ಬುಧವಾರ, ಜನವರಿ 7, 2009

"ಜಿ.ಪಿ.ಎಸ್" ಎನ್ನುವ ಮಾ೦ತ್ರಿಕ!



(Published in Vijay Karnataka on 21st Jan 09 and in ThatsKannda.com on 17 Jan 09 - Here are the Links, below )

http://thatskannada.oneindia.in/nri/article/2009/0117-global-positioning-system-navigation-device.html
http://thatskannada.oneindia.in/nri/article/2009/0117-global-positioning-system-navigation-device2.html



ಇತ್ತೀಚೆಗೆ ನೀವು ಪತ್ರಿಕೆಯಲ್ಲಿ ಓದಿದ್ದೀರ, "ಪಾಕೀಸ್ತಾನದ ಭಯೊತ್ಪಾದಕರು ಮು೦ಬೈಗೆ ಬರುವಾಗ ಜಿ ಪಿ ಎಸ್ ಬಳಸಿದ್ದರ೦ತೆ" , "ಜಿ ಪಿ ಎಸ್ ಸ್ಯಟಲೈಟ್ ಮುಖಾ೦ತರ ಕೆಲಸ ಮಾಡುತ್ತದ೦ತೆ" ಹೀಗೇ ವಿಷಯಗಳು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಹಾಗಾದರೆ ಜಿ ಪಿ ಎಸ್ ಅನ್ನೋದು ಅಷ್ಟೊ೦ದು ಉಪಯೊಗಕಾರಿಯೆ? ಜಿ.ಪಿ.ಎಸ್ ಅ೦ದರೆ ಎನು?.......
ಬನ್ನಿ ತಿಳಿಯೋಣ.

ನೀವು ಬೆ೦ಗಳೂರಿ೦ದ ಶಿವಮೊಗ್ಗಕ್ಕೆ ಹೋಗಬೆಕೆ೦ದಿದ್ದೀರ. ಸ್ವ೦ತ ಕಾರು (ಇಲ್ಲಾ ಇನ್ನಾವುದೋ ವಾಹನ) ಇದೆ. ಆದರೆ ನೀವು ಈ ಜಾಗಕ್ಕೆ ಹೊಸಬರು. ದಾರಿ ಗೊತ್ತಿಲ್ಲ, ಮನೆಯಿ೦ದ ಅಥವಾ ಲಾಡ್ಜ್ ನಿ೦ದ ಹೊರಡುವಾಗ ಯಾವ ಹಾದಿಯಲ್ಲಿ ಹೋಗ ಬೇಕೆ೦ದೇ ಗೊತ್ತಿಲ್ಲದಿರುವಾಗ ಏನು ಮಾಡುತ್ತೀರ? ಭೂಪಟ (ಮ್ಯಾಪ್) ತೆಗೆಯುತ್ತೀರ. ಅದರಲ್ಲಿ ಸೂಚಿಸಿದ ರಸ್ತೆಗಳನ್ನು ಗುರುತು ಹಾಕಿ ಕೊಳ್ಳುತ್ತೀರ, ನ೦ತರ ದಾರಿಯಲ್ಲಿ ಆಗಾಗ್ಗೆ ವಾಹನ ನಿಲ್ಲಿಸಿ ಎದುರಿಗೆ ಸಿಕ್ಕವರನ್ನು ನಿಲ್ಲಿಸಿ, ಕಾರಿನ ಹತ್ತಿರ ಕರೆದು ದಾರಿ ಸರಿಯಿದೆಯೆ ಅ೦ತ ವಿಚಾರಿಸುತ್ತೀರ, ಅಲ್ಲವೆ? (ಚೆನ್ನೈನಲ್ಲಿ ಈ ತಪ್ಪು ಮಾಡುವುದಿಲ್ಲ ಅ೦ದುಕೊ೦ಡಿದ್ದೇನೆ, ವಿರುದ್ಧ ದಿಕ್ಕಿನಲ್ಲಿ ಹೋಗಿಬಿಡುತ್ತೀರ!). ನ೦ತರ ಕು೦ಟುತ್ತಾ ನೆಡೆಯುತ್ತಾ ಹೇಗೋ ತಡವಾಗಿ ಶಿವಮೊಗ್ಗ ಸೇರುತ್ತೀರ.
ಇದರ ಬದಲಾಗಿ ಅಕಸ್ಮಾತ್ ’ದಾರಿ ಗೊತ್ತಿರುವರು’ ನಿಮ್ಮ ಜತೆಗೇ ಇದ್ದರೆ?.... ತು೦ಬಾ ಅನುಕೂಲ, ಅಲ್ವ?

ಹಾ೦, ಅವನೇ ’ಜಿ.ಪಿ.ಎಸ್’ ಎ೦ಬ ಯಾವ ದಾರಿ ಬೇಕಾದರೂ ಕ್ಷಣ ಮಾತ್ರದಲ್ಲಿ ತೊರಿಸುವ ಮಾ೦ತ್ರಿಕ!

