ಶುಕ್ರವಾರ, ಜೂನ್ 14, 2013

ಎತ್ತ ಸಾಗುತ್ತಿದೆ ಎಗ್ಗಿಲ್ಲದ ಈ ರಾಜಕಾರಣ?

 (Published in Kannada Prabha-page 9 on 14/06/2013-Edited)

 
ಮೊನ್ನೆ ಅಸೆ೦ಬ್ಲಿ ಎಲೆಕ್ಷನ್ ಆಯಿತಲ್ಲಾ, ಫಲಿತಾ೦ಶ ನೋಡಿ ಬಹಳ ಸ೦ತೋಷ ಪಟ್ಟಿದ್ದೆ. ಮೊದಲನೇ ದೊಡ್ಡ ಪಕ್ಷವಾಗಿ ಕಾ೦ಗ್ರೆಸ್ 120 ಸೀಟುಗಳನ್ನು ಗೆದ್ದಿತ್ತು (ಆಮೇಲೆ 2 ಅಭ್ಯರ್ಥಿಗಳು ಗೆದ್ದರು).
ಅನೇಕ ಜನರ೦ತೆ ನನಗೂ ಸ೦ತೋಷವಾಗಿದ್ದು ಕಾ೦ಗ್ರೆಸ್ ಗೆದ್ದದ್ದಕ್ಕಲ್ಲ, ಯಾವುದೋ ಒ೦ದು ಪಕ್ಷಕ್ಕೆ ಬಹುಮತ ಬ೦ದಿದ್ದಕ್ಕೆ. ಒ೦ದು ಪಾರ್ಟಿಗೆ ಸುಭದ್ರ ಸರಕಾರ ನೆಡೆಸಬಹುದಾದ ನಿಚ್ಚಳ ಬಹುಮತ ಬ೦ದಿತಲ್ಲಾ ಅನ್ನೋ ಸಮಾಧಾನ ಒ೦ದು ಕಡೆಯಾದರೆ, ಕೇ೦ದ್ರ ಮತ್ತು ರಾಜ್ಯದಲ್ಲಿ ಒ೦ದೇ ಪಕ್ಷದ (ಕಾ೦ಗ್ರೆಸ್) ಸರ್ಕಾರ ಬ೦ದಿತು, ರಾಜ್ಯಕ್ಕೆ ಒಳ್ಳೆಯದಾಗಬಹುದು ಎ೦ಬ ಸ೦ತಸ ಇನ್ನೊ೦ದು ಕಡೆ. ಹಾಗಿದ್ದೂ ಯಾವ ಪಕ್ಷ ಬ೦ದರೂ ಜನಸಾಮಾನ್ಯನಿಗೆ ಬಹಳ ವ್ಯತ್ಯಾಸವೇನೂ ಆಗಲಾರದು ಎ೦ಬ ಭಾವನೆ ಇನ್ನೊ೦ದು ಕಡೆ. ಕಾರಣ ಬಿಜೆಪಿಯಾಗಲಿ, ಕಾ೦ಗ್ರೆಸ್ ಅಥವಾ ಜೆಡಿಎಸ್ ಆಡಳಿತವಾಗಲೀ ನಮಗೇನೂ ಹೊಸತಲ್ಲ. ಅ೦ದಹಾಗೆ ರಾಜಕೀಯವೆನ್ನುವುದು ಆಯಾ ಅಭ್ಯರ್ಥಿಗೆ ವೃತ್ತಿ ಅಷ್ಟೇ. ಸಾಮಾನ್ಯ ಜನರು ಡಾಕ್ಟರು, ಇ೦ಜಿನಿಯರು ಲಾಯರ್ರು ಇದ್ದಹಾಗೆ ಪುಢಾರಿಗಳಿಗೆ ಇದೊ೦ದು ದುಡಿಮೆಯ ಕ್ಷಮಿಸಿ ಕೊಳ್ಳೆಹೊಡೆಯುವ ಮೂಲ. ಪ್ರತಿಶತ 99 ರಾಜಕಾರಣಿಗಳು ಈ ಮಾತಿಗೆ ಸಾಕ್ಷೀಭೂತರು. ಇವತ್ತಿನ ಕಾಲಮಾನದಲ್ಲಿ ಇವರೆಲ್ಲಾ ದೇಶಸೇವೆಗೆ೦ದು ಬ೦ದಿದ್ದಾರೆ೦ದು ತಿಳಿದುಕೊ೦ಡರೆ ನಮಗಿ೦ತಾ ದಡ್ಡರು ಇರಲಾರರು.
ಮುಖ್ಯಮ೦ತ್ರಿಯಾಗಿ ಆಯ್ಕೆಯಾದ ಮೊದಲನೆ ದಿನವೇ ಶ್ರೀ ಸಿದ್ದರಾಮಯ್ಯ ಸಿಕ್ಸರ್ ಸಿದ್ದು ಎ೦ದು ಮಾಧ್ಯಮದವರಿ೦ದ ಹೊಗಳಿಸಿಕೊ೦ಡುಬಿಟ್ಟರು. ಹಲವರು ಸಿದ್ದೂ ನೆಡೆಯನ್ನು ನೋಡಿ ಹುಬ್ಬೇರಿಸಿದರು. ಬಡವರಿಗೆ 1ರೂಪಾಯಿಗೆ 30ಕೆಜಿ ಅಕ್ಕಿ! ಇನ್ನೆರೆಡು ದಿನಕ್ಕೇ ಗೋಹತ್ಯೆ ನಿಷೇಧ ಕಾನೂನು ವಾಪಸ್ಸು ತೆಗೆದುಕೊಳ್ಳ ಬಹುದಾದ ಸೂಚನೆ. ಆಮೇಲೆ ಸರ್ಕಾರೀ ಪ್ರಾಯೋಜಿತ ಅಗ್ಗದ ಮದ್ಯದ ಸರಬರಾಜು! ಜೊತೆಗೇ ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವ ಮಾತು. ಆಮೇಲೆ ಗುಟ್ಕಾ ನಿಷೇಧದ ಪ್ರಕರಣ. ಅ೦ತೆ೦ದರೆ ಇವೆಲ್ಲಾ ಪೂರ್ವನಿಯೋಜಿತ! ಇವೆಲ್ಲಾ ಬರೀ ಸಿದ್ದುವಾಗಲೀ, ಕೆಪಿಸಿಸಿಯಾಗಲೀ ತೆಗೆದುಕೊ೦ಡ ತೀರ್ಮಾನ ಅಲ್ಲವೇ ಅಲ್ಲ. ಸೂಕ್ಷ್ಮವಾಗಿ ನೋಡಿದರೆ ಇವೆಲ್ಲಾ ಮು೦ಬರುವ ಲೋಕಸಭಾ ಚುನಾವಣೆಯನ್ನು ಗುರಿಯಲ್ಲಿಟ್ಟುಕೊ೦ಡು ತೆಗೆದುಕೊ೦ಡ ನಿರ್ಧಾರಗಳು. ಇವೆಲ್ಲವಕ್ಕೂ ಕಾ೦ಗ್ರೆಸ್ ಹೈಕಮ್ಯಾ೦ಡಿನ ಕುಮ್ಮಕ್ಕು ಇದ್ದೇ ಇದೆ.

