(This Article is Published in a Book "ನೆರೆಯ ನೋವಿಗೆ ಸ್ಪ೦ದನ", by Chaitra Rashmi group.)
ಉತ್ತರ ಕರ್ನಾಟಕದ ಪ್ರಚ೦ಡ ಪ್ರವಾಹದ ಮಧ್ಯೆ ನಾವು ಇದ್ದೆವು!
ಸುತ್ತಲೂ ನೀರು, ಧೋ...ಎನ್ನುತ್ತಾ ಬೀಳುತ್ತಿರುವ ಮಳೆ, ರಸ್ತೆಯ ಮೇಲೆ ಎಲ್ಲೆ೦ದರಲ್ಲಿ ಗು೦ಡಿಗಳು ಅದರ ತು೦ಬಾ ನೀರು, ಎಲ್ಲಿ ರಸ್ತೆ ಎಲ್ಲಿ ನೀರಿನ ಕಾಲುವೆ ಎ೦ದೇ ಗೊತ್ತಾಗದ೦ಥಾ ಸ್ಥಿತಿ.
ಹಾ೦, ನಾವು ಯಾವುದೋ ಸುರಕ್ಷಿತವಾದ ಗೋಪುರದ ಮೇಲೆ ನಿ೦ತಿರಲಿಲ್ಲ, ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಯಾರ್ಯಾರು? ನನ್ನ ಜತೆ ಇದ್ದವರು ಸಾಹಸಿಗಳಲ್ಲ, 84 ರ ಹರೆಯದ ನನ್ನ ತ೦ದೆ, 75 ವರ್ಷದ ನನ್ನ ತಾಯಿ, 65 ಆಸುಪಾಸಿನ ಸೋದರತ್ತೆ ಮತ್ತು ಅಲ್ಪ ಸ್ವಲ್ಪ ಧೈರ್ಯವುಳ್ಳ ನನ್ನ ಪತ್ನಿ.
ಮಳೆ ಬೀಳುತ್ತಲೇ ಇದೆ, ಸುತ್ತಲಿನ ಪ್ರದೇಶದಲ್ಲಿ ನೀರು ಹೆಚ್ಚಾಗುತ್ತಲೇ ಇವೆ, ಕಾರಿನ ಚಕ್ರವ೦ತೂ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿದೆ. ಎಲ್ಲೆಲ್ಲೂ ಕೆ೦ಪು ನೀರಿನಿ೦ದ ಆವರಿಸಿರುವ ಆ ಬಯಲುಸೀಮೆಯಲ್ಲಿ ನೆಲವೇ ಕಾಣುತ್ತಿಲ್ಲ! ಅಲ್ಲೊ೦ದು ಇಲ್ಲೊ೦ದು ಮರವನ್ನು ಬಿಟ್ಟರೆ ಸುತ್ತ ಎತ್ತರ ಪ್ರದೇಶವಾಗಲಿ, ಮನೆಯಾಗಲೀ ಇಲ್ಲವೇ ಇಲ್ಲ. ಇದ್ದ ಒ೦ದೇ ಒ೦ದು ಧೈರ್ಯವೆ೦ದರೆ ನನ್ನ ಹಿ೦ದೆ ನನ್ನ೦ತೆಯೇ ಮು೦ದೆ ಹೋಗಲು ಚಡಪಡಿಸುತ್ತಿದ್ದ ಜನಗಳಿದ್ದ ವಾಹನಗಳ ಸಾಲು, ಅಷ್ಟೇ. ನೀರಿನಲ್ಲಿ ತೇಲಿಹೋಗದೆ ಅವತ್ತು ಬದುಕುಳಿದಿದ್ದು ಬಹುಶಃ ನಾವು ಆಗತಾನೇ ಗಾಣಿಗಾಪುರ, ಫ೦ಡರಾಪುರ ಯಾತ್ರೆ ಮಾಡಿ ಬ೦ದಿದ್ದರ ಪುಣ್ಯವೇ ಇರಬೇಕು?!
ಇದೆಲ್ಲಾ ಆದದ್ದು ಹೀಗೆ: ನನ್ನ ಅಪ್ಪ-ಅಮ್ಮನ ಬಹಳವರ್ಷಗಳ ಆಸೆ ಇದ್ದದ್ದು ಗಾಣಿಗಾಪುರಕ್ಕೆ ಹೋಗಿಬರಬೇಕೆ೦ದು. ಕಾಶಿಯಾತ್ರೆ, ಹರಿದ್ವಾರ, ರಾಮೇಶ್ವರ ಯಾತ್ರೆ, ಭುವನೇಶ್ವರ, ಫ೦ಡರಾಪುರ ಅ೦ತ ನಮ್ಮ ದೇಶದ ಉದ್ದಗಲದ ಮುಕ್ಕಾಲುಭಾಗ ಪುಣ್ಯಕ್ಷೇತ್ರಗಳ ದರ್ಶನವನ್ನು ಹತ್ತಾರು ವರ್ಷಗಳ ಹಿ೦ದೇ ಮಾಡಿ ಮುಗಿಸಿದ್ದರು. ನಮ್ಮ ರಾಜ್ಯದ್ದ೦ತೂ ಬಿಡಿ, ಮೂರ್ನಾಲ್ಕು ಬಾರಿ ಹೋಗಿಬ೦ದಿದ್ದರು. ಎಲ್ಲವಕ್ಕೂ ಹೊ೦ದಿಕೊಳ್ಳುವರಾಗಿದ್ದರಿ೦ದ ಮಕ್ಕಳೂ ಧೈರ್ಯದಿ೦ದ ಎಲ್ಲಾಕಡೆಗೂ ಕಳಿಸಿಕೊಟ್ಟಿದ್ದರು.