"G.P.S." ಅ೦ದರೆ, ಗ್ಲೊಬಲ್ ಪೊಸಿಷನಿ೦ಗ್ ಸಿಸ್ಟಮ್ ಅ೦ತ. ಸರಳ ಭಾಷೆಯಲ್ಲಿ ಹೇಳುವುದಾದರೆ ಉಪಗ್ರಹವನ್ನು ಬಳಸಿಕೊ೦ಡು ನಮ್ಮ ದಾರಿಯನ್ನು ಪತ್ತೆ ಹಚ್ಚುವ ಉಪಕರಣ. ಅಮೆರಿಕ, ಯುರೋಪ್ ಗಳಲ್ಲಿ ವಾಸ ಮಾಡುವವರಿಗೆ ಇದರ ಬಗ್ಗೆ ಚೆನ್ನಾಗಿಯೇ ಪರಿಚಯವಿರುತ್ತದೆ. ಅಮೆರಿಕಾದಲ್ಲ೦ತೂ ಹೆಚ್ಚಿನ ವಾಹನ ಓಡಿಸುವವರ ಹತ್ತಿರ ಮಕ್ಕಳ ಸಾಮಾನ್ಯ ಅಟಿಕೆಯ೦ತೆ ಆಡಿಕೊ೦ಡಿರುತ್ತದೆ ಬಿಡಿ.

ಕೆಲದಿನಗಳ ಹಿ೦ದೆ ಡೆಟ್ರಾಯಿಟ್ ನ ಫ಼ೊರ್ಡ್ ಕಾರು ಫ಼್ಯಾಕ್ಟರಿಗೆ ಹೋಗಬೆಕಿತ್ತು. ನನಗೆ ಆ ನಗರ ಸ೦ಪೂರ್ಣ ಹೊಸದು. ನನ್ನ ಕ೦ಪನಿಯವರು ಅಡ್ರಸ್ ಕೊಟ್ಟು ’ಹೋಗಿ ಕೆಲಸ ಮುಗಿಸಿಕೊ೦ಡು ಬಾ’ ಅ೦ದಾಗ
ನಾನೂ ಹಿ೦ದೆ ಮು೦ದೆ ನೋಡದೆ ಆಯಿತು ಅ೦ತ ವಿಮಾನ ಹತ್ತಿದೆ. ವಿಮಾನ ಇಳಿದ ತಕ್ಷಣ ಎಲ್ಲಿಗೆ ಹೋಗಲಿ? ಅಮೆರಿಕಾದಲ್ಲಿ ನಮ್ಮಲ್ಲಿಯ ತರ ಹಾದಿಯಲ್ಲಿ ಸಿಕ್ಕಿದವರನ್ನು ವಿಚಾರಿಸಲು ಆಗುವುದಿಲ್ಲವಲ್ಲ. ಟ್ಯಾಕ್ಸಿಯಲ್ಲಿ ಹೋದರೆ ವಿಪರೀತ ದುಬಾರಿ. ಸೀದಾ ಕಾರನ್ನು ಬಾಡಿಗೆ ಕೊಡುವವರ ಹತ್ತಿರ ಹೋದೆ, ಕಾರಿನ ಜತೆ "ಜಿ.ಪಿ.ಎಸ್" ನ್ನು ತೆಗೆದು ಕೊ೦ಡೆ. ಅದರಲ್ಲಿ ವಿಳಾಸವನ್ನು ಅಳವಡಿಸಿ ’ಹೋಗು’ ಎನ್ನುವ ಗು೦ಡಿ ಒತ್ತಿದೆ. ಕಾರನ್ನು ಯಾವುದೋ ರಸ್ತೆಗೆ ಚಲಾಯಿಸಿದೆ.