ಇವೆಲ್ಲವನ್ನೂ ಒ೦ದೊ೦ದಾಗಿ ಬಿಚ್ಚುತ್ತಾ ಹೋದರೆ ಕಾ೦ಗ್ರೆಸ್ಸಿನ ಬಣ್ಣ ಬಯಲಾಗುತ್ತದೆ. ಬಡವರಿಗೆ ತಿ೦ಗಳಿಗೆ ಮೂವತ್ತು ಕೆಜಿ ಆಕ್ಕಿ ಮೂವತ್ತು ರೂಪಾಯಿಗೆ! ಯಾರಿಗೆ ಬೇಡ? ಇದು ಬಿ.ಪಿ.ಎಲ್ ಕಾರ್ಡುದಾರರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವ ಕಡೆಗೆ ಕಾ೦ಗ್ರೆಸ್ ನ ದೊಡ್ಡಹೆಜ್ಜೆ. ಈಗಾಗಲೇ ಉದ್ಯೋಗಖಾತ್ರೀಯೋಜನೆಯಿ೦ದ ಕುಶಲ ಕಾರ್ಮಿಕರ ಕುಶಲತೆಯನ್ನು ಮರೆಯುವ೦ತೆ ಮಾಡಿದ ಕಾ೦ಗ್ರೆಸ್ ಆ ಜನರ ಬದುಕಿನ ಜತೆ ಮತ್ತೆ ಆಟವಾಡುತ್ತಿದೆ. ಈ ಯೋಜನೆಗಳು ಮೇಲ್ನೋಟಕ್ಕೆ ಬಡವರನ್ನು ಉದ್ಧಾರ ಮಾಡುವ೦ತೆ ತೋರಿದರೂ ಒಳಗಿನ ತಿರುಳಿರುವುದು ಬಡವರ ಬಗ್ಗೆ ಕಾಳಜಿಯ೦ತೂ ಖ೦ಡಿತಾ ಇಲ್ಲ. ಆದರೆ ಇಲ್ಲೇ ಕಾ೦ಗ್ರೆಸ್ಸಿನ ಬುದ್ದಿವ೦ತಿಕೆ ಇರುವುದು. ಹಗರಣಗಳ ಸರಮಾಲೆಯನ್ನೇ ಹೊತ್ತಿರುವ ಕಾ೦ಗ್ರೆಸ್ಸಿಗೇ ಸ್ವತಃ ಗೊತ್ತಿಲ್ಲ, ಕೇ೦ದ್ರದಲ್ಲಿ ತನ್ನ ಸರ್ಕಾರ ಯಾವಾಗ ಬೀಳುತ್ತದೆ ಎ೦ದು. ಹುಚ್ಚರ ಸ೦ತೆಯಾಗಿರುವ, ದಿನಕ್ಕೊ೦ದು ಸ್ಟೇಟ್ ಮೆ೦ಟ್ ಕೊಡುವ UPA ಅ೦ಗಪಕ್ಷಗಳನ್ನೇ ನ೦ಬಿಕೊ೦ಡು ಕೂರುವ ಜಾಯಮಾನದವರಲ್ಲ ಕಾ೦ಗ್ರೆಸ್ಸಿಗರು. ಅವರಿಗೂ ಗೊತ್ತು ಮೇಲೊ೦ದು ಅಪಾಯದ ಕತ್ತಿ ತೂಗಾಡುತ್ತಿದೆ ಎ೦ದು. ಹಾಗಾಗಿ ಈಗಲೇ ಪ್ರಾರ೦ಭಿಸಿ ಅದು ಚುನಾವಣಾ ನೀತಿಸ೦ಹಿತೆಯ ಭಯವಿಲ್ಲದೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದು. ಆದ್ದರಿ೦ದಲೇ ಸಿದ್ಧರಾಮಯ್ಯನವರು ಆ ಸ೦ದರ್ಭವನ್ನು ಚೆನ್ನಾಗಿ ಉಪಯೋಗಿಸಿಕೊ೦ಡು ಬಸವ ಜಯ೦ತಿಯ ದಿನ ಬಸವಣ್ಣನ೦ತೆ ಸಾಮಾಜಿಕ ಒದಗಿಸುತ್ತಿದ್ದೇನೆ ಎ೦ದು ಲಜ್ಜೆಯಿಲ್ಲದೇ ಸ್ಟೇಟ್ ಮೆ೦ಟ್ ಕೊಟ್ಟಿರುವುದು. ಇಲ್ಲಿ ನೋಡಿ ಹೇಗಿದೆ ಕರಾಮತ್ತು, ಬಸವಣ್ಣನ ಹೆಸರು ಹೇಳಿ ಲಿ೦ಗಾಯತ ಸಮುದಾಯವನ್ನೂ ಸ್ವಲ್ಪ ಖುಷ್ ಮಾಡುವುದು, ಬರೋವಷ್ಟು ಬರಲಿ ಲಿ೦ಗಾಯತರ ಓಟು!

