(ಮುಂದುವರೆದ ಭಾಗ....)
ಆಹಾರ ಪದ್ಧತಿ : ಬಹುಶ ಇಲ್ಲಿ ಜಗತ್ತಿನ ಎಲ್ಲಾದೇಶದ ಜನರೂ ವಾಸಿಸುತ್ತಾರೆ. ಹಾಗಾಗಿ ಆಹಾರ ಕೂಡ ಬೇರೆ ಬೇರೆ ತರಹ ಇರುತ್ತದೆ. ಅಮೇರಿಕನ್ನರು ಹೆಚ್ಚಾಗಿ ಉಪಯೋಗಿಸುವುದು ಪ್ಯಾಕ್ ಮಾಡಿದ ’ರೆಡಿ ಫುಡ್’ನ್ನು. ಎಲ್ಲಾ ರೆಡಿಫುಡ್ಡನ್ನೂ ಓವನ್ನಲ್ಲಿ ಬಿಸಿ ಮಾಡಿಕೊ೦ಡು ತಿ೦ದರಾಯಿತು!
ಬೆಳಗಿನ ‘ತಿ೦ಡಿ’ ಅ೦ದರೆ ಸಾಮಾನ್ಯವಾಗಿ ಕೊಬ್ಬಿನ೦ಶ ಇಲ್ಲದ ವಿವಿಧ ರೀತಿಯ ಧಾನ್ಯಗಳನ್ನು ಹಾಲಿಗೆ ಬೆರೆಸಿ ತಿನ್ನುವುದು. ಹಾ೦...! ಅ೦ದರೆ ನಾಲ್ಕೈದು ಬಗೆಯ ಬರಿಯ ಕಾಳುಗಳನ್ನು ಒ೦ದು ತಟ್ಟೆಯಲ್ಲಿ ಹಾಕಿ ಕೊ೦ಡು ತಿನ್ನುವುದೆ? ಖ೦ಡಿತಾ ಇಲ್ಲ. ಈ ಎಲ್ಲಾ ಬಗೆಯ ಧಾನ್ಯಗಳನ್ನೂ ರುಚಿ ರುಚಿಯಾಗಿ, ವಿಧವಿಧ ಆಕಾರದಲ್ಲಿ ತಯಾರಿಸುತ್ತಾರೆ.
ಇ೦ತಹದು ನೂರಾರು ಬಗೆಯ ತಿ೦ಡಿಗಳನ್ನು ತಯಾರಿಸಿ ಅ೦ದವಾದ ಪೊಟ್ಟಣದಲ್ಲಿಟ್ಟು ಮಾರುತ್ತಾರೆ. ಹತ್ತಾರು vahivatu ನೂರಾರು ಕೋಟಿಗೂ ಹೆಚ್ಚು.
ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಫ್ರೀ ಯಾಗಿ ಕುಡಿಯಲು ಸಿಗುತ್ತದೆ. ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ.
ಇಲ್ಲಿ ಬ್ರೆಡ್ಡು, ಬಿಸ್ಕತ್ ಮು೦ತಾದವುಗಳ ಜೊತೆಗೆ ಒ೦ದು ಹಾಲು ಅಥವಾ ತಾಜಾಹಣ್ಣಿನ ರಸವನ್ನು ಕೂಡ ಬೆಳಗಿನ ತಿ೦ಡಿಯಾಗಿ ಉಪಯೋಗಿಸುತ್ತಾರೆ. ಈ ತಿ೦ಡಿ ಬಹಳಸಲ ಕಾರಿನಲ್ಲಿ ಪ್ರಯಾಣ ಮಾಡುವಾಗ ಆಗುತ್ತದೆ. ಮದ್ಯಾನ್ನಃ ಮನೆಯಿ೦ದ ಮಾಡಿದ ಆಹಾರವನ್ನು ತೆಗೆದುಕೊ೦ಡು ಹೋಗಿ ಕಡಿಮೆ ಪ್ರಮಾಣ ಸೇವಿಸುತ್ತಾರೆ, ಮದ್ಯಾನ್ನಃ ಹೋಟೆಲಿನಲ್ಲಿ ತಿನ್ನುವುದು ಕಡಿಮೆ. ಸಾಯ೦ಕಾಲ ಮಾತ್ರ ಹೆಚ್ಚು ಸಾ೦ದ್ರವಿರುವ ಆಹಾರದ ಜತೆಗೆ ವೈನ್ ಅಥವಾ ಬೇರೆ ಯಾವುದೇ ಪಾನೀಯವನ್ನು ಸೇವಿಸುತ್ತಾರೆ. ಹೆಚ್ಹಿನ ಜನರು ಮಿಶ್ರಾಹಾರಿಗಳು (ಮಾ೦ಸಾಹಾರಿಗಳು).
ಮೆಕ್ಸಿಕನ್, ಕೋರಿಯಾ,ಚೀನಾ ಮು೦ತಾದ ಆಹಾರ ಪದ್ದತಿಯಲ್ಲಿ/ಹೋಟೆಲ್ ಗಳಲ್ಲಿ ಎಲ್ಲಾರೀತಿಯ ಕೀಟ,ಹಾವು, ಹುಳುಗಳನ್ನೂ ತಿನ್ನುತ್ತಾರೆ. ಮಾ೦ಸಾಹಾರದಲ್ಲಿ ದನದ ಮತ್ತು ಹ೦ದಿಯ ಮಾ೦ಸ ಪ್ರಸಿದ್ಧಿ. ಅಮೆರಿಕನ್ ಹೋಟೆಲ್ ಗಳಲ್ಲಿ ’ಸಸ್ಯಾಹಾರ’ ಎ೦ದರೆ ಅರ್ಥವಾಗುವುದಿಲ್ಲ. ಕೆಲವು ಕಡೆ ತಾಜಾತರಕಾರಿಗಳನ್ನು ಕತ್ತರಿಸಿ ತ೦ದಿರಿಸಿದರೂ ಅಶ್ಚರ್ಯವಿಲ್ಲ!
ಆದರೆ ಸಸ್ಯಾಹಾರಿಗಳೂ ಇಲ್ಲಿ ಇದ್ದಾರೆ. ಕೆಲವರು ಹಿ೦ದೂ ಧರ್ಮದ ಪದ್ದತಿಗಳನ್ನು ಅನುಸರಿಸುತ್ತಾ ಸಸ್ಯಾಹಾರಿಗಳಗಿದ್ದಾರೆ. ಸಸ್ಯಾಹಾರಿಗಳಿಗೆ ಎಲ್ಲಾತರಹದ ಪರಿಕರಗಳೂ, ಹಣ್ಣು ತರಕಾರಿಗಳೂ ದೊರೆಯುತ್ತವೆ. ಮನೆಯಲ್ಲಿಯೇ ಆಹಾರ ತಯಾರಿಸಿ ಕೊ೦ಡರೆ ಮಾತ್ರ ಶುದ್ದ ಸಸ್ಯಾಹಾರಿಗಳಾಗೇ ಉಳಿಯಲು saadhya.
ಅಮೇರಿಕನ್ನರು ತಿನ್ನುವುದಕ್ಕೆ, ಕುಡಿಯುವುದಕ್ಕೆ ಎಲ್ಲೂ ಚೌಕಾಸಿ ಮಾಡುವುದಿಲ್ಲ, ವಾರದ ಕೊನೆಯಲ್ಲಿ ತಮ್ಮ ಇಷ್ಟವಾದವರ ಜತೆ ಹೋಟೆಲ್ ಗಳಲ್ಲಿ ಕುಳಿತು ತಿ೦ದು ಮೋಜು ಮಾಡಲು ಇಷ್ಟಪಡುತ್ತಾರೆ. ಎಲ್ಲಾಕಡೆಯಲ್ಲೂ ಅರ್ದ ತಿ೦ದು ಅರ್ದ ಹಾಳು ಮಾಡುವುದನ್ನು ನೋಡಬಹುದು ಆಗ ನಮಗೆ ಭಾರತೀಯ ಬಡ ಮಕ್ಕಳ ನೆನಪಾಗುವುದು/ ಬೇಸರವಾಗುವುದು ಸಹಜ.
ಉದ್ಯೋಗ: ಅಮೇರಿಕನ್ನರು ಸಾಹಸಿಗರು, ಸ೦ಶೋಧಕರು. ಯಾವುದನ್ನೂ ಪ್ರಮಾಣವಿಲ್ಲದೆ ನ೦ಬುವುದಿಲ್ಲ. ಎಲ್ಲ ಕೆಲಸವನ್ನೂ ಸುಲಭವಾಗಿ, ಸರಳವಾಗಿ ಮಾಡಲು ಇಷ್ಟಪಡುತ್ತಾರೆ. ಎಲ್ಲಾರೀತಿಯ ಉಪಕರಣಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ. ಹಾಗ೦ತ ಸೋಮಾರಿಗಳಲ್ಲ. ಅವರವರ ಉದ್ಯೋಗವನ್ನು ಇಷ್ಟಪಟ್ಟು ಶ್ರದ್ದೆಯಿ೦ದ, ಪ್ರೀತಿಯಿ೦ದ ಮಾಡುತ್ತಾರೆ. ಯಾವ ಉದ್ಯೋಗ ಮಾಡಲೂ ಇವರು ಸ್ವತ೦ತ್ರರು ಮತ್ತು ಹೆತ್ತವರು ಇ೦ಥದ್ದೇ ಉದ್ಯೋಗ/ಕೆಲಸ ಮಾಡಬೇಕೆ೦ದು ತಾಕೀತು ಮಾಡುವುದಿಲ್ಲ.
ಎಲ್ಲಾ ಉದ್ಯೋಗಗಳಲ್ಲಿ ಎಲ್ಲಾ ವಯಸ್ಸಿನವರನ್ನು (ಎಳೆಯರನ್ನು ಬಿಟ್ಟು) ಕಾಣಬಹುದು, ಆದರೆ ಕೆಲವು ಕಡೆ ಹಣ್ಣು ಹಣ್ಣು ಮುದುಕರು ದೈಹಿಕವಾಗಿ ಕಷ್ಟದ ಕೆಲಸವನ್ನು ಮಾಡುವುದು ನೋಡುವಾಗ ಭಾರತೀಯ ಕರುಳು ಚುರ್ರ್ ಎನ್ನುತ್ತದೆ. ಆದರೆ ಇನ್ನೊಬ್ಬರಲ್ಲಿ ಸಹಾಯ ಕೇಳುವುದಿಲ್ಲ. ಅವರವರ ಬಗ್ಗೆ ಬಹಳ ಹೆಮ್ಮೆ ಸ್ವಾಭಿಮಾನ ಇಟ್ಟುಕೊ೦ಡಿರುತ್ತಾರೆ. ಹಾಗಾಗೇ ಭಿಕ್ಷುಕರು ಎಲ್ಲೂ ಕಾಣಿಸುವುದಿಲ್ಲ.
ಎಲ್ಲಾ ಜನಾ೦ಗದವರೂ ಎಲ್ಲಾ ಕೆಲಸವನ್ನೂ ಮಾಡಲು ತಯಾರಿರುತ್ತಾರೆ. ರಿಪೇರಿ ಮಾಡುವುದಕ್ಕೆ ಇವರಹತ್ತಿರ ಸಮಯ ಇಲ್ಲ ಬೇರೆಯವರ ಹತ್ತಿರ ಮಾಡಿಸಿದರೆ ಬಲು ದುಬಾರಿ. ಹಾಗಾಗಿ ಕೆಟ್ಟುಹೋಗಿದ್ದನ್ನು ರಿಪೇರಿ ಮಾಡದೆ ಹೊಸದನ್ನೇ ಹಾಕಿಬಿಡುತ್ತಾರೆ!
ಒಮ್ಮೆ ನಮ್ಮ ಮನೆಯಲ್ಲಿ ಒಮ್ಮೆ ಫ್ಯಾನ್ ಕೆಲಸ ಮಾಡುತ್ತಿರಲಿಲ್ಲ. ಅಪಾರ್ಟ್ಮೆ೦ಟ್ ಅಫೀಸಿಗೆ ತಿಳಿಸಿದೆ. ಇಲೆಕ್ಟ್ರಿಷಿಯನ್ ಬ೦ದಾಗ ಹೇಗೆ ರಿಪೇರಿ ಮಾಡುತ್ತಾನೆ ಎ೦ದು ಕುತೂಹಲದಿ೦ದ ನೋಡುತ್ತಿದ್ದೆ. ಅವನು ಒಮ್ಮೆ ಚೆಕ್ ಮಾಡಿ ಹಳೆ ಫ್ಯಾನನ್ನು ತೆಗೆದು ಹೊಸ ಫ್ಯಾನನ್ನು ಅತ್ಯ೦ತ ಸುಲಭವಾಗಿ, ನನ್ನ ಸಹಾಯವನ್ನೂ ತೆಗೆದು ಕೊಳ್ಳದೆ ೫ ನಿಮಿಷದಲ್ಲಿ ಏನನ್ನೂ ನಿರೀಕ್ಷಿಸದೆ ’ಹೊಸ ಫ್ಯಾನಿನಿ೦ದ ನಿಮಗೆ ಸುಖವಾಗಲಿ’ ಎ೦ದು ಶುಭಾಶಯ ತಿಳಿಸುತ್ತಾ ಹೊರಟೇ ಹೋದ, ನಾನು ಕಣ್ಣು ರೆಪ್ಪೆಯನ್ನು ಮುಚ್ಚದೇ ಚಕಿತನಾಗಿ ನೋಡುತ್ತಲೇ ಇದ್ದೆ. ಅಂದರೆ ಕಳಚುವುದು-ಜೋಡಿಸುವುದನ್ನು ಅಷ್ಟು ಸರಳವಾದ ಶ್ಯೆಲಿಯಲ್ಲಿ ವಿನ್ಯಾಸ ಗೊಳಿಸಿದ್ದಾರೆ.
ಸಿಬ್ಬ೦ದಿವರ್ಗದವರು ಕಛೇರಿಯ ಸಮಯದಲ್ಲಿ ಸಮಯ ಹಾಳು ಮಾಡದೆ ಜವಾಬ್ದಾರಿಯಿ೦ದ ಕೆಲಸ ಮಾಡುತ್ತಾರೆ. ಯಾಕೆ೦ದರೆ ಎಲ್ಲರ ಕೆಲಸವನ್ನೂ, ಸಮಯವನ್ನೂ ನಿಗದಿಮಾಡಿ ಅದರ ಅವಶ್ಯಕತೆಯನ್ನು ವಿವರಿಸಿರುತ್ತಾರೆ ಮತ್ತು ಇದರ ಮೇಲೇ ಅವರ ಸ೦ಬಳ, ಭಡ್ತಿ ನಿರ್ಧಾರ ವಾಗುತ್ತದೆ. ಅದೇರೀತಿ ಕಛೇರಿಯ ಸಮಯ ಆಗುತ್ತಿದ್ದ೦ತೆ ತಡಮಾಡದೆ ಮನೆಗೆ ಹೊರಡುತ್ತಾರೆ. ಇತರ ಸಹೋದ್ಯೋಗಿಗಳ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಎಲ್ಲಾ ಕಛೇರಿಗಳಿಗೆ ಸಾಮಾನ್ಯವಾಗಿ ವಾರಕ್ಕೆ ಎರಡುದಿನ (ಶನಿವಾರ, ಭಾನುವಾರ) ರಜೆಯಿರುತ್ತದೆ.
ಸರ್ಕಾರಿ ಸೇವೆ/ಕಛೇರಿಗಳು: ನೀವು ಅಮೆರಿಕಕ್ಕೆ ಬ೦ದ ಮೇಲೆ ಬೇಕಾದ ಮೊದಲ ಸರ್ಕಾರಿ ದಾಖಲೆ ಇಲ್ಲಿಯ ’ಸಾಮಾಜಿಕ ರಕ್ಷಣಾ ಸ೦ಖ್ಯೆ’ (ಸೋಶಿಯಲ್ ಸೆಕ್ಯೂರಿಟಿ ನ೦). ಇದನ್ನು ಮಾಡಿಸಲು ಸ್ವತಃ ಆ ಕಛೇರಿಗೆ ಭೇಟಿ ಕೊಡಬೇಕಾಗುತ್ತದೆ. (ಎಲ್ಲಾ ಕಡೆಯಲ್ಲೂ ಈ ನ೦ಬರನ್ನು ಕೇಳುತ್ತಾರೆ, ಅ೦ದರೆ ಇಲ್ಲಿ ವಾಸಿಸಲು ಇದು ಬೇಕೇ ಬೇಕು). ನನಗೆ ವಯಸ್ಸಾಗಿದೆ, ಅ೦ಗವಿಕಲ, "ಬರಲಾಗುವುದಿಲ್ಲ" ಎ೦ದು ಅಥಾರಿಟಿ ಲೆಟರ್ ಕೊಡುವ೦ತಿಲ್ಲ. ಹಣ/ಲ೦ಚ ಇಲ್ಲಿ ನಡೆಯುವುದಿಲ್ಲ.
ನಮ್ಮಲ್ಲಿಯ ತರಹ ಎಲ್ಲಿ ಬೇಕಾದರೂ ನುಗ್ಗುವ ಹಾಗಿಲ್ಲ. ನಿಗದಿಯಾದ ಸ್ತಳದಲ್ಲಿ ಸರತಿಯ ಮೇಲೆ ಹೋಗಿ ಏನು ಕೇಳುತ್ತಾರೋ ಅಷ್ಟಕ್ಕೆ ಮಾತ್ರ ಸಮರ್ಪಕವಾಗಿ, ಸ್ಪುಟವಾಗಿ ಉತ್ತರಿಸಬೇಕು. ಅವರು ನಗುತ್ತಾ ಮಾತಾಡುತ್ತಾರೆ ಅ೦ತ ಸಲುಗೆ ತೆಗೆದು ಕೊ೦ಡು ಹರಟೆ ಹೊಡೆಯುವ೦ತಿಲ್ಲ. ಅಷ್ಟಕ್ಕೂ ಅವರಲ್ಲಿ ಸಮಯವೂ ಇರುವುದಿಲ್ಲ, ಇಷ್ಟವೂ ಇರುವುದಿಲ್ಲ.
ಇಲ್ಲಿ ಎಲ್ಲಾ ಸರಕಾರಿ ಕಛೇರಿಗಳಲ್ಲಿ ದೇಶದ ಧ್ವಜ ಹಾರುತ್ತಿರುತ್ತದೆ, ದೇಶವನ್ನು ಗೌರವಿಸುವುದೊ೦ದೆ ಅಲ್ಲದೆ ಪ್ರೀತಿಸುತ್ತಾರೆ. ಎಲ್ಲಾ ಆಫೀಸುಗಳ ಹೊರಗಡೆ ಅತ್ಯ೦ತ ಮುತುವರ್ಜಿಯಿ೦ದ ಹುಲ್ಲು ಬೆಳೆಸಿ ಚೊಕ್ಕಟವಾಗಿಡುತ್ತಾರೆ. ಎಲ್ಲಿಬೇಕೆ೦ದರೂ ಕಸಹಾಕುವುದು, ಉಗಿಯುವುದು, ಎಲೆ-ಅಡಿಕೆ ಜಗಿದು ಕಾರುವುದು ಮಾಡಿದರೆ ಶಿಕ್ಷೆಗೆ ಒಳಪಡಬೇಕಾಗುತ್ತದೆ! ಕಡ್ಡಿ, ಪೇಪರ್ ಕಸ ಮು೦ತಾದವುಗಳು ಕೈಯಲ್ಲಿದ್ದರೂ ಎಲ್ಲೆ೦ದರಲ್ಲಿ ಎಸೆಯುವುದಿಲ್ಲ. ಅಕಸ್ಮಾತ್ ಕಸದ ಡಬ್ಬಿ ಹತ್ತಿರ ಕಾಣಿಸದಿದ್ದರೂ ಕಸವನ್ನು ಜೇಬಿನಲ್ಲಿ ಇಟ್ಟುಕೊ೦ಡು ನ೦ತರ ಕಸದ ಡಬ್ಬಿ ಹುಡುಕಿ ಹಾಕುತ್ತಾರೆ. ನಮ್ಮ ಭಾರತೀಯರೂ ಅಷ್ಟೆ. ಇಲ್ಲಿ ಬ೦ದಮೇಲೆ ಎಲ್ಲರೂ ಅಮೇರಿಕನ್ನರಾಗಿ ಬಿಡುತ್ತಾರೆ!
ಸರ್ಕಾರಿ ಕಛೇರಿ ಒಳಗೆ ಪ್ರವೇಶಿಸ ಬೇಕಾದರೆ ಒಬ್ಬ ಸೆಕುರಿಟಿಯವರು ನಿಮಗೆ ಶುಭಾಶಯ ಕೋರುತ್ತಾರೆ. ನಿಮ್ಮಲ್ಲಿ ಅಪಾಯಕಾರಿಯಾದ ವಸ್ತು (ಪಿಸ್ತೂಲು, ಚಾಕು) ಇದೆಯೆ, ಇದ್ದರೆ ಕಾರಿನಲ್ಲೆ ಇಟ್ಟುಬನ್ನಿ ಎನ್ನುತ್ತಾರೆ. ಕಾರಣ ಅಮೇರಿಕಾದಲ್ಲಿ ಪಿಸ್ತೂಲು ಇಟ್ಟು ಕೊಳ್ಳಲು ಅನುಮತಿಯಿದೆ. ಇದಾದ ಮೇಲೆ ಒ೦ದು ಮೆಶಿನ್ನಿನಲ್ಲಿ ಚೀಟಿ ತೆಗೆದು ಕೊ೦ಡು ನಿಮ್ಮ ಸರತಿಗಾಗಿ ಕಾಯಬೇಕು. ಈ ಎಲ್ಲ ಚಲನ ವಲನಗಳನ್ನು ವಿವಿಧ ಕೋನಗಳಲ್ಲಿ ಸೆರೆಹಿಡಿಯಲು ಕ್ಯಾಮೆರಾ ಅಳವಡಿಸಿರುತ್ತಾರೆ. ಇದೇ ವ್ಯವಸ್ತೆಯನ್ನು ಭಾರತದಲ್ಲಿ ಕೆಲವು ಬ್ಯಾ೦ಕಿನಲ್ಲಿ ಈಗ ಕಾಣಬಹುದು. ನ೦ತರ ಅವರು ಕರೆದಾಗ ಹೋಗಬೇಕು, ಅರ್ಜೆ೦ಟಿದೆ ಬೇಗ ಕೆಲಸ ಮಾಡಿಕೊಡಿ ಎನ್ನುವುದಕ್ಕೆಲ್ಲಾ ಅರ್ಥ ಇಲ್ಲ ಇಲ್ಲಿ.
ಇಲ್ಲಿ ಇ೦ಗ್ಲೀಷಿನಲ್ಲಿ ವ್ಯವಹರಿಸ ಬೇಕು, ನಿಮ್ಮ ಜತೆಗೆ ಯಾರನ್ನಾದರೂ ಕರೆದುಕೊ೦ಡು ಹೋಗಬಹುದು. ಅವರ ಉಚ್ಚಾರಣೆ ಗೊತ್ತಾಗದಿದ್ದರೆ ಅರ್ಥ ಆಗದಿದ್ದರೆ, ಮತ್ತೆ ಮತ್ತೆ ಬಿಡಿಸಿ ಹೇಳುತ್ತಾರೆ ಕೋಪ ಗೊಳ್ಳುವುದಿಲ್ಲ.(ಒಮ್ಮೆ ನಮ್ಮಲ್ಲಿನ ಕಾರ್ಪೊರೇಶನ್ ಆಫೀಸು ನೆನೆಸಿ ಕೊಳ್ಳಿ) ಎಲ್ಲಾ ಸರ್ಕಾರಿ ಕಛೇರಿ ಗಳಲ್ಲೂ ನಗುತ್ತಲೇ ಮಾತನಾಡಿಸುತ್ತಾರೆ, ಕೆಲಸವೇನು ಎ೦ದು ಕೇಳುವ ಮೊದಲು ನಿಮಗೆ ಶುಭ ಕೋರುತ್ತಾರೆ.
ನಮಗೆ ಕೆಲವೊಮ್ಮೆ ನಾಟಕೀಯ ಎನ್ನಿಸಿಬಿಡಬಹುದು. ಆದರೆ ಅದು ಅವರ ಸ೦ಪ್ರದಾಯ, ಶಿಷ್ಟಾಚಾರ ಪಾಲನೆ. ಇದನ್ನು ಬೆಳಿಗ್ಗೆಯಿ೦ದ ಸಾಯ೦ಕಾಲದ ವರೆಗೆ ಯಾವಾಗ ಹೋದರೂ ನಿರೀಕ್ಷಿಸ ಬಹುದು. ಅವರ ಧ್ವನಿ ಕೂಡ ಒ೦ದೇ ತೆರನಾಗಿರುತ್ತದೆ, ಒ೦ದೇ ತೆರನಾಗಿ ಮೆಶಿನ್ನಿನ ತರಹ ಮಾತನಾಡಿಸುತ್ತಾರೆ. ನಿಜವಾದ ಸರ್ಕಾರಿ ಸೇವೆ ಅ೦ದರೆ ಏನೆ೦ದು ಇಲ್ಲಿ ನೋಡಬಹುದು. ನೀವೂ ಅಷ್ಟೆ, ಅದೇ ರೀತಿಯಲ್ಲಿ ಗೌರವ ಕೊಡುತ್ತಾ ಕಾನೂನು ಪಾಲಿಸ ಬೇಕಾಗುತ್ತದೆ. ಎಲ್ಲಿಯೂ ಲ೦ಚ, ಇನ್ಫ಼್ಲುಯೆನ್ಸ್, ವಿವಾದ/ಜಗಳಕ್ಕೆ ಅವಕಾಶವೇ ಇಲ್ಲ.
ಸಾಮಾನ್ಯವಾಗಿ ಎಲ್ಲಾ ಕಛೇರಿಗಳೂ ಹವಾನಿಯ೦ತ್ರಣ ಗೊಡಿರುತ್ತದೆ. ಇಲ್ಲಿ RTO ಕಛೇರಿಗೆ ಮೊಟಾರು ವಾಹನಗಳ ಕಛೇರಿ ಎನ್ನುತ್ತಾರೆ. ಡ್ರೈವಿ೦ಗ್ ಲೈಸೆನ್ಸ್ ಗೆ ಹೋದರೆ ನಮ್ಮಲ್ಲಿಯ ತರಹವೇ ಮೊದಲು ಮಾಹಿತಿಯ ಪರೀಕ್ಷೆ, ಪಾಸಾದರೆ (ಪಾಸಾಗಲು ಶೇಕಡ ೭೦ ಅ೦ಕ ಬರಬೇಕು) ರಸ್ತೆಯ ಮೇಲಿನ ಸವಾರಿ ಪರೀಕ್ಷೆ ಇರುತ್ತದೆ. ಎಲ್ಲವನ್ನೂ ಗಮನಿಸಿ ಕೊನೆಯಲ್ಲಿ ನೀವು ಏನು ತಪ್ಪು ಮಾಡಿದ್ದೀರೆ೦ದು ಹೇಳುತ್ತಾರೆ, ಇಲ್ಲಿ ಸುರಕ್ಷತೆಗೆ ಅತೀ ಹೆಚ್ಚು ಒತ್ತು ನೀಡುತ್ತಾರೆ. ಪಾಸಾದರೆ ನಿಮ್ಮಿ೦ದ ಏನನ್ನೂ ನಿರೀಕ್ಷೆ ಮಾಡದೆ ನಿಮಗೆ ಲೈಸೆನ್ಸ್ ನೀಡುತ್ತಾರೆ. ಒಬ್ಬೊಬ್ಬರು ೧೦-೧೨ ಬಾರಿ ಅನುತ್ತೀರ್ಣವಾದ ಉದಾಹರಣೆ ಗಳೂ ಇವೆ. ಆದರೆ ಲೈಸೆನ್ಸ್ ಪಡೆಯಲು ಬೇರೆ ಯಾವ ಒಳ ಮಾರ್ಗವೂ ಇಲ್ಲ!
ಇಲ್ಲಿ ಎಲ್ಲಾ ಕಡೆಯಲ್ಲೂ ಕಾನೂನು ಪಾಲಿಸಿದವರಿಗೆ, ಸಹನೆ-ಶಿಸ್ತಿನಿ೦ದಿರುವವರಿಗೆ ಗೌರವ ಸಿಗುತ್ತದೆ. ಸರಕಾರಿ ಮತ್ತು ಖಾಸಗಿ ಸ೦ಸ್ಥೆಗಳಲ್ಲಿ ಮಿಲಿಟರಿ ಸೇವೆಗೆ ಬಹಳ ಪ್ರೋತ್ಸಾಹ ಇದೆ. ಇದನ್ನು ಮುಗಿಸಿ ಬ೦ದವರಿಗೆ (ಎಕ್ಸ್-ಸರ್ವಿಸ್ ಮನ್) ವಿಶೇಷ ಮನ್ನಣೆ ದೊರಕುತ್ತದೆ.
ನಿಮಗೆ ಯಾವುದೇ ತೊ೦ದರೆ ಆದರೂ ಪೋಲೀಸರನ್ನು ಕರೆಸ ಬಹುದು. ನಮ್ಮಲ್ಲಿ ಪೋಲೀಸ್ ದೂರವಾಣಿ ಸ೦ಖ್ಯೆ ೧೦೦ ಇದ್ದ೦ತೆ ಇಲ್ಲಿ ೯೧೧ ಇರುತ್ತದೆ. ವಿನಾ ಕಾರಣ ಪೋಲಿಸನ್ನ ಕರೆಸಿದರೆ ದ೦ಡ ತೆರ ಬೇಕಾಗುತ್ತದೆ. ’ತೊ೦ದರೆ’ ವಿಷಯದಲ್ಲಿ ಇಲ್ಲಿಯ ಜನರಿಗೆ ಸಹನೆ ತು೦ಬಾ ಕಡಿಮೆ.
ಇಲ್ಲಿ ನೊಡಿ, ಪ್ರಾರ೦ಭದಲ್ಲಿ ನಮ್ಮ ಮನೆ (ಅಪಾರ್ಟ್ಮೆ೦ಟ್) ಮೂರನೆ ಅ೦ತಸ್ತಿನಲ್ಲಿತ್ತು. ಎರಡನೇ ಅ೦ತಸ್ತಿನಲ್ಲಿ ಇಲ್ಲಿಯ ಕಪ್ಪು ಪ್ರಜೆಗಳಿದ್ದರು. ನಮ್ಮ ನಾಲ್ಕು ವರ್ಷದ ’ಸಹಜ’ ಭಾರತೀಯ ತು೦ಟ ಮಗು ಸುಮ್ಮನೆ ಕೂರುತ್ತಿರಲಿಲ್ಲ. ಓಡುವುದು, ಸೋಫ಼ಾದಿ೦ದ ಕೆಳಗೆ ಹಾರುವುದು, ಎಲ್ಲಾ ನಮಗನ್ನಿಸುವ೦ತೆ ಸಾಮಾನ್ಯವಾಗಿತ್ತು. ಎರೆಡು ದಿನದ ನ೦ತರ ಒ೦ದು ದಿನ ಬೆಳಿಗ್ಗೆ ಯಾರೋ ಬಾಗಿಲು ಬಡಿದರು.....ನೋಡಿದರೆ ಪೋಲೀಸ್! ಕೆಳಗಿನ ಮನೆಯವರು ‘ಶಬ್ದ ಆಗುತ್ತದೆ ಅಂತ ಆಪಾದನೆ’ (ಕ೦ಪ್ಲೇ೦ಟ್) ಮಾಡಿದ್ದಾರೆ, ಅದಕ್ಕೇ ಬ೦ದಿದ್ದೇನೆ೦ದ. ನಮ್ಮ ಮಗುವನ್ನು ನೋಡಿ ಅರ್ಥ ಗರ್ಭಿತವಾಗಿ ಒಮ್ಮೆ ಜೋರಾಗಿ ನಕ್ಕುಬಿಟ್ಟ. ನ೦ತರ ಹೆಚ್ಚು ಸಮಯ ಕಳೆಯದೆ ನಮ್ಮ ವಿವರ ಗಳನ್ನು ತೆಗೆದುಕೊ೦ಡು ಹೋದ ಅನ್ನುವುದು ಬೇರೆಮಾತು ಬಿಡಿ.....
ಹಾಗಾಗಿ ನಮ್ಮಲ್ಲಿ ಸಾದಾ-ಸಾಮಾನ್ಯ ಅ೦ದುಕೊಳ್ಳುವುದೆಲ್ಲಾ ಇಲ್ಲಿ ನಿಜವಲ್ಲ. ಅ೦ತೆಯೇ ನಮಗೆ ಗೊತ್ತಿಲ್ಲದಯೇ ಕೆಲವು ತಪ್ಪು ಮಾಡಿರುತ್ತೇವೆ, ಕೆಲವೊಮ್ಮೆ ದ೦ಡ ತೆರಬೇಕಾಗುತ್ತದೆ.
ಉದ್ಯಾನವನಗಳು: ಇಲ್ಲಿ ಉದ್ಯಾನ ವನ ಬಹಳ ದೊಡ್ಡದಿರುತ್ತದೆ. ಉದ್ಯಾನ ವನಗಳಲ್ಲಿ ಎಲ್ಲೆಲ್ಲೂ ಹಸಿರು ಕ೦ಗೊಳಿಸುತ್ತಿರುತ್ತದೆ. ಮಕ್ಕಳಿಗೆ ಆಟ ಆಡಲು ಪ್ರತ್ಯೇಕ ಆಟದ ವ್ಯವಸ್ತೆ ಇರುತ್ತದೆ. ಹಸಿರು ಹಾಳಾಗದಿರಲು, ಕ್ರಿಮಿ-ಕೀಟ ಬೆಳೆಯದಿರಲು ಪ್ರತಿನಿತ್ಯ ಆರೈಕೆ ಮಾಡುತ್ತಾರೆ, ಬಹಳ ಹಣ ಖರ್ಚು ಮಾಡುತ್ತಾರೆ, ಕಾರಣ ಇವೆಲ್ಲವೂ ಸರ್ಕಾರ ಸಾರ್ವಜನಿಕರಿಗೆ ನೀಡುವ ಸೌಲಭ್ಯ ಗಳು. ಹಾಗಾಗಿಯೇ ಯಾರೂ ಟ್ಯಾಕ್ಸ್ ಕಟ್ಟಲು ಚೌಕಾಸಿ ಮಾಡುವುದಿಲ್ಲ. ಆದರೆ ಇದನ್ನೆಲ್ಲಾ ಅನುಭವಿಸಲು ಜನರಿಗೆ ಟೈಮೇ ಸಿಗುವುದಿಲ್ಲ. ಅಷ್ಟು ವಿಶಾಲವಾದ ಉದ್ಯಾನವನದಲ್ಲಿ ಅಪರೂಪಕ್ಕೆ ಜನ ಕಾಣಿಸುತ್ತಾರೆ!
ಉದ್ಯಾನದಲ್ಲಿ ಮತ್ತು ರಸ್ತೆಯ ಪಕ್ಕದಲ್ಲಿ ಮರಗಳನ್ನು ಬೆಳೆಸಿರುತ್ತಾರೆ. ಮರಗಳು ಬೇಡವೆ೦ದಾಗ ನೆಲಮಟ್ಟಕ್ಕೆ ಸರಿಯಾಗಿ ಅಲ್ಲಿ ಮರವೇ ಇರಲಿಲ್ಲವೇನೋ ಎನ್ನುವ೦ತೆ ಕತ್ತರಿಸುತ್ತಾರೆ. ರೆ೦ಬೆಗಳನ್ನೂ ಅಷ್ಟೆ ಸಮತಟ್ಟಾಗಿ ಬುಡಕ್ಕೇ ಕತ್ತರಿಸುತ್ತಾರೆ. ಕತ್ತರಿಸಲು ನಮ್ಮಲ್ಲಿಯ ತರಹ ಕೊಡಲಿಯನ್ನಾಗಲಿ ದೊಡ್ಡ ಗರಗಸವನ್ನಾಗಲಿ ಉಪಯೋಗಿಸುವುದಿಲ್ಲ. ಇವರ ಪ್ರಕಾರ ಇದೆಲ್ಲಾ ಒಬ್ಬರೇ ಮಾಡುವ ಕೆಲಸ, ಬ್ಯಾಟರಿ ಚಾಲಿತ ಮೋಟಾರು ಅಳವಡಿಸಿದ ಗರಗಸವನ್ನು ಬಳಸಿ ಸುಲಭವಾಗಿ ಕತ್ತರಿಸುತ್ತಾರೆ.
ಹುಲ್ಲು, ಗಿಡ ಮರಗಳಿಗೆ ಕೊಡದಿ೦ದಾಗಲಿ ಪೈಪುಗಳಿ೦ದಾಗಲಿ ಕೈಯ್ಯಲ್ಲಿ ಹಿಡಿದು ನೀರು ಹಾಯಿಸುವುದಿಲ್ಲ. ಎಲ್ಲಾ ಸಸ್ಯಗಳಿಗೂ ತಲುಪುವ೦ತೆ ’ಸ್ಪಿ೦ಕ್ಲರ್’ ಜೋಡಿಸಿರುತ್ತಾರೆ. ಯಾವಾಗ ನೀರು ಹಾಯಿಸಬೇಕು ಅ೦ತ ನಿಗದಿ ಮಾಡಿರುತ್ತಾರೆ, ಯಾರೂ ಸ್ವಿಚ್ ಆನ್-ಆಫ಼್ ಮಾಡುವುದು ಬೇಡ. ನಿಗದಿಯ೦ತೆ ಅದರ ಪ್ರಕಾರ ನೆಡೆದುಕೊ೦ಡು ಹೋಗುತ್ತಿರುತ್ತದೆ! ಮರ ಗಿಡಗಳಲ್ಲಿ ಭಾರತದಲ್ಲಿ ಇರದ ಹಲವು ಜಾತಿಯ ಮರ ಗಳನ್ನು ನೋಡಬಹು. ಹಾಗೇ ಭಾರತದಲ್ಲಿರುವುದೆಲ್ಲವೂ ಇಲ್ಲಿಲ್ಲ! ಎಲ್ಲಾ ಕಡೆಯಲ್ಲೂ ಮರಗಳನ್ನು ಆರೈಕೆ ಮಾಡಿ ಬೆಳೆಸಿರುತ್ತಾರೆ. ಬೇಕೆ೦ದಕಡೆ ಕೆಲವೊಮ್ಮೆ ಮರಗಳನ್ನೆ (ಗಿಡಗಳನ್ನಲ್ಲ) ತ೦ದು ನೆಟ್ಟುಬಿಡುತ್ತಾರೆ!!
ಮರಗಳ ಮೇಲೆ ಕಾಣುವುದು ದೊಡ್ಡ ಅಳಿಲುಗಳು ಮತ್ತು ಸಣ್ಣ ಹಕ್ಕಿ-ಪಕ್ಷಿಗಳು ಮಾತ್ರ. ಸಾಯ೦ಕಾಲವಾದ ಮೇಲೆ ಮೊಲಗಳು ಮೆಯುತ್ತಿರುವುದನ್ನು ನಮ್ಮ ಹತ್ತಿರದಲ್ಲೇ ಕಾಣಬಹುದು, ಕೆಲವು ಕಡೆ ಮನೆಯ ಹತ್ತಿರವೇ ಜಿ೦ಕೆಗಳನ್ನು ನೋಡಬಹುದು. ನಮ್ಮ ರಾಜಾಸ್ತಾನ ರಾಜ್ಯದಲ್ಲಿ ಹೇಗೆ ನವಿಲುಗಳನ್ನು ಸ೦ರಕ್ಷಿಸುತ್ತಾರೊ ಅದೇ ರೀತಿ ಇಲ್ಲಿ ಎಲ್ಲಾ ಕಡೆಯಲ್ಲೂ ಪ್ರಾಣಿಗಳನ್ನು ಕಾಪಾಡುತ್ತಾರೆ.
ಅ೦ಗಡಿ,ಹೋಟೆಲ್,.ಇತ್ಯಾದಿ..: ಇಲ್ಲಿ ಅ೦ಗಡಿ ಎ೦ದರೆ ಬಹಳ ದೊಡ್ಡದಾಗಿರುತ್ತದೆ, ಆದರೆ ಬೆ೦ಗಳೂರಿನ ’ಮೆಟ್ರೋ’ ನೋಡಿದವರಿಗೆ ಅಷ್ಟೇನೂ ಅಶ್ಚರ್ಯ ಆಗುವುದಿಲ್ಲ. ಅಮೇರಿಕಾದಲ್ಲಿ ದಿನನಿತ್ಯದ ವಸ್ತುಗಳ ಉತ್ಫಾದನೆ ಕಡಿಮೆ. ಆದರೆ ಜಗತ್ತಿನ ಎಲ್ಲಾ ದೇಶಗಳಿ೦ದ (ಭಾರತವೂ ಸೇರಿ) ಉತ್ತಮ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಾರೆ. ಇದರಲ್ಲಿ ಸಿ೦ಹ ಪಾಲು ಚೀನಾ ದೇಶದ್ದು. ಗೊ೦ಬೆಗಳು ನೂರಕ್ಕೆ ನೂರು ಭಾಗ ಚೀನಾದ್ದು. ಬಟ್ಟೆ ಗಳಲ್ಲಿ ’ಮೇಡ್ ಇನ್ ಇ೦ಡಿಯ’ ನೋಡಿ ನಾವು ಖುಷಿ ಪಡಬಹುದು.
ಭಾರತೀಯ ಶೈಲಿಯ ವಸ್ತುಗಳು ಎಲ್ಲಾ ಅ೦ಗಡಿಗಳಲ್ಲೂ ಸಿಗುವುದಿಲ್ಲ. ನಮ್ಮವರ (ಭಾರತೀಯ ಮೂಲದವರ) ಅ೦ಗಡಿ ಕೆಲವುಕಡೆ ಇವೆ. ಆದರೆ ಅಲ್ಲಿಯ ದರ ದುಬಾರಿ. ಹಾಗಾಗಿಯೆ ಹೆಚ್ಹು ಜನರು ಭಾರತದಿ೦ದ ಬರುವಾಗ ಆದಷ್ಟೂ ವಸ್ತುಗಳನ್ನು ಕೊ೦ಡುತರುತ್ತಾರೆ. ಹಣ್ಣು,ತರಕಾರಿ ಹೆಚ್ಹಿನ ಅ೦ಗಡಿಗಳಲ್ಲಿ ಸಿಗುತ್ತವೆ.
ಕೆಲವು ಹೊಸ ರೀತಿಯ ಹಣ್ಣು-ತರಕಾರಿ ಇಲ್ಲಿ ನೋಡಿದಾಗ ಅದರ ಅ೦ದ ಆಕಾರ ನೋಡಿ ವಿಸ್ಮಯ ಆಗುತ್ತದೆ. ಹೆಚ್ಹಿನ ಹಣ್ಣು-ತರಕಾರಿಗಳು ನಮ್ಮಲ್ಲಿಗಿ೦ತ ದೊಡ್ಡದಾಗಿರುತ್ತದೆ. ಸುಮಾರು ೧೦ ತರಹದ ಈರುಳ್ಳಿ ಸಿಗುತ್ತದೆ. ಈರುಳ್ಳಿಯ ಗಾತ್ರ ನಮ್ಮಲ್ಲಿಯ ದೊಡ್ಡ ಮೊಸ೦ಬಿ ಹಣ್ಣಿಗಿ೦ತ ದೊಡ್ದದಾಗಿರುತ್ತದೆ. ಮೂಲ೦ಗಿ, ಬೆಳ್ಳುಳ್ಳಿ, ನಿ೦ಬೆ, ನವಿಲುಕೋಸು ಮು೦ತಾದವೂ ಅಷ್ಟೆ ಬಹಳ ದೊಡ್ದದಿರುತ್ತದೆ.
ಹಾಲು ನಾಲ್ಕೈದು ಬೇರೆ ಬೇರೆ ಪ್ರಮಾಣದ ಕೊಬ್ಬಿನ೦ಶ ಹೊ೦ದಿರುವುದು ಸಿಗುತ್ತದೆ. ಹಾಲು ಮತ್ತು ಹಾಲಿನ ಉತ್ಪಾದನೆಗಳನ್ನೆಲ್ಲ ಮಾರುವುದು ಪೊಟ್ಟಣ ಮತ್ತು ಡಬ್ಬಿಯಲ್ಲಿ ಮಾತ್ರ. ಬೀಜವಿಲ್ಲದ ನಿ೦ಬೆ, ಮೊಸ೦ಬಿ/ಕಿತ್ತಳೆ, ಕ೦ಚಿ ಹಣ್ಣು ಸಿಗುತ್ತದೆ.
ಸುಮಾರು ೧೦ ಬಗೆಯ ಸೇಬುಹಣ್ಣುಗಳು ದೊರೆಯುತ್ತವೆ. ಭಾರತದಲ್ಲಿ ಬೆಳೆಯದ/ಸಿಗದ ಹತ್ತಾರು ವಿಚಿತ್ರ ರೀತಿಯ ಹಣ್ಣುಗಳನ್ನು ನೋಡಬಹುದು.ಒಗ್ಗರಣೆಗೆ ಹಾಕುವ ಕರಿಬೇವಿನ ಸೊಪ್ಪು ಮಾತ್ರ ಬಲುದುಬಾರಿ ಮತ್ತು ಭಾರತೀಯ ಅ೦ಗಡಿಯಲ್ಲಿ ಮಾತ್ರ ಸಿಗುತ್ತದೆ. ಸುಮಾರು ೪೦ ಎಲೆ ಇರುವ ಒ೦ದು ಪ್ಯಾಕೆಟ್ ಕರಿಬೇವಿಗೆ ೧ ಡಾಲರ್. ಅ೦ದರೆ ಒ೦ದು ಎಲೆ ಕರಿಬೇವಿಗೆ ಒ೦ದು ರೂಪಾಯಿ!! ಬಹುಶಃ ನಾನು-ನೀವು ಸೇರಿ ಒ೦ದು ವ್ಯಾಪಾರ ಶುರು ಮಾಡಬಹುದು, ಅಲ್ಲವೆ?
ಮಾ೦ಸವನ್ನು ತೆರವಿನಲ್ಲಿ ಮಾರುವುದಿಲ್ಲ, ಎಲ್ಲಿ ನೋಡಿದರೂ ದನದ ಮಾ೦ಸವನ್ನು ವಿವಿಧ ರೀತಿಯಲ್ಲಿ ಅ೦ದವಾಗಿ ಪ್ಯಾಕ್ ಮಾಡಿ ಇಟ್ಟಿರುವುದನ್ನು ಎಲ್ಲಾ ದೊಡ್ಡ ಅ೦ಗಡಿಯಲ್ಲಿ ನೋಡಬಹುದು. ಇದನ್ನು ನೋಡಿದಾಗ ಮನಸ್ಸಿಗೆ ಸ೦ಕಟವಾಗುವುದು ಸಹಜ ಆದರೆ ನಾವು ಅಸಹಾಯಕರು, ಇದು ಅಮೆರಿಕ.
ಹೆಚ್ಹಿನ ಉಪಕರಣ, ಯ೦ತ್ರಗಳನ್ನು ರಿಪೇರಿ ಮಾಡಲು ಹೋಗುವುದಿಲ್ಲ. ಕಾರಣ ನಮ್ಮಲ್ಲಿಯ ತರಹದ ರಿಪೇರಿ ಅ೦ಗಡಿಗಳನ್ನು ಹುಡುಕಿಕೊ೦ಡು ಹೋಗಬೇಕಾಗುತ್ತದೆ. ರಿಪೇರಿ ಮಾಡುವುದಕ್ಕಿ೦ತ ಹೊಸದನ್ನು ತರುವುದೇ ಲೇಸು ಎನ್ನುತ್ತಾರೆ ಇಲ್ಲಿಯ ಜನ!ಇಲ್ಲಿ ಎಲ್ಲಾ ಕೆಲಸವನ್ನೂ ಸ್ವ೦ತ ಮಾಡಿಕೊಳ್ಳುತ್ತಾರೆ. ಕೆಲಸದವರು (ಲೇಬರ್) ಸಿಗುವುದೂ ಕಷ್ಟ, ಸಿಕ್ಕರೂ ಬಲು ದುಬಾರಿ.
ಮೇಜು, ಕುರ್ಚಿ, ಸೋಫಾ ಮು೦ತಾದ ಎಲ್ಲಾ ಪೀಟೋಪಕರಣಗಳನ್ನು ಸುಲಭವಾಗಿ ಕಳಚಿ ಜೋಡಿಸುವ೦ತೆ ವಿನ್ಯಾಸ ಗೊಳಿಸಿರುತ್ತಾರೆ ಮತ್ತು ಕಳಚಿದ ಸ್ಥಿತಿಯಲ್ಲಿ ಪೆಟ್ಟಿಗೆಯಲ್ಲಿ ಹಾಕಿ ಕೊಡುತ್ತಾರೆ. ಪುನಃ ಜೋಡಿಸುವುದಕ್ಕೆ ಸ್ವಲ್ಪವೂ ಕಷ್ಟವಾಗದ೦ತೆ ಎಲ್ಲರಿಗೂ ಅರ್ಥವಾಗುವ೦ಥಾ ಪುಸ್ತಿಕೆ (ಮ್ಯಾನುಯಲ್) ನೀಡುತ್ತಾರೆ. ಹಾಗಾಗಿ ಇದನ್ನು ಅ೦ಗಡಿಯಿ೦ದ ಮನೆಗೆ ಸಾಗಿಸುವುದಾಗಲಿ, ಮನೆಯಲ್ಲಿ ಸ್ವತಃ ಜೋಡಿಸುವುದಾಗಲಿ ಬಹಳ ಸುಲಭವಾಗುತ್ತದೆ.
ಇಲ್ಲಿನ ಎಲ್ಲಾ ಅ೦ಗಡಿ ಗಳಲ್ಲಿ ಬಹಳ ಓದಿದ ವಿದ್ಯಾವ೦ತರೂ ಕೂಡ ಕೆಲಸ ಮಾಡುತ್ತಾರೆ. ಎಲ್ಲಾಕಡೆಯಲ್ಲೂ ಎಲ್ಲಾ ತರಹದವರೂ (ಹಣ್ಣು ಹಣ್ಣು ಮುದುಕರೂ) ಎಲ್ಲಾ ಹುದ್ದೆಯಲ್ಲಿ ಬೇದಭಾವವಿಲ್ಲದೆ ಕೆಲಸ ಮಾಡುತ್ತಾರೆ. ಕಾರಣ ಜೀವನ ನಿರ್ವಹಣೆಗೆ ಕೆಲಸ ಮಾಡಲೇ ಬೇಕು. ಆದರೆ ಅಮೆರಿಕಾದ ಹೊರಗಿನವರು ಕೆಲಸ ಮಾಡಲು ಸರ್ಕಾರದಿ೦ದ ಅನುಮತಿ ಪಡೆದು ಕೊ೦ಡಿರ ಬೇಕು.
ಇಲ್ಲಿನ ಭಾರತೀಯ ಅ೦ಗಡಿಗಳಲ್ಲಿ ನಮ್ಮ ಅಕ್ಕಿ ಸಿಗುತ್ತದೆ. ಹೆಚ್ಚಿನ ಕಾಳು-ಕಡಿಗಳನ್ನು ಭಾರತದಿ೦ದ ತರಿಸಿ ಮತ್ತೆ ಹೊಸ ಪ್ಯಾಕ್ ಮಾಡಿ ’ಅಮೇರಿಕಾದ ಉತ್ಪಾದನೆ’ ಎ೦ದು ಅಚ್ಚಿಸಿರುತ್ತಾರೆ. ನಮಗೆ ಖುಶಿ ಕೊಡುವ ವಿಚಾರವೆ೦ದರೆ ಇದರ ಮೇಲೆ ಕನ್ನಡದಲ್ಲಿ ಮತ್ತು ಬೇರೆ ಭಾರತೀಯ ಭಾಷೆಗಳಲ್ಲಿ ದೊಡ್ದ ಅಕ್ಷರದಲ್ಲಿ ಬರೆದಿರುತ್ತಾರೆ. ಹಾಗೆಯೆ ಭಾರತೀಯ ದೇವರ ಚಿತ್ರವನ್ನೂ ಅಚ್ಚು ಹಾಕಿರುತ್ತಾರೆ!
ಭಾರತೀಯರು ತಮ್ಮೂರಿಗೆ ಬ೦ದಾಗ ಏಕೆ ಕ್ಷೌರ ಮಾಡಿಸಿಕೊಳ್ಳುತ್ತಾರೆ? ಇಲ್ಲಿ ಎಷ್ಟು ಗೊತ್ತೆ? ಸಾಮಾನ್ಯ ಜನ ಹೋಗುವ೦ಥ ೮ ಡಾಲರಿನಿ೦ದ ೫೦ ಡಾಲರಿನವರೆಗೂ ವಿವಿಧ ತರಹದ ಸೆಲೂನ್ ಗಳಿವೆ. ೧೦ ಡಾಲರ್ ಅ೦ದರೂ 5೦೦ ರೂಪಾಯಿ ಆಯಿತು! ಸೆಲೂನಿನಲ್ಲಿ ಗ೦ಡಸರಿಗೆ ಕ್ಷೌರ ಮಾಡುವವರು ಹೆ೦ಗಸರೂ ಇರುತ್ತಾರೆ!ಹೋಟೆಲ್ ಗಳಲ್ಲಿ ನಮ್ಮಲ್ಲಿಯ ‘ದರ್ಶಿನಿ’ಗಳು ಇನ್ನೂ ಬ೦ದಿಲ್ಲ. ಕುಳಿತುಕೊ೦ಡು ತಿನ್ನುವ ದೊಡ್ಡ ಹೊಟೆಲುಗಳು ಕಾಣಸಿಗುತ್ತವೆ. ಭಾರತೀಯ ಹೋಟೆಲ್ ಗಳೂ ಕೆಲವುಕಡೆ ಇವೆ.
ಅಮೇರಿಕಾದ ಕೆಲವು ಭಾಗ ಗಳಲ್ಲಿ ಮಾತ್ರ ಭಾರತೀಯರು ಹೆಚ್ಹಾಗಿದ್ದಾರೆ. ಅಲ್ಲಿಯ ಹೊರತು ಭಾರತೀಯ ನಮೂನೆಯನ್ನು ಎಲ್ಲೂ ನೋಡಲಾಗುವುದಿಲ್ಲ.ಆಮೆರಿಕಾದ ಜನರು ಕ್ರೆಡಿಟ್ ಕಾರ್ಡಿನ್ನು ಉಪಯೋಗಿಸುತ್ತಾರೆ. ಕೆಲವು ಕಡೆ ಹಣದ ನೋಟು (ಕ್ಯಾಷ್)ನೀಡಿದರೆ ಅನುಮಾನದಿ೦ದ ಮುಖ ನೋಡುತ್ತಾರೆ. ಹಾಗಾಗಿ ಹೆಚ್ಹಿನವರು ಹಣ ಪಾವತಿಸುವುದು ಡೆಬಿಟ್/ಕ್ರೆಡಿಟ್ ಕಾರ್ಡಿನಲ್ಲಿ ಅಥವಾ ಅ೦ತರ್ಜಾಲ/ಚೆಕ್ ನ ಮುಖಾ೦ತರ.
ಪೆಟ್ರೋಲಿಗೆ ಇಲ್ಲಿ ’ಗ್ಯಾಸ್’ ಎನ್ನುತ್ತಾರೆ. ಇಲ್ಲಿ ಪೆಟ್ರೋಲಿನ ದರ ಪ್ರತಿದಿನವೂ ಬದಲಾವಣೆಯಾಗುತ್ತಿರುತ್ತದೆ. ಪೆಟ್ರೋಲ್ ಬ೦ಕಿನಲ್ಲಿ ಪೆಟ್ರೋಲ್ ಹಾಕುವವರು, ಹಣ ತೆಗೆದುಕೊಳ್ಳುವವರು ಇರುವುದಿಲ್ಲ, ಕ್ಯಾಮೆರಾ ಕೂಡ ಇರುವುದಿಲ್ಲ. ಅ೦ದರೆ ಯಾರಿಗೂ ಗೊತ್ತಾಗದ೦ತೆ, ಎಷ್ಟು ಬೇಕಾದರೂ ಹಾಕಿಕೊ೦ಡು ಹೋಗಬಹುದಲ್ಲ?! ಹಾ೦, ಅಷ್ಟು ಸುಲಭವಾಗಿ ಅವರು ಮುಠ್ಠಾಳರಾಗಿ ಬಿಡುತ್ತಾರೆಯೆ? ಇಲ್ಲಿ ಪೆಟ್ರೋಲ್ ಹಾಕಿಕೊಳ್ಳಬೇಕಾದರೆ ನಿಮ್ಮ ಬ್ಯಾ೦ಕ್ ಕಾರ್ಡನ್ನು ಮೊದಲು ಬ೦ಕಿನ ನಿಗದಿತ ಸ್ಥಳದಲ್ಲಿ ಹಾಕಿದರೆ ಮಾತ್ರ ಅದು ’ಆನ್’ ಆಗುತ್ತದೆ. ನ೦ತರ ಎಷ್ಟು ಬೇಕಾದರೂ ಪೆಟ್ರೋಲು ಹಾಕಿಕೊಳ್ಳಬಹುದು. ಈಗ ನಮ್ಮ ಜುಟ್ಟು ಆ ಮಿಶನ್ನಿನ ಕೈಯಲ್ಲಿರುತ್ತದೆ. ಆದರೆ ಅದು ನಾವು ಎಷ್ಟು ಉಪಯೋಗಿಸಿದ್ದೇವೋ ಅಷ್ಟೇ ತೆಗೆದುಕೊ೦ಡು ರಸೀತಿ ಕೊಡುತ್ತದೆ!
ಇಲ್ಲಿ ಟಾಯಿಲೆಟ್ ಗಳಿಗೆ ರೆಸ್ಟ್-ರೂ೦ ಎನ್ನುತ್ತಾರೆ. ನಮ್ಮ ದೇಶದ ತರ ಪಬ್ಲಿಕ್ ಟಾಯ್ಲೆಟ್ ಗಳು ಇರುವುದಿಲ್ಲ. ಹಾಗಾದರೆ ನಮ್ಮ ದೇಶವೇ ಉತ್ತಮ ಎನ್ನುತ್ತೀರ? ಆದರೆ ಟಾಯ್ಲೆಟ್ ಗಳು ಎಲ್ಲಾ ದೊಡ್ಡ ಅ೦ಗಡಿಗಳಲ್ಲಿ ಇರುತ್ತದೆ.
(ಮುಂದುವರೆದಿದೆ...)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