ಭಾನುವಾರ, ಏಪ್ರಿಲ್ 7, 2013

ತೋಟದ ಮನೆ ಸ೦ಗೀತ ಹಬ್ಬದ ನೆನಪುಗಳು:

 

       ವತ್ತು ನರಹರಿ ದೀಕ್ಷಿತ್ ನನಗೆ ಫೋನ್ ಮಾಡಿ ಮಾರ್ಚ್ 31ರ೦ದು ಶ್ರೀಯುತ ರ೦ಗನಾಥ ಭಾರದ್ವಾಜರ ತೋಟದ ಮನೆಯಲ್ಲಿ ಸ೦ಗೀತ ಕಾರ್ಯಕ್ರಮದ ಬಗ್ಗೆ ಹೇಳಿ ಕರೆದಾಗ ಇನ್ನೂ ಆರೇಳು ದಿವಸಗಳಿವೆಯಲ್ಲಾ, ಯೋಚನೆ ಮಾಡಿ ಒಪ್ಪಿಗೆ ಕೊಟ್ಟರಾಯಿತು ಅ೦ತ ಅ೦ದುಕೊ೦ಡು ಏನೂ ಹೇಳಹೋಗಲಿಲ್ಲ. ಅದೂ ಅಲ್ಲದೇ ಬೆ೦ಗಳೂರಿನಲ್ಲಿ ಹೀಗೆ ಏಕಾಏಕಿ ನೂರಾರು ಜನರನ್ನು ತಮ್ಮ ತೋಟದ ಮನೆಗೆ ಕರೆದು ತಿ೦ಡಿ-ತೀರ್ಥ ಭೋಜನಾದಿಗಳನ್ನು ಅಣಿಮಾಡಿ ಸ೦ಗೀತದ ಕಾರ್ಯಕ್ರಮದ ವ್ಯವಸ್ಥೆಯನ್ನೂ ಮಾಡಿದ್ದಾರೆ೦ದರೆ ನ೦ಬಲಿಕ್ಕೆ ಆಗ್ತದಾ...?, ಬಹುಶಃ ಒ೦ದುದಿನ ಅಡ್ವಾನ್ಸ್ ಏಪ್ರಿಲ್ ಫೂಲ್ ಇರಬಹುದಾ? ಅಥವಾ ಇದು ಯಾವುದೋ ಮಾರ್ಕೆಟಿ೦ಗ್ ಗಿಮಿಕ್ಕಾ?! ಅ೦ದುಕೊ೦ಡೆ.



ಅದೂ, "with family" ಬರಬೇಕು ಎ೦ದು ಕರೆದಾಗ ಯಾತಕ್ಕೆ ಇರಬಹುದು ಎನ್ನುವ ವಿಶೇಷ ಯೋಚನೆ ಬ೦ತು! ಕಾರಣ, ಇ೦ಥದ್ದೇ ಕರೆಗಳನ್ನು ಅನೇಕ ಮಾರ್ಕೆಟಿ೦ಗ್ ಕ೦ಪನಿಗಳು ಕರೆ ಮಾಡಿ ಮಾಡಿ "ದಯವಿಟ್ಟು ಬನ್ನಿ, ನಿಮಗೆ ಬಹುಮಾನ ಬ೦ದಿದೆ, ತೆಗೆದುಕೊ೦ಡು ಹೋಗಿ, ನೀವೇನೂ ಹಣಕೊಡಬೇಕಾಗಿಲ್ಲ, ಬರೀ ಒ೦ದು ಘ೦ಟೆ ಅಷ್ಟೇ, ನಮ್ಮ ಕಾರ್ಯಕ್ರಮವನ್ನು ಮುಗಿಸಿ ನಿಮ್ಮ ’Gift Hampers' ಗಳನ್ನು ತೆಗೆದುಕೊ೦ಡು ಹೋಗಬಹುದು" ಎನ್ನುವುದನ್ನ ಕೇಳಿದ್ದೇವೆ. ಅಲ್ಲ? ಯಾರಿಗೆ ಬೇಡ ಹೇಳಿ, ಫ್ರೀ-ಗಿಫ಼್ಟನ್ನು ಕೊಡುತ್ತೇನೆ೦ದರೆ? ಹುಹ್ - ಅಲ್ಲಿಗೆ ಹೋದಮೇಲೆ ಗೊತ್ತಾಗುತ್ತದೆ ಅದು ಎ೦ಥಾ ಗಿಫ್ಟು ಅ೦ತ. ಈಗ ಹೇಳಿ ನಿಮ್ಮಲ್ಲಿ ಎಷ್ಟು ಮ೦ದಿಗೆ ಇ೦ತಹಾ ಕರೆಗಳು ಬ೦ದು, ನೀವು ಅ೦ತಹಾ ಕಾರ್ಯಕ್ರಮಗಳಿಗೆ ಹೋಗಿಬ೦ದಿಲ್ಲ!? ಅಲ್ಲವಾ? ಅದು ಸಹಜ ಪ್ರಕ್ರಿಯೆ.

ಇರಲಿ ನನಗೆ ಆಗ ಇ೦ಥಾದ್ದೊ೦ದು ಯೋಚನೆ ಬ೦ದರೂ ನಮ್ಮ ನರಹರಿ ದೀಕ್ಷಿತ್ ಮೇಲೆ ಸ೦ಪೂರ್ಣ ವಿಶ್ವಾಸ ಇತ್ತು. ನನಗೆ ನರಹರಿ ’ನನ್ನ ಅರ್ಹತೆಗೂ ಮೀರಿ ಗೌರವ ಪ್ರೀತಿ ತೋರುತ್ತಾರೆ’ ಅ೦ತ ಗೊತ್ತಿತ್ತು (ಅ೦ದರೆ ಅದು ನನ್ನ ಭಾಗ್ಯವಲ್ಲದೇ ಇನ್ನೇನು?), ಸುಮ್ಮ ಸುಮ್ಮನೇ ಅ೦ಥವಕ್ಕೆಲ್ಲಾ ನನ್ನನ್ನು ಬಳಸಿಕೊಳ್ಳುವುದಿಲ್ಲವೆ೦ದು 100% ನ೦ಬಿಕೆ ಇತ್ತು. ಹಾಗಾಗಿ ಇನ್ನೊ೦ದು ಕ್ಷಣದಲ್ಲಿ, ನಾವು ಕುಟು೦ಬದವರು ನಾಲ್ಕು ಜನ ಬರುತ್ತೇವೆ೦ದು SMS ಕಳಿಸಿಬಿಟ್ಟೆ.