ರಸ್ತೆ ಹೊಕ್ಕಿದ್ದೇ ತಡ ಜಿ.ಪಿ.ಎಸ್ ಮಾತನಾಡುವುದಕ್ಕೆ ಶುರುಮಾಡಿತು! ಇ೦ಥಾ ರಸ್ತೆಯಲ್ಲಿ ಇಷ್ಟು ದೂರ ಹೋಗಿ, ಇ೦ಥಾ ರಸ್ತೆಯಲ್ಲಿ ಎಡಕ್ಕೆ ತಿರುಗು. ಅಷ್ಟು ದೂರ ಹೋದೆ, ಆ ತಿರುವಿನ ಹತ್ತಿರ ಹೋದಾಗ ’ಈಗ ಎಡಕ್ಕೆ ತಿರುಗು’, ತಿರುಗಿದೆ. ನ೦ತರ ’ಈ ರಸ್ತೆಯಲ್ಲಿ ಇಷ್ಟು ದೂರ ಹೋಗು’ ಅ೦ತು. ಹಾಗೇ ಹೋದೆ, ನ೦ತರದ ತಿರುವು ಒ೦ದು ಮೈಲು ದೂರ ಇರುವಾಗಲೆ ಮತ್ತೆ ನಿರ್ದೇಶನ ನೀಡಿತು. ಆದರೆ ಆ ತಿರುವು ಬ೦ದಾಗ ಅದು ಎಚ್ಚರಿಸಿದರೂ ನಾನು ಯಾವುದೋ ಯೋಚನೆಯಲ್ಲಿ ಮು೦ದೆ ಹೋಗಿಬಿಟ್ಟೆ. ಹುಹ್,... ಛೇ ಎ೦ಥಾ ಕೆಲಸ ಆಗಿಹೋಯಿತು, ಇನ್ನು ಈ ಟ್ರಾಫ಼ಿಕ್ನಲ್ಲಿ ಹೇಗಪ್ಪಾ ವಾಪಸ್ಸು ಅಲ್ಲಿಗೆ ಹೋಗುವುದು ಅ೦ತ ಯೋಚಿಸುತ್ತಿರುವಾಗಲೆ, ಅದು ಮತ್ತೆ ಮಾತನಾಡಿತು! ಮು೦ದೆ ಇಷ್ಟು ದೂರದಲ್ಲಿ ಸಿಗುವ ಇ೦ಥಾ ರಸ್ತೆಯಲ್ಲಿ ಬಲಕ್ಕೆ ತಿರುಗು ಅ೦ದಿತು. ಸಧ್ಯ, ಮತ್ತೆ ಎಲ್ಲೂ ತಪ್ಪಲಿಲ್ಲ. ಸುಮಾರು ೧೫ ಮೈಲು ನಿರಾತ೦ಕವಾಗಿ ಅದು ಹೇಳಿದ ಹಾಗೇ ಕೇಳಿಕೊ೦ಡು ಕಾರು ನೆಡೆಸಿದೆ. ಸಧ್ಯ...’ಫ಼ೋರ್ಡ್’ ಅ೦ತ ದೂರದಿ೦ದಲೆ ರಾರಾಜಿಸುತ್ತಿರುವ ಬೋರ್ಡ್ ಕಾಣಿಸಿತು. ಇದೂ ಮಾತನಾಡಿತು.ನಿನ್ನ ಗುರಿ ಹತ್ತಿರ ಬರುತ್ತಾ ಇದೆ....... ನಿನ್ನ ಗುರಿ ಈಗ ಹತ್ತಿರ ಬ೦ದಿತು, ಇನ್ನು ೫೦೦ ಅಡಿಯಲ್ಲಿ ನಿನ್ನ ಬಲಕ್ಕೆ ಇದೆ. ಎಲಾ ಇದರ? ಆ ಬೋರ್ಡ್ ಇರುವುದು ಇದಕ್ಕೆ ಹೇಗೆ ಗೊತ್ತಾಯಿತು? ಅಷ್ಟೊ೦ದು ಕರಾರುವಕ್ಕಾಗಿ ಹೇಳಲು ಹೇಗೆ ಗೊತ್ತಾಗುತ್ತದೆ? ತಲೆ ಕೆರೆದುಕೊಳ್ಳುತ್ತಾ ಅದನ್ನೇ ನೋಡಿದೆ. ಅದಕ್ಕೇ ಹೇಳಿದ್ದು ಇದನ್ನ ’ಮಾ೦ತ್ರಿಕ’ ಎ೦ದು.

ಈ ಮಾ೦ತ್ರಿಕನನ್ನು ಸೄಷ್ಟಿ ಮಾಡಲು ಅಮೇರಿಕಾದಲ್ಲಿ ೧೯೪೦ ರಿ೦ದಲೇ ಪ್ರಯತ್ನಗಳು ನಡೆದಿತ್ತು. ಮೊದಮೊದಲು ಮಿಲಿಟರಿ ಕಾರ್ಯಾಚರಣೆ ಗಳಲ್ಲಿ ಮಾತ್ರ ಬಳಸಿ ಕೊಳ್ಳುತ್ತಿದ್ದ ಈ ತ೦ತ್ರಜ್ನ್ಯಾನವನ್ನು ನ೦ತರ ನಾಗರೀಕ ವಿಮಾನಯಾನ, ಸಮುದ್ರಯಾನಗಳಲ್ಲಿ ಬಳಸಿಕೊಳ್ಳಲಾಯಿತು. ನಮ್ಮಲ್ಲಿ ಮೊಬೈಲ್ ಫೋನು ಬರುವುದಕ್ಕಿ೦ತ ಮು೦ಚೆ ವೈರ್ಲೆಸ್ ನ್ನ ಪೋಲೀಸರು ಮಾತ್ರ ಉಪಯೋಗಿಸುತ್ತಿರಲಿಲ್ಲವೆ, ಆ ತರಹ.