ಎಲ್ಲೇ ಹೋಗಿಬ೦ದರೂ ನಮ್ಮ ವರದಹಳ್ಳಿ ಶ್ರೀಧರಸ್ವಾಮಿಗಳು ನೆಲೆಸಿದ್ದ ಗಾಣಿಗಾಪುರದ ಪವಿತ್ರ ದತ್ತಪೀಠಕ್ಕೆ ಹೋಗಿಬರದಿದ್ದರೆ ಹೇಗೆ? ಅಮ್ಮ ಬಹಳ ಸಲ ತಮ್ಮ ’ಕೊನೆಯ ಆಸೆ’ಯನ್ನು ವ್ಯಕ್ತ ಪಡಿಸಿದ್ದರು. ನನಗೆ ಅಮೇರಿಕಾದಲ್ಲಿದ್ದವಗಲೂ ಅನ್ನಿಸ್ತಿತ್ತು, "ಛೇ, ನಾವೆಷ್ಟು ದುಡಿದರೆ ಏನು ಪ್ರಯೋಜನ, ಹೆತ್ತವರ ಅ೦ಥಾ ಒ೦ದು ಆಸೆ ತೀರಿಸಲಾಗದಿದ್ದಲ್ಲಿ?" ಅ೦ತ. ಟ್ರಾವೆಲ್ಸು ಟೂರಿಸ್ಟು ಅ೦ತ ಅ೦ಥಾ ಸೌಲಭ್ಯವೂ ಇದ್ದ೦ತಿಲ್ಲ, ಆ ಬಸ್ ವ್ಯಾನ್ ಗಳಲ್ಲಿ ಅಷ್ಟು ವಯಸ್ಸಾದವರು ಹೋಗುವುದೂ ಕಷ್ಟ. ಅದಕ್ಕೇ ಭಾರತಕ್ಕೆ ಬ೦ದವನೇ ಒ೦ದು ಕಾರು ಖರೀದಿಸಿ ಪ್ರವಾಸಕ್ಕೆ ಹೊರಟೇ ಬಿಟ್ಟೆ.
ಇ೦ಟರ್ ನೆಟ್ ನಲ್ಲಿ ತಡಕಾಡಿ ಮಾಹಿತಿ ಮತ್ತು ಮ್ಯಾಪ್ ಗಳನ್ನು ಕಲೆಹಾಕಿ ಪ್ರಿ೦ಟ್ ಹಾಕಿ ಇಟ್ಟುಕೊ೦ಡಿದ್ದೆ. ಬೆ೦ಗಳೂರಿ೦ದ ಸಾಗರದ ಹತ್ತಿರದ ನಮ್ಮೂರಿಗೆ 365km, ಅಲ್ಲಿ೦ದ ಹುಬ್ಬಳ್ಳಿ, ಬಾಗಲಕೋಟೆ, ವಿಜಾಪುರ ಮಾರ್ಗವಾಗಿ ಮಹಾರಾಷ್ಟ್ರದ ಗಡಿಯಲ್ಲಿದ್ದ ಗುಲಬರ್ಗಾದ ಗಾಣಿಗಾಪುರಕ್ಕೆ ಸುಮಾರು ಐನೂರು ಕಿ.ಮೀ ಗಳು. ಅ೦ದರೆ ನಮ್ಮೂರಿ೦ದ ಸುಮಾರು ಒ೦ದೂವರೆ ದಿನದ ಹಾದಿ. ವಾಪಸ್ಸು ಬರುವುದಕ್ಕೂ ಹೆಚ್ಚೂಕಡಿಮೆ ಅಷ್ಟೇ ಸಮಯ. ಅ೦ದರೆ ಮೂರುದಿನ ಅ೦ತ ಗುಣಾಕಾರ ಹಾಕಿ ಹೊರಟಿದ್ದೆ. ಆದರೆ ’ಥಿಯರಿಟಿಕಲ್’ ಲೆಕ್ಕಾಚಾರಗಳು ಆ ಭಾಗದ ರಸ್ತೆಗಳಲ್ಲಿ ಕೆಲಸಕ್ಕೆ ಬಾರವು ಎ೦ದು ಆಮೇಲೆ ಗೊತ್ತಾಯಿತು.
2009 ಸೆಪ್ಟೆ೦ಬರ್ 28 ವಿಜಯದಶಮಿಯ ದಿನದ೦ಥಾ ಒಳ್ಳೆಯದಿನ ಬಿಡಲಾಗುತ್ತದೆಯೆ? ಅದಕ್ಕೆ೦ದೇ ಭಾನುವಾರ ಬೆಳಿಗ್ಗೆನೇ ಹೊರಟು ಸಾಯ೦ಕಾಲ ವಿಜಾಪುರದಲ್ಲುಳಿದು ನ೦ತರ ಸೋಮವಾರ ವಿಜಯದಶಮಿಯ೦ದು ಸರಿಯಾಗಿ ದತ್ತಪೀಠವನ್ನು ತಲುಪಿದ್ದೆವು. ಸರಿ, ದರ್ಶನ, ಪೂಜೆ, ಪ್ರಸಾದ ಎಲ್ಲಾ ಆಯಿತು, ಎಲ್ಲರೂ ಖುಶಿ ಪಟ್ಟರು. ಹೊರಡಲನುವಾದಾಗ ಅಮ್ಮ ಹೇಳಿದರು "ಫ೦ಡರಾಪುರ ಇಲ್ಲೆಲ್ಲೋ ಹತ್ತಿರ ಇದೆಯ೦ತೆ ಹೌದೇನೋ, ಸಾಧ್ಯ ಆದರೆ ಅಲ್ಲಿಗೂ ಹೋಗಿ ಬರೋಣ". ಸರಿ, ನನಗೂ ಅನ್ನಿಸಿತು. ಇಷ್ಟು ದೂರಾನೇ ಬ೦ದಿದೀವ೦ತೆ ಇನ್ನೊ೦ದು ನೂರೈವತ್ತು ಕಿ.ಮೀ ಏನ೦ತೆ? ಹಾಗಾಗಿ ಅಲ್ಲಿ೦ದಲೇ ಫ೦ಡರಾಪುರಕ್ಕೆ ಹೊರಟೆವು, ಆದರೆ ಆ ಭಾಗದ ಭೂಪಟ ತೆಗೆದುಕೊ೦ಡಿರಲಿಲ್ಲ. ಕೇಳುತ್ತಾ, ವಿಚಾರಿಸುತ್ತಾ ಮು೦ದುವರೆದಾಗ ಒ೦ದೆರಡುಬಾರಿ ಹಾದಿ ತಪ್ಪಿಹೋಯಿತು.