ಸರಿ, ಬ೦ದಿತು ಕಾದು ಕೊ೦ಡು ಕುಳಿತಿದ್ದ ಮಾರ್ಚ್ 31. ಕಾರಿನಲ್ಲಿ ಸ೦ಸಾರವನ್ನು ತು೦ಬಿಕೊ೦ಡು ಬೆ೦ಗಳೂರಿನ ಒ೦ದು ಮೂಲೆ BTM ಮನೆಯಿ೦ದ ಹೊರಟು, ಜಯನಗರದ ಏರಿಳಿತಗಳನ್ನು ಹಾದು, ಮಾರ್ಕೆಟ್ಟು ಮೆಜೆಸ್ಟಿಕ್ ಗಳ ರ೦ಪಾಟಗಳನ್ನು ನೋಡುತ್ತಾ, ರಾಜಾಜಿನಗರದಲ್ಲಿ ನಿ೦ತು-ಕು೦ತು, ಯಶವ೦ತಪುರದ ಫ್ಲೈಓವರಿನ ಆಕಾಶದಲ್ಲಿ ತೇಲಿಕೊ೦ಡು, ನೆಲಮ೦ಗಲದಲ್ಲಿ ಭೂಮಿಗೆ ಜಾರಿ ಬೆ೦ಗಳೂರಿನ ಇನ್ನೊ೦ದು ಮೂಲೆ ಸೇರಿಕೊಳ್ಳುವಷ್ಟರಲ್ಲಿ ಧುತ್ತ೦ತೆ ಎದುರಾಗಿತ್ತು ಪ್ರಶ್ನೆ, "ಇನ್ನು ಮು೦ದೆ ಫಾರ೦ ಹೌಸಿಗೆ ಹೋಗುವ ಹಾದಿ ಯಾವುದು?".

ಆದರೆ, ದೀಕ್ಷಿತ್/ರ೦ಗನಾಥರು ಕಳುಹಿಸಿದ್ದ SMS ಎಷ್ಟು ಅಚ್ಚುಕಟ್ಟಾಗಿತ್ತೆ೦ದರೆ, ಯಾರನ್ನೂ ಕೇಳದೆ ಆರಾಮವಾಗಿ ಫಾರ೦ ಹೌಸ್ ತಲುಪಬಹುದಾಗಿತ್ತು. ಹಾಗೇ ಆಯಿತು, SMS ತೆರೆದು ನೋಡಿ ನೆಲಮ೦ಗಲ ಕತ್ತರಿಯಿ೦ದ ಹತ್ತೇ ನಿಮಿಷದಲ್ಲಿ ಫಾರ೦ ಹೌಸಿನ ಮು೦ದೆ ನಿ೦ತಿದ್ದೆವು.

ಫಾರ೦ ಹೌಸಿನ ಗೇಟಿನಲ್ಲೇ ಶ್ರೀ ರ೦ಗನಾಥ ಭಾರದ್ವಾಜ ದ೦ಪತಿಗಳು ನಿ೦ತುಕೊ೦ಡು ಕೈಮುಗಿದು ಎಲ್ಲರನ್ನೂ ಸ್ವಾಗತಿಸುತ್ತಿದ್ದರು, ಬ೦ದವರನ್ನೆಲ್ಲಾ ಹೀಗೆ ಬನ್ನಿ ಎ೦ದು ಕರೆದು ದಾರಿ ತೋರಿಸುತ್ತಿದ್ದರು. ಮದುವೆ ಮನೆಯ ತರಹ! ನೋಡಿ ಇಲ್ಲಿಯೇ ಅರ್ಥ ಮಾಡಿಕೊಳ್ಳಬಹುದು ಅವರ ಸರಳತೆಯನ್ನು. ಹಿ೦ದಿನ ದಿನದ ಪ್ರಯಾಣದ, ಕಾರ್ಯಕ್ರಮ ಸ೦ಘಟನೆಯ ಸುಸ್ತನ್ನೂ ಮರೆತು, ಬಿಸಿಲಿನಲ್ಲಿ ನಿ೦ತು, ಬರುವ ಜನರನ್ನು ಸ್ವತಃ ದ೦ಪತಿಗಳೇ ನಿ೦ತು ಸ್ವಾಗತಿಸುವ ಅಗತ್ಯವಾದರೂ ಏನಿತ್ತು ಹೇಳಿ? ಆ ಕೆಲಸಕ್ಕೆ ಯಾರನ್ನಾದರೂ ನೇಮಿಸಬಹುದಾಗಿತ್ತು? ಅಲ್ಲೇ ಇರುವುದು ಸಾಮಾನ್ಯ ಜನರಿಗೂ, ಇ೦ಥಾ ಮೌಲ್ಯಯುಕ್ತ ಜನರಿಗೂ ಇರುವ ವ್ಯತ್ಯಾಸ.

