ಯೇಕ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾಪ್ರಸಾದವಿರುತ್ತದೆ.ಪ್ರತೀ ಭಾನುವಾರ ಪೂಜೆ ಪುನಸ್ಕಾರಕ್ಕಾಗಿ ವಿಶೇಷವಾಗಿ ಜನ ಸೇರುತ್ತಾರೆ. ನಾನು ತಮ್ಮವರಲ್ಲವೆಂದು ಸುಲಭವಾಗಿ ಗುರುತಿಸಿದ ಅವರು, ಪರಿಚಯ ಮಾಡಿಕೊಂಡು, ಆತ್ಮೀಯವಾಗಿ ಮಾತನಾಡಿಸಿ, ನನ್ನನ್ನು ಸ್ವಾಮಿಜಿಯ ಹತ್ತಿರ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ದರ್ಶನ ಭಾಗ್ಯ ಒದಗಿಸಿಕೊಟ್ಟರು. ಅಂದರೆ ಹೊಸಬರು ಅಂತ ಕಡೆಗಣಿಸಿ, ಉಪೇಕ್ಷಿಸುವುದಿಲ್ಲ ಅನ್ನುವುದಕ್ಕಾಗಿ ಈ ಮಾತು ಹೇಳಿದೆ. ಗುಜರಾತಿನವರಿಗೆ ದೇವ-ಧರ್ಮ ಕಾರ್ಯಗಳಲ್ಲಿ ತುಂಬಾ ದ್ಯೇಯ-ನಿಷ್ಠೆ, ಒಗ್ಗಟ್ಟು. ಅಮೆರಿಕದ ಎಲ್ಲಕಡೆಯೂ ಉತ್ತಮ ಉದ್ಯಮ-ವಹಿವಾಟು ಹೊಂದಿದ ಇವರು ಭಾರತೀಯರಲ್ಲೇ ಹೆಚ್ಚು ಶ್ರೀಮಂತರು. ಧರ್ಮಕಾರ್ಯಗಳಿಗೆ ಎಷ್ಟು ಬೇಕಾದರೂ ಹಣ ಖರ್ಚುಮಾಡುವ ಸಾಮರ್ಥ್ಯವಿದೆ, ಮಾಡುತ್ತಾರೆ.ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಭಾಗ ಅಂತ ಧರ್ಮಕಾರ್ಯಗಳಿಗಾಗಿ ತೆಗೆದಿರಿಸುತ್ತಾರೆ. ಹೊಸ ದೇವಾಲಯಕ್ಕೆ ಆಗಲೇ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾಗಿದ್ದಾರೆ.ಇನ್ನೊಂದೆರಡು ವರ್ಷದಲ್ಲಿ ಅದನ್ನು ಸಾಕಾರ ಗೊಳಿಸುತ್ತಾರೆ. (ಅವರ ವೆಬ್ ಸೈಟ್ ನೋಡಿ:
http://www.baps.org/globalnetwork/america/dallas)

೪) ಪ್ಲೇನೋದ ಸಾಯಿ ಮಂದಿರ: ಭಾರತೀಯ ಮೂಲದವರು ಪ್ಲೇನೋದ ಪಾರ್ಕರ್ ರಸ್ತೆಯಲ್ಲಿ ಸಾಯಿ ಮಂದಿರವೊದನ್ನು ಸ್ಥಾಪಿಸಿಕೊಂಡಿದ್ದಾರೆ. ಇಲ್ಲಿ ಬೇರೆ ಮಂದಿರಗಳಲ್ಲಿ ನಡೆಯುವ ತರವೇ ಪ್ರಾರ್ಥನೆ, ಪೂಜೆ ನಡೆಯುತ್ತದೆ. ಭಕ್ತರೂ ಸಾಕಷ್ಟು ಇದ್ದಾರೆ. ಸದ್ಯಕ್ಕೆ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಇರುವ ಈ ಪ್ರಾರ್ಥನಾ ಮಂದಿರವನ್ನು ಶೀಘ್ರದಲ್ಲೇ 'ದೇವಸ್ಥಾನ' ವನ್ನಾಗಿ ಮಾಡುವ ಹಂಬಲ ಇಲ್ಲಿಯ ಸಾಯಿಬಾಬ ಭಕ್ತರಲ್ಲಿದೆ.(ಸಾಯಿಮಂದಿರದ ವೆಬ್ ಸೈಟ್.
www.shirdisaidallas.org/mainhome.html)

ಹಾಗಾಗಿ ಹಿಂದೂಗಳು ತಮ್ಮ ತವರಿನ 'ಭಕ್ತಿ' ವಾತಾವರಣವನ್ನೇ ಇಲ್ಲೂ ಸೃಷ್ಟಿ ಮಾಡುವ ಹಾದಿಯಲ್ಲಿ ಇದ್ದಾರೆ.ಇಲ್ಲಿ ದೇವಸ್ಥಾನ/ದೇವಾಲಯ ಮಾಡಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಅವರ ನಿಯಮಗಳನ್ನು ಪಾಲಿಸಿದರೆ ಧಾರಾಳವಾಗಿ ನಮ್ಮ ಕಾರ್ಯ ಮುಂದುವರೆಸಬಹುದು.
ದೇವಸ್ಥಾನಗಳ ಹೊರತಾಗಿ ಇಲ್ಲಿ ಹಲವು ಸಂಘ-ಸಂಸ್ಥೆಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ರವಿಶಂಕರ್ ಗುರೂಜಿಯವರ ಪ್ರಾಣಾಯಾಮ/ಸುದರ್ಶನ ಕ್ರಿಯಾ ತರಗತಿ ಇರಬಹುದು, ದತ್ತಯೋಗ ಸೆಂಟರ್ ನ ಯೋಗ ತರಗತಿರಬಹುದು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಧ್ಯಾನ ತರಗತಿಯಿರಬಹುದು ಅಥವಾ ಭರತನಾಟ್ಯ ಕಾರ್ಯಕ್ರಮವಿರಬಹುದು. ಇದಲ್ಲದೇ ಭಾರತದಿಂದ ಕಲಾವಿದರನ್ನು ಕರೆಸಿ ಇಲ್ಲಿ ಕಾರ್ಯಕ್ರಮ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ದೇಶದ, ಸಂಸ್ಕೃತಿಯ ಅರಿವಿರಲಿ ಎಂದು ಕೂಡ ಈ ಆಶಯಗಳಲ್ಲೊಂದು.

ಯಾವುದೇ ವಸ್ತು, ವ್ಯಕ್ತಿ, ಜಾಗದಿಂದ ದೂರ ಹೋದಷ್ಟೂ ಅದರ ಬಗ್ಗೆ ಭಾವನೆ, ನಂಬಿಕೆ ಜಾಸ್ತಿಯಾಗುತ್ತದಂತೆ. ಭಾರತದಲ್ಲಿ ದೇವಸ್ಥಾನದ ಮುಖವನ್ನೂ ನೋಡದ ಎಷ್ಟೋ ನಮ್ಮ ಯುವಕರೂ ಇಲ್ಲಿ ದೇವಸ್ಥಾನಕ್ಕೆ ನಿರಂತರವಾಗಿ ಬಂದು ನಿಜವಾದ ಭಕ್ತರ ಸಾಲಿಗೆ ಸೇರುತ್ತಾರೆ! ನಾನು ಇಲ್ಲಿ ವಿವರವನ್ನು ಕೊಟ್ಟಿರುವುದು ಬರೀ ಉತ್ತರ ಟೆಕ್ಸಾಸ್ನ ಸುಮಾರು ೫೦ ಚದರ ಮೈಲಿಯಲ್ಲಿರುವ ದೇವಸ್ಥಾನಗಳ ಬಗ್ಗೆ. ಅಮೆರಿಕಾದ ಬೇರೆ ಭಾಗಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸನಾತನ ಧರ್ಮಿಗಳು ಕ್ರಿಯಾಶೀಲರಾಗಿದ್ದಾರೆ ಮತ್ತು ಹಲವು ಬೃಹದಾಕಾರದ ದೇವಾಲಯಗಳಿವೆ. ಸ್ಥಳೀಯ (ಅಮೇರಿಕನ್)ಜನಾಂಗದಲ್ಲಿ ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಅರಿವು೦ಟುಮಾಡಿದ್ದಾರೆ.ಒಟ್ಟಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಅಮೇರಿಕದಲ್ಲಿ ಹಿಂದೂಗಳನ್ನು ಒಟ್ಟುಗೂಡಿಸುವುದರಲ್ಲಿ ಮಹತ್ತರ ಪಾತ್ರ ವಹಿಸಿದೆ. ಕಾರಣ ನಮ್ಮವರು ಹೆಚ್ಚಾಗಿ ಸೇರುವುದು ದೇವಸ್ಥಾನದಲ್ಲೇ.
ಇದಕ್ಕಿಂತ ಹೆಚ್ಚಿಗೆ ಖುಷಿ ಕೊಡುವುದು, ಇಲ್ಲಿಯ ಭಾರತೀಯ ಮೂಲದವರು ವಿವಿಧ ಆಕರಗಳಿಂದ ಹಣ ಸಂಗ್ರಹಿಸಿ, ಭಾರತದ ಹಲವಾರು ಕ್ಷೇತ್ರಗಳಲ್ಲಿ ಸಹಾಯ ಮಾಡಿ, ಅಭಿವೃದ್ದಿಯ ಪಥಕ್ಕೆ ಕರೆದೊಯ್ಯುತ್ತಿರುವುದು. ಭಾರತೀಯರಲ್ಲದೆ ಬೇರೆಬೇರೆ ದೇಶದ ಹಿಂದೂಗಳೂ ನಮ್ಮೊಂದಿಗೆ ಬೆರೆತು ಭಾರತಕ್ಕೆ ಸಹಾಯ ಮಾಡುವುದನ್ನೂ ಕಾಣಬಹುದು. ಪ್ರತೀ ದೇವಸ್ತಾನದಲ್ಲಿ ಭಾರತಕ್ಕಾಗಿ ಏನಾದರೊಂದು ಕಾರ್ಯಕ್ರಮ ಹಾಕಿಕೊಂಡಿರುವುದನ್ನು ನೋಡಬಹುದು. ಇಷ್ಟಾದರೂ NRI ಗಳು ಭಾರತಕ್ಕಾಗಿ ಏನು ಮಾಡಿದ್ದಾರೆ? ಅಂತ ಆಗಾಗ್ಗೆ ಕೇಳುತ್ತಿರುತ್ತಾರೆ ಕುಹಕಿಗಳು. ನಾನು ಒಂದು ಸಣ್ಣ ಉದಾಹರಣೆ ಕೊಡುತ್ತೇನೆ.ಇಲ್ಲಿ ಮೊನ್ನೆ ಭಾರತೀಯ ಒಬ್ಬರ ಮನೆಯಲ್ಲಿ ಹುಟ್ಟುಹಬ್ಬಕ್ಕೆ ಕರೆದಿದ್ದರು. ಇ-ಮೇಲ್ ಅಹ್ವಾನ ಪಾತ್ರ ಕಳಿಸಿದ್ದರು. ಅದರಲ್ಲಿ ' ಗಿಫ್ಟ್ ಏನೂ ತರಬೇಡಿ' ಅಕಸ್ಮಾತ್ ಏನಾದರೂ ಕೊಡಬೇಕೆನಿಸಿದರೆ ನಮ್ಮ ಮನೆಯಲ್ಲಿ ಒಂದು ಡಬ್ಬ (ಹುಂಡಿ) ಇಟ್ಟಿರುತ್ತೇವೆ ಅದಕ್ಕೆ ನೋಟನ್ನು ಹಾಕಿಬಿಡಿ ಅಂತ ಇತ್ತು. ಸರಿ ಗಿಫ್ಟ್ ಬೇಡ ಅದೇ ಹಣವನ್ನು ಡಬ್ಬದಲ್ಲಿ ಹಾಕಿದರಾಯಿತು ಅಂತ ಹೋದೆವು. ಪಾರ್ಟಿಯ ಮದ್ಯೆ ಅವರು ಬಿಡುವುಮಾಡಿಕೊಂಡಾಗ ನಾನು ಕುತೂಹಲದಿಂದ ವಿಷಯ ಕೇಳಿದೆ. ಅದಕ್ಕೆ ಅವರ ಉತ್ತರ "ನಾವು ಭಾರತದಲ್ಲಿ ಬಡತನದಲ್ಲಿ ಓದಿದೆವು, ಆ ಸ್ಕೂಲಲ್ಲಿ ಯಾವ ಸೌಲಭ್ಯವೂ ಇರಲಿಲ್ಲ, ಈಗ ಪ್ರತೀ ವರ್ಷವೂ ನಾವು ಓದಿದ, ಇದ್ದ ಸ್ಥಳಕ್ಕೆ ಏನಾದರೊಂದು ಸಹಾಯ ಮಾಡುತ್ತೇವೆ, ಡಬ್ಬದಲ್ಲಿ ಶೇಖರಿಸಿದ ಹಣಕ್ಕೆ ಎರಡರಷ್ಟು ಹಣವನ್ನು ಸೇರಿಸಿ, ಒಂದು ಸಂಪೂರ್ಣ ಮೊತ್ತ ಮಾಡಿ, ಅಲ್ಲಿಗೆ ತಂದೆ ತಾಯಿಯ ಹೆಸರಲ್ಲಿ ದಾನಮಾಡುತ್ತೇವೆ. ಮಗಳಿಗೆ ಆರು ವರ್ಷ, ಮಗಳ ಮೊದಲ ಹುಟ್ಟುಹಬ್ಬದಿಂದ ಇದನ್ನು ಪ್ರಾರಂಭಿಸಿದ್ದೇವೆ". ನನ್ನ ಕಣ್ಣಲ್ಲಿ ನೀರು ಜಿನುಗಿದ್ದನ್ನು ಸದ್ಯ ಯಾರೂ ಗಮನಿಸಲಿಲ್ಲ. ನಾವು ಪಾರ್ಟಿ ಮುಗಿಸಿ ಹೋಗುವಾಗ ಇನ್ನೊಂದು ನೋಟನ್ನು ಜೊತೆಗೆ ಸೇರಿಸಿ ಡಬ್ಬಿಗೆ ಹಾಕುವುದನ್ನು ಮರೆಯಲಿಲ್ಲ. ಸ್ವಲ್ಪ ದಿನವಾದ ಮೇಲೆ ತಿಳಿಸಿದರು .
"ಒಂದು ಲಕ್ಷ ರೂಪಾಯನ್ನು ಕಳಿಸಿಕೊಟ್ಟಿದ್ದೇವೆ".
ಹಾಗಾಗಿ, ಸ್ನೇಹಿತರೆ ನಾವು ಉದ್ಯೋಗ ಅರಸಿಕೊಂಡು, ವಿಮಾನ ಏರಿಕೊಂಡು ಪರದೇಶಕ್ಕೆ ಬಂದಿರಬಹುದು. ಆದರೆ, ನಮ್ಮತನವನ್ನು ಬಿಟ್ಟಿಲ್ಲ. ಬಿಡುವುದೂ ಇಲ್ಲ. ಯಾವತ್ತೂ ತವರು ತವರೇ ಅಲ್ಲವೇ?

----------