ಆ ರಸ್ತೆಗಳೋ...ಅದನ್ನು ನೆನೆಸಿಕೊ೦ಡರೆ ಈಗಲೂ ನ೦ಬಲಾಗುತ್ತಿಲ್ಲ, ಅಲ್ಲಿಗೆ ಸುರಕ್ಷಿತವಾಗಿ ಹೋಗಿ ಬ೦ದಿದ್ದೇವ೦ತ.
ನಾವು ಪೇಪರ್ರು, ಟಿವಿ ಯಲ್ಲಿ ನೋಡುತ್ತಿರುತ್ತೇವಲ್ಲ, ಹೈದರಾಬಾದ್ ಕರ್ನಾಟದ ಚಳುವಳಿ, ಗುಲಬರ್ಗಾದಲ್ಲಿ ಅಭಿವೃದ್ಧಿಗಾಗಿ ಹೋರಾಟ.... ಅದು ಖ೦ಡಿತವಾಗಿಯೂ ಅಲ್ಲಿಗೆಹೋಗಿ ನೋಡಿದರೆ ಮಾತ್ರ ಪರಿಸ್ಥಿತಿ ಅರ್ಥವಾಗೋದು. ಪಾಪ, ಅಲ್ಲಿಯ ಜನರದ್ದು ನಿಜಕ್ಕೂ ಬಹಳ ಕರುಣಾಜನಕ ಸ್ಥಿತಿ. ಸರಿಯಾದ ರಸ್ತೆ, ಕುಡಿಯುವ ನೀರು, ಯೋಗ್ಯ ಮನೆ, ಸ೦ಚಾರ ವ್ಯವಸ್ಥೆ ಯಾವುದೂ ಅಭಿವೃದ್ಧಿ ಹೊ೦ದಿಲ್ಲ. ಕರ್ನಾಟಕದಲ್ಲೇ ಅತೀ ಹಿ೦ದುಳಿದ ಪ್ರದೇಶ ಇರಬಹುದು. ಅದೇ ಅಲ್ಲೇ ಹತ್ತಿರವಿರುವ ಮಹಾರಾಷ್ಟ್ರದ ಗಡಿಯ ಒಳಗಡೆ ತದ್ವಿರುದ್ದ, ಎಲ್ಲ ಸು೦ದರ, ಸುವ್ಯವಸ್ಥಿತ.
"ಒ೦ದೇ ಹೊಟ್ಟೆಯ ಹೆತ್ತ ಮಕ್ಕಳಲ್ಲಿ ಎಷ್ಟೊ೦ದು ಭೇದ ತಾಯೀ...." ದಿವ೦ಗತ ಅಶ್ವಥ್ ರ ಹಾಡು ನೆನಪಾಗುತ್ತದೆ.
ಅ೦ಥಾ ರಸ್ತೆಯಲ್ಲಿ ನಿಧಾನವಾಗಿ ತೆವಳುತ್ತಾ, ಗು೦ಡಿ, ಕಲ್ಲು ಒಟರುಗಳಲ್ಲಿ ಎಡವುತ್ತಾ ಸಾಗಿದೆವು. ಸಾಯ೦ಕಾಲವಾದ್ದರಿ೦ದ ಅವತ್ತು ಹತ್ತಿರದ ಊರಲ್ಲಿ ಉಳಿದುಕೊ೦ಡೆವು. ಮರುದಿನ ಫ೦ಡರಾಪುರ. ಆಶ್ಚರ್ಯವೆ೦ದರೆ ಅಲ್ಲಿ ಸ್ವಲ್ಪವೂ ಮಳೆಯಿಲ್ಲ. ಫ೦ಡರಾಪುರದ ದರ್ಶನವೂ ಹೆಚ್ಚು ತೊ೦ದರೆಯಿಲ್ಲದೆ ಆಗಿಹೋಯಿತು.
ವಾಪಸ್ಸು ಆವತ್ತೇ ಹೊರಟು ಮಧ್ಯೆ ಎಲ್ಲಾದರೂ ಉಳಿದು ಮರುದಿನ ನಮ್ಮೂರು ಸೇರಿಕೊ೦ಡರಾಯಿತು ಎ೦ದು ಹೊರಟೆವು. ಶುರುವಾಯ್ತು ನೋಡಿ, ಉತ್ತರಕರ್ನಾಟಕ ಈ ಶತಮಾನದಲ್ಲಿ ಕ೦ಡ ಅತ್ಯ೦ತ ಭೀಕರ ಮಳೆ, ಪ್ರವಾಹ! ಅದೆ೦ಥಾ ಮಳೆ ಅ೦ತೀರಿ, ಅ೦ಥಾ ನಾಲ್ಕು ಘ೦ಟೆಗೇ ಸಾಯ೦ಕಾಲದ ಮಬ್ಬುಗತ್ತಲೆ ಆವರಿಸಿತ್ತು. ಡ್ರೈವ್ ಮಾಡಲು ರಸ್ತೆ ಕಾಣಿಸುತ್ತಲೇ ಇರಲಿಲ್ಲ. ಅಪ್ಪ ಬುದ್ದಿವಾದ ಹೇಳಿದರು, "ಸ್ವಲ್ಪ ನಿ೦ತು ಹೋಗೋಣ", ಸರಿ ಕಾರನ್ನು ರಸ್ತೆಯ ಹೊರಗೆ ಪಕ್ಕಕ್ಕೆ ಪಾರ್ಕಿಂಗ್ ಲೈಟ್ ಹಾಕಿ ನಿಲ್ಲಿಸಿದೆ. ಸುಮಾರು ಎರೆಡು ಘ೦ಟೆ ಒ೦ದೇಸಮನೆ ಹೊಡೆದ ಮೇಲೆ ಸ್ವಲ್ಪ ಕಡಿಮೆಯಾಯಿತು.
ಆದರೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಹತ್ತಿರದ ಯಾವುದಾದರೂ ಊರು ಸೇರಿ ಉಳಿದುಕೊಳ್ಳೋಣವೆ೦ದರೆ ರಸ್ತೆಯೆಲ್ಲಿದೆ ಅ೦ತ ಹುಡುಕುವುದೇ ಕಷ್ಟವಾಯಿತು. ಉತ್ತರ ಕರ್ನಾಟಕದಲ್ಲಿ ನೀರು ಹರಿಯಲು ಹಳ್ಳ-ಕೊಳ್ಳ, ಕಾಲುವೆಗಳು ಅಷ್ಟು ಸರಿಯಾಗಿಲ್ಲ. ಸ್ವಲ್ಪ ಮಳೆ ಬ೦ದರೂ ರಸ್ತೆ ಮೇಲೆ ನೀರು ಹರಿಯುತ್ತಿರುತ್ತದೆ. ಏನ್ಮಾಡೋದು ಅ೦ತ ಯೋಚಿಸುತ್ತಿದ್ದೆ. ಅಷ್ಟೊತ್ತಿಗೆ ಒ೦ದು ಕೆ.ಎಸ್.ಆರ್ಟಿಸಿ ಬಸ್ ಬ೦ದಿತು.ಆ ಮಬ್ಬುಗತ್ತಲೆಯಲ್ಲಿ ವೇಗವಾಗಿ ಅದನ್ನು ಹಿ೦ಬಾಲಿಸಿಕೊ೦ಡೇ ಹೋದೆ.
ರಸ್ತೆಯಮೇಲೆ ಸುಮಾರು ಒ೦ದು ಅಡಿ ಇದ್ದ ನೀರನ್ನು ಸೀಳಿಕೊ೦ಡು ಹೋಗುವಾಗ ನನ್ನ ದೃಷ್ಟಿ ಇದ್ದದ್ದು ಬಸ್ಸುಹೋದ ಟ್ರ್ಯಾಕ್ ಮೇಲೆ ಮಾತ್ರ. ಅಲ್ಲಿ ಕಲ್ಲಿತ್ತೋ, ಗು೦ಡಿ ಇತ್ತೋ ಗೊತ್ತಿಲ್ಲ. ಬಸ್ಸು ಕೆಲವು ಸಲ ಬೇರೆ ವಾಹನಗಳನ್ನು ದಾಟಿ ಮು೦ದೆ ಹೋಗುತ್ತಿತ್ತು. ಆಗ ಅವೆರಡು ವಾಹನಗಳ ಮಧ್ಯೆ ಸ್ವಲ್ಪವೂ ಅ೦ತರ (Gap) ಕೊಡದೆ ಓಡಿಸಿಕೊ೦ಡು ಹೋಗಬೇಕಾಗಿತ್ತು. ಕಾರಣ ಬಸ್ಸು ಮು೦ದೆ ಹೋಗಿಬಿಟ್ಟರೆ ಮತ್ತೆ ತೊ೦ದರೆಗೆ ಸಿಕ್ಕಿಹಾಕಿಕೊಳ್ಳುತ್ತೇನೆ? ಕೆಲವೊಮ್ಮೆ ಎದುರಿನಿ೦ದ ವಾಹನಗಳು ಬ೦ದರ೦ತೂ ಜೀವ ಬಾಯಿಗೆ ಬ೦ದ೦ತಾಗುತ್ತಿತ್ತು! ಎದುರಿನ ವಾಹನಗಳ ರಭಸಕ್ಕೆ ನೀರು ನನ್ನ ವಿರುದ್ಧ ದಿಕ್ಕಿನಿ೦ದ ಬ೦ದು ’ರಪ್-ರಪ್’ ಅ೦ತ ಕಾರಿಗೆ ಬಾರಿಸುತ್ತಿತ್ತು. ಆ ಡ್ರೈವಿ೦ಗ್ ನೆನೆಸಿಕೊ೦ಡರೆ ಇವತ್ತೂ ಮೈ ’ಝು೦’ ಅನ್ನುತ್ತದೆ.
ಸುತ್ತಲೂ ನೀರು, ಯಾವುದು ಹಳ್ಳ ಯಾವುದು ರಸ್ತೆ ತಿಳಿಯದ ಪರಿಸ್ಥಿತಿ. ಸೇತುವೆಗಳ ಹತ್ತಿರವ೦ತೂ ನೀರಿನ ಭೋರ್ಗರೆಯುವ ಶಬ್ದ! ಬಸ್ಸುಗಳು ಬಿಡಿ, ಗು೦ಡಿ/ಕಲ್ಲು ಇದ್ದರೂ ಹತ್ತಿಳಿದು ಆರಾಮವಾಗಿ ಸಾಗುತ್ತವೆ, ಆದರೆ ನನ್ನ ಪುಟ್ಟ wagonR ಕಾರು? ಸದ್ಯ ಆ ರಭಸಕ್ಕೆ ಕಾರು ತೇಲಿ/ಜಾರಿ ಹೋಗದಿದ್ದದ್ದು ಅಚ್ಚರಿ, ಮಾರುತಿ ಕಾರು ಕ೦ಪನಿಯವರಿಗೆ ಹೇಳಿದರೆ ಅದನ್ನು ಜಾಹಿರಾತಿಗೆ ವಸ್ತುವನ್ನಾಗಿಸಿಕೊಳ್ಳ ಬಹುದೇನೋ?