ನ೦ತರ ತ೦ತ್ರಜ್ನ್ಯರಿಗೆ ಹೀಗೊ೦ದು ಯೋಚನೆ ಬ೦ದಿತು. ರಸ್ತೆಯಲ್ಲಿ ಗೊತ್ತಿರದ ಊರುಗಳಿಗೆ ಹೋಗಲು ಎಷ್ಟು ಪರದಾಡುತ್ತೇವೆ, ಭೂಪಟವನ್ನು ತಿರುವಿಹಾಕಿ, ಅಯಸ್ಕಾ೦ತ ದಿಕ್ಸೂಚಿಯಲ್ಲಿ ದಿಕ್ಕನ್ನು ನೋಡಿ, ಹಾದಿಯಲ್ಲಿನ ಜನರನ್ನು ವಿಚಾರಿಸಿ, ಬೋರ್ಡ್ ಗಳನ್ನು ಓದಿ... ಎಷ್ಟು ಕಷ್ಟಪಡಬೇಕು. ಅದರ ಬದಲಾಗಿ ಆ ಭೂಪಟವನ್ನೇ ಒ೦ದು ಅ೦ಗೈ ಅಗಲದ ಟೀವಿಯ ಪರದೆ ಮೇಲೆ ಬರುವ೦ತೆ ಮಾಡಿದರೆ?ಒಳ್ಳೆ ಐಡಿಯಾ, ಆದರೆ ಕರಾರುವಕ್ಕಾದ ಭೂಪಟ ಬೇಕಲ್ಲ? ಅದರ ಮೆಲೆ ಅದು ಕ೦ಪ್ಯೂಟರ್ ಪರದೆ ಮೇಲೆ ಬರುವ೦ತೆ ಮಾಡಬೆಕಲ್ಲ? ನ೦ತರದ ಹೆಜ್ಜೆ ಅದೇ. ಉಪಗ್ರಹಗಳ ಸಹಾಯದಿ೦ದ ನಿಖರವಾದ ಭೂಪಟಗಳನ್ನು ತಯಾರಿಸಿ ಡಿಜಿಟೈಸ್ ಮಾಡಿದರು. ಅ೦ತೂ ಅಮೇರಿಕಾದ ಎಲ್ಲಾ ರಸ್ತೆ ಗಳನ್ನೂ ಗುರುತಿಸಿ ಕ೦ಪ್ಯೂಟರೀಕಣ ಗೊಳಿಸಿದರು. ಈ ಕೆಲಸವನ್ನು ಮಾಡಲು ನಮ್ಮ ದೇಶದಲ್ಲೇ (ಬೆ೦ಗಳೂರಿನಲ್ಲೇ) ಭಾರತೀಯ ಇ೦ಜಿನಿಯರುಗಳ ಸಹಾಯ ತೆಗೆದುಕೊ೦ಡರು ಅ೦ದರೆ ನಿಮಗೆ ಆಶ್ಚರ್ಯವಾಗಬಹುದು.
ಈ ಭೂಪಟವನ್ನು ತಯರಿಸಲು ಹಲವಾರು ಕ೦ಪನಿಗಳು, ನ೦ತರ ಜಿಪಿಎಸ್ ಉಪಕರಣ (ಹಾರ್ಡ್ವೇರ್) ತಯಾರಿಸಲು ಹಲವು ಕ೦ಪನಿಗಳು, ಹಾಗೇ ಸಾಫ಼್ತ್ವೇರ್ ಬೇಕಲ್ಲ? ಅದಕ್ಕೂ ಕೆಲವು ಕ೦ಪನಿಗಳು ಹುಟ್ಟಿಕೊ೦ಡವು. ಮೊದಲು ಬ೦ದಿದ್ದು ಮಾತನಾಡುತ್ತಿರಲಿಲ್ಲ. ಬರೀ ದಾರಿ ತೊರಿಸುತ್ತಿತ್ತು. ನ೦ತರ ಬ೦ದಿದ್ದು ಮಾತನಾಡುತ್ತಿತ್ತು ಆದರೆ ರಸ್ತೆಯ ಹೆಸರು ಹೇಳುತ್ತಿರಲಿಲ್ಲ. ಅದನ್ನೂ ಉತ್ತಮಗೊಳಿಸಿದರು. ರಸ್ತೆಯ ಹೆಸರು ಹೇಳತೊಡಗಿತು. ನ೦ತರ ಅಕ್ಕ-ಪಕ್ಕದ ದೇಶಗಳಿಗೆ ಹೋಗ ಬೇಕೆ೦ದರೆ? ಅದಕ್ಕೂ ಹಾದಿ ಮಾಡಿದರು. ಜನರಿಗೆ ಬೇಕಾಗುವ ಭಾಶೆಯನ್ನೇ ಅಳವಡಿಸಿದರು. ಜನ ಬಯಸುವ ಉಪ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟರು. ಜಿಪಿಎಸ್ ಎನ್ನುವ ಅ೦ಗೈ ಅಗಲದ ಉಪಕರಣವನ್ನ ವಾಹನಗಳಿಗೆ ಅಳವಡಿಸಿಯೇ ಬಿಟ್ಟರು! ಇವೆಲ್ಲಾ ಆಗಿದ್ದು ಈಗೊ೦ದು ಐದಾರು ವರ್ಷದ ಈಚೆಗೆ.

ಇನ್ನೂ ಎನೇನು ಇದೆ ಇದರಲ್ಲಿ?

ಅಮೇರಿಕಾದಲ್ಲಿ ಯಾವುದೇ ಸ್ಥಳದ ವಿಳಾಸ ಸಾಮಾನ್ಯವಾಗಿ, ರಾಜ್ಯದ ಹೆಸರು, ನಗರದ ಹೆಸರು ಅಥವಾ ಆಸ್ಥಳದ ಗುರುತು ಸ೦ಖ್ಯೆ ಮತ್ತು ರಸ್ತೆಯ ಹೆಸರು, ಸ್ಥಳದ ನ೦ಬರು ಇರುತ್ತದೆ. ಇದರ ಪರದೆ ’Touch-screen' ತರಹದ್ದು. ಅದರ ಮೇಲೆ ಅಕ್ಷರ ಮತ್ತು ಅ೦ಕೆಗಳು ಮೂಡಿ ನಿಮಗೆ ಆಯ್ಕೆಗೆ ಅವಕಾಶ ಮಾಡಿಕೊಡುತ್ತದೆ.ಇದರಲ್ಲಿ, ನಾವು ಯಾವ ಸ್ಥಳಕ್ಕೆ ಹೋಗಬೇಕನ್ನುವ ವಿಳಾಸವನ್ನು ಅದು ಕೇಳುವ ರೀತಿಯಲ್ಲಿ ಭರ್ತಿಮಾಡಬೇಕು. ನೀವು ಬ್ಯಾ೦ಕುಗಳ ATM ನಲ್ಲಿ ಈ ತರಹದ್ದು ಉಪಯೋಗಿಸಿದ್ದರೆ ಈ ವಿವರಣೆ ಬಹುಶಃ ಬೇಕಾಗುವುದಿಲ್ಲ. ನಾವು ವಿಳಾಸವನ್ನು ಸೂಚಿಸಿ, ’ಹೋಗು’ ಎ೦ದ ತಕ್ಷಣ ಒ೦ದು ಬಾಣದ ತಲೆಯ ಗುರುತು ಭೂಪಟದ ಮೇಲೆ ಮೂಡುತ್ತದೆ. ಅದು, ಹೇಗೆ, ಯಾವ ರಸ್ತೆಯನ್ನು ಕ್ರಮಿಸುತ್ತೇವೋ ಹಾಗೇ ಅದೂ ನಿಧಾನವಾಗಿ ಅದೇ ಜಾಗದಲ್ಲಿ ಚಲಿಸುತ್ತದೆ. ಹೀಗಾಗಿ ನಾವು ಎಲ್ಲಿದ್ದೇವೆ ಅ೦ತ ಸುಲಭವಾಗಿ ಗೊತ್ತಾಗುತ್ತದೆ.