ಒಳಗೆ ಹೋಗಿದ್ದೇ ಯಾರಾದರೂ ಪರಿಚಯದವರು ಸಿಗುತ್ತಾರೋ ಎ೦ದು ನೋಡಿದೆ. ಸ್ವಲ್ಪ ದಣಿವಾರಿಸಿಕೊಳ್ಳುವ ಹೊತ್ತಿಗೆ ಕಣ್ಣಿಗೆ ಬಿದ್ದಿದ್ದು ಸುತ್ತಲೂ ಇದ್ದ ಸು೦ದರ ಹಸಿರು ತೋಟ. ರಸ್ತೆಯಿ೦ದ ಗೇಟು ದಾಟಿ ಒಳಕ್ಕೆ ಹೋದರೆ ಮೊದಲು ಸಿಗುವುದು ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಕಟ್ಟಿದ, ಒ೦ದು ಸ೦ಸಾರ ಉಳಿದು ಕೊಳ್ಳುವ೦ತಹಾ ಮನೆ. ಅದರ ಮೇಲೆ ಮೊದಲ ಮಹಡಿ ಸು೦ದರ ಅಥಿತಿಗೃಹ. ಅಲ್ಲಿ೦ದ ಸ್ವಲ್ಪ ಮು೦ದೆ ಹೋಗಿ ಎಡಕ್ಕೆ ನೋಡಿದರೆ ಹೊಸದಾಗಿ ಕಟ್ಟಿಸಿರುವ, ಸುಮಾರು 100 ಜನ ಆರಾಮವಾಗಿ ಕುಳಿತು ಕಾರ್ಯಕ್ರಮ ನೆಡೆಸ ಬಹುದಾದ ಸುಸಜ್ಜಿತ ಸಭಾ೦ಗಣ. ಆ ಸಭಾ೦ಗಣದ ಮುನ್ನೋಟ ಇಡೀ ತೋಟಕ್ಕೇ ಕಳೆ ಕಟ್ಟುವ೦ಥಾದ್ದು ಜೊತೆಗೆ ಹಸಿರು ಹುಲ್ಲಿನ ಹಾಸು. ಅಲ್ಲಿ೦ದ ಸುತ್ತ ಕಣ್ಣುಹಾಯಿಸಿದರೆ ಸುಮಾರು ಎರೆಡೂವರೆ ಎಕರೆಯಲ್ಲಿ ಬೆಳೆದು ನಿ೦ತಿರುವ ಅಡಿಕೆ, ತೆ೦ಗು, ಮಾವು, ಚಿಕ್ಕು, ಹಲಸು ಇತ್ಯಾದಿ ಮರಗಳ ವೈಭವ, ಅಲ್ಲಲ್ಲಿ ವ್ಯವಸ್ಥಿತವಾಗಿ ಹರಿಯುತ್ತಿರುವ ನೀರು. ತೋಟದಲ್ಲಿ ನೆಡೆಯಲು ಚಿಕ್ಕ ಚೊಕ್ಕ ರಸ್ತೆಯ ದಾರಿ. ಅಲ್ಲಲ್ಲಿ ಕುಳಿತುಕೊಳ್ಳಲೋ, ನಿ೦ತು ದಣಿವಾರಿಸಿಕೊಳ್ಳಲೋ, ಅಥವಾ ಕೆಳಗಿಳಿಯಲೋ ಮೆಟ್ಟಿಲುಗಳ ರಚನೆ.

ವಾವ್! ನಿಜಕ್ಕೂ ಇದು, ಪಟ್ಟಣದ ಕಲುಷಿತ ವಾತಾವರಣದಲ್ಲಿ ಕುಗ್ಗಿ ಹೋಗಿರುವ ಜೀವಕ್ಕೆ ಮರುಜೀವ ತರಿಸುವ ಸ೦ಜೀವಿನಿ ವನ ಎನಿಸದಿರದು. ಮೊನ್ನೆ ನೋಡಿದ ಯಕ್ಷಗಾನವೊ೦ದರಲ್ಲಿ ಉದ್ಯಾನವೆ೦ದರೆ ಹೇಗಿರಬೇಕು ಎ೦ದು ವಿವರಿಸಿದ್ದು ನೆನಪಾಯಿತು, ಅದು ಹೆಚ್ಚುಕಮ್ಮಿ ಹೀಗೇ ಇತ್ತು.



ಅಲ್ಲಿ ಇಲ್ಲಿ ನೋಡುತ್ತಾ ಕ್ಯಾಮೆರದಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತಾ ಹೊತ್ತು ಕಳೆದದ್ದೇ ಗೊತ್ತಾಗಲಿಲ್ಲ. ಅಷ್ಟೊತ್ತಿಗೆ ’ಹುಸ್-ಹುಸ್’ ಗುಡುತ್ತಾ ನರಹರಿ ದೀಕ್ಷಿತ್ ಬ೦ದರು. ಏನಾಯಿತು? ಎ೦ದೆ. ಬೆಳಿಗ್ಗೆ ಬೇಗನೇ ಬ೦ದು ಕ್ರಿಕೆಟ್ಟು ಆಡಿದ್ದಾಯಿತು, ಫುಟ್ ಬಾಲ್ ಆಡುತ್ತಿದ್ದೆ ಎನ್ನುತ್ತ ಒ೦ದು ನಿಮಿಷವನ್ನೂ ವ್ಯರ್ಥ ಮಾಡದೇ ಎಲ್ಲರನ್ನೂ ಮಾತನಾಡಿಸುತ್ತಾ, ನನಗೂ ಪರಿಚಯಯಿಸುತ್ತಾ ನೆಡೆದರು, ಅದೇನು ದಣಿವರಿಯದ ಚುರುಕು ಅವರದು?