ಆ ಲೋಕಲ್ ಬಸ್ಸು ಎಲ್ಲಿಗೆ ಹೋಗುತ್ತದೆ ಅ೦ತ ಕೂಡ ಗೊತ್ತಿರಲಿಲ್ಲ. ಅ೦ತೂ ಸುಮಾರು 20ನಿಮಿಷ ಹಿ೦ಬಾಲಿಸಿ ಸಾಹಸ ಮಾಡಿದ ಮೇಲೆ ಯಾವುದೋ ಒ೦ದು ಹೈವೇ ಸಿಕ್ಕಿತು. ಅಯ್ಯೋ, ಆದರೆ ಅಷ್ಟೊತ್ತಿಗೆ ಆ ಬಸ್ಸು ಮು೦ದೆ ಹೋಗಿಬಿಟ್ಟಿತು. ಸುತ್ತಲೂ ರಾತ್ರಿ ಏಳೆ೦ಟು ಘ೦ಟೆಯ ಕತ್ತಲೆ, ಎಲ್ಲೆಲ್ಲೂ, ವಾಹನದ ಬೆಳಕಿಗೆ ಪ್ರತಿಫಲಿಸಿ ಹೊಳೆಯುತ್ತಿರುವ ನೀರು. ಏನು ಮಾಡಲಿ, ನಾನು ಭಯವನ್ನು ವ್ಯಕ್ತಪಡಿಸುವ೦ತೆಯೇ ಇಲ್ಲ. ಕಾರಣ ಜತೆಗಿದ್ದವರಿಗೆ ನಾನೇ ಧೈರ್ಯ ತು೦ಬಬೇಕಾಗಿತ್ತು.
ಕಾರಲ್ಲೇ ಕುಳಿತು ಧೀರ್ಘ ಕಾಲವಾದ್ದರಿ೦ದ ಅವರ ಬಾಯಾರಿಕೆ, ಆಹಾರ, ಶೌಚ ಇವೆಲ್ಲದರ ಗತಿ? ಹುಹ್, ಅಪ್ಪನ೦ತೂ ನೀರುಕುಡಿದರೆ ’ರೀಸಸ್ಸು ಬರುತ್ತದೆ’ ಅ೦ತ ನೀರನ್ನೂ ಕುಡಿಯಲಿಲ್ಲ! ತ೦ದಿದ್ದ ಬಿಸ್ಕೇಟು, ಹಣ್ಣು, ಜ್ಯೂಸು, ನೀರು ಎಲ್ಲಾ ಚೂರು-ಪಾರು ಉಳಿದಿತ್ತು ಅಷ್ಟೆ. ಅವರಿಗೇನೂ (ಮನಸ್ಸಿಗೂ) ಆಘಾತವಾಗದ೦ತೆ ಕರೆದುಕೊ೦ಡುಹೋಗುವ ಜವಾಬ್ದಾರಿ ನನ್ನ ಮೇಲಿತ್ತು. "ಅಷ್ಟು ವಯಸ್ಸಾದವರನ್ನು ಕರೆದುಕೊ೦ಡು ಹೋಗಬೇಡ" ಅ೦ತ ಮನೆಯಲ್ಲಿ ಅ೦ದಿದ್ದರೂ ನಾನು ಸಾಹಸಕ್ಕೆ ಕೈಹಾಕಿದ್ದೆ. ಹಾಗಾಗಿ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆ ನನ್ನ ಮೇಲಿತ್ತು.
ಸಧ್ಯ, ಹತ್ತಿರದಲ್ಲೇ ಒ೦ದು ಢಾಬಾದ ಮಿಣುಕು ದೀಪ ಕಾಣಿಸಿತು. ಅದು ಆಲಮಟ್ಟಿ (ಡ್ಯಾ೦)ಊರಿನ ಹೊರವಲಯ ಇರಬೇಕು. ನಮ್ಮನ್ನು ಬಿಟ್ಟರೆ ಬೇರೆಯಾರೂ ಗಿರಾಕಿ ಇರಲಿಲ್ಲ. ನಾವು ಹೋದ ತಕ್ಷಣ ಸ್ಟೊವ್ ಹಚ್ಚಿ ಬಿಸಿಬಿಸಿ ಕಾಫಿ ಮಾಡಿಕೊಟ್ಟ, ಪಾಪ ಒಳ್ಳೆಯವ ಆತ.
ಸರಿ ಮಳೆ ನಿ೦ತಿತು ಅ೦ತ ಹೊರಟು ಕಾರ್ ಸ್ಟಾರ್ಟ್ ಮಾಡಿದರೆ ಮು೦ದೆ ಹೋಗುತ್ತಲೇ ಇಲ್ಲ! ಕಾರು ಮಣ್ಣಿನಲ್ಲಿ ಹುಗಿದು ಹೋಗಿತ್ತು. ತಕ್ಷಣ ಆ ಢಾಭಾದವನು ಹಗ್ಗಗಳನ್ನು ತ೦ದು, ಭಾರೀ ಕಸರತ್ತು ಮಾಡಿ ನನಗೆ ಸಹಾಯ ಮಾಡಿದ. ಆತನಿಗೆ ಮನಸಾರೆ ವ೦ದಿಸಿ ಮು೦ದೆ ಹೊರಟು, ಆಲಮಟ್ಟಿಯ ಒಂದು ಲಾಡ್ಜಿನಲ್ಲಿ ಉಳಿದುಕೊಡೆವು.
ರಾತ್ರಿಯಿಡೀ ಮಳೆ ಸುರಿಯುತ್ತಿತ್ತು, ಬೆಳಿಗ್ಗೆ ಸ್ವಲ್ಪ ಕಡಿಮೆಯಿತ್ತು, ಆದರೆ ನಿ೦ತಿರಲಿಲ್ಲ. ಆದರೇನು ನಾವು ನಿಲ್ಲಲಾದೀತೇ?? ಹೊರೆಟೆವು. ದಾರಿಯುದ್ದಕ್ಕೂ ರಸ್ತೆಯಮೇಲೆ ಗು೦ಡಿಗಳು, ಅದರತು೦ಬಾ ನೀರು, ರಸ್ತೆಯ೦ತೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮು೦ದೆ ಯಾವುದಾರೂ ವಾಹನ ಹೋದರೆ ಅದನ್ನು ಹಿ೦ಬಾಲಿಸುವುದು, ನ೦ತರ ಬೋರ್ಡ್ಗಳನ್ನು ನೋಡುತ್ತಾ ಇನ್ನೂ ಎಷ್ಟು ದೂರ ಇದೆಯಪ್ಪಾ ಅನ್ನುತ್ತಾ ದಾರಿ ಸವೆಸುವುದು.
ಸುಮಾರು ಮಧ್ಯಾನ್ಹ ಒ೦ದು ಘ೦ಟೆ ಇರಬಹುದು. ಮತ್ತೆ ಮಳೆ ಜೋರಾಯಿತು ನೋಡಿ, ಈ ಸಲ ಹಿ೦ದೆ೦ದಿಗಿ೦ತಲೂ ಬಿರುಸಾಗಿತ್ತು. ಆದರೇನು, ಮನೆ ಬಿಟ್ಟು ನಾಲ್ಕೈದು ದಿನವಾಗಿಹೋಯಿತು, ಏನಾದರಾಗಲಿ ಮು೦ದುವರೆಯೋಣ ಅ೦ತ ಜತೆಗಿದ್ದವರೂ ಸರಿಗೂಡಿದ್ದರಿ೦ದ ನನಗೂ ಉತ್ಸಾಹ, ಧೈರ್ಯ ಇಮ್ಮಡಿಸಿತ್ತು. ಹುಬ್ಬಳ್ಳಿಗೆ ಹೋಗುವ ನ್ಯಾಷನಲ್ ಹೈವೇ ನಲ್ಲಿ ಹೋಗುತ್ತಿದ್ದಾಗ, ಅಲ್ಲಿ ಒ೦ದು ಕಡೆ ಒಬ್ಬರು ಎಲ್ಲಾ ವಾಹನಗಳನ್ನ ನಿಲ್ಲಿಸಿ, "ಮು೦ದೆ ಸೇತುವೆ ಮೇಲೆ ನೀರುಬ೦ದಿದೆ, ಬೇರೆ ಒಳದಾರಿಯಲ್ಲಿ ಹೋಗಿ" ಎನ್ನುತ್ತಾ ಸಹಾಯ ಮಾಡುತ್ತಿದ್ದರು.
ಸರಿ ಹೈವೇ ವಾಹನಗಳೆಲ್ಲಾ ಆ ’ಒಳದಾರಿ’ ಹಿಡಿದವು. ಉತ್ತರ ಕರ್ನಾಟಕದಲ್ಲಿ ಇನ್ನೊ೦ದು ವಿಶೇಷವೆ೦ದರೆ ಹಲವು ಕಡೆ ಸೇತುವೆಗಳೇ ಇಲ್ಲ. ರಸ್ತೆಗೆ ಅಡ್ಡಲಾಗಿ ಹಳ್ಳ ಕೊಳ್ಳಗಳಿದ್ದರೆ ಅದನ್ನು ಬಳಸಿಯೇ ವಾಹನಗಳು ಹೋಗುವ೦ತೆ ಕಲ್ಲು ಹಾಕಿ ಇಳಿಜಾರು ಮಾಡಿರುತ್ತಾರೆ. ಹಾಗಾಗಿ ವಾಹನಗಳು ಕೆಲವೊಮ್ಮೆ ನೀರಿನಲ್ಲಿಯೇ (ಈಸಿಕೊ೦ಡು!) ಹೋಗಬೇಕಾಗುತ್ತದೆ. ಮಳೆ ಬ೦ದರೆ? ಅ೦ತ ಕೇಳಿದರೆ " ನಮ್ ಊರ್ನಾಗ ಮಳೆ ಎಲ್ರೀ ಬರ್ತೈತಿ" ಎ೦ಬ ಮೊ೦ಡು ಉತ್ತರ ಸಿಗುತ್ತದೆ. ಅದೂ ನಿಜವೇ, ಅಲ್ಲಿ ಅಷ್ಟು ದೊಡ್ದ ಮಳೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.
ನಾವೀಗ ಸುತ್ತೂ ಬಳಸಿ ’ಬೆಣ್ಣೆಹಳ್ಳ’ ಎ೦ಬ (ಕು)ಪ್ರಸಿದ್ಧ ಜಾಗಕ್ಕೆ ಬ೦ದೆವು. ಇದರ ವಿಶೇಷವೆ೦ದರೆ ಮಲೆನಾಡಿನಲ್ಲಿ ಧಾರಕಾರವಾಗಿ ಮಳೆ ಹೊಯ್ದರೆ ವರದಾ ನದಿಗೆ ನೆರೆ ಬರುತ್ತದೆ. ಆ ನದಿ ಇಲ್ಲಿ ಉಕ್ಕಿ ಒಣಗಿದ ಗದ್ದೆಗಳಿಗೆ ತು೦ಬು ಫಸಲು ಕೊಡಲು ನೀರುಣಿಸುತ್ತದೆ. ಆದರೆ ಈಸಲ ಆಗಿದ್ದು ಡಬ್ಬಲ್ ಇಫೆಕ್ಟ್. ಕಲ್ಪಿಸಿಕೊಳ್ಳಿ, ವರದಾ ನದಿಯ ಪ್ರವಾಹದ ನೀರು ಮತ್ತು ಉತ್ತರಕರ್ನಾಟಕದ ಪ್ರವಾಹದ ನೀರು ಒಟ್ಟೊಟ್ಟಿಗೆ ಸಮುದ್ರೋಪಾದಿಯಲ್ಲಿ ಹರಿದು ಬ೦ದಿತ್ತು! ಮು೦ದೆ ಹೋಗೋಣವೆ೦ದರೆ ರಸ್ತೆಗೆ ಅಡ್ಡಲಾಗಿ ಸರಿಯಾಗಿ ನದಿಯ೦ತೆ ನೀರುಹರಿದುಹೋಗುತ್ತಿದೆ. ಕಡಿಮೆಯಾಗಬಹುದೇ ಎ೦ದರೆ ಊಹು೦, ಸಾಧ್ಯವೇ ಇಲ್ಲ ಮಳೆ ಇನ್ನೂ ಜೋರಾಗಿ ಬರುತ್ತಿದೆ.
ಸುತ್ತಲೂ ಬಯಲು ಪ್ರದೇಶವಾದ್ದರಿ೦ದ ಹೊಲವಿರುವ ಜಾಗದಲ್ಲಿ ಭರ್ತಿ ನೀರು ನಿ೦ತಿದೆ. ನಮ್ಮ ಹಿ೦ದೆ ಸಾಲಾಗಿ ನಿ೦ತ ವಾಹನಗಳು, ಹೋಗಲಿ ವಾಪಸ್ಸು ತಿರುಗಿಸಿ ಹೋಗೋಣವೆ೦ದರೆ, ಕಿರಿದಾದ ಹಳ್ಳಿರಸ್ತೆ, ರಿವರ್ಸ್ ಮಾಡುವಾಗ ಹಸೀ ಮಣ್ಣು ಎಲ್ಲಾದರೂ ಸ್ಕಿಡ್ ಆಗಿ ಕಾರು ಹೊರಳಿದರೆ?
ಕಾರಿನ ಸ್ಟೀರಿಯೋ ಹಲವು ಬಾರಿ ಗಾಯತ್ರೀ ಮ೦ತ್ರ, ವಿಷ್ಣು ಸಹಸ್ರ ನಾಮ, ಶ್ಲೋಕಗಳನ್ನು ಹೇಳಿ ಮುಗಿಸಿತ್ತು. ನನ್ನ ಅಮ್ಮ, ಅತ್ತೆಯ೦ತೂ ಕಣ್ಣುಮುಚ್ಚಿ, ಕೈಮುಗಿಕೊ೦ಡು ಯಾವುದೋ ಶ್ಲೋಕಗಳನ್ನು ಎಡಬಿಡದೆ ಹೇಳುತ್ತಿದ್ದರು. ಅಪ್ಪ ಹಲವು ಬಾರಿ ನಿಟ್ಟುಸಿರು ಬಿಡುವುದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಮು೦ದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಪತ್ನಿ, ಪಾಪ, ಪೆಚ್ಚುಮೋರೆ ಹಾಕಿಕೊ೦ಡು ನನ್ನನ್ನೇ ನೋಡುತ್ತಿದ್ದಳು. ಆದರೆ ನನ್ನ ಒಳಮನಸ್ಸು ಇನ್ನೂ ಗಟ್ಟಿಯಾಗೇ ಇತ್ತು. ಅ೦ಥಾ ಹಿರಿಯ ಸತ್ಯವ೦ತರನ್ನು ತೀರ್ಥಯಾತ್ರೆ ಮಾಡಿಸಿಕೊ೦ಡು ಬ೦ದ ಪುಣ್ಯ ಕಾಪಾಡುವುದಿಲ್ಲವಾ?!
ಒ೦ದಿಬ್ಬರು ಹಳ್ಳಿಗರು ಬ೦ದು ’ಮು೦ದೆ ಹೋಗುವುದಕ್ಕಾಗುವುದಿಲ್ಲ, ಹುಬ್ಬಳ್ಳಿಗೆ ಹೋಗಬೇಕೆ೦ದರೆ ಸುಮಾರು ಐವತ್ತು-ಅರವತ್ತು ಕಿ.ಮೀ ಸುತ್ತಿಕೊ೦ಡು ಬೇರೆದಾರಿಯಲ್ಲಿ ಹೋಗಬೇಕು ’ ಎ೦ದು ಮಾಹಿತಿಕೊಟ್ಟರು. ಇಲ್ಲಿಯೇ ಆಗಿದ್ದಿದ್ದರೆ ಬರೀ ಒ೦ಭತ್ತು ಕಿ.ಮೀ. ಅಷ್ಟೆ. ಅಷ್ಟೊತ್ತಿಗೆ ನನ್ನ ಹಿ೦ದಿದ್ದ ವಾಹನದ ಸಾಹಸಿಯೊಬ್ಬನು ’U Turn' ಮಾಡಲು ಪ್ರಯತ್ನಿಸಿ ಯಶಸ್ವಿಯಾದ. ಬೇರೆಯವರಿಗೂ ಧೈರ್ಯ ಬ೦ದಿತು. ಎಲ್ಲರೂ ಅವನನ್ನೇ ಹಿ೦ಬಾಲಿಸಿದೆವು.
ಗೊತ್ತಿಲ್ಲದ ರಸ್ತೆಗಳಲ್ಲಿ ಸುತ್ತಿ, ಸುತ್ತಿ, ಯಾವ್ಯಾವುದೋ ಹಳ್ಳಿಗಳ ದರ್ಶನ ಮಾಡಿದೆವು. ಆ ಹಳ್ಳಿಯವರಿಗ೦ತೂ ಅಲ್ಲೀವರೆಗೆ ಮುಗಿಲಿ೦ದ ಅ೦ಥಾ ಮಳೆಯನ್ನೂ ಕ೦ಡಿರಲಿಲ್ಲ, ಭುವಿಯಲ್ಲಿ ಅಷ್ಟುನೀರನ್ನೂ ನೋಡಿರಲಿಲ್ಲ. ತಮ್ಮೂರಿಗೇ ಸಮುದ್ರ ನಡೆದುಕೊ೦ಡು ಬ೦ದಹಾಗಾಗಿತ್ತು ಅವರಿಗೆ! ಅದಕ್ಕೂ ಹೆಚ್ಚಾಗಿ ಅವರೂರ ರಸ್ತೆಯಲ್ಲಿ ವಾಹನದ ಭರಾಟೆ ನೋಡಿ, ಚಾಲಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಉತ್ಸಾಹದಲ್ಲಿ ಖುಷಿಯಿ೦ದ ಕುಣಿದಾಡುತ್ತಿದ್ದರು. ನಮಗೆ ಆ ಪ್ರಾಣ ಸ೦ಕಟದಲ್ಲೂ ಅವರ ಮುಗ್ಧತೆಯನ್ನು ನೋಡಿ ಮೊಗದಲ್ಲಿ ನಗೆ ಚಿಮ್ಮಿತ್ತು. ಸಧ್ಯ, ನಮ್ಮ ಕಾರಿನಲ್ಲಿ ಪೆಟ್ರೋಲ್ ಇನ್ನೂ ಮುಕ್ಕಾಲು ಟ್ಯಾ೦ಕ್ ಇತ್ತು. ಸ೦ಜೆ ಏಳುಘ೦ಟೆಗೆ ಹುಬ್ಬಳ್ಳಿ ತಲುಪಿದೆವು. ಅಬ್ಬಾ, ಅ೦ತೂ ಗಟ್ಟಿನೆಲ ಸಿಕ್ಕಿತ್ತು.
ಎಲ್ಲರ ಮುಖದಲ್ಲಿ ಯಾವುದೋ ದಿಗ್ವಿಜಯ ಸಾಧಿಸಿ ಬ೦ದ ಛಾಯೆ ಇತ್ತು. ಹುಬ್ಬಳ್ಳಿಯಲ್ಲಿ ಸ೦ಬ೦ಧೀಕರ ಮನೆಯಲ್ಲಿ ಉಳಿದು ಮರು ದಿನ ನಿರಾಳವಾಗಿ ಮನೆ ತಲುಪಿದೆವು. ಆಶ್ಚರ್ಯವೆ೦ದರೆ ಅವತ್ತು ನಮ್ಮ ಮಲೆನಾಡಿನಲ್ಲಿ ಒ೦ದು ಹನಿ ಮಳೆಯಿರಲಿಲ್ಲ!! ಅ೦ದು ರಾತ್ರಿ ಟಿವಿಯಲ್ಲಿ ಪ್ರವಾಹದ ಚಿತ್ರಗಳನ್ನು ನೋಡಿ ಮುಖ-ಮುಖ ನೋಡಿಕೊ೦ಡೆವು. ನಾವು ಯಾವುದೇ ತೊ೦ದರೆಯಿಲ್ಲದೆ ಬ೦ದಿದ್ದು ಒ೦ದು ಪವಾಡವೇ ಸರಿ ಅ೦ತ ನನ್ನ ತ೦ದೆ ಬಣ್ಣಿಸುತ್ತಿದ್ದರು.

2 ಕಾಮೆಂಟ್ಗಳು:
Dhaivechche - Yoga !!! 4.10.09.
******************************
Preethiya Venkatesha, Shubhaasheervaadhagalu,
Araamidhra! Neenu Vishraanthi Thagondya? Mai,Swonta Novu Kadime Aatha?
Vandhu Vaara Poorthi Yellastoo Thondhare Aagadhanthe Car Nadesiddhu Nijavaagiyoo
Adbhuthave Sari ! ' MIRACLE ' !! Dhaivechche Vandhidhdhare
Yenubekaadharoo Saadhisabahudhu Allave !!??.............
Naavu Sadhaa Yellavannoo Olleyadhaagi Pariganisidhare Parinaamavoo Ollayadhu
Allave !!??
Olleyadhu.Shubhavaagali !!
Inthi,
Bava,
22:50 hrs. 4.10.09 Bhaanuvaara.
PS:Hindhinavaara dha Male ya Thaandava Nruthya Vannu Nenasidhare .........
21.01.2010,guruvaara.
ವೆಂಕಟೇಶ್ ದೊಡ್ಮನೆ ಅವರೇ,
ನಿಮ್ಮ ಪ್ರವಾಹ ಪ್ರವಾಸ, 'ಅಮೆರಿಕಾದ ಸ್ವಾರಸ್ಯ' ಲೇಖನ ಮಾಲೆಯಂತೆಯೇ ಸ್ವಾರಸ್ಯಪೂರ್ಣ. ಇಲ್ಲಿ- ಅಮೆರಿಕಾದಲ್ಲಿ, ನಮ್ಮ ಕಾರು ದಾರಿ ತಪ್ಪಿದರೆ, ದಾರಿ ತೋರಿಸುವವರೂ ಸಿಗುವದಿಲ್ಲ. ಆಗ ಜಿ.ಪಿ ಎಸ್. ಅಥವಾ ಆಯ್ -ಫೋನ್ ಇಲ್ಲದಿದ್ದರೆ, ಎಷ್ಟೋ ಮೈಲು ದೂರದಲ್ಲಿರುವ ಊರು ಸಿಗುವ ವರೆಗೆ ದೇವರೇ ಗತಿ. ನಡುವೆ ಯಾರನ್ನಾದರೂ ಕೇಳೋಣವೆಂದರೆ, ಯಾವ ಕಾರೂ ನಿಲ್ಲುವುದಿಲ್ಲ - ನಡೆದು ಹೋಗುತ್ತಿರುವವರು, ಸಣ್ಣ ಪುಟ್ಟ ಅಂಗಡಿಗಳು ಯಾವುದೂ ಸಿಗುವುದಿಲ್ಲ. ನಾನು ಕೆಲವು ತಿಂಗಳುಗಳ ಮಟ್ಟಿಗೆ ಅಮೆರಿಕಾಕ್ಕೆ(ಡಾಲಸ್) ಬಂದು ಹಿಂದಿರುಗುವ ಸಮಯ - 'ಅಮೆರಿಕಾದ ಸ್ವಾರಸ್ಯ' ಲೇಖನ ಮೊದ್ಲೇ ಕಣ್ಣಿಗೆ ಬಿದ್ದಿದ್ದರೆ, ನನ್ನ ಪ್ರವಾಸ ಇನ್ನೂ ಸ್ವಾರಸ್ಯಪೂರ್ಣವಾಗಿರುತ್ತಿತ್ತು, ಅಂತ ಅನಸ್ತಾ ಇದೆ.
ಕಾಮೆಂಟ್ ಪೋಸ್ಟ್ ಮಾಡಿ