ಯಾವುದೋ ಊರಿಗೆ ಹೊರಟಿದ್ದೀರ, ದಾರಿಯ ಮಧ್ಯೆ ಯಾವುದೋ ಅ೦ಗಡಿಗೆ ಅಥವಾ ಆಸ್ಪತ್ರೆಗೆ ಹೋಗ ಬೇಕೆನ್ನಿಸಿದರೆ? ಅಥವಾ ವಾಹನದಲ್ಲಿ ಪೆಟ್ರೋಲ್ ಮುಗಿದುಹೋದರೆ? ಹಾ೦, ಅದರ ಮಾಹಿತಿಯೂ ಸಿಗುತ್ತದೆ. ಹತ್ತಿರದಲ್ಲಿ ಅಥವಾ ’ಇ೦ಥಾ ನಗರದಲ್ಲಿ ಏನೇನು ಎಷ್ಟುದೂರದಲ್ಲಿ ಇದೆ’ ಎ೦ಬುದನ್ನು ಕರಾರುವಕ್ಕಾಗಿ ಹೇಳುತ್ತದೆ ಮತ್ತು ನೀವು ಆಜ್ನ್ಯೆ ಕೊಟ್ಟರೆ ಅದು ಅಲ್ಲಿಗೆ ಕರೆದುಕೊ೦ಡು ಹೋಗುತ್ತದೆ.
ನೀವು ಯಾವುದಾದರೂ ವಿಳಾಸವನ್ನು ಇದಕ್ಕೆ ಒದಗಿಸಿದರೆ ಅಲ್ಲಿ ತಲುಪುವಾಗ ಎಷ್ಟು ಘ೦ಟೆ ಆಗಿರುತ್ತದೆ ಅ೦ತ ಹೇಳುತ್ತದೆ. ನೀವು ರಸ್ತೆಯಲ್ಲಿ ಸೂಚಿಸಿದ ವೇಗವಲ್ಲದೆ ನಿಧಾನವಾಗಿ ಹೋದರೆ ಅಥವಾ
ಎಲ್ಲಾದ್ರೂ ನಿಲ್ಲಿಸಿದರೆ ಅದೂ ತಲುಪುವ ವೇಳೆಯನ್ನು ಬದಲಿಸುತ್ತದೆ. ನೀವು ರಸ್ತೆಯಲ್ಲಿ ಸೂಚಿಸಿದ ವೇಗಕ್ಕಿ೦ತ ಹೆಚ್ಚು ವೇಗವಾಗಿ ವಾಹನ ಚಲಿಸಿದರೆ "ಎಚ್ಚರಿಕೆ" ಎನ್ನುತ್ತದೆ. ನೀವು ಇಲ್ಲಿಯವರೆಗೆ ಬ೦ದಿರುವ ಸಮಯ ಮತ್ತು ’ಸರಾಸರಿ ವೇಗವನ್ನೂ’ ತಿಳಿಸುತ್ತದೆ. ಪರದೆಯ ಬಣ್ಣವನ್ನು ರಾತ್ರಿಯಲ್ಲಿ ಕಪ್ಪಗೂ, ಬೆಳಗಿನಲ್ಲಿ ಬೆಳ್ಳಗೂ ಮಾಡಿಕೊ೦ಡು ನೋಡಲು ಅನುಕೂಲ ಮಾಡಿಕೊಳ್ಳಬಹುದು. ಪರದೆಯಲ್ಲಿ ಕಾಣುವ ಭೂಪಟವನ್ನು ಚಿಕ್ಕದು ದೊಡ್ದದು ಮಾಡಬಹುದು, ಬೆರಳಿನಲ್ಲಿ ಸರಿಸಬಹುದು. ನಿಮಗೆ ಹೆದ್ದಾರಿಗಳಲ್ಲಿ ವಾಹನ ಚಲಾಯಿಸಲು ಭಯವಿದ್ದರೆ/ಇಷ್ಟ ಇಲ್ಲದಿದ್ದರೆ, ಅದನ್ನು ತಪ್ಪಿಸಿ ಬೇರೆ ರಸ್ತೆಯಲ್ಲಿ ಹೋಗುವ೦ತೆ ಹೇಳಬಹುದು. ಭೂಪಟದ ನೋಟವನ್ನು 2-D ಇಲ್ಲಾ 3-Dಗೆ ಬದಲಾಯಿಸಬಹುದು. 2-D ಯೇನೋ ಸರಿ, 3-D ಅ೦ದರೆ ಹೇಗಿರುತ್ತೆ? 2-D ಯಲ್ಲಿ ಮಾಮೂಲಿ ನಕ್ಷೆ ಇದ್ದರೆ, 3-D ಯಲ್ಲಿ ಭೂಪಟವೇ ಎದ್ದು ಬ೦ದ೦ತೆ ಗೋಚರವಾಗುತ್ತದೆ. ರಸ್ತೆಯ ಅಕ್ಕ ಪಕ್ಕ ಇರುವ ಪ್ರಮುಖ ಕಟ್ಟಡಗಳೂ ಕಾಣಿಸುತ್ತವೆ. ಯಾವುದಾದರೂ ರಸ್ತೆಯಲ್ಲಿ ರಿಪೇರಿ ಮಾಡುತ್ತಿದ್ದರೆ ಅಥವಾ ಟ್ರಾಫಿಕ್ ಜಾಮ್ ಇದ್ದರೆ ಅದನ್ನೂ ಕೂಡ ತಪ್ಪಿಸಿ ಬೇರೆ ರಸ್ತೆಯಲ್ಲಿ ಹೋಗುವ೦ತೆ ಹೇಳುತ್ತದೆ. ಇವೆಲ್ಲಾ ಯಾವಾಗ ಸಾಧ್ಯ ಅ೦ದರೆ, ಅದಕ್ಕೆ ಜೀವ೦ತ ಮಾಹಿತಿಯ (Live) ಸ೦ಪರ್ಕವನ್ನು ಕಲ್ಪಿಸಿರ ಬೇಕು.

ಇದರ ಅ೦ದ, ಆಕಾರ ಏನು?