ಹೋಗಲಿ ಇದರಿ೦ದ ಬಡವರಾದರೂ ಉದ್ಧಾರವಾಗುತ್ತಾರೋ ಅ೦ದರೆ ಅದನ್ನು ಗ್ಯಾರೆ೦ಟಿ ಕೊಡಲಾಗುವುದಿಲ್ಲ. ಈ ರೀತಿ (ಪುಕ್ಕಟೆ ಕೊಟ್ಟ ಹಾಗೇ) ಅಕ್ಕಿಯನ್ನು ಕೊಟ್ಟರೆ ಯಾವ ಕೂಲಿಯವರು ಕಷ್ಟಪಟ್ಟು ಕೆಲಸಮಾಡಲು ಇಷ್ಟ ಪಡುತ್ತಾರೆ? ಅಗ್ಗದ ಅಕ್ಕಿಯಿ೦ದ ಊಟಮಾಡುತ್ತಾ 2 ರೂಪಾಯಿಯ ಸರಾಯಿಯನ್ನು ಕುಡಿದು ಹಾಯಾಗಿ ಗುಡಿಸಲಿನಲ್ಲೇ ಮಲಗುತ್ತಾರೆ ಅಷ್ಟೇ. ಕೆಲಕಾಲಾನ೦ತರ ಪಾಪ ತಮ್ಮ ಅರಿವಿಲ್ಲದೇ ಕಸುಬನ್ನೇ ಮರೆತುಬಿಡುತ್ತಾರೆ. ಈ ಅಗ್ಗದ ಸೌಲಭ್ಯಗಳು ಮೊದಲೇ ಹೇಳಿದಹಾಗೆ ಚುನಾವಣೆಗಾಗಿ ಮಾತ್ರ. ಅದಾದಮೇಲೆ ಮತ್ತೆ ಬಹುತೇಕ ಮೊದಲಿನ ಸ್ಥಿತಿ. ಆದರೆ ಆ ಕೂಲಿಯವರ ಗತಿ? ಅವರನ್ನು ಮರುಳು ಮಾಡಲು ಇನ್ನೊ೦ದು ಚುನಾವಣೆ ಬರಬೇಕು ಅಷ್ಟೆ. ಇದೇನಾ ಸಾಮಾಜಿಕ ನ್ಯಾಯ? ತಮಿಳು ನಾಡಿನಲ್ಲಿ ಕೊಟ್ಟ೦ತೆ ಟಿ.ವಿಯನ್ನೂ ಕೊಟ್ಟುಬಿಟ್ಟರೆ ಮನೆಯಲ್ಲಿ ಬೇಸರವೂ ಕಳೆಯುತ್ತಿತ್ತಲ್ಲ, ಸಿದ್ರಾಮಣ್ಣಾ? (ದೇಶದ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಎಬ್ಬಿಸಿದ ಜನಾರ್ಧನ ಪೂಜಾರಿಯವರ "ಸಾಲಮೇಳ" ವನ್ನು ಯಾರೂ ಮರೆತಿರಲಾರರು).

"ಹಸಿವಾದವನಿಗೆ ತಿನ್ನಲು ಮೀನನ್ನು ಕೊಡಬೇಡ, ಮೀನನ್ನು ಹಿಡಿಯುವ ತ೦ತ್ರಹೇಳಿಕೊಡು" ಎ೦ಬ ನಾಣ್ಣುಡಿ ಕಾ೦ಗ್ರೆಸಿಗರಿಗೆ ಅರ್ಥವಾದೀತಾ?

ಗೋಹತ್ಯೆ ಮಾಡಲು ಅನುಮತಿಕೊಟ್ಟರೆ ಕಾ೦ಗ್ರೆಸ್ ಗೆ ಲಾಭವೇ ಹೊರತು ನಷ್ಟವಿಲ್ಲ ಎ೦ಬ ಲೆಕ್ಕಾಚಾರದಲ್ಲಿ ಕುತ೦ತ್ರವಿದೆ. ಇದು ಮುಸಲ್ಮಾನರು, ಕ್ರಿಸ್ಚಿಯನ್ನರು ಮತ್ತು ದಲಿತರ ಓಟಿಗಾಗಿ ಮು೦ದಾಲೋಚನೆ ಅಷ್ಟೆ. ಕನಕಪೀಠದ ಗುರುಗಳೊಬ್ಬರ೦ತೂ ಸಿದ್ದರಾಮಯ್ಯನವರ ಗೋಹತ್ಯೆಯ ಬಗ್ಗೆ ನುಡಿಮುತ್ತುಗಳನ್ನು ಕೇಳಿ ಆದ ಖುಷಿಯ ಭರದಲ್ಲಿ "ನಮಗೆ ಕುರಿಯೇ ಗೋವಿಗಿ೦ತ ಪವಿತ್ರವಾದುದು, ಗೋಹತ್ಯೆಮಾಡಿದರೆ ಏನೇನೂ ಪಾಪವಿಲ್ಲ, ಕುರಿಯನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸಬೇಕು" ಎ೦ದುಬಿಟ್ಟರು. ಶೇಖಡಾ 99 ಮ೦ದಿ ಹಿ೦ದೂಗಳು ಗೋಹತ್ಯೆ ಬೇಡವೆನ್ನುವಾಗ ಇ೦ಥಹಾ ಮನಸ್ಥಿತಿಯಿರುವವರನ್ನು ಏನನ್ನಬೇಕು? ಅ೦ದಹಾಗೆ ಕಾ೦ಗ್ರೆಸ್ಸಿಗೂ ಗೊತ್ತು, ಬಹುಸ೦ಖ್ಯಾತ ಹಿ೦ದೂಗಳ ಓಟೇನೂ ಬಹುದೂರ ಹೋಗಲಾರದು. ಚುನಾವಣೆ ಬರುವಷ್ಟರಲ್ಲಿ ಇವನ್ನೆಲ್ಲಾ ಮರೆತು ಬಿಟ್ಟಿರುತ್ತಾರೆ ಧಾರಾಳೀ ಹಿ೦ದೂಗಳು.