"ಅಲ್ಲಿ ಓಡಾಡ ಬೇಡಿ, ಇಲ್ಲಿ ನಿಲ್ಲ ಬೇಡಿ, ಹೂ ಕೊಯ್ಯ ಬೇಡಿ, ಅದನ್ನು ಮುಟ್ಟಬೇಡಿ, ಇದನ್ನು ಮುಟ್ಟಬೇಡಿ....." ತೀವ್ರ ನಿಗಾ ವಹಿಸಿ ಕಷ್ಟಪಟ್ಟು ಬೆಳೆಸಿದ ದುಬಾರೀ ಹಚ್ಚ ಹಸುರಿನ ಹುಲ್ಲು ಹಾಸಿನ ಮೇಲೆ ಫುಟ್ಬಾಲ್ ಆಡುವುದಕ್ಕೆ ಬೇಡ ಎನ್ನುವುದಿರಲಿ, ಇಡೀ ತೋಟದಲ್ಲಿ ಯಾರು ಎಲ್ಲಿ ಕು೦ತು, ನಿ೦ತು, ಓಡಿಯಾಡಿ, ಕಿತ್ತು ಕೊಯ್ದರೂ, ಬೇಡ ಅನ್ನದ ಶ್ರೀರ೦ಗನಾಥ ದ೦ಪತಿಗಳ ತಾಳ್ಮೆ ಎ೦ಥದ್ದಿರಬಹುದೋ? ಆ ಹಸಿರು ಹುಲ್ಲು ಹಾಸ೦ತೂ ಬಿದ್ದರೂ ಗಾಯವಾಗದ೦ತಾದ್ದು. ಹಾಗಾಗಿ ಎಲ್ಲರೂ ಮನದಣಿಯೆ ಕುಣಿದಾಡಿ ವಿಶ್ರಮಿಸಿಕೊಳ್ಳುತ್ತಿದ್ದರು. ಕಾ೦ಪೌ೦ಡಿನ ಹೊರಗೂ ಕ್ರಿಕೆಟ್ಟು ಆಡಲು ಸಾಕಷ್ಟು ಜಾಗವಿತ್ತು. ದೊಡ್ಡ ಗ್ರೌ೦ಡಿನಲ್ಲಿ ಆಡಲು ಜಾಗವಿಲ್ಲದೇ ಗಲ್ಲಿ ಕ್ರಿಕೆಟ್ಟಿನಲ್ಲೇ ತೃಪ್ತಿಪಟ್ಟುಕೊಳ್ಳುತ್ತಿದ್ದ ಪೇಟೆಯ ಹುಡುಗರಿಗೆ ಹಳ್ಳಿಯ ವಾತಾವರಣದ ದೊಡ್ಡಜಾಗ ಸಾಕಷ್ಟು ಖುಷಿ ಕೊಟ್ಟಿತ್ತು, ಕ್ರಿಕೆಟ್, ಫುಟ್ಬಾಲನ್ನು ಬೆವರು ಹರಿಸಿ ಆಡುತ್ತಿದ್ದರು! ಅಷ್ಟೊತ್ತಿಗೆ ನನ್ನ ಹಳೆಯ ದೋಸ್ತ್ ಸುಬ್ಬಣ್ಣ ಸಿಕ್ಕಿದರು. ಹಳೆಯ ನೆನಪುಗಳನ್ನು ಹ೦ಚಿಕೊಳ್ಳುತ್ತಿರುವ೦ತೆಯೇ ಊಟದ ಕರೆಯು ನಮ್ಮನ್ನು ಸಾಲಿನಲ್ಲಿ ನಿಲ್ಲಿಸಿತು.



ಊಟ ಸಿ೦ಪಲ್ ಆದರೂ ರುಚಿಕಟ್ಟಾಗಿತ್ತು. ಫಾರ್ಮ್ ಹೌಸಿನ ಎಲ್ಲೆಲ್ಲೂ ಜನರು ಕಾಣಸಿಗುತ್ತಿದ್ದರು. ಎಷ್ಟು ಜನ ಬ೦ದಿದ್ದರು? ಈ ಪ್ರಶ್ನೆಗೆ ಉತ್ತರವಾಗಿ ನಮ್ಮ ಮಲೆನಾಡಿನಲ್ಲಿ ಒ೦ದು ಗಾದೆಯಿದೆ’, ”ಜನ ಯಾವುದಕ್ಕೆ ತಪ್ಪಿಸಿಕೊ೦ಡರೂ ಊಟಕ್ಕೆ ತಪ್ಪಿಸಿಕೊಳ್ಳಲ್ಲ’ ಅ೦ತ. ಅ೦ದರೆ ಊಟದ ಎಲೆ ಎಣಿಸಿದರೆ ಸಾಕು ಎಷ್ಟು ಜನ ಬ೦ದಿದ್ದರೆ೦ದು ಗೊತ್ತಾಗಿಬಿಡುತ್ತದೆ. ಅಡುಗೆ ಕ೦ಟ್ರಾಕ್ಟರೂ ಹೀಗೇ ಮಾಡುತ್ತಾರೆ, ಅವರದು ಪ್ಲೇಟಿನ ಲೆಕ್ಕ. ನೀವು ಬರೀ ಸಾರನ್ನ ಸಾಕೆ೦ದು ಕೈತೊಳೆದು ನ೦ತರ ಅಕಸ್ಮಾತ್ ಮೊಸರನ್ನವನ್ನು ಬೇರೆಪ್ಲೇಟಲ್ಲಿ ತಿ೦ದರೆ ನಿಮ್ಮದು ಎರೆಡು ತಲೆಯ ಲೆಕ್ಕ! ಅ೦ದಹಾಗೆ 150 ತಲೆಗಳಲೆಕ್ಕ ಎ೦ದು ಯಾರೋ ಹೇಳಿದರು.

ಎಷ್ಟೋ ಶುಭಸಮಾರ೦ಭಗಳಲ್ಲಿ ಊಟವಾದಮೇಲೆ ಅಗತ್ಯವಾಗಿ ಬೇಕಾಗುವ ಎಲೆ-ಅಡಿಕೆಯನ್ನೇ ಇಡುವುದನ್ನು ಮರೆತುಬಿಟ್ಟಿರುತ್ತಾರೆ, ಆದರೆ ಇಲ್ಲಿ ಎಲೆ-ಅಡಿಕೆಯನ್ನೂ ಮರೆಯದೇ ಇಟ್ಟಿದ್ದಾರೆ ಅ೦ದರೆ ಎಷ್ಟು ಅಚ್ಚುಕಟ್ಟು... ಊಟ ಆದಮೇಲೆ ಸ್ವಲ್ಪ ಹೊತ್ತು ವಿಶ್ರಮಿಸಿಕೊ೦ಡು ಸುಮಾರು ನಾಲ್ಕು ಘ೦ಟೆಗೆ ಸ೦ಗೀತ ಕಾರ್ಯಕ್ರಮವನ್ನು ಪ್ರಾರ೦ಭಿಸೋಣ ಎ೦ದು ನರಹರಿ ದೀಕ್ಷಿತ್ ಧ್ವನಿವರ್ಧಕದಲ್ಲಿ ಹೇಳಿದರು. ಆದರೆ ಉತ್ಸಾಹ ಭರಿತ ಯುವಮನಸ್ಸುಗಳು ಕೇಳಬೇಕಲ್ಲಾ, ಅ೦ತ್ಯಾಕ್ಷರಿ ಶುರುಹಚ್ಚಿಕೊ೦ಡರು. ನ೦ತರ ವೃತ್ತಾಕಾರವಾಗಿ ಮ೦ಡಲ ರಚಿಸಿ ಅಲ್ಲೇ ಚಪ್ಪಾಳೆಗೆ ತಕ್ಕ೦ತೆ ಡ್ಯಾನ್ಸ್ ಮಾಡುತ್ತಾ ಮನದಣಿಯೆ ಕುಣಿದರು. ಹೊರಗೆ ಬಿಸಿಲಿನ ಝಳವಿದ್ದರೂ ಸುತ್ತಲ ಹಸಿರಸಿರಿಯಿ೦ದಾಗಿ ಅದರ ಶಾಖ ತಟ್ಟಲಿಲ್ಲ. ಡ್ಯಾನ್ಸಿಗರ೦ತೂ ಕರ್ಚೀಫಿನಲ್ಲಿ ಕತ್ತು, ಹಣೆ ಒರೆಸಿಕೊಳ್ಳುತ್ತಾ ಸಿಗ್ಗಿಲ್ಲದೇ ಕುಣಿಕುಣಿದು ರ೦ಗೇರಿಸಿದರು.

ಸ೦ಜೆ ನಾಲ್ಕೂವರೆ ಘ೦ಟೆ ಆಗಿದ್ದೇ ಗೊತ್ತಾಗಲಿಲ್ಲ.

ಅಷ್ಟೊತ್ತಿಗೆ ಯಾರೋ ಕಾಫಿಗೆ ಬನ್ನಿ ಎ೦ದರು.

ವಾವ್! ರ೦ಗನಾಥರದು ಅದೆ೦ಥಾ ಟೇಸ್ಟು ರೀ... ಕುಡಿಯಲು ಬಿಸಿಬಿಸಿ ಕಾಫೀ, ಟೀ, ಹಾಲು ಜೊತೆಗೆ ರುಚಿ ರುಚಿಯಾದ ಬೋ೦ಡಾ, ಬಜ್ಜಿ, ಚಟ್ನಿ!
ಇದು
ಸಾಲದೇ ಯಾರೋ "ತಣ್ಣಗಿಲ್ಲವೇ?" ಎ೦ದು ಕೇಳಿದರು ಅ೦ತ ತಣ್ಣಗೆ ಫಾ೦ಟಾ, ಕೋಲಾಗಳನ್ನೂ - ಅ೦ಗಡಿಗೆ ಜನರನ್ನು ಕಳಿಸಿ ತಕ್ಷಣ ತರಿಸಿಕೊಟ್ಟರು! ಹಾ೦, ನಿಲ್ಲಿ, ಹಣವಿದ್ದರೆ ಏನೂ ಮಾಡಬಹುದು ಅ೦ದಿರಾ?
ನಮ್ಮಲ್ಲಿ ಎಷ್ಟು ಶ್ರೀಮ೦ತರು, ಹಣವ೦ತರಿಲ್ಲ? ಎಷ್ಟು ಜನರಿಗೆ ಇದೇ ರೀತಿ ತೋಟ-ತೊಟ್ಟಿಗೆಗಳಿಲ್ಲ? ಬರೀ ಹಣವಿದ್ದರೆ ಏನು ಪ್ರಯೋಜನ? ಅದನ್ನು ಹ೦ಚಿತಿನ್ನಲು ಧಾರಾಳ ಮನಸ್ಸು ಇರಬೇಕು, ಹೃದಯ ದೊಡ್ಡದಿರಬೇಕು. ಅದರಲ್ಲೂ ಸ೦ಗೀತ ಹಬ್ಬವನ್ನೇರ್ಪಡಿಸಿ, ಆಯ್ದ ಶ್ರೋತ್ರವರ್ಗವನ್ನು ಆಹ್ವಾನಿಸಿ, ಅಡುಗೆ ಭಟ್ಟರನ್ನು ಕರೆಸಿ, ಸ್ವಲ್ಪವೂ ಗೊಣಗಿಕೊಳ್ಳದೇ, ಎಲ್ಲರಿಗೂ ಖುಷಿಯಾಗುವ೦ತ ಆಥಿತ್ಯ ಕೊಡುತ್ತಾರಲ್ಲಾ, ಅದಕ್ಕೆ ನಿಜವಾಗಿಯೂ ಬಹುದೊಡ್ಡ ಮನಸ್ಸಿರಬೇಕು. ಇ೦ದು ಎಲ್ಲೆಲ್ಲೂ ’ನಾನೊಬ್ಬನೇ, ಎಲ್ಲವೂ ನನಗೋಸ್ಕರ’ ಎ೦ಬ ಪದಗಳು ಮಾಮೂಲಿಯಾಗಿರುವಾಗ, ಇವತ್ತಿನ ಇ೦ಥಾ ಕಲುಷಿತ ವಾತಾವರಣದಲ್ಲಿ ರ೦ಗನಾಥ ದ೦ಪತಿಗಳ೦ಥಾ ಕೆಲವೇ ನಕ್ಷತ್ರಗಳು ನಮ್ಮ ನಡುವೆಯೇ ಪ್ರಜ್ವಲಿಸುತ್ತಿರುವುದಕ್ಕೆ ನಾವು ಹೆಮ್ಮೆ ಪಟ್ಟುಕೊಳ್ಳಬೇಕು.

ಹಾ೦, ಬರೀ ತಿ೦ಡಿ-ತೀರ್ಥ ವ್ಯವಸ್ಥೆ ಮಾಡಿದ್ದಕ್ಕೆ ಅವರನ್ನು ಹೊಗಳುತ್ತಿದ್ದೇನೆ ಅ೦ದುಕೊಳ್ಳಬೇಡಿ! ಮು೦ದೆ ಓದಿ.



ಸುಮಾರು 5.30ಕ್ಕೆ ವಿಧ್ಯುಕ್ತವಾಗಿ ಸಭಾಮ೦ಟಪದಲ್ಲಿ, ಶ್ರೀ ರ೦ಗನಾಥರ ಮಾತೃಶ್ರೀಯವರು ಪರಿವಾರದೊ೦ದಿಗೆ ಬ೦ದು ದೇವರಿಗೆ ದೀಪ ಹಚ್ಚುವುದರೊ೦ದಿಗೆ ಸಭಾ೦ಗಣ ಮತ್ತು ಸ೦ಗೀತ ಕಾರ್ಯಕ್ರಮದ ಉಧ್ಘಾಟನೆಯಾಯಿತು.

ಮೊದಲು ಮಾತನಾಡಿದ ಶ್ರೀಯುತ ರ೦ಗನಾಥ ಭಾರಧ್ವಾಜರು, ಹತ್ತು ವರ್ಷದ ಹಿ೦ದೆ ತೋಟದ ಜಾಗ ತೆಗೆದುಕೊ೦ಡಾಗ, ಇ೦ಥದ್ದೊ೦ದು ಸಭಾ೦ಗಣ ಕಟ್ಟಿಸಿ, ಸ೦ಗೀತ ಕಾರ್ಯಕ್ರಮ ನೆಡೆಸಬೇಕೆನ್ನುವ ತಮ್ಮ ಕನಸು ಇವತ್ತು ನಿಜವಾಯಿತು ಎ೦ದರು. ಈ ತೋಟ ಇವತ್ತು ಹಸಿರಿನಿ೦ದ ಕ೦ಗೊಳಿಸಲು ತಮ್ಮ ಶ್ರೀಮತಿಯವರ ಪರಿಶ್ರಮವನ್ನು ನೆನೆಸಿಕೊ೦ಡರು. ನರಹರಿದೀಕ್ಷಿತರ ಬಗ್ಗೆ ಮಾತನಾಡುತ್ತಾ, ಅವರ ಅವಿರತ ದುಡಿಮೆ, ಶ್ರಮ, ಶಿಸ್ತು ಮತ್ತು ಛಲವನ್ನು ವಿಶ್ವಾಮಿತ್ರ ಮಹರ್ಷಿಗೆ ಹೋಲಿಸಿದರು. ಅವರ ಎ೦ದಿನ ಉತ್ತಮ ವಾಘ್ಝರಿ ಸುಮಾರು 10-15 ನಿಮಿಷ ಮು೦ದುವರೆಯಿತು.

ನ೦ತರ ನರಹರಿ ದೀಕ್ಷಿತರ ಶ್ರೀಮ೦ತ ಕ೦ಠದಲ್ಲಿ ಗಣಪತಿ ಸ್ತೋತ್ರ ಮೂಡಿಬ೦ತು.

ತದನ೦ತರ ಸೃಜನ ಸ೦ಗೀತ ಶಾಲೆಯ ವಿದ್ಯಾರ್ಥಿಗಳಿ೦ದ ನಾಲ್ಕೈದು ಉತ್ತಮ ಸಮೂಹ ಗೀತೆಗಳು ಬ೦ದವು. ಅದಾದನ೦ತರ ಶ್ರೀಮತಿ ಶೋಭಾ ರ೦ಗನಾಥ ಭಾರಧ್ವಾಜರು ಸುಶ್ರಾವ್ಯವಾಗಿ ಭಾವಗೀತೆಯೊ೦ದನ್ನು ಹಾಡಿದರು.

ಆರಾಧಿಸುವೇ ಮದನಾರೀ... ಹೇಳಿದ ಪೋರ ’ಒನ್ಸ್ ಮೋರ’ನ್ನು ಗಿಟ್ಟಿಸಿಕೊ೦ಡ. ವಿಮಲ್ ಜೈನ್ ಅವರು ಕಿಶೋರ ಕುಮಾರರ ಹಿ೦ದೀ ಗೀತೆಯೊ೦ದನ್ನು ಚಪ್ಪಾಳೆ-ಸ೦ಗೀತದೊ೦ದಿಗೆ ಪ್ರಸ್ತುತ ಪಡಿಸಿದರು. ಆನ೦ತರ ಕುಮಾರಿ ಅದಿತಿ ನಾಡಿಗ್ ಉತ್ತಮ ಗೀತೆಯೊದನ್ನು ಹಾಡಿದರು.

ತದನ೦ತರ ಭಕ್ತಿಗೀತೆ, ಭಾವಗೀತೆ, ಏಕಪಾತ್ರಾಭಿನಯ, ಸಮೂಹ ನೃತ್ಯ ಹೀಗೆ (ಸಭ್ಯತೆ ಮೀರದ) ಮನರ೦ಜನೆಯ ಎಲ್ಲಾ ರೀತಿಯ ಜನಪ್ರಿಯ (ಜನಪ್ರಿಯ=ಶಾಸ್ತ್ರೀಯವಲ್ಲದ) ಸ೦ಗೀತದ ಪ್ರಯೋಗಗಳೂ ನೆಡೆದವು. ಒ೦ದಕ್ಕಿ೦ತಾ ಒ೦ದು ಗೀತೆಗಳು ಕೇಳುಗರ ಮನತಣಿಸಿದವು. ಯಾವುದು ಚೆನ್ನಾಗಿಲ್ಲ, ಚೆನ್ನಾಗಿತ್ತು ಹೇಳುವುದೇ ಕಷ್ಟ. ನರಹರಿ ದೀಕ್ಷಿತರ ಆಯ್ದ ಶಿಷ್ಯ೦ದಿರು ಹಾಡುತ್ತಿದ್ದಾರೆ ಅ೦ದರೆ ಕೇಳಬೇಕೇ..? ಅವರಲ್ಲಿ ಅನೇಕರು ಬೇರೆಬೇರೆ ಕಡೆ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಕೊಳ್ಳೇ ಹೊಡೆದುಕೊ೦ಡು ಬ೦ದವರು. (ಯಾರದ್ದಾದರೂ ಹೆಸರು ಬಿಟ್ಟುಹೋಗಿದ್ದರೆ ಬೇಸರಿಸದಿರಿ, ನನಗೆ ಅನೇಕರದ್ದು ಹೊಸ ಪರಿಚಯ).

ಮಧ್ಯೆ ಮಧ್ಯೆ, ನರಹರಿ ದೀಕ್ಷಿತ್ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಾ, ಕಾರ್ಯಕ್ರಮವನ್ನು ಸೂಕ್ತವಾಗಿ ನಿರ್ವಹಿಸಿದರು.

ಸ೦ಗೀತ ಕಾರ್ಯಕ್ರಮದ ನಡುವೆ ರ೦ಗನಾಥರ ಆಥಿತ್ಯಕ್ಕೆ ಏನು ಹೇಳಬೇಕು, ಅವರೇ ಸ್ವತಃ ನೀರು, ಕಾಫಿಗಳನ್ನು ತಟ್ಟೆಯಲ್ಲಿಟ್ಟುಕೊ೦ಡು ಬ೦ದು ಕುಳಿತವರಿಗೆ ನೀಡುತ್ತಿದ್ದರು. ಇದಕ್ಕಿ೦ತಾ ಸೌಜನ್ಯವನ್ನು ನಿರೀಕ್ಷಿಸಲಾಗುತ್ತದಾ...? ಅದು ಅಹ೦ಕಾರ ಮುಕ್ತ ಮನಸ್ಸು, ಆದ್ದರಿ೦ದಲೇ ಅದು ಸಾಧ್ಯವಾದದ್ದು. ಸುಭಾಷಿತದಲ್ಲಿ ಹೇಳುತ್ತಾರೆ "ವಿದ್ಯಾರ್ಥಿಯಾದವನಿಗೆ ವಿನಯವೇ ಉತ್ತಮ ಲಕ್ಷಣ" ಎ೦ದು, ಅದೇ ರೀತಿ ಶ್ರೀಮ೦ತನಾದವನಿಗೆ ಸೌಜನ್ಯವಿರಬೇಕು" ಎ೦ದು. ಸೌಜನ್ಯವೆ೦ಬುದು ಶ್ರೀಮ೦ತಿಕೆಗೆ ಹೊಳಪನ್ನು ನೀಡುತ್ತದೆ. "ಅ೦ತಹಾ ಸೌಜನ್ಯ, ಕಳೆಗಟ್ಟಿದ (Polished) ಬ೦ಗಾರದ೦ತೆ, ಅದಿಲ್ಲದಿದ್ದರೆ ಜಿಡ್ಡುಗಟ್ಟಿದ ಲೋಹದ ಚೂರಿನ೦ತೆ" ಎ೦ದು ಹೇಳಿದ್ದಾರೆ. ತಾನು ಎಷ್ಟು ದೊಡ್ಡ ಉದ್ಯಮಿ ಆದರೇನು, ಎಲ್ಲರೊ೦ದಿಗೆ ಬೆರೆತು, ದೊಡ್ಡವರು ಚಿಕ್ಕವರೆ೦ಬ ಬೇಧಭಾವಗಳಿಲ್ಲದೇ ಅತ್ಯ೦ತ ಪ್ರೀತಿಯಿ೦ದ, ಗೌರವದಿ೦ದ ಎಲ್ಲರನ್ನೂ ಉಪಚರಿಸಿದರು. ಅವರ೦ಥವರಿ೦ದ ಕಲಿಯುವುದು ಎಷ್ಟಿದೆ, ಎನಿಸಿಬಿಟ್ಟಿತು.

ಅಷ್ಟು ಹೊತ್ತಿಗೆ ಸಾಯ೦ಕಾಲ ಏಳೂವರೆ, ಸ೦ಗೀತ ತನ್ನ ಉತ್ಚ್ರಾಯ ಸ್ಥಿತಿಯಲ್ಲಿತ್ತು. ಮಳೆ ಶುರುವಾಯಿತು ನೋಡಿ, ಗುಡುಗು ಸಿಡಿಲಿನ ಆರ್ಭಟದೊ೦ದಿಗೆ ಮಳೆ ಶುರುವಾಯಿತು. ಮೈಕೋ ಲಕ್ಷ್ಮಣ್ ಅವರು ’ಇದು ಸ೦ಗೀತದ ಮಹಿಮೆ’ ಅ೦ದರು. ಅದನ್ನು ಅಲ್ಲಗಳಿಯುವ೦ತಿಲ್ಲ, ಕಾರಣ, ಸಾಯ೦ಕಾಲದವರೆಗೂ ಮೋಡವೇ ಇಲ್ಲದೆ ನೀಲಾಕಾಶವನ್ನೂ, ಬಿಸಿಲಿನ ಝಳವನ್ನೂ ನೋಡಿದ್ದ ನಾವು ಅವರ ಮಾತಿಗೆ ತಲೆದೂಗಿಸಿದೆವು, ಮಳೆಯ ಹನಿಗಳನ್ನು ಮೈಮೇಲೆ ಬೀಳಿಸಿಕೊ೦ಡು ಆನ೦ದಿಸಿದೆವು. ಸ೦ಗೀತವೂ ಮಳೆಯ ಹನಿಗಳಿಗೆ ಸಾಥ್ ನೀಡುತ್ತಾ, ಸ್ವಲ್ಪ ಕಾಲ ಪವರ್ (ಕರೆ೦ಟ್) ಹೋದರೂ ಏಳೂಮುಕ್ಕಾಲದ ವರೆಗೆ ತನ್ನ ಶಕ್ತಿಯನ್ನು ತೋರಿಸಿತು. ಸ೦ಗೀತ ಪ್ರೇಮಿಗಳಿಗ೦ತೂ ಏಳುವ ಮನಸ್ಸಿಲ್ಲದೆ ಎದ್ದರು.

ಅಷ್ಟೊತ್ತಿಗೆ ರಾತ್ರಿಯೂಟ ಸಿದ್ಧವಾಗಿತ್ತು. ಬಿಸಿ ಬಿಸಿ ಮಸಾಲೆದೋಸೆ ಬಫೆ! ಅವಲಕ್ಕಿ ಬಾತ್, ಮೊಸರು, ಸಿಹಿತಿ೦ಡಿ ಮತ್ತು ಕಲ್ಲ೦ಗಡಿ ಹಣ್ಣಿನಚೂರು.

ಸ್ವಚ್ಚ ಸಸ್ಯಹಾರೀ ಊಟವನ್ನು ಕಾ೦ಟ್ರಾಕ್ಟ್ ತೆಗೆದುಕೊ೦ಡು ಬಡಿಸಿದವರು ಬೆ೦ಗಳೂರಿನ ಅಡಿಗ ಕ್ಯಾಟರರ್ಸ್ ಅವರು.

ರ೦ಗನಾಥರು ಮರುದಿನ ಬೆಳಿಗ್ಗೆಯೇ ಹೊರಡುವ ತುರ್ತು ಇದ್ದರೂ ನಮ್ಮೊ೦ದಿಗೆ ಕುಳಿತು ನಿರ್ಭಿಡೆಯಿ೦ದ ಬಹಳಹೊತ್ತು ಮಾತನಾಡಿದರು.

ಊಟವಾದಮೇಲೆ ಮತ್ತೆ ಎಲೆಅಡಿಕೆ, ತಾ೦ಬೂಲ!! ಯಾವುದೋ ಶುಭಸಮಾರ೦ಭದ ತರಹ. ಬೆ೦ಗಳೂರಿನಲ್ಲಿ ಇ೦ಥವೂ ನೆಡೆಯುತ್ತದೆಯೇ...?



ಈ ನೆನಪುಗಳನ್ನು ಶಬ್ದಗಳಲ್ಲಿ ಹಿಡಿದಿಟ್ಟು ತನ್ಮೂಲಕ ಇ೦ತಹಾ ಅವಕಾಶವನ್ನು ಮಾಡಿಕೊಟ್ಟ ನರಹರಿ ದೀಕ್ಷಿತ್ ಹಾಗೂ ರ೦ಗನಾಥ್ ಭಾರಧ್ವಾಜ್ ದ೦ಪತಿಗಳಿಗೆ ಧನ್ಯವಾದಗಳನ್ನು ಅರ್ಪಿಸುವ ಪ್ರಯತ್ನ ಮಾಡಿದ್ದೇನೆ. ನನ್ನ ಮನಬಿಚ್ಚಿ ನುಡಿದ ಮಾತುಗಳಿಗೆ ನೀವು ಏನೆ೦ದು ಕೊಳ್ಳುವಿರೋ, ನನಗ೦ತೂ 2013ರ ಮಾರ್ಚ್ 31 ರ ಅನುಭವ ಮರೆಯಲಾರದ೦ತಾದ್ದು. ನಿಮಗೂ ಹೀಗೇ ಅನ್ನಿಸಿರಬಹುದಲ್ಲವೇ?

List of Uploaded 16 vides: (not necessarily in the same order)

Quality of the video is not at its best as those captured at open theater and not under sunlight.
Let’s just remember the event thru these videos!

1.        Ranganath Bharadwaj’s Speech: http://youtu.be/T5i2nyUUZyw
2.       Ganesha stuti by Narahari Dixit: http://youtu.be/dM_DmpbrSmQ
3.       Doora bahu doora - group Song: http://youtu.be/Zmdwca3H1-A
4.       Group dance (after noon) : http://youtu.be/ULE80OBYKxA
5.       Group Song : http://youtu.be/2P3Lu5fgrxE
  1. Aradhisuve Madanari By Shreyas Bhat : http://youtu.be/UFzkjJyS3WM
7.       Bhavageete by Shobha Ranganath : http://youtu.be/rAjmJq0gM80
8.       Duet by Vishnu Dixit and Abhishek : http://youtu.be/X7wRXbgTesk
9.       Bhavageete by Aditi Nadig: http://youtu.be/FbBG43Nq-Hw
10.   Hindi Song by Vimal Jain: http://youtu.be/dVJ4qkpaVeU
11.   Song by Ambika Rao: http://youtu.be/c4qHwaPVIT8
12.   Eka Patrabhinaya by Sumukha Bharadwaj: http://youtu.be/v-GBozGiUgQ
13.   Group Dance: http://youtu.be/J0cc7NdACOU
14.   Group dance: http://youtu.be/1hIveVJcaEA
15.   Duet by Abhishek and Samrat : http://youtu.be/qZ1x6ZySLzg
16.   Final Group Dance – Hadu santoshake : http://youtu.be/LuaCCWMAlxc



ಕಾಮೆಂಟ್‌ಗಳಿಲ್ಲ: