( Published in ThatsKannada on 27 Nov 08 and Chaitrarashmi on march-april 09 issue)
link 1
link 2. http://www.chaitrarashmi.com/pdownloads/March_April_2009_Read.pdf
ಇತ್ತೀಚೆಗೆ ಮೂರ್ನಾಲ್ಕು ತಿಂಗಳಿಂದ ಅಮೆರಿಕದ ಉತ್ತರ ಟೆಕ್ಸಾಸ್ನ ಡಲ್ಲಾಸ್ ನ ಸುತ್ತಮುತ್ತ ನಡೆದ ಹಿಂದೂ ಧರ್ಮ ಕೂಟಗಳು ನಿಜವಾಗಿಯೂ ಹಲವರ ಹುಬ್ಬೇರಿಸುವಂತೆ ಮಾಡಿದ್ದು ನಿಜ. ನಾನು ಇದರಲ್ಲಿ ಭಾಗವಹಿಸಿಯೂ ನಿಮ್ಮಲ್ಲಿ ಹಂಚಿಕೊಳ್ಳದಿದ್ದರೆ ಎಲ್ಲೋ ಕರ್ತವ್ಯ ಲೋಪ ಮಾಡುತ್ತಿದ್ದೇನೆ ಅಂತ ನನಗೆ ಅನಿಸುತ್ತದೆ. ಡಲ್ಲಾಸ್ ನ (Dallas=ಡ್ಯಾಲಸ್, ಇಲ್ಲಿಯ ಜನರ ಉಚ್ಚಾರ) ಸುತ್ತಮುತ್ತ ಇರುವ ಇತರ ಉಪನಗರ ಗಳಲ್ಲಿ ಇರುವ ಭಾರತೀಯರ / ಹಿಂದೂಗಳ ಸಂಖ್ಯೆ ಸುಮಾರು ೫೦-೬೦ಸಾವಿರದ ಅಂದಾಜು. ತಮ್ಮ ಜೀವನ ರೂಪಿಸಿಕೊಳ್ಳಲು ಉದ್ಯೋಗ ಅರಸಿಕೊಂಡು ಹಲವು ದೇಶಗಳಿಂದ ಬಂದ ಸನಾತನ ಧರ್ಮೀಯರು ತಮ್ಮ ನಂಬಿಕೆ, ಧರ್ಮ,ನಿಯಮಗಳನ್ನು ಮುಂದುವರೆಸಿಕೊಂಡು ಬ೦ದಿರುವುದು ಮತ್ತು ಮುಂದಿನ ಜನಾಂಗಕ್ಕೆ ಕೊಡುತ್ತಿರುವ ಮಹತ್ತರ ಕಾಣಿಕೆಯನ್ನು ನೋಡಿದಾಗ ಕಣ್ಮನ ತುಂಬಿ ಬರುವುದು ಸಹಜ. ಈ ಉದ್ಯೋಗಾರ್ಥಿಗಳ ಜನ್ಮದಾತರು ಭೇಟಿಕೊಟ್ಟಾಗ, ಅಮೆರಿಕಾದಲ್ಲಿ ಈ ದೃಶ್ಯಾವಳಿಗಳನ್ನು ನೋಡಿದಾಗ ಅವರ ಕಣ್ಣಲ್ಲಿ ಆನಂದ ಭಾಷ್ಪ ಸುರಿದರೆ ಹೆಚ್ಚಲ್ಲ. ಹಾಗೆಯೇ ನಮ್ಮವರ ಈ ಸಾಧನೆ ಗಳನ್ನು ದಾಖಲಿಸದಿದ್ದರೆ ನಮ್ಮವರು ಹೊರದೇಶಗಳಲ್ಲಿ ಎನುಮಾಡುತ್ತಿದ್ದಾರೆ ಎಂಬುದು ಸ್ವದೇಶ ದಲ್ಲಿರುವವರಿಗೆ ಕಲ್ಪನೆಗೆ ಬರುವುದು ಕಷ್ಟ. ಅದಕ್ಕೇ ಇದರ ಬಗ್ಗೆ ನನ್ನದೊಂದು ಸಣ್ಣ ಪ್ರಯತ್ನ.
೧) ಹನುಮಾನ್ ದೇವಸ್ಥಾನದಲ್ಲಿ ನವರಾತ್ರಿ:ಹನುಮಾನ್ ದೇವಸ್ಥಾನ ಅಂದಕೂಡಲೇ ನಿಮಗೆ ಭಾರತದಲ್ಲಿನ ಗೋಪುರದಿಂದ ಕೂಡಿದ, ದೊಡ್ಡ ಶಿಲೆಯ ಹನುಮನ ಮೂರ್ತಿ ಇರುವ ಆ ಸಾಂಪ್ರದಾಯಿಕ ಗುಡಿ ನೆನಪಾಗ ಬಹುದು. ಆ ತರಹದ ಸಾಂಪ್ರದಾಯಿಕ ಗುಡಿಗಳೂ ಅಮೆರಿಕದಲ್ಲಿ ಸಾಕಷ್ಟಿವೆ. ಆದರೆ ಇಲ್ಲಿ (ಈ ಜಾಗದಲ್ಲಿ) ಗುಡಿ ಇನ್ನೂ ನಿರ್ಮಾಣ ಆಗಿಲ್ಲ. ಇತ್ತೀಚೆಗಷ್ಟೇ 'ಫ್ರಿಸ್ಕೋ'ದ ಹೊರವಲಯದಲ್ಲಿ ಸುಮಾರು ಹತ್ತು ಎಕರೆ ಜಾಗ ಖರೀದಿಗೆ ತೆಗೆದುಕೊಂಡು ಒಂದು ಅಲ್ಲಿ ವಿಶಾಲವಾದ ಒಂದು ವೇರ್ ಹೌಸ್ (ಉಗ್ರಾಣ-ಪ್ರಾರ೦ಭದಲ್ಲಿ ಅಮೆರಿಕದಲ್ಲಿ ಇದು ಸಾಮಾನ್ಯ) ಟ್ರಿನಿದಾದ್ ನಿಂದ ತರಿಸಿದ ಸುಂದರ ಹನುಮಾನ್ ಮೂರ್ತಿಯನ್ನು ಸುಮಾರು ಆರೇಳು ತಿಂಗಳ ಹಿಂದೆ ಪ್ರತಿಷ್ಟಾಪಿಸಿ, ಮೊನ್ನೆ ಮೊನ್ನೆ ನವರಾತ್ರಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಒಂಭತ್ತು ದಿನವೂ , ಪ್ರತಿದಿನ ಆ ದಿನದ ಮಹತ್ವಕ್ಕನುಗುಣವಾಗಿ ಸಾಂಪ್ರದಾಯಿಕ ಪೂಜೆ ವಿಧಿ ವಿಧಾನಗಳು, ಆರತಿ, ಪ್ರಸಾದ. ನಂತರ ಎಲ್ಲರೂ ಭಾಗವಹಿಸ ಬಹುದಾದಂಥ, ನಮ್ಮ ಕೋಲಾಟದ ತರಹ ಉತ್ತರ ಭಾರತೀಯ ನೃತ್ಯ ನಡೆಯಿತು.ಇಲ್ಲಿ ಮಹಾ ಪ್ರಸಾದವೆಂದರೆ, ಭಕ್ತರೇ ಮನೆಯಿಂದ ತಯಾರಿಸಿಕೊಂಡು ಬರುವ ಖಾದ್ಯ/ತಿನಿಸುಗಳು. ಅದು ಯಾವುದೇ ಸಸ್ಯಾಹಾರದ ಪದಾರ್ಥವಿರಬಹುದು. ಅದನ್ನೆಲ್ಲಾ ದೇವಸ್ತಾನದಲ್ಲಿ ಹಂಚಿಕೊಂಡು ತಿನ್ನುವಾಗ ನಿಜಕ್ಕೂ ಅದಕ್ಕೇ ಬೇರೆಯೇ ರುಚಿ ಬರುತ್ತದೆ, ಬೇರೆಯೇ ಅರ್ಥ ಬರುತ್ತದೆ, ಮನದಲ್ಲಿ ಅವಿನಾಭಾವ ಮೂಡುತ್ತದೆ. ಪ್ರತಿದಿನವೂ ಏನೇನು ಕಾರ್ಯಕ್ರಮ ಇರುತ್ತದೆ, ಅದಕ್ಕೆ ನೀವು ಹೇಗೆ ತಯಾರಿ ನಡೆಸ ಬಹುದು, ಏನು ಕಾಣಿಕೆ ಕೊಡಬಹುದು ಎಂದು ಇ-ಮೇಲ್ ಮೂಲಕ ತಿಳಿಸಲಾಗುತ್ತಿತ್ತು. ಹೀಗೆ ಒಂಭತ್ತು ದಿನವೂ ಯಶಸ್ವಿಯಾಗಿ ನಡೆದಿದ್ದು ಈ ಮಂಡಳಿಯ ಭಕ್ತ ಮಹಾಶಯರಿಂದಾಗಿ. ಇದಕ್ಕೆಲ್ಲ ಮೂಲ ರೂವಾರಿ ನಮ್ಮ ನಂಜನಗೂಡಿನ ಹತ್ತಿರವಿರುವ ಆಶ್ರಮದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು. ಅವರ ಅಣತಿಯಂತೆ ಇಲ್ಲಿ ನಡೆಯುತ್ತಿರುವ ಅದ್ಭುತ ಕೆಲಸ, ಹೊಸ ದೇವಾಲಯದ ನಿರ್ಮಾಣ, ಇನ್ನೊಂದು ಮೂರು ವರ್ಷದಲ್ಲಿ ಟೆಕ್ಸಾಸ್ ನ ಪ್ರಮುಖ ಹಿಂದೂ ಆಕರ್ಷಣಾ ಕೇಂದ್ರವಾಗಲಿದೆ. ಹೆಚ್ಚಿನ ವಿವರಗಳಿಗೆ ವೆಬ್ ಸೈಟ್ ನೋಡಿ. (http://www.dallashanuman.org/)
೨) ದೀಪಾವಳಿ ಮೇಳ:ದೀಪಾವಳಿ ಒಂದು ವಾರವಿರುವಾಗ ಶನಿವಾರದ ದಿನ ಡಲ್ಲಾಸ್ ನ 'ಕೌ ಬಾಯ್' ಸ್ಟೇಡಿಯಮ್ ನ ಒಳಗೆ-ಹೊರಗೆ ಜಾತ್ರೆಯ ಸಡಗರ. ಅಲ್ಲಿ ನಿಜವಾಗಿಯೂ ನಡೆದಿದ್ದು ಜನ ಜಾತ್ರೆಯೇ! ಎಲ್ಲೆಲ್ಲಿಯೂ ಭಾರತದ (ಮೂಲದ) ಜನ. ಎಷ್ಟು? ಸುಮಾರು ಐವತ್ತು ಸಾವಿರ! ಕಳೆದ ವರ್ಷವೂ ಇದೇ ರೀತಿ ಸುಮಾರು ೪೦ಸಾವಿರ ಜನ ಸೇರಿದ್ದರು. ಇಲ್ಲಿ ಎಲ್ಲ ಭಾಷೆಯ ಭಾರತೀಯರು, ನೇಪಾಳದವರು, ಪಾಕಿಸ್ತಾನದವರು ಮತ್ತು ಇಲ್ಲಿಯ ನಾಗರಿಕರು ಮದ್ಯಾನ್ಹ ಸುಮಾರು ೨ ಘಂಟೆಯಿಂದ ರಾತ್ರಿ ೧೨ ಘಂಟೆಯವರೆಗೆ ನಮ್ಮಲ್ಲಿಯ ಜಾತ್ರೆಯ ತರಹವೇ ವಿವಿಧ ಮನರಂಜನೆಗಳಲ್ಲಿ ಭಾಗವಹಿಸಿ ನಲಿದಾಡಿದರು. ಈ ವರ್ಷ ಭಾರತೀಯ ಮೂಲದ ಲೂಸಿಯಾನ ಗವರ್ನರ್ ಬಾಬಿ ಜಿಂದಾಲ್ ಬಂದಿದ್ದು ವಿಶೇಷ.ಅವತ್ತು ಎಲ್ಲೆಲ್ಲೂ ಭಾರತೀಯ ವಾತವರಣ. ಚಿಣ್ಣರಿಗಾಗಿ ಹಲವು ಆಟದ ಅ೦ಕಣಗಳು, ಹಲವು ಸಂಸ್ಥೆಗಳ ಪ್ರಚಾರದ ಟೆಂಟ್ ಗಳು, ತಿಂಡಿತಿನಿಸುಗಳ (ಬಜ್ಜಿ - ಬೋಂಡ ) ಅ೦ಗಡಿಗಳು, ಹಲವು ಧಾರ್ಮಿಕ/ಯೋಗ ಕಾರ್ಯಕ್ರಮಗಳ ಸವಿವರ ನೀಡುತ್ತಿರುವ ಉತ್ಸಾಹಿ ಯುವಕರು, ಮುಕ್ತ ನೃತ್ಯ ವೇದಿಕೆಗಳು.... ಎಲ್ಲಾ ತರಹದ ಅಭಿರುಚಿಗಳಿಗೆ ತಕ್ಕಂತೆ ಸೌಲಭ್ಯಗಳು.ಇಲ್ಲಿಯ (ಬಿಳಿ) ನಾಗರಿಕರೂ ಕೂಡ ನಮ್ಮೊಂದಿಗೆ ಬೆರೆತು ಸಂತೋಷಿಸಿದರು. ಸುಮಾರು ೬೫ಸಾವಿರ ಆಸನಗಳ ಸಾಮರ್ಥ್ಯವಿರುವ ಈ ಒಳಾಂಗಣ ಕ್ರೀಡಾಂಗಣದಲ್ಲಿ ಅವತ್ತು ನಡೆದಿದ್ದು ಇಲ್ಲಿಯ ಮಕ್ಕಳಿಂದ ಭರತ ನಾಟ್ಯ, ಭಾ೦ಗ್ರ ನೃತ್ಯ ಮತ್ತು ಭಾರತದಿಂದ ಕರೆಸಿದ (ಸುಮಾರು ಇನ್ನೂರಕ್ಕೂ ಹೆಚ್ಚು ಕಲಾವಿದರ ತಂಡ) ತಂಡದಿಂದ ರಾಮಲೀಲಾ ನಾಟಕ ಪ್ರದರ್ಶನ. ಪ್ರತೀ ವರ್ಷವೂ ಭಾರತದಿಂದ ಹಲವು ಪ್ರಸಿದ್ಧ ಕಲಾವಿದರನ್ನು ಕರೆಸುತ್ತಾರೆ. ಹಾಡು, ಭಜನೆ, ಭಾಷಣ ಮು೦ತಾದ ಒಳಾಂಗಣ ಕಾರ್ಯಕ್ರಮಗಳು ಮುಗಿದಿದ್ದು ಹನ್ನೊಂದು ಘಂಟೆಯ ಮೇಲಾಗಿದೆ. ನಂತರ ಸುಮಾರು (ರಾತ್ರಿ)ಹನ್ನೆರಡು ಘಂಟೆಗೆ ಹತ್ತುತಲೆಯ ಬೃಹದಾಕಾರದ ರಾವಣ ಪ್ರತಿಕೃತಿ ದಹನ ಮತ್ತು ಪಟಾಕಿ ಪ್ರದರ್ಶನ. ಎಲ್ಲವೂ ಅತ್ಯಂತ ಸುರಕ್ಷತೆಯಿಂದ ಹನ್ನೆರಡೂವರೆಗೆ ಜನರ ಹರ್ಶೊದ್ಗಾರದಿ೦ದ ಮುಕ್ತಾಯವಾಯಿತು. ಈ ಕಾರ್ಯಕ್ರಮದ ಮುಖ್ಯ ಸಂಚಾಲಕ, ದೀವಾಳಿ ಮೇಳದ ಅಧ್ಯಕ್ಷ ಶ್ರೀ ಸತೀಶ್ ಗುಪ್ತ. ಈ ಪರಂಪರೆಯನ್ನು ಹುಟ್ಟುಹಾಕಿ ಬೆಳೆಸುತ್ತಿರುವ ಇವರ ಬಗ್ಗೆ ನಾವು ಹೆಮ್ಮೆ ಪಡಬೇಕು. ವಿವರಗಳನ್ನು ವೆಬ್ ಸೈಟ ನಲ್ಲಿ ನೋಡಿ. ( http://www.dfwdiwalimela.com/defaulthome.html)
೩) ದೀಪಾವಳಿಯ ದಿನದ ಯಜ್ನ್ಯ: ನಿಮಗೆ ಆಶ್ಚರ್ಯ ವಾಗಬಹುದು. ಅಮೆರಿಕದಂಥ ಕ್ರಿಶ್ಚಿಯನ್ನರೆ ಜಾಸ್ತಿ ಇರುವ ದೇಶದಲ್ಲಿ, ಒಂದು ಅತೀ ಮುಂದುವರೆದ ನಗರದ ಮಧ್ಯ ಭಾಗದಲ್ಲಿ ಒಂದು ಮಹಾ ಯಜ್ನ್ಯ!ಇದು ಆಶ್ಚರ್ಯ ವಾದರೂ ನಿಜವಾಗಿ ನಡೆದಿದೆ. ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ನ ಶ್ರೀ ರವಿಶಂಕರ್ ಗುರೂಜಿ ಅವರ ನೇತೃತ್ವ/ಆಶೀರ್ವಾದ ದೊಂದಿಗೆ ಸುಮಾರು ಐದು ಸಾವಿರ ಭಕ್ತರ ಸಮ್ಮುಖದಲ್ಲಿ ಡಲ್ಲಾಸ್ ನ ಕನ್ವೆನ್ಶನ್ ಸೆಂಟರ್ನಲ್ಲಿ ನಡೆದ ಯಜ್ನ್ಯ ನಿಜಕ್ಕೂ ಒಂದು ದಾಖಲೆ. ಎಲ್ಲಾ ಸಮುದಾಯದವರ ಗೌರವ ಹೊಂದಿರುವ ಶ್ರೀ ಗುರೂಜಿಯವರು ಇದೇ ಕಳೆದ ದೀಪಾವಳಿಯ ಶುಭ ದಿನದಲ್ಲಿ ಅ೦ಥದ್ದೊ೦ದು ಸಂಕಲ್ಪವನ್ನು ಸಾಕಾರಗೊಳಿಸಿದರು.
ಸವಿರವಾದ ಮಾಹಿತಿಯನ್ನು ಈ ವೆಬ್ ಸೈಟ್ ನಿಂದ ಪಡೆಯಿರಿ. (http://www.artoflivingdfw.org/sundarindia/diwaliyagna_main.htm)
೪) ಗಣಪತಿ ದೇವಸ್ತಾನದ ಪುನಃ ಪ್ರತಿಸ್ಟಾಪನೆ: ಉತ್ತರ ಟೆಕ್ಸಸ್ ನ ಪ್ಲೇನೋ ಎಂಬ ನಗರದ ಹಿಂದೂಗಳ ಅವಿಭಾಜ್ಯ ಅಂಗ ಶ್ರೀ ಗಣೇಶ ದೇವಾಲಯ. ಅದು ಇಷ್ಟುದಿವಸ ಒಂದು ಶಾಪಿಂಗ್ ಸೆಂಟರ್ ನಲ್ಲಿತ್ತು. ಇಲ್ಲಿಗೆ ಭಕ್ತರು ಪ್ರತಿ ದಿನವೋ, ವಾರವೋ ಬಂದು ದೇವರನ್ನು ಪ್ರಾರ್ಥಿಸಿ ಹೋಗುತ್ತಿದ್ದರು. ಈ ಮಂದಿರವನ್ನು ಹುಟ್ಟುಹಾಕಿದ ಕೀರ್ತಿ ನಮ್ಮ ಮಲೆಯಾಳಿ ಬಂಧುಗಳಿಗೆ ಸೇರುತ್ತದೆ. ಆದರೆ ಇದರ ಭಕ್ತರ ಸಮುದಾಯ ನೋಡಿದರೆ ಭಾಷೆ, ರಾಜ್ಯ, ರಾಷ್ಟ್ರ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಇಲ್ಲಿಗೆ ಎಲ್ಲರೂ ಬರುತ್ತಾರೆ. ಭಕ್ತರ ಸಂಖ್ಯೆ ಬೆಳೆಯುತ್ತಿದ್ದಂತೆ ಜಾಗದ ಕೊರತೆ ಹೆಚ್ಚಾಯಿತು. ಹಲವು ಮೂಲಗಳಿಂದ ಹಣ ಸಂಗ್ರಹಿಸಿ ಇಲ್ಲೇ ಹತ್ತಿರದಲ್ಲಿ ಒಂದು ಹತ್ತು ಎಕರೆ ಜಾಗದಲ್ಲಿ ಒಂದು ಮನೆ, ಉಗ್ರಣವಿರುವ ಸೌಲಭ್ಯವನ್ನು ವರ್ಷದ ಹಿಂದೆ ಖರೀದಿ ಮಾಡಿ, ಈಗ ನವೆಂಬರ್ ೮ ರ೦ದು ದೇವಸ್ಥಾನವನ್ನು ಹೊಸ ಸ್ಥಳಕ್ಕೆ ವರ್ಗಾಯಿಸಲಾಯಿತು. ವರ್ಗಾಯಿಸುವಾಗ ನಡೆದ ಮೆರವಣಿಗೆ, ಸಾಂಪ್ರದಾಯಿಕ ಪೂಜೆ, ಹೋಮ-ಹವನ, ಸ್ಥಳೀಯ ಹಿಂದೂ ಜನರ ಉತ್ಸಾಹ ನಿಜಕ್ಕೂ ಹೆಮ್ಮೆ ತರುವಂಥಾದ್ದು. ಎರೆಡು ದಿನ ನೆಡೆದ ಈ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.
ಈ ದೇವಸ್ಥಾನದಲ್ಲಿ ಪ್ರತಿದಿನ ಪೂಜೆ, ಮಹಾ ಮಂಗಳಾರತಿ ಮಾಡುತ್ತಾರೆ. ಮಂಗಳಾರತಿಯ ಮುನ್ನ ಹೇಳುವ ಶ್ಲೋಕ/ಮಂತ್ರವನ್ನು ಎಲ್ಲರೂ ಒಟ್ಟಿಗೆ ಹೇಳಬಹುದು. ಆ ಹೊತ್ತಿಗೆ ಎಲ್ಲರ ಕೈಗೂ ಒಂದೊಂದು ಹಸ್ತಪ್ರತಿಯನ್ನು ಕೊಡುತ್ತಾರೆ ಅದನ್ನು ನೋಡಿಕೊಂಡು ನಮ್ಮ ಸ್ವರ ಸೇರಿಸಬಹುದು.ಇಲ್ಲಿ ಎಲ್ಲಾ ದೇವಸ್ಥಾನಗಳ ಸಾಮಾನ್ಯ ನೋಟವೆಂದರೆ ಶುಚಿತ್ವ ಮತ್ತು ನಿಯಮ ಪಾಲನೆ.ಎಲ್ಲರೂ ನಿಯಮ ಪಾಲನೆ ಮಾಡುವುದರಿಂದ ಎಲ್ಲೂ ಗೊಂದಲವಾಗಲಿ, ನೂಕು ನುಗ್ಗಲಾಗಲಿ, ಅಸಮಾಧಾನವಾಗಲಿ ತೋರುವುದಿಲ್ಲ. ಎಲ್ಲರೂ ಶುಚಿಯಾಗಿರುವುದರಿಂದ ಬೇಧ ಭಾವವೇ ಇರುವುದಿಲ್ಲ. ಹಾಗಾಗಿಯೇ 'ನಾವೆಲ್ಲ ಹಿಂದೂ ನಾವೆಲ್ಲ ಒಂದು' ಎನ್ನುವ ಭಾವನೆಯನ್ನು ಸಹಜವಾಗಿ ಎಲ್ಲರಲ್ಲೂ ಕಾಣಬಹುದು.
ಈ ದೇವಸ್ಥಾನದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಮಾಹಿತಿ ಜಾಲವನ್ನು ನೋಡಿ. (http://htnt.org/).
(ಮುಂದುವರೆದಿದೆ....)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