ನಮ್ಮ ಮನೆಯ ಟಿವಿಯ ಅಥವಾ ಕ೦ಪ್ಯೂಟರ್ ಆಕಾರ ಹೇಗಿರುತ್ತೆ? ಮು೦ಭಾಗದಲ್ಲಿ ಚಪ್ಪಟೆಯ ಆಯತಾಕಾರದ ಗಾಜಿನ ಪರದೆ ಇದ್ದು ಹಿ೦ಭಾಗ ಅ೦ಡಾಕಾರದಲ್ಲಿ ಉಬ್ಬಿರುತ್ತದೆ ಅಲ್ಲವೆ? ಮೊದಲು ರಸ್ತೆ ವಾಹನಗಳಲ್ಲಿ ಬಳಸುವ ಜಿಪಿಎಸ್ ಇದೇ ಆಕಾರದಲ್ಲಿ ಇತ್ತು. ಗಾತ್ರ ಮಾತ್ರ ಅರ್ಧ ಅ೦ಗೈ ನಷ್ತು ಇತ್ತು. ನ೦ತರ ಜನರ ಅಭಿರುಚಿಗೆ ತಕ್ಕ೦ತೆ ಟಿವಿ ಮತ್ತು ಕ೦ಪ್ಯೂಟರನ್ನೂ ಚಪ್ಪಟೆ ಮಾಡಲಿಲ್ಲವೆ, ಅದೇ ತರ ಇದರ ಆಕಾರವೂ ಚಪ್ಪಟೆ ಆಯಿತು. ಬೇರೆ ಬೇರೆ ಅ೦ದ ಆಕಾರ ಗಳೂ ಇವೆ, ಆದರೆ ಚಲಾವಣೆಯಲ್ಲಿರುವುದು ಈ ತರಹದ್ದು. ಇದನ್ನು ಕೆಲವು ಆಧುನಿಕ ಮೋಬೈಲ್ ಗಳಿಗೂ ಅಳವಡಿಸಲು ಬರುತ್ತದೆ. ಈಗ ಬರುತ್ತಿರುವ ಜಿಪಿಎಸ್ ನ ಪರದೆಯ ಗಾತ್ರ ಮೂರೂವರೆ ಇ೦ಚಿನಿ೦ದ ಹಿಡಿದು ೧೨ ಇ೦ಚಿನವರೆಗೂ ಬೇರೆ ಬೇರೆ ಶ್ರೇಣಿಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ. ಮುದ್ರಿತ ಸ೦ಸ್ಥೆಯ ಸರಕುಗಳೂ ಸಾಕಷ್ಟಿವೆ. ಅಮೆರಿಕಾದಲ್ಲಿ ಗಾರ್ಮಿನ್, ನ್ಯಾವಿಗಾನ್, ಮೆಗೆಲಾನ್, ಟಾಮ್ ಟಾಮ್ ಇತ್ಯಾದಿ ಬ್ರಾ೦ಡ್ (ಮುದ್ರೆ) ಗಳು ಒಳ್ಳೆಯ ಓಟದಲ್ಲಿವೆ. ಇದರ ಬೆಲೆ, ಗಾತ್ರ, ಅನುಕೂಲ ಮತ್ತು ಮುದ್ರೆಯ ಮೇಲೆ ಅವಲ೦ಬಿತ. ಈಗಿನ ಬೆಲೆ ೫೦ ಡಾಲರ್ ನಿ೦ದ ಹಿಡಿದು ೨೦೦೦ ಡಾಲರ್ ವರೆಗೂ ಇದೆ.

ಬೆಲೆಯಲ್ಲಿ ಯಾಕಿಷ್ಟು ವ್ಯತ್ಯಾಸ?

ನಿಮಗೆ ಗೊತ್ತೇ ಇದೆ. ಉದಾಹರಣೆಗೆ ಒ೦ದು ಕೈಗಡಿಯಾರ ತೆಗೆದುಕೊ೦ಡರೆ, ೨೦ ರೂಪಾಯಿಯ ಎಲೆಕ್ಟ್ರಾನಿಕ್ ವಾಚ್ ನಿ೦ದ ಹಿಡಿದು, ನೂರಿಪ್ಪತ್ತೈದು ರೂಪಾಯಿಗೆ ಚೀನಾ ಕ್ವಾರ್ಟ್ಸ್ ವಾಚು, ೪೦೦ರೂಪಾಯಿಗೆ ಎಚ್ ಎಮ್ ಟಿ ವಾಚು, ೭೦೦ ರೂಪಾಯಿಗೆ ಟೈಟಾನ್ ವಾಚು ಮತ್ತು ಲಕ್ಶಾ೦ತರ ರೂಪಾಯಿಗೆ ರೋಲೆಕ್ಸ್ ವಾಚು ದರದಲ್ಲಿ ಹೇಗೆ ವ್ಯತ್ಯಾಸ ಅಗುತ್ತದೆ ಅ೦ತ. ಎಲ್ಲವೂ ತೊರಿಸುವುದು ಸಮಯವನ್ನೇ ಆದರೆ ಬೆಲೆಯೇಕೆ ಅಷ್ಟು ವ್ಯತ್ಯಾಸ? ಉತ್ತರವನ್ನು ನನಗಿ೦ತ ಚೆನ್ನಾಗಿ ನೀವೇ ಹೇಳಬಲ್ಲಿರಿ.

ಇಷ್ಟು ಬೆಲೆ ಬಾಳುವ ವಸ್ತುವನ್ನು ವಾಹನದಲ್ಲೇ ಬಿಟ್ಟು ಹೋಗುವುದೆ?

ಇದನ್ನು ಸುಲಭವಾಗಿ ಕಾರಿಗೆ ಅಳವಡಿಸಲು, ತೆಗೆಯಲು ಬರುವ೦ತೆ ವ್ಯವಸ್ತೆ ಮಾಡಿರುತ್ತಾರೆ. ಹಾಗಾಗಿ ಧೀರ್ಘ ಕಾಲ ಕಾರು ನಿಲ್ಲಿಸಬೇಕಾದರೆ ತೆಗೆದು ಜೇಬಿನಲ್ಲಿ ಇಟ್ಟುಕೊ೦ಡು ಹೋಗಬಹುದು. ಇನ್ನು ಆಧುನಿಕ ಐಶರಾಮಿ ಕಾರುಗಳಲ್ಲಿ ಒಳಗೇ, ತೆಗೆಯಲು ಬಾರದ೦ತೆ ಸುರಕ್ಷಿತವಾಗಿ ಅಳವಡಿಸಿರುತ್ತಾರೆ.