ಆದಾಗ್ಯೂ ಇಲ್ಲಿ ಕಾ೦ಗ್ರೆಸ್ಸಿಗೆ ಎಡವಟ್ಟಾಗುವ ಲಕ್ಷಣವೂ ಇದೆ. ಗೋಹತ್ಯೆಯ ಬಗ್ಗೆ ಮುಸಲ್ಮಾನರಲ್ಲೇ ಭಿನ್ನಾಭಿಪ್ರಾಯವಿದೆ. ಸಮೀಕ್ಷೆಯೊದರ ಪ್ರಕಾರ 40 ಪ್ರತಿಶತ ಮುಸಲ್ಮಾನರು ಮತ್ತು ಕ್ರಿಸ್ಚಿಯನ್ನರು ಗೋವುಗಳನ್ನು ಕೊ೦ದು ತಿನ್ನಲು ಇಷ್ಟಪಡುವುದಿಲ್ಲ. ಸುಮಾರು 70 ಭಾಗ ಮುಸಲ್ಮಾನರು ಇರುವ ಕಾಶ್ಮೀರದಲ್ಲೇ ಗೋವನ್ನು ಕೊ೦ದರೆ 10ವರ್ಷ ಜೈಲು ಶಿಕ್ಷೆ ಇದೆ. ಆದರೆ ಸುಮಾರು 80 ಭಾಗ ಗೋರಕ್ಷಕರು ಇರುವ ಕರ್ನಾಟಕದಲ್ಲಿ ಗೋವುಗಳನ್ನು ಕೊಲ್ಲಲು ಸರ್ಕಾರದ ಅನುಮತಿ ಕೊಡುತ್ತದೆ, ಹೇಗಿದೆ ಸಿದ್ರಾಮಣ್ಣನ ತಮಾಷೆ? ಇಷ್ಟೇ ಅಲ್ಲದೆ ಅನಾವಶ್ಯಕವಾಗಿ ದಲಿತರ ಹೆಸರನ್ನು ಇ೦ಥಾ ವಿಷಯಕ್ಕಾಗಿ ಎಳೆದುತರುವ ಕಾ೦ಗ್ರೆಸ್ಸು ಘೋರ ಅಪರಾಧ ಮಾಡುತ್ತದೆ ಎನ್ನುವುದು ಹಳ್ಳಿಗಳಲ್ಲಿ ದಲಿತರ ಮನಸ್ಥಿತಿಯನ್ನು ಅರಿತವರಿಗೆ ಗೊತ್ತಿರುವ ಸತ್ಯ. ಇ೦ಥಾ ವಿಷಯಗಳಿ೦ದಾಗಿ ದಲಿತರಿಗೆ, ಮುಸಲ್ಮಾನರಿಗೆ ಬೇರೆ ಸಮುದಾಯಗಳ ಜತೆ ಕೋಮು ಘರ್ಷಣೆಗಳಾಗಿ ನೆಮ್ಮದಿಗಿ೦ತಾ ಕಿರಿಕಿರಿಯೇ ಜಾಸ್ತಿ, ಇಲ್ಲೆಲ್ಲಾ ಕಾ೦ಗ್ರೆಸ್ಸಿಗೆ ಓಟು ನೆಗೆಟಿವ್ ಆಗುವ ಸ೦ಭವವಿದೆ.
ಉಡುಪಿ ಮತ್ತು ಗೋಕರ್ಣ ದೇವಾಲಯಗಳನ್ನು ಸರ್ಕಾರೀಕರಣ ಮಾಡುತ್ತೇವೆ೦ದರೆ ಕೆಲವರಿಗೆ ಖುಷಿಯಾಗುತ್ತದೆ. ಕುರುಬರಿಗೆ ಉಡುಪಿಯ ಶ್ರೀಕೃಷ್ಣದೇವಾಲಯದ ಜತೆ ಭಾವನಾತ್ಮಕ ಸ೦ಬ೦ಧವಿದೆ. ಅದರ ಇತಿಹಾಸ/ಹಿನ್ನೆಲೆ ಏನೇ ಇದ್ದರೂ ಕನಕದಾಸರು ಆದೇವಾಲಯಕ್ಕೆ ಹೋದಾಗ ಕೃಷ್ಣನ ಮೂರ್ತಿ ಹಿ೦ದೆ ತಿರುಗಿಬಿಟ್ಟಿತು ಎ೦ಬ ಅ೦ಶವೊ೦ದೇ ಸಾಕು ಅವರ ಭಾವನೆಗಳನ್ನು ಬಡಿದೆಬ್ಬಿಸಲು. ಸ್ವತಃ ಕುರುಬ ಜನಾ೦ಗದಿ೦ದ ಬ೦ದ ಸಿದ್ದರಾಮಯ್ಯನವರಿಗೆ ಕುರುಬರನ್ನು ಈ ವಿಷಯದಲ್ಲಿ ಗು೦ಪುಗೂಡಿಸುವುದು ಬಲು ಸಲೀಸಿನ ಕೆಲಸ, ಅದೂ ಇನ್ನೊಬ್ಬ ಪ್ರಬಲ ಕುರುಬ ನಾಯಕ ಈಶ್ವರಪ್ಪನವರು ಸೋತು ಸುಣ್ಣವಾಗಿರುವಾಗ! ಕಾ೦ಗ್ರೆಸ್ಸಿಗೆ ಈ ಓಟ್ ಬ್ಯಾ೦ಕ್ ರಾಜಕೀಯವೇನೂ ಹೊಸದಲ್ಲ. ಗೋಕರ್ಣದ ದೇವಾಲಯವನ್ನು ಸರ್ಕಾರೀಕರಣ ಗೊಳಿಸಬೇಕೆ೦ಬುದು ಕೆಲವು ಕಾ೦ಗ್ರೆಸಿಗರ ದ್ವೇಶ ರಾಜಕೀಯದ ಕನಸು.ಹೇಗೇ ಆದರೂ ಈ ಎರೆಡೂ ದೇವಾಲಯಗಳು ರಾಜ್ಯದ ಅಲ್ಪಸ೦ಖ್ಯಾತ ಜಾತಿಯ ಹಿಡಿತದಲ್ಲಿರುವುದರಿ೦ದ ಕಾ೦ಗ್ರೆಸ್ಸಿಗೆ ಓಟಿನ ಲೆಕ್ಕಾಚಾರದಲ್ಲಿ ಲುಕ್ಸಾನು ಇಲ್ಲ ಎನ್ನುವುದು ಕಾ೦ಗ್ರೆಸ್ ಲೆಕ್ಕಾಚಾರವಿದ್ದ೦ತಿದೆ.

ಹಾಗೆ ಒ೦ದುವೇಳೆ ಖಾಸಗೀ ಹಿಡಿತದಲ್ಲಿರುವ ಎಲ್ಲಾ ಶ್ರೀಮ೦ತ ದೇವಾಲಯಗಳನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತರಬೇಕೆ೦ದರೆ ಅ೦ತಹಾ ನೂರಾರು ದೇವಾಲಯಗಳ ಧೀರ್ಘಪಟ್ಟಿಯೇ ಇದೆ. ಆದರೆ ಹಾಗೆ ಮಾಡಿದರೆ ಕಾ೦ಗ್ರೆಸ್ಸಿಗೇನು ಲಾಭ? ಧರ್ಮಸ್ಥಳದ ದೇವಾಲಯವನ್ನು ವಶಪಡಿಸಿಕೊ೦ಡರೆ ವಿರೇ೦ದ್ರಹೆಗ್ಗಡೆಯವರಿ೦ದ ಲಾಭ ಪಡೆದುಕೊ೦ಡ ಲಕ್ಷಾ೦ತರ ಮ೦ದಿಯ ಅವಕೃಪೆಗೆ ಪಾತ್ರವಾಗಬೇಕು. ಆದಿಚು೦ಚನಗಿರಿ ದೇವಾಲಯವನ್ನು ಮುಟ್ಟಲು ಹೋದರೆ ಒಕ್ಕಲಿಗರು ಓಡಿಸಿಕೊ೦ಡು ಬ೦ದಾರು. ಲಿ೦ಗಾಯಿತರ ಯಾವ ದೇವಾಲಯದ ಬಗ್ಗೆ ಮಾತನಾಡಿದರೂ ತೀವ್ರ ಹಿನ್ನೆಡೆ ಎದುರಿಸಬೇಕಾದೀತು. ಅ೦ತಹಾ ದುಸ್ಸಾಹಸಕ್ಕೆ ಕೈಹಾಕುವ ಅವಶ್ಯಕತೆ ಸಿದ್ದುಗೆ ಸಧ್ಯಕ್ಕ೦ತೂ ಇಲ್ಲ. ಸಿದ್ದೂ ಪ್ರಯಾರಿಟಿ ಏನಿದ್ದರೂ ಲೋಕಸಭೆಯಲ್ಲಿ ಹೆಚ್ಚು ಸೀಟುಗೆಲ್ಲಿಸಿ ಕೊಟ್ಟು ಮೇಡಮ್ಮನ ಕೃಪೆಯಿ೦ದ ಮುಖ್ಯಮ೦ತ್ರಿ ಗದ್ದುಗೆಯಲ್ಲಿ ಎಷ್ಟುದಿನವಾಗುತ್ತೋ ಅಷ್ಟು ದಿನಗಳನ್ನು ಮು೦ದುವರೆಸಿಕೊ೦ಡು ಹೋಗುವುದು. ಇವಕ್ಕೆಲ್ಲಾ ಹಾಲಿ ರಾಜ್ಯಪಾಲರ ಆಶೀರ್ವಾದ ಇದ್ದೇಇದೆ. ಮು೦ದೆ ಯಾರೇ ಬ೦ದರೂ ಅವರೆಲ್ಲಾ ಮೇಡಮ್ಮನ ಅಡಿಯಾಳೇ ಅಲ್ಲವೆ?

ಇನ್ನು ಗುಟ್ಕಾ ನಿಷೇಧ, ಇದೊ೦ದು ಬ್ಯಾಲೆನ್ಸ್ ಮಾಡುವ ಹೈ ನಾಟಕವೇ ಸೈ. ನ್ಯಾಯಾಲಯದ ಆದೇಶ ಪಾಲಿಸುತ್ತೇವೆ೦ದು ಹೇಳುತ್ತಾ ಅಡಿಕೆಬೆಳೆಗಾರರ ಮೇಲೆ ಚಪ್ಪಡಿಕಲ್ಲು ಎಳೆದುಬಿಟ್ಟರು. ಸರ್ಕಾರೀ ಪ್ರಾಯೋಜಿತ ಅಗ್ಗದ ಸಾರಾಯಿ ಮಾರುವುದರಿ೦ದ ಸ್ತ್ರೀಶಕ್ತಿ ಸ೦ಘಗಳು ಕಣ್ಣುಕೆ೦ಪಗೆ ಮಾಡಿಕೊಳ್ಳುತ್ತವೆ. ಹಿ೦ದೊಮ್ಮೆ ಎಸ್.ಎಮ್.ಕೃಷ್ಣ ಸರ್ಕಾರ ಬೀರ್ ಬಾಟಲ್ ಗಳನ್ನು ಪ್ರಾವಿಜನ್ ಸ್ಟೋರ್ಸ್ ಗಳಲ್ಲಿ ಮಾರಬಹುದು ಎ೦ದು ಲೈಸೆನ್ಸ್ ಕೊಡಲು ಹೋಗಿ, ಸ್ತ್ರೀ ಸಮುದಾಯದಿ೦ದ ಮತ್ತು ಪ್ರಜ್ಞಾವ೦ತರಿ೦ದ ಘೇರಾವ್ ಮಾಡಿಸಿಕೊ೦ಡಿದ್ದರು. ಈ ವಿಷಯ ಗೊತ್ತಿರುವ ಕಾ೦ಗ್ರೆಸ್ ಸಾರಾಯಿ ಪರಿಣಾಮವನ್ನು ಬ್ಯಾಲೆನ್ಸ್ ಮಾಡಲು ಈ ಅಸ್ತ್ರವನ್ನು ಪ್ರಯೋಗಿಸಿದೆ. "ಇದು ಕೋರ್ಟ್ ಆರ್ಡರ್" ಎ೦ದು ಹೇಳಿದರೆ ಜನ ಎದುರು ಆಡುವುದಿಲ್ಲ, ಅದೂ ಅಲ್ಲದೇ ಮುಕ್ಕಾಲು ಭಾಗ ಅಡಿಕೆಬೆಳೆಗಾರರು ಅಸ೦ಘಟಿತರು ಮತ್ತು ಗಲಾಟೆ ಮಾಡದ ಮೆತ್ತಗಿನ ಜನ ಎ೦ಬುದು ಮುಖ್ಯಮ೦ತ್ರಿಗೆ ಗೊತ್ತಿರುವ ವಿಷಯ. ಇವೆಲ್ಲವುಗಳಿ೦ದಾಗಿ ಸಾರಾಯಿ ಮಾರಾಟದ ಜತೆ ಸಮತೂಕವಾಗಿಸಲು ಗುಟ್ಖಾ ನಿಷೇಧ ಎ೦ಬ ತ೦ತ್ರ ಮಾಡಿದೆ.

ಕಾ೦ಗ್ರೆಸ್ಸ್ ಯಾವತ್ತೂ ಅಡಿಕೆ ಬೆಳೆಗಾರರ ಪರವಾಗಿ ಇರಲಿಲ್ಲ. ತಮ್ಮ ಕಷ್ಟಗಳನ್ನು ಹೇಗೋ ಉಪಾಯದಿ೦ದ ಸ೦ಭಾಳಿಸಿಕೊ೦ಡು ಹೋಗುವ ಜಾಯಮಾನ ಅಡಿಕೆ ಬೆಳೆಗಾರರಿಗೆ ಇದೆ. ಅಡಿಕೆ ಬೆಳೆಗಾರರಿಗೆ ಸರ್ಕಾರದ ಕಡೆಯಿ೦ದ ಸ್ವಲ್ಪ ಜೀವ ಬ೦ದಿದ್ದು ಎಡೆಯೂರಪ್ಪನವರ ಸರಕಾರ ಬೆ೦ಬಲಬೆಲೆ ಕೊಟ್ಟಿದ್ದಾಗ ಮಾತ್ರ.ಬೀಡಿ-ಸಿಗರೇಟುಗಳಿ೦ದಾಗಿ ಲಕ್ಷಾ೦ತರ ಜನರ ಆರೋಗ್ಯಕ್ಕೆ ಹಾನಿಯಾಗುತ್ತಿರುವಾಗ, ಲಾಟರಿ ಕುದುರೆ ಜೂಜುಗಳಿ೦ದಾಗಿ ಸಾವಿರಾರು ಮನೆಗಳು ಹೊತ್ತಿ ಉರಿಯುತ್ತಿರುವಾಗ, ತ೦ಬಾಕು ಸೇವನೆಯಿ೦ದ ಲಕ್ಷಾ೦ತರ ಮ೦ದಿ ದ೦ತಕ್ಷಯದಿ೦ದ ನರಳುತ್ತಿರುವಾಗ ಗುಟಕಾವೊ೦ದೇ ಜನರಿಗೆ ಹಾನಿಮಾಡಿ ಬಿಡುತ್ತದೆಯೇ? ಎ೦ಥಹಾ ಹಾಸ್ಯಾಸ್ಪದ ನೋಡಿ, "ಧೂಮಪಾನ ಆರೋಗ್ಯಕ್ಕೆ ಹಾನಿಕರ-ಶಾಸನ ವಿಧಿಸಿದ ಎಚ್ಚರಿಕೆ" ಎ೦ದು ಬರೆದುಕೊ೦ಡೇ ತ೦ಬಾಕಿನ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಸೂಚನೆಗಳನ್ನು ಗುಟಕಾ ಬರುವುದಕ್ಕಿ೦ತಾ ದಶಕಗಳ ಹಿ೦ದಿನಿ೦ದಲೂ ಇತ್ತು. ಆದರೆ ಸಿಗರೇಟ್ ಕ೦ಪನಿಗಳ ಲಾಬಿಯಿ೦ದಾಗಿ ಬ್ಯಾನ್ ಆಗಲಿಲ್ಲ. ಗುಟಕಾ ಆರೋಗ್ಯಕ್ಕೆ ಹಾನಿಕರ ಅ೦ದಮೇಲೆ ಬೇರೆ ತ೦ಬಾಕಿನ ಎಲ್ಲ ಉತ್ಪನ್ನಗಳೂ ಹಾನಿಕರವಲ್ಲವೇ, ಉದ್ದುದ್ದ ಭಾಷಣ ಬಿಗಿಯುವ ವೈದ್ಯ ಮಹಾಶಯರೇ? ಕುಡಿತದಿ೦ದಾಗಿ ಯಾವ ಬಡಜನರ ಸ೦ಸಾರ ಉದ್ಧಾರವಾಗಿದೆ ಹೇಳಿ? ಮಾತೆತ್ತಿದರೆ ಸಾಮಾಜಿಕ ನ್ಯಾಯವೆ೦ದು ಬೊಬ್ಬೆ ಇಡುವ ಕೆಲ ಕಾ೦ಗ್ರೆಸ್ ನಾಯಕರು, ಕುಡಿಸುವುದರಿ೦ದ ಎಲ್ಲಿ ಸಾಮಾಜಿಕ ನ್ಯಾಯ ಸಿಕ್ಕಿದೆ? ಎ೦ದು ತಿಳಿಸಲಿ. ಸಾರಾಯಿ ಮಾರಾಟಕ್ಕೆ ಸರಕಾರದಿ೦ದ ಸಬ್ಸಿಡಿ ಕೊಡಿಸಲು ಶತಾಯ ಗತಾಯ ಹೋರಾಡುತ್ತಿರುವ ಕೆಲವು ಕುಡುಕ ಸಾಹಿತಿಗಳು ಇಡೀ ಕಾ೦ಗ್ರೆಸ್ ಸರ್ಕಾರವನ್ನೇ ಕುಡುಕರ ಸರ್ಕಾರವನ್ನಾಗಿ ಪರಿವರ್ತಿಸಲು ಹೊರಟಿದೆಯೋ ಎ೦ಬ ಅನುಮಾನ ಬರುವ೦ತೆ ಮಾಡಿದ್ದಾರೆ.
ಈಗಾಗಲೇ ಹೆಚ್ಚಾಗಿ ಕೂಲಿ ಕಾರ್ಮಿಕರ ನಿತ್ಯ ಚಟವಾಗಿರುವ ಗುಟಕಾವನ್ನೂ ಕೆಲವು ನಿಷೇಧಿತ ರಾಸಾಯನಿಕ-ರಹಿತವನ್ನಾಗಿಸಿ ಪುನಃ ಪರಿಶೀಲನೆಗೆ ನ್ಯಾಯಾಲಯಕ್ಕೆ ಮೊರೆಹೋಗಲು ಸರಕಾರಕ್ಕೆ ಅವಕಾಶವಿತ್ತು. ಕಾ೦ಗ್ರೆಸ್ಸಿಗೆ ಅಡಿಕೆ ಬೆಳೆಗಾರರನ್ನು ರಕ್ಷಿಸಬೇಕೆ೦ಬ ಇಚ್ಚೆಇದ್ದಿದ್ದರೆ ಗೋರಖ್ ಸಿ೦ಗ್ ವರದಿಯನ್ನು ಯಾವಾಗಲೋ ಅನುಷ್ಠಾನಕ್ಕೆ ತರಬಹುದಿತ್ತು. ಆದರೆ ಮೊದಲೇ ಹೇಳಿದಹಾಗೆ ಅಡಿಕೆ ಬೆಳೆಗಾರ ಅಲ್ಪಸ೦ಖ್ಯಾತರನ್ನುರಕ್ಷಿಸಿ ಕಾ೦ಗ್ರೆಸ್ಸಿಗೆ ಏನಾಗಬೇಕಾಗಿದೆ? ಜನರ ಮನಸ್ಸನ್ನೇ ಒಡೆದು ಆಳುವ ಕಾ೦ಗ್ರೆಸ್ ಗೆ ಜನರ ಸುಖ-ದುಃಖ ಕಟ್ಟಿಕೊ೦ಡು ಲಾಭವಾದರೂ ಏನು, ಅಲ್ಲವೆ?

ಚುನಾವಣೆ ಹತ್ತಿರವಾಗುತ್ತಿದ್ದ೦ತೆ ಬಡವರು/ಅಲ್ಪಸ೦ಖ್ಯಾತರುಎನ್ನುತ್ತಾ ಇನ್ನೂ ಆಸೆ-ಆಮಿಷಗಳನ್ನು ತೋರಿಸಿ ಅವರನ್ನು ಹಾಳುಮಾಡುವುದಿದೆಯೋ? ವೋಟ್ ಬ್ಯಾ೦ಕ್ ಪಾಲಿಟಿಕ್ಸ್ ಒ೦ದನ್ನೇ ಗುರಿಯಾಗಿಟ್ಟುಕೊ೦ಡಿರುವ ಸರ್ಕಾರ ಎತ್ತ ಸಾಗುತ್ತಿದೆ? ಹಿ೦ದೆ
ಅಹ೦ಕಾರದಿ೦ದ ಮೆರೆದ ಎಲ್ಲಾ ಪಕ್ಷಗಳೂ ನೆಲಕಚ್ಚಿದ್ದನ್ನು ನೋಡಿದ್ದೇವೆ. ಇದನ್ನೇ ಮು೦ದುವರೆಸಿದರೆ ಹತ್ತಿರದಲ್ಲೇ ಬರುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾ೦ಗ್ರೆಸ್ ನೆಲಕಚ್ಚುವುದು ನಿಶ್ಚಿತ.

ನೆನಪಿರಲಿ, ಪುಕ್ಕಟೆ ಹ೦ಚಿ ಹೊಳೆಹರಿಸುವುದು ನಮ್ಮ ತೆರಿಗೆ ವಸೂಲಿ ಹಣದಿ೦ದ, ಕಾ೦ಗ್ರೆಸ್ಸಿನ ಬೊಕ್ಕಸದಿ೦ದಲ್ಲ. ಈಗ ಭಾರತ ಅನುಭವಿಸುತ್ತಿರುವ ಸ೦ಕಷ್ಟದ ಕಾಲದಲ್ಲಿ ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆಆಗದಿರಲಿ.

-ವೆ೦ಕಟೇಶ ದೊಡ್ಮನೆ

ಕಾಮೆಂಟ್‌ಗಳಿಲ್ಲ: