ಡಲ್ಲಾಸ್ ನ ಸುತ್ತಮುತ್ತ ಇನ್ನೂ ಕೆಲವು ಹಿಂದೂ ಮಂದಿರಗಳಿವೆ.
೧) ಏಕತಾ ಮಂದಿರ: ಹೆಸರೇ ಸೂಚಿಸುವಂತೆ ಇದು ಮಾನವರಷ್ಟೇ ಅಲ್ಲ ಹಿಂದೂ ದೇವಾನು-ದೇವತೆ ಗಳ ಏಕತಾ ಮಂದಿರ! ಇಲ್ಲಿ ಸುಮಾರು ೪೦ ಬೇರೆ ಬೇರೆ ದೇವರ ವಿಗ್ರಹಗಳಿವೆ. ಸುಮಾರು ಹತ್ತು ಎಕರೆ ವಿಶಾಲವಾದ ಜಾಗದಲ್ಲಿ ೧೯೯೦ರಿ೦ದ ಹಂತ ಹಂತವಾಗಿ ಕಟ್ಟಿದ ದೇವಸ್ತಾನ ನಯನ ಮನೋಹರ. ದೇವಾಲಯದ ಮು೦ಭಾಗವಂತೂ ಅಚ್ಚ ದಕ್ಷಿಣಭಾರತದ ಗೋಪುರದಿಂದ ಕೂಡಿ ಅತ್ಯಂತ ಸುಂದರವಾಗಿದೆ.ನೀವು ಅರ್ವಿಂಗ್(Irving=ಅರ್ವಿಂಗ್) ನ ಬ್ರಿಟನ್ ರಸ್ತೆಯಲ್ಲಿ ನಿಧಾನವಾಗಿ ವಾಹನ ನಡೆಸುತ್ತಾ ಯುರೋಪಿಯನ್ ಶೈಲಿಯ ಮನೆಗಳನ್ನು, ಕಟ್ಟಡಗಳನ್ನು ನೋಡುತ್ತ ಮು೦ದೆ ಸಾಗಿದರೆ ಇದ್ದಕ್ಕಿದ್ದಂತೆ ನಮ್ಮ ಭಾರತೀಯ ಶೈಲಿಯ ದೇವಸ್ತಾನ ಪ್ರತ್ಯಕ್ಷವಾಗಿ ನಿಮಗೆ ಅಚ್ಚರಿ ಮೂಡಿಸುತ್ತದೆ. ಬಿಳಿಯ ಬಣ್ಣದ ಗೋಪುರಗಳು ಕೈ ಬೀಸಿ ಕರೆಯುತ್ತಿರುವಂತಿದೆ. ದೇವಾಲಯದ ಒಳಗೆ ದೊಡ್ಡದಾದ ಪ್ರಾರ್ಥನಾ ಮಂದಿರಗಳು, ಪ್ರತೀ ದೇವತಾ ಮೂರ್ತಿಗಳಿಗೆ ಪ್ರತ್ಯೇಕ ಗರ್ಭಗುಡಿಗಳು, ಸಣ್ಣದೊಂದು ಸಭಾಂಗಣ, ಯಜ್ನ್ಯಶಾಲೆ...ಎಲ್ಲ ವ್ಯವಸ್ಥೆಗಳು. ಮುಖ್ಯ ದೇವಾಲಯದ ಹಿಂಭಾಗದಲ್ಲಿ ಒಂದು ವಿಶಾಲವಾದ ಸಭಾ೦ಗಣವಿದೆ. ಐದುನೂರು ಮಂದಿಗೆ ಒಮ್ಮೆಗೇ ವ್ಯವಸ್ಥೆ ಮಾಡುವಷ್ಟು ದೊಡ್ಡದಾಗಿದೆ. ಇಲ್ಲಿ ಭರತನಾಟ್ಯ, ಯೋಗ ತರಗತಿಗಳು, ಸಂಗೀತ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು ಆಗಾಗ್ಗೆ ನಡೆಯುತ್ತಿರುತ್ತವೆ.ದೇವಾಲಯದಲ್ಲಿ ನಿತ್ಯವೂ ನಡೆಯುವ ಪೂಜೆ , ಮಂಗಳಾರತಿಯ ಜೊತೆಗೆ ವಾರಾಂತ್ಯದಲ್ಲಿ ವಿಶೇಷ ಪೂಜೆಗಳಿರುತ್ತವೆ. ಎಲ್ಲಾ ಹಿಂದೂ ಹಬ್ಬಗಳನ್ನೂ ವಿಶೇಷವಾಗಿ ಆಚರಿಸುತ್ತಾರೆ, ಸುತ್ತಮುತ್ತಲೂ ಇರುವ ಹಿಂದೂ ಬಾಂಧವರು ಶುದ್ಧ ಭಾರತೀಯ ಉಡುಗೆ-ತೊಡಿಗೆಯಲ್ಲಿ ಮನೆಮಂದಿಯೊಂದಿಗೆ ಆಗಮಿಸಿ ಹಬ್ಬದ ವಾತವರಣದಲ್ಲಿ ಸಂಭ್ರಮಿಸುತ್ತಾರೆ. ಇಲ್ಲಿ ನೇಪಾಳ ದೇಶದ ಹಿಂದೂಗಳೂ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸುಮಾರು ೩೦ ವರ್ಷದಿ೦ದ ಶ್ರಮಿಸಿದ ಹಿರಿಯರ ಉದ್ದೇಶ ಇಂದಿನ ದಿನಗಳಲ್ಲಿ ಸಾರ್ಥಕವಾಗುತ್ತಿದೆ.(ಹೆಚ್ಚಿನ ವಿವರಗಳು ಈ ಕೊಂಡಿಯಲ್ಲಿ ಸಿಗುತ್ತದೆ. http://www.dfwhindutemple.org/)
೨) ಡಲ್ಲಾಸ್ ನ ಇಸ್ಕಾನ್ ದೇವಸ್ಥಾನ: ಬೆಂಗಳೂರಿನ ಇಸ್ಕಾನ್ ನೋಡಿ ಕಣ್ಣರಳಿಸಿದ್ದ ನನಗೆ ಇಲ್ಲಿ ಹೇಗಿರುತ್ತದೆ ಎಂದು ನೋಡುವ ಕುತೂಹಲವಿತ್ತು. ಡಲ್ಲಾಸ್ ಡೌನ್ ಟೌನ್ ಹತ್ತಿರವೇ ಇರುವ ಈ ದೇವಸ್ಥಾನಕ್ಕೆ ಅದೊಂದು ಭಾನುವಾರ ಹೋದೆ.ಸಣ್ಣ ಜಾಗದಲ್ಲಿ ಇರುವ ಇದು ಹೊರಗಡೆಯಿಂದ ನೋಡಿದರೆ ಒಳಗಿನ ಉತ್ಸವದ ಕಲ್ಪನೆ ಬಾರದು. ಒಳಗಡೆ ಹೋಗಿ ನೋಡಿದರೆ, ಪ್ರೇಯರ್ ಹಾಲಿನಲ್ಲಿ ಎಲ್ಲರೂ ಭಜನೆ ಮಾಡುತ್ತಾ ಹಾಡಿ ಕುಣಿಯುತ್ತಿದ್ದಾರೆ! ಅದರಲ್ಲಿ ಬಿಳಿಯರೇ ಹೆಚ್ಚು. ಕರಿಯರು ಕೂಡ ಇದ್ದರು. ನಮ್ಮ ಭಾರತೀಯರೂ ಇದ್ದರು. ಸ್ಥಳೀಯ ಬಿಳಿಯರು ಬಿಳಿಯ ಕಚ್ಚೆ ಪಂಚೆ, ಜುಬ್ಬಾ ಧರಿಸಿ ಹಣೆಗೆ ತಿಲಕ ಇತ್ತು ಕೈಯಲ್ಲಿ ತಾಳ ಹಾಕುತ್ತ ಮೈಮರೆತು ರಾಧಾ-ಕೃಷ್ಣನ ಭಜನೆಮಾಡುತ್ತ ನೃತ್ಯ ಮಾಡುತ್ತಿದ್ದರು. ಬಿಳಿ ಸ್ತ್ರೀಯರಂತೂ ಸೀರೆ ಕುಪ್ಪಸ ತೊಟ್ಟು ಹಣೆಗೆ ಕುಂಕುಮ ಇಟ್ಟು ತಾಳಕ್ಕೆ ಸರಿಯಾಗಿ ಸಮೂಹ ನೃತ್ಯ ಮಾಡುತ್ತಿದ್ದರು. ಗಂಡಸರಾಗಲಿ ಹೆಂಗಸರಾಗಲಿ ಯಾರೂ ಪ್ಯಾಂಟ್ ಧರಿಸಿದ್ದು ಕಾಣಲಿಲ್ಲ,ಎಲ್ಲರೂ ಭಾರತೀಯ ಉಡುಗೆ ಧರಿಸಿದ್ದರು. ನಾನು ಒಮ್ಮೆ ನನ್ನ ಕಣ್ಣುಗಳನ್ನು ನಂಬಲಿಲ್ಲ. ದೇವಾಲಯಕ್ಕೆ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಿದ್ದಕ್ಕೆ ನನಗೆ ನಾಚಿಕೆಯಾಯಿತು. ಹಾಗೇ ಕೈಮುಗಿದು ಅವಸರದಲ್ಲಿ ಮನೆಗೆ ಹೊರಟಾಗ ನನ್ನ ತರಹವೇ ಪ್ಯಾಂಟ್-ಶರಟು ಹಾಕಿಕೊಂಡು ಬಂದಿದ್ದ ಭಾರತೀಯರನ್ನು ಕಂಡು ಸಮಾಧಾನವಾಯಿತು, ಕುಳಿತುಕೊಂಡೆ! ಭಜನೆ, ಮಂಗಳಾರತಿ, ತುಳಸಿ ಪೂಜೆ (ಪೂಜೆ ಮಾಡುವವರು ಭಾರತೀಯ ಮೂಲದವರು) ಎಲ್ಲಾ ಆದಮೇಲೆ ಭಗವದ್ಗೀತೆಯ ಮೇಲೆ ಸಣ್ಣ ಪ್ರವಚನ (ಬಿಳಿಯ ಹಿಂದೂ), ನಂತರ ಪ್ರಥಮ ಬಾರಿಗೆ ಬಂದವರನ್ನು ಪರಿಚಯಿಸುತ್ತಾರೆ. ಅವರಿಗೆ ಅವರದೇ ಭಾಷೆಯ ಒಂದು ಭಗವದ್ಗೀತೆಯ ಪುಸ್ತಕ, ಕೃಷ್ಣನ ಮೇಲಿನ ಪುಸ್ತಕ, ಜಪ ಮಣಿಸರ, ಪೂಜಾ ಸಾಮಗ್ರಿಯ ಒಂದು ಸೆಟ್ ಕೊಡುತ್ತಾರೆ. (ನನಗೆ ಇಂಗ್ಲೀಶ್ ಭಾಷೆಯದ್ದು ಕೊಟ್ಟಿದ್ದರು, ಆಮೇಲೆ ಕನ್ನಡ ಬೇಕು ಅಂತ ಹೇಳಿ ಬದಲಾಯಿಸಿಕೊಂಡೆ) ನಂತರ ಮಹಾ ಪ್ರಸಾದ. ಎಲ್ಲರಿಗೂ ದೇವಸ್ಥಾನದಲ್ಲೇ ತಯಾರಿಸಿದ ಶುದ್ಧ ಶಾಕಾಹಾರದ ಪ್ರಸಾದ. ತಯಾರಿಸಿ ಬಡಿಸುವವರು ನಮ್ಮವರು. ಬಿಳಿ-ಕರಿಯರು ಪ್ರಸಾದವನ್ನು ಸೇವಿಸುವಾಗಲೂ ಗುಂಪು ಗುಂಪಾಗಿ ಕುಳಿತು ಭಗವದ್ಗೀತೆಯ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಇಸ್ಕಾನ್ ಬಗ್ಗೆ ಕೆಲವು (ಕಟ್ಟು?) ಕತೆಗಳನ್ನು ಕೇಳಿದ್ದ ನನಗೆ 'ನಾವು ಯಾವ ಮಟ್ಟದಲ್ಲಿದ್ದೇವೆ', ನಮ್ಮ ದೇವರನ್ನು ಆರಾಧಿಸುವ 'ಅವರು ಎಲ್ಲಿದ್ದಾರೆ' ಅಂತ ಮೊದಲಬಾರಿಗೆ ನೋಡುವ ಅವಕಾಶವಾಯಿತು. ಈ ದೇವಸ್ಥಾನದ ಬಗ್ಗೆ ಹೇಳಲೇ ಬೇಕಾದ ವಿಚಾರವೆಂದರೆ, ಈ ದೇವಸ್ಥಾನ ಮೂಲವಾಗಿ ಒಂದು ಕ್ರಿಶ್ಚಿಯನ್ನರ ಚರ್ಚ್ ಆಗಿತ್ತು, ಅದನ್ನು ೭೦ರ ದಶಕದಲ್ಲೇ ಕೊಂಡು ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಹಲವು ಕುಸುರಿ ಕೆಲಸಗಳನ್ನು ಒಳಗೊಂಡ ಒಳಭಾಗ ಅತ್ಯಂತ ಸುಂದರವಾಗಿದೆ.
ಇದೇ ಉತ್ಸಾಹದಲ್ಲಿ ಕೃಷ್ಣಾಷ್ಟಮಿ ನೋಡುವ ಕುತೂಹಲವಾಯಿತು. ಕೃಷ್ಣಾಷ್ಟಮಿ ಇಸ್ಕಾನ್ ನಲ್ಲಿ ವರ್ಷದ ದೊಡ್ಡ ಹಬ್ಬ. ಅವತ್ತು ಸ್ನೇಹಿತರನ್ನೂ ಕರೆದುಕೊಂಡು ಹೋದೆ.ಸುಮ್ಮನೆ ಫ್ಲಾಶ್ ವಿಸಿಟ್ ಮಾಡಿ ಕೆಲವು ಫೋಟೋಗಳನ್ನು ಕ್ಲಿಕ್ಕಿಸಿ ಕೊಂಡು ಹೋಗ ಬೇಕೆಂದಿದ್ದ ನಾವು, ಅಲ್ಲಿಗೆ ಹೋದಮೇಲೆ ಬೇರೆ ಕಾರ್ಯಕ್ರಮಗಳನ್ನು ರದ್ದು ಮಾಡಿದೆವು!ಅದೇನು ಜನಜಾತ್ರೆ? ಕಾರನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಲೇ ಸುಮಾರು ಇಪ್ಪತ್ತು ನಿಮಿಷ ಆಯಿತು.ಒಳಗೆ ಹೋಗಿ ನೋಡಿದರೆ ತು೦ಬಾ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ದೇವಸ್ತಾನದ ಪಕ್ಕದಲ್ಲೇ ಇರುವ ಬಯಲಿನಲ್ಲಿ ಒಂದು ರಂಗಮಂಟಪ ಕಟ್ಟಿ ಅಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೆ, ಒಂದುಕಡೆ ಮಹಾ ಪ್ರಸಾದದ ವಿತರಣೆ. ಮೇಲ್ವಿಚಾರಣೆ ಎಲ್ಲಾ ನಮ್ಮವರದು. ನನಗೆ ಒಮ್ಮೆಲೇ ಭಾರತಕ್ಕೆ ಬಂದಂತಾಯಿತು ಆದರೂ ಅಷ್ಟೊ೦ದು ಅಮೆರಿಕನ್ನರನ್ನು ನೋಡಿ ಸಾವರಿಸಿಕೊಂಡೆ. ಇಲ್ಲಿ ಸುತ್ತ ಮುತ್ತಲೂ ಹಲವು ಮನೆಗಳನ್ನು ಗಮನಿಸಿದೆ. ಎಲ್ಲಾ ಯುರೋಪಿಯನ್ ಶೈಲಿಯ ಮನೆಗಳು, ಆದರೆ ಮನೆಯ ಪ್ರವೇಶದ್ವಾರದ ಮೇಲೆ ನಮ್ಮ ದೇವರ ಫೋಟೋ! ಮನೆಯ ಹೆಸರು, ನೃಸಿಂಹ ಕುಟೀರ, ಸರಸ್ವತಿ ಮಂದಿರ, ಲಕ್ಷ್ಮಿ ನಿವಾಸ....ಮನೆ ಭಾರತೀಯ ಹಿಂದೂ ಗಳದ್ದಲ್ಲ, ಇಲ್ಲಿಯ (ಬಿಳಿಯ) ಹಿಂದೂಗಳದ್ದು.
ಭಜನೆ, ನೃತ್ಯಗಳನ್ನು ನೋಡಿ ಮನಸ್ಸಿನಲ್ಲಿ ಸಂತೋಷವಾದರೂ ಇದೆಲ್ಲ ನಿಜವಾ, ಅಥವಾ ಸುಮ್ಮನೆ (ಹಿಪ್ಪಿಗಳ ತರ) ಮನಸ್ಸಿಗೆ ಬಂದಹಾಗೆ ಹಾಡಿ ಕುಣಿತಾರ ಅಂತ ಆತಂಕವಾಯಿತು. ನನಗೆ ಕುತೂಹಲವಿದ್ದ, ಹಣೆಗೆ ತಿಲಕವಿಟ್ಟುಕೊಂಡು ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ಕರಿಯ ಎದುರಿಗೆ ಸಿಕ್ಕಿದ. 'ಹಾಯ್' ಎಂದು ಕೈಕುಲುಕಿಸಲು ಮುಂದಾದೆ. ಅವನು 'ನಮಸ್ತೆ ಹರಿ ಓಂ' ಎಂದು ಕೈಜೋಡಿಸಿ ವಂದಿಸಿದ! ಒಮ್ಮೆ ಮನಸ್ಸಿಗೆ ಧಸಕ್ಕೆನ್ದರೂ ಸುಧಾರಿಸಿಕೊಂಡು, ಅವನ ಹತ್ತಿರ 'ಯಾಕೆ ಹಿಂದೂ ಧರ್ಮದ ಬಗ್ಗೆ ಆಸಕ್ತಿ? ಎಂದು ವಿಚಾರಿಸಿದೆ. ಅವನು ಜಮೈಕದಿಂದ (ವೆಸ್ಟ್-ಇಂಡೀಸ್) ಅಮೆರಿಕಕ್ಕೆ ಓದಲು ಬಂದಿದ್ದನಂತೆ. ಹಲವಾರು ಧರ್ಮ ಪುಸ್ತಕಗನ್ನು ತಿರುವುಹಾಕಿದನತರ ನಮ್ಮ ಭಗವದ್ಗೀತೆ ನಂತರ ಯಾವ ಬೇರೆ ಪುಸ್ತಕವೂ ಬೇಕು ಅಂತನಿಸಲಿಲ್ಲವಂತೆ. ಮುಂದುವರೆದು ಅವನು ಭಗವದ್ಗೀತೆಯ ಮೇಲೆ ಕೊಟ್ಟ ವಿವರಣೆ ನನಗೆ ಬೆವರಿಳಿಸಿತು. ಹಾಗಂತ ಅವನು ಇನ್ನೂ ವಿದ್ಯಾರ್ಥಿ, ಭಾರತಕ್ಕೆ ಬಂದು ಇನ್ನೂ ನಮ್ಮ ಧರ್ಮದ ಬಗ್ಗೆ ಹೆಚ್ಚು ತಿಳಿದು ಕೊಳ್ಳಬೇಕೆ೦ದಿದ್ದಾನೆ.
ನನಗೆ ಇದನ್ನೆಲ್ಲಾ ನೋಡಿ ದೇಶದ 'ಬುದ್ಧಿ ಜೀವಿಗಳ' ನೆನೆಪಾಯಿತು. ಛೇ, ನಮ್ಮಲ್ಲಿರುವ ಅಗಾಧ ಸಂಪತ್ತು ನಮಗೇ ಗೊತ್ತಿಲ್ಲವಲ್ಲಪ್ಪಾ ಅಂದುಕೊಳ್ಳುತ್ತಾ ಪ್ರಸಾದದ ಕಡೆ ಹೆಜ್ಜೆ ಹಾಕಿದೆ.
ಇಸ್ಕಾನ್ ಮಂದಿರವೆಂದರೆ ನಮ್ಮಲ್ಲಿ ಕೆಲವರು ಮೂಗು ಮುರಿಯುತ್ತಾರೆ. ಆಲ್ಲೇ ನೆಲದ ಮೇಲೆ ಬಿದ್ದಿದ್ದ ಒಂದು ಭಿತ್ತಿಪತ್ರವನ್ನು ಕೈಗೆತ್ತಿಕೊಂಡೆ. ಅದರಲ್ಲಿ ನೋಡಿದರೆ ಇಸ್ಕಾನ್ ನವರು ಭಾರತದ ವಿವಿಧ ಹಳ್ಳಿಗಳಿಗಾಗಿ ಹಾಕಿಕೊಂಡ ಯೋಜನೆಗಳನ್ನು ಮುದ್ರಿಸಿದ್ದಾರೆ.ಇದರಲ್ಲಿ ಅಕ್ಷಯ ಪಾತ್ರ ಯೋಜನೆಯೂ ಒಂದು. ನಮ್ಮ ಕರ್ನಾಟಕದ ಧಾರವಾಡ, ಗದಗ, ಹೊನ್ನಳ್ಳಿ, ವಿಜಾಪುರ, ಮೈಸೂರು, ಮಂಡ್ಯ, ಬೆಂಗಳೂರು, ಚಿಕ್ಕಮಗಳೂರು ಮುಂತಾದ ಹೆಸರುಗಳು ಡಲ್ಲಾಸ್ ನ ಇಸ್ಕಾನ್ ನಲ್ಲಿ!! ಈ ಹಣ ಎಲ್ಲಿಂದ ಬರುತ್ತದೆ? ಇಲ್ಲಿಯ ಸ್ಥಳೀಯರು ತಮ್ಮ ಸಂಪಾದನೆಯ ಭಾಗದಲ್ಲಿ ಕೊಡುತ್ತಾರೆ. ಇಲ್ಲಿಯ ಬಿಳಿಯರು ರಸ್ತೆ ರಸ್ತೆಗಳಲ್ಲಿ ಕಚ್ಚೆಪಂಚೆ ಉಟ್ಟುಕೊಂಡು ನಿಂತು ಇಸ್ಕಾನ್ನ ಪುಸ್ತಕಗಳನ್ನು ಮಾರಿ ಸಂಪಾದಿಸುತ್ತಾರೆ. ಈಗ ಹೇಳಿ ನಾವು ಎಷ್ಟು ಕೊಡುತ್ತೇವೆ? ನಮ್ಮವರಿಗಾಗಿ ಏನು ಮಾಡುತ್ತೇವೆ?
(ವಿವರಗಳನ್ನು ಪಡೆಯಲು ಭೇಟಿಮಾಡಿ
೩) ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ:
ಡಲ್ಲಾಸ್ ನ ಸ್ವಾಮಿನಾರಾಯಣ್ ಮಂದಿರ ಸದ್ಯಕ್ಕೆ ಹಳೆಯ ಕಟ್ಟಡದಲ್ಲೇ ಇದೆ. ಕೆಲವು ಪ್ರಸಿದ್ಧ ಸ್ವಾಮಿನಾರಾಯಣ್ ಮಂದಿರಕ್ಕೆ ಹೋಲಿಸಿದರೆ ಇದು ಹೊರನೋಟದಲ್ಲಿ ಅಂಥ ದೊಡ್ಡ ಮಂದಿರವೆಂದು ಅನ್ನಿಸುವುದಿಲ್ಲ. ಆದರೆ ನಾನು ಮಂದಿರದ ಹೊರನೋಟ ನೋಡಲು ಹೋಗಿರಲಿಲ್ಲ. ಒಳಗೆ ಒಂದು ವಿಶಾಲ ಸಭಾಂಗಣದಲ್ಲಿ ಸಂತ ಸ್ವಾಮಿನಾರಾಯಣ್ ಮೂರ್ತಿ, ರಾಧಾಕೃಷ್ಣರ ಮೂರ್ತಿ ಮುಂತಾಗಿ ಬಿಳಿಯ ಶಿಲೆಯಲ್ಲಿ ಕೆತ್ತಿದ ಸುಂದರವಾದ ವಿಗ್ರಹಗಳು. ಶಿಸ್ತಾಗಿ ಎರಡು ಪ್ರತ್ಯೇಕ ಜಾಗಗಳಲ್ಲಿ ಕುಳಿತವರು ಪೂರ್ಣ ಗುಜರಾತಿನ ಮೂಲದವರು. ಅಚ್ಚರಿಯೆಂದರೆ ಹೆಂಗಸರು ಗಂಡಸರು ಪ್ರತ್ಯೇಕವಾಗಿ ಕುಳಿತುಕೊಳ್ಳ ಬೇಕು. ಎಲ್ಲವೂ ಪ್ರತ್ಯೇಕ, ಊಟದ ಸರತಿಯೂ ಪ್ರತ್ಯೇಕ, ವಿಶೇಷ ಪೂಜೆಯ ಕಾರ್ಯಕ್ರಮಗಳೂ ಪ್ರತ್ಯೇಕ.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳ ನಂತರ ಮಹಾಪ್ರಸಾದವಿರುತ್ತದೆ.ಪ್ರತೀ ಭಾನುವಾರ ಪೂಜೆ ಪುನಸ್ಕಾರಕ್ಕಾಗಿ ವಿಶೇಷವಾಗಿ ಜನ ಸೇರುತ್ತಾರೆ. ನಾನು ತಮ್ಮವರಲ್ಲವೆಂದು ಸುಲಭವಾಗಿ ಗುರುತಿಸಿದ ಅವರು, ಪರಿಚಯ ಮಾಡಿಕೊಂಡು, ಆತ್ಮೀಯವಾಗಿ ಮಾತನಾಡಿಸಿ, ನನ್ನನ್ನು ಸ್ವಾಮಿಜಿಯ ಹತ್ತಿರ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ದರ್ಶನ ಭಾಗ್ಯ ಒದಗಿಸಿಕೊಟ್ಟರು. ಅಂದರೆ ಹೊಸಬರು ಅಂತ ಕಡೆಗಣಿಸಿ, ಉಪೇಕ್ಷಿಸುವುದಿಲ್ಲ ಅನ್ನುವುದಕ್ಕಾಗಿ ಈ ಮಾತು ಹೇಳಿದೆ. ಗುಜರಾತಿನವರಿಗೆ ದೇವ-ಧರ್ಮ ಕಾರ್ಯಗಳಲ್ಲಿ ತುಂಬಾ ದ್ಯೇಯ-ನಿಷ್ಠೆ, ಒಗ್ಗಟ್ಟು. ಅಮೆರಿಕದ ಎಲ್ಲಕಡೆಯೂ ಉತ್ತಮ ಉದ್ಯಮ-ವಹಿವಾಟು ಹೊಂದಿದ ಇವರು ಭಾರತೀಯರಲ್ಲೇ ಹೆಚ್ಚು ಶ್ರೀಮಂತರು. ಧರ್ಮಕಾರ್ಯಗಳಿಗೆ ಎಷ್ಟು ಬೇಕಾದರೂ ಹಣ ಖರ್ಚುಮಾಡುವ ಸಾಮರ್ಥ್ಯವಿದೆ, ಮಾಡುತ್ತಾರೆ.ತಮ್ಮ ಸಂಪಾದನೆಯಲ್ಲಿ ಇಂತಿಷ್ಟು ಭಾಗ ಅಂತ ಧರ್ಮಕಾರ್ಯಗಳಿಗಾಗಿ ತೆಗೆದಿರಿಸುತ್ತಾರೆ. ಹೊಸ ದೇವಾಲಯಕ್ಕೆ ಆಗಲೇ ಯೋಜನೆ ಸಿದ್ಧಪಡಿಸಿ ಕಾರ್ಯಪ್ರವೃತ್ತರಾಗಿದ್ದಾರೆ.ಇನ್ನೊಂದೆರಡು ವರ್ಷದಲ್ಲಿ ಅದನ್ನು ಸಾಕಾರ ಗೊಳಿಸುತ್ತಾರೆ. (ಅವರ ವೆಬ್ ಸೈಟ್ ನೋಡಿ:http://www.baps.org/globalnetwork/america/dallas)
೪) ಪ್ಲೇನೋದ ಸಾಯಿ ಮಂದಿರ: ಭಾರತೀಯ ಮೂಲದವರು ಪ್ಲೇನೋದ ಪಾರ್ಕರ್ ರಸ್ತೆಯಲ್ಲಿ ಸಾಯಿ ಮಂದಿರವೊದನ್ನು ಸ್ಥಾಪಿಸಿಕೊಂಡಿದ್ದಾರೆ. ಇಲ್ಲಿ ಬೇರೆ ಮಂದಿರಗಳಲ್ಲಿ ನಡೆಯುವ ತರವೇ ಪ್ರಾರ್ಥನೆ, ಪೂಜೆ ನಡೆಯುತ್ತದೆ. ಭಕ್ತರೂ ಸಾಕಷ್ಟು ಇದ್ದಾರೆ. ಸದ್ಯಕ್ಕೆ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಇರುವ ಈ ಪ್ರಾರ್ಥನಾ ಮಂದಿರವನ್ನು ಶೀಘ್ರದಲ್ಲೇ 'ದೇವಸ್ಥಾನ' ವನ್ನಾಗಿ ಮಾಡುವ ಹಂಬಲ ಇಲ್ಲಿಯ ಸಾಯಿಬಾಬ ಭಕ್ತರಲ್ಲಿದೆ.(ಸಾಯಿಮಂದಿರದ ವೆಬ್ ಸೈಟ್.www.shirdisaidallas.org/mainhome.html)
ಹಾಗಾಗಿ ಹಿಂದೂಗಳು ತಮ್ಮ ತವರಿನ 'ಭಕ್ತಿ' ವಾತಾವರಣವನ್ನೇ ಇಲ್ಲೂ ಸೃಷ್ಟಿ ಮಾಡುವ ಹಾದಿಯಲ್ಲಿ ಇದ್ದಾರೆ.ಇಲ್ಲಿ ದೇವಸ್ಥಾನ/ದೇವಾಲಯ ಮಾಡಬೇಕೆಂದರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಅವರ ನಿಯಮಗಳನ್ನು ಪಾಲಿಸಿದರೆ ಧಾರಾಳವಾಗಿ ನಮ್ಮ ಕಾರ್ಯ ಮುಂದುವರೆಸಬಹುದು.
ದೇವಸ್ಥಾನಗಳ ಹೊರತಾಗಿ ಇಲ್ಲಿ ಹಲವು ಸಂಘ-ಸಂಸ್ಥೆಗಳ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅದು ರವಿಶಂಕರ್ ಗುರೂಜಿಯವರ ಪ್ರಾಣಾಯಾಮ/ಸುದರ್ಶನ ಕ್ರಿಯಾ ತರಗತಿ ಇರಬಹುದು, ದತ್ತಯೋಗ ಸೆಂಟರ್ ನ ಯೋಗ ತರಗತಿರಬಹುದು, ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಧ್ಯಾನ ತರಗತಿಯಿರಬಹುದು ಅಥವಾ ಭರತನಾಟ್ಯ ಕಾರ್ಯಕ್ರಮವಿರಬಹುದು. ಇದಲ್ಲದೇ ಭಾರತದಿಂದ ಕಲಾವಿದರನ್ನು ಕರೆಸಿ ಇಲ್ಲಿ ಕಾರ್ಯಕ್ರಮ ಏರ್ಪಡಿಸಿ ಪ್ರೋತ್ಸಾಹಿಸುತ್ತಾರೆ. ನಮ್ಮ ಮುಂದಿನ ಜನಾಂಗಕ್ಕೆ ನಮ್ಮ ದೇಶದ, ಸಂಸ್ಕೃತಿಯ ಅರಿವಿರಲಿ ಎಂದು ಕೂಡ ಈ ಆಶಯಗಳಲ್ಲೊಂದು.
ಯಾವುದೇ ವಸ್ತು, ವ್ಯಕ್ತಿ, ಜಾಗದಿಂದ ದೂರ ಹೋದಷ್ಟೂ ಅದರ ಬಗ್ಗೆ ಭಾವನೆ, ನಂಬಿಕೆ ಜಾಸ್ತಿಯಾಗುತ್ತದಂತೆ. ಭಾರತದಲ್ಲಿ ದೇವಸ್ಥಾನದ ಮುಖವನ್ನೂ ನೋಡದ ಎಷ್ಟೋ ನಮ್ಮ ಯುವಕರೂ ಇಲ್ಲಿ ದೇವಸ್ಥಾನಕ್ಕೆ ನಿರಂತರವಾಗಿ ಬಂದು ನಿಜವಾದ ಭಕ್ತರ ಸಾಲಿಗೆ ಸೇರುತ್ತಾರೆ! ನಾನು ಇಲ್ಲಿ ವಿವರವನ್ನು ಕೊಟ್ಟಿರುವುದು ಬರೀ ಉತ್ತರ ಟೆಕ್ಸಾಸ್ನ ಸುಮಾರು ೫೦ ಚದರ ಮೈಲಿಯಲ್ಲಿರುವ ದೇವಸ್ಥಾನಗಳ ಬಗ್ಗೆ. ಅಮೆರಿಕಾದ ಬೇರೆ ಭಾಗಗಳಲ್ಲಿ ಇನ್ನೂ ದೊಡ್ಡ ಪ್ರಮಾಣದಲ್ಲಿ ಸನಾತನ ಧರ್ಮಿಗಳು ಕ್ರಿಯಾಶೀಲರಾಗಿದ್ದಾರೆ ಮತ್ತು ಹಲವು ಬೃಹದಾಕಾರದ ದೇವಾಲಯಗಳಿವೆ. ಸ್ಥಳೀಯ (ಅಮೇರಿಕನ್)ಜನಾಂಗದಲ್ಲಿ ಹಿಂದೂ ಧರ್ಮದ ಬಗ್ಗೆ ಹೆಚ್ಚಿನ ಅರಿವು೦ಟುಮಾಡಿದ್ದಾರೆ.ಒಟ್ಟಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳು ಅಮೇರಿಕದಲ್ಲಿ ಹಿಂದೂಗಳನ್ನು ಒಟ್ಟುಗೂಡಿಸುವುದರಲ್ಲಿ ಮಹತ್ತರ ಪಾತ್ರ ವಹಿಸಿದೆ. ಕಾರಣ ನಮ್ಮವರು ಹೆಚ್ಚಾಗಿ ಸೇರುವುದು ದೇವಸ್ಥಾನದಲ್ಲೇ.
ಇದಕ್ಕಿಂತ ಹೆಚ್ಚಿಗೆ ಖುಷಿ ಕೊಡುವುದು, ಇಲ್ಲಿಯ ಭಾರತೀಯ ಮೂಲದವರು ವಿವಿಧ ಆಕರಗಳಿಂದ ಹಣ ಸಂಗ್ರಹಿಸಿ, ಭಾರತದ ಹಲವಾರು ಕ್ಷೇತ್ರಗಳಲ್ಲಿ ಸಹಾಯ ಮಾಡಿ, ಅಭಿವೃದ್ದಿಯ ಪಥಕ್ಕೆ ಕರೆದೊಯ್ಯುತ್ತಿರುವುದು. ಭಾರತೀಯರಲ್ಲದೆ ಬೇರೆಬೇರೆ ದೇಶದ ಹಿಂದೂಗಳೂ ನಮ್ಮೊಂದಿಗೆ ಬೆರೆತು ಭಾರತಕ್ಕೆ ಸಹಾಯ ಮಾಡುವುದನ್ನೂ ಕಾಣಬಹುದು. ಪ್ರತೀ ದೇವಸ್ತಾನದಲ್ಲಿ ಭಾರತಕ್ಕಾಗಿ ಏನಾದರೊಂದು ಕಾರ್ಯಕ್ರಮ ಹಾಕಿಕೊಂಡಿರುವುದನ್ನು ನೋಡಬಹುದು. ಇಷ್ಟಾದರೂ NRI ಗಳು ಭಾರತಕ್ಕಾಗಿ ಏನು ಮಾಡಿದ್ದಾರೆ? ಅಂತ ಆಗಾಗ್ಗೆ ಕೇಳುತ್ತಿರುತ್ತಾರೆ ಕುಹಕಿಗಳು. ನಾನು ಒಂದು ಸಣ್ಣ ಉದಾಹರಣೆ ಕೊಡುತ್ತೇನೆ.ಇಲ್ಲಿ ಮೊನ್ನೆ ಭಾರತೀಯ ಒಬ್ಬರ ಮನೆಯಲ್ಲಿ ಹುಟ್ಟುಹಬ್ಬಕ್ಕೆ ಕರೆದಿದ್ದರು. ಇ-ಮೇಲ್ ಅಹ್ವಾನ ಪಾತ್ರ ಕಳಿಸಿದ್ದರು. ಅದರಲ್ಲಿ ' ಗಿಫ್ಟ್ ಏನೂ ತರಬೇಡಿ' ಅಕಸ್ಮಾತ್ ಏನಾದರೂ ಕೊಡಬೇಕೆನಿಸಿದರೆ ನಮ್ಮ ಮನೆಯಲ್ಲಿ ಒಂದು ಡಬ್ಬ (ಹುಂಡಿ) ಇಟ್ಟಿರುತ್ತೇವೆ ಅದಕ್ಕೆ ನೋಟನ್ನು ಹಾಕಿಬಿಡಿ ಅಂತ ಇತ್ತು. ಸರಿ ಗಿಫ್ಟ್ ಬೇಡ ಅದೇ ಹಣವನ್ನು ಡಬ್ಬದಲ್ಲಿ ಹಾಕಿದರಾಯಿತು ಅಂತ ಹೋದೆವು. ಪಾರ್ಟಿಯ ಮದ್ಯೆ ಅವರು ಬಿಡುವುಮಾಡಿಕೊಂಡಾಗ ನಾನು ಕುತೂಹಲದಿಂದ ವಿಷಯ ಕೇಳಿದೆ. ಅದಕ್ಕೆ ಅವರ ಉತ್ತರ "ನಾವು ಭಾರತದಲ್ಲಿ ಬಡತನದಲ್ಲಿ ಓದಿದೆವು, ಆ ಸ್ಕೂಲಲ್ಲಿ ಯಾವ ಸೌಲಭ್ಯವೂ ಇರಲಿಲ್ಲ, ಈಗ ಪ್ರತೀ ವರ್ಷವೂ ನಾವು ಓದಿದ, ಇದ್ದ ಸ್ಥಳಕ್ಕೆ ಏನಾದರೊಂದು ಸಹಾಯ ಮಾಡುತ್ತೇವೆ, ಡಬ್ಬದಲ್ಲಿ ಶೇಖರಿಸಿದ ಹಣಕ್ಕೆ ಎರಡರಷ್ಟು ಹಣವನ್ನು ಸೇರಿಸಿ, ಒಂದು ಸಂಪೂರ್ಣ ಮೊತ್ತ ಮಾಡಿ, ಅಲ್ಲಿಗೆ ತಂದೆ ತಾಯಿಯ ಹೆಸರಲ್ಲಿ ದಾನಮಾಡುತ್ತೇವೆ. ಮಗಳಿಗೆ ಆರು ವರ್ಷ, ಮಗಳ ಮೊದಲ ಹುಟ್ಟುಹಬ್ಬದಿಂದ ಇದನ್ನು ಪ್ರಾರಂಭಿಸಿದ್ದೇವೆ". ನನ್ನ ಕಣ್ಣಲ್ಲಿ ನೀರು ಜಿನುಗಿದ್ದನ್ನು ಸದ್ಯ ಯಾರೂ ಗಮನಿಸಲಿಲ್ಲ. ನಾವು ಪಾರ್ಟಿ ಮುಗಿಸಿ ಹೋಗುವಾಗ ಇನ್ನೊಂದು ನೋಟನ್ನು ಜೊತೆಗೆ ಸೇರಿಸಿ ಡಬ್ಬಿಗೆ ಹಾಕುವುದನ್ನು ಮರೆಯಲಿಲ್ಲ. ಸ್ವಲ್ಪ ದಿನವಾದ ಮೇಲೆ ತಿಳಿಸಿದರು .
"ಒಂದು ಲಕ್ಷ ರೂಪಾಯನ್ನು ಕಳಿಸಿಕೊಟ್ಟಿದ್ದೇವೆ".
ಹಾಗಾಗಿ, ಸ್ನೇಹಿತರೆ ನಾವು ಉದ್ಯೋಗ ಅರಸಿಕೊಂಡು, ವಿಮಾನ ಏರಿಕೊಂಡು ಪರದೇಶಕ್ಕೆ ಬಂದಿರಬಹುದು. ಆದರೆ, ನಮ್ಮತನವನ್ನು ಬಿಟ್ಟಿಲ್ಲ. ಬಿಡುವುದೂ ಇಲ್ಲ. ಯಾವತ್ತೂ ತವರು ತವರೇ ಅಲ್ಲವೇ?
----------
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