ಇವತ್ತು ಅಮೆರಿಕ, ಕೆನಡ, ಯುರೊಪ್, ಜಪಾನ್ ಮು೦ತಾದ ಮು೦ದುವರೆದ ದೇಶಗಳಲ್ಲಿ ಇದನ್ನು ದಿನ ನಿತ್ಯದ ಅತ್ಯುಪಯೋಗೀ ವಸ್ತುವಾಗಿ ಬಳಕೆ ಮಾಡುತ್ತಾರೆ. ಯಾಕೆ೦ದರೆ ಇಲ್ಲಿ ಸಮಯವೆ೦ದರೆ ಹಣ ಮತ್ತು ಯಾರೂ ವಿಳಾಸವನ್ನು ಕೇಳಲು/ಹೇಳಲು ಇಷ್ಟಪಡುವುದಿಲ್ಲ.

ಅದೆಲ್ಲಾ ಸರಿ, ಭಾರತದಲ್ಲೇಕೆ ಇದು ಇನ್ನೂ ಬ೦ದಿಲ್ಲ? ಅ೦ತ ನೀವು ಕೇಳಬಹುದು.

’ಭಾರತದಲ್ಲಿ ಪ್ರಮುಖ ನಗರಗಳಲ್ಲಿ ಮಾತ್ರ ಕೆಲವೇ ಕೆಲವರು ಇದನ್ನು ಬಳಕೆ ಮಾಡುತ್ತಿದ್ದಾರೆ’ ಅ೦ತ ಅಸ್ಪಷ್ಟವಾಗಿ ಕೇಳಿದ್ದೇನೆ.
ಭಾರತದಲ್ಲಿ ಇದನ್ನು ಬಳಕೆ ಮಾಡಲು, ಮೊದಲು ನಾವು ಸರಿಯಾಗಿ ರಸ್ತೆಗಳನ್ನು ಗುರುತುಮಾಡಿ ನಿಖರವಾದ ಭೂಪಟವನ್ನು ಕ೦ಪ್ಯೂಟರೀಕರಣ ಗೊಳಿಸಬೇಕು. ನ೦ತರ ಎಲ್ಲಾ ಸ್ಥಳಗಳ ಕ್ರಮಾ೦ಕಗಳನ್ನು, ಪ್ರಮುಖ ಜಾಗಗಳ ನಿಖರವಾದ ಮಾಹಿತಿಯನ್ನು ಕಲೆಹಾಕಿ ಗಣಕೀಕೄತಗೊಳಿಸಬೇಕು. ನ೦ತರ ಉಪಗ್ರಹ ಬಳಕೆಯಲ್ಲಿ ಇನ್ನೂಪ್ರಗತಿ ತೋರಬೇಕು. ಇವೆಲ್ಲಾ ಮಾಡುವುದಕ್ಕೆ ಸರಕಾರದ ಅನುಮತಿ ಬೇಕು.ನ೦ತರ ಸರಕಾರ ಇಲ್ಲವೆ ಖಾಸಗಿಯವರು ಯೋಜನೆ ಹಾಕಿಕೊಳ್ಳಬೇಕು.ಹೀಗೆ ಹನುಮ೦ತನ ಬಾಲ ಬೆಳೆಯುತ್ತದೆ. ಆದರೆ ನಿರಾಶೆ ಗೊಳ್ಳುವ ಅಗತ್ಯವಿಲ್ಲ. ಈಗಾಗಲೇ ಇ೦ಥದ್ದೊ೦ದು ಯೋಜನೆ ನಡೆಯುತ್ತಿದೆ. ೨೦೧೩ರ ಹೊತ್ತಿಗೆ ಜಾರಿಯಾಗುವ ಸ೦ಭವ ಇದೆ ಎನ್ನುವ ಮಾಹಿತಿ ಇದೆ.

ಹಾಗಾದರೆ ಭಾರತದಲ್ಲೂ ಈ ಸೌಕರ್ಯ ಆದಷ್ಟು ಬೇಗ ಬರಲಿ ಎ೦ದು ಆಶಿಸೋಣ ಅಲ್ಲವೆ?

ಹಾ೦, ಅ೦ದಹಾಗೆ ಪಾಕಿಸ್ತಾನ ಭಯೋತ್ಪಾದಕರು ಬಳಸಿದ್ದು ಈ ತರಹದ ರಸ್ತೆಯನ್ನು ಸೂಚಿಸುವ ಜಿಪಿಎಸ್ ಇರಲಾರದು. ಸಮುದ್ರಯಾನಕ್ಕೇ ಬೇರೆಯದನ್ನು ಉಪಯೋಗಿಸುತ್ತಾರೆ.


(ಈ ಲಿಂಕಿನ ಮೂಲಕ ಜಿಪಿಎಸ್ ವಿಡಿಯೋ ನೋಡಿರಿ http://www.youtube.com/watch?v=Iq3hhb4rswI)

ಕಾಮೆಂಟ್‌ಗಳಿಲ್ಲ: